ಸಮಬಲದ ಹೋರಾಟ..
ಮೂರನೆಯ ದಿನದ ಮೊದಲ ಸೆಷನ್ ನಲ್ಲಿ ಆಂಗ್ಲರು ಅದೆಷ್ಟು ನೆಲಕಚ್ಚಿ ಆಡಿದ್ದರೆಂದರೆ ಒಂದೇ ಒಂದು ವಿಕೆಟ್ ಕಬಳಿಸಲು ಕೂಡ ನಮ್ಮ ಬೌಲರ್ ಗಳಿಗೆ ಸಾಧ್ಯವಾಗಲಿಲ್ಲ.
ಟೀಮ್ ಇಂಡಿಯಾಕ್ಕೆ ಮತ್ತೊಮ್ಮೆ ಟ್ರಬಲ್ ಮೇಕರ್ ಆಗಿದ್ದು ಆಂಗ್ಲರ ಕಪ್ತಾನ ಜೋ ರೂಟ್.ರೂಟ್ ನ ರೂಟುಗಳು ಲಾರ್ಡ್ಸ್ ಪಿಚ್ ನಲ್ಲಿ ಇವತ್ತು ಕೂಡ ಬಹಳಷ್ಟು ಆಳಕ್ಕೆ ಭದ್ರವಾಗಿ ನೆಲೆಯೂರಿ ಬಿಟ್ಟಿತ್ತು.ಸುಲಭವಾಗಿ ಕಿತ್ತೆಸೆಯಬಹುದಾದ ಬೇರು ಜೋ ರೂಟ್ ನದ್ದಲ್ಲ.
ಈ ದ್ವಿತೀಯ ಟೆಸ್ಟ್ ನಲ್ಲಿಯೂ ಕೂಡ ಜೋ ರೂಟ್ ಮತ್ತೊಮ್ಮೆ ಅಭಿನಂದನೆಗೆ ಅರ್ಹನಾಗಿ ಬಿಟ್ಟ.ಆಂಗ್ಲರಲ್ಲಿ ಸದ್ಯಕ್ಕೆ ಅತೀ ಹೆಚ್ಚಿನ ರೆಸಿಸ್ಟೆನ್ಸ್ ತೋರುತ್ತಿರುವುದು ಅವನೊಬ್ಬನೇ.ಈ ಸಿರೀಸ್ ನಲ್ಲಿ ರೂಟ್ ಗೆ ಇದು ಎರಡನೆಯ ಹಂಡ್ರೆಡ್ ಅದರ ಜೊತೆಯಲ್ಲಿ 2021 ನೇ ಕ್ಯಾಲೆಂಡರ್ ಇಯರ್ ನಲ್ಲಿ ರೂಟ್ ನದ್ದು ಇದು ಐದನೇ ಶತಕ.
ಅಷ್ಟು ಮಾತ್ರವಲ್ಲ ಇಂಗ್ಲೆಂಡ್ ತಂಡದ "ಕಪ್ತಾನನಾಗಿ" ಯಾವುದೇ ಕ್ಯಾಲೆಂಡರ್ ಇಯರ್ ನಲ್ಲಿ ಅತೀ ಹೆಚ್ಚು ಇಂಗ್ಲೆಂಡ್ ಪರ ಸೆಂಚುರಿ ಹೊಡೆದವರಲ್ಲಿ ರೂಟ್ ಈಗ ಮೊದಲ ಸ್ಥಾನದಲ್ಲಿ ನಿಂತಿದ್ದಾನೆ.ಗ್ರಹಾಂ ಗೂಚ್ 1990 ರ ಕ್ಯಾಲೆಂಡರು ಇಯರ್ ನಲ್ಲಿ ಕ್ಯಾಪ್ಟನ್ ಆಗಿ ಇಂಗ್ಲೆಂಡ್ ಪರ 4 ಶತಕ ಹೊಡೆದಿದ್ದೇ ಇಲ್ಲಿಯವರೆಗಿನ ಅವರ ಅತ್ಯುತ್ತಮ ದಾಖಲೆಯಾಗಿತ್ತು.
ಟೆಸ್ಟ್ ನಲ್ಲಿ ಇಂಗ್ಲೆಂಡ್ ಪರ ಅತೀ ಹೆಚ್ಚಿನ ಶತಕ ಹೊಡೆದ ದಾಖಲೆ ಅಲೆಸ್ಟರ್ ಕುಕ್ ಹೆಸರಲ್ಲಿ ಇದೆ.ಕುಕ್ ಒಟ್ಟು 33 ಟೆಸ್ಟ್ ಸೆಂಚುರಿಗಳನ್ನು ಬಾರಿಸಿದ್ದಾರೆ. ಈ ಲಿಸ್ಟ್ ನಲ್ಲಿ ರೂಟ್ 3 ನೇ ಸ್ಥಾನದಲ್ಲಿದ್ದು ಇವತ್ತಿನದ್ದು ಸೇರಿ ಒಟ್ಟು 22 ಸೆಂಚುರಿಗಳನ್ನು ರೂಟ್ ಟೆಸ್ಟ್ ನಲ್ಲಿ ಬಾರಿಸಿದ್ದಾನೆ.ಕ್ರಿಕೆಟ್ ನ ಎಲ್ಲಾ ಫಾರ್ಮೆಟ್ ಗಳ ಸೆಂಚುರಿಗಳನ್ನು ಒಟ್ಟು ಮಾಡಿದರೆ ರೂಟ್ ಗೆ ಇದು ಒಟ್ಟು 38 ನೇ ಶತಕ.
ಜೋ ರೂಟ್ ನದ್ದು ಆಟ ಬಹಳ ಸಿಂಪಲ್.ಒಳ್ಳೆಯ ಬಾಲ್ ಗಳಿಗೆ ಸಿಕ್ಕಾಪಟ್ಟೆ ಗೌರವ,ಕೆಟ್ಟ ಎಸೆತಗಳಿಗಷ್ಟೇ ಅವನದ್ದೊಂದು ಸರಳ ಸುಂದರ ಹೊಡೆತ.ಬಾಲ್ ಒಳ್ಳೆಯದಿರಲಿ ಕೆಟ್ಟದಿರಲಿ ಹುಡುಕಿಕೊಂಡು ಹೋಗಿ ಕೆಟ್ಟ ಹೊಡೆತ ಬಾರಿಸಿ ಔಟ್ ಆಗುವ ಜಾಯಮಾನ ಅವನದ್ದಲ್ಲ. ತನ್ನ ರಾಡಾರ್ ನಲ್ಲಿರುವ ಬೀಳುವ ಬಾಲ್ ಗಳಿಗಷ್ಟೇ ಅವನು ಕೊಡುವುದು ಉತ್ತರ.ರೂಟ್ ಕವರ್ ಡ್ರೈವ್ ಗಳು ಕೂಡ ಬಹಳಷ್ಟು ಚಂದ.
ನಿಜ ಹೇಳಬೇಕೆಂದರೆ ಕವರ್ ಡ್ರೈವ್ ಗಿಂತ ಸುಂದರವಾದ ಹೊಡೆತ ಕ್ರಿಕೆಟ್ ನಲ್ಲಿ ಬೇರೆ ಯಾವುದೂ ಇಲ್ಲ.ಯಾವುದೇ ದೇಶದವನಿರಲಿ ಸೊಗಸಾದ ಕವರ್ ಡ್ರೈವ್ ಬಾರಿಸಿದಾಗ ಕ್ರಿಕೆಟ್ ಪ್ರೇಮಿಯೊಬ್ಬ ಅದನ್ನು ಮನಸಾರೆ ಆಸ್ವಾದಿಸದೇ ಹೋದರೆ ಬಹುಶಃ ಅವನಿಗೆ ಕ್ರಿಕೆಟ್ ಆಟದ ಸೊಗಸುಗಳ ಬಗ್ಗೆ ಅಂತಹ ಅಭಿರುಚಿಯೇ ಇಲ್ಲ ಎಂದೇ ನನ್ನ ಅಭಿಪ್ರಾಯ
ಐಸಿಂಗ್ ಆನ್ ದಿ ಕೇಕ್,ಚೆರ್ರಿ ಆನ್ ಟಾಪ್ ತರಹ ಕ್ರಿಕೆಟ್ ನಲ್ಲಿ ಆಕರ್ಷವಾದದ್ದು ಅಂದರೆ ಅದು ಯಾವತ್ತಿಗೂ ಈ ಕವರ್ ಡ್ರೈವ್.ಕೊಹ್ಲಿ, ಸಚಿನ್,ಸಂಗಕ್ಕಾರ,ಜಯವರ್ಧನೆ ಕವರ್ ಡ್ರೈವ್ ಗಳು ಬಹಳಷ್ಟು ಸುಂದರವಾದದ್ದು.ಕವರ್ ಡ್ರೈವ್ ಗಳನ್ನು ಸುಂದರವಾಗಿ ಹೊಡೆಯಲಿ, ಸುಂದರವಾಗಿ ಹೊಡೆಯದೇ ಇರಲಿ ಬ್ಯಾಟ್ಸ್‌ಮನ್ ಒಬ್ಬ ಅತೀ ಕಡಿಮೆ ಕವರ್ ಡ್ರೈವ್ ಬಾರಿಸುತ್ತಾನೆ ಎಂದಾದರೆ,ಇಲ್ಲವೇ ಕವರ್ ಡ್ರೈವ್ ಹೊಡೆಯಲು ಅವನಿಗೆ ಅಂತಹ ಉಮೇದೇ ಇಲ್ಲ ಎಂದಾದರೆ ನನಗಂತು ಆ ಬ್ಯಾಟ್ಸ್‌ಮನ್ ಎಂದಿಗೂ ಅಷ್ಟೊಂದು ರುಚಿಸಲಾರ.ಕವರ್ ಡ್ರೈವ್ ಗಳಿಲ್ಲದ ಬ್ಯಾಟಿಂಗ್ ನೋಡಲು ಎಂದಿಗೂ ಸಪ್ಪೆಯೇ.
ಬ್ಯಾಟ್ಸಮನ್ ಒಬ್ಬ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುವದಕ್ಕಿಂತಲೂ ನಾಲ್ಕನೇ ಸ್ಟಂಪ್ ನ ನೇರಕ್ಕೆ ಬೀಳುವ ಹಾಫ್ ವಾಲಿಗಳಿಗೆ ಒಂದರ ನಂತರ ಒಂದು ಕವರ್ ಡ್ರೈವ್ ಹೊಡೆಯುವುದೇ ಕ್ರಿಕೆಟ್ ನಲ್ಲಿ ಎಂದೆಂದಿಗೂ ಟ್ರೀಟ್ ಫಾರ್ ಐಯ್ಸ್.
ಇಂಗ್ಲೆಂಡ್ ಮೊತ್ತ ಇನ್ನಷ್ಟು ಉದ್ದಕ್ಕೆ ಬೆಳೆಯುವುದರಲ್ಲಿತ್ತು. ಅದನ್ನು ಇಷ್ಟಕ್ಕೆ ಟ್ರಿಮ್ ಮಾಡಿದ್ದು ಮೊದಲು ಇಶಾಂತ್ ಶರ್ಮ ಆ ನಂತರ ಸಿರಾಜ್,ದಿನದ ಕೊನೆಯ ಎಸೆತದಲ್ಲಿ ಶಮಿ. ಇಶಾಂತ್ ಒಂದೇ ಒವರ್ ನಲ್ಲಿ ಬೆನ್ನು ಬೆನ್ನಿಗೆ ಮೋಯಿನ್ ಅಲಿ ಹಾಗೂ ಸ್ಯಾಮ್ ಕರನ್ ಪೆವಿಲಿಯನ್ ಗೆ ಅಟ್ಟಿ ಹಾಗೇ ಹೃದಯ ಗೆದ್ದು ಬಿಟ್ಟ.ಅದರಲ್ಲಿಯು ಬಟ್ಲರ್ ನನ್ನು ವಂಚಿಸಿದ ಆ ಸುಂದರವಾದ ಇನ್ ಸ್ವಿಂಗ್ ಭದ್ರವಾಗಿ ನಿಲ್ಲಿಸಿದ್ದ ಟಿಂಬರ್ ಅನ್ನು ಉಡಾಯಿಸಿದ್ದು ನೋಡಲು ಹಾಯಾಗಿತ್ತು.
ಸಿರಾಜ್ ಬೌಲಿಂಗ್ ಕೂಡ ಬಹಳಷ್ಟು ಇಂಪ್ರೆಸ್ಸಿವ್ ಎಂದೇ ಹೇಳಬೇಕು.ಕೇವಲ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಿದ ಸಿರಾಜ ಆಂಗ್ಲರ ಪ್ಯಾಡುಗಳನ್ನು ನಿರಂತರವಾಗಿ ಕಠಿಣ ಪರೀಕ್ಷೆಗೆ ಒಳಪಡಿಸುತ್ತಲೇ ಇದ್ದ.ಅವನಿಗೆ ಒಟ್ಟು 4 ವಿಕೆಟ್ ಸಿಕ್ಕವು. ಇನ್ನೊಂದು ವಿಕೆಟ್ ಸಿಕ್ಕಿದಿದ್ದರೆ ಅವನ ಹೆಸರು ಕೂಡ ಲಾರ್ಡ್ಸ್ ನ ಹಾನರ್ಸ್ ಬೋರ್ಡ್ ನಲ್ಲಿ ಬರೆಯಲ್ಪಡುತ್ತಿತ್ತು. ಭಾರತೀಯ ಬೌಲರ್ ಗಳು ನೋ ಬಾಲ್ ಹಾಕದಿರುವ ಬಗ್ಗೆ ಹೆಚ್ಚಿನ ಗಮನ ಕೊಡಲೇ ಬೇಕಾಗಿದೆ. ಏಕೆಂದರೆ ಅಷ್ಟೊಂದು ನೋ ಬಾಲ್ ನಮ್ಮವರು ಇಂದು ಹಾಕಿದ್ದಾರೆ.ಬಹುಶಃ ಹತ್ತಕ್ಕಿಂತ ಹೆಚ್ಚಿನ ನೋ ಬಾಲ್ ಇಂದು ಹಾಕಿದ್ದಾರೆ ಎಂದು ಕಾಣುತ್ತದೆ. ಅದರಲ್ಲಿಯೂ ನೋ ಬಾಲ್ ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಒಬ್ಬ ಔಟಾದರೆ ಅದಕ್ಕಿಂತ ಹೆಚ್ಚಿನ ಹರ್ಟ್ ಬಹುಶಃ ಬೇರೆ ಯಾವುದೂ ಮಾಡಲಿಕ್ಕಿಲ್ಲ. ಪುಣ್ಯಕ್ಕೆ ಈ ಟೆಸ್ಟ್ ನಲ್ಲಿ ಇಲ್ಲಿಯವರೆಗೆ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ. ಆದರೆ ಇದರ ಮೇಲೆ ಭಾರತೀಯ ಬೌಲರ್ ಗಳು ನಿಯಂತ್ರಣ ಹೊಂದುವ ಅವಶ್ಯಕತೆ ಖಂಡಿತವಾಗಿಯೂ ಇದೆ.
ಒಟ್ಟಿನಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ಅನ್ನು 391 ರನ್ನುಗಳಿಗೆ ಮೊಟಕುಗೊಳಿಸಿದಾಗ 27 ರನ್ನುಗಳ ಅಲ್ಪ ಮುನ್ನಡೆಯನ್ನು ಗಳಿಸಿಕೊಂಡಿದೆ. ನೋಡಲು ಅಲ್ಪವಾದರೂ ಒಂದೆರಡು ರನ್ನುಗಳ ಮುನ್ನಡೆಯೂ ಸಹ ಆಟಗಾರರಲ್ಲಿ ಒಂದಿಷ್ಟು ಆತ್ಮವಿಶ್ವಾಸವನ್ನು ಖಂಡಿತವಾಗಿಯೂ ತಂದು ಕೊಡಬಲ್ಲದು.ರೂಟ್ 180 ರನ್ ಗಳಿಸಿ ಅಜೇಯನಾಗಿ ಉಳಿದು ಬಿಟ್ಟ. ಒಂದಿಬ್ಬರು ಬ್ಯಾಟ್ಸ್‌ಮನ್ ಗಳು ಇರುತ್ತಿದ್ದರೆ ಬಹುಶಃ ಅವನು ದ್ವಿಶತಕ ಕೂಡ ದಾಖಲಿಸುತ್ತಿದ್ದ ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಇನ್ನಿರುವುದು ಭಾರತದ ಬ್ಯಾಟ್ಸ್‌ಮನ್ ಗಳ ಪ್ರತ್ಯುತ್ತರ.ಎಲ್ಲರೂ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರೆ ಅದರಲ್ಲೂ ಫಾರ್ಮ್ ನಲ್ಲಿರದ ಪೂಜಾರ,ಕೊಹ್ಲಿ,ರಹಾನೆ ಕೂಡ ಬ್ಯಾಟಿಂಗ್ ನಲ್ಲಿ ತಮ್ಮದೊಂದು ಕೊಡುಗೆ ನೀಡಿದರೆ ಈ ಪಂದ್ಯವನ್ನು ಭಾರತವೇ ಕೊನೆಯಲ್ಲಿ ಗೆದ್ದು ಬಿಡಬಹುದು,ಇಲ್ಲದಿದ್ದರೆ ಟೀಮ್ ಇಂಡಿಯಾಕ್ಕೂ ಕೂಡ ಅಪಾಯ ತಪ್ಪಿದ್ದಲ್ಲ.
ಸದ್ಯದ ಈ ಸ್ಥಿತಿಯಲ್ಲಿ ಎರಡೂ ತಂಡಕ್ಕೂ ಪಂದ್ಯ ಗೆಲ್ಲಲು ಸಮಾನ ಅವಕಾಶವಿದೆ.ಅದರಲ್ಲೂ ಕೊನೆಯಲ್ಲಿ ಆಂಗ್ಲರೇ ಬ್ಯಾಟಿಂಗ್ ಮಾಡಬೇಕಾಗಿರುವುದರಿಂದ ಟೀಮ್ ಇಂಡಿಯಾ ಒಂದೊಳ್ಳೆಯ ಟಾರ್ಗೆಟ್ ನೀಡಿದರೆ ಆಂಗ್ಲರಿಗೆನೇ ಟೀಮ್ ಇಂಡಿಯಾಗಿಂತ ಹೆಚ್ಚಿನ ಅಪಾಯವಿರುವುದು.ಆದರೆ ಅದಕ್ಕೆಲ್ಲ ಭಾರತ ಮೊದಲು ಒಂದೊಳ್ಳೆಯ ಟೋಟಲ್ ಕಲೆಹಾಕುವುದು ಬಹಳಷ್ಟು ಅವಶ್ಯವಾಗಿದೆ.
ಇವತ್ತು ಕೂಡ ಮಳೆ ಬರಲಿಲ್ಲ. ಆದರೆ ನಾಳೆ ಮೋಡ ಕವಿದ ವಾತಾವರಣ ಇರಲಿದ್ದು,ಅಲ್ಪ ಸ್ವಲ್ಪ ಮಳೆಯೂ ಕೂಡ ಬರಲಿದೆ ಎಂಬ ಹವಾಮಾನ ವರದಿ ಇದೆ. ನಾಳೆ ಮಳೆ ಬರುತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ಕೊನೆಯಲ್ಲಿ ಈ ಪಂದ್ಯ ಭಾರತವೇ ಗೆಲ್ಲುವಂತಿದ್ದರೆ ಮೊನ್ನೆಯಂತೆ ಮಳೆ ಬಾರದಿರಲಿ..ಮಳೆ ಬಂದು ನಿರಾಸೆ ಮಾಡದಿರಲಿ..ಎಂದೇ ಟೀಮ್ ಇಂಡಿಯಾದ ಅಭಿಮಾನಿಗಳ ಎಂದಿನ ಪ್ರಾರ್ಥನೆ ಅಷ್ಟೇ.
ಮುಂದೇನಾಗುತ್ತದೆ.. ನಾಳೆ ನೋಡೋಣ,
ಪಂದ್ಯ ಮುಗಿದ ಕೂಡಲೇ ನಾಳೆಯೂ ಒಂದಷ್ಟು ಕ್ರಿಕೆಟ್ ಟಾಕ್ ಎಂದಿನಂತೆ ಮುಂದುವರಿಸೋಣ.
#Day_3 : Stumps
England 1st Innings - 391/10
Ind Vs England
2nd Test - Lord's London 2021
#WTC_S02E01_2021_23
Ab Pacchu




Comments
Post a Comment