ಅಂಬಕ್ಕನ ಮೀನು ಮತ್ತು ಮೂರು ತುಂಡುಗಳು!
ಒಂದು ಕೈಯಲ್ಲಿ ಮಣ್ಣಿನ ಬಿಸಲೆಯನ್ನು(ಪಾತ್ರೆ),ಮತ್ತೊಂದು ಕೈಯಲ್ಲಿ ಹರಿತವಾದ ಕತ್ತಿಯನ್ನು ಹಿಡಿದುಕೊಂಡು ಮನೆಯ ಅಂಗಳದ ಅಂಚಿಗೆ ನಡೆದು ಬಿಟ್ಟೆ.
ಅಂಗಳದ ಒಂದು ಮೂಲೆಯಲ್ಲಿ ಬಸಳೆ ಬಳ್ಳಿಗಳನ್ನು ತೂಗಿಕೊಂಡು ಇತ್ತು ನಾಲ್ಕು ಕಾಲುಗಳ ಆ ಒಂದು ಬಸಳೆ ಚಪ್ಪರ.ಚಪ್ಪರದ ಮೇಲೆ ಅಂಗಾತ ಮಲಗಿಕೊಂಡಿದ್ದ ಬಸಳೆಗಳಿಗೆ ಚಪ್ಪರವನ್ನೂ ಮೀರಿ ಬಳೆಯುವ ಹಂಬಲ.ಕೆಲವೊಂದು ಬಳ್ಳಿಗಳು ತಮ್ಮ ಆ ಪ್ರಯತ್ನದಲ್ಲಿ ಯಶಸ್ವಿ ಕೂಡ ಆಗಿದ್ದವು.
ಚಪ್ಪರದ ಬಳಿ ಕುಳಿತುಕೊಂಡು ಬಿಸಲೆಯಲ್ಲಿದ್ದ ನಾಲ್ಕೈದು ಬಂಗುಡೆ ಮೀನುಗಳನ್ನು ಮೂಂಡಿ ಕೆಸುವಿನ ಒಂದು ದೊಡ್ಡದಾದ ಎಲೆಗೆ ಸುರಿದುಕೊಂಡು,ಪಕ್ಕದಲ್ಲಿಯೇ ಕೊಡಪಾನದಲ್ಲಿ ನೀರು ಇಟ್ಟುಕೊಂಡು... ಹಾಗೇ ನಿಧಾನಕ್ಕೆ ಮೀನು ಕ್ಲೀನು ಮಾಡಲು ಶುರು ಮಾಡಿದೆ.
ತಾಜಾ ಮೀನು.ಎಲ್ಲವೂ ಹಸಿರು ಹಸಿರಾಗಿ ಗಟ್ಟಿಯಾಗಿಯೇ ಇತ್ತು.
ಕೈಯಲ್ಲಿದ್ದ ಕತ್ತಿಯಿಂದ ಬಂಗುಡೆ ಮೀನಿನ ಪಕ್ಕದ ಎರಡು ರೆಕ್ಕೆ,ಕೆಳಗಿನ ಬಾಲ ಎಲ್ಲವನ್ನು ಕತ್ತರಿಸಿ,ಅದರ ಮೈಯಲ್ಲಿದ್ದ ಪಾರದರ್ಶಕ ಪೊಡಸನ್ನು ಕೂಡ ಕತ್ತಿಯಿಂದ ಕೆರೆಸಿ ತೆಗೆದೆ. ನಂತರ ಹೊಟ್ಟೆ ಸೀಳಿ ಅದರ ಕರುಳನ್ನು ಹೊರ ತೆಗೆದು ಕರುಳಿನಲ್ಲಿದ್ದ ಮೀನಿನ ಮೊಟ್ಟೆಯನ್ನು ಕೂಡ ಬಹಳ ಜಾಗರೂಕತೆಯಿಂದ ಬೇರ್ಪಡಿಸಿ,ಅದನ್ನೂ ಸಹ ಬೇರೆಯೇ ತೆಗೆದಿಟ್ಟುಕೊಂಡೆ.
ನಂತರ ಪಕ್ಕದಲ್ಲಿ ಮಿಂಯ್ಯಾವ್.. ಮಿಂಯ್ಯಾವ್ ಅನ್ನುತ್ತಲೇ ತುಂಬಾ ಆಸೆಯಿಂದ ಕುಳಿತಿದ್ದ ಮಂಗು ಪುಚ್ಚೆಯತ್ತ(ಬೆಕ್ಕು), ಒಂದೊಂದೇ ಮೀನಿನ ಕರುಳುಗಳನ್ನು ಎಸೆದೆ.ಮಂಗು ಪುಚ್ಚೆ ಮೀನಿನ ಕರುಳುಗಳನ್ನು ಕಚ್ಚಿಕೊಂಡು ಸ್ವಲ್ಪ ದೂರ ಹೋಗಿ ಒಂದು ಕಡೆ ಕುಳಿತುಕೊಂಡು,ಆ ಕ್ಷಣದ ತನ್ನ ಪಾಲಿನ ಸುಗ್ರಾಸ ಭೋಜನವೊಂದು ಕಣ್ಣು ಮುಚ್ಚಿಕೊಂಡೇ ಮೆಲ್ಲುವ ಮೂಲಕ ಆರಂಭಿಸಿ ಬಿಟ್ಟಿತು.
ಬಂಗುಡೆ ಮೀನಿನ ತಲೆಗಾಗಿ ನಮ್ಮ ಮನೆಯ ನಾಯಿ ಟೈಗರ್ ಜೊಲ್ಲು ಸುರಿಸುತ್ತಾ,ನನ್ನನ್ನೊಮ್ಮೆ ಮಣ್ಣಿನ ಬಿಸಲೆಯನ್ನೊಮ್ಮೆ ನೋಡುತ್ತಾ ನನ್ನ ಪಕ್ಕವೇ ತುಂಬಾ ಹೊತ್ತಿನಿಂದ ನಿಂತು ಕೊಂಡಿದ್ದ.ಅದಕ್ಕೂ ಬಂಗುಡೆ ಮೀನಿನ ತಲೆಯ ಭಾಗವನ್ನು ಕತ್ತರಿಸಿ ಹಾಕಿದೆ.ಟೈಗರ್ ಮೀನಿನ ತಲೆಯನ್ನು ಕಚ್ಚಿಕೊಂಡು ಹೋಗಿ ಬಸಳೆ ಚಪ್ಪರಡಿ ನಿಂತುಕೊಂಡು ಹಾಗೇ ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿದ.
ಬಿಸಲೆಗೆ ಒಂದಿಷ್ಟು ಕಲ್ಲು ಉಪ್ಪು ಹಾಕಿ ಎಲ್ಲಾ ಮೀನನ್ನು ಮತ್ತೊಮ್ಮೆ ಅದರಲ್ಲಿ ಸುರುವಿಕೊಂಡು ಮತ್ತಷ್ಟು ಶುಚಿಯಾಗುವಂತೆ,ಅಳಿದುಳಿದ ಎಲ್ಲಾ ಪೊಡಸು ಸಂಪೂರ್ಣ ಎದ್ದು ಹೋಗುವಂತೆ ನಾಲ್ಕೈದು ಸಲ ಬಿಸಲೆಯನ್ನು ಗಿರ ಗಿರ ತಿರುಗಿಸಿ ತಿರುಗಿಸಿಯೇ ಮೀನನ್ನು ಕ್ಲೀನು ಮಾಡಿದೆ.ಆ ನಂತರ ಕೊಡಪಾನದಿಂದ ಮತ್ತಷ್ಟು ನೀರು ಹಾಕಿ ಎಲ್ಲಾ ಮೀನನ್ನು ಚೆನ್ನಾಗಿ ತೊಳೆದುಕೊಂಡು,ಕೊನೆಯಲ್ಲಿ ಮೀನುಗಳನ್ನು ಅಲ್ಲೇ ತುಂಡರಿಸಲು ಶುರು ಮಾಡಿಬಿಟ್ಟೆ.
ಪ್ರತೀ ಬಾರಿಯೂ ಮೀನು ತುಂಡರಿಸಲು ಶುಚಿಗೊಳಿಸಿದ ಮೀನನ್ನು ಒಂದೊಂದಾಗಿ ಕೈಗೆತ್ತಿಕೊಳ್ಳುವಾಗ ನನ್ನಲ್ಲಿ ಅದೆಷ್ಟು ನೆನಪುಗಳು ಹಾಗೇ ಸಂತೆ ಸೇರಿ,ನನ್ನನ್ನು ತುಂಬಾ ಹಿಂದಕ್ಕೆ ಎಳೆದುಕೊಂಡು ಹೋಗಿ ಬಿಡುತ್ತದೆ.ನಾನು ಗೆಲ್ಲುವುದಿಲ್ಲ,ಹಾಗೇ ನೆನಪುಗಳಿಗೆ ಶರಣಾಗಿ ಬಿಡುತ್ತೇನೆ. ನೆನಪುಗಳಲ್ಲಿಯೇ ಹಿಂದಕ್ಕೆ ಮತ್ತಷ್ಟು ಹಿಂದಕ್ಕೆ ಓಡುತ್ತಲೇ ಇರುತ್ತೇನೆ.
ಹೌದು ಈಗ ಮಾತ್ರವಲ್ಲ,ಹಿಂದಿನಿಂದಲೂ ನನಗೆ ಮದುವೆಯಾಗುವುದಕ್ಕಿಂತ ಮೊದಲೂ ಕೂಡ ಮನೆಯಲ್ಲಿ ಮೀನು ಶುಚಿಗೊಳಿಸುವುದು ನಾನೇ.
ಎಷ್ಟೇ ದೊಡ್ಡ ಮೀನು ಇರಲಿ,ಎಷ್ಟು ಚಿಕ್ಕ ಮೀನೇ ಇರಲಿ.. ಇಲ್ಲವೇ ಎಷ್ಟೇ ಸಂಖ್ಯೆಯ ಮೀನುಗಳೇ ಇರಲಿ,ನನಗೆ ಪ್ರತೀ ಮೀನನ್ನು ಮೂರು ತುಂಡು ಮಾಡಿ ಅಡುಗೆ ಮಾಡಿಯೇ ಅಭ್ಯಾಸ.ತಲೆಯ ಭಾಗದ ತುಂಡು,ನಡುವಿನ ಆಯತಾಕಾರದ ತುಂಡು,ಹಾಗೂ ಕೊನೆಯಲ್ಲಿ ಬಾಲವಿರುವ ತ್ರೀಕೋನಾಕೃತಿಯ ತುಂಡು..
ಹೀಗೆಯೇ ಒಟ್ಟು ಮೂರು ತುಂಡು ಮಾಡಿಯೇ ನನ್ನ ಅಮ್ಮ ಕೂಡ ಮೀನುಗಳನ್ನು ತುಂಡರಿಸಿಕೊಂಡು ಅಡುಗೆ ಮಾಡಿ ಬಿಡುತ್ತಿದ್ದಳು..ಎಲ್ಲವನ್ನೂ ಅಮ್ಮನ ಬಳಿಯೇ ಕುಳಿತುಕೊಂಡು ಬಹಳ ಶ್ರದ್ಧೆಯಿಂದ ಕಲಿತು ಬಿಟ್ಟಿದ್ದೆ.
ಬಡತನ ಎನ್ನುವುದು ಬಹಳ ಚಿಕ್ಕಂದಿನಲ್ಲಿಯೇ ನಮ್ಮನ್ನು ಬಹುವಾಗಿ ಅಪ್ಪಿಕೊಂಡು ಮುದ್ದಾಡಿ ಬಿಟ್ಟಿತ್ತು.
ಅಪ್ಪ ಚಿಕ್ಕಂದಿನಲ್ಲಿಯೇ ಇರಲಿಲ್ಲ. ಅಮ್ಮ ಒಬ್ಬಳೇ ಮೂವರು ಮಕ್ಕಳನ್ನು ಸಾಕಿ ಬೆಳೆಸಿದ್ದಳು. ಕಡಲ ದಂಡೆಯಲ್ಲಿಯೇ ನಮ್ಮದ್ದೊಂದು ಪುಟ್ಟ ಮನೆ.ಅಲೆಗಳ ಜೋಗುಳಕ್ಕೆ ತಲೆದೂಗಿ ದಿನ ರಾತ್ರಿಯೆನ್ನದೇ ನಿದ್ರಿಸುತ್ತಿತ್ತು ಆ ನಮ್ಮ ದುರ್ಬಲ ಮನೆ.ಉಸಿರಾಟದಲ್ಲೂ ಕೂಡ ಚಡಪಡಿಕೆ ಇದ್ದದ್ದು ನಮ್ಮಲ್ಲಿ ಮಾತ್ರ.
ನಾನೇ ದೊಡ್ಡವಳು.
ನನ್ನ ಉಳಿದೆರಡು ತಮ್ಮಂದಿರ ಪಾಲಿನ ಅಕ್ಕ ನಾನು.
ಅಮ್ಮ ಮಾಡಿಟ್ಟ ಬಿಸಲೆಯಲ್ಲಿ ಬೆಂದ ಮೀನುಗಳಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದೆವು ನಾವು ಮೂವರು ಒಡ ಹುಟ್ಟಿದವರು.ನಿಜವಾಗಿಯೂ ಬಹಳ ಚೆನ್ನಾಗಿ ಮೀನಿನ ಅಡುಗೆ ಮಾಡುತ್ತಿದ್ದಳು ನಮ್ಮಮ್ಮ.
ಊಟದ ತಟ್ಟೆಯ ಎದುರು ಕುಳಿತುಕೊಂಡಾಗ ತಮ್ಮಂದಿರಲ್ಲಿ ಜಗಳ ಶುರುವಾಗುತ್ತಿತ್ತು.ಅಮ್ಮಾ.. ಮೀನಿನ ನಡುವಿನ ತುಂಡು ನನಗೇ ಹಾಕಮ್ಮ.. ನನಗೇ ಹಾಕಮ್ಮ.. ಎಂದು.
ನನಗೂ ಮೀನಿನ ನಡುವಿನ ತುಂಡು ಅದರಲ್ಲೂ ಬಂಗುಡೆ ಮೀನಿನ ಆ ನಡುವಿನ ತುಂಡು ಎಂದರೆ ಬಹಳ ಆಸೆ.. ಬಹಳ ಇಷ್ಟ ಕೂಡ. ಮಾಂಸ ಹೆಚ್ಚಾಗಿ ಅದರಲ್ಲೇ ಇರುವುದರಿಂದ ಹೆಚ್ಚಿನವರಿಗೆ ಅದೇ ತುಂಡು ಜಾಸ್ತಿಯಾಗಿ ಇಷ್ಟವಾಗುವುದು.ಆದರೆ ತಮ್ಮಂದಿರ ಆಸೆಯ ಮುಂದೆ ನನ್ನಾಸೆಯನ್ನು ಅದುಮಿ ಇಟ್ಟುಕೊಳ್ಳುತ್ತಿದ್ದೆ.ಅಮ್ಮನಿಗೆ ನಾನೇ ಹೇಳುತ್ತಿದ್ದೆ.. ಅಮ್ಮ ಎಲ್ಲಾ ಮೀನುಗಳ ನಡುವಿನ ತುಂಡನ್ನು ಅವರಿಬ್ಬರಿಗೇ ಹಾಕಮ್ಮ.. ನನಗೆ ಬಾಲದ ತುಂಡೇ ಇರಲಿ.. ನನಗೆ ಅದು ಮಾತ್ರ ಇಷ್ಟ..! ಎಂದು.
ಯಾವತ್ತಾದರೂ ಒಂದು ದಿನ ಅಮ್ಮ ಅಪ್ಪಿ ತಪ್ಪಿ ನನಗೆ ಮೀನಿನ ನಡುವಿನ ತುಂಡು ಹಾಕಿದರೂ ಸಹ ಪಕ್ಕದಲ್ಲಿ ಇರುತ್ತಿದ್ದ ತಮ್ಮಂದಿರ ತಟ್ಟೆಗೆ ಆ ತುಂಡುಗಳನ್ನು ಹಾಕಿ ಬಿಡುತ್ತಿದ್ದೆ ನಾನು.
ಒಂದು ದಿನ ಅಮ್ಮ ತೀರಿಕೊಂಡಳು.
ಬಹಳ ಬೇಗನೆ ತೀರಿಕೊಂಡು ಬಿಟ್ಟಿದ್ದಳು ಅವಳು.ನನಗೆ ಆವಾಗ ಹೆಚ್ಚು ಕಡಿಮೆ ಹದಿನೈದರ ವಯಸ್ಸು.
ನಾವು ಕೂಡ ಹೆಚ್ಚು ಕಡಿಮೆ ಅನಾಥರಾಗಿ ಬಿಟ್ಟಿದ್ದೆವು.ಆದರೆ ನಾನು ನನ್ನ ತಮ್ಮಂದಿರನ್ನು ಅನಾಥೆ ಮಾಡಲಿಲ್ಲ.ಅವರುಗಳಿಗೆ ಅಕ್ಕನ ಬದಲು ಅಮ್ಮನೇ ಆಗಿ ಬಿಟ್ಟೆ ನಾನು.ಕುಟುಂಬ ನಿರ್ವಹಣೆಗಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿ,ಬುಟ್ಟಿ ಹಿಡಿದುಕೊಂಡು ಅಮ್ಮನ ಕಾಯಕವನ್ನೇ ಮುಂದುವರಿಸಿ ಬಿಟ್ಟೆ.
ಬುಟ್ಟಿ ಹಿಡಿದುಕೊಂಡು ಕಡಲ ದಡದಲ್ಲಿ ಒಂದು ಮುಂಜಾನೆ ನಿಂತುಕೊಂಡರೆ ಹಾಗೇ ನನ್ನ ಆ ದಿನ ತೆರೆದುಕೊಳ್ಳುತ್ತಿತ್ತು.
ಒಂದು ಬದಿಯಲ್ಲಿ ನಿದ್ದೆಯಿಂದ ಎದ್ದೇಳುವ ಸೂರ್ಯ,ಚಂದಿರ ಬರುವಾಗ ಮತ್ತೆ ನನ್ನೆದುರಿನ ಕಡಲಲ್ಲಿ ಮುಳುಗಿ ನಿದ್ದೆಗೆ ಜಾರುವ ಮತ್ತೆ ಅದೇ ಸೂರ್ಯ... ನನ್ನಲ್ಲಿ ಯಾವುದೇ ಆಸಕ್ತಿಯನ್ನು ಹುಟ್ಟಿಸುತ್ತಿರಲಿಲ್ಲ.
ಆದರೆ ಬೆಳಿಗ್ಗೆ ಎದ್ದು ಬುಟ್ಟಿ ಹಿಡಿದುಕೊಂಡು ಕಡಲ ಕಿನಾರೆಯಲ್ಲಿ ನಿಲ್ಲುವ ನನ್ನಲ್ಲಿಯೂ ಒಂದು ಕಾಯುವಿಕೆ ಮಾತ್ರ ಸದಾ ಇತ್ತು.
ತುಂಬಾ ಚಿಕ್ಕಂದಿನಲ್ಲಿ ದಡದಲ್ಲಿ ನಿಂತುಕೊಂಡು ದೂರದ ಕಡಲಿನಲ್ಲಿ ತೇಲಿ ಹೋಗುವ ದೊಡ್ಡ ಹಡಗುಗಳ ಲೆಕ್ಕ ಹಾಕುವುದು ನನಗೂ ನನ್ನ ತಮ್ಮಂದಿರಿಗೂ ಬಹಳ ಇಷ್ಟವಾದ ಕೆಲಸ.ಕೆಲವರು ಬಾಲ್ಯದಲ್ಲಿ ಆಟವಾಡುವಾಗ ರೋಡ್ ಪಕ್ಕ ನಿಂತು ಕೊಂಡು ರೋಡಿನಲ್ಲಿ ಹೋಗುವ ಕಾರು ಬಸ್ಸುಗಳ ಲೆಕ್ಕ ಹಾಕುತ್ತಾರೆ.ನಾವು ಹುಟ್ಟಿನಿಂದಲೂ ಬಡವರೇ..ಆದರೆ ವಿಪರ್ಯಾಸವೆಂದರೆ ಬಾಲ್ಯವೊಂದು ನಮಗೆ ಕೊಟ್ಯಾಂತರ ಬೆಲೆಯ ಹಡಗುಗಳ ಲೆಕ್ಕ ಹಾಕುವ ಆಟವನ್ನೇ ದಯಪಾಲಿಸಿತ್ತು... ಬರೀ ಆಟ ಅಷ್ಟೇ! ಕೋಟಿ ಬೆಲೆಯ ಬದುಕನಲ್ಲ!!
ಅಮ್ಮ ತೀರಿಕೊಂಡ ನಂತರವೂ ಕಡಲಿನಲ್ಲಿ ಹಡಗುಗಳಿಗೆನೋ ಬರ ಬಿದ್ದಿರಲಿಲ್ಲ.ಅವುಗಳೂ ಅದರಷ್ಟಕ್ಕೆ ಎಂದಿನಂತೆ ತೇಲಿ ಕೊಂಡು ಬಂದು ಸದಾ ಕಾರ್ಯಾಚರಣೆಯಲ್ಲಿರುವ ಸರ್ವ ಋತು ಬಂದರು ಸೇರಿಕೊಂಡು ಬಿಡುತ್ತಿದ್ದವು.ಆದರೆ ದಡದಲ್ಲಿ ಬುಟ್ಟಿ ಹಿಡಿದುಕೊಂಡು ನಿಂತಿದ್ದ ನನಗೆ ಆವಾಗ ಹಡುಗುಗಳ ಲೆಕ್ಕ ಹಾಕುವ ಉಮೇದು ಆಗಲಿ,ಇನ್ನಿಲ್ಲದ ಉತ್ಸಾಹವಾಗಲಿ ಯಾವುದೂ ಇರಲಿಲ್ಲ ಅಷ್ಟೇ. ನನ್ನಲ್ಲಿ ಇದ್ದದ್ದು ಬರೀ ಕಾಯುವಿಕೆ.. ಆದರೆ ಅದು ದೊಡ್ಡ ಹಡಗಿಗಾಗಿ ಅಲ್ಲ.
ದೋಣಿಗಾಗಿ,ದೋಣಿಯ ಮೀನಿಗಾಗಿ.
ಯಾವ ದಿನ ಯಾವ ಮೀನು ಬರುತ್ತದೋ ನನಗದು ಗೊತ್ತಿಲ್ಲ.
ದೋಣಿಯ ಮೀನಿಗಾಗಿ ಹತ್ತಿಪ್ಪತ್ತು ಜನ ಜೋರು ಧ್ವನಿಯಲ್ಲಿ ಏಲಂ ಕೂಗುವಾಗ ನನ್ನದು ಯಾವಾಗಲೂ ಸಣ್ಣ ಸ್ವರ.ಮೀನು ಖರೀದಿಸಲು ಬೇಕಾಗಿರುವುದು ದೊಡ್ಡ ಧ್ವನಿಯಲ್ಲ,ಕೈಯಲ್ಲಿ ಒಂದಿಷ್ಟು ಬಿಸಿ ಬಿಸಿಯಾದ ನೋಟುಗಳು.
ಕೈಯಲ್ಲಿದ್ದ ದುಡ್ಡಿಗೆ ಅನುಸಾರವಾಗಿ ನನ್ನ ಬುಟ್ಟಿ ಹಿಡಿಸುವಷ್ಟು ಮೀನುಗಳನ್ನು ದೋಣಿಯವರಿಂದ ಖರೀದಿಸುತ್ತಿದ್ದೆ ನಾನು.
ಆ ನಂತರ ತಲೆಯ ಮೇಲೆ ಆ ಮೀನಿನ ಬುಟ್ಟಿ ಹೊತ್ತುಕೊಂಡು ಮೀನು ಮಾರಲು ಹೊರಡುತ್ತಿದ್ದೆ .ಕೆಲವೊಮ್ಮೆ ಮನೆ ಮನೆಗೂ ಹೋಗುತ್ತಿದ್ದೆ. ವಾರದ ಸಂತೆ ಬಂದಾಗ ಸಂತೆಯ ಮೂಲೆಯೊಂದರಲ್ಲಿ ನನ್ನ ಬುಟ್ಟಿ ಇಟ್ಟುಕೊಂಡು ಒಂದಷ್ಟು ದುಡ್ಡುಗಳ ಆಸೆಯಿಂದ ಮೀನು ಮಾರುತ್ತಿದ್ದೆ.. ಬನ್ನಿ ಮೀನು ತಗೊಳ್ಳಿ.. ಎಂದು ಕ್ಷೀಣವಾದ ಸ್ವರದಲ್ಲಿ ಜನರನ್ನು ಕೂಗುತ್ತಿದ್ದೆ ನಾನು.
ಎಲ್ಲರೂ ಹೇಳುತ್ತಿದ್ದರು.. ಅಂಬಕ್ಕನ ಮೀನು ಬಹಳ ಪ್ರೆಶ್ಶು.. ಬಹಳ ರುಚಿ ಎಂದು. ಹಾಗಾಗಿ ನನ್ನನ್ನೇ ಹುಡುಕಿಕೊಂಡು ಬಂದು ನನ್ನಲ್ಲಿಯೇ ಮೀನು ಖರೀದಿಸುವವರು ಕೂಡ ಹಲವಾರು ಜನ ಇದ್ದರು.
ಆವಾಗ ಚಿಕ್ಕ ಹುಡುಗಿ ನಾನು.. ಆದರೂ ಎಲ್ಲರೂ ನನ್ನನ್ನು ಪ್ರೀತಿಯಿಂದ ಅಂಬಕ್ಕ.. ಅಂಬಕ್ಕ ಎಂದೇ ಕರೆಯುತ್ತಿದ್ದರು. ನನ್ನ ನಿಜವಾದ ಹೆಸರು ಅಂಬಾ ಎಂದು.
ಆದರೆ ನಾನೇನು ಮೀನನ್ನು ರುಚಿಯನ್ನಾಗಿಸುವುದಿಲ್ಲ.ಅದು ಕಡಲರಾಜನ ಕೈಚಳಕ.ಆ ದಿನದ ಮೀನುಗಳನ್ನು ಆ ದಿನವೇ ಮಾರಿ ಬಿಡುತ್ತಿದ್ದೆ. ಬಹುಶಃ ಬಹಳ ತಾಜಾ ಮೀನು ಮಾರುತ್ತೇನೆ, ಅದರಲ್ಲೂ ಪುಟ್ಟ ಹುಡುಗಿ ಎಂದು ಜನರು ನನ್ನ ಬಳಿಗೆ ಬರುತ್ತಿದ್ದರು ಎಂದು ನನಗೆ ಅನಿಸುತ್ತದೆ.
ಕೆಲವೊಮ್ಮೆ ಮನೆಗೆ ಅಡುಗೆಗೆಂದು ತಗೊಂಡು ಹೋಗಲು ಕೂಡ ನನ್ನ ಬಳಿ ಮೀನು ಉಳಿಯುತ್ತಿರಲಿಲ್ಲ.ಅಸಲಿಗೆ ನಾನು ಮೀನು ಉಳಿಸುವ ಮನಸ್ಸೇ ಮಾಡುತ್ತಿರಲಿಲ್ಲ.ಎಲ್ಲಾ ಮೀನು ಖಾಲಿಯಾಗಿ ಹೋಗಿ ಒಂದಿಷ್ಟು ದುಡ್ಡು ಆದರೂ ಸಿಗಲಿ ಎಂದೇ ನನ್ನ ಆಸೆಯಾಗಿತ್ತು.ಲೆಕ್ಕಕ್ಕಿಂತ ಜಾಸ್ತಿ ಮೀನು ಉಳಿದು ಬಿಟ್ಟರೆ ಅದನ್ನು ಬಿಸಿಲಲ್ಲಿ ಒಣಗಿಸಿ ಒಣಮೀನು ಮಾಡಿ,ಮಳೆಗಾಲದಲ್ಲಿ ಮಾರಿ ಅದರಿಂದಲೂ ಒಂದಷ್ಟು ಹಣಕ್ಕೆ ದಾರಿ ಮಾಡಿಕೊಳ್ಳುತ್ತಿದ್ದೆ ನಾನು.
ಆದರೆ ನಾವು ಮೀನು ಮಾರುವವರು.ಮನೆಯೊಳಗೆ ಒಂದು ಘಮ್ಮೆನಿಸುವ ಮೀನಿನ ಪದಾರ್ಥ ಮಣ್ಣಿನ ಬಿಸಲೆಯಲ್ಲಿ ಸದಾ ಬೇಯದೇ ಇದ್ದರೆ ನಮ್ಮ ಆತ್ಮಕ್ಕೆ ಎಂದೂ ಸಮಾಧಾನವಾಗದು.
ಆದರೆ ನನ್ನಾಸೆಯಂತೆ ಮೀನು ಖಾಲಿಯಾಗುತ್ತಾ ಬರುವಾಗ ಮನೆಯಲ್ಲಿರುವ ಇಬ್ಬರ ತಮ್ಮಂದಿರ ನೆನಪೇ ನನಗೆ ಅತಿಯಾಗುತ್ತಿತ್ತು. ಹಾಗೋ ಹೀಗೋ ಮಾಡಿ ಒಂದೈದು ಮೀನನ್ನು ಆದರೂ ಅವರಿಗೆಂದೇ ಬುಟ್ಟಿಯಲ್ಲಿ ಉಳಿಸುತ್ತಿದ್ದೆ ನಾನು.
ಸಂಜೆ ಮುಗಿದು ಕತ್ತಲು ಆವರಿಸುವಾಗ ಮತ್ತೆ ಮನೆ ಸೇರುತ್ತಿದ್ದೆ.ಮನೆ ಸೇರಿದ ಕೂಡಲೇ ಬುಟ್ಟಿಯಲ್ಲಿ ಉಳಿದ ಆ ಮೀನುಗಳನ್ನು ಕತ್ತಿ ತೆಗೆದುಕೊಂಡು ಕ್ಲೀನು ಮಾಡುವ ಮೂಲಕ, ಆ ದಿನದ ಅಡುಗೆಗೊಂದು ನನ್ನ ತಯಾರಿ ಮತ್ತೆ ಸದ್ದಿಲ್ಲದೇ ಶುರುವಾಗುತ್ತಿತ್ತು.
ಎಂದಿನಂತೆ ಮೀನುಗಳನ್ನು ಮೂರು ತುಂಡು ಮಾಡುತ್ತಿದ್ದೆ. ಎಲ್ಲವೂ ಅಮ್ಮನ ಹಾಗೆಯೇ.. ತಲೆಯ ಭಾಗದ ತುಂಡು, ನಡುವಿನ ತುಂಡು ಹಾಗೂ ಬಾಲದ ತುಂಡು.
ಮೀನಿನ ನಡುವಿನ ಭಾಗವನ್ನು ತುಂಡರಿಸುವಾಗ,ಅದನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ನೋಡುವಾಗ ನನ್ನ ಬಾಯಲ್ಲಿ ನೀರೂರುತ್ತಿತ್ತು. ಏಕೆಂದರೆ ಹೆಚ್ಚು ಮಾಂಸವಿರುವ ಅದನ್ನು ನಾನೆಂದೂ ತಿಂದೇ ಇಲ್ಲ..!
ಅಡುಗೆ ಎಲ್ಲವೂ ಮುಗಿದು ತಮ್ಮಂದಿರಿಗೆ ಬಡಿಸುವಾಗ... ತಮ್ಮಂದಿರು ಪರಿಪರಿಯಾಗಿ ಕೇಳುತ್ತಿದ್ದರು.. ಅಕ್ಕ ನನಗೆ ನಡುವಿನ ತುಂಡು ಹಾಕು.. ನನಗೆ ನಡುವಿನ ತುಂಡು ಹಾಕು.. ಎಂದು.
ತಮ್ಮಂದಿರ ಸಂತೋಷವೇ ನನ್ನ ಸಂತೋಷ. ತಮ್ಮಂದಿರೇ... ನನಗೆ ಎಂದಿಗೂ ಬಾಲದ ತುಂಡೇ ಇಷ್ಟ...ನಡುವಿನ ತುಂಡು ಎಲ್ಲವೂ ನಿಮಗೆಯೇ.. ಎಂದು ಹೇಳಿ ಎಲ್ಲಾ ಮೀನಿನ ನಡುವಿನ ತುಂಡುಗಳನ್ನು ಅವರಿಬ್ಬರಿಗೆ ಸಮಾನವಾಗಿ ಬಡಿಸುತ್ತಿದ್ದೆ ನಾನು. ಅವರ ಖುಷಿಯಲ್ಲಿ ನನಗೆ ಮೀನಿನ ಬಾಲದ ತುಂಡು ಕೂಡ ಬಹಳಷ್ಟು ರುಚಿಯಾಗಿ ಇರುತ್ತಿತ್ತು.
ಈ ರೀತಿಯಾಗಿ ಬಾಲ್ಯವೊಂದು ಮುಂದುವರಿದಿತ್ತು.ಮೀನನ್ನು ಮೂರು ತುಂಡುಗಳನ್ನಾಗಿ ತುಂಡರಿಸುತ್ತಾ ತುಂಡರಿಸುತ್ತಾ ಹಾಗೇ ಬಾಲ್ಯವನ್ನು ದಾಟಿ ಯೌವನಕ್ಕೆ ಬಲಗಾಲು ಇರಿಸಿ ಬಿಟ್ಟಿದ್ದೆ ನಾನು.
ಆದರೆ ನನಗೆ ಮದುವೆ ಮಾಡುವವರು ಯಾರು?
ಮದುವೆಯ ಆಲೋಚನೆಯೇ ನನ್ನಲ್ಲಿ ಎಂದಿಗೂ ಹುಟ್ಟಿಕೊಳ್ಳಲಿಲ್ಲ.
ನನ್ನದು ಏನಿದ್ದರೂ ಸದಾ ಒಂದೇ ಯೋಚನೆ...ಖರೀದಿಸಿದ ಎಲ್ಲಾ ಮೀನುಗಳನ್ನು ಮಾರಿ ಮನೆಗಾಗಿ ಒಂದಷ್ಟು ದುಡ್ಡು ಸಂಪಾದಿಸಬೇಕು,ದಿನದ ಅಂತ್ಯದಲ್ಲಿ ಅಳಿದುಳಿದ ಮೀನನ್ನು ಸಾರು ಮಾಡಿಕೊಂಡು, ಅವುಗಳಲ್ಲಿ ಮೀನಿನ ನಡುವಿನ ತುಂಡನ್ನು ಹೆಕ್ಕಿ ಹೆಕ್ಕಿ ತಮ್ಮಂದಿರಿಗೆ ಸಂತೋಷದಿಂದ ಬಡಿಸಿ ಅವರನ್ನು ಖುಷಿ ಪಡಿಸಬೇಕು.. ಅಷ್ಟೇ.
ಹೌದು.. ದಿನವೊಂದು ಆರಂಭಗೊಂಡು ಅದು ಅಂತ್ಯ ಆಗುವವರೆಗೂ ಇದರ ಹೊರತು ಬೇರೆ ಏನನ್ನೂ ಯೋಚಿಸಿದವಳೇ ಅಲ್ಲ ನಾನು.
ಅದೂ ಅಲ್ಲದೇ ನನಗೆಂದು ನನ್ನ ತಮ್ಮಂದಿರ ಹೊರತು ಬೇರೆ ಯಾರು ಇದ್ದಾರೆ?
ಅವರ ಪಾಲಿನ ಅಕ್ಕ ಮಾತ್ರವಲ್ಲ.. ಅವರ ಪಾಲಿನ ಅಮ್ಮ ಕೂಡ ನಾನೇ ಆಗಿದ್ದು,ಅವರ ಪಾಲನೆ ಪೋಷಣೆ ಕೂಡ ನನ್ನದೇ ಜವಾಬ್ದಾರಿ ಎಂದು ತಿಳಿದು ಕೊಂಡು ಬದುಕಿದವಳು ನಾನು.
ಆದರೆ ನನ್ನ ತಮ್ಮಂದಿರಿಗೆ ನನಗಿಂತಲೂ ಪ್ರೀತಿ ಪಾತ್ರರಾದವರು ಬೇರೆ ಯಾರೋ ಇದ್ದರು ಎಂದು ನನಗೆ ತಿಳಿದದ್ದು.. ಅವರಿಬ್ಬರು ಬೆಳೆದು ದೊಡ್ಡವರಾದ ನಂತರ,ಯಾರನ್ನೋ ಕಟ್ಟಿಕೊಂಡು ಬೇರೆಯೇ ಮನೆ ಮಾಡಿಕೊಂಡು ವಾಸಿಸಿದ ನಂತರವೇ!!
ನನ್ನಲ್ಲಿಯೇ ಹೇಳುತ್ತಿದ್ದರೆ ನಾನೇ ಅವರಿಗೆ ಎದುರು ನಿಂತು ಮದುವೆ ಮಾಡಿಸುತ್ತಿದ್ದೆ!!
ಆದರೆ ತಮ್ಮಂದಿರಿಗೆ ನನ್ನ ಮೇಲೆ ಆ ವಿಶ್ವಾಸವೇ ಇರಲಿಲ್ಲ!!
ಈ ಅಕ್ಕನೊಂದಿಗೆ ಇದ್ದರೆ ಅವಳಿಗೂ ಮದುವೆಯಾಗದು..ನಮಗೂ ಮದುವೆಯಾಗದು ಎಂದು ನಿರ್ಧರಿಸಿ ಬಿಟ್ಟಿದ್ದ ತಮ್ಮಂದಿರಿಬ್ಬರು,ಕೈಯಲ್ಲಿ ಸ್ವಲ್ಪ ದುಡ್ಡು ಹುಟ್ಟಿಕೊಂಡಾಗ ನನ್ನನ್ನೇ ತೊರೆದು ಹೋಗಿದ್ದರು.
ಆಗ ಅವರಿಗೆ ನನ್ನ ಮೀನು ಸಾರು ಕೂಡ ನೆನಪಾಗಲಿಲ್ಲ ಹಾಗೂ ಈ ಅಕ್ಕನದ್ದೊಂದು ನೆನಪು ಕೂಡ ಆಗಲೇ ಇಲ್ಲ!!
ಅವರು ಮನೆ ಬಿಟ್ಟು ಹೋದ ನಂತರ ನನಗೆ ಮನೆಗೆ ಮೀನು ತೆಗೆದುಕೊಂಡು ಹೋಗಬೇಕು ಎಂದು ಯಾವತ್ತೂ ಅನಿಸಲೇ ಇಲ್ಲ.ಎಲ್ಲಾ ಮೀನನ್ನು ಮಾರಿಯೇ ಮನೆಗೆ ಹೋಗುತ್ತಿದ್ದೆ.ಹಾಗಾಗಿ ತಮ್ಮಂದಿರು ಇಲ್ಲದ ಆ ಮನೆಯಲ್ಲಿ ಆ ನಂತರ ದಿನಗಳಲ್ಲಿ ಮೀನಿನ ಪದಾರ್ಥವೊಂದು ಬೆಂದಿದ್ದೇ ಇಲ್ಲ.
ನನಗೂ ಮದುವೆಯ ವಯಸ್ಸು ದಾಟುವ ಹಂತಕ್ಕೆ ಬಂದು ನಿಂತಿತ್ತು. ಸೋದರ ಮಾವನ ಒತ್ತಾಯ ಇನ್ನಿಲ್ಲದಂತೆ ಮುಂದುವರಿದಿತ್ತು. ಅಂಬಾ.. ಈಗ ಅಲ್ಲದಿದ್ದರೂ ನಿನ್ನ ಕೊನೆಗಾಲದಲ್ಲಿ ಆಸರೆಗೆಂದು ಒಂದು ಜೀವ ಬೇಕೇ ಬೇಕು,ಹಾಗಾಗಿ ನೀನು ಮದುವೆಯಾಗಲೇ ಬೇಕಮ್ಮಾ... ಎಂದು ಪರಿಪರಿಯಾಗಿ ಕೇಳಿಕೊಂಡರು.
ಜೀವನದಲ್ಲಿ ಮದುವೆ, ಗಂಡ, ಮಕ್ಕಳು.. ಅಂತಹದ್ದೆಲ್ಲಾ ಕನಸು ಕೂಡ ನನಗೆ ಯಾವತ್ತೂ ಬಿದ್ದಿರಲಿಲ್ಲ.
ಕೊನೆಗೂ ಸೋದರ ಮಾವನ ಒತ್ತಾಯಕ್ಕೆ ಮಣಿದು ಅವನು ತೋರಿಸಿದ ಗಂಡಿಗೆ ಕೊರಳೊಡ್ಡಿ ಮೌನವಾಗಿ ಮದುವೆಯಾಗಿ ಬಿಟ್ಟಿದ್ದೆ ನಾನು.
ಗಂಡ ಒಳ್ಳೆಯವನೇ.. ಕಡಲ ದಂಡೆಯಲ್ಲಿಯೇ ಅವನದ್ದೊಂದು ಮನೆ.ಅವನದ್ದೇ ಸ್ವಂತದ ಒಂದು ಚಿಕ್ಕ ದೋಣಿ ಕೂಡ ಇತ್ತು ಅವನಿಗೆ,ಅದರಲ್ಲಿಯೇ ಅವನು ದಿನಾಲೂ ಮೀನು ಹಿಡಿಯಲು ಹೋಗುತ್ತಿದ್ದ.
ಮದುವೆಯಾದ ಆ ನಂತರದ ದಿನಗಳಲ್ಲಿ ನಾನು ಕಡಲ ದಂಡೆಯಲ್ಲಿ ನಿಂತುಕೊಂಡು ಬೇರೆಯವರ ದೋಣಿಗಳಲ್ಲಿ ಬರುವ ಮೀನಿಗಾಗಿ ಎಂದಿಗೂ ಕಾಯಲಿಲ್ಲ.
ನನ್ನ ಕಾಯುವಿಕೆ ಕೇವಲ ನನ್ನ ಗಂಡನ ದೋಣಿಗಾಗಿಯೇ ಇತ್ತು.
ಒಂದು ಮುಂಜಾನೆ ಕಡಲ ಮರಳಿನ ದಂಡೆಯಲ್ಲಿ ಹೋಗಿ ನಿಂತುಕೊಂಡರೆ ಗಂಡನ ದೋಣಿ ಯಾವಾಗ ಬರುತ್ತದೆ ಎಂಬ ನನ್ನ ಕಾಯುವಿಕೆಯ ಜೊತೆ ಜೊತೆಗೆ.. ದೇವರಲ್ಲಿ ಒಂದು ವಿಶೇಷ ಪ್ರಾರ್ಥನೆ ಕೂಡ ಇತ್ತು.ದೇವರೇ ಮೀನು ಸಿಗದಿದ್ದರೂ ಪರವಾಗಿಲ್ಲ, ನನ್ನ ಗಂಡ ಮಾತ್ರ ಸುರಕ್ಷಿತವಾಗಿ ಹಿಂದಿರುಗಿ ಬರಲಿ.. ಎಂದು.
ನಾನು ಕಡಲರಾಜನನ್ನು ತುಂಬಾ ನಂಬುತ್ತೇನೆ,ಅವನು ಯಾವತ್ತೂ ನನ್ನಿಂದ ಏನನ್ನೂ ಕಿತ್ತು ಕೊಂಡವನಲ್ಲ.
ಬದಲಿಗೆ ಅವನಿಂದಾಗಿಯೇ ನಾನು ನನ್ನ ಬದುಕಿ ಕಟ್ಟಿಕೊಂಡಿದ್ದೇನೆ.
ಗಂಡನ ದೋಣಿಯಲ್ಲಿ ಕೆಲವೊಮ್ಮೆ ದೋಣಿ ಪೂರ್ತಿ ಮೀನು ಇದ್ದರೆ,ಕೆಲವೊಮ್ಮೆ ಏನೂ ಇಲ್ಲ.
ಮದುವೆ ಆದರೂ ಮನೆಯಲ್ಲಿ ಕುಳಿತುಕೊಳ್ಳಲು ನಾನು ಎಂದಿಗೂ ಕಲಿತಿರಲಿಲ್ಲ.
ಆದರೆ ಆ ನಂತರ ಮೀನು ಕೊಳ್ಳಲು ನಾನು ದುಡ್ಡು ಕೊಡಬೇಕಾಗಿರಲಿಲ್ಲ ಅಷ್ಟೇ.ಬುಟ್ಟಿಯಲ್ಲಿ ಗಂಡನ ಮೀನನ್ನು ಹೊತ್ತುಕೊಂಡು ಹೋಗಿ ಮತ್ತೆ ಎಂದಿನಂತೆಯೇ ನನ್ನ ಮೀನು ಮಾರುವ ಕಾಯಕವನ್ನು ಮುಂದುವರಿಸಿದ್ದೆ.
ಜನರು ಎಂದಿನಂತೆ ಅಂಬಕ್ಕಾ.. ಅಂಬಕ್ಕಾ.. ಎಂದು ನನ್ನ ಬಳಿ ಬಲು ಪ್ರೀತಿಯಿಂದಲೇ ಮೀನು ಕೊಳ್ಳಲು ಬರುತ್ತಿದ್ದರು.
ಗಂಡನೇ ಮೀನು ಹಿಡಿಯುವವನಾದರೂ ನಾನು ಬುಟ್ಟಿಯಲ್ಲಿ ಹೆಚ್ಚಿನ ಮೀನನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಎಲ್ಲವನ್ನೂ ಮಾರಿ ಒಂದಷ್ಟು ದುಡ್ಡು ಗಳಿಸಿಕೊಂಡರೆ ಮುಂದೆ ನಮ್ಮ ಸಂಸಾರಕ್ಕೆ, ನಮಗೆ ಹುಟ್ಟಿಕೊಳ್ಳುವ ಮಕ್ಕಳ ಭವಿಷ್ಯಕ್ಕೆ ಆಗಬಹುದು ಎಂದು ಹೆಚ್ಚಿನ ಎಲ್ಲಾ ಮೀನುಗಳನ್ನು ಮಾರುತ್ತಿದ್ದೆ.
ಆದರೆ ದಿನದ ಕೊನೆಯಲ್ಲಿ ಗಂಡನ ನೆನಪಾಗಿ ಒಂದಷ್ಟು ಮೀನುಗಳನ್ನು ಬುಟ್ಟಿಯಲ್ಲಿ ಉಳಿಸಿಕೊಂಡೇ ಮನೆಗೆ ತಲುಪುತ್ತಿದ್ದೆ ನಾನು.
ಮನೆಯಲ್ಲಿ ಮತ್ತೆ ಶುರುವಾಗುತ್ತಿತ್ತು ಅಡುಗೆಗೊಂದು ಮೀನಿನ ಪದಾರ್ಥದ ನನ್ನ ಪ್ರತೀ ದಿನದ ಕಾಯಕ. ಮೀನು ತುಂಡರಿಸುವಾಗ ಮತ್ತೆ ಮೀನಿನ ಆ ನಡುವಿನ ತುಂಡು ನೋಡುವಾಗ ನನ್ನಲ್ಲಿ ಆಸೆಗಳು ಹಾಗೇ ಹುಟ್ಟಿಕೊಳ್ಳುತ್ತಿದ್ದವು.
ಆದರೆ ಮೀನಿನ ಸಾರು ಬಡಿಸಿಕೊಳ್ಳುವಾಗ ನಾನು ತಪ್ಪದೇ ಅದರ ನಡುವಿನ ತುಂಡುಗಳನ್ನು ಗಂಡನಿಗೆ ಅಷ್ಟೇ ಬಡಿಸುತ್ತಿದ್ದೆ. ಅವನಿಗೂ ಅದೆಂದರೆ ತುಂಬಾ ಇಷ್ಟ. ಅಂಬಾ... ಮೀನಿನ ನಡುವಿನ ತುಂಡು ಉಂಟಾ... ಎಂದು ಕೇಳಿ ಕೇಳಿಯೇ ಬಡಿಸಿಕೊಳ್ಳುತ್ತಿದ್ದ.
ಅದು ಇದ್ದರೆ ಒಂದಿಷ್ಟು ಅನ್ನ ಅವನಿಗೆ ಸರಾಗವಾಗಿ ಜಾಸ್ತಿಯೇ ಸೇರುತ್ತಿತ್ತು.ಕಷ್ಟಪಟ್ಟು ಜೀವದ ಹಂಗು ತೊರೆದು ಕಡಲಿನಲ್ಲಿ ದುಡಿಯುವ ಗಂಡಸು ಅವನು.. ಅವನ ಸುಖವೇ ನನ್ನ ಸುಖವಾಗಿತ್ತು. ಹಾಗಾಗಿ ಅವನು ಸಂತೋಷದಿಂದಿರಲು ಏನು ಬೇಕೋ ಅದನ್ನೇ ನಾನು ಮಾಡುತ್ತಿದ್ದೆ.
ಆದರೆ ನನ್ನ ಗಂಡ ತುಂಬಾ ಒಳ್ಳೆಯವ. ಒಂದು ದಿನ ಊಟ ಮಾಡುವಾಗ ಕೇಳಿಯೇ ಬಿಟ್ಟ.. ಅಂಬಾ.. ನಾನು ಯಾವತ್ತೂ ನೀನು ಮೀನಿನ ನಡುವಿನ ತುಂಡು ಬಡಿಸಿಕೊಂಡಿದ್ದನ್ನು ನೋಡಿಯೇ ಇಲ್ಲ,ಏಕೆ.. ಎಲ್ಲರಿಗೂ ಇಷ್ಟ ಆಗುವ ಅದು ನಿನಗೆ ಇಷ್ಟ ಆಗುವುದಿಲ್ಲವೇ? ಎಂದು ಕೇಳಿದ್ದ ನನ್ನ ಗಂಡ.
ಅವನು ಹಾಗೆ ಕೇಳಿದಾಗಲೆಲ್ಲ ನನಗೆ ನನ್ನ ತಮ್ಮಂದಿರ ನೆನಪೇ ಅತಿಯಾಗಿ ಆಗುತ್ತಿತ್ತು. " ಅಕ್ಕ ನನಗೆ ನಡುವಿನ ತುಂಡು ಹಾಕು.. ನನಗೆ ನಡುವಿನ ತುಂಡು ಹಾಕು.." ಎಂದು ಆಸೆಯಿಂದ ಊಟದ ತಟ್ಟೆ ಮುಂದೆ ಮಾಡುತ್ತಿದ್ದ ಅವರ ಮುಖಗಳೇ ಕಣ್ಣ ಮುಂದೆ ಬಂದು ನಿಲ್ಲುತ್ತಿದ್ದವು.ಏನೇ ಇರಲಿ.. ನಾನು ಅವರನ್ನು ಅಮ್ಮನಂತೆ ಸಾಕಿದವಳಲ್ಲವೇ.ಅವರು ಮರೆತರೂ ನಾನು ಅವರನ್ನು ಅಷ್ಟು ಸುಲಭವಾಗಿ ಮರೆಯಲಾರೆ.. ಅಸಹಾಯಕಳು ನಾನು!!
ಇಲ್ಲ.. ನನಗೆ ಚಿಕ್ಕಂದಿನಿಂದಲೂ ಬಾಲದ ತುಂಡೇ ಇಷ್ಟ...! ಎಂದು ಗಂಡನಿಗೆ ಹೇಳಿ ನನ್ನ ಊಟ ಮಾಡಿ ಎದ್ದೇಳುತ್ತಿದ್ದೆ ನಾನು.
ಕಡಲಿನೊಂದಿಗೆ,ಮೀನಿನೊಂದಿಗೆ..ಮಣ್ಣಿನ ಬಿಸಲೆಯಲ್ಲಿ ಆ ಮೀನಿನ ಆ ಮೂರು ತುಂಡುಗಳೊಂದಿಗೆ ನಮ್ಮ ಜೀವನ ಹಾಗೇ ಮುಂದುವರಿದಿತ್ತು.
ಆ ನಂತರ ಮೂವರು ಮಕ್ಕಳು ಕೂಡ ಹುಟ್ಟಿದರು.
ಮೂವರು ಸಹ ಗಂಡು ಮಕ್ಕಳೇ.
ಆಗ ಮಾತ್ರ ನಾನು ಮೀನು ಮಾರಿ ಮನೆಗೆ ಹಿಂದಿರುಗುವಾಗ ಒಂದೆರಡು ಮೀನುಗಳನ್ನು ಜಾಸ್ತಿಯೇ ಬುಟ್ಟಿಯಲ್ಲಿ ಉಳಿಸಿಕೊಳ್ಳುತ್ತಿದ್ದೆ.
ನನ್ನದೇ ಮಕ್ಕಳಿಗೆ ಮೀನು ಸಾರು ಮಾಡಿ ಬಡಿಸಲು ನನಗೂ ಇನ್ನಿಲ್ಲದ ಉತ್ಸಾಹ.
ಮಕ್ಕಳು ಕೂಡ ಇಷ್ಟ ಪಟ್ಟೇ ತಿನ್ನುತ್ತಿದ್ದರು.
ಮಕ್ಕಳಿಗೂ ಮೀನಿನ ನಡುವಿನ ತುಂಡು ಬಿಟ್ಟು ಬೇರೆ ಯಾವುದೇ ಬಾಲದ,ತಲೆಯ ಸಣ್ಣಪುಟ್ಟ ತುಂಡುಗಳನ್ನು ನಾನು ಬಡಿಸುತ್ತಿರಲಿಲ್ಲ.ಅವರಿಗಾಗಿ ನಡುವಿನ ತುಂಡನ್ನು ಕೂಡ ಸ್ವಲ್ಪ ದೊಡ್ಡದಾಗಿಯೇ ತುಂಡರಿಸಿಕೊಳ್ಳುತ್ತಿದ್ದೆ ನಾನು.
ಹಾಗಾಗಿ ಅವರಿಗೂ ಅದೊಂದು ತುಂಡು ಬಿಟ್ಟು ಬೇರೆ ಯಾವುದೂ ಇಷ್ಟವಾಗುತ್ತಿರಲಿಲ್ಲ.ಮೀನು ಸಾರು ಬಡಿಸುವಾಗಲೆಲ್ಲಾ ಅಮ್ಮಾ.. ನಡುವಿನ ತುಂಡು.. ನಡುವಿನ ತುಂಡು... ಎಂದು ತಟ್ಟೆ ಮುಂದೆ ಮಾಡುತ್ತಿದ್ದರು ನನ್ನ ಮಕ್ಕಳು.ಮೂವರಿಗೂ ಅವರಿಷ್ಟದ ನಡುವಿನ ತುಂಡುಗಳನ್ನು ನಾನು ಸಮವಾಗಿ ಬಡಿಸುತ್ತಿದ್ದೆ.ಈಗ ಮಕ್ಕಳ ಸಂತೋಷವೇ ನನ್ನ ಸಂತೋಷವಾಗಿತ್ತು.
ಮಕ್ಕಳು ತಮ್ಮ ತಂದೆಯೊಂದಿಗೆ ಯಾವಾಗಲೂ ಹೇಳುತ್ತಿದ್ದರು... ಅಪ್ಪ ನಮ್ಮನ್ನು ಕೂಡ ಕಡಲಿನಲ್ಲಿ ಮೀನು ಹಿಡಿಯಲು ಕರೆದುಕೊಂಡು ಹೋಗಿ ಎಂದು..
ನಾನೇ ಬೇಡ ಎಂದು ಹೇಳುತ್ತಿದ್ದೆ.. ಈಗ ನೀವು ತುಂಬಾ ಸಣ್ಣವರು.ನೀವು ಇನ್ನೂ ಸ್ವಲ್ಪ ಬೆಳೆದು ದೊಡ್ಡವರಾಗಿ,ಆಮೇಲೆ ಅಪ್ಪನೊಂದಿಗೆ ಮೀನು ಹಿಡಿಯಲು ಹೋಗುವಿರಂತೆ.. ಎಂದು ನಾನು ಅವರಿಗೆ ತಿಳಿ ಹೇಳುತ್ತಿದ್ದೆ.
ಅದೊಂದು ದಿನ ಅವರ ಉತ್ಸಾಹಕ್ಕೆ,ಅವರ ನಿರಂತರ ಮನವಿಗೆ ನಾನು ಮಣಿಯಲೇ ಬೇಕಾಯಿತು.
ಗಂಡ ಕೂಡ ಹೇಳಿದ... ಹೇಳಿ ಕೇಳಿ ನಾವು ಕಡಲ ಮಕ್ಕಳು,ನಮ್ಮ ಮಕ್ಕಳಿಗೆ ನಾವೇ ಕಡಲು ತೋರಿಸದಿದ್ದರೆ ಇನ್ನು ಯಾರು ತೋರಿಸುತ್ತಾರೆ.ಈಗಲೇ ಅವರಿಗೆ ಕಡಲಿನ ಭಯ ಹೋಗಬೇಕು ಅಂಬಾ... ಎಂದು ಹೇಳಿ ಬಿಟ್ಟಿದ್ದ.
ನನಗೂ ಅದೇ ಸರಿ ಅನಿಸಿತು.
ಆ ದಿನ ತಂದೆಯೊಡನೆ ನನ್ನ ಮೂವರೂ ಗಂಡು ಮಕ್ಕಳು ಕಡಲಿನ ಪಯಣಕ್ಕೆ ಮುಂಜಾನೆಯೇ ಸಿದ್ಧರಾಗಿ ನಿಂತರು.
ನಾನೂ ಅವರೊಂದಿಗೆ ಕಡಲಿನ ದಂಡೆಯವರೆಗೆ ಹೋಗಿದ್ದೆ.
ದೋಣಿಯಲ್ಲಿ ಕುಳಿತುಕೊಂಡ ನನ್ನ ಕೊನೆಯ ಮಗ ಜೋರಾಗಿ ಕೂಗಿಕೊಂಡು ಹೇಳಿದ್ದ.. ಅಮ್ಮಾ... ಇವತ್ತು ನೀನು ಬಂಗುಡೆ ಮೀನಿನ ಸಾರೇ ಮಾಡು..ಬಾಕಿ ತುಂಡುಗಳೆಲ್ಲ ಚಿಕ್ಕದಿದ್ದರೂ ಪರವಾಗಿಲ್ಲ.. ಆದರೆ ಆ ನಡುವಿನ ತುಂಡೊಂದು ಮಾತ್ರ ಸ್ವಲ್ಪ ದೊಡ್ಡದಾಗಿಯೇ ಇರಲಿ ಅಮ್ಮಾ... ಎಂದು ಎಂದಿನಂತೆ ಬಹಳ ಆಸೆಯಿಂದ ಕೂಗಿ ಹೇಳಿದ್ದ.
ಆಯಿತು ಮಗನೇ ಎಂದು ನಗುತ್ತಾ ಹೇಳಿ...ನನ್ನ ಗಂಡನಿಗೂ ನನ್ನ ಮೂವರು ಮಕ್ಕಳಿಗೂ ದಡದಲ್ಲಿಯೇ ನಿಂತುಕೊಂಡು ಕೈ ಬೀಸಿದ್ದೆ.
ದೋಣಿ ಕಣ್ಣಿಂದ ಕಣ್ಮರೆಯಾಗುವವರೆಗೂ ಅಲ್ಲೇ ನಿಂತಿದ್ದೆ.
ಮನಸ್ಸು ಆ ದಿನ ಹೆಚ್ಚೇ ಪ್ರಾರ್ಥನೆ ಮಾಡಿತ್ತು.ದೇವರೇ ಈ ದಿನ ದೋಣಿಯಲ್ಲಿ ನನ್ನ ಮಕ್ಕಳು ಕೂಡ ಇದ್ದಾರೆ.. ಎಲ್ಲರೂ ಸುಖವಾಗಿ ಹಿಂದಿರುಗಲಿ ಬರಲಿ.. ಎಂದು ಬಾರಿ ಬಾರಿ ದೇವರನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಂಡೆ.
ನಾನು ಕಡಲರಾಜನನ್ನು ತುಂಬಾ ನಂಬುತ್ತೇನೆ, ಅವನು ಯಾವತ್ತೂ ನನ್ನಿಂದ ಏನನ್ನೂ ಕಿತ್ತುಕೊಂಡವನಲ್ಲ.
ಬದಲಿಗೆ ಅವನಿಂದಾಗಿಯೇ ನಾನು ನನ್ನ ಬದುಕಿ ಕಟ್ಟಿಕೊಂಡವಳು. ಹಾಗಾಗಿ ಅವನಿಗೂ ಮನಸ್ಸಿನಲ್ಲಿಯೇ ಪ್ರಾರ್ಥಿಸಿ ಮನೆ ಸೇರಿಕೊಂಡೆ.
ದೋಣಿ ಹಿಂದಿರುಗಿ ಬರುವ ಸಮಯ ನನಗೆ ಗೊತ್ತು.ಹಾಗಾಗಿ ಬುಟ್ಟಿ ಹಿಡಿದುಕೊಂಡು ಕಡಲ ದಂಡೆಗೆ ಸ್ವಲ್ಪ ಮುಂಚೆಯೇ ಹೋಗಿ,ಹಾಗೇ ಕಡಲನ್ನೇ ದಿಟ್ಟಿಸಿ ನೋಡುತ್ತಾ ನಿಂತುಕೊಂಡೆ.
ಹೊತ್ತು ಉರುಳಿತು.
ಮಧ್ಯಾಹ್ನ ಆಯಿತು..
ಸಂಜೆ ಆಯಿತು..
ಕೊನೆಗೆ ರಾತ್ರಿಯೂ ಕವಿದು ಬಿಟ್ಟಿತು!
ಆದರೆ ದೋಣಿಯ ಸುಳಿವಿಲ್ಲ!!
ರಾತ್ರಿ ಇಡೀ ಅಲ್ಲೇ ಬುಟ್ಟಿ ಹಿಡಿದುಕೊಂಡು ಕಾಯುತ್ತಾ ಕುಳಿತುಕೊಂಡೆ..!
ಇಲ್ಲ..
ಯಾವುದೇ ಸುದ್ದಿ ಇಲ್ಲ!
ಪಕ್ಕದ ಮನೆಯ ಹೆಂಗಸರು ಮರುದಿನ ಬಂದು ನನ್ನನ್ನು ಒತ್ತಾಯವಾಗಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು.
ಮುಂದೆ ಏನು ಮಾಡುವುದು ಎಂದು ಗೊತ್ತಾಗದೇ ಇದ್ದಾಗ ಎಲ್ಲರೂ ಸೇರಿಕೊಂಡು ಸಂಬಂಧ ಪಟ್ಟವರಿಗೆ ದೂರು ನೀಡಿದೆವು.
ದೊಡ್ಡ ದೋಣಿಯಲ್ಲಿ ಹೋಗಿ ಕಡಲು ಪೂರ್ತಿ ಹುಡುಕಾಡಿ ಆಯಿತು.
ಇಲ್ಲ....
ಯಾವುದೇ ಸುಳಿವೇ ಇಲ್ಲ!
ಸಂಬಂಧ ಪಟ್ಟ ಇಲಾಖೆ ಮತ್ತೊಮ್ಮೆ ಸಂಪೂರ್ಣವಾಗಿ ಹುಡುಕಾಡಿ ಹೇಳಿತು... ಅಪಘಾತವಾಗಿದ್ದರೆ ನಮಗೆ ಕಡಲಿನಲ್ಲಿ ದೋಣಿಯ ಸಣ್ಣ ಕುರುಹು ಆದರೂ ಸಿಗುತ್ತಿತ್ತು, ಒಂದು ವೇಳೆ ದೋಣಿಯಲ್ಲಿದ್ದವರು ಸತ್ತಿದ್ದರೆ ಅವರ ಹೆಣ ಕೂಡ ದೊರೆಯುತ್ತಿತ್ತು.ಆದರೆ ಎಷ್ಟೇ ಹುಡುಕಾಡಿದರೂ,ಯಾವುದೇ ರೀತಿ ಹುಡುಕಾಡಿದರೂ ನಮಗೆ ದೋಣಿಯೂ ಸಿಗಲಿಲ್ಲ,ಕಣ್ಮರೆ ಆದವರ ಹೆಣವೂ ಸಿಗಲಿಲ್ಲ... ಎಂದು ಹೇಳಿ ಇಲಾಖೆ ತನ್ನ ಕೈ ತೊಳೆದುಕೊಂಡು ಬಿಟ್ಟಿತು!
ಊರಿನಲ್ಲಿದ್ದ ಎಲ್ಲರೂ ನನ್ನ ಗಂಡ ಮತ್ತು ಮಕ್ಕಳು ಸತ್ತಿದ್ದಾರೆ.. ಯಾವುದೋ ದೊಡ್ಡ ಮೀನು ಅವರನ್ನು ನುಂಗಿರಬಹುದು ಎಂಬ ಕಥೆ ಹೇಳಲು ಶುರು ಮಾಡಿ ಬಿಟ್ಟರು.
ಆದರೆ ನಾನು ಅದನ್ನೆಲ್ಲಾ ನಂಬುವುದಿಲ್ಲ.
ಅವರು ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂದು ಅಂದುಕೊಂಡೆ.
ನನಗೆ ಗೊತ್ತು.. ದೋಣಿ ಹಾಳಾಗಿ ನನ್ನ ಗಂಡ ಹಾಗೂ ಮಕ್ಕಳು ಕಡಲಿನ ಮಧ್ಯೆ ಇರುವ ಯಾವುದೋ ಒಂದು ದ್ವೀಪ ಸೇರಿರಬೇಕು..ನಾನೂ ಕೇಳಿದ್ದೇನೆ ಕಡಲಿನ ನಡುವೆ ಬಹಳಷ್ಟು ದ್ವೀಪಗಳು ಕೂಡ ಇರುತ್ತದೆಯಂತೆ.ಹಾಗಾಗಿ ಒಂದಲ್ಲ ಒಂದು ದಿನ ನನ್ನ ಗಂಡ ಮಕ್ಕಳು ಖಂಡಿತವಾಗಿಯೂ ಜೀವಂತವಾಗಿಯೇ ಮತ್ತೆ ದೋಣಿ ಏರಿಕೊಂಡು ಹಿಂದಿರುಗಿ ಬಂದೇ ಬರುತ್ತಾರೆ,ಆಗ ನಾನು ಮತ್ತೆ ಅವರುಗಳಿಗೆ ಬಂಗುಡೆ ಮೀನನ ಸಾರು ಮಾಡುತ್ತೇನೆ.ನನ್ನ ಮಕ್ಕಳಿಗೂ ಗಂಡನಿಗೂ ಅವರಿಗಿಷ್ಟದ ಅದೇ ನಡುವಿನ ತುಂಡನ್ನು ಬಿಸಲೆಯಲ್ಲಿ ಹುಡುಕಿ ಹುಡುಕಿ ನಾನು ಬಡಿಸುತ್ತೇನೆ ಎಂದೇ ನಾನು ಬಲವಾಗಿ ನಂಬಿದ್ದೆ ಮತ್ತು ಆ ನಂಬಿಕೆಯಲ್ಲಿಯೇ ನಾನು ಇನ್ನೂ ಬದುಕುತ್ತಿದ್ದೆನೆ!!
ಆದರೆ ಆ ಘಟನೆ ನಡೆದು ಹೆಚ್ಚು ಕಡಿಮೆ ನಲ್ವತ್ತು ವರುಷಗಳೇ ಕಳೆದಿವೆ!!!
ಬಸಳೆ ಚಪ್ಪರದಡಿಯಲ್ಲಿ ಬಂಗುಡೆ ಮೀನುಗಳನ್ನು ಕ್ಲೀನ್ ಮಾಡಿ ಮೂರು ತುಂಡು ಮಾಡಿದ ನಂತರ,ಕ್ಲೀನು ಮಾಡಲು ಬಳಸಿದ್ದ ಮೂಂಡಿ ಕೆಸುವಿನ ದೊಡ್ಡ ಎಲೆಯನ್ನು ಬಸಳೆ ಗಿಡದ ಬುಡದಲ್ಲಿಯೇ ಬಿಸಾಡಿ,ಮಣ್ಣಿನ ಬಿಸಲೆಯಲ್ಲಿ ಬಂಗುಡೆಯನ್ನು ಹಾಗೂ ಕ್ಲೀನು ಮಾಡಿದ ಅದರ ಮೊಟ್ಟೆಯನ್ನು ಹಾಕಿಕೊಂಡು ನಿಧಾನಕ್ಕೆ ನನ್ನ ವೃದ್ಧ ಹೆಜ್ಜೆಗಳನ್ನು ಇಡುತ್ತಾ ಮನೆಯೊಳಗೆ ನಡೆಯಲು ಶುರು ಮಾಡಿದೆ....
ಮಂಗು ಪುಚ್ಚೆ ,ಮನೆಯ ನಾಯಿ ಟೈಗರ್... ನಾನು ಹಾಕಿದ್ದ ಮೀನಿನ ತಲೆ ಹಾಗೂ ಕರುಳನ್ನು ತಿಂದ ನಂತರ,ಬಸಳೆ ಗಿಡದ ಬುಡಕ್ಕೆ ಓಡಿ ಬಂದು ಅಲ್ಲೇ ಬಿದ್ದಿದ್ದ ಮೂಂಡಿ ಕೆಸುವಿನ ಆ ಎಲೆಯನ್ನು ಮತ್ತೆ ಆಸೆಯಿಂದ ನೆಕ್ಕಲು ಶುರು ಮಾಡಿ ಬಿಟ್ಟವು.
ಮನೆಯೊಳಗೆ ಬಂದು ಮಸಾಲೆ ಕಡೆದು,ಒಲೆಗೆ ಬೆಂಕಿ ಹಚ್ಚಿ...ನಿಧಾನಕ್ಕೆ ಮೀನು ಸಾರು ಕುದಿಸಲು ಶುರು ಮಾಡಿದೆ ನಾನು.
ಮೀನು ಪದಾರ್ಥ ಆದ ನಂತರ ಮನೆಯ ಹೊರಗೆ ಬಂದು ಅಂಗಳದಲ್ಲಿ ಹಾಗೇ ನಿಂತುಕೊಂಡೆ.
ಮನೆಯಲ್ಲಿ ನನ್ನ ಹೊರತು ಈಗ ಯಾರೂ ಇಲ್ಲ..!
ಸಮುದ್ರ ದಂಡೆಯಲ್ಲಿ ಅಲೆಗಳ ಜೋಗುಳಕ್ಕೆ ದಿನ ರಾತ್ರಿ ಎನ್ನದೇ ಮಲಗಿ ನಿದ್ರಿಸುತ್ತಲೇ ಇರುವ ಈ ಒಂಟಿ ಮನೆಯಲ್ಲಿ.. ಈಗ ಸದ್ಯಕ್ಕೆ ಸದಾ ಎಚ್ಚರವಾಗಿರುವುದು ನಾನು ಒಬ್ಬಳೇ..!
ಹೌದು ನಲ್ವತ್ತು ವರ್ಷಗಳಿಂದ ಒಬ್ಬಳೇ ಇದ್ದೇನೆ!!
ಆದರೆ ಬದುಕಿಯೇ ಇದ್ದೇನೆ.
ಆದರೆ ನನ್ನ ಉಸಿರಾಟದಲ್ಲಿ ಚಡಪಡಿಕೆ ಈಗಲೂ ಹಾಗೇ ಇದೆ.
ನನಗೂ ವಯಸ್ಸಾಗಿದೆ..
ಆದರೂ ಜೀವನಕ್ಕಾಗಿ ಈಗಲೂ ಬುಟ್ಟಿ ಹೊತ್ತುಕೊಂಡು ಮೀನು ಮಾರುವುದನ್ನು ನಿಲ್ಲಿಸಿಲ್ಲ.
ದಿನದ ಅಂತ್ಯಕ್ಕೆ ಮನೆಗೆ ಹಿಂದಿರುಗವಾಗ ಬುಟ್ಟಿಯಲ್ಲಿ ನಾಲ್ಕೈದು ಮೀನುಗಳನ್ನು ಉಳಿಸಿಕೊಂಡೆ ಮನೆ ಸೇರಲು ಈಗಲೂ ಕೂಡ ನಾನು ಮೆರೆಯುವುದಿಲ್ಲ.
ನನಗೆ ಗೊತ್ತು ಒಂದಲ್ಲ ಒಂದು ದಿನ ಮನೆಗೆ ನನ್ನ ಗಂಡ ಹಾಗೂ ಮಕ್ಕಳು ಮತ್ತೆ ಮರಳುತ್ತಾರೆ ಎಂದು.
ಏಕೆಂದರೆ ನಾನು ಕಡಲರಾಜನನ್ನು ತುಂಬಾ ನಂಬುತ್ತೇನೆ.. ಅವನು ನನಗೆ ಯಾವತ್ತೂ ಮೋಸ ಮಾಡಿಯೇ ಇಲ್ಲ!!
ಒಂದು ದಿನ ಎಷ್ಟೋ ವರ್ಷಗಳ ನಂತರ ಮನೆಗೆ ಮರಳಿದ ಮಕ್ಕಳು ನನ್ನಲ್ಲಿ ಮೀನು ಸಾರು ಬಡಿಸಲು ಹೇಳುತ್ತಾರೆ... ಅಮ್ಮ ನಡುವಿನ ತುಂಡು.. ನಡುವಿನ ತುಂಡು.. ಎಂದು ತಮ್ಮ ತಟ್ಟೆ ಮುಂದೆ ಮಾಡುತ್ತಾರೆ...ಎಂದು ನನಗೆ ಬಹಳ ಚೆನ್ನಾಗಿಯೇ ಗೊತ್ತು.
ಆವಾಗ ನಾನು ಎಲ್ಲರಿಗೂ ಸಮವಾಗಿ ಮೀನಿನ ನಡುವಿನ ತುಂಡನ್ನು ಬಡಿಸಿಯೇ ಬಡಿಸುತ್ತೇನೆ!
ಅದರಲ್ಲೂ ಕಡಲಿಗೆ ಹೋಗುವ ಮುನ್ನ ಕೊನೆಯ ಮಗ ಹೇಳಿದ್ದು ಈಗಲೂ ನೆನಪಿದೆ..
"ಅಮ್ಮ... ಇವತ್ತು ನೀನು ಬಂಗುಡೆ ಮೀನಿನ ಸಾರೇ ಮಾಡು..ಬಾಕಿ ತುಂಡುಗಳೆಲ್ಲ ಚಿಕ್ಕದಿದ್ದರೂ ಪರವಾಗಿಲ್ಲ, ಆದರೆ ನಡುವಿನ ತುಂಡೊಂದು ಮಾತ್ರ ಸ್ವಲ್ಪ ದೊಡ್ಡದಾಗಿಯೇ ಇರಲಿ ಅಮ್ಮಾ.."
ಹಾಗಾಗಿ ನಾನು ದಿನಾಲೂ ಬಂಗುಡೆ ಮೀನಿನ ಸಾರನ್ನೇ ಮಾಡುತ್ತೇನೆ.
ಇವತ್ತು ಮಕ್ಕಳು ಬರದೇ ಇರಬಹುದು..
ಆದರೆ ನಾಳೆ ಆದರೂ ಅವರೆಲ್ಲರೂ ಬರಬಹುದು ಅಲ್ಲವೇ.?
ಯಾಕಿಲ್ಲ...
ಖಂಡಿತವಾಗಿಯೂ ಬಂದೇ ಬರುತ್ತಾರೆ.
ಕಡಲರಾಜ ನನಗೆ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ನನಗಿದೆ.
ಅವರು ಬಂದಾಗ.. ಅಮ್ಮ ನೀನು ಮೀನು ಸಾರು ಮಾಡಲೇ ಇಲ್ಲವೇ.. ಎಲ್ಲಿ ಅಮ್ಮ ಮೀನಿನ ನಡುವಿನ ಆ ದೊಡ್ಡ ತುಂಡು ಎಂದು ಕೇಳಿದಾಗ.. ನಾನು ಅವರನ್ನು ನಿರಾಸೆಗೊಳಿಸಬಾರದು ಅಲ್ಲವೇ...
ಅದಕ್ಕಾಗಿ ಈಗಲೂ ದಿನಾಲೂ ಬಂಗುಡೆ ಮೀನನ್ನು ಮೂರು ತುಂಡು ಮಾಡಿಯೇ ಸಾರು ಮಾಡುತ್ತೇನೆ ನಾನು!!!
ರಾತಿ ತುಂಬಾ ಹೊತ್ತಿನವರೆಗೆ ಮೊನೆಯ ಅಂಗಳದಲ್ಲಿ ನಿಂತುಕೊಂಡು ಅವರಿಗಾಗಿಯೇ ಕಾಯುತ್ತೇನೆ.
ಇಲ್ಲ...
ನಿನ್ನೆಯಂತೆ ಇಂದು ಕೂಡ ನನ್ನ ಮಕ್ಕಳು ಹಾಗೂ ಗಂಡ ನನ್ನ ಮನೆಗೆ ಬಂದಿಲ್ಲ..!
ಇವತ್ತು ಕೂಡ ಎಂದಿನಂತೆ ಅಂಗಳದಲ್ಲಿ ಕಾದು ಕಾದು ಸುಸ್ತಾಗಿ ಮನೆಯೊಳಗೆ ಮಾಡಿಟ್ಟ ಮೀನು ಸಾರಿನ ಮಣ್ಣಿನ ಬಿಸಲೆಯನ್ನು ಹೊರಗೆ ಎತ್ತಿಕೊಂಡು ಬಂದೆ.
ಅದರಲ್ಲಿದ್ದ ಮೀನಿನ ನಡುವಿನ ತುಂಡುಗಳನ್ನು ಮಂಗು ಪುಚ್ಚೆಗೂ.. ತಲೆಯ ಭಾಗವನ್ನು ಮತ್ತು ಮೀನಿನ ಮೊಟ್ಟೆಯನ್ನು ಮನೆಯ ನಾಯಿ ಟೈಗರ್ ಗೆ ಹಾಕಿದೆ!
ಏಕೆಂದರೆ ನನಗೆ ಚಿಕ್ಕಂದಿನಿಂದಲೂ ಮೀನಿನ ಬಾಲದ ತುಂಡನ್ನು ತಿಂದೇ ಅಭ್ಯಾಸ....
ನಡುವಿನ ತುಂಡು ನನಗೆ ಇಷ್ಟವಿಲ್ಲ!!
ಬಿಸಲೆಯಲ್ಲಿ ಕೇವಲ ಮೀನಿನ ಬಾಲದ ತುಂಡನ್ನು ಉಳಿಸಿಕೊಂಡು ಮತ್ತೆ ಬಿಸಲೆಯೊಂದಿಗೆ ಮನೆಯೊಳಗೆ ನಡೆದು ಅನ್ನದೊಂದಿಗೆ ಕಲಸಿಕೊಂಡು ಆ ದಿನದ ಊಟ ಮಾಡಿ ಮುಗಿಸಿ ಬಿಟ್ಟೆ!
ರಾತ್ರಿ ಹೆಚ್ಚಾಗಿ ನನಗೆ ನಿದ್ದೆ ಬರುವುದಿಲ್ಲ...
ಎಂದಿನಂತೆ ಕಡಲ ದಂಡೆಯ ಕಡೆಗೆ ನಡೆದು ನಿರ್ಲಿಪ್ತಳಾಗಿ ಕಡಲನ್ನೇ ನೋಡುತ್ತಾ ಒಂದು ಕಡೆಯಲ್ಲಿ ಮರಳಿನ ಮೇಲೆಯೇ ಕುಳಿತುಕೊಂಡೆ.
ನಲ್ವತ್ತು ವರ್ಷಗಳಿಂದಲೂ ಹೀಗೆಯೇ ಬಂದು ಕುಳಿತುಕೊಳ್ಳುತ್ತೇನೆ ನಾನು ಇಲ್ಲಿ..!
ಮನೆಯಿಂದ ನನ್ನ ಬೆನ್ನ ಹಿಂದೆಯೇ ಓಡುತ್ತಾ ಬಂದಿದ್ದ ಮಂಗು ಪುಚ್ಚೆ ಹಾಗೂ ಟೈಗರ್ ನನ್ನನ್ನು ಮೂಸುತ್ತಾ ನನ್ನ ಪಕ್ಕವೇ ಕಡಲನ್ನು ದಿಟ್ಟಿಸಿ ನೋಡುತ್ತಾ ಕುಳಿತುಕೊಂಡು ಬಿಟ್ಟವು!
ಕಡಲರಾಜನನ್ನು ನಾನು ಯಾವತ್ತೂ ದೂರುವುದಿಲ್ಲ..
ಇಂದಿಗೂ ದೂರುವುದಿಲ್ಲ..
ಏಕೆಂದರೆ ಅವನು ಯಾವತ್ತೂ ನನಗೆ ಮೋಸ ಮಾಡಲಾರ ಎಂದು ನಂಬಿದ್ದೇನೆ ನಾನು!!!
ಕತ್ತಲ ರಾತ್ರಿಯಲ್ಲಿ ದೀಪದ ಪುಂಜಗಳಂತೆ ಕಡಲಿನ ನಡುವಲ್ಲಿ ಸಾಲಾಗಿ ಬಂದರಿನತ್ತ ಸಾಗುತ್ತಿದ್ದ ದೊಡ್ಡ ದೊಡ್ಡ ಹಡಗುಗಳ ಲೆಕ್ಕವನ್ನು ನಾನು ಟೈಗರ್ ಹಾಗೂ ಮಂಗು ಬೆಕ್ಕುವಿನೊಂದಿಗೆ ಸೇರಿಕೊಂಡು ನಿಧಾನಕ್ಕೆ ಮನಸ್ಸಿನಲ್ಲಿಯೇ ಮಾಡತೊಡಗಿದೆ!!
ಲೆಕ್ಕದ ಆಟ ನೆಪಕ್ಕೆ ಮಾತ್ರ.....
ಆ ಹುಡುಗಗಳ ಮಧ್ಯೆ ತೂರಿಕೊಂಡು ಬರುವ ನನ್ನ ಗಂಡನ ಪುಟ್ಟ ದೋಣಿಗಾಗಿ ನನ್ನ ಪ್ರತೀಕ್ಷೆ ಮಾತ್ರ ಎಂದಿನಂತೆಯೇ ಮುಂದುವರಿದಿತ್ತು!!!
.....................................................................................
#ಇಷ್ಟೇ_ಕಥೆ!
Ab Pacchu
Comments
Post a Comment