ವೀರಗಾಥೆ - ಯೋಧರ ಅಜ್ಞಾತ ಸಾಹಸ ಕಥನಗಳು
ಹೀರೋಗಳು ಅಂದ ಕೂಡಲೇ ನಿಮಗೆ ತೆರೆಯ ಮೇಲೆ ಮೆರೆದು ಇನ್ನಿಲ್ಲದಂತೆ ಅಬ್ಬರಿಸುವ ಸಿನಿಮಾ ನಾಯಕನಟರು ನೆನಪಾಗದೇ,ಕೇವಲ ಗಡಿ ಕಾಯುವ ಆ ನಮ್ಮ ಯೋಧನೇ ಮೊದಲು ನೆನಪಾಗುವುದಾದರೆ.. ಖಂಡಿತವಾಗಿಯೂ ಇದು ನೀವುಗಳು ಓದಲೇಬೇಕಾದ ಪುಸ್ತಕ.
ನಮ್ಮ ಯೋಧರ ಕಥೆಗಳೇ ಹಾಗೇ.. ಕೆಲವೊಮ್ಮೆ ಮೈನವಿರೇಳಿಸುವಂತಹದ್ದು,ಇನ್ನು ಕೆಲವೊಮ್ಮೆ ಹಾಗೇ ಕಣ್ಣಂಚನ್ನು ಇಂಚಿಂಚು ತೇವಗೊಳಿಸುವಂತಹದ್ದು.ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಲು ಹಿಂದೆ ಮುಂದೆ ನೋಡದ ಯೋಧರ ಕಥೆಗಳು ಹೇಗೆ ನಮಗೆ ತೀವ್ರವಾಗಿ ಕಾಡುತ್ತದೋ ಅದೇ ರೀತಿ ಯೋಧನ ವೃದ್ಧ ತಂದೆ,ಅವನ ಹೆತ್ತ ತಾಯಿ,ಕೈ ಹಿಡಿದ ಮಡದಿ,ಪುಟ್ಟ ಮಗುವಿನ ಕಥೆ ಕೂಡ ಕೆಲವೊಮ್ಮೆ ಹಾಗೇ ಕರುಳು ಕಿವುಚಿ ಹಾಕಿ ಬಿಡುತ್ತದೆ.
ಡಾ.ಸಿಂಧೂ ಪ್ರಶಾಂತ್ ಅವರು ಬರೆದಿರುವ ಈ "ವೀರಗಾಥೆ" ಯಲ್ಲೂ ಇಂತಹದ್ದೇ ಕಥೆಗಳಿರುವುದು.ನಾವು ಬೆಚ್ಚಗೆ ಮಲಗಿ ನಿದ್ರಿಸುವಾಗ ದೇಶದ ಗಡಿಯಲ್ಲಿ ಶತ್ರುಗಳ ನೆತ್ತರು ಹರಿಸಿದ್ದು ಮಾತ್ರವಲ್ಲ ಅವಶ್ಯಕತೆ ಬಿದ್ದಾಗ ನಮಗಾಗಿ,"ಕೇವಲ ನಮಗಾಗಿ "ಪ್ರಾಣ ತ್ಯಾಗ ಮಾಡಿ, ಆ ಮೂಲಕ ಈ ದೇಶದ ಧ್ವಜವೊಂದು ಸದಾ ಎತ್ತರದಲ್ಲಿಯೇ ಬೆಚ್ಚಗೆ ಸ್ವಲ್ಪವೂ ಸುಕ್ಕಾಗದೇ ಹಾರಾಡುವಂತೆ ನೋಡಿಕೊಂಡ,ತಮಗೊಂದು ಚಂದದ ಹೆಸರಿದ್ದರೂ ಸಹ ದೇಶದ ಜನ ಮಾನಸದಲ್ಲಿ ಇನ್ನೂ ಅಜ್ಞಾತವಾಗಿಯೇ ಉಳಿದು ಹೋಗಿರುವ ಸುಮಾರು 50 ಹುತಾತ್ಮ ವೀರ ಯೋಧರ ಸಾಹಸ ಕಥೆಗಳೇ ಈ "ವೀರಗಾಥೆ".
ಇಲ್ಲಿಯ ಎಲ್ಲಾ ಕಥೆಗಳಲ್ಲೂ ನಮ್ಮ ಯೋಧರ ಅಪ್ರತಿಮ ಸಾಹಸವೇ ತುಂಬಿರುವುದು.ಆದರೆ ಪತ್ರೀ ಯೋಧನೂ ಕೂಡ ಕೊನೆಯಲ್ಲಿ ಕಣ್ಣಂಚು ಮಾತ್ರ ಒದ್ದೆ ಮಾಡಿಯೇ ಹಾಗೇ ಎದ್ದು ಹೋಗಿ ಬಿಡುತ್ತಾನೆ.ಏಕೆಂದರೆ ನಮ್ಮ ಯೋಧರ ಕಥೆಗಳು ಇರುವುದೇ ಆ ರೀತಿ..
25 ವರ್ಷದ ಯೋಧ ಕ್ಯಾಪ್ಟನ್ ಹನೀಫ್ ನ ಕಥೆ ಒಮ್ಮೆ ನೀವು ಓದಲೇಬೇಕು. "ರಾಜಾ ರಾಮಚಂದ್ರ ಕೀ ಜೈ" ಎನ್ನುತ್ತಲೇ ಭಯೋತ್ಪಾದಕರ ವೇಷದಲ್ಲಿ ಬಂದಿದ್ದ ಪಾಕ್ ಸೈನಿಕರ ವಿರುದ್ಧ ಒಬ್ಬನೇ ಮೇಲೆರಗಿ,ತನ್ನವರನ್ನು ರಕ್ಷಿಸುವ ಹನೀಫ್,ಕೊನೆಗೆ ವೈರಿಗಳ ಗುಂಡುಗಳ ದಾಳಿಗೆ ಸಿಲುಕಿ ಅಲ್ಲೇ ಕುಸಿದು ಬಿದ್ದು ವೀರ ಮರಣವನ್ನಪ್ಪುತ್ತಾನೆ.ಆತನ ಮೃತದೇಹನ್ನು ಕೂಡ ಅವನ ಮನೆಯವರಿಗೆ ಒಪ್ಪಿಸಲು ಸೇನೆಗೆ ಸಾಧ್ಯವಾಗುವುದಿಲ್ಲ!
ಖುದ್ದು ಸೇನಾ ಮುಖ್ಯಸ್ಥರೇ ಹನೀಫ್ ರ ತಾಯಿಯೊಂದಿಗೆ ಮಾತನಾಡುತ್ತಾ ನಿಮ್ಮ ಮಗನ ಪಾರ್ಥಿವ ಶರೀರವನ್ನು ತರಲಾಗಲಿಲ್ಲ ಕ್ಷಮಿಸಿ,ಎಂದು ಹೇಳಿದ ಕೂಡಲೇ ಆ ತಾಯಿ ಏನು ಹೇಳುತ್ತಾರೆ ಗೊತ್ತಾ...
" ಸೇನೆಯಲ್ಲಿ ತಾಯ್ನಾಡಿನ ರಕ್ಷಣೆಗೆ ನಿಂತ ಪ್ರತಿಯೊಬ್ಬ ಯೋಧ ಕೂಡ ನನ್ನ ಮಗನೇ, ಜೀವವಿರದ ಒಬ್ಬನ ಶರೀರವನ್ನು ಹಿಂತರಲು,ನನ್ನ ಮತ್ತೊಬ್ಬ ಮಗನ ಪ್ರಾಣ ಅಪಾಯಕ್ಕೆ ಸಿಲುಕುವುದನ್ನು ನಾನೆಂದಿಗೂ ಒಪ್ಪಿಕೊಳ್ಳಲಾರೆ...!"
ಆಹಾ.. ಎಂತಹ ತಾಯಿ ಅವರು,
ಎಂತಹ ವೀರ ಪುತ್ರ ಆ ಹನೀಫ್....
ಮತ್ತೊಬ್ಬ ಯೋಧ ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮುನೀಂದ್ರ ನಾಥ್ ರಾಯ್. ಅವರ ಪಾರ್ಥಿವ ಶರೀರ ಅವರ ಮನೆಗೆ ಬಂದಾಗ,ಅವರ ಪುಟ್ಟ ಮಗಳು ತನ್ನ ತಂದೆಯ ಶರೀರದ ಬಳಿಯೇ ನಿಂತುಕೊಂಡು ಜೋರಾಗಿ ಹೇಳುತ್ತಾಳೆ.." ನನ್ನ ಅಪ್ಪ, ಹುಲಿ ಹೌದೋ ಅಲ್ಲವೋ..? ". ಪಾರ್ಥಿವ ಶರೀರವನ್ನು ಹೊತ್ತು ತಂದಿದ್ದ 9 ಗೂರ್ಖಾ ರೈಫಲ್ಸ್ ನ ಅಷ್ಟೂ ಯೋಧರು ಆವತ್ತು ಆ ಪುಟ್ಟ ಮಗುವಿನ ಮಾತಿಗೆ ಮುಗಿಲು ಮುಟ್ಟುವಂತೆ ಒಕ್ಕೊರಲಿನಿಂದ ಹೇಳಿದ್ದು ಇಷ್ಟೇ.. ಹೌದು... ಹೌದು... ಹೌದು...!!
"ಉರಿ" ಸಿನಿಮಾ ಎಲ್ಲರಿಗೂ ಗೊತ್ತು.ಆದರೆ ಅದರ ಆ ಘೋಷಣೆ ಈ ಘಟನೆಯಿಂದಲೇ ಪ್ರೇರಿತವಾದದ್ದು ಎಂದು ನಮಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ!
ಅಂತಹ ಆ ಕರ್ನಲ್ ಮುನೀಂದ್ರ ನಾಥ್ ರಾಯ್ ತಮ್ಮ ವಾಟ್ಸಪ್ ನಲ್ಲಿ ಒಂದು ಸ್ಟೇಟಸ್ ಅನ್ನು ಈ ರೀತಿ ಬರೆದುಕೊಂಡಿದ್ದರಂತೆ.. " ಜಿಂದಗಿ ಮೈ ಅಪ್ನೆ ಕಿರ್ದಾರ್ ಐಸೆ ನಿಭಾನಾ,ಪರ್ದಾ ಗಿರ್ನೆ ಕೆ ಬಾದ್ ಭೀ ತಾಲಿಯಾನ್ ಭಜತಿ ರಹ್ನಿ ಚಾಹಿಯೆ..."
ಅಂದರೆ.. ಜೀವನೆಂಬ ಎಂಬ ರಂಗಮಂಚದಲ್ಲಿ ನಾವು ಬಣ್ಣ ಹಚ್ಚಿದ ಪಾತ್ರಕ್ಕೆ ನಾವು ಹೇಗೆ ಜೀವ ತುಂಬಬೇಕು ಎಂದರೆ,ಪರದೆ ಇಳಿದ ಮೇಲೂ... ಜನ ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಬಾರದು!
ಆಹಾ.. ಎಂತಹ ಮಾತು.ಅದು ಅವರ ಬಾಳಿನಲ್ಲಿಯೇ ಅಕ್ಷರಶಃ ನಿಜವಾಗಿ ಹೋಗಿತ್ತು.ಕರ್ನಲ್ ಮುನೀಂದ್ರ ನಾಥ್ ರಾಯ್ ಅವರ ಪಾರ್ಥಿವ ಶರೀರ ತ್ರಿವರ್ಣ ಹೊದ್ದುಕೊಂಡು ಅವರ ಮನೆಯಂಗಳಕ್ಕೆ ಬಂದಾಗ,ಅವರ ಪುಟ್ಟ ಮಗಳ ಹಾಗೂ 9 ಗೂರ್ಖಾ ರೈಫಲ್ಸ್ ಯೋಧರ ಜೋರಾದ ಘೋಷಣೆ ಹಾಗೂ ಅಲ್ಲಿ ಸೇರಿದ್ದ ಅಷ್ಟೂ ಜನರ ಕಣ್ಣಲ್ಲಿ ನೀರು ಜಿನಗುವುದು... ತುಂಬಾ ಹೊತ್ತಿನವರೆಗೆ ಆ ದಿನ ನಿಂತಿರಲೇ ಇಲ್ಲ!!!
ಇದರಲ್ಲಿರುವ ಇಂತಹದ್ದೇ ಐವತ್ತು ಕಥೆಗಳು ನಿಮ್ಮನ್ನು ಖಂಡಿತವಾಗಿಯೂ ಸಿಕ್ಕಾಪಟ್ಟೆ ಕಾಡಿ ಬಿಡುತ್ತದೆ.ಸೈನಿಕರ ಕಥೆಗಳೇ ಹಾಗೆ ಅಲ್ಲವೇ..
ಸೈನಿಕರ ಕಥೆಯನ್ನೇ ಕಥಾ ಸಂಕಲನವನ್ನಾಗಿ ಬರೆದುದಕ್ಕಾಗಿ ಲೇಖಕರಿಗೆ ವಿಶೇಷ ಅಭಿನಂದನೆಗಳು.ಒಂದೊಂದು ಕಥೆಯೂ ಹೆಚ್ಚು ಕಡಿಮೆ ಮೂರು ಪೇಜಿನಷ್ಟು ಇದೆ.ಎಲ್ಲಾ ಕಥೆಯೂ ಇಷ್ಟವಾಯಿತು.ಓದಿರದಿದ್ದರೆ ನೀವೂ ಓದಿ,ನಮ್ಮ ದೇಶದ ನಿಜವಾದ ಹೀರೋಗಳದ್ದೇ ಕಥೆಗಳಿದು...
#ವೀರಗಾಥೆ - ಯೋಧರ ಅಜ್ಞಾತ ಸಾಹಸ ಕಥನಗಳು
ಲೇಖಕರು - #ಡಾ_ಸಿಂಧೂ_ಪ್ರಶಾಂತ್
#ಪುಸ್ತಕಗಳು
Ab Pacchu
Comments
Post a Comment