ಗ್ರೌಂಡಿನ ಕೊಡಪಾನ




ಗ್ರೌಂಡಿನ ಬದಿಯಲ್ಲಿರುವ ಮನೆಯಿಂದ ಆಟವಾಡುವವರಿಗೆ ಹೇಳಿದ ಕೂಡಲೇ ಕುಡಿಯಲು ಕೊಡಪಾನದಲ್ಲಿ ನೀರು ತರುವ ಬಾಲಕ,ಯಾವತ್ತೂ ಆಟಗಾರರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾನೆ ಮತ್ತು ಅವನು ಎಲ್ಲರ ಪ್ರೀತಿಯನ್ನು ಸಂಪಾದಿಸುತ್ತಾನೆ. 


ಆದರೆ ಆಟ ಮುಗಿದು ಕೊನೆಯಲ್ಲಿ ಅದೇ ಕೊಡಪಾನವನ್ನು ಮತ್ತೆ ಆ ಮನೆಗೆ ಹಿಂದಿರುಗಿಸಲು ನಕ್ರ ಮಾಡುವ ಯಾವುದೇ ದುಷ್ಟ ಬಾಲಕ,ಹಿರಿಯ ಆಟಗಾರರ ತೀವ್ರವಾದ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರವಲ್ಲ ಅವನಿಗೆ ಎಲ್ಲರೂ ಸೇರಿ ಚೀಮಾರಿ ಹಾಕುತ್ತಾರೆ ಮತ್ತು ಅವನಿಗೆ ಶಿಸ್ತಿನ ಪಾಠವನ್ನು ಸಹ ಮಾಡುತ್ತಾರೆ.


ಅದರಲ್ಲೂ ಕೆಲವರು..ಒಂದಾನೊಂದು ಕಾಲದಲ್ಲಿ ನಾವು ಚಿಕ್ಕವರಿರುವಾಗ ನಮಗೆ ಕೇವಲ ಬಾಲ್ ಹೆಕ್ಕುವುದು ಮತ್ತು ಕೊಡಪಾನದಲ್ಲಿ ನೀರು ತರುವ ಕೆಲಸ ಅಷ್ಟೇ ಸಿಗುತ್ತಿತ್ತು,ನಾವು ಬ್ಯಾಟ್ ಹಿಡಿದಿದ್ದೇ ಹಲವು ವರ್ಷಗಳ ನಂತರ,ದಶಕದ ನಂತರ.. ಎಂಬ ಉದಾಹರಣೆಗಳ ಮೂಲಕ ಆ ಬಾಲಕನ ಮನ ಪರಿವರ್ತನೆ ಮಾಡಲು ಸಿಕ್ಕಾಪಟ್ಟೆ ಪ್ರಯತ್ನ ಮಾಡುತ್ತಾರೆ.


ಆದರೆ ಆ ಬಾಲಕ ಹುಟ್ಟಿನಿಂದಲೇ ಸ್ವಲ್ಪ ಸೀಂತ್ರಿ(ಎಲ್ಲದಕ್ಕೂ ಅಸಹಕಾರ ಮನೋಭಾವ)ಸ್ವಭಾವ ಹೊಂದಿದ್ದರೆ..." ಪೋಲೆಯೇ ಪೋಲೆಯೇ.. ಎಂಕ್ ಆವಂದ್,ಬೊಡಿತ್ತ್ಂಡ ನಿಕುಲೆ ಪಿರ ಪತೊಂದು ದೀಲೆಯೇ... ಏಪಲ ಯಾನೇ ಕೊಡಪಾನ ದಿವೋಡಾ.... ಪೋಪುಂಡ ನಿಕ್ಲೆಗ್.. ಅಜ್ಜಿ ಬೆಡಿ ನಿಕ್ಲೆನ(ಮಾನ್ಯರೇ.. ಕೇವಲ ಇಂತಹ ಕೆಲಸ ಮಾಡಲೆಂದು ನಾನು ಗ್ರೌಂಡಿಗೆ ಬಂದಿಲ್ಲ,ಆಟ ಕಲಿತು ಸೆಹ್ವಾಗ್,ಸಚಿನ್ ಆಗಬೇಕೆಂಬ ಇಚ್ಛೆಯಿಂದ ಇಲ್ಲಿಗೆ ಬಂದಿರುವೆನು,ಹಾಗಾಗಿ ಕೊಡಪಾನವನ್ನು ಎಂದೆಂದಿಗೂ ಹಿಂದಿರುಗಿಸಲಾರೆನು,ಇದೇ ನನ್ನ ಅಂತಿಮ ನಿರ್ಧಾರ).." ಎಂದು ಹೇಳಿ ಮನೆಗೆ ಓಡಿದರೆ.....


ಮರುದಿನದಿಂದ  ಗ್ರೌಂಡಿನಲ್ಲಿ ಆ ಅಶಿಸ್ತಿನ ಬಾಲಕನ ಮೇಲೆ ಯಾವ  ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವನನ್ನು ನಮ್ಮ ದಾರಿಗೆ ತರಬಹುದು ಎಂದು ಹಿರಿಯರು ಆಟಗಾರರು ವಿಶೇಷ ಚಿಂತನ ಮಂಥನಗಳನ್ನು ಮಾಡುತ್ತಾ ತಮ್ಮ ತಮ್ಮ ಮನೆಗೆ ಮರಳುವುದು ಕೂಡ ಕ್ರಿಕೆಟ್ ನ ಸವಿ ಸವಿ ನೆನಪುಗಳಲ್ಲಿ ಒಂದು.ಚಿಕ್ಕಂದಿನಲ್ಲಿ ಹೆಚ್ಚಾಗಿ ಆ ಅಶಿಸ್ತಿನ ಬಾಲಕ ನಾನೇ ಆಗಿರುತ್ತಿದ್ದೆ.ಈಗ ಮಾತ್ರ ಅಂತಹ ಬಾಲಕರು ಕಂಡು ಬಂದರೆ ಅವರನ್ನು ಅಲ್ಲಲ್ಲಿಯೇ ಬಗ್ಗು ಬಡಿಯುಲು ನಾನೇ ವಿಶೇಷ ಒಲವು ತೋರುತ್ತೇನೆ. 


ಹಿಂದೆ ನಾವೆಲ್ಲಾ ಅಣ್ಣನವರಿಗೆ ಆಗುವುದಿಲ್ಲ ಎಂದು ಹೇಳಿದರೂ ಕೊನೆಯಲ್ಲಿಯೇ ನಾವೇ ಇಂತಹ ಕೆಲಸಗಳನ್ನು ಮಾಡುತ್ತಿದ್ದೆವು,ಆದರೆ ಈಗಿನ ಮಕ್ಕಳು ಪ್ರತಿಭಟಿಸುವುದು  ಮಾತ್ರವಲ್ಲ ಅದರ ಜೊತೆಯಲ್ಲಿಯೇ ಹಿಡಿಶಾಪ ಹಾಕಲು ಕೂಡ  ಮರೆಯುವುದಿಲ್ಲ.ಅವರು ಎಷ್ಟೇ ಶಾಪ ಹಾಕಿದರೂ.. ನಮಗೆ ಗ್ರೌಂಡಿನಲ್ಲಿ ಶಿಸ್ತು ಮುಖ್ಯ. 


ಆದರೂ ಹೆಚ್ಚಿನ ಮಕ್ಕಳು " ಓ ಚೊರೆಪಟ್.. ಶಿಸ್ತು ಫಸ್ಟ್ ಗ್ ಇರೆಗೇ ಇಜ್ಜಿಯೇ..😡😡 (ಮಾನ್ಯರೇ.. ನಿಮಗೆಯೇ ಮೊದಲು ಶಿಸ್ತು ಇಲ್ಲ, ಇನ್ನು ನಮಗೆ ಹೇಳ್ಲಿಕ್ಕೆ ಬರ್ಬೇಡಿ)" ಎಂದು ಹೇಳುವ ಮೂಲಕ ಪೆದಂಬು(ಎದುರು ಮಾತಾಡುವುದು) ಮಾತಾಡುವುದು,ಇತ್ತೀಚಿಗಿನ ದಿನಗಳಲ್ಲಿ ಅಧಿಕವಾಗುತ್ತಾ ಬರುತ್ತಿರುವುದು ಕೂಡ ಒಂದು ಗಂಭೀರ ವಿಷಯವೇ ಆಗಿದೆ.



#ವಿಷಯ_ಎಂತ_ಗೊತ್ತುಂಟಾ.. 


Ab Pacchu

Moodubidire 


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..