ಹುಕ್ ಮತ್ತು ಫುಲ್ಲ್




ಇಂದು ಲಾರ್ಡ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಟೀಮ್ ಇಂಡಿಯಾ ಶುರುವಿನಿಂದಲೇ  ಬಹಳ ಎಚ್ಚರಿಕೆಯ ಆಟವನ್ನೇ ಆಡಿತ್ತು.


ಎಷ್ಟು ಮಂದಗತಿಯ ಆಟವೆಂದರೆ ಮೊದಲ 8 ಓವರುಗಳಲ್ಲಿ ತಂಡ ಕೇವಲ 8 ರನ್ನುಗಳಷ್ಟೇ ಗಳಿಸಿದ್ದು.ಆಮೇಲೆ ಸ್ಯಾಮ್  ಕರನ್ ಓವರಿನಲ್ಲಿ ರೋಹಿತ್ ಶರ್ಮ ಬ್ಯಾಟ್ ನಿಂದ ಒಂದರ ನಂತರ ಒಂದರಂತೆ ಬೌಂಡರಿ ಹಾಗೇ ಸಿಡಿದು ಬಿಟ್ಟವು.ಅಲ್ಲಿಂದ ಶರ್ಮರ ಹುಡುಗ ಗೇರ್ ಚೇಂಜ್ ಮಾಡಿ ಬಿಟ್ಟ. ಬೌಂಡರಿಗಳ ಮೇಲೆ ಬೌಂಡರಿ ಬಂದವು. ರನ್ನು ಗಳಿಕೆಯ ವೇಗವೂ ಕೂಡ  ಹೆಚ್ಚಾಯಿತು.


ಮೊದಲ ಟೆಸ್ಟ್ ನಲ್ಲಿ ಹುಕ್ ಮಾಡಲು ಹೋಗಿ ಔಟ್ ಆಗಿದ್ದ ರೋಹಿತ್ ಇಲ್ಲಿ ಮಾತ್ರ ಅದೇ ಮಾದರಿಯಲ್ಲಿ ಫುಲ್ ಶಾಟ್ ಹೊಡೆದೇ ಎಂದಿನಂತೆ ಒಂದು ಸಿಕ್ಸರ್ ಕೂಡ ಬಾರಿಸಿ ಬಿಟ್ಟ.ಮೊದಲ ಪಂದ್ಯದಲ್ಲಿ ಔಟಾಗಿದ್ದಾಗ ರೋಹಿತ್ ಪ್ರೆಸ್ ಮೀಟ್ ಅಲ್ಲಿ ಹೇಳಿದ್ದ   " ನನಗೆ ಫುಲ್ ಹೊಡೆಗಳು ಬಹಳಷ್ಟು ಇಷ್ಟ, ಅವು ನನ್ನ ನೆಚ್ಚಿನ ಹೊಡೆತಗಳು ಮತ್ತು ನನಗದನ್ನು  ಬಾರಿಸುವುದು ಬಹಳ ಸುಲಭವು ಕೂಡ ಹೌದು,

ಹಾಗಾಗಿ ಎಷ್ಟೇ ಸಲ ಫುಲ್ ಮಾಡಲು ಹೋಗಿ ಔಟಾದರೂ ಸಹ   ಫುಲ್ ಹೊಡೆತವನ್ನು ಬಾರಿಸಲು ಅವಕಾಶವಿರುವಾಗ ಅದನ್ನು ನಾನು ಹೊಡೆಯದೇ ಇರಲು ನನ್ನಿಂದ ಆಗದು.." ಎಂದು ಹೇಳಿದ್ದ ರೋಹಿತ್.



ಅವನು ಹಾಗೆಯೇ..ಫುಲ್ ಹೊಡೆತಗಳು ಅವನಿಗೆ ನೀರು ಕುಡಿದಷ್ಟು ಸಲೀಸು,ಅಂತಹ ಎಸೆತಗಳು ಅವನ ಮುಂದೆ ಬಂದ ಕೂಡಲೇ ಅವನದ್ದೊಂದು ಬೇಸಿಕ್ ಇನ್ಸ್ಟಿಂಕ್ಟ್  ಹಾಗೇ ಜಾಗ್ರತವಾಗಿ ಬಿಡುತ್ತದೆ.ನಿಜ ಹೇಳಬೇಕೆಂದರೆ ಸದ್ಯದ ವರ್ಲ್ಡ್ ಕ್ರಿಕೆಟ್ ನಲ್ಲಿ ಅವನಷ್ಟು ಚೆನ್ನಾಗಿ ಫುಲ್ ಮಾಡುವವರು ಕೂಡ ಯಾರೂ ಇಲ್ಲ.ಅಂದ ಹಾಗೆ ಇನ್ನೊಂದು ವಿಷಯ ಏನೆಂದರೆ ಮೊನ್ನೆ ರೋಹಿತ್ ಔಟ್ ಆಗಿದ್ದು ಸಹ ಫುಲ್ ಹೊಡೆತಕ್ಕೆ ಮುಂದಾಗಿ ಅಲ್ಲ.ಅದು ಹುಕ್ ಶಾಟ್ . ಹುಕ್ ಮತ್ತು ಫುಲ್ ಹೊಡೆತಗಳು ಮೇಲ್ನೋಟಕ್ಕೆ ಎರಡೂ ಒಂದೇ ರೀತಿ ಕಂಡರೂ ಎರಡೂ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಬೇರೆಯೇ ಆಗಿವೆ.ಎರಡಕ್ಕೂ ಸ್ವಲ್ಪ ವ್ಯತ್ಯಾಸ ಇದೆ.ಭುಜದಿಂದ ಮೇಲೆ ಬರುವ ಬಾಲ್ ಅನ್ನು ಲೆಗ್ ಸೈಡಿಗೆ ಹೊಡೆಯುವುದೇ ಹುಕ್. ಇನ್ನು ಸುಲಭವಾಗಿ ಹೇಳಬೇಕೆಂದರೆ ಬೌನ್ಸರ್ ಗೆ ಹೊಡೆಯುವುದು ಹುಕ್, ಶಾರ್ಟ್ ಪಿಚ್ ಬಾಲ್ ಗೆ ಲೆಗ್ ಸೈಡ್ ಗೆ ಹೊಡೆಯುವುದು ಫುಲ್(ಚಿತ್ರದಲ್ಲಿ ತೋರಿಸಿದಂತೆ).ಹುಕ್ ಶಾಟ್ ಬಾರಿಸುವುದು ನಿಜವಾಗಿಯೂ ತುಂಬಾ ಕಷ್ಟ. ಅದರಲ್ಲಿ ಬಾಲ್ ಮೇಲೆ ಅಂತಹ ನಿಯಂತ್ರಣ ಇಲ್ಲದೇ ಇರುವುದರಿಂದ ಹೆಚ್ಚಾಗಿ ಕ್ಯಾಚ್ ಔಟ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. 


ರೋಹಿತ್ ಗೆ ಇಂದು ಲಾರ್ಡ್ಸ್ ನಲ್ಲಿ ಶತಕ ಹೊಡೆಯುವ ಎಲ್ಲಾ ಅವಕಾಶಗಳಿತ್ತು. ಚೆನ್ನಾಗಿ ಆಡುತ್ತಿದ್ದ ಕೂಡ.ಆದರೆ ಜಿಮ್ಮಿಯ ಬೌಲಿಂಗ್ ಅದೆಷ್ಟು ಸುಂದರ ಹಾಗೂ ಡೆಡ್ಲಿ ಆಗಿತ್ತು ಎಂದರೆ ರೋಹಿತ್ ಗೆ ಬಚಾವ್ ಆಗುವ ಆಯ್ಕೆ ಗಳೇ ಬಹಳಷ್ಟು ಕಡಿಮೆ ಇತ್ತು. ವಿದೇಶಿ ನೆಲದಲ್ಲಿ ರೋಹಿತ್ ಬ್ಯಾಟ್ ಮಾತನಾಡುವುದಿಲ್ಲ ಎಂಬ ಆರೋಪ ಇದ್ದರೂ ಇಂದು ರಾಹುಲ್ ಜೊತೆಗೂಡಿ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಹಾಗೂ ಅತನದ್ದೊಂದು ಆತ್ಮವಿಶ್ವಾಸದ ಇನ್ನಿಂಗ್ಸ್ ನಿಜಕ್ಕೂ ಚೆನ್ನಾಗಿತ್ತು.ಮುಂದಿನ ದಿನಗಳಲ್ಲಿ ಇನ್ನಷ್ಟು ರನ್ ಗಳಿಸಲು ರೋಹಿತ್ ಗೆ ಇದು ನೆರವಾಗಬಹುದು.ಆದರೂ ಅವನು ಶತಕ ಬಾರಿಸಲಿಲ್ಲ ಎಂಬ ಬೇಜಾರು ಖಂಡಿತವಾಗಿಯೂ ಇದೆ. 





ಕೆ.ಎಲ್ ರಾಹುಲ್ ಯಾವಾಗಲೂ ಅವನದ್ದೊಂದು ಲಹರಿಯಲ್ಲಿಯೇ ಬ್ಯಾಟ್ ಬೀಸಿದರೆ ನೋಡಲು ಬಹಳ ಚಂದ. ಕೊನೆಗೂ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಹಂಡ್ರೆಡ್ಡು ಬಾರಿಸಿಯೇ ಬಿಟ್ಟ ನಮ್ಮ ಕುಡ್ಲದ ಜವನ.ಅಲ್ಲಿಯ ಹಾನರ್ಸ್ ಬೋರ್ಡ್ ನಲ್ಲಿ ಅವನದ್ದೊಂದು ಹೆಸರನ್ನು ಇನ್ನು ಸುಂದರವಾಗಿ ಕೆತ್ತಲಾಗುತ್ತದೆ.ಅದು ಲಾರ್ಡ್ಸ್ ಅಂಗಣದ ಸಂಪ್ರದಾಯ.ಅಲ್ಲಿ ಪಂದ್ಯದ ಮೊದಲು ಘಂಟೆ ಬಾರಿಸಿ ಚಾಲನೆ ನೀಡುವಂತೆ ಇದೂ ಕೂಡ ಸಂಪ್ರದಾಯದ ಜೊತೆ ಜೊತೆಗೆ ಆಟಗಾರನಿಗೆ ನೀಡುವ ಒಂದು ಗೌರವ.ಲಾರ್ಡ್ಸ್ ಶತಕ ಖಂಡಿತವಾಗಿಯೂ ರಾಹುಲ್ ಗೆ ಬಹಳ ಕಾಲ ನೆನಪಿನಲ್ಲಿರಲಿದೆ. ಡ್ರೈವ್ ಗಳು ಹಾಗೂ ಬೌಲರ್ ತಲೆಯ ಮೇಲೆ ಬಾರಿಸಿದ ಆ ಒಂದು ಸಿಕ್ಸರ್ ಕೂಡ ಬಹಳಷ್ಟು ಸುಂದವಾಗಿತ್ತು.ಅಭಿನಂದನೆಗಳು ರಾಹುಲ್. 


ಮಾಡರ್ನ್ ಗೋಡೆ ಖ್ಯಾತಿಯ ಪೂಜಾರನ ಕಲ್ಲಿನ ಗೋಡೆಯಲ್ಲಿ ಬಿರುಕು ಬಿಟ್ಟು ಬಹಳ ಸಮಯಗಳೇ ಆಗಿ ಹೋಗಿದೆ.ಸ್ವಿಂಗ್ ಬೌಲಿಂಗ್ ಮುಂದೆ ಪೂಜಾರನ ಗೋಡೆಯ ಒಂದೊಂದೇ ಕಲ್ಲುಗಳು ದಿನದಿಂದ ದಿನಕ್ಕೆ ಹಾಗೇ ಉದುರುತ್ತಿವೆ.ಕೇವಲ ವಿಕೆಟ್ ಒಪ್ಪಿಸಲಷ್ಟೇ ಮೈದಾನಕ್ಕೆ ನಡೆದು ಬಂದರೆ ಪೂಜಾರನ ಸ್ಥಾನವೂ ಕೂಡ ಮುಂದಿನ ದಿನಗಳಲ್ಲಿ ಬಹಳಷ್ಟು ಜೋರಾಗಿ ಅಲುಗಾಡಲಿದೆ! ಏಕೆಂದರೆ ವೇಟಿಂಗ್ ಲಿಸ್ಟ್ ನಲ್ಲಿ ಅದಗಾಲೇ ಪ್ರತಿಭೆಗಳ ದಂಡೇ ಸಾಲುಗಟ್ಟಿ ನಿಂತಿದೆ.ಆದ್ದರಿಂದ ಪೂಜಾರ ಪುಜಾರನಿಗೋಸ್ಕರ ಆದರೂ ಗೋಡೆಯಂತೆ ಮತ್ತೆ ಆಡಲೇಬೇಕು.


ಸುಲಭವಾಗಿ ವಿಕೆಟ್ ಒಪ್ಪಿಸದೆ ನೆಲಕಚ್ಚಿ ಆಡಿದ  ಕೊಹ್ಲಿ ಬಹಳ ದಿನಗಳ ನಂತರ ಹಳೆಯ ವಿರಾಟ ರೂಪ ತೋರುವ ಉತ್ಸಾಹದಲ್ಲಿದ್ದರೂ ಕೊನೆಯಲ್ಲಿ ಔಟಾಗಿದ್ದು ಸ್ವತಃ ಅವನಿಗೂ ನಿರಾಸೆ ಮೂಡಿಸಿತು.ಕೊಹ್ಲಿಯ ಆಟ ಕ್ಲಿಕ್ ಆದರೆ ಭಾರತದ 75% ಬ್ಯಾಟಿಂಗ್ ಕ್ಲಿಕ್ ಆದಂತೆಯೇ ಲೆಕ್ಕ. ಖಂಡಿತವಾಗಿಯೂ ಅವನು ಕೂಡ ಮೂರಂಕೆಯ ಮೊತ್ತ ತುರ್ತಾಗಿ ಇದೇ ಸರಣಿಯಲ್ಲಿ ದಾಖಲಿಸಬೇಕು.ಏಕೆಂದರೆ ಕೊಹ್ಲಿಗೂ ಕೂಡ ಅದರದ್ದೊಂದು ಅವಶ್ಯಕತೆ ಬಹಳಷ್ಟು ಇದೆ. 


ಇನ್ನು ಆಂಗ್ಲರ ಬೌಲಿಂಗ್ ದಾಳಿ ಬಗ್ಗೆ ಹೇಳುವುದಾದರೆ ಅವರು ಜಿಮ್ಮಿ ಆಂಡರ್ಸನ್ ಬಿಟ್ಟರೆ ಬೇರೆ ಯಾರನ್ನೂ ನೆಚ್ಚಿಕೊಂಡಂತೆ ಕಾಣುತ್ತಲೇ ಇಲ್ಲ. ಜಿಮ್ಮಿ ಬೌಲಿಂಗ್ ಸರಿಯಾಗಿ ನಡೆಯದಿದ್ದರೆ ಅವರದ್ದು ಬಹಳ ನೀರಸ ಬೌಲಿಂಗ್ ಎಂದೆನಿಸುತ್ತಿದೆ.ಸದ್ಯಕ್ಕಂತು  ಆಂಗ್ಲರು ವಿಕೆಟ್ ಉದುರಿಸಲು ಕೇವಲ ಜಿಮ್ಮಿಯನ್ನಷ್ಟೇ ನಂಬಿಕೊಂಡಿದ್ದಾರೆ.


ಅದರಲ್ಲೂ ಇಂಗ್ಲೆಂಡ್ ತಂಡದ ಈ ಪ್ಲೇಯರ್ ರೊಟೇಷನ್ ಪದ್ಧತಿ ಯಾವ ಕೋನದಿಂದ ನೋಡಿದರು ಅವರ ತಂಡಕ್ಕೆ ಲಾಭಕ್ಕಿಂತ ಜಾಸ್ತಿಯಾಗಿ ನಷ್ಟವನ್ನೇ ಉಂಟು ಮಾಡಿದೆ ಎಂದು ನನಗನಿಸುತ್ತಿದೆ.ಹಿಂದಿನ ಡಬ್ಲ್ಯು.ಟಿ.ಸಿ ಸೀಸನ್ ನಲ್ಲೂ ಅವರು ಇದೇ ರೀತಿ ಮಾಡಿ ಚೆನ್ನಾಗಿ ಆಡುತ್ತಿದ್ದ ಆಟಗಾರರಿಗೆ ರೊಟೇಷನ್ ಕಾರಣದಿಂದಾಗಿ ವಿಶ್ರಾಂತಿ ನೀಡಿ ಹಲವು ಪಂದ್ಯಗಳನ್ನು ಸೋತಿದ್ದಾರೆ.ಭಾರತದಲ್ಲೂ ಕೂಡ ಈ ರೀತಿ ರೊಟೇಷನ್ ನಲ್ಲಿ ಆಡಿ ಸರಣಿಯನ್ನೇ  ಸೋತಿದ್ದು ಸಹ ನಮಗೆ ಗೊತ್ತೇ ಇದೆ.ಅದನ್ನೇ ಅವರು ಈ ಸೀಸನ್ ನಲ್ಲೂ ಮುಂದುವರಿಸುತ್ತಿದ್ದಾರೆ. ತಂಡ ಸೋತರೂ ಪರವಾಗಿಲ್ಲ ನಾವು ನಮ್ಮ ಆಟಗಾರರಿಗೆ ರೊಟೇಷನ್ ನಲ್ಲಿ ವಿಶ್ರಾಂತಿ ನೀಡುತ್ತೇವೆ,ನಂತರ ಆಟವಾಡಿಸುತ್ತೇವೆ ಎಂಬ ಮನಸ್ಥಿತಿಯ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ! 



ಸದ್ಯಕ್ಕೆ ನಮ್ಮ ತಂಡ ಬಹಳ ಒಳ್ಳೆಯ ಸ್ಥಿತಿಯಲ್ಲಿ ಇದೆ. ಇನ್ನೂ 150 ಇಲ್ಲವೇ 200 ರನ್ ಹೊಡೆದು ಬಿಟ್ಟರೂ ಆವಾಗ ಕಷ್ಟ ಆಗುವುದು ಆಂಗ್ಲರಿಗೆಯೇ ಹೊರತು ನಮಗಲ್ಲ.ಏಕೆಂದರೆ ಕೊನೆಯ ಇನ್ನಿಂಗ್ಸ್ ನಲ್ಲಿ ರನ್ ಬೆನ್ನು ಹತ್ತಲು ದೊಡ್ಡ ಮೊತ್ತ ಇದ್ದು ಬಿಟ್ಟರೆ, ಆವಾಗ ಅದು ಆಂಗ್ಲರಿಗೆ ಬಹಳಷ್ಟು ಸವಾಲಿನ ಕೆಲಸವಾಗಲಿದೆ. ಆದರೆ ಎಲ್ಲವೂ ನಾಳೆಯ ದಿನದ ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ ನ ಒಟ್ಟು ಮೊತ್ತದ ಮೇಲೆಯೇ ನಿಂತಿದೆ.


ಇದರ ನಡುವೆ ಮಳೆಯ ಆಟ ಬಲ್ಲವರಾರು..!

ಇನ್ನು ನಾಳೆ ಸಿಗೋಣ.. 


#Day_1 : Stumps 

India 1st Innings - 276/3


Ind Vs England

2nd  Test - Lord's London 2021


#WTC_S02E01_2021_23

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ