ಮೂಡೆ ಮತ್ತು ಕರ್ಕಟ್ಟೆ ಮುಳ್ಳು
ಗುಡ್ಡದ ನೆತ್ತಿಯಲ್ಲಿ ಇದೊಂದು ಮುಳ್ಳು ಅದರಷ್ಟಕ್ಕೆ ಯಾವ ಆರೈಕೆಯೂ ಇಲ್ಲದೆ ತನ್ನಿಂತಾನೆ ಬೆಳೆದು ಬಿಡುತ್ತದೆ.
ನನಗೆ ಚಿಕ್ಕಂದಿನಿಂದಲೂ ಈ ಮುಳ್ಳೆಂದರೆ ಇಷ್ಟ,ಅದೇ ರೀತಿ ವಿಚಿತ್ರವಾದ ಅಕ್ಕರೆ ಕೂಡ.ಆದರೆ ಇದರೊಂದಿಗೆ ಆಟವಾಡಲು ಅಲ್ಲ,ತಿಂಡಿ ಮಾಡುವಲ್ಲಿ ಇವುಗಳದ್ದೊಂದು ವಿಶಿಷ್ಟವಾದ ಸಹಕಾರಕ್ಕಾಗಿ ನನಗಿದು ಇಷ್ಟ.ಹಾಗಾಗಿ ಹಲವಾರು ಬಗೆಯ ಮುಳ್ಳುಗಳಲ್ಲಿ ಇದೊಂದು ಮುಳ್ಳು ಹೆಚ್ಚು ಇಷ್ಟವಾಗಿ ಬಿಟ್ಟಿದೆ ನನಗೆ.
ಮೂಡೆ,ಗುಂಡ ದಂತಹ ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಲು ಬೇಕಾಗುವ ಕೊಟ್ಟೆಗಳನ್ನು ಕಟ್ಟಲು ಈ ಒಂದು ಮುಳ್ಳು ಇದ್ದು ಬಿಟ್ಟರೆ ಬಹಳನೇ ಅನುಕೂಲ.
ಹಾಗಾಗಿ ಇದರದ್ದೊಂದು ಗಿಡ ಗುಡ್ಡದಲ್ಲಿ ಆಗಲಿ ಅಥವಾ ನಮ್ಮ ಜಾಗದಲ್ಲಿ ಎಲ್ಲೇ ಕಣ್ಣಿಗೆ ಬಿದ್ದರೂ ಹಿಂದೆ ಎಲ್ಲಾ ನನ್ನಮ್ಮ ಅದನ್ನು ಕಡಿಯದೇ ಹಾಗೇ ಅದರ ಬುಡದಲ್ಲಿರುವ ಇತರ ಪೊದೆಗಳನ್ನಷ್ಟೇ ತೆಗೆದು ಈ ಮುಳ್ಳಿನ ಗಿಡಕ್ಕೆ ನೆಮ್ಮದಿಯಾಗಿ ಉಸಿರಾಡಲು ಮತ್ತು ಬೆಳೆದು ದೊಡ್ಡದಾಗಿ ತಲೆ ಎತ್ತಿ ನಿಲ್ಲಲು ಅನುಕೂಲ ಮಾಡಿ ಕೊಡುತ್ತಿದ್ದಳು.
ಆದರೆ ಈಗೀಗ ನಮ್ಮ ಜಾಗದಲ್ಲೂ ಇದರದ್ದೊಂದು ಪತ್ತೆಯೇ ಇಲ್ಲ.ಹಾಗೇ ನಾಪತ್ತೆಯಾಗಿ ಬಿಟ್ಟಿದೆ ಈ ಮುಳ್ಳಿನ ಗಿಡ.ಅಳಿವಿನಂಚಿಗೆ ಸರಿದಿದೆ ಎಂದರೆ ಮತ್ತಷ್ಟು ಸರಿಯಾಗುತ್ತದೆ!
ಮೊನ್ನೆ ಮನೆಯ ಮೇಲಿನ ಗುಡ್ಡದಲ್ಲಿ ಸುಮ್ಮನೆ ಸುತ್ತಾಡುವಾಗ ಒಂದಷ್ಟು ಪೊದೆಗಳ ನಡುವೆ ಈ ಮುಳ್ಳಿನ ದೊಡ್ಡ ಗಿಡಗಳು ಕಣ್ಣಿಗೆ ಬಿದ್ದು ಬಿಟ್ಟವು.ನೋಡಿ ಖುಷಿಯಾಯಿತು.ಹಾಗಾಗಿ ಇಂದು ಮನೆಯಿಂದ ಕತ್ತಿ ತೆಗೆದುಕೊಂಡು ಹೋಗಿ ಗಿಡದ ಸುತ್ತಲಿದ್ದ ಪೊದೆಯನ್ನು ಬಿಡಿಸಿ ಬೇಕಾದಷ್ಟು ಮುಳ್ಳಿನ ಗೆಲ್ಲುಗಳನ್ನು ಕಡಿದು ಮನೆಗೆ ತಂದೆ.
ಗೆಲ್ಲುಗಳನ್ನು ಗಿಡದಿಂದ ಕಡಿದಷ್ಟು ಮತ್ತಷ್ಟು ಗೆಲ್ಲುಗಳು ಗಿಡದಿಂದ ಸೊಂಪಾಗಿ ಮೂಡುತ್ತದೆ ಮಾತ್ರವಲ್ಲ ಹಳೆಯ ಗೆಲ್ಲುಗಳಿಗಿಂತ ಹೊಸ ಗೆಲ್ಲುಗಳ ಮುಳ್ಳುಗಳೇ ನಮಗೆ ಮೂಡೆ ಕಟ್ಟಲು ಬಹಳ ಚೆನ್ನಾಗಿರುತ್ತದೆ.
ಇನ್ನು ಗೆಲ್ಲುಗಳ ಒಂದೊಂದೇ ಮುಳ್ಳುಗಳನ್ನು ಮನೆಯಲ್ಲಿ ಕುಳಿತುಕೊಂಡು ಶ್ರದ್ಧೆಯಿಂದ ಬಿಡಿಸಬೇಕು.ಒಮ್ಮೆಗೆ ಎಲ್ಲಾ ಮುಳ್ಳುಗಳನ್ನು ತೆಗೆದು ಇಟ್ಟುಕೊಂಡರೆ ಒಂದು ವರ್ಷದವರೆಗೂ ಅವುಗಳು ಹಾಳಾಗುವುದಿಲ್ಲ.ವರ್ಷ ಪೂರ್ತಿ ಮೂಡೆ ಮಾಡಲು ಈ ಮುಳ್ಳುಗಳನ್ನು ಬಳಸುತ್ತಲೇ ಇರಬಹುದು.
ಮುಂದೆ ಅಷ್ಟಮಿ,ಚೌತಿ,ನವರಾತ್ರಿಯಂತಹ ಹಬ್ಬ ಬಂದಾಗ ಮೂಡೆ, ಗುಂಡ, ಕೊಟ್ಟಿಗೆಗಳು ತುಳುನಾಡಿನ ಮನೆ ಮನೆಯಲ್ಲೂ ಇಡ್ಲಿ ಪಾತ್ರೆಯ ತುಂಬೆಲ್ಲಾ ಘಮಘಮಿಸದ್ದಿದ್ದರೆ ಆವಾಗ ಹಬ್ಬಕ್ಕೊಂದು ಕಳೆಯೇ ಇರುವುದಿಲ್ಲ ನಮ್ಮಲ್ಲಿ.ಆವಾಗ ಬಿದಿರಿನ ಕಡ್ಡಿ,ತೆಂಗಿನ ಗರಿಯ ಒಣ ಕಡ್ಡಿಯಿಂದಲೂ ಇವುಗಳ ಕೊಟ್ಟೆಗಳನ್ನು ಕಟ್ಟಬಹುದಾದರೂ,ಆ ಕಡ್ಡಿಗಳನ್ನು ಬಳಸಲು ಆ ನಂತರ ಪುನಃ ಅವುಗಳನ್ನು ಚೂಪುಗೊಳಿಸಬೇಕಾಗುತ್ತದೆ.
ಈಗೀಗ ಸೂಪರ್ ಮಾರ್ಕೆಟ್ ಗಳಲ್ಲಿ ಮೂಡೆ ಹಾಗೂ ಗುಂಡ ಕಟ್ಟಲು ಬೇಕಾಗುವ ಬಿದಿರಿನ ರೆಡಿಮೇಡ್ ಕಡ್ಡಿಗಳು ಕೂಡ ಬಂದಿದೆ. ಒಂದು ಕಟ್ಟಿಗೆ ಹದಿನೈದು, ಇಪ್ಪತ್ತು ರೂಪಾಯಿವರೆಗೆ ಉಂಟು.ಅದನ್ನು ಕೂಡ ತೆಗೆದುಕೊಂಡು ಬಂದು ಮೂಡೆ ಗುಂಡಗಳನ್ನು ಕಟ್ಟಿದ್ದೇನೆ ನಾನು. ಆದರೆ ನೈಸರ್ಗಿಕವಾಗಿ ಸಿಗುವ ಮುಳ್ಳಿನಷ್ಟು ಚಂದಗೆ ಆ ಕಡ್ಡಿಯಲ್ಲೂ ಮೂಡೆಯಾಗಲಿ ಗುಂಡವಾಗಲಿ ಕಟ್ಟಲು ಬರುವುದಿಲ್ಲ.
ಏಕೆಂದರೆ ಈ ಮುಳ್ಳು ನಮಗೆ ಎಲ್ಲಾ ರೀತಿಯಿಂದಲೂ ಬಹಳ ಅನುಕೂಲಕಾರಿ .ಈ ಮುಳ್ಳು ಬಹಳ ಗಟ್ಟಿ ಹಾಗೂ ಅಷ್ಟೇ ಚೂಪು ಕೂಡ. ಹಾಗಾಗಿ ಇದು ಒಂದು ಇದ್ದು ಬಿಟ್ಟರೆ ಬಹಳ ಸುಲಭವಾಗಿ ಒಂದರ ನಂತರ ಒಂದು ಮೂಡೆ,ಗುಂಡ ಗಳನ್ನು ಮಾಡುತ್ತಲೇ ಹೋಗಬಹುದು ನಾವು. ಕಡ್ಡಿಯನ್ನು ಚೂಪುಗೊಳಿಸುವಂತೆ ಇದರಲ್ಲಿ ಅಂತಹ ಯಾವುದೇ ಕೆಲಸ ಕೂಡ ಇರುವುದಿಲ್ಲ.
ತುಳುವಿನಲ್ಲಿ ಈ ಮುಳ್ಳಿನ ಹೆಸರು "ಕರ್ಕಟ್ಟೆ ಮುಳ್ಳು" ಎಂದು. ಕರ್ಕಟೆ ಮುಳ್ಳು, ಕರ್ಕಡ ಮುಳ್ಳು ಎಂದು ಕೂಡ ಹೇಳುತ್ತಾರೆ.ಮೂಡೆ ಮಾಡಲು ಹೆಚ್ಚಾಗಿ ಇದನ್ನೇ ಬಳಸುವುದರಿಂದ ಕೆಲವರು ಇದಕ್ಕೆ ಮೂಡೆ ಮುಳ್ಳು ಎಂದೇ ಹೇಳುತ್ತಾರೆ.
ಮೂಡೆ,ಗುಂಡ ಹಾಗೂ ಕೊಟ್ಟಿಗೆ ಇವುಗಳ ಬಗ್ಗೆ ಹೆಚ್ಚಾಗಿ ಕೆಲವರಿಗೆ ಗೊಂದಲವಿದೆ.ಏಕೆಂದರೆ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಈ ತಿಂಡಿಗಳ ಹೆಸರನ್ನು ಅದಲು ಬದಲು ಮಾಡಿಯೇ ಕರೆಯುತ್ತಾರೆ.ಕೆಲವು ಕಡೆ ಈ ಮೂರಕ್ಕೂ ಕೊಟ್ಟಿಗೆ ಇಲ್ಲವೇ ಕೊಟ್ಟೆ ಎಂದೇ ಕರೆಯುತ್ತಾರೆ.
ಆದರೆ ನಮ್ಮಲ್ಲಿ ಈ ಮೂರು ಬೇರೆ ಬೇರೆಯೇ.ಮುಂಡೇವು ಇಲ್ಲವೇ ಕೇದಗೆಯ ಒಲಿಯಿಂದ(ಎಲೆ) ಮಾಡುವ ತಿಂಡಿಗೆ ಮೂಡೆ ಎಂದು,ಹಲಸಿನ ನಾಲ್ಕು ಎಲೆಯಿಂದ ಮಾಡುವ ತಿಂಡಿಗೆ ಗುಂಡ ಎಂದು, ಬಾಳೆ ಎಲೆಯನ್ನು ಬಾಡಿಸಿ ಅದರಿಂದ ಕೊಟ್ಟೆ ಕಟ್ಟಿ ಮಾಡುವ ತಿಂಡಿಗೆ ಕೊಟ್ಟಿಗೆ ಎಂದು ಕರೆಯುತ್ತಾರೆ.
ಈ ಮೂಡೆ ಎಂಬ ಪರಿಮಳದ ತಿನಿಸಿನ ಉಲ್ಲೇಖ ಕವಿ ಮುದ್ದಣನ ಕಾವ್ಯದಲ್ಲಿ ಕೂಡ ಉಂಟಂತೆ.ಈ ಮೂರು ವಿಭಿನ್ನ ಪ್ರಕಾರದ ತಿಂಡಿಗೂ ಕೊಟ್ಟೆ ಬೇರೆ ಬೇರೆಯಾದರೂ ಹಿಟ್ಟು ಮಾತ್ರ ಒಂದೇ,ಅದುವೇ ಇಡ್ಲಿಯ ಹಿಟ್ಟು.ಕೊಟ್ಟೆ ಅಂದರೆ ಹಿಟ್ಟು ಹಾಕುವ ಎಲೆಯ ಮೌಲ್ಡು.ಕೊಟ್ಟೆಯಲ್ಲಿ ಹಿಟ್ಟು ಹಾಕಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ಆಯಿತು.ಅಂದ ಹಾಗೆ ಈ ಮೂರರ ಕೊಟ್ಟೆ ತಯಾರಿಯಲ್ಲೂ ನಾವು ಈ ಕರ್ಕಟೆ ಮುಳ್ಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತೇವೆ.
ಈಗೀಗ ನಮ್ಮ ಜಾಗದಲ್ಲಿ ಮಾತ್ರವಲ್ಲ ಗುಡ್ಡಗಳಲ್ಲಿ ಸಹ ಈ ಮುಳ್ಳು ಗಿಡಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ.ಏಕೆಂದರೆ ಮನೆಗಳಲ್ಲಿ ಮೂಡೆಯ ಕಟ್ಟುವವರ ಸಂಖ್ಯೆ ಕೂಡ ಕಡಿಮೆ ಆಗಿ ಹೋಗಿದೆ.ದುಡ್ಡು ಎಷ್ಟೇ ಹೆಚ್ಚಾದರೂ ಹಬ್ಬ ಹರಿದಿನಗಳಲ್ಲಿ ಹಣ ಕೊಟ್ಟು ಮಾರ್ಕೆಟ್ ನಿಂದಲೇ ಮೂಡೆಯ ಕೊಟ್ಟೆಯನ್ನು ತರುವತ್ತ ನಮ್ಮವರು ಮನಸ್ಸು ಮಾಡುತ್ತಿದ್ದಾರೆ.ಹಾಗಾಗಿ ಈಗ ತಮ್ಮ ತಮ್ಮ ಗುಡ್ಡದಲ್ಲಿ, ಜಾಗದಲ್ಲಿ ಇಂತಹ ಮುಳ್ಳಿನ ಗಿಡ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕುತ್ತಿದ್ದಾರೆ ಎಲ್ಲರೂ ಕೂಡ.
ಹಿಂದೆ ಎಲ್ಲಾ ಕಡೆ ಬೇಕಾದಷ್ಟು ಇರುತ್ತಿತ್ತು.ಆದರೆ ಇವಾಗ ಅಷ್ಟಮಿ ಚೌತಿ ಬಂದಾಗ ಗುಡ್ಡದಲ್ಲಿ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ.ಕೆಲವೊಮ್ಮೆ ನಾನು ಆಲೋಚನೆ ಮಾಡುವುದು ಕೂಡ ಉಂಟು, ಏಕೆ ಈ ಗುಡ್ಡದಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಕರ್ಕಟೆ ಮುಳ್ಳಿನ ಗಿಡಗಳನ್ನು ಬೇರು ಸಹಿತ ಕಿತ್ತುಕೊಂಡು ಹೋಗಿ ನಮ್ಮ ಜಾಗದಲ್ಲಿ ಅಲ್ಲಲ್ಲಿ ನೆಡಬಾರದು, ಆವಾಗ ಅಷ್ಟಮಿಗೆ ಮೂಡೆ ಮಾಡಲು ಇದರದ್ದೊಂದು ಮುಳ್ಳಿಗಾಗಿ ಅಲ್ಲಿ ಇಲ್ಲಿ ಪರದಾಡಬೇಕಿಲ್ಲ ಎಂದು ಆಲೋಚಿಸಿದ್ದು ಉಂಟು.
ಮನೆಯಲ್ಲಿ ನನ್ನ ಮುಂದಾಲೋಚನೆಯನ್ನು ಎಷ್ಟೋ ಸಲ ಹೇಳಿದ್ದೇನೆ ಕೂಡ.ಅದಕ್ಕೆ ಅವರು.. ಎಲ್ಲರೂ ಒಳ್ಳೆಯ ಜಾತಿಯ ಗಿಡಗಳನ್ನು ತಂದು ನೆಡುತ್ತಾರೆ.. ನೀನು ನೋಡಿದರೆ ಮುಳ್ಳಿನ ಗಿಡಗಳನ್ನು ಜಾಗದ ತುಂಬಾ ಹಬ್ಬಿಸಬೇಕು ಎಂದು ಇದ್ದೀಯಾ...ನಿನ್ನ ತಲೆಗೆ ಇಂತಹ ಡಬ್ಬಾ ಐಡಿಯಾಗಳು ಬಿಟ್ಟರೆ ಬೇರೆ ಏನೂ ಹೊಳೆಯುವುದೇ ಇಲ್ಲ ಅಲಾ,ಮೂಡೆ ಮಾಡುವ ಅಂತಹ ಆಸಕ್ತಿ ಇದ್ದರೆ ಗುಡ್ಡಕ್ಕೆ ಹೋಗಿಯೇ ಮುಳ್ಳು ಕಿತ್ತು ತಾ..ನಮಗೆ ಹಬ್ಬಕ್ಕೆ ಇಡ್ಲಿ ಮಾಡಿ ತಿಂದರೂ ಅಂತಹ ಸಮಸ್ಯೆ ಏನಿಲ್ಲ..ಮೂಡೆಯ ರಾವು ಹಿಡಿದಿರುವುದು ನಮ್ಮ ಮನೆಯಲ್ಲಿ ನಿನಗೊಬ್ಬನಿಗೆಯೇ... ಎಂದು ನನ್ನಾಸೆಗೆ ತಣ್ಣೀರು ಎರೆಚುವ ಸಿದ್ಧ ಉತ್ತರವೇ ಅವರಿಂದ ಪ್ರತೀ ಸಲ ಬಂದಿದೆ.
ಅಷ್ಟಮಿಗೆ ಇಡ್ಲಿಯೇ..? ಸಾಧ್ಯವೇ ಇಲ್ಲ. ನನ್ನ ಮನಸ್ಸು ಒಪ್ಪದು.
ಹಾಗಾಗಿ ಮೂಡೆಯೂ ಬೇಕು.ಮುಳ್ಳಿನ ಗಿಡವೂ ಉಳಿಯಬೇಕು ನನಗೆ.ಐದು ವರ್ಷದ ಹಿಂದೆ ಗುಡ್ಡದಿಂದ ಕರಂಡೆ ಗಿಡವನ್ನು ತಂದು ಜಾಗದೊಳಗೆ ನೆಟ್ಟಂತೆ, ಈ ಬಾರಿ ಹೇಗಾದರೂ ಮಾಡಿ ಕರ್ಕಟೆ ಮುಳ್ಳಿನ ಗಿಡಗಳಿಗೂ ಕೂಡ ನಮ್ಮ ಜಾಗದೊಳಗೆ ಕನಿಷ್ಠ ಪಕ್ಷ ಬೇಲಿ ಬದಿಗಾದರೂ ಒಂದು ಎಂಟ್ರಿ ಕೊಡಿಸಬೇಕು ಅಂತ ಮನಸ್ಸಿನಲ್ಲಿಯೇ ನಿರ್ಧರಿಸಿದ್ದೇನೆ.
ಏಕೆಂದರೆ ಇತರರಿಗೆ ಇದು ಬರೀ ಮುಳ್ಳಿನ ಗಿಡವೇ ಇರಬಹುದು ಆದರೆ ನನಗೆ ಈ ಮುಳ್ಳುಗಳಲ್ಲಿಯೇ ಬಾಲ್ಯದಲ್ಲಿ ಶ್ರದ್ಧೆಯಿಂದ ಮೂಡೆ ಎಟ್ಟಿದ(ಕಟ್ಟಿದ) ನನ್ನ ಹಲವಾರು ನೆನಪುಗಳಿವೆ.ಬಾಲ್ಯದಲ್ಲಿ ಮಾತ್ರವಲ್ಲ ಈಗಲೂ ಅಷ್ಟಮಿ ಚೌತಿಯ ದಿನಗಳಂದು ಉತ್ಸಾಹದಿಂದ ಸಂಭ್ರಮದಿಂದ ಮೂಡೆ ಕಟ್ಟಿದಾಗ,ಮನೆಗೆಂದು ಮಾಡಿದ್ದು ಹೆಚ್ಚಾದರೆ ಸುತ್ತ ಮುತ್ತಲಿನ ಮನೆಯವರಿಗೆಲ್ಲ ಮಾರುವಾಗ ತಕ್ಕ ಮಟ್ಟಿಗೆ ನನ್ನ ಜೇಬನ್ನು ಬಿಸಿ ಮಾಡುವ ಈ ಮೂಡೆಗಳಲ್ಲಿ ಈ ಕರ್ಕಟೆ ಮುಳ್ಳಿನ ಪಾತ್ರವೂ ಕೂಡ ಅಷ್ಟೇ ಅಪಾರವಾದದ್ದು.. ಹಾಗೂ ನನಗಂತು ದಿವ್ಯವಾದದ್ದು.ಏಕೆಂದರೆ ಮೂಡೆ ಕಟ್ಟುವ ನನ್ನ ಅಚ್ಚುಮೆಚ್ಚಿನ ಕೆಲಸವನ್ನು ಪ್ರತೀ ಬಾರಿಯೂ ಸುಲಭ ಮಾಡಿಕೊಡುವುದು ಈ ಮುಳ್ಳುಗಳೇ.
ಮುಂದೆ ಈ ಮುಳ್ಳಿನ ಗಿಡ ಮನುಷ್ಯನ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಕಣ್ಮರೆಯಾದರೆ ಆವಾಗ ಅದು ಬರೀ ನೆನಪುಗಳಲ್ಲಿಯೇ ಇರಬೇಕಾಗುತ್ತದೆ ಅಷ್ಟೇ. ನೆನಪುಗಳಿಗಾದರೂ ಮನಸ್ಸಿನಲ್ಲಿ ಜಾಗ ಕೊಡಬಹುದು ಆದರೆ ಮುಳ್ಳುಗಳಿಗೆ ಜಾಗ ಕೊಡಲು ನಮ್ಮಂತಹ ಮನುಷ್ಯರಿಗೆ ಬಹಳ ಕಷ್ಟ ಸಾಧ್ಯ.ಅದರಲ್ಲೂ ಉಪಯೋಗಿ ಮುಳ್ಳಿನ ಗಿಡಗಳು ನಶಿಸಿ ಹೋಗುವುದು ನಿಜಕ್ಕೂ ಬೇಸರದ ಸಂಗತಿಯೇ...
ಹೂವೇ ಬಿಡದ ಕ್ರೋಟನ್ ಗಿಡಗಳು ಮನೆಯ ಅಂಗಳದಲ್ಲಿಯೇ ರಾಜರೋಷವಾಗಿ ಯಜಮಾನನ ಆರೈಕೆಯಿಂದ ನಳನಳಿಸುವಾಗ ಬೇಲಿ ಗಿಡಗಳಿಗೆ ಕನಿಷ್ಠ ಪಕ್ಷ ಬೇಲಿಯಲ್ಲೂ ನರಳುವ ಭಾಗ್ಯವಿಲ್ಲ,ಕಲ್ಲಿನ ಕಾಂಪೌಂಡ್ ಗಳು,ತಂತಿ ಬೇಲಿಯ ಕಾಂಪೌಂಡ್ ಗಳು ಎಲ್ಲರ ಮನೆಯ ಜಾಗ ಕಾಯಲು ಶುರು ಮಾಡಿ ಅದಾಗಲೇ ಎಷ್ಟೋ ವರುಷಗಳು ಸಂಧಿವೆ!
ಹ್ಞೂಂ.. ಇನ್ನು ಮನೆಗೆ ತಂದಂತಹ ಗೆಲ್ಲುಗಳಿಂದ ಶ್ರದ್ಧೆಯಿಂದ ಮುಳ್ಳು ಬಿಡಿಸಬೇಕಾಗಿದೆ ನಾನು..ಇಡೀ ವರ್ಷಕ್ಕೆ ಬೇಕಾಗುವಷ್ಟು.
ಏಕೆಂದರೆ ಮೂಡೆಯು ಮೇಲಿನ ನನ್ನ ಮೂಡ್ ಅಂತು ಅಷ್ಟು ಸುಲಭವಾಗಿ ಅತ್ತಿಂದಿತ್ತ ಸ್ವಿಂಗ್ ಆಗುವಂತಹದಲ್ಲ.. ಅದು ಯಾವತ್ತಿದ್ದರೂ ನನ್ನಲ್ಲಿ ಕಾನ್ಸ್ಟೆಂಟ್.
.....................................................................................
#ಏನೋ_ಒಂದು..
Ab Pacchu
Comments
Post a Comment