ಬಿಳಿ ಅಂಗಿಯ ಕ್ರಿಕೆಟ್ ಗೊಂದು ಚೊಚ್ಚಲ ಫೈನಲ್ ಪಂದ್ಯ ನಡೆಸಿಕೊಡುವ ಸಂಭ್ರಮ..




ಕ್ರಿಕೆಟ್ ಇತಿಹಾಸದ ಮೊತ್ತ ಮೊದಲ Official ಕ್ರಿಕೆಟ್ ಪಂದ್ಯ ನಡೆದದ್ದು ಪ್ರಸಿದ್ಧವಾದ MCG ಗ್ರೌಂಡಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನಡುವೆ 1877 ಮಾರ್ಚ್ 15 ರಂದು.ಲೆಕ್ಕ ಹಾಕಿದರೆ ಇಂದಿಗೆ ಹೆಚ್ಚು ಕಡಿಮೆ 144 ವರ್ಷಗಳ ಆಯಸ್ಸು ಈ ಅಚ್ಚ ಬಿಳಿಯ ಬಣ್ಣದ ಕ್ರಿಕೆಟ್ ಎಂಬ ಓಲ್ಡು ವೈನಿಗೆ. 



ಆ ನಂತರ ಕ್ರಿಕೆಟ್ ಹಲವಾರು ರೀತಿಯಲ್ಲಿ ಬದಲಾವಣೆಗೊಂಡು, ನಿಯಮದಲ್ಲಿ ಬದಲಾವಣೆ ಮಾತ್ರವಲ್ಲ ಪಂದ್ಯದ ಸ್ವರೂಪದಲ್ಲಿಯೂ ಬದಲಾವಣೆ ಆಗಿ ಏಕದಿನ ಪಂದ್ಯ ಹಾಗೂ ಟಿ-ಟ್ವೆಂಟಿ ಫಾರ್ಮೆಟ್ ಗಳು ಹುಟ್ಟಿಕೊಂಡದ್ದು ನಮಗೆಲ್ಲಾ ಗೊತ್ತೇ ಇದೆ. ಆ ನಂತರ T10 ಕೂಡ ಬಂತು, ಮುಂದೆ 100 ಎಸೆತಗಳ " The Hundred" ಎನ್ನುವ ಫಾರ್ಮೆಟ್ ಕೂಡ ಸದ್ಯದಲ್ಲಿಯೇ ಬಂದು ಕ್ರಿಕೆಟ್ ಪ್ರೀಯರನ್ನು ರಂಜಿಸಲಿದೆ. 


ಆದರೆ ಎಂತಹ ಆಕರ್ಷಣೀಯ ಹಾಗೂ ಎಷ್ಟೇ ಮನೋರಂಜನೆಯ ಕ್ರಿಕೆಟ್ ಫಾರ್ಮೆಟ್ ಗಳು ಹುಟ್ಟಿಕೊಂಡರು ಕೂಡ ಪ್ರತೀ ಒಬ್ಬ ನೈಜ ಕ್ರಿಕೆಟ್ ಆಟಗಾರ ತನ್ನದೊಂದು ಎದೆಯಲ್ಲಿ ಅತೀ ಪವಿತ್ರ ಎಂಬಂತಹ ಜಾಗವನ್ನು ಕೊಟ್ಟಿದ್ದು ಕೇವಲ ಟೆಸ್ಟ್ ಕ್ರಿಕೆಟ್ ಗೆ ಮಾತ್ರ. ಇಂದಿಗೂ ಆ ಫಾರ್ಮೆಟ್ ಗೆ ಇರುವ ಗೌರವವೇ ಬೇರೆ.


ಆಟದ ಐದು ದಿನಗಳೂ ಕೂಡ Scoreboard ನಿಂದ ಕಣ್ಣು ಹೊರಳಿಸದೇ ತದೇಕಚಿತ್ತದಿಂದ ಈ ಟೆಸ್ಟ್ ಕ್ರಿಕೆಟ್ ಅನ್ನು ಬಲು ಪ್ರೀತಿಯಿಂದ ನೋಡುವ ಅಭಿಮಾನಿಗಳು ಕೂಡ ವಿಶ್ವದಾದ್ಯಂತ ಇಂದಿಗೂ ಕೋಟ್ಯಂತರ ಇದ್ದಾರೆ.ಅಸಲಿ ಕ್ರಿಕೆಟ್ ಎಂದರೆ ಅದು ಯಾವತ್ತಿಗೂ ಟೆಸ್ಟ್ ಕ್ರಿಕೆಟೇ ಎನ್ನುವುದು ಕ್ರಿಕೆಟ್ ನ ಮೊತ್ತ ಮೊದಲ ಹಾಗೂ ಕಟ್ಟಕಡೆಯ ಮೂಲ ಮಂತ್ರ.ಇಂದಿಗೂ ಅದುವೇ ಸತ್ಯ. 


ಎಂತಹ ಅತ್ಯದ್ಭುತ ಟಿ-ಟ್ವೆಂಟಿ ಆಟಗಾರ ಕೂಡ ತಾನು ಒಂದು ಬಾರಿ ಆದರೂ ಅಂತರರಾಷ್ಟ್ರೀಯ ಟೆಸ್ಟ್ ಕ್ಯಾಪ್ ಅನ್ನು  ಸಿಕ್ಕಿಸಿಕೊಂಡು ತನ್ನ ದೇಶದ ಪರವಾಗಿ ಬ್ಯಾಟು ಬೀಸಬೇಕು, ಬೌಲಿಂಗ್ ಮಾಡಬೇಕು,ಕ್ರಿಕೆಟ್ ಗ್ರೌಂಡಿನಲ್ಲಿ ಜಾರಬೇಕು, ಒಟ್ಟಿನಲ್ಲಿ ಆಡಿದರೆ ಟೆಸ್ಟ್ ಕ್ರಿಕೆಟೇ ಆಡಬೇಕು ಎಂದು ಕನಸು ಕಂಡೇ ಕಾಣುತ್ತಾನೆ.ಒಂದು ವೇಳೆ ಆ ರೀತಿಯ ಭಾವನೆ ಆತನ ಹೃದಯದಲ್ಲಿ ಹುಟ್ಟಿಕೊಳ್ಳದಿದ್ದರೆ ಅವನು ನಿಜವಾದ ಕ್ರಿಕೆಟಿಗನೇ ಅಲ್ಲ,ಇಲ್ಲವೇ ಆತ ಸುಳ್ಳು ಹೇಳುತ್ತಿದ್ದಾನೆ ಎಂದೇ ಅರ್ಥ. 


ವಿಶೇಷ ಏನೆಂದರೆ ಎಲ್ಲಾ ಫಾರ್ಮೆಟ್ ನ ಚಾಂಪಿಯನ್ಶಿಪ್ ಗೆ ಕಟ್ಟ ಕಡೆಯಲ್ಲಿ ಫೈನಲ್ ಪಂದ್ಯ ಅಂತ ಒಂದು ಇದ್ದೇ ಇರುತ್ತದೆ.ಅದು ಶ್ರೇಷ್ಠ ತಂಡವನ್ನು ನಿರ್ಧರಿಸುತ್ತದೆ.ಆದರೆ ಐದು ದಿನಗಳ ಕಾಲ ನಡೆಯುವ(ಹಿಂದೆ ಆರು ದಿನ)ಈ ಟೆಸ್ಟ್ ಕ್ರಿಕೆಟ್ ನಲ್ಲಿ, ಇದ್ದ ಎಲ್ಲಾ ತಂಡಗಳನ್ನು ಒಟ್ಟುಗೂಡಿಸಿಕೊಂಡು ಅಂತಹದ್ದೊಂದು ಟೂರ್ನಿಯ ಸಾಧ್ಯತೆಯನ್ನು ಸಾಕಾರಗೊಳಿಸುವುದು ಇಲ್ಲಿಯವರೆಗೆ ಸಾಧ್ಯವೇ ಆಗಿರಲಿಲ್ಲ.ನಿಜವಾಗಿಯೂ ಕಷ್ಟ ಸಾಧ್ಯವೇ ಆಗಿತ್ತು ಅದು. ಕೇವಲ ಐಸಿಸಿಯ ಟೆಸ್ಟ್ ರೇಟಿಂಗ್ ನಲ್ಲಿ ಮೊದಲ ಸ್ಥಾನ ಅಲಂಕರಿಸುವವರೇ ಟೆಸ್ಟ್ ನಲ್ಲಿ ಅತೀ ಉತ್ತಮರು ಎಂದು ನಿರ್ಧರಿಸಿಕೊಂಡು ಬರಲಾಗಿತ್ತು.


ಆ ನಂತರದ ದಿನಗಳಲ್ಲಿ ಅದರಲ್ಲೂ ಸದ್ಯದ ಈ ಬ್ಯುಸಿ ದುನಿಯಾದಲ್ಲಿ ಎಲ್ಲರಿಗೂ ಬೇಗ ಮುಗಿದು ಹೋಗಿ ಬೇಕಾದಷ್ಟು ಮನರಂಜನೆ ನೀಡುವ Short and Crispy ಸಿಕ್ಸರ್ ಸುರಿಮಳೆಗಳ ಟಿ-ಟ್ವೆಂಟಿ ಫಾರ್ಮೆಟ್ ಗಳು, ಮುಂದೆ ಐಪಿಎಲ್ ಸೇರಿದಂತೆ ಹಲವಾರು ಕಲರ್ ಫುಲ್ ಪ್ರಾಂಚೈಸಿ ಲೀಗ್ ಗಳು ಕೂಡ ಬಂದು,ಟೆಸ್ಟ್ ಕ್ರಿಕೆಟ್ ನಿಂದ ಒಂದಷ್ಟು ಜನರು ವಿಮುಖರಾಗಿದ್ದು ಕೂಡ ಅಷ್ಟೇ ಸತ್ಯ.ಆದರೆ ನನ್ನಂತಹ ಹಲವಾರು ಟೆಸ್ಟ್ ಪಂದ್ಯದ ಅಭಿಮಾನಿಗಳು ಇಂತಹದ್ದೊಂದು ಸಾಧ್ಯತೆಯನ್ನು ತೀವ್ರವಾಗಿ ಬಯಸಿದ್ದರು.ತಮ್ಮದೊಂದು ನೆಚ್ಚಿನ ಫಾರ್ಮೆಟ್ ಗೆ ಕೂಡ ಚಾಂಪಿಯನ್ಶಿಪ್ ಸ್ವರೂಪ ಬೇಕು, ಅದಕ್ಕೊಂದು ಫೈನಲ್ ಕೂಡ ಇರಬೇಕು ಎಂದು ಇನ್ನಿಲ್ಲದಂತೆ ಹಂಬಲಿಸಿದ್ದರು. 


ಬದಲಾವಣೆ ಜಗದ ನಿಯಮ.ಕ್ರಿಕೆಟ್ ಅಂತು ಅದಕ್ಕೆ ಬೇಕಾದಷ್ಟು ಸಲ ತನ್ನನ್ನು ತಾನು ಒಡ್ಡಿಕೊಂಡು ಕಾಲ ಕಾಲಕ್ಕೆ ನಿರಂತರವಾದ ಬದಲಾವಣೆಗೆ ಸಾಕ್ಷಿಯಾಗುತ್ತಲೇ ಬಂದಿದೆ. ಅದರ ಪರಿಣಾಮವೇ ಈಗ ಕ್ರಿಕೆಟ್ ಗೂ ಕೂಡ ಚಾಂಪಿಯನ್ಶಿಪ್ ಸ್ವರೂಪ ಸಿಕ್ಕಿ ಟೆಸ್ಟ್ ಮಾನ್ಯತೆಯ ಎಲ್ಲಾ ತಂಡಗಳು ಮೂರು ವರ್ಷಗಳ ಅವಧಿಗೆ ಬೇರೆ ಬೇರೆ ತಂಡಗಳ ವಿರುದ್ಧ ಬೆವರು ಹರಿಸಿಕೊಂಡು ಮೊದಲೆರಡು ಸ್ಥಾನಗಳಿಗಾಗಿ ಸೆಣಸಾಡಿ ಬಿಟ್ಟಿವೆ.ಹಾಗೂ ಇವತ್ತು ಅದರದ್ದೊಂದು ಫೈನಲ್ ಹಾಗೇ  ಸಂಪನ್ನಗೊಳ್ಳಲಿದೆ.ಇದನ್ನು ನಡೆಸಿಕೊಡಲು ಸ್ವತಃ ಟೆಸ್ಟ್ ಕ್ರಿಕೆಟ್ ಗೆ ಕೂಡ ಅಷ್ಟೇ ಖುಷಿ ಆಗಿರಬಹುದು. 


ನಿಜಕ್ಕೂ ಈ ಚಾಂಪಿಯನ್ಶಿಪ್ ನಲ್ಲಿ ಭಾರತೀಯ ತಂಡದ ಫೈನಲ್ ಹಾದಿ ಬಲು ರೋಚಕವಾದದ್ದು.ಮೊದಲಿನಿಂದಲೂ ಈ ಫಾರ್ಮೆಟ್ ನ ಟೇಬಲ್ ಟಾಪರ್ ಆಗಿ ಮೆರೆದಾಡಿದ್ದೇ ನಮ್ಮ ಭಾರತೀಯ ತಂಡ. ಆದರೆ ಕೋವಿಡ್ ಕಾರಣದಿಂದಾಗಿ ಹೆಚ್ಚಿನ ತಂಡಗಳ ಪಂದ್ಯಗಳು ನಡೆಯದೇ ಇದ್ದುದರ ಕಾರಣ ಪಾಯಿಂಟ್ಸ್  ಗಳಿಕೆಯಲ್ಲಿಯೇ  ಬದಲಾವಣೆ ತರಲಾಯಿತು. ಆಗ ಅದು ಹೆಚ್ಚಿನ ಹೊಡೆತ ನೀಡಿದ್ದೇ ಭಾರತೀಯ ತಂಡಕ್ಕೆ. ಅದರಲ್ಲೂ ಕೊನೆಯ ಎರಡು ಸೀರಿಸ್ ಗಳು ಫೈನಲ್ ಪ್ರವೇಶಕ್ಕಾಗಿ ಭಾರತೀಯ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬ ಸರಣಿಗಳೇ ಆಗಿದ್ದವು. 


ಹಿರಿಯ ಆಟಗಾರರ ಅನುಪಸ್ಥಿಯಲ್ಲಿ,ಆಟಗಾರರ ಸಾಲು ಸಾಲು  ಇಂಜುರಿ ಹೊಡೆತಗಳ ನಡುವೆಯೂ ನಮ್ಮ ಎಳೆಯ ಹುಡುಗರು ತಂಡ ಕಟ್ಟಿಕೊಂಡು ಎದ್ದು ಬಿದ್ದು ಆಡಿ ಜಿದ್ದಿನ ಹೋರಾಟ ನೀಡಿ ಹೆಚ್ಚಿನ ಎಲ್ಲಾ ಬಲಿಷ್ಟ ತಂಡಗಳಿಗೆ ನೀರು ಕುಡಿಸಿ ಮಣ್ಣು ಮುಕ್ಕಿಸಿ ಶುಭ್ರವಾದ ಗೆಲುವಿನ ನಗೆ ಬೀರಿದ್ದರು.ಅದರಲ್ಲೂ ಐಸಿಸಿಯಂತು ರಹಾನೆಯ ನೇತೃತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಜಯಿಸಿದ ಸರಣಿ ವಿಜಯವನ್ನೇ ಈ WTC ಯ ಸರ್ವ ಶ್ರೇಷ್ಟ ಸರಣಿ ಎಂದೇ ಪರಿಗಣಿಸಿ ವಿಶೇಷ ಗೌರವವನ್ನು ಸಲ್ಲಿಸಿದೆ. 



ಹೌದು ಇವತ್ತಿನಿಂದ WTC ಯ ಫೈನಲ್ ಪಂದ್ಯ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ.ಇದಕ್ಕಾಗಿ ಇಂಗ್ಲೆಂಡ್ ನ Ageas Bowl ಕ್ರಿಕೆಟ್ ಮೈದಾನ ಕೂಡ ನಮ್ಮ ನಿಮ್ಮಂತೆಯೇ ಬಹಳ ದಿನಗಳಿಂದ ಕಾತರದಿಂದ ಕಾದು ನಿಂತಿದೆ.


ಈ ದಿನ ಮತ್ತು ಈ ಹನ್ನೊಂದು ಜನರ ಟೀಮ್ ಇಂಡಿಯಾದ ತಂಡ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಂತು ಮುಂದೆ ಸದಾ ನೆನಪಿನಲ್ಲಿ ಉಳಿಯುವಂತಹದ್ದು.ಏಕೆಂದರೆ ಮುಂದೆ ಎಷ್ಟೇ WTC ನಡೆದರೂ ಕೂಡ ಮೊದಲ ಬಾರಿಗೆ ಫೈನಲ್ ನಲ್ಲಿ ಆಡಿದ ತಂಡಗಳು ಹಾಗೂ ಅದರ ಎಲ್ಲಾ ಸದಸ್ಯರು ದಾಖಲೆ ದೃಷ್ಟಿಯಲ್ಲಿ ತುಂಬಾನೇ ವಿಶೇಷವಾಗಿರುತ್ತಾರೆ ಹಾಗೂ ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ.


ನಾವೂ ಅಷ್ಟೇ, ನಮ್ಮ ಕಾಲದಲ್ಲಿಯೇ ಕ್ರಿಕೆಟ್ ಆಟದ ಅತ್ಯಂತ ಹಳೆಯ ಫಾರ್ಮೆಟ್ ನ  ಚಾಂಪಿಯನ್ಶಿಪ್ ಫೈನಲ್ ನಡೆಯುತ್ತಿರುವುದು ಹಾಗೂ ಅದಕ್ಕೆ ನಾವೆಲ್ಲರೂ  ಸಾಕ್ಷಿಯಾಗುತ್ತಿರುವುದು ಕೂಡ ಅಷ್ಟೇ ವಿಶೇಷವೇ ಬಿಡಿ.. 


ಹೌದು,ನಾವೆಲ್ಲರೂ ಮೊದಲ WTC ಫೈನಲ್ ಪಂದ್ಯಕ್ಕೆ ಸಾಕ್ಷಿ ಆದವರು... ಮತ್ತು ಆ ತಂಡದ ಮೊದಲ ನಾಯಕ ವಿರಾಟ್ ಕೊಹ್ಲಿ. 




1983 ರಲ್ಲಿ ಕಪಿಲ್ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಅನ್ನು ಕ್ರಿಕೆಟ್ ಕಾಶಿ ಲಾರ್ಡ್ ನಲ್ಲಿ ನಮ್ಮ ತಂಡ ಗೆದ್ದುಕೊಂಡಾಗ ಭಾರತದಲ್ಲಿ ಹುಟ್ಟಿಕೊಂಡ ಅದರದ್ದೊಂದು ಜ್ವರ ಆಮೇಲೆ ಯಾವತ್ತೂ ಕಮ್ಮಿ ಆಗಿದ್ದೇ ಇಲ್ಲ.ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟ್ ದೇವರನ್ನು ಕಂಡ ಮೇಲೆ ನಮಗೆ ಆ ಜ್ವರ ಕಮ್ಮಿ ಆಗಬೇಕೆಂದು ಯಾವತ್ತೂ ಅನಿಸಿಯೇ ಇಲ್ಲ. 


ನಂತರ 2007 ರಲ್ಲಿ ಚೊಚ್ಚಲ ಟಿಟ್ವೆಂಟಿ ಟ್ರೋಫಿಯನ್ನು ದಕ್ಷಿಣ ಆಫ್ರಿಕಾದಲ್ಲಿ ದೋನಿ ನಾಯಕತ್ವದಡಿಯಲ್ಲಿ ಭಾರತೀಯ ತಂಡ ಗೆದ್ದುಕೊಂಡಾಗ ಅಲ್ಲಿಯವರೆಗೆ ಭಾರತೀಯರಿಗೆ ಇಷ್ಟ ಆಗದೇ ಇದ್ದ ಕ್ರಿಕೆಟ್ ಫಾರ್ಮೆಟ್ ಒಂದು ಮುಂದಿನ ದಿನಗಳಲ್ಲಿ ನಮಗೆಲ್ಲಾ ಯಾವ ರೀತಿ ಹುಚ್ಚು ಹಿಡಿಸಿತು,ಮೊದಲು ಈ ಫಾರ್ಮೆಟ್ ಗೆ ನಿರಾಸಕ್ತಿ ಪ್ರದರ್ಶಿಸಿದ ಬಿಸಿಸಿಐ ಮುಂದೆ ತಾನೇ ಸ್ವತಃ ಐಪಿಎಲ್ ಎಂಬ ದೈತ್ಯ ನನ್ನು ಯಾವ ರೀತಿ ವಿಶ್ವ ಕ್ರಿಕೆಟ್ ನಲ್ಲಿ ಹುಟ್ಟು ಹಾಕಿತು ಎಂಬದು ನಮಗೆಲ್ಲ ತಿಳಿದೇ ಇದೆ.ಅದಕ್ಕೆಲ್ಲ ಮೂಲ ಕಾರಣ ನಾವು ಆಯಾಯ ಫಾರ್ಮೆಟ್ ನ ಕ್ರಿಕೆಟ್ ಅನ್ನು ಗೆದ್ದದ್ದು ಮತ್ತು ಇನ್ನಿಲ್ಲದಂತೆ ಆಳಿದ್ದು. 


ಕ್ರಿಕೆಟ್ ಆಟವನ್ನು ಧರ್ಮ ಎಂಬಂತೆ ಕಾಣುವ ನಮ್ಮ ಈ ನಾಡಿನಲ್ಲಿ ನಮ್ಮ ತಂಡ ಯಾವುದನ್ನೆಲ್ಲಾ ಗೆದ್ದುಕೊಂಡಿತೋ ಆ ನಂತರವೇ ಆ ಫಾರ್ಮೆಟ್ ಗೂ ಕೂಡ ವಿಶ್ವದಾದ್ಯಂತ ಶೋಭೆ ಬಂದಿರುವುದು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಏಕೆಂದರೆ ವಿಶ್ವದಲ್ಲಿ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ದೇಶ ಅಂತ ಒಂದು ಇದ್ದರೆ ಅದು ಭಾರತ ಬಿಟ್ಟರೆ ಬೇರೆ ಯಾವುದು ಇರಲು ಸಾಧ್ಯ ಹೇಳಿ. 



ನಾವು ಅಪ್ಪಿಕೊಂಡು ಒಪ್ಪಿಕೊಂಡು ಬಿಟ್ಟರೆ ಅಲ್ಲಿಗೆ ಅದು ಜಗತ್ತು ಒಪ್ಪಿದಂತೆಯೇ ಲೆಕ್ಕ ಹಾಗೂ ಅದು ಮತ್ತಷ್ಟು ಪ್ರಸಿದ್ಧಿ ಪಡೆಯುವುದರಲ್ಲಿ ಯಾವುದೇ ಸಂಶಯವೇ ಇಲ್ಲ.ಮುಂದೆಯೂ ಟೆಸ್ಟ್ ಕ್ರಿಕೆಟ್ ಉಳಿಯಬೇಕಾದರೆ ಅದರಲ್ಲಿ ಭಾರತದ್ದೊಂದು ಪಾರುಪತ್ಯ ಖಂಡಿತವಾಗಿಯೂ ಇರಲೇಬೇಕು. ಭಾರತೀಯರಿಗೆನೇ ಅದು ನಿರಾಸೆ ಹುಟ್ಟಿಸಿ ಬಿಟ್ಟರೆ ಆ ನಂತರದ ದಿನಗಳಲ್ಲಿ ಅದರ ಆಯಸ್ಸಿಗೆ ಕುತ್ತು ಬಂದಂತೆಯೇ ಲೆಕ್ಕ. ಟೆಸ್ಟ್ ಕ್ರಿಕೆಟ್ ಖಂಡಿತವಾಗಿಯೂ ಮುಂದೆಯೂ ಉಳಿಯಬೇಕು. ಏಕೆಂದರೆ ಅದಕ್ಕಿಂತ ಸುಂದರವಾದ ಕ್ರಿಕೆಟ್ ಮತ್ತೊಂದು ಬರಲು ಸಾಧ್ಯವೇ ಇಲ್ಲ. 




ಸದ್ಯಕ್ಕೆ World Test Championship ಎನ್ನುವುದು ಟೆಸ್ಟ್ ಪಂದ್ಯಕ್ಕೆ ವಿಶ್ವಕಪ್ ಇದ್ದಂತೆ. ಹಾಗಾಗಿ ಮಳೆಯೊಂದು ಬರದಿರಲಿ,ಟೀಮ್ ಇಂಡಿಯಾವೇ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಅನ್ನು ಗೆದ್ದುಕೊಂಡು ಜಗಮಗಿಸುವ ಟ್ರೋಫಿಗೆ ಮುತ್ತಿಡಲಿ,ತ್ರಿವರ್ಣವೊಂದು ಆಂಗ್ಲರ ನೆಲದಲ್ಲಿ ಇನ್ನಿಲ್ಲದಂತೆ ಹಾರಾಡಲಿ...ಎಂಬುದೇ ಕೊಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಸೆ ಹಾಗೂ ಅಪಾರವಾದ ಹಾರೈಕೆ ಕೂಡ ಹೌದು.. 🇮🇳💙



World Test Championship Final 2021

INDIA Vs New Zealand

SOUTHAMPTON_UK

Day-1


#Cricket


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..