ನಮ್ಮೂರ ದ್ರಾಕ್ಷಿ ಗಿಡ ಈ ತೇರೆದ ಮರ..
ಗುಡ್ಡದ ಪಕ್ಕದಲ್ಲಿಯೇ ಒಂದಷ್ಟು ತೇರೆ ಮರದ ಚಿಗುರುಗಳು ಕಣ್ಣಿಗೆ ಬಿದ್ದವು.ಸೊಂಪಾಗಿ ಕೆಂಪಾಗಿ ಚಿಗುರು ಚಿಗುರಾಗಿ ಗಾಳಿಯ ಜೋಗುಳಕ್ಕೆ ತಲೆದೂಗುತ್ತಾ ಅದರಷ್ಟಕ್ಕೆ ನಳನಳಿಸುತ್ತಿತ್ತು.ಕೈ ಹಾಕಿ ಒಂದಷ್ಟು ಕುಡಿಗಳನ್ನು ಕಿತ್ತುಕೊಂಡೆ.ಇನ್ನೊಂದಿಷ್ಟು ಕಾಡು ಗಿಡಗಳ ಕೊಡಿಗಳನ್ನು ಜೊತೆ ಮಾಡಿ ಮರೆಯದೇ ಹುಳಿಯಾದ ಪುನರ್ ಪುಳಿ ಚಿಗುರುಗಳನ್ನು ಕೂಡ ಸೇರಿಸಿ ಬಿಟ್ಟರೆ.. ಮಧ್ಯಾಹ್ನದ ಬಿಸಿ ಗಂಜಿ ಊಟಕ್ಕೊಂದು ಆಹಾ..ಎಂದು ಬಾರಿಸಬಹುದಾದ ಸೊಗಸಾದ ಚಟ್ನಿ ರೆಡಿಯಾಗುವುದು.
ವಿ.ಸೂ - ತೇರೆದ ಮರ(ಚೇರೆ/ಗೇರ್ಕಾಯಿ/ಗೇರೆ/)ಎಲ್ಲರನ್ನೂ ಹಾಗೇ ಬರಸೆಳೆದು ಅಪ್ಪಿಕೊಳ್ಳುವುದಿಲ್ಲ.ಕೆಲವರಿಗೆ ಅದರ ಮರದಡಿ ಹೋದರೂ ಮೈ ಕೈ ತುರಿಸುತ್ತದೆಯಂತೆ.ಹಾಗಾಗಿ ಒಟ್ರಾಸಿ ಅಬತರ ಕಟ್ಟಿಕೊಂಡು ಕೈ ಹಾಕಲು ಹೋಗಬೇಡಿ.ಅದರ ಸೋನೆ ಚರ್ಮವನ್ನು ತಕ್ಕ ಮಟ್ಟಿಗೆ ಘಾಸಿ ಮಾಡಬಲ್ಲದು.ಕಣ್ಣಿಗೆ ಅಂತು ಅದು ಬೀಳಲೇ ಬಾರದು.ನನಗೆ ಸದ್ಯಕ್ಕೆ ಏನೂ ಆಗಿಲ್ಲ.ತಕ್ಕ ಮಟ್ಟಿನ ಅಭ್ಯಾಸ ಇರುವುದರಿಂದ ಈ ಗಿಡಕ್ಕೂ ನನ್ನದೊಂದು ಪರಿಚಯವಿದೆ.ಹಾಗಾಗಿ ಏನೂ ಮಾಡುವುದಿಲ್ಲ ಎಂಬ ಹುಂಬ ಧೈರ್ಯ ನನ್ನದು.
ಇದರ ಹೂವು ಜೇನು ಹುಳುಗಳಿಗೆ ಬಹಳ ಪ್ರೀಯವಂತೆ. ಇದರಲ್ಲಿ ಹೂ ಜಾಸ್ತಿ ಆದರೆ ಕಾಡು ಗುಡ್ಡಗಳಲ್ಲಿ ಹೇರಳವಾಗಿ ಜೇನು ಆಗುವುದು ಎಂಬ ಒಂದು ನಂಬಿಕೆ ಇದೆ.ಇದರ ಹಣ್ಣು ನೇರಳೆ ಇಲ್ಲವೇ ದ್ರಾಕ್ಷಿಗಿಂತಲೂ ನೋಡಲು ಬಹಳ ಸೊಗಸಾಗಿ ಕಾಣುವುದು ಮಾತ್ರವಲ್ಲ ತಿನ್ನಲು ಇನ್ನಿಲ್ಲದಂತೆ ಅತಿಯಾದ ಆಸೆ ಹುಟ್ಟಿಸುತ್ತದೆ.ಇದರ ಹಣ್ಣು ತಿನ್ನುವುದಕ್ಕೂ ನಮ್ಮಲ್ಲಿ ಒಂದು ಕ್ರಮ ಉಂಟು .ಹಾಗೇ ತಿಂದರೆ ಬಾಯಿಯಲ್ಲಿ ಕಜ್ಜಿ ಬೀಳುವುದು. ಹಾಗಾಗಿ ಅದರದ್ದೇ ಎಂಟು ಎಲೆಗಳಲ್ಲಿ ಇದರ ಹಣ್ಣೊಂದನ್ನು ತೊಟ್ಟಿಲು ತೂಗಿದಂತೆ ಮಾನದಿಗೆ ಮಾಡಿಯೇ ತಿಂದರೆ ಏನೂ ಆಗುವುದಿಲ್ಲ ಎಂದು ತುಳುವರ ಒಂದು ಅಚಲವಾದ ನಂಬಿಕೆ. ಹಿಂದಿನ ಹಿರಿಯರು ತಿನ್ನುತ್ತಿದ್ದರು ಆದರೆ ಈಗೀನ ಹೆಚ್ಚಿನವರು ಎಂತಹ ಆಸೆ ಹುಟ್ಟಿದರೂ ಇದರ ಹಣ್ಣನ್ನು ತಿನ್ನುವ ಸಾಹಸ ಮಾತ್ರ ಮಾಡುವುದಿಲ್ಲ.ಆದರೆ ಮಂಗಗಳು ಮಾತ್ರ ನಮಗೇನೂ ಆಗುವುದಿಲ್ಲ ಎಂದು ತಿಂದು ಸಪಾಯಿ ಮಾಡಿ ಅಸೂಯೆ ಹುಟ್ಟಿಸುತ್ತದೆ.ಆವುಗಳಿಗೆ ತಿನ್ಲಿಕ್ಕೆ ಎಂತಸ ಸಿಕ್ಕಿದ್ರೆ ಆಗ್ತದೆ ಮರ್ರೆ.
ಒಗರು ರುಚಿ ಹೊಂದಿರುವ ಇದರ ಚಿಗುರು ಈ ರೀತಿ ಚಟ್ನಿ ಹಾಗೂ ತಂಬುಳಿಗಳಿಗೆ ಹೇಳಿ ಮಾಡಿಸಿದ್ದು... ಸುತ್ತ ಮುತ್ತ ಇಂತಹದ್ದೆಲ್ಲ ಇದ್ದಾಗ ಒಮ್ಮೆ ಮಾಡಿಕೊಂಡು ತಿನ್ನಿ. ನೈಸರ್ಗಿಕ ಆಹಾರ ಬಾಯಿಗೆ ರುಚಿ ಮಾತ್ರವಲ್ಲ,ಒಡಲಿಗೂ ಯಾವತ್ತೂ ತುಂಬಾನೇ ಹಿತ.
#ತೇರೆದ_ಚಟ್ನಿ
ತುಳುನಾಡ್ ಫುಡ್
ಪಚ್ಚುಪಟಗಳು
Ab Pacchu
(https://phalgunikadeyavanu.blogspot.com)
Comments
Post a Comment