ಸಾರ್ಥಕ್ಯ ಭಾವದ ಪ್ರಕೃತಿಗೆ ಸ್ವಾರ್ಥ ಎಂದರೆ ಏನೆಂದೇ ಗೊತ್ತಿಲ್ಲ..
ಇರುವೆಗಳ ದಿಬ್ಬಣದಲ್ಲಿ ಶಿಸ್ತು ಇದೆ.ಸಾಲು ತಪ್ಪದೇ ಜಾಗ್ರತೆಯಲ್ಲಿ ನಿಧಾನವಾಗಿ ಹೊತ್ತುಕೊಂಡು ಸಾಗುವ ಅವುಗಳದ್ದೊಂದು ಭೋಜನ,ಬೆಚ್ಚನೆಯ ಗೂಡು ಎಂಬ ಗುರಿ ತಲುಪಿಸಿ ಬಿಟ್ಟರೆ,ಅವುಗಳಿಗೆ ಅದೇನೋ ಒಂದು ಸಾರ್ಥಕದ ಭಾವ.
ಬೆಟ್ಟದ ಯಾವುದೋ ಅಪರಿಚಿತ ಬುಡದಲ್ಲಿ ಹುಟ್ಟಿ,ಸೆಲೆಯಾಗಿ ತೊರೆಯಾಗಿ ಜಿಗಿದು ನಲಿದು ಓಡುತ್ತಾ ತನ್ನಷ್ಟಕ್ಕೆ ತನ್ನದೊಂದು ಹಾಡು ಗುನುಗುತ್ತಾ ಹರಿಯುವ ನದಿಗೆ,ಕಡಲನ್ನು ಒಮ್ಮೆ ಅಪ್ಪಿಕೊಂಡು ಬಿಟ್ಟರೆ ತಾನು ಹುಟ್ಟಿ ಹರಿದಿದ್ದಕ್ಕೊಂದೂ ಸಾರ್ಥಕದ ಭಾವ.
ಮಾವಿನ ಮರದಲ್ಲಿ ಕೋಗಿಲೆಯೇ ಬಂದು ಸಂಗೀತ ಕಚೇರಿ ನಡೆಸದಿದ್ದರೂ ಅದಕ್ಕೇನೂ ಬೇಜಾರಿಲ್ಲ,ಕೊನೆಯ ಪಕ್ಷ ತನ್ನದೊಂದು ಹಣ್ಣು ಯಾರೂ ತಿನ್ನದೇ ಉದುರಿ ಮಣ್ಣಾಗುವ ಮೊದಲು ಅಳಿಲುಗಳೋ ಗಿಳಿಗಳೋ ಬಂದು ಸ್ವಲ್ಪವೇ ಕಚ್ಚಿ ಬಿಟ್ಟರೂ ತಾನು ಫಲ ಕೊಟ್ಟಿದುದಕ್ಕೆ ಅದಕ್ಕೂ ಒಂದು ಸಾರ್ಥಕದ ಭಾವ.
ನಲುಗಿ ಹೋಗುವ ಕಾಡು ಹೂವಿಗೆ ಎಂತಹ ಗಾಳಿ,ಮಳೆಯ ಹೆದರಿಕೆಯೂ ಇಲ್ಲ.ಅದರ ಕಾತರ ಆತುರ ಇನ್ನಿಲ್ಲದಂತೆ ಇರುವುದು ಜೋತು ಬಿದ್ದು ಸಿಹಿ ಇರುವ ಬಣ್ಣದ ಚಿಟ್ಟೆಗಳಿಗಾಗಿಯೇ.ಅದು ಸಂಭವಿಸಿ ಬಿಟ್ಟರೆ ಆ ಒಂದು ಸಾರ್ಥಕ ಭಾವದೊಂದಿಗೆ ತೊಟ್ಟು ಕಳಚಿಕೊಂಡು ಮಣ್ಣಾಗಲು ಹೂವಿಗೂ ಬೇಸರವಿಲ್ಲ.
ಹಲಸೊಂದು ಹಾಗೇ ಹಣ್ಣಾಗಿ ಘಮಘಮಿಸಿ ಬಿಟ್ಟರೆ ಕರಡಿಗೆ ಯಾವತ್ತೂ ಹಸಿವು ಹೆಚ್ಚು.ಕೇವಲ ಹಲಸು ಮಾತ್ರವಲ್ಲ ತನ್ನ ಬಳಿಯೂ ಕರಡಿ ಬರಲಿ ಎಂದು ಜೇನು ಆಸೆ ಪಟ್ಟರೆ ಅದಕ್ಕೂ ಹಾಗೇ ಬರಡಾಗುವ ಮೊದಲು ಸಾರ್ಥಕವಾಗುವ ಭಾವವೇ ಹೆಚ್ಚು.
ಇಲ್ಲಿ ಎಲ್ಲವೂ ಮಣ್ಣಾಗುವ ಮೊದಲು ಇನ್ನಾರದೋ ಪಾಲಾಗಿ ಸಾರ್ಥಕ್ಯ ಮೆರೆಯುವ ಭಾವವೇ ಅಧಿಕವಾಗಿರುವುದು.ಎಲ್ಲಿಯೂ ಒಂಚೂರು ಹಿಡಿ ಸ್ವಾರ್ಥವಿಲ್ಲ.
ಪ್ರಕೃತಿಯೇ ಹಾಗೆ.
ತನ್ನದೆಲ್ಲವನ್ನೂ ಎಲ್ಲರಿಗೂ ಹಂಚಿ ಬಿಡುವುದರಲ್ಲಿಯೇ ಅದು ಸದಾ ಸುಖಿ ಹಾಗೂ ಮಗ್ನ.ತನಗಾಗಿ ಪ್ರಕೃತಿ ಏನನ್ನೂ ಎಂದಿಗೂ ಇಟ್ಟುಕೊಳ್ಳುವುದೇ ಇಲ್ಲ.
ಯಾವ ಮಾವಿನ ಗಿಡವೂ ತನ್ನದೊಂದು ಹಣ್ಣನ್ನು ಯಾರಿಗೂ ಕೊಡದೇ ಅಡಗಿಸಿಕೊಟ್ಟು ಕೊಂಡದ್ದನ್ನು ನಾವು ಯಾರೂ ಎಂದಿಗೂ ನೋಡಿಯೇ ಇಲ್ಲ.ಕೈ ಹಾಕಿ ಯಾರೂ ಕೂಡ ಮಾವು ಕೀಳಬಹುದು,ಕಚ್ಚಿ ತಿನ್ನಬಹುದು.ಹೂವು,ಮರ,ಮಣ್ಣು ಎಲ್ಲವೂ ಕೂಡ ಹಾಗೇ.ಎಲ್ಲವೂ ಎಲ್ಲರಿಗೂ ಮುಕ್ತ. ನಾವು ಬೇಲಿ ಹಾಕಿ ಇದು ನನ್ನದು ಎಂದು ಅಷ್ಟೇ ಹೇಳಬಹುದೇ ಹೊರತು ಪ್ರಕೃತಿಗೆ ಎಲ್ಲರೂ ಒಂದೇ.
ಶ್ರಿಮಂತನ ಅಂಗಳದಲ್ಲಿ ಬೆಳೆದು ಹೂ ನೀಡುವ ಗಿಡ ಬಡವನ ಅಂಗಳದಲ್ಲೂ ಅದೇ ರೀತಿ ಬೆಳೆದು ಹೂವು ಬಿಡುತ್ತದೆ.ಪ್ರಕೃತಿ ಎಂದರೆ ಹೀಗೆಯೇ. ಅದಕ್ಕೆ ಬಡವ ಬಲ್ಲಿದ ಮೇಲು ಕೀಳು ಎಂಬ ಭೇದವೇ ಇಲ್ಲ. ಅದು ಎಲ್ಲರನ್ನೂ ಸಮಾನವಾಗಿ ಪೊರೆಯುತ್ತದೆ.
ನಾವು ಪ್ರಕೃತಿಯಿಂದ ಕಲಿಯಬೇಕಾದ ಗುಣ ಅಂದರೆ ಇದೇ.ಅದೇ ಸಮಾನ ಹಾಗೂ ನಿಸ್ವಾರ್ಥ ಭಾವ.
ಆದರೆ ಮನುಷ್ಯ ಸ್ವಾರ್ಥಿ.ಅದರ ಗುಣಗಳನ್ನು ಕಲಿಯುವುದು ಬಿಡಿ.. ಅದನ್ನೇ ಸರ್ವನಾಶ ಮಾಡುವತ್ತ ಮನಸ್ಸು ಮಾಡುತ್ತಾನೆ. ಆದರೆ ಪ್ರಕೃತಿಗೂ ಮನುಷ್ಯನಿಗೆ ತಕ್ಕ ಪಾಠ ಕಲಿಸಲು ಬಹಳ ಚೆನ್ನಾಗಿಯೇ ಗೊತ್ತಿದೆ. ಕೇವಲ ಪ್ರಕೃತಿ ವಿಕೋಪದಂತಹ ಒಂದೆರಡು ಘಟನೆಗಳು ಸಂಭವಿಸಿದರೂ ಸಾಕು ಮನುಷ್ಯ ಎಂಬ ಜೀವಿ ಇನ್ನಿಲ್ಲದಂತೆ ತತ್ತರಿಸಿ ಬಿಡುತ್ತಾನೆ.
ಪ್ರಕೃತಿಯ ಗುಣಗಳು ಮಾತ್ರವಲ್ಲ,ಈ ಪ್ರಕೃತಿಯಲ್ಲಿ ಸಂಭವಿಸುವ ಎಲ್ಲವೂ ಕೂಡ ತುಂಬಾನೇ ಸುಂದರವಾದದ್ದು. ನಾವು ವಾವ್ ಅನಿಸುವ ಎಂತಹದ್ದೇ ನಿರ್ಮಾಣ ಮಾಡಿದರೂ ಪ್ರಕೃತಿಗಿಂತ ಸುಂದರವಾದದ್ದು ಈ ಭೂಮಿಯಲ್ಲಿ ಬೇರೆ ಏನು ಇದೆ ನೀವೇ ಹೇಳಿ.
ಅದರ ಮುಂದೆ ನಿಂತಾಗ ನಾವು ಜಸ್ಟ್ ಅದರ ಅಂದ ಚಂದವನ್ನು ಅನುಭವಿಸುವ ಮನಸ್ಸು ಮಾಡಬೇಕು ಅಷ್ಟೇ.ಹೇಗೆ ಡಿಸ್ಟರ್ಬ್ ಮಾಡಬಹುದು ಎಂಬ ಹುಚ್ಚು ಕನಸು ಕಾಣುವುದಲ್ಲ.
ಮೂಲ ರೂಪದಲ್ಲಿ ಕಚ್ಛಾವಾಗಿ ಇರುವ ಪ್ರಕೃತಿಯೇ ಎಂದಿಗೂ ಬಹಳ ಸೊಗಸಾಗಿ ಇರುವುದು.ವಸುಂಧರೆ ನಮಗೆ ಮಾತೆಯೂ ಹೌದು ಅಷ್ಟೇ ದೇವರೂ ಕೂಡ ಹೌದು.ಆ ಪೂಜ್ಯನೀಯ ಭಾವವೇ ಎಂದಿಗೂ ಅಧಿಕವಾಗಿರಬೇಕು.
ನಮಗಿಂತಲೂ ಅವಳೊಳಗಿನ ಜೀವಿಗಳಿಗೆ,ಹಕ್ಕಿಗಳಿಗೆ, ಪಕ್ಕಿಗಳಿಗೆ, ಹುಳು ಹುಪ್ಪಟೆಗಳಿಗೆ ಅವಳದ್ದೊಂದು ಪ್ರಕೃತಿಯ ಮೇಲೆ ನಮಗಿಂತಲೂ ಅಧಿಕ ಅಧಿಕಾರವಿದೆ..
ನಾಶವಾದ ಎಲ್ಲವನ್ನೂ ನಾಳೆಯೇ ನಿರ್ಮಿಸಿ ಬಿಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಾಗದ ಮಾತು. ಕನಿಷ್ಟ ಪಕ್ಷ ಇರುವುದನ್ನು ಉಳಿಸುವ ಮನಸ್ಸು ಮಾಡುವುದು ಕೂಡ ಯಾವುದೇ ಪ್ರಕೃತಿಯನ್ನು ಬೆಳೆಸುವುದಕ್ಕಿಂತ ಕಡಿಮೆ ಏನಲ್ಲ.
ಮುನಿಸಿಕೊಂಡಾಗ ವಿಕೋಪ ಗಳನ್ನು ಉಂಟು ಮಾಡುವುದು ಮಾತ್ರವಲ್ಲ ಇನ್ನೂ ಅತ್ಯದ್ಭುತ ಶಕ್ತಿ ಈ ಪ್ರಕೃತಿಗೆ ಇದೆ,ಅದರೊಟ್ಟಿಗಿನ ಒಂದೊಳ್ಳೆಯ ಒಡನಾಟದಲ್ಲಿ ಆರೋಗ್ಯವೂ ಸಹ ಇದೆ.
ಯಾವುದಾದರೂ ಮಾನಸಿಕ ಒತ್ತಡವೇ ಸುಮ್ಮನೆ ಹೋಗಿ ಜುಳು ಜುಳು ಎಂದು ಕಲ್ಲಿನ ಕೊರಕಲಿನಲ್ಲಿ ಹರಿಯುವ ಹೊಳೆಯ ಮುಂದೆ ಒಮ್ಮೆ ನಿಂತುಕೊಂಡು ಬಿಡಿ.ಕಾಡು ಹೊಳೆ ಕೂಡ ಅದೆಷ್ಟು ಚೆನ್ನಾಗಿ ನಿಮ್ಮನ್ನು ಹೀಲಿಂಗ್ ಮಾಡಬಲ್ಲದು ಎಂದು ಗೊತ್ತಾಗಬೇಕಾದರೆ ಹೊಳೆಯ ಮುಂದೆಯೇ ನಿಲ್ಲಬೇಕು ನೀವು ಹಾಗೂ ಇಂತಹದ್ದನ್ನೆಲ್ಲಾ ಅನುಭವಿಸಬೇಕಾದರೆ ಹೊಳೆಯೊಂದು ಮುಂದೆಯೂ ಹಾಡು ಗುನುಗುತ್ತಾ ಸಮೃದ್ಧವಾಗಿ ಹರಿಯಬೇಕು.
ಬರಿಗಾಲಲ್ಲಿ ಎಂದಾದರೂ ಮುಂಜಾನೆ ಇಲ್ಲವೆ ಮುಸ್ಸಂಜೆ ಗದ್ದೆ ಬದುವಲ್ಲಿ ಪಾದದಡಿಯನ್ನು ತಂಪು ಮಾಡಿಕೊಂಡು ಅಲ್ಲಿಯ ಹುಲ್ಲಿನ ದಾರಿಯಲ್ಲಿ ನಡೆದಿದ್ದೀರಾ..? ಪಾದದ,ಕಾಲಿನ ಮಸಾಜುಗಳಿಗೆ ಪಾರ್ಲರ್, ಸ್ಪಾ ಗಳಿಗೆ ಹಣ ಚೆಲ್ಲುವ ಬದಲು ಒಮ್ಮೆ ಅಲ್ಲೊಮ್ಮೆ ನಡೆದು ಬಂದು ನೋಡಿ...
ಕೆಸರು ಗದ್ದೆಗೆ ಇಳಿದರೆ ಕಾಲು ಬರೀ ಕೆಸರಾಗುವುದಲ್ಲ,ಅದೆಷ್ಟು ಶುಚಿ ಆಗುವುದು ಎಂದು ಗದ್ದೆಗೆ ಇಳಿದವನಿಗೆ ಮಾತ್ರ ಗೊತ್ತು.
ದಿನಾಲೂ ಸುತ್ತ ಮುತ್ತ ಸದಾ ಹಸಿರನ್ನೇ ನೋಡುತ್ತಿದ್ದರೆ ಕಣ್ಣಿಗೂ ತಂಪು,ಮನಸ್ಸಿಗೆ ತಂಪಿನ ಜೊತೆ ಜೊತೆಗೆ ಅದೆಷ್ಟೋ ವಿವರಿಸಲಾಗಾದ ನೆಮ್ಮದಿ.
ಹೊಳೆಯ ನೀರು ಅದೆಷ್ಟು ರುಚಿ,ಅದೆಷ್ಟು ಸಿಹಿ.
ಕಾಡು ಹಣ್ಣು ಪ್ರೂಟ್ಸ್ ಸ್ಟಾಲ್ ಗಳಲ್ಲಿ ದೊರೆಯುವುದಿಲ್ಲ.
ಕಾಡುಹೂವಿಗೆ ಅಲಂಕಾರದಲ್ಲಿ ಭಾಗಿಯಾಗಬೇಕು ಎಂಬ ಹಂಬಲವಿಲ್ಲ.
ಇದೆಲ್ಲವೂ ಹಳ್ಳಿಯಲ್ಲೇ ಇರುವುದು,ಇಂತಹ ಪ್ರಕೃತಿ ನಮ್ಮ ಸಿಟಿಯಲ್ಲಿ ಇಲ್ಲ.. ನಾವೇನು ಮಾಡಬೇಕು ಎಂದು ಹೇಳುವವರ ಸಂಖ್ಯೆ ಕೂಡ ನಮ್ಮಲ್ಲಿ ಕಮ್ಮಿ ಏನಿಲ್ಲ.
ನಾವು ಭಾರತೀಯರು ಹೇಳಿ ಕೇಳಿ ಪ್ರಕೃತಿ ಆರಾಧಕರು,ವೇದ ಕಾಲದಿಂದಲೂ ಪಂಚ ಭೂತಗಳ ಆರಾಧನೆಗೆ,ಪ್ರಕೃತಿಯೊಂದಿಗಿನ ಒಡನಾಟಕ್ಕೆ ನಮ್ಮಲ್ಲಿ ವಿಶೇಷ ಸ್ಥಾನವಿದೆ.ಮನಸ್ಸಿದ್ದರೆ ಸಾಧ್ಯವಾದಷ್ಟು ಹಸಿರನ್ನು ಸಿಟಿಯ ಮನೆಗಳಲ್ಲೂ ನಾವು ಬೆಳೆಸಬಹುದು.
ಒಂದು ತುಳಸಿ ಗಿಡ, ಒಂದಷ್ಟು ಗರಿಕೆ,ಕೆಂಪು ಲಂಗದ ದಾಸವಾಳ,ನೆಲದಲ್ಲಿ ಹೂ ಚೆಲ್ಲುವ ನೆಲಗುಲಾಬಿ ನಮ್ಮ ಸಿಟಿಯ ಮನೆಯಲ್ಲಿ ಅರಳಿದರೂ ಮನಸ್ಸಿಗೆ ಅದೆಷ್ಟೋ ಸಮಾಧಾನ. ಟೆರೇಸಿನಲ್ಲಿ ಬೆಂಡೆಕಾಯಿ, ಅಲಸಂಡೆಯಂತಹ ಕೃಷಿ ಬೆಳೆದು ಬುಟ್ಟಿ ಹಿಡಿದು ಕೊಯ್ಯುವಾಗ ಖುಷಿ ಪಟ್ಟ ಅದೆಷ್ಟು ಮಂದಿ ನಮ್ಮಲ್ಲಿಯೇ ಇದ್ದಾರೆ.ಯಾವುದಕ್ಕೂ ಮನಸ್ಸು ಮಾಡಬೇಕು.
ನಮ್ಮದು ಮನೆ ನೆಲದ ಮೇಲೆಯೇ ಇಲ್ಲ,ಆಕಾಶದೆತ್ತರದ ಫ್ಲ್ಯಾಟ್ ನಲ್ಲಿದೆ ಎಂದು ಹೇಳುವವರೂ ಕೂಡ ಪಾಟ್ ನಲ್ಲಿ ಒಂದಷ್ಟು ಮುದ ನೀಡುವ ದೇಸಿ ಹೂಗಳನ್ನು ಅರಳಿಸಿ ಮನಸ್ಸಿಗೆ ಸಾಕಷ್ಟು ಸಮಾಧಾನ ತಂದುಕೊಳ್ಳಬಹುದು.ವಿದೇಶಿ ಹೂವಿನಲ್ಲಿ ಏನಿದೆ ಅತಂಹ ಮಣ್ಣಾಂಗಟ್ಟಿ.ಬೆಳೆಸುವುದಾದರೆ ನಮ್ಮಲ್ಲಿಯೇ ಎಷ್ಟೊಂದು ಸಣ್ಣಪುಟ್ಟ ಸುಂದರ ಹೂವಿನ,ಹುಲ್ಲುಗಳ ಗಿಡಗಳಿಲ್ಲ ನೀವೇ ಹೇಳಿ.
ಮನೆಗೆ ಗ್ರೀನ್ ಪೈಂಟ್ ಹೊಡೆದು, ಗೋ ಗ್ರೀನ್ ಅಂತ ಗ್ರೀನ್ ಶರ್ಟ್ ಹಾಕಿದ ಮಾತ್ರಕ್ಕೆ ಇಲ್ಲವೇ ಹ್ಯಾಪಿ ವಿಶ್ವ ಪರಿಸರ ದಿನ ಎಂದು ಪೋಸ್ಟ್ ಹಾಕಿ ಶುಭ ಕೋರಿದರೆ ಪರಿಸರದ ರಕ್ಷಣೆ ಆಗುವುದಿಲ್ಲ. ನಮ್ಮಿಂದ ಎಷ್ಟು ಪರಿಸರಕ್ಕೆ ಹಾನಿ ಆಗುವುದನ್ನು ತಪ್ಪಿಸಬಹುದೋ ಅದರಲ್ಲಿಯೇ ನಮ್ಮ ಮಾತ್ರವಲ್ಲ ನಮ್ಮ ಸಮಸ್ತ ಮನುಕುಲದ ಭವಿಷ್ಯವೂ ಇದೆ.
ಈ ಒಂದೇ ದಿನ ಪರಿಸರದ ದಿನ ಆಗಿರದೆ.. ದಿನವೂ ಪರಿಸರದ ಬಗ್ಗೆ ಕಾಳಜಿ ಬೆಳೆಯಲಿ,ಅದರ ರಕ್ಷಣೆ, ಪಾಲನೆ ಪೋಷಣೆ ಇನ್ನಿಲ್ಲದಂತೆ ಮುಂದುವರಿಯಲಿ ಅದರ ಜೊತೆ ಜೊತೆಗೆ ಪರಿಸರ ಕಲಿಸುವ ಪಾಠಗಳನ್ನು ತಿಳಿಯುತ್ತಾ,ಅದರ ಗುಣಗಳನ್ನು ಸಾಧ್ಯ ಆದಷ್ಟು ನಾವು ಕೂಡ ಸಾಧ್ಯ ಆದಷ್ಟು ಅಳವಡಿಸಿಕೊಳ್ಳುವ ಎಂದು ಹೇಳುತ್ತಾ ಪ್ರಕೃತಿಯನ್ನು ಪ್ರೀತಿಸುವ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.
ಮಾತೆ ವಸುಂಧರೆ ಸದಾ ಸುಖವಾಗಿರಲಿ,
ಅವಳ ಪಚ್ಚೆಸೀರೆ ಎಂಬ ಆ ಪಟ್ಟೆಸೀರೆ ಎಂದಿಗೂ ಮಸುಕಾಗದಿರಲಿ💚💚
.....................................................................................
#ಏನೋ_ಒಂದು
Ab Pacchu
Moodubidire
Comments
Post a Comment