ಕಲಾಬು ಹೌಸಿನ ಪೂವಡಿ ಪೆಣ್ಣೆ..
ನನಗೆ ರಾತ್ರಿ ಎಲ್ಲಾ ಮಧ್ಯದಲ್ಲಿ ಎಚ್ಚರ ಆಗುವುದು ಬಹಳ ಕಡಿಮೆಯೇ ಆಯ್ತ.ಒಮ್ಮೆ ಮಲಗಿ ಬಿಟ್ಟರೆ ಮುಗಿಯಿತು.ಆದ್ರೂ 2.0 ಗಂಟೆಗೆ ಎಚ್ಚರ ಆಗಿ ಬಿಟ್ಟಿತ್ತು.ಹೊರಗೆ ನಾಯಿ ಏನೋ ಜೋರಾಗಿ ಬೊಗಳುತ್ತಾ ಶಬ್ಧ ಮಾಡುತ್ತಿತ್ತು.ಅದೊಂದು ಭಯಂಕರ ಶಿಸ್ತಿನ ನಾಯಿ.ಅಪ್ಪ ಏನಿರಬಹುದು ಅಂತ ನೋಡಲು ಮನೆಯ ಹೊರಗೆ ಹೋದರು.
ಎಚ್ಚರ ಬೇರೆ ಆಗಿತ್ತು,ಹಾಗಾಗಿ ಮೊಬೈಲ್ ನಲ್ಲಿ ಒಂದು ಬಾರಿ ಕಣ್ಣು ಹಾಯಿಸುವ ಅಂತ ಮೊಬೈಲ್ ಕೈಗೆತ್ತಿಕೊಂಡೆ.ಫೇಸ್ಬುಕ್, ವಾಟ್ಸಪ್,ಇನ್ಸ್ಟಾ.. ಎಲ್ಲವೂ ಗಾಢ ನಿದ್ದೆಯಲ್ಲಿ ತೂಕಡಿಸುತ್ತಿತ್ತು.ಆಗ ನೆನಪಾಗಿದ್ದೇ ಈ Clubhouse.ಒಂದೆರಡು ದಿನಗಳ ಹಿಂದೆಯಷ್ಟೇ ಅದನ್ನು Install ಮಾಡಿದ್ದೆ. ನೋಡುವ ಅಲ್ಲಿ ಈ ಹೊತ್ತಿನಲ್ಲಿ ಏನಾದರೂ ಗೋಳಿಬಜೆ(ಮಾತುಕತೆ) ನಡೀತಾ ಉಂಟಾ ಅಂತ ಅದನ್ನು ಓಪನ್ ಮಾಡಿದೆ.
ಅದರೊಳಗೆ ಹಲವಾರು ರೂಮ್ ಗಳು.ಎಷ್ಟೋ ಜನರು ನಿದ್ದೆ ಬಿಟ್ಟು Strangers ಗಳೊಂದಿಗೆ ದೋಸ್ತಿಕತೆ ಮಾಡುತ್ತಿದ್ದರು.ಇನ್ನಷ್ಟು ಜನ ಅದಕ್ಕಾಗಿ ಹವಣಿಸುತ್ತಿದ್ದರು, ಮತ್ತೊಂದಿಷ್ಟು ಜನ ಹಪಾಹಪಿಸುತ್ತಿದ್ದರು.ಏನಪ್ಪಾ ಇವರು ನಿದ್ದೆನೇ ಮಾಡ್ತಾ ಇಲ್ಲ.. ಏನಿದರ ಮರ್ಮ ಅಂತ ಒಂದೊಂದು ರೂಮುಗಳಿಗೆ ವಿಸಿಟ್ ಕೊಟ್ಟು ಬೇಲಿ ಹಕ್ಕಿಯಂತೆ ಸ್ವಲ್ಪ ಹೊತ್ತು ಅವರ ಮಾತುಕತೆ ನೋಡಿಕೊಂಡು, Sorry..ಕೇಳಿಕೊಂಡು ಇನ್ನೊಂದು ರೂಮಿಗೆ ಹಾರುವ ಕಾಯಕ ಮುಂದುವರಿಸುತ್ತಾ ಹೋದೆ.
ಅಲ್ಲೊಂದು ರೂಮ್ ಇತ್ತು. ಅಲ್ಲಿ ಕೂಡ ಒಂದಷ್ಟು ಜನ ಮಾತುಕತೆ ಎಲ್ಲಾ ಬೋರ್ ಆಗಿ ಕೊನೆಗೆ ಆಟವಾಡಲು ಶುರು ಮಾಡಿದ್ದರು.ಎಷ್ಟು ಅಂತ ಮಾತಾಡುವುದು ಹೇಳಿ,ಕೊನೆಗೆ ಏನೋ ಲಾಟ್ಪೋಟ್ ಗೇಮ್ ಆಡಿ ಟೈಂ ಪಾಸ್ ಮಾಡುವುದೇ ಕೆಲವೊಂದು ರೂಮಿನಲ್ಲಿ ಸರ್ವೇಸಾಮಾನ್ಯವಾಗಿ ಬಿಡುವುದು. ಏಕೆಂದರೆ ರೂಮಿನ ಬಾಗಿಲು ಮುಚ್ಚಿ ಹೊರಗೆ ನಡೀಲಿಕ್ಕೆ ಯಾರಿಗೆ ಸ ಮನಸ್ಸಿಲ್ಲ,ಒಟ್ರಾಸಿ ಏನಾದರೊಂದು ಮಾಡ್ತಾ ಇರ್ಬೇಕು. ಪುಂಡಿ ಬೇಯಿಸುವುದು(ಮಾತಿನ ಅಕ್ಕಿಕಡಬು ಹದವಾಗಿ ನಿಧಾನವಾಗಿ ಗಂಟೆಗಟ್ಟಲೆ ಕಡಬು ಕರಟಿ ಹೋಗುವವರೆಗೂ,ಕೆಲವೊಮ್ಮೆ ಕರಟಿದ ನಂತರವೂ ಬೇಯಿಸುತ್ತಲೇ ಇರುವುದು,ಕಡಬು ಮುಖ್ಯವಲ್ಲ,ಬೇಯಿಸುವುದೇ ಮುಖ್ಯ ಇಲ್ಲಿ)ಅಂತ ಒಂದೇ ವಾಕ್ಯದಲ್ಲಿ ಹೇಳಲು ಅಡ್ಡಿಯಿಲ್ಲ.
ಆ ಒಂದು ರೂಮ್ ಅಲ್ಲಿ ಎಲ್ಲಾ ಆಟಗಳು ಮುಗಿದು ಹಾಡುವ ಆಟ ಶುರುವಾಗಿತ್ತು. ಒಬ್ಬರ ನಂತರ ಒಬ್ಬರು ಅವರಿಗಿಷ್ಟ ಬಂದ ಹಾಡು ಹಾಡುವುದು ಎಂದು ತೀರ್ಮಾನವಾಗಿತ್ತು.ಎಲ್ಲರೂ ಶಂಕರ್ ಮಹಾದೇವನ್, ಅರಿಜಿತ್, ಶ್ರೇಯಾ ಘೋಷಲ್, ಸುನಿಧಿ ಚೌಹಾಣ್.. ಮೈ ಮೇಲೆ ಬಂದಂತೆ ಹಾಡುತ್ತಿದ್ದರು & ಆಡುತ್ತಿದ್ದರು.
ನಿಜವಾಗಿಯೂ ಅದರಲ್ಲಿ ಕೆಲವರು ಮಾತ್ರ ಬಹಳ ಚೆನ್ನಾಗಿಯೇ ಹಾಡಿದ್ದರು. ಇದು ಮುಗಿದ ಮೇಲೆ ಇನ್ನು ಇವರು Next ಆಟ ಏನು ಆಡಬಹುದು ಎಂದು ನಾನು ಕೂಡ ಬಹಳ ಹೊತ್ತಿನಿಂದ ಅಲ್ಲೇ ಬೇಲಿಯಲ್ಲಿ ಕುಳಿತುಕೊಂಡು ಎಲ್ಲವನ್ನೂ ಕೇಳುತ್ತಿದ್ದೆ.
ಎಲ್ಲರೂ ಅಪರಿಚಿತರೇ.ಅದರಲ್ಲೂ ಉತ್ತರ ಭಾರತದವರೇ ಜಾಸ್ತಿ ಇದ್ದದ್ದು.ಅಷ್ಟರಲ್ಲಿ ಯಾರೋ ಒಬ್ಬರು ನನ್ನನ್ನು ಗಮನಿಸಿ,ಈ ಜನ ಬಹಳ ಹೊತ್ತಿನಿಂದ ಇಲ್ಲೇ ಬೇಲಿಯಲ್ಲೇ ನೇತಾಡ್ತಾ ಇದೆಯಲ್ಲಾ, ಬಹುಶಃ ಇದೊಂದು ಕಂಚಿನ ಕಂಠದ ಕೋಗಿಲೆಯೇ ಇರಬಹುದು ಅಂದುಕೊಂಡು.." ಬಾಪ್ಪ ರಾಜ..ದಯವಿಟ್ಟು ಒಳಗೆ ಬಂದು ನೀನೂ ಒಂದು ಹಾಡು ಹಾಡಿಬಿಡು.." ಅಂತ ನನ್ನ ಹೆಸರು ಹೇಳಿ ಕರೆದರು.ಕೆಲವೇ ಕ್ಷಣಗಳಲ್ಲಿ ನಾಲ್ಕೈದು ಜನರ ಒಕ್ಕೊರಲಿನ ಕೂಗು, ಬೇಡಿಕೆ, ಆಕ್ರೋಶ ಅದೇ ಆಗಿ ಬದಲಾಗಿತ್ತು.ಅವರಿಗೆ ಕೇಳಿದ ವಾಯ್ಸೇ ಕೇಳಿ ಕೇಳಿ ಬೋರ್ ಬೇರೆ ಆಗಿತ್ತು ಅಂತ ಕಾಣುತ್ತದೆ.
ಹಿಂದೆ ಮಹಾನು ಗಾಯಕರು ಹಾಡಿದರೆ ಮಳೆಯೇ ಬರ್ತಿತ್ತಂತೆ,ನಾನು ಕೂಡ ಅದನ್ನು ಕೇಳಿದ್ದೆ.ಆದರೆ ನಾನು ಹಾಡಿದಾಗಲೆಲ್ಲ ಬಚ್ಚಲು ಮನೆಯಲ್ಲಿ ಸರಾಗವಾಗಿ ಬರುವ ನಳ್ಳಿ ನೀರೇ ಕೆಲವೊಮ್ಮೆ Stop ಆಗಿ ಹೋದ ಉದಾಹರಣೆಗಳೇ ನನ್ನ ಮುಂದೆ ಇತ್ತು,ಅಂತಹದರಲ್ಲಿ ಏನಪ್ಪಾ ಇವರು..ತಾಂಬೂಲ ಕೊಟ್ಟು.. ಹಾಡು ಬಾ ರಾಜ.. ಅಂತ ಕರೆಯುತ್ತಿದ್ದಾರೆ.
ಇರ್ಲಿ ಇರ್ಲಿ "Poovadi Penne.." ಯ ಎರಡು ಸಾಲನ್ನೇ ಪದೇ ಪದೇ ಕಿರುಚಿ ಈ ರೂಮನ್ನು ಒಂದು ಕಲಕಂಬುಲ(ರಾಡಿ ಎಬ್ಬಿಸುವುದು)ಮಾಡಿ ಬಿಡುವ ಅಂತ ಮನಸ್ಸು ಮಾಡಿದೆ. ಅದು ಕೂಡ ಮೊದಲ ಆ ಎರಡು ಪದ ಅಷ್ಟೇ ಬರುವುದು ನನಗೆ. ಆ ಹಾಡು ಹಿಂದೆ ಕೇಳಿ ಕೇಳಿ,ಯಾರು ಇರದೇ ಇದ್ದಾಗ ಬಾಯಿಗೆ ಬಂದಂತೆ ಹಾಡಿ ಹಾಡಿ ಅದಕ್ಕೆ ತುಳು ಸಾಲು ಎಲ್ಲಾ ಸೇರಿಸಿ ನನ್ನದೇ ಒಂದು ಹಾಡು ಮಾಡಿದ್ದೆ ನಾನು ಹೆಚ್ಚಿನ ಎಲ್ಲರಂತೆಯೇ.ಪ್ರತೀ ಸಲ ಹಾಡುವಾಗಲೂ ಹೊಸ ಸಾಹಿತ್ಯವೇ. ಅದೂ ಅಲ್ಲದೇ ಆ ರೂಮಿನ ಅವರೆಲ್ಲರೂ ಅಪರಿಚಿತರು.ನನಗೆ ಏಕೆ ಈಗ ಅಷ್ಟೆಲ್ಲ ಚಿಂತೆ. ಕಿವಿ ಮುಚ್ಚಿಕೊಂಡು ಯಾಕಪ್ಪಾಆಆಆಆ ಇವನೊಬ್ಬ ಬಂದು ಹಾಡಿದ... ಎನ್ನುವ ಪೀಲ್ ಅವರಿಗೆ ಬರಿಸಲೇ ಬೇಕು,ಆ ರೇಂಜಿಗೆ ನಾನು ಹಾಡಿ ಮೋಡಿ ಮಾಡಬೇಕು ಎಂದು ಹಾಡಲು ಗಟ್ಟಿ ಮನಸ್ಸು ಮಾಡಿಯೇ ಬಿಟ್ಟೆ.
ರೂಮಿನ ಒಳಗೆ ನುಗ್ಗಿ "ಪೂವಡಿ ಪೂವಡಿ ಪೆಣ್ಣೆ...." ಅಂತ ನಾನು ಜೋಶ್ ನಲ್ಲಿ ಜೋರಾಗಿ ಹಾಡಲು ಶುರು ಮಾಡಿದ್ದು ಅಷ್ಟೇ,ಹೊರಗೆ ಹೋಗಿದ್ದ ಅಪ್ಪ ಮನೆಯೊಳಗೆ ಬಂದು " ದಾದ ಮಾರಾಯ ಇಲ್ಲದಕುಲು ಜೆಪ್ಪೊಡಾ.. ಅತ್ತ್ ನಿನ್ನ ಈ ಆರ್ಕೆಸ್ಟ್ರಾನೇ ಇಡೀ ರಾತ್ರಿ ಕೇನೊಂದು ಕುಲ್ಲೊಡ( ರಾತ್ರಿಯಲ್ಲಿ ಈ ತರಹ ಹಾಡುವುದು ಭಯ ಹುಟ್ಟಿಸುವಂತಿದೆ ಮಗು)" ಎಂದು ಹೇಳಿ ಕ್ರೋಧದಿಂದ ಆರ್ಭಟಿಸಿ,ಬೆಚ್ಚದಿಂದ ಕೈಯಲ್ಲಿದ್ದ ಬೈರಸ್ ಒಮ್ಮೆ ಜೋರಾಗಿ ಕುಡ್ಪಿ ಮಲಗಲು ಹೊರಟು ಹೋದರು.ಮತ್ತೆ ನಾನು ಕಲಾಬು ಹೌಸಿನ ಆ ರೂಮಿನಲ್ಲಿ ಹಾಡುವ ಆಡುವ ಧೈರ್ಯ ತೋರದೆ ಹೊರಗೆ ಹಾರಿ ಬಂದು ನನ್ನ ರೂಮಿನಲ್ಲಿಯೇ ಮಲಗಿಕೊಂಡು ಪೂವಡಿ ಪೆನ್ನೆಯ ಎರಡು ಸಾಲು ಹಾಗೇ ಮನಸ್ಸಿನಲ್ಲಿಯೇ ಗುನುಗುನಿಸಿದೆ...
#ವಿಷಯ_ಎಂತ_ಗೊತ್ತುಂಟಾ
Ab Pacchu
Moodubidire
Comments
Post a Comment