ನಮ್ಮ ಗ್ರೌಂಡ್ ನಮ್ಮ ಹೆಮ್ಮೆ..

 



ಪ್ರತಿಯೊಂದು ಗ್ರೌಂಡಿನಲ್ಲಿಯೂ ಏನಾದರೊಂದು ವಿಶಿಷ್ಟತೆಗಳು ಹಾಗೂ ಚಿತ್ರ ವಿಚಿತ್ರ ರೂಲ್ಸ್ ಗಳು ಇದ್ದೇ ಇರುತ್ತದೆ. ಅದರಲ್ಲೂ ಗುಡ್ಡೆ ಗ್ರೌಂಡಿನ,ಗದ್ದೆ ಗ್ರೌಂಡಿನ ಆಟ ಹಾಗೂ ಅಲ್ಲಿನ ಆಟಗಾರರ  ಮನಸ್ಥಿತಿಯಂತು ಬಲು ಮಜವಾಗಿರುತ್ತದೆ.


ನಮ್ಮ ಗ್ರೌಂಡ್ ಕೂಡ ಇದಕ್ಕೆ ಹೊರತಾಗಿಲ್ಲ.ಅದರಲ್ಲಿ ಕೆಲವೊಂದನ್ನು ಇವತ್ತು ನಾನು ನಿಮಗೆ ತಿಳಿಸುತ್ತೇನೆ. 


1.ಮೊದಲನೆಯದಾಗಿ ಚೆನ್ನಾಗಿ ಆಡಿ ತಂಡವನ್ನು ಗೆಲ್ಲಿಸುವ ಆಟಗಾರ ನಮ್ಮ ತಂಡಕ್ಕೆ ಬೇಕಾಗಿಯೇ ಇಲ್ಲ. ಯಾಕೆಂದರೆ ಅವ ಬೇಗ ಔಟ್ ಆಗುವುದಿಲ್ಲ ಮತ್ತು ನಮಗೆಲ್ಲಾ ಬೇಗ ಬ್ಯಾಟಿಂಗ್ ಸಿಗುವುದಿಲ್ಲ.


2. ಒಳ್ಳೆಯ ಚೊರೆಪಟ್(ಶಕುನಿ ಬುದ್ಧಿಯ ಆಟಗಾರ) ನಮ್ಮ ತಂಡದಲ್ಲಿ ಇದ್ದರೆ ಆವಾಗ ನಾವು ಚೊರೆ(ಕುತಂತ್ರದ ದಾಳ ಎಸೆಯುವುದು) ಮಾಡಿ ಆದರೂ ಮ್ಯಾಚ್ ಗಳನ್ನು ಗೆಲ್ಲಬಹುದು. ಹಾಗಾಗಿ ತಂಡ ರಚಿಸುವಾಗ ಒಳ್ಳೆಯ ಪ್ಲೇಯರ್ ಗಿಂತ ಒಳ್ಳೆಯ ಚೊರೆಪಟ್ ನಮ್ಮ ತಂಡದಲ್ಲಿ ಇರುವಂತೆ ನಾವು ಸದಾ ನೋಡಿಕೊಳ್ಳುತ್ತೇವೆ.


3.ಲೇಟ್ ಆಗಿ ಗ್ರೌಂಡ್ ಗೆ ಬರುವವನನ್ನು ಈ ಕೆಳಗಿನ ಆಧಾರದ ಮೇಲೆ.. ಆ ಸಮಯದಲ್ಲಿ ಸಾಗುತ್ತಿರುವ ಪಂದ್ಯಕ್ಕೆ ಸೇರಿಸಿಕೊಳ್ಳಲಾಗುವುದು..


a) ಆತ ಒಂದು ಸೈಡಿನ ಆಟ ಮುಗಿಯುದಕ್ಕಿಂತ ಮೊದಲೇ ಗ್ರೌಂಡ್ ನ ಒಳಕ್ಕೆ ಅಂದರೆ ಬೌಂಡರಿ ಲೈನ್ ನ ಒಳಗೆ ಕಾಲಿಡಬೇಕು, ಹಾಗಾದರೆ ಆತ ಆ ಆಟಕ್ಕೆ ಜೈ ಎನಿಸಿಕೊಳ್ಳುತ್ತಾನೆ. ಬೌಂಡರಿ ಗೆರೆಯೊಳಗೆ ಕಾಲಿಡುವುದು ಒಂದೇ ಒಂದು ಸೆಕೆಂಡ್ ಲೇಟ್ ಆದರೂ, ಅವ ಆ ಪಂದ್ಯಕ್ಕೆ  ಜಸ್ಟ್ ಪ್ರೇಕ್ಷಕ ಅಷ್ಟೇ ಆಗಿರುತ್ತಾನೆ.ಬೇಕಿದ್ದರೆ ಆತ ಎಷ್ಟೇ ದೊಡ್ಡ ಆಟಗಾರನಾಗಿರಲಿ.. 


b) ಆತ ಗ್ರೌಂಡಿಗೆ ಬಂದಿದ್ದಾನೆ ಆದರೆ ಎಲ್ಲೋ ಹೊರಗಡೆ ನಿಂತುಕೊಂಡು ಬೇರೆನೋ  ಞಕ್ಕ್ ಞೈ ಮಾಡುತ್ತಿದ್ದಾನೆ ಎಂದಾದರೆ ಆವಾಗಲೂ ಆತ ಆ ಪಂದ್ಯಕ್ಕೆ ರಿಜೆಕ್ಟ್ ಆಗುತ್ತಾನೆ.ಮತ್ತು ಆ ಪಂದ್ಯ ಮುಗಿದು ಇನ್ನೊಂದು ಪಂದ್ಯ  ಶುರುವಾಗುವವರೆಗೆ ಆತ ಕೂಡ  ಕಾಯಲೇ ಬೇಕು. 


3. ನಮ್ಮಲ್ಲಿ Four, Six ಜೊತೆಗೆ Two D (Two declare, Two runs) ಕೂಡ ಇದೆ.Two D ಗ್ರೌಂಡ್ ನ ಎರಡೂ ಇಕ್ಕೆಲಗಳಲ್ಲಿಯೂ ಇರುತ್ತದೆ. OFF side ಮತ್ತು  Leg Side ನಲ್ಲಿ.ಅದನ್ನು ನಿರ್ಧರಿಸುವುದು ಗ್ರೌಂಡನಲ್ಲಿ ಬೆಳೆದ ಗಿಡ ಗಂಟಿ,ಮರ ಹಾಗೂ ಪೊದೆಗಳು. 


ಹೊಡೆದ ಬಾಲ್ Two D ಯನ್ನು ನಿರ್ಧರಿಸುವ ಗಿಡಕ್ಕೆ ತಾಗಿ  ಹೋದರೆ ಆವಾಗ Two D ಕೊಡಲಾಗುವುದು. ಇಲ್ಲದಿದ್ದರೆ ನೋ ರನ್. ಗಿಡದ ಒಂದೇ ಒಂದು ಎಲೆಗೆ ಕೂಡ ಬಾಲ್ ಗೆ ಟಚ್ ಆದರೂ ಆವಾಗ ಅದು Two D ಯೇ ನಮ್ಮ ಗ್ರೌಂಡಿನ ರೂಲ್ಸ್ ಪ್ರಕಾರ. ಅದರೆ ಒಂದಾದರೂ ಎಲೆಗೆ ಬಾಲ್ ನಿಜವಾಗಿಯೂ ಟಚ್ ಆಗಿತ್ತೇ ಎಂದು ನೋಡಲು.. ವಿಶೇಷವಾದ ದಿವ್ಯ ದೃಷ್ಟಿ ಬೇಕು. ಈಗ ನಮ್ಮ ಹೆಲ್ಪಿಗೆ ಬರುತ್ತಾನೆ ನಾವು ಆಯ್ಕೆ ಮಾಡಿದ ಚೊರೆಪಟ್.


ನಮ್ಮ ತಂಡದ ಬ್ಯಾಟ್ಸ್‌ಮನ್ ಆ ಬಾಲ್ ಹೊಡೆದಿದ್ದರೆ ಆವಾಗ ಅವನು ಬಾಲ್ ಮರದ ಒಂದು ಎಲೆಗೆ ತಾಗಿದೆ ನಾನು ಅದನ್ನು ಕಣ್ಣಾರೆ ನೋಡಿದ್ದೇನೆ ಎಂದು ಚೊರೆಪಟ್ ಮಾಡಿ ಹೇಗಾದರೂ ಆ  Two D ಯನ್ನು ನಮ್ಮ ತಂಡಕ್ಕೆ ಸಿಗುವಂತೆ ಮಾಡುತ್ತಾನೆ. ಅದೇ ರೀತಿ ನಾವು ಫೀಲ್ಡಿಂಗ್ ಮಾಡುತ್ತಿದರೆ ಆ ಬಾಲ್ ಮರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಮರಕ್ಕೆ ಟಚ್ ಆಗದೇ ಹಿಂದಿನ ಬದಿಯಲ್ಲಿ ಹೋಗಿತ್ತು ಎಂದು ಚೊರೆಪಟ್ ಮಾಡಿ ಎದುರಾಳಿ ತಂಡದಿಂದ ಆ ಎರಡು ರನ್ನುಗಳನ್ನು ಕಸಿದು ಕೊಳ್ಳುತ್ತಾನೆ ನಮ್ಮ ತಂಡದ ಚೊರೆಪಟ್ ಆಟಗಾರ. 


4.ಗ್ರೌಂಡಿಗೆ ನೀರನ್ನು ಚಿಕ್ಕ ಹುಡುಗರೇ ಕೊಡಪಾನದಲ್ಲಿ ತರಬೇಕು. ತರದಿದ್ದರೆ ಅವನಿಗೆ ಈ ರೀತಿ ಹೇಳಲಾಗವುದು... " ನಾವು ಚಿಕ್ಕ ಇರುವಾಗ ಉಂಟಲ್ಲಾ.. ಗ್ರೌಂಡ್ ನಲ್ಲಿ ಕೇವಲ ಬಾಲ್ ಹೆಕ್ಕುತ್ತಿದ್ದೆವು.. ಕೀಪಿಂಗ್ ಮಾಡುತ್ತಿದ್ದೆವು ಮತ್ತು ಆಟ ಆಡುವವರಿಗೆ ನೀರು ತರುತ್ತಿದ್ದೆವು... ಬ್ಯಾಟಿಂಗ್, ಬೌಲಿಂಗ್ ಎಲ್ಲಾ ಏನೂ ಇಲ್ಲ, ಖಾಲಿ ಫೀಲ್ಡಿಂಗ್..ಆದ್ರೂ ಆಟ ಆಡ್ಲಿಕ್ಕೆ ಡೈಲಿ ಬಂದು ಇದನ್ನೆಲ್ಲಾ ಮಾಡುತ್ತಿದ್ದೆವು.. ಆದರೆ ನಿಮಗೆಲ್ಲಾ ಇವಾಗ ಏನೂ ಶಿಸ್ತು ಇಲ್ಲ... " ಎಂದು ಶಿಸ್ತಿನ ಪಾಠ ಮಾಡಿ ಪರ ಪೋಡಿಗೆ ಇಲ್ಲದ ಮಕ್ಕಳಿಂದಲೇ(ದುಷ್ಟ ಬಾಲಕರಿಂದ)ಬಾಲ್ ಹೆಕ್ಕಿಸಲಾಗುವುದು ಮತ್ತು ನೀರು ಖಾಲಿ ಆದಾಗಲೆಲ್ಲ ನೀರು ತರಲು ಓಡಿಸಲಾಗುವುದು.


5. ಬೌಂಡರಿ ಲೈನ್ ನಲ್ಲಿ ಸಿಕ್ಸ್ ಹೋಗುವ ಬಾಲನ್ನು ಫೀಲ್ಡರ್  ಕ್ಯಾಚ್ ಹಿಡಿದರೆ, ಆವಾಗ ಎದುರಾಳಿ ತಂಡದ ನಾಲ್ಕು ಜನ ರಪ್ಪ ಅಂತ ಓಡಿ ಹೋಗಿ ಅವ ಬೌಂಡರಿಯನ್ನು ಟಚ್ ಮಾಡಿದ್ದಾನೆಯೇ ಇಲ್ಲವೇ ಎಂದು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಅಲ್ಲಿಯವರೆಗೆ ಆ ಬಾಲ್ ಹಿಡಿದ ಫೀಲ್ಡರ್ ಕದಲುವಂತಿಲ್ಲ. ಒಂದು ವೇಳೆ ಕದಲಿದರೆ ಅವ ದೊಡ್ಡ ಸೀಂತ್ರಿ (ಪ್ರಚಂಡ ಮೋಸಗಾರ) ಎಂದು ಪರಿಗಣಿಸಿ ಆ ಔಟ್ ಅನ್ನು ಮಾನ್ಯ ಮಾಡದೇ ಸಿಕ್ಸರ್ ನೀಡಲಾಗುವುದು.


6. ಅಂಪೈರ್ ಯಾವತ್ತೂ ಬ್ಯಾಟಿಂಗ್ ತಂಡದವನೇ ಆಗಿರುತ್ತಾನೆ. ಮತ್ತು ಅವನು ಯಾವತ್ತೂ ಸತ್ಯ ಹರಿಶ್ಚಂದ್ರ ಆಗಿರುವುದಿಲ್ಲ.ತಂಡದ ಮಹಾನು ಚೊರೆಪಟ್ ಅನ್ನೇ ಅಂಪೈರ್ ಆಗಿ ನಿಲ್ಲಿಸಲಾಗುವುದು.. ಅವ ನಮಗೆ ವೈಡ್ ಇಲ್ಲದ ಬಾಲನ್ನು ವೈಡ್ ಎಂದು ನೀಡಿ ನಮ್ಮ ತಂಡದ ರನ್ ಗತಿ ಏರಲು ಸಿಕ್ಕಾಪಟ್ಟೆ ಸಹಾಯ ಮಾಡುತ್ತಾನೆ.


7. ಅಂತಹ ಒಬ್ಬ ಬೌಲರ್ ಯಾವಾಗಲೂ ಇರುತ್ತಾನೆ,ಅವ ನಾಲ್ಕು ಬಾಲ್ ಹಾಕಿದ್ದರೆ ಐದು ಆಗಿದೆ ಎಂದೇ ಹೇಳುತ್ತಾನೆ. ಆದರೆ ನಮ್ಮ ತಂಡದಲ್ಲಿ CBI ಗಳ ದಂಡೇ ಇರುವುದು ಯಾವ ಬಾಲ್ ಎಲ್ಲಿಗೆ ಹೊಡೆದಿದ್ದೇವೆ ಎಂದು ನೆನಪು ಮಾಡಿಸಿ ಮಾಡಿಸಿ ಬೌಲರ್ ಗೆ ಲೆಕ್ಕ ಕೊಡುತ್ತೇವೆ.


8.ಅದೇ ರೀತಿ ಒಬ್ಬ ರನ್ ಲೆಕ್ಕ ಮಾಡುವನು ಇರುತ್ತಾನೆ. ಅವನದ್ದು  ಒಂದೆರಡು ರನ್ ಯಾವಾಗಲೂ ಜಾಸ್ತಿಯೇ ಇರುವುದು. ಇವನು ತಂಡ ರನ್ ಗಳಿಸದೇ ಇದ್ದಾಗ.. ಈ ತರಹ ತಂಡಕ್ಕಾಗಿ ರನ್ ಗಳಿಸಲು  ಶಕ್ತಿ ಮೀರಿ ಪ್ರಯತ್ನ ಮಾಡುತ್ತಲೇ ಇರುತ್ತಾನೆ. 


9.ನಮ್ಮ ತಂಡದಲ್ಲಿ ರನ್ ಲೆಕ್ಕ ಇಡುವವನು ಇರುವಂತೆಯೇ... ಆ ತಂಡದಲ್ಲಿ ಕೂಡ ಒಬ್ಬ ರನ್ ಲೆಕ್ಕ ಮಾಡುವವ ಇರುತ್ತಾನೆ. ಅವನ ಕೆಲಸ ಏನೆಂದರೆ ನಮ್ಮ ತಂಡದವ ಸರಿಯಾಗಿ ಲೆಕ್ಕ ಇಡುತ್ತಿದ್ದಾನೆಯೇ ಎಂದು ಲೆಕ್ಕ ಮಾಡುವುದು.. ಲೆಕ್ಕ ತಪ್ಪಿದಾಗಲೆಲ್ಲ ಅವನೊಳಗಿರುವ ಅದ್ಭುತ ಗಣಿತಶಾಸ್ತ್ರಜ್ಞ ಪ್ರಕಟವಾಗಿ ಆತ ಕೂಡ ಚೊರೆಪಟ್ ಗೆ ಇಳಿಯುತ್ತಾನೆ.


10. ಅವ ಒಬ್ಬ ಬ್ಯಾಟ್ಸ್‌ಮನ್ ಇರುತ್ತಾನೆ. ಅವನು ಎಂತಹ ಬ್ಯಾಟ್ಸ್‌ಮನ್ ಎಂದರೆ ಬರೀ ಲೆಗ್ ಸೈಡ್ ಗೆ ಬಾಲ್ ಹೊಡೆಯುತ್ತಾನೆ.ಅದರಲ್ಲೂ ಗ್ರೌಂಡಿನ ಲೆಗ್ ಸೈಡ್ ಇರುವ ಹಂಚಿನ ಮನೆಯ ಮೇಲೆ ಬಾಲ್ ಹೊಡೆದು ಹೊಡೆದು.. ಆ ಮನೆಯ ಹಂಚನ್ನು ಪುಡಿ ಪುಡಿ ಮಾಡುವುದೇ ಆತನ ದಿನ ನಿತ್ಯದ ಆಟವಾಗಿರುತ್ತದೆ. ವಿಕ್ಕಿ ಬಾಲ್(ಸ್ವಲ್ಪ ಹಾರ್ಡ್ ಟೆನ್ನಿಸ್ ಬಾಲ್) ನಲ್ಲಿ ಕ್ರಿಕೆಟ್ ಆಡುವಾಗ ಅವನಿಗೆ ದಮ್ಮಯ್ಯ ದಕ್ಕಯ್ಯ(ಕಳಕಳಿಯ ಮನವಿ)ಹಾಕಿ ಆ ಮನೆಯ ಮೇಲೆ ಮಾತ್ರ ಹೊಡೆಯಬೇಡ ಮಾರಾಯ ಎಂದು ಪ್ರಾರ್ಥಿಸಲಾಗುತ್ತದೆ. ಆದರೆ ಆ ಮಾರಿ ಆ ಬಾಲಲ್ಲಿ ಕೂಡ ಆ ಮನೆಯ ಮೇಲೆಯೇ ನೇರವಾಗಿ ಬಾಲ್  ಬೀಳುವಂತೆ ಹೊಡೆಯುತ್ತಾನೆ.. ಬಾಲ್ ಆ ಮನೆಯ ಹೆಂಚಿಗೆ ಬಿದ್ದ ಕೂಡಲೇ ಕೆಲವೇ ಕ್ಷಣಗಳಲ್ಲಿ ಗ್ರೌಂಡ್ ಖಾಲಿ ಆಗುತ್ತದೆ.. ಎಲ್ಲರೂ ಪೊದೆಯೊಳಗೆ ಪಕ್ಕದ ಬಲ್ಲೆಯೊಳಗೆ ಓಡುತ್ತಾರೆ.. ಯಾಕೆಂದರೆ ಮುಂದೆ ಮನೆಯವರಿಂದ ಬೈಗುಳಗಳ ಸರಮಾಲೆಯೇ ಎಲ್ಲರಿಗೂ ಕಾದಿರುತ್ತದೆ.


ನಂತರ ಹಿರಿಯ ಆಟಗಾರ ಮುಂದೆ ಬಂದು.. ಇಲ್ಲ ಮಳೆಗಾಲಕ್ಕಿಂತ ಮೊದಲು ನಾವು ಒಡೆದ ಎಲ್ಲಾ ಹೆಂಚು ಬದಲಿಸಿ ಸರಿ ಮಾಡಿ ಕೊಡುತ್ತೇವೆ, ಇನ್ನು ಮುಂದೆ ನಾವು  ಯಾರೂ ಕೂಡ ಮನೆಯ ಮೇಲೆ ಬಾಲ್ ಹೊಡೆಯುವುದಿಲ್ಲ ಎಂದು ಆ ಮನೆಯವರಿಗೆ ರಾಜಕಾರಣಿಯಂತೆ ಭಯಂಕರ ಆಶ್ವಾಸನೆ ಕೊಡುತ್ತಾನೆ.ನಂತರ ಆಟ ಸರಾಗವಾಗಿ ಆಟ ಮುಂದುವರಿಯುತ್ತದೆ.


ಆದರೆ ನೆಕ್ಸ್ಟ್ ಬಾಲ್ ಕೂಡ ಮತ್ತೆ ಯಾರಾದರೂ ಆ ಮನೆಯ ಮೇಲೆಯೇ ಬೀಳುವಂತೆ ಹೊಡೆದರೆ ಪುನಃ ಎಲ್ಲರೂ  ಜೀವ ಭಯದಿಂದ ಬ್ಯಾಟ್ ಬಾಲ್ ಎಲ್ಲಾ ಗ್ರೌಂಡಿನಲ್ಲಿಯೇ ಬಿಟ್ಟು ಗುಡ್ಡೆಯೊಳಗೆ ಓಡುತ್ತಾರೆ. ನಂತರ ಮನೆಯವರು ನೋವಿನಿಂದ ಪುನಃ ಬೈಯುತ್ತಾರೆ.ಹಿರಿಯ ಆಟಗಾರ ಮತ್ತೆ ಮುಂದೆ ಬಂದು ಇಲ್ಲ.. ನಾವು ಏನಾದರೂ ಮಾಡಿ ಹೆಂಚು ಸರಿ ಮಾಡುತ್ತೇವೆ ಎಂದು ಆಶ್ವಾಸನೆ ಕೊಡುತ್ತಾನೆ. ಆಗ ಆ ಹಿರಿಯ ಆಟಗಾರನಿಗೆ  ಮಂಗಳಾರತಿ ಎತ್ತುವ ಕಾರ್ಯ ನಡೆಯುತ್ತದೆ.


ಕೆಲವೊಮ್ಮೆ ಎರಡೆರಡು ಬಾರಿ ಬೈಗುಳ ತಿಂದ ದಿನವೂ ನಾಲ್ಕೈದು ಸಲ ಮನೆಯ ಹೆಂಚಿನ ಮೇಲೆ ಬಾಲ್ ಬಿದ್ದ ಕರಾಳ ಇತಿಹಾಸ ಇದೆ. ಅದೊಂದು Unpredictable, Uncontrollable Thing. ಎಂದಿಗೂ ಅದು  ಆಟಗಾರರ ಕೈಯಲ್ಲಿ ಇರುವುದೇ ಇಲ್ಲ.ಮನೆಯವರು ಕೂಡ ಅಷ್ಟೇ ಅಸಹಾಯಕರು.ನಂತರ ಹಿರಿಯ ಆಟಗಾರ ಕೂಡ ಮನನೊಂದು ಆ ಸೈಡಿಗೆ ಬಾಲ್ ಹೊಡೆಯುವವರ ಮೇಲೆ ತನ್ನದೊಂದು ತೀವ್ರವಾದ ಆಕ್ರೋಶವನ್ನು ಪ್ರಕಟಿಸಿ ಅವರೆಲ್ಲರಿಗೂ ಚೀಮಾರಿ ಹಾಕುತ್ತಾನೆ ಹಾಗೂ ಸಿಕ್ಕಾಪಟ್ಟೆ ಉಗಿಯುತ್ತಾನೆ. 


11.ಪ್ರತೀ ತಂಡದಲ್ಲಿ ಒಬ್ಬ ಒಂಗೆಲಾ ಬ್ಯಾಟ್ಸ್‌ಮನ್(ತಂಡದ ಹಿತವನ್ನು ಲೆಕ್ಕಿಸದೇ ಕೇವಲ ತನ್ನ ಖುಷಿಗಾಗಿ ಆಡುವವನು)ಇರುತ್ತಾನೆ. ಅವನೇ ಯಾವಾಗಲೂ ಫಸ್ಟ್ ಬ್ಯಾಟಿಂಗ್. ಅವನು ಬೇಗ ಔಟ್ ಆಗಲಿ ಎಂದು ಅವನದ್ದೇ ತಂಡದವರು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವನು ಔಟ್ ಆದಾಗ ಎದುರಾಳಿ ತಂಡಕ್ಕಿಂತಲೂ ಅಧಿಕವಾಗಿ ಅವರ ತಂಡದವರೇ ಅತ್ಯಧಿಕವಾಗಿ ಸಂಭ್ರಮಿಸುತ್ತಾರೆ..


ಹಳ್ಳಿ ಕ್ರಿಕೆಟ್ ಅಂದರೆ ಹೀಗೆಯೇ... ಒಂದಷ್ಟು ಜಗಳ, ಒಂದಷ್ಟು ಜಿದ್ದಾಜಿದ್ದಿ,ವಿಚಿತ್ರ ರೂಲ್ಸ್, ಹೊರಗಿನಿಂದ ಬರುವವರಿಗೆ ಎಂದಿಗೂ ಅರ್ಥವಾಗದ ಗ್ರೌಂಡಿನ ರೂಲ್ ಬುಕ್.. ಒಟ್ಟಿನಲ್ಲಿ ಕ್ರಿಕೆಟ್ ಅಂದರೆ ಎಲ್ಲರಲ್ಲೂ ನೂರೊಂದು ನೆನಪು ಎದೆಯಾಳದಿಂದ. ಎಂತಹ ಕಹಿ ಘಟನೆಗಳು ಕೂಡ ಮುಂದೊಂದು ದಿನ ಸವಿ ಸವಿ ನೆನಪುಗಳಾಗಿ ಬದಲಾಗುವ ತಾಣ ಎಂದರೆ ಅದು ನಮ್ಮೆಲ್ಲರ ಊರಿನ ಹೆಮ್ಮೆಯ ಕ್ರಿಕೆಟ್ ಗ್ರೌಂಡುಗಳೇ. 


..................................................................................


#ವಿಷಯ_ಎಂತ_ಗೊತ್ತುಂಟಾ 


 

Ab Pacchu 

Moodubidire

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!