ಹೊತ್ತು ಗೊತ್ತಿಲ್ಲದ ಕಥೆಗಳು




ಇದರಲ್ಲಿರುವುದು ಕೊಡಗಿನ ಪ್ಲೇವರ್ ನ ಕಥೆಗಳು.ಕೊಡಗು ಅಂದ ಕೂಡಲೇ ಹೇಗೆ ಕಾಫಿಯ ಘಮ ಹಾಗೇ ಸುವಾಸಿತವಾಗಿ ಮೂಗಿಗೆ ಅಡರಿಕೊಳ್ಳುತ್ತದೋ ಹಾಗೆಯೇ ಒಂದಿಷ್ಟು ಸುಲಿದ ಕಿತ್ತಳೆಯ ಹುಳಿ ಸಿಹಿ ಬೆರೆತ ಪರಿಮಳವೂ ಕೂಡ ಅದರೊಂದಿಗೆ ಸೇರಿಕೊಂಡು,ಓದುಗನನ್ನು ಒಂದಿಷ್ಟು ಮುದಗೊಳಿಸುತ್ತಾ ಹಾಗೇ ಸಲೀಸಾಗಿ ಓದಿಸುತ್ತಾ ಹೋಗುತ್ತದೆ ಇಲ್ಲಿರುವ ಹೆಚ್ಚಿನ ಎಲ್ಲಾ ಕಥೆಗಳು.


ಮಡಿಕೇರಿಯ ಮಂಜು,ಹೊಳೆಯ ಮಡೆಂಜಿ,ಮೊರಂಟೆ,ಕೊಂತಿ ಮೀನುಗಳು,ಮಲೆಯ ಮೊಟ್ಟೆ ಕೋಳಿಯ ಜೊತೆಗೆ ಲೇಖಕರು ದೇವರಕೊಲ್ಲಿ ಎಂಬ ತಮ್ಮ ಊರಿನಲ್ಲಿ ಅಲ್ಲಲ್ಲಿ ಉಸಿರಾಡಿದ,ಮೆಲುಕಾಡಿದ, ಚಡಪಡಿಸಿದ ಕಥೆಗಳನ್ನು ಒಂದೊಂದಾಗಿ ಎತ್ತಿಕೊಂಡು ಬಹಳ ಸೊಗಸಾಗಿ ಉಣಬಡಿಸಿದ್ದಾರೆ.


ಕಥೆಗಳು ನಮ್ಮ ಸುತ್ತ ಎಲ್ಲಾ ಕಡೆ ಇರುತ್ತದೆ. ಹೂ ಹೆಕ್ಕುವ,ಹಣ್ಣು- ಅಣಬೆಗಳನ್ನು ಆಯ್ದುಕೊಳ್ಳುವ ಕೈಗಳಿಗೆ ಅದನ್ನು ಗಮನಿಸುವ ವ್ಯವಧಾನ ಅಷ್ಟಾಗಿ ಇರುವುದಿಲ್ಲ ಅಷ್ಟೇ.ಆದರೆ ದೇವರಕೊಲ್ಲಿಯಲ್ಲಿ ಲೇಖಕ ಅಬ್ದುಲ್ ರಶೀದ್ ಅವರಿಗೆ ಕೈ ಹಾಕಿದ ಕಡೆಯಲ್ಲೆಲ್ಲಾ ಬರೀ ಕಥೆಗಳೇ ಸಿಗುತ್ತಾ  ಹೋಗುತ್ತದೆ.ಏಕೆಂದರೆ ಅವರು ಹೂ ಹಣ್ಣಿಗಿಂತಲೂ ಶ್ರದ್ಧೆಯಿಂದ ಹೆಕ್ಕಿದ್ದು ಬರೀ ಕಥೆಗಳನ್ನೇ ಅಲ್ಲಿ. 


ಇಲ್ಲಿ ಯಾವುದೂ ಕಾಲ್ಪನಿಕ ಕಥೆಯಿಲ್ಲ.ಎಲ್ಲವೂ ರಿಯಲಿಸ್ಟಿಕ್ ಎನಿಸುವ ಅನುಭವದ ಕಥೆಗಳು.ಕೆಲವೊಮ್ಮೆ ಕೊಡಗಿನಿಂದ ಕೆಳಗಿಳಿದು ಸಂಪಾಜೆ,ಬಂಟ್ವಾಳ ತಲುಪಿದರೆ ಇನ್ನು ಕೆಲವು ಮಂಗಳೂರು ಹಾಗೂ ಮಂಜೇಶ್ವರದವರೆಗೆ ತಮ್ಮ ಪರಿಧಿಯನ್ನು ವಿಸ್ತರಿಸಿಕೊಂಡಿವೆ.ಮೈಸೂರಲ್ಲೂ ಕ್ಷಣಕಾಲ ಬೀಡು ಬಿಡಲು ಮರೆಯುವುದಿಲ್ಲ.ಆದರೆ ಕೊಡಗನ್ನು ಮಾತ್ರ ಸಂಪೂರ್ಣವಾಗಿ  "ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ,ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ,ಸಾಫಾಗ್ ಅಳ್ಳ ತಿಟ್ಟಿಲ್ದಂಗೆ,ಮಡಿಕೇರಿ ಮೇಲ್ ಮಂಜು " ಎಂಬಂತೆ ಹಾಗೇ ತಣ್ಣಗೆ ಬಿಡದೇ ಆವರಿಸಿಕೊಂಡಿದೆ. 


ಎಲ್ಲವನ್ನೂ ಹೇಳಿ ಕೊನೆಯಲ್ಲಿ ಒಂದು ಶುಭಂನೊಂದಿಗೆ ಮುಗಿದು ಹೋಗುವ ಕಥೆಗಳಿಗಿಂತ ಎಲ್ಲವನ್ನೂ ಹೇಳದೆ ಒಂದಿಷ್ಟನ್ನು ತನ್ನಲ್ಲೇ ಉಳಿಸಿಕೊಳ್ಳುವ,ಬೇಕಂತಲೇ ಕೆಲವೊಂದನ್ನು ಬಚ್ಚಿಟ್ಟುಕೊಳ್ಳುವ ಕಥೆಗಳು ನನಗೆ ಇಷ್ಟ.ಅಂತಹ ಕಥೆಗಳು ಓದುಗನನ್ನು ಇನ್ನಿಲ್ಲದಂತೆ ಕಾಡುತ್ತದೆ.ಮುಗಿಯದ ಕಥೆಗಳಲ್ಲಿಯೇ ಪ್ರತೀ ಓದುಗನಿಗೂ ಮತ್ತಷ್ಟು ಕಥೆಗಳು ಹಾಗೇ  ಹುಟ್ಟಿಕೊಳ್ಳುತ್ತದೆ.ಇಲ್ಲಿರುವುದು ಎಲ್ಲವೂ ಅಂತಹದ್ದೇ ಒಟ್ಟು 23 ಕಥೆಗಳ ಒಂದು ಕಥಾ ಸಂಕಲನ.


ಕಾಡು ಮಲೆಗಳಲ್ಲಿ ಅಲೆದಾಡುತ್ತಾ ಪ್ರಕೃತಿಯನ್ನೂ ತುಸು ಮಾತಾಡಿಸುತ್ತಾ,ಅವುಗಳೂ ಸಹ ನಡು ನಡುವೆ ತಮ್ಮದೊಂದು ಕಥೆಯನ್ನು ಆ ಮಣ್ಣಿನ ಘಮದ ಭಾಷೆಯಲ್ಲಿಯೇ ಹೇಳಲು ಲೇಖಕ ಅನುವು ಮಾಡಿಕೊಟ್ಟರೆ ಅದರದ್ದೊಂದು ಮಜಾನೇ ಬೇರೆ ಬಿಡಿ.ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ಬೇಟೆಯಾಡದಿದ್ದರೂ ಪರವಾಗಿಲ್ಲ,ಒಮ್ಮೆ ಅದನ್ನು ಹಾಗೇ ಹೆಗಲಿಗೇರಿಸಿಕೊಂಡು ಮಲೆ ಹಾಗೂ ಕಾಫಿ ತೋಟಗಳಲ್ಲಿ ಸುಮ್ಮನೆ ಒಂದಷ್ಟು ಹೊತ್ತು ತನು ಮನ ತಂಪಾಗುವಂತೆ  ಸುತ್ತಾಡಿ ಬನ್ನಿ...ಇಷ್ಟ ಆಗುವ ಕಥೆಗಳೇ ಸಿಕ್ಕಿ ಬಿಡುತ್ತದೆ.


ಪುಸ್ತಕ - #ಹೊತ್ತು_ಗೊತ್ತಿಲ್ಲದ_ಕಥೆಗಳು

ಲೇಖಕರು - #ಅಬ್ದುಲ್_ರಶೀದ್


#ಪುಸ್ತಕಗಳು

Ab Pacchu

Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..