ಚೊರೆಪಟ್ ಎಂಬ ವಿಶಿಷ್ಟವಾದ ಕಲೆ
ದಿನ ನಿತ್ಯವೂ ಗ್ರೌಂಡಿಗೆ ಹೋದ ಕೂಡಲೇ ಮೊದಲು ಇಬ್ಬರು ಕ್ಯಾಪ್ಟನ್ ಗಳನ್ನು ನಿಲ್ಲಿಸಿ,ಟೀಮ್ ಮಾಡುವುದು ಎಲ್ಲಾ ಕಡೆ ಇರುವ ಕ್ರಿಕೆಟ್ ನ ಒಂದು ಸಾಮಾನ್ಯ ಸಂಪ್ರದಾಯ.
ಟೀಮ್ ಮಾಡುವುದೆಂದರೆ ದೊಡ್ಡವರಿಗೆ ಯಾವಾಗಲೂ ಉದಾಸೀನವೇ.ಹೆಚ್ಚಾಗಿ ಅವರು ಆಟವಾಡಲು ಬರುವುದೇ ತುಂಬಾ ಲೇಟು. ಗ್ರೌಂಡ್ ಫುಲ್ ಆಗದೇ,ಗ್ರೌಂಡಿನಲ್ಲಿ ಆಟವಾಡುವವರ ಬೊಬ್ಬೆ ಮನೆಯವರೆಗೆ ಕೇಳದಿದ್ದರೆ ಅವರು ಮನೆಯಿಂದ ಹೊರಡುವುದೇ ಇಲ್ಲ.ಒಂದು ವೇಳೆ ಬೇಗ ಬಂದರೂ ಕೂಡ ಕ್ಯಾಪ್ಟನ್ ಆಗಿ ಟೀಮ್ ರಚಿಸುವ ಉಮೇದು ಖಂಡಿತವಾಗಿಯೂ ಸೀನಿಯರ್ ಆಟಗಾರರಲ್ಲಿ ಎಂದಿಗೂ ಇರುವುದೇ ಇಲ್ಲ.
ನಮ್ಮಲ್ಲೂ ಹಾಗೆಯೇ.ಹಾಗಾಗಿ ಚಿಕ್ಕ ಪುಟ್ಟ ಬಾಲಕರೇ ನಮ್ಮಲ್ಲಿ ಯಾವಾಗಲೂ ಕ್ಯಾಪ್ಟನ್ ಗಳು.ಅವರು ಹೆಸರಿಗೆ ಮಾತ್ರ ಕ್ಯಾಪ್ಟನ್,ಅದರಲ್ಲೂ ಟೀಮ್ ಮಾಡಲು ಮಾತ್ರ ಅವರು ಕ್ಯಾಪ್ಟನ್.
ಆದರೂ ಆ ಬಾಲಕರಿಗೆ ಏನೋ ಒಂದು ಭಯಂಕರ ಉತ್ಸಾಹ.. ಈ ಅಣ್ಣನವರು ಈಗಲೇ ನಮ್ಮಲ್ಲಿ ನಾಯಕತ್ವ ಗುಣಗಳನ್ನು ಸಿಕ್ಕಾಪಟ್ಟೆ ತುಂಬುತ್ತಿದ್ದಾರೆ,ನಮ್ಮನ್ನು ಮಹಾನು ವ್ಯಕ್ತಿಗಳನ್ನಾಗಿ ಬೆಳೆಸಲು ಇವರೆಲ್ಲ ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ.. ಎಂದೇ ಅವರು ತಿಳಿದುಕೊಂಡಿರುತ್ತಾರೆ.
ಆದರೆ ನಾಯಕತ್ವ ಅದು ಇದು ಅಂತ ಯಾವುದೇ ಮಣ್ಣಾಂಗಟ್ಟಿ ಲಾಜಿಕ್ ಕೂಡ ಅಲ್ಲಿ ಇರುವುದಿಲ್ಲ.ಒಮ್ಮೆ ಟೀಮ್ ಆದ ಮೇಲೆ ಆ ಕ್ಯಾಪ್ಟನ್ ಗಳಿಗೆ,ಗ್ರೌಂಡಿಗೆ ತಂದ ಕೊಡಪಾನದಲ್ಲಿ ನೀರು ಖಾಲಿ ಆದಾಗಲೆಲ್ಲ ಮತ್ತೆ ಗ್ರೌಂಡಿಗೆ ನೀರು ತರುವುದೇ ಅವರ ಮುಂದಿನ ಬಹು ದೊಡ್ಡ ಜವಾಬ್ದಾರಿ ಆಗಿರುತ್ತದೆ.ಆದರೆ ಅದನ್ನೂ ಕೂಡ ಸರಿಯಾಗಿ ನಿರ್ವಹಿಸಿದರೆ ಅದರಲ್ಲಿ ಸಹ ಜೀವನಕ್ಕೆ ಅಗತ್ಯ ಬೇಕಾದ ಸಂಯಮ, ಶಿಸ್ತು, ತಾಳ್ಮೆ,ಸಹನೆ ಎಲ್ಲವೂ ಇದೆ.ನೋಡಿ ನಮ್ಮಂತಹ ಸಿನಿಯರ್ ಪ್ಲೇಯರ್ಸ್ ಗಳ ದೂರದೃಷ್ಟಿಯಲ್ಲಿ ಕೂಡ ಎಷ್ಟೆಲ್ಲಾ ಮೌಲ್ಯ ಹಾಗೂ ನೀತಿಗಳು ಅಡಗಿ ಕುಳಿತುಕೊಂಡಿದೆ.ಈಗೀನ ಮಕ್ಕಳಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಬಿಡಿ.ಅದನ್ನೆಲ್ಲ ಹೇಳಿ ಪ್ರಯೋಜನವಿಲ್ಲ.
ಗ್ರೌಂಡಿಗೆ ಬಂದ ಕೂಡಲೇ ಮೊದಲು ಈ ಬಾಲ ಕ್ಯಾಪ್ಟನ್ ಗಳು ಟಾಸ್ ಹಾಕಿ ತಮಗೆ ಬೇಕಾದ ಆಟಗಾರರನ್ನು ಒಬ್ಬರ ನಂತರ ಒಬ್ಬರು ಕರೆಯುತ್ತಾ ಹೋಗಿ ಕೊನೆಗೆ ಎರಡು ಟೀಮ್ ಮಾಡುತ್ತಾರೆ.ಇರುವವರಲ್ಲಿ ಒಳ್ಳೆಯ ಆಟಗಾರರನ್ನೇ ಅವರಿಬ್ಬರು ತಮ್ಮ ತಮ್ಮ ತಂಡಕ್ಕೆ ಮೊದಲು ಸೇರಿಸಿಕೊಳ್ಳುತ್ತಾರೆ.
ಹಿಂದೆ ಎಲ್ಲಾ ಹೆಚ್ಚಾಗಿ ನಾನು ಮೊದಲಿನರೆಡು ಸ್ಥಾನದಲ್ಲಿಯೇ ಇರುತ್ತಿದ್ದೆ. ಇಬ್ಬರು ಕ್ಯಾಪ್ಟನ್ ಗಳಲ್ಲಿ ಒಬ್ಬರಾದರೂ ಮೊದಲಿಗೆ ನನ್ನನ್ನೇ ಕರೆದುಬಿಡುತ್ತಿದ್ದರು.ಬ್ಯಾಟಿಂಗ್ ಬೌಲಿಂಗ್ ಎಲ್ಲಾ ಒಂದು ರೇಂಜಿಗೆ ಭಯಾನಕವಾಗಿ ಮಾಡುತ್ತಿದ್ದೆ. ಕೆಲವೊಮ್ಮೆ ಗೆಲ್ಲಿಸಿದ್ದು ಇದ್ದೇ,ಅದೇ ರೀತಿ ತುಂಬಾ ಸಲ ವಿನ್ ಆಗುವ ಮ್ಯಾಚ್ ಅನ್ನು ಸೋಲಿಸಿದ್ದು,ಹಾಗೂ ಸೋಲುವ ಮ್ಯಾಚ್ ಅನ್ನು ಕೂಡ ಊಹಿಸಲು ಅಸಾಧ್ಯವಾದ ರೇಂಜಿಗೆ ಮತ್ತಷ್ಟು ಹೀನಾಯವಾಗಿ ಸೋಲಿಸಿದ ಉದಾಹರಣೆ ಕೂಡ ಅಲ್ಲಲ್ಲಿ ಇದೆ. ಈಗಲೂ ಗ್ರೌಂಡಿನಲ್ಲಿ ಅದರ ಸವಿನೆನಪುಗಳನ್ನು ಎಲ್ಲರೂ ಮೆಲುಕು ಹಾಕುತ್ತಲೇ ಇರುತ್ತಾರೆ.ಒಟ್ಟಿನಲ್ಲಿ ತಂಡದಲ್ಲಿ ನನ್ನದು ಆಲ್ ರೌಂಡರ್ ಸ್ಥಾನ.
ಇತ್ತೀಚಿಗಿನ ಒಂದೆರಡು ವರ್ಷಗಳಲ್ಲಿ ಕ್ರಿಕೆಟ್ ಆಡದೇ ತುಂಬಾ ಸಮಯ ಆದ ಕಾರಣ,ಅಭ್ಯಾಸ ಕೂಡ ಇಲ್ಲದೇ ಇರುವುದರಿಂದ... ನಾನು ಸದ್ಯಕ್ಕೆ ಅಂತಹ ಮ್ಯಾಚ್ ವಿನ್ನಿಂಗ್ ಪ್ಲೇಯರ್ ಏನು ಅಲ್ಲ.ಅದರಲ್ಲೂ ಈಗ ನನಗಿಂತಲೂ ನಾಲ್ಕೈದು ಉತ್ತಮ ಆಟಗಾರರು ನಮ್ಮ ಗ್ರೌಂಡಿನಲ್ಲಿಯೇ ಇದ್ದಾರೆ.
ಆದರೂ ವಿಚಿತ್ರ ಏನೆಂದರೆ ಕ್ಯಾಪ್ಟನ್ ಗೆ ನಿಂತವರಲ್ಲಿ ಒಬ್ಬ ಬಾಲಕ,ಕೆಲವು ದಿನಗಳಿಂದ ನನಗಿಂತಲೂ ಒಳ್ಳೆಯ ಆಟಗಾರರನ್ನು ಕರೆಯುವ ಅವಕಾಶ ಇದ್ದರೂ ಸಹ ಎಲ್ಲರನ್ನೂ ಬಿಟ್ಟು ನನ್ನನ್ನೇ ಮೊದಲು ಕರೆಯುತ್ತಿದ್ದ.
ಆಹಾ.. ಏನಪ್ಪಾ ಇವನು,ನನ್ನ ಟ್ಯಾಲೆಂಟ್ ಬಗ್ಗೆ ನನಗೆಯೇ ಅಷ್ಟೊಂದು ನಂಬಿಕೆ ಇಲ್ಲ,ಆದರೂ ನನ್ನನ್ನೇ ಹುಡುಕಿ ಹುಡುಕಿ ಅವನ ತಂಡಕ್ಕೆ ಕರೆಯುತ್ತಿದ್ದಾನೆ ಅಂದರೆ ಅವನಿಗೆ ನನ್ನ ಮೇಲೆ ಎಷ್ಟೊಂದು ಕಾನ್ಫಿಡೆನ್ಸ್.. ಎಂದು ನನಗೆ ಸಿಕ್ಕಾಪಟ್ಟೆ ಖುಷಿ ಆಯಿತು.
ಆದರೂ ನನ್ನ ಸಮಾಧಾನಕ್ಕೆ ಒಮ್ಮೆ ಡೌಟ್ ಕ್ಲೀಯರ್ ಮಾಡಿಕೊಳ್ಳುವ ಎಂದು ಆ ಬಾಲಕನನ್ನೇ ಪಕ್ಕಕ್ಕೆ ಕರೆದು ಮೆಲ್ಲನೆ ಕೇಳಿದೆ.. "ಅಲಾ,ನನಗಿಂತ ಚೆನ್ನಾಗಿ ಆಡುವ ಬೇರೆ ಒಳ್ಳೆಯ ಪ್ಲೇಯರ್ಸ್ ಇದ್ದರೂ ಸಹ,ನಾನು ಸದ್ಯಕ್ಕೆ ಅಂತಹ ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದಿದ್ದರೂ ಸಹ.. ಏಕೆ ನೀನು ನನ್ನನ್ನು ಕೆಲವರಿಗಿಂತ ಮೊದಲೇ ನಿನ್ನ ತಂಡಕ್ಕೆ ಕರೆಯುತ್ತಿದ್ದಿಯಾ...?"
ಅದಕ್ಕೆ ಅವನು ಹೇಳಿದ " ಎದುರಾಳಿ ತಂಡದಲ್ಲಿ ಭಯಂಕರ ಚೊರೆಪಟ್ ಪ್ಲೇಯರ್(ಜಗಳ ಮಾಡಿ,ಮೋಸ ಮಾಡಿ ಆದರೂ ತಂಡ ಗೆಲ್ಲಲು ಸಿಕ್ಕಾಪಟ್ಟೆ ಕಾಣಿಕೆ ಸಲ್ಲಿಸುವವನು & ಅದೇ ದಿಕ್ಕಿನಲ್ಲಿ ದಿನ ನಿತ್ಯವೂ ಶ್ರಮಿಸುವವನು) ಇರುವುದರಿಂದ, ನಮ್ಮ ತಂಡದಲ್ಲಿಯೂ ಸಹ ಅಂತಹ ಯಾರಾದರೂ ಒಬ್ಬ ಅತ್ಯುತ್ತಮ ಚೊರೆಪಟ್ ಇದ್ದರೆ,ಆವಾಗ ನಮ್ಮ ತಂಡದ ಚೊರೆ ವಿಭಾಗಕ್ಕೆ(ಕುತಂತ್ರದಿಂದ ವೈರಿಗಳನ್ನು ಬಗ್ಗು ಬಡಿಯಲು ಕಾರ್ಯ ತಂತ್ರಗಳನ್ನು ಹೆಣೆಯುವ ಪಡೆ) ಬಲ ಬಂದಂತಾಗುತ್ತದೆ.ಆಗ ನಾವು ಕೂಡ ಚೆನ್ನಾಗಿ ಚೊರೆ ಮಾಡ್ಬಹುದು.ಅದಕ್ಕೆ ಇರಲಿ ಅಂತ ನಿಮ್ಮನ್ನು ಕ.. ರೆ.. ದ.. ದ್ದು.. " ಅಂತ ಚುಟುಕಾಗಿ ಹೇಳಿ ಮುಗಿಸಿ,ಕೊಡಪಾನದಲ್ಲಿ ನೀರು ತರಲು ಓಡಿದ ಆ ವೀರಬಾಲಕ.
ಏನಪ್ಪಾಆಆಆಆ ಇದು,ಹಿಂದೆ ಎಲ್ಲಾ ಟೀಮ್ ಮಾಡುವಾಗ ಪ್ರತಿಭೆಯ ಆಧಾರದಲ್ಲಿ ಒಳ್ಳೆಯ ಆಟಗಾರ ತಂಡದಲ್ಲಿ ಇರಬೇಕು ಎಂದು ತಂಡದ ರಚನೆಯಾಗುತ್ತಿತ್ತು.
ಈಗ ನೋಡಿದರೆ ಚೊರೆ ಮಾಡ್ಲಿಕ್ಕೆ ಎಂದೇ ನಮ್ಮ ತಂಡದಲ್ಲಿ ಸ ಒಂದು ಜನ ಇರ್ಲಿ ಅಂತ,ತಂಡಕ್ಕೊಬ್ಬ ಚೊರೆಪಟ್ ಅನ್ನು ಬಹಳ ಮುತುವರ್ಜಿಯಿಂದ, ಒಳ್ಳೆಯ ಆಟಗಾರ ಇರದಿದ್ದರೂ ಪರವಾಗಿಲ್ಲ, ಒಬ್ಬ ಅತ್ಯುತ್ತಮ ಚೊರೆಪಟ್ ತಂಡದಲ್ಲಿ ಇರಲೇ ಬೇಕು ಎಂದು ಆಯ್ಕೆ ಮಾಡುತ್ತಿರುವುದನ್ನು ನೋಡಿದರೆ.. ನಮ್ಮ ಗುಡ್ಡೆ ಕ್ರಿಕೆಟ್ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಿಮಗೆಲ್ಲಾ ಈಗಾಗಲೇ ಸ್ಪಷ್ಟವಾಗಿ ಅಂದಾಜಾಗಿರಬಹುದು ಫ್ರೆಂಡ್ಸ್ ಗಳೇ.
ಆದರೂ ಏನೇ ಹೇಳಿ...ಚೊರೆಪಟ್ ಇಲ್ಲದ ಕ್ರಿಕೆಟ್ ಸಿಕ್ಕಾಪಟ್ಟೆ ಬೋರ್ ಮಾರ್ರೆ,ಅದರಲ್ಲಿ ಮಜಾನೇ ಇರುವುದಿಲ್ಲ.ಕೆಲವರಿಗಂತು ಈ ಚೊರೆಪಟ್ ವಿದ್ಯೆ ದೈವದತ್ತವಾಗಿ ಬಂದಿರುವ ಕಲೆ.ಅಂತವರು ತಂಡದ ಜಯಕ್ಕಾಗಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇರುತ್ತಾರೆ.ಹೌದು ಕೇವಲ ತಂಡದ ಜಯಕ್ಕಾಗಿ ಅನ್ನತಕ್ಕಂತಹ ಮಾತನ್ನು ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು ಪ್ರೆಂಡ್ಸುಗಳೇ🏃♂️🏃♂️
(ದಿನ ನಿತ್ಯದ ಕ್ರಿಕೆಟ್ ಆಟವನ್ನು ಇನ್ನಿಲ್ಲದಂತೆ ಕಳೆಗಟ್ಟಿಸಿದ ಜೊತೆ ಜೊತೆಗೆ ಮನರಂಜನೆ ಹಾಗೂ ಎಷ್ಟೋ ಸವಿ ಸವಿ ನೆನಪುಗಳಿಗೂ ಕೂಡ ಕಾರಣರಾದ,ನಮ್ಮೆಲ್ಲರ ಕ್ರಿಕೆಟ್ ಗ್ರೌಂಡಿನಲ್ಲಿ ಇರುವ ಭಯಂಕರ ಹಾಗೂ ಅತ್ಯುತ್ತಮ ಚೊರೆಪಟ್ ಗಳಿಗೆ ಈ ಬರಹವನ್ನು ಬಹಳ ಪ್ರೀತಿಯಿಂದಲೇ ಸಮರ್ಪಿಸುತ್ತಿದ್ದೇನೆ)
.....................................................................................
#ವಿಷಯ_ಎಂತ_ಗೊತ್ತುಂಟಾ
Ab Pacchu
Moodubidire

Comments
Post a Comment