ಗುಡ್ ಬೈ ಟೋಕಿಯೊ




ಇಂದು ಟೋಕಿಯೊ ಒಲಂಪಿಕ್ ಗೆ ಅಧಿಕೃತವಾಗಿ ತೆರೆ ಬೀಳಲಿದೆ.ಕೊನೆಯ ಒಂದು ಹಸ್ತಲಾಘವ,ವಿಧಾಯದ  ಅಪ್ಪುಗೆ,ಒಂದಷ್ಟು ಭಾರವಾದ ನೆನಪು,ಗೆದ್ದವರದ್ದು ಖುಷಿ,ಸೋತವರದ್ದು ಭಾಗವಹಿಸಿದ ಹೆಮ್ಮೆ,ಇನ್ನೊಂದು ಒಲಿಂಪಿಕ್ ಗೆ ಇವತ್ತಿನಿಂದಲೇ ಮುಗಿಯದ ಕಾತರ ಹಾಗೂ ಮತ್ತೊಂದು ಕಾಯುವಿಕೆಯೊಂದಿಗೆ ಹೆಚ್ಚಿನ ಎಲ್ಲಾ ಸ್ಪರ್ಧಿಗಳು ನೆನಪಿನ ಸೂಟ್ಕೇಸಿನೊಂದಿಗೆ ಟೋಕಿಯೊ ಅಂಗಳದಿಂದ ಇವತ್ತೋ ನಾಳೆಯೋ ಅವರವರ ಗೂಡು ಮತ್ತೆ ಸೇರಲಿದ್ದಾರೆ.


ಮೊನ್ನೆಯಿಂದ ಸ್ಪರ್ಧಿಗಳ ಅಳು,ನಗು,ಹತಾಶೆ,ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಟೋಕಿಯೋದಲ್ಲಿ ನಾಳೆಯಿಂದ ಒಂದು ದೊಡ್ಡ ಕಲರವ ಸದ್ದಿಲ್ಲದೇ ಹಾಗೇ ಮೌನಕ್ಕೆ ಜಾರಲಿದೆ.ಸಂಭ್ರಮದಿಂದ  ಮದುವೆ ಮುಗಿಸಿದ ಮನೆಯ ಮರುದಿನದ ಮೌನ  ಅದು.ಯಾರಿಗೂ ಬೇಡ. 


ಒಂದಷ್ಟು ಹಿಂದೆ ತಿರುಗಿ ನೋಡಿದರೆ ಭಾರತಕ್ಕೂ ಈ ಒಲಂಪಿಕ್ ಬಹಳಷ್ಟು ಸುಂದರವಾಗಿತ್ತು.ನಮ್ಮ ಹುಡುಗಿಯರು ಗೆದ್ದರು,ನಡುವಲ್ಲಿ ಬಿಕ್ಕಿ ಬಿಕ್ಕಿ ಅತ್ತರು,ಕೆಲವರು ಸುಂದರವಾಗಿ ನಕ್ಕರು,ಹುಡಗರು ಜಿದ್ದಿಗೆ ಬಿದ್ದು ಹೋರಾಡಿದರು.ಕಂಚು,ಬೆಳ್ಳಿ ಕೊನೆಗೊಂದು ಕೋಟಿ ಭಾರ ತೂಕದ ಸ್ವರ್ಣ.. ಎಲ್ಲರೂ ಸೇರಿ ಭಾರತದ ಪದಕ ಪಟ್ಟಿಯನ್ನು ಮೊದಲ ಬಾರಿಗೆ ಒಂದಿಷ್ಟು ಹಿಗ್ಗಿಸಿ ಬಿಟ್ಟರು.


ನಾವು ಕೂಡ  ಇಲ್ಲಿಂದಲೇ ನಮ್ಮವರ ಸಾಧನೆ ನೋಡಿ ಹಿರಿ ಹಿರಿ ಹಿಗ್ಗಿದ್ದೆವು.ಅವರು ನಕ್ಕಾಗ ನಾವೂ ನಕ್ಕೆವು,ಅವರು ಅತ್ತಾಗ ನಮ್ಮ ಕಣ್ಣಲ್ಲೂ ಒಂದಿಷ್ಟು ನೀರು ನಮಗರಿವಿಲ್ಲದೇ ಹಾಗೇ  ಜಿನುಗಿತ್ತು.ಭಾರತೀಯರು ನೋಡಿ ಅಷ್ಟೋ ಇಷ್ಟೋ ಪದಕ ಸಿಕ್ಕಿದಾಗಲೆಲ್ಲ ಎಲ್ಲರೂ ಸೇರಿ ಖುಷಿ ಪಟ್ಟೆವು,ಎದ್ದು ನಿಂತು ಮನಸಾರೆ ಚಪ್ಪಾಳೆ ತಟ್ಟಿದ್ದೆವು.ಸೋತವರಿಗೂ ಶಹಬ್ಬಾಸ್ ಎಂದು ಹೇಳಲು ಮರೆಯಲಿಲ್ಲ.ನಾವು  ಹಾಗೆಯೇ..ನಮಗೆ ಸಂಭ್ರಮಿಸಲು ಕಾರಣ ಬೇಕು.ಇದು ದೊಡ್ಡ ವೇದಿಕೆ,ಹಾಗಾಗಿ ದೊಡ್ಡದಾಗಿಯೇ ಸಂಭ್ರಮಿಸಿದೆವು.




ಈ ಸಂಭ್ರಮ,ಪ್ರೋತ್ಸಾಹ ನಿರಂತರವಾಗಿರಲಿ.ಮುಂದೆಯೂ ಒಲಂಪಿಕ್ ಬರುವವರೆಗೂ ನಮ್ಮ ಸ್ಪರ್ದಿಗಳು ಭಾರತವನ್ನು ಸ್ಪರ್ದಿಸಿಯೇ ಅಲ್ಲಲ್ಲಿ ಬೇರೆ ಬೇರೆ ವಿಶ್ವ ವೇದಿಕೆಗಳಲ್ಲಿ ಗೆಲ್ಲುತ್ತಲೇ ಇರುತ್ತಾರೆ.ಆವಾಗಲೂ ಅಲ್ಲಿ ಭಾರತದ ತಿರಂಗವೇ ಹಾರುವುದು.ನಮ್ಮವರೇ ಆಡುವುದು.ನಾನೂ ಸೇರಿದಂತೆ ಎಂದಿನಂತೆ ರಾಜಕೀಯ,ಕ್ರಿಕೆಟ್,ಸಿನಿಮಾಗಳ ಕಾರಣದಿಂದಾಗಿ ನಮಗೆ ಅವೆಲ್ಲ ಅಷ್ಟಾಗಿ ಗೋಚರಿಸುವುದಿಲ್ಲ ಅಷ್ಟೇ.ಆವಾಗಲೂ ಹುರಿದುಂಬಿಸಲು ಮರೆಯದಿರೋಣ.


ಮುಂದಿನ 2024 ರ ಪ್ಯಾರಿಸ್ ಒಲಿಂಪಿಕ್ ನಲ್ಲಿ ನಮ್ಮವರು ಮತ್ತಷ್ಟು ಗೆಲ್ಲಲಿ,ಗೆಲ್ಲುತ್ತಾರೆ ಎಂಬ ಆಶಯ ಎಂದಿನಂತೆ ಸದಾ  ಜೀವಂತ.



#ಗುಡ್_ಬೈ_ಟೋಕಿಯೊ... ಸುಂದರ ನೆನಪುಗಳಿಗಾಗಿ ಹೃದಯದಿಂದ ಧನ್ಯವಾದಗಳು❤️


#TOKYO_2020

ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ