The Lunchbox
#The_Lunchbox | Netflix
ಉಪ್ಪು,ಹುಳಿ,ಖಾರ ಎಲ್ಲವನ್ನೂ ಅಚ್ಚು ಕಟ್ಟಾಗಿ ಹಾಕಿ ಮಾಡಿದ, ಬಿಸಿ ಬಿಸಿ ಅಡುಗೆಯಿರುವ ಲಂಚ್ ಬಾಕ್ಸ್ ನಂತಹ ಕಥೆ ಇದು.
ಕಥೆಯಲ್ಲಿ ಕೂಡ ಲಂಚ್ ಬಾಕ್ಸ್ ಇದೆ.
ಈ ಕಥೆಯಲ್ಲಿ ಅವನೊಬ್ಬ ಇರ್ತಾನೆ.
ಅವನಿಗೆ ಕಚೇರಿಯೊಂದರಲ್ಲಿ ಕೆಲಸ.
ಕೆಲಸದಲ್ಲಿ ಹೆಚ್ಚು ಕಡಿಮೆ 35 ವರ್ಷಗಳ ಸರ್ವಿಸ್.
50 ರಿಂದ 60 ರ ಒಳಗಿನ ವಯಸ್ಸು ಅವನದ್ದು.
ಇನ್ನೇನು ಒಂದೆರಡು ತಿಂಗಳಲ್ಲಿ ವೃತ್ತಿಯಿಂದ ನಿವೃತ್ತಿ ಕೂಡ ಆಗಬೇಕಾಗಿದೆ.
ಅವನಿಗೆ ಹೆಂಡತಿ ಮಕ್ಕಳು ಯಾರೂ ಇಲ್ಲ.
ಅವನು ಏಕಾಂಗಿ.
ತೀರಾ ಒಂಟಿ.
ಕಚೇರಿಯವರಿಗೂ ಅವನ ಬಗ್ಗೆ ಅಂತಹ ಆಸಕ್ತಿ ಏನೂ ಇಲ್ಲ.
ಅವನು ಮಧ್ಯಾಹ್ನದ ಊಟವನ್ನು ಹತ್ತಿರದ ಹೋಟೆಲ್ ನಿಂದ ಡಬ್ಬವಾಲಗಳ ಮೂಲಕ ತರಿಸಿಕೊಳ್ಳುತ್ತಾನೆ.
ಈ ಕಥೆಯಲ್ಲಿ ಅವಳೊಬ್ಬಳು ಇರ್ತಾಳೆ.
ಮದುವೆ ಆಗಿರುವ ಅವಳು ಒಂದು ಮಗುವಿನ ತಾಯಿ.
ಯುವತಿಯೂ ಹೌದು.. ತಕ್ಕ ಮಟ್ಟಿಗೆ ಸುಂದರಿಯೂ ಹೌದು.
ಅವಳ ಗಂಡನಿಗೆ ಅವಳ ಮೇಲೆಯೂ ಆಸಕ್ತಿ ಇಲ್ಲ,ಅವಳ ಅಡುಗೆ ಮೇಲೆಯೂ ಆಸಕ್ತಿ ಇಲ್ಲ.
ಎಂದಿಗೂ ಅವಳ ಅಡುಗೆಯನ್ನು ಅವನು ಮನಸಾರೆ ಮೆಚ್ಚಿ ಹೊಗಳಿದವನಲ್ಲ.
ಅವಳಿಗೆ ತನ್ನ ಗಂಡನಿಗೆ ಹೇಗಾದರೂ ರುಚಿ ರುಚಿಯಾಗಿ ಮಾಡಿ ಬಡಸಿ Impress ಮಾಡಬೇಕು ಎಂಬ ಹುಮ್ಮಸ್ಸು.
ಅದಕ್ಕಾಗಿ ಅವಳು ತನ್ನ ಅಪಾರ್ಟ್ಮೆಂಟ್ ನ ಮೇಲಿನ ರೂಮಿನ ಆಂಟಿಯಿಂದ ಸಿಕ್ಕಾಪಟ್ಟೆ ಸಹಾಯ ಹಾಗೂ ಟಿಪ್ಸ್ ಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಲೇ ಇರುತ್ತಾಳೆ.
ಆ ಆಂಟಿ ಹೇಳಿದ ನಳಪಾಕ, ನಳಿನಿಪಾಕ, ಹೊಸ ಹೊಸ Experiment ಗಳನ್ನು ತನ್ನ ಅಡುಗೆಯಲ್ಲಿ ಪ್ರಯೋಗ ಮಾಡುತ್ತಲೇ ಇರುತ್ತಾಳೆ.
ಕೆಲವೊಮ್ಮೆ ಆಂಟಿ Special Ingredients ಗಳನ್ನು ಸಹ ಬುಟ್ಟಿಯೊಂದರಲ್ಲಿ ಹಾಕಿ ಕೆಳಗಿನ ಅವಳ ಅಡುಗೆ ಕೋಣೆಯ ಕಿಟಕಿ ಪಕ್ಕವೇ ಹಗ್ಗದ ಮೂಲಕ ಕೆಳಗಿಳಿಸುತ್ತಾಳೆ.ಒಟ್ಟಿನಲ್ಲಿ ಅವಳ ಅಡುಗೆಯ ರುಚಿ ಹೆಚ್ಚಾಗಲು ಆಂಟಿಯದ್ದು ಕೂಡ ಒಂದು ಒಟ್ರಾಸಿ ಪ್ರೋತ್ಸಾಹ ಇಲ್ಲಿ.
ಅವಳು ಕೂಡ ಮಧ್ಯಾಹ್ನದ ಅಡುಗೆ ಮಾಡಿ ಅದನ್ನು ಡಬ್ಬವಾಲಗಳ ಮೂಲಕವೇ ತನ್ನ ಗಂಡನ ಆಫೀಸಿಗೆ ಕಳುಹಿಸುತ್ತಾಳೆ.
ಆದರೆ ಹೆಚ್ಚಿನ ಎಲ್ಲಾ ದಿನವೂ ಆ ಡಬ್ಬಗಳಲ್ಲಿರುವ ಊಟ ಹಾಗೂ ಪದಾರ್ಥಗಳು ಖಾಲಿಯಾಗದೇ ಹಾಗೇ ಹಿಂದಿರುಗುತ್ತಿದ್ದವು.ಅಂದರೆ ಅವಳ ಗಂಡ ಅದರ ಟೇಸ್ಟ್ ಕೂಡ ನೋಡುತ್ತಿರಲಿಲ್ಲ.
ಹೀಗಿರುವಾಗ ಈ ಕಥೆಯಲ್ಲಿ ಒಂದು ದಿನ ಒಂದು ಸಣ್ಣ ಟ್ವಿಸ್ಟ್ ಬರುತ್ತದೆ.
ಈ ಡಬ್ಬವಾಲಗಳ ಮಿಸ್ಟೇಕ್ ನಿಂದಾಗಿ ಈ ಕಚೇರಿಯಲ್ಲಿ ಕೆಲಸ ಮಾಡುವವನಿಗೆ ಅವಳು ಕಳುಹಿಸಿದ ಡಬ್ಬ ತಲುಪುತ್ತದೆ... ಅದೇ ರೀತಿ ಅವಳ ಗಂಡನಿಗೆ ಆ ಕಚೇರಿಯವನ ಡಬ್ಬ ತಲುಪುತ್ತದೆ.ಯೆಸ್.. ಜಸ್ಟ್ ಉಲ್ಟಾಪಲ್ಟ ಆಗಿರುತ್ತದೆ.
ಈ ಕಚೇರಿಯಲ್ಲಿರುವವನಿಗೆ ಆ ದಿನ ಅವನಿಗೆ ಮಿಸ್ಟೇಕ್ ಆಗಿ ಬಂದ ಡಬ್ಬಗಳಲ್ಲಿದ್ದ ಎಲ್ಲಾ ಫುಡ್ ತುಂಬಾ ಇಷ್ಟ ಆಗುತ್ತದೆ.ಎಲ್ಲವನ್ನೂ ತಿಂದು ಖಾಲಿ ಮಾಡಿ ಡಬ್ಬ ವಾಪಸ್ ಕಳುಹಿಸುತ್ತಾನೆ.
ಆ ದಿನ ಡಬ್ಬವಾಲಗಳು ಹಿಂದಿರುಗಿಸಿದ ಡಬ್ಬಾದಲ್ಲಿ ಎಲ್ಲಾ ಫುಡ್ ಗಳು ಖಾಲಿಯಾಗಿರುವುದನ್ನು ನೋಡಿ ಅವಳಿಗೆ ತುಂಬಾ ಖುಷಿಯಾಗುತ್ತದೆ ಅದರ ಜೊತೆಗೆ ಆಶ್ಚರ್ಯ ಕೂಡ ಆಗುತ್ತದೆ. ಏಕೆಂದರೆ ಎಂದೂ ಆ ರೀತಿ ಆದದ್ದು ಇಲ್ಲ.
ರಾತ್ರಿ ಮನೆಗೆ ಬಂದ ಗಂಡನ ಬಳಿ ಅವಳು ಕೇಳುತ್ತಾಳೆ..ಹೇಗಿತ್ತು ಈ ದಿನ ನಾನು ಕಳುಹಿಸಿದ ಊಟ.. ಎಂದು.
ಅದಕ್ಕೆ ಅವನು " ನೀನು ಮಾಡಿದ ಆಲೂ ಗೋಬಿ ನಿಜವಾಗಿಯೂ ಚೆನ್ನಾಗಿತ್ತು.." ಎಂದು ಹೇಳುತ್ತಾನೆ.
ಆದರೆ ಅವಳು ಆ ದಿನ ಆಲೂ ಗೋಬಿ ಮಾಡಿ ಕಳುಹಿಸಿರುವುದೇ ಇಲ್ಲ. ಅವಳಿಗೆ ವಿಷಯ ಅರ್ಥ ಆಗುತ್ತದೆ,ಡಬ್ಬ Exchange ಆಗಿದೆ ಎಂದು.
ಅವಳು ಈ ವಿಷಯವನ್ನು ಮೇಲಿನ ರೂಮಿನ ಆಂಟಿಗೆ ತನ್ನ ಅಡುಗೆ ಕೋಣೆಯ ಕಿಟಕಿ ಬದಿಯಿಂದಲೇ ಕೂಗಿ ಹೇಳುತ್ತಾಳೆ. ಇದರ ಕಥೆಯಲ್ಲಿ ಅವರಿಬ್ಬರ ಸಂಭಾಷಣೆ ಆಗುವುದೇ ಈ ರೀತಿ.
ಅದಕ್ಕೆ ಆಂಟಿ ಹೇಳುತ್ತಾಳೆ...ಪೂರ್ತಿ ಡಬ್ಬ ಖಾಲಿ ಮಾಡಿ ಕಳುಹಿಸಿದ್ದಾರೆ,ಕನಿಷ್ಟ ಪಕ್ಷ ಥ್ಯಾಂಕ್ಸ್ ಹೇಳುವುದಾದರೂ ಬೇಡವಾ... ನೀನು ಒಂದು ಕಾಗದ ಬರಿ ಡಬ್ಬಗಳು ಪರಸ್ಪರ Exchange ಆಗಿದೆ ಎಂದು... ಎಂಬ ಮಹಾನು ಐಡಿಯಾ ಒಂದನ್ನು ಆಂಟಿ ಅವಳಿಗೆ ಕೊಡುತ್ತಾಳೆ.
ಅವಳು ಅದೇ ರೀತಿ.. ಡಬ್ಬಗಳು Exchange ಆಗಿದೆ, ನಾನು ಕಳುಹಿಸಿರುವ ಡಬ್ಬ ನಿಮಗೆ ಬಂದಿದೆ, ನಿಮ್ಮ ಡಬ್ಬ ಬಹುಶಃ ನನ್ನ ಗಂಡನಿಗೆ ಹೋಗಿರಬಹುದು ... ಎಂದು ಒಂದು ಪತ್ರ ಬರೆದು ಡಬ್ಬದಲ್ಲಿರುವ ಚಪಾತಿಗಳ ನಡುವೆ ಆ ಪತ್ರವನ್ನು ಇಟ್ಟು ಕಳುಹಿಸುತ್ತಾಳೆ.
ಆ ದಿನವೂ ಡಬ್ಬ ಉಲ್ಟಾಪಲ್ಟ ಆಗುತ್ತದೆ. ಮುಂದೆ ಎಲ್ಲಾ ದಿನ ಹೀಗೆಯೇ ಆಗುವುದು.
ಅವತ್ತೂ ಕೂಡ ಡಬ್ಬದಲ್ಲಿರುವ ಎಲ್ಲವನ್ನೂ ತಿಂದು ಖಾಲಿ ಮಾಡಿ.. ಅವನು ಅವಳ ಪತ್ರ ಓದಿ,ಅದಕ್ಕೆ ತಾನೊಂದು ಪತ್ರ ಬರೆದು ಆ ಖಾಲಿ ಡಬ್ಬದಲ್ಲಿ ಇಟ್ಟು ಕಳುಹಿಸುತ್ತಾನೆ.
ಅವಳಿಗೆ ಅವನ ಪತ್ರ ಸಿಗುತ್ತದೆ..
ಅದರಲ್ಲಿ ಬರೆದಿರುತ್ತಾನೆ..ಊಟ ಚೆನ್ನಾಗಿತ್ತು, ಆದರೆ ಈ ದಿನದ ಊಟದಲ್ಲಿ ಉಪ್ಪು ಸ್ವಲ್ಪ ಜಾಸ್ತಿ ಆಗಿತ್ತು.. ಎಂದು.
ಅದನ್ನು ಅವಳು ಮೇಲಿನ ರೂಮಿನ ಆಂಟಿಗೆ ಹೇಳ್ತಾಳೆ.
ಆಂಟಿ ಹೇಳ್ತಾಳೆ.. ಅವನಿಗೆಷ್ಟು ಕೊಬ್ಬು, ಒಂದು ಥ್ಯಾಂಕ್ಸ್ ಕೂಡ ಹೇಳ್ಬಾರ್ದಾ... ಅವನಿಗೆ ನಾಳೆ ತುಂಬಾ ಖಾರ ಮಾಡಿಯೇ ಅಡುಗೆ ಮಾಡಿ ಕಳುಹಿಸು.. ತಡಿ ನಿನಗೆ ಸ್ವಲ್ಪ ಸ್ಪೆಷಲ್ ಚಿಲ್ಲಿ ಗಳನ್ನು ಕಳುಹಿಸುತ್ತಾನೆ ಎಂದು ಒಂದಷ್ಟು ಖಾರದ ಮೆಣಸುಗಳನ್ನು ಬುಟ್ಟಿ ಮೂಲಕ ಮೇಲಿನಿಂದ ಕೆಳಗೆ ಅವಳಲ್ಲಿಗೆ ತಲುಪಿಸುತ್ತಾಳೆ.
ಅವಳು ಆ ದಿನ ತುಂಬಾ ಖಾರ ಮಾಡಿಯೇ ಅಡುಗೆ ಮಾಡಿ ಕಳುಹಿಸುತ್ತಾಳೆ.
ಅವನು ಎಲ್ಲವನ್ನೂ ತಿನ್ನುತ್ತಾನೆ.
ಆ ದಿನವೂ ಖಾಲಿ ಡಬ್ಬ ಅವಳ ಮನೆಗೆ ಬರುತ್ತದೆ.
ಜೊತೆಗೆ ಅವನದ್ದೊಂದು ಕಾಗದ.
ಊಟ ಚೆನ್ನಾಗಿತ್ತು. ಆದರೆ ಊಟದ ನಂತರ ಖಾರದ ಬಾಯಿಗೆ ಬಾಳೆಹಣ್ಣುಗಳನ್ನು ತಿಂದರೆ ಒಳ್ಳೆಯದಾಗುತ್ತದೆ. ನೀವು Next ಊಟ ಕಳುಹಿಸುವಾಗ ಒಂದೆರಡು ಬಾಳೆಹಣ್ಣುಗಳನ್ನು ಕೂಡ ಡಬ್ಬದಲ್ಲಿಟ್ಟು ಕಳುಹಿಸಿ ಬಿಡಿ..ಎಷ್ಟೊ ಜನ ಬಾಂಬೆಯಲ್ಲಿ ಬರೀ ಬಾಳೆಹಣ್ಣು ತಿಂದೇ ಜೀವಿಸುತ್ತಾರೆ ಗೊತ್ತಾ...ಆರೋಗ್ಯಕ್ಕೂ ಒಳ್ಳೆಯದು... ಎಂದು ಅವನು ತನ್ನ ಪತ್ರದಲ್ಲಿ ಬರೆದಿರುತ್ತಾನೆ.
ಈ ರೀತಿಯಾಗಿ ಅವರಿಬ್ಬರ ನಡುವೆ ಪತ್ರವೊಂದು ದಿನಾಲೂ ಓಡಾಡಲು ಶುರು ಆಗುತ್ತದೆ.
ಒಂದು ದಿನ ಅವಳು ತನ್ನ ಕಥೆ ಹೇಳುತ್ತಾಳೆ.
ಮತ್ತೊಂದು ದಿನ ಅವಳು ತನ್ನ ನೋವು ಕೂಡ ಹೇಳುತ್ತಾಳೆ.
ಅವನು ಬಹಳ ಸೊಗಸಾಗಿಯೇ ಅವಳಿಗೆ ಸಮಾಧಾನ ಹೇಳುತ್ತಾನೆ.
ಅವಳಿಗೆ ಅವನು ಇಷ್ಟ ಆಗುತ್ತಾನೆ.
ಅವನಿಗೆ ಅವಳು ಇಷ್ಟ ಆಗುತ್ತಾಳೆ.
ಒಂದು ದಿನ ಅವಳು ಪತ್ರ ಬರೆಯುತ್ತಾಳೆ.. ನನ್ನ ಗಂಡನಿಗೆ ಬೇರೆ ಸಂಬಂಧ ಇದೆ. ಅವನಿಗೆ ನಾನು ಬೇಡ ಎಂದು ಅನಿಸುತ್ತದೆ. ಅದಕ್ಕಾಗಿ ನಾನೇ ಗಂಡನಿಂದ ದೂರ ಹೋಗಲು ಬಯಸುತ್ತಿದ್ದೇನೆ. ಭೂತಾನ್ ನಲ್ಲಿ GDP ತುಂಬಾ ಕಡಿಮೆ ಇದೆ. ಆದರೂ ಅಲ್ಲಿಯ ಜನರ ನೆಮ್ಮದಿಯೇ ಅವರ GDP ಯಂತೆ... ನಾನು ಆದರೆ ಅಲ್ಲಿಗೆಯೇ ಹೋಗುತ್ತೇನೆ.. ಎಂದು ತುಂಬಾ ನೋವಿನಿಂದ ಪತ್ರ ಬರೆಯುತ್ತಾಳೆ.
ಅದಕ್ಕೆ ಇವನೂ ಕೂಡ ಒಂದು ಪತ್ರ ಬರೆಯುತ್ತಾನೆ...
ನಾನು ಕೂಡ ಏಕೆ ನಿನ್ನೊಡನೆ ಭೂತಾನ್ ಗೆ ಬರಬಾರದು ಎಂದು?
ಅದನ್ನು ಓದಿ ಅವಳಿಗೆ ಖುಷಿ ಆಗುತ್ತದೆ..
ಅವಳು ಅವನ ಹೆಸರು ಕೇಳುತ್ತಾಳೆ.
ಅವನು ಹೇಳುತ್ತಾನೆ.
ನಂತರ ಅವಳು ಹೇಳುತ್ತಾಳೆ... ನಾವು ಇಬ್ಬರು ಪತ್ರದ ಮೂಲಕ ಮಾತ್ರ ಪರಿಚಯ ಹೊಂದಿದ್ದೇವೆ.ಏಕೆ ಒಮ್ಮೆ ನಾವು ನೇರವಾಗಿ ಭೇಟಿ ಆಗಬಾರದು. ನಾಳೆ ಸಿಟಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಭೇಟಿ ಆಗುವ,ಪ್ಲೇಸ್ ಹೇಳುತ್ತೇನೆ, ಅಲ್ಲಿ ನಾವು ನನ್ನಿಷ್ಟದ ಕೀಮಾ ಪಾವ್ ತಿನ್ನುವ.. ಎಂದು ಪತ್ರದ ಮೂಲಕ ಹೇಳುತ್ತಾಳೆ.
ಅವಳು ಚಿಕ್ಕ ವಯಸ್ಸಿನವಳು.
ಅವನು ನಿವೃತ್ತಿಯ ವಯಸ್ಸಿನವನು.
ಅವನು ಅವಳ ಭೇಟಿಗೆ ಹೋಗುತ್ತಾನಾ?!
ಕಥೆಯಲ್ಲಿ ಮುಂದೆ ಏನಾಗುತ್ತದೆ..ಅವರ ಪ್ರೇಮ್ ಕಹಾನಿ ತುದಿ ಮುಟ್ಟುತ್ತಾ...?
ಆ ಸುಂದರ ಕಥೆ ತಿಳಿಯಲು ನೀವು ಈ ಮೂವಿಯನ್ನೇ ನೋಡಬೇಕು.
ಇದೊಂದು ಸೊಗಸಾದ Romantic Drama ಆದರೂ ಇದರಲ್ಲಿರುವ Dark Comedy ಕೂಡ ಅಷ್ಟೇ ಚೆನ್ನಾಗಿದೆ. ಅದರಲ್ಲೂ Irrfan Khan ಹಾಗೂ Nawazuddin Siddiqui ಯ ನಡುವಿನ ಪೆಕ್ರತನದ ಮಾತುಗಳು ಬಹಳ ಕಚಗುಳಿ ಇಡುತ್ತದೆ.ಪೆಂಗನಂತೆ ಕಾಣ Nawazuddin ಇಲ್ಲಿ Irfan Khan ನ Assistant ಆಗಿ ಇರುತ್ತಾನೆ. ಮುಂದೆ Irfan ನಿವೃತ್ತಿ ಆದ ನಂತರ ಕಚೇರಿಯಲ್ಲಿ ಆ ಕೆಲಸ ಅವನಿಗೆ ಎಂದೇ ಇರುತ್ತದೆ. ಆದರೆ Irfan ಅವನಿಗೆ ಸರಿಯಾಗಿ ಕೆಲಸವನ್ನೇ ಕಲಿಸುವುದಿಲ್ಲ,ಸರಿಯಾದ ಟ್ರೈನಿಂಗ್ ಕೂಡ ಕೊಡುವುದಿಲ್ಲ.
ಒಮ್ಮೆ Nawazuddin ಹೀಗೆ Irfan ಬಳಿ ತುಂಬಾ ಕುತೂಹಲದಿಂದ ಹೇಳುತ್ತಾನೆ.. " ಸಾರ್.. ನಿಮ್ಮ ಬಗ್ಗೆ ತುಂಬಾ ಕಚೇರಿಯಲ್ಲಿ ತುಂಬಾ ಕೇಳಿದ್ದೇನೆ. ಒಮ್ಮೆ ನೀವು ಒಂದು ಬೆಕ್ಕನ್ನು ಕಾಲಿನಿಂದ ಒದ್ದಿದ್ದೀರಿ ಅಂತೆ. ಅದು ರೋಡ್ ಗೆ ಹೋಗಿ ಬಿದ್ದು, ಆ ನಂತರ ಗಾಡಿಯ ಅಡಿಗೆ ಬಿದ್ದು ಸತ್ತೇ ಹೋಯಿತಂತೆ.. ಆದರೂ ನೀವು ಅದರ ಕಡೆಗೆ ನೋಡದೆಯೇ ಹೋಗಿ ಬಿಟ್ಟಿರಿ ಅಂತೆ..ಎಂದು ಕಚೇರಿಯಲ್ಲಿ ಎಲ್ಲರೂ ನಿಮ್ಮ ಬಗ್ಗೆ ಹೇಳ್ತಾರೆ... ಹೌದಾ ಸಾರ್.. ನೀವು ನಿಜವಾಗಿಯೂ ಅಷ್ಟೊಂದು ಕ್ರೂರಿ ಯಾ..?ನಿಮಗೆ ಕರುಣೆ ಎನ್ನುವುದೇ ಇಲ್ಲವಾ.. " ಎಂದು ಕೇಳುತ್ತಾನೆ.ಅದಕ್ಕೆ Irfan ಹೇಳ್ತಾನೆ.." ಇಲ್ಲ... ಇಲ್ಲ.. ಅವರು ಸುಳ್ಳು ಹೇಳುತ್ತಿದ್ದಾರೆ,ನಿಜವಾಗಿಯೂ ನಾನು ಒಬ್ಬ ಮನುಷ್ಯನನ್ನು ಒದ್ದಿದ್ದೆ,ಅವನು ಗಾಡಿಯ ಅಡಿಗೆ ಬಿದ್ದು Actually ಸತ್ತು ಹೋಗಿದ್ದು.. "ಎಂದು ಹೇಳಿ Nawazuddin ನನ್ನೇ ಬೇಸ್ತು ಬೀಳಿಸುತ್ತಾನೆ Irfan.
ಡಬ್ಬದೊಳಗಿನ ಬಿಸಿ ಚಪಾತಿಗಳ ನಡುವಿನ ಪತ್ರವೊಂದು ಹಾಗೇ ಸದ್ದಿಲ್ಲದೆಯೇ ಎದೆ ಬೆಚ್ಚಗಾಗಿಸುವ ಪ್ರೇಮವೊಂದನ್ನು ಅರಳಿಸುವ ಬಗೆ ಉಂಟಲ್ಲಾ ಅದು ನಿಜವಾಗಿಯೂ ಬಹಳ ಸುಂದರವಾಗಿದೆ ಇಲ್ಲಿ.ಎಂದಿನಂತೆ Irfan ನದ್ದು ಇಲ್ಲಿ ಕೂಡ ಕೊಂಡಾಡುವಂತಹದ್ದೇ ಅಭಿನಯ.ಪತ್ರದೊಳಗಿನ ಅವನ ಮಾತು ಕೂಡ ಜೇನಿನಲ್ಲಿಯೇ ಅದ್ದಿ ತೆಗೆದಂತೆ ಇದೆ.No doubt ಅವನೊಬ್ಬ ಅಧ್ಭುತ ಕಲಾವಿದ,ಅವನ ಧ್ವನಿಯಲ್ಲಿ ಅದೆನೋ ಮ್ಯಾಜಿಕ್ ಇದೆ.. ಅದನ್ನು ವಿವರಿಸುವುದು ಸ್ವಲ್ಪ ಕಷ್ಟ.ಅದಕ್ಕಾಗಿ ಅವನನ್ನೇ ತಲ್ಲೀನತೆಯಿಂದ ಕೇಳಬೇಕು.
Ritesh Batra ಇದನ್ನು ನಿರ್ದೇಶಿಸಿದ್ದಾರೆ.
Irrfan Khan, Nimrat Kaur, Nawazuddin Siddiqui ಇದರಲ್ಲಿ ಅಭಿನಯಿಸಿದ್ದಾರೆ ಮತ್ತು ಎಲ್ಲರೂ ಬಹಳ ಸಹಜವಾಗಿ ಸುಂದರವಾಗಿಯೇ ಅಭಿನಯಿಸಿದ್ದಾರೆ. ಈ ಮೂವಿ ಹಲವಾರು ವಿಶ್ವ ಚಿತ್ರರಂಗದ ವೇದಿಕೆಗಳಲ್ಲಿ ಕೂಡ ಸಾಕಷ್ಟು ಸದ್ದು ಮಾಡಿತ್ತು.ಇದನ್ನು Feel good Movie ಎಂದು ನಿಸ್ಸಂಶಯವಾಗಿ ಹೇಳಬಹುದು.
#The_Lunchbox | Netflix
Hindi Movie
Romantic Drama
Year - 2013
#Movies
Ab Pacchu





Comments
Post a Comment