ಸುವಾಸಿತ ಕಷಾಯ ಎಂದರೆ ಅದು ನಾಮದ ಬೇರಿನದ್ದೇ..

 




ಸಂಜೆಯ ಹೊತ್ತಿಗೆ ಬಿಸಿ ಬಿಸಿ ಕಾಫಿ,ಜೀರಿಗೆ ಕಷಾಯ ಇಲ್ಲವೇ ಯಾವುದಾದರೊಂದು ಕಷಾಯ ಕುಡಿಯುವುದು ಹೆಚ್ಚಾಗಿ ನಮ್ಮಲ್ಲೆರ ಮನೆಯಲ್ಲಿರುವ ಒಂದು ವಾಡಿಕೆ. ಅದು ಬಹಳ ಹಿಂದಿನಿಂದ ಕಾಲದಿಂದಲೇ ಬಂದಿರುವಂತಹ ರೂಢಿ. 


ನೀವು ಕಷಾಯ ಪ್ರೀಯರಾಗಿದ್ದರೆ.. ಒಂದು ವೇಳೆ ಅಲ್ಲದಿದ್ದರೂ ಸಹ ಇದರದ್ದೊಂದು ಕಷಾಯವನ್ನು ಒಮ್ಮೆ ಮಾಡಿ ಕುಡಿದು ನೋಡಿ. ಆಮೇಲೆ ಎಂದಿಗೂ ನೀವು ಈ ಕಷಾಯವನ್ನು ಅಷ್ಟು ಸುಲಭವಾಗಿ ಬಿಟ್ಟಿರಲಾರಿರಿ. ನನಗಂತು ಇದು ಅತೀ ಪ್ರೀಯವಾದ ಕಷಾಯ.ಅಮ್ಮನಿಗೂ ಕೂಡ. 


ಈ ಬಳ್ಳಿಯ ಹೆಸರು "ನಾಮದ ಬೇರು" ಅಂತ.ಮೊದಲೇ ಹೇಳುತ್ತೇನೆ ನೀವೆನಾದರೂ ಇದರ ಬೇರಿನ ಕಷಾಯ ಕುಡಿದರೆ ಆ ನಂತರ ನಿಮಗೆ ನಿಜವಾಗಿಯೂ ಹಾರ್ಲಿಕ್ಸ್ ಕೂಡ ಇದರ ಕಷಾಯದಷ್ಟು ಇಷ್ಟ ಆಗಲಿಕ್ಕಿಲ್ಲ.ಅಷ್ಟೊಂದು ಸ್ವಾದ,ಅಂತಹ ಸುವಾಸನೆ ಇದರ  ಕಷಾಯಕ್ಕಿದ್ದೆ.


ಇದರ ಎಲೆಗಳಲ್ಲಿ ಹರಿಯ ನಾಮದಂತೆ ಉದ್ದಕ್ಕೆ ನಾಮ ಇರುವುದರಿಂದಲೇ ಏನೋ  ನಮ್ಮಲ್ಲಿ ಇದಕ್ಕೆ ನಾಮದ ಬೇರು ಎಂದೇ ಹೇಳುತ್ತಾರೆ.ಗುಡ್ಡ ಬದಿಗಳಲ್ಲಿ ಇದು ಹೇರಳವಾಗಿ ಸಿಗುತ್ತದೆ.ಸೊಗದೆ ಬೇರು ಅಂತ ಕೂಡ ಹೇಳುತ್ತಾರೆ. ಇದರ ಬಳ್ಳಿಯನ್ನು ಕಟ್ ಮಾಡಿದರೆ ಒಂಥರಾ ಅಂಟು ಅಂಟು ಹಾಲು ಕೂಡ ಒಸರುತ್ತದೆ.ಇದರ ಬೇರು ಅಂತು ತುಂಬಾನೇ ಆಳಕ್ಕೆಯೇ  ಇಳಿದು ಬಿಡುತ್ತದೆ. ಇದರ ಬೇರೇ ನಮಗೆ ಕಷಾಯ ಮಾಡಲು ಬೇಕಾಗಿರುವುದು. 


ಈಗ ಇದರದ್ದೊಂದು ಪರಿಮಳದ ಕಷಾಯ ಮಾಡಿಕೊಳ್ಳುವುದು ಹೇಗೆ ಎಂದು ನೋಡೋಣ.


ಮೊದಲಿಗೆ ಈ ಬಳ್ಳಿಯನ್ನು ಬೇರು ಸಹಿತ ಭೂಮಿಯಿಂದ ಕಿತ್ತು ತೆಗೆಯಬೇಕು.ಸಂಪೂರ್ಣ ಬೇರು ಕೀಳುವುದು ಸ್ವಲ್ಪ ಕಷ್ಟವೇ. ಆದರೂ ಸಾಕಷ್ಟು ಪ್ರಯತ್ನ ಪಡಿ..ಬಂದಷ್ಟು ಬರಲಿ.ಬೇರುಗಳು ತುಂಬಾ ಆಳಕ್ಕೆ ಇಳಿಯುವ ಸಾಹಸ ತೋರುವುದರಿಂದ ಇದಕ್ಕೆ ಅನಂತಮೂಲ ಎಂಬ ಹೆಸರು ಕೂಡ ಇದೆಯಂತೆ. 


ಕೇವಲ ಇದರ ಬೇರನ್ನು ಮಾತ್ರ ತೆಗೆದುಕೊಂಡು,ಚೆನ್ನಾಗಿ  ತೊಳೆಯಬೇಕು.ಮಣ್ಣು ಎಲ್ಲಾ ಹೋಗಬೇಕು.ನಂತರ ಬೇರನ್ನು ಸ್ವಲ ಹಸಿ ಜೀರಿಗೆಯೊಂದಿಗೆ ಚೆನ್ನಾಗಿ ಕಲ್ಲಿನಲ್ಲಿ ಅರೆಯಬೇಕು.ದಯವಿಟ್ಟು ಮಿಕ್ಸರ್ ನಲ್ಲಿ ಹಾಕಿ ಕಡೆಯಬೇಡಿ.ಕಲ್ಲಿನಲ್ಲಿ ಅರೆದರೆನೇ ಈ ಕಷಾಯ  ರುಚಿಯಾಗುವುದು.


ನಂತರ ಅರೆದ ಈ ನಾಮದ ಬೇರು ಮತ್ತು ಜೀರಿಗೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ನಾಲ್ಕು ಲೋಟ ನೀರು ಹಾಕಿದ್ದರೆ ಅದು ಎರಡು ಗ್ಲಾಸ್ ಆಗುವವರೆಗೂ ಚೆನ್ನಾಗಿ ಕುದಿಸಿ. ಆ ನಂತರ ಇದಕ್ಕೆ ಸಿಹಿಗೆ ಬೇಕಾದಷ್ಟು ಬೆಲ್ಲ ಸೇರಿಸಿ.ದಯವಿಟ್ಟು ಸಕ್ಕರೆ ಸೇರಿಸಬೇಡಿ. ಆಮೇಲೆ ಕೊನೆಯಲ್ಲಿ ಹಾಲು ಸೇರಿಸಿ ಬಿಟ್ಟರೆ... ಈ ನಾಮದ ಬೇರಿನ ಕಷಾಯ ಯಾವ ಹಾರ್ಲಿಕ್ಸ್,ಬೊರ್ಮಿಟಾ,ಬೂಸ್ಟ್ ಗಿಂತಲೂ ರುಚಿಯಲ್ಲಿ, ಪರಿಮಳದಲ್ಲಿ ಯಾವುದರಲ್ಲೂ ಒಂದು ಚೂರು ಕಡಿಮೆ ಅಂತ ಅನ್ನಿಸುವುದಿಲ್ಲ.. ಬೇರಿನ ಚೂರುಗಳು ಇರುವುದರಿಂದ ಕಷಾಯವನ್ನು ಸೋಸಿಕೊಂಡು ಕುಡಿಯಬಹುದು. 


ಇದರ ಬೇರನ್ನು ಭೂಮಿಯಿಂದ ಕಿತ್ತ ನಂತರ ಹಾಗೇ ಒಮ್ಮೆ ಮೂಸಿ ಕೂಡ ನೋಡಿ, ನಿಜವಾಗಿಯೂ ತುಂಬಾನೇ Intensive ಆದ ಒಳ್ಳೆಯ ಪರಿಮಳ ಇದರ ಬೇರಿನಲ್ಲಿ  ಇರುತ್ತದೆ.ನನಗಂತು ಇದು ತುಂಬಾ ಇಷ್ಟವಾದ ಕೆಲಸ. ಸುಮ್ಮನೆ ಗುಡ್ಡಗಳಲ್ಲಿ ಅಲೆದಾಡುವಾಗ ಇದರ ಗಿಡ ಕಣ್ಣಿಗೆ ಬಿದ್ದರೂ ಸಾಕು,ಇದರ ಬೇರು ಕಿತ್ತುಕೊಂಡು ಹಾಗೇ ಆ ಪರಿಮಳದ ಬೇರನ್ನು ಮೂಗಿನ ಹತ್ತಿರ ತಂದು, ಮೂಗಿನ ಹೊಳ್ಳೆಗಳೆರಡನ್ನು ಅರಳಿಸಿ ಅರಳಿಸಿ ಆ ಹಿತವೆನಿಸುವ ಸುಗಂಧವನ್ನು ಆಘ್ರಾಣಿಸುವುದರಲ್ಲಿಯೇ ನನ್ನ  ಅತೀ ಹೆಚ್ಚಿನ ಸುಖ ಇದೆ.






ತುಳುನಾಡು,ಮಲೆನಾಡು ಹಾಗೂ ಉತ್ತರ ಕನ್ನಡ ಭಾಗದಲ್ಲಿ ಇದು ಹೇರಳವಾಗಿ ಅದರಷ್ಟಕ್ಕೆ ಬೆಳೆಯುತ್ತದೆ. ಯಾವ ಆಸರೆ ಇಲ್ಲದೇ ಇದ್ದಾಗ ಭೂಮಿಯ ಮೇಲೆಯೇ ಇದರ ಬಳ್ಳಿಗಳು ಹಾಗೇ  ಹರಡಿಕೊಂಡು ಬೆಳೆಯುತ್ತದೆ. 


ಸಾರಿವಾ,ಸುಗಂಧಿ ಬೇರು ಎಂಬ ಹೆಸರಿನಿಂದಲೂ ಗುರುತಿಸಲ್ಪಡುವ ಈ ಬೇರು ಆಯುರ್ವೇದದಲ್ಲಿ ಅತೀ ಹೆಚ್ಚಿನ ಮಹತ್ವ ಪಡೆದಿದ್ದು. ಇದರಲ್ಲೂ ಎರಡೂ ವಿಧ ಇದೆ.ಕಪ್ಪು ಬಣ್ಣದ ಬೇರುಗಳಿರುವ ಗಿಡಕ್ಕೆ ಕೃಷ್ಣ ಸಾರಿವಾ ಎಂದು ಹೇಳುತ್ತಾರೆ ಅಂತೆ. ಇದರ ಉಪಯೋಗಗಳು ಮಾತ್ರ ಒಂದಲ್ಲ ಹತ್ತು ಹಲವಾರು ಇದೆ.ಪಿತ್ತ, ಕಫ, ಕಜ್ಜಿ,ಕೇಶ ವೃದ್ಧಿ,ಲೈಂಗಿಕ ಸಮಸ್ಯೆ,ರಕ್ತ ಶುದ್ಧಿಯಿಂದ ಹಿಡಿದು ಇದು ಹಲವಾರು ರೋಗಗಳಿಗೆ ರಾಮ ಬಾಣವೂ ಹೌದು.


ಇವೆಲ್ಲವನ್ನು ನೋಡುವಾಗ ನಮ್ಮಲ್ಲಿಯೇ ಎಷ್ಟೊಂದು ರುಚಿಕರ, ಆರೋಗ್ಯಕರ ಹಾಗೂ ಸುಗಂಧಿತ ಕಷಾಯಗಳು,ಪೇಯಗಳು ಇದೆಯಲ್ಲವೇ ಎಂದು ಒಮ್ಮೆ ಅನ್ನಿಸದೇ ಇರದು.


ಸಾಧ್ಯ ಆದರೆ ಇದರದ್ದೊಂದು ಕಷಾಯ ಮೇಲೆ ಹೇಳಿದಂತೆಯೇ ಮಾಡಿ ನೋಡಿ... ಆಮೇಲೆ ನಿಮಗೆಯೇ ಗೊತ್ತಾಗುತ್ತದೆ ಯಾಕೆ ನಾನು ಇದು ಹಾರ್ಲಿಕ್ಸ್ ಗಿಂತಲೂ ಹೆಚ್ಚು ಪರಿಮಳದಿಂದ ಮತ್ತು  ಸ್ವಾದದಿಂದ ಕೂಡಿದ್ದು ಎಂದು ಹೇಳಿದ್ದೆನೆಂದು. 




.....................................................................................


#ಏನೋ_ಒಂದು


Ab Pacchu

Moodubidire

(https://phalgunikadeyavanu.blogspot.com) 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ