ಮೊಸರು ಜೀರಿಗೆ ಮೆಣಸಿನ ಈ ಊಟ

 




ಅನ್ನದ ನಡುವಿಗೆ ಒಂದಷ್ಟು ಗಟ್ಟಿ ಮೊಸರು ಸುರಿದುಕೊಂಡು,ಆ ಮೊಸರಿನ ಮಧ್ಯಕ್ಕೆ ಒಂದಿಷ್ಟು ಉಪ್ಪಿನಲ್ಲಿ ಜಜ್ಜಿದ ಜೀರಿಗೆ ಮೆಣಸನ್ನು ಕೂಡ ಸೇರಿಸಿಕೊಂಡು,ಎಲ್ಲವನ್ನೂ ಹಾಗೇ ಕೈಯಲ್ಲಿಯೇ ನಿಧಾನಕ್ಕೆ ಕಲಸಿಕೊಂಡು ಒಂದೊಂದೇ ಖಾರ ಖಾರ ತುತ್ತು ತಿನ್ನುವ ಆ ಸುಖವೇ ಬೇರೆ ಬಿಡಿ.


ಅದರಲ್ಲೂ ಹಿಂದಿನ ದಿನದ ಕುಚಲಕ್ಕಿಯ ತಂಗಳನ್ನ ಇದ್ದು ಬಿಟ್ಟರೆ ಈ ಜೋಡಿಯ ಮುಂದೆ ಯಾವ ಬಿರಿಯಾಣಿ ಊಟವೂ ಕೂಡ ಎಂದಿಗೂ ತೀರಾ ಸಪ್ಪೆಯೇ.



ಜೀರಿಗೆ ಮೆಣಸು ಕಣ್ಣಿಗೆ ಬಿದ್ದಾಗಲೆಲ್ಲ,ಗಿಡದಿಂದ ಅವೆಲ್ಲ ಬೊಗಸೆ ಸೇರಿದಾಗ.. ಮನೆಯ ಅನ್ನದ ತಟ್ಟೆಯಲ್ಲಿ ನನ್ನದೊಂದು ಯಾವಾಗಲೂ ಇದೇ ಊಟ.ಈ ಊಟದ ಸುಖದ ಮುಂದೆ ನನಗೆ ಯಾವ ಪರಮಾನ್ನ ಇಲ್ಲವೇ ಮೃಷ್ಟಾನ್ನ ಭೋಜನವೂ ರುಚಿಸದು.


ಖಂಡಿತಾ ಇದು ಬಡವರದ್ದೇ ಊಟ ಇರಬಹುದು.ಆದರೆ ಇಂತಹ ಊಟಗಳ ಸ್ವಾದದಲ್ಲಿಯೇ ನನ್ನ  ಬಾಲ್ಯದ ನೆನಪುಗಳು ಬಹಳಷ್ಟು ರಿಚ್ ಆಗಿರುವುದು ಮತ್ತು ಎಂತಹ ಅದ್ಭುತ ಭೋಜನಗಳು ಪಕ್ಕದಲ್ಲಿ ಇದ್ದರು ನನ್ನ ಊಟದ ತಟ್ಟೆಗೆ ಶೋಭೆ ತರುವುದು ಬರೀ ಇಂತವುಗಳೇ.



ಅದೆನೋ ಗೊತ್ತಿಲ್ಲ ಈಗಲೂ ಶುದ್ಧ ಹಳ್ಳಿ ಊಟ,ಅದರಲ್ಲೂ ತುಳುನಾಡಿನ ಆಹಾರದ ಮುಂದೆ ನನಗೆ ಬೇರೆ ಯಾವುದೇ ಅದ್ಭುತ ರುಚಿಯೂ ತುಂಬಾನೇ ಅತ್ಯದ್ಭುತ ಎಂದು  ಅನ್ನಿಸುವುದೇ ಇಲ್ಲ.ಹೌದು,ನನ್ನ ಜಿಹ್ವೆಗೆ ವಿಶ್ವದ ವಿಶಿಷ್ಟ ಅನಿಸುವ ಅಥವಾ ಪ್ರಸಿದ್ಧ ರುಚಿಗಳ ಪರಿಚಯ,ಅನುಭವ ಬಹಳ ಕಡಿಮೆಯೇ ಇರಬಹುದು,ಆದರೂ ನಮ್ಮ ತುಳುನಾಡು ಈ ಜನ್ಮಕ್ಕೆ ಆಗುವಷ್ಟೇ ಬಹಳ ಸೊಗಸಾಗಿ,ರುಚಿ ರುಚಿಯಾಗಿ ಅದಾಗಲೇ ಬಡಿಸಿಬಿಟ್ಟಿದೆ.ಸುಖವಾಗಿ ರುಚಿಯಾಗಿ ಇಲ್ಲಿ ಬದುಕಲು ಅಷ್ಟು ಸಾಕು. 



ಎಲ್ಲೇ ಜೀರಿಗೆ ಮೆಣಸಿನ ಗಿಡ, ಸೌತೆ,ಕೆಂಬುಡೆಯ ಗಿಡ ಕಂಡರೂ ಅದನ್ನು ಕಿತ್ತು ತಂದು ಮನೆಯ ಜಾಗದಲ್ಲಿ ನೆಟ್ಟು ಆರೈಕೆ ಮಾಡುವುದು ಈಗಲೂ ನನ್ನ ನೆಚ್ಚಿನ ಕೆಲಸಗಳಲ್ಲಿ ಒಂದು ಮತ್ತು ನನಗೆ ಇಂತಹ ಕೆಲಸಗಳೇ ನನ್ನಲ್ಲಿ ಇನ್ನಿಲ್ಲದಂತೆ ಉಲ್ಲಾಸ ತುಂಬುತ್ತದೆ.



.....................................................................................


#ಈ_ಜನುಮವೇ_ಆಹಾ_ದೊರಕಿದೆ_ರುಚಿ_ಸವಿಯಲು


Ab Pacchu

Moodubidire

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!