ಮಣ್ಣಿನ ಘಮದ ಮಶ್ರೂಮು ಈ ಕಲಲಾಂಬು..
ನಿಧಾನಕ್ಕೆ ಹಲಸಿನ ಮರ ಹತ್ತಿ,ಮರದ ಕೊಂಬೆಯಲ್ಲೇ ಕುಳಿತುಕೊಂಡು ಅದರದ್ದೊಂದು ಗೆಲ್ಲಿನಲ್ಲಿ ಹಣ್ಣಾಗಿ ಸುತ್ತಲೂ ಘಮ ಘಮಿಸುತ್ತಾ ನೇತಾಡುತ್ತಿರುವ ತುಳುವೆ ಹಲಸಿನ ಉದರಕ್ಕೆ ಕೈ ಹಾಕಿ ಅದರ ಸೋಳೆಗಳನ್ನು ಹಾಗೇ ಕೈಗೆತ್ತಿಕೊಳ್ಳುವುದು ಎಂದರೆ.. ಅದೊಂತರಹ ಚಿನ್ನದ ಗಣಿಯಲ್ಲಿ ಕೈ ಹಾಕಿ ಹೊರಳಾಡಿಸಿದಾಗ ಬೊಗಸೆ ಪೂರ್ತಿ ಹಳದಿಯಾಗುವ ಬಗೆ.
ಒಂದೆರಡು ಹಲಸಿನ ಸೋಳೆಗಳನ್ನು ಹಾಗೇ ಬಾಯಿಗೆ ಹಾಕಿಕೊಳ್ಳುವುದಕ್ಕಿಂತ ಮೊದಲು ಮರದಡಿಯಲ್ಲಿ ಆಸೆಯಿಂದ ಮೂಗಿನ ಹೊಳ್ಳೆಗಳೆರಡನ್ನು ಅರಳಿಸಿ,ಬಾಲ ಬೀಸುತ್ತಾ ಉದ್ದದ ನಾಲಗೆಯಿಂದ ತನ್ನದೇ ಮೂತಿ ಸವರುತ್ತಾ ಮರದ ಮೇಲಕ್ಕೆಯೇ ತದೇಕಚಿತ್ತದಿಂದ ನೋಡುತ್ತಾ ನಿಂತಿರುವ ಬಿಟ್ಟು,ಬೂಚೆ,ಗೆಂದೆ,ಲಕ್ಷ್ಮೀ,ಗೌರಿ ಯಂತಹ ಮನೆಯ ಹಸುಗಳಿಗೆ ಒಂದಷ್ಟು ಹಣ್ಣುಗಳನ್ನು ದಯಪಾಲಿಸುವುದು ಎಂದರೆ ಚಿಕ್ಕಂದಿನಲ್ಲಿ ಅದೇನೋ ನಮ್ಮಂತಹ ಹುಡುಗರಿಗೆ ಸ್ವರ್ಣ ದಾನದಂತಹ ಅನುಭೂತಿಯೇ ಸರಿ.
ಹಲಸಿನ ತಮ್ಮ ಹೆಬ್ಬಲಸಿನ ಹಣ್ಣುಗಳು ಕೂಡ ಬಂಗಾರ ಬಣ್ಣದ್ದೇ,ಮರದ ಮೇಲೆ ಚಿಕ್ಕ ಚಿಕ್ಕ ಪೊಟ್ಟಣದಲ್ಲಿ ಕಟ್ಟಿಟ್ಟ ಸ್ವರ್ಣದ ಬೀಜಗಳು ಅವು.ಆದರೆ ಹಿಂದೆ ಎಲ್ಲಾ ಎಣ್ಣೆ ಮಾಡುವುದಕ್ಕಾಗಿ ಅದರದ್ದೊಂದು ಪುಟ್ಟ ಪುಟ್ಟ ಬೀಜಗಳನ್ನು ಅದರ ಮರದಡಿ ಹೆಕ್ಕುವುದು ಎಂದರೆ ಅದೊಂತರಹ ಬೇಕಂತಲೇ ಬಂಗಾರವನ್ನು ತ್ಯಜಿಸಿ ಶ್ರದ್ಧೆಯಿಂದ ಬೆಳ್ಳಿಯನ್ನಷ್ಟೇ ಆಯ್ದು ಕೊಳ್ಳುವಂತಹ ಕೆಲಸ. "ಬಂಗಾರ ನುಂಗಿ ಬೆಳ್ಳಿ ಉಗುಳುವುದು" ಹೆಬ್ಬಲಸಿಗೆ ಸಂಬಂಧಿಸಿದಂತೆ ಇರುವ ಒಂದು ಗಾದೆ.ಉಗುಳುವುದರಲ್ಲೂ ಎಷ್ಟೊಂದು ಸಿರಿವಂತಿಕೆ ಅಲ್ವಾ.
ಆದರೆ ಇವತ್ತು ಹೇಳಲು ಹೊರಟಿರುವ ಈ ಕಲಲಾಂಬು ಎನ್ನುವುದು ಉಂಟಲ್ಲಾ... ಇದು ಎಷ್ಟು ಬೆಳ್ಳಿಯೋ,ಎಷ್ಟು ಬಂಗಾರವೋ ನನಗದು ಗೊತ್ತಿಲ್ಲ ,ಆದರೆ ವರ್ಷದಲ್ಲಿ ಒಮ್ಮೆ ಮಾತ್ರ ಕಣ್ಣಿಗೆ ಬಿದ್ದು ನಂತರ ಹಾಗೇ ಕಣ್ಮರೆಯಾಗಿ ಹೋಗುವ ಇದೇ ಹೆಚ್ಚಿನ ತುಳುವರ ಪಾಲಿನ ಮಣ್ಣಿನಡಿಯ ಡೈಮಂಡು ಎಂದು ನನಗೆ ಎಷ್ಟೋ ಸಲ ಅನ್ನಿಸಿ ಬಿಟ್ಟಿದೆ.
ಕಲಲಾಂಬು ಎಂದರೆ ಒಂದು ಜಾತಿಯ ಅಣಬೆ. ಕನ್ನಡದಲ್ಲಿ ಕಲ್ಲಣಬೆ ಎಂದು ಹೇಳುತ್ತಾರೆ.ಆದರೆ ಈ ಕಲಲಾಂಬುಗಳನ್ನು ಹೆಕ್ಕುವುದು ಎಂದರೆ ಅದು ಬರೀಯ ಅಣಬೆಗಳನ್ನು ಹೆಕ್ಕುವುದು ಎಂಬುವುದಕ್ಕಷ್ಟೇ ಮಾತ್ರ ಸೀಮಿತವಾಗಿಲ್ಲ.ಅದು ಬಾಲ್ಯದ ನೆನಪಿಗೆ ಕೈ ಹಾಕಿ ಒಂದಷ್ಟನ್ನು ನೆನಪುಗಳನ್ನು ಮತ್ತೊಮ್ಮೆ ನಮ್ಮ ಅಂಗೈಯೊಳಗೆ ತಂದುಕೊಂಡು,ಆ ನೆನಪುಗಳ ತಾಜಾತನವನ್ನು ಮತ್ತೊಮ್ಮೆ ಅನುಭವಿಸುವ ಪರಿಯೂ ಹೌದು.ಆ ಶಕ್ತಿ ಖಂಡಿತವಾಗಿಯೂ ಇದಕ್ಕೆ ಇದೆ.
ಕಲಲಾಂಬು ಇಲ್ಲವೇ ಕಲ್ಲಲಾಂಬು ಎಂದು ಕರೆಯಲ್ಪಡುವ ಈ ಕಲ್ಲಣಬೆ ಮಣ್ಣಿನಡಿಯಲ್ಲಿ ಅದರಷ್ಟಕ್ಕೆ ಹುಟ್ಟಿ,ವರ್ಷದಲ್ಲಿ ಕೇವಲ ಒಂದು ಬಾರಿ ತುಳುವರ ಅಡುಗೆಯ ಪಾತ್ರೆಗಳಲ್ಲಿ ಘಮಘಮಿಸುವ ಸಾರು ಆಗುವ ಆ ಪರಿಯೇ ಬಲು ರಸವತ್ತಾದದ್ದು ಮತ್ತು ಅಷ್ಟೇ ಸೊಗಸಾದದ್ದು.
ಈ ಕಲಲಾಂಬು ಗೆ ಸಪರೇಟ್ ಆದ ಅಭಿಮಾನಿ ಬಳಗವೇ ನಮ್ಮಲ್ಲಿ ಇದೆ.ಇದು ವರ್ಷದಲ್ಲಿ ಒಂದು ಬಾರಿ ಮಾತ್ರ ತಿನ್ನಲು ಸಿಗುವುದು ಎಂಬುವುದು ಒಂದು ಕಾರಣವಾದರೆ.. ಮತ್ತೊಂದು ಕಾರಣ ಯಾವುದಕ್ಕೂ ಮ್ಯಾಚ್ ಆಗದ ಅದರದ್ದೊಂದು ಆ ಅತ್ಯದ್ಭುತ ರುಚಿ.
ಈಗಲೂ ಮಾರುಕಟ್ಟೆಯಲ್ಲಿ ಎಂತಹ ಮಶ್ರೂಮ್ ಗಳೇ ಬಂದರೂ ನಮ್ಮವರಿಗೆ ಈ ಕಲಲಾಂಬು ಎಂಬ ಮಣ್ಣಿನ ಘಮದ ಮಶ್ರೂಮ್ ಗೆ ಸರಿಸಾಟಿಯಾಗುವ ಮಶ್ರೂಮ್ ಎಂದಿಗೂ ಬೇರೆ ಯಾವುದೂ ಇರಲು ಸಾಧ್ಯವೇ ಇಲ್ಲ.ನಿಜವಾಗಿಯೂ ಮಣ್ಣಿನ ಘಮದ ಸ್ವಾದ ಇದರಲ್ಲಿ ಯಥೇಚ್ಛವಾಗಿದೆ.
ಮಳೆಗಾಲದಲ್ಲಿ ತುಳುನಾಡಿನ ಕಾಡು ಗುಡ್ಡಗಳಲ್ಲಿ ಸಿಗುವ ಅನೇಕ ಬಗೆಯ ಅಣಬೆಗಳನ್ನು ನಾವು ತಿನ್ನುತ್ತೇವೆ. ಪರಿಮಳದಲ್ಲಿ ಹಾಗೂ ರುಚಿಯಲ್ಲಿ ಯಾವುದೇ ನಾನ್ ವೆಜ್ ಅಡುಗೆಗಳಿಗೂ ಕೂಡ ಈ ಅಣಬೆಗಳು ಕಮ್ಮಿ ಇರುವುದಿಲ್ಲ.
ಹಾಗಂತ ಎಲ್ಲಾ ಬಗೆಯ ಅಣಬೆಗಳನ್ನು ತಿನ್ನಲು ಕೂಡ ಬರುವುದಿಲ್ಲ.ಹಲವಾರು ವಿಷಯುಕ್ತ ಅಣಬೆಗಳು ಸಹ ಇರುತ್ತದೆ.ಕೆಲವೊಂದನ್ನು ಅಷ್ಟೇ ಆಯ್ದು ತಿನ್ನಬಹುದು.ತಿನ್ನುವ ಅಣಬೆಗಳ ಸರಿಯಾದ ಪರಿಚಯ ಇದ್ದರೆ ಮಾತ್ರ ಅಣಬೆಗಳನ್ನು ಹೆಕ್ಕುವ ಸಾಹಸಕ್ಕೆ ನಾವು ನೀವು ಕೈ ಹಾಕಬಹುದು.ಅಣಬೆಗಳನ್ನು ಆಯ್ದುಕೊಳ್ಳುವಾಗ ಮನೆಯ ಹಿರಿಯರ ಇಲ್ಲವೇ ಗೊತ್ತಿರುವವರ ಸಹಕಾರ ಹಾಗೂ ಮಾರ್ಗದರ್ಶನ ಕೂಡ ಅಷ್ಟೇ ಅತ್ಯವಶ್ಯಕ.
ತುಳುನಾಡಿನಲ್ಲಿ ಸಿಗುವ ಅಣಬೆಗಳಲ್ಲಿ ಹೆಚ್ಚಾಗಿ ಉದ್ದ ಬೇರಿನ ದೊಡ್ಡ ದಂಟಿನ ಪೆರ್ಗೆಲ್ ಲಾಂಬು,ಬೋಗಿ ಮರದ ಹಾಡಿಗಳಲ್ಲಿ ಅಷ್ಟೇ ಬೆಳೆಯುವ ಪ್ರೇಮಿಗಳ ಇಷ್ಟದ ಕೆಂಪು ಬಣ್ಣದ ಕೊಡೆಯಂತಿರುವ ಬೊವ್ವ್ ಲಾಂಬು,ಅತೀ ಸಣ್ಣ ಗಾತ್ರದ ಗುಂಪು ಗುಂಪಾಗಿ ಬೆಳೆಯುವ ಶ್ವೇತ ವರ್ಣದ ಬೊಲ್ಲಜಿರ್,ಮೈ ಮೇಲೆ ಜಾರುವ ತುಪ್ಪವನ್ನು ಅಂಟಿಸಿಕೊಂಡತೆ ಇರುವ ನೈ ಲಾಂಬು ಅದೇ ರೀತಿ ಎಲ್ಲದಕ್ಕಿಂತಲೂ ಹೆಚ್ಚು ಪ್ರಸಿದ್ದವಾದ ಹಾಗೂ ಅಷ್ಟೇ ರುಚಿಯಾದ ಅಣಬೆ ಎಂದರೆ ಅದು ಇದೇ ಭೂಮಿ ಅಡಿಯ ಅನರ್ಘ್ಯ,ಗೋಲಿ ಸೈಜಿನ ಬಿಳಿಯ ಬಣ್ಣದ ಕಲಲಾಂಬು.
ಹೌದು ಈ ಕಲಲಾಂಬು ಹೆಕ್ಕುವುದು ತುಳುವರ ಬಾಲ್ಯದ ನೂರಾರು ಸುಂದರ ನೆನಪುಗಳಲ್ಲಿ ಇದೂ ಒಂದು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.ಕಲಲಾಂಬು ಹೆಕ್ಕಿದ ಅನುಭವಸ್ಥ ಕೈಗಳಿಗೆ ಒಮ್ಮೆ ಕೇಳಿನೋಡಿ. ಅವರ ಬಾಯಿಯಿಂದ ಬರುವ ಕಥೆಗಳಿಗೆ ನಿಮ್ಮ ಕಿವಿಗಳು ಒಂಚೂರಾದರೂ ಅರಳದೇ ಇರದು.
ಹೆಚ್ಚಿನ ಎಲ್ಲಾ ಅಣಬೆಗಳು ಮಳೆಗಾಲದಲ್ಲಿ ಜೋರಾದ ಮಳೆ ಬಂದ ನಂತರ ತರಗೆಲೆಗಳು,ಹುಲ್ಲುಗಳು ಕೊಳೆತು ಅದರ ಮೇಲೆ ಹಾಗೇ ತಲೆ ಎತ್ತಿಕೊಂಡೇ ಅಲ್ಲಲ್ಲಿ ಹುಟ್ಟಿಕೊಂಡು ಬಿಡುತ್ತದೆ.ಬಸ್ ಸ್ಟ್ಯಾಂಡ್ ನಲ್ಲಿ ಒಂದೇ ಬಣ್ಣದ ಕೊಡೆ ಹಿಡಿದುಕೊಂಡು ಬಸ್ಸಿಗಾಗಿ ಕಾಯುವವರ ನೆನಪು ಮಾಡಿಕೊಡುತ್ತದೆ ಇವುಗಳು.
ಆದರೆ ಈ ಕಲಲಾಂಬು ಎಂಬ ಅಣಬೆ ಹುಟ್ಟುವ ಜಾಗ ಹಾಗೂ ಇವುಗಳು ಹುಟ್ಟಿಕೊಳುವ ಆ ನಿರ್ಧಿಷ್ಟ ಅವಧಿಯೇ ತುಂಬಾ ವಿಶಿಷ್ಟವಾದದ್ದು.ಅದಕ್ಕಾಗಿಯೇ ಇದು ತುಂಬಾನೇ ವಿಶೇಷವೆನಿಸುವುದು.
ಈ ಕಲಲಾಂಬು ಭೂಮಿ ಅಡಿಯಿಂದ ಹಾಗೆ ಮೇಲೆ ಬಂದು ಮಣ್ಣಿನ ಮೇಲ್ಪದರದಲ್ಲಿ ಗೋಚರಿಸಲು... ಮಳೆಯ ಜೊತೆ ಜೊತೆಗೆಯೇ ಒಂದೊಳ್ಳೆಯ ಗುಡುಗು ಅತೀ ಅವಶ್ಯಕ.ಜಗತ್ತಿನಲ್ಲಿ ಗುಡುಗು ಯಾರಿಗೆಲ್ಲಾ ಬೇಕು ಎಂದು ಖಂಡಿತವಾಗಿಯೂ ಗೊತ್ತಿಲ್ಲ,ಆದರೆ ತುಳುವರಿಗಂತು ಗುಡುಗು ಬೇಕೇ ಬೇಕು.. ಕೇವಲ ಈ ಕಲಲಾಂಬುವಿಗಾಗಿಯೇ ಬೇಕು.
ಚೆನ್ನಾಗಿ ಗುಡುಗು ಬರದಿದ್ದರೆ ಆ ವರ್ಷ ಕಲ್ಲಲಾಂಬು ಕಣ್ಣಿಗೆ ಬೀಳುವುದೇ ಇಲ್ಲ. ಮಳೆಗಾಲದ ಆರಂಭದಲ್ಲಿ ಐದಾರು ದಿನ ಜೋರಾದ ಗುಡುಗು ಬಂದಾಗ ಮನೆಯಲ್ಲಿ ಹಿರಿಯರು ಹೇಳುವುದು ಉಂಟು ".. ಈ ಸರ್ತಿ ಗುಡ್ಡೆಡ್ ಕಲಲಾಂಬು ಎಡ್ಡೆ ಲಕ್ಕು( ಕಲಲಾಂಬುಗೆ ಹೇಳಿ ಮಾಡಿಸಿದ ಗುಡುಗು ಇದು) ಎಂದು. ಹೌದು ಕಲಲಾಂಬು ಅಂದರೆ ನಮ್ಮಲ್ಲಿ ಗುಡುಗು... ಗುಡುಗು ಅಂದರೆ ಈ ಕಲಲಾಂಬೇ.ಅದೊಂತರಹ ಭಯಂಕರ ಕನೆಕ್ಷನ್ ಇವೆರಡಕ್ಕೂ.ಒಂದನ್ನು ಬಿಟ್ಟು ಇನ್ನೊಂದಿಲ್ಲ. ಅದರಲ್ಲೂ ಒಂದೊಳ್ಳೆಯ ಗುಡುಗು ಇರದಿದ್ದರೆ ಆ ವರ್ಷ ಕಲಲಾಂಬು ಎಂಬ ವಿಶಿಷ್ಟ ಅಣಬೆಯೇ ಇಲ್ಲ.
ಈ ಕಲಲಾಂಬು ಹುಟ್ಟಿಕೊಳ್ಳುವ ಜಾಗ ಕೂಡ ಸಂಪೂರ್ಣವಾಗಿ ಮರದಡಿ ಆಗಿರದೇ ಕಲ್ಲುಗಳಿಂದ ಆವೃತವಾಗಿರುವ ಗುಡ್ಡವೇ ಆಗಿರುತ್ತದೆ. ಅದರಲ್ಲೂ ಈ ಬೊವ್ವ್ ದ (ಬೋಗಿ)ಮರದ ಅಸುಪಾಸಿನಲ್ಲಿ ಇವುಗಳು ಹೆಚ್ಚಾಗಿ ಮತ್ತು ಹೇರಳವಾಗಿ ಕಂಡು ಬರುತ್ತದೆ. ಅದೂ ಕೂಡ ಏಕೆ ಎಂದು ಗೊತ್ತಿಲ್ಲ.ಆದರೆ ಆ ಮರಕ್ಕೂ ಇದಕ್ಕೂ ಅವಿನಾಭಾವ ಸಂಬಂಧ ಇಂದಿಗೂ ಹಾಗೇ ಮುಂದುವರಿದಿದೆ..ಹೌದು ಒಂದೊಳ್ಳೆಯ ಗುಡುಗಿಗೆ ಇರುವ ಸಂಬಂಧದಂತೆ. ಬಹುಶಃ ಮೇಲಿನ ಗುಡುಗ ಇದರ ವಿಧಾತ ಆಗಿದ್ದರೆ,ಸದಾ ಪಕ್ಕದಲ್ಲಿಯೇ ಇರುವ ಬೊವ್ವಿನ ಮರ ಇದರ ಸಂಗಾತಿಯೇ ಆಗಿರಬೇಕು.
ಬೇರೆ ಅಣಬೆಗಳನ್ನು ಹೆಕ್ಕುವಂತೆ ಸುಲಭವಾಗಿ ಕಲಲಾಂಬು ಹೆಕ್ಕಲು ಕೂಡ ಸಾಧ್ಯವಿಲ್ಲ. ಸ್ವಲ್ಪ ಆದರೂ ಅದಕ್ಕೆ ಅನುಭವ ಬೇಕು. ಏಕೆಂದರೆ ಇದು ಮಣ್ಣಿನ ಮೇಲ್ಪದರದಲ್ಲಿ ಇದ್ದರೂ ಸಹ ಕಲ್ಲು ಮಣ್ಣುಗಳಿಂದಲೇ ಸದಾ ಆವೃತವಾಗಿರುವುದರಿಂದ ನಿರ್ದಿಷ್ಟವಾಗಿ ಯಾವ ಜಾಗದಲ್ಲಿಯೇ ಇದು ಇರುತ್ತದೆ ಎಂದು ಕಂಡು ಹಿಡಿಯಲು ತಕ್ಕ ಮಟ್ಟಿಗೆ ಕಲಲಾಂಬು ಹೆಕ್ಕಿದ ಅನುಭವ ಇರಬೇಕಾಗುತ್ತದೆ.
ಚಿಕ್ಕಂದಿನಲ್ಲಿ ಕಲಲಾಂಬು ಹೆಕ್ಕಲು ಹೊರಡುವುದು ಎಂದರೆ ನಮ್ಮಂತಹ ಮಕ್ಕಳಿಗೆ ಆಗ ಅದೊಂದು ದೊಡ್ಡ ಸಂಭ್ರಮದ ಕೆಲಸ. ಜೋರು ಮಳೆ ಬರುತ್ತಿರುವಾಗಲೇ ಈ ಕಲಲಾಂಬು ಹೆಕ್ಕಲು ಗುಡ್ಡಗಳಿಗೆ ಹೋಗುತ್ತಿದ್ದೆವು.ಮಳೆ ಬರುವಾಗಲೇ ಕಲಲಾಂಬು ಹೆಕ್ಕಲು ಹೋಗುವುದು ಯಾವತ್ತಿಗೂ ಒಳ್ಳೆಯದು. ಏಕೆಂದರೆ ಚೆನ್ನಾಗಿ ರಭಸದಿಂದ ಬೀಳುವ ಮಳೆಗೆ ಮಣ್ಣಿನ ಮೇಲ್ಪದರದ ಮಣ್ಣು ಹಾಗೂ ಕಲ್ಲುಗಳು ಮೆಲ್ಲ ಮೆಲ್ಲನೆ ಪಕ್ಕಕ್ಕೆ ಸರಿದು ಹೋಗುವುದರಿಂದ ನಮಗೆ ಆ ಸಮಯದಲ್ಲಿ ಸುಲಭವಾಗಿ ಮತ್ತು ಸ್ಪಷ್ಟವಾಗಿ ಕಲ್ಲಲಾಂಬು ಕಣ್ಣಿಗೆ ಬೀಳುತ್ತದೆ.
ಒಬ್ಬನೇ ಹೋಗುವುದಕ್ಕಿಂತ ನಾಲ್ಕೈದು ಮಕ್ಕಳು ಒಟ್ಟಿಗೆ ಸೇರಿ ಕಲಲಾಂಬು ಹೆಕ್ಕಲು ಹೋಗುವುದರಲ್ಲಿಯೇ ನಿಜವಾದ ಮಜಾ ಇರುವುದು.ಅಲ್ಲೊಂದಿಷ್ಟು ಹರಟೆ, ಕುಶಾಲಿನ ಮಾತುಗಳು,ಗುಡ್ಡದಲ್ಲಿ ಓಟ,ಮಣ್ಣಿನ ಘಮ,ಕಾಡು ಹಣ್ಣುಗಳ ರುಚಿ.. ಇನ್ನೂ ಹಲವಾರು ದಿವ್ಯ ಅನುಭವಕ್ಕೆ ರಹದಾರಿ ಸೊಂಪಾಗಿ ಬೆಳೆದಿರುವ ನಮ್ಮಯ ಕಾಡು ಗುಡ್ಡಗಳು.ಅದರಲ್ಲೂ ಮಾವ ಎನ್ನುವ ಸಾಹಸಿ ಜೊತೆಗಿದ್ದರೆ ಅದರ ಅನುಭವ ಇನ್ನಷ್ಟು ಸುಮಧುರ. ಏಕೆಂದರೆ ಮಾವ ಗುಡ್ಡ ತೋರಿಸುವುದರ ಜೊತೆಗೆ ಎಲ್ಲಾ ರೀತಿಯ ಅಧಿಕ ಪ್ರಸಂಗ ಮಾಡಲು ಅನುವು ಮಾಡಿ ಕೊಟ್ಟೇ ಕೊಡುತ್ತಾನೆ.ಅಮ್ಮನ ಜೊತೆ ಹೋದರೆ ಅಲ್ಲೊಂದು ಶಿಸ್ತಿನ ಬೇಲಿ ಯಾವತ್ತಿಗೂ ಇರುತ್ತದೆ.
ಜೋರಾದ ಮಳೆ ಹೊಡೆಯಲು ಶುರು ಆದಾಗ ಸೊಂಟಕ್ಕೊಂದು ತೊಟ್ಟೆ ಇಲ್ಲವೇ ಚೀಲ ಸಿಕ್ಕಿಸಿಕೊಂಡು,ಒಂದು ಕೈಯಲ್ಲಿ ಕೊಡೆ ಮತ್ತೊಂದು ಕೈಯಲ್ಲಿ ಬಡ್ಡ್ ಕತ್ತಿ ಹಿಡಿದುಕೊಂಡು ಕಲಲಾಂಬು ಹೆಕ್ಕಲು ಗುಡ್ಡ ಏರುತ್ತಿದ್ದ ನಮಗೆ ಕನಿಷ್ಠ ಪಕ್ಷ ಒಂದೆರಡು ಸೇರು ಆದರೂ ಕಲಲಾಂಬು ಒಟ್ಟು ಮಾಡಲೇಬೇಕು ಎಂಬ ಟಾರ್ಗೆಟ್ ಮನಸ್ಸಿನಲ್ಲಿ ಇದ್ದೇ ಇರುತ್ತಿತ್ತು.
ಆಗೆಲ್ಲಾ ಅಂತಹದ್ದೇ ಹುಮ್ಮಸ್ಸು,ಇಷ್ಟ ಆಗುವ ಉಮೇದುಗಳು.ಕೆಲವೊಮ್ಮೆ ಒಂದೇ ಜಾಗದಲ್ಲಿ ಒಂದೆರಡು ಸೇರಿಗಿಂತಲೂ ಜಾಸ್ತಿ ಸಿಕ್ಕಿ ಬಿಡುವುದು.ಇನ್ನು ಕೆಲವೊಮ್ಮೆ ಇಡೀ ಗುಡ್ಡ ಕೆರೆದು ಹಾಕಿದರೂ ಅರ್ಧ ಸೇರು ಸಿಕ್ಕುವುದು ಕೂಡ ಕಷ್ಟವೇ. ಅದಕ್ಕೆಲ್ಲಾ ತುಂಬಾನೇ ಅದೃಷ್ಟ ಬೇಕು. ಅದೃಷ್ಟ ಇದ್ದ ದಿನ ತೆಗೆದುಕೊಂಡು ಹೋದ ಕೈ ಚೀಲದಲ್ಲಿ ಕಲಲಾಂಬು ತುಂಬಿ ತುಳುಕುತ್ತದೆ. ಇಲ್ಲದಿದ್ದರೆ ಕೈಯಲ್ಲಿಯೇ ಸಿಕ್ಕಿದಷ್ಟು ಕಲಲಾಂಬು ಹಿಡಿದು ಮನೆಗೆ ಮರಳಬೇಕು. ಆದರೂ ಒಂದೊಳ್ಳೆಯ ಪರಿಮಳದ ಪದಾರ್ಥಕ್ಕೆ ಆ ನಾಲ್ಕೈದು ಕಲಲಾಂಬುಗಳು ಕೂಡ ಸಾಕಾಗುತ್ತದೆ.
ಹಿಂದಿನ ವರ್ಷ ಎಲ್ಲಿ ಕಲಲಾಂಬು ಜಾಸ್ತಿ ಸಿಕ್ಕಿರುತ್ತದೆಯೋ ಅಲ್ಲಿಗೆಯೇ ನಾವು ಮೊದಲು ಹೋಗಿ ಕಲಲಾಂಬುವಿನ ಉತ್ಖನನದಲ್ಲಿ ತೊಡಗಿಕೊಳ್ಳಬೇಕು.ನಿರಂತವಾಗಿ ವರ್ಷ ವರ್ಷವೂ ಕಲಲಾಂಬು ಹೆಕ್ಕುವವರಿಗೆ ಅಂತಹ ಜಾಗಗಳ ಪರಿಚಯ ಬಹಳ ಚೆನ್ನಾಗಿ ಇರುತ್ತದೆ ಮತ್ತು ಹೆಚ್ಚಾಗಿ ಅಲ್ಲಿ ಕಲಲಾಂಬು ಇದ್ದೇ ಇರುತ್ತದೆ.ಅದರಲ್ಲೂ ಬೊವ್ವ್ ಮರದ ಅಸುಪಾಸಿನ ಜಾಗಗಳು ಇವು ಹುಟ್ಟಿ ಕೊಳ್ಳಲು ಹೇಳಿ ಮಾಡಿಸಿದಂತಿರುತ್ತದೆ.
ಇದನ್ನು ತೆಗೆಯುವುದು ಹೇಗೆಂದರೆ ಮೊದಲು ಕೈಯಲ್ಲಿರುವ ಕತ್ತಿಯ ಹಿಂಭಾಗದಿಂದ ಮಣ್ಣಿನ ಮೇಲ್ಪದರವನ್ನು ಕೆರೆಯುತ್ತಾ ಅತ್ತಿತ್ತ ಸರಿಸಬೇಕು.ಹೀಗೆ ಸರಿಸುತ್ತಲೇ ಹೋಗಬೇಕು.ಆಗಲೇ ನೋಡಿ ಅಲ್ಲೊಂದು ಇಲ್ಲೊಂದು ಅಚ್ಚ ಬಿಳಿಯ ಬಣ್ಣದ ಕಲಲಾಂಬು ಮಣ್ಣಿನಲ್ಲಿ ತನ್ನ ಬೇರುಗಳನ್ನು ಸುತ್ತಲೂ ಹರಡಿಕೊಂಡು ನಮ್ಮ ಕಣ್ಣಿಗೆ ಬಿದ್ದು ಬಿಡುವುದು. ಅಪರೂಪದ ಬ್ಯ್ಲಾಕ್ ಡೈಮಂಡಿನಂತೆ ಕಲಲಾಂಬು ಹೆಕ್ಕುವವರಿಗೆ ಅದೊಂತರಹ ವೈಟ್ ಡೈಮಂಡುಗಳನ್ನು ಹೆಕ್ಕಿದಂತಹ ಅನುಭವ.ವರ್ಷಕ್ಕೆ ಒಮ್ಮೆ ಮಾತ್ರ ಕಣ್ಣಿಗೆ ಬೀಳುವುದರಿಂದ ಅದೊಂದು ವಿಶಿಷ್ಟ ಅನುಭವವೇ ಸರಿ.
ಮಣ್ಣು ಕರೆಯುವುದು ಕೂಡ ಒಂದು ಕಲೆಯೇ ಆಗಿದೆ.ಜಾಸ್ತಿ ಒತ್ತಿ ಕೆರೆಯುವಂತಿಲ್ಲ,ಆ ರೀತಿ ಮಾಡಿದರೆ ಕೆಲವೊಮ್ಮೆ ತುಂಬಾನೇ ಮೇಲೆ ಇರುವ ಕಲಲಾಂಬುಗಳು ಒಡೆದು ಹೋಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.ಕಲಲಾಂಬುವಿಗೆ ಪೆಟ್ಟಾಗದಂತೆ ಮಣ್ಣು ಕೆರೆಯಬೇಕು.
ಗುಡುಗು ಮುಗಿದ ನಂತರ ಕಲಲಾಂಬು ಆಗುವುದೇ ಇಲ್ಲ.ಹೆಚ್ಚೆಂದರೆ ಗುಡುಗು ಬಿದ್ದ ಒಂದೇ ವಾರ ಇದು ಸಿಗುವುದು. ಆ ನಂತರ ಒಂದೆರಡು ದಿನಗಳಲ್ಲಿಯೇ ಅದರ ಒಳಗಿನ ಬಿಳಿಯ ಬಣ್ಣ ಹಾಗೇ ಕಪ್ಪಾಗಿ ಬಿಡುತ್ತದೆ. ಆಮೇಲೆ ಅದನ್ನು ಪದಾರ್ಥ ಮಾಡಲು ಆಗುವುದಿಲ್ಲ.ನಂತರ ಆ ಕಪ್ಪಾದ ಕಲಲಾಂಬು ಹಾಗೇ ಒಡೆದು ಅರಳಿ ಕಲ್ಲುಹೂವಿನಂತೆ ಗುಡ್ಡದ ಮೇಲ್ಮೈಯಲ್ಲೆಲ್ಲಾ ಅಲ್ಲಲ್ಲಿ ಬಿದ್ದಿರುತ್ತದೆ.ಮನೆಗೆ ತಂದ ಕಲಲಾಂಬುವನ್ನು ಸ ಅವತ್ತೇ ಅಡುಗೆ ಮಾಡಿ ಬಿಡಬೇಕು ಇಲ್ಲದಿದ್ದರೆ ಮರುದಿನಕ್ಕೆ ಅದೂ ಕೂಡ ಕಪ್ಪು ಕರಿಯಾಗಿ ಬಿಡುತ್ತದೆ. ಹಾಗಾಗಿ ಇದರ ಸ್ಟೋರೇಜ್ ಕೂಡ ಕಷ್ಟವೇ.ಸಿಕ್ಕಿದ ದಿನವೇ ಆದಷ್ಟು ಹೊಟ್ಟೆಗಿಳಿಸಬೇಕು.
ಗುಡ್ಡದಲ್ಲಿ ಒಟ್ಟು ಮಾಡಿ ತಂದ ಕಲಲಾಂಬು ಗಳನ್ನು ನೇರವಾಗಿ ಪದಾರ್ಥ ಮಾಡಲು ಕೂಡ ಆಗುವುದಿಲ್ಲ. ಅದು ಮಣ್ಣಿನ ಅಡಿಯಲ್ಲಿ ಇದ್ದುದರ ಕಾರಣದಿಂದಾಗಿ ಅದರಲ್ಲಿನ ಮಣ್ಣು ಹೋಗುವವರೆಗೂ ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಆ ನಂತರ ಒಂದೊಂದೇ ಕಲಲಾಂಬು ಗಳನ್ನು ಮತ್ತೊಮ್ಮೆ ಕೈಯಲ್ಲಿ ಹಿಡಿದುಕೊಂಡು ಕಲ್ಲಿನಲ್ಲಿ ಚೆನ್ನಾಗಿ ಉಜ್ಜಿ ಅದನ್ನು ಮತ್ತಷ್ಟು ಶ್ವೇತ ವರ್ಣಕ್ಕೆ ತಿರುಗಿಸಬೇಕು.ಈ ರೀತಿ ಮಾಡಿದರೆ ಅಷ್ಟೇ ಕಲಲಾಂಬುವಿನ ಸಂಪೂರ್ಣ ಮಣ್ಣು ಹೋಗಿ ಬಿಡುವುದು. ನಂತರ ಇದನ್ನು ಕಟ್ ಮಾಡಿ ಅಡುಗೆಯ ಲ್ಲಿ ಬಳಸಬಹುದು.ಇದನ್ನು ಕಟ್ ಮಾಡಿದಾಗ ಇದರೊಳಗಿನ ಬಣ್ಣ ಕೂಡ ಸಂಪೂರ್ಣ ಅಚ್ಚ ಬಿಳಿಯದ್ದೇ ಆಗಿರುತ್ತದೆ.ನೋಡಲು ಬಲು ಸೊಗಸು ಅದು.
ನಮ್ಮಲ್ಲಿ ಹೆಚ್ಚಾಗಿ ಇದನ್ನು ತೌತೆಯೊಂದಿಗೆ(ಸೌತೆ) ಹಾಕಿ ಪದಾರ್ಥ ಮಾಡುತ್ತಾರೆ. ಇನ್ನು ಕೆಲವರು ಬಟಾಟೆಯೊಂದಿಗೆ ಕೂಡ ಹಾಕಿ ಪರಿಮಳದ ಪದಾರ್ಥ ಮಾಡುತ್ತಾರೆ.ಮಳೆಗಾಲದಲ್ಲಿ ಮನೆಯಲ್ಲೊಂದು ಕಲಲಾಂಬುವಿನ ಪದಾರ್ಥ ಮಣ್ಣಿನ ಬಿಸಲೆಯಲ್ಲಿ(ಪಾತ್ರೆ)ಬೇಯುತ್ತಿದೆ ಎಂದಾದರೆ ಅಡುಗೆ ಮನೆಯ ಮಣ್ಣಿನ ಕಾವಲಿಯಲ್ಲಿ ಕಪ್ಪರೊಟ್ಟಿ ಇಲ್ಲವೇ ಕಬ್ಬಿಣದ ಕಾವಲಿಯಲ್ಲೊಂದು ನೀರ್ದೋಸೆ ಕಡ್ಡಾಯವಾಗಿ ಆಗಲೇಬೇಕು.ಕೊನೆಗೆ ಏನೂ ಇಲ್ಲದಿದ್ದರೆ ಕೋರಿರೋಟ್ಟಿ ಕೂಡ ಕಲಲಾಂಬುವಿನ ಪರಿಮಳದ ಕಜಿಪಿಗೆ(ಪದಾರ್ಥ) ಹೇಳಿ ಮಾಡಿಸಿದ್ದು.ಇವುಗಳ ರುಚಿ ಬರಹದಲ್ಲಿ ಮೂಡಿಸಲು ಕಷ್ಟವೇ. ಅದಕ್ಕಾಗಿ ಬೆರಳು ಚೀಪಿ ಉಂಡವರ ಅನುಭವವೇ ಕಿವಿಗೆ ಬೀಳಬೇಕು.
ಏನೇ ಹೇಳಿ ಮಳೆಗಾಲದಲ್ಲಿ ಪತ್ರೋಡೆ,ಪೆಲಕಾಯಿ ಗಟ್ಟಿ, ತೊಜಂಕ್, ಕಣಿಲೆ ಹಾಗೂ ಇನ್ನೂ ಹಲವಾರು ತುಳುನಾಡಿನ ಅಡುಗೆಗಳ ಜೊತೆ ಜೊತೆಗೆ ಈ ಒಂದು ಕಲಲಾಂಬುವಿನ ಪದಾರ್ಥ ಮಾಡಿ ತಿನ್ನದಿದ್ದರೆ ನಮಗೆ ಅದೊಂದು ಮಳೆಗಾಲ ಅಂತ ಅನ್ನಿಸುವುದೇ ಇಲ್ಲ.
ಮಳೆಗಾಲದ ಬಾನಿನಲ್ಲಿ ಸಿಡಿಲೊಂದು ಮೂಡಿ ಜೋರಾದ ಗುಡುಗಿನ ಸದ್ದು ಕಿವಿಗೆ ಅಪ್ಪಳಿಸಿದಾಗ ನಮ್ಮಲ್ಲಿ ಕಲಲಾಂಬುವಿನ ನೆನಪು ಹಾಗೂ ಅದರದ್ದೊಂದು ಆಸೆ ಇನ್ನಿಲ್ಲದಂತೆ ಗರಿಗೆದರಿ ಬಿಡುತ್ತದೆ. ಮತ್ತೆ ಮನಸ್ಸು ಯಾರ ಮಾತನ್ನು ಕೇಳುವುದೇ ಇಲ್ಲ ಮತ್ತು ಅಂತಹ ಆಸೆಗಳಿಗೆ ಎಲ್ಲರ ಮನೆಯಲ್ಲಿಯೂ ಎಂದಿಗೂ ನೋ ಅಬ್ಜೆಕ್ಷನ್ ಸರ್ಟಿಫಿಕೇಟೇ ಸಿಗುವುದು.ಏಕೆಂದರೆ ಕಲಲಾಂಬು ಇಷ್ಟವಿಲ್ಲದವರು ನಮ್ಮಲ್ಲಿ ಅತೀ ವಿರಳ.ಒಮ್ಮೆ ತಿಂದವರು ಅದರ ರುಚಿಗೆ ಇನ್ನಿಲ್ಲದಂತೆ ಮಾರು ಹೋಗಿರುತ್ತಾರೆ. ಹಾಗಾಗಿ ನಾಲ್ಕೈದು ದಿನಗಳ ಗುಡುಗು ಬಿದ್ದ ನಂತರದ ಮರು ದಿನವೇ ಕೈಯಲ್ಲೊಂದು ಬಡ್ಡ್ ಕತ್ತಿ ಹಿಡಿದು ಗುಡ್ಡದಲ್ಲಿ ಮಣ್ಣು ಕೆರೆಯಲು ಮಕ್ಕಳು ಮರಿಗಳೊಂದಿಗೆ ಹೋಗಿ ಬಿಟ್ಟರೆ ಅದೊಂದು ಏನೋ ವಿವರಿಸಲಾಗದ ನೆಮ್ಮದಿ. ಕಲಲಾಂಬು ಸಿಕ್ಕುತ್ತೋ ಬಿಡುತ್ತೋ ಗೊತ್ತಿಲ್ಲ... ಆದರೆ ಗುಡುಗು ಬಂದಾಗ ಕಲಲಾಂಬುವಿಗಾಗಿ ಒಂದಷ್ಟು ಮಣ್ಣು ಗುಡ್ಡದಲ್ಲಿ ಕೆರೆದರೇನೇ ಕಲಲಾಂಬು ಪ್ರೇಮಿಗಳಿಗೆ ಸಮಾಧಾನ.
ಈ ಬಾರಿ ಗುಡುಗು ಬಂದಾಗ ಮತ್ತೆ ಕಲಲಾಂಬುವಿನ ನೆನಪು ಅತಿಯಾಯಿತು.ಹಿಂದೆ ಆದರೆ ಕಲಲಾಂಬು ಹೆಕ್ಕಲು ಹೋಗುವುದು ಎಂದರೆ ತುಂಬಾ ಜನ ಹುಡುಗರು ಒಟ್ಟಿಗೆ ಸೇರುತ್ತಿದ್ದೆವು.ಎಲ್ಲರೂ ಒಟ್ಟಿಗೆ ಖುಷಿ ಖುಷಿಯಿಂದ ಹೋಗುತ್ತಿದ್ದೆವು.ಈಗ ಯಾರಿಗೂ ಅಂತಹ ಆಸಕ್ತಿಯೇ ಇಲ್ಲ.ಎಲ್ಲರೂ ಮೊಬೈಲ್ ನಲ್ಲಿಯೇ ಬ್ಯುಸಿ.. ಯಾರನ್ನಾದರೂ ಕರೆದರೆ ಸಹ.. ಯಾರು ಮರ್ರೆ ಅದನ್ನು ಹೆಕ್ಕುವುದು.. ನೀನು ಬೇಕಾದರೆ ಹೋಗು.. ನಾನು ಬರಲ್ಲ.. ಎಂಬ ಉದಾಸೀನದ ಮಾತುಗಳೇ ಅಧಿಕವಾಗಿ ಕೇಳಿಬರುತ್ತದೆ.
ನಮ್ಮ ಜಾಗದಲ್ಲಿಯೇ ಒಂದೆರಡು ಕಡೆಗಳಲ್ಲಿ ಕಲಲಾಂಬು ಆಗುತ್ತಿತ್ತು. ನೇರವಾಗಿ ಅಲ್ಲಿಗೆ ಹೋಗಿ ನೋಡಿದೆ. ಅಲ್ಲಿ ಈ ಬಾರಿ ಆಗಿರಲಿಲ್ಲ.ಅದು ಬೇರೆ ಊರಿನಲ್ಲಿ ಅದಾಗಲೇ ಕೆಲವರು ಭಯಂಕರ ಕಲಲಾಂಬು ಪ್ರೇಮಿಗಳು ಕಲಲಾಂಬು ಹೆಕ್ಕಿ ಅದರದ್ದೊಂದು ಚಂದದ ಪದಾರ್ಥ ಮಾಡಿ ತಿಂದು ಕೂಡ ಆಗಿತ್ತು ಎಂಬ ಸುದ್ದಿ ಬೇರೆ ನನ್ನ ಕಿವಿಗೆ ಬಿದ್ದಿತ್ತು.ವಾಟ್ಸಾಪ್ ನಲ್ಲಿ ಪೋಟೋ ಕೂಡ ನೋಡಿದೆ. ಅದನ್ನೆಲ್ಲಾ ನೋಡಿದ ಮೇಲೆ ಹೇಗೆ ತಡೆದುಕೊಳ್ಳುತ್ತೆ ಹೇಳಿ ಜೀವ.ಆಮೇಲೆ ತಡ ಮಾಡಲಿಲ್ಲ,ಕಟ್ಟರ್ ಕಲಲಾಂಬು ಪ್ರೇಮಿ ಆಗಿರುವ ನಾನೂ ಕೂಡ ಪಕ್ಕದ ದೊಡ್ಡ ಗುಡ್ಡದಲ್ಲೊಮ್ಮೆ ಸುತ್ತು ಹಾಕಿ ಬರುವ ಎಂದು ಒಬ್ಬನೇ ಬಡ್ಡ್ ಕತ್ತಿ ಹಿಡಿದು ಮನೆಯಿಂದ ಎದ್ದು ನಡೆದೆ.
ನಮ್ಮ ಗುಡ್ಡಗಳಲ್ಲಿ ಎಲ್ಲೆಲ್ಲಿ ಕಲಲಾಂಬು ಆಗುತ್ತದೆ ಎಂದು ನನಗೆ ಬಹಳ ಚೆನ್ನಾಗಿ ಗೊತ್ತು.ಚಿಕ್ಕಂದಿನಿಂದಲೂ ಅಮ್ಮನೊಂದಿಗೆ, ಸಹೋದರಿಯರೊಂದಿಗೆ,ಮಾವನೊಂದಿಗೆ,ಊರಿನ ಚಡ್ಡಿ ದೋಸ್ತಿಗಳೊಂದಿಗೆ ಕಲಲಾಂಬು ಹೆಕ್ಕಿದ ತಕ್ಕ ಮಟ್ಟಿನ ಅನುಭವ ನನಗೂ ಇದೆ. ಹಾಗಾಗಿ ಮಾಮೂಲಿ ಜಾಗಗಳಿಗೆ ಹೋಗಿ ಕತ್ತಿಯಿಂದ ಮಣ್ಣು ಕರೆಯಲು ಶುರು ಮಾಡಿದೆ. ತುಂಬಾ ಹುಡುಕಿದೆ,ಆದರೆ ನಮ್ಮ ಆ ಗುಡ್ಡದಲ್ಲಿ ಈಗಷ್ಟೇ ಕಲಲಾಂಬು ದೊಡ್ಡದಾಗುತ್ತಾ ಬರುತ್ತಿತ್ತು. ಹಾಗಾಗಿ ಜಾಸ್ತಿ ಏನು ಸಿಗಲಿಲ್ಲ.ಕೇವಲ ಐದಾರು ಅಷ್ಟೇ. ಸಿಕ್ಕಿದಷ್ಟನ್ನು ಹೆಕ್ಕಿಕೊಂಡು ಮನೆಗೆ ಮರಳಿದೆ.
ಹಿಂದೆ ಆದರೆ ಸೇರುಗಟ್ಟಲೆ ಹೆಕ್ಕುತ್ತಿದ್ದೆವು. ಎಂತಹ ಜಡಿ ಮಳೆ ಇದ್ದರೂ ಮಳೆಯಲ್ಲಿ ಅರ್ದಂಬರ್ದ ನೆನೆದು ಇನ್ನಷ್ಟು ಕಲಲಾಂಬು ಒಟ್ಟು ಮಾಡುವ ಎಂದು ಅನ್ನಿಸುತ್ತಿತ್ತೇ ಹೊರತು ಮನೆಗೆ ಬೇಗ ಮರಳುವ ಎಂಬ ಮನಸ್ಸು ಬರುತ್ತಿರಲಿಲ್ಲ.ಕೈಯಲ್ಲಿರುವ ಕೊಡೆ ಹೆಸರಿಗೆ ಮಾತ್ರ,ನೆನೆಯುವುದರಲ್ಲೂ ಸುಖ ಇತ್ತು.ಆ ಬಾಲ್ಯವೇ ಹಾಗೆ. ಪ್ರತಿಯೊಂದು ಸುಂದರವೇ.. ಪ್ರತಿಯೊಂದು ಇನ್ನಿಲ್ಲದಂತೆ ಆಸಕ್ತಿಕರವೇ.. ಅದರಲ್ಲೂ ಪ್ರಕೃತಿಯೊಂದಿಗಿನ ಆ ಒಡನಾಟಕ್ಕೆ,ಆ ಜಡಿಮಳೆ, ಆ ಬೆಟ್ಟ, ಆ ಗುಡ್ಡಕ್ಕೆ.. ಇವತ್ತಿನ ನಗರಗಳ ಯಾವುದೇ ಮಾಲ್ ಹಾಗೂ ಪಬ್ ನ ವಾತಾವರಣ ಎಂದಿಗೂ ಸರಿ ಸಾಟಿಯಾಗೇ ಆಗದು.
ಬಾಲ್ಯದ ನೆನಪುಗಳು ಹಸಿರಾಗಿರಬೇಕಾದರೆ ಚಂದದ ಅನುಭವಗಳು ನಮ್ಮ ಜತೆ ಸದಾ ಇರಬೇಕು. ಅದರಲ್ಲೂ ಆ ನೆನಪು ಇನ್ನಷ್ಟು ಹಚ್ಚ ಹಸಿರಾಗಿರಬೇಕಾದರೆ ಖಂಡಿತವಾಗಿಯೂ ಅವುಗಳಲ್ಲಿ ಇಂತಹ ಹಲವಾರು ಪ್ರಕೃತಿಯ ಕಥೆಗಳು ಇರಲೇಬೇಕು.ತುಳುನಾಡಿನಲ್ಲಿ ಹಿಂದೆ ಇಂತಹ ಸುಂದರ ಪ್ರಕೃತಿ ದೈವದತ್ತವಾಗಿ ಹೇರಳವಾಗಿಯೇ ಇತ್ತು.ಹಾಗಾಗಿ ಇಲ್ಲಿಯ ಹೆಚ್ಚಿನವರ ಬಾಲ್ಯದ ನೆನಪುಗಳಲ್ಲಿ ಕಾಡು ಗುಡ್ಡದ ಕಥೆಗಳು ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತಿದ್ದವು.
ಆದರೆ ಈಗ ಹಾಗಿಲ್ಲ.ಕಾಡು ಏನೋ ದೂರದಲ್ಲಿ ಅಲ್ಲಲ್ಲಿ ಇದೆ. ಆದರೆ ಮನೆಯ ಅಕ್ಕ ಪಕ್ಕ ಇರುತ್ತಿದ್ದ ಸಣ್ಣ ಪುಟ್ಟ ಗುಡ್ಡಗಳು ಅಭಿವೃದ್ಧಿಯ ಹೆಸರಿನಲ್ಲಿ ಮಾತ್ರ ಇನ್ನಿಲ್ಲದಂತೆ ಕಣ್ಮರೆಯಾಗುತ್ತಿದೆ.ಇರುವ ಗುಡ್ಡಗಳಲ್ಲಿ ಅಕೆಶೀಯಾದಂತ ಗಿಡ ಎಲ್ಲಿಂದಲೋ ಬಂದು ಹುಟ್ಟಿಕೊಂಡು ನೆಲದ ಮೇಲೆ ಅದರ ಪ್ಲಾಸ್ಟಿಕ್ ನಂತಹ ಎಲೆಗಳನ್ನು ಹರಡಿ ಭೂಮಿಯನ್ನೇ ಮುಚ್ಚಿ ಬಿಟ್ಟಿದೆ ಈಗ.ಇಂತಹ ನೆಲದಲ್ಲಿ ಕಲಲಾಂಬುಗಳು ಹುಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಹಾಗಾಗಿ ಇಂತಹ ಅತ್ಯಧ್ಭುತ ಮಶ್ರೂಮ್ ಒಂದು ನಿಧಾನಕ್ಕೆ ಈ ಕಾರಣದಿಂದಾಗಿಯೂ ಕಣ್ಮರೆಯಾಗುತ್ತಲೇ ಬರುತ್ತಿದೆ. ಅಕೆಶೀಯಾ ಕೇವಲ ಕಲಲಾಂಬುವಿಗೆ ಮಾತ್ರವಲ್ಲ ಅದು ಬೆಳೆದ ಜಾಗದಲ್ಲಿ ಸರಿಯಾಗಿ ಹುಲ್ಲು ಕೂಡ ಬೆಳೆಯುವುದಿಲ್ಲ.
ಮುಂದೆ ಒಂದು ದಿನ ಈ ಕಲಲಾಂಬು ಪೂರ್ತಿಯಾಗಿ ಕಣ್ಮರೆ ಆದರೂ ಅಚ್ಚರಿ ಏನಿಲ್ಲ. ಇತರ ದುಬಾರಿ ಬೆಲೆಗಳ ಅಣಬೆಗಳ ಕೃಷಿ ಮಾಡಿದಂತೆ ಮನೆಯಂಗಳದಲ್ಲಿ ಇದನ್ನು ಬೆಳೆಯಲು ಸಾಧ್ಯವಿಲ್ಲ.ಇದಕ್ಕೆ ಬೇಕಾಗಿರುವುದು ಒಂದಷ್ಟು ಗುಡುಗು,ಬೊವ್ವ್ ಮರದ ಹಾಡಿ ಮತ್ತು ಕೇವಲ ಸಹಜ ಸ್ವಾಭಾವಿಕ ಮತ್ತು ಅಷ್ಟೇ ಸಂಪದ್ಭರಿತವಾದ ಭೂತಾಯಿಯ ಸೆರಗು ಅಷ್ಟೇ.ಅದು ಎಷ್ಟು ದಿನಗಳವರೆಗೆ ಉಳಿದು ಬಿಡುವುದು ಅದು ಮಾತ್ರ ಆ ದೇವರಿಗೇ ಗೊತ್ತು.
ನಾಲ್ಕೈದು ವರ್ಷಗಳ ಹಿಂದೆ ಒಂದು ಸೇರು ಕಲಲಾಂಬುವಿಗೆ ಮಾರುಕಟ್ಟೆಯಲ್ಲಿ ಇನ್ನೂರು ಮುನ್ನೂರು ರೂಪಾಯಿ ಇತ್ತು.ಕಳೆದ ಬಾರಿ ಒಂದು ಸೇರಿಗೆ ಐನೂರರಿಂದ ಒಂದು ಸಾವಿರ ರೂಪಾಯಿ ಆಗಿದ್ದನ್ನು ಕೂಡ ನೋಡಿ ಬೆರಗಾಗಿ ಬಿಟ್ಟಿದ್ದೆ. ಹೌದು ಇದು ತುಳುವರ ಬಿಳಿ ಡೈಮಂಡು ಎಂದು ಅನ್ನಿಸಿದ್ದು ಆವಾಗಲೇ.ಇದರ ಬಗ್ಗೆ ಗೊತ್ತಿರುವವರು ಹಣ ಎಷ್ಟಾದರೂ ಖರೀದಿಸಲು ಹಿಂದೆ ಮುಂದೆ ನೋಡುವುದೇ ಇಲ್ಲ.ಏಕೆಂದರೆ ಮತ್ತೆ ಬೇಕು ಎಂದರೂ ಮುಂದಿನ ವರ್ಷಕ್ಕೆಯೇ ಕಾಯಬೇಕು.
ಹಳ್ಳಿಗಳಲ್ಲಿ ಈಗಲೂ ಮೊದಲ ಮಳೆಯ ಜೊತೆ ಒಂದೊಳ್ಳೆಯ ಗುಡುಗು ಬಿದ್ದಾಗ ಜನರು ಕತ್ತಿ ಹಿಡಿದು ಗುಡ್ಡಗಳತ್ತ ಧಾವಿಸುವುದನ್ನು ಕಾಣಬಹುದು.ಅವತ್ತೇ ತೆಗೆದು ಅವತ್ತೇ ಫ್ರೆಶ್ ಆಗಿ ಮಾರುವ ಈ ಕಲಲಾಂಬು ಎಷ್ಟೋ ಜನರಿಗೆ ಒಂದೆರಡು ದಿನಗಳ ಕಾಲ ಅಂಗಿಯ ಜೇಬನ್ನು ತಕ್ಕ ಮಟ್ಟಿಗೆ ಬಿಸಿ ಮಾಡಿ ಕೊಡುತ್ತದೆ.
ತೌತೆ ಇರಲಿಲ್ಲ ಹಾಗಾಗಿ ಸಿಕ್ಕ ಒಂದಷ್ಟು ಕಲಲಾಂಬುಗಳನ್ನು ಬಟಾಟೆಯೊಂದಿಗೆ ಪದಾರ್ಥ ಮಾಡಿ ಕಪ್ಪರೊಟ್ಟಿಯೊಂದಿಗೆ ಸವಿದು ಬಿಟ್ಟೆ.ಆ ಘಮ.. ಆ ರುಚಿ ಯಲ್ಲಿ.. ಬಾಲ್ಯದ ನೆನಪುಗಳು ಹಾಗೇ ಮತ್ತಷ್ಟು ಹಸಿರಾದವು. ಆ ನೆನಪುಗಳಲ್ಲಿ ಚಡ್ಡಿ ಅಂಗಿ ಹಾಕಿಕೊಂಡು ಗುಡ್ಡದ ನೆತ್ತಿಯಲ್ಲಿ ಅಮ್ಮನ ಜೊತೆ ನಾನು ಶ್ರದ್ಧೆಯಿಂದ ಕಲಲಾಂಬು ಹೆಕ್ಕುವ ದೃಶ್ಯಗಳೇ ಅಧಿಕವಾಗಿದ್ದವು. ಅಮ್ಮ ಹೇಳುತ್ತಿದ್ದಳು... ಬಾ ಮಾರಾಯ.. ಹೊತ್ತಾಗುತ್ತಿದೆ ಮನೆಗೆ ಹೋಗುವ ಎಂದು. ನಾನೆಲ್ಲಿ ಕೇಳುತ್ತೇನೆ.. ನಾನು ಮಳೆಯಲ್ಲಿ ಮತ್ತಷ್ಟು ನೆನೆಯುತ್ತಾ ಕತ್ತಿಯಲ್ಲಿ ಹಾಗೇ ಮಣ್ಣು ಸರಿಸುತ್ತಲೇ ಇದ್ದೆ.
ಏನೇ ಹೇಳಿ.. ಈ ಪ್ರಕೃತಿ ಚೆನ್ನಾಗಿ ಇರುವಷ್ಟು ದಿನ ಇಂತಹದ್ದನ್ನೆಲ್ಲ ತಿಂದು ಆಹಾ.. ಓಹೋ ಎನ್ನುತ್ತಾ ಬಹಳ ಚೆನ್ನಾಗಿಯೇ ಬೆರಳು ನೆಕ್ಕಬಹುದು.ಮುಂದೆ ಇದೇ ರೀತಿ ಇವುಗಳೆಲ್ಲಾ ಸಿಗುತ್ತದೆಯೋ ಇಲ್ಲವೋ ಎಂದು ಖಂಡಿತವಾಗಿಯೂ ಗೊತ್ತಿಲ್ಲ.ಹಾಗಾಗಿ ಇಂತಹದ್ದೆಲ್ಲ ಸಿಕ್ಕಾಗ ಇದನ್ನು ಮಾಡಿ ತಿನ್ನುವ ಮೂಲಕ,ಆ ಮರೆಯಲಾಗದ ರುಚಿಯೊಂದನ್ನು ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಶೇಖರಿಸಿಟ್ಟುಕೊಳ್ಳಲು ಮನಸ್ಸು ನಾವು ಮಾಡಿದರೆ ಅದೇ ಸದ್ಯಕ್ಕೆ ನಮ್ಮ ಪಾಲಿಗೆ ದಕ್ಕಬಹುದಾದ ಒಂದು ದಿವ್ಯ ಅನುಭವ.
ಮುಂದಿನ ಪೀಳಿಗೆಗೆ ಕಲಲಾಂಬು ಇದ್ದರೆ ಅವರಿಗೂ ನಾವು ಅದರದ್ದೊಂದು ರುಚಿಯನ್ನು ಉಣಬಡಿಸಬಹುದು.. ಇಲ್ಲದಿದ್ದರೆ ಈ ರೀತಿಯಾಗಿ ಪದಗಳಿಲ್ಲಿಯೇ ಸ್ವರ್ಗ ತೋರಿಸುವ ಕೆಲಸ ನಾವು ನೀವು ಮಾಡಬಹುದು ಅಷ್ಟೇ..
.....................................................................................
#ಏನೋ_ಒಂದು
ಎ.ಬಿ ಪಚ್ಚು
ಮೂಡುಬಿದಿರೆ
Comments
Post a Comment