ಗಡಂಗ್ ಎಂಬ ಚಿಂತಕರ ಚಾವಡಿ

 




ಬೆಳಿಗ್ಗೆ ಬೇಗ ಅಂಗಡಿಗೆ ಅಂತ ಹೋದದ್ದು.ಎಲ್ಲಾ ಸಾಮಾನುಗಳನ್ನು ತಗೊಂಡ ನಂತರ ಈ ಉಪ್ಪಿನಕಾಯಿ ಕೂಡ ಒಂದು ನೆನಪಾಗಿ ಬಿಟ್ಟಿತು. 


ಹೋದ ವರ್ಷದ್ದು ಅದಾಗಲೇ ಖಾಲಿ. ಈ ಬಾರಿ ಮನೆಯಲ್ಲಿ ಹೊಸ  ಉಪ್ಪಿನಕಾಯಿ ಹಾಕಿಲ್ಲ.ಹಾಕಿಟ್ಟ ಮಿಡಿ ಉಂಟು,ಆದ್ದರಿಂದ ಅಂತಹ  ಚಿಂತೆ ಏನೂ ಇಲ್ಲ,ಮುಂದೆ ಅದಕ್ಕೊಂದು ಸಾಸಿವೆ ಮೆಣಸಿನ ಉಪಚಾರ ಎಂದಿನಂತೆ ಮಾಡಿದರೆ ಆಯಿತು.ಉಪ್ಪಿನಕಾಯಿಯೊಂದು ಅನ್ನದ ತಟ್ಟೆಯ ಯಾವುದಾದರೊಂದು ಮಗ್ಗುಲಲ್ಲಿ ಇದ್ದರೆ ಆ ಊಟಕ್ಕೊಂದು ವಿಶೇಷ ಕಳೆ.ಗಟ್ಟಿ ಮೊಸರೆಂಬ ಸಹಚಾರಿಯೂ ಜೊತೆಯಾಗಿ ಬಿಟ್ಟರೆ ಬೇರೆ ಪಲ್ಯ,ಉಪ್ಪುಕರಿ,ಕೊದ್ದೆಲ್ ಗಳು ಅದೆರೆಡರ ಮುಂದೆ ಎಂದಿಗೂ ತೀರಾ ಸಪ್ಪೆಯೇ ಬಿಡಿ. 


ಅಂಗಡಿ ಪಕ್ಕವೇ ಮದ್ಯಪ್ರಿಯರ ಗಡಂಗ್(ಸಾರಾಯಿ ಅಂಗಡಿ) ಕೂಡ ಒಂದು ಉಂಟು.ಅಲ್ಲಿ ಒಳ್ಳೆಯ ಉಪ್ಪಿನಕಾಯಿ ಪ್ಯಾಕೇಟು ಗಳು ಸಿಗುತ್ತದೆ. 10 ರೂಪಾಯಿ,15 ರೂಪಾಯಿಯ ಒಳಗೆ. ಖಾರಕ್ಕಿಂತಲೂ ಹೆಚ್ಚಿನ ಹುಳಿ ಇರುವ ಉಪ್ಪಿನಕಾಯಿಗಳು ಅವು.ಮದ್ಯಪ್ರೀಯರು ಹೆಚ್ಚಾಗಿ ಹುಳಿ ಪ್ರಿಯರು.ಉಪ್ಪಿನಕಾಯಿಯ ನೆನಪಗಾಗಿ ಹಾಗೇ ಆ ಗಡಂಗ್ ಕಡೆ ಮುಖ ಮಾಡಿದೆ. 


ಅದಾಗಲೇ ಹಳ್ಳಿಯ ಖ್ಯಾತ ಮದ್ಯಪ್ರೀಯರೆಲ್ಲರೂ ಅಲ್ಲಿಗೆ ಬಹಳ ಬೇಗ ಶ್ರದ್ಧೆಯಿಂದ ತುಂಬಾ ಉಮೇದಿನಿಂದ ಬಂದು ನೆರೆದಿದ್ದರು.ಆ ಉತ್ಸಾಹ ಆ ಜೋಶ್ ಅವರ ಮುಖದಲ್ಲಿ ಹಾಗೇ ಎದ್ದು ಕಾಣುತ್ತಿತ್ತು."ಉಲ್ಲಾಸದ ಹೂ ಮಳೆ ಜಿನುಗುತ್ತಿದೆ ನನ್ನಲ್ಲಿ ..ನಾನನಾನಾನಾ ನಾನನಾನಾನ.." ಹಾಡು ಅವರಾರೂ ಗುನುಗದೇ ಇದ್ದರೂ,ಆ ಸಿಚುವೇಷನ್ ಗೆ ಮಾತ್ರ ಪರ್ಫೆಕ್ಟ್ ಆಗಿಯೇ ಸೂಟ್ ಆಗುತ್ತಿತ್ತು. 


ಕೆಲವರು ಕೊರೋನ ಕಾರಣದಿಂದ ಸ್ವಲ್ಪ ಗ್ಯಾಪು ಕೊಟ್ಟು ಕೊಂಡು ಅಲ್ಲಲ್ಲಿ ಪಾರ್ಸೆಲ್ ಕಟ್ಟು ಕೆಳಗೆ ಬೀಳಬಾರದೆಂದು ಗಟ್ಟಿ ಹಿಡಿದುಕೊಂಡು ಕುಳಿತಿದ್ದರು.


ಆಹಾ.. ಎಂತಹ ಶಿಸ್ತು.. ಅದೆಂಹ ಶ್ರದ್ಧೆ.. ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.


ಈ ಲಾಕ್ ಡೌನ್ ಕಾರಣದಿಂದಾಗಿ ಗಡಂಗ್ ನಲ್ಲಿಯೇ ಈಗ  ಕುಡಿಯುವಂತಿಲ್ಲ,ಮನೆಗೆಯೇ ಪಾರ್ಸೆಲ್ ತಗೊಂಡು ಹೋಗಬೇಕು. ಆದರೆ ಡೈಲಿ ಬಂದು ಅಲ್ಲಿಯೇ ಹರಟೆ ಹೊಡೆಯುತ್ತಿದ್ದ ಅವರಿಗೆ ಬೇಗ ಮನೆಗೆ ಹೋಗಲು ಮನಸ್ಸಿಲ್ಲ,ಹಾಗಾಗಿ ಇನ್ನೂ ಅಲ್ಲೇ ಕುಳಿತುಕೊಂಡು ಜಗತ್ತಿನ ಸಮಸ್ಯೆಗಳ ಬಗ್ಗೆ ಡೀಪಾಗಿ ಚರ್ಚಿಸುತ್ತಿದ್ದರು. 


ಚಿಕ್ಕಂದಿನಿಂದಲೂ ಈ ಗಡಂಗ್ ಎಂಬುದು ನನ್ನಲ್ಲಿ ಇನ್ನಿಲ್ಲದಂತೆ ಕುತೂಹಲ ಹುಟ್ಟಿಸಿದೆ.ಶಾಲೆಗೆ ಹೋಗುವಾಗ ಗುಡ್ಡದ ದಾರಿಯಲ್ಲಿ  ಒಂದು ಹೆಂಚಿನ ಪುಟ್ಟ ಗಡಂಗ್ ಇತ್ತು.ಆ ಕುಂಟಾಲಿನ ಗುಡ್ಡೆಯ ಸಮೀಪ ನಡೆದು ಹೋಗುವಾಗ ಕಿವಿಗಳನ್ನು ಅರಳಿಸಿಕೊಂಡೇ ಬಹಳ ನಿಧಾನಕ್ಕೆ ನಡೆದು ಹೋಗುತ್ತಿದ್ದೆ ನಾನು.ಏಕೆಂದರೆ ಅಲ್ಲಿಯ ಸಂಭಾಷಣೆಗಳೆಲ್ಲವೂ ನನಗೆ ತೀರಾ ಹೊಸದು. 


ಅಲ್ಲಿ ಮಧ್ಯಪ್ರೀಯರು ಲೈಟಾಗಿ ಟೈಟಾಗಿ ನಡೆಸುವ ರಾಷ್ಟ್ರೀಯ ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧ ಪಟ್ಟ ಚರ್ಚೆಗಳು,ಮಂಗಗಳನ್ನು ಓಡಿಸುಲು ಬಿಸಾಡುವ ಗರ್ನಲ್ ನಿಂದ ಹಿಡಿದು ಪಾಕಿಸ್ತಾನದ ಅಣು ಬಾಂಬುಗಳ ಸಾಮರ್ಥ್ಯದ ಬಗೆಗಿನ ಬಹಳ ಡೀಪಾದ ಚಿಂತನ ಮಂಥನ,ಊರಿನ ಹಸಿ ಬಿಸಿ ಗಾಸಿಪುಗಳು ನನಗೆ ಇನ್ನಿಲ್ಲದಂತೆ ಭಯಂಕರ ಕುತೂಹಲ ಮೂಡಿಸುತ್ತಿತ್ತು.


ಏನಪ್ಪಾಆಆಆ ಇವರು,ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ.. ನಮ್ಮ ಶಾಲೆಯಲ್ಲಿಯೇ ಇಷ್ಟೇಲ್ಲಾ ಹೇಳಿಕೊಡುವುದಿಲ್ಲವಲ್ಲಾ.. ಅಂತಲೇ ಅನ್ನಿಸುತ್ತಿತ್ತು.


ಅವರು ಯಾರೂ ಕೂಡ ಯಾವುದೇ ಮಾಮೂಲಿ ಸಿಲ್ಲಿ ಲಲ್ಲಿ ವಿಷಯಗಳನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ ಅಲ್ಲಿ.ನಿಜವಾಗಿಯೂ ಈ ದೇಶ ಉದ್ಧಾರ ಮಾಡಲು ಸರ್ಕಾರಗಳು ಯಾವ ಕಾನೂನು ತರಬೇಕು..ಎಂತಹ ರೋಡ್ ನಮಗೆ ಬೇಕು,ವಿದೇಶದ ರೋಡ್ ಆದರೆ ಅಲ್ಲಿ ಎಣ್ಣೆ ಹಾಕಿ ಎಣ್ಣೆ ತೆಗೆಯಬಹುದು.. ಅದು ಅಷ್ಟೊಂದು ನೈಸ್.ಆದರೆ ಈ ದೇಶದಲ್ಲಿ ಏನೂ ಸರಿ ಇಲ್ಲ.. ನಮ್ಮ ದೇಶದ ಜನರೇ ಸರಿ ಇಲ್ಲ,ಇಲ್ಲಿ ಯಾರೂ ಸ ಸರಿ ಇಲ್ಲ,ಯಾರಿಗೂ ಶಿಸ್ತು ಎಂಬುದು ಮೊದಲೇ ಇಲ್ಲ..ತಪ್ಪು ಮಾಡಿದವರಿಗೆ ಗಲ್ಪು ಕಂಟ್ರಿಗಳಂತೆ ನಮ್ಮಲ್ಲಿ ಕೂಡ ಮರಣದಂಡನೆ ಶಿಕ್ಷೆಯೇ ಕೊಡಬೇಕು,ಆವಾಗಲೇ ನಮ್ಮವರಿಗೆ ಬುದ್ಧಿ ಬರುವುದು,ಹೆದರಿಕೆ ಅನ್ನುವುದು ಹುಟ್ಟಿ ಕೊಳ್ಳುವುದು,ನಮ್ಮ ದೇಶದಲ್ಲಿ ಅಂತು ರೋಡ್ ಇರುವುದೇ ಕಸ ಎಸೆಯಲು ಅನ್ನುವಂತೆ  ಆಗಿ ಬಿಟ್ಟಿದೆ... ಎಂದೆಲ್ಲಾ ರೋಷದಿಂದ ಹೇಳಿ...ಬಾಯಲ್ಲಿರುವ ಎಲೆ ಅಡಿಕೆಯ ಕೆಂಪನ್ನು  ತುಪುಕ್ಕ್ ಅಂತ ಪಕ್ಕದಲ್ಲಿಯೇ ಉಗಿದು ನೆಲದ ಮೇಲೆ ಒಂದಷ್ಟು ಚಿತ್ತಾರ ಬಿಡಿಸುತ್ತಾ ಮತ್ತಷ್ಟು ವಿಸ್ವದ ಸಮಸ್ಯೆಗಳ ಬಗ್ಗೆ ಡೀಪಾಗಿ ಚಿಂತನ ಮಂಥನ ಮಾಡುತ್ತಿದ್ದ ಆ ಜನರು ನನಗೆ ಬಹಳ ಆಸಕ್ತಿ ಹುಟ್ಟಿಸುತ್ತಿದ್ದರು.ನಿಜ ಹೇಳಬೇಕೆಂದರೆ ನನಗೆ ಜೀವನದಲ್ಲಿ ಇಂತವರೇ ಅತೀ ಹೆಚ್ಚಿನ ಆಸಕ್ತಿ ಹುಟ್ಟಿಸುವುದು. 


ಗಡಂಗ್ ನ ಜನರು ಮಾತ್ರ ಆಸಕ್ತಿಯ ಕೇಂದ್ರ ಬಿಂದು ಆಗಿರಲಿಲ್ಲ. ಅಲ್ಲಿಯ ಪರಿಸರವೇ ಭಯಂಕರ ಡಿಫರೆಂಟ್ ಆದದ್ದು.ಕುಂಟಾಲ್ ಮರ ಹೆಚ್ಚಾಗಿ ಇದ್ದುದರಿಂದ ನಮಗೆಲ್ಲ ಅದು ಕುಂಟಾಲ್ ದ ಪಾಡಿ(ಹಾಡಿ)ಯೇ ಆಗಿತ್ತು. ಅದರ ಮಧ್ಯೆ ಆ ಒಂದು ಗಡಂಗ್. 

ಕೋಳಿ ಅಂಕದ ಕೋಳಿಗಳು ಎಕ್ಸೇಂಜ್ ಆಗುವ ಇಲ್ಲವೇ  ಮಾರಾಟವಾಗುವ ಫ್ರೈಮರಿ ಕೇಂದ್ರ ಅದುವೇ.


ನಾನಂತು ಮೊದಲು ಬಹುಶಃ ಇಲ್ಲಿ ಕೋಳಿಗಳನ್ನು ಫೈಟ್ ಮಾಡ್ಲಿಕ್ಕೆ,ಇಲ್ಲ ಟ್ರೈನ್ ಮಾಡ್ಲಿಕ್ಕೆ ತರ್ತಾರೆ..ಆ ನಂತರ ಲೈಟಾಗಿ ಕುಡಿದು ಹೋಗುತ್ತಾರೆ.. ಇದೊಂದು ಅಂಕದ ಕೋಳಿಗಳ ತರಬೇತಿ ಕೇಂದ್ರ ಇದ್ದ ಹಾಗೆ ಎಂದೇ ತಿಳಿದುಕೊಂಡಿದ್ದೆ. ಆ ನಂತರವೇ  ಗೊತ್ತಾದದ್ದು ಇಲ್ಲ.. ಇಲ್ಲ.. ಇಲ್ಲಿ ಮಧ್ಯಪ್ರೀಯರು ಗಟ್ಟಿಯಾಗಿ  ಕುಡಿಯಲೆಂದೇ ಬರುತ್ತಾರೆ,ಆ ನಂತರವೇ ಟೈಟಾಗಿ ಲೈಟಾಗಿ ಬೇರೆ ವಿಷಯಗಳ ಬಗ್ಗೆ ಗಮನ ಹರಿಸುತ್ತಾರೆ ಎಂದು.


ಆದರೆ ನಾನು ನೋಡಿದಾಗಲೆಲ್ಲ ಒಂದೆರಡು ಕಟ್ಟದ ಕೋಳಿಗಳನ್ನು(ಅಂಕದ ಕೋಳಿ)ಅಲ್ಲಿ ಯಾವಾಗಲೂ ನೆಲಕ್ಕೆ ಹೊಡೆದ ಗೂಟಗಳಿಗೆ ಕಟ್ಟಿ ಹಾಕಿಯೇ ಇರುತ್ತಿದ್ದರು.ಅವುಗಳು ಒಂಟಿ ಕಾಲಲ್ಲಿ ನಿಂತುಕೊಂಡು ಸದಾ ಕೊಕ್ಕೊ ಕ್ಕೋ ಅಂತ ಕತ್ತೆತ್ತಿ ಗತ್ತಿನಿಂದ ಅತ್ತಿತ್ತ ನೋಡುತ್ತಲೇ ಇರುತ್ತಿದ್ದವು.ಅದಕ್ಕೆ ಕುಡಿಯಲು ಒಂದು ತಿಪ್ಪಿ(ತೆಂಗಿನ ಗೆರಟೆ)ಯಲ್ಲಿ ನೀರು ಹಾಗೂ ಮತ್ತೊಂದು ತಿಪ್ಪಿಯಲ್ಲಿ ಬಾರು(ಭತ್ತ) ಇರುತ್ತಿತ್ತು.ಅದರ ಯಜಮಾನ ಅವುಗಳನ್ನು ಹೊರಗೆ ಕಟ್ಟಿ ಹಾಕಿ ಗಡಂಗ್ ಒಳಗಡೆ ಅಮೃತ ಹೀರುವ ಕಾರುಬಾರು ಮಾಡುತ್ತಿದ್ದ.


ಹಿಂದೆ ಎಲ್ಲಾ ಗಡಂಗ್ ಬಳಿಯೇ ಕೋಳಿ ಅಂಕ ನಡೆಯುತ್ತಿದ್ದವು. ಅದೂ ಕೂಡ ಬಹಳ ಗುಟ್ಟಾಗಿ.ಆದರೆ ಅದಕ್ಕೆ ಪೋಲಿಸರ ಅನುಮತಿ ಇಲ್ಲ, ಹಾಗಾಗಿ ಪೋಲಿಸ್ ರೈಡ್ ಆದಾಗ ಪಂಚೆ ಕಟ್ಟಿಕೊಂಡು ಸದ್ಯಕ್ಕೆ ತಾವು ಬದುಕಿದರೆ ಸಾಕು ಎಂದು ತಮ್ಮ ಅಂಕದ ಕೋಳಿಗಳನ್ನು ಆ ಗುಡ್ಡೆಯಲ್ಲಿಯೇ ಬಿಟ್ಟು,ಆ ಕುಂಟಾಲಿನ ಪಾಡಿಯಲ್ಲಿ ಅವರದ್ದೊಂದು ಎದ್ದು ಬಿದ್ದು ಓಡುವ ಓಟ ನೋಡಲು ಎರಡು ಕಣ್ಣುಗಳೇ  ಸಾಲುತ್ತಿರಲಿಲ್ಲ.


ಎಂಟರ್ಟೈನ್ ಮೆಂಟ್ ಅಂತ ಬಂದಾಗ ಗಡಂಗ್ ಗಳು ಕೂಡ ತಮ್ಮ ಕ್ಲೈಂಟ್ ಗಳಿಗೆ ಎಂದಿಗೂ ನಿರಾಸೆ ಮಾಡಿದ್ದೇ ಇಲ್ಲ.ಹಿಂದೆ ಮೇಜರ್ ಆಗಿ ಅಲ್ಲಿ ಎರಡೂ ಮನರಂಜನೆ ಇದ್ದೇ ಇರುತ್ತಿತ್ತು.ಒಂದು ಬುದ್ದಿಗೆ, ಮತ್ತೊಂದು ತಾಕತ್ತಿಗೆ.


ಬುದ್ದಿಗೆ ಇಸ್ಪೀಟು ಆಟ,ತಾಕತ್ ಗೆ ತೆಂಗಿನಕಾಯಿ ಒಡೆಯುವ ಆಟ.


ಇಸ್ಪೀಟು ಅಂತ ಬಂದರೆ ಅದು ಬಹುಶಃ ರಮ್ಮಿಯೇ ಇರುತ್ತಿತ್ತು ಅಂತ ನನ್ನ ಅನಿಸಿಕೆ. ಮನೆಯಲ್ಲಿ ಇಸ್ಪೀಟು ಎಲೆಗಳನ್ನು ಕಾಣಿಸಿಕೊಂಡರೆ  ಸಿಕ್ಕಾಪಟ್ಟೆ ಬೈಯುತ್ತಿದ್ದರು.. ಎಂತಕ್ಕಾ ಅದೆಲ್ಲಾ ನಿನಗೆ,ಅದೆಲ್ಲಾ ಅವರು ಗಡಂಗ್ ನವರು ಆಡುದು.. ಅಂತ ಮನೆಯಲ್ಲಿ ಕಾರ್ಡ್ಸ್ ಆಡುವುದಕ್ಕೆ ನಿಷೇಧ ಹೇರಿದ್ದರು.ಗಡಂಗ್ ನಲ್ಲಿ ಹಣ ಕಟ್ಟಿ ಮನೆ ಮಠ ಎಲ್ಲಾ ಮಾರಿಕೊಂಡು ಇಸ್ಪೀಟು ಆಡುತ್ತಿದ್ದರು ಅದಕ್ಕೆ ಅದರ ಬಗ್ಗೆ ಊರಿನಲ್ಲಿ ಎಲ್ಲಾ ಒಂಥರಾ ತಾತ್ಸಾರ.ಹಾಗಾಗಿ ಜಸ್ಟ್ ಕತ್ತೆಯಂತಹ ಆಟ ಕೂಡ ಆಡಲು ನಮ್ಮ ಮನೆಗಳಲ್ಲಿ ಸಾಧ್ಯ ಆಗುತ್ತಿರಲಿಲ್ಲ ಆವಾಗ.ಆದರೆ ಮುಂದೆ ಕಾಲೇಜಿನಲ್ಲಿ Probability ಎನ್ನುವ ಗಣಿತದ ಅಧ್ಯಾಯದಲ್ಲಿ ಈ ಇಸ್ಪೀಟು ಎಲೆಗಳೇ ಥಕ ಥೈ ಎಂದು ಕುಣಿಯಲು ಶುರುವಾದಾಗ  ನನಗೊಮ್ಮೆ ಆ ಹಳೆಯ ಗಂಡಗ್ ಹಾಗೂ ಮಧ್ಯಪ್ರೀಯರ ಭಯಂಕರ ಉಮೇದಿನ ಇಸ್ಪೀಟು ಆಟ ನೆನಪಾಗದೇ ಇರಲಿಲ್ಲ.


ಇನ್ನೊಂದು ತೆಂಗಿನಕಾಯಿ ಆಟ. ಇದು ತೆಂಗಿನಕಾಯಿಯ ಗಟ್ಟಿ ಚಿಪ್ಪಿನ ಶಕ್ತಿ ಪರೀಕ್ಷೆಗೆ ಮೀಸಲು ಹಾಗೂ ತಕ್ಕ ಮಟ್ಟಿಗೆ ಆಟ ಆಡುವವನ ಕೈಚಳಕಕ್ಕೂ ಕೂಡ.ತೆಂಗಿನಕಾಯಿಯ ಸಿಪ್ಪೆ ಸುಲಿದು ಗಡಂಗ್ ಬಳಿ ತರುತ್ತಾರೆ. ಇದರಲ್ಲಿ ಇಬ್ಬರು ಆಟ ಆಡುವುದು. ಹಿಂದೆ ಎಲ್ಲಾ ಈಗ ಮಾಲ್ ನಲ್ಲಿ ಬೌಲಿಂಗ್ ಗೇಮ್ ಅಂತ ಉಂಟಲ್ಲಾ.. ಅದೇ ತರಹ ದೂರದಿಂದ ಇಬ್ಬರು ಚತುರರು ಪರಸ್ಪರರ ಕಾಯಿ ಒಡೆಯಲು ನೆಲದಲ್ಲಿಯೇ ಕಾಯಿಗಳನ್ನು ವೇಗವಾಗಿ ಅಂಡರ್ ಆರ್ಮ್ ಬೌಲಿಂಗ್ ಮಾಡಿದಂತೆ ಉರುಳಿಸುತ್ತಿದ್ದರು.


ಯಾರ ಕಾಯಿ ಒಡೆಯುವುದೋ ಅವರು ಸೋತಂತೆ,ಒಡೆಯದೇ ಉಳಿಯುವ ಕಾಯಿಯ ಯಜಮಾನ ಗೆದ್ದಂತೆ.ಇಲ್ಲಿ ಸೇರುವ ಪ್ರೇಕ್ಷಕರು ಬರೀ ಪ್ರೇಕ್ಷಕರಲ್ಲ.. ಕೋಳಿ ಅಂಕದಂತೆ ಅವರೆಲ್ಲರೂ ಈ ಆಟದಲ್ಲಿ ಬಾಜಿದಾರರು. ಹಾಗಾಗಿ ಕಾಯಿ ಆಟ ಹೆಸರಿಗೆ ಮಾತ್ರ,ಅದೂ ಕೂಡ ಅಲ್ಲಿರುವ ಎಲ್ಲರಿಗೂ ಪ್ರತ್ಯಕ್ಷವಾಗಿ ಜೂಜಿನ ಆಟವೇ.


ನನಗೆ ಎಷ್ಟೋ ಸಲ ಅನಿಸಿದೆ ಏಕೆ ಈ ಕಾಯಿ ಆಟವನ್ನೇ ನೋಡಿ ಮಾಲ್ ಗಳಲ್ಲಿರುವ ಈಗೀನ ಬೌಲಿಂಗ್ ಆಟ ಹುಟ್ಟಿಕೊಂಡಿರಬಾರದು ಎಂದು.ಮತ್ತೆ ಗಡಂಗ್ ನವರು ಅಂದರೆ ಸುಮ್ಮನೆಯಾ.. ಮದ್ಯಪ್ರೀಯರು,ಮನರಂಜನೆ ಪ್ರೀಯರೂ ಹೌದು ಅದೇ ರೀತಿ ಸಂಶೋಧಕರೂ ಹೌದು.


ಈ ಆಟದಲ್ಲಿಯೂ ಮಾರ್ಪಾಡುಗಳಾಗಿವೆ. ಬಹಳ ಹತ್ತಿರ ಇಬ್ಬರು ಕುಳಿತುಕೊಂಡು ತಮ್ಮ ಕೈಯಲ್ಲಿಯೇ ಕಾಯಿಗಳನ್ನು ಹಿಡಿದುಕೊಂಡು,ಪರಸ್ಪರರ ಕಾಯಿಗೆ ಹೊಡೆದುಕೊಳ್ಳುವ ಕಾಯಿ ಆಟವೇ ಈಗ ಹೆಚ್ಚಾಗಿ ಇರುವುದು.ಕಾಲ ಬದಲಾದಂತೆ ಆಟದಲ್ಲಿಯೂ ಬದಲಾವಣೆಗಳಾಗಿವೆ.ICC ಯಂತೆ ಗಡಂಗ್ ಕೂಡ ಆ ಕಾಲದಲ್ಲಿಯೇ ತನ್ನನ್ನು ತಾನು  ಬದಲಾವಣೆಗೆ ತೆರೆದುಕೊಂಡಿತ್ತು. 


ಇನ್ನು ಗಡಂಗ್ ನ ಫುಡ್ ಬಗ್ಗೆ ಒಂದಿಷ್ಟು ಹೇಳದಿದ್ದರೆ ಖಂಡಿತವಾಗಿಯೂ ತಪ್ಪಾಗಿ ಬಿಡುತ್ತದೆ. ಅಲ್ಲಿರುವುದು ಎಲ್ಲವೂ ಹುಳಿ ಹುಳಿ.. ಖಾರ ಖಾರ. ಕಬಾಬ್ ಎಲ್ಲಾ ಈಗ ಬಂದಿದ್ದು. ಆಗ ಎಲ್ಲಾ ಫಿಶ್ ಫೈ,ಪೊಡಿ ಚಟ್ನಿ,ಬೇಯಿಸಿದ ಮೊಟ್ಟೆ,ಆಮ್ಲೇಟು,ಕೋರಿ ಸುಕ್ಕವೇ ಇದ್ದದ್ದು. ಉಪ್ಪಿನಕಾಯಿ ಬಗ್ಗೆ ಹೇಳುವುದೇ ಬೇಡ ಬಿಡಿ, ಉಪ್ಪಿಗಿಂತ ರುಚಿ ಬೇರೆ ಇಲ್ಲ, ಉಪ್ಪಿನಕಾಯಿ ಇಲ್ಲದ ಗಡಂಗ್ ಇಲ್ಲ. ಅದನ್ನು ಪ್ಯಾಕೇಟ್ ಗಳಲ್ಲಿ ಅಲ್ಲಲ್ಲಿ ನೇತು ಹಾಕಿ ಇರುತ್ತಾರೆ.


ಹಾಗೇ ಒಂದಷ್ಟು ಮಸಾಲೆ ಕಡಲೆ ಪ್ಯಾಕೇಟ್, ಬಟಾಣಿ ಕಡಲೆ ಪ್ಯಾಕೇಟ್ , ಬೋಟಿ, ಚಕ್ಕುಲಿ,ಮಿಕ್ಷರ್,ಖಾರಕಡ್ಡಿ ಪ್ಯಾಕೇಟ್ ಗಳು ಕೂಡ ಅದರಷ್ಟಕ್ಕೆ ಅಲ್ಲಿ ನೇತಾಡುತ್ತಾ ಇರುತ್ತಿದ್ದವು. ಬಾಳೆಹಣ್ಣಿನ ಗೊನೆ ಕೂಡ ಇರುವುದನ್ನು ಗಮನಿಸಿದ್ದೇನೆ.ಅದು ಏತಕ್ಕೆ ಎಂದು ನನಗೆ ನಿಜವಾಗಿಯೂ ಅರಿವಾಗುತ್ತಿರಲಿಲ್ಲ. ಮದ್ಯಪ್ರಿಯರು ನಿಜವಾಗಿಯೂ ಕದಳಿಪ್ರೀಯರೋ ಅಥವಾ ಹಣ ಇಲ್ಲದಾಗ ಮನೆಯಲ್ಲಿರುವ ಬಾಳೆಗೊನೆಯನ್ನೇ  ಕಡಿದು ತಂದು ಅದನ್ನು ಅಲ್ಲಿ ಮಾರಿ ಅದರಿಂದಲೇ ಉದರಕ್ಕೆ ತಾಕತ್ ಕ ದವಾ ವನ್ನು ಸುರಿಯುತ್ತಿದ್ದರೋ  ಏನೋ ಎಂಬುದರ ಬಗ್ಗೆ ಆವಾಗ ನನಗೆ ಸ್ಪಷ್ಟತೆ ಇರಲಿಲ್ಲ.


ಏನೇ ಹೇಳಿ.. ಮದ್ಯಪ್ರೀಯರಿಗೆ ಹಿಂದೆ ಒಂದು ಕಾಲದಲ್ಲಿ ಅವರ ಅತೀ ದೊಡ್ಡ ದುನಿಯಾ ಅಂದರೆ ಅದು ಇಂತಹದ್ದೇ ಊರಿನ ಗಡಂಗ್ ಗಳೇ ಆಗಿದ್ದವು.ಅವರ ಆ ಲೋಕದಲ್ಲಿ ಮನರಂಜನೆ, ಅಮಲು ಎಲ್ಲವೂ ಇತ್ತು. ಆದರೆ ಎಷ್ಟೋ ಸಂಸಾರಗಳು ಬೀದಿಗೆ ಬಿದ್ದಿದ್ದು ಕೂಡ ಈ ಗಡಂಗ್ ನಿಂದಾಗಿಯೇ ಎನ್ನುವುದು ಕೂಡ ಸುಳ್ಳಲ್ಲ.


ಸಾಲ ಮಾಡಿ ಕುಡಿಯುತ್ತಿದ್ದರು,ಮನೆಯ ಸಾಮಾನು, ಹೆಂಡತಿಯ  ಆಭರಣ ಕೂಡ ಮಾರಿ ಕುಡಿಯುತ್ತಿದ್ದರು,ಇಸ್ಪೀಟು ಆಟವಾಡುತ್ತಿದ್ದರು.ಬರೀ ಅಷ್ಟೇ ಅಲ್ಲ.ಮನೆಗೆ ಬಂದು ಹೆಂಡತಿ ಮಕ್ಕಳಿಗೆ ಹೊಡೆಯುವುದು ಕೂಡ ಸಿಕ್ಕಾಪಟ್ಟೆ ಇತ್ತು.ಎಷ್ಟೋ ಹೆಣ್ಣು ಮಕ್ಕಳ ಶಾಪ ಈ ಗಡಂಗ್ ಓನರ್ ಗಳಿಗೆ ನಿರಂತರವಾಗಿ ತಟ್ಟುತ್ತಲೇ ಇದ್ದವು.


ಆ ನಂತರ ಗಡಂಗ್ ಎನ್ನುವುದು ಹೋಗಿ ಕೆಲವು ಕಡೆ ವೈನ್ ಶಾಪ್ ಎನ್ನುವ ಕೆಂಪು ಬೋರ್ಡ್ ಗಳು ಕಾಣಿಸಿಕೊಂಡವು. ಕುಡಿಯುವುದಕ್ಕೂ ಶಿಸ್ತು ಬಂತು..ಅಲ್ಲಲ್ಲಿ ಅಪರೂಪಕ್ಕೆ ಒಂದರಂತೆ ಇದ್ದ ಬಾರ್ ಗಳು ನಾಯಿಕೊಡೆಯಂತೆ ಎದ್ದು ನಿಂತವು.ಈಗ ಅಂತು ಕುಡಿಯದಿದ್ದರೆ ಸಮಾಜದಲ್ಲಿ ಮಾರ್ಯಾದೆಯೇ ಇಲ್ಲ,ಸಮಾಜವೇ ಕುಡಿಯದವನನ್ನು ತುಂಬಾ ಹೀನಾಯವಾಗಿ ನೋಡುತ್ತದೆ, ಯುವಕರಿಗೆ ಯುವತಿಯರಿಗೆ ಕುಡಿಯುವುದು ಎಂದರೆ ಅದೊಂದು ಸಾಮಾನ್ಯ ಸಂಗತಿ.ಮನೆಯಲ್ಲೂ ಯಾರೂ ಏನೂ ಹೇಳುವುದಿಲ್ಲ.ಬದಲಿಗೆ ಕುಡಿಯುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಕುಡಿಯುವುದು ತಪ್ಪು ಎಂದು ಕೂಡ ನಾನು ಹೇಳಲಾರೆ. ಅದೇ ಹಿಂದೆ ಕುಡಿಯುವವನಿಗೆ ಮಾರ್ಯಾದೆಯೇ ಇರುತ್ತಿರಲಿಲ್ಲ.. ಈಗ ಕುಡಿಯದೇ ಇದ್ದರೆ  ಬೆಲೆಯೇ ಇಲ್ಲ.ಎಲ್ಲವೂ ಬದಲಾಗಿದೆ,ದೃಷ್ಟಿಕೋನಗಳು ಚೇಂಜ್ ಆಗಿದೆ.ಬದಲಾವಣೆ ನಿರಂತರ.. 


ಏನೇ ಬದಲಾದರೂ ಹಳ್ಳಿಯ ಜನರ ಬಾಯಿಯಲ್ಲಿ ಕುಡಿಯುವ ಕ್ರೇತ್ರಕ್ಕೆ ಈಗಲೂ ಅದೇ  ಗಡಂಗ್ ಎನ್ನುವ ಹೆಸರೇ ಇದೆ,ಅದರಲ್ಲೂ ಗಡಂಗ್ ನಲ್ಲಿ ಕುಡಿದು ತೂರಾಡಿದ ಗಂಡಸರು ಆದರೂ ಅದನ್ನು ಮರೆತು ಬಿಟ್ಟಾರು.. ಆದರೆ ಅದರಿಂದಾಗಿ ತಮ್ಮದೊಂದು ಬಾಳು ಹಾಳು ಆದ,ಆಗಿನ ಕಾಲದ ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ಗಡಂಗ್ ಅನ್ನು ಹೇಗೆ ಮರೆಯಲು ಸಾಧ್ಯ?! 


ಒಟ್ಟಿನಲ್ಲಿ ಬೆಳಿಗ್ಗೆ ಅಂಗಡಿಗೆ ಅಂತ ಹೋದಾಗ ಅದರಲ್ಲೂ ಉಪ್ಪಿನಕಾಯಿಯ ನೆನಪಾಗಿ ಗಡಂಗ್ ಕಡೆಗೊಮ್ಮೆ ಮುಖ ಮಾಡಿದಾಗ ಇಷ್ಟೆಲ್ಲ ರಪ್ಪ ಅಂತ ನೆನಪಾಗಿ ಬಿಟ್ಟಿತು.


ಕೆಲವರು ಪರಿಚಯದವರು ಕೂಡ ಇದ್ದರು.


ನನ್ನನ್ನು ಅಲ್ಲಿ ನೋಡಿ ನಕ್ಕರು.


ನಾನೂ ನಕ್ಕೆ.


ನಂತರ ಸ್ವಲ್ಪ ಸಮಯ ನಾನೂ ಕೂಡ ಅವರೊಂದಿಗೆ ಸೇರಿ ಕೊರೋನವನ್ನು ಹೇಗೆ ಹೊಡೆದೋಡಿಸಬಹುದು,ಕೊರೋನಕ್ಕೆ ಕ್ಟಾಟ್ರು ಕೂಡ ಮದ್ದಾಗಬಹುದೇ,ಕೊರೋನ ಎಂಬುದು ಚೀನಾ ಪ್ರಯೋಜಿತ ವಿಸ್ವ ಯುದ್ಧವೇ ಎಂಬ ಜಾಗತಿಕ ಮಟ್ಟದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.


ಅವರೆಲ್ಲ ಲಾಜಿಕ್ಕ್.. ಅವರ ಡೀಪಾದ ಜ್ಞಾನ.. ವಿಷಯದ ಮೇಲೆ ಬಿಗಿಯಾದ ಹಿಡಿತ.. ನಿಜವಾಗಿಯೂ ಯಾರನ್ನೇ ಆಗಲಿ ಬೆಚ್ಚಿ ಬೀಳಿಸದೇ ಇರದು. 


ಜೋರು ಮಳೆ ಬೆಳಿಗ್ಗೆಯೇ ರಭಸವಾಗಿ ಹೊಡೆಯಲು ಶುರು ಮಾಡಿತ್ತು. 


ವಿಸ್ವದ ವಿಷಗಳ ಬಗ್ಗೆ,ಇನ್ನಷ್ಟು ಗಂಭೀರ ಸಮಸ್ಯೆಗಳ ಬಗ್ಗೆ.. ಮಳೆ ನಿಲ್ಲುವವರೆಗೂ ಗಡಂಗ್ ನ ಚಿಂತಕರೊಂದಿಗೆ ಚರ್ಚೆಯೊಂದು  ಹಾಗೇ ಮುಂದುವರಿದಿತ್ತು..


........................................................................................ 


#ಏನೋ_ಒಂದು.. 


Ab Pacchu

Moodubidire

Photo -Internet 

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..