ಅವರ ಸಲಿಗೆಯಲ್ಲಿ ಒಂದು ಬೆಸುಗೆ ಇತ್ತು..
ಅವರ ಹೆಸರು ಪ್ರಭಾಕರ್.ಟೈಗರ್ ಪ್ರಭಾಕರ್,ಮನೋಜ್ ಪ್ರಭಾಕರ್ ಗಿಂತಲೂ ಪ್ರಭಾಕರ್ ಎನ್ನುವ ಹೆಸರು ಬಂದಾಗಲೆಲ್ಲ ನನಗೆ ಮೊದಲು ಅವರೇ ನೆನಪಾಗುತ್ತಿದ್ದರು.ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಕೆಲಸಕ್ಕೆ ಇರುವ ಅವರು ಹೋದಾಗಲೆಲ್ಲ ಬಹಳ ಪ್ರೀತಿಯಿಂದ ಮಾತಾಡಿಸಿ "ತಗೊಳ್ಳಿ ನಿಮ್ಮ ಕಬ್ಬಿನ ಜ್ಯೂಸು,ಶುಂಠಿ ಹಾಕದೆ ಎಂದಿನಂತೆ ಲಿಂಬೆಯನ್ನೇ ಜಾಸ್ತಿ ಹಾಕಿದ್ದೀನಿ.." ಎಂದು ಹೇಳಿ ನೊರೆ ನೊರೆ ಕಬ್ಬಿನ ಜ್ಯೂಸು ಕೈಗಿಡುವ ಆ ನಮ್ಮ ಪ್ರಭಾಕರ್,ಅಂಗಡಿಯಲ್ಲಿ ಎಷ್ಟೇ ಗಿರಾಕಿ ಇದ್ದರೂ ಕ್ರಿಕೆಟ್ ಬಗ್ಗೆ ನನ್ನ ಜೊತೆಗೆ ಒಂದಿಷ್ಟು ಚರ್ಚೆಗೆ ಇಳಿದು ಬಿಡುತ್ತಿದ್ದರು.ಕಬ್ಬು ಜ್ಯೂಸು ಅಂಗಡಿ ಈಗಲೂ ಇದೆ,ಆದರೆ ಈಗ ಪ್ರಭಾಕರ್ ಅಲ್ಲೆಲ್ಲೂ ಕಾಣಿಸುತ್ತಿಲ್ಲ.
ಅವರು ನವೀನ್ ಅಂತ. ನಮ್ಮ ಬಸ್ಸಿನ ಕಂಡಕ್ಟರ್.ಯುವಕ ಕೂಡ ಹೌದು.ಬಸ್ಸಿಗೊಂದು ಚಂದದ ಹೆಸರಿದ್ದರೂ ನಾನಂತು ಆ ಬಸ್ಸ್ ಅನ್ನು ನವೀನ್ ನ ಬಸ್ ಎಂದೇ ಕರೆಯುತ್ತಿದ್ದೆ. ಎಲ್ಲರಿಗೂ ಟಿಕೆಟು ಹರಿದು ಕೊಟ್ಟ ಮೇಲೆ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ನವೀನ್ ಮತ್ತು ನಾನು ಸಿಕ್ಕಾಪಟ್ಟೆ ಪಟ್ಟಾಂಗ ಹೊಡೆಯುತ್ತಿದ್ದೆವು.ನವೀನ್ ಗೆ ಯಾವಾಗಲೂ ಬಸ್ ಕಲೆಕ್ಷನ್ ನದ್ದೇ ಚಿಂತೆ. ಸರಿಯಾದ ಕಲೆಕ್ಷನ್ ಇಲ್ಲದಿದ್ದರೆ ಧಣಿಯ ಬೈಗುಳ ದಿನನಿತ್ಯವೂ ತಪ್ಪಿದ್ದಲ್ಲ.ಒಂದು ವೇಳೆ ಬಸ್ ಇಲ್ಲದಿದ್ದರೆ ಆ ದಿನ ಮೊದಲೇ ಕಾಲ್ ಮಾಡಿ ಹೇಳುತ್ತಿದ್ದ ನವೀನ್ ನ ಆ ಬಸ್ ರೋಡ್ ಮೇಲೆ ಕಾಣಿಸಿಕೊಳ್ಳದೇ,ನವೀನ್ ಬಸ್ಸು ಟಿಕೆಟ್ ಹರಿಯುವ ಸದ್ದು ಕೇಳದೆ ಬಹಳ ದಿನಗಳಾಗಿಯೇ ಬಿಟ್ಟಿದೆ. ರೋಡ್ ಎಂದಿನಂತೆ ಇದೆ.
ನನಗೆ ದೋಸೆ ಎಂದರೆ ಇಷ್ಟ. ನೀರುದೋಸೆ,ಮಸಾಲೆ ದೋಸೆ ಬಿಟ್ಟರೆ ನನಗೆ ಸೀಸೆರ್ನ ಬಿಸಿ ಬಿಸಿ ಉಬ್ಬು ದೋಸೆ ಇಷ್ಟ. "ಸೀಸೆರ್" ಎಂದರೆ ಆ ಹೋಟೆಲ್ ನ ಮಾಲಿಕರ ಹೆಸರು.ಹಳೆಯ ಕಾಲದ ಆ ಪುಟ್ಟ ಹೋಟೆಲ್ ಬರೀ ದೋಸೆಗಾಗಿಯೇ ಫೇಮಸ್.ಅವರದ್ದೊಂದು ದೋಸೆಗಾಗಿ ನಾನು ಹೈಸ್ಕೂಲ್ ದಿನಗಳಿಂದಲೂ ಅವರ ಹೋಟೆಲ್ ನ ಆ ಮರದ ಬೆಂಚಿನ ಮೇಲೆ ಕುಳಿತುಕೊಂಡು ದೋಸೆ ಮುರಿಯಲು,ತಂಪಾದ ಪುನರ್ಪುಳಿ ಕುಡಿಯಲು ಮೂಡುಬಿದಿರೆಯಲ್ಲಿ ಎಲ್ಲಿದ್ದರೂ ಅಲ್ಲಿಗೆಯೇ ಓಡುತ್ತಿದ್ದೆ.ಈಗಲೂ ಸಹ.ದೊಡ್ಡ ದೊಡ್ಡ ಹೋಟೆಲ್ ಗಳು ಎಂದಿಗೂ ನನಗೆ ಅಷ್ಟಾಗಿ ರುಚಿಸುವುದಿಲ್ಲ,ಚಿಕ್ಕ ಹೋಟೆಲ್ ನ ಒಗ್ಗರಣೆಯ ಘಮವೇ ಚಂದ,ಚಟ್ನಿ ಕೂಡ ಎಂದಿಗೂ ಬಲು ರುಚಿ.ನನಗೆ ಅಲ್ಲಿ ದೋಸೆ ಮಾತ್ರ ಇಷ್ಟವಲ್ಲ, ಸೀಸೆರ್ ನ ಮಾತು ಕೂಡ ಅಷ್ಟೇ ಇಷ್ಟ.ದೋಸೆ ಜೊತೆ ಜೊತೆಗೆ ಸೀಸೆರ್ ನ ನಾಲ್ಕು ಮಾತಿದ್ದರೆ ಮೂರ್ನಾಲ್ಕು ಪ್ಲೇಟ್ ಬರೀ ದೋಸೆಯನ್ನು ತಿಂದಿದ್ದೂ ಇದೆ.ಅವರಿಗೆ ನನ್ನ ಹೆಸರು ಕೂಡ ಗೊತ್ತಿಲ್ಲ, ಆದರೆ ನನ್ನ ಪರಿಚಯ ಬಹಳ ಚೆನ್ನಾಗಿಯೇ ಇದೆ. ಹೋಟೆಲ್ ಈಗಲೂ ಇದೆ, ಬೆಳಿಗ್ಗೆ ಬೇಗ ಮುಚ್ಚಿದ ಬಾಗಿಲುಗಳ ಹಿಂದಿನಿಂದ ದೋಸೆ ಕಟ್ಟುಗಳ ಸಪ್ಲೈ ಅಷ್ಟೇ ಕೊಡುತ್ತಾರೆ,ದೋಸೆ ಜೊತೆಗೆ ಸೀಸೆರ್ನ ಮಾತು ಕಿವಿಗೆ ಬೀಳದೆ ಹಲವು ದಿನಗಳಾಗಿ ಬಿಟ್ಟಿದೆ.
ತರಕಾರಿ ಮಾರ್ಕೆಟ್ ಅಲ್ಲಿ ಅವರೊಬ್ಬ ಅಣ್ಣ ಇದ್ದಾರೆ. ಅವರ ಹೆಸರು ನನಗೆ ನೆನಪಿಲ್ಲ. ಬಹುಶಃ ಶೇಖರ್ ಏನೋ ಇದೆ.ನಾನು ಅವರಲ್ಲಿಗೆ ಖಾಯಂ ಗಿರಾಕಿ. ಮಾರುಕಟ್ಟೆಯಿಂದ ಒಳ್ಳೆಯ ತರಕಾರಿಗಳನ್ನು ಹುಡುಕಿ ಆಯ್ದು ಮನೆಗೆ ತರುವುದು ನನ್ನ ಇಷ್ಟದ ಕೆಲಸಗಳಲ್ಲಿ ಒಂದು.ಆ ಜವಾಬ್ದಾರಿ ನಾನೇ ಹೋರುತ್ತೇನೆ.ಎಂದಿನಂತೆ ಮಾರ್ಕೆಟ್ ಗೆ ಹೋದಾಗಲೆಲ್ಲ ಅವರ ಜೊತೆಗೆ ಒಂದಷ್ಟು ಕುಶಾಲಿನ ಮಾತು ಇದ್ದೇ ಇರುತ್ತದೆ.ಆದರೆ ನಾನು ಹೋದಾಗಲೆಲ್ಲ ಅವರು ತರಕಾರಿಗಳನ್ನು ಚೆನ್ನಾಗಿ ಜೋಡಿಸಿ ಇಟ್ಟಿರುವುದನ್ನು ನನಗೆ ತೋರಿಸುತ್ತಾರೆ ಮತ್ತು ಫೋಟೋ ತೆಗೆಯಿರಿ ಎಂದು ನೆನಪು ಹುಟ್ಟಿಸುತ್ತಾರೆ.ಅವರಿಗೂ ಗೊತ್ತು ನನ್ನ ಪೋಟೋ ಹುಚ್ಚು.ಅಂಗಡಿ ಇದೆ,ತರಕಾರಿಯೂ ಇದೆ.. ಈಗ ಅವರೆಲ್ಲಿದ್ದರೋ ಗೊತ್ತಿಲ್ಲ.
ಕೋಳಿಗಿಂತಲೂ ಮೀನು ಅಧಿಕ ಇಷ್ಟ ಪಡುವವನು ನಾನು.ಮೀನಿನಲ್ಲೂ ಒಣ ಮೀನು ಎಂದರೆ ನನ್ನ ಪ್ರಾಣ. ಅದರದ್ದೊಂದು ಪರಿಮಳದ ಸಾರಿಗಾಗಿ ಇನ್ನಿಲ್ಲದಂತೆ ಹಾತೊರೆಯುತ್ತೇನೆ. ಮಾರುಕಟ್ಟೆಗೆ ಹೋದ ನಂತರ ಹಸಿ ಮೀನಿನ ಮಾರುಕಟ್ಟೆಗೆ ಹಾಗೂ ಒಣ ಮೀನಿನ ಮಾರುಕಟ್ಟೆಗೆ ಒಮ್ಮೆ ಸರ್ಕಿಟ್ ಹೋಗಿ ಬರದಿದ್ದರೆ ನನ್ನ ಮಾರುಕಟ್ಟೆ ಭೇಟಿ ಅಪೂರ್ಣವೇ. ಹಸಿ ಮೀನಿನ ಮಾರುಕಟ್ಟೆಯಲ್ಲಿ ಈಗೀಗ ತಾಯಂದಿರ ಪ್ರೀತಿಯ ಕರೆ ಕೇಳಿ ಬರುತ್ತಿಲ್ಲ. ಒಣ ಮೀನಿನ ಮಾರುಕಟ್ಟೆಯಲ್ಲಿ ಸುನಂದಕ್ಕ ಎಂಬುವವರು ಇದ್ದಾರೆ. ಹೆಚ್ಚು ಕಡಿಮೆ ನನ್ನ ಅಜ್ಜಿಯ ವಯಸ್ಸಿನವರು. ಹೋದಾಗಲೆಲ್ಲ "ಬಾಲೆ.. ಒಂಜಾಂಡಲ ಬಲ್ಯಾರ್ ಪತೊಂದು ಪೋಲದೆ ಬಾಲೆ, ಎಡ್ಡೆ ಬಲ್ಯಾರ್,ನಿಕ್ಕ್ ಯಾನ್ ಏಪಾಂಡಲ ಮೋಸ ಮಲ್ಪುವೆನಾ, ಮರಿಯಾಲ ಡ್ ಅಂಚನೆ ಎಣ್ಣೆ ಡ್ ಕಾಯ್ತ್ ದ್ ತಿನರೆ ಎಡ್ಡೆ ಆಪುಂಡು..(ಬಲ್ಯಾರ್ ಮೀನು ತಗೊಂಡು ಹೋಗು ಮಗು,ಒಳ್ಳೆಯ ಕ್ವಾಲಿಟ್ಟಿದ್ದು ಉಂಟು,ಹಾಗೇ ತೆಂಗಿನೆಣ್ಣೆಯಲ್ಲಿ ಕಾಯಿಸಿ ತಿನ್ನಬಹುದು) " ಎಂದು ಹೇಳಲು ಅವರು ಮರೆಯುವುದೇ ಇಲ್ಲ. ಬಹುಶಃ ನಮ್ಮ ಮನೆಯ ಒಣ ಮೀನಿನ ಡಬ್ಬದಲ್ಲಿ ಒಂದಷ್ಟು ಬಲ್ಯಾರ್ ಇದ್ದರೆ ಅದಕ್ಕೆ ಕಾರಣ ನಮ್ಮ ಒಣ ಮೀನಿನ ಸುನಂದಕ್ಕನ ಒತ್ತಾಯ.ಯಾಕೆ ಮಾರಾಯ ಅದನ್ನು ತರ್ತಿಯಾ ಅಂತ ಮನೆಯಲ್ಲಿ ಅಮ್ಮ ಬೈದರು ನನಗೆ ಸುನಂದಕ್ಕನ ಒತ್ತಾಯಕ್ಕೆ ಬೇಡ ಅಂತ ಹೇಳಲು ಮನಸ್ಸು ಬರುವುದಿಲ್ಲ.ಬೇಕಾದ ಒಣ ಮೀನು ಎಲ್ಲಾ ತಗೊಂಡು ಹಣ ಕೊಟ್ಟು ಹೋಗುವಾಗ ಒಂದು ಅರ್ಧ ಸೇರು ಪೊಡಿ ಎಟ್ಟಿ(ಸಣ್ಣ ಒಣ ಸಿಗಡಿ)ಯನ್ನು ತೊಟ್ಟೆಯಲ್ಲಿ ಕಟ್ಟಿ,ನನಗೂ ಕೇಳದೆ ನನ್ನ ಚೀಲದಲ್ಲಿ ಹಾಕಲು ಅವರು ಮರೆಯುವುದಿಲ್ಲ. ಅದು ಅವರು ನನ್ನ ಪರಿಚಯದ ಮೇಲಿಟ್ಟಿರುವ ಪ್ರೀತಿ. ಒಣ ಮೀನಿನ ಮಾರ್ಕೆಟ್ ಈಗಲೂ ಇದೆ. ಆದರೆ ನನ್ನ ಸುನಂದಕ್ಕ ಹಾಗೂ ಅವರ ಬಲ್ಯಾರ್ ಮೀನು ನನ್ನ ಕಣ್ಣಿಗೆ ಬೀಳದೇ ಎಷ್ಟೋ ದಿನಗಳಾಗಿ ಬಿಟ್ಟಿದೆ.
ಕೊರೋನ ಎಲ್ಲರ ಬದುಕನ್ನೂ ಸಾಕಷ್ಟು ಉಲ್ಟಾಪಲ್ಟ ಮಾಡಿ ಬಿಟ್ಟಿದೆ.ಅಂಗಡಿಗಳಲ್ಲಿ ದಿನ ನಿತ್ಯವೂ ಸಿಗುತ್ತಿದ್ದ ಚಿಕ್ಕ ಪುಟ್ಟ ಕೆಲಸಗಾರರು ಕೆಲಸ ಕಳೆದುಕೊಂಡರು, ಇನ್ನು ಕೆಲವರು ಕೆಲಸವನ್ನೇ ಬದಲಾಯಿಸಿ ಬಿಟ್ಟರು. ಇನ್ನು ಕೆಲವರು ಎಲ್ಲಿ ಹೋದರೋ ಗೊತ್ತೇ ಇಲ್ಲ. ಅವರಿಗೂ ಒಂದು ಹೆಸರು ಇತ್ತು.. ನಮ್ಮೆಲ್ಲರ ಜೊತೆಗೆ ಪ್ರೀತಿಯ ಸಲುಗೆ ಇತ್ತು.ಆ ಸಲಿಗೆಯಲ್ಲಿ ಇವತ್ತು ಮಿಸ್ ಮಾಡಿಕೊಳ್ಳುವಷ್ಟು ಒಂದೊಳ್ಳೆಯ ಬೆಸುಗೆ ಇತ್ತು.ಮುಂದೆ ಕೊರೋನ ಮುಗಿದು ಎಲ್ಲವೂ ಸರಿ ಆದ ಮೇಲೆ ಕೆಲವರು ಅದೇ ಜಾಗಕ್ಕೆ ಮರಳಬಹುದು.. ಇನ್ನು ಕೆಲವರು ಇಲ್ಲ!
ಅವರಿಲ್ಲದ ಆ ಜಾಗಗಳಿಗೆ ಹೋದಾಗಲೆಲ್ಲ ಯಾಕೋ ಅವರೇ ಅತಿಯಾಗಿ ನೆನಪಾಗುತ್ತಾರೆ...
.....................................................................................
#ಏನೋ_ಒಂದು
Ab Pacchu
Moodubidire

Comments
Post a Comment