ಸ್ವಿಂಗ್ ಸಾಂಗು




ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಿನ್ನೆಯಷ್ಟೇ ಕ್ರಿಕೆಟಿಗರ ಪಾಲಿನ ಸೇಕ್ರೆಡ್ ಸೆಂಚುರಿ ಬಾರಿಸಿದ ಕೆ.ಎಲ್ ರಾಹುಲ್ ಇಂದು  ಎದುರಿಸಿದ್ದು ಬರೀ ಎರಡೇ ಎರಡು ಎಸೆತ. 


ನಿರೀಕ್ಷೆಗಳ ಮೂಟೆಯನ್ನು ಹೊತ್ತುಕೊಂಡೇ ಕ್ರಿಸಿಗೆ ಇಳಿದಿದ್ದ ರಾಹುಲ್.ಈ ಹುಡುಗ ಇಂದು ಆರಾಮ್ ಸೇ ಇನ್ನೂರು ಹೊಡೆದು ಆ ನಂತರ ಮತ್ತಷ್ಟು ರನ್ ಪೇರಿಸುತ್ತಲೇ  ಹೋಗುತ್ತಾನೆ ಎಂದು ಹೆಚ್ಚಿನವರು ನಂಬಿದ್ದರು ಮತ್ತು ಅಂತಹ ನಿರೀಕ್ಷೆಗಳೇ ಸಹಜವಾಗಿ ಇದ್ದದ್ದು.


ಅದರಂತೆ ಮೊದಲ ಬಾಲ್ ನಲ್ಲಿಯೇ ಎರಡು ರನ್ನು  ಹೊಡೆದು ತನ್ನ ಇವತ್ತಿನ ಆಟದ ಇರಾದೆ ಕೂಡ ಅದೇ ಎಂದು ನಮಗೂ ಸ್ಪಷ್ಟ ಪಡಿಸಿ ಬಿಟ್ಟಿದ್ದ ಕೆ.ಎಲ್. ಆದರೆ ತ್ವರಿತವಾಗಿ ರನ್ ಗಳಿಸುವ ಆ ಒಂದು ಮೋಡ್ ನಲ್ಲಿ, ರನ್ ದಾಹದ ಮೂಡ್ ನಲ್ಲಿ ರಾಬಿನ್ಸನ್ ನ ಎರಡನೆಯ ಎಸೆತದಲ್ಲಿ ಸೊಗಸಾದ ಡ್ರೈವ್ ಒಂದನ್ನು  ಬಾರಿಸಲು ಹೋಗಿ ತಾನು ಕೈ ಸುಟ್ಟುಕೊಂಡು ಬಿಟ್ಟೆ ಎಂದು ಸ್ವತಃ ರಾಹುಲ್ ಗೆ ಅಂದಾಜಿಯಾಗಿ ಹೋಗುವಾಗ ಸಮಯ ಮೀರಿ ಹೋಗಿತ್ತು.ಕವರ್ ನಲ್ಲಿ ಸಿಬ್ಲಿ ಹಿಡಿದ ಆ ಕ್ಯಾಚ್ ಬಹಳಷ್ಟು ಸರಳ ಹಾಗೂ ಅಷ್ಟೇ ಸುಲಭದ್ದಾಗಿತ್ತು. 


ಶರಬತ್ತು ಕುಡಿದಂತೆ ದಿನವಿಡೀ ಬೀರು ಹೀರುತ್ತಲೇ ಇರುವ ಇಂಗ್ಲಿಷು ಪ್ರೇಕ್ಷಕರಿಗೆ ಎದುರಾಳಿ ತಂಡದ ಆಟಗಾರರು ಏನಾದರೂ ಸಾಧಿಸಿದಾಗ ಗೌರವ ಕೊಡಲು ಕೂಡ ಅಷ್ಟೇ ಚೆನ್ನಾಗಿ ಗೊತ್ತು.ದಿನದ ಎರಡೇ ಬಾಲ್ ಆಡಿದ್ದರೂ ಸಹ ರಾಹುಲ್ ಔಟಾಗಿ ಹೋಗುವಾಗ ಎಲ್ಲರೂ ಎದ್ದು ನಿಂತು ರಾಹುಲನದ್ದೊಂದು ಹಂಡ್ರೆಡ್ಡಿಗಾಗಿ ಮಾಡಿದ ಕರತಾಡನ ನೋಡಲು ಸೊಗಸಾಗಿದ್ದರೆ,ಕಿವಿಗೆ ಎಂದಿನಂತೆ ಇಂಪಾಗಿತ್ತು. 


ನಿನ್ನೆ ದಿನದಾಟದ ಕೊನೆಯಲ್ಲಿ ಬ್ಯಾಟ್ ಹಿಡಿದು ಕ್ರೀಸಿಗೆ ಬಂದಿದ್ದ ರಹಾನೆ,ಇವತ್ತು ದಿನದ ಎರಡನೆಯ ಓವರಿನ ಮೊದಲ ಬಾಲ್ ನಲ್ಲಿಯೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಪೆವಿಲಿಯನ್ ದಾರಿ ಹಿಡಿದು ಬಿಟ್ಟಿದ್ದ.ನಮ್ಮ ಉಪ ಕಪ್ತಾನ ಬಂದದ್ದೂ ಗೊತ್ತಾಗಲಿಲ್ಲ,ಹೋದದ್ದೂ  ಗೊತ್ತಾಗಲಿಲ್ಲ.ಬಾರಿಸಿದ್ದು ಕೇವಲ ಒಂದು ರನ್.


ಜಿಮ್ಮಿಯ ಬೌಲಿಂಗ್ ಅನ್ನು ಎಷ್ಟು ಹೊಗಳಿದರೂ ಕಡಿಮೆಯೇ ಬಿಡಿ.ಸ್ವತಃ ಸ್ವಿಂಗ್ ಬೌಲರ್ ಆಗಿರುವ ಆತ ಕೆಲವೊಮ್ಮೆ ಬೇಕೆಂದೇ ಬಾಲ್  ಅನ್ನು ಸ್ವಿಂಗ್ ಮಾಡುವುದೇ ಇಲ್ಲ.ನೇರಾ ನೇರ ಬೌಲಿಂಗ್ ದಾಳಿ ಮಾಡುತ್ತಾ ಮಾಡುತ್ತಾ ನಡುವಲ್ಲಿ ಅವ ಯಾವಾಗ ಯಾವ ಬಾಲ್ ಅನ್ನು ಸ್ವಿಂಗ್ ಮಾಡುತ್ತಾನೆ,ಅವನ ಯಾವ ಬಾಲ್ ಸ್ವಿಂಗ್ ಆಗುವುದಿಲ್ಲ ಎಂಬ ದೊಡ್ಡ ಗೊಂದಲಕ್ಕೆ  ಬ್ಯಾಟ್ಸ್‌ಮನ್ ಒಬ್ಬ ಬಿದ್ದು ಬಿಟ್ಟರೆ,ಯಾವತ್ತಿಗೂ ಆ ಬ್ಯಾಟ್ಸ್‌ಮನ್ ಜಿಮ್ಮಿಯ ಸುಲಭ ಶಿಕಾರಿ.



ಈ ರೀತಿಯ ಗೊಂದಲವನ್ನು ಬ್ಯಾಟ್ಸ್‌ಮನ್ ನಲ್ಲಿ ಉಂಟು ಮಾಡಿಯೇ ಜಿಮ್ಮಿ ಹಲವಾರು ಬಾರಿ ಹೆಚ್ಚಿನ ಸ್ವಿಂಗ್ ಮಾಡದೆ  ಕೇವಲ ಸೀದಾ ಸಾದ ಬೌಲಿಂಗ್ ನಿಂದಲೂ  ಕೂಡ ಬಹಳಷ್ಟು ವಿಕೆಟ್ ಕಬಳಿಸಿದ್ದಾನೆ.ಕೇವಲ ಕೈಯಲ್ಲಿರುವ ಬಾಲ್ ನೊಂದಿಗೆ ಮಾತ್ರವಲ್ಲ ಮೈದಾನದಲ್ಲಿ ಬೌಲಿಂಗ್ ಮಾಡುತ್ತಾ ಮಾಡುತ್ತಾ ಎದುರಿರುವ ಬ್ಯಾಟ್ಸ್‌ಮನ್ ನ ಮನಸ್ಸನ್ನು ಓದಿ ಅವನ ಮನಸ್ಸಿನೊಂದಿಗೆ ಕೂಡ ಮೈಂಡ್ ಗೇಮ್ ಆಡುವ ವೇಗದ ಬೌಲರ್ ಗಳೇ ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚಿನ ಯಶಸ್ಸು ಪಡೆಯುವುದು.ಇದೊಂತರಹದ ಕಣ್ಣಿಗೆ ಕಾಣದ,ಕ್ಯಾಮರಾ ಎಂದಿಗೂ ಸೆರೆ ಹಿಡಿಯದ ಕ್ರಿಕೆಟ್ ಸ್ಲೆಡ್ಜಿಂಗ್.ಮನಸ್ಸೊಂದು ಇನ್ನೊಂದು ಮನಸ್ಸನ್ನು ಕೆಣಕಿ ಬಲೆಗೆ ಕೆಡವಿಕೊಳ್ಳುವ ಪರಿ ಇದು. 


ನಿಜವಾಗಿಯೂ ಟೆಸ್ಟ್ ಕ್ರಿಕೆಟ್ ನಲ್ಲಿ ಈ ವೇಗದ ಬೌಲಿಂಗ್ ಅದರಲ್ಲೂ ಸ್ವಿಂಗ್ ಬೌಲಿಂಗ್ ಒಂದು ಬಹಳ ರೋಚಕವಾದ ಅಧ್ಯಾಯ.ಇಲ್ಲೊಂದು ಮುದ ನೀಡುವ ತಂತ್ರಗಾರಿಕೆಯೂ ಇದೆ. ಇದರ ಬಗ್ಗೆ ಒಂದಿಷ್ಟು ಮಾತಾಡಲೇ ಬೇಕು.ಇದು ತಿಳಿದಿದ್ದರೆ ಟೆಸ್ಟ್ ಕ್ರಿಕೆಟ್ ಕೂಡ ಸಪ್ಪೆ ಎಂದು ಯಾವತ್ತಿಗೂ ಅನಿಸುವುದಿಲ್ಲ.ಬದಲಿಗೆ ಇಂಟ್ರೆಸ್ಟಿಂಗ್ ಅನ್ನಿಸಿಬಿಡುತ್ತದೆ.


ಹೌದು ಟೆಸ್ಟ್ ಕ್ರಿಕೆಟ್ ನಲ್ಲಿ ಸ್ವಿಂಗ್ ಬೌಲಿಂಗ್ ಎಂದರೆ ಅದೊಂತರಹ  ಚದುರಂಗ ಆಟದ ಬಗೆ.ಇಲ್ಲಿ ಬ್ಯಾಟ್ಸ್‌ಮನ್ ವಿರುದ್ಧ ಒಂದು ಕಣ್ಣಿಗೆ ಕಾಣದ ವ್ಯೂಹವನ್ನು ರಚಿಸಲಾಗುತ್ತದೆ.ಬೌಲರ್ ಒಂದೇ ರೀತಿಯಲ್ಲಿ ಬೌಲಿಂಗ್ ಮಾಡುತ್ತಲೇ ಹೋಗುತ್ತಾನೆ. ಅದು ಇನ್  ಸ್ವಿಂಗ್ ಇರಬಹುದು ಇಲ್ಲವೇ ಔಟ್ ಸ್ವಿಂಗ್ ಇರಬಹುದು. ಬೌಲರ್ ಒಂದು ಓವರ್ ಇಲ್ಲವೇ ನಾಲ್ಕೈದು ಒವರ್ ಬಿಟ್ಟು ಬಿಡದೆ ನಿರಂತರವಾಗಿ ಒಂದೇ ರೀತಿಯ ಬಾಲ್ ಎಸೆದು ಎಸೆದು ಬ್ಯಾಟ್ಸ್‌ಮನ್ ಗೆ ಮುಂದಿನ ಬಾಲ್ ಗಳು ಹೆಚ್ಚು ಕಡಿಮೆ ಇದೇ ರೀತಿ ಇರುತ್ತದೆ ಎಂಬ ಫೀಲ್ ಬರುವಂತೆ ಮಾಡಿ ಬಿಡುವಲ್ಲಿ ಮೊದಲು ಸಫಲನಾಗುತ್ತಾನೆ.


ಯಾವಾಗ ಬ್ಯಾಟ್ಸ್‌ಮನ್ ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ,ತಾನು ಹೇಳಿದಂತೆ ಕೇಳುತ್ತಾ ತಲೆ ಅಲ್ಲಾಡಿಸುತ್ತಿದ್ದಾನೆ ಎಂದು ಬೌಲರ್ ಗೆ ಅರಿವಾಗುತ್ತದೋ ಆವಾಗ ನೋಡಿ  ನಿರಂತರವಾಗಿ ಇನ್ ಸ್ವಿಂಗ್ ಮಾಡುತ್ತಿದ್ದ ಬೌಲರ್ ನಡುವಿನಲ್ಲೊಂದು ಔಟ್ ಸ್ವಿಂಗ್ ಎಸೆತವನ್ನು, ನಿರಂತರವಾಗಿ ಔಟ್ ಸ್ವಿಂಗ್ ಹಾಕುತ್ತಿದ್ದರೆ ನಡುವಿನಲ್ಲೊಂದು ಅಚನಕ್ಕಾಗಿ ಇನ್ ಸ್ವಿಂಗ್ ಎಸೆತವನ್ನು ಇಂಟೆನ್ಷನಲಿ ಎಸೆದು ಬಿಡುತ್ತಾನೆ.



ಆವಾಗಲೇ ನೋಡಿ ಬ್ಯಾಟ್ಸ್‌ಮನ್ ಒಮ್ಮೆಲೇ ಗಲಿಬಿಲಿಯಾಗಿ ಮಿಕವೊಂದು ಬಲೆಗೆ ಬಿದ್ದಂತೆ ಏನೂ ಮಾಡಲು ತೋಚದಾಗಿ ತನ್ನ ವಿಕೆಟ್ ಅನ್ನು  ಬೌಲರ್ ಗೆ ಸುಲಭವಾಗಿ ಒಪ್ಪಿಸಿ ಬಿಡುವುದು.ಇದೊಂದು ಕ್ರಿಕೆಟ್ ನ ಹಳೆಯ ತಂತ್ರ.ಆದರೆ ಅಸಲಿ ಟೆಸ್ಟ್ ಕ್ರಿಕೆಟ್ ನ ಮಜಾ ಇರುವುದೇ ಇದರಲ್ಲಿ. ಆ ನಿಜವಾದ ಮಜಾ ಅನುಭವಿಸಬೇಕಾದರೆ ನೀವು ಟೆಸ್ಟ್ ಮ್ಯಾಚ್ ನಲ್ಲಿ ಬೌಲರ್ ನ ಪ್ರತಿಯೊಂದು ಬಾಲ್ ಅನ್ನು ಬ್ಯಾಟ್ಸ್‌ಮನ್ ರೀತಿಯಲ್ಲಿಯೇ ರೀಡ್ ಮಾಡುತ್ತಲೇ ಹೋಗಬೇಕು. ಯಾವಾಗ ಬೌಲರ್ ನ ಚದುರಂಗದ ನಡೆಗೆ ಬ್ಯಾಟ್ಸ್‌ಮನ್ ಸುಲಭ ತುತ್ತಾಗಿ ಚೆಕ್ ಮೇಟ್ ಆಗುತ್ತಾನೋ ಆವಾಗಲೇ ನೋಡುಗನಿಗೂ ಕೂಡ  ಅನುಭವವಾಗುವುದು ನಿಜವಾದ ಆ ಆಹಾ... ಮೂಮೆಂಟ್.


ಇದಕ್ಕೆ ಉತ್ತಮ ಉದಾಹರಣೆ ಮೊನ್ನೆಯ ಟ್ರೆಂಟ್ ಬ್ರಿಡ್ಜ್ ಟೆಸ್ಟ್  ನಲ್ಲಿ ಆಂಗ್ಲರ ಓಪನಿಂಗ್ ಬ್ಯಾಟ್ಸ್‌ಮನ್ Rory Burns ಅನ್ನು ಜಸ್ಪಿತ್ ಬೂಮ್ರ ಔಟ್ ಮಾಡಿದ ರೀತಿ.ಮೊದಲಿನ ಎಲ್ಲಾ ಬಾಲ್ ಅನ್ನು ಔಟ್ ಸ್ವಿಂಗ್ ಹಾಕುತ್ತಲೇ ಹೋದ ಬುಮ್ರಾ ಆ ಓವರಿನ ಕೊನೆಯ ಎಸೆತವೊಂದನ್ನು ಇಂಟೆನ್ಷನಲಿ ಇನ್ ಸ್ವಿಂಗ್ ಹಾಕಿದ್ದ.ಆ ಓವರ್ ನ ಮೊದಲಿನಿಂದಲೂ ಔಟ್ ಸ್ವಿಂಗ್ ನ ಎಲ್ಲಾ ಹೊರಗೆ ಹೋಗುತ್ತಿದ್ದ ಬಾಲ್ ಗಳನ್ನು ಬಿಡುತ್ತಿದ್ದ Rory Burns ಕೊನೆಯದ್ದೊಂದು ಇನ್ ಸ್ವಿಂಗ್ ಗೆ ಒಮ್ಮೆಗೆ ತಬ್ಬಿಬ್ಬಾಗಿ ಬೂಮ್ರ ಹೆಣೆದ ಬಲೆಗೆ ಬಿದ್ದು ಎಲ್.ಬಿ.ಡಬ್ಲ್ಯು ಔಟಾಗಿ ಬಿಟ್ಟಿದ್ದ.


ಕೆಲವು ಬೌಲರ್ ಗಳಿಗೆ ಈ ರೀತಿಯ ತಂತ್ರಗಾರಿಕೆ ಗೆ ಒಂದು ಓವರ್ ಸಾಕಾದರೆ. ಇನ್ನು ಕೆಲವು ಬೌಲರ್ ಅದೆಷ್ಟು ಶ್ರಮ ಪಡುತ್ತಾರೆ ಎಂದರೆ ನಿರಂತರವಾಗಿ ನಾಲ್ಕೈದು  ಒವರ್ ಬೇಕೆಂದೇ ಒಂದೇ ರೀತಿ ಬೌಲಿಂಗ್ ಮಾಡಿ ಮಾಡಿ ಆಮೇಲೆ ಬ್ಯಾಟ್ಸ್‌ಮನ್ ಅನ್ನು ತಾನು ತೋಡಿದ ಹಳ್ಳಕ್ಕೆ ತಳ್ಳಲು ಮುಂದಾಗುತ್ತಾರೆ.ಒಂದು ವೇಳೆ ಅವರ ಅಷ್ಟುದ್ದದ  ಶ್ರಮಕ್ಕೆ ಕೊನೆಯಲ್ಲೊಂದು ಫಲ ಸಿಕ್ಕಿ ಬಿಟ್ಟರೆ ಅದರ ಖುಷಿ ಆ ಬೌಲರ್ ಗೆ ಅಷ್ಟೇ ಗೊತ್ತು. ಅಂತಹ ಬೌಲರ್ ಗಳೇ ನನಲ್ಲಿ ಹೆಚ್ಚಿನ ಬೆರಗು ಮೂಡಿಸುವುದು.


ಟೆಸ್ಟ್ ನಿಜವಾಗಿಯೂ ಬ್ಯಾಟ್ಸ್‌ಮನ್ ಗಳನ್ನು ಸಿಕ್ಕಾಪಟ್ಟೆ ಟೆಸ್ಟ್ ಗೆ ಒಳಪಡಿಸುತ್ತದೆ.ಎಲ್ಲಾ ಬೌಲರ್ ಒಡ್ಡುವ ಟೆಸ್ಟ್ ಬಹಳಷ್ಟು ಕಠಿಣವಾಗಿರುತ್ತದೆ.ಒಬ್ಬೊಬ್ಬರದ್ದು ಒಂದೊಂದು ರೀತಿಯ ತಂತ್ರ.ಅದೆಲ್ಲವನ್ನು ಸಮರ್ಥವಾಗಿ ರೀಡ್ ಮಾಡಿ ಪ್ರತಿಯೊಂದು ಓವರ್, ಪ್ರತಿಯೊಂದು ಬಾಲ್ ಅನ್ನು ಸಹ ಬಹಳಷ್ಟು ತಾಳ್ಮೆಯಿಂದ, ಜಾಗರೂಕತೆಯಿಂದ ಆಡುವವನೇ ನಿಜವಾದ ಕ್ರಿಕೆಟ್ ಬ್ಯಾಟ್ಸ್‌ಮನ್.


ಅದಕ್ಕಾಗಿಯೇ ಬೇರೆ ಎಲ್ಲಾ ಫಾರ್ಮೆಟ್ ನಲ್ಲಿ ಆಡುವ ಎಂತಹ ದೊಡ್ಡ ಹೊಡೆಬಡಿಯ ಆಟಗಾರ ಇದ್ದರೂ ಸಹ ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟು ಸುಲಭವಾಗಿ ಯಶಸ್ಸು ಪಡೆಯಲು  ಸಾಧ್ಯವಾಗುವುದಿಲ್ಲ. ಒಂದಷ್ಟು ಮಾನಸಿಕವಾಗಿ ದಂಡಿಸಿಕೊಳ್ಳುವುದು ಕೂಡ ಟೆಸ್ಟ್ ಕ್ರಿಕೆಟ್ ನಲ್ಲಿ ಅವಶ್ಯಕ ಹಾಗೂ ಅನಿವಾರ್ಯ. ಅದಕ್ಕಾಗಿಯೇ ನಮ್ಮ ರಾಹುಲ್ ದ್ರಾವಿಡ್ ಇಂದಿಗೂ ಶ್ರೇಷ್ಟ ಆಟಗಾರ ಆಗುತ್ತಾರೆಯೇ ಹೊರತು ಐಪಿಎಲ್ ನ ಟಿ-ಟ್ವೆಂಟಿ ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುವವರು ಅಲ್ಲ.


ಜಂಟಲ್ಮೆನ್ ಗೇಮ್ ಕ್ರಿಕೆಟ್ ನ ನಿಜವಾದ ಸ್ಲೆಡ್ಜಿಂಗ್ ಅಂದರೆ ಗ್ರೌಂಡಿನಲ್ಲಿ ಪರಸ್ಪರ ಮಾತುಗಳ ವಿನಿಮಯ ಮಾಡುವುದು ಅಲ್ಲ.ನಗು ನಗುತ್ತಲೇ ಒಳಗೊಳಗೆ ಎದುರು ನಿಂತಿರುವ ವೈರಿಯೊಂದಿಗೆ  ಕಾದಾಡುವುದು ಹಾಗೂ ಸದ್ದಿಲ್ಲದೇ ಕೆಣಕುವುದು.ಇದರ ಸುಖದ ಮುಂದೆ ವರ್ಬಲ್ ಸ್ಲೆಡ್ಜಿಂಗ್ ಏನೂ ಅಲ್ಲ ಬಿಡಿ. ವರ್ಬಲ್ ಸ್ಲೆಡ್ಜಿಂಗ್ ಕ್ರಿಕೆಟ್ ಗೆ ಆಗಲಿ ಯಾವುದೇ ಆಟಕ್ಕೆ ಆಗಲಿ ಎಂದಿಗೂ ಭೂಷಣವೂ ಅಲ್ಲ.ಅದು ಆಟ ಬಾರದವನು ಮೈ ಪರಚಿಕೊಳ್ಳುವ ಪರಿ ಅಷ್ಟೇ. 


ಟೆಸ್ಟ್ ಕ್ರಿಕೆಟ್ ನಲ್ಲಿ ಮೇಲೆ ಹೇಳಿದಂತಹ ಬೌಲರ್ ಗಳ ವ್ಯೂಹ ಹೆಣೆಯುವಾಗ ಕೆಲವೊಮ್ಮೆ ಕ್ಷೇತ್ರ ರಕ್ಷಕರನ್ನು ಕೂಡ ಬೇಕೆಂದೇ ಬ್ಯಾಟ್ಸ್‌ಮನ್ ನ ಯೋಚನಾ ಲಹರಿ ದಿಕ್ಕು ತಪ್ಪುವಂತೆ  ಅನ್ ಆರ್ಥಡಾಕ್ಸ್ ಆಗಿ ಸೆಟ್ ಕೂಡ ಮಾಡಲಾಗುತ್ತದೆ. ಕೇವಲ ಒಂದು ಬಾಲ್ ನಲ್ಲಿ ಔಟ್ ಆಗಿ ಹೋಗುವ ಹೈಲೈಟ್ಸ್ ನೋಡುವಾಗ ಇದರ ಮಜಾ ಸಿಗದು.ಇಂತಹದ್ದೊಂದು ಸುಖ ಕೇವಲ ಬಾಲ್ ಟು ಬಾಲ್ ಟೆಸ್ಟ್ ಮ್ಯಾಚ್ ನೋಡಿದರಷ್ಟೇ ಪ್ರಾಪ್ತಿ.ಏಕೆಂದರೆ ಬೌಲರ್ ಹೆಣೆದ ಸಂಪೂರ್ಣ ತಂತ್ರದ ಅರಿವು ಆಗಬೇಕಾದರೆ ನಾವು ಬೌಲರ್ ನ ಎಲ್ಲಾ ಬಾಲ್ ನೋಡಲೇ ಬೇಕು.


ಆದರೆ ಇಂದು ರಹಾನೆಯ ವಿಕೆಟ್ ಉದುರಿಸಲು ಜಿಮ್ಮಿಗೆ ಎಂದಿನಂತೆ ಮೇಲೆ ಹೇಳಿದ ರಣತಂತ್ರಗಳ ಅವಶ್ಯಕತೆಯೇ ಇರಲಿಲ್ಲ. ಮೊದಲೇ ರಹಾನೆ ಫಾರ್ಮ್ ನಲ್ಲಿ ಇರಲಿಲ್ಲ. ಸ್ವಿಂಗ್ ಬೌಲಿಂಗ್ ಗೆ ಅವನ ಕಾಲುಗಳು ಇನ್ನಿಲ್ಲದಂತೆ ಚಡಪಡಿಸುತ್ತಿದ್ದವು. ಜಿಮ್ಮಿಯ ಹೊರಗೆ ಹೋಗುತ್ತಿದ್ದ ಸ್ವಿಂಗ್ ಬಾಲ್ ಅನ್ನು ರಹಾನೆಯ ಬ್ಯಾಟ್ ಹಾಗೇ ಮಂತ್ರ ಮುಗ್ಧವಾಗಿ ಮುತ್ತಿಕ್ಕಿ ಬಿಟ್ಟಿತ್ತು. ಒಂದೇ ಸೆಕೆಂಡಿನಲ್ಲಿ ಸ್ಲಿಪ್ ನಲ್ಲಿದ್ದ ನಾಯಕ ಜೋ ರೂಟ್ ಬೊಗಸೆಯಲ್ಲಿ ರಹಾನೆ ನೀಡಿದ ಕ್ಯಾಚ್ ಭದ್ರವಾಗಿ ಸೆರೆಯಾಗಿತ್ತು.


ರಹಾನೆ ಉಪಕಪ್ತಾನ ಅಲ್ಲದಿದ್ದರೆ ಯಾವಾಗಲೋ ಅವನಿಗೂ ಗೇಟ್ ಪಾಸ್ ಸಿಗುತ್ತಿತ್ತು. ಆದರೆ ಪೂಜಾರನಂತೆ ಕೇವಲ ಟೆಸ್ಟ್ ಫಾರ್ಮೆಟ್ ಒಂದನ್ನೇ ಸದ್ಯಕ್ಕೆ ಆಡುತ್ತಿರುವ ರಹಾನೆ ನಿಜವಾಗಿಯೂ ತಾನಾಡುವ ಫಾರ್ಮೆಟ್ ನಲ್ಲಿ ಅತ್ಯುನ್ನತ ಪ್ರದರ್ಶನ ನೀಡುವ ಜರೂರತ್ತು ಬಹಳಷ್ಟು ಇದೆ. ಇದೇ ಮಾತು ತಂಡದ ಮಾಡರ್ನ್ ಗೋಡೆ,ಕಲ್ಲಿಕೋಟೆ ಪೂಜಾರಗೂ ಅನ್ವಯಿಸುತ್ತದೆ.ಇಬ್ಬರಲ್ಲೂ ಪ್ರತಿಭೆ ಇದೆ. ಹಿಂದೆ ಹಲವಾರು ಸಲ ಪ್ರೂವ್ ಮಾಡಿ ತೋರಿಸಿದ್ದಾರೆ ಕೂಡ ಆದರೆ ಇವಾಗ ಇಬ್ಬರಿಗೂ ಲಯಕ್ಕೆ ಮರಳು ಆಗುತ್ತಿಲ್ಲ ಎನ್ನುವುದು ಅವರಿಗೆ ಮಾತ್ರವಲ್ಲ ತಂಡಕ್ಕೂ ಬಹಳಷ್ಟು ಚಿಂತೆಯ ವಿಷಯವಾಗಿದೆ. 


ರಿಷಬ್ ಪಂತ್ ಎದುರಾಳಿಗೆ ಯಾವಾಗಲೂ ಬಿಸಿ ತುಪ್ಪದಂತೆ. ಅವನು ಯಾವ ಬಾಲ್ ಹೊಡೆಯುತ್ತಾನೋ,ಯಾವ ಬಾಲ್ ಡಿಫೆಂಡ್ ಮಾಡುತ್ತನೋ ಎಂದು ಬೌಲರ್ ಗಳಿಗೆ ಗೊತ್ತಾಗದೇ, ಬೌಲರ್ ಗಳು ಸಿಕ್ಕಾಪಟ್ಟೆ ತಲೆ ಕೆರೆದುಕೊಳ್ಳುವಂತೆ ಮಾಡುತ್ತಾನೆ ಅವನು.ಅದರಲ್ಲೂ ವೇಗದ ಬೌಲರ್‌ಗಳಿಗೆ ಆತ ಸ್ಪಿನ್ನರ್ ಗೆ ಬಾರಿಸುವಂತೆ ಕ್ರಿಸಿನಿಂದ ಮುನ್ನುಗಿ ಬಂದು ಬೌಂಡರಿ,ಸಿಕ್ಸರ್ ಬಾರಿಸುವುದು ನಿಜಕ್ಕೂ ಕೆಲವೊಮ್ಮೆ ವೇಗದ ಬೌಲರ್ ಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವೇ ಬಿಡಿ. 



ಏಕೆಂದರೆ ಈ ರೀತಿಯಾಗಿ ಆಟವಾಡುವುದು ಅದು ವೇಗದ ಬೌಲರ್ ಗಳಿಗೆ ಮಾಡುವ ಅಪಮಾನವೇ ಸರಿ  ಮತ್ತು ನಮ್ಮ ಪಂತ್ ಗೆ ಅದೇ ಇಷ್ಟ.ಆತ ಜಿಮ್ಮಿ ಹಾಗೂ ಅರ್ಚರ್ ನ ವೇಗದ ಬೌಲಿಂಗ್ ಗೆ ನಿರ್ಭೀತಿಯಿಂದ ಇಂಡಿಯಾದಲ್ಲಿ  ರಿವರ್ಸ್ ಸ್ಕೂಪ್(ರಿವರ್ಸ್ ಲ್ಯಾಪ್) ಸಿಕ್ಸರ್ ಬಾರಿಸಿದ್ದೇ ಇಂತವುಗಳಿಗೊಂದು ಉತ್ತಮ ಉದಾಹರಣೆ.


ವಿರೇಂದ್ರ ಸೆಹ್ವಾಗ್ ವೀಕ್ಷಕ ವಿವರಣೆ ನೀಡುವಾಗ ಹೇಳುತ್ತಿದ್ದ.. ನಾನು ಕೂಡ ವೇಗದ ಬೌಲರ್ ಗೆ ನಿರ್ಧಾಕ್ಷಿಣ್ಯವಾಗಿ ದಂಡಿಸುತ್ತಿದ್ದೆ. ಆದರೆ ಯಾವತ್ತೂ ಕೂಡ  ವೇಗದ ಬೌಲರ್ ಗಳಿಗೆ ಕ್ರಿಸಿನಿಂದ ಮುಂದೆ ಬಂದು ಸ್ಪಿನ್ನರ್ಸ್ ಗೆ ಹೊಡೆದಂತೆ ಹೊಡೆದದ್ದು,ಇಲ್ಲವೇ ಅನ್ ಆರ್ಥಡಾಕ್ಸ್ ಶಾಟ್ಸ್ ಹೊಡೆದದ್ದು ಬಹಳಷ್ಟು ಕಡಿಮೆ.ನಿಜವಾಗಿಯೂ ನನಗೂ ಕೂಡ ರಿಷಭ್ ತುಂಬಾನೇ ಬೆರಗು ಮೂಡಿಸುತ್ತಾನೆ.. ಎಂದು ಹೇಳಿದ್ದ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್. 


ಇವತ್ತು ಕೂಡ ಅದೇ ರೀತಿ ಆಟವಾಡಿದ ರಿಷಭ್ ಕ್ವಿಕ್ ಆಗಿ 37 ರನ್ನ್ ಮಾಡಿದ್ದ. ಏನೂ ರನ್ ಗಳಿಸದೇ ಇರುವುದಕ್ಕಿಂತ ಈ ರೀತಿ ಅಷ್ಟು ಇಷ್ಟು ರನ್ ಗಳಿಸುವುದು ಉತ್ತಮವೇ ಆದರೂ ರಿಷಭ್ ನಿಂದ ಒಂದು ಆಕ್ರಮಣಕಾರಿಯಾದ ಬಿಗ್ ಹಂಡ್ರೆಡ್ ಆದಷ್ಟು ಬೇಗ ಬರಲೇ ಬೇಕು ಎಂದು ಎಲ್ಲರ ಆಸೆ. ಏಕೆಂದರೆ ಆತನ ಡಿಸ್ಟ್ರಕ್ಟಿವ್ ಮೋಡ್ ಬೌಲರ್ ಗಳನ್ನು ಅಕ್ಷರಶಃ ಅಳಿಸಿ ಹಾಕಿ  ಬಿಡುತ್ತದೆ. ಅಲ್ಲಿ ಯಾವ ಬೌಲರ್ ಗಳಿಗೂ ಕೂಡ ರೆಸ್ಪೆಕ್ಟೇ ಇರುವುದಿಲ್ಲ.ಅಪಾರ ಶಿಸ್ತು ಹಾಗೂ ತಾಳ್ಮೆಯ ಟೆಸ್ಟ್ ಕ್ರಿಕೆಟ್ ನ ನಡುವಿನಲ್ಲಿ ಇಂತಹದ್ದೊಂದು ಆಟ ನಿಜವಾಗಿಯೂ ಬಹಳಷ್ಟು ಕಿಕ್ಕ್ ಕೊಡುವಂತಹದ್ದು.ಸದ್ಯಕ್ಕಂತು ರಿಷಭ್ ತನ್ನ ಲಹರಿಯಲ್ಲೇ ಇದ್ದಾನೆ ಆದ್ದರಿಂದ ಈ ಸಿರೀಸ್ ನಲ್ಲಿ ಮುಂದೆ ಒಂದೊಳ್ಳೆಯ ಇನಿಂಗ್ಸ್ ಆತನಿಂದ ಖಂಡಿತವಾಗಿಯೂ ನಿರೀಕ್ಷಿಸಬಹುದು.


ಜಡೇಜಾ ಸದ್ಯಕ್ಕೆ ತಂಡದಲ್ಲಿ ಆಲ್ ರೌಂಡರ್ ಆಗಿ ಇದ್ದಾನೆ. ಅದರಲ್ಲೂ ಸದ್ಯಕ್ಕೆ ಅವನ ಸ್ಪಿನ್ ಬೌಲಿಂಗ್ ಗಿಂತ ಬ್ಯಾಟಿಂಗ್  ನಲ್ಲಿಯೇ ಹೆಚ್ಚಿನ ಕೊಡುಗೆ ತಂಡಕ್ಕೆ ಬೇಕಿದೆ. ಅವನು ಕೂಡ 40 ರನ್ ಬಾರಿಸಿದ್ದರೂ ಅಭಿಮಾನಿಗಳಿಗೆ ಅವನು ಒರೆಯಿಂದ ಖಡ್ಗವನ್ನು ತೆಗೆದು ಗಾಳಿಯಲ್ಲಿ ಬೀಸುವಂತಹ ಆ ಒಂದು ಸೆಲೆಬ್ರೇಶನ್ ಮೂಮೆಂಟ್ ಇನ್ನಷ್ಟು ಬೇಕು.


ಇಂದು ನಮ್ಮ ಟೇಲ್ ಎಂಡರ್ಸ್ ಮೊದಲ ಟೆಸ್ಟ್ ನಂತೆ ಅಂತಹ ಯಾವುದೇ ಪ್ರತಿರೋಧ ತೋರಲಿಲ್ಲ.ಹಾಗಾಗಿ ತಂಡದ ಮೊತ್ತ 364 ರನ್ನುಗಳಿಗಷ್ಟೇ ಸೀಮಿತವಾಯಿತು. ಜಿಮ್ಮಿಯ ಬೌಲಿಂಗ್ ಈ ಟೆಸ್ಟ್ ನಲ್ಲಿಯೂ ಅಭಿನಂದನೆಗೆ ಅರ್ಹ. ಏಕೆಂದರೆ ಮತ್ತೊಮ್ಮೆ ಅವನಿಗೆ ಐದು ವಿಕೆಟ್ ಗಳ ಗೊಂಚಲು ಪ್ರಾಪ್ತವಾಗಿದೆ. ಕೆ. ಎಲ್ ರಾಹುಲ್ ನಂತೆ ಜಿಮ್ಮಿ ಆಂಡರ್ಸನ್ ಹೆಸರನ್ನು ಕೂಡ ಲಾರ್ಡ್ಸ್ ನ ಹಾನರ್ಸ್ ಬೋರ್ಡ್ ನಲ್ಲಿ(Lord's honours boards) ಕೆತ್ತಲಾಗುವುದು. ಸೆಂಚುರಿ ಹಾಗೂ ಇನ್ನಿಂಗ್ಸ್ ಒಂದರಲ್ಲಿ ಐದು ವಿಕೆಟ್ ಹಾಗೂ ಪಂದ್ಯ ಒಂದರಲ್ಲಿ ಹತ್ತು ವಿಕೆಟ್ ಕಬಳಿಸಿದರೆ ಈ ರೀತಿ ಬೋರ್ಡ್ ನಲ್ಲಿ ಆಟಗಾರರ ಹೆಸರು ಬರೆಯುವುದು ಲಾರ್ಡ್ಸ್ ನ ಹಳೆಯ ಸಂಪ್ರದಾಯ.



ಮೊದಲ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಮೂರು ವಿಕೆಟ್ ಗಳು ಅದಾಗಲೇ ಬಿದ್ದಿವೆ. ಮೊಹಮ್ಮದ್ ಸಿರಾಜ್ ಬೌಲಿಂಗ್ ನಿಜಕ್ಕೂ ಬ್ರಿಲಿಯಂಟ್. ಬೌಲರ್ ಎಸೆದ ಬಾಲ್ ಒಂದು ನೆಟ್ಟಗೆ ನಿಲ್ಲಿಸಿದ ಟಿಂಬರ್ ಗೆ ತಾಗುವಾಗ ಬರುವ ಆ ಒಂದು ಸ್ವೀಟ್ ಸೌಂಡ್ ಇದೆಯಲ್ಲ ಅದು ಪ್ರತೀ ವೇಗದ ಬೌಲರ್ ನ ಡ್ರೀಮು. ಅದೇ ಕ್ಲೀನ್ ಬೌಲ್ಡ್ ವಿಕೆಟ್. ನಿಜವಾಗಿಯೂ Haseeb Hameed ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಕಂಗಾಲಾಗಿ ಬಿಟ್ಟ.ಲಾರ್ಡ್ಸ್ ಅಂಗಣದ ಮೂರು ನೀಲಿ ಸ್ಟಂಪ್ ಗಳು ಸಿರಾಜನ ಲೀಥಲ್ ಬೌಲಿಂಗ್ ಗೆ ಚದುರಿ ಹೋಗಿ ಅದರ ಮೇಲಿದ್ದ ಆ ಎರಡು ಹಸಿರು ಬೇಲ್ಸ್  ಗಾಳಿಯಲ್ಲಿ ಹಾಗೇ ಗಿರ ಗಿರನೆ ಹಾರಿ ಹೋಗಿದ್ದು ಇವತ್ತಿನ ಆಟದ ಬಹು ಸುಂದರವಾದ ದೃಶ್ಯ.

ಜೋ ರೋಟ್ ಮತ್ತೆ 48 ರನ್ ಬಾರಿಸಿ ಪ್ರತಿರೋಧ ತೋರುವ ಮೂಡ್ ನಲ್ಲಿ ಇದ್ದಾನೆ. ಆದರೂ ಅವರ ತಂಡ 245 ರನ್ನುಗಳಿಂದ ಹಿಂದಿದೆ. ನಾಳೆ ನಮ್ಮ ಬೌಲರ್ ಗಳು ಮತ್ತೊಮ್ಮೆ ಮಾರಕ ದಾಳಿ ಮಾಡಬೇಕು. ಸದ್ಯಕ್ಕೆ ನಮ್ಮ ವೇಗದ ಬೌಲಿಂಗ್ ವಿಭಾಗ ವಿಶ್ವದ ಶ್ರೇಷ್ಠ ಹಾಗೂ ಡೆಡ್ಲಿ ವೇಗದ ಬೌಲಿಂಗ್ ದಾಳಿಯಾಗಿ ಪರಿವರ್ತನೆ ಆಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯವೇ. 



ಇದರ ನಡುವೆ ಇಂದಿನ ಪಂದ್ಯದಲ್ಲಿ ಬೌಲರ್ ಒಬ್ಬ ನೋ ಬಾಲ್ ಹಾಕಿದಾಗ, ಕಾಮೆಂಟರಿ ಮಾಡುತ್ತಿದ್ದ  ಸೆಹ್ವಾಗ್  ಹೇಳಿದ ಈ ಮಾತು ಇಷ್ಟವಾಯಿತು. ನೋ ಬಾಲ್ ಗೆ ಫ್ರಿ ಹಿಟ್ ಹೇಗೆ ಏಕದಿನ ಹಾಗೂ ಟಿ-ಟ್ವೆಂಟಿ ಯಲ್ಲಿ ಇದೆಯೋ ಅದೇ ರೀತಿ ಟೆಸ್ಟ್ ನಲ್ಲೂ ನೋ ಬಾಲ್ ಗೆ ಫ್ರೀ ಹಿಟ್ ಇದ್ದರೆ ಆವಾಗ ಮಜವಾಗಿರುತ್ತದೆ ಎಂದು ಸೆಹ್ವಾಗ್ ತನ್ನ ಎಂದಿನ ಆಲೋಚನೆಯ ಲಹರಿಯಲ್ಲೇ ಹೇಳಿದ್ದ. ನಾನೂ ಕೂಡ ಇದನ್ನೇ ತುಂಬಾ ಸಲ ಯೋಚಿಸಿದ್ದೇ. ಹೌದಲ್ಲ.. ಏನೆನೋ ಬದಲಾವಣೆ ಕಂಡಿರುವ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಬದಲಾವಣೆಯೂ ಬಂದರೆ  ಸ್ಲೋ ಆಗಿ ಸಾಗುತ್ತಿರುವ ಪಂದ್ಯದ ನಡುವಿನಲ್ಲೊಂದು ಫ್ರಿ ಹಿಟ್ ಖಂಡಿತವಾಗಿಯೂ ತಕ್ಕ ಮಟ್ಟಿಗೆ ಮನರಂಜನೆಯನ್ನು ಸಹ ನೀಡಬಲ್ಲದು ಎಂಬುದು ನನ್ನ ಅನಿಸಿಕೆಯೂ ಆಗಿದೆ. ಹಾಗಾಗಿ ಸೆಹ್ವಾಗ್ ಮಾತಿನ ಭರದಲ್ಲಿ ಹೇಳಿದ್ದರೂ ಈ ಆಸಕ್ತಿಕರ ವಿಷಯಕ್ಕೆ ನನ್ನದೊಂದು ದೊಡ್ಡ ಯೆಸ್ ಯಾವತ್ತಿಗೂ ಇದೆ. 



ಈ ಎರಡನೆಯ ಟೆಸ್ಟ್ ನ ಎರಡನೆಯ ದಿನ ಒಂದು ವಿಶೇಷತೆಗೆ ಸಾಕ್ಷಿಯಾಯಿತು. ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್  ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ತಮ್ಮದೊಂದು ಫೌಂಡೇಶನ್" ರುತ್ ಸ್ಟ್ರಾಸ್ ಕ್ಯಾನ್ಸರ್ ಫೌಂಡೇಶನ್ " ನ ಮೂಲಕ ನೆರವಾಗುವುದನ್ನು  ಸಾಂಕೇತಿಕವಾಗಿ ಸೂಚಿಸಲು ಇಂದು ಸಂಪೂರ್ಣವಾಗಿ ಕೆಂಪು ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡರು.ಸ್ಟ್ರಾಸ್ ಫೌಂಡೇಶನ್ ಅನ್ನು ಬೆಂಬಲಿಸಿ ಸುಮಾರು ಮಂದಿ ಇಂದು ಲಾರ್ಡ್ಸ್ ನಲ್ಲಿ ಕೆಂಪಗಿಯಲ್ಲಿಯೇ  ಕಾಣಿಸಿದರು.ಕಾಮೆಂಟರಿ ತಂಡ,MCC(Marylebone Cricket Club) ಸದಸ್ಯರು ಹಾಗೂ ಗಂಗೂಲಿ ಸೇರಿದಂತೆ BCCI ಅಧಿಕಾರಿಗಳು ಸಹ ಕೆಂಪು ಟೈ ಹಾಗೂ ಬ್ಯಾಜ್ ನೊಂದಿಗೆ ಲಾರ್ಡ್ಸ್ ಅಂಗಣದಲ್ಲಿ ಇಂದು ಸ್ಟ್ರಾಸ್ ನೊಂದಿಗೆ ಕಂಡು ಬಂದರು. ರುತ್ ಸ್ಟ್ರಾಸ್, ಆಂಡ್ರ್ಯೂ ಸ್ಟ್ರಾಸ್ ನ ಪತ್ನಿಯಾಗಿದ್ದು ಇವರು 2018 ರಲ್ಲಿ ಕ್ಯಾನ್ಸರ್ ನಿಂದಲೇ  ಮೃತಪಟ್ಟಿದ್ದಾರೆ.ಅದಕ್ಕಾಗಿಯೇ ಸ್ಟ್ರಾಸ್ ನಿಂದ ಈ ಫೌಂಡೇಶನ್ ಆರಂಭವಾಗಿದ್ದು.


ಇದೇ ರೀತಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ ನ McGrath Foundation ಕೂಡ ಒಂದಿದ್ದು ಇದು Breast cancer  ರೋಗಿಗಳಿಗೆ ಸಹಾಯ ಮಾಡುತ್ತದೆ. ಮೆಗ್ರಾತ್ ಪತ್ನಿ Jane McGrath ಕೂಡ Breast cancer ಗೆ ತುತ್ತಾಗಿದ್ದು ಆ ನಂತರ ಅದರಿಂದ ರಿಕವರಿ ಕೂಡ ಆಗಿದ್ದರು.ಇವರು ನಂತರ 2008 ರಲ್ಲಿ ತೀರಿಕೊಂಡರು.ಮೆಗ್ರಾ ನ ಈ ಫೌಂಡೇಶನ್ ಗೆ ಬೆಂಬಲಿಸಲು ಆಸ್ಟ್ರೇಲಿಯಾ ಗ್ರೌಂಡು, ಅಲ್ಲಿಯ ಕ್ರೌಡು, ಹಾಗೂ ಆಸ್ಟ್ರೇಲಿಯಾದ ಜೆರ್ಸಿ ಪಿಂಕ್ ಬಣ್ಣದಲ್ಲಿ ಬದಲಾಗುವುದನ್ನು ನಾವುಗಳು ಸಹ ಟಿವಿಯಲ್ಲಿ ಹಲವಾರು ಬಾರಿ ನೋಡಿದ್ದೇವೆ. 


ಕ್ರೀಡೆಯ ಮೂಲಕ ಯಾವುದಾದರೊಂದು ವಿಷಯದ ಬಗ್ಗೆ ಅದರಲ್ಲೂ ಕ್ಯಾನ್ಸರ್ ನಂತಹ ಮಹಾ ಮಾರಿಯ ಬಗ್ಗೆ ಅರಿವು ಮೂಡಿಸುವುದು ಜೊತೆ ಜೊತೆಗೆ ಒಂದಷ್ಟು ಸಹಾಯ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆಂಡ್ರ್ಯೂ ಸ್ಟ್ರಾಸ್ ನ ಫೌಂಡೇಶನ್ ಗೆ ಬೆಂಬಲ ನೀಡುವ ಉದ್ದೇಶದಿಂದ ಈ ಎರಡನೆಯ ಟೆಸ್ಟ್ ಪಂದ್ಯದ ಎರಡನೆಯ ದಿನವನ್ನು "ರೆಡ್ ಫಾರ್ ರುತ್" ಡೇ ಎಂದು ಆಚರಿಸಲಾಗುತ್ತಿದೆಯಂತೆ.ಈ ಕ್ಯಾಂಪೇನ್ ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಇಂದು ಆಂಗ್ಲರ ವೈಟ್ ಜೆರ್ಸಿಯಲ್ಲಿರುವ ಹೆಚ್ಚಿನ ಎಲ್ಲಾ ಬಣ್ಣಗಳು,ನಂಬರ್ ಗಳು ಹಾಗೂ ಅಕ್ಷರಗಳು ಹಾಗೇ ಕೆಂಪಾಗಿ ಹೊಳೆದು ಬಿಟ್ಟವು.


ಇಂದಿಗೆ ಇಷ್ಟೇ...


ಇವತ್ತಿನ ಪಂದ್ಯಕ್ಕೆ ಯಾವುದೇ ಅನಾನುಕೂಲ ಮಾಡದ ವರುಣದೇವ ಹಾಗೂ ಸೂರ್ಯದೇವನಿಗೊಂದು ಪ್ರತ್ಯೇಕವಾಗಿ ವಿಶೇಷ ಧನ್ಯವಾದ ಹೇಳುತ್ತಾ.. ನಾಳೆ ದಿನದಾಟದ ಅಂತ್ಯದಲ್ಲಿ ಮತ್ತೆ ಒಂದಷ್ಟು ಕ್ರಿಕೆಟ್.. ಯೆಸ್ಪೆಷಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ಗುಸು ಗುಸು ಮಾತಾಡೋಣ.


#Day_2 : Stumps 

India 1st Innings - 364/10

England 1st Innings - 119 /3


Ind Vs England

2nd  Test - Lord's London 2021


#WTC_S02E01_2021_23

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ