ಒಂದು ಘೀ ರೋಸ್ಟ್ ಪುರಾಣ
ಕರಾವಳಿ ಎಂದ ತಕ್ಷಣ ಜನರಿಗೆ ಮೊದಲು ನೆನಪಾಗುವ ಹಲವಾರು ವಿಷಯಗಳಲ್ಲಿ ಇಲ್ಲಿಯ ಫುಡ್ ಕೂಡ ಒಂದು. ಅಂತಹ ಹಲವು ಫುಡ್ ಗಳಲ್ಲಿ ಬಹಳನೇ ಫೇಮಸ್ ಆದ,ಮಾಡುವ ಕ್ರಮದಿಂದಲೇ ತುಂಬಾನೇ ವಿಶಿಷ್ಟವಾದ ಹಾಗೂ ಅಷ್ಟೇ ರುಚಿಯಾದ,ಸೊಗಸಾದ,ಆಕರ್ಷಕವಾದ ಫುಡ್ ಒಂದರ ಬಗ್ಗೆಯೇ ನಾವಿತ್ತು ಸ್ವಲ್ಪ ಡಿಟೈಲ್ ಆಗಿ ಹರಟೆ ಹೊಡೆಯೋಣ.
ಮಂಗಳೂರು,ಉಡುಪಿ ಹಲವು ವಿಶಿಷ್ಟ ಖಾದ್ಯಗಳನ್ನು ಜಗತ್ತಿಗೆ ನೀಡುವ ಮೂಲಕ ಭೋಜನ ಪ್ರೀಯರ ಜಿಹ್ವೆಯನ್ನು ನಿರಂತರವಾಗಿ ಕಾಲಕಾಲಕ್ಕೆ ತಣಿಸುತ್ತಲೇ ಬಂದಿದೆ.ಅಂತಹ ರೆಸಿಪಿಗಳು ಮೂಲತಃ ಹುಟ್ಟಿದ್ದು ಇಲ್ಲಿಯ ಮಣ್ಣಿನಲ್ಲಿಯೇ.ಆ ನಂತರ ಜಗತ್ತಿನ ಆಹಾರದ ತಟ್ಟೆಯೊಳಗೆ,ವಿಸ್ತಾರವಾದ ಥಾಲಿಯೊಳಗೆ ತನ್ನದೊಂದು ಸ್ಥಾನವನ್ನು ಗುರುತು ಹಾಕಿಕೊಂಡು ಅದನ್ನು ಮತ್ತಷ್ಟು ಭದ್ರಗೊಳಿಸುವತ್ತ ಅವುಗಳು ವೇಗವಾಗಿ ಎಲ್ಲೆಡೆ ದಾಪುಗಾಲು ಹಾಕಿದ್ದು ಮಾತ್ರವಲ್ಲ ಹಾಗೇ ರಾರಾಜಿಸಿದ್ದು ಈಗ ಅಂತು ಇತಿಹಾಸ.ಅಂತಹ ಅತ್ಯದ್ಭುತ ಅಡುಗೆಗಳಲ್ಲಿ ಒಂದು ಈ "#ಘೀ_ರೋಸ್ಟ್".
ಕುಂದಾಪುರ ಎಂದರೆ ಮುಖ್ಯವಾಗಿ ನಾಲ್ಕು ವಿಷಯಗಳು ನೆನಪಾಗಿ ಬಿಡುತ್ತದೆ.ಒಂದು ಇಲ್ಲಿ ಇರುವ ಕರಾವಳಿಯ ಸಂಸ್ಕೃತಿ,ಎರಡನೆಯದ್ದು ಕುಂದಾಪುರ ಕನ್ನಡ ಭಾಷೆಯ ಆ ಸೊಗಡು,ಮೂರನೆಯದ್ದು" ಚಂದದ ಲೇಡಿ" ಬಲು ರುಚಿಕರ ಕಾಣೆ ಮೀನು... ಖಂಡಿತವಾಗಿಯೂ ನಾಲ್ಕನೆಯದ್ದು ಅಂತ ಇದ್ದರೆ,ಯಾವುದೇ ಡೌಟೇ ಬೇಡ ಅದುವೇ ಇಲ್ಲಿಯ "#Chicken_Ghee_Roast".
ಹೌದು ಇಂದು ಮಂಗಳೂರು,ಉಡುಪಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ಸಿಕ್ಕಾಪಟ್ಟೆ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ.. ದಿನ ದಿನಕ್ಕೂ ಆ ಅಭಿಮಾನಿ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಚಿಕನ್ ಘೀ ರೋಸ್ಟ್ ಜಗತ್ತಿಗೆ ಕುಂದಾಪುರದ್ದೇ ಕೊಡುಗೆ.
Chicken ghee roast ಅಂದ ಕೂಡಲೇ ಕುಂದಾಪುರ ಮಾತ್ರವಲ್ಲ ನಿಮಗೆ Shetty Lunch home ಕೂಡ ಅಷ್ಟೇ ನೆನಪಾಗಿ ಬಿಡಬೇಕು.ಕಾರಣ ಇದರ ಸಂಪೂರ್ಣ ಶ್ರೇಯ ಸಲ್ಲುವುದು ಅವರಿಗೆನೇ.ಜಗತ್ತಿಗೆ ಮೊಟ್ಟ ಮೊದಲು ಈ ರೆಸಿಪಿಯನ್ನು ಪರಿಚಯಿಸಿದ್ದು ಅದು ಅವರೇ.ಈಗಲೂ ಹೊಟೇಲು ಉದ್ಯಮ ನಡೆಸುತ್ತಿರುವ ಆ ಫ್ಯಾಮಿಲಿಗೆ ಇದು ಅವರ ಅಜ್ಜಿ ಕಾಲದ ರೆಸಿಪಿಯಂತೆ.ಆ ನಂತರ ಮೊಮ್ಮಗಳ ಮೂಲಕ ಇದು ಇಂದು ಮತ್ತಷ್ಟು ಎಲ್ಲೆಡೆ ವ್ಯಾಪಿಸಿ ಪ್ರಸಿದ್ಧಿಯ ಉತ್ತುಂಗಕ್ಕೆ ಏರಿ ಬಿಟ್ಟಿದೆ.
ಈ ಘೀ ರೋಸ್ಟ್ ಬಗ್ಗೆಯೇ ಬರೆಯಲು ಕಾರಣವೂ ಕೂಡ ಇದೆ.ಇದು ಜನರಲ್ಲಿ ಆಸಕ್ತಿ ಹುಟ್ಟಿಸುವುದು ಕೇವಲ ಅದರದ್ದೊಂದು ಸ್ವರ್ಗ ಸಮಾನವಾದ ರುಚಿಗಾಗಿ ಮಾತ್ರವಲ್ಲ, ಅದರ ಸೀಕ್ರೆಸಿಗಾಗಿ ಕೂಡ ಇದು ಬಹಳನೇ ಕುತೂಹಲವನ್ನು ಕೆರಳಿಸಿಬಿಡುತ್ತದೆ.
ಹೌದು ಈ ಘೀ ರೋಸ್ಟ್ ನ ಗಮ್ಮತ್ ಎಂತ ಗೊತ್ತುಂಟಾ. ಇದು ಕುಂದಾಪುರದ ಶೆಟ್ಟಿ ಫ್ಯಾಮಿಲಿಯೊಂದರ ಸೀಕ್ರೆಟ್ ರೆಸಿಪಿ. ನೀವು ಹೇಗೆ ಘೀ ರೋಸ್ಟ್ ಮಾಡಿದರೂ ಅದರಲ್ಲಿ Shetty Lunch Home ನವರ ಆ ರುಚಿ, ಆ ಜಾದೂ ಕಾಣಲು ಸಾಧ್ಯವೇ ಇಲ್ಲ. ಅದರ ಗುಟ್ಟು ಅವರು ಕೂಡ ಬಿಟ್ಟು ಕೊಡುವುದಿಲ್ಲ.ಅವರು ಹೇಳಿದಂತೆ ಮಾಡಿದರೂ ಸ ಆ ರುಚಿ ನಮ್ಮ ಮನೆಯ ಘೀ ರೋಸ್ಟ್ ಗೆ ಬರಲು ಸಾಧ್ಯವಿಲ್ಲ.
ಕೇವಲ Shetty Lunch home ನ ಆ ರುಚಿಗಾಗಿ ಕುಂದಾಪುರಕ್ಕೆ ಕಾರು ಮಾಡಿಕೊಂಡು ಬೆಂಗಳೂರಿನಿಂದ ಬಂದು ಕೂಡ ಚಿಕನ್ ಘೀ ರೋಸ್ಟ್ ತಿಂದು ಹೋಗುತ್ತಾರೆ ಎಂದರೆ ಊಹಿಸಿ ಅದು ಅದೆಂತಹ ಮ್ಯಾಜಿಕ್ ಮಾಡಿದೆ ಎಂದು. ಅಷ್ಟು ಮಾತ್ರವಲ್ಲ ಮುಂಬೈಯಲ್ಲಿರುವ ಬಾಲಿವುಡ್ ನಟರಿಗೂ ಕೂಡ ಕುಂದಾಪುರದ Shetty Lunch home ನ ಚಿಕನ್ ಘೀ ರೋಸ್ಟ್ ನ ಪಾರ್ಸೆಲ್ ನಿರಂತರವಾಗಿ ತಲುಪುತ್ತಿರಲೇ ಬೇಕು ಎಂದರೆ ಬಾಲಿವುಡ್ಡಿಗರು ಅದೆಷ್ಟು ಬೆರಳು ಚೀಪಿ ಚೀಪಿ ಘೀ ರೋಸ್ಟ್ ನ ಸವಿಯನ್ನು ಹೊಂದಲು ಬಯಸುತ್ತಾರೆ ಎಂದು ಒಮ್ಮೆ ನೀವೇ ಆಲೋಚಿಸಿ.
ಅಂದ ಹಾಗೆ ಚಿಕನ್ ಘೀ ರೋಸ್ಟ್ ಗೆ ಅಂತಹ ಮಹಾನು ಜಗತ್ತು ಕಂಡು ಕೇಳರಿಯದ Ingredients ಏನೂ ಅವರು ಹಾಕುವುದಿಲ್ಲ.ಅತ್ಯಂತ ಕಡಿಮೆ Ingredients ಹಾಕಿ ಮಾಡುವ ರೆಸಿಪಿ ಇದು. ಆದರೆ ಮಾಡುವ ಆ ಪ್ರಾಸೆಸ್ ಇದೆಯಲ್ಲಾ.. ಅದಕ್ಕಾಗಿಯೇ ಘೀ ರೋಸ್ಟ್ ವಿಶಿಷ್ಟ ಎನಿಸುವುದು ಮಾತ್ರವಲ್ಲ ಆ ಸರಿಯಾದ ವಿಧಾನದಲ್ಲಿ ಮಾಡಿದರೇನೇ ಒಂದು ರೇಂಜಿಗೆ ಮೂಲ ಘೀ ರೋಸ್ಟ್ ನ ರುಚಿಯ ಪಕ್ಕಕ್ಕೆ ನಮ್ಮ ಘೀ ರೋಸ್ಟ್ ಕೂಡ ಬಂದು ನಿಲ್ಲಬಹುದು.
ಇದರ ಹೆಸರೇ ಘೀ ರೋಸ್ಟ್. ತುಪ್ಪ ಹಾಕಲು ಕಂಜೂಸ್ ಮಾಡುವವರು,ಕೈ ಹಿಂದೆ ಮುಂದೆ ಮಾಡುವವರು ಇದನ್ನು ಮಾಡಲು ಮನಸ್ಸೇ ಮಾಡಬಾರದು. ಮೂಲ ಚಿಕನ್ ಘೀ ರೋಸ್ಟ್ ರೆಸಿಪಿಯಲ್ಲಿ ಒಂದು ಕೆಜಿ ಚಿಕನ್ ಗೆ ಸರಿ ಸುಮಾರು 200 ml ತುಪ್ಪದ ಬಳಕೆ ಅಂದರೆ ಹೆಚ್ಚು ಕಡಿಮೆ ಕಾಲು ಕೆಜಿ ತುಪ್ಪದ ಬಳಕೆ ಆಗುತ್ತದೆ ಎಂದರೆ ಯೋಚಿಸಿ ಇದ್ಯಾಕೆ ಊಟದ ಮೆನುವಿನಲ್ಲಿ ಅಷ್ಟೊಂದು Expensive ಆಗಿದೆ ಎಂದು.
ಬರೀ ತುಪ್ಪ ತುಂಬಾನೇ ಬಳಸುತ್ತಾರೆ ಎಂದು ಘೀ ರೋಸ್ಟ್ ಫೇಮಸ್ ಮತ್ತು Expensive ಆಗಿದ್ದು ಅಲ್ಲ... ಇದರ Preparation ಮತ್ತು Cooking ಎಲ್ಲವನ್ನೂ ಸೇರಿ ಬರೋಬ್ಬರಿ 90 ನಿಮಿಷ ಅಂದರೆ ಹೆಚ್ಚು ಕಡಿಮೆ ಒಂದೂವರೆ ಗಂಟೆ ಆದರೂ ಬೇಕು.ಏಕೆಂದರೆ Low Flame ನಲ್ಲಿ ಘೀ ರೋಸ್ಟ್ ಮಸಾಲೆ ಚಿಕನ್ ಜೊತೆಗೆ ಹದವಾಗಿ ರೋಸ್ಟ್ ಆಗಿ ಆಗಿಯೇ ಚಿಕನ್ ಘೀ ರೋಸ್ಟ್ ಎಂದೆನಿಸುವ ಆ ಪರಿ... ನಿಜವಾಗಿಯೂ ವೆರೀ ವೆರೀ ಸ್ಲೋ ಕುಕ್ಕಿಂಗ್ ಪ್ರಾಸೆಸ್.
ಶಾಂತಿ,ಸಮಾಧಾನ,ತಾಳ್ಮೆ, ವ್ಯವಧಾನ, ಸಹನೆ ಎಲ್ಲವೂ ಇದ್ದುಕೊಂಡು ಘೀ ರೋಸ್ಟ್ ಮಾಡಲು ಸೌಟು ಹಿಡಿಯುವುದೇ ಈ ರೆಸಿಪಿ ನಿಮ್ಮಿಂದ ಬೇಡುವ ಅತೀ ದೊಡ್ಡ ಶ್ರದ್ಧೆ.ಮನಸ್ಸನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡು ಎಂತಹ ಸಂಧರ್ಭದಲ್ಲಿಯೂ ಸಹ Low Flame ನಿಂದ, ಮೀಡಿಯಂ ಹಾಗೂ ಹೈ ಪ್ಲೇಮ್ ಗೆ ಬೆಂಕಿಯನ್ನು ಹೊರಳಿಸುವ ಮನಸ್ಸು ಮಾಡದಿದ್ದರೆ ಒಂದೊಳ್ಳೆಯ ರುಚಿಯ ಘೀ ರೋಸ್ಟ್ ನೀವೂ ಸಹ ಮಾಡಬಹುದು.
ಆದರೆ ನಾವು ನೀವುಗಳು ಹೋಗುವ ಹೋಟೆಲ್ ನಲ್ಲಿ ಇಷ್ಟು ಸಮಾಧಾನದಿಂಧ ಚಿಕನ್ ಘೀ ರೋಸ್ಟ್ ಮಾಡುವುದು ಸ್ವಲ್ಪ ಕಷ್ಟವೇ, ಹಾಗಾಗಿ ಮೊದಲೇ ಅರ್ಧದಷ್ಟು ಅಡುಗೆಯನ್ನು ಸಿದ್ಧ ಮಾಡಿಕೊಂಡಿರುತ್ತಾರೆ ಅವರು ಅಂದರೆ ಚಿಕನ್ ಅನ್ನು ಸ್ವಲ್ಪ ಕುಕ್ ಮಾಡಿ ಇಟ್ಟುಕೊಂಡಿರುತ್ತಾರೆ.ಆದರೂ ಹೋಟೆಲ್ ನಲ್ಲಿ ಸಹ ಚಿಕನ್ ಘೀ ರೋಸ್ಟ್ ಆರ್ಡರ್ ಮಾಡಿದ ಕೂಡಲೇ ಅದು ರಪ್ಪನೇ ನಿಮ್ಮೆದುರು ಬಂದು ನಿಲ್ಲುವುದಿಲ್ಲ.ಅದು ನಿಮ್ಮ ತಟ್ಟೆಯ ಮೇಲೆ ಬರಲು ಹೆಚ್ಚು ಕಡಿಮೆ ಅರ್ಧ ಗಂಟೆ, ಕೆಲವೊಮ್ಮೆ ಮುಕ್ಕಾಲು ಗಂಟೆ ಕೂಡ ಹಿಡಿಯುತ್ತದೆ.
ಅದಕ್ಕಿಂತ ಬೇಗ ಅಂದರೆ ಐದು, ಹತ್ತು ನಿಮಿಷದಲ್ಲಿ ಘೀ ರೋಸ್ಟ್ ನಿಮ್ಮ ಮುಂದೆ ಇತ್ತು ಎಂದಾದರೆ ದಯವಿಟ್ಟು ರುಚಿಯ ವಿಷಯದಲ್ಲಿ ಅಂತಹ ದೊಡ್ಡ Expectation ಇಟ್ಟುಕೊಳ್ಳಬೇಡಿ.ಜಸ್ಟ್ ಹೊಟ್ಟೆ ತುಂಬಿಸಿಕೊಂಡು ದುಬಾರಿ ಬಿಲ್ ಪೇ ಮಾಡಿ ಎದ್ದು ಬನ್ನಿ ಅಷ್ಟೇ. ಏಕೆಂದರೆ ಘೀ ರೋಸ್ಟ್ ಎಂಬುವುದು Instant ಫುಡ್ ಅಲ್ಲವೇ ಅಲ್ಲ.
ಅದರಲ್ಲೂ ಕುಂದಾಪುರದ Shetty Lunch home ನಲ್ಲಿ ನಿಮಗೆ ಚಿಕನ್ ಘೀ ರೋಸ್ಟ್ ತಿನ್ನಬೇಕಾದರೆ ಕೆಲವೊಮ್ಮೆ ರಶ್ ಹವರ್ ನಲ್ಲಿ ಮೊದಲೇ ಕಾಲ್ ಮಾಡಿ ಬುಕ್ ಕೂಡ ಮಾಡಬೇಕಾಗುತ್ತದೆ.ಏಕೆಂದರೆ ಚಿಕನ್ ಘೀ ರೋಸ್ಟ್ ಗಾಗಿ ಅಲ್ಲಿಗೆ ಜನರು ಮಕರಂದವಿರುವ ಹೂವನ್ನು ಮುತ್ತಿಕೊಳ್ಳಲು ಬರುವ ದುಂಬಿಯಂತೆ ಬೇರೆ ಬೇರೆ ಕಡೆಗಳಿಂದ ಮೆರವಣಿಗೆ ಹೊರಡುತ್ತಾರೆ. ಕೇವಲ ಘೀ ರೋಸ್ಟ್ ಗಾಗಿಯೇ ಅಲ್ಲೊಂದು ಉದ್ದದ ಕ್ಯೂ ನೋಡಲು ಸಿಗುವುದು ಸಾಮಾನ್ಯದ ಸಂಗತಿ.
ಇವರ ಈ ಹೋಟೆಲ್ ನ ಕಥೆ ಆರಂಭವಾಗುವುದು 1950 ರ ಅಸುಪಾಸಿನಲ್ಲಿ. ಬಹುಶಃ 1957 ಸರಿಯಾದ ವರ್ಷ ಎಂದು ಕಾಣುತ್ತದೆ.ಇಲ್ಲಿಯೇ ಮೊದಲ ಬಾರಿಗೆ ಚಿಕನ್ ಘೀ ರೋಸ್ಟ್ ಪ್ರಪಂಚದೆದುರು ಅನಾವರಣಗೊಂಡಿದ್ದು ಮತ್ತು ಶೆಟ್ಟಿ ಫ್ಯಾಮಿಲಿಯೊಂದು ಅತಿ ವಿಶಿಷ್ಟ ರೆಸಿಪಿಯನ್ನು ಅನ್ನು ಜಗತ್ತಿಗೆ ಪರಿಚಯಿಸಿದ್ದು. ಈಗಲೂ ಆ ಫ್ಯಾಮಿಲಿಯ ಪೀಳಿಗೆಗಳು ಹೋಟೆಲ್ ಅನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕುಂದಾಪುರ ಮಾತ್ರವಲ್ಲ ಮಂಗಳೂರಿನ ಬಲ್ಮಠದ ಬಳಿ ಕೂಡ ಅವರ ಬ್ರಾಂಚ್ ಇದೆ.
ನೀವು ಒಮ್ಮೆ Shetty Lunch Home ನ ಘೀ ರೋಸ್ಟ್ ತಿಂದರೆ ಖಂಡಿತವಾಗಿಯೂ ಅದಕ್ಕೆ ಫಿದಾ ಆಗಿ ಬಿಡುತ್ತೀರಿ. ನೀವು ಸಿಕ್ಕಾಪಟ್ಟೆ ಭೋಜನ ಪ್ರಿಯರಾಗಿದ್ದು ಒಮ್ಮೆ ಅಲ್ಲಿಯ ಘೀ ರೋಸ್ಟ್ ತಿಂದರೆ ಮತ್ತೆ ಮತ್ತೆ ಅಲ್ಲಿಗೆ ಹೋಗುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳುತ್ತೀರಾ ಇಲ್ಲವೇ ಅದಕ್ಕಾಗಿ ಸಪರೇಟು ಆಗಿ ಸಮಯವನ್ನು ಹೊಂದಿಸಿಕೊಂಡು ಅಲ್ಲಿಗೆ ಹೋಗಿ,ಕೈ ಬೆರಳುಗಳನ್ನು ತುಪ್ಪ ಮಾಡಿಕೊಂಡೇ ಘೀ ರೋಸ್ಟ್ ಅನ್ನು ಮನಸ್ಸೋಯಿಚ್ಛೆ ತಿಂದು ಮನಸ್ಸಿಗೆ ತಕ್ಕ ಮಟ್ಟಿನ ಸಮಾಧಾನ ಹೇಳುತ್ತೀರಾ..
ಒಂದು ವೇಳೆ ನೀವು ಪಾಕಪ್ರೀಯರು ಆಗಿದ್ದರೆ, Cooking is my passion ಅಂತ ಪದೇ ಪದೇ ಹೇಳಿಕೊಳ್ಳುವವರು ಆಗಿದ್ದರೆ ನೀವು ಖಂಡಿತವಾಗಿಯೂ ಮಾಡುವ ಮೊದಲ ಕೆಲಸ... ಹೇಗಾದರೂ ಮಾಡಿ ಈ Shetty Lunch home ನ ಘೀ ರೋಸ್ಟ್ ಅನ್ನು ಡೀಕೋಡ್ ಮಾಡಲು ಹೊರಡುವುದು. ಕಷ್ಟ.. ಬಹಳ ಕಷ್ಟ. Authentic ಆಗಿ ಅಲ್ಲಿಯಂತೆ ನಿಮಗೆ ಘೀ ರೋಸ್ಟ್ ಮಾಡಲು ಆಗುವುದೇ ಇಲ್ಲ.
ನೀವು ಬೇಕಾದರೆ ಹತ್ತು ಇಪ್ಪತ್ತು YouTube ವೀಡಿಯೊಗಳನ್ನು ನೋಡಿ, ಒಂದೊಂದರಲ್ಲಿ ಒಂದೊಂದು ವಿಧವೇ ಇರುವುದು. ಕೊನೆಗೆ ನಿಮಗೆಯೇ Confuse ಆಗಿ ಬಿಡುವುದು. ಇದರಲ್ಲಿ ಈಗ ನಾನು ಯಾವುದು ಮಾಡುವುದಪ್ಪಾ ಎಂದು. ಕೊನೆಗೆ ಎಲ್ಲಾ ಐಡಿಯಾವನ್ನು ಮಿಕ್ಸ್ ಮಾಡಿ ಘೀ ರೋಸ್ಟ್ ಮಾಡಿದಾಗ ಅದು ಕೊನೆಗೆ ನಿಮ್ಮದೇ ಒಂದು Own Chicken ghee roast ರೆಸಿಪಿ ಆಗಿರುತ್ತದೆಯೇ ಹೊರತು Shetty Lunch Home ನವರ ರೆಸಿಪಿ ಎಂದು ಹೇಳಲು ಬರುವುದಿಲ್ಲ.
ಆದರೂ ನಮ್ಮವರು ಬಹಳ ಶ್ರದ್ಧೆಯಿಂದ ಏನೇನೋ ಪ್ರಯತ್ನ ಪಟ್ಟು ಘೀ ರೋಸ್ಟ್ ಮಾಡಲು ಹೊರಡುತ್ತಾರೆ ವಿಶೇಷ ಏನೆಂದರೆ ಇದನ್ನು ಹೇಗೆ ಮಾಡಿದರೂ ಆ ಮಾಡುವ ಪ್ರೊಸಿಜರ್ ಸೇಮ್ ಇರುವುದರಿಂದ Shetty Lunch home ನವರಂತೆ ಅಲ್ಲದಿದ್ದರೂ ಒಂದು ರೇಂಜಿಗೆ ಸೊಗಸಾದ ಘೀ ರೋಸ್ಟ್ ನಾವೂ ಸಹ ಮನೆಯಲ್ಲಿಯೇ ತಯಾರು ಮಾಡಬಹುದು.
ಏನೇ ಹೇಳಿ ಈ ತರಹದ ಜಗತ್ತಿನ ಯಾವುದೇ ಸಿಕ್ರೇಟ್ ರೆಸಿಪಿಗಳ ರಹಸ್ಯ ತಿಳಿಯಲು,ಅದನ್ನು ಡಿಕೋಡ್ ಮಾಡಲು ಹೊರಡುವ ಬಗೆ ಯಾವುದೇ ಸಂಶೋಧನೆಗಿಂತ ಕಡಿಮೆ ಏನಲ್ಲ. ಅದರಲ್ಲೂ ಎಂದಿಗೂ ಮಾಡದ, ಮೊದಲ ಬಾರಿಗೆ ಮಾಡಲು ಹೊರಡುವ ರಸಪಾಕಗಳು ಒಂಥರಾ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ನಡೆಸುವ ಪ್ರಯೋಗ ಇದ್ದ ಹಾಗೆ.ಇಂತಹ ಪ್ರಯೋಗ ಮಾಡುವುದರಲ್ಲಿ ನಮ್ಮ ಮಹಿಳೆಯರು ಬಹಳನೇ ನಿಸ್ಸೀಮರು. ಏನೇ ಹೇಳಿ ಕುಕ್ಕಿಂಗ್ ಒಂದು ಆರ್ಟ್ ಮಾತ್ರವಲ್ಲ.. ತಕ್ಕ ಮಟ್ಟಿನ ಸೈನ್ಸ್ ಕೂಡ ಹೌದು. ಅಡುಗೆಯ ಬಗ್ಗೆ ಅರಿತು ಅಕ್ಷರಗಳಿಗೆ ಉಪ್ಪು ಹುಳಿ,ಸಿಹಿ, ಖಾರ, ಒಗರು ಮತ್ತು ಕೊನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಒಗ್ಗರಣೆ ಹಾಕಿಕೊಂಡು ಅದರ ಬಗ್ಗೆಯೇ ಸೊಗಸಾಗಿ ಲೇಖನ ರೂಪದಲ್ಲಿ ಬರೆದು ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿದಂತೆ ಲಘುವಾಗಿ ಪ್ರಸ್ತುತ ಪಡಿಸಿದರೆ,ಪ್ರವಾಸ ಕಥನದಂತೆ...ಅಡುಗೆಯ ಬರವಣಿಗೆಗಳು ಕೂಡ ಒಂದು ಬಗೆಯ ಸಾಹಿತ್ಯವೇ.
ನನಗೂ ಈ ಘೀ ರೋಸ್ಟ್ ತುಂಬಾ ಇಷ್ಟ. Shetty Lunch Home ನಲ್ಲೂ ಕೂಡ ತಿಂದಿದ್ದೇನೆ. ಹಾಗಾಗಿ ನನಗೆ ಅದರದ್ದೊಂದು ರುಚಿಯ ಪರಿಚಯವಿದೆ.ಮನೆಯಲ್ಲೂ ಅದೇ ರೀತಿ ಮಾಡಲು ಪ್ರಯತ್ನ ಪಟ್ಟಿದ್ದೇನೆ ಕೂಡ.. ಹಲವಾರು ಸಲ ಮಾಡುವಾಗಲೂ ಬೇರೆ ಬೇರೆ ರೀತಿಯಲ್ಲಿ ಟ್ರಯಲ್ ಎಂಡ್ ಎರರ್ ಮೆತಡ್ ನಲ್ಲಿ ಮಾಡಿ ಸದ್ಯಕ್ಕೆ ಒಂದು ರೇಂಜಿಗೆ.. ಆಹಾ... ಎನ್ನುವಂತಹ ನನ್ನ ಬೆನ್ನು ನಾನೇ ತಟ್ಟಿಕೊಂಡು ಶಹಬ್ಬಾಸ್ ಹೇಳಿಕೊಳ್ಳುವಂತಹ ಚಿಕನ್ ಘೀ ರೋಸ್ಟ್ ನಾನೂ ಕೂಡ ಮಾಡಬಲ್ಲೆ.
ಖಂಡಿತವಾಗಿಯೂ ನಾನೂ ಸಹ ಹತ್ತು ಇಪ್ಪತ್ತು ವೀಡಿಯೊಗಳ ರೆಫರೆನ್ಸುಗಳನ್ನು ನೋಡಿದ್ದೇನೆ.ಕೆಲವರು ಅಡುಗೆ ಮಾಡುವವರಿಂದ ಕೂಡ ನೇರವಾಗಿ ಕೇಳಿ ತಿಳಿದುಕೊಂಡಿದ್ದೆನೆ. ಅದರಲ್ಲೂ ಕುಂದಾಪುರದವೇ ಆದ ಸದ್ಯಕ್ಕೆ ಬೆಂಗಳೂರಿನಲ್ಲಿರುವ Chef ನವೀನ್ ಶಂಕರ್ ಅವರೊಂದಿಗೆ ಸಹ ಈ ವಿಷಯವಾಗಿ ದೀರ್ಘವಾದ ವಿಚಾರ ವಿನಿಮಯ ಮಾಡಿಕೊಂಡು ಘೀ ರೋಸ್ಟ್ ನ ಘಮವನ್ನು ಇತ್ತೀಚಿನ ದಿನಗಳಲ್ಲಿ ತಕ್ಕ ಮಟ್ಟಿಗೆ ಹೆಚ್ಚು ಮಾಡಿಕೊಂಡಿದ್ದೇನೆ.
ಅಂದ ಹಾಗೆ ಮತ್ತೊಂದು ವಿಷಯ... ಘೀ ರೋಸ್ಟ್ ಅಂದ ಕೂಡಲೇ ಶುದ್ಧ ಸಸ್ಯಾಹಾರಿಗಳು ಖಂಡಿತವಾಗಿಯೂ ಮೂಗು ಮುರಿಯಬೇಕಾಗಿಲ್ಲ. ಕೇವಲ ಘೀ ರೋಸ್ಟ್ ಮಸಾಲೆ ಒಂದು ಇದ್ದರೆ ಸಾಕು.... ವೆಜ್ ನಲ್ಲೂ ಕೂಡ ಹಲವಾರು ಐಟಂಗಳನ್ನು ನಾವು ಮಾಡಿಕೊಳ್ಳಬಹುದು.
ಮಶ್ರೂಮ್ ಘೀ ರೋಸ್ಟ್, ಗೋಚಿ ಘೀ ರೋಸ್ಟ್,ಬೇಬಿ ಕಾರ್ನ್ ಘೀ ರೋಸ್ಟ್.... ಪನ್ನೀರ್ ಘೀ ರೋಸ್ಟ್ ಅಂತು ಸ್ವರ್ಗವೇ ಬಿಡಿ. ಒಟ್ಟಿನಲ್ಲಿ ಘೀ ರೋಸ್ಟ್ ಮಸಾಲೆ ಒಂದನ್ನು ಮಾಡಲು ಕಲಿತರೆ.. ವೆಜ್ ನವರು ತಮಗೆ ಬೇಕಾದ ಘೀ ರೋಸ್ಟ್ ಮಾಡಿಕೊಳ್ಳಬಹುದು.. ನಾನ್ ವೆಜ್ ಪ್ರೀಯರು ಚಿಕನ್,ಫಿಶ್ ಮುಂತಾದವುಗಳಲ್ಲಿ ಘೀ ರೋಸ್ಟ್ ಮಾಡಿಕೊಂಡು ತುಪ್ಪದ ಬೆರಳು ನೆಕ್ಕ ಬಹುದು.
ಘೀ ರೋಸ್ಟ್ ಬಗ್ಗೆ ಇಷ್ಟು ಹೇಳಿದ ಮೇಲೆ ನಾನು ನಿಮಗೆ ಒಂದು ಘೀ ರೋಸ್ಟ್ ರೆಸಿಪಿ ಅದರಲ್ಲೂ ಘೀ ರೋಸ್ಟ್ ಮಸಾಲೆ ಮಾಡುವುದನ್ನು ಹೇಳಿಕೊಡದಿದ್ದರೆ ಖಂಡಿತವಾಗಿಯೂ ಅದು ಎಷ್ಟೊಂದು ದೊಡ್ಡ ಕ್ಷಮಿಸಲಾಸಾಧ್ಯವಾದ ತಪ್ಪು ಅಲ್ವಾ..
ಡೋಂಟ್ ವರಿ.. ನನಗೆ ಗೊತ್ತಿರುವಷ್ಟು ಹೇಳುತ್ತೇನೆ. ಇದು ಹೀಗೆಯೇ ಎಂದು ನಾನೂ ಕೂಡ ಹೇಳುವುದಿಲ್ಲ. ಈ ರೀತಿ ಮಾಡಿಕೊಂಡರೆ ಕೂಡ ಚೆನ್ನಾಗಿರುತ್ತದೆ ಎಂದಷ್ಟೇ ಹೇಳಬಲ್ಲೆ. ಏಕೆಂದರೆ ನನಗೆ ಇಷ್ಟವಾಗಿದೆ. ಬಹುಶಃ ನಿಮಗೂ ಇಷ್ಟ ಆಗಬಹುದು.
ಸರಿ ಹಾಗಾದರೆ.. ಈಗ ನೇರ ವಿಷಯಕ್ಕೆ ಬಂದು,ಮೊದಲು ಘೀ ರೋಸ್ಟ್ ಮಸಾಲೆ ಮಾಡುವುದು ಹೇಗೆ ಎಂದು ನೋಡುವ.
ನಿಮಗೆ ಘೀ ರೋಸ್ಟ್ ನೋಡಲು ತುಂಬಾನೇ ಕೆಂಪು ಬಣ್ಣದಲ್ಲಿ ಖಡಕ್ ಆಗಿ ಕಂಡರೂ ಸಹ ಖಂಡಿತವಾಗಿಯೂ ಇದಕ್ಕೆ ಯಾವುದೇ ಬಣ್ಣದ ಪುಡಿ, ಟೇಸ್ಟ್ ಮೇಕರ್ ಅಂತಹದ್ದು ಏನೂ ಕೂಡ ಹಾಕುವುದಿಲ್ಲ.ಇದರ ಬಣ್ಣದ ರಹಸ್ಯ ಬ್ಯಾಡಗಿ ಮೆಣಸು ಆಗಿದೆ. ಬ್ಯಾಡಗಿ ಮೆಣಸು ಬಹಳ ಒಳ್ಳೆಯ ಕಲರ್ ಕೊಡುತ್ತದೆ. ಆದರೆ ನೇರವಾಗಿ ಬ್ಯಾಡಗಿ ಮೆಣಸು ಇಲ್ಲಿ ಬಳಸುವಂತಿಲ್ಲ.
ಮೊದಲು ಸುಮಾರು 25 ಬ್ಯಾಡಗಿ ಮೆಣಸನ್ನು ಹಿಂದಿನ ರಾತ್ರಿ ಬಿಸಿ ನೀರಿನಲ್ಲಿ ನೆನೆಯಲು ಹಾಕಿ ಇಡಿ.ಹೌದು ನೀರು ಚೆನ್ನಾಗಿ ಬಿಸಿ ಆದ ನಂತರ ಅದಕ್ಕೆ ಈ ಬ್ಯಾಡಗಿ ಮೆಣಸುಗಳನ್ನು ಹಾಕಿ ಇಟ್ಟರೆ ಆಯಿತು.ಇದು ಬಹಳ ಮುಖ್ಯವಾದ ಪ್ರೋಸೆಸ್.
ಇಂದು ಎರಡು ರೀತಿಯಲ್ಲಿ ನಿಮಗೆ ನಾನು ಘೀ ರೋಸ್ಟ್ ಮಾಡುವ ಬಗ್ಗೆ ಹೇಳುತ್ತೇನೆ. ಮೊದಲ ಪ್ರೋಸೆಸ್ ನಲ್ಲಿ Ingredients ಗಳನ್ನು ಹುರಿಯದೇ ನೇರವಾಗಿ ಪೇಸ್ಟ್ ಮಾಡಿಕೊಳ್ಳುತ್ತಾರೆ, ಇಲ್ಲಿ ಚಿಕನ್ ಅನ್ನು Marination ಕೂಡ ಮಾಡಲ್ಲ. ನೇರವಾಗಿ ಹಸಿ ಚಿಕನ್ ಅನ್ನೇ ಬಳಸುತ್ತಾರೆ. ಎರಡನೆಯ ವಿಧದಲ್ಲಿ Ingredients ಗಳನ್ನು ಮೊದಲಿಗೆ ಡ್ರೈ ರೋಸ್ಟ್ ಕೂಡ ಮಾಡುತ್ತಾರೆ ಮತ್ತು ಚಿಕನ್ ಅನ್ನು Marination ಕೂಡ ಮಾಡುತ್ತಾರೆ. ನಾನು ಎರಡೂ ವಿಧಾನ ಹೇಳುತ್ತಾನೆ. ನಿಮಗೆ ಯಾವುದು ಸುಲಭ ಆಗುವುದೋ ಅದನ್ನೇ ಮಾಡಿ. Ingredients ಗಳನ್ನು ರೋಸ್ಟ್ ಮಾಡಿಕೊಂಡು,ಚಿಕನ್ ಅನ್ನು Marinate ಮಾಡಿ ಮಾಡುವ ಎರಡನೆಯ ವಿಧ ಸ್ವಲ್ಪ ರೆಸ್ಟಾರೆಂಟ್ ಶೈಲಿಯಲ್ಲಿ ಇರುವುದು ಆಯಿತಾ.
ಎರಡೂ ವಿಧಾನದಲ್ಲಿ ಘೀ ರೋಸ್ಟ್ ಮಸಾಲೆ ತಯಾರಿಸುವ ಮತ್ತು ಅದರ Preparation ಸ್ವಲ್ಪ ಬೇರೆ ಬೇರೆ ಇದೆ.. ಆದರೆ ಮಸಾಲೆ ತಯಾರಿಸಿದ ನಂತರ ಎರಡರದ್ದೂ ರೋಸ್ಟ್ ಮಾಡುವ ವಿಧಾನ ಒಂದೇ. .
#ಮೊದಲ_ವಿಧಾನದಲ್ಲಿ...
ಯಾವುದನ್ನೂ ಕೂಡ ಹುರಿಯದೇ ಎಲ್ಲವನ್ನೂ ಹಸಿಯಾಗಿಯೇ ಕಡೆಯಬೇಕು.ಜೀರಿಗೆ,ಕೊತ್ತಂಬರಿ,ಕರಿಮೆಣಸು,ಗೋಡಂಬಿ,ಗಸಗಸೆ, ಶುಂಠಿ ಮತ್ತು ಹಿಂದಿನ ದಿನ ನೀರಿನಲ್ಲಿ ಹಾಕಿಟ್ಟ ಬ್ಯಾಡಗಿ ಮೆಣಸನ್ನು ಚೆನ್ನಾಗಿ ರುಬ್ಬಿ ಬಿಟ್ಟರೆ ಘೀ ರೋಸ್ಟ್ ಮಸಾಲ ರೆಡಿ.ಗ್ರೈಂಡರ್ ನಲ್ಲಿ ರುಬ್ಬಿದರೆ ರುಚಿ ಜಾಸ್ತಿ.
#ಎರಡನೆಯ_ವಿಧಾನದಲ್ಲಿ..
ಜೀರಿಗೆ, ಕೊತ್ತಂಬರಿ, ಕರಿಮೆಣಸು, ಬೆಳ್ಳುಳ್ಳಿ, ಮೆಂತೆ, ಕರಿಮೆಣಸು.. ಇಷ್ಟನ್ನು ಬಾಣಲೆಯಲ್ಲಿ ಯಾವುದೇ ಎಣ್ಣೆ,ತುಪ್ಪ ಹಾಕದೇ ಡ್ರೈ ಆಗಿ ರೋಸ್ಟ್ ಮಾಡಿಕೊಳ್ಳಿ. ಆ ನಂತರ ಇದನ್ನು ಮಿಕ್ಸರ್ ನಲ್ಲಿ ಪುಡಿ ಮಾಡಿಕೊಂಡು.. ಇದಕ್ಕೆ ನಂತರ ಸ್ವಲ್ಪ ಹುಣಸೇ ಹುಳಿ,ನೀರಿನಲ್ಲಿ ಹಿಂದಿನ ದಿನ ನೆನೆಸಿಟ್ಟ ಬ್ಯಾಡಗಿ ಮೆಣಸು ಕೂಡ ಹಾಕಿ ಚೆನ್ನಾಗಿ ರುಬ್ಬಿ ಬಿಟ್ಟರೆ ಎರಡನೆಯ ರೀತಿಯ ಘೀ ರೋಸ್ಟ್ ಮಸಾಲೆ ರೆಡಿ. ನೋಡಿ ಇಲ್ಲಿ ನೀವು ಬೇಕಾದರೆ ಗೋಡಂಬಿ, ಗಸಗಸೆ ಕೂಡ ಹಾಕಿ ಕೊಳ್ಳಬಹುದು. ಕೆಲವರು ಈ ಮೆತಡ್ ಮಾಡುವಾಗ ಅವೆರಡನ್ನು ಹಾಕಿಕೊಳ್ಳುವುದಿಲ್ಲ.ಗೋಡಂಬಿ, ಗಸಗಸೆ ಹಾಕಿದರೆ ಘೀ ರೋಸ್ಟ್ ಇನ್ನೂ ಸ್ವಲ್ಪ ರಿಚ್ ಆಗಿರುತ್ತದೆ ಮತ್ತು ಗ್ರೇವಿ ಸ್ವಲ್ಪ ಥಿಕ್ಕ್ ಆಗುತ್ತದೆ. ಮಸಾಲೆಗೆ ಹಾಕುವ ಸಾಮಗ್ರಿಗಳೆಲ್ಲ ಒಳ್ಳೆಯ ಗುಣಮಟ್ಟದ್ದು ಆಗಿದ್ದರೆ ಘೀ ರೋಸ್ಟ್ ಗೆ ಯಾವತ್ತೂ ರುಚಿ ಹೆಚ್ಚು.
ಎರಡನೆಯ ವಿಧಾನಕ್ಕೆ ಚಿಕನ್ ಅನ್ನು Marination ಮಾಡುತ್ತಾರೆ ಎಂದು ಹೇಳಿದ್ದೆ. ಅದನ್ನು ಹೇಗೆ ಮಾಡುವುದು ಎಂದು ನೋಡೋಣ.
ಒಂದು ಕೆಜಿ ಚಿಕನ್ ಗೆ...
ಅರಶಿನದ ಪೌಡರ್
ಮೆಣಸಿನ ಹುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್.
ಉಪ್ಪು
ನಿಂಬೆ ರಸ
ಸ್ವಲ್ಪವೇ ಸ್ವಲ್ಪ ಮೊಸರು ಹಾಕಿ... ಚೆನ್ನಾಗಿ ಮಿಕ್ಸ್ ಮಾಡಿ ಒಂದು ಇಲ್ಲ ಅರ್ಧ ಗಂಟೆ ಆದರೂ ಪಕ್ಕಕ್ಕೆ ಇಟ್ಟುಬಿಡಿ. ಆ ನಂತರ ಒಂದು ದಪ್ಪ ಅಡಿಯ ಪಾತ್ರೆಯಲ್ಲಿ ನಾಲೈದು ಸ್ಪೂನ್ ತುಪ್ಪ ಹಾಕಿ...Marinate ಮಾಡಿದ ಚಿಕನ್ ಅನ್ನು ಈ ತುಪ್ಪದಲ್ಲಿ ಸ್ವಲ್ಪ ರೋಸ್ಟ್ ಮಾಡಿ.ಚಿಕನ್ ತನ್ನ ಎಣ್ಣೆಯನ್ನೆಲ್ಲಾ ಬಿಡುತ್ತಾ ಬರುವಾಗ, ಲೈಟ್ ಆಗಿ ಬಿಳಿಯ ಬಣ್ಣಕ್ಕೆ ತಿರುಗುವಾಗ ಈ ಚಿಕನ್ ಅನ್ನು ಪಕ್ಕಕ್ಕೆ ತೆಗೆದಿಟ್ಟು ಕೊಳ್ಳಿ. ತುಪ್ಪದಲ್ಲಿ ಸಂಪೂರ್ಣವಾಗಿ ಚಿಕನ್ ಬೇಯಿಸಲು ಹೋಗಬೇಡಿ. ಅರ್ಧ ಬೆಂದಿದ್ದರೆ ಸಾಕು. ಹೀಗೆ ಮಾಡಿದರೆ ತುಪ್ಪ ಬಹಳ ಚೆನ್ನಾಗಿ ಚಿಕನ್ ಗೆ ಸೇರುತ್ತದೆಯಂತೆ.ಎರಡನೆಯ ವಿಧಾನದಲ್ಲಿ ಮೊದಲಿಗೆ ಇಷ್ಟನ್ನು ಮಾಡಿಟ್ಟು ಕೊಳ್ಳಬೇಕು.
ನೋಡಿ ಇದರಲ್ಲಿ ತುಪ್ಪದ ಬಳಕೆ ಹೆಚ್ಚು 150 ml ನಿಂದ 200 ml ವರೆಗೆ ತುಪ್ಪ ಬೇಕಾಗುತ್ತದೆ.ಒಳ್ಳೆಯ ಗುಣಮಟ್ಟದ ಊರಿನ ತುಪ್ಪ ಇದ್ದರೆ ಒಳ್ಳೆಯದು. ತುಪ್ಪ ಹಾಕಲು ಕಂಜೂಸು ಮಾಡಬೇಡಿ.. ಏಕೆಂದರೆ ಇದರ ಹೆಸರೇ ಘೀ ರೋಸ್ಟ್. ಘೀ ರೋಸ್ಟ್ ಅಂತ ತುಪ್ಪದ ಹೊಳೆಯನ್ನು ಕೂಡ ಹರಿಸಬೇಡಿ. ಎಷ್ಟು ಬೇಕೋ ಅಷ್ಟು ನೋಡಿಕೊಂಡು ತುಪ್ಪ ಸೇರಿಸುತ್ತಾ ಹೋಗಬೇಕು.
ಹೇಗೆ ಸಿಕ್ಕಾಪಟ್ಟೆ ನೀರು ಹಾಕಿದರೆ ಒಂದೊಳ್ಳೆಯ ನೀರುದೋಸೆ ಆಗುವುದಿಲ್ಲವೋ ಅದೇ ರೀತಿ ಬೇಜಾನ್ ತುಪ್ಪ ಹಾಕಿದ ಕೂಡಲೇ ಘೀ ರೋಸ್ಟ್ ಕೂಡ ಆಗುವುದಿಲ್ಲ...ಅದಕ್ಕೆ ಅದರದ್ದೇ ಆದ ಹದವಾದ ಕಂಸಿಸ್ಟೆನ್ಸಿ ಇದೆ.ಇತ್ತ ಕಡಿಮೆಯಾಗಲೂ ಬಾರದು, ಅತ್ತ ಜಾಸ್ತಿಯಾಗಲೂ ಬಾರದು.ನಾನು ಅಳೆದು ತೂಗಿ ಈ ರೆಸಿಪಿಗೆ ಸುಮಾರು 150 ml ನಷ್ಟು ತುಪ್ಪ ತೆಗೆದುಕೊಂಡಿದ್ದೇನೆ ಆಯ್ತಾ. 200 ml ವರೆಗೆ ಹಾಕಬಹುದು. ಅದಕ್ಕಿಂತ ಜಾಸ್ತಿ ಬೇಡ. ಇಲ್ಲದಿದ್ದರೆ ತುಪ್ಪ ತುಂಬಾ ಜಾಸ್ತಿ ಆಗಿ ಫುಲ್ Oily Oily ಆಗುತ್ತದೆ.
ಮೊದಲ ಮೆತಡ್ ನಲ್ಲಿ ಮಾಡುವವರು.... ಮೊದಲು ನೇರವಾಗಿ ಪಾತ್ರೆಗೆ ನಾಲ್ಕೈದು ಸ್ಪೂನ್ ತುಪ್ಪ ಹಾಕಿ ಆ ನಂತರ ಅದಕ್ಕೆ ಹಸಿಯಾಗಿ ಕಡೆದಂತಹ ಘೀ ರೋಸ್ಟ್ ಮಸಾಲೆಯನ್ನು ಹಾಕಿ ನಿಧಾನವಾಗಿ ಲೋ ಪ್ಲೇಮ್ ನ್ಲಲಿ ರೋಸ್ಟ್ ಮಾಡುತ್ತಾ ಬರಬೇಕು. ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಬೇಕು.
ಎರಡನೆಯ ಮೆತಡ್ ನಲ್ಲಿ ಮಾಡುವಾಗ... Marination ಮಾಡಿದ ಚಿಕನ್ ಅನ್ನು ತುಪ್ಪದಲ್ಲಿ ರೋಸ್ಟ್ ಮಾಡಿದಾಗ ಆ ಬಾಣಲೆಯಲ್ಲಿ ಸ್ವಲ್ಪ ತುಪ್ಪ, ಚಿಕನ್ ಬಿಟ್ಟಿರುವ ಕೊಬ್ಬಿನಾಂಶ ಹಾಗೂ Marination ನ ಮಸಾಲೆ ಕೂಡ ಬಾಣಲೆಯಲ್ಲಿಯೇ ಇರುತ್ತದೆ. ಅದನ್ನು ತೆಗೆಯುವುದು ಬೇಡ. ಅದಕ್ಕೆ ಮತ್ತೊಂದಿಷ್ಟು ತುಪ್ಪವನ್ನು ಹಾಕಿ,ರುಬ್ಬಿ ಇಟ್ಟಂತಹ ಘೀ ರೋಸ್ಟ್ ಮಸಾಲೆಯನ್ನು ಸಹ ಹಾಕಿ ನಿಧಾನವಾಗಿ ಚೆನ್ನಾಗಿ ರೋಸ್ಟ್ ಮಾಡುತ್ತಾ ಬರಬೇಕು. ರುಚಿಗೆ ತಕ್ಕಷ್ಟು ಉಪ್ಪು ಕೂಡ ಸೇರಿಸಿ.
ಆ ನಂತರ ಇನ್ನು ಎರಡೂ ಮೆತಡ್ ನದ್ದು ಸೇಮ್ ಪ್ರೋಸಿಜರ್. ಅದೇ ತುಪ್ಪ ಹಾಕುವುದು... ರೋಸ್ಟ್ ಮಾಡುವುದು... ತುಪ್ಪ ಹಾಕುವುದು.. ರೋಸ್ಟ್ ಮಾಡುವುದು.
ಮಸಾಲೆಯಿಂದ ಎಣ್ಣೆ ಪ್ರತ್ಯೇಕ ಆಗುವವರೆಗೂ ರೋಸ್ಟ್ ಮಾಡುತ್ತಲೇ ಇರಿ.ಇದು ಹೆಚ್ಚು ಕಡಿಮೆ 20 ರಿಂದ 25 ನಿಮಿಷಗಳ ಪ್ರೋಸೆಸ್. ಅದೂ ಕೂಡ Low flame ಅಲ್ಲಿ. ಚಿಕನ್ ಘೀ ರೋಸ್ಟ್ ಸಂಪೂರ್ಣವಾಗಿ ಲೋ ಪ್ಲೇಮ್ ಅಲ್ಲಿ ಮಾಡಿದರೆನೇ ರುಚಿ ಜಾಸ್ತಿ.
ಘೀ ರೋಸ್ಟ್ ಮಸಾಲೆ ಎಣ್ಣೆ ಬಿಟ್ಟುಕೊಂಡ ನಂತರ ಈಗ ಅದಕ್ಕೆ ಮೊದಲ ಮೆತಡ್ ನವರು ಹಸಿ ಚಿಕನ್ ಅನ್ನು ನೇರವಾಗಿ ಹಾಕಿ(ಕೆಲವರು ಮೊದಲೇ ಅರ್ಧ ಬೇಯಿಸಿ ಇಟ್ಟುಕೊಳ್ಳುತ್ತಾರೆ,ಬೇಗ ಆಗಲು), ಎರಡನೆಯ ಮೆತಡ್ ಫಾಲೋ ಮಾಡುವವರು ತುಪ್ಪದಲ್ಲಿ ಅರ್ಧ ರೋಸ್ಟ್ ಮಾಡಿಟ್ಟಿರುವ ಮ್ಯಾರಿನೇಟ್ ಆದಂತಹ ಚಿಕನ್ ಅನ್ನು ಈಗ ಮಸಾಲೆಗೆ ಹಾಕಿ...ಪುನಃ ಇನ್ನೊಂದಿಷ್ಟು ತುಪ್ಪವನ್ನು ಕೂಡ ಹಾಕಿ..
ಇನ್ನು ಸೌಟಿನಿಂದ ಚೆನ್ನಾಗಿ ನಿರಂತರವಾಗಿ ಅತ್ತಿಂದಿತ್ತ ಬಾಡಿಸುತ್ತಲೇ ಇರಬೇಕು.ತಳ ಹಿಡಿಯಬಾರದು.ನಡು ನಡುವೆ ಸ್ವಲ್ಪ ಸ್ವಲ್ಪ ತುಪ್ಪವನ್ನು ಸೇರಿಸುತ್ತಲೇ ಬರಬೇಕು.ಇದು ಹೆಚ್ಚು ಕಡಿಮೆ 30,40 ನಿಮಿಷಗಳ ಪ್ರೋಸೆಸ್. ಈಗ ನಾವು ಹಾಕಿರುವ ಮಸಾಲೆ ಕೆಂಪು ಬಣ್ಣದಿಂದ ರೆಡ್ಡಿಶ್ ಬ್ರೌನ್ ಬಣ್ಣಕ್ಕೆ ತಿರುಗತ್ತದೆ ಹಾಗೂ ಚೆನ್ನಾಗಿ ತನ್ನೆಲ್ಲಾ ಎಣ್ಣೆಯನ್ನು ಬಿಟ್ಟುಕೊಳ್ಳುತ್ತಾ ಬರುತ್ತದೆ. ಆ ರೆಡ್ಡಿಶ್ ಸಿಲ್ಕಿ ಕಲರ್ ನೋಡುವುದೇ ಒಂದು ಚಂದ.ಘೀ ರೋಸ್ಟ್ ನ ನಿಜವಾದ ಸಾರ್ಥಕ್ಯದ ಕ್ಷಣಗಳು ಅದುವೇ. ಅದನ್ನು ನೋಡುತ್ತಿದ್ದರೆ ಹಾಗೇ ಬಾಯಲ್ಲಿ ನೀರೂರಿ ಬಿಡುತ್ತದೆ.
ಈಗ ಇದಕ್ಕೆ ಒಂದು ಚಿಕ್ಕ ತುಂಡು ಬೆಲ್ಲವನ್ನು ಹಾಕಿ ಬಿಡಿ.ಪುನಃ ತಿರುಗಿಸಿ.ಬೆಲ್ಲ ಎಲ್ಲಾ ಪ್ಲೇವರ್ ಗಳನ್ನು ಹಾಗೇ ಬ್ಯಾಲೆನ್ಸ್ ಮಾಡಿ ಬಿಡುತ್ತದೆ.ಹಾಗಂತ ಜಾಸ್ತಿ ಬೆಲ್ಲ ಹಾಕಬೇಡಿ. ಮತ್ತೆ ತುಂಬಾ ಸಿಹಿ ಆಗಿಬಿಡುವುದು.
ಈಗ ಉಪ್ಪು ನೋಡಿ. ಕಡಿಮೆ ಇದ್ದರೆ ನೋಡಿಕೊಂಡು ಹಾಕಿ. ನಂತರ ಒಂದು ಸ್ಪೂನ್ ಕೊತ್ತಂಬರಿ ಪೌಡರ್ ಅನ್ನು ಕೂಡ ಸೇರಿಸಿ ಪುನಃ ಚೆನ್ನಾಗಿ ತಿರುಗಿಸುತ್ತಾ ಬನ್ನಿ.
ಕೊನೆಯಲ್ಲಿ ಒಂದು ಒಗ್ಗರಣೆ ಕೂಡ ಕೊಟ್ಟು ಬಿಡಬೇಕು.ಅದೂ ಕೂಡ ತುಪ್ಪದ್ದೇ... ತುಪ್ಪಕ್ಕೆ ಕರಿಬೇವು ಹಾಕಿ.. ಚೆನ್ನಾಗಿ ಪ್ರೈ ಮಾಡಿ, ಘೀ ರೋಸ್ಟ್ ಗೆ ಹಾಕಿ ಬಿಟ್ಟರೆ... ವೆರೀ ಫೇಮಸ್ ಚಿಕನ್ ಘೀ ರೋಸ್ಟ್ ರೆಡಿ.
ಮೇಲಿನ ಮೆತಡ್ ನಲ್ಲಿಯೇ ವೆಜ್ ನವರು.. ಚಿಕನ್ ಬದಲಿಗೆ ಪನ್ನೀರು, ಮಶ್ರೂಮ್ ಗಳನ್ನು ಹಾಕಿಕೊಂಡು ಘೀ ರೋಸ್ಟ್ ಮಾಡಿ ಸವಿಯಬಹುದು.
ಘೀ ರೋಸ್ಟ್ ಗೆ ಜಗತ್ತಿನಲ್ಲಿ ಅತೀ ಸುಂದರ ಜೋಡಿ ಎಂದರೆ ಅದು ನಮ್ಮ ಶ್ವೇತ ವರ್ಣದ ಸಾದ ಸೀದಾ ಬೆಡಗಿ ನೀರ್ದೋಸೆಯೇ.ಘೀ ರೋಸ್ಟ್ ಪಕ್ಕ ಒಂದಿಷ್ಟು ನೀರುದೋಸೆ ಇದ್ದರೆ... ಒಂದರ ನಂತರ ಒಂದು ನೀರುದೋಸೆ ಖಾಲಿ ಆಗುತ್ತಾ ಹೋಗುವುದು ಗೊತ್ತೇ ಆಗುವುದಿಲ್ಲ.ಬ್ರೆಡ್,ಪರೋಟ ಘೀ ರೈಸ್ ಕೂಡ ಘೀ ರೋಸ್ಟ್ ಗೆ ಸಾಥಿ ಆಗಬಲ್ಲವು.
ಏನೇ ಹೇಳಿ ಚಿಕನ್ ಘೀ ರೋಸ್ಟ್ ಆಗಲಿ,ಕ್ರ್ಯಾಬ್ ಘೀ ರೋಸ್ಟ್ ಆಗಲಿ,Prawn ಘೀ ರೋಸ್ಟ್ ಆಗಲಿ.. ಇಲ್ಲವೇ ಪನ್ನೀರ್ ಘೀ ರೋಸ್ಟ್ ಆಗಲಿ, ಮಶ್ರೂಮ್ ಘೀ ರೋಸ್ಟ್ ಆಗಲೀ.... ಜೀವನದಲ್ಲಿ ಒಂದು ಬಾರಿ ಆದರೂ ತಿಂದು ಬಿಡಬೇಕು ಕಣ್ರೀ.. ಏಕೆಂದರೆ ಅದರಲ್ಲಿ ತುಪ್ಪದ ರುಚಿ ಮಾತ್ರವಲ್ಲ ಕರಾವಳಿಯ ಸ್ವಾಧ ಇನ್ನಿಲ್ಲದಂತೆ ಅಡಗಿದೆ.
ನೀವು ಮತ್ತೆ ಮತ್ತೆ ಅದನ್ನೇ ಹುಡುಕಿಕೊಂಡು ಹೋಗಿ,ಇಲ್ಲವೇ ಇಷ್ಟ ಪಟ್ಟುಕೊಂಡು ಮಾಡಿಕೊಂಡು ತಿನ್ನುತ್ತೀರಿ ಎಂದಾದರೆ ಖಂಡಿತವಾಗಿಯೂ ನೀವು ಕೂಡ ನನ್ನಂತೆ, ಹೆಚ್ಚಿನ ಕರಾವಳಿಗರಂತೆ ಅದಕ್ಕೆ ಅಡಿಕ್ಟ್ ಆಗಿದ್ದೀರಿ ಎಂದೇ ಅರ್ಥ.ಆದರೆ ಈ ಅಡಿಕ್ಷನ್ ಬಹಳನೇ ರುಚಿಯಾದದ್ದು...ಮತ್ತಷ್ಟು ಇನ್ನಷ್ಟು ಆ ಅಡಿಕ್ಷನ್ ಗೆ ನೀವು ಕೂಡ ಒಳಗಾಗಿ ಎಂದು ನಾನು ಸ ಮನಸಾರೆ ವಿಶ್ ಮಾಡುತ್ತೇನೆ.
.....................................................................................
#ಏನೋ_ಒಂದು
Ab Pacchu
Moodubidire
(https://phalgunikadeyavanu.blogspot.com)
Comments
Post a Comment