ಕಪ್ಪು ಸೂರ್ಯ
ನೈತನುಪ್ಪು ತಿನ್ನುವುದಕ್ಕಿಂತಲೂ ಕೆಲವೊಮ್ಮೆ ನೋಡಲು ಇಷ್ಟವಾಗುತ್ತದೆ.ತುಪ್ಪದ ಅನ್ನ ಉದುರುದುರಾಗಿ ಘಮ್ಮೆನ್ನುತ್ತಾ ಹರಡಿಕೊಂಡರೂ ಬರೀ ಅಷ್ಟಕ್ಕೆ ಅದು ಚಂದ ಅಲ್ಲ,ಚಕ್ರ ಮೊಗ್ಗು ಬಿಳಿಯ ಅನ್ನದ ಯಾವುದೇ ಒಂದು ಕೆನ್ನೆಯಲ್ಲಿ ಆತುಕೊಂಡು ಒಂಚೂರೇ ಚೂರು ದರ್ಶನ ಕೊಟ್ಟರೂ ಸಾಕು ಕಣ್ಣಿಗೆ ಅದೆನೋ ಹಿತ.ಪೋಟೋ ಸೆಷನ್ ಗೆ ಅಂತು ಅದು ಯಾವತ್ತೂ ಅನ್ನದ ಸೆಂಟರ್ ನಲ್ಲಿಯೇ ಇರಬೇಕು.. ಹೈಸ್ಕೂಲ್ ನ ಖಡಕ್ ಪ್ರಿನ್ಸಿಪಾಲರಂತೆ ಬಾಯಿ ಬಿಟ್ಟು ನಗದಿದ್ದರೂ ಸಹ.
ತಿನ್ನಲು ಬರುವುದಿಲ್ಲ ನಿಜ,ಆದರೆ ಅದು ಇರಬೇಕು.ಚಕ್ರ ಮೊಗ್ಗು ನೈಚೋರಿನ ಕಪ್ಪು ಸೂರ್ಯನಂತೆ.ಹೊಳೆಯದಿದ್ದರೂ ಬಿಳಿಯ ಬಣ್ಣದ ಘೀರೈಸಿನಲ್ಲಿ ಅದು ಎಲ್ಲಾದರೂ ಒಂದು ಕಡೆ ಅದರಷ್ಟಕ್ಕೆ ಹೊರಳಲೇಬೇಕು.ಆಗಲೇ ಮನಸ್ಸಿಗೆ ತಕ್ಕ ಮಟ್ಟಿನ ಸಮಾಧಾನ.
ಅಲಂಕಾರವೇ ಅಡುಗೆ ಅಲ್ಲ.ಒಗ್ಗರಣೆಯೇ ಇಲ್ಲದಿದ್ದರೂ ಹೊಟ್ಟೆ ತಂಪಾಗಬಹುದು ಆದರೆ ಕಣ್ಣು ಅಲ್ಲ.ಜಿಹ್ವೆಗೂ ಕಣ್ಣಿಗೂ ದಿವ್ಯವಾದ ಒಂದು ಕನೆಕ್ಷನ್ ಬಹಳ ಹಿಂದಿನಿಂದಲೇ ಇದೆ.ನನಗಂತು ಮೊದಲು ಕಣ್ಣು ಇಷ್ಟ ಪಡಬೇಕು, ಹೃದಯ ಅಲ್ಲ.ಆಮೇಲೆ ಅಷ್ಟೇ ಉದರಕ್ಕೆ ಅದರ ಕಾರ್ಯ ಮಾಡಲು ಶರತ್ತು ರಹಿತ ಅನುಮತಿ.
ಬರೀ ಇದೊಂದೇ ಅಲ್ಲ.. ಇಂತಹದ್ದು ತುಂಬಾ ಇದೆ.ಶ್ಯಾವಿಗೆ ಪಾಯಸದ ಕೆನೆ ಬಣ್ಣದ ಮೇಲ್ಬಾಗದಲ್ಲಿ ಹುರಿದ ಗೋಡಂಬಿ ಇದ್ದರಷ್ಟೇ ಆ ಪರಮಾನ್ನಕ್ಕೊಂದು ಭೂಷಣ,ಬೇಕರಿ ಲಾಡಿನಲ್ಲಿ ಒಂದೆರಡು ಲವಂಗ, ತಿಮ್ಮಪ್ಪನ ಲಡ್ಡು ಪ್ರಸಾಧದಲ್ಲಿ ಗೋಡಂಬಿ ಸಹಿತ ಸಾಕಷ್ಟು ಏಲಕ್ಕಿ ಸಿಪ್ಪೆ,ಪುಳಿಯೋಗರೆಯಲ್ಲಿ ಬಿದ್ದು ಪಾವನವಾಗುವ ನೆಲಕಡಲೆ,ಮೊಸರನ್ನದಲ್ಲಿ ಹರಳಿನಂತೆ ಕಂಗೊಳಿಸುವ ದಾಳಿಂಬೆ ಕಾಳು,ಬಿಳಿಯ ಮಜ್ಜಿಗೆಗೆ ಕರಿಯ ಸಾಸಿವೆಯದ್ದೇ ಒಗ್ಗರಣೆ, ಪುನರ್ಪುಳಿಯ ಬಿಸಿ ಬಿಸಿ ಸಾರಿನಲ್ಲಿ ಬೆಳ್ಳುಳ್ಳಿಯದ್ದೇ ಸಿಪ್ಪೆ,ಪುಲಾವ್ ನಲ್ಲಿ ಸ್ವಾದ ಬಿಟ್ಟುಕೊಟ್ಟು ನಲುಗಿ ಹೋಗುವ ಒಂದಷ್ಟು ಒಣ ಎಲೆ,ಲತ್ತನೆಯ ಉಪ್ಪುಕರಿಗೆ ಹಿತ್ತಲಿನ ಕರಿಬೇವು ಸೊಪ್ಪು,ಪೆಲಕಾಯಿ ಗಟ್ಟಿಯ ನಡು ನಡುವೆ ಶ್ರದ್ಧೆಯಿಂದ ಅಮ್ಮ ತುಂಡರಿಸಿ ಹಾಕಿದ ಒಂದಷ್ಟು ಒಣಕೊಬ್ಬರಿ,ರಸಂ ನಲ್ಲಿ ಈಜಾಡುವ ಒಗ್ಗರಣೆಯ ಗಿಡ್ಡ ಮೆಣಸು,ಎಕ್ಸೆಟ್ರಾ ಎಕ್ಸೆಟ್ರಾ ... ಇವೆಲ್ಲಾ ಇರಲೇ ಬೇಕು.ಎಷ್ಟು ಬೇಕೋ ಅಷ್ಟೇ.ಜಾಸ್ತಿ ಕೂಡ ಆಗಬಾರದು.
ಕೆಲವೊಂದನ್ನು ತಿನ್ನಬಹುದು, ಇನ್ನು ಕೆಲವೊಂದನ್ನು ಎತ್ತಿ ಪಕ್ಕಕ್ಕಿಟ್ಟು ಮುಖ್ಯವಾದದ್ದನ್ನು ಮಾತ್ರ ತಿನ್ನಬೇಕಾಗುತ್ತದೆ. ಜೀವನವೂ ಹೆಚ್ಚು ಕಡಿಮೆ ಹಾಗೇ ಅಲ್ವಾ.ನೈತನುಪ್ಪು ಎದುರಿಗಿಟ್ಟುಕೊಂಡು ಫಿಲೋಸಪಿ ಮಾತಾಡಬಾರದು,ಅಡುಗೆ ಮನೆಯಲ್ಲಿ ಹಸಿವು ಒಂದೇ ಅತೀ ದೊಡ್ಡ ಫಿಲೋಸಪರ್.ಉದರದ ತಾಳಕ್ಕೆ ಹಸಿವು ಹೆಚ್ಚಾಗುವಾಗ ಚಕ್ರ ಮೊಗ್ಗು ಪಕ್ಕಕ್ಕಿಟ್ಟು ನೈತನುಪ್ಪು ಸವಿಯುವತ್ತ ಗಮನ ಹರಿಸುವವನೇ ಆ ಕ್ಷಣಕ್ಕೆ ಜಾಣ.
ನನ್ನ ಒಲವಿನ ಬಣ್ಣ,ಬರೀ ಅಡುಗೆಯದ್ದೇ ಬಣ್ಣ,ಅಲಂಕಾರ ನನಗೆ ಬೇಡದಿದ್ದರೂ ಅಡುಗೆಗೆ ಇರಲೇಬೇಕು..ತಕ್ಕಮಟ್ಟಿಗೆ.ಯಾವುತ್ತೋ ಒಂದು ದಿನ ಅಪರೂಪಕ್ಕೆ ಅಷ್ಟೇ ನೈತನುಪ್ಪು ಇಷ್ಟವಾಗಬೇಕು,ಪ್ರತೀ ದಿನ ಅಲ್ಲ.ಏನೂ ಇರದೇ ಇದ್ದಾಗ ಗಂಜಿ ಊಟವೇ ಒಡಲು ತಂಪಾಗಿಸುವ ಪರಮಾತ್ಮ.
.....................................................................................
#ಏನೋ_ಒಂದು
ab pacchu
Comments
Post a Comment