Mandela





 #Mandela | Netflix



ಇದೊಂದು ಬಹಳ ಸೊಗಸಾದ ಹಾಗೂ ಅಷ್ಟೇ ಸಿಕ್ಕಾಪಟ್ಟೆ ಮಜಾ ಕೊಡುವ,ಇನ್ನಿಲ್ಲದಂತೆ ಕಚಗುಳಿ ಇಡುವ ಪಿಚ್ಚರ್ ಆಯ್ತಾ.


ಹೌದು ಇಲ್ಲಿ ಕಾಮಿಡಿ, ಡಾರ್ಕ್ ಕಾಮಿಡಿ,ರಾಜಕೀಯ ವಿಡಂಬನೆ ಎಲ್ಲವನ್ನೂ ಬಹಳ ಚೆನ್ನಾಗಿ ಬ್ಲೆಂಡ್ ಮಾಡಿ ನಮ್ಮ ಮುಂದೆ ಅಚ್ಚುಕಟ್ಟಾಗಿ ಹಾಗೂ ಅಷ್ಟೇ ಡಿಫರೆಂಟ್ ಆಗಿ ಪ್ರಸ್ತುತ ಪಡಿಸಿದ್ದಾರೆ. 


ಎಲ್ಲಾ ಕಥೆಗಳಲ್ಲಿ ಇರುವಂತೆ ಇಲ್ಲಿಯೂ ಒಬ್ಬ ಇರುತ್ತಾನೆ. 


ಅವನ ಹೆಸರು "Smile" ಅಂತ. 


ಹೌದು ಅವನ ಹೆಸರೇ ಸ್ಮೈಲ್. 


ಊರಿನಲ್ಲಿರುವ ಎಲ್ಲರೂ ಅವನನ್ನು ಅದೇ ಹೆಸರಿನಿಂದ ಕರೆಯುತ್ತಾರೆ. 


ಊರಿನಲ್ಲಿರುವ ದೊಡ್ಡ ಆಲದ ಮರದ ಕೆಳಗಿನ ಕಟ್ಟೆಯೇ ಅವನದೊಂದು ಟೆಂಪರರಿ ಸೆಲೂನ್.


ಅದೇ ಅವನ ಮನೆ ಕೂಡ ಹೌದು. 


ಆ ಆಲದ ಮರದ ಕೊಂಬೆಗಳಲ್ಲಿಯೇ ಅವನು ರಾತ್ರಿ ಮಲಗುವುದು. 


ಮನೆ,ಹೆಂಡತಿ,ಮಕ್ಕಳು ಮರಿ ಯಾವುದೂ ಅವನಿಗೆ ಇಲ್ಲ. 


ಅವನಂತೆಯೇ ಅನಾಥ ಆಗಿರುವ ಒಬ್ಬ ಪುಟ್ಟ ಬಾಲಕ ಅವನ ಅಸಿಸ್ಟೆಂಟ್. 


ತಂದೆಯ ಕನಸಿನಂತೆ ಅಲ್ಲೇ ಶಾಶ್ವತವಾದ ಸೆಲೂನ್ ಒಂದನ್ನು ಕಟ್ಟಿಕೊಳ್ಳಬೇಕು ಎಂಬುದು ಅವನದ್ದು ಕೂಡ ಏಕಮಾತ್ರ ಬಯಕೆ. 



ಅವನು ತುಂಬಾ ಬಡವ. 


ತುಂಬಾನೇ ಪಾಪ ಕೂಡ.


ಯಾರೂ ಎಷ್ಟೇ ಅನ್ಯಾಯ ಮಾಡಿದರೂ ಅವನು ಯಾರಿಗೂ ಏನೂ ಮಾಡುವುದಿಲ್ಲ,ಒಂದು ಮಾತು ಕೂಡ ಹೇಳುವುದಿಲ್ಲ. 


ಆದರೆ ಊರಿನ ಎಲ್ಲಾ ನಿಕೃಷ್ಟವೆನಿಸುವ ಕೆಲಸ ಮಾಡಲು ಜನರಿಗೆ ಮಾತ್ರ ಈ "ಸ್ಮೈಲೇ" ಬೇಕು.


ಆದರೂ ಅವನನ್ನು ಯಾರೂ ಕೂಡ ಎಂದಿಗೂ ಕ್ಯಾರೇ ಮಾಡುವುದಿಲ್ಲ.ಯಾವುದಕ್ಕೂ ಕೂಡ ಅವನನ್ನು ಗಣನೆಗೆಗೂ  ತೆಗೆದುಕೊಳ್ಳುವುದಿಲ್ಲ.


ಅವರವರ  ಕೆಲಸ ಆದ ನಂತರ ಅವನೊಬ್ಬ ಊರಲ್ಲಿ ಇದ್ದಾನೆ ಎಂಬುದನ್ನೇ ಹೆಚ್ಚಿನವರು ಮರೆತು ಬಿಟ್ಟಿರುತ್ತಾರೆ. 


ಅಷ್ಟು ಮಾತ್ರವಲ್ಲ ಕೆಲಸ ಮಾಡಿಸಿಕೊಂಡ ನಂತರವೂ ಅವನನ್ನು ಇನ್ನಿಲ್ಲದಂತೆ ಶೋಷಣೆಯೇ ಮಾಡುತ್ತಿರುತ್ತಾರೆ ಊರಿನವರು. 


ಅವನು ಮಾಡಿದ ಸಣ್ಣ ಪುಟ್ಟ ಕೆಲಸಕ್ಕೆ ಹಣ ಕೂಡ ಕೆಲವರು ಪುಂಡರು ಕೊಡುವುದೇ ಇಲ್ಲ.


ಅವನನ್ನು ಪ್ರತಿಯೊಂದಕ್ಕೂ ಹೆಚ್ಚಿನವರು ಸತಾಯಿಸುತ್ತಲೇ ಇರುತ್ತಾರೆ. 


ಅವನು ತನ್ನ ಅಪ್ಪನ ಆಸೆಯಂತೆ ತಾನೊಂದು ಶಾಶ್ವತವಾದ ಸೆಲೂನ್ ಕಟ್ಟಿಕೊಳ್ಳಬೇಕೆಂದು ಬಾರೀ ಜಾಗ್ರತೆಯಿಂದ ಪೈಸೆ ಪೈಸೆಯನ್ನು ಸಹ ಒಟ್ಟು ಮಾಡಿ ಆ ಆಲದ ಮರದ ಪೊಟರೆಯಲ್ಲಿಯೇ ಡೈಲಿ ರಾತ್ರಿ ಮಲಗುವ ಮೊದಲು ಯಾರಿಗೂ ಕಾಣದಂತೆ ಇಟ್ಟು ಬಿಡುತ್ತಾನೆ. 


ಆದರೆ ಒಂದು ದಿನ ಇದನ್ನು ಒಬ್ಬ ಗಮನಿಸಿ ಆ ಹಣವನ್ನು ಕದ್ದು  ಅದರಿಂದ ಒಂದು ಕಡೆ ಚೆನ್ನಾಗಿ ಬಿರಿಯಾನಿ ತಿನ್ನುತ್ತಿರುತ್ತಾನೆ.


ಈ ಸ್ಮೈಲ್ ಮತ್ತು ಅವನ ಆ ಅಸಿಸ್ಟೆಂಟ್ ಬಾಲಕ ಇಬ್ಬರಿಗೂ ಅವನ ಮೇಲೆಯೇ  ಅನುಮಾನ ಬಂದಿರುತ್ತದೆ.


ನೇರವಾಗಿ ಅವನಲ್ಲಿಗೆ ಹೋಗಿ ನನ್ನ ಹಣವನ್ನು ಕೊಡು,ನನಗೆ ಒಂದು ಸೆಲೂನ್ ಕಟ್ಟಿಕೊಳ್ಳಲು ಇದೆ... ಎಂದು ಪರಿಪರಿಯಾಗಿ ಸ್ಮೈಲ್ ಕೇಳುತ್ತಾನೆ.


ಅದಕ್ಕೆ ಅವನು ಹೇಳುತ್ತಾನೆ.. ನಾನು ಕದ್ದಿಲ್ಲ,ಬೇರೆ ಯಾರೋ ಕದ್ದಿರಬೇಕು.. ಅದು ಅಲ್ಲದೇ ಯಾರಾದರೂ ಈ ರೀತಿಯಲ್ಲಿ ಮರದಲ್ಲಿ ಎಲ್ಲಾ ಹಣ ಇಡುತ್ತಾರಾ... ನೀನು ಒಂದು ಕೆಲಸ ಮಾಡು,ಇನ್ನು ಮುಂದೆ ನಿನ್ನ ಸೇವಿಂಗ್ಸ್ ಎಲ್ಲಾ ಪೋಸ್ಟ್ ಆಫೀಸ್ ನಲ್ಲಿ ಇಡು.ಅಲ್ಲಿನ ಹಣ ಯಾರೂ ಕೂಡ ಕದಿಯುವುದಿಲ್ಲ...ತುಂಬಾನೇ ಸೇಪು.. ಎಂದು ಬಿರಿಯಾನಿ ತಿನ್ನುತ್ತಲೇ ಒಂದು ಮಹಾನು  ಉಪದೇಶವೊಂದನ್ನು ಕೊಡುತ್ತಾನೆ ಹಣ ಕದ್ದ ಆ ಕಳ್ಳ. 


ಆ ಕುಗ್ರಾಮದಲ್ಲಿ ಒಂದು ಹಾಳು ಬಿದ್ದಿರುವ ಪೋಸ್ಟ್ ಆಫೀಸ್ ಕೂಡ ಇರ್ತದೆ.


ಅಲ್ಲಿ ಒಬ್ಬಳು ಹುಡುಗಿ ಕೂಡ ಇದ್ದಾಳೆ.


ಅಲ್ಲಿನ ಪೋಸ್ಟ್ ಆಫೀಸ್ ಗೆ ಎಲ್ಲವೂ ಅವಳೇ.. ಫೋಸ್ಟ್ ಮಾಸ್ಟರ್ ಕೂಡ ಅವಳೇ,ಫೋಸ್ಟ್ ಡೆಲಿವರಿ ಮಾಡುವುದು ಕೂಡ ಅವಳೇ.


ಇವನು ಹೋಗಿ ಅವಳಲ್ಲಿಯೇ ಹೇಳುತ್ತಾನೆ.. ನನಗೆ ಪೋಸ್ಟ್ ಆಫೀಸ್ ನಲ್ಲಿ ಹಣ ಸೇವಿಂಗ್ ಮಾಡಬೇಕು ಎಂದು.


ಅದಕ್ಕೆ ಅವಳು.. ಅದಕ್ಕಾಗಿ ನೀನು ಒಂದು Account ಓಪನ್ ಮಾಡಬೇಕಾಗುತ್ತದೆ ಇಲ್ಲಿ.. ಎಂದು ಹೇಳುತ್ತಾಳೆ.


ಇವನು.. ಹಾಗಾದರೆ ಮಾಡಿ ಎಂದು ಹೇಳುತ್ತಾನೆ.


ಹಾಗಾದರೆ ನಾಳೆ ಆಧಾರ್ ಕಾರ್ಡ್ ತಾ...ಎಂದು ಅವಳು ಹೇಳುತ್ತಾಳೆ.


ಅವನಲ್ಲಿ ಆಧಾರ್ ಕಾರ್ಡ್ ಇಲ್ಲ.


ಈಗ ಅವನು ಆಧಾರ್ ಕಾರ್ಡ್ ಮಾಡಿಸಲು ಹೋಗುತ್ತಾನೆ.


ಅಲ್ಲಿ ಅವರು ರೇಷನ್ ಕಾರ್ಡ್ ತರಲು ಹೇಳುತ್ತಾರೆ.


ಇವನಲ್ಲಿ ರೇಷನ್ ಕಾರ್ಡ್ ಇಲ್ಲ. 


ಈಗ ಅವನು ರೇಷನ್ ಕಾರ್ಡ್ ಮಾಡಿಸಲು ಹೋಗುತ್ತಾನೆ.


ಅಲ್ಲಿ ಅವರು ವೋಟರ್ ಕಾರ್ಡ್ ತರಲು ಹೇಳುತ್ತಾರೆ.


ಇವನಲ್ಲಿ ವೋಟರ್ ಕಾರ್ಡ್ ಕೂಡ ಇಲ್ಲ.


ಕೊನೆಗೆ ಫೋಸ್ಟ್ ಆಫೀಸ್ ಗೆ ಬಂದು ಅವಳಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ.


ಕೊನೆಗೆ ಅವಳಿಗೆ ಇವನ ಮೇಲೆ ಕರುಣೆ ಬಂದು ಬೇಕಾದ ದಾಖಲೆಗಾಗಿ ಅರ್ಜಿ ಸಲ್ಲಿಸಲು ಅವಳು ನಿರ್ಧರಿಸುತ್ತಾಳೆ. 


ಅವಳೇ ಅವನ ಅರ್ಜಿಯನ್ನು ಕೂಡ ಭರ್ತಿ ಮಾಡಲು  ಮುಂದಾಗುತ್ತಾಳೆ. 


ನಿನ್ನ ಹೆಸರು ಏನು.. ಎಂದು ಅವನಲ್ಲಿಯೇ  ಕೇಳುತ್ತಾಳೆ. 


ಅದಕ್ಕೆ ಅವನು ಸ್ಟೈಲ್ ಆಗಿ "Smile" ಎಂದು ಹೇಳುತ್ತಾನೆ. 


ಅವಳಿಗೆ ಆಶ್ಚರ್ಯ ಆಗುತ್ತದೆ. 


ಯಾಕೆ ಈ ತರಹದ ಹೆಸರು.. ಈ ತರವೂ ಒಂದು ಹೆಸರು ಇರುತ್ತದಾ...? ಎಂದು ಕೇಳುತ್ತಾಳೆ. 


ಅದಕ್ಕವನು ಹೇಳುತ್ತಾನೆ.. ನನ್ನ ಬಾಯಿ ಸರಿಯಾಗಿ ಮುಚ್ಚುವುದಿಲ್ಲ ನೋಡಿ..ಸದಾ ತೆರೆದೇ ಇರುತ್ತದೆ. ಹಾಗಾಗಿ ನೋಡುವವರಿಗೆ ನಾನು ಯಾವಾಗಲೂ ನಗುವತಿರುವಂತೆಯೇ ಕಾಣುತ್ತದೆ. ಆದ್ದರಿಂದ ಊರಲ್ಲಿ ಎಲ್ಲರೂ ನನ್ನನ್ನು ಸ್ಮೈಲ್.. ಸ್ಮೈಲ್.. ಎಂದೇ ಕರೆಯುತ್ತಾರೆ..ನಿಜ ಹೇಳಬೇಕೆಂದರೆ ನನಗೆ ನನ್ನ ನಿಜ ಹೆಸರೇ ಏನೆಂದು ಗೊತ್ತಿಲ್ಲ.. ಎಂದು ಅವನು ಹೇಳುತ್ತಾನೆ. 


ಅದಕ್ಕೆ ಅವಳು.. ಇಲ್ಲ.. ಇಲ್ಲ ಈ ತರಹದ ಹೆಸರಿನಲ್ಲಿ ಎಲ್ಲಾ  ಯಾವುದೇ ದಾಖಲೆ ಮಾಡಿಸಲು ಎಂದಿಗೂ ಸಾಧ್ಯವಿಲ್ಲ.. ಮೊದಲು ಹೋಗಿ ನಿನ್ನ ಸರಿಯಾದ ಹೆಸರು ಏನೆಂದು ತಿಳಿದುಕೊಂಡು ಬಾ.. ಎಂದು ಅವನನ್ನು ಕಳುಹಿಸುತ್ತಾಳೆ. 


ಅವನು ಊರಿನಲ್ಲಿ ಹೋಗಿ ತುಂಬಾ ಹಳೆಯ ಹಿರಿಯರ ಬಳಿ ಎಲ್ಲಾ ಕೇಳುತ್ತಾನೆ. 


ಯಾರಿಗೂ ಅವನಿಗೆ ಹುಟ್ಟಿದಾಗ ಇದ್ದ ಹೆಸರು ಏನೆಂದು ಗೊತ್ತೇ ಇರುವುದಿಲ್ಲ. 


ಇವನು ನಿರಾಸೆ ಹೊಂದಿ ಮತ್ತೆ ಫೋಸ್ಟ್ ಆಫೀಸ್ ಗೆ ಬರುತ್ತಾನೆ. 


ಈಗ ಅವಳೇ ಇವನಿಗೊಂದು ಹೊಸ ಹೆಸರನ್ನು ಇಡಲು ನಿರ್ಧರಿಸುತ್ತಾಳೆ. 


ಮೊದಲು ಗಾಂಧೀಜಿ ಅಂತ ಇಡ್ತಾಳೆ. 


ಅದು ಅವನಿಗೆ ಇಷ್ಟ ಆಗುವುದಿಲ್ಲ. 


ನೆಕ್ಸ್ಟ್ ನೇತಾಜಿ ಎಂದು ಇಡ್ತಾಳೆ ಅದೂ ಅವನಿಗೆ ಇಷ್ಟ ಆಗುವುದಿಲ್ಲ. 


ರೋಹಿತ್ ಶರ್ಮಾ ಆಗಬಹುದಾ ಎಂದು ಕೇಳುತ್ತಾಳೆ.. 


ಅದೂ ಕೂಡ ಅಷ್ಟೊಂದು ಸೌಂಡ್ ಮಾಡ್ತಾ ಇಲ್ಲ.. ಸ್ವಲ್ಪ ಡಿಫರೆಂಟ್ ಆಗಿ ಇರ್ಲಿ.. ಎಂದು ಇವನು ಹೇಳ್ತಾನೆ. 


ಕೊನೆಗೆ ಅಲ್ಲೇ ಇದ್ದ ಸ್ಟ್ಯಾಂಪ್ ನಲ್ಲಿದ್ದ ನೆಲ್ಸನ್ ಮಂಡೇಲಾ ಚಿತ್ರ ನೋಡಿ... ಅವಳು ನೆಲ್ಸನ್ ಮಂಡೇಲಾ ಅಂತ ಇಡುವುದಾ... ಎಂದು ಕೇಳ್ತಾಳೆ. 


ಅದಕ್ಕೆ ಇವನು ಖುಷಿಯಿಂದ... ಯೆಸ್.. ಇದು ನಿಜವಾಗಿಯೂ ಏನೋ ಒಂದು ಡಿಫರೆಂಟ್ ಆಗಿದೆ.. ಇದೆ ಇರ್ಲಿ... ಆದರೆ ಯಾರಿದು ಮಂಡೇಲಾ...? ಎಂದು ಅವಳಲ್ಲಿಯೇ ಕೇಳುತ್ತಾನೆ. 


ಅದಕ್ಕೆ ಅವಳು.. ನೀನು ಹೇಗೆ ಇಲ್ಲಿ ನಿನ್ನ ಐಡೆಂಟಿಗಾಗಿ ಕಷ್ಟ ಪಡುತ್ತಿದ್ದಿಯೋ ಅವರು ಕೂಡ ಆಫ್ರಿಕಾದಲ್ಲಿ ಕರಿಯರ ಐಡೆಂಟಿಗಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರು... ಹಾಗಾಗಿ ನಿಮ್ಮಿಬ್ಬರಿಗೆ ಈ ವಿಷಯದಲ್ಲಿ ಮಾತ್ರ ನಿಜವಾಗಿಯೂ ಒಂದು  ಸಾಮ್ಯತೆ ಇದೆ ಎಂದು.. ಅವಳು ಹೇಳುತ್ತಾಳೆ.


ಅವನಿಗೆ ಖುಷಿ ಆಗುತ್ತದೆ. 


ಈ ರೀತಿಯಾಗಿ ನಮ್ಮ "ಸ್ಮೈಲ್" .. ಮಂಡೇಲಾ ಆಗಿ ಬದಲಾಗುತ್ತಾನೆ. 


ಆದರೆ ಅವನನ್ನು ಮಂಡೇಲಾ ಎಂದು ಯಾರೂ ಆ ಕುಗ್ರಾಮದಲ್ಲಿ ಕರೆಯುವುದೇ ಇಲ್ಲ.


ಇವನು ಮಂಡೆಲಾ ಆಗಿರುವುದು ಗೊತ್ತಿದ್ದರೆ ತಾನೇ ಅವರಿಗೆ. 



ಹೀಗಿರುವಾಗ ಆ ಊರಿನಲ್ಲಿ ಪಂಚಾಯಿತಿ ಚುನಾವಣೆ ಎಂಬ ಒಂದು ಮಹಾನು ಕಾಳಗವೇ ಶುರುವಾಗಿ ಬಿಡುತ್ತದೆ. 


ಊರಿನ ಪ್ರಮುಖ ರಾಜಕೀಯ ಮುಖಂಡನ ಅನಾರೋಗ್ಯದ ಕಾರಣದಿಂದಾಗಿ ಅವನ ಇಬ್ಬರು ಮಕ್ಕಳು ತಾವೇ ಚುನಾವಣೆಯಲ್ಲಿ ನಿಲ್ಲಬೇಕು,ಗೆಲ್ಲಬೇಕು ಎಂದು.. ಇಬ್ಬರೂ ಸಹ ಜಿದ್ದಿಗೆ ಬಿದ್ದು ಚುನಾವಣೆಗೆ ಸ್ಪರ್ಧಿಸಿ ಬಿಡುತ್ತಾರೆ. 


ಅವರಿಗೆ ಒಬ್ಬನನ್ನು ಕಂಡರೆ ಇನ್ನೊಬ್ಬನಿಗೆ ಆಗುವುದಿಲ್ಲ. 


ಚುನಾವಣೆಯಲ್ಲಿ ಒಬ್ಬನದ್ದು ತೆಂಗಿನಕಾಯಿ ಗುರುತು ಆದರೆ.. ಮತ್ತೊಬ್ಬನದ್ದು ರೋಡ್ ರೋಲರ್. 


ಈ ಇಬ್ಬರು ಅಣ್ಣ ತಮ್ಮಂದಿರು ಏನು ಮಾಡುತ್ತಾರೆ ಎಂದರೆ... ವೋಟರ್ ಲೀಸ್ಟ್ ನಲ್ಲಿರುವ ಊರಿನ ಜನರಲ್ಲಿ ತಮಗೆ ಯಾರು ಯಾರು ಪಕ್ಕಾ ವೋಟ್ ಹಾಕಬಹುದು ಎಂದು ಲೆಕ್ಕ ಮಾಡಲು ತೊಡಗುತ್ತಾರೆ. ಯೆಸ್.. ಚುನಾವಣಾ ಪೂರ್ವ ಸಮೀಕ್ಷೆ. 


ಇಬ್ಬರಿಗೂ ಊರಿನಲ್ಲಿ ಒಂದೇ ರೀತಿಯ ಸಫೋರ್ಟ್ ಇರುತ್ತದೆ.


ಗ್ರಾಮದ ದಕ್ಷಿಣ ಭಾಗದವರು ಪೂರ್ತಿಯಾಗಿ ಒಬ್ಬನಿಗೆ ಸಪೋರ್ಟ್ ಆದರೆ... ಉತ್ತರ ಭಾಗದವರು ಸಂಪೂರ್ಣವಾಗಿ ಇನ್ನೊಬ್ಬನಿಗೆ ಸಪೋರ್ಟ್. 


ಅಣ್ಣನ ಲೆಕ್ಕದ ಪ್ರಕಾರ ಅವನಿಗೆ 340 ವೋಟ್ ಬರಬಹುದು ಎಂಬ ಒಂದು ಪಕ್ಕಾ  ಅಂದಾಜಿನ ಲೆಕ್ಕ ಸಿಗುತ್ತದೆ. 


ಅದೇ ರೀತಿ ತಮ್ಮ ಕೂಡ ಎಲ್ಲಾ ರೀತಿಯಿಂದಲೂ ಎಲ್ಲಾ ವಿಧದಿಂದಲೂ  ಲೆಕ್ಕ ಮಾಡಿದ ನಂತರ ನನಗೂ 340 ವೋಟೇ ಬರಬಹುದು ಎಂದು ತಿಳಿದು ಕೊಳ್ಳುತ್ತಾನೆ. 


ಹಾಗಾದರೆ ಎಲೆಕ್ಷನ್ ನಡೆದಾಗ ಈ ಟೈ ಬ್ರೇಕರ್ ಗೆಲ್ಲಲ್ಲು ಬೇಕಾಗುವ ಆ ಒಂದು ವೋಟಿಗೆ ಏನು ಮಾಡುವುದು ಎಂದು ಇಬ್ಬರೂ ಸಿಕ್ಕಾಪಟ್ಟೆ ತಲೆ ಕೆರೆದು ಕೊಳ್ಳುತ್ತಾರೆ. 


ಈ ಅಣ್ಣ ತನ್ನ ತಮ್ಮನ ಬೆಂಬಲಿಗ ಮತಧಾರರಲ್ಲಿ  ಯಾರನ್ನಾದರೂ ಒಬ್ಬನನ್ನು ಕೊಂದರೆ ಆಗ ತಾನು ಒಂದು ವೋಟಿನಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಆಲೋಚಿಸುತ್ತಾನೆ. 


ತಮ್ಮ ಕೂಡ ಇದೇ ರೀತಿಯ ಭಯಾನಕ ಆಲೋಚನೆ ಮಾಡುತ್ತಾನೆ. 


ಹೀಗೆ ಮಾಡುತ್ತಾ ಹೋದರೆ ದಿನಾಲೂ ಊರು ತುಂಬಾ ಎರಡೂ ಸೈಡಿನವರ ಹೆಣವೇ  ನಿರಂತರವಾಗಿ ಬೀಳುತ್ತಿರುತ್ತದೆ... ಎಂದು ಅರಿತ  ಇಬ್ಬರೂ ಕೊನೆಗೆ ತಮ್ಮ ಆ  ಖತರ್ನಾಕ್ ಐಡಿಯಾವನ್ನು  ಬಿಟ್ಟು ಬಿಡುತ್ತಾರೆ. 


ಅದೇ ಸಮಯಕ್ಕೆ ಈ ಸ್ಮೈಲ್, "ಮಂಡೇಲಾ" ಎಂಬ ಹೆಸರಿನಲ್ಲಿ Apply ಮಾಡಿದ್ದ ವೋಟರ್ ಐಡಿ ಅಫ್ರೂವ್ ಆಗಿ.. ಹೊಸ ವೋಟರ್ ಲೀಸ್ಟ್ ಅಲ್ಲಿ ಅವನ ಹೆಸರು ಕೂಡ  ಸೇರ್ಪಡೆಯಾಗಿ ಊರಿಗೆ ಬರುತ್ತದೆ. 


ಅಲ್ಲಿಂದ ನೋಡಿ ನಮ್ಮ ಮಂಡೇಲಾ ನ ದೆಸೆಯೇ ಬದಲಾಗಿ ಬಿಡುತ್ತದೆ. 


ಅಣ್ಣ ತಮ್ಮಂದಿರು ಇಬ್ಬರಿಗೂ ಈ ಮಂಡೇಲಾನೇ ತಮ್ಮ ವಿಜಯದ ನಿಜವಾದ ಆಶಾ ಕಿರಣ ಎಂದು ಅರಿವಾಗುತ್ತದೆ. 


ಇಬ್ಬರೂ ತಮಗೆಯೇ  ವೋಟ್ ಹಾಕಬೇಕು ಎಂದು ಅವನಿಗೆ ಇಲ್ಲ ಸಲ್ಲದ ಆಮಿಷಗಳನ್ನು ಒಡ್ಡಿ ಅವನಿಗೆ ದಿನಾಲೂ ಬೇಕಾದಷ್ಟು ಹಣ,ಅವಶ್ಯಕ ಸಾಮಗ್ರಿ,ತಿಂಡಿ ತೀರ್ಥಗಳನ್ನು ಎಲ್ಲಾ ಒದಗಿಸಲು ಶುರು ಮಾಡುತ್ತಾರೆ. 


ಮಂಡೇಲಾ ಇಬ್ಬರಿಂದಲೂ ಎಲ್ಲವನ್ನೂ  ಸ್ವೀಕಾರ ಮಾಡುತ್ತಾನೆ. 


ಆದರೆ ವೋಟ್ ಯಾರಿಗೆ ಹಾಕುತ್ತೀಯಾ ನೀನು ಎಂದು ಇಬ್ಬರೂ ಅವನಲ್ಲಿ ಪದೇ ಪದೇ ಕೇಳಿದಾಗ.. ನಾನು ಇನ್ನೂ ಡಿಸೈಡ್ ಮಾಡಿಲ್ಲ.. ಎಂದೇ ಹೇಳುತ್ತಿರುತ್ತಾನೆ ಈ ನಮ್ಮ ಮಂಡೇಲಾ. 


ಹೀಗೆ ದಿನಾಲೂ ಅವನಿಗೆ ಬೇಕು ಬೇಕಾದದ್ದನ್ನು ಇಬ್ಬರೂ ಕೊಡುತ್ತಲೇ ಇರುತ್ತಾರೆ. 


ಒಟ್ಟಿನಲ್ಲಿ ಅವರಿಗೆ ವೋಟಿನಲ್ಲಿ ವಿನ್ ಆಗಬೇಕು ಅಷ್ಟೇ. 


ಕೊನೆಗೆ ಇವರಿಬ್ಬರಿಗೆ ಪಕ್ಷದ ಮುಖಂಡರೊಬ್ಬರು... ಈ ರೀತಿಯಾಗಿ ದಿನಾಲೂ ಏನೇನೋ ಕೊಡುವುದಕ್ಕಿಂತ,ಆ ಒಂದು ನಿರ್ಣಾಯಕ ವೋಟ್ ಇರುವ ವ್ಯಕ್ತಿಗೆ ನೀವು ಇಬ್ಬರೂ Auction ಮಾಡಿ.. ಅವನನ್ನೇ ಖರೀದಿಸಿ ಬಿಡಿ.ಯಾರು ಜಾಸ್ತಿ Auction ಕೂಗುತ್ತಾರೋ ಅವರಿಗೆಯೇ ಅವನು ತನ್ನ ವೋಟ್ ಹಾಕಲಿ.. ಎಂದು ಒಂದು ಮಾಸ್ಟರ್ ಪ್ಲ್ಯಾನ್  ಹೇಳುತ್ತಾರೆ. 


ಈ ಐಡಿಯಾ ಅಣ್ಣ ತಮ್ಮಂದಿರಗೆ ಕೂಡ  ಓಕೆ ಆಗುತ್ತದೆ. 


Auction Officer ಸಹ ಆ ಗ್ರಾಮಕ್ಕೆ ಬರುತ್ತಾನೆ. 


ಅವನು ಮೊದಲೇ ಹೇಳುತ್ತಾನೆ... ಈ ರೀತಿಯಾಗಿ ಒಬ್ಬನ ವೋಟ್ ಕೊಳ್ಳಲು ನಾನು ಎಲ್ಲಿಯೂ Auction ನಡೆಸಿಲ್ಲ.. ಮತ್ತು ಇದು ಕಾನೂನುಬಾಹಿರ ಎಂದು. 


ಆದರೆ ಅಣ್ಣ ತಮ್ಮಂದಿರು ಅವನಿಗೆ ಧಮ್ಕಿ ಹಾಕಿ.. ನೀವು Auction ಮಾಡಿ ಹೋಗಲೇ ಬೇಕು ಎಂದು ತುಂಬಾನೇ ಪೀಡಿಸುತ್ತಾರೆ. 


ಕೊನೆಗೆ ಅವರ ಕಿರುಕುಳಕ್ಕೆ ಮಣಿದ  Auction Officer.. ಸಾಯ್ಲಿ ಇದೊಂದು ಮಾಡಿ ಬೇಗ ಇಲ್ಲಿಂದ ಜಾಗ ಖಾಲಿ ಮಾಡುವ ಎಂದು ನಿರ್ಧರಿಸಿ... ಮಂಡೇಲಾ ನಲ್ಲಿಯೇ ನೇರವಾಗಿ ಕೇಳುತ್ತಾನೆ. 


- ಹೇಳು ರಾಜ... ಯಾವ ಮೊತ್ತದಿಂದ ಮೊದಲ Auction ಕೂಗಲಿ ನಿನಗೆ...ನಿನ್ನ ಬೆಲೆ ಎಷ್ಟು.. 500 ರೂಪಾಯಿಯ? ಎಂದು ಕೇಳುತ್ತಾನೆ. 


ಅದಕ್ಕೆ ಮಂಡೇಲಾ ಏನೂ ಹೇಳುವುದಿಲ್ಲ. 


Auction Officer ಮತ್ತೆ ಕೇಳುತ್ತಾನೆ.. 1000 ರೂಪಾಯಿಯಾ? 


ಮಂಡೇಲಾ ಆಗ ಕೂಡ ಏನೂ ಹೇಳುವುದಿಲ್ಲ. 


ಮತ್ತೆ ಎಷ್ಟು 2000 ರೂಪಾಯಿಯಾ.. ಎಂದು ಆಫೀಸರ್ ತೀಕ್ಷ್ಣವಾಗಿ ಕೇಳುತ್ತಾನೆ. 


ಅದಕ್ಕೆ ಮಂಡೇಲಾ 10,000 ರೂಪಾಯಿ ಎಂದು ಹೇಳುತ್ತಾನೆ. 


ಅಡಪಾವಿ...ಒಂದು ವೋಟಿಗೆ 500 ಇಲ್ಲದಿದ್ದರೆ 1000 ಕೊಡುವುದನ್ನು  ಕೇಳಿದ್ದೇನೆ... ಆದರೆ ನೀನು ಭಯಂಕರ ಇದ್ದಿ ಮಾರಾಯ... ಎಂದು ಆಫೀಸರ್ ಮಂಡೇಲಾನನ್ನೇ ಮೇಲಿನಿಂದ ಕೆಳಗೆ ನೋಡಿ ಹೇಳುತ್ತಾರೆ. 


ಆಫೀಸರ್ ಆ ಮಾತು ಹೇಳಿ ಮುಗಿಸುವುದರೊಳಗೆ ಚುನಾವಣೆಗೆ ನಿಂತಿರುವ ಅಣ್ಣ ಹೇಳುತ್ತಾನೆ... ನಾನು 1 ಲಕ್ಷ ಕೊಡುತ್ತೇನೆ.. ಎಂದು. 


ಅದಕ್ಕೆ ತಮ್ಮ 2 ಲಕ್ಷ Auction ಕೂಗುತ್ತಾನೆ. 


ಮತ್ತೆ ಅಣ್ಣ 5 ಲಕ್ಷ ಕೂಗುತ್ತಾನೆ. 


ತಮ್ಮ 10 ಲಕ್ಷ ಕೂಗುತ್ತಾನೆ. 


ನಂತರ ಅಣ್ಣ 50 ಲಕ್ಷ ಕೂಗುತ್ತಾನೆ. 


ಅದಕ್ಕೆ ತಮ್ಮ 80 ಲಕ್ಷ ಕೂಗುತ್ತಾನೆ. 


ಕೊನೆಗೆ ಅಣ್ಣ 1 ಕೋಟಿ ಕೂಗುತ್ತಾನೆ. 


ತಮ್ಮ ಕೂಡ 1 ಕೋಟಿ ಹತ್ತು ಲಕ್ಷ ಕೂಗುತ್ತಾನೆ. 


ಕಟ್ಟ ಕಡೆಗೆ ಅಣ್ಣ 1 ಕೋಟಿ ಇಪ್ಪತ್ತೈದು ಲಕ್ಷ ಕೂಗುತ್ತಾನೆ!! 


Auction Officer ಗೆ ಸಿಕ್ಕಾಪಟ್ಟೆ ಟೆನ್ಶನ್ ಆಗ್ತದೆ... ಏನಿದು ಎಂದು!


ಏಕೆಂದರೆ ಚುನಾವಣೆಗೆ ನಿಂತಿರುವ ಇಬ್ಬರು ಅಭ್ಯರ್ಥಿಗಳೇ  ಘೋಷಣೆ ಮಾಡಿಕೊಂಡಿರುವ ತಮ್ಮ ತಮ್ಮ ಆಸ್ತಿಯ ಮೌಲ್ಯವೇ ಕೇವಲ 50,000 ಮತ್ತು ಒಂದು ಮೋಟಾರ್ ಸೈಕಲ್ ಆಗಿರುತ್ತದೆ.


ಇದೇ ಸಮಯದಲ್ಲಿ ಅಣ್ಣ ತಮ್ಮಂದಿರ ತಂದೆಯಾದ ಆ ಊರಿನ ಮುಖಂಡನ ಆರೋಗ್ಯದಲ್ಲಿ ಏರು ಪೇರಾಗಿದೆ ಎಂದು ತಿಳಿದು  ಎಲ್ಲರೂ ಅಲ್ಲಿಂದ ಓಡುತ್ತಾರೆ.


ಆ ನಂತರ  ಮಂಡೇಲಾ ದಿನಲೂ ತನ್ನದೊಂದು ಅಮೂಲ್ಯ ಓಟಿಗಾಗಿ ನಿತ್ಯವೂ ತನ್ನ ಡಿಮ್ಯಾಂಡು ಅನ್ನು ಆ ಅಣ್ಣ ತಮ್ಮಂದಿರಲ್ಲಿ ಜಾಸ್ತಿ ಮಾಡಿಕೊಳ್ಳುತ್ತಲೇ ಹೋಗುತ್ತಾನೆ. 


ಕೊನೆಯಲ್ಲಿ ಇವೆಲ್ಲವನ್ನು ತಡೆದುಕೊಳ್ಳಲು ಆಗದೆ ಸಿಟ್ಟಿಗೆದ್ದ, ರೊಚ್ಚಿಗೆದ್ದ ಆ ಅಣ್ಣ ತಮ್ಮಂದಿರಿಬ್ಬರೂ ಮಂಡೇಲಾನನ್ನು ಸಪರೇಟ್ ಸಪರೇಟ್ ಆಗಿ ಚೆನ್ನಾಗಿ ಚಚ್ಚಿ ಬಿಸಾಕುತ್ತಾರೆ. 


ಮತ್ತೆ ಅವನಿಗೆ ಇಬ್ಬರೂ ಕೂಡ  ಸಫರೇಟ್ ಆಗಿ ಬೆದರಿಕೆ ಕೂಡ ಹಾಕುತ್ತಾರೆ... ನಾನೇದರೂ ಸೋತರೆ ಮಗನೆ,ನಿನ್ನ ಕೊಲೆಯೇ ಮಾಡುತ್ತೇನೆ.. ಎಂದು!


ಈಗ ಮಂಡೇಲಾ ಯಾರಿಗೆ  ವೋಟ್ ಹಾಕಿದರೂ ಮತ್ತೊಬ್ಬ ಸೋತು ಅವನನ್ನು ಕೊಂದೇ ಕೊಲ್ಲುತ್ತಾನೆ.


ಏಕೆಂದರೆ ಅವರಿಬ್ಬರಿಂದಲೂ ಅದಾಗಲೇ ಮಂಡೇಲಾ ಬೇಕಾದಷ್ಟು ಖರ್ಚು ಕೂಡ ಮಾಡಿಸಿರುತ್ತಾನೆ. 


ಹಾಗಾದರೆ ಮಂಡೇಲಾ ಯಾರಿಗೆ ವೋಟ್ ಹಾಕುತ್ತಾನೆ? 


ಕಥೆಯಲ್ಲಿ ಮುಂದೇನಾಗುತ್ತದೆ?


ಬರೀ ಇಷ್ಟೇ ಕಥೆಯಾ..? 


ಆ ಎಲ್ಲಾ ಕಥೆ ತಿಳಿಯಲು ಹಾಗೂ ಇದರಲ್ಲಿರುವ ಹೊಟ್ಟೆ ಹುಣ್ಣಾಗಿಸುವ ಕಾಮಿಡಿಯನ್ನು ನೋಡಲು ನೀವು ಈ ಮೂವಿಯನ್ನೇ ನೋಡಬೇಕು. 


ಈ ಮೂವಿಯನ್ನು Madonne Ashwin ಕಥೆ ಬರೆದು,ಸ್ವತಃ ತಾವೇ ನಿರ್ದೇಶನ ಕೂಡ ಮಾಡಿದ್ದಾರೆ.Yogi Babu ನದ್ದು ಆಹಾ... ಎಂತಹ ಅತ್ಯಧ್ಭುತ ನಟನೆ ಇದರಲ್ಲಿ.ಏನೂ ಮಾಡದೆಯೇ ನಕ್ಕು ನಗಿಸುತ್ತಾನೆ ಆತ. Sheela Rajkumar, Sangili Murugan, G. M. Sundar, Kanna Ravi ಮುಂತಾದವರ ಅಭಿನಯ ಕೂಡ ಇದೆ. ಕಾಮಿಡಿ ಸಿನಿಮಾಗಳನ್ನು ಅತಿಯಾಗಿ ಇಷ್ಟ ಪಡುವವರು ಈ ಮೂವಿಯನ್ನು ಮಾತ್ರ ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ.ಇದು ಮಾತ್ರ ಬಹಳ ಚೆನ್ನಾಗಿದೆ ಆಯ್ತಾ.ನನಗಂತು ಇಷ್ಟವಾಯಿತು. 



#Mandela | Netflix 

Tamil Movie 

Political satire

Year - April 2021 


#Movies 

Ab Pacchu

Moodubidire

(https://phalgunikadeyavanu.blogspot.com) 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ