ದಾರಿಯಲ್ಲಿ ಸಿಕ್ಕಳು ಭಾಮೆ..
ಕೈಯಲ್ಲಿದ್ದ ಪ್ಯಾಕೇಟ್ ನಿಂದ ಒಂದೊಂದೇ ಚಿಪ್ಸ್ ತೆಗೆದು ತಿನ್ನುತ್ತಾ,ಕೂಲಾಗಿ ಹಾಡಿನ ಸಾಲುಗಳನ್ನು ನನ್ನಷ್ಟಕ್ಕೆ ಗುನುಗುತ್ತಾ... ರೋಡ್ ಪಕ್ಕವೇ ನಿಂತಿದ್ದೆ.
ಅಲ್ಲಿ ಯಾರೂ ಇರ್ಲಿಲ್ಲ..
ಹಾಗಾಗಿ ಭಯಂಕರ ಜೋಶ್ ನಿಂದ ಮತ್ತಷ್ಟು ಜೋರಾಗಿಯೇ ಹಾಡಲು ಶುರು ಮಾಡಿದೆ.
ಆದರೂ ದೊಡ್ಡ ಜನ ಸಮೂಹವೊಂದು ಕೆಳಗೆ ಕುಳಿತುಕೊಂಡು, ಸ್ಟೇಜ್ ಮೇಲಿರುವ ನಾಡು ಕಂಡ ಅಪ್ರತಿಮ ಸಂಗೀತ ಮಾಂತ್ರಿಕನೊಬ್ಬನ ಹಾಡನ್ನು ತದೇಕಚಿತ್ತದಿಂದ ಕೇಳುತ್ತಿದ್ದೆ,ಆಲಿಸುತ್ತಿದೆ ಎಂಬ ರೇಂಜಿಗೆ...ನನ್ನಷ್ಟಕ್ಕೆ ನಾನು Imagine ಮಾಡಿಕೊಂಡು ಮತ್ತಷ್ಟು ಉಲ್ಲಾಸ,ಉತ್ಸಾಹದಿಂದ ನನ್ನ ಹಾಡಿನ ತೀವ್ರತೆಯನ್ನು ಇನ್ನಿಲ್ಲದಂತೆ ಹೆಚ್ಚಿಸಿದೆ.
" ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೇ ಬಹುಮಾನ
ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೇ ಬಹುಮಾನ....
ಹಾಡೋ ಹಕ್ಕಿಗೆ ಬೇಕೇ,
ಹಾಡೋ ಹಕ್ಕಿಗೆ ಬೇಕೇ... ಬಿರುದು ಸನ್ಮಾನ....
ಎದೆ ತುಂಬಿ ಹಾಡಿದೆನು ಅಂದು ನಾನು..."
ಕೊನೆ ಕೊನೆಗೆ ಮಾತ್ರ ನನ್ನ ಹಾಡಿಗೆ ಕ್ಲಾಸಿಕಲ್ ಟಚ್ ಕೂಡ ಒಟ್ರಾಸಿ ಮಿಕ್ಸ್ ಮಾಡಿ,ರಾಗವಾಗಿ ಎಳೆದೆಳೆದು ಹಾಡಿದೆ.
ಯೆಸ್... ಭಯಂಕರವಾದ.. ಹಾಗೂ ಅಷ್ಟೇ ಭಯಾನಕವಾದ ಆಲಾಪನೆ ಆದಾಗಿತ್ತು.
ರೋಡ್ ನಲ್ಲಿ ಅಲ್ಲಿಯವರೆಗೆ ಲೋಕದ ಚಿಂತೆಯೇ ಇಲ್ಲದೆ ಆರಾಮ್ ಸೇ ಮಲಗಿ ನಿದ್ರಿಸುತ್ತಿದ್ದ ಬೀದಿನಾಯಿಯೊಂದು ರಪಕ್ಕನೇ ಗಾಢ ನಿದ್ದೆಯಿಂದ ಎಚ್ಚೆತ್ತಂತೆ ಎದ್ದು ನಿಂತು,ನನ್ನೊಮ್ಮೆ ಮೇಲೆ ಕೆಳಗೆ ನೋಡಿ.. ಯಾರು ಮರ್ರೆ ಇವ ಒಬ್ಬ.." Kaun Hai yeh log.. kaha se aate hai yeh log " Jolly LLB ಯ Arshad Warsi ಯ ಡೈಲಾಗ್ ಅನ್ನೇ ಕನ್ಫರ್ಮ್ ಆಗಿ ಮನಸ್ಸಿನಲ್ಲಿ ಹೇಳಿಕೊಂಡು,ಸತ್ತೆನೋ ಬದುಕಿದೆನೋ ಎಂಬಂತೆ ಎದ್ದು ಬಿದ್ದು ಅಲ್ಲಿಂದ ಓಡಿ ಹೋಯಿತು.
ವಿದ್ಯುತ್ ತಂತಿಯ ಮೇಲೆ ಕುಳಿತುಕೊಂಡು ಕಾ... ಕಾ... ಎಂದು ರಾಗವಾಗಿ ಅರಚುತ್ತಿದ್ದ ಕಾಗೆಗಳು ಒಂದು ಕ್ಷಣ.. ಯಾರಿದು ನಗರದಲ್ಲಿ ಹೊಸ ಕಂಚಿನ ಕಂಠದ ಗಾಯಕ.. ಎಂಬಂತೆ ಕತ್ತೆತ್ತಿ ನನ್ನನ್ನೇ ನೋಡಿ... ಅಯ್ಯೋ..ಎಷ್ಟೊಂದು ಭಯಾನಕ ದೃಶ್ಯ ಇದು.. ಇಂದು ಹೇಗೋ ಬದುಕಿ ಬಿಟ್ಟರೆ ಇನ್ನೂ ಯಾವುದೋ ಒಂದು ದಿನ,ಇನ್ನು ಯಾವುದೋ ತಂತಿಯಲ್ಲೋ,ಮರದಲ್ಲೋ ಕುಳಿತುಕೊಂಡು ನಾವು ನಮ್ಮ ಸಂಗೀತ ಕಛೇರಿ ಆರಾಮ್ ಸೇ ಮುಂದುವರಿಸಬಹುದು,ಈಗ ಈ ಅಪಾಯದಿಂದ ಪಾರಾಗಬೇಕು.. ಎಂಬಂತೆ ಅವಸರವಸರವಾಗಿ ಜೀವಭಯದಿಂದ ಅಲ್ಲಿಂದ ಪುರ್ರೆಂದು ಹಾರಿ ಹೋದವು.
ನಾನೇನು ಅಂತಹ ಕೆಟ್ಟ ಸಿಂಗರ್ ಅಲ್ಲ.
ಆದರೆ ಹೆಚ್ಚಾಗಿ ಬಾತ್ ರೂಮ್ ಅಲ್ಲೇ ಹಾಡುತ್ತಿದ್ದೆ.
ಇದೇ ನನ್ನ ಮೊದಲ ಪಬ್ಲಿಕ್ Performance.
ಬಹುಶಃ ಇವತ್ತು ಶೃತಿ ಎಲ್ಲೋ ಲೈಟಾಗಿ ತಪ್ಪಿರಬೇಕು... ಹಾಗಾಗಿ ಪ್ರಕೃತಿ ಕೂಡ ಇಂದು ನನ್ನ ಹಾಡಿಗೆ ಇಷ್ಟೊಂದು ಭಯಬೀತವಾಗಿದೆ...ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಮತ್ತಷ್ಟು ಚಿಪ್ಸ್ ತಿನ್ನುತ್ತಾ ಉಳಿದ ಹಾಡಿನ ಸಾಲುಗಳನ್ನು ಗುನುಗಲು ಶುರು ಮಾಡಿದೆ. "....ಹಾಡುವೆನು ಮೈದುಂಬಿ ಎಂದಿನಂತೆ...ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ.. "
ಹಾಡಿನ ಬಗ್ಗೆ ಚಿಂತೆ ಇಲ್ಲದಿದ್ದರೂ ಸದ್ಯಕ್ಕೆ ನನಗೆ ಬಸ್ಸಿನದೇ ದೊಡ್ಡ ಚಿಂತೆಯಾಗಿ ಬಿಟ್ಟಿದೆ.
ಹೌದು ಮೂಡುಬಿದಿರೆಯಲ್ಲಿ ಇದ್ದೆ ನಾನು.
ಅದು ಸಂಡೆಯ ಸಂಜೆ.
ಪುಲ್ಕಿ ಗೆ ಹೋಗುವ ಬಸ್ಸಿಗಾಗಿಯೇ ಕಾಯುತ್ತಿದ್ದೆ.
ಎಷ್ಟು ಹೊತ್ತಾದರೂ ಬಸ್ಸಿನ ಸುಳಿವೇ ಇಲ್ಲ.
ಈ ಲಾಕ್ ಡೌನ್ ಆದ ನಂತರ ಬಸ್ಸುಗಳು ಕೂಡ ನಮ್ಮೂರಿಗೆ ಹೋಗುವುದು ಬರುವುದನ್ನು ಇತ್ತೀಚೆಗಿನ ದಿನಗಳಲ್ಲಿ ತುಂಬಾನೇ ಕಡಿಮೆ ಮಾಡಿಕೊಂಡಿವೆ.
ಬಸ್ಸಿಗೂ ಸಾಕಷ್ಟು ಜನ ಇಲ್ಲದೇ..ಅವರಿಗೂ ಸಿಕ್ಕಾಪಟ್ಟೆ ಲಾಸ್.
ಅದರಲ್ಲೂ ಸಂಡೆ ಆದರೆ ಬಸ್ಸಿನವರು ರೋಡ್ ಗೆ ಇಳಿಯುವುದೇ ಇಲ್ಲ.
ನಾನೊಂದು ಬೈಕ್ ತೆಗೆದುಕೊಂಡಿದ್ದರೆ ಯಾವ ಬಸ್ಸಿಗೂ ಕಾಯಬೇಕಾಗಿ ಬರುತ್ತಿರಲಿಲ್ಲ.
ಏನು ಮಾಡಲಿ.. ಒಂದು ಕೆಲಸ ಅಂತ ಸಿಕ್ಕಿದ್ದರೆ ಟೂ ವೀಲರ್ ಏನು.. ಫೋರ್ ವೀಲರೇ ತೆಗೆದುಕೊಳ್ಳಬಹುದಿತ್ತು.
ಆದರೆ ಸದ್ಯಕ್ಕೆ ಕೆಲಸ ಹುಡುಕುವುದೇ ನನ್ನ ಜೀವನದ ಅತೀ ದೊಡ್ಡ ಕೆಲಸ ಆಗಿರುವುದರಿಂದ ಎಷ್ಟು ವೀಲ್ ನ ಗಾಡಿ ತೆಗೆದುಕೊಳ್ಳುವುದು ಎಂಬ ತುಂಬಾ ಡೀಪಾದ ಚಿಂತನ ಮಂಥನ ಮಾಡಿ ಏನೂ ಪ್ರಯೋಜನ ಇಲ್ಲ.
ನನ್ನಪ್ಪ ನೀಲಣ್ಣ ಅಂತು ನನಗೆ ಯಾರಾದರೂ ಕೆಲಸ ಕೊಟ್ಟರೆ ಅದೊಂದು ವಿಶ್ವದ ಅತ್ಯಧ್ಭುತ ವಿಸ್ಮಯ ಎಂಬಂತೆ ಬರೀ ಕೋಂಗಿ(ಉಡಾಫೆ)ಮಾತುಗಳನ್ನೇ ಯಾವಾಗಲೂ ಆಡುತ್ತಿರುತ್ತಾರೆ.
ನನ್ನ ಲೈಫ್ ನ ಬಗ್ಗೆ ಯಾರಿಗೂ ಸೀರಿಯಸ್ ನೆಸ್ಸೇ ಇಲ್ಲ...ಬಹುಶಃ ಎಲ್ಲರಿಗಿಂತ ಜಾಸ್ತಿ ನನಗೆ ಇಲ್ಲ ಎಂದು ಒಮ್ಮೊಮ್ಮೆ ನನಗೂ ಅನ್ನಿಸುವುದಿದೆ. ಆದರೂ ಆ ಮಾತು ಎಷ್ಟು ಸರಿ ಎಂದು ಕರೆಕ್ಟ್ ನನಗೆ ಕೂಡ ಅಷ್ಟಾಗಿ ಗೊತ್ತಿಲ್ಲ.
ಪಕ್ಕದ ಮನೆ ದೊಡ್ಡಪ್ಪನ ಮಗ ಮುರ್ಲಿ(ಮುರಳೀಧರ್)ಅಣ್ಣನ ಬಳಿ ಕಾರು ಇದೆ. ಕಾಲ್ ಮಾಡಿದರೆ ಹಿಂದೆ ಎಲ್ಲಾ ಕಾರು ತೆಗೆದುಕೊಂಡು ಹೇಳಿದ್ದಲ್ಲಿಗೆ ಬರ್ತಿದ್ದ.
ಆದರೆ ಈಗ ಅವನಿಗೆ ಮದುವೆಗೆ ಹುಡುಗಿ ಒಂದು ಫಿಕ್ಸ್ ಆಗಿ.. ಅವನೊಂದು ಯಾವಾಗಲೂ ಅವಳೊಂದಿಗೆ ಪೋನ್ ನಲ್ಲಿಯೇ ಪ್ರೇಮಲೋಕವೊಂದನ್ನು ಕಟ್ಟಿಕೊಂಡು ಭಯಂಕರ Busy ಆಗಿ ಬಿಟ್ಟಿದ್ದಾನೆ.ಹಾಗಾಗಿ ಈಗ ಅವನಿಗೆ ಕಾಲ್ ಮಾಡಿದರೂ ಅಂತಹ ಪ್ರಯೋಜನ ಏನೂ ಇಲ್ಲ.
ಅದು ಬೇರೆ ಇವತ್ತು ಅವನು, ಅವನ ಅಪ್ಪ ಅಂದರೆ ನನ್ನ ದೊಡ್ಡಪ್ಪ ದರ್ಶನ್ ,ದೊಡ್ಡಮ್ಮ ರಕ್ಷಿತಾ,ತಂಗಿ ಇಂಪು(ಇಂಪನ),ನನ್ನ ಅಪ್ಪ.. ಎಲ್ಲಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಂತ ಹೋಗಿದ್ದಾರೆ.
ನಮ್ಮ ಮನೆಯ ಮೇಲಿನ ರೂಮಿನಲ್ಲಿ ಬಾಡಿಗೆಗೆ ಇರುವ ಬಾಲ್ಯದ ಗೆಳತಿ ಅನುರಾಧಳನ್ನು,ಕೆಳಗಿನ ಬೈಲು ಮನೆಯ ಕಾಂತಪ್ಪಣ್ಣ ಹಾಗೂ ಅಂಬಕ್ಕನನ್ನು ಕೂಡ ಅವರು ಕರೆದುಕೊಂಡು ಹೋಗಿದ್ದಾರೆ.
ನಮ್ಮ ಮನೆಯಲ್ಲಿ,ಪಕ್ಕದ ದೊಡ್ಡಪ್ಪನ ಮನೆಯಲ್ಲಿ ಇಂದು ಯಾರೂ ಕೂಡ ಇಲ್ಲ.ಹಾಗಾಗಿ ಈಗ ಸಹಾಯಕ್ಕಾಗಿ ಯಾರನ್ನೂ ಕರೆಯುವಂತಿಲ್ಲ.ಇವತ್ತು ಮನೆಗೆ ಹೋದರೂ ನಾನು ಒಬ್ಬನೇ ಮಲಗಬೇಕು ಮನೆಯಲ್ಲಿ.
ನನ್ನನ್ನು ಕೂಡ ತಿರುಪತಿಗೆ ಬಾ ಎಂದು ದೊಡ್ಡಪ್ಪ, ದೊಡ್ಡಮ್ಮ, ಮುರ್ಲಿ, ನನ್ನ ಅಪ್ಪ ಎಲ್ಲರೂ ಕರೆದಿದ್ದರು.
ಅದರಲ್ಲೂ ದೊಡ್ಡಪ್ಪನ ಮಗಳು ತಂಗಿ ಇಂಪು.. ಅಣ್ಣಾ ನೀನೂ ಕೂಡ ಬಾ.. ಎಂದು ನನ್ನನ್ನು ತುಂಬಾನೇ ಕೇಳಿಕೊಂಡಿದ್ದಳು. ಅವಳಿಗೆ ಎಲ್ಲಿಗೆ ಹೋದರೂ ನಾನು ಅವಳ ಜೊತೆ ಒಂದು ಇದ್ದರೆ ಅವಳಿಗೆ ತುಂಬಾನೇ ಗಮ್ಮತ್ ಆಗ್ತದೆ.ಒಡಹುಟ್ಟಿದ ತಂಗಿ ಅಲ್ಲದಿದ್ದರೂ ಅವಳು ನನ್ನ ಪಾಲಿನ ಸ್ವೀಟೆಸ್ಟ್ ಸಿಸ್ಟರ್ .ಅವಳಿಗೆ ಅವಳ ಮುರ್ಲಿ ಅಣ್ಣನಿಗಿಂತಲೂ ನಾನೇ ಜಾಸ್ತಿ ಇಷ್ಟ ಆಗುವುದು.
ಆದರೆ ನನಗೆ ಮಾಡಲು ಅಂತಹ ಯಾವುದೇ ಘನಂಧಾರಿ ಕೆಲಸ ಇಲ್ಲದಿದ್ದರೂ... ಬೇರೆ ಎಲ್ಲಾ ಪ್ರಯೋಜನಕ್ಕೆ ಬರದ ಕೆಲಸಗಳೇ ಬೇಕಾದಷ್ಟು ಇದ್ದುದರಿಂದ ನಾನು ಯಾವತ್ತೂ ಸದಾ Busy.. ಹಾಗಾಗಿ ನಾನು ಬರುವುದಿಲ್ಲ ಎಂದು ಮೊದಲೇ ಅವರಿಗೆಲ್ಲ ಹೇಳಿದ್ದೆ.
ಕೆಳಗಿನ ಬೈಲು ಮನೆಯ ಅಂಬಕ್ಕನ ಮಗ ಪೊಲ್ಲನನ್ನು(ಪುರಂದರ) ಈ ಟೈಂ ಅಲ್ಲಿ ಕರೆಯಬಹುದು.ಅವನ ಬಳಿ ಒಂದು ಲಾಟ್ ಪೋಟ್ ಸ್ಕೂಟಿಯಂತದ್ದು ಏನೋ ಒಂದು ಪುರಾತತ್ವ ಇಲಾಖೆಯವರು ಮಣ್ಣಿನ ಅಡಿಯಿಂದ ಆಗೆದು ತೆಗೆದಂತೆ ಕಾಣುವ ಹಳೆಯ ಗಾಡಿ ಒಂದು ಇದೆ.ತಕ್ಕ ಮಟ್ಟಿಗೆ ಓಡುತ್ತದೆ ಕೂಡ.
ನಾನು ಈಗ ಪೊಲ್ಲನನ್ನು ಕರೆದರೆ.. ಅಣ್ಣಾ.. ಎಂದು ಖಂಡಿತಾ ಆ ಗಾಡಿ ಏರಿಕೊಂಡು ಓಡೋಡಿ ಬರುತ್ತಾನೆ. ನಮ್ಮ ಊರಿನಲ್ಲಿ ಅವನ ಪಾಲಿನ ದೊಡ್ಡ ರೋಲ್ ಮಾಡೆಲ್ ಅಂದರೆ ಅದು ನಾನೇ. ಅವನ ಮತ್ತು ಅವಳ ಅಕ್ಕ ರುಕ್ಕು(ರುಕ್ಮಿಣಿ) ಪ್ರಕಾರ ನಾನೇ ಆ ಊರಿನ ಅತೀ ದೊಡ್ಡ ಪೆಟ್ಟಿಸ್ಟ್( ಸಾಹಸಿ) ಹಾಗೂ ಅವರ ಪಾಲಿನ ಆಪ್ತ ಮಿತ್ರ ಮತ್ತು ಆಪ್ತ ರಕ್ಷಕ ಎಲ್ಲಾ. ಹೀಗೆ ಹೇಳಿ ಹೇಳಿಯೇ ಅವರು ತುಂಬಾ ಕಡೆ ನನ್ನನ್ನು ನಾಚಿಕೆಟ್ಟಿಸಿದ್ದಾರೆ(ಮರ್ಯಾದೆ ಹರಣ ಮಾಡು).
ಅದರಲ್ಲೂ ಆ ಪೊಲ್ಲನೊಡನೆ ಹೋಗಿ ಬರುವುದು ಮಾಡುವುದೆಂದರೆ ನನಗೆ ಜೀವನದಲ್ಲಿ ಸ್ವಲ್ಪ ಭಯವೇ ಹೆಚ್ಚು. ಏಕೆಂದರೆ ಅವನೊಡನೆ ಹೋಗುವುದು ಎಂದರೆ ನನ್ನ ಬೆನ್ನು ಸ್ವಲ್ಪ ಲೆಕ್ಕಕ್ಕಿಂತ ಜಾಸ್ತಿಯೇ ಗಟ್ಟಿ ಇರಬೇಕಾಗುತ್ತದೆ.
ಏಕೆಂದರೆ ಅವನು ನನ್ನ ಧೈರ್ಯದಲ್ಲಿ ಏನೇನೋ ಮಾಡಲು ಹೋಗಿ ಅದು ಆಮೇಲೆ ಏನೇನೋ ಆಗಿ ಕೊನೆಗೆ ಅದನ್ನು ನಾನೇ ಅನುಭವಿಸಬೇಕಾಗುತ್ತದೆ ಎಂದು ನನಗೆ ಬಹಳ ಬಹಳ ಚೆನ್ನಾಗಿಯೇ ಗೊತ್ತು...ಇದು ಅನುಭವದ ಮಾತು.
ಬೇಡ.. ಬೇಡ. ಅವನಂತು ಈ ಟೈಂ ಅಲ್ಲಿ ಬೇಡವೇ ಬೇಡ ಎಂದು ನಿರ್ಧರಿಸಿದೆ.
ನಿಂತು ನಿಂತು ಎರಡು ಗಂಟೆ ಕಳೆಯಿತು.
ಕತ್ತಲೆ ಬೇರೆ ಆಗುತ್ತಾ ಬಂತು.
ಬಸ್ಸ್ ನ ಸುಳಿವೇ ಇಲ್ಲ.
ನಮ್ಮ ಊರ ಕಡೆಗೆ ಹೋಗುವ ಟೂ ವೀಲರ್ ನವರಿಗೆಲ್ಲಾ ಕೈ ಅಡ್ಡ ಹಾಕಿ...ಊರ ಕಡೆಗೆ ಕೈ ತೋರಿಸಿ "ಪುಲ್ಕಿ... ಪುಲ್ಕಿ..." ಎಂದು ಜೋರಾಗಿ ಕೂಗಿ ಹೇಳಿದರೂ ಯಾರೂ ಬೈಕ್ ನಿಲ್ಲಿಸಲಿಲ್ಲ.
ಈ ಕೊರೋನ ನಂತರ ಯಾರೂ ಕೂಡ ಡ್ರಾಪ್ ಕೂಡ ಕೊಡುವುದೇ ಇಲ್ಲ ಮಾರ್ರೆ..
ಆದರೆ ಹೇಗಾದರೂ ಮನೆ ತಲುಪಲೇ ಬೇಕಿತ್ತು ನಾನು.
ಹಾಗಾಗಿ ನನ್ನ ಪ್ರಯತ್ನ ಬಿಡಲಿಲ್ಲ.
ಕೈ ಅಡ್ಡ ಹಿಡಿಯುತ್ತಲೇ ಇದ್ದೆ.
ಯಾರೂ ನಿಲ್ಲಿಸಲಿಲ್ಲ.
ಕೊನೆಗೆ ರೋಡ್ ನ ಮಧ್ಯೆ ಬಂದು ಬೆಲ್ಚಪ್ಪನಂತೆ ಕೈಗಳೆರಡನ್ನು ಅಗಲಿಸಿ ನಿಂತುಕೊಂಡರೂ ಸಹ ನನ್ನನ್ನು ಸುತ್ತಿ ಬಳಸಿ ಬಹಳ ಚಾಲಾಕಿಯಿಂದ ನನ್ನಿಂದ ತಪ್ಪಿಸಿ ಹೋಗುತ್ತಿದ್ದರೇ ವಿನಹ ಯಾರೊಬ್ಬರೂ ಗಾಡಿ ನಿಲ್ಲಿಸುವ ಉಸಾಬರಿಗೆ ಹೋಗುತ್ತಿರಲಿಲ್ಲ.
ಕೆಲವರು ಅಂತು ರಾತ್ರಿ ರೋಡ್ ರಾಬರಿ ಮಾಡುವ ಕಳ್ಳರ ಕೈಗೆ ಸಿಗದೇ ತಪ್ಪಿಸಿಕೊಂಡು ಬಂದಾಗ ಯಾವ ರೀತಿಯ ಜೀವ ಉಳಿಸಿಕೊಂಡ ಖುಷಿಯ ಫೀಲ್ ಆಗುತ್ತದೋ.. ಆ ತರಹದ ನೆಮ್ಮದಿಯ ಭಾವದೊಂದಿಗೆ,ನನಗೆ ಗಾಡಿ ನಿಲ್ಲಿಸದೇ ಹೇಗಾದರೂ ಮಾಡಿ ನನ್ನಿಂದ ಎಸ್ಕೇಪ್ ಆಗಿ ರೊಂಯ್ಯ್ ಎಂದು ಹೋಗುತ್ತಿದ್ದರು.
ಶೇ... ಈ ಕೊರೋನ ಮಾನವೀಯತೆಯನ್ನು ಕೂಡ ಜನರಿಂದ ಕಸಿದುಕೊಂಡು ಬಿಟ್ಟಿದೆಯಲ್ಲಪ್ಪಾ... ಎಂದು ಮೊದಲ ಬಾರಿಗೆ ಅನಿಸಿತು.
ಸುಸ್ತಾಗಿ ರೋಡ್ ಪಕ್ಕವೇ ನಿಂತುಕೊಂಡು ಮತ್ತೆ ಚಿಪ್ಸ್ ತಿನ್ನುತ್ತಾ ಬೇಕೋ ಬೇಡದ ಹಾಗೆ ಕೈ ಅಡ್ಡ ಹಾಕಲು ಶುರು ಮಾಡಿದೆ.
ರಿಕ್ಷಾದಲ್ಲಿಯೇ ಹೋಗಬಹುದಿತ್ತು.
ಆದರೆ ಅದಕ್ಕೆಲ್ಲ ಅಷ್ಟೊಂದು ಖರ್ಚು ಮಾಡಲು ಮನಸ್ಸು ಒಪ್ಪುವುದಿಲ್ಲ ನನಗೆ.
ಹಣವನ್ನು ಪೈಸೆ ಪೈಸೆ ಕೂಡ ಲೆಕ್ಕ ಹಾಕಿ,ಯಾವುದಕ್ಕೂ ಅತಿಯಾಗಿ ಖರ್ಚು ಮಾಡದೇ ಕೂಡಿಟ್ಟುಕೊಳ್ಳುವ ಜಾಣ... ಜಿಪುಣಗ್ರೇಸರ.. ಅಂತೆಲ್ಲ ನೀವು ತಿಳಿದುಕೊಳ್ಳಬೇಡಿ.ಇಲ್ಲಿ ಈ ರೀತಿ ಸೇವ್ ಮಾಡಿದರೆ ಮುಂದೆ ಬೇರೆ ಎಲ್ಲಾದರೂ,ಏನಾದರೂ ತಿನ್ನಲಿಕ್ಕೆ ಈ ಹಣ ಹೊಂದಿಕೆ ಆಗುತ್ತದೆ ಅಲ್ವಾ... ಎನ್ನುವ ಒಂದು ಮುಂದಾಲೋಚನೆ ಅಷ್ಟೇ.
ದೂರದಲ್ಲಿ ಯಾರೋ ಒಬ್ಬ ಹೆಲ್ಮೆಟ್ ಹಾಕಿಕೊಂಡು ಗುಡು ಗುಡು ಎಂದು ಬುಲ್ಲೆಟ್ ಓಡಿಸುತ್ತಾ ಶರ ವೇಗದಲ್ಲಿ ಬರುತ್ತಿದ್ದುದು ಕಾಣಿಸಿತು.
ನೋಡಿದರೆ ಅವ ಕೂಡ ಗಾಡಿ ನಿಲ್ಲಿಸುವ ಹಾಗೆ ಕಾಣಲಿಲ್ಲ.
ಆದರೂ ಕೈ ಅಡ್ಡ ಹಾಕಿ...ಪುಲ್ಕಿ..ಪುಲ್ಕಿ.. ಅಂದೆ ಜೋರಾಗಿ.
ಯೋಚಿಸಿದಂತೆಯೇ ಅವನೂ ಸಹ ಬುಲ್ಲೆಟ್ ನಿಲ್ಲಿಸದೇ ಸೀದಾ ಮುಂದೆ ಹೋಗಿ ಬಿಟ್ಟ.
ಆದರೆ ನನ್ನಿಂದ ಸ್ವಲ್ಪ ಮುಂದೆ ಹೋದವನು.. ಒಮ್ಮೆಲೇ ಬುಲ್ಲೆಟ್ ಗೆ ಬ್ರೇಕ್ ಹಿಡಿದ.
ಬುಲ್ಲೆಟ್ ನಿಂತಿತು.
ಹೇಗೋ ಬದುಕಿದೆ... ದೇವರ ತರಹವೇ ಬಂದು ಬಿಟ್ಟ ಪುಣ್ಯಾತ್ಮ... ಎಂದುಕೊಂಡು ಅವನ ಬಳಿಗೆಯೇ ಓಡಿದೆ.
ಪುಲ್ಕಿಯಾ...? ಕೇಳಿದೆ.
ಅಲ್ಲ,ಪುಲ್ಕೇಶಿ.... ಹೆಣ್ಣು ಧ್ವನಿ ಬಂತು.
ಸರಿಯಾಗಿ ನೋಡಿದೆ..
ಬುಲ್ಲೆಟ್ ಓಡಿಸುತ್ತಿದ್ದದ್ದು ಅವನು ಅಲ್ಲ... ಅದು ಅವಳು.
ಹುಡುಗಿ ಬಹಳ ಚಂದವೇ ಇದ್ದಳು.
ಮುಖದಲ್ಲಿ ನಗು ಒಂದು ಇದ್ದಿದ್ದರೆ ಇನ್ನೂ ಚಂದ ಕಾಣುತ್ತಿದ್ದಳು.
ಸದ್ಯಕ್ಕೆ ಬೈಕ್ ಬಿಡುವ ಮೂಲಕ ಟಾಮ್ ಭಾಯ್ ತರಹ ನನ್ನ ಕಣ್ಣಿಗೆ ಗೋಚರಿಸುತ್ತಿದ್ದಳು.
ಆಹಾ..ದೇಶ ಎಷ್ಟು ಮುಂದುವರಿದಿದೆ... ಹುಡುಗಿಯರೂ ಬುಲ್ಲೆಟ್ ಬಿಡುತ್ತಾರೆ... ನನ್ನಲ್ಲಿ ಒಂದು ಸೈಕಲ್ ಕೂಡ ಇಲ್ಲ.. ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ಪುಲ್ಕಿ... ಪುಲ್ಕೇಶಿ.. ಎರಡೂ ಒಂದೇ, ನಾವು ಹಳ್ಳಿಯಲ್ಲಿ ಪುಲ್ಕಿ ಎಂದೇ ಕರೆಯುವುದು. ಹಿಂದೆ ಪುಲಿಕೇಶಿ ಅಂತ ಇತ್ತು, ನಂತರ ಪುಲ್ಕೇಶಿ ಆಯಿತು... ಈಗೀಗ ಅದು ಪುಲ್ಕಿ ಆಗಿದೆ.. ಪ್ಲೀಸ್ ಡ್ರಾಪ್ ಕೊಡಿ ಅಲಾ... ಬಸ್ಸ್ ಬೇರೆ ಇಲ್ಲ.. ಒಂದೇ ಒಂದು ಗಾಡಿಯವರು ಕೂಡ ಡ್ರಾಪ್ ಕೊಡ್ತಾ ಇಲ್ಲ.. ದೊಡ್ಡ ಮನಸ್ಸು ಮಾಡಿ.. ಪ್ಲೀಸ್.. ಅಂದೆ.
ಅವಳು ಹೂಂ.. ಅಂದಳು.
ಅವಳ ಬುಲ್ಲೆಟ್ ಹಿಂದೆಯೇ ಕುಳಿತುಕೊಂಡೆ.
ಬುಲ್ಲೆಟ್ ಗುಡು ಗುಡು ಮಾಡುತ್ತಾ ಪುಲ್ಕಿ ಕಡೆಗೆ ವೇಗವಾಗಿ ಹೋಗಲು ಶುರು ಮಾಡಿತು.
ಕೈಯಲ್ಲಿದ್ದ ಚಿಪ್ಸ್ ಪ್ಯಾಕೇಟ್ ನಲ್ಲಿ ಇನ್ನೂ ಸ್ವಲ್ಪ ಚಿಪ್ಸ್ ಇತ್ತು.
ಅವಳು ಮಾತಾಡುವ ಯಾವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ.
ಹಾಗಾಗಿ ನಾನೇ ಅವಳನ್ನೀಗ ಮಾತಿಗೆಳೆಯಬೇಕು ಅಂದುಕೊಂಡೆ.
ಒಟ್ಟಿಗೆ ಯಾರಾದರೂ ಇದ್ದಾಗ ಪರಸ್ಪರ ಮಾತೇ ಇಲ್ಲದಿದ್ದರೆ ಅದೊಂದು ಬೋರ್ ಎನಿಸುವ ಜರ್ನಿ ಎನ್ನುವುದು ನನ್ನ ಅಭಿಪ್ರಾಯ.ಅದರಲ್ಲೂ ಅಪರಿಚಿತರೊಂದಿಗಿನ ಹರಟೆ ನನಗೆ ಬಹಳ ಖುಷಿ ಕೊಡುತ್ತದೆ.
ಹಾಗೇ ಚಿಪ್ಸ್ ತಿನ್ನುತ್ತಾ ಅವಳಲ್ಲಿಯೇ ಕೇಳಿದೆ...
ಮತ್ತೆ ನೀವು ಪುಲ್ಕಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀರಿ..?
ಗೃಹಪ್ರವೇಶ... ಒಂದು ಸಾಲಿನ ಉತ್ತರ ಬಂತು.
ಅವಳು ಗೃಹಪ್ರವೇಶ ಅಂತ ಹೇಳಿದಾಗ ನಮ್ಮ ಮನೆಯ ಪಕ್ಕವೇ ಹೊಸದಾಗಿ ಮಿಲಿಟ್ರಿ ಮೋನಪ್ಪನವರು ಕಟ್ಟಿದ್ದ ಅವರ ಮನೆಯ ಗೃಹಪ್ರವೇಶ ಕೂಡ ಇವತ್ತೇ ಇರುವುದು ನೆನಪಾಗಿ ಬಿಟ್ಟಿತು.
ತಿರುಪತಿಗೆ ಹೋಗುವುದಕ್ಕೆ ಮೊದಲೇ ಮನೆಯಿಂದ ಅಪ್ಪ,ಮನೆಯ ಮೇಲಿನ ಅನುರಾಧ,ಪಕ್ಕದ ಮನೆಯಿಂದ ದೊಡ್ಡಪ್ಪನವರ ಫ್ಯಾಮಿಲಿ, ಕೆಳಗಿನ ಬೈಲು ಮನೆಯಿಂದ ಕಾಂತಪ್ಪಣ್ಣ,ಅಂಬಕ್ಕ,ರುಕ್ಕು, ಪೊಲ್ಲನವರು ಎಲ್ಲಾ ಖಂಡಿತಾ ಈಗಾಗಲೇ ಅಲ್ಲಿಗೆ ಹೋಗಿರುತ್ತಾರೆ. ಈಗ ನಾನೊಬ್ಬನೇ ಬಾಕಿ.
ಅಪ್ಪ ಬೆಳಿಗ್ಗೆಯೇ ಹೇಳಿದ್ದಾರೆ ಕೂಡ... ಎಲ್ಲಿದ್ದರೂ, ಬರುವಾಗ ರಾತ್ರಿ ಎಷ್ಟೇ ಲೇಟ್ ಆದರೂ ಕೂಡ.. ಇವತ್ತೇ ಮೋನಪ್ಪನವರ ಗೃಹಪ್ರವೇಶದ ಮನೆಗೆ ಒಂದು ಘಳಿಗೆ ಹೋಗಿ ಅವರಿಗೆ ವಿಶ್ ಮಾಡಿ ಬಾ ಮಾರಾಯ.. ಒಳ್ಳೆಯ ಜನ ಅವರು...ಅದರಲ್ಲೂ ಮಿಲಿಟ್ರಿಯವರು ಬೇರೆ. ನೆರೆಹೊರೆಯವರು ಎಲ್ಲಾ ಯಾವತ್ತಿಗೂ ಬೇಕಾಗ್ತದೆ.. ಹಾಗಾಗಿ ಹೋಗದೆ ಇರಬೇಡ.. ಎಂದು ಅಪ್ಪ ಹೇಳಿದ್ದರು.
ಅಪ್ಪ ಮತ್ತು ಮೋನಪ್ಪ ಅಂಕಲ್ ಇತ್ತೀಚೆಗೆ ಬಾರೀ ಒಳ್ಳೆಯ ದೋಸ್ತಿ ಬೇರೆ ಆಗಿದ್ದಾರೆ. ಹೋಗದಿದ್ದರೆ ಚೆನ್ನಾಗಿರಲ್ಲ. ಬಹುಶಃ ಈ ಹುಡುಗಿ ಕೂಡ ಅದೇ ಗೃಹಪ್ರವೇಶ ಕ್ಕೆ ಹೋಗುತ್ತಿರಬಹುದು.. ಯಾಕೆಂದರೆ ಇಂದು ನಮ್ಮ ಊರಿನಲ್ಲಿ ಬೇರೆ ಯಾವುದೇ ಗೃಹಪ್ರವೇಶ ಇರುವುದು ನನಗಂತು ಗೊತ್ತಿಲ್ಲ...
ನನಗೆ ಗೊತ್ತಿಲ್ಲದೇ ನಮ್ಮೂರಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ. ಹಾಗಂತ ರುಕ್ಕು ಮತ್ತು ಪೊಲ್ಲ ಆವಾಗವಾಗ ಹೇಳುತ್ತಲೇ ಇರುತ್ತಾರೆ ಕೂಡ.
ಅವರಿಬ್ಬರು ನನ್ನನ್ನು ಈ ರೀತಿ ಬಡ್ಕಾಯಿಸಿ ಬಡ್ಕಾಯಿಸಿಯೇ ನನ್ನಿಂದ ಎಂತೆಂತಹ ಅಮೋಘ ಸಾಹಸಗಳನ್ನು ಮಾಡಿಸಿದ್ದಾರೆ... ಒಂದು ಬಾರಿ ನಗರದ ಪ್ರಮುಖ ಡಾನ್ ಬಿಸತ್ತಿ ಬಾಬುವಿನ ಕೈಯಿಂದ ಸಾವಿನ ದವಡೆಯಿಂದ ಜಸ್ಟ್ ಪಾರಾಗಿ,ಹೇಗೋ ಕೊನೆಗೆ ನನ್ನ ಚಾಕಚಕ್ಯತೆಯಿಂದ ಆ ರೌಡಿಯನ್ನೇ ನನ್ನ ದೋಸ್ತಿಯನ್ನಾಗಿ ಮಾಡಿಕೊಂಡು ಬಂದಿದ್ದೆ.ಅದೊಂದು ದೊಡ್ಡ ಕಥೆ.
ಬುಲ್ಲೆಟ್ ವೇಗವಾಗಿ ಗಾಳಿಯನ್ನು ಸೀಳಿಕೊಂಡು ಅದರಷ್ಟಕ್ಕೆ ಮುಂದಕ್ಕೆ ಓಡುತ್ತಿತ್ತು.
ನಾನು ಬುಲ್ಲೆಟ್ ಬಿಡುತ್ತಿದ್ದ ಅವಳಲ್ಲಿಯೇ ಮತ್ತೆ ಕೇಳಿದೆ..
- ಅಂದ ಹಾಗೆ ನೀವು ಮೋನಪ್ಪ ಅಂಕಲ್ ನವರ ಗೃಹಪ್ರವೇಶ ಕ್ಕೆ ಹೋಗುತ್ತಿರುವುದಾ ಹೇಗೆ?
ಹೂಂ... ಹೌದು... ಮತ್ತೆ ಒಂದು ಸಾಲಿನ ಉತ್ತರ ಅಷ್ಟೇ ಬಂತು.
ನೋಡಿ ನೀವು ಏನೂ ಟೆನ್ಶನ್ ಮಾಡ್ಬೇಡಿ... ನಾನೂ ಕೂಡ ಅಲ್ಲಿಗೆನೇ ಹೋಗುತ್ತಿದ್ದೇನೆ. ನಮ್ಮ ಮನೆ ಪಕ್ಕವೇ ಅವರ ಮನೆ ಇರುವುದು. ನೀವು ನೋಡಿದ್ರೆ ಊರಿಗೆ ಹೊಸಬ್ರು ಅಂತ ಅನ್ನಿಸುತ್ತೆ.. ಆದ್ರೆ ನಾನಿರುವಾಗ ನೀವು ಡೋಂಟ್ ವರಿ.. ನಿಮ್ಮನ್ನು ಅಲ್ಲಿಗೆ ನಾನು ಕರೆದುಕೊಂಡು ಹೋಗುತ್ತೇನೆ.. ಅದು ನನ್ನ ಜವಾಬ್ದಾರಿ... ಅಂದ ಹಾಗೆ ನೀವು ಅವರ ರಿಲೇಟಿವ್ವಾ..?
ಅವಳು ಅವಳಷ್ಟಕ್ಕೆ ಬುಲ್ಲೆಟ್ ಗುಡು ಗುಡು ಮಾಡುತ್ತಾ ಹೋಗುತ್ತಿದ್ದಳು...
ಯಾವುದೇ ಮರು ಉತ್ತರ ಬರುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಲಿಲ್ಲ.
ಸಾಯ್ಲಿ.. ನಾನೇ ಮಾತು ಮುಂದುವರಿಸುತ್ತೇನೆ.. ಎಂದು ಮತ್ತೆ ಮಾತಿಗೆ ಇಳಿದೆ...
ಅಂದ ಹಾಗೆ ನಾನು ನಿಮಗೆ ನನ್ನ ಪರಿಚಯವೇ ಹೇಳಿಲ್ಲ ನೋಡಿ..
ನನ್ನ ಹೆಸರು ನೀಲಮೇಘ ಅಂತ.
ಅಪ್ಪನ ಹೆಸರು ನೀಲಣ್ಣ.
ಅಮ್ಮನ ಹೆಸರು ಮೇಘಕ್ಕ.
ಅವರ ಹೆಸರಗಳನ್ನೇ ಕಟ್ ಮಾಡಿ ಮತ್ತೆ ಜೋಡಿಸಿದ ನಂತರ ಆಗಿದ್ದೇ ನನ್ನ ಹೆಸರು ನೀಲಮೇಘ ಅಂತ.
ಆದ್ರೆ ಊರಿನಲ್ಲಿ ಎಲ್ಲಾ ನನ್ನನ್ನು ನೀಲು... ನೀಲು.. ಅಂತಾನೇ ಕರೀತಾರೆ.
ಸಮಾಜದ ಯಾವುದೇ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತಾನೆ.
ಡಾಂಬರು ರೋಡ್ ಅಲ್ಲಿ ಗುಂಡಿ ಆದಾಗ.. ಅದರಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡುವುದು...
ಗ್ರಾಮದಲ್ಲಿ ಹುಚ್ಚು ನಾಯಿಗಳ ಕಾಟ ಜಾಸ್ತಿ ಆದಾಗ.. ಅದನ್ನು ಹಿಡಿಯಲು ಪಂಚಾಯಿತಿ ಅವರಿಗೆ ಸಹಾಯ ಮಾಡುವುದು..
ಸರಿಯಾಗಿ ಕೆಲಸ ಮಾಡದ ಪಂಚಾಯಿತಿ ಮೆಂಬರುಗಳಿಗೆ ಸುಮ್ಮನಿರುವ ಜನರನ್ನು ರೊಚ್ಚಿಗೊಬ್ಬಿಸಿ ಅವರಿಂದ ಚೀಮಾರಿ ಹಾಕಿಸುವುದು..
ಮಳೆ ಬರದೇ ಇದ್ದಾಗ ಕಪ್ಪೆಗಳ ಮದುವೆ.. ಕತ್ತೆಗಳ ಮದುವೆ... ಇವೆಲ್ಲಾ ನಮ್ಮೂರಲ್ಲಿ ನನ್ನ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿಯೇ ಇತ್ತೀಚೆಗೆ ನಡೆದದ್ದು ಕೂಡ...
ಆಮೇಲೆ ಮಳೆ ಕೂಡ ಬಹಳ ಚೆನ್ನಾಗಿ ಬಂದು... ಒಂದೆರಡು ಮನೆಗಳು ಕೂಡ ಕುಸಿದು ಬಿದ್ದಿತ್ತು.
ಅದಕ್ಕಾಗಿ ನಾವು ಅವರಿಗೆ ಪರಿಹಾರ ಸಿಗಲೇಬೇಕು ಎಂದು ರಾಜಕೀಯ ನಾಯಕರುಗಳ ಎದುರು ಧರಣಿ ಕೂತು ಹರತಾಳ ಎಲ್ಲಾ ಮಾಡಿದ್ದೆವು.
ಅದೇ ರೀತಿ ಊರಿಗೆ ಇಷ್ಟೊಂದು ಮಳೆ ಬಂದು ಕಷ್ಟ ಆಗುವುದಾದರೆ... ಮುಂದೆ ಇಂತಹ ಕಪ್ಪೆಗಳ ಮದುವೆ ಎಲ್ಲಾ ಮಾಡಬಾರದು ಎಂದು ಹೆಚ್ಚಿನವರು ಮನವಿ ಮಾಡಿದ್ದಾರೆ..ಕೆಲವರು ಸ್ಪಷ್ಟವಾಗಿ ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದು ಕೂಡ ಅಲ್ಲಲ್ಲಿ ಕಂಡು ಬಂದಿತ್ತು.
ಒಟ್ಟಿನಲ್ಲಿ ಊರಿನ ಜನ ನನ್ನನ್ನು ನಂಬುತ್ತಾರೆ.
ತಂದೆಗೆ ತಕ್ಕ ಮಗ ಅಂತ ಕೊಂಡಾಡುತ್ತಾರೆ.
ನಾಳೆ ಕೂಡ ಪಂಚಾಯಿತಿಯವರ ವಿರುದ್ಧವೇ ನಳ್ಳಿ ನೀರಿನ ಅವ್ಯವಸ್ಥೆಯ ವಿರುದ್ಧ "ನೀರಿಗಾಗಿ ಪ್ರಾಣ ಕೊಡುವೆವು " ಎಂಬ ಮಹಿಳೆಯರ ಒಂದು ಚಿಕ್ಕ ಮಟ್ಟಿನ ಆಕ್ರೋಶದ ಹೋರಾಟ ಕೂಡ ನಡೀಲಿಕ್ಕೆ ಉಂಟು.
ಹೀಗೆ ನಮ್ಮೂರಲ್ಲಿ ಏನಾದರೂ ಒಂದು ಸಣ್ಣ ಪುಟ್ಟ ಹೋರಾಟಗಳನ್ನು ನಾನು ಮಾಡುತ್ತಲೇ ಇರುತ್ತೇನೆ.
ಅಂದ ಹಾಗೆ ನೀವು ಕೂಡ ಒಂದೆರಡು ದಿನ ನಮ್ಮ ಪುಲ್ಕಿಯಲ್ಲಿಯೇ ಇದ್ದು ಬಿಡಿ...ನಿಮಗೂ ನಮ್ಮೂರಿನ ಬಗ್ಗೆ ಎಲ್ಲವನ್ನೂ ಸವಿವರವಾದ ಪರಿಚಯ ಮಾಡಿಸುತ್ತೇನೆ..ಎಂದು ಹೇಳಿ ಮುಗಿಸಿದೆ.
ಎದುರುಗಡೆಯಿಂದ ಒಂದೂ ರಿಪ್ಲೈ ಬರಲಿಲ್ಲ.
ಬಹುಶಃ ನಾನು ಜಾಸ್ತಿ ಮಾತಾಡಿದೆ ಎಂದು ಅನಿಸಿತು.
ಬುಲ್ಲೆಟ್ ಗುಡು ಗುಡು ಎಂದು ಹೋಗುತ್ತಲೇ ಇತ್ತು..
ಕೊನೆಗೂ ಪುಲ್ಕಿ ತಲುಪಿದೆವು.
ಪುಲ್ಕಿಗೆ ಬಂದ ನಂತರ ನಾನೇ ಅವಳಿಗೆ ಗೃಹಪ್ರವೇಶದ ಮನೆಯ ದಾರಿ ಹೇಳಿದೆ.
ಮನೆಯ ಎದುರೇ ಅವಳು ಬುಲ್ಲೆಟ್ ನಿಲ್ಲಿಸಿದಳು.
ನಮ್ಮ ಮನೆಯ ಪಕ್ಕವೇ ಮೋನಪ್ಪ ಅಂಕಲ್ ನ ಗೃಹಪ್ರವೇಶದ ಮನೆ.
ಬಹಳ ಚೆನ್ನಾಗಿ ಅಲಂಕರಿಸಿದ್ದರು ಮನೆಯನ್ನು.
ಹಿಂದಿನ ದಿನ ರಾತ್ರಿ ನಾನೇ ಕೊನೆಯ ಕ್ಷಣದಲ್ಲಿ ಅವರಿಗೆಲ್ಲಾ ಬೆಲೂನ್ ಕಟ್ಟಿ ಅಲಂಕರಿಸಲು ಸಹಾಯ ಮಾಡಲೆಂದು ಹೋಗಿದ್ದೆ..
ಆದರೆ ಬೆಲೂನ್ ಕಟ್ಟುವುದಕ್ಕಿಂತ ನಾನು ಅವರು Already ಕಟ್ಟಿದ್ದ ಬೆಲೂನುಗಳನ್ನು ಒಡೆದದ್ದೇ ಜಾಸ್ತಿ.ಕೆಲವು ಮಕ್ಕಳು ನನ್ನನ್ನೇ ವಿಪರೀತ ದುರುಗುಟ್ಟಿ ನೋಡಿದ ಕಾರಣ... ಈ ಬೆಲೂನ್ ಡೆಕೋರೆಷನ್ ನನ್ನಿಂದ ಆಗ್ಲಿಕ್ಕಿಲ್ಲ ಎಂದು ಹಾಗೇ ಹಿಂದಿರುಗಿದ್ದೆ.
ಮನೆಯ ಎದುರಲ್ಲಿ ಯಾರೂ ಕಾಣಲಿಲ್ಲ.
ಮಿಲಿಟ್ರಿ ಮೋನಪ್ಪ ಅಂಕಲ್ ಗೆ ಜಾಸ್ತಿ ಸಂಬಂಧಿಕರು ಯಾರೂ ಇಲ್ಲ ಎಂದು ಗೊತ್ತಿತ್ತು.ಅದಕ್ಕಾಗಿ ಊರಿನವರಿಗೆ ಎಲ್ಲರಿಗೂ ಗೃಹಪ್ರವೇಶಕ್ಕೆ ಆಮಂತ್ರಣ ಪತ್ರಿಕೆ ಕೊಟ್ಟಿದ್ದರು ಅವರು.
ಬಹುಶಃ ಗೃಹಪ್ರವೇಶಕ್ಕೆ ಬಂದಿದ್ದ ಸಂಬಂಧಿಕರು ಕೂಡ ಅದಾಗಲೇ ಹಿಂದಿರುಗಿರಬೇಕು.. ಅದಕ್ಕಾಗಿ ಮನೆ ಖಾಲಿ ಖಾಲಿ ಅನಿಸುತ್ತಿದ್ದೆ ಎಂದುಕೊಂಡೆ.
ಆವಾಗಲೇ ಮನೆಯೊಳಗಿನಿಂದ ಬಾಗಿಲಿನ ಬಳಿ ಪ್ರತ್ಯಕ್ಷರಾದರು ಮಿಲಿಟ್ರಿ ಮೋನಪ್ಪ ಅಂಕಲ್.
ಅವರು ಒಬ್ಬ ನಿವೃತ್ತ ಮಿಲಿಟರಿ ಆಫೀಸರ್.
ಬೇರೆ ಎಲ್ಲೋ ಬಾಡಿಗೆ ಮನೆಯಲ್ಲಿ ಇದ್ದರಂತೆ.
ಇತ್ತೀಚೆಗೆ ನಮ್ಮ ಮನೆಯ ಪಕ್ಕವೇ ಇದ್ದ ತೋಟದ ಮನೆ ಇಷ್ಟ ಆಗಿ ಅದನ್ನೇ ಖರೀದಿಸಿ.. ಹಳೆಯ ಮನೆಯನ್ನು ಕೆಡವಿ ಅಲ್ಲೊಂದು ದೊಡ್ಡ ಮನೆಯನ್ನೇ ಕಟ್ಟಿ ಬಿಟ್ಟಿದ್ದಾರೆ ಮೋನಪ್ಪ ಅಂಕಲ್.
ಅವರನ್ನು ನಾನು ಒಂದೆರಡು ಬಾರಿ ಅಷ್ಟೇ ನೋಡಿದ್ದೆ.
ಆದರೂ ನನಗೆ ಪರಿಚಯ ಆಗಲಿಕ್ಕೆ ಅಷ್ಟು ಸಾಕು.
ಅವರನ್ನು ಕಂಡ ಕೂಡಲೇ ಓಡಿ ಹೋಗಿ...ಹಾಯ್ ಅಂಕಲ್.. ಎಂದು ನಗುತ್ತಲೇ ಹ್ಯಾಂಡ್ ಶೇಕ್ ಮಾಡಿ ಮಾತಾಡಿಸಿದೆ.
ನಂತರ ಕೆಳಗಡೆ ನಿಂತಿದ್ದ ಬುಲ್ಲೆಟ್ ಹುಡುಗಿಯತ್ತ ಕೈ ತೋರಿಸಿ... ಅಂಕಲ್ ಇವರು ನಿಮ್ಮ ಗೃಹಪ್ರವೇಶ ಕ್ಕೆ ಅಂತಾನೇ ಬರುತ್ತಿದ್ದರು.. ಬರುವಾಗ ದಾರಿಯಲ್ಲಿ ಸಿಕ್ಕರು.. ಹಾಗೇ ನಾನೇ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದೆ..ಎಂದು ಹೇಳಿ ಮುಗಿಸಿದೆ.
ಹುಡುಗಿ ಅಂಕಲ್ ಗೆ ಕೈ ಬೀಸಿದಳು.
ಇವರೂ ಕೈ ಬೀಸಿದರು.
ಬನ್ನಿ.. ಒಳಗೆ ಬನ್ನಿ.. ಅಂದರು ಅಂಕಲ್.
ನಂತರ ನಾನು,ಅವಳು ಮತ್ತು ಅಂಕಲ್ ಒಟ್ಟಿಗೆ ಮೂವರೂ ಮನೆ ಒಳಗೆ ನಡೆದೆವು.
ಬಹಳ ಸುಂದರವಾದ ಮನೆ.. ಅಂಕಲ್ ಒಬ್ಬರಿಗೆ ಇಷ್ಟು ದೊಡ್ಡ ಮನೆ ಯಾಕೆ ಎಂದು ಒಮ್ಮೆ ಅನಿಸಿತು.
ಅಂಕಲ್ ಕೇಳಿದರು.. ಬೆಳಿಗ್ಗೆ ಎಲ್ಲಿಗೆ ಹೋಗಿದ್ದೆ ಯಂಗ್ ಮ್ಯಾನ್.. ನಿನ್ನ ಡ್ಯಾಡಿ ಎಲ್ಲಾ ಬೆಳಿಗ್ಗೆಯಿಂದಲೇ ಇಲ್ಲಿದ್ದು ಎಲ್ಲವನ್ನೂ ನೋಡಿಕೊಂಡು ನನಗೆ ತುಂಬಾನೇ ಹೆಲ್ಪ್ ಮಾಡಿದರು..ಆ ನಿನ್ನ ದೊಡ್ಡಪ್ಪ ದರ್ಶನ್ ಮತ್ತು ಅವರ ಮನೆಯವರು, ಬೈಲು ಮನೆಯ ಕಾಂತಪ್ಪಣ್ಣನವರ ಮನೆಯವರೆಲ್ಲಾ ತಮ್ಮದೇ ಫಂಕ್ಷನ್ ಎಂದು ತಿಳಿದು ನಮಗೆಲ್ಲ ಇಂದು ಬಹಳನೇ ಸಹಾಯ ಮಾಡಿ.. ಆಮೇಲೆ ಅವರುಗಳೆಲ್ಲ ತಿರುಪತಿಗೆ ಹೊರಟು ಹೋದರು..
ಹೌದು ಅಂಕಲ್.. ಸ್ವಲ್ಪ ಕೆಲಸ ಇತ್ತು.. ಒಂದು ಜನ ಜಾಗೃತಿ ಸಭೆ.. "ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ" ಅಂತ. ಅಲ್ಲಿಗೆ ಹೋಗಿದ್ದೆ.. ಹಾಗಾಗಿ ಬರಲು ಆಗಲಿಲ್ಲ.. ಎಂದು ಹೇಳಿದೆ.
ಓಹ್.. ಗ್ರೇಟ್ ಯಂಗ್ ಮ್ಯಾನ್... ಸ್ಪಿಚ್ ಕೊಡಲು ಹೋಗಿದ್ದೆಯಾ.. ಅದಕ್ಕೆ ನೋಡು ನನಗೆ ನಿನ್ನಂತಹ Energetic & Enthusiastic ಹುಡುಗರು ಇಷ್ಟ ಆಗುವುದು. ನೀವೇ ನಮ್ಮ ದೇಶದ ನಿಜವಾದ ಆಸ್ತಿ... ಎಂದು ನನ್ನನ್ನು ಹಾಡಿ ಹೊಗಳಿದರು ಮಿಲಿಟ್ರಿ ಅಂಕಲ್.
ಇಲ್ಲ.. ಅಂಕಲ್... ಅದು ಸಭೆಗೆ ಬಂದವರಿಗೆ ಬನ್ನು ಮತ್ತು ಮಜ್ಜಿಗೆ ಹಂಚುವ ಜವಾಬ್ದಾರಿ ನನಗೆ ಕೊಟ್ಟಿದ್ದರು.. ಅಲ್ಲಿ ವರ್ಷ ವರ್ಷ ಏನೇ ಫಂಕ್ಷನ್ ಇದ್ದರೂ ಫಳಾರ ಇಲ್ಲವೇ ಚಹಾ.. ಬನ್ನು ಹಂಚುವುದು ನಾವೇ.ಹಾಗೆ ಅಲ್ಲಿಗೆ ಹೋ.. ಗಿ..ದ್ದೆ... ಎಂದು ಹೇಳಿ ಮುಗಿಸಿದೆ.
ಮಿಲಿಟ್ರಿ ಅಂಕಲ್ ನನ್ನನ್ನೇ ಒಮ್ಮೆ ಮೇಲಿನಿಂದ ಕೆಳಗೆ ನೋಡಿದರು.
ಅಲ್ಲೇ ಇದ್ದ ಹುಡುಗಿ ಹಿಂದೆ ತಿರುಗಿ ಗೋಡೆ ಕಡೆಗೆ ಮುಖ ಮಾಡಿ ಬಾಯಿಗೆ ಕೈ ಹಿಡಿದು ಪುಸುಕ್ಕನೆ ನಕ್ಕಳು.
ರಪ್ಪನೇ ಟಾಪಿಕ್ ಚೇಂಜ್ ಮಾಡುವ ಸಲುವಾಗಿ...
ಅಂಕಲ್.. ಮತ್ತೆ ಮನೆಗೆ ಬಂದ ಅತಿಥಿಗಳಿಗೆ ಪಾಯಸ ಕುಡಿಯಲ್ವಾ..ಸಿಹಿ ತಿನ್ನಲ್ವಾ... ಅಂತೆಲ್ಲಾ ಕೇಳುವ ಕ್ರಮ ಇಲ್ಲವ ನಿಮ್ಮ ಮನೆಯಲ್ಲಿ.. ಏನ್ ಅಂಕಲ್ ನೀವೊಂದು.. ಅಂದೆ ರಾಗವಾಗಿ.
ಅದಕ್ಕೆ ಅಂಕಲ್...
ಓಹ್.. ಮರೆತೇ ಬಿಟ್ಟಿದ್ದೆ...
ಮಗಳೇ ಭಾಮ.. ಬಟ್ಟೆ ಬದಲಾಯಿಸಿ..ಸ್ನಾನ ಎಲ್ಲಾ ಮಾಡಿ ಫ್ರೆಶ್ ಆಗಿ ಬಂದು.. ಈ ಯಂಗ್ ಮ್ಯಾನ್ ಗೆ ಒಂದು ದೊಡ್ದ ಲೋಟದಲ್ಲಿ ಪಾಯಸ ಕೊಡಮ್ಮ... ಎಂದು ಹೇಳಿ ಮುಗಿಸಿದರು.
ಅದನ್ನು ಕೇಳಿ ನನ್ನೊಡನೆ ಬಂದ ಆ ಹುಡುಗಿ ನನ್ನನ್ನೇ ಮೇಲಿನಿಂದ ಕೆಳಗೆ ನೋಡಿ ಕುಹುಕದ ನಗು ಬೀರಿ.. ಆಯಿತು ಅಪ್ಪ... ಎಂದು ಹೇಳಿ ಒಳ ಮನೆಗೆ ನಡೆದಳು.
ಅಂಕಲ್... ಈ ಬುಲ್ಲೆಟ್ ಹುಡುಗಿ ನಿಮ್ಮ ಮಗಳಾ... ಎಂದು ಕೇಳಿದೆ ಆಶ್ಚರ್ಯದಿಂದ.
ಯೆಸ್.. ಯಂಗ್ ಮ್ಯಾನ್...
ಭಾಮ..
ಬುಲ್ಲೆಟ್ ಭಾಮ... ನನ್ನ ಮಗಳು... ಅಂದರು ಅಂಕಲ್.
ಆದ್ರೆ ಅವಳನ್ನು ನಾನು ಯಾವತ್ತೂ ನೋಡಿಯೇ ಇಲ್ಲವಲ್ಲ... ನಿನ್ನೆ ಬೆಲೂನ್ ಕಟ್ಟಲು ಬಂದಾಗ ಕೂಡ ಅವಳು ಇಲ್ಲಿರಲಿಲ್ಲ..ಈಗ ನೋಡಿದ್ರೆ ಇಷ್ಟು ಲೇಟಾಗಿ ಗೃಹಪ್ರವೇಶಕ್ಕೆ ಬಂದಿದ್ದಾಳೆ.. ಅಂದೆ.
ಅವಳೇ ನನೆಗ ಮಗ.. ಮಗಳು ಎಲ್ಲಾ...
ನಾನು ಸೇವೆಯಿಂದ ನಿವೃತ್ತಿ ಆದ ನಂತರ ಎಲ್ಲಾ ಜವಾಬ್ದಾರಿಯನ್ನು ಅವಳೇ ನೋಡಿಕೊಳ್ಳುತ್ತಿದ್ದಾಳೆ.
ನಿನ್ನೆ ಬಂದಾಗ ಏನೋ ಸಾಮಾನುಗಳನ್ನು ತರಲು ಪೇಟೆ ಕಡೆ ಹೋಗಿದ್ದಳು ಎಂದು ಕಾಣುತ್ತದೆ.
ಹಾಗಾಗಿ ನಿನಗೆ ನೋಡಲು ಸಿಗಲಿಲ್ಲ.
ಈಗ ಕೂಡ ಗೃಹಪ್ರವೇಶ ಮುಗಿಸಿ ಪೇಟೆಗೆ ಹೋಗಿದ್ದಳು.
ಆದರೆ ಈ ಬಾರಿ ನನಗೆ ಬೇಕಾಗಿರುವುದನ್ನು ತರಲು.. ಅಂದರು ನಗು ನಗುತ್ತಲೇ.
ಅಂಕಲ್... ನಿಮಗೆ ಬೇಕಾಗಿರುವುದು ಅಂದರೆ..? ಕುತೂಹಲದಿಂದಲೇ ಕೇಳಿದೆ.
ಹಹ್ಹಾ..ಹಹ್ಹಾ.. ಡ್ರಿಂಕ್ಸ್.. ಯಂಗ್ ಮ್ಯಾನ್..
ಇವತ್ತು ಸ್ವಲ್ಪ ಲೈಟ್ ಆಗಿ ಪಾರ್ಟಿ ಮಾಡದಿದ್ದರೆ ಹೇಗೆ..ಅಂದರು ಮತ್ತೆ ಜೋರಾಗಿ ನಗುತ್ತಾ ಕಿಲಾಡಿ ಮಿಲಿಟ್ರಿ ಅಂಕಲ್.
ಇವತ್ತು ನನಗೆ ಕಂಪನಿ ಕೊಡಲು ಬೇರೆ ಯಾರೂ ಇಲ್ಲ... ಹಾಗಾಗಿ ಇವತ್ತು ನೀನೂ ಲೈಟ್ ಆಗಿ ನನ್ನೊಡನೆ... ಹಹ್ಹಾ.. ಹಹ್ಹಾ.. ಅಂದರು ಅಂಕುಳ್.
ಮತ್ತೆ ಅಂಕಲ್ ಪಾಯಸ ತರಲು ಹೇ.. ಳಿ.. ದ್ದೀ.. ರಿ ಅಲ್ಲವೇ... ಅಂದೆ.
ಪಾಯಸ ಗೀಯಸ ಎಲ್ಲಾ ಆಮೇಲೆ... ಮೊದಲು ಒಂದೆರಡು ಗ್ಲಾಸ್ ಏರಿಸುವ.. ಹೇಗೋ ನಿನ್ನ ಮನೆಯಲ್ಲಿ ಕೂಡ ಇವತ್ತು ಯಾರೂ ಇಲ್ಲ.. ಇವತ್ತು ಇಲ್ಲೇ ಇದ್ದು ಬಿಡು... ಅಂದರು ಅಂಕಲ್.
ನಾನು ಅಂತಹ ಮಹಾನು ಕುಡಿ(ಕುಡುಕ)ಏನಲ್ಲ.
ಫ್ರೆಂಡ್ಸ್ ಜೊತೆಗೆ ಬಾರ್ ಗೆ ಹೋದಾಗ ಕೂಡ Sprite ಅನ್ನೇ ಜಾಸ್ತಿ ಕುಡಿಯಲು Prefer ಮಾಡುತ್ತಿದ್ದೆ... ಆ ನಂತರ ಅವರಿಗೆ ಕುಡಿಯುವಾಗ ತಿನ್ನಲೆಂದು ತರಿಸುತ್ತಿದ್ದ ಸೈಡ್ಸ್, ಫುಡ್ ಎಲ್ಲಾ ನಾನೊಬ್ಬನೇ ಸಪಾಯಿ ಮಾಡಿ ಹಾಕಿ.. ಏನೂ ತಿಳಿಯದ ಅಮಾಯಕನಂತೆ ಕುಳಿತಿರುತ್ತಿದ್ದೆ.
ಆಮೇಲೆ ಊರಿನಲ್ಲಿ ಅಲ್ಲಲ್ಲಿ ಮೆಹಂದಿಯ ಫಂಕ್ಷನ್ ಗಳಲ್ಲಿ ಗೆಳೆಯರ ಅತ್ಯುತ್ತಮ ಪೋತ್ಸಾಹಕ್ಕೆ ಮಣಿದು ಒಂದೆರಡು ಬಿಯರ್ ಅಷ್ಟೇ ಹೊಡೆದಿದ್ದೆ.
ನಂತರ ಹೀಗೆ ಪ್ರೀಯಾಗಿ ಸಿಕ್ಕರೆ ಮಾತ್ರ ಲಿಮಿಟ್ ನಲ್ಲಿ ಕುಡಿಯುತ್ತಿದ್ದೆ ಹೊರತು ಕಾಸು ಕೊಟ್ಟು ಕುಡಿಯುವ ಎಣ್ಣೆ ಪಾರ್ಟಿ ನಾನಲ್ಲ.
ಆದರೆ ಈ ಮೋನಪ್ಪ ಅಂಕುಳ್ ಇಷ್ಟೊಂದು ಪರಿಪರಿಯಾಗಿ ಮನವಿ ಮಾಡುತ್ತಿರುವುದನ್ನು ನೋಡಿ ಅವರಿಗೆ ಬೇಡ ಎಂದು ಹೇಳಿ.. ಈ ಶುಭ ದಿನವೇ ಅವರ ಮನಸ್ಸಿಗೆ ನೋವು ಮಾಡುವ ಮನಸ್ಸು ನನಗೆ ಕೂಡ ಬರಲಿಲ್ಲ.
ಮಗಳೇ... ಅದು ಪಾಯಸ ಬೇಡ..ವಿಸ್ಕಿ.. ಹಾನ್ ವಿಸ್ಕಿ.. ತಗೊಂಡು ಬಾ...ಹಾಗೇ ಮೂರು ಗ್ಲಾಸ್, ಪ್ಲೇಟ್ಸ್... ಚಿಪ್ಸ್, ಸೈಡ್ಸ್ ಎಲ್ಲಾ ತಗೊಂಡು ಬಾ.. ಅಂದರು.
ಓಹೋ... ಅಂದರೆ ಇವರ ಮಗಳು ಕೂಡ ಬಹಳ ಚೆನ್ನಾಗಿಯೇ ಕುಡಿಯುತ್ತಾಳೆ... ಮನಸ್ಸಿನಲ್ಲಿಯೇ ಅಂದುಕೊಂಡೆ.
ಏನಪ್ಪಾ ಇವರುಗಳು... ನಮ್ಮ ಮನೆಯ ಪಕ್ಕವೇ ಒಂದು ಮಿನಿ ಬಾರ್ ಓಪನ್ ಮಾಡಿರುವಂತೆ ನನಗೆ ಭಾಸವಾಯಿತು.
ನಾನು ಯಾವತ್ತೂ ವಿಸ್ಕಿ ಕುಡಿದವನಲ್ಲಾ...
ಕೇವಲ ಬಿಯರ್ ಅಷ್ಟೇ.
ಆದರೆ ಈ ಅಂಕಲ್ ಒಂದು ನನ್ನನ್ನು ಅದಾಗಲೇ ಮಹಾನು ಕುಡುಕ ಇರಬೇಕು ಎಂದು ಗೆಸ್ ಮಾಡಿರುವುದನ್ನು.. ಟುಸ್ಸ್ ಮಾಡಲು ನನಗೆ ಸ ಮನಸ್ಸೇ ಬರಲಿಲ್ಲ.
ಏನೇ ಆಗಲಿ... ಇವತ್ತು ಒಂದು ಕೈ ನೋಡೇ ಬಿಡುವ... ಎಂದು ನನಗೆ ನಾನೇ ಹೇಳಿಕೊಂಡೆ.
ಅದೂ ಅಲ್ಲದೇ.. ಅವರ ಮಗಳೇ ಕುಡಿಯುತ್ತಾಳೆ. ಇನ್ನು ನಾನು ಗಂಡಾಗಿ ಕುಡಿಯದಿದ್ದರೆ ನನ್ನ ಮರ್ಯಾದೆ ಬೇಡವಾ...
ಆದ್ದರಿಂದ.... ನಾನು ಇವತ್ತು ವಿಸ್ಕಿ ಕುಡಿಯಲೇಬೇಕು ಎಂದು ದೃಢ ನಿರ್ಧಾರ ಮಾಡಿಯೇ ಬಿಟ್ಟೆ.
ಅಂಕಲ್ ಮಗಳು ದೊಡ್ಡ ದೊಡ್ಡ ವಿಸ್ಕಿ ಬಾಟಲ್ ಗಳ ಜೊತೆಗೆ, ಐಸ್ ಕ್ಯೂಬ್ಸ್.. ಗ್ಲಾಸ್.. ಚಿಪ್ಸ್.. ಎಲ್ಲಾ ತಂದು ನಮ್ಮ ಮುಂದೆ ಇಟ್ಟಳು.
ಈಗ ಶಾರ್ಟ್ ಹಾಕಿ... ಅದರ ಮೇಲೊಂದು ಟೀ ಶರ್ಟ್ ಹಾಕಿ ಬಹಳ ಮುದ್ದಾಗಿಯೇ ಕಾಣುತ್ತಿದ್ದಳು.
ಆದರೂ ಅವಳು ಸ್ವಲ್ಪ ಟಾಮ್ ಬಾಯ್ ಯೇ.
ಅಂಕಲ್ ಅವರ ಗ್ಲಾಸ್ ಗೆ ಐಸ್ ಕ್ಯೂಬ್ ಗಳನ್ನು ಹಾಕಿ ವಿಸ್ಕಿ ಸುರಿಯತೊಡಗಿದರು.
ನಾನೂ ಕೂಡ ಬಹಳ ಶ್ರದ್ಧೆಯಿಂದ ನನ್ನ ಗ್ಲಾಸ್ ಗೆ ವಿಸ್ಕಿ ಸುರಿದುಕೊಂಡು ಐಸ್ ಕ್ಯೂಬ್ ಗಳನ್ನು ಬೆರೆಸಿ ಗ್ಲಾಸ್ ಅನ್ನು ಕೈಯಲ್ಲಿ ಹಿಡಿದುಕೊಂಡೆ..
ಆದರೆ ಆ ಅಂಕಲ್ ಮಗಳು ಭಾಮ.. ಅವಳದ್ದೊಂದು ಗ್ಲಾಸ್ ಗೆ ಮನೆಯ ಪ್ರಿಡ್ಜ್ ನಲ್ಲಿದ್ದ Sprite ತಂದು ಸುರಿದುಕೊಂಡು,ಅಲ್ಲೇ ನಮ್ಮೆದುರೇ ಕುಳಿತುಕೊಂಡು ನನ್ನನ್ನೇ ನೋಡುತ್ತಾ ನಿಧಾನಕ್ಕೆ Sprite ಕುಡಿಯತೊಡಗಿದಳು..
ಅಡಪಾವಿ...ಇವಳು ಕೂಡ ಇವಳ ಅಪ್ಪನಂತೆ ದೊಡ್ಡ ಕುಡುಕಿ ಇರಬಹುದು ಎಂದು ನಾನು ಅಂದುಕೊಂಡರೆ..ಇವಳು ಈಗ ಕುಡಿಯುವುದಿಲ್ಲವಲ್ಲಾ...ಎಂದು ತಪ್ಪಾದ ನನ್ನನ್ನು ಆಲೋಚನೆಯ ಬಗ್ಗೆ ಗಂಭೀರವಾಗಿ ಚಿಂತಿಸತೊಡಗಿದೆ.
ಸಾಯ್ಲಿ.... ಜೀವನದಲ್ಲಿ ಎಲ್ಲಾ ಅನುಭವಗಳು ಆಗಬೇಕು.
ಇವತ್ತು ವಿಸ್ಕಿ..
ನಾಳೆ ಇದೇ ರೀತಿ ಅಂಕುಳ್ ದಯೆಯಿಂದ... ಬ್ರಾಂಡಿ,ರಮ್ಮ್, ಅವರ ಮಿಲಿಟರಿ ಮಾಲ್ ಎಲ್ಲಾ ಹೊಡೆಯುತ್ತಲೇ ಇರುವುದೇ.. .
ಜೈ ಮಾಹಿಷ್ಮತಿ.... ಎಂದುಕೊಂಡು ಕೈಯಲ್ಲಿದ್ದ ವಿಸ್ಕಿ ಗ್ಲಾಸ್ ಅನ್ನು ಅಂಕಲ್ ಗ್ಲಾಸ್ ಗೆ ತಾಗಿಸಿ.. ಚಿಯರ್ಸ್ ಹೇಳಿ... ಹಾಗೇ ಮೊದಲ ಬಾರಿಗೆ ವಿಸ್ಕಿ ಹೀರಿಯೇ ಬಿಟ್ಟೆ.
ಅವಳು ನನ್ನನೇ ನೋಡುತ್ತಿದ್ದಳು.
ಮಾತಿಲ್ಲ.. ಕಥೆಯಿಲ್ಲ...
ಜಸ್ಟ್ ನನ್ನನ್ನೇ ನೋಡುತ್ತಾ Sprite ಖಾಲಿ ಮಾಡುತ್ತಿದ್ದಳು.
ನಾನು ಅಂಕಲ್ ಜೊತೆಗೆ ಮಾತಿಗಿಳಿದೆ...
ಲೈಟಾಗಿ ನಶೆ ಎರಿತ್ತು.
ಅಂಕಲ್ ಈ ರೀತಿ ನೀವು ವಯಸ್ಸು ಹುಡುಗರಿಗೆ ಕುಡಿಸಿ ದಾರಿ ತಪ್ಪಿಸುವುದು ಮಹಾ ಅಪರಾಧ ಅಲ್ವಾ.. ಅಂದೆ.
ಅವರು ನಕ್ಕರು... ನಂತರ ಹೇಳಿದರು.. ನಾನು ಹೀಗೆ ಇದ್ದೆ ಯಂಗ್ ಮ್ಯಾನ್... ಆದರೆ ಒಂದು ದಿನ ನನ್ನ ಮಾವ.. ಅಂದ್ರೆ ಭಾಮಳ ಅಮ್ಮನ ಅಪ್ಪ... ಅವರು ವಿಪರೀತ ಪ್ರೋತ್ಸಾಹ ಕೊಟ್ಟು ಮೊದಲ ಬಾರಿಗೆ ನನಗೆ.. ಕುಡಿ ಏನಾಗಲ್ಲ ಎಂದು ಕುಡಿಸಿದರು... ಆಮೇಲೆ ನಾನು ಇಲ್ಲಿಯವರೆಗೆ ಕುಡಿಯುತ್ತಲೇ ಇದ್ದೇನೆ.. ಅವರಿಗೂ ಅವರು ಸಾಯುವವರೆಗೆ ನಾನೇ ಬಹಳ ಚೆನ್ನಾಗಿಯೇ ಕುಡಿಸುತ್ತಲೇ ಇದ್ದೆ. ನಿಜ ಹೇಳಬೇಕೆಂದರೆ ಅವರೇ ನನ್ನ ಕುಡಿತದ ಗುರು.... ಅಂದರು.
ಆಹಾ... ಎಂತಹ ಗುರು... ಎಂತಹ ಪ್ರೋತ್ಸಾಹ ಕೊಡುವ..ಸಿಕ್ಕಾಪಟ್ಟೆ ಹುರಿದುಂಬಿಸುವ ಫ್ಯಾಮಿಲಿ ಇವರುಗಳದ್ದು.
ಇವರುಗಳ ಜೊತೆಗೆ ನಿರಂತರವಾಗಿ ಒಂದೊಳ್ಳೆಯ ಟಚ್ ಅಲ್ಲಿ ಇದ್ದರೆ ಖಂಡಿತವಾಗಿಯೂ ಮುಂದೊಂದು ದಿನ ನಾನೊಬ್ಬ ಮಹಾನು ಕುಡಿ(ಕುಡುಕ) ಆಗುವುದರಲ್ಲಿ ಡೌಟೇ ಇಲ್ಲ ಎಂದು ಅನ್ನಿಸಿತು.
ಅಂಕಲ್ ಕುಡಿಯುತ್ತಲೇ ಮುಂದುವರಿಸಿದರು..
ಕುಡಿಯುವುದು ಅಪರಾಧ ಅಲ್ಲ ಯಂಗ್ ಮ್ಯಾನ್... ಕುಡಿದು ಅಪರಾಧ ಕೃತ್ಯ ಮಾಡಿದರೆ ಆಗ ಅದು ಅಪರಾಧ ಎಂದು ಕಾನೂನಿನಲ್ಲಿ ಪರಿಗಣಿತವಾಗುತ್ತದೆ...
ಆಹಾ...ಎಂತಹ Law ಪಾಯಿಂಟ್..
ಅವಳು ನನ್ನನ್ನೇ ತದೇಕಚಿತ್ತದಿಂದ ಹಾಗೇ ಕಣ್ಣರಳಿಸಿಕೊಂಡು ನೋಡುತ್ತಿದ್ದಳು.
ನಾನು ಅವಳನ್ನೇ ನೋಡಿದೆ.
ಲೆಕ್ಕಕ್ಕಿಂತ ಜಾಸ್ತಿ ಕುಡಿದ ಮತ್ತಿಗೆ ತಲೆ ಗಿರ್ರ್ ಅನ್ನ ತೊಡಗಿತು..
ಅಲ್ಲೇ ಹಾಗೇ ನೆಲಕ್ಕೆ ವಾಲತೊಡಗಿದೆ.
ಅವಳು ಎದ್ದು ಬಂದಳು.
ನನ್ನನ್ನು ಹಿಡಿದುಕೊಂಡು ಹಾಗೆ ಬೆಡ್ ರೂಮ್ ವರೆಗೆ ಕರೆದುಕೊಂಡು ಹೋದಳು..
ಗಟ್ಟಿಗಿತ್ತಿ ಅವಳು.
ಬೆಡ್ ಮೇಲೆ ಹಾಗೇ ಮಲಗಿಸಿ ನನ್ನ ಮೇಲೆ ಅಲ್ಲೇ ಇದ್ದ ಬೆಡ್ ಶೀಟ್ ಅನ್ನು ಹೊದಿಸಿದಳು.
ನಶೆ ಹೆಚ್ಚಾಗಿ ಅವಳ ಚಿತ್ರ ಅಸ್ಪಷ್ಟವಾಗಿ ಕಾಣುತ್ತಿತ್ತು...
ಅವಳನ್ನೇ ಕರೆದೆ..
ರೀ ಬುಲೆಟ್ ಭಾಮ ಅವರೇ... ನಾಳೆ ನಮ್ಮ ಹಳ್ಳಿಯ ಮಹಿಳೆಯರು "ನೀರಿಗಾಗಿ ಪ್ರಾಣ ಕೊಡುವೆವು " ಎಂಬ ಕಾರ್ಯಕ್ರಮಕ್ಕೆ ಕೊಡಪಾನ ಹಿಡಿದು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ. ಅವರಿಗೆ ನಾನೇ ಪ್ರಮುಖ ಮಾರ್ಗದರ್ಶಕ.. ದಯವಿಟ್ಟು.. ದಯವಿಟ್ಟು.. ನಿಮ್ಮ ಬುಲ್ಲೆಟ್ ಬೈಕ್ ಸ್ವಲ್ಪ ಕೊ.. ಡ.. ಬ.. ಹು.. ದಾ..ಎಂದು ತೊದಲುತ್ತಲೇ ಕೇಳಿದೆ.
ನಾನೇ ಅಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ .. ಈಗ ನಿದ್ದೆ ಮಾಡಿ ಎಂದು ಹೇಳಿ.. ಮತ್ತೊಮ್ಮೆ ಸರಿಯಾಗಿ ಬೆಡ್ ಶೀಟ್ ಹೊದ್ದು ಅಲ್ಲಿಂದ ಅವಳ ಅಪ್ಪನ ಅವಸ್ಥೆಯನ್ನು ಸರಿ ಮಾಡಲು ನಡೆದಳು ಭಾಮ...
ಹಾಗೇ ನಿಧಾನವಾಗಿ ನಿದ್ದೆ ಆವರಿಸಿಕೊಂಡಿತು.
ನನ್ನ ಕನಸಿನಲ್ಲಿ ಆ ದಿನ "ನೀರಿಗಾಗಿ ಪ್ರಾಣ ಕೊಡುವೆವು "ಮಹಿಳೆಯರ ಜಸ್ಟ್ ಪ್ರತಿಭಟನೆ ಉಗ್ರ ರೂಪಕ್ಕೆ ತಿರುಗಿ ಪಂಚಾಯಿತಿ ಅಧ್ಯಕ್ಷನಿಗೆ ಹಾಗೂ ಮೆಂಬರುಗಳಿಗೆ ತಮ್ಮ ಪ್ಲಾಸ್ಟಿಕ್ ಕೊಡಪಾನದಿಂದ ಚೆನ್ನಾಗಿ ಥಳಿಸಿ ಅವರನ್ನೇ ಸಾಯಿಸುವ ಹಂತಕ್ಕೆ ತಲುಪಿ ಬಿಟ್ಟಿತ್ತು.
ನಾನು ಅಲ್ಲೇ ನಿಂತು ಕೊಂಡು... ದಯವಿಟ್ಟು ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಂಡು ಈ ತರಹ ಪ್ಲಾಸ್ಟಿಕ್ ಕೊಡಪಾನದಲ್ಲಿ ಹೊಡೆಯಬೇಡಿ... ಬೇಕಾದರೆ ಈ ಅಲ್ಯೂಮಿನಿಯಮ್ ಕೊಡಪಾನದಲ್ಲೇ ಚೆನ್ನಾಗಿ ಹೊಡೆದು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಎಂದು ನಜ್ಜು ಗುಜ್ಜಾಗಿರುವ ಹಲವಾರು ಅಲ್ಯೂಮಿನಿಯಮ್ ಕೊಡಪಾನಗಳನ್ನು ಮಹಿಳೆಯರಿಗೆ ವಿತರಿಸುತ್ತಾ ಸಿಕ್ಕಾಪಟ್ಟೆ ಪ್ರೋತ್ಸಾಹ ಕೊಡುತ್ತಾ,ಹುರಿದುಂಬಿಸುತ್ತಾ,ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದೆ.
ಅದನ್ನು ಕೇಳಿ ಮಹಿಳೆಯರು ಅಲ್ಯೂಮಿನಿಯಮ್ ಕೊಡಪಾನಗಳಿಗಾಗಿ ಮುಗಿ ಬಿದ್ದು,ಒಂದೊಂದು ಕೊಡಪಾನಗಳನ್ನು ಕೈಗೆತ್ತಿಕೊಂಡಿದ್ದು ಮತ್ತೆ ತಮ್ಮ ಹೋರಾಟವನ್ನು ತೀವ್ರಗೊಳಿಸಿದರು....
ಏತಕ್ಕಾಗಿ ಹೋರಾಟ.... ನ್ಯಾಯಕ್ಕಾಗಿ ಹೋರಾಟ..
ಏನೇ ಬರಲಿ.... ಒಗ್ಗಟ್ಟಿರಲಿ... ಎಂಬ ಮಹಿಳೆಯರ ಘೋಷ ವಾಕ್ಯಗಳು ಮುಗಿಲು ಮುಟ್ಟಿತು..
ಜೊತೆಗೆಯೇ... ಅಯ್ಯಯ್ಯೋ ದಮ್ಮಯ್ಯ.. ನಮ್ಮನ್ನು ಇವರಿಂದ ಯಾರಾದರೂ ಕಾಪಾಡಿ... ಎಂಬ ಆಕ್ರಂದನ ಕೂಡ ಘೋಷವಾಕ್ಯಗಳ ನಡುವೆ ಮೆಲ್ಲಗೆ ಕೇಳಿ ಬರುತ್ತಿತ್ತು.
ನನ್ನ ನಿದ್ದೆ ಮತ್ತಷ್ಟು ಗಾಢವಾಗುತ್ತಾ ಹೋಯಿತು.
ಹಾಗೇ ಬುಲೆಟ್ ಭಾಮನ ಆ ಹೊಸ ಮನೆಯಲ್ಲಿಯೇ..ಆ ದಿನ ಒಂದೊಳ್ಳೆಯ ನಿದ್ದೆಗೆ ಜಾರಿಬಿಟ್ಟೆ ನಾನು.
.....................................................................................
#ನೀಲಮೇಘ
Ab Pacchu
Moodubidire
Photo - Internet

Comments
Post a Comment