ಮೊಬೈಲ್ ಗೇಮು ಮತ್ತು ಗ್ರೌಂಡಿನ ಆಟ..


 

ಪ್ರತೀ ಗ್ರೌಂಡಿನಲ್ಲಿ ಒಬ್ಬ ಕೊಡುಗೈ ದಾನಿ ಇದ್ದೇ ಇರುತ್ತಾನೆ  ಮತ್ತು  ಪ್ರತೀ ಸಲ ಬಾಲ್ ಒಡೆದು ಹೋದಾಗ ಇಲ್ಲವೇ ಬಾಲ್ ಬಿಸಾಡಿ ಹೋದಾಗ ದೇವರಂತೆ ಅವನು ಎಲ್ಲರಿಗೂ ಅತೀ ಹೆಚ್ಚು ನೆನಪಾಗಿ ಬಿಡುತ್ತಾನೆ.


ಈಗ ಆಟವಾಡಲು ಎಲ್ಲರಿಗೂ ಬಾಲ್,ಬ್ಯಾಟ್ ಅಂತಹ ದೊಡ್ಡ ಸಮಸ್ಯೆಯೇ ಅಲ್ಲ.ಆದರೆ ಚಿಕ್ಕಂದಿನಲ್ಲಿ ಇಂತವರು ಇರದಿದ್ದರೆ ಗ್ರೌಂಡಿನಲ್ಲಿ ಆಟವೇ ಮುಂದುವರಿಯುತ್ತಿರಲಿಲ್ಲ.ಪ್ರತೀ ಹೊಸ ಬಾಲ್ ಕೂಡ ಆವಾಗ ನಮಗೆ ಗಗನ ಕುಸುಮವೇ ಆಗಿತ್ತು.


ಆಗ ಆಡಲು ಬೇಕಾದಷ್ಟು ಜನ ಇದ್ದರು,ಆದರೆ ಬಾಲ್ ತೆಗೆಸಿಕೊಡುವವರು ಕಮ್ಮಿ ಇದ್ದರು.ಈಗ ಬಾಲ್ ಬ್ಯಾಟ್ ಏನೋ ರಾಶಿ ರಾಶಿಯೇ ಇದೆ,ಆದರೆ ಆಟವಾಡುವುದಕ್ಕಾಗಿ ಗ್ರೌಂಡಿನಲ್ಲಿ ಒಂದತ್ತು ಜನ ಒಟ್ಟು ಮಾಡುವುದೇ ಭಯಂಕರ ಕಷ್ಟವಾಗಿ ಬಿಟ್ಟಿದೆ.ಗ್ರೌಂಡಿಗೆ ಬನ್ನಿ ಎಂದು ಕೈ ಕಾಲು ಹಿಡಿಯಬೇಕಾದ ಪರಿಸ್ಥಿತಿಯೇ ನಿರ್ಮಾಣವಾಗಿ ಬಿಟ್ಟಿದೆ. 


ಇಂದು ಮೊಬೈಲ್ ಇನ್ನಿಲ್ಲದಂತೆ ಎಲ್ಲಾ ಕಡೆ ವಿಜೃಂಭಿಸಿದೆ,ಅದು ಮಕ್ಕಳ ಮೈದಾನದ ಆಟವನ್ನು ಹಾಗೇ ನಿಧಾನಕ್ಕೆ ಕಸಿದುಕೊಳ್ಳುತ್ತಿದೆ,ಗ್ರೌಂಡಿಗೆ ಹೋಗಿ ಆಟವಾಡುವ ಉಮೇದು   ಈಗೀನ ಕಾಲದ ಪುಟ್ಟ ಮಕ್ಕಳಲ್ಲಿ ಕಂಡು ಬರುತ್ತಲೇ ಇಲ್ಲ. 


ಸಂಜೆಯ ವೇಳೆ ಎಲ್ಲಾದರೂ ಖಾಲಿ ಖಾಲಿಯಾಗಿ ಬಣಗುಡುವ ಮೈದಾನ ಕಣ್ಣಿಗೆ ಬಿದ್ದರೆ ಅದಕ್ಕಿಂತ ಬೇಜಾರಿನ ಸಂಗತಿ ನಿಜವಾಗಿಯೂ ಬೇರಾವುದೂ ಇಲ್ಲ.ಚಿಕ್ಕಂದಿನಲ್ಲಿ ಆದರೆ ನಾವೆಲ್ಲರೂ ಮನೆಯ ಸುತ್ತ ಮುತ್ತ,ಗುಡ್ಡ,ಗದ್ದೆ ಎಲ್ಲೇ ಸ್ವಲ್ಪ ಜಾಗ ಕಂಡರೂ ಇಲ್ಲಿ 30 ಯಾರ್ಡ್ ಕ್ರಿಕೆಟ್ ಆಡಬಹುದೇ,ಫುಲ್ ಗ್ರೌಂಡ್ ಕ್ರಿಕೆಟ್ ಆಡಬಹುದೇ ಎಂದೇ ಲೆಕ್ಕಾಚಾರ ಹಾಕುತ್ತಿದ್ದೆವು.


ಆವಾಗ ಕೂಡ ಬಿಸಿಲು ಅದರಷ್ಟಕ್ಕೆ ಸುಡುತ್ತಿತ್ತು,ಮಳೆ ಇನ್ನಿಲ್ಲದಂತೆ ಸುರಿಯುತ್ತಿತ್ತು...ಆದರೆ ಬಿಸಿಲು ಮಳೆಯನ್ನು ಲೆಕ್ಕಿಸದೇ ನಮ್ಮೆಲ್ಲರ ಆಟ ಹಾಗೇ ಮುಂದುವರಿಯುತ್ತಿತ್ತು.ಅದರಲ್ಲೂ ಆದಿತ್ಯವಾರದ ದಿನ ಎಲ್ಲರೂ ಇಡೀ ದಿನ ಮೈದಾನದಲ್ಲಿಯೇ ಇರುತ್ತಿದ್ದೆವು, ಕೇವಲ ಊಟ ಮಾಡಲು ಮನೆಗೆ ಹೋಗಿ ಮತ್ತೆ ಗ್ರೌಂಡಿಗೆ ಓಡೋಡಿ ಬಂದು ಹಾಜರಿ ಹಾಕುತ್ತಿದ್ದೆವು. 


ಏನೇ ಹೇಳಿ ಈಗೀನ ಮೊಬೈಲ್ ನಲ್ಲಿ ಎಂತಹ ಅದ್ಭುತ ಗೇಮ್ ಆಟವಾಡಿದರೂ,ಬಾಲ್ಯದಲ್ಲಿ ಗ್ರೌಂಡಿಗೆ ಹೋಗಿ ಆಟವಾಡದೇ ಇದ್ದರೆ ಅದೊಂದು ಎಂತಹ ಬಾಲ್ಯ. 


ಸಂಜೆಗೆ ಸ್ವಲ್ಪ ಕ್ರಿಕೆಟ್,ಸಂಜೆ ಮುಗಿಯುವ ಹೊತ್ತಿನಲ್ಲಿ ಕಬಡ್ಡಿ, ಕೆಲವೊಂದು ದಿನ ಗ್ರೌಂಡಿನ ಮತ್ತೊಂದು ಮಗ್ಗುಲಲ್ಲಿ ಇರುವ ಕೊರ್ಟಿನಲ್ಲಿ ವಾಲಿಬಾಲ್,ಬೆಳಿಗ್ಗೆ ಜಾವದ ಶಟಲ್, ಮಳೆಗಾಲದಲ್ಲಿ ನೆನೆಯುತ್ತಾ ಜಾರುತ್ತಾ ಗದ್ದೆಯಲ್ಲೊಂದು ಫುಟ್ಬಾಲ್.. ಇಂತಹದ್ದೆಲ್ಲ ಆಟಗಳು ಇರದಿದ್ದರೆ ನಿಜವಾಗಿಯೂ ಅದೊಂದು ಎಂತಹ ಬಾಲ್ಯ ಎಂದೇ ಅನ್ನಿಸುತ್ತದೆ. 


ಬರೀ ಆಟವಲ್ಲ.. ಹಿಂದೆ ಎಲ್ಲಾ ಹೆಚ್ಚಾಗಿ ಸ್ನೇಹಿತರು ಆಗುತ್ತಿದ್ದುದೇ ಊರಿನ ಆಟದ ಮೈದಾನದಲ್ಲಿಯೇ. ಆಟದ ಮೈದಾನದ ಸ್ನೇಹಕ್ಕೆ ವಯಸ್ಸಿನ ಅಂತರವೇ ಇರುತ್ತಿರಲಿಲ್ಲ. ನಮಗಿಂತ ದೊಡ್ಡ ಅಣ್ಣನವರು ಕೂಡ ನಮಗೆ ಸಲಿಗೆಯ  ಸ್ನೇಹಿತರೇ,ನಮಗಿಂತ ಚಿಕ್ಕವರು ಕೂಡ ನಮ್ಮ ಅಕ್ಕರೆಯ ಗೆಳೆಯರೇ,ನಮ್ಮ ವಯಸ್ಸಿನವರು ಅಂತು ಎಂದೆಂದಿಗೂ ನಮಗೆ  ಚಡ್ಡಿ ದೋಸ್ತಿಗಳೇ ಆಗಿ ಬಿಡುತ್ತಿದ್ದರು.


ಅಲ್ಲೊಂದು ಆತ್ಮೀಯತೆ ಹಾಗೆ ಬೆಳೆದು ಬಿಡುತ್ತಿತ್ತು,ಊರಿನ ಮೈದಾನ ಅದಕ್ಕೊಂದು ಅವಕಾಶ ಮಾಡಿಕೊಡುತ್ತಿತ್ತು.ಆಟದ ನಂತರವೂ ಒಂದಷ್ಟು ಹರಟೆ, ನಗು,ವಿಚಾರ ವಿನಿಮಯಗಳು ಆ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿತ್ತು. 


ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈಗೆ ಮೊಬೈಲ್ ಕೊಡುವುದಕ್ಕಿಂತಲೂ ಹೆಚ್ಚಾಗಿ ಮೈದಾನಕ್ಕೆ ತೆರಳಿ ಆಟವಾಡಲು ಪ್ರೇರೆಪಿಸುವ ಕೆಲಸ ಹೆತ್ತವರೇ ಮಾಡಬೇಕು.ಇಲ್ಲದಿದ್ದರೆ  ಚಿನ್ನದಂತಹ ಬಾಲ್ಯದ ಕೆಲವು ಅಮೂಲ್ಯ ಘಳಿಗೆಗಳನ್ನು ನಿಮ್ಮ ಮಕ್ಕಳಿಂದ ಸ್ವತಃ ನೀವೇ ಕಸಿದುಕೊಂಡಂತೆ ಆಗುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.


ಯಾವುದೇ ಸಣ್ಣಪುಟ್ಟ ಆಟವಿರಲಿ.ಮಕ್ಕಳಿಗೆ ಮನೆಯಿಂದ ಹೊರಗೆ ಕಳುಹಿಸಿ ಆಟವಾಡಲು ಪ್ರೋತ್ಸಾಹ ನೀಡಿ. ಹೇಗೆ ಅದು ಅವರ ದೈಹಿಕ ಸಾಮರ್ಥ್ಯಕ್ಕೂ ಒಳ್ಳೆಯದೋ ಅದೇ ರೀತಿ ಒಂದಷ್ಟು ಜನರೊಂದಿಗೆ ಬೆರೆಯುವುದು,ಸ್ನೇಹ ಬೆಳೆಸುವುದು ಸಾಮಾಜಿಕವಾಗಿ ಅವರ ಬೆಳವಣಿಗೆಗೂ ಕೂಡ ಅಷ್ಟೇ ಅತ್ಯಗತ್ಯ. 


ಹೊಸ ಬಾಲ್ ನ  ಬಾಕ್ಸ್ ಕಂಡಾಗ ಹಿಂದಿನ ನನ್ನೆಲ್ಲಾ ಅಣ್ಣನವರೆಲ್ಲರೂ ಅತಿಯಾಗಿ ನೆನಪಾದರು,ಎಲ್ಲಾ ಬಾಲ್  ದಾನಿಗಳಿಗೆ ಜಯವಾಗಲಿ... 



.....................................................................................


#ಏನೋ_ಒಂದು


Ab Pacchu

Moodubidire 


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..