ನೈಚೋರು ರುಚಿಸುವುದಿಲ್ಲ!

 




ಬದುಕು ನಿಂತ ನೀರಲ್ಲ.ಹಾಗಂತ ಅನಿಸುವುದು ಹರಿಯುವ ನದಿ, ಧುಮುಕುವ ತೊರೆಯನ್ನು ತುಂಬಾ ಹೊತ್ತು ದಿಟ್ಟಿಸಿ ನೋಡಿದಾಗಲೇ.ನಾನು ಈಗ ಎಲ್ಲಿ ನಿಂತಿದ್ದೇನೆ ಎಂದು ನನ್ನೊಳಗೆ ನಾನೇ ಚರ್ಚಿಸಿದಾಗ ನೀನು ಇನ್ನೂ ನಿಂತೇ ಇದ್ದೀಯಾ,ಎಲ್ಲರೂ ಅದಾಗಲೇ ಸರಿಯಾದ ಟ್ರ್ಯಾಕ್ ನಲ್ಲಿ ಎದ್ದು ಬಿದ್ದು ಓಡುತ್ತಿದ್ದಾರೆ ಎಂದು ಮನಸ್ಸು ಬೆತ್ತ ಹಿಡಿದು ಎಚ್ಚರಿಸಿ ಬಿಡುತ್ತದೆ.ಒಮ್ಮೆಗೆ ಹೊಳೆಯಂತೆ ಧುಮುಕಿ ರಭಸವಾಗಿ ಹರಿಯದಿದ್ದರೂ ಸಣ್ಣಗೆ ನಡೆಯಬೇಕು ಈಗ ! 


ಹಣ್ಣುಕಾಯಿ ಹಿಡಿದುಕೊಂಡು ದೇವಸ್ಥಾನಕ್ಕೆ ಬಂದಾಗ ದೇವರ ದರ್ಶನದ ಜೊತೆಗೆ ಅವನ ದರ್ಶನವೂ ಆಯಿತು.ನೋಡಿದರೂ ನೋಡದಂತೆ ಇಬ್ಬರೂ ರಪ್ಪನೇ ಮುಖ ತಿರುಗಿಸಿಕೊಂಡು ಬಿಟ್ಟೆವು. ಬಾಲ್ಯದ ಗೆಳೆಯ.ನಮ್ಮಿಬ್ಬರಲ್ಲಿ ಮಾತು ಸತ್ತ ದಿನವೇ  ನಮ್ಮ ಸ್ನೇಹಕ್ಕೂ ಎಳ್ಳು ನೀರು ಬಿಟ್ಟುಕೊಂಡು ಶ್ರಾದ್ಧವೊಂದನ್ನು ಅತೀ ಶ್ರದ್ಧೆಯಿಂದ ನೆರವೇರಿಸಿದಂತೆ ಇಬ್ಬರೂ ಪರಸ್ಪರ ವಿರುದ್ಧ ದಿಕ್ಕಿನತ್ತ ಹೆಜ್ಜೆ ಹಾಕಿ ನಡೆದಿದ್ದೆವು.ಆ ನಂತರ ಅವನೂ ಮಾತಾಡಲಿಲ್ಲ,ನಾನೂ ಮಾತಾಡಲಿಲ್ಲ.ತಪ್ಪು ಇಬ್ಬರದ್ದೂ ಇತ್ತು.ಕಾಲ, ಸಮಯ, ಸಂಧರ್ಭಗಳು ಮಾತ್ರ ಆ ವಿಷ ಘಳಿಗೆಗೆ ತುಪ್ಪವನ್ನೇ ಅತಿಯಾಗಿ ಸುರಿದು ಬಿಟ್ಟಿದ್ದವು.ಈಗಲೂ "ಘೀ"ರೈಸ್ ಮಾಡುವಾಗ ಅವನು ನೆನಪಾಗಿ ಬಿಡುತ್ತಾನೆ,ನೈಚೋರು ರುಚಿಸುವುದಿಲ್ಲ!


ಮೊನ್ನೆ ತಡರಾತ್ರಿ ಕ್ಲಬ್ ಹೌಸ್ ನೊಳಗಿನ ಆ ಒಂದು ಸಂಗೀತದ ಕೋಣೆಯಲ್ಲಿ ಯಾರೋ ಒಬ್ಬ ಚಂದದ ಮೀಸೆಯ ಹುಡುಗ ಅವನೂರಿನ ಪ್ರೇಯಸಿಗಾಗಿ ಹಾಡೊಂದನ್ನು ಬಹಳ ಪ್ರೀತಿಯಿಂದ ಡೆಡಿಕೇಟ್ ಮಾಡಿಸಿದ್ದ.ಅವನ ಕೋರಿಕೆಗೆ ಅನುಸಾರವಾಗಿ ಅಲ್ಲಿದ್ದ ಹಾಡುಗಾರ ಕೂಡ ಬಹಳ ಸೊಗಸಾಗಿಯೇ ಅದನ್ನು ಮನಮುಟ್ಟುವಂತೆ ಹಾಡಿದ್ದ.ಬಹುಶಃ ಹೃದಯದಿಂದಲೇ ಹಾಡಿದ್ದ ಎಂದು ಕಾಣುತ್ತದೆ.ಕೇಳುಗರಲ್ಲಿ ನಾನೂ ಕೂಡ ಇದ್ದೆ.ಮತ್ತೆ ಹಳೆಯ ದಿನಗಳು ನೆನಪಾದವು,ಆ ಹಾಡೂ ನೆನಪಾಯಿತು,ಜೊತೆಗೆ ಅವಳೂ.ಇನ್ನು ಮುಂದೆ ಈ ಹಾಡು ಕೇಳಬಾರದು ಎಂದು ನಿರ್ಧರಿಸಿ ವರುಷಗಳು ಅದಾಗಲೇ ಹದಿನೈದು ಕಳೆದಿತ್ತು,ಆದರೆ ಜಗತ್ತು ಅಲ್ಲಲ್ಲಿ ಮತ್ತೆ ಮತ್ತೆ ಅದನ್ನೇ ನನಗೆ ಕೇಳಿಸುತ್ತಲೇ ಇದೆ.ಅಸಹಾಯಕ ನಾನು! 


ದೇವರ ಮುಂದೆ ಕೈ ಮುಗಿದಾಗ ಹಿಂದೆ ಉದ್ದಕ್ಕೆ ಬೇಡಿಕೆಗಳ ಪಟ್ಟಿ ಇತ್ತು.ಆದರೆ  ಈಗ ಹಾಗಿಲ್ಲ. ಹಾಗಂತ ನಾನು ಜ್ಞಾನಿಯೂ  ಅಲ್ಲ,ಎಲ್ಲವೂ ಇದೆ ಎಂಬ ತೃಪ್ತನೂ ಅಲ್ಲ,ನಿಜ ಹೇಳಬೇಕೆಂದರೆ ನನಗೆ ಏನು ಕೇಳಬೇಕೆಂದೇ ಗೊತ್ತಿಲ್ಲ.ಏಕೆಂದರೆ ಕೇಳಬೇಕಾದ ಪಟ್ಟಿಯೇ ಈಗ ಅತ್ಯಂತ ಉದ್ದವಾಗಿ ಬಿಟ್ಟಿದ್ದೆ. ಯಾವುದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟು ಮೊದಲು ಕೇಳಲಿ ಎಂಬ ಗೊಂದಲಕ್ಕೆ ಬಿದ್ದು ಕೊನೆಗೆ ಆಯ್ಕೆ ಮಾಡುವುದರಲ್ಲಿಯೇ  ಸೋತು ತುಂಬಾ ಬಾಲಿಶವಾದವುಗಳನ್ನು ಕೇಳಿ ಬಿಡುತ್ತೇನೆ.ಮೊನ್ನೆ ಕೂಡ  ಹಾಗೇ ಆಯಿತು " ದೇವರೇ WTC ಕ್ರಿಕೆಟ್ ಫೈನಲ್ ಗೆ ಮಳೆ ಬರದೇ ಇರಲಿ, ಫೈನಲ್ ಒಂದು ಹಾಗೇ ಸಾಂಗವಾಗಿ ನಡೆದು ಬಿಡಲಿ.." ಎಂದಷ್ಟೇ ತೋಚಿದ್ದು ಪ್ರಾರ್ಥಿಸಿ ಬಿಟ್ಟಿದ್ದೆ. ಮಳೆ ಬಂದರೂ ಆಟ ಹೇಗೋ ನಡೆದು  ನನ್ನ ಕೋರಿಕೆಯಂತೆ ಕೊನೆಗೂ ಸ್ಪಷ್ಟ ಫಲಿತಾಂಶವೇ ಬಂದಿತ್ತು,ಆದರೆ ಪಂದ್ಯದಲ್ಲಿ ಮಾತ್ರ ಭಾರತವೇ ಸೋತಿತ್ತು! ಹೃದಯ ಮತ್ತಷ್ಟು ಭಾರವಾಗಿತ್ತು!" ಸರಿಯಾಗಿ ಪ್ರಾರ್ಥಿಸಲು ಕಲಿಯಿರಿ" ಪುಸ್ತಕ ತುರ್ತಾಗಿ ಓದಬೇಕಿದೆ!


ಕಾಲ ಬದಲಾದಂತೆ ತುಂಬಾ ಪರಿಚಿತರು ಅಪರಿಚಿತರಾಗಿ ಬಿಟ್ಟಿದ್ದಾರೆ. ಹೊಸ ಹೊಸ ಅಪರಿಚಿತರು ಅಲ್ಲಲ್ಲಿ ಸ್ನೇಹದ ಹಸ್ತ ಚಾಚುತ್ತಿದ್ದಾರೆ.ಆದರೆ ಚಿರಪರಿಚಿತರಾಗಿದ್ದು ಅಪರಿಚತರಾಗಿ ಹೋದ ನನ್ನದೇ ಗೆಳೆಯರು ಸಿಕ್ಕಾಗಲೆಲ್ಲ  ಹೇಳುತ್ತಾರೆ,ನೀನು ತುಂಬಾ ಸೋಮಾರಿ, ಸಂಬಂಧಗಳನ್ನು ಸರಿಯಾಗಿ ಪೋಷಿಸಲು ನಿನಗೆ ಬರುವುದಿಲ್ಲ ಎಂದು.ಅವರು ಹೇಳಿದ್ದು ತುಂಬಾ ಸಲ ಸರಿ ಎಂದು ನನಗೂ ಅನಿಸಿದೆ.ಹಾಗಾಗಿ ಇಂದಿಗೂ ಹೊಸ ಸ್ನೇಹದ ಹಸ್ತವನ್ನು ನಾನು ಸರಿಯಾಗಿ ಚಾಚಲು ಹೋಗುವುದೇ ಇಲ್ಲ.ಬಹುಶಃ ಅಪರಿಚಿತರನ್ನು ಸೇರಿಸಿ ನನ್ನವರಿಗೂ ಕೂಡ ನಾನೇ ಮತ್ತಷ್ಟು ಅಪರಿಚಿತನಾಗಿಯೇ ಹೋಗುತ್ತಿದ್ದೆನೋ ಏನೋ! ಕಾಲ ಎಲ್ಲವನ್ನೂ ಸರಿ ಮಾಡಲ್ಲ, ನಾನೂ ಒಂದಷ್ಟು ಮಾಡಬೇಕು! 


ಗೋಳಿಬಜೆ ಕಟ್ಟು ಕಟ್ಟಲು ಹಳೆಯ ಪೇಪರ್ ಬಳಸುತ್ತಾರೆ. ಪ್ರತೀ ಸಲ ಕಟ್ಟು ಬಿಡಿಸುವಾಗಲೂ ನನಗೆ ಪ್ರೇಮಪತ್ರಗಳು ಹಾಗೇ ನೆನಪಾಗಿ ಬಿಡುತ್ತದೆ. ಕೋರಿಕೆಯ ಮೇರೆಗೆ ನನ್ನದೇ ಎಷ್ಟೋ ಗೆಳೆಯರಿಗೆ ಕಲ್ಪನೆಗಳನ್ನು ನವಿರಾಗಿ ಹೆಣೆದು ಹಲವಾರು ಪ್ರೇಮಪತ್ರಗಳನ್ನು  ಬರೆದು ಕೊಟ್ಟಿದ್ದೆ ನಾನು.ಹುಡುಗ ಕೊಟ್ಟದ್ದು ಅವನ ಹುಡುಗಿಗೆ ಇಷ್ಟವಾಗಿತ್ತು,ಹುಡುಗಿ ಕೊಟ್ಟದ್ದು ಅವಳ ಹುಡುಗನಿಗೆ ಇಷ್ಟವಾಗಿತ್ತು. ಅವರೆಲ್ಲರ ಪ್ರೇಮವೂ ಗಾಢವಾಗಿಯೇ ಬೆಳೆದು ಹಾಗೇ ಮುಂದುವರಿದಿತ್ತು.ಆದರೆ ಅಷ್ಟೂ ಜನರು ನಿನ್ನೆ ಮೊನ್ನೆ ಬೇರೆ ಬೇರೆಯವರನ್ನೇ ಇಷ್ಟು ಪಟ್ಟು ಮದುವೆ ಆಗಿ ಬಿಟ್ಟರು. ಅವರಿಗೆ ಅವರ ಪ್ರೇಮವೂ ನೆನಪಿಲ್ಲ,ಪ್ರೇಮ ಪತ್ರದಲ್ಲಿದ್ದ ಬರಹವೂ ನೆನಪಿಲ್ಲ. ಆದರೆ ನನಗೆ ಪತೀ ಅಕ್ಷರವೂ ನೆನಪಿದೆ! ಗೋಳಿಬಜೆ ತಿಂದು ಏಳುವಾಗ ನನಗೆ ಅವರಾರು ನೆನಪಾಗುವುದಿಲ್ಲ,ಆದರೆ ಅತಿಯಾಗಿ ನೆನಪಾಗುವ ಆ ನನ್ನ ಪತ್ರಗಳು ಯಾವ ಕಸದ ಬುಟ್ಟಿಯಲ್ಲಿದೆಯೋ... ನೆನೆದು ವೇದನೆ ಆಗುತ್ತದೆ! 


ಬಿಯರ್ ನ ನೊರೆಯಲ್ಲಿ ನಶೆಯಿದೆ.ಮೈಸೂರ್ ಸ್ಯಾಂಡಲ್ ನ ನೊರೆಯಲ್ಲಿ ಪರಿಮಳದ ಶ್ರೀಗಂಧವಿದೆ. ನಶೆ ಹಾಗೂ ಗಂಧ ಎರಡೂ ಇರದ ಕಡಲಿನ ಅಲೆಯ ದಡದ ಬದಿಯ ಬೆಳ್ನೊರೆಯಲ್ಲಿ ಏನಿದೆಯೋ ನನಗೆ  ಗೊತ್ತಿಲ್ಲ,ಆದರೆ ನಿರಂತರತೆಯ ಪಾಠವಂತು ಖಂಡಿತವಾಗಿಯೂ ಇದೆ.ಆದರೆ ಕಾಲು ತುಂಬಾ ನೊರೆ ಮೆತ್ತಿಸಿಕೊಂಡು ಬರುವಾಗ ಅಷ್ಟೇ ಅದು ನನಗೆ ನೆನಪಾಗುತ್ತದೆ.ವೃತ್ತಿ ಆಗಲಿ ಪ್ರವೃತ್ತಿ ಆಗಲಿ ನಿಲ್ಲಿಸದೇ ಅದನ್ನು ಹಾಗೇ ಮುಂದುವರಿಸಬೇಕು ಎಂದು ಅನಿಸಲು ಕೂಡ  ಮತ್ತೆ ಕಡಲ ನೊರೆಯೇ ಕಾಲಿಗೆ ಸೋಕಬೇಕು! ಕಾಲಿನ ಮರಳು ಕೊಡವಿ ಮನೆಯ ದಾರಿ ಹಿಡಿಯುತ್ತೇನೆ. ಬಚ್ಚಲು ಮನೆಯಲ್ಲಿ ಸೋಪಿನ ನೊರೆಯಲ್ಲಿ ಮಿಂದು ಮತ್ತೆ ಕಡಲ್ನೊರೆಯ ಪಾಠವನ್ನು ಎಂದಿನಂತೆಯೇ ಮರೆಯುತ್ತೇನೆ!


ನನಗಿಂತ ಎಷ್ಟೋ ಹಿರಿಯರು ಕೂಡ ನನಗೆ ಸಾಮಾಜಿಕ ಜಾಲತಾಣದಲ್ಲಿ ಅಣ್ಣ ಎಂದೇ ಗೌರವ ಪೂರ್ವಕವಾಗಿ ಕರೆಯುತ್ತಾರೆ.ನನಗಿದು ಹೊಸತು.ಅಪ್ಪ ಇದ್ದನೆಲ್ಲಾ ನೋಡಿದರೆ ಖಂಡಿತವಾಗಿಯೂ ನಗುತ್ತಾರೆ! ಅಪ್ಪ ಅಪರೂಪಕ್ಕೊಮ್ಮೆ ಅಷ್ಟೇ ನಗುತ್ತಾರೆ!


ಪ್ರೀತಿಗೆ ಅಷ್ಟಾಗಿ ಹಂಬಲಿಸುವುದಿಲ್ಲ.ಮನೆಯ ನಾಯಿ ಟಾಮಿ ಎಲ್ಲಿ ಹೋದರೂ ಹಿಂದೆ ಹಿಂದೆಯೇ ಬರುತ್ತಾನೆ. ಅವನು ಜೊತೆಗೆ ಇರುವಾಗಲೇ ಗೊತ್ತಾಗುವುದು ಪ್ರೀತಿಯಂತೆ,ಸ್ನೇಹದಂತೆ.. ನಂಬಿಕೆಯೂ ಕೂಡ ಶ್ರೇಷ್ಟವಾದದ್ದು ಎಂದು.ಒಂದು ಮೂಕ ಸಂಬಂಧ ಮಾತು ಇಲ್ಲದೆಯೂ ತುಂಬಾ ದಿನ ಬಾಳಬಲ್ಲದು!


ತರಕಾರಿ ಮಾರುವವರ ಸಲಿಗೆ,ಮೀನು ಮಾರುವ ಸುನಂದಕ್ಕನ ಅಕ್ಕರೆ, ಪ್ರತೀ ದಿನ ಶುಭ ಮುಂಜಾನೆ, ಶುಭ ರಾತ್ರಿ ಎಂದು ಟೈಪಿಸಿಯೇ ಕಳುಹಿಸುವ ಬಸ್ ಕಂಡಕ್ಟರ್ ನವೀನನ ಮೆಸೇಜ್.. ಇದ್ದೆಲ್ಲಾ ಎಷ್ಟು ತೂಕದ್ದು ಎಂದು ಲೆಕ್ಕ ಹಾಕಲು ತಕ್ಕಡಿ ಇಟ್ಟುಕೊಂಡೇ ತೂಗುವುದಾದರೆ ತೂಕದ ಕಲ್ಲುಗಳೇ ಬಹಳಷ್ಟು ಬೇಕು.ತೂಕದ ತಕ್ಕಡಿಯ ಜಾಗಕ್ಕೆ ಈಗ ಡಿಜಿಟಲ್ ಅಂಕೆಗಳ ತೂಕದ ಸ್ಕೇಲುಗಳು ಬಂದಿದೆ.ಕೊನೆಯ ಪಕ್ಷ ಈ ಸಂಬಂಧಗಳನ್ನಾದರೂ ಸಂಭಾಳಿಸಬೇಕು! ಸಂಬಂಧಗಳನ್ನು ತೂಕಕ್ಕೆ ಇಡುವುದು ಕೂಡ ಒಂದು ರೀತಿಯಲ್ಲಿ ಅಪರಾಧವೇ! 


ಮೌನವೇ ಇಷ್ಟ ಆಗುವಾಗ ಮುಂಜಾನೆಗಿಂತ ಮೊದಲಿನ, ಮುಸ್ಸಂಜೆಯ ನಂತರದ ಮೌನವೇ ಇಷ್ಟ. ಏನೇ ಹೇಳಿ... ಮೌನದಲ್ಲೂ ಬಹಳಷ್ಟು ಸತ್ಯವಿದೆ. ನಮ್ಮ ತಪ್ಪುಗಳು ನಮಗೇ  ಸ್ಪಷ್ಟವಾಗಿ ಗೋಚರಿಸುವುದು ಮೌನದಲ್ಲಿಯೇ.ಪದೇ ಪದೇ ಮೌನಕ್ಕೆ ಜಾರಲು ಸಹ ಭಯವಿದೆ.ಅವುಗಳು ಬಹಳಷ್ಟು ಸತ್ಯ ದರ್ಶನ ಮಾಡಿಸಿ ಜೀವ ಹಿಂಡುತ್ತದೆ.ತಪ್ಪುಗಳನ್ನು ಆದಷ್ಟು ಬೇಗ ಖಾಲಿ ಮಾಡಿಕೊಳ್ಳಬೇಕು,ನಂತರ ಧೀರ್ಘ ಮೌನಕ್ಕೆ ನಿರ್ಭಿತಿಯಿಂದ ಜಾರಬೇಕು ಅಂದುಕೊಳ್ಳುವಾಗಲೇ ಜಗತ್ತಿನಲ್ಲಿ ಮತ್ತಷ್ಟು ತಪ್ಪು ಎಸೆಗಲು ಅವಕಾಶಗಳು ಹಾಗೇ ತೆರೆದುಕೊಳ್ಳುತ್ತಾ ಹೋಗುತ್ತದೆ,ಕೆಲವೊಮ್ಮೆ ನಾನು ಏಕೆ ಇಷ್ಟೊಂದು ಅವಕಾಶವಾದಿ! ಅವಕಾಶಕ್ಕೆ ಹಾತೊರೆದು ಮತ್ತದೇ ತಪ್ಪು ಮಾಡುತ್ತಾನೆ. ಮತ್ತೆ ಮೌನ.. ತುಂಬಾ ತುಂಬಾ ಕಷ್ಟ! 


.....................................................................................


#ಏನೋ_ಒಂದು.

Ab Pacchu

Pc- Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..