ಬೇಟೆ




ಕೊನೆಯ ದಿನ.. ಕಠಿಣ ಪರೀಕ್ಷೆ,ಹಲವು ನಿರೀಕ್ಷೆ,ಆದರೂ ಗೆಲುವೊಂದೇ ನಮ್ಮ ಪ್ರತೀಕ್ಷೆ ಎಂಬಂತೆ ಲಾರ್ಡ್ಸ್ ಅಂಗಣದಲ್ಲಿ ಇಂದು ಆಡಲು ಇಳಿದಿತ್ತು ಕೊಹ್ಲಿ ಪಡೆ.


ಡ್ರಾ, ಸೋಲು,ಗೆಲುವು ಈ ಮೂರೂ ಸಾಧ್ಯತೆಗಳು ಸಂಭವವಿತ್ತು. 


ಹೆಚ್ಚಿನ ನಿರೀಕ್ಷೆ ಇದ್ದದ್ದು ಮಾತ್ರ ಪಂತ್ ಮೇಲೆಯೇ.ಆದರೆ ಆಂಗ್ಲರಿಗೆ ಔಟ್ ಆಫ್ ಸಿಲೇಬಸ್ ಕಹಾನಿಯೊಂದನ್ನು ಹೇಳಿ ಇನ್ನಿಲ್ಲದಂತೆ ಬೆಚ್ಚಿ ಬೀಳಿಸಿ ಹೋಗಿದ್ದು ಇವತ್ತು ಶಮಿ ಮತ್ತು ಬೂಮ್ರ.ಅದನ್ನವರು  ನಿರೀಕ್ಷಿಸಿರಲೇ ಇಲ್ಲ. 


ನಿಜವಾಗಿಯೂ ಅವರಿಬ್ಬರು ಅದೆಷ್ಟು ಸುಂದರವಾಗಿ ಆಡುತ್ತಿದ್ದರು ಎಂದರೆ ಟೀಮ್ ಇಂಡಿಯಾ ಡಿಕ್ಲೇರ್ ಮಾಡುವುದೇ ಬೇಡ ಎಂದು ನೋಡುವವರಿಗೆ ಅನ್ನಿಸಿ ಬಿಟ್ಟಿದ್ದರೆ ಖಂಡಿತವಾಗಿಯೂ ಅದರಲ್ಲಿ ಅಂತಹ ತಪ್ಪೇನು ಇಲ್ಲ.ಅಷ್ಟು ಚೆನ್ನಾಗಿ ಆಡಿದ್ದರು ಅವರಿಬ್ಬರು.


ಶುರುವಲ್ಲಿ ಶಮಿ ಸ್ವೀಪ್ ಫುಲ್(ಸ್ವೀಪ್ +ಫುಲ್..ಅಗರ್ಕರ್ ಹೇಳಿದಂತೆ)ನಂತಹ ವಿಚಿತ್ರ ವಿಚಿತ್ರ ಶಾಟ್ ಹೊಡೆಯಲು ಪ್ರಯತ್ನಿಸಿದನಾದರೂ ಆ ನಂತರ ಶಮಿ ಬ್ಯಾಟ್ ನಲ್ಲಿ ಬಂದಂತಹ ಆ ಕವರ್ ಡ್ರೈವ್ ಗಳು,ರನ್ನೇ ಬಾರದಿದ್ದರೂ ಬೂಮ್ರ ಬಾರಿಸಿದ ಆ ಎರಡು ಸ್ಟ್ರೈಟ್ ಡ್ರೈವ್ ಗಳು ಆಹಾ.. ನೋಡಲು ತುಂಬಾನೇ ಸುಂದರವಾಗಿದ್ದವು.


ಹೆಚ್ಚು ಕಡಿಮೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಗಳಂತೆಯೇ ಆಡಿ ಅವರಿಬ್ಬರು ಇಂದು ಹೆಚ್ಚಿನ ಟೀಮ್ ಇಂಡಿಯಾ ಅಭಿಮಾನಿಗಳ ಹೃದಯ ಗೆದ್ದು ಬಿಟ್ಟರು. 


ಈ ದಿನದ ಶುರುವಲ್ಲಿ ಆಂಡರ್ಸನ್ ಬೌಲಿಂಗ್ ನಲ್ಲಿ ಸ್ಟೆಪ್ ಔಟ್ ಆಗಿ ಎಕ್ಸ್ಟ್ರಾ ಕವರ್ ನಲ್ಲಿ ರಿಷಬ್ ಬಾರಿಸಿದ ಆ ಖಡಕ್ ಕವರ್ ಡ್ರೈವ್ ನೋಡುವಾಗ  ಇವತ್ತು ಪಂತ್ ಆಕ್ರಮಣಕಾರಿ ಮೂಡ್ ನಲ್ಲಿದ್ದು ಖಂಡಿತವಾಗಿಯೂ ಒಂದಿಷ್ಟು ರನ್ ಗಳಿಸುತ್ತಾನೆ ಎಂದೇ ಅನ್ನಿಸಿತ್ತು.ಆದರೆ ರಾಬಿನ್ಸನ್ ನ ಗುಡ್ ಲೆಂತ್ ಬಾಲ್ ಅನ್ನು ಸರಿಯಾಗಿ ರೀಡ್ ಮಾಡದೇ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ಪಂತ್ ಬಹು ಬೇಗ ನಿರ್ಗಮಿಸಿ ಬಿಟ್ಟ.


ಅವನ ಜೊತೆಯಲ್ಲಿ ಇಶಾಂತ್ ಶರ್ಮ ಕೂಡ ರಾಬಿನ್ಸನ್ ನ ಎಲ್.ಬಿ.ಡಬ್ಲ್ಯು ಬಲೆಗೆ ಸುಲಭವಾಗಿ ಬಿದ್ದು ಬಿಟ್ಟ. ಅಲ್ಲಿಗೆ ನಮ್ಮ ಕಥೆ ಇನ್ನು ಅರ್ಧ ಗಂಟೆಯೊಳಗೆ ಮುಕ್ತಾಯ ಆದಂತೆಯೇ ಎಂದು ಹೆಚ್ಚಿನವರು ಲೆಕ್ಕ ಹಾಕಿದರು. 


ಆದರೆ ಆ ನಂತರ ಒಟ್ಟಾಗಿ ಯುಗಳ ಗೀತೆ ಹಾಡಿದ ಶಮಿ ಮತ್ತು ಬೂಮ್ರ ಆಂಗ್ಲರನ್ನು ಅಕ್ಷರಶಃ  ಬೆವರಿಳಿಸಿಯೇ ಬಿಟ್ಟಿದ್ದರು.ನಿನ್ನೆ ಕೊನೆಯಲ್ಲಿ ಜಿಮ್ಮಿಯನ್ನು ಬೌನ್ಸರ್ ಗಳ ಮೂಲಕ ನಿರಂತರವಾಗಿ ಕಾಡಿದ್ದ  ಬುಮ್ರಾ ಇಂದು ಹೆಚ್ಚಿನ ಇಂಗ್ಲಿಷ್  ಬೌಲರ್ ಗಳ ಕೆಂಗಣ್ಣಿಗೆ ಮೊದಲೇ ಗುರಿಯಾಗಿದ್ದ.ಹಾಗಾಗಿ ಬುಮ್ರಾ ಬ್ಯಾಟಿಂಗ್ ಗೆ ಬಂದಾಗ ಅವನಿಗೂ ಬೇಕಾದಷ್ಟು ಬೌನ್ಸರ್ ಎಸೆದು ಕೆಣಕಲಾಯಿತು.ಹೆಲ್ಮೆಟ್ ಗೂ ಎರಡು ಬಾರಿ ಬಾಲ್ ಬಡಿದಿತ್ತು.



ಇದರ ನಡುವಲ್ಲಿ ಬಟ್ಲರ್ ಹಾಗೂ ಮಾರ್ಕ್ ವುಡ್ ನೊಂದಿಗೆ ಕೂಡ ಒಂದಿಷ್ಟು ಮಾತಿನ ಚಕಮಕಿಗೂ ಇಳಿದು ಬಿಟ್ಟ ಬುಮ್ರಾ, ಅಷ್ಟೆಲ್ಲಾ ಆದರೂ ಬ್ಯಾಟಿಂಗ್ ನಲ್ಲಿ ಮಾತ್ರ ಆ ಸಂಯಮವನ್ನು ಕಳೆದು ಕೊಳ್ಳಲೇ ಇಲ್ಲ ಅವನು.ಬುಮ್ರಾ ಶಮಿ ಇಬ್ಬರೂ ತಂಡದ ಮೊತ್ತ ಎಷ್ಟು ಹಿಗ್ಗಿಸಿ ಬಿಟ್ಟರು ಎಂದರೆ ಆಂಗ್ಲರಿಗೆ ಬಿಡಿ ಸ್ವತಃ ಟೀಮ್ ಇಂಡಿಯಾ ಕೂಡ ಇಂತಹದ್ದೊಂದು ಆಟ ಟೇಲ್ ಎಂಡರ್ಸ್ ಗಳಿಂದ ನಿರೀಕ್ಷಿಸಿರಲಿಲ್ಲ. 


ಮೊದಲ ಸೆಷನ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡು 26 ಓವರುಗಳಲ್ಲಿ ಟೀಮ್ ಇಂಡಿಯಾ ಕಲೆ ಹಾಕಿದ್ದು ಬರೋಬ್ಬರಿ 105 ರನ್.ಅದೂ ಕೂಡ 4.04 ರನ್ ರೇಟಿನಲ್ಲಿ.ಲಂಚ್ ಗೆ ಹೋಗುವಾಗ 259 ರನ್ನುಗಳ ದೊಡ್ಡ ಲೀಡ್ ಕೂಡ ಟೀಮ್ ಇಂಡಿಯಾದ ಬಳಿ ಇತ್ತು.



ಮೊದಲ ಸೆಷನ್ ನಲ್ಲಿಯೇ ಶಮಿ ತನ್ನ ಟೆಸ್ಟ್ ಕೆರಿಯರ್ ನ ಎರಡನೆಯ ಅರ್ಧಶತಕ ಬಾರಿಸಿ  ಲಾರ್ಡ್ಸ್ ಅಂಗಣದಲ್ಲಿ ಬ್ಯಾಟ್ ಎತ್ತಿ ಹಿಡಿದು ಸಂಭ್ರಮಿಸಿ ಬಿಟ್ಟ. ಹೆಚ್ಚು ಕಡಿಮೆ ಎಲ್ಲರೂ ಎದ್ದು ನಿಂತು ಕರತಾಡನ ಮಾಡಿದ್ದರು.ಟೀಮ್ ಇಂಡಿಯಾದ ತಂಡದ ಸದಸ್ಯರು ಅಂತು ಶಮಿ, ಬೂಮ್ರ ಡ್ರೆಸಿಂಗ್ ರೂಮ್ ಗೆ ಮರಳಿದಾಗ ಚಪ್ಪಾಳೆಗಳ ಮೂಲಕವೇ ಸ್ವಾಗತಿಸಿ ವಿಶೇಷವಾಗಿ ಅಭಿನಂದಿಸಿ ಬಿಟ್ಟರು. ಲಾರ್ಡ್ಸ್ ಅಂಗಣದ ಈ ಜೊತೆಯಾಟ ಎಂದಿಗೂ ನೆನಪಿನಲ್ಲಿ ಇರುತ್ತದೆ. 


ಶಮಿ ಬೂಮ್ರ ನ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಹಿರಿಯ ಆಟಗಾರರಿಂದ ಹಿಡಿದು ಟೀಮ್ ಇಂಡಿಯಾದ ಅಭಿಮಾನಿಗಳೆಲ್ಲರೂ ಪ್ರಶಂಸೆಗಳ ಸುರಿಮಳೆಯನ್ನೇ ಗೈದಿದ್ದರು ಇಂದು.


ಅದರಲ್ಲೂ ಯಜುವೇಂದ್ರ ಚಾಹಲ್ ಮಾಡಿದ ಟ್ವೀಟ್ ಅಂತು ಬಹಳಷ್ಟು ಇಷ್ಟವಾಯಿತು.ಭಾರತೀಯ ಬಾಲಂಗೋಚಿಗಳ ಸೊಗಸಾದ ಆಟದ ಬಗ್ಗೆ ಚಾಹಲ್ ಹೇಳಿದ್ದು ಇಷ್ಟು " ಭಾರತೀಯ ಬೌಲರ್ ಗಳು ಬ್ಯಾಟಿಂಗ್ ನಲ್ಲಿ ಸ್ವೀಪ್ ಕೂಡ ಮಾಡಬಲ್ಲರು, ಡ್ರೈವ್ ಕೂಡ ಮಾಡಬಲ್ಲರು, ಫುಲ್ ಶಾಟ್ ಕೂಡ ಹೊಡೆಯಬಲ್ಲರು ಮಾತ್ರವಲ್ಲ ಲೆಗ್ ಸೈಡಿನ ಬಾಲ್ ಅನ್ನು ಆಫ್ ಸೈಡಿಗೆ ಕೂಡ ಬಾರಿಸಬಲ್ಲರು.."


ಲಂಚ್ ಆದ ನಂತರವೂ ಆಡಿದ ಟೀಮ್ ಇಂಡಿಯಾ,298 ರನ್ ಆದ ಕೂಡಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.ಶಮಿ ಔಟಾಗದೇ 56 ರನ್ ಹೊಡೆದರೆ, ಬುಮ್ರಾ ಔಟಾಗದೇ ತನ್ನ ಟೆಸ್ಟ್ ಕೆರಿಯರ್ ನ ಸರ್ವಾಧಿಕ  34 ರನ್ ಹೊಡೆದು ಬಿಟ್ಟ.ಆಂಗ್ಲರಿಗೆ ಚೇಸ್ ಮಾಡಲು ನೀಡಿದ ಮೊತ್ತ 271 ರನ್ನುಗಳು. ಎರಡೂ  ಸೆಷನ್ ಸೇರಿದರೆ ಹೆಚ್ಚು ಕಡಿಮೆ 60 ಓವರ್ ಗಳು ಬಾಕಿ ಇದ್ದವು. ಆಂಗ್ಲರಿಗೆ ಗೆಲ್ಲಲು 271 ರನ್ ಬೇಕಿದ್ದರೆ, ಟೀಮ ಇಂಡಿಯಾಕ್ಕೆ ಗೆಲ್ಲಲು ಬೇಕಿದ್ದದ್ದು ಆಂಗ್ಲರ 10 ವಿಕೆಟ್ ಗಳು.


ಆಂಗ್ಲರಿಗೆ ಇನ್ನಿಂಗ್ಸ್ ಆರಂಭಿಸುವ ಮೊದಲೇ ಅಷ್ಟು ರನ್ ಗಳ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ ಹೆಚ್ಚು ಕಡಿಮೆ ಸೋಲಿನ ದವಡೆಯಿಂದ ಪಾರಾಗಿತ್ತು.ಸೋಲು ತಪ್ಪಿಸಿಕೊಳ್ಳುವುದು ಮತ್ತು ಡ್ರಾ ಆಗುವಂತೆ ನೋಡಿಕೊಳ್ಳುವುದೊಂದೇ ಆಂಗ್ಲರ ಮುಂದಿನ ಸವಾಲಾಗಿತ್ತು.ಗೆಲುವು ಅವರ ಪಾಲಿಗಂತು ಕಷ್ಟ ಸಾಧ್ಯವಾಗಿತ್ತು. 


ಕೊನೆಗೂ ಆಂಗ್ಲರ ದ್ವಿತೀಯ ಇನ್ನಿಂಗ್ಸ್ ಆರಂಭವಾಗಿಯೇ ಬಿಟ್ಟಿತ್ತು.ಬೂಮ್ರ ಎಸೆದ  ಮೊದಲ ಓವರಿನ ಮೂರನೆಯ ಬಾಲ್ ನಲ್ಲಿಯೇ ಇಂಗ್ಲೆಡ್ ತನ್ನ ಮೊದಲ ವಿಕೆಟ್ ಅನ್ನು ರೋರಿ ಬರ್ನ್ಸ್ ರೂಪದಲ್ಲಿ ಕಳೆದುಕೊಂಡು ಬಿಟ್ಟಿತು.ಬೂಮ್ರ ಎಸೆತದಲ್ಲಿ ಬರ್ನ್ಸ್ ಸಿರಾಜ್ ಗೆ ಸುಲಭ ಕ್ಯಾಚಿತ್ತು ಹೊರ ನಡೆದಿದ್ದ. ಗಳಿಕೆ  ಶೂನ್ಯ ಸಂಪಾದನೆ. 


ಇನ್ನಿಂಗ್ಸ್ ನ ಎರಡನೆಯ ಓವರ್ ಎಸೆದದ್ದು ಶಮಿ.ಆ ಓವರಿನ ನಾಲ್ಕನೇ ಎಸೆತದಲ್ಲಿಯೇ ಮತ್ತೊಂದು ವಿಕೆಟ್ ಭಾರತದ ತೆಕ್ಕೆಗೆ ಬಿದ್ದಿತ್ತು. ಸಿಬ್ಲಿ ಕೂಡ ಸೊನ್ನೆ ಸುತ್ತಿ ಪೆವಿಲಿಯನ್ ಗೆ ಮರಳಿದ್ದ.ಶಮಿ ಎಸೆದ ಬಾಲ್ ಸಿಬ್ಲಿಯ ಬ್ಯಾಟನ್ನು ಸವರಿಕೊಂಡು ಹೋಗಿ ರಿಷಬ್ ಗ್ಲೌವ್ಸ್ ಸೇರಿತ್ತು.ಅಲ್ಲಿಗೆ ಆಂಗ್ಲರ ಇಬ್ಬರೂ ಓಪನರ್ಸ್ ಸೊನ್ನೆಯೊಂದಿಗೆ ಆಂಗ್ಲರ ಸ್ಕೋರ್ ಬೋರ್ಡ್ ನಲ್ಲಿ ಮಿರ ಮಿರನೆ ಹೊಳೆದು ಬಿಟ್ಟರು.


ಹಸೀಬ್ ಹಮೀದ್ ಅನ್ನು ಮೊದಲು ಎಲ್.ಬಿ.ಡಬ್ಲ್ಯು ಬಲೆಗೆ ಕೆಡವಿದ ಇಶಾಂತ್ ಶರ್ಮ ಚಹಾ ಕುಡಿಯಲು ಹೋಗುವುದಕ್ಕಿಂತ ಮೊದಲು ಜಾನಿ ಬೆರ್ಸ್ಟೋ ಅನ್ನು ಸಹ ಅದೇ ರೀತಿಯಲ್ಲಿ ಪೆವಿಲಿಯನ್ ಗೆ ಅಟ್ಟಿ ಭಾರತೀಯರ ಬಾಯಿಗೆ ಇನ್ನಷ್ಟು ಸಕ್ಕರೆ ಸುರಿದು ಬಿಟ್ಟ.


ಅಲ್ಲಿಗೆ ಎರಡನೇ ಸೆಷನ್ ಮುಗಿದಾಗ ಆಂಗ್ಲರ ಸ್ಕೋರ್ 67/4. ಇಂಗ್ಲೆಂಡ್ ಗೆ ಉಳಿದ 6 ವಿಕೆಟ್ ಗಳಲ್ಲಿ ಕೊನೆಯ ಸೆಷನ್ ನಲ್ಲಿ ಜಯಕ್ಕಾಗಿ 205 ರನ್ನುಗಳ ಅವಶ್ಯಕತೆ ಇದ್ದರೆ,ಟೀಮ್ ಇಂಡಿಯಾದ ಜಯಕ್ಕೆ ಇಂಗ್ಲೆಂಡ್ ನ ಆ 6 ವಿಕೆಟ್ ಬೇಕಿತ್ತು.


ಪಂದ್ಯದ ಕೊನೆಯ ಸೆಷನ್ ಎರಡೇ ಎರಡು ಸಾಧ್ಯತೆಗಳನ್ನು ತೆರೆದಿಟ್ಟದ್ದು. ಒಂದು ಭಾರತದ ವಿಜಯ,ಇಲ್ಲದಿದ್ದರೆ ಡ್ರಾ ಫಲಿತಾಂಶ.


ನಿಜಕ್ಕೂ ಟೆಸ್ಟ್ ಕ್ರಿಕೆಟ್ ನ ನಿಜವಾದ ರಂಗು,ಕ್ಷಣ ಕ್ಷಣದ ರೋಚಕತೆ ಗರಿಗೆದರುವ ಕ್ಷಣಗಳು ಅವು.ಟೆಸ್ಟ್ ಕ್ರಿಕೆಟ್ ನ ಫಲಿತಾಂಶ,ಕೊನೆಯ ದಿನ ಅದರಲ್ಲೂ ಕೊನೆಯ ಇನ್ನಿಂಗ್ಸ್ ನಲ್ಲಿ ನಿರ್ಧಾರವಾಗುವುದು.. ಯಾವತ್ತಿಗೂ ಸಿಕ್ಕಾಪಟ್ಟೆ ಮಜಾ ಕೊಡುವಂತಹದ್ದು.


ಚಹಾ ವಿರಾಮದ  ನಂತರ ಹೋಳಿಗೆ ಮೇಲೆ ತುಪ್ಪ ಸುರಿದದ್ದು ಜಸ್ಪ್ರೀತ್ ಬೂಮ್ರ.ಆಂಗ್ಲರ ಆಧಾರ ಸ್ತಂಭ ಇಂಗ್ಲೆಂಡ್ ನ ಕಪ್ತಾನ ಜೋ ರೂಟ್ ಅನ್ನೇ ಉದುರಿಸಿ ಬಿಟ್ಟಿದ್ದ ಬೂಮ್ರ.ಸ್ಲಿಪ್ ನಲ್ಲಿದ್ದ ನಮ್ಮ ಕಪ್ತಾನ ವಿರಾಟ್ ಕೊಹ್ಲಿ, ಜೋ ರೂಟ್ ನೀಡಿದ ಸುಲಭ ಕ್ಯಾಚ್ ಹಿಡಿದು ಅವನಿಗೊಂದು ಅಲ್ಲೇ ಟಾಟಾ ಬೈ ಬೈ ಮಾಡಿ ಬಿಟ್ಟ.


ಕೊಹ್ಲಿಯ ಸೆಲೆಬ್ರೇಶನ್ ಒಂದೇ ಸಾಕು ಎದುರಾಳಿಯ ಒಂದಿಷ್ಟು ಆತ್ಮವಿಶ್ವಾಸವನ್ನು ಕಸಿದುಕೊಳ್ಳಲು.ಖಂಡಿತವಾಗಿಯೂ ಅವನದ್ದೊಂದು ಜೋಶು ತಂಡದ ಆಟಗಾರರಿಗೆ ಅಗತ್ಯವೆನಿಸುವ ಹುರುಪು ಕ್ಷಣ ಕ್ಷಣಕ್ಕೂ ಇಂಜೆಕ್ಟ್ ಮಾಡುತ್ತಲೇ ಇರಬಲ್ಲದು.


ನಮ್ಮ ತಂಡದಲ್ಲಿ ಯಾವುದೇ ಬೌಲರ್ ಕೂಡ  ವಿಕೆಟ್ ಪಡೆದಾಗ ಸ್ವತಃ ವಿಕೆಟ್ ಪಡೆದಿದ್ದರೂ ಕೊಹ್ಲಿಯಷ್ಟು ಎಂದಿಗೂ ಸಂಭ್ರಮಿಸಲಾರ.ತಂಡದಲ್ಲಿ ಏನೇ ಖುಷಿಯ ಮಹೋಲ್ ಘಟಿಸಲಿ ಆವಾಗ ಸಂಭ್ರಮದ ಜಾತ್ರೆಯ ಮುಂಚೂಣಿಯಲ್ಲಿ ಯಾವತ್ತೂ ಪತಾಕೆ ಹಿಡಿದು ಮುನ್ನುಗುವುದು ಅದು ನಮ್ಮ ಕಪ್ತಾನ ವಿರಾಟ್ ಕೊಹ್ಲಿಯೇ.


ಕೆಲವೊಮ್ಮೆ ಅನ್ನಿಸುವುದಿದೆ, ಒಂದು ವೇಳೆ ಕೊಹ್ಲಿ ಬ್ಯಾಟ್ಸ್‌ಮನ್ ಬದಲು ಬೌಲರ್ ಆಗಿದಿದ್ದರೆ ಆತನ ಬಾಲ್ ನಲ್ಲಿ ಪದೇ ಪದೇ ವಿಕೆಟ್ ಗಳು ಬಿದ್ದಾಗ ಆವಾಗ ಅವನದ್ದೊಂದು ಸೆಲೆಬ್ರೇಶನ್ ಹೇಗಿರಬಹುದು ಎಂದು.ನೀವು ಕೂಡ ಜಸ್ಟ್ ಇಮ್ಯಾಜಿನ್ ಮಾಡಿ ಬಿಡಿ.


ನೋ ಬಾಲ್ ಎಷ್ಟು ಹರ್ಟ್ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿ ಇವತ್ತು ಜಡೇಜಾನ ಬೌಲಿಂಗ್ ಮತ್ತು ಜಡೇಜಾ ಎಸೆದ ಆ ನೋ ಬಾಲ್ ನಲ್ಲಿ ಮೋಯಿನ್ ಆಲಿ ಔಟಾಗಿದ್ದರೂ ಬಚಾವು ಆಗಿ ಬಿಟ್ಟದ್ದು. ಸ್ಪಿನ್ನರ್ ಒಬ್ಬ ನೋ ಬಾಲ್ ಎಸೆಯುವುದು ನಿಜಕ್ಕೂ ಸಿಕ್ಕಾಪಟ್ಟೆ ಬೇಸರ ತರಿಸುತ್ತದೆ.


ರೂಟ್  ಕ್ಯಾಚ್ ಹಿಡಿದಿದ್ದರೂ ಕೊಹ್ಲಿಯ ಬೆಣ್ಣೆ ಬೆರಳುಗಳಿಂದ ಬಟ್ಲರ್ ನೀಡಿದ ಒಂದು ಸುಲಭ ಕ್ಯಾಚ್ ಹಾಗೇ ಜಾರಿಕೊಂಡು ಹೋಗಿ ನಿರಾಸೆ ಮೂಡಿಸಿತು.ಅದೇ ರೀತಿ ರೋಹಿತ್ ಕೂಡ ಮೊದಲೇ ರೂಟ್ ನ ಒಂದು ಕ್ಯಾಚ್ ಸ್ಲಿಪ್ ನಲ್ಲಿ ಕೈ ಚೆಲ್ಲಿದ್ದ. 


ಆದರೆ ಕೊಹ್ಲಿ ಮತ್ತೊಮ್ಮೆ ಖುಷಿ ಪಡಿಸಿದ್ದು ಮೋಯಿನ್ ಅಲಿ ನೀಡಿದ ಕ್ಯಾಚ್ ಅನ್ನು ಈ ಬಾರಿ ಕೈ ಚೆಲ್ಲದೆ ಗಟ್ಟಿಯಾಗಿ ಹಿಡಿದುಕೊಂಡಾಗ.ಆಗ ಬೌಲಿಂಗ್ ನಲ್ಲಿ ಮೋಯಿನ್ ಅಲಿಯನ್ನು ವಂಚಿಸಿದ್ದು ಮೊಹಮ್ಮದ್ ಸಿರಾಜ್.


ಇನ್ನು ತಂಡದ ಗೆಲುವಿಗೆ ಬೇಕಿದ್ದದ್ದು ನಾಲ್ಕು ವಿಕೆಟ್.


ಕ್ರೀಸಿಗೆ ಬಂದದ್ದು ಸ್ಯಾಮ್ ಕರನ್. ಸಿರಾಜ್ ಎಂತಹ ಸುಂದರ ಬಾಲ್ ಎಸೆದು ಸ್ಯಾಮ್ ಕರನನ್ನು ಕೀಪರ್ ಪಂತ್ ಗೆ ಕ್ಯಾಚ್ ನೀಡಿಸಿ ಔಟ್ ಮಾಡಿದ ಎಂದರೆ ಈಗ ನೇರವಾಗಿ ಹ್ಯಾಟ್ರಿಕ್ ಬಾಗಿಲಲ್ಲಿ ಬಂದು ನಿಂತಿದ್ದ ಸಿರಾಜ್. ಸ್ಯಾಮ್ ಕರನ್ ನದ್ದು ಈ ಇನ್ನಿಂಗ್ಸ್ ನಲ್ಲಿ ಗೋಲ್ಡನ್ ಡಕ್ ಸಾಧನೆ.


ಇದೇ ರೀತಿಯ ಹ್ಯಾಟ್ರಿಕ್ ಅವಕಾಶ ಸಿರಾಜ್ ಗೆ ಮೊದಲ ಇನ್ನಿಂಗ್ಸ್ ನಲ್ಲಿ ಸಿಬ್ಲಿ ಹಾಗೂ ಹಸೀಬ್ ಹಮೀದ್ ಅನ್ನು ಔಟ್ ಮಾಡಿದಾಗಲೂ ಇತ್ತು.ಅಲ್ಲಿ ಜೋ ರೂಟ್ ಸಿರಾಜ್ ನ ಹ್ಯಾಟ್ರಿಕ್ ಸಾಧನೆಗೆ ತಡೆಗೋಡೆಯಾಗಿ ಬಿಟ್ಟಿದ್ದ


ತಂಡದ ಗೆಲುವಿಗೆ ಬೇಕಿದ್ದದ್ದು ಕೇವಲ ಮೂರೇ ಮೂರು ವಿಕೆಟ್ ... ಹಾಗೂ ಓವರ್ ಉಳಿದಿದ್ದು ಹೆಚ್ಚು ಕಡಿಮೆ 21.


ಬೆನ್ನು ಬೆನ್ನಿಗೆ ಮೋಯಿನ್ ಅಲಿ, ಸ್ಯಾಮ್ ಕರನ್ ಔಟಾದ ನಂತರ ಕ್ರೀಸಿಗೆ ಬಂದ ರಾಬಿನ್ಸನ್ ಸಿರಾಜ್ ಗೆ ಹ್ಯಾಟ್ರಿಕ್ ಅನ್ನು ನಿರಾಕರಿಸಿ ಬಿಟ್ಟ.


ಇದರ ನಡುವೆ ಸಿರಾಜ್ ಹಾಗೂ ರಾಬಿನ್ಸನ್ ನಡುವೆ ಕಾವೇರಿದ ವಾತಾವರಣವೊಂದು ಹಾಗೇ ಮೈದಾನದ ನಡುವಲ್ಲಿ ನಿರ್ಮಾಣಗೊಂಡು ಬಿಟ್ಟಿತ್ತು.ತೀವ್ರವಾದ ದೃಷ್ಟಿ ಯುಧ್ಧ,ವಾಗ್ಯುದ್ಧ ಎಲ್ಲವೂ ಇತ್ತು. ಕೊಹ್ಲಿ ಪಕ್ಕದಲ್ಲಿಯೇ ಇದ್ದರೆ ಕಿಡಿ ಹೇಗೆ ಶಾಂತವಾಗಲು ಸಾಧ್ಯ.


ಇಂತಹ ಪರಿಸ್ಥಿತಿಯಲ್ಲಿ ಅವನೂ ಒಂದಿಷ್ಟು ತುಪ್ಪ ಸುರಿದರೆನೇ  ಅದು ನಿಜವಾದ ಕೊಹ್ಲಿ,ಇಲ್ಲದಿದ್ದರೆ ಬಹುಶಃ ಅವನು  ವಿರಾಟ್ ಕೊಹ್ಲಿಯೇ ಅಲ್ಲ ಎಂದು ಅನ್ನಿಸಿ ಬಿಡುತ್ತದೆ.ವಿರಾಟ್ ಕೂಡ ಅದನ್ನೇ ಮಾಡಿ ಸಿರಾಜ್ ಗೆ ಸಿಕ್ಕಾಪಟ್ಟೆ ಸಾಥ್ ಕೊಟ್ಟು ಬಿಟ್ಟ.ಕೊನೆಗೆ ಅಂಪೈರ್ Michael Gough ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು. 


ಪಂದ್ಯ ಮತ್ತೆ ಸಾಗಿತ್ತು..


ಕೊನೆಯ ಮ್ಯಾಂಡೇಟರಿ 15 ಓವರ್ ಗಳು ಅಷ್ಟೇ ಬಾಕಿ ಉಳಿದಿತ್ತು.


ತಂಡಕ್ಕೆ ಜಯಕ್ಕಾಗಿ ಇನ್ನೂ 3 ವಿಕೆಟ್ ತುರ್ತಾಗಿ ಬೇಕಿತ್ತು.


ಇಲ್ಲಿಂದ ಮುಂದಕ್ಕೆ ಪ್ರತೀ ಬಾಲ್ ಕೂಡ ಒಂದು ಥ್ರಿಲ್ಲರ್ ಕಥೆಯೇ.


ಭಾರತದ ಅಭಿಮಾನಿಗಳು ಪ್ರತೀ ಬಾಲಿನಲ್ಲೂ ವಿಕೆಟ್ ನ ನಿರೀಕ್ಷೆಯನ್ನು ಎಕ್ಸಲರೇಟ್ ಮಾಡುವ ಮೋಡ್ ಅದು.


ಭಾರತದ ಮೊನಚಾದ ವೇಗದ ದಾಳಿ ತನ್ನ ಪ್ರಯತ್ನವನ್ನು ಮತ್ತಷ್ಟು ಘಾತಕಗೊಳಿಸುತ್ತಾ ಮುಂದೆ ಸಾಗಿತ್ತು.ಬ್ಯಾಟ್ಸ್‌ಮನ್ ಗಳ ಬುಡದಲ್ಲಿಯೇ ಅಲ್ಲಲ್ಲಿ  ಹೆಚ್ಚಿನ ಕ್ಷೇತ್ರರಕ್ಷಕರು ಕಾಣಿಸಿಕೊಂಡರು.


ವಿಕೆಟ್ ಇನ್ನೂ ಮೂರು ಬಾಕಿ ಉಳಿದಿತ್ತು.


ಬಾಕಿ ಉಳಿದಿರುವ ಓವರ್ ಗಳ ಸಂಖ್ಯೆ ಹಾಗೇ ಕಡಿಮೆಯಾಗುತ್ತಾ ಬಂತು... ಹತ್ತಕ್ಕೆ ಇಳಿದಿತ್ತು.


ಕೊನೆಯ 10 ಓವರ್ ನಲ್ಲಿ ಆಂಗ್ಲರ 3 ವಿಕೆಟ್ ಉರುಳಿಸಿದರೆ ಲಾರ್ಡ್ಸ್ ಪಂದ್ಯ ಭಾರತದ ತೆಕ್ಕೆಯಲ್ಲಿರುತ್ತಿತ್ತು.


ಅಂದರೆ 60 ಬಾಲ್ ಗಳಲ್ಲಿ ಕೊನೆಯ 3 ವಿಕೆಟ್ ಉರುಳಿಸಲೇ ಬೇಕಾಗಿತ್ತು.


ಆವಾಗ ತಂಡದ ಕನಸಿಗೆ ಆಸರೆಯಾಗಿದ್ದು  ಜಸ್ಪ್ರೀತ್ ಬೂಮ್ರ.


ಆಹಾ.. ಬೂಮ್ರ ಎಸೆದ ಆ ಸ್ಲೋವರ್ ಓನ್ ಗೆ ರಾಬಿನ್ಸನ್  ಬ್ಯಾಟ್ ವಂಚಿಸಿದ ಬೂಮ್ರನ ಬಾಲ್ ಅವನ ಪ್ಯಾಡಿಗೆ ನೇರಾ ನೇರಾ ಬಡಿದು ಬಿಟ್ಟಿತ್ತು. 


ಭಾರತೀಯರ ಮುಗಿಲು ಮುಟ್ಟಿದ ಔಟಿಗಾಗಿ ಮನವಿ.ಆದರೆ ಅಂಪೈರ್ Richard Illingworth ಔಟ್ ಕೊಡಲಿಲ್ಲ.ರಿವ್ಯೂ ಇತ್ತು. ಕೊಹ್ಲಿ ಹಿಂದೆ ಮುಂದೆ ನೋಡಲಿಲ್ಲ. ರಿವ್ಯೂ ಗೆ ಹೋಗಿಯೇ ಬಿಟ್ಟ.ಕೊನೆಗೂ ಥರ್ಡ್ ಅಂಪೈರ್ Richard Kettleborough ಭಾರತಕ್ಕೆ ಆಂಗ್ಲರ ಆ 8 ನೇ ವಿಕೆಟ್ ಸಿಗುವಂತೆ ಮಾಡಿಯೇ ಬಿಟ್ಟಿದ್ದ. 


ಇನ್ನು ಉಳಿದಿದ್ದ ಬಾಲ್ ಗಳ ಸಂಖ್ಯೆ 55...ಬೇಕಾಗಿದ್ದ ವಿಕೆಟ್ ಜಸ್ಟ್ ಎರಡು.


ಬಾಲ್ ಟು ಬಾಲ್ ಥ್ರಿಲ್ಲಿಂಗ್ ಗೇಮ್ ಮುಂದುವರಿದಿತ್ತು.


ಆಗ ಬಾಲ್ ಕೈಗೆತ್ತಿಕೊಂಡವನೇ  ಸಿರಾಜ್...


ಬಂತು ಮತ್ತೊಂದು ವಿಕೆಟ್.


ಬಂಡೆಯಂತೆ ನಿಂತಿದ್ದ ಬಟ್ಲರ್ ಗೆ ಕೊನೆಗೂ ಪೆವಿಲಿಯನ್ ದಾರಿ ತೋರಿಸಿಯೇ ಬಿಟ್ಟಿದ್ದ ನಮ್ಮ ಸಿರಾಜ.ಬಟ್ಲರ್ ಪಂತ್ ಗೆ ಕ್ಯಾಚ್ ಕೊಟ್ಟು ಹಾಗೇ ತಲೆ ತಗ್ಗಿಸಿಕೊಂಡು ಹೊರ ನಡೆದು ಬಿಟ್ಟ.


ಇನ್ನು ಉಳಿದಿದ್ದು... ಗೆಲುವಿಗೆ ಒಂದೇ ವಿಕೆಟ್.


52 ಎಸೆತಗಳಲ್ಲಿ ಒಂದೇ ಒಂದು ವಿಕೆಟ್... ಡಬ್ಲ್ಯು.ಟಿ.ಸಿ ಅಂಕ ಪಟ್ಟಿಯಲ್ಲಿ ಭಾರತದ ವಿಜಯ ಖಾತೆಯನ್ನು ತೆರೆದು ಬಿಡಲು ಒಂದೇ ಒಂದು ವಿಕೆಟ್.


ಆವಾಗ ಬಿದ್ದಿತ್ತು ನೋಡಿ ಕೊನೆಯ ಆ ವಿಕೆಟ್...!


ಉಸಿರು ಬಿಗಿ ಹಿಡಿದು ನೋಡು ನೋಡುತ್ತಿದ್ದಂತೆಯೇ.. ಸಿರಾಜ್ ಅದೇ ಓವರಿನಲ್ಲಿ ಆಂಡರ್ಸನ್ ನ ಪ್ಯಾಡುಗಳ ಹಿಂದೆ ಗಟ್ಟಿಯಾಗಿ ನಿಲ್ಲಿಸಿದ್ದ ಟಿಂಬರ್ ಅನ್ನು ಉಡಾಯಿಸುವ ಮೂಲಕ ಭಾರತದ ಕನಸೊಂದನ್ನು ಇಂದು ಲಾರ್ಡ್ಸ್ ಅಂಗಣದಲ್ಲಿ ಪೂರ್ಣಗೊಳಿಸಿಯೇ ಬಿಟ್ಟಿದ್ದ...


ಈಗ ಈ ಪಂದ್ಯ ಜಸ್ಟ್ ಇತಿಹಾಸ.


ಗೆದ್ದವರ ಕಥೆ ಈ ಬಾರಿ ನಮ್ಮ ಟೀಮ್ ಇಂಡಿಯಾದ್ದು. 


ಭಾರತೀಯರ ಹೃದಯದಲ್ಲಿ... ಲಾರ್ಡ್ಸ್ ನ ಐತಿಹಾಸಿಕ ಮೈದಾನದಲ್ಲಿ ತಿರಂಗವೊಂದು ಹಾಗೇ ಹಾರಡಿ ಬಿಟ್ಟಿತು.


ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಆಂಗ್ಲರನ್ನು ಅವರದ್ದೇ ನೆಲದಲ್ಲಿ 151 ರನ್ನುಗಳಿಂದ  ಬಗ್ಗು ಬಡಿದಿತ್ತು. ಮ್ಯಾನ್ ಆಫ್ ದ ಮ್ಯಾಚ್ ಅನ್ನು ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿ ಮೆರೆದ ಕೆ.ಎಲ್ ರಾಹುಲ್ ಬಾಚಿಕೊಂಡು ಬಿಟ್ಟಿದ್ದ. 


ಅಭಿನಂದನೆಗಳು ಟೀಮ್ ಇಂಡಿಯಾ.


ಕೇವಲ ಎರಡೇ ಸೆಷನ್ ನಲ್ಲಿ ಆಂಗ್ಲರ ಹತ್ತೂ ವಿಕೆಟ್ ಗಳನ್ನು ಭಾರತೀಯ ವೇಗದ ಬೌಲರ್ ಗಳು ಕಬಳಿಸಿದ್ದು.. ಆಹಾ... ಯಾವತ್ತಿಗೂ ಇದು ಕಡಿಮೆ ಸಾಧನೆ ಅಲ್ಲವೇ ಅಲ್ಲ.


ನಮ್ಮ ವೇಗದ ಬೌಲರ್ ಗಳು ಈ ರೀತಿ ಮಿಂಚಿದಾಗ ಅದೆನೋ ವಿವರಿಸಲಾಗದ ಖುಷಿ.


ಸದ್ಯಕ್ಕೆ ವಿಶ್ವ ಕ್ರಿಕೆಟ್ ನಲ್ಲಿ ನಮ್ಮದೇ ಲೀಥಲ್ ವೇಗದ ದಾಳಿ ಎಂದು ನಿಸ್ಸಂಶಯವಾಗಿ ಹೇಳಬಹುದು. 


ಸಿರಾಜ್ ಮತ್ತೊಮ್ಮೆ 4 ವಿಕೆಟ್ ಪಡೆದರೆ, ಬುಮ್ರಾ 3,ಇಶಾಂತ್ 2   ಹಾಗೂ ಶಮಿ ಒಂದು ವಿಕೆಟ್ ಪಡೆದು ಮಿಂಚಿದರು.


ಇಡೀ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬ್ಯಾಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲಿಯೂ ಆಂಗ್ಲರಿಗಿಂತ ಬಹಳಷ್ಟು ಮುಂದಿತ್ತು.ಅಷ್ಟು ಮಾತ್ರವಲ್ಲ ನಾಯಕತ್ವದಲ್ಲೂ ಟೀಮ್ ಇಂಡಿಯಾವೇ ಒಟ್ಟಾರೆ ಮೇಲುಗೈ ಸಾಧಿಸಿದ್ದು.ಜೋ ರೂಟ್ ಕೊನೆಯಲ್ಲಿ ಟೀಮ್ ಇಂಡಿಯಾದ ಬಾಲಗೊಂಚಿಗಳನ್ನು ಬೇಗನೆ ಔಟ್ ಮಾಡಿ ಎದುರಾಳಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ರಣತಂತ್ರ ಹೂಡುವಲ್ಲಿ ವಿಫಲವಾದರೆ,ಕೊಹ್ಲಿಯದ್ದು  ಯಾವಾಗಲೂ ಒಂದೇ ತಂತ್ರ,ಒಂದೇ  ಮಂತ್ರ.ಅದುವೇ  ವಿಜಯ.ಸೋಲುವ ಕ್ಷಣ ಮುಂದಿದ್ದರೂ ಗೆಲುವಿನ ಬಗ್ಗೆ ಬಿಟ್ಟು ಬೇರೆ ಯಾವುದರ ಬಗ್ಗೆಯೂ ಆತ ಆಲೋಚಿಸುವುದೇ ಇಲ್ಲ.ಅಂತಹದ್ದೊಂದು ಕಿಚ್ಚು ಆತ ತಂಡಕ್ಕೆ ಹಚ್ಚಿದುದರಿಂದಲೇ ಇಂದು ಈ ಗೆಲುವು ಸಾಧ್ಯವಾಗಿದ್ದು. 


ನೀವು ಬೇಕಿದ್ದರೆ ಗಮನಿಸಿ ಕೊಹ್ಲಿ ನಾಯಕತ್ವದಡಿಯ ಆಡುವ ಈ ಟೀಮ್ ಇಂಡಿಯಾದ ಹುಡುಗರಿಗೆ ಭಯ ಅಂದರೆನೇ ಏನೆಂದೇ ಗೊತ್ತಿಲ್ಲ.ಬದಲಿಗೆ ಎದುರಾಳಿಗೆ ಇನ್ನಿಲ್ಲದಂತೆ ಭಯ ಬೀಳಿಸಿ ಎದುರಾಳಿಗಳ ಜಯವನ್ನೇ ಕಸಿದುಕೊಳ್ಳುವಷ್ಟು ಇಂದು ಬೆಳೆದು ಬಿಟ್ಟಿದ್ದಾರೆ ನಮ್ಮವರು. ಈ ಮಾತನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಮೆಗ್ರಾತ್ ಕೂಡ ಈ ಹಿಂದೆ ಹೇಳಿದ್ದ. ಅಂದು ನಮ್ಮವರು ಆಸ್ಟ್ರೇಲಿಯಾ ಗಾಬದಲ್ಲಿ ಅದರದ್ದೊಂದು ಗಮಂಡ್ ಮುರಿದಿದ್ದರೆ ಇಂದು ಆಂಗ್ಲರ ಪರಮ ಪವಿತ್ರ ಲಾರ್ಡ್ಸ್ ನ ಅಂಗಣದಲ್ಲಿಯೇ ಲಾರ್ಡ್ ಗಳಾಗಿ ಬಿಟ್ಟಿದ್ದಾರೆ.ಈ ಎರಡೂ ಜಯಗಳ ಹಿಂದೆ ಇದ್ದದ್ದು ಕೊಹ್ಲಿ ಎಂಬ ನಾಯಕ ಕಲಿಸಿಕೊಟ್ಟ ನಿರ್ಭಯವಾದ ಕ್ರಿಕೆಟ್.ಆತ ಕಳೆದೆರಡು ವರ್ಷಗಳಿಂದ ಬ್ಯಾಟ್ ನಲ್ಲಿ ಅಷ್ಟೊಂದು ರನ್ ಕಲೆ ಹಾಕದೇ ಇರಬಹುದು,ಆದರೆ ನೀವು ಏನೇ ಹೇಳಿ ಈ ಹಲವಾರು ಗೆಲುವುಗಳ ಹಿಂದಿರುವ ಮೇಲೆ ಹೇಳಿದ ಕಾರಣಗಳಿಗಾಗಿ ನೀವು ಕೊಹ್ಲಿಯನ್ನಂತು ಮನಸಾರೆ ಅಭಿನಂದಿಸಲೇ ಬೇಕು.ಹಿ ಡಿಸರ್ವ್ಸ್ ಅ ಬಿಗ್ ಅಪ್ಲಾಸ್...

ಇಲ್ಲಿಗೆ ಈ ಪಂದ್ಯ ರೋಚವಾಗಿಯೇ ಮುಕ್ತಾಯಗೊಂಡಿದೆ.


ಟೆಸ್ಟ್ ಕ್ರಿಕೆಟ್ ನ ಸೊಗಸು ಸೊಬಗುಗಳು ಎಂದಿಗೂ ಇಂತಹದ್ದೇ ಪಂದ್ಯಗಳು.


ಅದಕ್ಕಾಗಿ ಈ ರೀತಿಯಲ್ಲಿ ತಾಳ್ಮೆಯಿಂದ ಕೊನೆಯವರೆಗೂ ಕಾಯಬೇಕು. ಕಾದರಷ್ಟೇ ಇಂತಹ ಅದ್ಭುತ ಸುಖದ ಪ್ರಾಪ್ತಿ. 


ಒಂದು ಸಣ್ಣ ಕಥೆ ಓದುವಾಗ ಸಿಗುವ ಸುಖಕ್ಕೂ ಒಂದು ದೊಡ್ಡ ಕಾದಂಬರಿ ಓದುವಾಗ ಸಿಗುವ ಸುಖಕ್ಕೂ ಬಹಳಷ್ಟು ವ್ಯತ್ಯಾಸವಿದೆ.ಅದೇ ರೀತಿ ಎರಡು ಗಂಟೆಗಳ ಒಂದು ಮೂವಿ ನೀಡುವ ಮನರಂಜನೆಗೂ ಹಲವಾರು ಎಪಿಸೋಡ್ ಗಳ ಸಿರೀಸ್ ನೀಡುವ ಆನಂದಕ್ಕೂ ಸಹ ಬಹಳಷ್ಟು ವ್ಯತ್ಯಾಸವಿದೆ.ಕ್ರಿಕೆಟ್ ನಲ್ಲಿ ಈ ಟೆಸ್ಟ್ ಕ್ರಿಕೆಟ್ ಯಾವತ್ತಿಗೂ ಈ ದೀರ್ಘವಾದ ಕಾದಂಬರಿ ಇಲ್ಲವೇ ಒಂದುದ್ದದ ಸಿರೀಸ್ ಇದ್ದ ಹಾಗೆಯೇ.ಅದರ ಸಂಪೂರ್ಣ ಸ್ವಾದ ಸಿಗುವುದೇ ಕೊನೆಯಲ್ಲಿ.ಹೌದು ಅದಕ್ಕಾಗಿ ಸಂಪೂರ್ಣ ತಾಳ್ಮೆಯಿಂದ ಒಂದಿಷ್ಟು ಸಹನೆಯಿಂದ ಟೆಸ್ಟ್ ಕ್ರಿಕೆಟ್ ಅನ್ನು ಇಷ್ಟಿಷ್ಟೇ ಓದಬೇಕು,ಇಂಚಿಂಚೂ ನೋಡಿಯೇ ಸವಿಯಬೇಕು. 


ಖಂಡಿತವಾಗಿಯೂ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅದರಲ್ಲೂ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಇದು ಖುಷಿಯ  ಘಳಿಗೆ.



ಸದ್ಯಕ್ಕೆ ಇಲ್ಲಿಗೆ ಇಷ್ಟೇ..


ಇನ್ನು ಮುಂದಿರುವುದು ಮೂರನೆಯ ಟೆಸ್ಟ್‌. 


ಸದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಬೇಕಾದಷ್ಟು ಇಂಜುರಿ ಸಮಸ್ಯೆ ಇದೆ.ಹಾಗಾಗಿ ಇಂಗ್ಲೆಂಡ್ ತನ್ನ ಎಂದಿನ ರೋಟೇಷನ್ ಪದ್ಧತಿಗೆ ಮೊರೆ ಹೋಗುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ. ಒಂದು ವೇಳೆ ರೊಟೇಷನ್ ಅನುಸರಿಸಿದರೆ  ಬಹುಶಃ ಆಂಡರ್ಸನ್ ಗೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ. ಆ ರೀತಿ ಆದರೆ ಇಂಗ್ಲೆಡ್ ಬೌಲಿಂಗ್ ಖಂಡಿತವಾಗಿಯೂ ಟೀಮ್ ಇಂಡಿಯಾಕ್ಕಿಂತ ಮತ್ತಷ್ಟು ದುರ್ಬಲ ಆಗಲಿದೆ. 


ಕಳೆದ ಎರಡು ಮೂರು ದಿನಗಳು ವೀಕೆಂಡು.ಅದು ಬೇರೆ ಪಂದ್ಯ ಮುಗಿವಾಗ ಎಲ್ಲರೂ ಮಲಗುವ ತಡರಾತ್ರಿಯ ಹೊತ್ತು.ಹಾಸಿಗೆ ಮೇಲೆ ಬಿದ್ದು ದಿಂಬು ಸರಿ ಪಡಿಸಿಕೊಳ್ಳುವಾಗ ಹಾಗೇ ಆವರಿಸುವ ನಿದ್ದೆಯ ಜೊತೆಗೆ ಕಬ್ಬುವ ತಬ್ಬುವ ನಡುರಾತ್ರಿಯ ಕತ್ತಲು.


ಬರೆಯಲು ಸಮಯವೂ ಇತ್ತು.ಹಾಗಾಗಿ ಎಂದಿನಂತೆ ಯಾರೂ ಒದ್ತಾರೋ ಬಿಡ್ತರೋ ಎಂಬ ಗೊಡವೆಗೆ ಹೋಗದೇ ಬೇರೆ ಲೇಖನದಂತೆಯೇ ಉದ್ದುದ್ದಕ್ಕೆ ಅದರಲ್ಲೂ ಸತ್ಯ ಹೇಳಬೇಕೆಂದರೆ ನನಗೆ ಮನಸ್ಸಿಗೆ ಬಂದಂತೆಯೇ "ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ,ಹಾಡು ಹಕ್ಕಿಗೆ ಬೇಕೇ.." ಎಂಬಂತೆ ನನಗನಿಸಿದಂತೆ ಕ್ರಿಕೆಟ್ ಬಗ್ಗೆ ಬರೆಯುತ್ತಾ ಹೋಗಿದ್ದೆ.ಕ್ರಿಕೆಟ್ ಬಗ್ಗೆ ಈ ಹಿಂದೆಯೂ ಬೇಕಾದಷ್ಟು ಸಲ ಬರೆದಿದ್ದೆ.ಆದರೆ ಉದ್ದಕ್ಕೆ ಹರಟೆ ಹೊಡೆದಂತೆ ದಿನಾಲೂ ಬರೆಯುತ್ತಾ ಹೋಗಿದ್ದು ಮಾತ್ರ ಇದೇ ಮೊದಲು. 


ಆಶ್ಚರ್ಯ ಎಂದರೆ ನಿಮ್ಮಲ್ಲಿ ಕೆಲವೊಬ್ಬರು ಈ ಐದು ದಿನವೂ ಬಿಟ್ಟು ಬಿಡದೆ ಪಂದ್ಯ ಮುಗಿದ ಕೂಡಲೇ ನನ್ನ ವಾಲ್ ಗೆ ಬಂದು,ಆ ತಡರಾತ್ರಿಯಲ್ಲೂ ಇಲ್ಲಿ ಬರೆದುದನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ನಿಮ್ಮ ದೃಷ್ಟಿಕೋನದ ಪ್ರಕಾರ ದಿನದಾಟದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಅದರಲ್ಲೂ ಖುಷಿ ಖುಷಿಯಾಗಿ ವ್ಯಕ್ತಪಡಿಸಿದ್ದೀರಿ. 


ಕ್ರಿಕೆಟ್ ಬಗ್ಗೆ ಬರೆದರೆ,ಅದರಲ್ಲೂ ಟೆಸ್ಟ್ ಕ್ರಿಕೆಟ್ ಬಗ್ಗೆ ಇಷ್ಟೆಲ್ಲಾ ಹರಟೆ ಹೊಡೆದು ಬೇರೆ ಲೇಖನದಂತೆಯೇ ಉದ್ದಕ್ಕೆ  ಬರೆದರೆ ಯಾರೂ ಓದುವುದಿಲ್ಲ ಎಂದೇ ನಾನು ಕೂಡ ಮೊದಲು ಅಂದುಕೊಂಡಿದ್ದೆ.ಆದರೆ ಹಾಗಾಗಲಿಲ್ಲ.ಎಷ್ಟು ಜನ ಲೈಕ್ಸ್ ಕೊಟ್ಟರೋ,ಕಾಮೆಂಟ್ ಮಾಡಿದರೋ ಅನ್ನುವುದಕ್ಕಿಂತಲೂ ಬರಹ ಓದಿದವರೆಲ್ಲರೂ ನನ್ನಂತೆಯೇ ಕ್ರಿಕೆಟ್ ಅಭಿಮಾನಿಗಳು ಅದರಲ್ಲೂ ಶುದ್ಧ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳು ಅನ್ನುವುದೇ ನನಗಂತು ಸಂತಸದ ವಿಷಯ.ಯಾವುದೇ ಕ್ರಿಡೆ ಆಗಲಿ ಅದು ಸಮಾನ ಮಸ್ಕರನ್ನು ಎಂದಿಗೂ ಬೆಸೆಯುತ್ತದೆ.ನಿರಂತರವಾಗಿ ಐದು ದಿನವೂ ಓದಿ ಈ ಎರಡನೆಯ ಟೆಸ್ಟ್‌ ಮ್ಯಾಚ್ ಬಗ್ಗೆ ಪ್ರತೀ ದಿನವೂ ನಾನು ಬರೆಯುವಂತೆ ಮಾಡಿದುದಕ್ಕಾಗಿ ನಿಮಗೆಲ್ಲರಿಗೂ ವಿಶೇಷ ಥ್ಯಾಂಕ್ಸ್ ಆಯ್ತ. 


ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಓದುವ ಅದರ ಬಗ್ಗೆ ಮಾತಾಡುವ, ಹರಟೆ ಹೊಡೆಯುವ ಆಸಕ್ತಿ ಇರುತ್ತದೆ. ಹಾಗಾಗಿ ಅಪ್ಪಟ ಕ್ರಿಕೆಟ್ ಅಭಿಮಾನಿಗಳೇ,ಬೇರೆ ರೀತಿಯ ಬರಹಗಳನ್ನು ಇಷ್ಟಪಡುವ ಗೆಳೆಯರಂತೆ ನೀವುಗಳು ಕೂಡ ಹೀಗೆ ಟಚ್ ಅಲ್ಲಿ ಇರಿ.ನಾವೂ ನೀವು ಇನ್ನು ಮುಂದೆಯೂ ಇನ್ನಷ್ಟು ಕ್ರಿಕೆಟ್ ಬಗ್ಗೆ ಬರೆದು ಅದರ ಮೇಲೆ ಒಂದಷ್ಟು ಪಟ್ಟಾಂಗ ಹೊಡೆಯೋಣ.ನನಗೆ ಗೊತ್ತಿದ್ದಷ್ಟನ್ನು, ಕೇಳಿ ತಿಳಿದುಕೊಂಡ ಒಂದಿಷ್ಟು ವಿಷಯಗಳನ್ನು ನಾನೂ  ಹೇಳುತ್ತೇನೆ,ನಿಮಗೂ  ಗೊತ್ತಿರುವ ವಿಚಾರಗಳನ್ನು ನನಗೂ ತಿಳಿಸಿಕೊಡಿ.ನಡು ನಡುವೆ ಸ್ವಾರಸ್ಯಕರ ವಿಷಯಗಳು ಎಂದಿನಂತೆ ಇದ್ದರೆ ಬರಹಕ್ಕೆ ರುಚಿ ಹೆಚ್ಚು.ಇದ್ದೇ ಇರುತ್ತದೆ ಬಿಡಿ.ಸ್ವಲ ಜನ ಆಸಕ್ತಿಯಿಂದ ಪ್ರೀತಿಯಿಂದ ಓದಿದರೂ ಅಷ್ಟೇ ಸಾಕು... ಮತ್ತಷ್ಟು ಬರೆಯಲು ಇಷ್ಟು ನನಗಂತು ಬೇಕಾದಷ್ಟು ಆಯಿತು. 


ಮುಂದಿನ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ಬುಧವಾರ ಯಾರ್ಕ್ ಶೈರ್ ಕೌಂಟಿಯ ಹೋಮ್ ಗ್ರೌಂಡ್ ಆದಂತಹ ಲೀಡ್ಸ್ ನ ಹೆಡಿಂಗ್ಲಿ ಕ್ರಿಕೆಟ್ ಗ್ರೌಂಡಿನಲ್ಲಿ ನಡೆಯಲಿದೆ.ಈ ಮೈದಾನ ಆಂಗ್ಲರ ಕಪ್ತಾನ ಜೋ ರೂಟ್ ಹಾಗೂ ಕೆಂಚು ಗಡ್ಡದ ಹುಡುಗ ಜಾನಿ ಬೆರ್ಸ್ಟೋ ಪಾಲಿಗೆ ಅವರು ಆಡಿ ಬೆಳೆದಂತಹ  ಮನೆಯಂಗಳ,ಬೇವುರೆ ಸೊಪ್ಪು ಕೊಯ್ಯುವ ಹಿತ್ತಲು,ಮೊದಲ ಆಡುಂಬೊಲ ಮತ್ತು ನೆನಪುಗಳ ಕ್ರಿಕೆಟ್ ಬಯಲು.. ಹೀಗೆ ಎಲ್ಲವೂ ಆಗಿದೆ.ಜೋ ರೂಟ್ ಇಲ್ಲಿಯೇ 2013 ರಲ್ಲಿ ನ್ಯೂಜಿಲೆಂಡ್ ವಿರುದ್ದ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು(104) ಬಾರಿಸಿದ್ದು.ಸಮಯ ಎಷ್ಟು ಸಿಗುತ್ತೋ ಗೊತ್ತಿಲ್ಲ.ಸಿಕ್ಕಿದಷ್ಟು ಸಮಯದಲ್ಲಿ ಒಂದಿಷ್ಟು ನನಗಾಗಿ,ಜೊತೆಯಲ್ಲಿ ನಿಮಗಾಗಿಯೂ ಖಂಡಿತವಾಗಿಯೂ ಬರೆಯುತ್ತೇನೆ.


ಹೆಡಿಂಗ್ಲಿಯ ಮೂರನೇ ಟೆಸ್ಟ್ ಮ್ಯಾಚ್ ನಲ್ಲಿ ಮತ್ತೆ ಸಿಗೋಣ.ಎಂದಿನಂತೆ ಪ್ರೋತ್ಸಾಹವಿರಲಿ.ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯಿರಲಿ,ಟೆಸ್ಟ್ ಕ್ರಿಕೆಟ್ ಬಗ್ಗೆ ನಿಮಗಿರುವ ಸಿಕ್ಕಾಪಟ್ಟೆ ಇಶ್ಕ್  ನನಗೂ ಅಷ್ಟೇ ಇಷ್ಟ.... 


#Day_5 : Stumps 

India 1st Innings - 364/10

England 1st Innings-391/10

India 2nd Innings - 298/8 (Dec) 

England 2nd Innings - 120/10

Result - India won by 151 Runs

MOM - K.L Rahul 


Ind Vs England

2nd  Test - Lord's London 2021


#WTC_S02E01_2021_23

Ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ