Sarpatta Parambarai
ಜಿದ್ದಾಜಿದ್ದಿನ ಹತ್ತು ರೌಂಡ್ ಗಳು ಮುಗಿದು ಅದು ಹನ್ನೊಂದನೇ ರೌಂಡಿನ ಆಟ....
ಇಬ್ಬರೂ ಇನ್ನೂ ಸೋತಿಲ್ಲ!
ನೋಡುವವರಿಗೆ ಒಂಥರಾ ನೇಲ್ ಬೈಟಿಂಗ್ ಮ್ಯಾಚ್ ಅದು.
"ಅಡಿ ಮಾಮ.. ಅಡಿ" ಎಂದು ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಗಂಡನಿಗಾಗಿ ಗಂಟಲು ಹರಿಯುವಂತೆ ಕೂಗುವ ಮಾರಿಯಮ್ಮ ಒಂದು ಕಡೆ..
"Don't care this buggers man..hit hard man.." ಎಂದು ತಮಿಳಿಂಗ್ಲಿಷಿಗೆ Anglo Indian accent ಅನ್ನು ಬೆರೆಸಿಯೇ ಮಾತಾಡುವ Daddy ಯದ್ದೊಂದು ಇಲ್ಲಿ ಎಂದೆಂದಿಗೂ ಮುಗಿಯದ ಪ್ರೋತ್ಸಾಹ...ಅವನ ಹೆಸರು ಮಾತ್ರ ಡ್ಯಾಡಿ. ಅವನು ತಂದೆಯಲ್ಲ.
ತಮ್ಮ ಪರಂಪರೆಯ ಗೌರವ ಮಣ್ಣು ಪಾಲು ಆಗಬಹುದೋ ಇಲ್ಲವೋ ಎಂಬ ಭಯ ಹಾಗೂ ಕುತೂಹಲದಿಂದ ಅಲ್ಲಿಯವರೆಗೆ ದೂರದಲ್ಲಿಯೇ ಕುಳಿತಿದ್ದ ಕೋಚ್ ರಂಗನ್ ವಾತಿಯರ್,ಕೊನೆ ಕೊನೆಗೆ ತಡೆದುಕೊಳ್ಳಲು ಆಗದೆ ತನ್ನ ಶಿಷ್ಯನಿಗೆ ಚಿಯರ್ ಅಪ್ ಮಾಡುವುದಕ್ಕಾಗಿ ಕುಳಿತಲ್ಲಿಂದ ಎದ್ದು ರಿಂಗಿಗೆ ಮತ್ತಷ್ಟು ಹತ್ತಿರವಾಗಿಯೇ ಬಿಡುತ್ತಾನೆ..
ಡ್ಯಾನ್ಸು ಮಾಡುತ್ತಲೇ ರಿಂಗ್ ಅಲ್ಲಿ ಕೈಚಳಕ, ಕಾಲ್ಚಳಕ ತೋರಿಸುವ Dancing Rose ನ ಕೋಚಿಂಗ್ ಇಲ್ಲಿ ಕೇವಲ ಎದುರಾಳಿಗಷ್ಟೇ ಸೀಮಿತ... ಅವರ ತಂಡ ಸೋತಿದ್ದು ಕಡಿಮೆ. ಗೆಲವು ಅವರಿಗೆ ಸಾಮಾನ್ಯ ವಿಷಯ.
ತೆಂಗಿನ ಗರಿಗಳ ಆ ಮಡಲಿನ ಚಪ್ಪರಡಿಯ ಕ್ರಿಂಡಾಗಣದಲ್ಲಿ ಸೇರಿದ್ದ ಎರಡೂ ಪಂಗಡಗಳ ನೂರಾರು ಜನರ ಬಾಯಲ್ಲಿ ಇದ್ದ ಹೆಸರುಗಳು ಎರಡೇ...
ಒಂದು Vembuli..
ಮತ್ತೊಂದು Kabilan...!
ರೆಡ್ ಗ್ಲೌವ್ಸ್ ತೊಟ್ಟುಕೊಂಡು ರಿಂಗಿನ ನಡುವಲ್ಲಿ Idiyappa ಪರಂಪರೆಯ ಸೋಲಿಲ್ಲದ ಸರದಾರ ರಿಂಗಿನ ಹುಲಿ ವೆಂಬುಲಿ ಇದ್ದರೆ...
ಅವನ ಎದುರಲ್ಲಿ ಬ್ಲೂ ಗ್ಲೌವ್ಸ್ ತೊಟ್ಟುಕೊಂಡು Sarpatta ಸೈಡಿನಿಂದ ದಪ್ಪ ಮೀಸೆಯ ಕಬಿಲನ್ ಇದ್ದ!
ಇಬ್ಬರ ಮೈಯಲ್ಲೂ ರಕ್ತ ಬೇಕಾದಷ್ಟು ಹರಿದಿತ್ತು!
ಹನ್ನೊಂದನೆಯ ರೌಂಡ್ ಆಟ... ಮತ್ತೆ ಮುಂದುವರಿದಿತ್ತು!!
ಏಕೆ ಈ ಬಾಕ್ಸಿಂಗ್..?
ಏಕೆ ಅಂತಹ ವೈರತ್ವ ಈ ಎರಡೂ ಪಂಗಡಕ್ಕೆ.. ಪರಂಪರೆಗೆ?
ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು... ಎಂದಿನಂತೆ ಕಥೆ ಹೇಳಲಾರೆ!
ಗ್ಲೌವ್ ಏರಿಸಿರುವ ಮುಷ್ಟಿಯನ್ನು ಬಿಗಿಯಾಗಿ ಹಿಡಿದು ಎದುರಾಳಿಯ ಮುಖಕ್ಕೆ ರಪ ರಪ ಅಂತ ಗುದ್ದಿ ಮುಖವನ್ನು ನಜ್ಜುಗುಜ್ಜು ಮಾಡಿ ಬಾಯಲ್ಲಿರುವ ಒಂದಷ್ಟು ಹಲ್ಲುಗಳನ್ನು ನೆಲಕಡಲೆಯಂತೆ ಉದುರಿಸಿ ಕೈಗಿಡುವ ಇಲ್ಲಿಯ ಬಾಕ್ಸಿಂಗ್ ಆಟದ ಕಥೆ 70 ರ ದಶಕದ ಉತ್ತರ ಚೆನ್ನೈಯಲ್ಲಿ ನಡೆಯುವಂತಹದ್ದು.
ಬಾಕ್ಸಿಂಗ್ ಕಥೆಯೇ ಇದರ ಕೇಂದ್ರ ಭಾಗವಾದರೂ.. ಅದು ಬಿಟ್ಟು ಕೂಡ ಇಲ್ಲಿ ಒಂದಷ್ಟು ತೆರೆಮರೆಯ ಕಥೆಗಳಿವೆ.ಸ್ವಲ್ಪ ಜಾತಿ ಕಥೆ, ಇನ್ನು ಸ್ವಲ್ಪ ರಾಜಕೀಯದ ಹುಳಿ ಖಾರ ಒಗರಿನ ಕಥೆ!
ಬೇರೆ ಏನೇ ಕಥೆಗಳಿದ್ದರೂ ಸ್ಲಂ ನಲ್ಲಿರುವ ಸಾಮಾನ್ಯ ವರ್ಗದ ಜನರ ಹೈ ಆಂಡ್ ಲೋ ಜೀವನದಲ್ಲಿ ಘಮ್ಮೆಂದು ಅರಳುವ ಬಾಕ್ಸಿಂಗ್ ಎಂಬ ಬಲಶಾಲಿ ಪಂಚುಗಳ ಆಟದ ಘಮವೇ ಇಲ್ಲಿ ನಮಗೆ ಅತೀ ಇಷ್ಟವಾಗುವ ಫ್ಲೇವರ್.
ಕಬಿಲನ್ ಎಲ್ಲಾ ರೀತಿಯಿಂದಲೂ ಇಷ್ಟವಾಗುತ್ತಾನೆ.ಅವನ ಆಟ,ನೋಟ, ಮಾತು ಎಲ್ಲವೂ ಬಾಕ್ಸಿಂಗ್ ಪಂಚ್ ನಂತೆ ಕಿಕ್ಕೇರಿಸುತ್ತದೆ.ಮಾತು ಸ್ವಲ್ಪ ಒರಟಾದರೂ ಎರಡು ಮೂಗುತಿಯ ಮಾರಿಯಮ್ಮ ಕೆಲವೊಮ್ಮೆ ಬಹಳ ಮುದ್ದಾಗಿ ಕಾಣುತ್ತಾಳೆ.Daddy ಯ ಇಂಗ್ಲಿಷು ಎಷ್ಟೊಂದು ಕಚಗುಳಿ ಇಡುತ್ತದೆಯೆಂದರೆ ಶ್ಯಾವಿಗೆ ಪಾಯಸದ ನಡು ನಡುವೆ ಸಿಗುವ ಹುರಿದ ಗೋಡಂಬಿಯಂತೆ ಅದು ಮತ್ತಷ್ಟು ಬೇಕು.ಕೆಲವೊಂದು ಕಡೆಗಳಲ್ಲಿ Background score ಗೆ ಕಿವಿಗಳೆರಡನ್ನು ಹಾಗೇ ಹಿಡಿದಿಟ್ಟುಕೊಳ್ಳುವ ತಾಕತ್ತು ಇದೆ.70 ರ ದಶಕದ ಆ ಬಾಕ್ಸಿಂಗ್,ಅದರ ಪ್ಲೇವರ್ ನ ಈ ಕಥೆ.. ಒಟ್ಟಾರೆಯಾಗಿ #Sarpatta_Parambarai ನನಗೆ ಇಷ್ಟವಾಯಿತು.
Pa. Ranjith ಇದನ್ನು ನಿರ್ದೇಶಿಸಿದ್ದಾರೆ. Arya, Shabeer Kallarakkal, Dushara Vijayan, Pasupathy, John Vijay ಮೊದಲಾದವರ ಉತ್ತಮ ಅಭಿನಯ ಇದಕ್ಕಿದೆ.Arya ನುಲಿಯುತ್ತಾ ರಾಗವಾಗಿ ಮಾತಾಡುವಾಗ ಅವನಲ್ಲಿರುವ ಹೈಸ್ಕೂಲ್ ಕಿಡ್ಡು ಎಂದೆಂದಿಗೂ ಜೀವಂತವೇ.ಕೆಲವೊಂದು ಕಡೆ ಎಂದಿನಂತೆ ಅದು ಇಲ್ಲೂ ಇದೆ.ನಿರ್ದೇಶಕರು ಮೊದಲು ಇದನ್ನು ನಟ ಸೂರ್ಯನಿಗಾಗಿ ಕಥೆ ಮಾಡಿದ್ದಂತೆ.ಆದರೆ ಆರ್ಯ ಇಲ್ಲಿ ಕಥೆಗೆ ನ್ಯಾಯ ಒದಗಿಸುವಲ್ಲಿ ಬಹಳಷ್ಟು ಸಫಲನಾಗಿದ್ದಾನೆ ಎಂದೇ ಹೇಳಬಹುದು.
#Sarpatta_Parambarai | Prime
Tamil Movie
Sports Drama
Year - 22 July 2021
#Movies
Ab
Comments
Post a Comment