ಜುಗಲ್‍ಬಂದಿ
ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮ ಲಾರ್ಡ್ಸ್ ಅಂಗಣದ ಸಾಂಪ್ರದಾಯಿಕ ಬೆಲ್ ಬಾರಿಸುವುದರೊಂದಿಗೆ ನಾಲ್ಕನೇ ದಿನದ ಆಟ ಇಂದು ಪ್ರಾರಂಭವಾಗಿ ಬಿಟ್ಟಿತ್ತು.
ಪ್ರೆಶ್ ಇನ್ನಿಂಗ್ಸ್.ಇಬ್ಬರೂ ಓಪನರ್ ಗಳಿಗೆ ಸೊನ್ನೆಯಿಂದಲೇ ತಮ್ಮ ತಮ್ಮ ಹಾಗೂ ತಮ್ಮ ತಂಡದ ಮೊತ್ತವನ್ನು ತುಂಬಾ ಉದ್ದಕ್ಕೆ ಬೆಳೆಸಬೇಕಾದ ಜವಾಬ್ದಾರಿ ಹಾಗೂ ಅನಿವಾರ್ಯತೆ ಇತ್ತು.
ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಕಂಡು ಬಂದ ನಮ್ಮ ಆರಂಭಿಕರ ಶಿಸ್ತಿನ ಆ ಆಟ ಎರಡನೆಯ ಇನ್ನಿಂಗ್ಸ್ ನಲ್ಲಿ ಕಂಡು ಬರಲಿಲ್ಲ.ಮೊದಲ ವಿಕೆಟ್ ಉರುಳಿದ್ದು ಕೆ.ಎಲ್ ರಾಹುಲ್ ನದ್ದು.ಮಾರ್ಕ್ ವುಡ್ ಎಸೆದ ಆ ಬಾಲ್ ನಲ್ಲಿ ಅಂತಹ ಸ್ವಿಂಗ್ ಏನೂ ಇರಲಿಲ್ಲ,ಆದರೆ ಬಾಲ್ ನ ಫೇಸ್ ಗೆ ಹೊಂದಿಕೊಳ್ಳಲಾಗದ ರಾಹುಲ್ ನ ಬ್ಯಾಟ್ ಅನ್ನು ಸ್ವತಃ ಬಾಲೇ ಮುತ್ತಿಕ್ಕಿಕೊಂಡು ಹೋಗಿ ವಿಕೆಟ್ ಕೀಪರ್ ಬಟ್ಲರ್ ನ ಗ್ಲೌಸ್ ಸೇರಿಕೊಂಡು ಬಿಟ್ಟಿತ್ತು.ಔಟಾಗಿ ಪೆವಿಲಿಯನ್ ಗೆ ಮರಳುವಾಗ ರಾಹುಲ್ ಗಳಿಸಿದ್ದು ಕೇವಲ ಐದು ರನ್ ಅಷ್ಟೇ.
ಆಂಗ್ಲರು ಬಲೆ ಬೀಸಿ ರೋಹಿತ್ ರೋಹಿತ್ ಶರ್ಮ ನನ್ನು ಔಟ್ ಮಾಡಿದರು ಎಂದು ಹೇಳುವುದಕ್ಕಿಂತಲೂ ಅವನು ತಾನಾಗಿಯೇ ವಿಕೆಟ್ ಒಪ್ಪಿಸಿದ ಎಂದು ಹೇಳಿದರೆ ಹೆಚ್ಚು ಸರಿಯಾಗುತ್ತದೆ.ಆಂಗ್ಲರು ರೋಹಿತ್ ವಿರುದ್ಧ ಯಾವುದೇ ಅಂತಹ ಷಡ್ಯಂತ್ರ ಮಾಡದೇ ಕಣ್ಣಿಗೆ ಗೋಚರಿಸುವ ಕೇವಲ ಒಂದೇ ಒಂದು ತಂತ್ರ ಮಾಡಿ ಬಿಟ್ಟರು ಇಂದು.
ರೋಹಿತ್ ಗೆ ಅವನದ್ದೊಂದು ಇನ್ಸ್ ಸ್ಟಿಂಕ್ಟ್ ಅನ್ನು ಕಂಟ್ರೋಲ್ ಮಾಡಿಕೊಳ್ಳಲು ಎಂದಿಗೂ ಸಾಧ್ಯವೇ ಇಲ್ಲ.ಇವತ್ತು ಒಳ್ಳೆಯ ಲಹರಿಯಲ್ಲಿ ಬಹಳಷ್ಟು ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್. ಆ ಒಂದು ಸ್ಟ್ರೈಟ್ ಡ್ರೈವ್ ಕೂಡ ಬಹಳ ಸೊಗಸಾಗಿತ್ತು.ಅವನ ಆಟ ನೋಡುವಾಗ ಖಂಡಿತವಾಗಿಯೂ ಅವನ ಮೇಲೆ ಭರವಸೆಯೊಂದು ಹಾಗೇ ಹುಟ್ಟಿಕೊಂಡದ್ದು ಸುಳ್ಳಲ್ಲ.
ಇದರ ನಡುವಲ್ಲಿ ಮಾರ್ಕ್ ವುಡ್ ಬೇಕೆಂದೇ ಒಂದು ಶಾರ್ಟ್ ಪಿಚ್ ಬಾಲ್ ಎಸೆದು ರೋಹಿತ್ ನನ್ನು ಒಮ್ಮೆ ಟೆಸ್ಟ್ ಮಾಡಿ ಬಿಟ್ಟ.ಲೀಲಾಜಾಲವಾಗಿ ಅದನ್ನು ಫುಲ್ ಮಾಡಿ ಗ್ರೌಂಡಿನಿಂದ ಹೊರಗೆ ಸಿಕ್ಸರ್ ಗೆ ಅಟ್ಟಿ ಬಿಟ್ಟಿದ್ದ ನಮ್ಮ ಹಿಟ್ ಮ್ಯಾನ್.
ನಾನು ನಿನಗೆ ಹಾಕುವ ನೆಕ್ಸ್ಟ್ ಬಾಲ್ ಕೂಡ ಇಂತಹದ್ದೇ ಎಂದು ಹೇಳಲು ಹೊರಟ ಮಾರ್ಕ್ ವುಡ್ ಲೆಗ್ ಸೈಡಿನಲ್ಲಿ ಮತ್ತೊಂದು ಫಿಲ್ಡರ್ ಅನ್ನು ಇರಿಸಿದ.ಒಟ್ಟು 3 ಫೀಲ್ಡರ್.ಇದು ಮೇಲ್ನೋಟಕ್ಕೆ ಟ್ರ್ಯಾಪ್ ಎಂದು ಮತ್ತು ವುಡ್ ಮುಂದೆ ಯಾವ ರೀತಿಯ ಬಾಲ್ ಹಾಕುತ್ತಾನೆ ಎಂದು ನೋಡುವ ಎಲ್ಲರಿಗೂ ಗೊತ್ತು.ಅದರಲ್ಲೂ ವುಡ್ ಗೆ ಅಂತು ಇನ್ನೂ ಚೆನ್ನಾಗಿಯೇ ಗೊತ್ತು ನಾನು ಇನ್ನೊಂದು ಬಾಲ್ ಅದೇ ರೀತಿ ಹಾಕಿದರೂ ಸಹ ರೋಹಿತ್ ಮತ್ತೆ ಅದೇ ಫುಲ್ ಶಾಟ್ ಹೊಡೆದೇ ಹೊಡೆಯುತ್ತಾನೆ ಎಂದು.ವುಡ್ ಗೆ ಮಾತ್ರವಲ್ಲ ಜಗತ್ತಿಗೆ ಗೊತ್ತಿರುವ ಹಿಟ್ ಮ್ಯಾನ್ ನ ವಿಷಯ ಅದು.ಅದೇನು ಅಂತಹ ರಹಸ್ಯವಲ್ಲ.
ರೋಹಿತ್ ಕೂಡ ಅದನ್ನೇ ನಿರ್ಧರಿಸಿದ್ದು.ನೀನು ಟ್ರ್ಯಾಪ್ ಸೆಟ್ ಅಪ್ ಮಾಡಿದರೂ,ಮಾಡಿಲ್ಲದಿದ್ದರೂ ಮತ್ತೆ ಈ ರೀತಿಯ ಬಾಲ್ ಹಾಕಿದರೆ ನನ್ನದು ಯಾವತ್ತಿಗೂ ಅದೇ ಟ್ರಿಟ್ ಎಂದು ರೋಹಿತ್ ಬಾಯಿ ಬಿಟ್ಟು ಹೇಳದಿದ್ದರೂ ನೋಡುವ ಯಾರಿಗೇ ಆಗಲಿ ರೋಹಿತ್ ನ ಮನಸ್ಥಿತಿ ಅದೇ ಎಂದು ಯಾವತ್ತಿಗೂ ಗೊತ್ತಿದ್ದದ್ದೇ ಬಿಡಿ.ಏಕೆಂದರೆ 3 ಅಲ್ಲ 9 ಪ್ಲೇಯರ್ ಅನ್ನು ಕೂಡ ಅಲ್ಲಿ ನಿಲ್ಲಿಸಿದರೂ ರೋಹಿತ್ ಅವರ ತಲೆಯ ಮೇಲಿಂದ ಸಲೀಸಾಗಿ ಫುಲ್ ಶಾಟ್ ಹೊಡೆದು ಬೌಂಡರಿ ಗೆರೆ ದಾಟಿಸಿ ಬಲ್ಲ ಚತುರನೇ.
ಆದರೆ ಎಲ್ಲಾ ದಿನ ಭಾನುವಾರ ಆಗಿರುವುದಿಲ್ಲ ನೋಡಿ,ಇಲ್ಲಿ ಕೂಡ ಆಗಿದ್ದು ಅದೇ.ರೋಹಿತ್ ನಿರೀಕ್ಷಿಸಿದ್ದಂತೆ ಮತ್ತೆ ಅದೇ ಶಾರ್ಟ್ ಪಿಚ್ ಬಾಲ್ ಮಾಡಿ ಬಿಟ್ಟ ವುಡ್. ವುಡ್ ನಿರೀಕ್ಷಿಸಿದಂತೆ ರೋಹಿತ್ ತನ್ನ ಎಂದಿನ ಬೇಸಿಕ್ ಇನ್ಸ್ ಸ್ಟಿಂಕ್ಟ್ ನಲ್ಲಿ ಮತ್ತದೇ ಶಾಟ್ ಬಾರಿಸಿ ಬಿಟ್ಟ.ಆದರೆ ಬಾಲ್ ಬೌಂಡರಿ ಗೆರೆ ದಾಟುವ ಮೊದಲೇ ಬೌಂಡರಿ ಗೆರೆ ಬಳಿಯಿದ್ದ ಮೊಯಿನ್ ಆಲಿಯ ಕೈಯಲ್ಲಿ ಬೆಚ್ಚಗೆ ಸೇರಿಕೊಂಡು ಬಿಟ್ಟಿತು. ರೋಹಿತ್ ಬಾರಿಸಿದ್ದು 21 ರನ್.
ಇಲ್ಲಿಯೂ ರೋಹಿತ್ ಮಾಡಿದ್ದು ಮೊದಲ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ನ ಮಿಸ್ಟೇಕ್ ಅನ್ನೇ.ರೋಹಿತ್ ಇವತ್ತು ಮೊದಲು ಸಿಕ್ಸರ್ ಬಾರಿಸಿದ್ದು ಫುಲ್ ಹೊಡೆತದಲ್ಲಿ ಆದರೆ ನಂತರ ಔಟ್ ಆಗಿದ್ದು ಮಾತ್ರ ಫುಲ್ ಬದಲಿಗೆ ಹುಕ್ ಹೊಡೆತ ಬಾರಿಸಲು ಮುಂದಾಗಿ.ಬಾಲ್ ಗೆ ಬ್ಯಾಟ್ ನ ಸಂಪರ್ಕ ಸರಿಯಾದ ಜಾಗದಲ್ಲಿ ಆಗದೇ ಇದ್ದದ್ದು ರೋಹಿತ್ ಔಟ್ ಆಗಲು ಮುಖ್ಯ ಕಾರಣ.ಈ ಮೊದಲೇ ಹೇಳಿದಂತೆ ಫುಲ್ ಶಾಟ್ ನಲ್ಲಿ ಆದರೂ ತಕ್ಕ ಮಟ್ಟಿಗೆ ಬಾಲ್ ಮೇಲೆ ನಿಯಂತ್ರಣವಿರುತ್ತದೆ,ಆದರೆ ಹುಕ್ ನಲ್ಲಿ ಅಂತಹ ಹೆಚ್ಚಿನ ಯಾವುದೇ ನಿಯಂತ್ರಣವೇ ಇಲ್ಲದಿರುವುದರಿಂದ ಬ್ಯಾಟ್ಸ್‌ಮನ್ ಔಟಾಗುವ ಸಂಭವವೇ ಅತೀ ಹೆಚ್ಚಿರುತ್ತದೆ.
ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೆಕರ್ ಇದನ್ನು ಇನ್ನಷ್ಟು ಸವಿವರವಾಗಿ ಹೇಗೆ ಭುಜದ ನೇರಕ್ಕೆ ಬರುವ ಬಾಲ್ ಅನ್ನು ಫುಲ್ ಹಾಗೂ ಭುಜದಿಂದ ಮೇಲಕ್ಕೆ ಅಂದರೆ ತಲೆಯತ್ತ ಹೋಗುವ ಬೌನ್ಸರ್ ಬಾಲ್ ಅನ್ನು ಹಾಗೇ ಮತ್ತಷ್ಟು ಮೇಲಕ್ಕೆಯೇ ಗಾಳಿಯಲ್ಲಿ ಬಾರಿಸಿ ಬೌಂಡರಿ ಗೆರೆ ದಾಟಿಸುವ ಹುಕ್ ಶಾಟ್ ಹೊಡೆಯಲಾಗುತ್ತದೆ ಎಂದು ಹೇಳಿ ಕೊಟ್ಟರು.ಅವರು ಕೂಡ ಹೇಳಿದ್ದು ಅದನ್ನೇ ಹುಕ್ ಯಾವತ್ತೂ ತುಂಬಾ ಅಪಾಯಕಾರಿಯಾದ ಶಾಟ್ ಅದರಲ್ಲಿ ಔಟ್ ಆಗುವ ಸಾಧ್ಯತೆಯೇ ಜಾಸ್ತಿ ಇರುತ್ತದೆ ಎಂದು.
ಹುಕ್ ಶಾಟ್ ಸಂಪೂರ್ಣವಾಗಿ ಗಾಳಿಯಲ್ಲಿಯೇ ಟ್ರಾವೆಲ್ ಆಗುವ ಒಂದು ಶಾಟ್,ಪುಲ್ ಶಾಟಿನಂತೆ ನೆಲದ ಕಡೆಗೆ ಅದನ್ನು ಬಾರಿಸುವುದು ಕಡಿಮೆಯೇ.ಫುಲ್ ಶಾಟ್ ಅನ್ನು ರಿಕ್ಕಿ ಪಾಂಟಿಂಗ್ ನಂತೆ ಮೇಲಿನಿಂದ ನೆಲದತ್ತಲೂ ಹೊಡೆಯಬಹುದು ಇಲ್ಲವೇ ಅದೇ ಪುಲ್ ಶಾಟ್ ಅನ್ನು ರೋಹಿತ್ ನಂತೆ ಗಾಳಿಯಲ್ಲಿಯೇ ಬೌಂಡರಿ ಗೆರೆ ದಾಟಿಸಿ ಸಿಕ್ಸರ್ ಕೂಡ ಹೊಡೆಯಬಹುದು.ಹುಕ್ ನಲ್ಲಿ ಏನಿದ್ದರೂ ಬರೀ ಗಾಳಿಯಲ್ಲಿಯೇ ಬಾಲಿನ ಸಂಪೂರ್ಣ ಓಟ.ಆದರೆ ಪೂಜಾರನಂತಹ ಆಟಗಾರರು ಅದು ಬೇಕಿದ್ದರೆ ಶಾಟ್ ಪಿಚ್ ಬಾಲೇ ಇರಲಿ, ಇಲ್ಲವೇ ಬೌನ್ಸರ್ ಬಾಲೇ ಇರಲಿ ಪ್ರತೀ ಬಾಲನ್ನೂ ಕೂಡ ನೆಲದತ್ತಲೇ ಒಗೆಯಲು ಮನಸ್ಸು ಮಾಡುತ್ತಾರೆ ಮತ್ತು ಪೂಜಾರ ಹೆಚ್ಚಾಗಿ ಮಾಡುವುದೇ ಅದನ್ನೇ.
ಅಷ್ಟು ಮಾತ್ರವಲ್ಲ ಸಂಜಯ್ ಮಾಂಜ್ರೆಕರ್ ಇಂದಿನ ದಿನಗಳಲ್ಲಿ ವಿರಳವಾಗುತ್ತಿರುವ ಕೆಲವು ಕ್ರಿಕೆಟ್ ಶಾಟ್ ಗಳ ಬಗ್ಗೆ ಹೇಳಿದ ಸಂಗತಿಗಳು ಆಸಕ್ತಿಕರವಾಗಿತ್ತು.ಮಾಂಜ್ರೇಕರ್ ಹೇಳಿದಂತೆ ಹುಕ್ ಶಾಟ್ ಅನ್ನು ಹಳೆಯ ಕಾಲದಲ್ಲಿ ಆಗಿನ ಆಟಗಾರರು ಹೆಚ್ಚಾಗಿ ಆಡುತ್ತಿದ್ದರಂತೆ.ಈಗೀನ ಕಾಲದ ಟ್ರೆಂಡಿಂಗ್ ಶಾಟ್ ಎಂದರೆ ಏನಿದ್ದರೂ ಅದು ಫುಲ್ ಶಾಟ್ ಅಷ್ಟೇ ಅಂತೆ.ಇಂದು ಡೇಂಜರಸ್ ಹುಕ್ ಶಾಟ್ ಅನ್ನು ಹೆಚ್ಚಾಗಿ ಯಾರೂ ಬಾರಿಸಲು ಮನಸ್ಸು ಮಾಡದೇ ಅದು ಬಹಳ ಅಪರೂಪವಾಗ ಬಿಟ್ಟಿದೆ ಎನ್ನುವುದೇ ಮಾಂಜ್ರೆಕರ್ ಅಭಿಪ್ರಾಯ.
ಅದೇ ರೀತಿ ಸ್ಕ್ವೇರ್ ಡ್ರೈವ್ ಎನ್ನುವ ವಿಕೆಟ್ ನ ಸ್ಕ್ವೇರ್ ವಿಭಾಗದಲ್ಲಿ ಬಾರಿಸುವ ಅತೀ ಸುಂದರ ಡ್ರೈವ್ ಹಾಗೂ ಸೂರ್ಯಕುಮಾರ್ ಕೆಲವೊಮ್ಮೆ ಬಾರಿಸುವ ಪ್ಲಿಕ್ ಶಾಟ್ ಸಿಕ್ಸ್ ಕೂಡ( ಮುರಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಸಹ ಬಾರಿಸುತ್ತಾರೆ)ಇತ್ತೀಚೆಗೆ ಬಹಳಷ್ಟು ಅಪರೂಪವಾಗಿದೆ ಎಂದು ಹೇಳುತ್ತಾರೆ ಸಂಜಯ್ ಮಾಂಜ್ರೆಕರ್.ಹಿಂದೆ ಭಾರತದವರೇ ಆದ ಸುನೀಲ್ ಗಾವಸ್ಕರ್,ಮೋಹಿಂದರ್ ಅಮರನಾಥ್,ವಿಜಯ್ ಮಾಂಜ್ರೆಕರ್ ಬಹಳ ಸುಂದರವಾಗಿ ಹುಕ್ ಶಾಟ್ ನಿರಂತರವಾಗಿ ಬಾರಿಸುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಮತ್ತೆ ಕೆದಕಿದರು ಸಂಜಯ್.
ಅದೇ ರೀತಿ ಬಹಳ ಸುಂದರವಾಗಿ ಫುಲ್ ಶಾಟ್ ಹೊಡೆಯುವ ರೋಹಿತ್ ಇನ್ನೂ ಹೆಚ್ಚಿನ ಶ್ರಮ ವಹಿಸಿದರೆ ಖಂಡಿತವಾಗಿಯೂ ಹಳೆಯ ಕಾಲದ ಆಟಗಾರರಂತೆ ಚೆನ್ನಾಗಿ ಹುಕ್ ಶಾಟ್ ಕೂಡ ಬಾರಿಸಬಹುದು ಎಕೆಂದರೆ ಶಾರ್ಟ್ ಪಿಚ್ ಇಲ್ಲವೇ ಬೌನ್ಸರ್ ಬಾಲ್ ಬಂದಾಗ ಅವನಲ್ಲಿರುವ ಆ ಒಂದು ಸ್ವಾಭಾವಿಕ ಇನ್ಸ್ ಸ್ಟಿಂಕ್ಟ್ ನಿಂದಾಗಿ ಅವನು ಇನ್ನೂ ಹೆಚ್ಚಿನ ಅಭ್ಯಾಸ ಮಾಡಿದರೆ,ಸ್ವಲ್ಪ ಜಾಸ್ತಿ ಫೋಕಸ್ ಮಾಡಿದರೆ,ಖಂಡಿತವಾಗಿಯೂ ಹೇಗೆ ಈಗ ಸೊಗಸಾಗಿ ಫುಲ್ ಶಾಟ್ ಹೊಡೆಯುತ್ತಾನೋ ಅದೇ ರೀತಿ ಹುಕ್ ಶಾಟ್ ಕೂಡ ಹೊಡೆಯುವುದರಲ್ಲಿ ರೋಹಿತ್ ಮಾಸ್ಟರ್ ಆಗಬಲ್ಲ ಎಂದು ಕಿವಿಮಾತು ಹೇಳಿದರು ಮಾಂಜ್ರೆಕರ್.
ಏನೇ ಹೇಳಿ ಕ್ರಿಕೆಟ್ ನ ವೈವಿಧ್ಯಮಯ ಹಳೆಯ ಶಾಟ್ ಗಳು ಮರೆಯಾಗಿ ಹೋಗಬಾರದು.ಯಾರದರೊಬ್ಬರು ಅದನ್ನು ಆಡುತ್ತಲೇ ಇದ್ದರೆ ಕ್ರಿಕೆಟ್ ಆಟಕ್ಕೂ ಒಂದು ಶೋಭೆ. ಅನ್ ಆರ್ಥಡಾಕ್ಸ್ ಶಾಟ್ ಯಾರೂ ಕೂಡ ಹೊಡೆಯಬಹುದು.ಅದರಲ್ಲಿ ಅಂತಹ ವಿಶೇಷತೆ ಏನಿಲ್ಲ.ಆದರೆ ಕೆಲವೊಂದು ಸಾಂಪ್ರದಾಯಿಕ ಕಾಪಿ ಬುಕ್ ಹೊಡೆತಗಳು ಇವೆಯಲ್ಲ ಅದು ಮರೆಯಾಗಿ ಹೋಗಬಾರದು ಎನ್ನುವುದೇ ನನ್ನದು ಕೂಡ ಒಂದು ಆಶಯ.ಅವೆಲ್ಲಾ ಕ್ರಿಕೆಟ್ ನಲ್ಲಿ ಇದ್ದರೆನೇ ಚಂದ.
ಸಂಜಯ್ ಮಾಂಜ್ರೆಕರ್ ಫುಲ್ ಹಾಗೂ ಹುಕ್ ಶಾಟ್ ನ ಬಗ್ಗೆ ಹಾಗೂ ಅದರ ಮೇಲಿನ ನಿಯಂತ್ರಣದ ಬಗ್ಗೆ ಇಷ್ಟುದ್ದ ಹೇಳಿದರೆ ಸೆಹ್ವಾಗ್ ಇದನ್ನು ಎರಡೇ ಸಾಲಿನಲ್ಲಿ ಹೇಳಿ ಮುಗಿಸಿದ್ದ.ಸೆಹ್ವಾಗ್ ಪ್ರಕಾರ ಫುಲ್ ಶಾಟ್ ಎಂದರೆ ನಮಗಿಂತ ಗಿಡ್ಡ ಇರುವವರಿಗೆ ಕಪಾಳ ಮೋಕ್ಷ ಮಾಡಿದಂತೆ, ಹುಕ್ ಶಾಟ್ ಎಂದರೆ ನಮಗಿಂತ ತುಂಬಾನೇ ಉದ್ದ ಇರುವವರಿಗೆ ಕೆನ್ನೆಗೆರಡು ಬಾರಿಸಿದಂತೆ. ಅದು ಏಕೆಂದರೆ ನಮಗಿಂತ ಹೈಟಿನಲ್ಲಿ ಕಡಿಮೆ ಇರುವವರಿಗೆ ಚಟಾರ್ ಎಂದು ಬಹಳ ಸುಲಭವಾಗಿ ಹೊಡೆದು ಬಿಡಬಹುದು,ಆದರೆ ಅದೇ ನಮಗಿಂತ ಉದ್ದ ಇರುವವರಿಗೆ ಸರಿಯಾಗಿ ಕೆನ್ನೆಗೆ ಬಾರಿಸಲು ಯಾವತ್ತೂ ಸ್ವಲ್ಪ ಕಷ್ಟವೇ!
ಆಹಾ... ಸೆಹ್ವಾಗ್ ಏನೇ ಹೇಳಿದರೂ ಮಜವಾಗಿ ಹೇಳುತ್ತಾನೆ. ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ.ಹಿಂದೆ ಗ್ರೌಂಡಿನಲ್ಲಿ ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಿದ್ದ ವೀರು ಈಗ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತುಕೊಂಡು ಮಾತಿನ ಚಟಾಕಿ ಹಾರಿಸುವುದರಲ್ಲಿ ನಿಸ್ಸೀಮನಾಗಿ ಬಿಟ್ಟಿದ್ದಾನೆ.ವೀರುವಿನ ಕಚಗುಳಿ ಇಡುವ ಮಾತುಗಳು ಇಷ್ಟವಾಗುತ್ತದೆ.
ಕೊಹ್ಲಿಯ ಮೊದಲ ಕವರ್ ಡ್ರೈವ್ ಆಹಾ.. ಎಂದಿನಂತೆ ಕ್ಲಾಸಿಕ್ ಅದು.ಕೊಹ್ಲಿ ಕೂಡ ಇಂದು ಉತ್ತಮ ಮೂಡ್ ನಲ್ಲಿಯೇ ಇದ್ದ. ಹಾಗಾಗಿ ಅವನ ಮೇಲೆಯೂ ಸಹಜವಾಗಿ ನಿರೀಕ್ಷೆ ಇತ್ತು. ಆದರೆ ಸ್ಯಾಮ್ ಕರನ್ ನ ಆ ಒಂದು ಆಫ್ ಸೈಡಿನ ಚೆಂಡು ಅವನನ್ನು ಹಾಗೇ ವಂಚಿಸಿ ಬಿಟ್ಟಿತು.ಕೊಹ್ಲಿಯ ಇವತ್ತಿನ ಗಳಿಕೆ 20 ರನ್ನುಗಳು. ಕೊಹ್ಲಿ ಔಟಾದಾಗ ಸ್ಯಾಮ್ ಕರನ್ ಹಾಗೂ ಇಂಗ್ಲೆಂಡ್ ಆಟಗಾರರು ಮಾಡಿದ ಸೆಲೆಬ್ರೇಶನ್ ನೋಡಿದರೆನೇ ಗೊತ್ತಾಗುತ್ತಿತ್ತು ಎಂತಹ ಅಮೂಲ್ಯ ವಿಕೆಟ್ ಅನ್ನು ಅವರು ದಕ್ಕಿಸಿಕೊಂಡಿದ್ದರು ಎಂದು.ಅವರ ಖುಷಿಗೆ ಪಾರವೇ ಇರಲಿಲ್ಲ.ಹಾಗೇ ಗ್ರೌಂಡ್ ತುಂಬಾ ಓಡಾಡಿ ಬಿಟ್ಟರು.ಡ್ರೆಸಿಂಗ್ ರೂಮ್ ಸೇರಿದ್ದ ಕೊಹ್ಲಿ ಕೂಡ ತಾನು ಆ ರೀತಿ ಔಟಾಗಿದ್ದಾಕ್ಕೆ ತನ್ನದೊಂದು ತೀವ್ರವಾದ ಪ್ರಸ್ಟ್ರೇಷನ್ ಅನ್ನು ಹೊರ ಹಾಕಿ ಬಿಟ್ಟಿದ್ದ.ವೀಡಿಯೋ ದಲ್ಲಿ ಅದು ಸ್ಪಷ್ಟವಾಗಿ ಗೋಚರಿಸಿತ್ತು ಕೂಡ.
ಆ ನಂತರ ಜೋಡಿಯಾಗಿ ಜುಗಲ್‍ಬಂದಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ನಮ್ಮ ಮಾಡರ್ನ್ ಗೋಡೆ ಪುಜಾರ ಹಾಗೂ ಉಪ ಕಪ್ತಾನ ಅಜಿಂಕ್ಯ ರಹಾನೆ.ಒಂದು ರೀತಿಯ ಹಿಂದುಸ್ತಾನಿ ಕ್ಲಾಸಿಕ್ ಮ್ಯೂಸಿಕ್ ನ ಕಛೇರಿ ಅವರದ್ದು.ತಾಳ್ಮೆ ವ್ಯವಧಾನ ಎರಡೂ ಇದ್ದವರಿಗೆ ಮಾತ್ರ ಹಿಡಿಸುವಂತಹದ್ದು.
ಇಬ್ಬರ ಮೇಲೂ ಅಂತಹ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೂ ಆ ಸಂಕಟದ ಪರಿಸ್ಥಿತಿಯಲ್ಲಿ ಎಂತಹ ಮಚ್ ನೀಡೆಡ್ ತಾಳ್ಮೆಯ ಆಟ ಅವರಿಬ್ಬರು ಪ್ರದರ್ಶಿಸಿ ಬಿಟ್ಟರು ಎಂದರೆ ಎರಡನೆಯ ಸೆಷನ್ ನಲ್ಲಿ ಹೆಚ್ಚಿನ ರನ್ ಕಲೆ ಹಾಕದಿದ್ದರೂ ಆಂಗ್ಲರಿಗೆ ಒಂದೇ ಒಂದು ವಿಕೆಟ್ ಕೂಡ ಬಿಟ್ಟು ಕೊಡಲಿಲ್ಲ ಪೂಜಾರ ಮತ್ತು ರಹಾನೆ.ಕೆಲವರಿಗೆ ಇವರ ಇನ್ನಿಂಗ್ಸ್ ಟೂ ಮಚ್ ಬೋರಿಂಗ್ ಅಂತ ಅನ್ನಿಸಬಹುದು. ಆದರೆ ಇಂತಹ ಇನ್ನಿಂಗ್ಸ್ ಗಳಲ್ಲಿಯೇ,ಈ ರೀತಿ ತಂಡವನ್ನು ಇನ್ನಷ್ಟು ಕುಸಿಯದಂತೆ ತಡೆದು ಎದುರಾಳಿಗೆ ಸವಾಲಾಗುವುದರಲ್ಲಿಯೇ ಅಸಲಿ ಟೆಸ್ಟ್ ಕ್ರಿಕೆಟ್ ನ ಹೆಚ್ಚಿನ ಸ್ವಾದ ಇರುವುದು.
ಸತತ 34 ಬಾಲ್ ಅಲ್ಲಿ ಒಂದೇ ಒಂದು ರನ್ ಗಳಿಸದ ಪೂಜಾರ ಮೊದಲ ರನ್ ಗಳಿಸಿದ್ದು 35 ನೇ ಬಾಲ್ ನಲ್ಲಿ.ಅಷ್ಟು ಮಾತ್ರವಲ್ಲ 100 ಎಸೆತ ಎದುರಿಸಿದಾಗ ಪೂಜಾರ ಒಟ್ಟು ಗಳಿಸಿದ್ದು ಕೇವಲ 12 ರನ್. ಪೂಜಾರನ ಈ ತಾಳ್ಮೆಯ ಆಟಕ್ಕೆ ಎದುರಿಸಿದ ಬಾಲ್ ನೂರು ತಲುಪಿದಾಗ ಲಾರ್ಡ್ಸ್ ಕ್ರೌಡು ಚಪ್ಪಾಳೆ ತಟ್ಟುವ ಮೂಲಕ ವಿಶೇಷ ಮೆಚ್ಚುಗೆ ವ್ಯಕ್ತ ಪಡಿಸಿತು.ಆಗ ತಲೆಕರೆದುಕೊಳ್ಳುವ ಸರದಿ ಮಾತ್ರ ಆಂಗ್ಲರದ್ದು ಆಗಿತ್ತು.
ರಹಾನೆ ಕೊನೆಗೂ ಅರ್ಧಶತಕ ಬಾರಿಸಿ ಮೊದಲ ಬಾರಿಗೆ ಈ ಸೀರಿಸ್ ನಲ್ಲಿ ನೆಮ್ಮದಿ ನಿಟ್ಟುಸಿರು ಬಿಟ್ಟ.ರಹಾನೆ ಹೊಡೆದದ್ದು 61 ರನ್. ಪೂಜಾರ ಕೂಡ ಕೊನೆಯಲ್ಲಿ ಒಳ್ಳೆಯ ಆಟವಾಡಿ 45 ರನ್ ಹೊಡೆದು ಬಿಟ್ಟ.ಆದರೆ ಮೂರನೇ ಸೆಷನ್ ನಲ್ಲಿ ಇಬ್ಬರೂ ಔಟಾಗಿ ಪೆವಿಲಿಯನ್ ಸೇರುವ ಮೂಲಕ ಮತ್ತೆ ಅಪಾಯ ಭಾರತದ ಕಡೆಗೆ ವಾಲಿಕೊಂಡಿದೆ.
ಜಡೇಜಾ ಕೂಡ ಔಟಾಗಿದ್ದು ಈಗ ರಿಷಭ್ ಜೊತೆ ಇರುವುದು ಇಶಾಂತ್ ಶರ್ಮ ಮತ್ತು ಕೈಯಲ್ಲಿರುವುದು ಕೊನೆಯ 4 ಬಾಲಂಗೋಚಿ ಬ್ಯಾಟ್ಸ್‌ಮನ್ ಗಳು. ಟೀಮ್ ಇಂಡಿಯಾ ಒಟ್ಟು 154 ರನ್ನುಗಳ ಮುನ್ನಡೆಯನ್ನು ಗಳಿಸಿಕೊಂಡಿದೆ.
ನಾಳೆ ಕೊನೆಯ ದಿನ... ನಿರ್ಣಾಯಕ ದಿನ.. ಫಲಿತಾಂಶದ ದಿನ.
ಖಂಡಿತವಾಗಿಯೂ ಇಂಟ್ರೆಸ್ಟಿಂಗ್ ಆಗಿರಲಿದೆ.
ಇನ್ನು ಭಾರತದ ಟೋಟಲ್ ಸ್ಕೋರ್ ಟೋಟಲಿ ರಿಷಭ್ ಪಂತ್ ಮೇಲೆಯೇ ನಿಂತಿದೆ. ಪಂತ್ ಟೇಲ್ ಎಂಡರ್ ಗಳ ಸಹಾಯದಿಂದ ಒಂದಷ್ಟು ರನ್ ಗಳಿಸಿ ಮುನ್ನಡೆಯನ್ನು ಇನ್ನೂರರ ಮೇಲೆ ಹಿಗ್ಗಿಸಿದರೆ ಆವಾಗ ಟೀಮ್ ಇಂಡಿಯಾಗೆ ಕನಿಷ್ಟ ಪಕ್ಷ ಡ್ರಾ ಆದರೂ ಮಾಡಿಕೊಳ್ಳಲು ಸಹಾಯವಾಗುತ್ತದೆ ಅಷ್ಟು ಮಾತ್ರವಲ್ಲ ಬೌಲರ್ ಗಳು ಕೊನೆಯಲ್ಲಿ ಮ್ಯಾಜಿಕ್ ಬೌಲಿಂಗ್ ಮಾಡಿದರೆ ಆವಾಗ ಭಾರತ ಕೂಡ ಗೆಲ್ಲಬಹುದು.ಆದರೆ ಒಂದು ವೇಳೆ ಆ ರೀತಿ ಆಗದಿದ್ದರೆ ಈ ಪಂದ್ಯ ಭಾರತಕ್ಕೆ ಬಹಳಷ್ಟು ಕಠಿಣವಾಗಲಿದೆ.
ಆದರೆ ಕೊನೆಯ ದಿನ ಟೆಸ್ಟ್‌ನಲ್ಲಿ ಏನು ಬೇಕಾದರೂ ಆಗಬಹುದು.ನಾವು ಎಂದಿನಂತೆ ಆಶಾವಾದಿಗಳಾಗಿರೋಣ.
ಮೋಡ ಹಾಗೂ ಬೆಳಕಿನ ಆಟದಿಂದಾಗಿ ಇಂದು ದಿನದ ಕೊನೆಯಲ್ಲಿ ಆಟವನ್ನು ಬೇಗನೇ ಮುಕ್ತಾಯಗೊಳಿಸಲಾಯಿತು.ನಾಳೆ ಇದರ ಜೊತೆಯಲ್ಲಿ ಮಳೆಯ ಹಸ್ತಕ್ಷೇಪ ಇದೆಯೋ ಇಲ್ಲವೋ ಸರಿಯಾಗಿ ಗೊತ್ತಿಲ್ಲ.ಪುರುಸೊತ್ತು ಆದರೆ ಮಳೆರಾಯ ನಾಳೆ ಖಂಡಿತವಾಗಿಯೂ ಲಾರ್ಡ್ಸ್ ಮೈದಾನಕ್ಕೊಂದು ವಿಸಿಟ್ ಕೊಡಬಹುದು, ಆದರೆ ಆ ಸಮಯದಲ್ಲಿ ಭಾರತದ ಸ್ಥಿತಿ ಕಠಿಣವಾಗಿದ್ದರೆ ನಮಗೆ ತಕ್ಕ ಮಟ್ಟಿಗೆ ಸಮಾಧಾನ,ಆದರೆ ಆ ಸಮಯದಲ್ಲಿ ನಮ್ಮ ಸ್ಥಿತಿ ಪಂದ್ಯ ಗೆಲ್ಲುವಷ್ಟು ಉತ್ತಮವಾಗಿದ್ದಾರೆ ಆವಾಗ ನಮಗೆ ಮನಸ್ಸಿನಲ್ಲಿಯೇ ಹಿಡಿಶಾಪ ಹಾಕುವುದರ ಹೊರತು ಬೇರೆನೂ ಹೆಚ್ಚಿನ ಆಯ್ಕೆಗಳಿಲ್ಲ..
ಕಾದು ನೋಡೋಣ,ಏನಾದರೊಂದು ಆಗಬಹುದು....
ಮತ್ತೆ ನಾಳೆ ಸಿಗೋಣ..ಐದನೇ ದಿನದ ಆಟದ ಬಗ್ಗೆ ಎಂದಿನಂತೆ ಒಂದಷ್ಟು ಹರಟೆ ಹೊಡೆಯೋಣ..
#Day_3 : Stumps
India 2nd Innings - 181/6
Ind Vs England
2nd Test - Lord's London 2021
#WTC_S02E01_2021_23
Ab Pacchu




Comments
Post a Comment