ಮೊದಲ ಬಿರಿಯಾಣಿ ಮತ್ತು ಪಾಕ ಪ್ರವೀಣ..

 


ಬಿರಿಯಾನಿ ತಿನ್ನುವುದು ಎಂದರೆ ಎಲ್ಲರಿಗೂ ಬಾರೀ ಇಷ್ಟ.ವೆಜ್ ಆಗಲಿ ನಾನ್ವೆಜ್ ಆಗಲಿ ಆ ಉದುರುದುರಾದ ಭಾಸ್ಮತಿ ಅನ್ನದ ಘಮವನ್ನು ಮೂಗಿಗೊಂದಿಷ್ಟು ಆಹ್ವಾನಿಸಿಕೊಂಡು,ಹಾಗೇ ಆಘ್ರಾಣಿಸಿ ಆಘ್ರಾಣಿಸಿಯೇ ಮನಸ್ಸೋಯಿಚ್ಛೆ ಬಿರಿಯಾನಿಯನ್ನು ಬಾಯಿ ಚಪ್ಪರಿಸಿಕೊಂಡು ಸವಿದವರೇ ನಾವು ನೀವು ಎಲ್ಲರೂ.ಆದರೆ ಬಿರಿಯಾನಿ ಮಾಡುವುದು? ಅದು ಮಾತ್ರ ಕಂಡಾಪಟ್ಟೆ ಕಷ್ಟವೇ. 


ಕಷ್ಟಕ್ಕಿಂತಲೂ ಬಹು ಸಾಮಗ್ರಿಗಳನ್ನು ಬಳಸಿ ಬಹು ಹಂತದಲ್ಲಿ ಮಾಡುವ ಅಡುಗೆಯಾಗಿರುವುದರಿಂದ ನಮ್ಮಲ್ಲಿ ಹೆಚ್ಚಿನವರಿಗೆ ಈಗಲೂ ಅದೊಂತರಹದ ಕ್ಲಿಷ್ಟಕರ ರಾಕೇಟು ಸೈನ್ಸು ಎಂಬಂತಹ ಭಾವವೇ ಅಧಿಕವಾಗಿ ಬಿಟ್ಟಿದೆ.


ಮೊದಲ ಪ್ರಯತ್ನದಲ್ಲಿಯೇ ತಕ್ಕ ಮಟ್ಟಿಗೆ ಯಶಸ್ವಿಯಾದರೆ ಆ ನಂತರ ನಮ್ಮ ನಮ್ಮ ಮನೆಯಲ್ಲೊಂದು ಬಿರಿಯಾನಿಯ ಸುವಾಸನೆ ನಿರಂತರವಾಗಿ ಆವಾಗವಾಗ ಘಮಘಮಿಸುತ್ತಲೇ ಇರುತ್ತದೆ.


ಒಂದೆರಡು ಪ್ರಯತ್ನದಲ್ಲಿ ಸರಿಯಾಗಿ ಬಿರಿಯಾನಿ ಬರದಿದ್ದರೆ ಆವಾಗ ಮನೆಯಲ್ಲಿಯೇ ಕಷ್ಟಪಟ್ಟು ಬೆವರು ಸುರಿಸಿಕೊಂಡು ಬಿರಿಯಾನಿ ಮಾಡಿಕೊಳ್ಳುವ ಆ ನಮ್ಮ ಉಮೇದು ನಿಧಾನಕ್ಕೆ ಕರಗುತ್ತಾ ಹೋಗಿ,ಕೊನೆಗೆ ಹೋಟೆಲ್-ರೆಸ್ಟೋರೆಂಟ್ ಗಳಿಗೆ ನಡೆದು ಬಿರಿಯಾನಿ ತಿನ್ನುವತ್ತ ಮನಸ್ಸು ಮಾಡುತ್ತಾರೆ ನಮ್ಮಲ್ಲಿ ಹೆಚ್ಚಿನವರು. 


ಭಾರತದ ಜನರ ಮನೆ ಬಾಗಿಲಿಗೆ ಬರುವ ಫುಡ್ ಡೆಲಿವರಿಯಲ್ಲಿ ಕೂಡ  ಅತೀ ಹೆಚ್ಚಿನ ಸ್ಥಾನವನ್ನು ಈ ಬಿರಿಯಾನಿಯೇ ಆಕ್ರಮಿಸಿಕೊಂಡಿದೆ ಎನ್ನುವುದು ಕೂಡ  ನಮ್ಮಲ್ಲಿ ಹೆಚ್ಚಿನ ಜನರು ಬಿರಿಯಾನಿಯನ್ನು  ಸ್ವತಃ ಮಾಡಿಕೊಳ್ಳುವುದಕ್ಕಿಂತಲೂ ಮನೆಗೇ ತರಿಸಿಕೊಂಡು ತಿನ್ನುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. 


ನಿಜವಾಗಿಯೂ ಬಿರಿಯಾನಿ ಮಾಡುವುದಕ್ಕೆ ಒಂದು ಸರಿಯಾದ ಸಿದ್ಧತೆ,ಅಗತ್ಯ ಸಾಮಗ್ರಿಗಳು,ಒಂದೊಳ್ಳೆಯ ತಾಳ್ಮೆ,ಬೇಕಾಗುವ ವ್ಯವಧಾನ, ಕ್ರಮ ಬದ್ಧವಾದ ಅದರದ್ದೊಂದು ಪ್ರೊಸಿಜರ್,ಹಾಗೂ ಬಿರಿಯಾನಿ ಮಾಡುವುದರಲ್ಲಿ ಎತ್ತಿದ ಕೈ ಎಂಬಂತಹ ಅನುಭವವಂತು ತಕ್ಕ ಮಟ್ಟಿಗೆ ಬೇಕೆ ಬೇಕು.ಆಗಲೇ ಒಂದು  ಸರಿಯಾದ ಬಿರಿಯಾನಿ ಸಿದ್ಧವಾಗಿ ಬಿಡುವುದು. 



ಈ ಬಿರಿಯಾನಿ ಮಾಡುವುದರಲ್ಲಿ ಅದರಲ್ಲೂ ಮೊದಲ ಬಾರಿಗೆ ಬಿರಿಯಾನಿ ಮಾಡುವುದರಲ್ಲಿ ತುಂಬಾ ಗಮ್ಮತ್ ಕೂಡ ಇರ್ತದೆ ಆಯ್ತಾ.


ಬಿರಿಯಾನಿ ಅಂದ ಕೂಡಲೇ ನನ್ನಲ್ಲೂ ಭಾಸ್ಮತಿ ರೈಸಿಗಿಂತಲೂ ಅಧಿಕವಾಗಿ ಅದರ ಮೊದಲ ನೆನಪೇ ಅತೀ ಹೆಚ್ಚು ಘಮ ಘಮಿಸಿ ಬಿಡುತ್ತದೆ. ಹೇಳಿ ಕೇಳಿ ನಾನು ಅಂತಹ ದೊಡ್ಡ ಬಿರಿಯಾನಿಯ ಕಟ್ಟರ್ ಅಭಿಮಾನಿ ಅಲ್ಲ. ಆದರೆ ನನ್ನ ಹಲವು ಮರೆಯಲಾಗದ ಫುಡ್ ನೆನಪುಗಳಲ್ಲಿ ಈ ಬಿರಿಯಾನಿಯ ನೆನಪು ಕೂಡ ಒಂದಷ್ಟು ಇದೆ. 


ಬ್ಯಾಚುಲರ್ ಗಳು ಮನೆಯಿಂದ ದೂರವಿದ್ದಾಗ ಅದರಲ್ಲೂ ಪರ ಊರಿನಲ್ಲಿ ಕೆಲಸಕ್ಕೆ ಹೋದಾಗ ಆರೋಗ್ಯ ಹಾಗೂ ಗಳಿಸಿದ  ಸಂಪಾದನೆಯ ಉಳಿತಾಯದ ದೃಷ್ಟಿಯಿಂದ ದಿನಾಲೂ ಹೋಟೆಲ್ ಗೆ ಹೋಗದೆ ಸ್ವಯಂಪಾಕಕ್ಕೆ ಒಗ್ಗಿಕೊಳ್ಳುವುದು ಅವಶ್ಯಕ.ಹಾಗೇ ಕೆಲಸಕ್ಕೆಂದು ಹೋಗಿದ್ದ ನಾವು ಆರು ಜನ ಒಂದೇ ರೂಮಿನಲ್ಲಿ ಇದ್ದೆವು.ಮನೆಯ ರೀತಿಯ ದೊಡ್ಡ ರೂಮ್ ಅದು.ಅಡುಗೆ ಸೌಲಭ್ಯ ಇಲ್ಲದ ಪಿ.ಜಿ ಎಂದು ಹೇಳಲು ಅಡ್ಡಿಯಿಲ್ಲ. 



ರೂಮಿನಲ್ಲಿ ಇದ್ದ ಎಲ್ಲಾ ಗೆಳೆಯರಿಗೂ ಅಡುಗೆ ಮಾಡಲು ಬರುತ್ತಿರಲಿಲ್ಲ.ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಅಭಿರುಚಿ ಇತ್ತು.ಒಬ್ಬನು ಯಾವಾಗಲೂ ಮೊಬೈಲ್ ನಲ್ಲಿ ಯಾವುದೋ ಲಾಟ್ ಪೋಟ್ ಗೇಮ್ ಆಡುವುದರಲ್ಲಿ ನಿಪುಣ ಆಗಿದ್ದನು,ಮತ್ತೊಬ್ಬ ರೂಮಿನಲ್ಲಿ ಇದ್ದಷ್ಟು ಹೊತ್ತು ಟಿವಿಯಲ್ಲಿ ಸದಾ ಮೂವಿ,ಕ್ರಿಕೆಟ್,ನ್ಯೂಸ್, ರಿಯಾಲಿಟಿ ಶೋ ನೋಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿ.


ಅದೇ ರೀತಿಯಲ್ಲಿ ಇನ್ನಿಬ್ಬರು ಕೂಡ ಇದ್ದರು.ಅವರಲ್ಲಿ ಒಬ್ಬ ಭಯಂಕರ ಭಗ್ನ ಪ್ರೇಮಿಯಾಗಿದ್ದರೆ ಮತ್ತೊಬ್ಬ ಹಲವು ಪ್ರಯತ್ನಗಳ ನಂತರ ಲವ್ ಅನ್ನು ಅಗಷ್ಟೇ ದಕ್ಕಿಸಿಕೊಂಡು ಸ್ವರ್ಗದ ಬಾಗಿಲಿನಲ್ಲಿಯೇ ನೇತಾಡುತ್ತಾ ಮೊಬೈಲ್ ಗೆ ಸದಾ ಜೋತು ಬಿದ್ದಿದ್ದ.


ಇಂತಹ ಇಬ್ಬರು ವಿಭಿನ್ನ ಪ್ರೇಮಿಗಳು ಒಂದೇ ರೂಮಿನಲ್ಲಿ ಇದ್ದರೆ ಸ್ವರ್ಗ ನರಕ ಎರಡರ ಸಾಕ್ಷಾತ್ಕಾರವೂ ಉಳಿದವರಿಗೆ ಕ್ಷಣ ಕ್ಷಣವೂ ಆಗುತ್ತಲೇ ಇರುತ್ತದೆ.ವಿಪರ್ಯಾಸವೆಂದರೆ ಭಗ್ನ ಪ್ರೇಮಿಗೆ ವಿರಹದ ನೋವಿನಲ್ಲಿ ಯಾವತ್ತೂ ಊಟವೇ ಸೇರುತ್ತಿರಲಿಲ್ಲವಾದರೆ,ಪ್ರೇಮಖೈದಿಗೆ ಗಾಢವಾದ ಪ್ರೀತಿಯಲ್ಲಿ ಮುಳುಗಿ ಹಸಿವೆಯೇ ಆಗುತ್ತಿರಲಿಲ್ಲ.ಹಾಗಾಗಿ ಅವರಿಬ್ಬರೂ ಕೂಡ ಅಡುಗೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ನನಗೂ ಅಷ್ಟಾಗಿ ಅಡುಗೆ ಬರುತ್ತಿರಲಿಲ್ಲ.


ಆದರೂ ನಮ್ಮಲ್ಲಿ ಅಡುಗೆಗೆ ಅಂತ ಒಬ್ಬ ಫ್ರೆಂಡ್ ಇದ್ದ.ನಮ್ಮೆಲ್ಲರ ಪಾಲಿಗೆ ಅವನೇ ನಿಜವಾದ ನಳ ಮಹಾರಾಜ,ಪಾಕಪ್ರವೀಣ ಎಲ್ಲವೂ.ಊರು ಬೇಡ, ಹೆಸರು ಬೇಡ,ಹಾಗಾಗಿ ಸದ್ಯಕ್ಕೆ ಅವನ ಹೆಸರು ಇಲ್ಲಿ ಪ್ರವೀಣ ಎಂದೇ ಇರಲಿ.ಅವನನ್ನೇ ನಂಬಿಕೊಂಡು ನಾವೆಲ್ಲರೂ ನಗರದ ರೂಮ್ ವಾಸ್ತವ್ಯಕ್ಕೆ ಕಾಲಿಟ್ಟಿದ್ದು.ಮೊದಲೇ ಅವನಲ್ಲಿ ಹತ್ತಾರು ಬಾರಿ ಕೇಳಿದ್ದೆವು  "ಹೇಯ್ ಇಕನಾ.. ನಿನಗೆ ಅಡುಗೆ ಮಾಡ್ಲಿಕ್ಕೆ ಎಲ್ಲಾ ಬರ್ತದೆ ಅಲಾ,ನಿನ್ನನ್ನು ಒಬ್ಬನನ್ನೇ ನಂಬಿ ನಾವು ರೂಮ್‌ನಲ್ಲಿ ಅಡುಗೆಯ ಸಾಹಸಕ್ಕೆ ಕೈ ಹಾಕ್ತಿರುವುದು " ಎಂದು ಪದೇ ಪದೇ ಅವನಿಗೆ ಹೇಳಿದ್ದೆವು.


ನಿಜ ಹೇಳಬೇಕೆಂದರೆ ಅವನು ಕೂಡ ನಮ್ಮ ಹಾಗೆಯೇ. ಅವನಿಗೆ ಸ ಅಡುಗೆ ಮಾಡ್ಲಿಕ್ಕೆ ಎಲ್ಲಾ ಎಂತಸ ಬರುವುದಿಲ್ಲ ಆಯ್ತಾ.ಆದರೆ ಅವನು ಹುಟ್ಟು ಸಾಹಸಿ.ಇಂಗು ತೆಂಗು ಎಲ್ಲಾ ಇದ್ದರೆ ಮಂಗ ಕೂಡ ಫ್ರೈಡ್ ರೈಸ್ ಮಾಡಬಲ್ಲ, ಬಿರಿಯಾನಿ ಮಾಡಬಲ್ಲ ಎಂಬ ಸಿದ್ಧಾಂತವನ್ನೇ ಬಲವಾಗಿ ನಂಬಿದವನು.


ಆದರೂ ಗೆಳೆಯರೆಲ್ಲಾ ಪದೇ ಪದೇ ಒತ್ತಾಯ ಮಾಡಿ ಕೇಳಿದಾಗ ಅವನು ಕೂಡ ರಾಗವಾಗಿಯೇ ಹೇಳಿದ್ದ " ನನಗೆ ದೊಡ್ಡ ಐಟಂ ಗಳು, ಬಿರಿಯಾನಿ,ಚೈನೀಸ್ ಆ ತರಹದ್ದೆಲ್ಲಾ ಅಷ್ಟಾಗಿ ಬರಲ್ಲ, ಮ್ಯಾಗಿ ಹಾಗೂ ರೆಡಿಮೇಡ್ ಪೌಡರ್ ಹಾಕಿ ಬಾಕಿ ಸಾಂಬಾರ್, ರಸಂ ಹಾಗೂ ಅನ್ನ  ಮಾಡ್ಬಹುದು" ಎಂದು ತನ್ನ ಅಡುಗೆಯ ವ್ಯಾಪ್ತಿ ಇಷ್ಟೇ ಎಂದು ಹೇಳಿದ್ದ.



"ಓಹ್ ಅಣ್ಣಾ .. .ನಾವು ಹೋಟೆಲ್ ಉದ್ಯಮ ನಡೆಸ್ಲಿಕ್ಕೆ ಇಲ್ಲಿಗೆ ಬರ್ಲಿಲ್ಲ ..ಅನ್ನ ಸಾಂಬಾರು ಹಾಗೂ ಯಾವುದಾದರೂ ಒಂದೆರಡು ತಿಂಡಿ ಮಾಡಿದರೆ ಅಷ್ಟೇ ಸಾಕು ನಮಗೆ..ನೀನು ಏನೇ ಮಾಡಿದರೂ.. ನಿನಗೆ ಬೇಕಾದ ಸಹಾಯ, ಸಹಕಾರ ಎಲ್ಲಾ ನಾವೆಲ್ಲರೂ ಮಾಡುತ್ತೇವೆ.. ಎಂದು ಅವನಿಗೆ ಸಿಕ್ಕಾಪಟ್ಟೆ ಹುರಿದುಂಬಿಸಲಾಗಿತ್ತು.ಹಾಗಾಗಿ ಅವನೂ ಕೂಡ ಅದಕ್ಕೆ ಒಪ್ಪಿಕೊಂಡು ನಮ್ಮ ರೂಮಿನಲ್ಲಿ ಹೆಚ್ಚಾಗಿ ಅವನೇ ಯಾವಾಗಲೂ ಅಡುಗೆ ಮಾಡುತ್ತಿದ್ದ. 


ಮೊದಲು ಮೊಬೈಲ್ ನಲ್ಲಿ ಅವನ ಅಮ್ಮ ನೀಡುತ್ತಿದ್ದ  ಸೂಕ್ತ ಮಾರ್ಗದರ್ಶನದೊಂದಿಗೆ ಅವನು ಅನ್ನ,ಸಾಂಬಾರು,ಚಟ್ನಿ,ಒಂದು ರೇಂಜಿಗೆ ದೋಸೆ,ಸಜ್ಜಿಗೆ,ಕಡ್ಲೆ ಉಪ್ಪುಕರಿ,ಅವಲಕ್ಕಿ ಎಲ್ಲಾ ಮಾಡಿ ಅದರಲ್ಲಿಯೇ ಬಹಳ ತಜ್ಞನಾಗಿ ಬಿಟ್ಟ.


ಮೊದಲು ರೂಮಿನಲ್ಲಿ ತುರಿಮಣೆ ಇಲ್ಲದಿದ್ದರೂ ಅವನ ಅತಿಯಾದ ಉತ್ಸಾಹ ಹಾಗೂ ಒತ್ತಾಯದ ಮೇರೆಗೆ ತೆಂಗಿನಕಾಯಿ ತುರಿಯಲು ಅದೂ ಕೂಡ ನಮ್ಮ ರೂಮ್ ಸೇರಿ ಬಿಟ್ಟಿತು.ಆ ನಂತರ ಮಸಾಲೆಯನ್ನು ಕಾಯಿತುರಿ ಯೊಂದಿಗೆ ಮಿಕ್ಸರ್ ನಲ್ಲಿ ಕಡೆದೇ ಸಾಂಬಾರ್ ಗಳನ್ನು ಮಾಡತೊಡಗಿದ ಪ್ರವೀಣ.ಆ ನಂತರ ಸೇಮೆದಡ್ಡೆಯ(ಒತ್ತು ಶ್ಯಾವಿಗೆ)ಮಣೆ,ಇಡ್ಲಿ ಪಾತ್ರೆ ಕೂಡ ಬಂದು ಬಿಟ್ಟಿತು.ಎಲ್ಲವೂ ಅವನ ಆಸಕ್ತಿ ಹಾಗೂ ಒತ್ತಾಯದ ಮೇರೆಗೆ.


ರೂಮಿನ ಪಕ್ಕದಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಮೊದಲೇ ಅಕೌಂಟ್ ಕೂಡ ಓಪನ್ ಮಾಡಿದ್ದೆವು.ಬೇಕಾದಾಗ ಅಡುಗೆ ಸಾಮಾನುಗಳನ್ನು ತಗೊಂಡು ಬಂದು ವಾರಾಂತ್ಯದಲ್ಲಿ ಅಂಗಡಿಯ ಹಣವನ್ನು ಎಲ್ಲಾ ಗೆಳೆಯರು ಶೇರ್ ಮಾಡಿಕೊಂಡು ಕೊಡುತ್ತಿದ್ದೆವು. ನಮ್ಮ ಪ್ರವೀಣನ ಅಡುಗೆ ಉಮೇದು ಜಾಸ್ತಿಯಾಗುತ್ತಾ ಹೋದಂತೆ ಅಂಗಡಿಯಲ್ಲಿನ ನಮ್ಮ ಅಕೌಂಟಿನ ಪುಸ್ತಕದಲ್ಲಿ ಬರೆಯುತ್ತಿದ್ದ ಕೌಂಟಿನ ಮೊತ್ತವೂ ಕೂಡ ಹಾಗೇ ನಿಧಾನಕ್ಕೆ ಏರುತ್ತಾ ಹೋಗತೊಡಗಿತು. 


ಒಟ್ಟಿನಲ್ಲಿ  ನಮ್ಮ ಪ್ರವೀಣ ಹೊಸತನ್ನು ಮಾಡಿ ನಮಗೆ ಬಡಿಸುವ ಉತ್ಸಾಹದಲ್ಲಿ ಇದ್ದ.ನಿಜವಾಗಿಯೂ ಅವನ ಅಡುಗೆಯಲ್ಲಿ ಅಂತಹ ಯಾವುದೇ ಮ್ಯಾಜಿಕ್ ಇರದಿದ್ದರೂ.. ಆಹಾ... ಓಹೋ.. ಎನ್ನಲು ನಾವು ಯಾವತ್ತೂ ಮರೆಯುತ್ತಿರಲಿಲ್ಲ.ಇಲ್ಲದಿದ್ದರೆ ಅವನಿಗೆ ಅಡುಗೆ ಮಾಡುವ ಉಲ್ಲಾಸ ಉತ್ಸಾಹ ಕುಂಠಿತವಾಗಿ ಕೊನೆಗೆ ಅಡುಗೆ ಗೊತ್ತಿಲ್ಲದ ನಮ್ಮ ಮೇಲೆ ಕೂಡ ಅಡುಗೆಯ  ಜವಾಬ್ದಾರಿಗಳು ಬರಬಹುದು ಎಂದು ಗೆಳೆಯರೆಲ್ಲರೂ ಪ್ರವೀಣ ಏನೇ ಮಾಡಿದರೂ ಸಿಕ್ಕಾಪಟ್ಟೆ   ಹೊಗಳುತ್ತಿದ್ದೆವು.


ನಮ್ಮ ಈ ಪಾಕ ಪ್ರವೀಣನಿಗೆ ಒಂದು ಮಿಕ್ಸರ್, ಗ್ಯಾಸ್ ಸ್ಟೌವ್, ಒಂದಿಷ್ಟು ಪಾತ್ರೆ,ತೆಂಗಿನಕಾಯಿ ತುರಿಯುವ ಮಣೆ, ಹಾಗೂ ಅಂಗಡಿಯಲ್ಲಿ ಸಿಗುವ ಕೊರಿಯಾಂಡರ್ ಪೌಡರ್, ಜೀರಾ ಪೌಡರ್, ಅರಶಿನದ ಪೌಡರ್,ಇತ್ಯಾದಿ ಇತ್ಯಾದಿ ಚೋಟ ಚೋಟ ಪ್ಯಾಕೇಟ್ ಗಳಲ್ಲಿ ಸಿಗುವ ಪೌಡರ್ ಇದ್ದು ಬಿಟ್ಟರೆ ನಾನು ಹೇಗೋ ಯಾವುದೇ ಅಡುಗೆ ಮಾಡಿಬಿಡಬಲ್ಲೆ ಎಂಬ ಒಂದು ದಿವ್ಯ ಆತ್ಮವಿಶ್ವಾಸ ಯಾವಾಗ ಅವನಲ್ಲಿ ಗಟ್ಟಿಯಾಗಿ ಮೂಡ ತೊಡಗಿತೋ ನೋಡಿ... ಆವಾಗಲೇ ಅವನನ್ನು ದೂರದಿಂದಲೇ ಕೈ ಬೀಸಿ ಕರೆದದ್ದು ಈ ಬಿರಿಯಾನಿ ಎಂಬ ಅತೀ ಉದ್ದದ ಅಡುಗೆ.


ಒಂದು ದಿನ ಎಲ್ಲರೂ ರೂಮಿನಲ್ಲಿ ಅವರವರ ಕಾರ್ಯದಲ್ಲಿ ಮಗ್ನರಾಗಿರುವಾಗ  ನಮ್ಮ ಪ್ರವೀಣ ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಘೋಷಣೆ ಮಾಡಿಯೇ ಬಿಟ್ಟ.." ನಾನು ಬಿರಿಯಾಣಿ ಮಾಡ್ತೇನೆ..! "


ಎಲ್ಲರಿಗೂ ಅದು ಬಿರಿಯಾನಿಯೇ ಆದರೂ  ಅವನಿಗೆ ಮಾತ್ರ ಅದು ಯಾವತ್ತಿಗೂ ಬಿರಿಯಾಣಿಯೇ. 


ಎಲ್ಲರೂ ಆಶ್ಚರ್ಯ ಹಾಗೂ ಭಯದಿಂದ ಮುಖದಲ್ಲಿ ಒಂದು ಪ್ರಶ್ನಾರ್ಥಕ ಚಿಹ್ನೆ ಮೂಡಿಸಿಕೊಂಡೇ ಅವನತ್ತ ತಿರುಗಿ ನೋಡಿದೆವು.ಆಶ್ಚರ್ಯ ಏಕೆಂದರೆ ಅವನ ಅಡುಗೆಯ ಉಮೇದು ರೆಡಿಮೇಡ್ ಪುಡಿ ಹಾಕಿ ಮಾಡುವ ಸಾಂಬಾರ್ ನಿಂದ ಈಗ  ಬಿರಿಯಾನಿ ಮಾಡುವ ಸಾಹಸಕ್ಕೆ ಬಂದು ನಿಂತಿದ್ದಕ್ಕೆ,ಭಯ ಏಕೆಂದರೆ ಈ ಅಣ್ಣ ಬಿರಿಯಾನಿ ಮಾಡಿ ಅದು ಕೊನೆಗೆ ಅನ್ನದ ಉಪ್ಪಿಟ್ಟು ಆಗಿ ಬಿಟ್ಟರೆ ಶಹಭಾಷ್ ಹೇಳಲು ಸ್ವಲ್ಪ ಕಷ್ಟ ಆಗಿಬಿಡಬಹುದು ಎಂದು.


ಏಕೆಂದರೆ ಅದಕ್ಕಿಂತ ಮೊದಲು ಈ ಜನ ರೈಸ್ ಬಾತ್ ಹಾಗೂ ಫುಲಾವ್  ಮಾಡಿದ್ದರೂ ಅವನು ನಿಜವಾಗಿಯೂ ಮಾಡಿದ್ದು ಯಾವುದು ಎಂದು ಅವನೇ ನಮಗೆ ಬಾಯಿ ಬಿಟ್ಟು ಹೇಳುವವರೆಗೂ ಅದು ಯಾವ ತಿಂಡಿ ಎಂದು ನಮಗೆ ಸ  ಗೊತ್ತಾಗುತ್ತಿರಲಿಲ್ಲ.ಅಂತಹ ಯಾವುದೇ ವ್ಯತ್ಯಾಸವೇ ಇರುತ್ತಿರಲಿಲ್ಲ ಅದೆರೆಡರಲ್ಲಿ,ನಮಗೆ ಯಾವಾಗಲೂ ಅದೆರಡು ಒಂದೇ ರೀತಿ ಇರುತ್ತಿದ್ದವು.


ಅವನು ಏನೇನೋ ಬಾತ್ ಎಲ್ಲಾ ಮಾಡ್ತ ಇದ್ದ..ಒಮ್ಮೆ ಬದನೆ ಹಾಕಿ ಮಾಡ್ತ ಇದ್ದ,ಇನ್ನೊಮ್ಮೆ ಟೊಮೆಟೊ ಹಾಕಿ ಮಾಡ್ತ ಇದ್ದ,ಅವರೆಕಾಳು ಸೀಸನ್ ನಲ್ಲಿ ಅವರೆಕಾಳು ಹಾಕಿ ಬಾತ್ ಎಲ್ಲಾ ಮಾಡ್ತ ಇದ್ದ. ಅವನಲ್ಲಿಯೇ ಕೇಳಿದರೆ ಇಕನಾ ಇದಕ್ಕೆ ಈ "ಬಾತ್" ಅಂತ ಹೆಸರು ಯಾಕೆ ಬಂದದ್ದು ಎಂದು ಕೇಳಿದರೆ ಅದಕ್ಕೆ ಅವನ ಉತ್ತರ, ಅದನ್ನು ಮಾಡುವವ ಬಾತ್ ಎಂಬ ಜಳಕ ಮಾಡಿರಬೇಕಂತೆ ಹಾಗೂ ಬಾತ್ ಎಂಬ ಮಾತು ರೈಸ್ ಬಾತ್ ತಿನ್ನುವಾಗ ಕಡಿಮೆ ಇದ್ದು ರೈಸಿನ ಬಾತೇ ಹೆಚ್ಚಿರುತ್ತದೆಯಂತೆ,ಹಾಗಾಗಿ ಅದು ರೈಸ್ ಬಾತ್ ಅಂತೆ. ಆಹಾ.. ಎಂತಹ  ಒಬ್ಬ ಅಧ್ಭುತ ಜ್ಞಾನಿ ನಮ್ಮ ಈ ಪ್ರವೀಣ.


ಆದರೂ ಅವನ ಉತ್ಸಾಹಕ್ಕೆ ತಣ್ಣೀರು ಎರೆಚಲು ಯಾರಿಗೂ ಮನಸ್ಸಾಗದೇ.. ಸಾಯ್ಲಿ ಒಂದಷ್ಟು ಮಸಾಲ ಸಾಮಾಗ್ರಿ,ಭಾಸ್ಮತಿ ರೈಸ್ ಅವನ ಈ ಪ್ರಯೋಗದಿಂದ ವೇಸ್ಟ್ ಆಗಿ ಹೋದರೂ ಪರವಾಗಿಲ್ಲ.. ಅವನಿಗೊಂದು ಬಿರಿಯಾನಿ ಮಾಡಲು ನಾವುಗಳು ಅವಕಾಶ ಕೊಡಲೇ ಬೇಕು ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿ... ಆಯಿತಾ.. ನೀನು  ಬಿರಿಯಾಣಿ ಮಾಡ... ನಾವು ಇದ್ದೇವೆ.. ಏನು ಇಂಗ್ರಿಡಿಯೆಂಟ್ಸ್ ಬೇಕು ಎಂದು ಹೇಳು, ನಾವು ತರುವ..ಎಂದು ಹೇಳಿದರೆ ಒಬ್ಬ ಗೆಳೆಯ ಮಾತ್ರ "ನೀನು ಬಿರಿಯಾಣಿ ಈ ಸಲ ಮಾಡಿಯೇ ಮಾಡುತ್ತೀಯಾ...ಮತ್ತು ಅದನ್ನು ನಾವು ತಿಂದೇ ತಿನ್ನುತ್ತೇವೆ" ಎಂಬ ಅತಿಯಾದ ಪ್ರೋತ್ಸಾಹ ಕೊಟ್ಟು ಬಿಟ್ಟ.


ಈ ರೀತಿ ಒಬ್ಬ ಕೋಂಗಿ ಕಟ್ಟುವವ(ಎಲ್ಲದಕ್ಕೂ ಒಟ್ರಾಸಿ ಪ್ರೋತ್ಸಾಹ) ಎಲ್ಲರ ರೂಮಿನಲ್ಲಿ ಇದ್ದೇ ಇರುತ್ತಾನೆ.ಅವನದ್ದೂ ಕೂಡ ಇಲ್ಲಿ ಹೆಸರು ಬೇಡ, ಊರು ಬೇಡ.ಈ ಬರಹಕ್ಕಾಗಿ ಪ್ರವೀಣನಿಗೆ ಉಲ್ಲಾಸ ತುಂಬುವ ಅವನ ಹೆಸರು ಸದ್ಯಕ್ಕೆ ಉಲ್ಲಾಸ್ ಎಂದೇ ಇರಲಿ.


ಹೆಚ್ಚಾಗಿ ಈ ಉಲ್ಲಾಸ್ ನ ಅತಿಯಾದ ಪ್ರೇರಣೆಯಿಂದ ಹಾಗೂ ಒಟ್ರಾಸಿ ಪ್ರೋತ್ಸಾಹದಿಂದಲೇ ಈ ನಮ್ಮ ಪಾಕ ಪ್ರವೀಣ ಹೆಚ್ಚಿನ ಕಂಡು ಕೇಳರಿಯದ ಪ್ರಯೋಗಕ್ಕೆಲ್ಲಾ ಯಾವಾಗಲೂ ಮುಂದಾಗುತ್ತಿದ್ದ.ಪ್ರವೀಣನಿಗೆ ಬಿರಿಯಾನಿ ಮಾಡಲು ಮತ್ತಷ್ಟು ಉಲ್ಲಾಸ ತುಂಬಿದ ಆ  ಉಲ್ಲಾಸ್ ನನ್ನೇ  ನಾವೆಲ್ಲರೂ ದುರುಗಟ್ಟಿ ಹಾಗೇ ನೋಡಿ ಬಿಟ್ಟಿದ್ದೆವು. 


ಪ್ರವೀಣ ಹೇಳಿದ " ಇಲ್ಲಿ ಇಂಗ್ರಿಡಿಯೆಂಟ್ಸ್ ಮಾತ್ರ ಮುಖ್ಯವಲ್ಲ, ನಿಮ್ಮ ಸಹಕಾರ ಹಾಗೂ ಸಹಾಯ ಕೂಡ ಅಷ್ಟೇ ಅತ್ಯವಶ್ಯಕ, ಎಲ್ಲರೂ ಒಂದೊಂದು ಜವಾಬ್ದಾರಿ ಹೊರಬೇಕು, ಏಕೆಂದರೆ ನಾವು ಮಾಡಲು ಹೊರಟಿರುವುದು ಮಾಮೂಲಿ ರೈಸ್ ಬಾತ್,ಲಾಟ್ ಪೋಟ್ ಫುಲಾವ್ ಅಲ್ಲ.. ಬಿರಿಯಾಣಿ ಇದು

. ಬಿರಿಯಾಣಿ.." ಅಂತ ಗಂಭೀರವಾಗಿ ಹೇಳಿ ಮುಗಿಸಿದ.


ನನಗೆ  ಅವನು ಬಿರಿಯಾನಿ ಮಾಡಲು ಹೊರಟಿದ್ದಾನೋ ಅಥವಾ ಯಾವುದೋ ಯುದ್ಧ ಮಾಡಲು ಸೈನ್ಯ ಒಟ್ಟು ಮಾಡುತ್ತಿದ್ದಾನೋ ಎಂಬ ಡೌಟೇ ಹೆಚ್ಚಾಗಿ ಬಿಟ್ಟಿತ್ತು. 


ಆಯಿತಾ.. ನಾವು ಒಂದೊಂದು ಕೆಲಸ ಮಾಡುತ್ತೇವೆ... ಏನು ಮಾಡ್ಬೇಕು ಅಂತ ನೀನು ನಮಗೆ ಹೇಳಿ ಕೊಟ್ಟರೆ ಆಯಿತು.. ಎಂದು ಅವನಿಗೆ ನಾವು ಆಶ್ವಾಸನೆ ಕೊಟ್ಟ ಮೇಲೆ ಬಿರಿಯಾನಿ ಮಾಡಲು ಒಂದು ಶುಭ ಸಂಡೆಯನ್ನು ನಿಗದಿ ಮಾಡಲಾಯಿತು.


ಆ ದಿನದಿಂದ ಎಲ್ಲರಿಗೂ ಕುತೂಹಲ.. ಈ ನಮ್ಮ ಪಾಕಪ್ರವೀಣ ಎಷ್ಟು ಚೆನ್ನಾಗಿ ಬಿರಿಯಾನಿ ಮಾಡುತ್ತಾನೆ ಎಂದಲ್ಲ, ಯಾವ ರೇಂಜಿಗೆ ಅದು ಹಾಳು ಆಗಿ ಹೋಗಬಹುದು ಎಂದು.



ನಮ್ಮ ಪಾಕ ಪ್ರವೀಣ ಎಂದಿನಂತೆ ಅಮ್ಮನ ಸಹಕಾರ, ಮಾರ್ಗದರ್ಶನ ಇದಕ್ಕೆಲ್ಲ  ಸಾಕಾಗುವುದಿಲ್ಲ ಎಂದು ಅರಿತು  ಬಿರಿಯಾನಿ ಮಾಡುವುದನ್ನು ಅರಿಯಲು ಯ್ಯೂ ಟ್ಯೂಬ್ ಬಾಗಿಲು ತಟ್ಟಿಯೇ ಬಿಟ್ಟ.


ಖಾಂಜಿ ಪಿಂಜಿ ಬಿರಿಯಾನಿ ಎಲ್ಲಾ ನಾವು ಮಾಡುವುದು ಬೇಡ. ಹೇಗೋ ಮಾಡುತ್ತಿದ್ದೆವೆ, ಸುಮ್ಮನೆ ಯಾಕೆ ಅಷ್ಟು ಕಷ್ಟ ಪಟ್ಟು ಲೋಕಲ್ ಬಿರಿಯಾನಿ ಎಲ್ಲಾ ಮಾಡುವುದು, ಮಾಡಿದರೆ ಹೈದರಾಬಾದ್ ಬಿರಿಯಾನಿಯೇ ಮಾಡುವ ಅಂತ ರೂಮ್ ಮೇಟ್ ಗಳ ಒಕ್ಕೋರಲಿನ ಹಾಗೂ ಒಟ್ಟಾರೆ ಅಭಿಪ್ರಾಯವಾಗಿತ್ತು. 


ಅದರಲ್ಲೂ ನಮ್ಮ ಉಲ್ಲಾಸ್ ಹೇಳಿದ.. ಬರೀ ಹೈದರಾಬಾದ್ ಬಿರಿಯಾನಿ ಏಕೆ.. ಮಾಡಿದ ಮೇಲೆ  ಹೈದರಾಬಾದ್ ಧಮ್ ಬಿರಿಯಾನಿಯೇ ಮಾಡುವ ಎಂಬ ತನ್ನ ಅತೀ ಅಮೂಲ್ಯ ಸಲಹೆ ಒಂದನ್ನು ಪ್ರವೀಣನಿಗೆ ಕೊನೆಯ ಘಳಿಗೆಯಲ್ಲಿ ರವಾನಿಸಿ ಬಿಟ್ಟ.


ಅವನ ಸಲಹೆಗಳನ್ನು ನಮ್ಮ ಪಾಕಪ್ರವೀಣ ಎಂದಿಗೂ ಮೀರಿದವನಲ್ಲ.ಏಕೆಂದರೆ ಅವನಿಗೆ ಅಭಿಮಾನಿಗಳೇ ಅವನ  ದೇವರುಗಳು, ಹಾಗೂ ಅವನ ಉಸಿರು ಆಗಿತ್ತು.ಪುಣ್ಯಕ್ಕೆ ನಮ್ಮ ರೂಮಿನಲ್ಲಿ ಅವನ ದೇವರು, ಉಸಿರು ಎಲ್ಲಾ ಉಲ್ಲಾಸ ಒಬ್ಬನೇ ಆಗಿದ್ದ. ಜಾಸ್ತಿ ಅಭಿಮಾನಿಗಳು ಇದ್ದಿದ್ದರೆ ಈ ಪ್ರವೀಣ ಇನ್ನು  ಏನೇನೋ ಖಂಡಿತವಾಗಿಯೂ ಮಾಡಿ ಬಿಡುತ್ತಿದ್ದ ಎಂಬ ಹೆದರಿಕೆ ನಿಜವಾಗಿಯೂ ನನ್ನಲ್ಲಿ ಅಂತು ಯಾವಾಗಲೂ ಹೆಚ್ಚಾಗಿಯೇ ಇತ್ತು. 


ಉಲ್ಲಾಸನ ಮಾತಿಗೆ ಮಣಿದು ಹೈದರಾಬಾದ್ ಧಮ್ ಬಿರಿಯಾನಿ ಮಾಡುವುದು ಹೇಗೆ ಎಂಬುದನ್ನು  ತಿಳಿಯಲು ಮತ್ತೆ ಯುಟ್ಯೂಬ್ ನಲ್ಲಿ ಜಾಲಾಡಲು ಶುರು ಮಾಡಿ ಬಿಟ್ಟ ಈ ನಮ್ಮ ಪ್ರವೀಣ .ಅದರಲ್ಲೂ ವಿಶ್ವ ಪ್ರಸಿದ್ಧ ಶೆಫ್ ಗಳ ಚಾನಲ್ ಗೆನೇ ಮೊದಲು ನುಗ್ಗಿದ್ದು ಅವ. ಹೇಗೋ ಮಾಡುತ್ತೆವೆ ಯುಟ್ಯೂಬ್ ಸರ್ಚ್ ಹಾಗೂ ವೀಡಿಯೊಗಳು ಕೂಡ ದೊಡ್ಡ ದೊಡ್ದವರದ್ದೇ ಇದ್ದರೆ ಒಳ್ಳೆಯದು ಅಂತ ನಮ್ಮದು ಕೂಡ ಒಂದು ಅಭಿಪ್ರಾಯವಾಗಿತ್ತು. ಅದನ್ನು ಅವನು ಚಾಚೂ ತಪ್ಪದೇ ಪಾಲಿಸಿದ್ದ. 


ಕೊನೆಗೂ ಹೈದರಾಬಾದ್ ಧಮ್ ಬಿರಿಯಾನಿಗೆಂದೇ ಫಿಕ್ಸ್ ಮಾಡಿದ್ದ ಆ ದಿವ್ಯ ಸಂಡೆ ಕೂಡ ಬಂದೇ ಬಿಟ್ಟಿತು.ಅಡುಗೆ ಸಾಮನು ತರಲು ಪ್ರವೀಣ ನೀಡಿದ ಪಟ್ಟಿ(ಚೀಟಿ) ಹಿಡಿದುಕೊಂಡು ಮಾರ್ಕೆಟ್ ಗೆ ಓಡಿದೆವು.


ಯಾಪ್ಪಾ ದೇವರೆ.. ಎಷ್ಟೊಂದು ಇಂಗ್ರಿಡಿಯೆಂಟ್ಸ್.ಭಾಸ್ಮತಿ ರೈಸ್, ಜೊತೆಗೆ ಆ ಮಸಾಲ ಪದಾರ್ಥಗಳು, ಒಂದಷ್ಟು ಕಟ್ಟು ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು,ನಿಂಬೆ ಹಣ್ಣು,ರೋಸ್ ವಾಟರ್,ತುಪ್ಪ,ಹಾಲು,ಮೊಸರು,ನೀರುಳ್ಳಿ,ಚಿಕ್ಕನ್, ಮೊಟ್ಟೆ,ಕೇಸರಿ ಇತ್ಯಾದಿ ಇತ್ಯಾದಿ. ಅದರಲ್ಲೂ ಬಣ್ಣ ಎಲ್ಲಾ ಹಾಕುವುದು ಬೇಡ. ಎಷ್ಟೇ ಖರ್ಚಾಗಲಿ ನಾವು ಕಾಶ್ಮೀರಿ ಕೇಸರಿಯನ್ನೇ  ಹಾಕಿ ಬಿರಿಯಾನಿ ಮಾಡುವ ಅಂತ ಎಲ್ಲರೂ ಒಂದೇ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದೆವು.ಪುನಃ ಧಮ್ ಕಟ್ಟಿಸಲು ಮೈದಾ ಕೂಡ ಕೊಂಡುಕೊಂಡೆವು.


ಅಲ್ಲಾ ನಾನು  ಕೆಲವೊಮ್ಮೆ  ಯೋಚಿಸುವುದು ಈ ಬಿರಿಯಾನಿಗೆ ಬಳಸುವ ಇಷ್ಟೊಂದು ಇಂಗ್ರಿಡಿಯೆಂಟ್ಸ್ ನಿಂದ ಜಸ್ಟ್ ಬಿರಿಯಾನಿ ಮಾಡುವ ಬದಲು ಬೇರೆ ಐಟಂ ಗಳನ್ನು ಮಾಡುವುದಾದರೆ ಎಷ್ಟೆಲ್ಲಾ ಐಟಂ ಗಳನ್ನು ಮಾಡಿ ಬಿಡಬಹುದು ಅಲ್ವಾ ಎಂದು. ತುಪ್ಪದಿಂದ ಸಿಂಪಲ್ ಆಗಿ ಘೀ ರೈ ಮಾಡಬಹುದು,ನಿಂಬೆ ಹಾಕಿ ಲೆಮನ್ ರೈಸ್ ಮಾಡಬಹುದು,ಪುದೀನಾ ಹಾಕಿ ಪುದೀನಾ ರೈಸ್ ಮಾಡಬಹುದು,ಕೇಸರಿಯಿಂದ ನಿಜವಾದ ಕೇಸರಿ ಬಾತೇ  ಮಾಡಬಹುದು, ಮೊಸರಿನಿಂದ ಮೊಸರನ್ನ ಮಾಡಬಹುದು,ಹಾಲು ಉಪಯೋಗಿಸಿ ಟೀ, ಕಾಫಿ ಮಾಡಬಹುದು,ನೀರುಳ್ಳಿಯಿಂದ ನೀರುಳ್ಳಿ ಬಜೆ ಮಾಡಬಹುದು, ಮೊಟ್ಟೆಯಿಂದ ಆಮ್ಲೇಟು,ಎಗ್ ಚಿಲ್ಲಿ, ಎಗ್ ಬುರ್ಜಿ ಎಲ್ಲಾ ಮಾಡಬಹುದು,ಮೈದಾದಿಂದ ಪರೋಟ, ಬನ್ಸ್ ಎಲ್ಲಾ ಮಾಡಬಹುದು.. ಆದರೆ ಏನು ಮಾಡುವುದು ನಾವು ಮಾಡಲು ಹೊರಟಿದ್ದು ಬಿರಿಯಾನಿ ಅಲ್ಲವೇ ಹಾಗಾಗಿ ಅದನ್ನೆಲ್ಲಾ ಮಾಡದೇ ಅಷ್ಟೆಲ್ಲಾ ಇಂಗ್ರಿಡಿಯೆಂಟ್ಸ್ ಬಳಸಿ ಬಿರಿಯಾನಿ ಒಂದನ್ನೇ ಮಾಡಬೇಕಾಗಿತ್ತು. 


ಒಟ್ಟಿನಲ್ಲಿ ಮೊದಲ ಬಾರಿಗೆ ಬಿರಿಯಾನಿ ಮಾಡಲು ತೊಡಗುವುದು ಕೂಡ ಬ್ಯಾಚುಲರ್ ಗಳಿಗೆ ಒಂದು ರೀತಿಯಲ್ಲಿ ಸಂಭ್ರಮದ ತಯಾರಿಯೇ.ಆದರೆ ಎಂತಹ ಪಟ್ಟಿ ಮಾಡಿಕೊಂಡು ಮಾರ್ಕೆಟ್ ಗೆ ಹೋದರೂ ಒಂದೆರಡು ಐಟಂ ಯಾವಾಗಲೂ ಮಿಸ್ಸೇ ಬಿಡಿ. ನಮಗೂ ಹಾಗೇ ಆಗಿತ್ತು,ಶಹಾ ಜೀರಾ ವೋ ಅಲ್ಲಾ   ಯಾವುದೋ ಒಂದು ಪ್ರಮುಖ ಮಸಾಲ ಪದಾರ್ಥ ಮಿಸ್ ಆಗಿ ಹೋಗಿತ್ತು.


ಪಟ್ಟಿಯಲ್ಲಿ ಬರೆದದ್ದು ಮಿಸ್ ಆಗಿದ್ದು ಅಲ್ಲ, ನಮ್ಮ ಪಾಕಪ್ರವೀಣನೇ ಪಟ್ಟಿಯಲ್ಲಿ ಅದನ್ನು  ಬರೆಯದೇ ಅದು ಮಿಸ್ ಆಗಿ ಹೋಗಿತ್ತು.ಮತ್ತೆ ಎಂತ ಒಂದು ಬಿರಿಯಾನಿ ಮಾಡಲು ನೂರು ವೀಡಿಯೋ ನೋಡಿದರೆ ಅದರಲ್ಲಿ ಒಂದಲ್ಲ ಐದು ಐಟಂ ಆದರೂ ಮಿಸ್ ಆಗಲೇ ಬೇಕಲ್ಲ.


ಆದರೆ ನಮ್ಮ ಪಾಕಪ್ರವೀಣ ತನ್ನದೇ ತಪ್ಪಿದ್ದರೂ ಸೋಲು ಒಪ್ಪುವುದಿಲ್ಲ, ಅದೆಲ್ಲ ಇಲ್ಲದಿದ್ದರೂ ನಡೆಯುತ್ತದೆ, ಕೆಲವೊಂದು ವೀಡಿಯೋಗಳಲ್ಲಿ ಅದನ್ನು ಹಾಕದೇ ಬಿರಿಯಾಣಿ ಮಾಡಿದ್ದು ಕೂಡ ನಾನು ನೋಡಿದ್ದೆ..ಎಂದು ಹೇಗೋ ತನ್ನ ತಪ್ಪನ್ನು ಕವರ್ ಮಾಡಿ ಬಿಟ್ಟ.


ಉಲ್ಲಾಸ್ ಅಂತು ಯಾವಾಗಲೂ ಅವನ ಪರವೇ  ನಿಂತು ಬಿಡುತ್ತಾನೆ.. "ನೀನು ಬಿಡ ಪ್ರವೀಣ..ನೀನು ಹೇಗೆ ಮಾಡಿದರೂ ಅದು ಟೇಸ್ಟ್ ಆಗಿಯೇ ಇರ್ತದೆ.. ಮೊನ್ನೆ ನೀನು ಮಾಡಿದ ಆ  ಮ್ಯಾಗಿ ಉಂಟಲ್ಲಾ.. ಅದು ಮಾತ್ರ ಬಾರೀ ಲಾಯ್ಕ್ ಇತ್ತು ಮಾರ್ರೆ.." ಎಂದು ಹೇಳಿಯೇ  ಬಿಟ್ಟ. ಅಲ್ಲಾ ನಾನು ಯೋಚಿಸುವುದು ಈ  ನಾರ್ಮಲ್ ಮ್ಯಾಗಿ ಯಲ್ಲಿ ಅದೆಂತಹ ಟೇಸ್ಟ್, ಅದು ಯಾವ ಕೈಚಳಕದ ಮ್ಯಾಜಿಕ್ ಮರ್ರೆ.


ಒಟ್ಟಿನಲ್ಲಿ ಅವನ ಮನೋಬಲ ಕುಗ್ಗಬಾರದು ಎಂದು ಉಲ್ಲಾಸ್  ಹಾಗೇ ಎಲ್ಲಾ ಹೇಳುವುದು ಅಲ್ಲ, ನಮ್ಮ ಪಾಕ ಪ್ರವೀಣ ಎಷ್ಟೇ ಕೆಟ್ಟದು ಅಡುಗೆ ಮಾಡಿದರೂ ಉಲ್ಲಾಸ್  ಹೇಳುವುದೇ ಹಾಗೇಯೇ. 



ಹೀಗೆ ಸಂಡೆಯ ಆ ದಿನ ಬಿರಿಯಾನಿಗಾಗಿ ನಮ್ಮದ್ದೊಂದು ಭರದ ಸಿದ್ಧತೆ ಶುರುವಾಯಿತು. ಒಬ್ಬ ಚಿಕನ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿ ಮೊಟ್ಟೆಯನ್ನು ಕೂಡ  ಬೇಯಿಸಿ ಇಟ್ಟ.ಮತ್ತೊಬ್ಬ ಅಕ್ಕಿ ತೊಳೆದು ನೆನೆಸಿದ,ಇನ್ನೊಬ್ಬ ತೆಂಗಿನ ಬುಡಕ್ಕೆ ಹಾಕಲು ಗುಡ್ಡೆಯಲ್ಲಿರುವ ಸೊಪ್ಪು ಕೊಚ್ಚಿದಂತೆ ಕೊತ್ತಂಬರಿ ಹಾಗೂ ಪುದೀನಾವನ್ನು ಸಣ್ಣಗೆ ಕೊಚ್ಚಿ ಬಿಟ್ಟ. ಮತ್ತೊಬ್ಬ ನೀರುಳ್ಳಿಯನ್ನು ಸಣ್ಣಗೆ ಕಟ ಕಟ ಅಂತ ಚಾಕುವಿನಂದ ಕಟ್ ಮಾಡಿದ. ಈ ರೋಡ್ ಸೈಡಿನಲ್ಲಿ ಪ್ರೈಡ್ ರೈಸ್ ಮಾಡುವವರು ಮರದ ತುಂಡಿನ ಮೇಲೆ ನೀರುಳ್ಳಿ ಕಟ್ ಮಾಡ್ತಾರೆ ಅಲ್ವಾ ಆ ರೀತಿಯ ಕೈ ಚಳಕ ಅವನದ್ದು.ಅದನ್ನು ಅವನು ಈ ಮೊದಲೇ ಎಲ್ಲೋ ಚೆನ್ನಾಗಿ ಗಮನಿಸಿದ್ದ ಎಂದು ಕಾಣುತ್ತದೆ. ಹಾಗಾಗಿ ಅದೇ ರೀತಿ ನೀರುಳ್ಳಿ ಕಟ್ ಮಾಡುತ್ತಿದ್ದ.


ನಾನು ಮೈದಾವನ್ನು ಚೆನ್ನಾಗಿ ನಾದಿ ಅದರಿಂದ ಕಡಾಯಿ ಪಾತ್ರೆಯ ಬಾಯಿಯ ಮೇಲೆ ಕೂರುವಂತಹ ಮೈದಾದ ದಂಡೆಯನ್ನು ಮಾಡಿದೆ. ಮೈದಾದ ಹಿಟ್ಟು ನಾದುವಾಗ ನಾನು ತುಂಬಾ ಸಲ ಹೇಳಿದೆ.. ಹೇಯ್ ನಾವು ಯಾಕೆ ಈ ಮೈದಾದಿಂದ ಬನ್ಸ್  ಮಾಡಬಾರದು ಎಂದು.ಎಲ್ಲರೂ ಸೇರಿ ನನಗೆ ಬೈದರು.. ನಿಂಗೆ ಬನ್ಸ್ ತಿನ್ಲಿಕ್ಕೆ ಇದ್ರೆ ಸೀದಾ ಮಂಗಳೂರಿಗೆನೇ ಹೋಗು, ಈಗ ಸದ್ಯಕ್ಕೆ ಬಿರಿಯಾಣಿ ಮಾಡ್ಲಿಕ್ಕೆ ನಮಗೆ ಹೆಲ್ಪ್ ಮಾಡು.. ಎಂದು ಹೇಳಿ ಎಲ್ಲರೂ ನನ್ನ ಬಾಯಿ ಮುಚ್ಚಿಸಿ ಬಿಟ್ಟರು. 



ಕೇಸರಿ ದಳಗಳನ್ನು ಬಿಸಿ ಹಾಲಿನಲ್ಲಿ ಹಾಕಿ ನೆನೆಸಿ ಇಡಲಾಯಿತು. ಬ್ರೌನ್ ಆನಿಯನ್ (ಫ್ರೈಡ್ ಆನಿಯನ್)ಬೇಕು ಎಂದು ಸಣ್ಣಗೆ ಕತ್ತರಿಸಿದ ನೀರುಳ್ಳಿಯನ್ನು ಎಣ್ಣೆಯಲ್ಲಿ ಕರಿದು ತೆಗೆಯಲಾಯಿತು. ಆಗಲೂ ನನ್ನ ಮನಸ್ಸಿನಲ್ಲಿ ಇದ್ದದ್ದು ಒಂದೇ.. ಸುಮ್ಮನೆ ನೀರುಳ್ಳಿ ಬಜೆ ಆದರೂ ಮಾಡ್ಬಹುದು ಇತ್ತು ಇದರಿಂದ ಎಂದು.ಏಕೆಂದರೆ ಪ್ರವೀಣನ ಪಾಕ ಪ್ರಾವೀಣ್ಯದಲ್ಲಿ ಸ್ವಲ್ಪವೂ ಹೋಪ್ ಇರದೇ ಇದ್ದದ್ದು ಆವತ್ತು  ನನಗೆ ಮಾತ್ರ ಆ ನಮ್ಮ ರೂಮಿನ ಕಿಚನ್ ನಲ್ಲಿ.


ಮೊದಲ ಸಿದ್ದತೆ  ಚಿಕನ್ ಮ್ಯಾರಿನೇಷನ್. ಅದು ಕೂಡ ಮೊದಲೇ ಆಗಿತ್ತು. ನಂತರ ಅದನ್ನು ಪ್ರವೀಣ ಬೇಯಲು ಇಟ್ಟ. ನಾವು ಎಲ್ಲರೂ ಬಾಯಿ ಬಿಟ್ಟುಕೊಂಡು ಅವನು ಮಾಡುತ್ತಿದ್ದ ಎಲ್ಲವನ್ನೂ ನೋಡುತ್ತಿದ್ದೆವು. ಪ್ರವೀಣ ನಮಗೆ ಒಬ್ಬ ಅಪ್ರತಿಮ ಜಾದೂಗಾರನಂತೆ ಕಂಡ. ನಂತರ ತೊಳೆದು ನೆನೆಸಿದ ಭಾಸ್ಮತಿ ಅಕ್ಕಿಯನ್ನು 75 % ನಷ್ಟು ಬೇಯಿಸುವ ಕಾರ್ಯಕ್ರಮ.


ಇದುವೇ ಕಷ್ಟದ ಕೆಲಸ. ಏಕೆಂದರೆ ಅನ್ನ ಜಾಸ್ತಿ ಬೇಯುವಂತಿಲ್ಲ. ಮುಂದೆ ಧಮ್ ನಲ್ಲಿ ಕೂಡ ಬೇಯಲು ಇರುವುದರಿಂದ ಮುಕ್ಕಾಲು ಭಾಗ ಅಷ್ಟೇ ಬೆಂದರೆ ಸಾಕು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಆವತ್ತು ಭಾಸ್ಮತಿ ಜಾಸ್ತಿಯೇ ಬೆಂದಿತ್ತು, 100% ಗೂ ಮೀರಿ ಬೆಂದಿತ್ತು ಅದು!! 


ಆಯಿತು..  ಭಾಸ್ಮತಿ ರೈಸ್ ಲಗಾಡಿ ಹೋಯಿತು ಈ ಪ್ರವೀಣನ ಹುಮ್ಮಸಿನಲ್ಲಿ ಅಂತ ಮನಸ್ಸಿನಲ್ಲಿಯೇ ಹಿಡಿ ಶಾಪ ಹಾಕಿದೆ. ಪ್ರವೀಣನನ್ನು, ಉಲ್ಲಾಸನನ್ನು ಬಿಟ್ಟು ಉಳಿದ ಎಲ್ಲರೂ ಕೂಡ ಆ ದಿನ ಅದೇ ರೀತಿಯೇ ಮನಸ್ಸಿನಲ್ಲಿಯೇ ಶಾಪ ಹಾಕಿರುತ್ತಾರೆ ಬಿಡಿ.


ಆದರೆ ಪ್ರವೀಣ್ ಹೇಳಿದ.. ಇಲ್ಲ ಅನ್ನ ಜಾಸ್ತಿ ಬೆಂದರೂ ಬಿರಿಯಾಣಿ ಮಾಡ್ಲಿಕ್ಕೆ ಆಗ್ತದೆ. ಬಿರಿಯಾಣಿ ಮಾಡ್ತ ಮಾಡ್ತ ರನ್ನಿಂಗ್ ನಲ್ಲಿ ಅದೆಲ್ಲಾ ಕವರ್ ಆಗ್ತದೆ.. ಎಷ್ಟೋ ವೀಡಿಯೊ ಗಳಲ್ಲಿ ಅದನ್ನು ಸಹ ನಾನು ನೋಡಿದ್ದೇನೆ.. ಎಂದು ಹೇಳಿದ.


ಅನ್ನವೇ ಸಂಪೂರ್ಣ ಬೆಂದು ಹೋದರೆ ಎಂತ ಕವರ್ ಮಾಡುವುದು, ಅದು ಕೊನೆಗೆ ಕಿಚಡಿಯೇ ಆಗುವುದು ಎಂದು ನನಗೆ ಸಿಕ್ಕಾಪಟ್ಟೆ  ಕೋಪ ಬಂತು.


ಮಾತ್ರವಲ್ಲ ಇಷ್ಟೆಲ್ಲಾ ಮಾಡಿ ಈಗ ಅನ್ನವೇ ಸರಿ ಇರದಿದ್ದರೆ ಕೊನೆಗೆ ಅದು ಖಂಡಿತವಾಗಿಯೂ ಡಬ್ಬಾ ಬಿರಿಯಾನಿಯೇ ಆಗಿ ಹೋಗುವುದರಲ್ಲಿ ನನಗೆ ಯಾವುದೇ ಸಂದೇಹವೇ  ಇರಲಿಲ್ಲ ಮತ್ತು ಅದೇ ಆಗುವುದು ಎಂದು ನನಗೆ ಆವಾಗಲೇ ಕನ್ಫರ್ಮ್ ಆಗಿ ಹೋಗಿತ್ತು.ಅದರಲ್ಲೂ ಈ ಪ್ರವೀಣ ಇಷ್ಟೆಲ್ಲಾ ವೀಡಿಯೋ ನೋಡಿ ಈಗ ಯಾವ ವೀಡಿಯೊದ ಪ್ರಕಾರದ ಬಿರಿಯಾನಿ ಮಾಡುತ್ತಿದ್ದಾನೆ ಎಂದೇ ನಮಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಬಹುಶಃ ಅವನಿಗೂ ಗೊತ್ತಾಗದೇ ಎಲ್ಲರ ಐಡಿಯಾ ಮಿಕ್ಸ್ ಮಾಡಿ ಅವನದ್ದೇ ಒಂದು ಗಡ್ ಬಡ್ ಬಿರಿಯಾನಿ ಮಾಡಲು ಹೊರಟಿದ್ದ ಎಂದು ಕಾಣುತ್ತದೆ.


ಉಲ್ಲಾಸ್ ಮತ್ತೆ ಪ್ರವೀಣನಿಗೆ ಹುರಿದುಂಬಿಸಿದ...ಪ್ರವೀಣ ನೀನು ಮಾಡ...ಏನೇ ಆದ್ರೂ ತಿನ್ಲಿಕ್ಕೆ ನಾವು ಇದ್ದೇವೆ... ಬಿರಿಯಾನಿ ಅಂತ ಮನಸ್ಸಿನಲ್ಲಿ ಅಂದುಕೊಂಡು ತಿಂದು ಬಿಟ್ಟರೆ ಆಯಿತು ಬಿಡು.. ಅಷ್ಟೇ...ಎಂದು ಹೇಳಿ ಬಿಟ್ಟ ಉಲ್ಲಾಸ. 


ಆಹಾ...ಎಂತಹ ಪ್ರೋತ್ಸಾಹ.... ಎಂತಹ ಪ್ರೋತ್ಸಾಹ.


ಮನಸ್ಸಿನಲ್ಲಿ ಬಿರಿಯಾನಿ ಅಂದುಕೊಂಡು ತಿನ್ನಬೇಕಂತೆ. ಹಾಗಾದರೆ ನಮಗೆ ವ್ಯತ್ಯಾಸವೇ ಗೊತ್ತಾಗದ ಪ್ರವೀಣನ ಫುಲಾವ್ ಇಲ್ಲವೇ ರೈಸ್ ಬಾತ್ ಮಾಡಿಕೊಂಡು ಅದನ್ನೇ ಮನಸ್ಸಿನಲ್ಲಿ ಬಿರಿಯಾನಿ ಎಂದುಕೊಂಡು  ತಿನ್ನಬಹುದಿತ್ತಲ್ವಾ.. ಎಂದು ಮನಸಿಗೆ ಅನಿಸಿದರೂ ಅದನ್ನು ನಾನು ಹೇಳಲು ಹೋಗಲಿಲ್ಲ. ನೋಡುವ ಈ ಬಿರಿಯಾನಿ ಕೊನೆಗೆ ಯಾವ ವೇಷಕ್ಕೆ, ಯಾವ ರೂಪಕ್ಕೆ ತಿರುಗುತ್ತದೆ ಎಂದು ನೋಡುವ  ಕುತೂಹಲ ಹಾಗೂ ಆಸಕ್ತಿಯೇ ನನ್ನಲ್ಲಿಯೂ ಅತಿಯಾಗಿಯೇ  ಇತ್ತು.


ಗ್ಯಾಸ್ ಸ್ಟೌವ್ ನಲ್ಲಿ ಒಂದು ಕಡೆ ಬೇಯಲು ಇಟ್ಟಿದ್ದ ಚಿಕನ್ ಬೇಯುತ್ತಾ ಬಂದಿತ್ತು. ಈಗ ಎಲ್ಲವನ್ನೂ ಗ್ಯಾಸ್ ನಿಂದ ಇಳಿಸಿದ ಪ್ರವೀಣ ಬೇರೆಯೇ ದೊಡ್ಡ ಕಡಾಯಿಯಲ್ಲಿ ಒಂದು ಲೇಯರ್ ಅತಿಯಾಗಿ ಬೆಂದ ಅನ್ನ, ಮತ್ತೊಂದು ಲೇಯರ್ ಬೇಯಿಸಿದ ಚಿಕನ್, ಹೀಗೆ ಒಂದರ ಮೇಲೆ ಒಂದು ಲೇಯರ್ ಹಾಕಿಕೊಂಡು ಹೋಗುತ್ತಾ ಕಡಾಯಿ ತುಂಬಿಸಿ ಬಿಟ್ಟ.


ಪ್ರತೀ ಲೇಯರ್ ನಡುವೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಫ್ರೈಡ್ ಆನಿಯನ್,ಬೇಯಿಸಿದ ಮೊಟ್ಟೆ,ಹಾಲಿನಲ್ಲಿ ನೆನೆಸಿದ ಕೇಸರಿ,ರೋಸ್ ವಾಟರ್.. ಎಲ್ಲವನ್ನೂ ಸಿಕ್ಕಾಪಟ್ಟೆ ಸುರಿಯಲಾಯಿತು & ಬೇಕಾಬಿಟ್ಟಿ ತುರುಕಿಸಲಾಯಿತು.


ಕೊನೆಗೆ ಎಲ್ಲವನ್ನೂ ಹಾಕಿ ಸೆಟ್ ಆದ ನಂತರ ಮೈದಾದ ದಂಡೆಯನ್ನು  ಕಡಾಯಿಯ ಅಂಚಿಗೆ ಸಿಕ್ಕಿಸಿ ಕಡಾಯಿಯ  ಮುಚ್ಚಳವನ್ನು ಗಟ್ಟಿಯಾಗಿ ಒತ್ತಿ ಅದರ ಮೇಲೆ ಇಡಲಾಯಿತು. ಒಟ್ಟಿನಲ್ಲಿ ಈಗ ಸಂಪೂರ್ಣವಾಗಿ ಕಡಾಯಿಯ ಬಾಯಿ ಸೀಲ್ ಆಯಿತು.


ನಂತರ ಪ್ರವೀಣ ಕಡಾಯಿಯ ಮುಚ್ಚಳದ ಮೇಲೆ ಭಾರವಾದ  ಪಾತ್ರೆಯೊಂದನ್ನು ಇಟ್ಟ. ಪ್ರವೀಣ ಅದು ಏಕೆ..ಹಾಗೆ ಇಡುವುದು ಎಂದು ಕುತೂಹಲದಿಂದ ಕೇಳಿದೆ. ಅದು ಯ್ಯೂಟ್ಯೂಬ್ ನಲ್ಲಿ ಹಾಗೆ ಮಾಡಿದ್ದಾರೆ ಎಂದು ಹೇಳಿ ಬಿಟ್ಟ ನಮ್ಮ ಪಾಕ ಪ್ರವೀಣ. 


ಈಗ ಮತ್ತೊಮ್ಮೆ ಅಗ್ನಿ ಸ್ಪರ್ಶದ ಕಾರ್ಯಕ್ರಮ.ಅದೂ ಆಯಿತು.ಬೆಂಕಿ ಕೊಟ್ಟರು. ಧಗ ಧಗ ಎಂದು ಹೈ ಫ್ಲೇಮ್ ನಲ್ಲಿ  ಉರಿಯಿತು ಗ್ಯಾಸ್ ಸ್ಟೌವ್ ನ ಬೆಂಕಿ. ಅದನ್ನು ಕಂಡು "ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದು,ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ.." ಹಾಡು ಒಮ್ಮೆ ಹಾಗೇ ನೆನಪಾಗಿ ಬಿಟ್ಟಿತ್ತು ನನಗೆ. 


ನಾನು ಹೇಳಿದೆ.. ಧಮ್ ಮಾಡುವುದು ಲೋ ಪ್ಲೇಮ್ ಇಲ್ಲವೇ ಮೀಡಿಯಂ ಫ್ಲೇಮ್ ನಲ್ಲಿ ಅಲ್ಲವಾ ಎಂದು. ಎಲ್ಲರೂ ನನ್ನ ಮೇಲೆ ಆಕ್ರೋಶ ತೋರಿದರು.ಅದರಲ್ಲೂ ಉಲ್ಲಾಸ್ ಹೇಳಿದ.. ನಿಂಗೆ ಈ ಅಡುಗೆ ಎಲ್ಲಾ ಪ್ರವಿಣನಿಗಿಂತ ಕೂಡ ಜಾಸ್ತಿ ಗೊತ್ತುಂಟಾ .... ಸುಮ್ಮನಿರು.. ಪ್ರವೀಣ  ಬೇಕಾದಷ್ಟು ವೀಡಿಯೊ ಎಲ್ಲಾ ನೋಡಿದ್ದಾನೆ, ಅವನಿಗೆ ಎಲ್ಲಾ ಗೊತ್ತಿದೆ . ಎಂತೆಂತಹ ಅಡುಗೆ ಮಾಡಿಲ್ಲ ಅವನು,ಈ ಬಿರಿಯಾಣಿ ಯಾವ ಲೆಕ್ಕ.. ಪ್ರವೀಣ ನೀನು ಬೇಕಾದಷ್ಟು ಬೆಂಕಿ ಹಾಕ..ಚೆನ್ನಾಗಿಯೇ ಬೇಯಲಿ.. ಬೆಂಕಿ ಮಾತ್ರ ಕಡಿಮೆ ಮಾಡ್ಬೇಡ... ನನಗೆ ಗೊತ್ತು ನೀನೋ ಏನೋ ಒಂದು ಖಂಡಿತಾ ಮಾಡೇ ಮಾಡುತ್ತೀಯಾ.. ಎಂದು ಹೇಳಿದ ಉಲ್ಲಾಸ.


ನಿಜವಾಗಿಯೂ ಏನೋ ಒಂದು ಆಗುತ್ತದೆ ಎಂದು ನನಗೂ ಗೊತ್ತಿತ್ತು. ಆದರೆ ಅದು ಬಿರಿಯಾನಿ ಆಗಿರುವುದಿಲ್ಲ ಎಂದು ನನಗೆ ಮಾತ್ರ ಬಹಳ ಸ್ಪಷ್ಟವಾಗಿಯೇ ಗೊತ್ತಿತ್ತು.


ಗ್ಯಾಸ್ ಸ್ಟೌವ್ ನ ಬೆಂಕಿ ಮತ್ತಷ್ಟು ಧಗ ಧಗ ಎಂದು ಉರಿಯಿತು!


ಎಲ್ಲರೂ ಬಕ ಪಕ್ಷಿಯಂತೆ ಬಿರಿಯಾನಿ ಆಗುವುದನ್ನೇ ಕಾಯುತ್ತಿದ್ದೆವು.


ಈ ಮೀಮ್ಸ್ ವೀಡಿಯೋ ಗಳಲ್ಲಿ ಬರುತ್ತದೆ ಅಲ್ವಾ... ಟು ಮಿನಿಟ್ಸ್ ಲೇಟರ್..... ಟೆನ್ ಮಿನಿಟ್ಸ್ ಲೇಟರ್.... ಅದೇ ರೀತಿ  ಒಟ್ಟು ಟ್ವೆಂಟಿ ಮಿನಿಟ್ಸ್  ಹೈ ಪ್ಲೇಮ್ ಬೆಂಕಿಯಲ್ಲಿ ಬಿರಿಯಾನಿ ಬೇಯುತ್ತಾ ಬೇಯುತ್ತಾ ಹಾಗೇ ಕಳೆದೇ ಹೋಯಿತು. 



ಇಪ್ಪತ್ತು ನಿಮಿಷಗಳು ಆದ ನಂತರ ಕೊನೆಗೂ ಪ್ರವೀಣ ಘೋಷಣೆ ಮಾಡಿಯೇ ಬಿಟ್ಟ ಬಿಟ್ಟ...ಆಯಿತು.. ಇಷ್ಟು ಬೆಂದರೆ ಎಷ್ಟೋ ಸಾಕು.. ಈಗ ಒಳಗಡೆ  ಬಿರಿಯಾನಿ ಬಹಳ ಚೆನ್ನಾಗಿಯೇ ಬೆಂದಿರುತ್ತದೆ.. ಅಂದು ಬಿಟ್ಟ ಪ್ರವೀಣ. 


ಆಯಿತು ಪ್ರವೀಣ ಬಾಯಿ ತೆಗೆ ಈಗ.. ಎಂದು ಎಲ್ಲರೂ ಹೇಳಿದೆವು.


ಪ್ರವೀಣ ನಿಧಾನಕ್ಕೆ ಕಡಾಯಿಯ ಬಾಯಿ ಅಂಚಲ್ಲಿ ಇದ್ದ ಮೈದಾವನ್ನು ಬಿಡಿಸಿ ತೆಗೆದು ಅದನ್ನು ಪಕ್ಕದಲ್ಲಿದ್ದ ಸಿಂಕಿಗೆ ಹಾಕಿ,ಆ ಕಡಾಯಿ ಪಾತ್ರೆಯ ಮುಚ್ಚಳವನ್ನು ತೆಗೆದೇ ಬಿಟ್ಟ. 


ಆಹಾ... ನಿಜವಾಗಿಯೂ ಬಹಳ ಅಧ್ಭುತವಾದ ಪರಿಮಳ ಹೊರ ಹೊಮ್ಮಿತು ಕಡಾಯಿಯಿಂದ. 


ಎಲ್ಲರೂ ವಾವ್... ಸೂಪರ್... ಎಂದು ಪ್ರವೀಣನಿಗೆ ಜೈಕಾರ ಹಾಕ ತೊಡಗಿದರು.


ನಾನೂ ಹತ್ತಿರ ಹೋಗಿ ನೋಡಿದೆ.


ಅನ್ನ ಎಲ್ಲಾ ಓವರ್ ಕುಕ್ ಆಗಿ... ನಿಜವಾಗಿಯೂ ಅನ್ನದ ಕಿಚಡಿಯೇ ಆಗಿ ಹೋಗಿತ್ತು ಅದು!


ಆದರೂ ಏನು ಹೇಳುವ ಹಾಗೆ ಇರಲಿಲ್ಲ.


ಮೊದಲೇ ಡೌಟ್ ಇತ್ತು, ಹಾಗಾಗಿ ಸೌಟಿನಿಂದ ಮೆಲ್ಲ ಕಡಾಯಿಯ ಅಡಿಯ ರೈಸ್ ಅನ್ನು ಕೆದಕಿ ತೆಗೆದ.. ರೈಸ್ ಎಲ್ಲಾ ಕರಟಿ ಹೋಗಿ ಕಪ್ಪು ಕಪ್ಪಾಗಿತ್ತು!


ನಾನು ಹೇಳಿದೆ.. ಪ್ರವೀಣ,ಅಡಿಯಲ್ಲಿರುವ ಎಲ್ಲಾ ರೈಸ್ ಕರಟಿ ಹೋಗಿದೆ..! ಎಂದು. 


ಉಲ್ಲಾಸ್ ಹೇಳಿದ.. ಅಡಿಯಲ್ಲಿರುವ ರೈಸ್ ಮಾತ್ರ ಅಲ್ವಾ, ಅದನ್ನು ತಗೆದು ಬಾಕಿ ಬಿರಿಯಾನಿ ತಿಂದರೆ ಆಯಿತು ಎಂದು ಹೇಳಿದ.


ಅನ್ನ ಎಲ್ಲವೂ ಓವರ್ ಕುಕ್ ಆಗಿದೆ.. ಎಂದು ಹೇಳಿದೆ.


ಉಲ್ಲಾಸ್ ಮತ್ತೆ ಹೇಳಿದ... ಅನ್ನ ಮಾತ್ರ ಅಲಾ..  ಒಮ್ಮೆ ಚಿಕನ್ ಕರೆಕ್ಟ್ ಉಂಟಾ ಅಂತ ನೋಡು...ಎಂದು ಹೇಳಿದ. 



ಚಿಕನ್ ಸರಿಯಾಗಿ ಬೆಂದಿದೆಯಾ ಎಂದು ನಾನು ಪರೀಕ್ಷೆಸಿದೆ. ಪುಣ್ಯಕ್ಕೆ ಅದೊಂದು ಸರಿ ಇತ್ತು. 


ಚಿಕನ್ ಕರೆಕ್ಟ್ ಇದೆ.. ಎಂದು ಹೇಳಿದೆ.



ಅದಕ್ಕೆ ಪ್ರವೀಣ ಹೇಳಿದ... ಹಾಗಾದರೆ ನಾವು ಇದರ ಚಿಕನ್ ಹಾಗೂ ಮಸಾಲೆಯನ್ನು ತೆಗೆದು ಕೊಳ್ಳುವ,ಊಟಕ್ಕೆ ಬೇಕಾದರೆ  ನಾನು ರಪ್ಪ ಅಂತ ಈಗಲೇ ಬೇರೆಯೇ ವೈಟ್  ರೈಸ್ ಮಾಡಿ ಬಿಡ್ತೇನೆ.


ಉಲ್ಲಾಸ್ ಹೇಳಿದ... ನೀನು ಮಾಡ ಪ್ರವೀಣ... ಚಿಕನ್ ಸರಿ ಉಂಟಲ್ಲಾ... ರೈಸ್ ಯಾವುದಾದರೇನು.. ನೀನು ಏನಾದರೊಂದು ಮಾಡು.. ಒಟ್ಟಿನಲ್ಲಿ ಈಗ ನಮಗೆ ಅಷ್ಟು ಕಷ್ಟ ಪಟ್ಟು ಮಾಡಿದ್ದಕ್ಕೆ  ಈ ಚಿಕನ್ ವೇಸ್ಟ್ ಆಗ್ಬಾರದು ಅಷ್ಟೇ..ಎಂದು ಹೇಳಿದ. 


ಕೊನೆಗೆ ಪ್ರವೀಣ ವೈಟ್ ರೈಸ್ ಮಾಡಿದ.ಆ ರೈಸಿಗೆ ಬಿರಿಯಾನಿಯಲ್ಲಿದ್ದ ಚಿಕನ್ ಹಾಗೂ ಮಸಾಲೆಯನ್ನೇ ಹೆಕ್ಕಿ ಹೆಕ್ಕಿ ಹಾಕಿಕೊಂಡು ನಾವೆಲ್ಲರೂ ಊಟ ಮಾಡಲು ಕುಳಿತೆವು.



ಊಟ ಮಾಡುವಾಗ ನನ್ನ ಮನಸ್ಸಿನಲ್ಲಿ ಇದ್ದ ಪ್ರಶ್ನೆ ಒಂದೇ.. ಅಲ್ಲ ಈ ಕರ್ಮಕ್ಕೆ ನಾವು ಬಿರಿಯಾನಿ ಮಾಡ್ಲಿಕ್ಕೆ ಯಾಕೆ ಹೋಗಿದ್ದು... ಜಸ್ಟ್ ಚಿಕನ್ ಕರಿ, ಮತ್ತು ಮಾಮೂಲಿ ರೈಸ್ ಮಾಡಿಯೇ ಊಟ ಮಾಡಿ ಮುಗಿಸಬಹುದಿತ್ತಲ್ಲಾ... ಎಂದು.ಆದರೆ ನಾನು ಏನೂ ಹೇಳ್ಲಿಲ್ಲ. 


ಉಲ್ಲಾಸ್ ಮಾತ್ರ ಆಹಾ.. ಓಹೋ.. ಎನ್ನುತ್ತಾ ಪ್ರವೀಣನ ಬಿರಿಯಾನಿಯಲ್ಲಿದ್ದ ಚಿಕನ್ ಗ್ರೇವಿಯ ಭಯಂಕರ ಗುಣಗಾನ ಮಾಡುತ್ತಿದ್ದ.


ನಾನು ಊಟ ಮಾಡಿದ ತಟ್ಟೆ ತೊಳೆಯಲು ಕಿಚನ್ ನ ಸಿಂಕ್ ಕಡೆಗೆ ಹೋದಾಗ,ಅಲ್ಲೇ ಬಿದ್ದಿದ್ದ ಕಡಾಯಿ ಪಾತ್ರೆಯ ಬಾಯಿಗೆ ಮೆತ್ತಿಸಿದ್ದ ಮೈದಾ ಹಿಟ್ಟಿನ ದಂಡೆ ನನ್ನನ್ನು ನೋಡಿ ... "ಅನ್ಯಾಯವಾಗಿ ನನ್ನನ್ನು ಕೂಡ ವೇಸ್ಟ್ ಮಾಡಿದ್ರಿ.. ನಿಮಗೆ ನನ್ನನ್ನು ಉಪಯೋಗಿಸಿ ಬನ್ಸ್ ಆದ್ರೂ ಮಾಡಬಹುದಿತ್ತಲ್ವಾ .. " ಎಂದು ನನಗೆ ಅಣಕವಾಡುತ್ತ ಹೇಳಿದಂತೆ  ಭಾಸವಾಯಿತು.


ಉಲ್ಲಾಸ್ ಮಾತ್ರ ಹಾಲ್ ನಲ್ಲಿ ಊಟ ಮಾಡುತ್ತಾ ಪ್ರವೀಣನಿಗೆ ಹೇಳುತ್ತಲೇ ಇದ್ದ .."ಪ್ರವೀಣ...ಎಂತ ಆಗಲ್ಲ...ನೆಕ್ಸ್ಟ್ ಸಂಡೆ ಕೂಡ ನಾವು ಬಿರಿಯಾಣಿ ಮಾಡುವುದೇ,ಬಿರಿಯಾಣಿ ತಿನ್ನುವುದೇ.. ನನಗೆ ನಂಬಿಕೆ ಇದೆ ನೆಕ್ಸ್ಟ್ ಖಂಡಿತವಾಗಿಯೂ ಈ ರೀತಿ ಎಲ್ಲಾ ಆಗುವುದಿಲ್ಲ.. ಒಂದು ವೇಳೆ ಹಾಳಾದರೂ ತಿನ್ಲಿಕ್ಕೆ ಹೇಗೋ ನಾವು ಇದ್ದೇ ಇರುತ್ತೇವೆ ಅಲ್ವಾ.... "



.....................................................................................



#ವಿಷಯ_ಎಂತ_ಗೊತ್ತುಂಟಾ


Ab Pacchu

ಚಿತ್ರ ಕೃಪೆ - ಅಂತರ್ಜಾಲ

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..