ಪೊಡವಿಗೊಡೆಯನ ಇಷ್ಟದ ಭಕ್ಷ್ಯ ಈ ಹಯಗ್ರೀವ





ಉಡುಪಿ ಕೃಷ್ಣಮಠದಲ್ಲಿ ತುಂಬಾ ಸಲ ಪ್ರಸಾದ ರೂಪವಾಗಿ ಸೇವಿಸಿದ್ದೇನೆ.ಮೂಡುಬಿದಿರೆಯ ಹನುಮಾನ್ ಟೆಂಪಲ್ ನಲ್ಲಿ ಕೂಡ ಒಂದೆರಡು ಬಾರಿ ತಿಂದಿದ್ದೇನೆ.ಇದರ ಹೆಸರು " #ಹಯಗ್ರೀವ ".ಪೊಡವಿಗೊಡೆಯ ಉಡುಪಿಯ ಶ್ರೀಕೃಷ್ಣನಿಗೆ ಈ ಒಂದು ಭಕ್ಷ್ಯ ಬಹಳನೇ ಇಷ್ಟವಂತೆ. ಕಡ್ಲೆಬೇಳೆ,ಬೆಲ್ಲ,ಒಣ ಕೊಬ್ಬರಿ ತುರಿ,ದ್ರಾಕ್ಷಿ, ಗೋಡಂಬಿ,ಏಲಕ್ಕಿ,ತುಪ್ಪ ಇಷ್ಟು ಇದ್ದು ಬಿಟ್ಟರೆ ಇದು ಬಹಳ ಸುಲಭವಾಗಿ ಮಾಡಬಹುದಾದ ಹಾಗೂ ಅಷ್ಟೇ ರುಚಿಯಾದ ಭಕ್ಷ್ಯ.


ಉಡುಪಿಯ ವಾದಿರಾಜರು ಸ್ವಾಮಿಗಳು ತಮ್ಮ ಆರಾಧ್ಯ ದೇವರಾದ ಹಯಗ್ರೀವ ದೇವರಿಗೆ ಈ ಭಕ್ಷ್ಯವನ್ನೇ ನೈವೇದ್ಯವಾಗಿ ಅರ್ಪಿಸುತ್ತಿದ್ದರಂತೆ.ಹಯಗ್ರೀವ ದೇವರು ಅಂದರೆ ಕುದುರೆ ತಲೆಯ ರೂಪವನ್ನು ಹೊಂದಿರುವ ಭಗವಾನ್ ವಿಷ್ಣು.ವಿಷ್ಣುವಿಗೆ ಆ ರೂಪ ಬರಲು ಅದಕ್ಕೊಂದು ಬೇರೆಯೇ ಸೊಗಸಾದ ಕಥೆ ಇದೆ.ವಾದಿರಾಜರು ಈ ಭಕ್ಷ್ಯವನ್ನು ಮಾಡಿ ತಮ್ಮ ತಲೆಯ ಮೇಲೆ ಹೊತ್ತುಕೊಂಡಾಗ ಸ್ವಯಂ ಭಗವಂತನೇ ಕುದುರೆಯ ರೂಪದಲ್ಲಿ ಬಂದು ಇದನ್ನು ಸೇವಿಸುತ್ತಿದ್ದನಂತೆ ಎಂಬ ಕಥೆ ಮತ್ತು ನಂಬಿಕೆ ನಮ್ಮಲ್ಲಿ ಉಂಟು ಮತ್ತು ವಾದಿರಾಜರ ಚಿತ್ರ ಎಂದಾಗ  ಅಶ್ವವೊಂದು ಅವರ ತಲೆಯ ಮೇಲಿನ ಪಾತ್ರೆಯಲ್ಲಿರುವ ನೈವೇದ್ಯವನ್ನು ತಿನ್ನುವ ದೃಶ್ಯವೇ ನಮ್ಮ ಕಣ್ಣ ಮುಂದೆ ಮೊದಲು ಬಂದು ಬಿಡುತ್ತದೆ.ಬಹುಶಃ ಹಯಗ್ರೀವ ದೇವರಿಗೂ ಇದು ಇಷ್ಟ ಎಂಬ ಕಾರಣಕ್ಕೆ ಈ ಭಕ್ಷ್ಯಕ್ಕೆ ಹಯಗ್ರೀವ ದೇವರ ಹೆಸರೇ ಬಂದಿರಬಹುದು.ಇದಕ್ಕೆ ಮಡ್ಡಿ ಅಂತಲೂ ಕರೆಯುತ್ತಾರೆ.



#ಈಗ_ಹಯಗ್ರೀವ_ಮಾಡುವುದು_ಹೇಗೆ_ಎಂದು_ನೋಡುವ.


ಮೊದಲು ನೆನೆಸಿದ ಕಡ್ಲೆಬೇಳೆಯನ್ನು ಅದರ ನಾಲ್ಕು ಪಟ್ಟು ನೀರು ಹಾಕಿ ಬೇಯಿಸಬೇಕು. ನೀರಿಗೆ ಸ್ವಲ್ಪ ತುಪ್ಪ ಕೂಡ ಸೇರಿಸಿ.


ಅದು ಚೆನ್ನಾಗಿ ಬೆಂದು ನೀರು ಕಡಿಮೆ ಆದ ನಂತರ ಕಡ್ಲೆಬೇಳೆಯ ಎರಡು ಪಟ್ಟು ಬೆಲ್ಲವನ್ನು ಹಾಕಿ. ನೇರವಾಗಿ ಬೆಲ್ಲ ಹಾಕಬೇಡಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ,ಆಮೇಲೆ ಅದರಲ್ಲಿರುವ ಕಸವನ್ನು ಸೋಸಿಕೊಂಡು ಬೆಂದಂತಹ ಕಡ್ಲೆಬೇಳೆಗೆ ಬೆಲ್ಲದ ನೀರನ್ನು ಸೇರಿಸಿಬಿಡಿ.ಕಡ್ಲೆ ಬೇಳೆಗಿಂತ ಎರಡು ಪಟ್ಟು ಬೆಲ್ಲ ಹಾಕಿದರೆ ಸಿಹಿ ತುಂಬಾ ಜಾಸ್ತಿಯೇ ಇರುತ್ತದೆ. ಯಾರಿಗಾದರೂ ಅಷ್ಟು ಸಿಹಿ ಬೇಡ ಎಂದು ಇದ್ದರೆ ಸ್ವಲ್ಪ ಕಡಿಮೆ ಹಾಕಿಕೊಳ್ಳಬಹುದು.ಸಿಹಿ ತುಂಬಾನೇ ಇಷ್ಟ ಪಡುವವರು ಎರಡು ಪಟ್ಟು ಬೆಲ್ಲ ಹಾಕಿಕೊಳ್ಳಬಹುದು.


ನಂತರ ಬೆಲ್ಲದ ಪಾಕದಲ್ಲಿ ಕಡ್ಲೆ ಬೇಳೆ ಎರಡು ಮೂರು ನಿಮಿಷ ಹಾಗೇ ಚೆನ್ನಾಗಿ ಬೇಯಲಿ.


ನಂತರ ಅದಕ್ಕೆ ತುರಿದಿಟ್ಟ ಒಣಕೊಬ್ಬರಿಯನ್ನು ಸೇರಿಸಬೇಕು. ನೇರವಾಗಿ ತುರಿದು ಒಣಕೊಬ್ಬರಿ ಹಾಕಬೇಡಿ. ತುರಿದು ಮೊದಲೇ ಬಾಣಲೆಯಲ್ಲಿ ಹುರಿದಿಟ್ಟುಕೊಳ್ಳಿ. ಒಣ ಕೊಬ್ಬರಿ ತುರಿಯುವಾಗ ತುಪ್ಪ ಹಾಕಿಕೊಳ್ಳುವುದು ಬೇಡ.


ಒಣಕೊಬ್ಬರಿ ಸೇರಿಸಿದ ನಂತರ... ತುಪ್ಪದಲ್ಲಿ ಮೊದಲೇ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ..


ಕೊನೆಯಲ್ಲಿ ಎಲಕ್ಕಿ ಪುಡಿ ಹಾಕಿ.


ಈಗ ಎಲ್ಲವೂ ಗಟ್ಟಿ ಗಟ್ಟಿಯಾಗುತ್ತಾ ಬರುತ್ತದೆ. ಇದು ಪಾಯಸದಂತೆ ಇರದೇ ಗಟ್ಟಿಯಾಗಿಯೇ ಇರುವುದು. ಕೊನೆಯಲ್ಲಿ ಪುನಃ ಒಂದು ಸ್ಪೂನ್ ತುಪ್ಪ ಸೇರಿಸಿ ಬಿಟ್ಟರೆ ಕೃಷ್ಣನಿಗೆ ಇಷ್ಟವಾದ ಹಯಗ್ರೀವ ರೆಡಿ.ಮಾಡಿದ ನಂತರ ಮನೆಯಲ್ಲಿರುವ ಕೃಷ್ಣನಿಗೆ ಒಂದು ನೈವೇದ್ಯ ಮಾಡ್ಲಿಕ್ಕೆ  ಮರೀಬೇಡಿ ಆಯ್ತಾ. ಆಮೇಲೆ ಎಲ್ಲವೂ ನಿಮಗೆಯೇ.. 



#ಹಯಗ್ರೀವ 

ಪಚ್ಚುಪಾಕಗಳು

ತುಳುನಾಡ್ ಫುಡ್

ಪಚ್ಚುಪಟಗಳು

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ