ಸೀತಾಫಲ ಮತ್ತು ಒಬ್ಬ ಗೆಳೆಯ!

           

ಇಳಿಯ ಬೇಕಾಗಿದ್ದ ಜಾಗದಲ್ಲಿಯೇ ನನ್ನನ್ನು ಇಳಿಸಿ ಬಸ್ಸ್ ಅದರ ಪಾಡಿಗೆ ಮುಂದೆ ಹೋಗಿತ್ತು.ನನಗಾದರೂ ಇಳಿದು ಹೋಗಲು ಒಂದೇ ನಿಲ್ದಾಣ,ಆದರೆ ಬಸ್ಸಿಗೆ ನನ್ನಂತೆಯೇ ಹಲವರು ಹಾಗೂ ಹಲವಾರು ನಿಲ್ದಾಣ...

ಆದರೆ ಬಸ್ಸು ಇಳಿಸಿದ್ದು ನನ್ನನ್ನು ಮಾತ್ರ.ಹೊತ್ತುಕೊಂಡು ಬಂದಿದ್ದ ನನ್ನ ಹೃದಯದ ಭಾರವನಲ್ಲ.

ನಾನು ಹಗುರವಾಗಲು ಬಂದವನೋ,ಅಥವಾ ಭಾರ ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಂದವನೋ ಎಂದು ನನಗೇ ಗೊತ್ತಿಲ್ಲ.ದೂಳೆಬ್ಬಿಸಿಕೊಂಡು ಹೋದ ಬಸ್ಸನ್ನೇ ಒಂದು ಕ್ಷಣ ಹಾಗೇ ದಿಟ್ಟಿಸಿ ನೋಡುತ್ತಾ ನಿಂತೆ.

ಅದೊಂದು ಪುಟ್ಟ ಹಳ್ಳಿ.ಅರುವತ್ತರ ದಶಕದಲ್ಲಿ ಅದುವೇ ನನ್ನ ಹಳ್ಳಿ,ನನ್ನ ಪ್ರಪಂಚ ಹಾಗೂ ಎಲ್ಲವೂ ಆಗಿತ್ತು,ಆದರೆ ಈಗ ಅಲ್ಲ.ನನ್ನ ಚಿನ್ನದಂತಹ ಬಾಲ್ಯವನ್ನು ಇಲ್ಲೇ ಕಳೆದು,ಕೇವಲ ಅದರ ನೆನಪುಗಳನ್ನು ಮಾತ್ರ ಮೂಟೆ ಕಟ್ಟಿಕೊಂಡು ನನ್ನದಲ್ಲದ ಊರಿಗೆ ಸುಮಾರು ನಲ್ವತ್ತೈದು ವರ್ಷದ ಹಿಂದೆಯೇ ನಾನು  ಇಲ್ಲಿಂದ ಸದ್ದಾಗದಂತೆ ಎದ್ದು ಹೋಗಿದ್ದೆನು.

ಆಗಲೂ ಇದು ಹಳ್ಳಿ,ಈಗಲೂ ಹೆಚ್ಚು ಕಡಿಮೆ ಹಳ್ಳಿಯೇ.ನಗರೀಕರಣ ತಕ್ಕ ಮಟ್ಟಿಗೆ ಆಗಿದೆ.ಊರು ತನ್ನಷ್ಟಕ್ಕೆ ಯಾವುದರ ಪರಿವೆಯೇ ಇಲ್ಲದೇ ಉಸಿರಾಡುತ್ತಿದೆ.ಚಡಪಡಿಕೆ, ಕುತೂಹಲ ಏನಿದ್ದರೂ ನನ್ನಲ್ಲಿ ಮಾತ್ರವೇ ಅತಿಯಾಗಿತ್ತು.

ನಿಧಾನಕ್ಕೆ ನನ್ನ ಮುದಿ ಹೆಜ್ಜೆಗಳನ್ನು ಇಡುತ್ತಾ ನಡೆಯತೊಡಗಿದೆ.ಅದು ಶಾಲೆಯ ದಾರಿ.ಅಷ್ಟೇ ಗುಡ್ಡದ ದಾರಿಯೂ ಹೌದು.ಅರುವತ್ತು ವರುಷಗಳ ಹಿಂದೆ ಈ  ಹಳ್ಳಿಯಲ್ಲಿ,ಆ ನನ್ನ ಎರಡು ಶಾಲೆಗೆ ಹತ್ತು ವರ್ಷಗಳನ್ನು ಇದೇ ದಾರಿಯಲ್ಲಿ ನಡೆದು ಸವೆಸಿದ್ದವನು ನಾನು.

ದಾರಿಯೂ ಕೂಡ ಈಗಲೂ ಹೆಚ್ಚು ಕಡಿಮೆ ಹಾಗೇ ಇದೇ.ಆಗ ಇದ್ದ ಮರಗಳು ಈಗ ಇನ್ನಷ್ಟು ದೊಡ್ಡದಾಗಿದೆ,ನನ್ನನ್ನು ನೋಡಿ ನಿನ್ನದೊಂದು ಪರಿಚಯ ನಮಗೂ ಇದೆ ಎಂದು ತಮ್ಮ ರೆಂಬೆ ಕೊಂಬೆ ಅಲ್ಲಾಡಿಸಿ  ಹೇಳುತ್ತಿವೆ.ನಡೆಯುತ್ತಲೇ ಹಾಗೇ ಆ ಮರಗಳ ಮೈದವಡಿದೆ.ಕೈ ಬೆರಳುಗಳಿಗೆ ಬಾಲ್ಯದ ನೆನಪುಗಳು ಮತ್ತಷ್ಟು ಅಂಟಿಕೊಂಡವು.

ಹೊಸದಾಗಿ ಹುಟ್ಟಿಕೊಂಡ ಮರಗಳಿಗೆ ನಾನು ಸಿಕ್ಕಾಪಟ್ಟೆ ಅಪರಿಚಿತ.ಸವೆದ ಮಣ್ಣಿನ ರೋಡಿಗೆ ಈಗ ಟಾರು ಬಿದ್ದಿದೆ. ಆದರೆ ನನ್ನ ನೆನಪುಗಳು ಅಷ್ಟು ಸುಲಭವಾಗಿ ಸವೆದು ಹೋಗುವಂತಹದ್ದಲ್ಲ.ಅದರಲ್ಲೂ ಅವಳ ನೆನಪು ಪಕ್ಕನೇ ಮುಕ್ಕಾಗುವಂತಹದ್ದು ಅಲ್ಲವೇ ಅಲ್ಲ..!

ನಡೆಯುತ್ತಾ ಮುಂದೆ ಸಾಗಿದಂತೆ ಒಂದೊಂದೇ ನೆನಪುಗಳು ಹೃದಯಕ್ಕೆ ಜೋತು ಬಿದ್ದು ಹೃದಯದ ಭಾರವನ್ನು ಮತ್ತಷ್ಟು ಹೆಚ್ಚಾಗಿಸಿತು.

ಹಳ್ಳಿಯ ಅಂಚಿನಲ್ಲಿ ಗುಡ್ಡದ ಬದಿಯಲ್ಲಿ ಇತ್ತು ನನ್ನ ಶಾಲೆ.ನಾನು ಮತ್ತು ಜಯರಾಜ ಚಡ್ಡಿ ದೋಸ್ತಿಗಳಂತೆ ಇದ್ದವರು.ಶಾಲೆಗೂ  ಒಟ್ಟಿಗೆ ಹೋಗುತ್ತಿದ್ದೆವು.ಆಗಲೇ ಒಂದು ದಿನ ನನಗೆ ಅವಳ ಪರಿಚಯವಾಗಿದ್ದು.ಅವಳ ಹೆಸರು ವೈದೇಹಿ..

ಇನ್ನೂ ನೆನಪಿದೆ,ಬೇರೆ ಶಾಲೆಗೆ ಹೋಗುತ್ತಿದ್ದ ಅವಳು ಮೂರನೇ ತರಗತಿಗೆ ನಮ್ಮ ಶಾಲೆಗೇ ಬಂದು ಸೇರಿಕೊಂಡಳು.ಒಂದೇ ಊರಿನವಳಾದರೂ ಅವಳನ್ನು ಊರಿನಲ್ಲಿ ನೋಡಿದ್ದು ನಾನು ತುಂಬಾ ಕಡಿಮೆಯೇ.ಅವಳನ್ನು ಮೊದಲು ನೋಡಿದ್ದೇ ನಮ್ಮ  ತರಗತಿಯಲ್ಲಿ.ಆದರೆ ಅವಳದ್ದೊಂದು ಸ್ನೇಹ ಆಗಿದ್ದು ಮಾತ್ರ ತೀರಾ ಆಕಸ್ಮಿಕವಾಗಿಯೇ.ಅವಳು ಮರೆತರೂ ನಾನು ಎಂದಿಗೂ ಅದನ್ನು ಮರೆಯಲಾರೆ.

ಶಾಲೆಯ ದಾರಿಯಲ್ಲಿ ಒಂದು ತೋಟವಿತ್ತು.ಯಾರಾದ್ದೆಂದು ನನಗೂ ಗೊತ್ತಿರಲಿಲ್ಲ,ಅದರಲ್ಲಿ ಒಂದಷ್ಟು ಸೀತಾಫಲದ ಗಿಡಗಳಿದ್ದವು.ಆದರೆ ಯಥೇಚ್ಛವಾಗಿ ಆಗುತ್ತಿದ್ದ ಆ ಮರದ  ಸೀತಾಫಲ ಹಣ್ಣುಗಳನ್ನು ಯಾರೂ ತಿನ್ನುವವರಿಲ್ಲದೇ ಅದು ಹಾಗೇ ಹಣ್ಣಾಗಿ ಕೊಳೆತು ಉದುರಿ ಹೋಗುತ್ತಿತ್ತು.

ನನಗೆ ಸೀತಾಫಲ ತುಂಬಾ ಇಷ್ಟ. ನಾನು ಜಯರಾಜನಿಗೆ ಹೇಳಿದೆ..ನೋಡು ಜಯರಾಜ,ಹೇಗೋ ಆ ಹಣ್ಣುಗಳು ಯಾರೂ ತಿನ್ನದೇ ಹಾಳಾಗಿ ಹೋಗುತ್ತವೆ,ಆ ಮನೆಯವರು ಕೂಡ ಅದನ್ನು ಕೊಯ್ದು ತಿನ್ನಲ್ಲ, ನಾವು ಏಕೆ ಅದನ್ನು  ತಿನ್ನಬಾರದು..? ಎಂದು ಜಯರಾಜನಲ್ಲಿಯೇ ಕೇಳಿದೆ.

ಕಳ್ಳತನ ಮಾಡುವುದು ತಪ್ಪು,ನಾನು ಬರಲಾರೆ.. ಎಂದು ಬಿಟ್ಟ ಜಯರಾಜ.

ಪರವಾಗಿಲ್ಲ ನೀನು ಬರಬೇಡ ಅಲ್ಲೇ ತೋಟದ ಹೊರಗೆ ನಿಂತಿರು,ನಾನು ಹೋಗಿ ಹಣ್ಣು ಕಿತ್ತು ತರುತ್ತೇನೆ ..ಎಂದು ಅವನಿಗೆ ಹೇಳಿದೆ.ತುಂಬಾ ಸಲ ಹೇಳಿದ ಮೇಲೆ ಜಯರಾಜ ಹೇಗೋ ಕೊನೆಗೂ ಒಪ್ಪಿಕೊಂಡ.

ಹೀಗೆ ಒಂದು ದಿನ ಜಯರಾಜನನ್ನು ಆ ತೋಟದ ಹೊರಗೆ ನಿಲ್ಲಿಸಿ, ನಾನು ತೋಟದ ಬೇಲಿ ಹಾರಿ,ಒಳಗೆ ಹೋಗಿ ಸೀತಾಫಲದ ಮರದ ಬುಡದಲ್ಲಿ ನಿಂತು ಒಂದು ಗೆಲ್ಲಿನಲ್ಲಿದ್ದ ದೊಡ್ಡ ಸೀತಾಫಲಕ್ಕೆ ಕೈ ಹಾಕಿಯೇ ಬಿಟ್ಟೆ.

ಆಗಲೇ ನಾನು ಗಮನಿಸಿದ್ದು...

ಅಲ್ಲೇ ಎದುರಲ್ಲಿ ನಿಂತುಕೊಂಡು ಬಿಟ್ಟ ಕಣ್ಣುಗಳಿಂದ ನನ್ನನ್ನೇ ತದೇಕಚಿತ್ತದಿಂದ ನೋಡುತ್ತಿದ್ದಳು ನಮ್ಮ ಕ್ಲಾಸಿನ ಹೊಸ ಹುಡುಗಿ ವೈದೇಹಿ!

ನನಗೆ ಅದು ಅವಳ ತೋಟ ಎಂದೂ ಕೂಡ ಗೊತ್ತಿರಲಿಲ್ಲ.ಕೈಯಲ್ಲಿದ್ದ ಕೊಯ್ದ ಸೀತಾಫಲವಿತ್ತು. ಎದುರಲ್ಲಿ ವೈದೇಹಿ ಇದ್ದಳು.

ನಾನು ಸಿಕ್ಕಿ ಹಾಕಿಕೊಂಡ ಭಯದಿಂದ ಅತ್ತಿತ್ತ ನೋಡುತ್ತಿದ್ದೆ.ಆದರೆ ಅವಳು ಕೇವಲ ನನ್ನನ್ನಷ್ಟೇ ನೋಡುತ್ತಿದ್ದಳು.

ಸೀತಾಫಲವನ್ನು ಅಲ್ಲೇ ಎಸೆದು ಅಲ್ಲಿಂದ ವೇಗವಾಗಿ ಹೊರಗೆ ಓಡಿ ಬಿಟ್ಟಿದ್ದೆ.ಏನಾಗಿದೆ ಎಂದು ಗೊತ್ತಾಗದ ಜಯರಾಜ ಮಾತ್ರ ಏನಾಯಿತು.. ಏನಾಯಿತೆಂದು ನನ್ನ ಜೊತೆ ಓಡುತ್ತಲೇ ಕೇಳುತ್ತಲೇ ಇದ್ದ.

ಮರುದಿನ ಶಾಲೆಗೆ ಹೋಗಲು ಹಿಂಜರಿಕೆ ಇತ್ತು.ವೈದೇಹಿ ಏನಾದರೂ ಶಾಲೆಯಲ್ಲಿ ಉಳಿದವರಿಗೆ ಈ ವಿಷಯ ಹೇಳಿ, ಎಲ್ಲರೂ ನನ್ನನ್ನು ಕಳ್ಳ ಕಳ್ಳ ಎಂದು ಕರೆಯಬಹುದೆಂಬ ಆ ಅಳುಕೇ ನನ್ನಲ್ಲಿ ಹೆಚ್ಚಾಗಿತ್ತು.

ಆದರೆ  ಆ ರೀತಿ ಆಗಲಿಲ್ಲ.

ಮರುದಿನ ಶಾಲೆಗೆ ಹೋಗುವಾಗ ನನಗಿಂತ ಮೊದಲೇ ಶಾಲೆಯ ಗೇಟಿನ ಬಳಿ ನಿಂತಿದ್ದಳು ವೈದೇಹಿ.

ನಾನು ಅವಳತ್ತ ನೋಡಲೇ ಇಲ್ಲ. ಹಾಗೇ ಮುಂದೆ ನಡೆದು ಹೋದೆ.

"ರಘುರಾಮ.. ಸ್ವಲ್ಪ ನಿಲ್ಲು...." ಯಾರೋ ಕರೆದಂತಾಯಿತು.

ನಿಂತು ಹಿಂದಿರುಗಿ ನೋಡಿದೆ.

ನನ್ನ ಹಿಂದೆಯೇ ವೈದೇಹಿಯೇ ನಿಂತಿದ್ದಳು.

ತನ್ನದೊಂದು ಪುಟ್ಟ ಕೈಯನ್ನು ಮುಂದೆ ಮಾಡಿ ಕೈಯಲ್ಲಿದ್ದ ದೊಡ್ಡ ಚೀಲವನ್ನು ನನ್ನ ಕೈಗಿತ್ತಳು.

ತಗೋ.. ಇದು ನಿನಗೆ... ಅಂದಳು.

ಏನಿದು.. ಕೇಳಿದೆ

ಸೀತಾಫಲ... ನಿನಗೆ ಇಷ್ಟ ಅಲ್ಲವೇ,ಅದಕ್ಕಾಗಿ ತಂದೆ... ಅಂದಳು ವೈದೇಹಿ.

ಹೀಗೆ ಶುರುವಾಗಿತ್ತು ನನ್ನದು ವೈದೇಹಿಯದ್ದೊಂದು ಸ್ನೇಹ.

ಹೊಸದಾಗಿ ಸೇರಿಕೊಂಡಿದ್ದ ಅವಳಿಗೆ ತರಗತಿಯಲ್ಲಿ ಗೆಳೆಯರು ಯಾರು ಹೆಚ್ಚಾಗಿ ಇರಲಿಲ್ಲ. ಹಾಗಾಗಿ ಆ ನಂತರದ ದಿನಗಳಲ್ಲಿ ಶಾಲೆಗೆ ಒಟ್ಟಿಗೆ ಹೋಗಲು,ಶಾಲೆಯಿಂದ ಒಟ್ಟಿಗೆ ಬರಲು ನಾನು ಮತ್ತು ಜಯರಾಜ ಜೊತೆ ಅವಳಿಗೆ ಜೊತೆ ಆದೆವು.

ಯಾವಾಗಲೂ ನಾವು ಮೂವರು ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು.ನಮ್ಮದು ಆವಾಗ ಬಾಡಿಗೆ ಮನೆ.ಮೊದಲು ನಾನು ನಮ್ಮ ಮನೆಯಿಂದ ಜಯರಾಜನ ಮನೆಗೆ ನಡೆದು ಹೋಗುತ್ತಿದ್ದೆ. ಆ ನಂತರ ನಾನು ಮತ್ತು ಜಯರಾಜ ಶಾಲೆಯ ದಾರಿಯಲ್ಲಿ ನಡೆದು ವೈದೇಹಿಯ ಮನೆಯ ಮುಂದೆ ಅವಳಿಗಾಗಿ ಕಾಯುತ್ತಿದ್ದೆವು.

ವೈದೇಹಿ ಬಂದ ನಂತರ ಮತ್ತೆ ಮೂವರು ಶಾಲೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು.ಶಾಲೆಯ ಹಾದಿ ಗುಡ್ಡದ ದಾರಿಯಾಗಿದ್ದರೂ ನಮಗದು ಎಂದಿಗೂ ಸ್ವರ್ಗದ ಹಾದಿಯೇ ಆಗಿತ್ತು.ಕಾಡು ಹಣ್ಣು ತಿನ್ನುತ್ತಾ,ವೈದೇಹಿಗಾಗಿ ರೆಂಜೆಯ ಹೂ ಹೆಕ್ಕುತ್ತಾ,ನಗುತ್ತಾ ನಲಿಯುತ್ತಾ,ಹರಟೆ ಹೊಡೆಯುತ್ತಾ ಬ್ಯಾಗ್ ಏರಿಸಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದೆವು ನಾವು.

ವೈದೇಹಿ ನೋಡಲು ಚಂದ ಮಾತ್ರವಲ್ಲ ತುಂಬಾ ಒಳ್ಳೆಯ ಹುಡುಗಿ ಕೂಡ ಹೌದು,ಅಷ್ಟೇ ಮುಗ್ಧಳು ಕೂಡ.ನನಗೆ ಅವಳೆಂದರೆ ಇಷ್ಟ.ಅವಳಿಗೂ ನಾನೆಂದರೆ ತುಂಬಾನೇ ಇಷ್ಟ.ಆ ಇಷ್ಟದ ಸಂಬಂಧಕ್ಕೆ ಏನು ಹೆಸರು ಎಂದು ನಮ್ಮಿಬ್ಬರಿಗೂ  ಗೊತ್ತಾಗದ ವಯಸ್ಸು ಅದು.

ಅವಳನ್ನು ಬಿಟ್ಟು ನಾನಿರಲಿಲ್ಲ.ನನ್ನನ್ನು ಬಿಟ್ಟು ಅವಳಿರಲಿಲ್ಲ. ಅವಳು ಚೆನ್ನಾಗಿ ಹಾಡುತ್ತಿದ್ದಳು.ಶಾಲೆಯ ದಾರಿಯಲ್ಲಿ ನಾನು ವೈದೇಹಿ ಈ ಹಾಡು, ಆ ಹಾಡು ಎಂದು ಬೇಡಿಕೆ ಇಡುತ್ತಿದ್ದೆ. ನಾನು ಏನೇ ಹೇಳಿದರೂ ಇಲ್ಲ ಎಂದು ಎಂದಿಗೂ ಹೇಳಿದವಳಲ್ಲ ವೈದೇಹಿ.

ಎಸ್.ಜಾನಕಿ ಹಾಡುಗಳನ್ನು ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದಳು ಅವಳು. ನನಗೆ ಅವಳು ಹಾಡುವಾಗ ಎಸ್.ಜಾನಕಿ ಬೇರೆಯಲ್ಲ,ವೈದೇಹಿ ಬೇರೆಯಲ್ಲ ಎಂದು ಯಾವತ್ತೂ ಅನ್ನಿಸಿಯೇ ಇರಲಿಲ್ಲ.

ಶಾಲೆಯಲ್ಲಿ ಒಂದರ ನಂತರ ಒಂದು ತರಗತಿಗಳನ್ನು ಪಾಸ್ ಆಗಿ ನಮ್ಮ ಮೂವರ ಪ್ರಯಾಣ ಮತ್ತಷ್ಟು ಮುಂದುವರಿದಿತ್ತು. ಪ್ರಾಥಮಿಕ ಶಾಲೆ ಮುಗಿದು ಅಲ್ಲೇ ಪಕ್ಕದಲ್ಲಿದ್ದ ಹೈಸ್ಕೂಲ್ ಗೆ ಮೂವರೂ ಸೇರಿಕೊಂಡೆವು.ಶಾಲೆ ಬದಲಾದರೂ ಹೋಗಿ ಬರುವ ಆ ದಾರಿ ಮಾತ್ರ ಅದೇ ಆಗಿತ್ತು.

ಅದೊಂದು ಸಂಜೆ ಶಾಲೆಯ ಆ ದಾರಿಯಲ್ಲಿ ಮನೆಗೆ ಹಿಂದಿರುಗಿ ಬರುವಾಗ ನಾನೇ ಕೇಳಿದ್ದೆ.. ವೈದೇಹಿ ಈ ದಿನ ನೀನೇ ನನಗಾಗಿ ಒಂದು ಹಾಡನ್ನು ಹಾಡು ಎಂದು.

ಆ ದಿನ ವೈದೇಹಿ ಜಾನಕಿಯವರದ್ದೇ ಹಳೆಯ ಹಾಡೊಂದನ್ನು  ಹಾಡಿದ್ದಳು.

" ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ,ನಾ ಬರೆವೆ
ನನಗಾಗಿ ನೀನಿರುವೆ,ನಿನಗಾಗಿ ನಾ ಬಾಳುವೆ.."

ಹಾಡು ಎಂದಿನಂತೆ ಚೆನ್ನಾಗಿತ್ತು.ಆದರೆ ಹಾಡಿನ ಸಾಲಿನ ಹೆಚ್ಚಿನ ಅರ್ಥ ಅವತ್ತು ನನಗೂ ಗೊತ್ತಿರಲಿಲ್ಲ, ಬಹುಶಃ ಅವಳಿಗೂ ಗೊತ್ತಿರಲಿಲ್ಲ..!

ಆದರೆ ನನಗಾಗಿ ಒಂದು ಹಾಡನ್ನು ಹಾಡು ವೈದೇಹಿ ಎಂದು ನಾನು ಕೇಳಿದಾಗಲೆಲ್ಲ... ವೈದೇಹಿ ಕೇವಲ ಇದೇ ಹಾಡನ್ನೇ ಇಷ್ಟಪಟ್ಟು ರಾಗವಾಗಿಯೇ ಹಾಡುತ್ತಿದ್ದಳು.

ಶಾಲೆ ಮತ್ತಷ್ಟು ಮುಂದುವರಿದಿತ್ತು,ಸ್ನೇಹ ಗಾಢವಾಗಿತ್ತು.ಹತ್ತನೇ ತರಗತಿವರೆಗೂ ಅದು ಬಂದು ನಿಂತಿತ್ತು. ಕೊನೆಗೆ ನಮ್ಮ ಮೂವರದ್ದು ಎಸ್ಸೆಸ್ಸೆಲ್ಸಿ ಕೂಡ ಪಾಸ್ ಆಗಿ ಬಿಟ್ಟಿತು.

ಅಲ್ಲೇ ಪಕ್ಕದ ಊರಿನಲ್ಲಿರುವ ಪಿಯುಸಿಗೆ ಹೋಗುವ ಎಂದು ನಾನು, ವೈದೇಹಿ ಮತ್ತು ಜಯರಾಜ ಮೂವರು ನಿರ್ಧರಿಸಿ ಬಿಟ್ಟೆವು.ವೈದೇಹಿ ಅಂತು ಮೊದಲೇ ಹೇಳಿದ್ದಳು.. ರಘುರಾಮ ನೀನು ಎಲ್ಲಿಗೆ ಹೋಗುವೆಯೋ ನಾನು ಅದೇ ಕಾಲೇಜಿಗೆ ಬರುತ್ತೇನೆ.. ಎಂದು.

ವೈದೇಹಿಯ ಅಪ್ಪನಿಗೆ ಮನೆಯ ಮುಂದೆಯೇ ಒಂದು ಹೋಟೆಲ್ ಇತ್ತು. ಚಹಾ ತಿಂಡಿ ಊಟ ಎಲ್ಲವೂ ಅಲ್ಲಿ ಸಿಗುತ್ತಿತ್ತು.ಸಣ್ಣ ಹೋಟೆಲ್ ಆದರೂ ನಮ್ಮ ಹಳ್ಳಿಗೆ ಅದೊಂದೇ ಹೋಟೆಲ್.

ಹೈಸ್ಕೂಲ್ ಮುಗಿದು ರಜೆ ಬೇರೆ ಶುರುವಾಗಿತ್ತು.ರಘುರಾಮ ಮನೆಗೆ ಬಾ.. ಸೀತಾಫಲ ಆಗಿದೆ ತಗೊಂಡು ಹೋಗು.. ಎಂದು ಕರೆದಿದ್ದಳು ವೈದೇಹಿ.

ನಾನು ಮತ್ತು ಜಯರಾಜ ಇಬ್ಬರೂ ಅವಳ ಮನೆಗೆ ಹೋದೆವು. ಅವಳ ಅಪ್ಪ ಅಮ್ಮ ಕೂಡ ತುಂಬಾ ಒಳ್ಳೆಯವರು.ಬಹಳ ಚೆನ್ನಾಗಿ ಮಾತಾಡಿಸಿ ಚಹಾ ತಿಂಡಿ ಎಲ್ಲಾ ಕೊಟ್ಟರು.ಆ ನಂತರ ನಾನು ವೈದೇಹಿ ಜೊತೆ ತೋಟಕ್ಕೆ ಹೋಗಿ ಬೇಕಾದಷ್ಟು ಸೀತಾಫಲ ಕೊಯ್ದು ಚೀಲಕ್ಕೆ ತುಂಬಿಸಿಕೊಂಡೆ.

ಅವಳ ಮನೆಯ ಹಿಂದೆಯೇ ಒಂದು ದೊಡ್ಡ ಹೊಳೆ.ಮಳೆಗಾಲ ಶುರುವಾಗಿದುದರಿಂದ ಹರಿಯುವ ನೀರಿನಲ್ಲಿ ರಭಸ ಕೂಡ ಹೆಚ್ಚೇ ಇತ್ತು.ಆದರೂ ನನಗೆ ಹೊಳೆಯಲ್ಲಿ ಇಳಿದು ಈಜಾಡಬೇಕು ಎಂದು ಅನಿಸಿತು.ವೈದೇಹಿ ಬೇಡ ಅಂದಳು.ಆದರೂ ನಾನು ಇಳಿದೇ ಬಿಟ್ಟಿದ್ದೆ.ನನಗೆ ಈಜು ಗೊತ್ತಿಲ್ಲ.ಆದ್ದರಿಂದ ಮುಳುಗಿ ಬಿಟ್ಟೆ!

ಈಜು ಗೊತ್ತಿಲ್ಲದೇ ನೀರಿನಲ್ಲಿ ಮುಳುಗಿದ ನಾನು ಜೀವ ಉಳಿಸಿಕೊಳ್ಳಲು ಕೈ ಕಾಲು ಹೊಡೆದೆ. ಅದನ್ನು ನೋಡಿದ ವೈದೇಹಿ ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ನೀರಿಗೆ ಹಾರಿಯೇ ಬಿಟ್ಟಿದ್ದಳು.

ಅವಳಿಗೆ ಎಷ್ಟು ಈಜು ಬರುತ್ತಿತ್ತು ಎಂದು ನನಗೆ ನಿಜವಾಗಿಯೂ ಗೊತ್ತಿಲ್ಲ.ಆದರೆ ನನ್ನ ಜೀವ ಉಳಿಸಲು ಅವಳು ತನ್ನ ಜೀವದ ಆಸೆ ಬಿಟ್ಟು ಆ ದಿನ ನೀರಿಗೆ ಹಾರಿದ್ದಳು!

ನಾವಿಬ್ಬರೂ ನೀರಲ್ಲಿ ಮುಳುಗುತ್ತಿರುವುದನ್ನು ನೋಡಿದ ಜಯರಾಜ ಜೋರಾಗಿ ಬೊಬ್ಬೆ ಹೊಡೆದ.ಅದನ್ನು ಕೇಳಿ ಅಲ್ಲೇ ತೋಟದಲ್ಲಿಯೇ ಇದ್ದ ವೈದೇಹಿಯ ಅಪ್ಪ ಓಡೋಡಿ ಬಂದು ಹೊಳೆಗೆ ಹಾರಿ ಹೇಗೋ ನನ್ನನ್ನು ಎತ್ತಿ ಮೇಲಕ್ಕೆ ಹಾಕಿ ಬಿಟ್ಟರು.

ನಾನು ಆ ದಿನ ಹೇಗೋ ಬದುಕಿ ಬಿಟ್ಟೆ...

ವೈದೇಹಿಯೂ ಬದುಕಿದ್ದಳು,

ಆದರೆ ವೈದೇಹಿಯ ಅಪ್ಪ ಬದುಕಿ ಉಳಿಯಲೇ ಇಲ್ಲ!!

ನನ್ನನ್ನು ವೈದೇಹಿಯನ್ನು ಮೇಲಕ್ಕೆ ಎಳೆದು ಹಾಕಿದ ಅವರು ಆ ನಂತರ ದೊಡ್ಡದೊಂದು ಸುಳಿಗೆ ಸಿಕ್ಕಿ ನೀರಲ್ಲಿಯೇ ಮುಳುಗಿ ಹೋಗಿ ಕ್ಷಣಾರ್ಧದಲ್ಲಿಯೇ ಅವರ ಪ್ರಾಣಪಕ್ಷಿ ಅಲ್ಲಿಂದ ಬಹುದೂರಕ್ಕೆ ಹಾರಿ ಹೋಗಿತ್ತು!!!

ಆ ದಿನ ವೈದೇಹಿಯ ಅಮ್ಮ ಹಾಕಿದ ಕಣ್ಣೀರು ಈಗಲೂ ನನ್ನ ಕಣ್ಣ ಮುಂದೆ ಹಾಗೆಯೇ ಇದೆ,ಅವರ ಆ ನೋವಿನ ಆಕ್ರಂದನ ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದ್ದೆ.

ವೈದೇಹಿ ಮಾತ್ರ ನಿರ್ಲಿಪ್ತಳಾಗಿ ಹೊಳೆಯ ನೀರನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದಳು!!

ನಾವು ಆ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದವರು.ನನ್ನ ಅಪ್ಪ ಅಮ್ಮ ಕೂಡ ಹೀಗೆ ಆಯಿತಲ್ಲಾ ಎಂದು ಈ ಕಹಿ ಘಟನೆಯಿಂದ ತುಂಬಾನೇ ನೊವು ಪಟ್ಟುಕೊಂಡರು.ಆ ನಂತರ ನಾವು ಆ ಊರೇ ಬಿಟ್ಟು ಬೇರೆ ಊರಿಗೆ ಹೊರಟು ಹೋದೆವು..!

ಊರು ಬಿಟ್ಟು ಹೋಗುವಾಗ ವೈದೇಹಿ ಬಳಿ ಹೋಗಿ... ಹೋಗುತ್ತಿದ್ದೇನೆ ವೈದೇಹಿ ಎಂದು ಹೇಳುವ ಧೈರ್ಯ ಕೂಡ ನನ್ನಲ್ಲಿ ಇರಲಿಲ್ಲ.ಹೇಗೆ ಹೇಳಲಿ ಒಂದರ್ಥದಲ್ಲಿ ಅವಳನ್ನು ಅರ್ಧ ಅನಾಥೆ ಮಾಡಿದವನೇ ನಾನು.ಈಗಲೂ ಆ ಪಾಪ ಪ್ರಜ್ಞೆ ನನ್ನಿಂದ ಅಳಿಸಿ ಹೋಗಿಯೇ ಇಲ್ಲ.

ನಲ್ವತ್ತೈದು ವರ್ಷಗಳ ಹಿಂದಿನ ಎಲ್ಲವೂ ನೆನಪಾಗಿ ಹೃದಯ ಮತ್ತಷ್ಟು ಭಾರವಾಯಿತು.ಈ ಹಳ್ಳಿಗೆ ಮತ್ತೆ ಬರುತ್ತೇನೆ ಎಂದು ನಾನು ಅಂದುಕೊಂಡಿರಲೇ ಇಲ್ಲ. ಆದರೆ ಆ ಘಟನೆ ನನ್ನನ್ನು ತೀವ್ರವಾಗಿ ಸದಾ ಕಾಡುತ್ತಲೇ ಇತ್ತು..

ಒಂದು ಬಾರಿ ಆದರೂ ವೈದೇಹಿಯನ್ನು ಮಾತಾಡಿಸಿ ಸಮಾಧಾನ ಪಡಿಸಬೇಕು ಎಂದು ಹಲವಾರು ಬಾರಿ ಅಂದುಕೊಂಡೆ.. ಆದರೆ ಯಾಕೋ ನನಗೆ ಧೈರ್ಯವೇ ಬರಲಿಲ್ಲ.ಆ ನಂತರ ವೈದೇಹಿ ಏನಾದಳೋ ನನಗೂ ಗೊತ್ತಿಲ್ಲ..

ಬಹುಶಃ ಅವಳ ಅಮ್ಮ ಈಗ ಬದುಕಿರಲಿಕ್ಕಿಲ್ಲ,ವೈದೇಹಿ ಕೂಡ ಮದುವೆಯಾಗಿ ಬೇರೆ ಎಲ್ಲೋ ಹೋಗಿರಬಹುದು,ಅವಳಿಗೆ ಈ ಪಾಪಿಯ ನೆನಪು ಅದೆಷ್ಟು ಇದೆಯೋ ಅದೂ ಕೂಡ ನನಗೆ ಗೊತ್ತಿಲ್ಲ.

ಇದ್ದರೆ ಜಯರಾಜ ಒಬ್ಬ ಈ ಹಳ್ಳಿಯಲ್ಲಿ ಈಗಲೂ ಇರಬಹುದು,ಕನಿಷ್ಟ ಪಕ್ಷ ಅವನನ್ನಾದರೂ ಮಾತಾಡಿಸಿ ಅವನೊಂದಿಗೆ ನನ್ನ ಶಾಲೆಯ ದಾರಿಯಲ್ಲಿ ಒಮ್ಮೆ ನಾಲ್ಕು ಹೆಜ್ಜೆ ಹಾಕಬೇಕು.. ಕೊನೆಯ ಬಾರಿಗೆ ಕೊನೆಯ ಹೆಜ್ಜೆ ಹಾಕಿ ಬಾಲ್ಯದ ದಿನಗಳನ್ನು ಮೆಲುಕು ಹಾಕಬೇಕು ಎಂದು ನಾನು ಇಂದು ಬಂದಿದ್ದೆನೆ.

ಆಮೇಲೆ ಎಷ್ಟು ದಿನ ಬದುಕಿ ಇರುತ್ತೆನೋ ನನಗೂ ಗೊತ್ತಿಲ್ಲ.ಅಂತಹ ಬದುಕಿ ಬಾಳುವ ಆಸೆ ಕೂಡ ನನಗಿಲ್ಲ,ಆದರೆ ನನ್ನ ಈ ಕೊನೆ ಗಳಿಗೆಯಲ್ಲಿ ಅದ್ಯಾಕೋ ಈ ಹಳ್ಳಿಯೊಂದೇ ನನಗೆ ಅತಿಯಾಗಿ ನೆನಪಾಗಿ ಬಿಟ್ಟಿತ್ತು. ನಾನು ಮಣ್ಣಾಗುವುದಕ್ಕಿಂತ ಮೊದಲು ಒಂದು ಬಾರಿ ನನ್ನ ಹಳ್ಳಿಯ ಗಾಳಿ ಸೇವನೆ ಮಾಡಬೇಕು ಎಂದು ಮನಸ್ಸು ಇನ್ನಿಲ್ಲದಂತೆ ಹಾತೊರೆದು ಬಿಟ್ಟಿತ್ತು ಹಾಗಾಗಿ ಮತ್ತೆ ಏನನ್ನೂ ಯೋಚಿಸದೆ ನೇರವಾಗಿ ಇಲ್ಲಿಗೆಯೇ ಬಸ್ ಹಿಡಿದಿದ್ದೆ..

ಶಾಲೆಯ ದಾರಿಯಲ್ಲಿಯೇ ನಿಧಾನಕ್ಕೆ ನಡೆಯುತ್ತಾ ನಡೆಯುತ್ತಾ  ಮೊದಲು ನಮ್ಮ ಬಾಡಿಗೆಮನೆ ಇದ್ದ ಜಾಗಕ್ಕೆ ಬಂದೆ.

ಅಲ್ಲಿ ಈಗ ಮನೆಯೇ ಇಲ್ಲ.ಯಾರೋ ಹಳೆಯ ಮನೆಯನ್ನು ಕೆಡವಿ ಈಗ ಕಾಂಪ್ಲೆಕ್ಸ್ ನಂತಹ ಬಿಲ್ಡಿಂಗ್ ಅನ್ನು ಕಟ್ಟಿ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ.ನಾನು ಆಡಿ ಬೆಳೆದ ಮನೆಯ ಅವಶೇಷವೂ ಅಲ್ಲಿ ಇಲ್ಲ.ಮನಸ್ಸಿನ ಮೂಲೆಯಲ್ಲಿ ಮಾತ್ರ ನಾನು ಹುಟ್ಟಿ ಬೆಳೆದ ಆ ನನ್ನ ಮನೆ ಇನ್ನೂ ಭದ್ರವಾಗಿತ್ತು ಅಷ್ಟೇ!

ಮುಂದೆ ಜಯರಾಜನ ಮನೆಯ ಕಡೆಗೆ ಹಾಗೇ ನಡೆದೆ. ಅಲ್ಲಿ ಈಗ ಉದ್ದಕ್ಕೆ ರಬ್ಬರ್ ತೋಟವಿದೆ.ತೋಟದ ಅಂಚುಗಳಲ್ಲಿ ಯಾವುದೇ ಮನೆಯ ಒಂದು ಕುರುಹು ಕೂಡ ಕಂಡು ಬರಲಿಲ್ಲ.ನಿಜವಾಗಿಯೂ ತುಂಬಾ ನಿರಾಶೆ ಆಯಿತು. ನಾನು ಬಂದಿದ್ದೆ ಜಯರಾಜನೊಂದಿಗೆ ಮಾತಾಡಲು,ಒಂದಷ್ಟು ಬಾಲ್ಯವನ್ನು ಮತ್ತಷ್ಟು ಮೆಲುಕು ಹಾಕಲು.ಆದರೆ ಈಗ ಅವನ ಮನೆಯೂ ಇಲ್ಲ,ಅವನು ಎಲ್ಲಿದ್ದಾನೋ ನನಗದು ಗೊತ್ತಿಲ್ಲ.

ಹೇಗೋ ಬಂದಿದ್ದೇನೆ.ಒಮ್ಮೆ ಸುಮ್ಮನೆ ಶಾಲೆಯವರೆಗೆ ಹೋಗಿ ಶಾಲೆಯ ಗೋಡೆಗಳನ್ನು ಮೈದವಡಿ  ಬರುವ ಅಂತ ಅನ್ನಿಸಿ ಬಿಟ್ಟಿತು.ಗೊತ್ತು.. ಅಲ್ಲಿ ಈಗ ನನ್ನದು ಎಂದು ಹೇಳಿಕೊಳ್ಳುವ ಏನೂ ಇಲ್ಲ.ಆದರೆ ನನಗೆ ಸಂಬಂಧಿಸಿದ ಒಂದಷ್ಟು ಬಾಲ್ಯದ ನೆನಪುಗಳು ಅಲ್ಲಿವೆ.ಮತ್ತೆ ನಿಧಾನಕ್ಕೆ ಶಾಲೆಯ ಕಡೆಗೆನೇ ಭಾರವಾದ ಹೆಜ್ಜೆ ಹಾಕತೊಡಗಿದೆ.

ಜಯರಾಜನ ಮನೆ ಆದ ನಂತರ ಶಾಲೆಗಿಂತಲೂ ಎಷ್ಟೋ  ಮೊದಲು ಸಿಗುವುದೇ ವೈದೇಹಿಯ ಮನೆ.ನಡೆಯುತ್ತಾ ನಡೆಯುತ್ತಾ ವೈದೇಹಿಯ ಮನೆ ಬಳಿಯೇ ಬಂದೆ.ಮನಸ್ಸು ಬೇಡ ಎಂದರೂ ಹೃದಯ ಕೇಳಲಿಲ್ಲ. ಹಾಗೇ ಅಲ್ಲೇ ನಿಂತುಕೊಂಡು ಒಮ್ಮೆ ಅವಳ ಮನೆಯತ್ತ ನಿಧಾನಕ್ಕೆ ತಿರುಗಿ ನೋಡಿದೆ.

ಅವಳ ಮನೆಯೂ ಇತ್ತು,ಮನೆಯ ಮುಂದೆ ಇದ್ದ ಅವರ ಆ ಹಳೆಯ  ಹೋಟೆಲ್ ಕೂಡ ಹಾಗೇ ಇತ್ತು.ಈಗ ಮನೆಯಲ್ಲಿ ವೈದೇಹಿ ಇರದಿದ್ದರೂ ಆ ಮನೆಗೆ ಹೋಗುವ ಧೈರ್ಯ ಮಾತ್ರ ನನಗೆ ಈಗಲೂ ಬರಲೇ ಇಲ್ಲ.ಚಹಾ ಕುಡಿಯುವ ಎಂದು ಅದೇ  ಹೋಟೆಲ್ ಗೆ ನಡೆದೆ.

ಅದು ಒಂದು ಕಾಲದಲ್ಲಿ ವೈದೇಹಿಯ ಅಪ್ಪನ ಹೋಟೆಲ್ ಅದು. ಹೋಟೆಲ್ ಗೆ ಹೋಗಿ ಕುಳಿತುಕೊಂಡಾಗ ಏನೋ ಒಂದು ಅಪರಾಧಿ ಭಾವ ನನ್ನನ್ನು ಗಾಢವಾಗಿ ಮತ್ತೆ ಆವರಿಸಿಕೊಂಡು ಬಿಟ್ಟಿತು.ಸುಂದರ ಕುಟುಂಬವೊಂದು ನನ್ನಿಂದಾಗಿಯೇ ಒಡೆದು ಹೋಗಿದ್ದು ಎಂಬ ಭಾವವೇ ನನ್ನಲ್ಲಿ ಅಧಿಕವಾಗಿತ್ತು.

ಹೋಟೆಲ್ ನ ಹಳೆಯ ಕಪಾಟಿನಲ್ಲಿ ಕರಿದ ತಿನಿಸುಗಳನ್ನು  ಪೇರಿಸಿ ಇಟ್ಟಿದ್ದರು.ಒಳಗಡೆ ಬಿಸಿ ಬಿಸಿ ಚಹಾ ಅದರಷ್ಟಕ್ಕೆ ಕುದಿಯುತ್ತಿತ್ತು.ಸುತ್ತಲೂ ನೋಡಿದೆ,ಒಂದು ಮೂಲೆಯಲ್ಲಿ ವೈದೇಹಿಯ ಅಪ್ಪನ ಹಳೆಯ ಪೋಟೋ ಗೋಡೆಯಲ್ಲಿ ಇನ್ನೂ ನೇತಾಡುತ್ತಲೆ ಇತ್ತು!

ಒಬ್ಬ ಹುಡುಗ ಬಂದು... ಏನು ಕೊಡಲಿ ಅಜ್ಜ.. ಅಂಬಡೆ ಇದೆ,ಬನ್ಸ್ ಇದೆ,ವಡೆ ಇದೆ,ಜಾಂಬು ಇದೆ,ಸಜ್ಜಿಗೆ ರೊಟ್ಟಿ ಇದೆ,ಪೋಡಿ ಇದೆ.. ಎಂದು ಹೇಳಿದ.

ತಿಂಡಿ ಏನೂ ಬೇಡಪ್ಪಾ.. ಒಂದು ಬಿಸಿ ಚಹಾ ಕೊಡು.. ಅಂದೆ.

ಮನಸ್ಸಿಗೆ ಏನಾದರೂ ತಿನ್ನಬೇಕು ಎಂದು ಅನ್ನಿಸಲೇ ಇಲ್ಲ.

ಚಹಾ ಬಂತು.

ನಿಧಾನಕ್ಕೆ ಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಬಿಸಿ ಚಹಾ ಹೀರತೊಡಗಿದೆ.

ಹೋಟೆಲ್ ನಲ್ಲಿ ಅಂತಹ ಏನೂ ಬದಲಾವಣೆ ಆಗಿರಲಿಲ್ಲ.ಒಂದಷ್ಟು ಮಾರ್ಪಾಡು ಆದರೂ ಇನ್ನೂ ಹಳೆಯ ಕಾಲದ ಹೋಟೆಲ್ ನಂತೆಯೇ ಇತ್ತು ಅದು.

ಚಹಾ ಕುಡಿದ ನಂತರ ಬಿಲ್ ಕೊಟ್ಟು ಆ ಹುಡುಗನಲ್ಲೇ ಸುಮ್ಮನೆ ಕೇಳಿದೆ.

ಆ ಪೋಟೋದಲ್ಲಿ ಇರುವವರು ಯಾರು ಹುಡುಗ ? ಎಂದು.

"ಅದು ನನ್ನ ತಂದೆಯವರು..." ವಯಸ್ಸಾದ ಧ್ವನಿಯೊಂದು ನನ್ನ ಹಿಂದಿನ ಅಡುಗೆ ಕೋಣೆಯಿಂದ ತೂರಿ ಬಂದಿತ್ತು.

ಹಿಂದಿರುಗಿ ನೋಡಿದೆ.

ಆಗ ಅಲ್ಲಿ ಇದ್ದಳು... ವೈದೇಹಿ!!

ನನಗೆ ನಂಬಲಾಗಲಿಲ್ಲ.

ಅವಳನ್ನೇ ನೋಡಿದೆ..

ಮತ್ತೆ ಮತ್ತೆ ಕಣ್ಣು ಮಿಟುಕಿಸದೇ ನೋಡಿದೆ.

ಹೌದು ಅದು ಅವಳೇ.

ನನ್ನ ಬಾಲ್ಯದ ಗೆಳತಿ ವೈದೇಹಿ!!

ಶಾಲಾ ಸಮವಸ್ತ್ರದೊಂದಿಗೆ ನನ್ನೊಂದಿಗೆ ಶಾಲೆಯ ದಾರಿ ಸವೆಸಿದ್ದ ನನ್ನ ಗೆಳತಿ ವೈದೇಹಿ,ಈಗ ವೃದ್ದೆಯಂತೆ ಮೈ ಪೂರ ಸೀರೆ ಹೊದ್ದು ನಿಂತಿದ್ದಳು.

ವೈದೇಹಿ ನನ್ನನೇ ಸೂಕ್ಷ್ಮವಾಗಿ ನೋಡಿದಳು..

ಮತ್ತಷ್ಟು ಹತ್ತಿರ ಬಂದಳು..

ಉಸಿರಿಗೆ ಉಸಿರು ತಾಗುವಷ್ಟು..

"ರ.. ಘು..ರಾ..ಮ   ನೀನು...? " ಅಂದಳು.

ಕರುಳು ಹಿಂಡಿದಂತೆ ಆಯಿತು.

ನಾನು ವೈದೇಹಿ ಎಂದು ಬಾಯಿ ಬಿಟ್ಟು ಕರೆಯುವ ಮೊದಲೇ ಅವಳು ನನ್ನ ಗುರುತು ಹಿಡಿದಿದ್ದಳು!

ನನ್ನ ಕಣ್ಣೀರು ಧಾರಕಾರ.

ಹೌದು.. ವೈದೇಹಿ... ನಾನೇ ರಘುರಾಮ.. ಅಂದೆ ಮತ್ತಷ್ಟು ಕಣ್ಣೀರಾಗಿ.

ನನ್ನನ್ನು ಮಾತಾಡಿಸದೆ ಹಾಗೇ ಹೋಗುತ್ತಿರುವೆ ಅಲ್ಲವೇ  ರಘುರಾಮ ... ಈ ವೈದೇಹಿಯನ್ನು ಮರೆತೇ ಬಿಟ್ಟಿರುವೆಯಾ..? ವೈದೇಹಿ ನನ್ನಲ್ಲೇ ಕೇಳಿ ಬಿಟ್ಟಳು.

ಈ ಪ್ರಶ್ನೆಗೆ ಹೇಗೆ ಉತ್ತರ ಹೇಳಲಿ ನಾನು... ಮೈಯ ಮಚ್ಚೆಯಂತೆ ನನಗೆ ಅನುದಿನವೂ ನೆನಪಾಗುತ್ತಿದ್ದವಳು ಅವಳೊಬ್ಬಳೇ.

ಇಲ್ಲ ವೈದೇಹಿ... ನೆನಪಾಗುತ್ತಿದ್ದೆ ನೀನು,ದಿನವೂ ನೆನಪಾಗುತ್ತಿದ್ದೆ. ಆದರೆ ನಿನ್ನೆದುರು ಬಂದು ನಿಲ್ಲುವ ಧೈರ್ಯ ನನ್ನಲ್ಲಿ ಇರಲಿಲ್ಲ. ನನ್ನಿಂದಾಗಿಯೇ ನಿಮ್ಮ ಚಂದದ ಕುಟುಂಬ ಇನ್ನಿಲ್ಲದಂತೆ ನೋವು ಅನುಭವಿಸಿತು.. ಆ ಪಾಪಪ್ರಜ್ಞೆಯೇ ಈಗಲೂ ಈ ಇಳಿವಯಸ್ಸಿನಲ್ಲೂ ನನ್ನನ್ನು ಅಪಾರವಾಗಿ ಶಿಕ್ಷಿಸುತ್ತಿದೆ ಅಂದೆ.

ಅದರಲ್ಲಿ ನಿನ್ನ ತಪ್ಪೇನು ಇಲ್ಲ ರಘುರಾಮ.. ಎಲ್ಲವೂ ವಿಧಿ ಲಿಖಿತ.ಅದನ್ನು ಬದಲಾಯಿಸಲು ಯಾರಿಗಾದರೂ ಸಾಧ್ಯವಿದೆಯೇ ಹೇಳು.ಅದೆಲ್ಲವನ್ನು ಬಿಟ್ಟು  ಬಿಡು. ಈಗ ಎಲ್ಲಿದ್ದೀಯಾ.. ಹೇಗಿದ್ದೀಯಾ.. ಏನು ನಿನ್ನ ಕಥೆ... ಎಲ್ಲವನ್ನೂ ಒಮ್ಮೆ ನನಗೆ ಹೇಳು.. ಅಂದಳು ವೈದೇಹಿ.

ಎಲ್ಲವನ್ನೂ ನಿನಗೆ ಹೇಳುವೆ,ಆದರೆ ಒಮ್ಮೆ ಶಾಲೆಯ ದಾರಿಯಲ್ಲಿ ನನ್ನೊಡನೆ ಎರಡು ಹೆಜ್ಜೆ ಹಾಕುವೆಯಾ ವೈದೇಹಿ? ಎಂದು ಕೇಳಿ ಬಿಟ್ಟೆ ನಾನು.

ಅವಳು ಆಗುವುದಿಲ್ಲ ಎಂದು ಹೇಳಲಿಲ್ಲ..ವೈದೇಹಿ ಯಾವತ್ತೂ ನನಗೆ ಆಗುವುದಿಲ್ಲ ಎಂದು ಹೇಳಿದವಳೇ ಅಲ್ಲ.

ಹೋಟೆಲ್ ನಲ್ಲಿದ್ದ ಹುಡುಗನಿಗೆ ಈಗ ಬರುತ್ತೇನೆ ಎಂದು ಹೇಳಿ.. ನನ್ನೊಡನೆ ಶಾಲೆಯ ದಾರಿ ಹಿಡಿದಳು.

ವೃದ್ಧರಿಬ್ಬರು ನಡೆಯುತ್ತಿದ್ದೆವು... ಪರಿಚಿತ ಹಳೆಯ ದಾರಿ ನಮ್ಮನ್ನೇ ದಿಟ್ಟಿಸಿ ನೋಡುತ್ತಿತ್ತು! ಅದಕ್ಕೂ ನಮ್ಮಿಬ್ಬರ ನೆನಪು ಬಹಳ ಚೆನ್ನಾಗಿಯೇ ಇದೆ.

ಒಂದು ಕಾಲದಲ್ಲಿ ನಾನು ವೈದೇಹಿ ಕೈ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ್ದ ದಾರಿ ಅದು. ಜಯರಾಜ ಸುಮ್ಮನೆ ನಮ್ಮ ಹಿಂದೆಯೇ ನಡೆದು ಬರುತ್ತಿದ್ದ.ಈಗಲೂ ನಾನು ವೈದೇಹಿ ನಡೆಯುತ್ತಿದ್ದೆವೆ.. ಅದೇ ದಾರಿಯಲ್ಲಿ, ಆದರೆ ಕೈ ಕೈ ಹಿಡಿದು ಅಲ್ಲ.. ನಮ್ಮ ನಡುವೆ ಅಂತರವೊಂದು ಮಲಗಿ ಬಿಟ್ಟಿದೆ! ಅದು ನೆನಪಾಗಿ ಬಾಲ್ಯದ ಆ ಮುಗ್ದ ಜಗತ್ತು ಅದೆಷ್ಟು ಚೆನ್ನಾಗಿತ್ತು ಎಂದು ಒಮ್ಮೆ ಅನ್ನಿಸಿ ಬಿಟ್ಟಿತು.

ಇಬ್ಬರೂ ಮತ್ತಷ್ಟು ನಡೆದೆವು..

ವೈದೇಹಿಯೇ ಕೇಳಿದಳು - ರಘುರಾಮ.. ನಿನ್ನ ಕಥೆ ಹೇಳಲೇ ಇಲ್ಲ..

ನಾನು ನನ್ನ ಕಥೆ ಹೇಳಲು ಶುರು ಮಾಡಿದೆ..

- ಈ ಹಳ್ಳಿ ಬಿಟ್ಟ ನಂತರ ಇನ್ನೊಂದು ಊರಿಗೆ ಹೋದೆವು,ಅಲ್ಲೂ ವಿದ್ಯಾಭ್ಯಾಸ ಮುಂದುವರಿಯಿತು.

ನಂತರ ಡಿಗ್ರಿ ಕೂಡ ಮುಗಿಸಿದೆ, ಓದು ಮುಗಿದ ಕೂಡಲೇ ಒಳ್ಳೆಯ ಕೆಲಸ ಕೂಡ ಸಿಕ್ಕಿತು. ಆ ನಂತರ ಅಪ್ಪ ಅಮ್ಮನ ಒತ್ತಾಯಕ್ಕೆ ಮದುವೆ ಕೂಡ ಆದೆ.

ಕಥೆ ನಿಲ್ಲಿಸಿ ವೈದೇಹಿಯನ್ನೇ ನೋಡಿದೆ.. ಅವಳು ಏನೂ ಪ್ರತಿಕ್ರಿಯಿಸದೇ ಹಾಗೇ ನಿರ್ಲಿಪ್ತಳಾಗಿ ತಲೆ ತಗ್ಗಿಸಿಕೊಂಡೇ  ನಡೆಯುತ್ತಿದ್ದಳು.

ನಾನು ಕಥೆ ಮುಂದುವರಿಸಿದೆ..

ಆ ನಂತರ ನಮಗೆ ಇಬ್ಬರು ಮಕ್ಕಳು ಕೂಡ ಹುಟ್ಟಿದರು ವೈದೇಹಿ,ಒಂದು ಗಂಡು ಮತ್ತೊಂದು ಹೆಣ್ಣು.ಅವರು ಬೆಳೆದು ದೊಡ್ಡವರಾದ ಮೇಲೆ ಅವರಿಗೂ ಮದುವೆ ಮಾಡಿದೆ.. ಈಗ ಅವರಿಗೂ ಮಕ್ಕಳಾಗಿದೆ. ನಾನು ಈಗ ಅವರ ಪಾಲಿನ ಅಜ್ಜ... ಇಷ್ಟೇ ನನ್ನ ಕಥೆ.

ಅಲ್ಲಿಯವರೆಗೆ ಸುಮ್ಮನೆ ಕೇಳುತ್ತಾ ನಡೆಯುತ್ತಿದ್ದ ವೈದೇಹಿ  ಹೇಳಿದಳು.. ನಿನ್ನ ಮಕ್ಕಳು ಬಹಳ ಸುಂದರಾವಾಗಿಯೇ  ಇರಬೇಕಲ್ಲವೇ ರಘುರಾಮ.. ಆದರೂ ನೀನು ಅವರ ಹೆಸರು ನನಗೆ ಹೇಳಲೇ ಇಲ್ಲ ನೋಡು..ಅಂದಳು.

ನಾನು ತಡವರಿಸುತ್ತಲೇ ಉಗುಳು ನುಂಗಿಕೊಂಡು ಹೇಳಿದೆ.. ಮಗನ  ಹೆಸರು ವೈಭವ್ ರಾಮ್.. ಮಗಳ ಹೆಸರು ವೈ.. ದೇ.. ಹಿ...ರಾಮ್!

ಒಮ್ಮೆಲೇ ನಿಂತು ನನ್ನ ಕಣ್ಣನ್ನೇ ಆಳವಾಗಿ ನೋಡಿದಳು ವೈದೇಹಿ.

ನನ್ನ ಕಣ್ಣಲ್ಲೂ ನೀರಿತ್ತು..

ಅವಳ ಕಣ್ಣಲ್ಲೂ ನೀರು ಜಿನುಗಿತ್ತು!

ಇಬ್ಬರೂ ಏನು ಮಾತಾಡಲಿಲ್ಲ...ನಮ್ಮಿಬ್ಬರ ಮಧ್ಯೆ ಮೌನವೊಂದೇ ತನ್ನ ಸಾಮ್ರಾಜ್ಯವಾಳಿ ಬಿಟ್ಟಿತ್ತು.

ನಡೆದು ನಡೆದು ಶಾಲೆ ತಲುಪಿದೆವು. ಶಾಲೆಯ ಗೇಟ್ ಬಳಿ ಬಂದಾಗ ಮತ್ತೆ ಹಳೆಯ ಬಾಲ್ಯದ ನೆನಪುಗಳು ಹಾಗೇ ಮರುಕಳಿಸಿ ಬಿಟ್ಟವು.

ವೈದೇಹಿಯೇ ನನಗೆ  ನೆನಪು ಹುಟ್ಟಿಸಿದಳು..

-ರಘುರಾಮ... ನಿನಗೆ ನೆನಪು ಇದೆಯೇ.. ಇಲ್ಲೇ ನಾನು ನಿನಗೆ ಒಂದು ಚೀಲ ಪೂರ್ತಿ ಸೀತಾಫಲದ ಹಣ್ಣುಗಳನ್ನು ಕೊಟ್ಟಿದ್ದೆ..

ವೈದೇಹಿ ನನಗೆ ಸಂಬಂಧಿಸಿದ ಯಾವುದನ್ನೂ ಮರೆತೇ ಇರಲಿಲ್ಲ.

ಅವಳನ್ನೇ ಮತ್ತೆ ನೋಡಿದೆ. ಅವಳು ಅದೆಷ್ಟು ಮುಗ್ಧಳು.

ಅವಳು ನಗುತ್ತಾ ಮತ್ತೆ ಹೇಳಿದಳು.. ರಘುರಾಮ ಆ ದಿನ ನೀನು ಸೀತಾಫಲ ಕದಿಯಲು ನಮ್ಮ ತೋಟಕ್ಕೆ ಬಂದಾಗ ನನ್ನನ್ನು ನೋಡಿ ಸೀತಾಫಲ ಅಲ್ಲೇ ಬಿಸಾಡಿ ಓಡಿ ಹೋದದ್ದು ನಾನು ಯಾವತ್ತಿಗೂ ಮರೆಯಲಾರೆ ಗೊತ್ತಾ.. ಈಗಲೂ ಅದು ನೆನಪಾದಾಗ ನಾನು ನನ್ನಷ್ಟಕ್ಕೆಯೇ ಒಮ್ಮೆ ಜೋರಾಗಿ ನಕ್ಕು ಬಿಡುತ್ತೇನೆ... ಎಂದು ಹೇಳಿದೆ ವೈದೇಹಿ ಹಳೆಯದನ್ನು ಮತ್ತೆ ನೆನಪಿಸಿಕೊಂಡು ಹಾಗೇ ಜೋರಾಗಿ ನಕ್ಕು ಬಿಟ್ಟಳು.

ಹೆಚ್ಚು ಕಡಿಮೆ ನನ್ನಷ್ಟೇ ವಯಸ್ಸಿನ ಅರುವತ್ತು ಮೀರಿದ ಹೆಂಗಸು ಅವಳು. ಆದರೂ ಅವಳು ಮನಸಾರೆ ನಕ್ಕಾಗ ನನಗೆ ಹಳೆಯ ವೈದೇಹಿಯ ನಗುವೇ ಒಮ್ಮೆ ಕಣ್ಣ ಮುಂದೆ ಮಿಂಚಿ ಮೆರೆಯಾಯಿತು.

ನಾನೂ ಅವಳೊಂದಿಗೆ ಸೇರಿ ಹಾಗೇ ಜೋರಾಗಿ ನಕ್ಕೆ.

ಆ ದಿನ ಶಾಲೆಗೆ ರಜಾ. ಹಾಗಾಗಿ ಶಾಲೆಯಲ್ಲಿ ಯಾರೂ ಇರಲಿಲ್ಲ. ಇಬ್ಬರೂ ಶಾಲೆಯ ಹೊರ ಆವರಣದ ಪೂರ್ತಿ ಓಡಾಡುತ್ತಾ, ತರಗತಿಯ ಬಾಗಿಲು,ಕಿಟಕಿ ಸರಳುಗಳ ಮೈದವಡುತ್ತಾ ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದೆವು.

ನಾನು ಎಷ್ಟೋ ವರ್ಷದ ನಂತರ ಮನಸಾರೆ ನಕ್ಕಿದ್ದೆ.

ನಿಧಾನವಾಗಿ ಆಕಾಶದಲ್ಲಿ ಮಳೆ ಬರುವ ಸೂಚನೆ ದಟ್ಟವಾಗತೊಡಗಿತು.

ವೈದೇಹಿ ಹೇಳಿದಳು... ರಘುರಾಮ ಮಳೆ ಬರುವ ಹಾಗಿದೆ, ಕೊಡೆ ಬೇರೆ ಇಲ್ಲ.. ಇನ್ನು ವಾಪಸು ಹೊರಡೋಣವೇ?

ಇಬ್ಬರೂ ಶಾಲೆಯಿಂದ ಹಿಂದಿರುಗಿ ಹೊರಟೆವು.

ಮತ್ತೆ ಇಬ್ಬರ ಮಧ್ಯೆ ಅಂತರವೊಂದು ಹಾಗೇ ಕಾಲು ಚಾಚಿಕೊಂಡು ಬಿಟ್ಟಿತು.

ನಡೆಯುತ್ತಾ ನಾನೇ ಕೇಳಿದೆ..

ವೈದೇಹಿ ನಿನ್ನ ಕಥೆ ನನಗೆ ಹೇಳಲೇ ಇಲ್ಲ.. ನೀನು ಏಕೆ ಇನ್ನೂ ಹೋಟೆಲ್ ನಡೆಸುತ್ತಿರುವೆ..? ಗಂಡ ಮಕ್ಕಳು ಎಲ್ಲಾ ಎಲ್ಲಿ.. ಅವರೆಲ್ಲಾ ಏನು ಮಾಡುತ್ತಿದ್ದಾರೆ ವೈದೇಹಿ? ನಿನ್ನ ಮಕ್ಕಳು ಕೂಡ ನಿನ್ನಂತೆಯೇ ಅಂದವಾಗಿಯೇ ಇರುತ್ತಾರೆ ಬಿಡು..ಅಂದ ಹಾಗೆ ನಿನಗೆಷ್ಟು ಮಕ್ಕಳು..ಅವರ ಹೆಸರೇನು ? ಅಂದೆ.

"ನನಗೆ ಮದುವೆಯೇ ಆಗಿಲ್ಲ ರಘುರಾಮ..! " ಹೇಳಿ ಮುಗಿಸಿದ  ವೈದೇಹಿಯ ಗಂಟಲು ಗದ್ಗದಿತವಾಗಿತ್ತು!!

ಒಂದು ಕ್ಷಣ ಅಲ್ಲೇ ನಿಂತೆ.

ನಿಂತು ಅವಳನ್ನೇ ನೋಡತೊಡಗಿದೆ.

ಅವಳ ಕಣ್ಣುಗಳು ತೇವವಾಗಿತ್ತು!!

ಅವಳಲ್ಲಿ ಏಕೆ ನೀನು ಮದುವೆಯಾಗಲಿಲ್ಲ ವೈದೇಹಿ ಎಂದು ಕೇಳುವ ಆ ಧೈರ್ಯ,ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿ ಸುಖ ಸಂಸಾರ ನಡೆಸಿದ ನನ್ನಲ್ಲಿ ಆ ಕ್ಷಣ ಹುಟ್ಟಲೇ ಇಲ್ಲ..!

ಕಣ್ಣೀರು ಒರೆಸಿಕೊಂಡು ಅವಳೇ ಅವಳ ಕಥೆ ಮುಂದುವರಿಸಿದಳು..

ರಘುರಾಮ ನೀನು ಹೋದ ನಂತರ ನಾನು ಜಯರಾಜ ಪಿಯುಸಿ ಸೇರಿಕೊಂಡೆವು.ಅಪ್ಪ ತೀರಿಕೊಂಡ ನಂತರ ಅಮ್ಮನೇ  ಹೋಟೆಲ್ ಅನ್ನು ನೋಡಿಕೊಂಡರು.ನಂತರ ನಾನು ಡಿಗ್ರಿ ಕೂಡ ಸೇರಿದೆ.

ಆದರೆ ಆವಾಗಲೇ ಅಮ್ಮನ ಆರೋಗ್ಯ ಹದಗೆಟ್ಟಿತು.ಅಮ್ಮ ಹಾಸಿಗೆ ಹಿಡಿದರು.ನನಗೆ ಅಂತ ಇದ್ದದ್ದು ಒಂದೇ ಜೀವ ರಘುರಾಮ .. ಅದುವೇ ನನ್ನ ಅಮ್ಮ. ಅವಳನ್ನು ನೋಡಿಕೊಳ್ಳುವುದಕ್ಕಾಗಿ ನಾನು ಕಾಲೇಜ್ ಬಿಟ್ಟು ಅವಳ ಆರೈಕೆಯಲ್ಲಿ ತೊಡಗಿದೆ.ಜೀವನ ಸಾಗಿಸಲು ಹೊಟೇಲ್ ನಡೆಸುವುದು ಅನಿವಾರ್ಯ ಆಗಿತ್ತು.ಅದನ್ನು ಕೂಡ ನಾನೇ ಮಾಡಿದೆ.

ಮದುವೆಯ ವಯಸ್ಸಿಗೆ ಬಂದಾಗ ಎಲ್ಲರೂ ಮದುವೆ ಆಗು ಮದುವೆ ಆಗು ಹೇಳಿದರು. ಆದರೆ ರಘುರಾಮ ನನಗೆ ಎಂದಿಗೂ ಮದುವೆಯಾಗಬೇಕೆಂದು ಅನಿಸಲೇ ಇಲ್ಲ.. ಮಾತ್ರವಲ್ಲ ಅಮ್ಮನನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಲು ನನಗೆ ಮನಸ್ಸು ಕೂಡ ಬರಲಿಲ್ಲ.ಮಾವನವರು ಎಲ್ಲಾ ಒತ್ತಾಯ ಮಾಡುತ್ತಲೇ ಇದ್ದರು.ಆದರೆ ನಾನು ಕೇಳಲೇ ಇಲ್ಲ.ಕೊನೆಗೆ ಮದುವೆ ವಯಸ್ಸು ಕೂಡ ಮೀರಿ ಹೋಯಿತು.ಒಂದು ದಿನ ಅಮ್ಮ ಕೂಡ ತೀರಿಕೊಂಡಳು.ನನಗೆ ಅಂತ ಉಳಿದದ್ದು  ಮನೆ, ತೋಟ ಹಾಗೂ ಅಪ್ಪನ ಹೋಟೆಲ್ ಅಷ್ಟೇ...!

ಅವಳ ಮಾತು ಕೇಳಿ ನನ್ನ ಕೊರಳ ಸೆರೆ ಹಾಗೇ ಉಬ್ಬಿ ಬಂದಿತ್ತು!

ಅವಳ ಕಥೆಗೆ ಯಾವ ರೀತಿ ನಾನು ಸಮಾಧಾನ ಹೇಳಲಿ.....!!

ವೈದೇಹಿಯೇ ಕಣ್ಣಂಚು ಮಾಡಿಕೊಂಡು ಮತ್ತೆ ಮಾತು ಮುಂದುವರಿಸಿದಳು..

ರಘುರಾಮ... ನೀನು ನನಗೆ ಪ್ರತೀ ದಿನ ನೆನಪಾಗುತ್ತಿದ್ದೆ.

ನಮ್ಮ ತೋಟದಲ್ಲಿ ಈಗಲೂ ಸೀತಾಫಲ ಆಗುತ್ತದೆ.ತೋಟಕ್ಕೆ ಹೋಗಿ ಸೀತಾಫಲದ ಮರದ ಬುಡದಲ್ಲಿ ನಿಂತು ಕೊಂಡರೆ ಬರೀ ನನಗೆ ನಿನ್ನದೇ ನೆನಪುಗಳು ರಘುರಾಮ ..!

ಅಪ್ಪನನ್ನು ಕಳೆದುಕೊಂಡ ತೋಟದ ಹಿಂದಿನ ಹೊಳೆಯ ಬದಿ ಕೂಡ ಹೋಗಿ ಒಮ್ಮೊಮ್ಮೆ ಸುಮ್ಮನೆ ನಿಂತುಕೊಳ್ಳುತ್ತೇನೆ,ಹೊಳೆಯ ನೀರನ್ನೇ ದಿಟ್ಟಿಸಿ ನೋಡುತ್ತೇನೆ. ಅಪ್ಪನಷ್ಟೇ ನೀನು ಕೂಡ ನನಗೆ ತುಂಬಾ ನೆನಪಾಗುತ್ತೀಯಾ ರಘುರಾಮ..!

ಶಾಲೆ ಮುಗಿದ ಎಷ್ಟೋ ವರ್ಷದ ನಂತರವೂ ಒಮ್ಮೊಮ್ಮೆ ನಾನು ಒಬ್ಬಳೇ ಈ ಶಾಲೆಯ ಹಾದಿಯಲ್ಲಿಯೇ ಪ್ರತೀ ಸಂಜೆ ಹೆಜ್ಜೆ ಹಾಕುತ್ತೇನೆ. ಏಕೆಂದರೆ ಈ ದಾರಿಯಲ್ಲಿಯೇ ನಾನು ಮತ್ತು ನೀನು ನಡೆದ ಆ ಬಾಲ್ಯದ ನೆನಪುಗಳು ಚೆಲ್ಲಿಕೊಂಡಿರುವುದು ರಘುರಾಮ..ನಿನ್ನೆ ಸಂಜೆಯೂ ನಾನು ಒಬ್ಬಳೇ ಇಲ್ಲಿ ನಡೆದು ಹೋಗಿದ್ದೆ!!

ನಿನಗೆ ಗೊತ್ತಾ ರಘುರಾಮ... ಹಾಗೇ ವಿಷಾದ ಆವರಿಸಿಕೊಂಡಾಗ ಈಗಲೂ ನಾನು ಜಾನಕಿ ಅಮ್ಮನ ಹಾಡೇ ಹಾಡುತ್ತೇನೆ... ಪ್ರತೀ ಹಾಡು ಹಾಡುವಾಗ ಕೂಡ ಅದರಲ್ಲಿ ನೀನೇ ಇರುತ್ತೀಯಾ ರಘುರಾಮ .... ನೀನು ನನಗೆ ಯಾವತ್ತೂ ಮರೆತು ಹೋಗಿದ್ದೆ ಇಲ್ಲ...!!

ನನ್ನ ಕಣ್ಣೀರಿನ ಅಣೆಕಟ್ಟು ಒತ್ತಡ ತಡೆಯಲಾರದೆ ಒಡೆದು ಹೋಗಿ ಅದೆಷ್ಟೋ ಹೊತ್ತೇ ಆಗಿತ್ತು.ನನ್ನ ಕಣ್ಣೀರು ಧಾರಕಾರ..!!

ಮಾತು ಎನ್ನುವುದು ಹುಟ್ಟಲೇ ಇಲ್ಲ ನನ್ನಲ್ಲಿ!

ವೈದೇಹಿಯೇ ಹೇಳಿದಳು... ರಘುರಾಮ ಇದೇ ದಾರಿಯಲ್ಲಿ ನಡೆವಾಗ ಅಲ್ಲವೇ... ಹಾಡು ಹೇಳು ವೈದೇಹಿ ..ಹಾಡು ಹೇಳು... ಎಂದು ನೀನು ನನ್ನನ್ನು ಒತ್ತಾಯ ಮಾಡುತ್ತಿದ್ದದ್ದು. ಏಕೆ ರಘುರಾಮ ಇಂದು ನನ್ನ ಹಾಡು ಕೇಳಬೇಕು ಎಂದು ನಿನಗೆ ಅನ್ನಿಸುತ್ತಿಲ್ಲವೇ? ನನಗೆ ವಯಸ್ಸಾಗಿದೆ ನಿಜ.. ಆದರೂ ನೀನು ಕೇಳಿದರೆ ನಾನು ಹಾಡದೇ ಇರುತ್ತೆನೆಯೇ..?

ಕಣ್ಣು ಮಂಜು ಮಾಡಿಕೊಂಡು ತಲೆ ತಗ್ಗಿಸಿಕೊಂಡೇ... ಹೂಂ... ಹಾಡು... ಅಂದೆ. ನನ್ನ ಕಣ್ಣೀರು ನಿಂತ ನೆಲವನ್ನು ಮತ್ತಷ್ಟು ಒದ್ದೆ ಮಾಡಿತ್ತು.

ವೈದೇಹಿ ನಿಧಾನಕ್ಕೆ ನಡೆಯುತ್ತಲೇ ಹಾಡಲು ಶುರು ಮಾಡಿದಳು...

ಅದೇ ಹಾಡು.. ನನಗಾಗಿ ಪ್ರತೀ ಸಲ ಹಾಡುತ್ತಿದ್ದ ಚಿ. ಉದಯಶಂಕರ್  ಸಾಹಿತ್ಯದ  ಜಾನಕಮ್ಮನ ಆ ಹಾಡು..

" ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ,ನಾ ಬರೆವೆ
ನನಗಾಗಿ ನೀನಿರುವೆ,ನಿನಗಾಗಿ ನಾ ಬಾಳುವೆ..

ನಿನ್ನ ಮನಸು ಬಲ್ಲೆನು ನಾನು,ನಿನ್ನಾಸೆ ಬಲ್ಲೆನು ನಾನು..
ಹೂವಂತ ಹೃದಯವು ನಿನ್ನದು ಜೇನಂತ ನುಡಿಗಳು ನಿನ್ನದು..

ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ,
ಹಾಯಾಗಿ ಬಾಳುವ ಕನಸು,ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು.. ಏನೇನೊ ಬೇಡಿದೆನು...ಕೊನೆಗೇನೂ  ಕಾಣೆನು!

ನೀ ನಡೆವ ಹಾದಿಯೇ ಬೇರೆ,ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು,ಗತಿ ಒಂದೇ ಸಂಕಟ ನೋವು..
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು,
ನೀ ನನ್ನ ದೂರದಿರು,ಏನನ್ನೂ ಹೇಳದಿರು.. ನಾ ದೂರವಾದರು!

ಒಲವಿನ ಗೆಳೆಯನು ನೀನೆ,ನನ್ನ ಜೀವ.. ನನ್ನ ದೈವ..
ನಿನ್ನ ಸುಖವೆ ನನ್ನ ಸುಖವು,ನಿನಗೆಂದೂ ಶುಭ ಕೋರುವೆ.. ಒಲವಿನ ಗೆಳೆಯನೆ ನೀನೆ ನನ್ನ ಜೀವ.. ನನ್ನ ದೈವ.. ನನ್ನ ಜೀವ.. ನನ್ನ ದೈವ..."

ಹಿಂದೆ ಈ ಹಾಡಿನ ಸಾಲಿನ ಅರ್ಥವೇ ಗೊತ್ತಿರಲಿಲ್ಲ.ಈಗ ಅರ್ಥವೂ ಗೊತ್ತಿದೆ,ವೈದೇಹಿಯ ಬಾಳು ಕೂಡ ಗೊತ್ತಾಗಿ  ಬಿಟ್ಟಿದೆ..!

ಒಮ್ಮೆಗೆ ನನ್ನ ಹೃದಯವೇ ಹಿಂಡಿದಂತಾಯಿತು!!

ವೈದೇಹಿಯ ಹಾಡು ಮುಗಿದಿತ್ತು.. ಇಬ್ಬರ ಕಣ್ಣಂಚಲ್ಲೂ ನೀರು ಜಿನುಗಿತ್ತು.. ಶಾಲೆಯ ದಾರಿಯೂ ಮುಗಿದಿತ್ತು!

ಮನೆಗೆ ಬಾ ಅಂದಳು ವೈದೇಹಿ.

ಆದರೆ ಆ ನಂತರ ನನಗೆ ಅಲ್ಲಿ ಹೆಚ್ಚು ನಿಲ್ಲುವುದು ಅಸಾಧ್ಯ ಅನ್ನಿಸಿ ಬಿಟ್ಟಿತ್ತು.

ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕೂಡ ಅಸಾಧ್ಯವಾಗಿ ಬಿಟ್ಟಿತ್ತು ನನಗೆ.

ಬರುತ್ತೇನೆ ವೈದೇಹಿ.. ಎಂದು ಹೇಳಿ ಅಲ್ಲಿಂದ ಹೊರಟೇ ಬಿಟ್ಟೆ.!!

ಹೃದಯ ಮತ್ತಷ್ಟು ಭಾರವಾಗಿತ್ತು..

ಭಾರವಾದ ಹೆಜ್ಜೆಗಳೊಂದಿಗೆ ನಿಧಾನಕ್ಕೆ ನಡೆಯಲು ಶುರು ಮಾಡಿದೆ.

ವೈದೇಹಿ ನನ್ನನ್ನು ಇಂದಿಗೂ ಮರೆತೇ ಇಲ್ಲ.

ಹೇಗೆ ಮರೆಯುತ್ತಾಳೆ.. ಜೀವ ಹೋಗುವವನ ಜೀವ ಉಳಿಸಲು ನೀರಿಗೆ ಹಾರಿದ ಜೀವ ಅದು.

ಅವಳಿಗೆ ಕೊಟ್ಟು ಗೊತ್ತೇ ಹೊರತು ಏನನ್ನು ತಗೊಂಡು ಗೊತ್ತೇ ಇಲ್ಲ!

ಭಗವಂತ ಕೂಡ ಅವಳಿಗೆ ಸಿಕ್ಕಾಪಟ್ಟೆ ಮೋಸವನ್ನೇ ಮಾಡಿದ..

ಎಲ್ಲವನ್ನೂ ಅವಳಿಂದ ಕಿತ್ತು ಕೊಂಡ.. ಒಂದಷ್ಟನ್ನು ನನ್ನ ಮೂಲಕವೂ ಕಿತ್ತು ಕೊಂಡ..!

ಆದರೆ ಆ ಮುಗ್ಧತೆಯನ್ನು ಕಿತ್ತುಕೊಳ್ಳಲು ಅವನೂ ಕೂಡ  ಸೋತು ಹೋದ.

ಅವಳು ಏಕೆ ಇಷ್ಟೊಂದು ದೇವತೆ...!!?

ನನ್ನ ಕಣ್ಣೀರು ಮತ್ತಷ್ಟು ಧಾರಕಾರ..

ಹಾಗೇ ಕಣ್ಣೊರೆಸಿಕೊಂಡು ಮತ್ತೆ ಬಸ್ ಸ್ಟಾಫ್ ನ ಹಾದಿ ಹಿಡಿದು ನಿಧಾನಕ್ಕೆ ನಡೆದೆ..

ವೈದೇಹಿಯ ಆ ಹಾಡು ಕಾಡಲು ಶುರುವಾಯಿತು,ಮತ್ತೆ ಕಿವಿಯಲ್ಲಿ ಗುಂಯ್ ಗುಡಲು ಶುರುವಾಯಿತು..

" ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ,ನಾ ಬರೆವೆ
ನನಗಾಗಿ ನೀನಿರುವೆ,ನಿನಗಾಗಿ ನಾ ಬಾಳುವೆ.."

ಅಯ್ಯೋ ದೇವರೇ... ಈ ಹಾಡಿನ ಸಾಲು ಏಕೆ ಇಂದು ನನ್ನನ್ನು ಈ ರೀತಿ ಇಷ್ಟೊಂದು ಘಾಸಿಗೊಳಿಸುತ್ತಿದೆ,ನನ್ನನ್ನು ಕೊಲ್ಲುತ್ತಿದೆ ಎಂದು  ಅಂದುಕೊಳ್ಳುವಾಗಲೇ...

ರಘುರಾಮ... ರಘುರಾಮ.... ಎಂದು ಯಾರೋ ಜೋರಾಗಿ ಕರೆಯುತ್ತಾ ಏದುಸಿರು ಬಿಡುತ್ತಾ ನನ್ನ ಹಿಂದೆಯೇ ಓಡಿ ಬಂದಂತೆ ಆಯಿತು...

ಹಿಂದಿರುಗಿ ನೋಡಿದೆ...

ಅಲ್ಲಿ ಮತ್ತೆ ನಿಂತಿದ್ದಳು ವೈದೇಹಿ..!

ನನಗೆ ಕೊಡಲೆಂದು ಒಂದು ಚೀಲ ಸೀತಾಫಲದ ಹಣ್ಣುಗಳನ್ನು ಹಿಡಿದುಕೊಂಡು ಮುಗ್ಧವಾಗಿಯೇ ನಿಂತಿದ್ದಳು ನನ್ನ ಗೆಳತಿ ವೈದೇಹಿ...!

ಸೀತಾಫಲ ಹಣ್ಣುಗಳ ಚೀಲ ನನ್ನ ಕೈಗಿತ್ತು ಮತ್ತೆ ಅವಳ ಹೋಟೆಲ್ ಕಡೆಗೆ ನಿಧಾನಕ್ಕೆ ತಲೆ ತಗ್ಗಿಸಿಕೊಂಡು ಹೆಜ್ಜೆ ಹಾಕಿಯೇ ಬಿಟ್ಟಳು ವೈದೇಹಿ..!!

ಅವಳನ್ನೇ ನೋಡುತ್ತಾ ನಿಂತೆ....

ಕಣ್ಣು ಮಂಜಾಗಿ ಅವಳು ಕಣ್ಣಿಂದ ಕಣ್ಮರೆಯಾಗುವವರೆಗೂ!!!

.....................................................................................

#ಇಷ್ಟೇ_ಕಥೆ!
Ab Pacchu
Photo-internet


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..