ಮೌನಿ ನಾನು, ಉಸಿರಾಡುವಾಗ ನೀನು..!
ಹೆಚ್ಚಾಗಿ ಒಬ್ಬನೇ ಬರುತ್ತೇನೆ ಇಲ್ಲಿಗೆ.
ಓಡೋಡಿಯೇ ಬರುತ್ತೇನೆ.
ಸ್ವಲ್ಪ ಹೊತ್ತು ಇಲ್ಲಿಯೇ ಕೂತು ಆಮೇಲೆ ಎದ್ದು ಹೋಗುತ್ತೇನೆ.
ಇಲ್ಲಿ ಅಂತಹದ್ದೂ ಏನೂ ಇಲ್ಲ.
ಖಾಲಿ ಜಾಗ ಒಂದಷ್ಟು ಹುಲ್ಲು ಹೊದ್ದು ಕೊಂಡು ಅದರಷ್ಟಕ್ಕೆ ಆಕಾಶವನ್ನು ಸುದೀರ್ಘವಾಗಿ ದಿಟ್ಟಿಸುತ್ತಾ ಕಾಲು ಚಾಚಿ ತನ್ನಷ್ಟಕ್ಕೆ ಮಲಗಿಕೊಂಡಿದೆ ಅಷ್ಟೇ...
ಆದರೆ ಅದು ಬೇರೆಯವರಿಗೆ..
ನನಗಲ್ಲ..
ನನಗೆ ಸಂಬಂಧಿಸಿದಂತೆ ಎಲ್ಲವೂ ಇಲ್ಲಿಯೇ ಇದೆ ಎಂದು ಬಹಳ ಸಲ ಅನಿಸಿದೆ.
ಸುಮ್ಮನೆ ಬಂದು ಕುಳಿತು ಕೊಳ್ಳುತ್ತೇನೆ..
ತಡವರಿಸುತ್ತೇನೆ.. ಕನವರಿಸುತ್ತೇನೆ.
ಮೌನವೇ ರಾಜ್ಯವಾಳಲಿ ಎಂದು ಬಯಸುವ ಮನಸ್ಥಿತಿಯಲ್ಲಿ ಮಾತಿಗೆ ಸದಾ ಬರ,ಬೆಲೆ ಅಂತು ಮೊದಲೇ ಇಲ್ಲ..
ಮಾತು ಆದರೂ ಯಾರೊಂದಿಗೆ ಆಡಲಿ ನಾನು?
ಅವಳಿದ್ದರೆ ಜೊತೆಯಾಗುತ್ತಿದ್ದಳು..
ಅವಳೇನೋ ತುಂಬಾ ಮಾತು ಆಡುತ್ತಿರಲಿಲ್ಲ..
ಜೋರಾಗಿ ನಕ್ಕಿದ್ದು.. ಉಹೂಂ.. ಅದು ಕೂಡ ಇಲ್ಲ.
ಕೇವಲ ನಾನು ಮಾತಾಡುತ್ತಿದ್ದೆ.
ಅವಳು ನನ್ನ ಪ್ರತೀ ಮಾತಿನ ತುದಿಗೊಂದು ಹೂಂ ಗುಟ್ಟುತ್ತಿದ್ದಳು.ನನ್ನ ಮಾತು ತಡೆಯಿಲ್ಲದೇ ಎಗ್ಗಿಲ್ಲದೇ ಮುಂದುವರಿಯುತ್ತಿತ್ತು..
ಅವಳು ನನ್ನ ಭುಜಕ್ಕೊರಗಿ ನನ್ನೆಲ್ಲಾ ಮಾತುಗಳಿಗೆ ಕೇವಲ ಕಿವಿಯಾಗುತ್ತಿದ್ದಳು.ಅವಳಿಗದು ಅನಿವಾರ್ಯವೂ ಅಲ್ಲ.ಆದರೆ ಅವಳಿಗದೇ ಇಷ್ಟ.ಅವಳು ಇದ್ದಿದ್ದೇ ಹಾಗೇ..
ಅವಳು ಒಂದು ದಿನವೂ ಸ್ವರ ಏರಿಸಿ ಜೋರು ಧ್ವನಿಯಲ್ಲಿ ಮಾತಾಡಿದ್ದೇ ಇಲ್ಲ.
ಜೀವನ ಪೂರ್ತಿ ಬರೀ ನಾನಷ್ಟೇ ಮಾತಾಡಿದ್ದೆ.. ಬೊಬ್ಬೆ ಹಾಕಿದ್ದೆ.. ಎಗರಾಡಿದ್ದೆ..ಚೀರಾಡಿದ್ದೆ.
ಅವಳು ಸುಮ್ಮನೆ ಸದಾ ನನ್ನ ಪಕ್ಕದಲ್ಲೇ ಇದ್ದಳು.
ನಾನು ಮತ್ತು ಶಾರದ ಪ್ರೀತಿಸಿ ಮದುವೆ ಆದವರಲ್ಲ...
ಮದುವೆಯ ನಂತರ ನಾನು ಪ್ರೀತಿ ಗೀತಿ ಅದರ ರೀತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವನೂ ಅಲ್ಲ.. ಅವಳಂತು ಯಾವುದನ್ನೂ ಬಾಯಿ ಬಿಟ್ಟು ಹೇಳಿದವಳಲ್ಲ.
ಆದರೆ ಅವಳು ಸದಾ ನನ್ನ ಪಕ್ಕವೇ ಇದ್ದಳು..
ತನ್ನ ಮಕ್ಕಳಿಗೆ ತಾಯಿ ಆದಳು.
ಅವಳಂತೆಯೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಹೆತ್ತಳು.
ಆ ಹೆಣ್ಣುಮಕ್ಕಳ ಮಕ್ಕಳಿಗೆ ಅಜ್ಜಿ ಆದಳು.
ಕೊನೆಗೊಮ್ಮೆ ಮಕ್ಕಳು ಗಂಡನ ಮನೆಗೆ ಹೋದ ಮೇಲೆ... ಶಾರದ ನನಗೂ ತಾಯಿ ಆದಳು...ನನ್ನ ಹೆತ್ತ ಅಮ್ಮ ನನಗೆ ನೆನಪೇ ಆಗಲಿಲ್ಲ.
ಅವಳ ಮಾತಿನ ಲೆಕ್ಕಕ್ಕಿಂತಲೂ ಅವಳ ಉಸಿರಿನ ಉಚ್ಛ್ವಾಸ ನಿಶ್ವಾಸಗಳ ಪರಿಚಯವೇ ನನಗೆ ಜಾಸ್ತಿ ಇದೆ.
ಮಕ್ಕಳು ಇರುವಾಗ.. ಮಕ್ಕಳ ಮೇಲೆ ರೇಗುತ್ತಿದ್ದೆ.
ಮಕ್ಕಳ ದೂರವಾದ ಮೇಲೆ ಅವಳ ಮೇಲೆ ರೇಗತೊಡಗಿದೆ. ಏಕೆಂದರೆ ಮಾತು,ಮೂಗಿನ ತುದಿಯ ಕೋಪ ನನ್ನ ಪಾಲಿನ ಆಸ್ತಿ.ಯಾವತ್ತೂ ಕಮ್ಮಿ ಮಾಡಿಕೊಂಡವನೇ ಅಲ್ಲ.
ಒಂದು ದಿನ ನನ್ನ ಶಾರದೆಯೂ ಹೋದಳು.
ಇದೇ ಜಾಗದಲ್ಲಿ ಮಣ್ಣಾದಳು..
ಆ ದಿನದಿಂದ ನನ್ನ ಮಾತು ನಿಂತು ಹೋಯಿತು.
ಆವತ್ತಿನಿಂದ ನಾನು ದಿನಾ ಇಲ್ಲಿಗೆ ಬರುತ್ತೇನೆ.
ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇನೆ.
ನನಗೆ ಈಗ ಅನಿಸುತ್ತದೆ.. ಅವಳಿರಬೇಕಿತ್ತು,ಅವಳ ಮಾತು ಬೇಕಿತ್ತು... ನಾನು ಸುಮ್ಮನೆ ಕೇಳಬೇಕಿತ್ತು.
ಆದರೆ ಅವಳಿಲ್ಲ.
ಇಲ್ಲೇ.. ಹೌದು ಇಲ್ಲೇ ಅವಳು ಸುಟ್ಟು ಬೂದಿಯಾದದ್ದು.
ಈಗ ಬೂದಿಯೂ ಇಲ್ಲ..ಅದರ ಕುರುಹು ಕೂಡ ಇಲ್ಲ.. ಒಂದಷ್ಟು ಕಳೆ ಹುಲ್ಲು ಬೆಳೆದಿದೆ.
ಗೋರಿ ಕಟ್ಟುವ ಸಂಪ್ರದಾಯ ನಮ್ಮಲ್ಲಿಲ್ಲ.. ಹಾಗಾಗಿ ಖಾಲಿ ಜಾಗ ಮೌನವಾಗಿ ಅವಳದ್ದೊಂದು ಕಥೆಯನ್ನು ನನಗಷ್ಟೇ ಸಾರಿ ಸಾರಿ ಹೇಳುತ್ತಿದೆ.. ಅದನ್ನು ಕೇಳುವುದಕ್ಕಾಗಿಯೇ ನಾನು ದಿನಾ ಇಲ್ಲಿಗೆ ಬರುತ್ತೇನೆ.
ಕೆಲವೊಮ್ಮೆ ಅನಿಸುತ್ತದೆ ಒಂದು ಗೋರಿಯಾದರೂ ಇದ್ದಿದ್ದರೆ ಅದರಲ್ಲೇ ಒಂದಷ್ಟು ಸಂವಹನ ಮಾಡಿ ಎದೆಯ ಭಾರ ಇಳಿಸಬಹುದಿತ್ತು ಎಂದು..
ಆದರೆ ಅವಳು ಇಲ್ಲೋ ಎಲ್ಲೋ ಪಂಚಭೂತಗಳಲ್ಲಿ ಸೇರಿ ಆಗಿದೆ.
ಈಗಲೂ ನನ್ನ ಶ್ವಾಸದ ಪ್ರತೀ ಉಚ್ಛ್ವಾಸ ನಿಶ್ವಾಸಗಳು ಕೂಡ ಅವಳ ಉಸಿರನ್ನೇ ನೆನಪಿಸುತ್ತದೆ. ಏಕೆಂದರೆ ಅವಳಲ್ಲಿ ಮಾತಿಗಿಂತಲೂ ನಾನು ಜಾಸ್ತಿ ಕೇಳಿದ್ದು ಅದೊಂದ್ದನ್ನೇ..
ಅವಳು ಏಕೆ ಜೀವನ ಪೂರ್ತಿ ನನ್ನೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತಾಡಿದಳು?
ಬಹುಶಃ ನಾನು ಜಾಸ್ತಿ ಮಾತಾಡಿರಬೇಕು..!
ಅವಳ ತವರು ಮನೆಯಿಂದ ತಂದಿದ್ದ ಅತೀ ದೊಡ್ಡ ಆಸ್ತಿ ಎಂದರೆ ಸಂಯಮ.
ಅವಳಲ್ಲಿ ಅದು ಖರ್ಚಿ ಆಗಿದ್ದೇ ಇಲ್ಲ.. ಸಂಯಯ ಅವಳು ಕಳೆದುಕೊಳ್ಳಲೂ ಇಲ್ಲ..
ಈಗ ಅನಿಸುತ್ತಿದೆ ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು .ಆದರೆ ಅದು ಅವಳು ಬದುಕಿದ್ದಾಗ ಗೊತ್ತೇ ಆಗಿರಲಿಲ್ಲ..
ಅವಳೂ ಕೂಡ ನನ್ನ ಪ್ರೀತಿಸಿ ಬಿಟ್ಟಿದ್ದಳು.ಆದರೆ ಹೇಳಿರಲಿಲ್ಲ..ಗಂಡನಂತೆ ಅಲ್ಲ,ದೇವರಂತೆ ಆರಾಧಿಸಿಯೇ ಬಿಟ್ಟಿದ್ದಳು ನನ್ನನ್ನು.
ಬಹುಶಃ ಅದಕ್ಕೇ ಇರಬೇಕು ಯಾವುದಕ್ಕೂ ಎದುರು ಮಾತಾಡುತ್ತಿರಲಿಲ್ಲ..
ಆದರೆ ಇಂದು ಈ ಇಳಿ ವಯಸ್ಸಿನಲ್ಲಿ ನಾನು ಅವಳಿಗಾಗಿ ಅವಳದ್ದೊಂದು ಮಾತಿಗಾಗಿ ಇನ್ನಿಲ್ಲದಂತೆ ಚಡಪಡಿಸುತ್ತಿದ್ದೇನೆ..ಆದರೆ ಈಗ ಅವಳಿಲ್ಲ.
ಅಳುವ ಮೊಮ್ಮಕ್ಕಳನ್ನು ಮಲಗಿಸುವಾಗ ಅಜ್ಜಿಯಂದಿರು ಹಾಡು ಹಾಡುತ್ತಾರೆ.
ಆದರೆ ನನ್ನ ಶಾರದೆಯ ಕೈಗಳಿಗೆ ಮಗು ಬಂದಾಗ ಅಳುವ ಮಗು ನಗು ನಿಲ್ಲಿಸಿ ಮೌನವಾಗಿ ಬಾಯಗಲಿಸಿ,ಕಣ್ಣರಳಿಸಿ ಅವಳನ್ನೇ ನೋಡುತ್ತಾ ನಗುತ್ತಿತ್ತು.. ಅವಳ ಹಾಗೆಯೇ.ಹಾಗಾಗಿ ಶಾರದೆಯ ಹಾಡು ಕೂಡ ಎಂದೂ ನನ್ನ ಕಿವಿ ತಲುಪಲಿಲ್ಲ.
ಅವಳು ಅತ್ತದ್ದೂ ಕೂಡ ಕೇಳಿಸಿಕೊಂಡಿಲ್ಲ..
ಅವಳ ಜೋರಾದ ನಗುವಿನ ಕೇಕೆಯೂ ಕೂಡ ಎಂದೂ ನನ್ನ ಸನಿಹ ಸುಳಿಯಲಿಲ್ಲ.
ನಾನು ಜೀವನದಲ್ಲಿ ಸೋತಾಗಲೆಲ್ಲ.. ಕಣ್ಣಗಲಿಸಿ ಮುಖವರಳಿಸಿ ಹೆದರಬೇಡಿ ನಿಮ್ಮೊಂದಿಗೆ ಸದಾ ನಾನಿದ್ದೇನೆ... ಎಂಬ ಭರವಸೆಯೊಂದನ್ನು ನನ್ನ ಶಾರದೆ ಜೀವನ ಪೂರ್ತಿ ನನಗೆ ಮೌನವಾಗಿಯೇ ಕೊಟ್ಟಿದ್ದಳು.ಅವಳಿರುವಷ್ಟು ದಿನವೂ ನನಗೆ ಆ ದೇವತೆಗಳ ನೆನಪೂ ಕೂಡ ಆಗಲಿಲ್ಲ.
ಯಾವಾಗಲೂ ಸಮಚಿತ್ತ.. ಸಮಭಾವ ಅವಳದ್ದು.
ಅವಳಿಗೆ ಏನು ಬೇಕು ಎಂದು ಒಮ್ಮೆಯೂ ಅವಳು ಬಾಯಿ ಬಿಟ್ಟು ಹೇಳಲಿಲ್ಲ..ನಾನೂ ಕೇಳಲಿಲ್ಲ.
ನನಗೇನು ಬೇಕು ಎಂದಷ್ಟೇ ಅವಳು ಕೇಳುತ್ತಿದ್ದಳು. ಬಿಸಿ ಬಿಸಿಯಾಗಿ ಮಾಡಿ ಬಡಿಸುತ್ತಿದ್ದಳು, ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತಿದ್ದಳು..ನನ್ನ ಮಾತುಗಳಿಗೆ ಸದಾ ಕಿವಿಯಾಗುತ್ತಿದ್ದಳು.
ಒಂದು ದಿನ ಹೋಗಿಯೇ ಬಿಟ್ಟಳು...
ಆ ದಿನದ ನಂತರವೇ ನನ್ನಲ್ಲಿ ಮಾತು ಸತ್ತು ಹೋಯಿತು..ನನ್ನ ಮಾತು ಎಂಬ ಆಸ್ತಿ ಮಣ್ಣು ಪಾಲು ಆಯಿತು.
ಊರವರು ಹಿಂದೆ ಹೇಳುತ್ತಿದ್ದರು... ಸುಬ್ಬಣ್ಣ ನಿನ್ನ ಹೆಂಡತಿಗೆ ಏನು ಮಾತೇ ಬರುವುದಿಲ್ಲವೋ ಹೇಗೆ.? . ಎಂದು.
ಏಕೆಂದರೆ ಅವಳು ಊರವರೊಂದಿಗೆ ಆಗಲಿ ಯಾರೊಂದಿಗೆಯೇ ಆಗಲಿ ಜಾಸ್ತಿ ಮಾತನಾಡಿದವಳಲೇ ಅಲ್ಲ... ನಾನು ಕೂಡ ನೋಡಿಯೂ ಇಲ್ಲ..
ಅವಳಿಲ್ಲದೆ ಈಗ ನಾನು ತುಂಬಾ ಮೌನಿಯಾಗಿದ್ದಾನೆ.
ಅದು ಯಾಕೋ ನನಗೆ ನನ್ನ ಮಾತುಗಳೇ ಸಹ್ಯ ಆಗುತ್ತಿಲ್ಲ.
ನಿಶ್ಶಬ್ದದ ಮೌನದಲ್ಲಿ ನನಗೀಗ ಶಾರದೆಯ ಮಾತುಗಳು ಬೇಕು ಎಂದು ಅನಿಸುತ್ತದೆ.
ಅದಕ್ಕಾಗಿಯೇ ಇಲ್ಲಿಗೆ ಓಡೋಡಿ ಬರುತ್ತೇನೆ..
ಸ್ವಲ್ಪ ಹೊತ್ತು ಮೌನವಾಗಿ ಕುಳಿತುಕೊಳ್ಳುತ್ತೇನೆ.
ಇಲ್ಲಿ ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿಯ ಸದ್ದಿನಲ್ಲಿ ನನಗೆ ಶಾರದೆಯ ಉಚ್ಛ್ವಾಸ ನಿಶ್ವಾಸಗಳು ಇವೆಯೇನೋ ಎಂಬಂತೆ ಭಾಸವಾಗುತ್ತದೆ.
ಏಕೆಂದರೆ ನನಗೆ ಅವಳ ಮಾತುಗಳಿಗಿಂತಲೂ ಅವುಗಳದ್ದೇ ಪರಿಚಯ ಜಾಸ್ತಿ.
ಗಾಳಿ ಜೋರಾಗಿ ಬೀಸಿದಾಗಲೆಲ್ಲ ಅವಳ ಉಸಿರಿನ ಸದ್ದೊಂದು ಕಿವಿಯಲ್ಲಿ ಈಗಲೂ ಸ್ಪಷ್ಟವಾಗಿ ಮೊರೆಯುವಂತೆ...ಅದೂ ಕೂಡ ..ಹೆದರಬೇಡಿ ನಿಮ್ಮೊಂದಿಗೆ ಸದಾ ನಾನು ಇದ್ದೇನೆ.. ಎಂದು ಹೇಳಿದಂತೆಯೇ ಆಗುವುದು!
ಶಾರದೆ ಏಕೆ ಮಾತಾಡಲಿಲ್ಲ ಎಂಬುವುದು ಪ್ರಶ್ನೆ ಅಲ್ಲ..
ನಾನು ಯಾಕೆ ಅವಳ ಮಾತಿಗೂ ಕಿವಿಯಾಗಲಿಲ್ಲ ಎನ್ನುವುದೇ ನನ್ನ ಈಗೀನ ಪಶ್ಚಾತಾಪ...!
ಹೌದು ಮತ್ತೆ ಗಾಳಿ ಜೋರಾಗಿ ಬೀಸುತ್ತಿದ್ದೆ..
ಗೊತ್ತು.. ಗಾಳಿಯ ಸದ್ದಿನಲ್ಲಿ ಅವಳು ಎಂದಿನಂತೆ ಇದ್ದಾಳೆ...
ನಾನು ಮೌನವಾಗಿ ಕೇಳಿಸಿಕೊಳ್ಳಬೇಕು!
ಅದಕ್ಕಾಗಿ ಕಿವಿ ಮತ್ತಷ್ಟು ತೆರೆದುಕೊಳ್ಳಬೇಕು!!
.....................................................................................
#ಇಷ್ಟೇ_ಕಥೆ !
ab pacchu
moodubidire

Comments
Post a Comment