ನನ್ನ ವಕ್ರವಾದ ಬಾಳಿನ ಸರಳರೇಖೆ ಅವಳು!
ನನಗೆ ರೇಖಾಗಣಿತದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ.
ಆದರೆ ರೇಖಾಗಣಿತದ ಆ ಆಯತಾಕಾರ ಮತ್ತು,
ನಮ್ಮೂರಿನ ಗೂಡಂಗಡಿಯಲ್ಲಿ ಮೊಟ್ಟೆ ಪಪ್ಸು ಕಟ್ಟಿಕೊಡುವ ರೇಖಾ ಬಗ್ಗೆ ಮಾತ್ರ ಚೆನ್ನಾಗಿಯೇ ಗೊತ್ತು.
ಗುಡ್ಡದ ಮೇಲಿನ ಕೆಂಪು ಕಲ್ಲಿನ ಕೋರೆಯಲ್ಲಿ ಕಲ್ಲು ಕೆತ್ತುವ ಕೆಲಸ ಮಾಡುವ ನನಗೆ,ಗಣಿತದ ಆಯತಾಕಾರ ಬಿಟ್ಟರೆ ಬೇರೆ ಯಾವ ಆಕಾರಗಳ ಬಗ್ಗೆ ಗೊತ್ತಿರಲು ಸಾಧ್ಯ.
ಮೊದಲು ಅಷ್ಟೇ ಗೊತ್ತಿದ್ದದ್ದು...
ಆಮೇಲೆ ಒಂದು ದಿನ ರೇಖಾ ಗೊತ್ತಾದಳು.
ಆಮೇಲೆ ನಾನು ನೋಡುತ್ತಿದ್ದ ನನ್ನ ಜಗತ್ತೇ ಬದಲಾಗಿ ಹೋಯಿತು.
ಬಹುಶಃ ರೇಖಾಳ ಬಗ್ಗೆ ನನ್ನಷ್ಟು ಇಡೀ ಊರಲ್ಲಿ ಯಾರಿಗೂ ಗೊತ್ತಿಲ್ಲ..
ಅದೇ ರೀತಿ ನನ್ನನ್ನು ಅರಿತುಕೊಂಡಂತೆ ಅವಳ ಹಾಗೆ ಬೇರೆ ಯಾರಿಗೂ ಕೂಡ ಎಂದಿಗೂ ತಿಳಿಯಲು ಸಾಧ್ಯವಿಲ್ಲ.
ಒಳ್ಳೆಯ ಡಾಂಬರು ರೋಡ್,ಮನೆಗೆ ವಿದ್ಯುತ್‌ಶಕ್ತಿ, ರೋಡಿಗೆ ಬೀದಿ ದೀಪ,ಊರಿಗೆ ನಳ್ಳಿ ನೀರು.. ಅಂತಹ ಯಾವ ವ್ಯವಸ್ಥೆಯೂ ಸಮರ್ಪಕವಾಗಿ ಇರದ ಹಳ್ಳಿ ನನ್ನದು.
ಅತಂಹ ಕುಗ್ರಾಮದಂತಹ ನಮ್ಮ ಹಳ್ಳಿಯ ಕೇಂದ್ರಬಿಂದು ಎಂದರೆ... ಅದು ಊರಿನಲ್ಲಿರುವ ಏಕೈಕ ಗೂಡಂಗಡಿ.
ಯಾವುದೇ ಹೆಸರಿನ ದೊಡ್ಡ ಬೋರ್ಡ್ ಗಳಿಲ್ಲದ ಅದು ತಕ್ಕ ಮಟ್ಟಿಗೆ ಅಂಗಡಿಯೂ ಹೌದು.. ಜೊತೆ ಜೊತೆಗೆ ಪಕ್ಕದಲ್ಲಿಯೇ ಒಂದು ಉದ್ದದ ಮರದ ಟೇಬಲ್ ಹಾಗೂ ಮರದ್ದೇ ಒಂದು ಬೆಂಚು ಹಾಕಿ ಇಟ್ಟಿರುವ ಸಣ್ಣ ಮಟ್ಟಿನ ಹೋಟೆಲ್ ಕೂಡ ಹೌದು ಅದು.
ಬಿಸಿ ಬಿಸಿ ಇರುವ ಚಾ,ಕಾಫಿ..ಯಾವತ್ತೂ ತಣ್ಣಗೆಯೇ ಇರುವ ಬನ್ಸ್,ಸಜ್ಜಿಗೆ ರೊಟ್ಟಿ,ಗೋಳಿಬಜೆ.. ಇಷ್ಟು ಅಲ್ಲಿ ಸಿಗುತ್ತದೆ.
ಹೌದು ಬರೀ ಅಷ್ಟೇ..
ಅದು ಮುಗಿದರೆ ಅಲ್ಲಿ ಬೇರೆ ಏನು ಮಾಡಿದ ತಿಂಡಿಗಳು ಸಿಗುವುದಿಲ್ಲ.
ಒಂದಲ್ಲ ಒಂದು ಬಾಳೆಹಣ್ಣಿನ ಗೊನೆಗಳು ಮಾತ್ರ ದಿನಾಲೂ ನೇತಾಡುತ್ತಲೇ ಇರುತ್ತದೆ ಅಲ್ಲಿ.ಆ ಗೊನೆಗಳು ಸಂಪೂರ್ಣ ಖಾಲಿಯಾಗಿ ನೇತಾಡಿದ್ದು ಎಂದಿಗೂ ನಾನು ನೋಡಿಯೇ ಇಲ್ಲ.
ಅಲ್ಲೇ ಸುತ್ತ ಮುತ್ತ ಕೆಲಸ ಮಾಡುವ ಯಾರಾದರೂ ಮೊದಲೇ ಹೇಳಿದರೆ ಮಧ್ಯಾಹ್ನಕ್ಕೊಂದು ಗಂಜಿ ಊಟದ ವ್ಯವಸ್ಥೆ ಮಾಡಿಕೊಡುತ್ತಾರೆ.
ಆ ಗೂಡಂಗಡಿ ಸಂಜೀವಣ್ಣನದ್ದೇ.
ಆದರೆ ಅವರಿಗೊಬ್ಬಳು ಮಗಳು ಇದ್ದಾಳೆ ಎಂದು ನನಗೆ ಗೊತ್ತಾಗಿದ್ದು ಮಾತ್ರ ಆ ದಿನವೇ.
ಹಲಸಿನ ಹಣ್ಣು ಕೊಯ್ಯುವಾಗ ಮರದಿಂದ ಜಾರಿ ಬಿದ್ದ ಸಂಜೀವಣ್ಣ ಕಾಲು ಮುರಿದುಕೊಂಡು ಅನಿವಾರ್ಯವಾಗಿ ಸ್ವಲ್ಪ ಸಮಯ ಮಂಚ ಹಿಡಿಯಬೇಕಾಯಿತು.
ಆಗ ಗೂಡಂಗಡಿಯ ಜವಾಬ್ದಾರಿ ಹೊತ್ತುಕೊಂಡಿದ್ದು ಅವರ ಮಗಳು ರೇಖಾ.
ಆ ದಿನ ಜೋರು ಮಳೆ.
ಕೋರೆಯಲ್ಲಿ ಕೆಲಸ ಕೂಡ ಇಲ್ಲ.
ನಾನು ಸಿಕ್ಕಾಪಟ್ಟೆ ಬೀಡಿ ಸೇದುತ್ತೇನೆ.
ಟೈಟಾಗಿ ಬೀಳುವಷ್ಟು ಚೆನ್ನಾಗಿ ಸೇಂದಿ,ಸರಾಯಿ,ಕಳ್ಳಬಟ್ಟಿ ಮಾಲು ಎಲ್ಲಾ ಕುಡಿಯುತ್ತೇನೆ.
ನನಗೆ ಆದರೂ ಯಾರಿದ್ದಾರೆ.
ಇಲ್ಲ ಎಂದಲ್ಲ..
ಇದ್ದಾಳೆ..
ಒಬ್ಬಳು ಇದ್ದಾಳೆ.
ನನ್ನ ಅಜ್ಜಿ.
ನಾನು ಏನಾದರೂ ದುಡಿದು ತಂದು ಕೊಟ್ಟರೆ ಬೇಯಿಸಿ ಹಾಕಿ ಕೊಡುತ್ತಾಳೆ.
ಒಂದು ತೊಟ್ಟೆ ಬೂತಾಯಿ ತಗೊಂಡು ಹೋದ ದಿನ ಮಣ್ಣಿನ ಪಾತ್ರೆಯಲ್ಲಿಯೇ ಒಂದೊಳ್ಳೆಯ ಖಾರದ ಪದಾರ್ಥ ಮಾಡಿ ನನಗಾಗಿ ಇಟ್ಟು ಬಿಡುತ್ತಾಳೆ..
ಬದುಕು ಅಷ್ಟೇ.
ಬೆವರು ಸುರಿಸಿ ದುಡಿಯುವುದು...ಕಂಠ ಪೂರ್ತಿ ಕುಡಿಯುವುದು...ಹೊಟ್ಟೆ ತುಂಬಾ ತಿನ್ನುವುದು.. ಒಂದರ ನಂತರ ಒಂದು ಬಿಡದೇ ಬೀಡಿ ಸೇದುವುದು.
ಕುಡಿದು ಜಾಸ್ತಿ ಆದಾಗ ಅಲ್ಲಲ್ಲಿ ಬೀಳುವುದು.
ಮರುದಿನ ಎಚ್ಚರ ಆದಾಗ ಮತ್ತೆ ಪಂಚೆ ಕಟ್ಟಿಕೊಂಡು ಕಲ್ಲಿನ ಕೋರೆಗೆ ಹೋಗಿ ಕಲ್ಲು ಕಟ್ ಮಾಡುವುದು.. ಕಲ್ಲು ಕೆತ್ತುವುದು.
ನಿಜ ಹೇಳಬೇಕೆಂದರೆ ಒಂದೊಳ್ಳೆಯ ಕಲ್ಪನೆಯ ಕನಸಿಗೆ ಕೂಡ ನನ್ನಲ್ಲಿ ಜಾಗವಿರಲಿಲ್ಲ.
ಜೀವನ ಅದರಷ್ಟಕ್ಕೆ ಹೋಗುತ್ತಿತ್ತು.
ಮಳೆ ಜೋರಿದ್ದ ಕಾರಣ ಆ ದಿನ ಗೂಡಂಗಡಿಯ ಪಕ್ಕವೇ ನಿಂತಿದ್ದೆ ನಾನು.
ಕೊಡೆ ಬೇರೆ ಇರಲಿಲ್ಲ.
ಸತ್ಯ ಹೇಳಬೇಕೆಂದರೆ ಕೊಡೆಯೇ ನನ್ನಲ್ಲಿ ಇಲ್ಲ.
ಬೀಡಿಕಟ್ಟುಗಳಲ್ಲಿ ಇದ್ದ ಬೀಡಿಗಳನ್ನು ಸೇದಿ ಸೇದಿ ಕೊನೆಯ ಬೀಡಿ ಕೂಡ ಖಾಲಿ ಆಗಿ ಹೋಗಿತ್ತು.
ಮಳೆ ನೋಡುತ್ತಾ ನಿಂತಿದ್ದವನಿಗೆ ಏನೆನೋ ಮನದಲ್ಲಿ ಯೋಚನೆಗಳು..ಆಲೋಚನೆಗಳು.
ಕೆಳಗೆ ಬಿಟ್ಟಿದ್ದ ಪಂಚೆಯನ್ನು ಹಾಗೇ ಮತ್ತೆ ಮೇಲಕ್ಕೆ ಕಟ್ಟಿಕೊಂಡು..
ಇನ್ನೊಂದು ಕಟ್ಟು ಬೀಡಿ ತೆಗೆದುಕೊಳ್ಳುವ ಎಂದು ಗೂಡಂಗಡಿಯೊಳಗೆ ಹೋದೆ.
ಆಗ ಅಲ್ಲಿ ಅವಳು ಇದ್ದಳು.
ರೇಖಾ..
ಮೊದಲ ಬಾರಿಗೆ ಅವಳನ್ನು ನಾನು ನೋಡಿದ್ದೆ.
ಏನು..? ಎಂದು ನನ್ನನ್ನೇ ಹುಬ್ಬೇರಿಸಿ ಕೇಳಿದಳು.
ಬೀಡಿ ಕಟ್ಟುಗಳಿದ್ದ ಒಂದು ದೊಡ್ದ ಗ್ಲಾಸಿನ ಬಾಟಲಿಯತ್ತ ಕೈ ತೋರಿಸಿ.. ಬೀ...ಬೀ.. ಬೀಡಿ.. ಎಂದೆ ತೊದಲುತ್ತಾ.
ತೊದಲುವುದು ನನಗೆ ಹುಟ್ಟಿನಿಂದಲೇ ಬಂದ ಅಭ್ಯಾಸ.
ನನ್ನ ಜೊತೆಗೆಯೇ ಅದು ಸದಾ ಇರುತ್ತದೆ.. ಗೆಳೆಯನಂತೆ.
ಆದರೆ ಆ ದಿನ ನಾನು ಲೆಕ್ಕಕ್ಕಿಂತ ಜಾಸ್ತಿಯೇ ತೊದಲಿದೆ ಎಂದು ನನಗನಿಸುತ್ತದೆ.
ನನ್ನನ್ನೇ ನೋಡಿದಳು.
ನಾನು ಅವಳನ್ನೇ ನೋಡಿದೆ.
ಕಟ್ಟು ಬೀಡಿ ಕೊಟ್ಟಳು.
ಗೂಡಂಗಡಿಯ ಹೊರಗೆ ನಿಂತು ಮತ್ತೆ ಅಲ್ಲೇ ಬೀಡಿ ಸೇದಿದೆ.
ಮತ್ತೆ ಅವಳನ್ನು ನೋಡಬೇಕು ಎಂದು ಅನಿಸಿತು.
ಅದಕ್ಕಾಗಿ ಏನಾದರೂ ನಾನೀಗ ತಿನ್ನಬೇಕು ಎಂದೆನಿಸಿತು.
ಪುನಃ ಒಳಗೆ ಹೋದೆ.
ಎ..ಎ.. ಎರಡು ಬಾ..ಬಾ.. ಬಾಳೆಹಣ್ಣು ಕೊಡಿ...ಅಂದೆ.
ಅವಳು ನನ್ನನ್ನೇ ನೋಡಿದಳು.
ನಂತರ ಮೇಲೆ ತೂಗುಹಾಕಿದ ಗೊನೆಯತ್ತ ನೋಡಿದಳು.
ನಾನು ಅದನ್ನೇ ಕತ್ತೆತ್ತಿ ನೋಡಿದೆ.
ಎಲ್ಲಾ ಹಣ್ಣುಗಳು ಖಾಲಿಯಾಗಿ ಕೇವಲ ಗೊನೆ ಮಾತ್ರ ಆತ್ಮಹತ್ಯೆ ಮಾಡಿಕೊಂಡ ಶವದಂತೆ ಅಲ್ಲಿನ ಪಕ್ಕಾಸಿಗೆ ಕಟ್ಟಿದ ಹಗ್ಗದಲ್ಲಿ ನೇತಾಡುತ್ತಿತ್ತು.
ಮೊದಲ ಬಾರಿಗೆ ಅಲ್ಲಿ ಖಾಲಿಯಾಗಿರುವ ಗೊನೆ ನೋಡಿದ್ದು ನಾನು.
ಬೇ.. ಬೇ. ಬೇರೆನಿದೆ? ಕೇಳಿದೆ.
ಮೊಟ್ಟೆ ಪಪ್ಸು ಇದೆ... ಅಂದಳು
ಅದಕ್ಕಿಂತ ಮೊದಲು ನಮ್ಮೂರಲ್ಲಿ ಆ ಹೆಸರು ಕೇಳಿರಲಿಲ್ಲ.ಏನಿದ್ದರೂ ಬನ್ನು,ಬನ್ಸ್,ಬ್ರೆಡ್ಡು,ಬಿಸ್ಕೆಟ್,ಚಕ್ಕುಲಿ,ಖಾರಿ,ಸೋಂಟೆ .. ಇಂತಹ ಹೆಸರುಗಳನ್ನು ಅಷ್ಟೇ ಕೇಳಿದ್ದು.
ಮೊಟ್ಟೆಯಿಂದ ಮಾಡಿದ್ದು...ಇಂದೇ ಹೊಸದಾಗಿ ಬಂದಿದ್ದು ನಮ್ಮೂರಿಗೆ,ಲೈನ್ ನವರು ಕೊಟ್ಟು ಹೋಗಿದ್ದಾರೆ,ತಿಂದು ನೋಡಿ ಚೆನ್ನಾಗಿರುತ್ತದೆ.. ಅಂದಳು.
ತಲೆ ಅಲ್ಲಾಡಿಸಿದೆ..
ಅದನ್ನೇ ಪೇಪರ್ ನಲ್ಲಿ ಕಟ್ಟಿ ಕೊಟ್ಟಳು.
ಬಿಸಿ ಆರಿ ತಣ್ಣಗಾಗಿತ್ತು.
ಆದರೂ ಮೊಟ್ಟೆ ಪಪ್ಸ್ ಚೆನ್ನಾಗಿತ್ತು.
ಮಳೆಗೆ ಟೀ ಕುಡಿಯಲ್ವಾ... ಟೀ ಬಿಸಿಯೇ ಇದೆ.. ಅಂದಳು.
ನನಗೂ ಆ ಮಳೆಗೆ ಬಿಸಿ ಟೀ ಬೇಕು ಎಂದು ಅನಿಸಿತು.
ಕೊ...ಕೊ..ಕೊಡಿ ಅಂದೆ.
ಒಂದು ಗಾಜಿನ ಲೋಟದಲ್ಲಿ ಬಿಸಿ ಟೀ ಪ್ಲಾಸ್ಕ್ ನಿಂದ ಹಾಗೇ ಸುರಿದು ಕೊಟ್ಟಳು.
ಎರಡು ಕೈಯಲ್ಲಿ ಹಿಡಿದುಕೊಂಡು ಅಲ್ಲೇ ಮರದ ಬೆಂಚಿನಲ್ಲಿ ಕುಳಿತುಕೊಂಡು ಟೀ ಹೀರಿದೆ.
ಅವಳು ನನ್ನನ್ನೇ ನೋಡಿ ನಕ್ಕಳು.
ನಾನೂ ನಕ್ಕೆ.
ನನ್ನೆದೆಯಲ್ಲಿ ಆ ದಿನ ಯಾವುದೋ ಒಂದು ಹೂವು ಅರಳಿತ್ತು... ತುಂಬಾ ಅಸ್ಪಷ್ಟವಾಗಿ.
ಆ ದಿನದಿಂದ ನಾನು ದೇವರಲ್ಲಿ ಮಾಡಿದ ಪ್ರಾರ್ಥನೆ ಒಂದೇ... ದೇವರೇ ಸಂಜೀವಣ್ಣನಿಗೆ ಕಾಲು ಬೇಗ ಗುಣ ಆಗದಿರಲಿ ಎಂದು.
ನಂತರ ನಾನು ಗೂಡಂಗಡಿಗೆ ನಿರಂತರವಾಗಿ ಹೋಗುತ್ತಲೇ ಇದ್ದೆ.
ಕಟ್ಟು ಬೀಡಿ,ಮೊಟ್ಟೆ ಪಪ್ಸು,ಚಹಾ... ಕೇವಲ ನೆಪ ಮಾತ್ರ ಆಗಿತ್ತು.
ರೇಖಾಳೇ ಅಸಲಿ ಕಾರಣವಾಗಿದ್ದಳು.
ಒಂದು ದಿನ ಅವಳು ನನ್ನ ಹೆಸರು ಏನೆಂದು ಕೇಳಿದಳು.
ಸು... ಸು.. ಸುರೇಸ.. ಅಂದೆ.
ಹೋ.. ಸುರೇಶ ನಾ.. ಅಂದಳು.
ತಲ್ಲೆ ಅಲ್ಲಾಡಿಸಿ ಹೂಂ. ಅಂದೆ.
ನಿ... ನಿ.. ನಿಮ್ಮ ಹೆಸರು? ಕಷ್ಟ ಪಟ್ಟು ಕೇಳಿದೆ.
ಯಾಕೋ ಗೊತ್ತಿಲ್ಲ ಅವಳ ಮುಂದೆ ನಾನು ಜಾಸ್ತಿಯೇ ತೊದಲುತ್ತೇನೆ.
ಅವಳ ಹೆಸರು ಅವಳು ಮೊದಲ ಬಾರಿಗೆ ಹೇಳಿದ್ದು ಅವತ್ತೇ..
ಅದೂ ಕೂಡ ನನ್ನಂತೆಯೇ ಬೇಕು ಬೇಕೆಂದೇ ತೊದಲುತ್ತಲೇ ಹೇಳಿದ್ದಳು.
ನಾ... ನಾ... ನಾನು ರೇ..ರೇ..ರೇಖಾ...ಅಂದಳು.
ನಂತರ ಹಾಗೇ ನಕ್ಕಳು.
ನಾನು ಕೂಡ ಅವಳ ನಗುವಿಗೆ ಜೊತೆಯಾದೆ.
ಅವಳು ಹೇಗೆ ಮತ್ತು ಯಾಕೆ ಅಷ್ಟು ಚೆನ್ನಾಗಿ ನಗುತ್ತಾಳೆ?
ಅದು ನನಗೆ ಗೊತ್ತಿಲ್ಲ.
ಆದರೆ ಒಂದು ಕ್ಷಣ ಎಲ್ಲಾ ನೋವು ಮಾಯ ಮಾಡುವ ನಗು ಅವಳದ್ದು.
ನಾನು ಅವಳನ್ನು ಕಂಡ ಕೂಡಲೇ.. ಅವಳು ನಕ್ಕ ಕೂಡಲೇ.. ಹೊಸ ಹೊಸ ಕನಸುಗಳಿಗೆ,ಕಲ್ಪನೆಗಳಿಗೆ ಹಾಗೇ ಜಾರಿ ಬಿಡುತ್ತೇನೆ.
ಆ ದಿನ ನನ್ನೆದೆಯಲ್ಲಿ ಅರಳಿದ ಹೂವು ನಿಜವಾಗಿಯೂ ಕೆಂಪಗೆ ಇತ್ತು... ತುಂಬಾ ಸ್ಪಷ್ಟವಾಗಿ.
ಬಹುಶಃ ಗುಲಾಬಿಯೇ ಇರಬೇಕು ಅದು.
ಆ ದಿನದಿಂದ ಬೀಳುತ್ತಿದ್ದ ಕನಸುಗಳು ಕೂಡ ಇನ್ನಷ್ಟು ಹೊಸ ಬಣ್ಣ ಬಣ್ಣಗಳಿಂದ ತುಂಬಿಕೊಂಡವು.
ಕೋರೆಯಲ್ಲಿ ನಾನು ಶ್ರದ್ಧೆಯಿಂದ ಕೆತ್ತುವ ಆಯತಾಕಾರದ ಕೆಂಪು ಕಲ್ಲಿನಲ್ಲಿ ಕೂಡ ಗೂಡಂಗಡಿಯ ರೇಖಾಳ ರೇಖಾಚಿತ್ರವೇ ಕಣ್ಣ ಮುಂದೆ ಬರುತ್ತಿತ್ತು.ಹಾಗಾಗಿ ನಯವಾಗಿ ಕಲ್ಲು ಕೆತ್ತುತ್ತಿದೆ... ಕಲ್ಲಿಗೂ ನೋವಾಗದಂತೆ.
ಮಧ್ಯಾಹ್ನ ಊಟ ಮಾಡಿ ಕೋರೆಯಲ್ಲಿ ಒಂದರ್ಧ ಗಂಟೆ ಮಲಗಿದರೂ ಬೀಸುವ ಬಿಸಿ ಗಾಳಿಯೂ ಕೂಡ.. ಹಾಯೆನಿಸುವ ತಂಗಾಳಿಯಾಗಿ ಬಿಡುತ್ತಿತ್ತು.
ನನಗೆ ಏನೇನೋ ಆಗುತ್ತಿತ್ತು.
ಆದರೆ ಅದು ಏನೆಂದು ಗೊತ್ತಿಲ್ಲ.
ಯಾಕೋ ಮೊದಲ ಬಾರಿಗೆ ಈ ಒಂಟಿ ಪ್ರಪಂಚ ತುಂಬಾ ಸುಂದರವಾಗಿದೆ ಅನ್ನಿಸಲು ಶುರುವಾಯಿತು.
ಮತ್ತು ನನ್ನ ಪ್ರಪಂಚ ಬರೀ ರೇಖಾಳ ಆ ಗೂಡಂಗಡಿಯೇ ಆಗಿತ್ತು.
ಅವಳು ನನಗೆ ಮತ್ತಷ್ಟು ಹತ್ತಿರ ಆದಳು.
ನನ್ನ ಕಥೆ ಕೇಳಿದಳು.
ತೊದಲುತ್ತಲೇ ಎಲ್ಲವನ್ನೂ ಹೇಳಿದೆ.
ಪರವಾಗಿಲ್ಲ ಏನೋ ಒಂದು ಕೆಲಸ ಮಾಡ್ತಿದ್ದೀಯಾ ಅಲ್ವಾ... ಅಂದಳು.
ಅವಳ ಕಣ್ಣುಗಳಲ್ಲಿ ಮೆಚ್ಚುಗೆ ಇತ್ತು.
ಒಂದು ದಿನ ಹೇಳಿದಳು... ನನಗೆ ನಿನ್ನ ಮೇಲೆ ಸಿಟ್ಟಿದೆ ಸುರೇಶ.
ಏ...ಏ..ಏನು? ಕೇಳಿದೆ.
ಇಷ್ಟು ಬೀಡಿ ಸೇದಬೇಡ.. ನಿನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಅವಳಿಗೆ ನನ್ನ ಮೇಲೆ ಕಾಳಜಿಯೂ ಇತ್ತು.
ಅವತ್ತೇ ಬೀಡಿ ಸೇದುವುದನ್ನು ಬಿಟ್ಟೆ.
ಕಷ್ಟ ಆಯಿತು.
ಆದರೂ ರೇಖಾ ಹೇಳಿದ್ದಳು ಎಂಬುವುದಕ್ಕಾಗಿ ಬಿಟ್ಟೆ.
ಬೀಡಿ ಸೇದುವುದನ್ನೇ ಸಂಪೂರ್ಣವಾಗಿ ಬಿಟ್ಟೆ ಎಂದು ಗೊತ್ತಾದಾಗ ಅವಳು ತುಂಬಾನೇ ಸಂತೋಷಗೊಂಡಳು.
ಆ ದಿನ ನನಗಾಗಿ ಖುಷಿ ಪಡುವವರು ಒಬ್ಬರು ಈ ಜಗತ್ತಿನಲ್ಲಿ ಇದ್ದಾರೆ ಎಂದು ತಿಳಿದು ನಾನು ಕೂಡ ಸಂತೋಷ ಪಟ್ಟೆ.
ಅದಕ್ಕಾಗಿ ಕುಡಿಯುವುದನ್ನು ಕೂಡ ಬಿಟ್ಟೆ.
ಮನೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ತಂದು ಹಾಕುತ್ತಿದ್ದೆ.
ಮೊದಲ ಬಾರಿಗೆ ಅಜ್ಜಿ ಮನೆಯಲ್ಲಿ ನನ್ನನ್ನು ನೋಡಿ ನಕ್ಕಳು.
ಅವಳು ಸರಿಯಾಗಿ ನಕ್ಕಿದ್ದು ನಾನು ನೋಡಿಯೇ ಇರಲಿಲ್ಲ.
ನನ್ನ ಬದುಕಿನ ವಕ್ರ ರೇಖೆಗಳು ರೇಖಾಳ ಕಾರಣದಿಂದಾಗಿಯೇ ಸರಳರೇಖೆಗಳಾಗಿ ಬದಲಾಗುತ್ತಾ ಹೋಯಿತು.
ಆದರೆ ಆ ಒಂದು ದಿನ ಎಂದಿನಂತೆ ಇರಲಿಲ್ಲ...
ಏಕೆಂದರೆ ಆವತ್ತು ಗೂಡಂಗಡಿಯಲ್ಲಿ ರೇಖಾಳೇ ಇರಲಿಲ್ಲ!
ಬದಲಿಗೆ ಗುಣಮುಖವಾಗಿ ಬಂದಿದ್ದ ಸಂಜೀವಣ್ಣ ಇದ್ದರು.
ಕಣ್ಣು ಕೇವಲ ರೇಖಾಳಿಗಾಗಿಯೇ ಇನ್ನಿಲ್ಲದಂತೆ ಆ ಗೂಡಂಗಡಿ ತುಂಬಾ ಹುಡುಕಾಡಿತು... ತಡಕಾಡಿತು.
ಆದರೆ ಇಲ್ಲ..
ರೇಖಾ ಅಲ್ಲಿ ಎಲ್ಲೂ ಇರಲಿಲ್ಲ.
ಸಂ... ಸಂ.. ಸಂಜೀವಣ್ಣ ಯಾವಾಗ ನೀವು ಗುಣಮುಖ ಆಗಿದ್ದು... ಎಂದು ಸಂಜೀವಣ್ಣನಲ್ಲಿಯೇ ಕೇಳಿದ್ದೆ.
ನಾನಾ..? ನನಗೆ ಏನಾಗಿದೆ ಮಾರಾಯ.. ನೋಡು ಗಟ್ಟಿ ಮುಟ್ಟಾಗಿ ಸರಿಯಾಗಿಯೇ ಇದ್ದೇನೆ ಅಲ್ವಾ...ಹಹ್ಹಾ ಹಹ್ಹಾ.. ಎಂದರು.
ಮ.. ಮ.. ಮತ್ತೆ ನೀವು ಹಲಸಿನ ಮರದಿಂದ ಕೆಳಗೆ ಬಿದ್ದು ಕಾ..ಕಾ..ಕಾಲು ಮುರಿದುಕೊಂಡದ್ದು?!
ನಿನಗೆ ಏನಾದರೂ ಹುಚ್ಚು ಹಿಡಿದಿದೆಯಾ ಸುರೇಶ...ಮತ್ತೆ ನಿನಗೆ ನಿನ್ನೆ ಚಹಾ ಮಾಡಿಕೊಟ್ಟದ್ದು ಯಾರಾ.. ? ಇಲ್ಲಿಗೆ ಬಂದು ನನ್ನ ಕೈಯಿಂದಲೇ ಮೊನ್ನೆಯಿಂದಲೂ ನೀನು ಅಷ್ಟೊಂದು ಮೊಟ್ಟೆ ಪಪ್ಸು ತಿನ್ನುತ್ತಿದದ್ದು ಕೂಡ ನಿನಗೆ ನೆನಪಿಲ್ಲವ ಮಾರಾಯ.....! ಬೀಡಿ ಸೇದಬೇಡ ಎಂದು ಬುದ್ಧಿ ಹೇಳಿ ಹೇಳಿ ಕಳುಹಿಸಿದ್ದು ಯಾರು... ಅದು ನಾನು ಅಲ್ಲದೇ ಮತ್ತೆ ಯಾರಾ.. ನನ್ನ ದೆವ್ವವಾ ಸುರೇಶಾ.. ಹಹ್ಹಾ.. ಹಹ್ಹಾ..
ಆ.. ಆ... ಆದರೆ ಮೊನ್ನೆಯಿಂದ ನಿಮ್ಮ ಮಗಳು ಇ.. ಇ.. ಇದ್ದದ್ದು ಅಲ್ವಾ ಅಂಗಡಿಯಲ್ಲಿ?
ಮಗಳಾ...?
ನನಗೆ ಯಾವ ಮಗಳು ಮಾರಾಯ ?
ನನಗೆ ಮಕ್ಕಳೂ ಇಲ್ಲ..!
ಮದುವೆಯೇ ಆಗಿಲ್ಲ!!
ಹುಚ್ಚನ ಹಾಗೆ ಮಾತಾಡಬೇಡ.. ನಡಿ ಮೊದಲು ಇಲ್ಲಿಂದ..!!!
ನಿಜವಾಗಿಯೂ ಆ ದಿನ ನನಗೆ ಏನೂ ಅರ್ಥವಾಗಲಿಲ್ಲ.!
ಕಷ್ಟಪಟ್ಟೇ ಅಲ್ಲಿಂದ ಹೊರ ನಡೆದೆ.
ಎಲ್ಲರ ಬಳಿ ಹೋಗಿ ರೇಖಾಳ ಬಗ್ಗೆ ಕೇಳಿದೆ.
ಎಲ್ಲರೂ ಸುಮ್ಮನೆ ನಕ್ಕರು.
ಅಜ್ಜಿ ಕೂಡ ಹೇಳಿದಳು... ಸಂಜೀವಣ್ಣನಿಗೆ ಮಕ್ಕಳೇ ಇಲ್ಲ ಮಗಾ.. ಎಂದು!
ಆದರೆ ನಾನು ನಂಬಲು ತಯಾರಿರಲಿಲ್ಲ!
ಅವಳಿಗಾಗಿಯೇ ಇನ್ನಿಲ್ಲದಂತೆ ಊರ ತುಂಬಾ ಹುಡುಕಾಡಿದೆ... ತಡಕಾಡಿದೆ..
ಅತ್ತು ಅತ್ತು ಕಣ್ಣೀರಾದೆ!!
ಆ ದಿನದಿಂದ ಜನ ನನಗೆ ಹೊಸ ಹೆಸರಿನಿಂದ ಕರೆಯಲು ಶುರು ಮಾಡಿದರು.
ಅದೇ..
ಹುಚ್ಚ.... ಎಂದು!!
ನನ್ನನ್ನು ಹಿಡಿದು ಕೈಕಾಲು ಕಟ್ಟಿ ಹುಚ್ಚಾಸ್ಪತ್ರೆಗೆ ಕರೆ ಕಳುಹಿಸಿದರು.
ಆಂಬ್ಯುಲೆನ್ಸ್ ಒಂದು ಊರಿಗೆ ಕೂಗಿಕೊಳ್ಳುತ್ತಾ ಬಂದು... ನನ್ನನ್ನು ಹಾಗೇ ಎತ್ತಿಕೊಂಡು ಹೋಯಿತು.!
ನಾನು ಕೂಗಿ ಕೂಗಿ ಹೇಳಿದೆ,ಸಾರಿ ಸಾರಿ ಹೇಳಿದೆ. ಇ.. ಇ.. ಇಲ್ಲ... ನನಗೆ ಹುಚ್ಚು ಹಿಡಿದಿಲ್ಲ... ಬಿ... ಬಿ... ಬಿಡಿ ದಮ್ಮಯ್ಯ..ಅಂದೆ.
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ.
ಕೊನೆಗೂ ಹುಚ್ಚಾಸ್ಪತ್ರೆಗೆ ಸೇರಿಸಿಯೇ ಬಿಟ್ಟರು.
ಆದರೆ ನನಗೆ ಮಾತ್ರ ಸ್ಪಷ್ಟವಾಗಿ ಗೊತ್ತಿತ್ತು ನಾನು ಆ ಗೂಡಂಗಡಿಯಲ್ಲಿ ರೇಖಾಳನ್ನು ನೋಡಿದ್ದೆ ಎಂದು.
ಒಂದಲ್ಲ..
ತುಂಬಾ ಸಲ ನೋಡಿದ್ದೇನೆ ಅವಳನ್ನು ನಾನಲ್ಲಿ!
ಅವಳಲ್ಲಿ ತೊದಲುತ್ತಾ ಮಾತಾಡಿದ್ದೇನೆ.
ಅವಳೊಂದಿಗೆ ಮನಸಾರೆ ನಕ್ಕಿದ್ದೇನೆ.
ಅವಳು ಮಾಡಿ ಕೊಟ್ಟ ಬಿಸಿ ಬಿಸಿ ಟೀ ಕುಡಿದಿದ್ದೇನೆ...
ಪೇಪರ್ ಅಲ್ಲಿ ಕಟ್ಟಿ ಕೊಟ್ಟ ಮೊಟ್ಟೆ ಪಪ್ಸು ತಿಂದಿದ್ದೇನೆ.
ಆದರೆ..
ಆದರೆ ಇವರೆಲ್ಲಾ ಯಾಕೆ ಅವಳು ಇಲ್ಲ ಎಂದೇ ಹೇಳುತ್ತಾರೆ!!
ಅದು ನನಗೆ ಗೊತ್ತಾಗಲಿಲ್ಲ!
ನನ್ನನ್ನು ಪರೀಕ್ಷಿಸಿದ ಡಾಕ್ಟರ್ ನನ್ನ ರೋಗಕ್ಕೆ ಯಾವುದೋ ಒಂದು ಇಂಗ್ಲಿಷ್ ಹೆಸರಿಟ್ಟರು.
ನನಗದರ ಹೆಸರು ಕೂಡ ಹೇಳಲು ಬರುವುದಿಲ್ಲ.
ಅವರು ಹೇಳುವ ಪ್ರಕಾರ ನನ್ನ ರೋಗ ಯಾವುದೆಂದರೆ....
ನಿಜ ಜೀವನದಲ್ಲಿ ಇಲ್ಲದನ್ನೆಲ್ಲಾ ಇದೆ ಎಂದು ಕಲ್ಪಿಸಿಕೊಂಡು ಆ ಭ್ರಮಾ ಲೋಕದಲ್ಲಿಯೇ ಹಾಗೇ ಬದುಕಿ ಬಿಡುವುದಂತೆ!!!
ಇಲ್ಲ..
ಇದೆಲ್ಲ ಶುದ್ಧ ಸುಳ್ಳು...
ಡಾಕ್ಟರ್ ಬೇಕೆಂದೇ ಸುಳ್ಳು ಹೇಳುತ್ತಿದ್ದಾರೆ..
ಏಕೆಂದರೆ...
ಏಕೆಂದರೆ... ನನಗೆ ಗೊತ್ತು.
ರೇಖಾ ಇದ್ದಾಳೆ.
ನಾನು ಅವಳನ್ನು ನನ್ನ ಈ ಕಣ್ಣುಗಳಿಂದಲೇ ನೋಡಿದ್ದೇನೆ.
ಆದರೆ..
ಆದರೆ ನನ್ನ ಹೊರತು ಯಾರೂ ಈ ಮಾತನ್ನು ಏಕೆ ಒಪ್ಪುತ್ತಿಲ್ಲ... ನಂಬುತ್ತಿಲ್ಲ!!
ಅದು ನನಗೆ ಯಾವತ್ತೂ ಅರ್ಥವೇ ಆಗಲಿಲ್ಲ.
ಸುಮ್ಮನೆ ಅಳುವುದರ ಹೊರತು ನನಗೆ ಬೇರೆ ಯಾವ ದಾರಿಗಳೇ ಇರಲಿಲ್ಲ ಅಲ್ಲಿ..!
ಏಕೆಂದರೆ ನನ್ನ ಮಾತನ್ನು ನಂಬವವರು ಯಾರೊಬ್ಬರೂ ಅಲ್ಲಿರಲಿಲ್ಲ.
ಕೊನೆ ಕೊನೆಗೆ ನಾನು ಬೇಕೆಂದೇ ರೇಖಾಳ ವಿಷಯವನ್ನೇ ಮಾತಾಡುವುದನ್ನು ನಿಲ್ಲಿಸಿ ಬಿಟ್ಟೆ.
ಸಹಜವಾಗಿಯೇ ಇದ್ದೆ.
ತುಂಬಾ ವರ್ಷಗಳ ಚಿಕಿತ್ಸೆಯ ನಂತರ ನಾನು ಸರಿಯಾಗಿದ್ದೇನೆ ಎಂದು ಘೋಷಸಿ ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಕೂಡ ಮಾಡಿದರು.
ಆದರೂ..
ನನ್ನ ಮನಸ್ಸಿನಲ್ಲಿ ರೇಖಾ ಇದ್ದಳು!!
ಮನೆಗೂ ಹೋಗದೇ ನೇರಾ ಗೂಡಂಗಡಿಗೆ ಓಡಿ ಹೋದೆ..
ಅಲ್ಲಿ ಸಂಜೀವಣ್ಣ ಇದ್ದರು..
ನನ್ನ ಕಣ್ಣುಗಳು ರೇಖಾಳಿಗಾಗಿ ಮತ್ತೆ ತಡಕಾಡಿತು.
ಸುರೇಶ... ಟೀ, ಮೊಟ್ಟೆ ಪಪ್ಸು ಏನಾದರೂ ಬೇಕಾ.. ಎಂದು ಸಂಜೀವಣ್ಣ ಕೇಳಿದರು.
ಒ... ಒ.. ಒಂದು ಕಟ್ಟು ಬೀಡಿ ಕೊಡಿ ಅಂದೆ.
ಕೊಟ್ಟರು.
ಜೋರು ಮಳೆ.
ಹೊರಗಡೆ ಕಾಲಿರಿಸಲೂ ಆಗುತ್ತಿಲ್ಲ.
ಗೂಡಂಗಡಿ ಹೊರಗಡೆ ನಿಂತುಕೊಂಡು ಒಂದೊಂದೇ ಬೀಡಿ ಎಳೆಯಲು ಶುರು ಮಾಡಿದೆ.
ಮಳೆಯನ್ನೇ ನೋಡುತ್ತಿದ್ದವನಿಗೆ ಏನೇನೋ ಯೋಚನೆಗಳು.. ಆಲೋಚನೆಗಳು..
ರೇಖಾ ಅಂದು ನನ್ನ ಹಾಗೆಯೇ ತೊದಲುತ್ತಾ ಹೇಳಿದ ಅವಳ ಹೆಸರೇ ಮತ್ತೆ ಕಿವಿಯಲ್ಲಿ ಗುನುಗುಟ್ಟಿತು.
" ನಾ... ನಾ... ನಾನು ರೇ..ರೇ..ರೇಖಾ..."
ಎದೆ ಒಮ್ಮೆ ಭಾರವಾಗಿ ಬಿಟ್ಟಿತು..!
ಜೊತೆಗೆ ಮಳೆಯೂ ನಿಂತಿತು.
ಇನ್ನೊಂದು ಕಟ್ಟು ಅಂಗಡಿಯಿಂದ ಬೀಡಿ ತೆಗೆದುಕೊಂಡು ನಿಧಾನಕ್ಕೆ ಒಂದೊಂದೇ ಬೀಡಿ ಎಳೆಯುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕ ತೊಡಗಿದೆ.
ಬದುಕು ಎಂದಿಗೂ ಸರಳ ರೇಖೆಯಾಗಿ ಇರುವುದೇ ಇಲ್ಲ.. ಎಂದು ಮೊದಲ ಬಾರಿಗೆ ನನಗೆ ಅನಿಸಿತು..!
ನನ್ನ ಹೆಜ್ಜೆಗಳು ಕೂಡ ವಕ್ರ ವಕ್ರವಾಗಿ ನನಗರಿವಿಲ್ಲದಂತೆ ನನ್ನ ಅಜ್ಜಿಯನ್ನು ಅರಸುತ್ತಾ ಮನೆ ಕಡೆಗೆ ಹೋಗುತ್ತಿದ್ದವು!!
ಮನಸ್ಸು ಮಾತ್ರ ಆಗಲೂ ಒಂದೇ ರೇಖೆಯಲ್ಲಿ ಆಲೋಚಿಸುತ್ತಿತ್ತು..
ನಾಳೆಯೂ ನಾನು ಗೂಡಂಗಡಿಗೆ ಹೋಗಬೇಕು..
ಖಂಡಿತಾ ನಾಳೆ ಅಲ್ಲಿ ನನ್ನ ರೇಖಾ ಇರುತ್ತಾಳೆ.
ರೇಖಾಳ ಜೊತೆ ನಾನು ಮತ್ತೆ ಮಾತಾಡಬೇಕು.
ಅವಳಲ್ಲಿ ಈ ಎಲ್ಲರ ಹುಚ್ಚರ ಬಗ್ಗೆ ಹೇಳಬೇಕು.
ಹೌದು.. ಇಲ್ಲಿರುವವರು ಎಲ್ಲರೂ ನಿಜವಾಗಿಯೂ ಹುಚ್ಚರೇ..
ಇಲ್ಲದಿದ್ದರೆ ರೇಖಾ ಇಲ್ಲ ಎಂದು ಅವರು ಏಕೆ ಸುಳ್ಳು ಹೇಳುತ್ತಿದ್ದಾರೆ.
ಆದರೆ ನನಗೆ ಗೊತ್ತು..
ಈಗಲೂ ಗೊತ್ತು....
ಖಂಡಿತವಾಗಿಯೂ ನನ್ನ ರೇಖಾ ಅಲ್ಲೇ ಎಲ್ಲೋ ಇರಬೇಕು..
ನಾನು ಅವಳ ಎದುರು ಹೋಗಿ ಇನ್ನೊಮ್ಮೆ ತೊದಲಬೇಕು..
ಅವಳು ನನಗಾಗಿ ನನ್ನಂತೆಯೇ ಮತ್ತೊಮ್ಮೆ ತೊದಲುತ್ತಲೇ ನನ್ನಲ್ಲಿ ಮಾತಾಡಬೇಕು.
ನಾನು ಅದಕ್ಕೆ ನಗಬೇಕು.
ಅವಳು ಜೊತೆ ಸೇರಬೇಕು.
ನನಗೆ ಗೊತ್ತು.. "ಜಾಸ್ತಿ ಬೀಡಿ ಸೇದಬೇಡ ಸುರೇಶ..ಆರೋಗ್ಯಕ್ಕೆ ಒಳ್ಳೆಯದಲ್ಲ.." ಎಂದು ತುಂಬಾ ಕಾಳಜಿಯಿಂದ ಅವಳು ಹೇಳಿಯೇ ಹೇಳುತ್ತಾಳೆ.
ಅವಳು ಆ ರೀತಿ ಹೇಳುವವರೆಗೂ ನಾನು ಬೀಡಿ ಸೇದುವುದನ್ನು ನಿಲ್ಲಿಸಲಾರೆ!!
ಒಂದು ವೇಳೆ ಅವಳು ನಾಳೆ ಅಲ್ಲಿ ಇರದಿದ್ದರೆ...
ನನ್ನೆದೆಯಲ್ಲಿ ಇನ್ನೊಮ್ಮೆ ಹೂ ಅರಳದಿದ್ದರೆ...
ಬಹುಶಃ ಖಂಡಿತವಾಗಿಯೂ ನಾನು ನಿಜ ಹುಚ್ಚನೇ ಆಗಿ ಬಿಡುತ್ತೇನೆ!!
ಮಳೆ ಮತ್ತೊಮ್ಮೆ ಜೋರಾಗಿ ಸುರಿಯಲು ಆರಂಭವಾಯಿತು...
ಹೊಗೆ ಉಗುಳುತ್ತಿದ್ದ ನನ್ನ ಬೀಡಿ ನಂದಿ ಹೋಯಿತು!!
.....................................................................................
#ಇಷ್ಟೇ_ಕಥೆ!
Ab Pacchu
Moodubidire
Photo- Internet

Comments
Post a Comment