ವಿರಾಟ ಪರ್ವ
ಕೊಹ್ಲಿ ಬ್ಯಾಟ್ ಬೀಸಲು ಶುರು ಮಾಡಿ,ಆ ನಂತರ ಟೀಮ್ ಇಂಡಿಯಾದ ಕಪ್ತಾನನಾಗಿ ದಾಖಲೆ ಮೇಲೆ ದಾಖಲೆ ಬರೆದು ಸಾಗಿದ್ದನ್ನು ನಾವೆಲ್ಲರೂ ನೋಡು ನೋಡುತ್ತಲೇ ಹಾಗೇ 13 ವರುಷಗಳು ಕಳೆದು ಹೋಗಿ ಬಿಟ್ಟವು.
ಇದೇ ದಿನ 13 ವರ್ಷಗಳ ಹಿಂದೆ ಅಂದರೆ 18 August 2008 ರಂದು ಟೀಮ್ ಇಂಡಿಯಾದ 175 ನೇ ಏಕದಿನ ಆಟಗಾರನಾಗಿ ಕ್ಯಾಪ್ ಸಿಕ್ಕಿಸಿಕೊಂಡು ಶ್ರೀಲಂಕಾದ ಡಂಬುಲದಲ್ಲಿ ಶ್ರೀಲಂಕಾ ವಿರುದ್ಧವೇ ಗೌತಮ್ ಗಂಭೀರ್ ಜೊತೆಗೆ ಐದು ಪಂದ್ಯಗಳ ಆ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಆಡಳಿದ 19 ವರ್ಷದ ಈ ಡೆಲ್ಲಿಯ ಹುಡುಗ ವಿರಾಟ್ ಕೊಹ್ಲಿ,22 ಎಸೆತಗಳನ್ನು ಎದುರಿಸಿ ಗಳಿಸಿದ್ದು ಕೇವಲ 12 ರನ್ನು.54. 54 ಸ್ಟ್ರೈಕ್ ರೇಟಿನಲ್ಲಿ ಹೊಡೆದದ್ದು ಒಂದು ಬೌಂಡರಿ.
ಆ ದಿನ ತಾನು ಮುಂದಕ್ಕೆ ವಿರಾಟನಾಗಿಯೇ ಈ ಕ್ರಿಕೆಟ್ ಜಗತ್ತನ್ನು ಆಳುತ್ತೇನೆ,ಇನ್ನಿಲ್ಲದಂತೆ ಟೀಮ್ ಇಂಡಿಯಾವನ್ನು ಎಲ್ಲೆಡೆ ಮೆರೆಸುತ್ತೆನೆ ಎಂದು ಬಹುಶಃ ವಿರಾಟ್ ಕೊಹ್ಲಿಗೂ ಗೊತ್ತಿರಲಿಕ್ಕಿಲ್ಲ.ಆದರೆ ಆ ನಂತರ ನಡೆದದ್ದು ಬರೀ ಕೊಹ್ಲಿಯ ಪರಾಕ್ರಮದ ಕಥೆಗಳೇ.ಅವನ ಆಟದ ಇತಿಹಾಸದ ಕೆದಕುತ್ತಾ ಹೋದರೆ ಅಲ್ಲಿರುವುದು ಬರೀ ಬಹಳಷ್ಟು ಬಹುಪರಾಕ್ ಹೇಳಬೇಕಾದ ವಿಷಯಗಳೇ.
ಕೊಹ್ಲಿ ಶ್ರೀಲಂಕಾ ವಿರುದ್ಧ ತಾನಾಡಿದ ಆ ಚೊಚ್ಚಲ ಪಂದ್ಯದಲ್ಲಿ ಇನ್ನೊಬ್ಬ ಆಟಗಾರ ಕೂಡ ಇದ್ದ.ಅವನೇ ರೋಹಿತ್ ಶರ್ಮ. ಆದರೆ ಅವನಿಗದು ಚೊಚ್ಚಲ ಪಂದ್ಯ ಆಗಿರಲಿಲ್ಲ.ಆ ದಿನ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ರೋಹಿತ್ 31 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 19 ರನ್ ಮಾಡಿ ಔಟಾಗಿ ಬಿಟ್ಟಿದ್ದ.ಟೀಮ್ ಇಂಡಿಯಾದ 168 ನೇ ಆಟಗಾರನಾಗಿ ಏಕದಿನ ಕ್ಯಾಪ್ ಧರಿಸಿ ಕೊಹ್ಲಿಗಿಂತ ಸ್ವಲ್ಪ ಮೊದಲೇ ಅಂದರೆ 2007 ರಲ್ಲಿಯೇ ಐರ್ಲೆಂಡ್ ವಿರುದ್ಧ ಬೆಲ್ಫಾಸ್ಟ್ ನಲ್ಲಿ ಅದಾಗಲೇ ಆಡಿದ್ದ ರೋಹಿತ್ ವಿಶ್ವ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಹೆಚ್ಚು ಕಡಿಮೆ ಒಂದು ವರ್ಷ ಆಗಿತ್ತು.
ಯಾರಿಗೇ ಆಗಲಿ ಕೊಹ್ಲಿಯ ಆ ಡೆಬ್ಯು ಪಂದ್ಯ ನೋಡಿದವರಿಗೆ ಮುಂದೊಂದು ದಿನ ಈ ಇಬ್ಬರು ಜೋಡಿಗಳು ಮುಂದೆ ವಿಶ್ವ ಕ್ರಿಕೆಟ್ ಅನ್ನು ಇನ್ನಿಲ್ಲದಂತೆ ಆಳಬಲ್ಲರು ಎಂದು ಅನ್ನಿಸಿಯೇ ಇರಲಿಲ್ಲ.ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ ಬಿಡಿ.ಮುಂದೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಬ್ಬರ ಸ್ಥಾನವೂ ಅದಲು ಬದಲಾಯಿತು.ಆ ನಂತರ ಆಗಿದ್ದು ಕೇವಲ ಇತಿಹಾಸ,ಮತ್ತೆ ಮತ್ತೆ ಓದಬೇಕೆನಿಸುವ,ರಿವೈಂಡ್ ಮಾಡಿಕೊಂಡು ನೋಡಬೇಕೆನಿಸುವ ಅತೀ ಸುಂದರ ಕ್ರಿಕೆಟ್ ಇತಿಹಾಸ ಅದು.ಅವರವರ ಕ್ರಮಾಂಕದಲ್ಲಿ ಅವರುಗಳೇ ರಾಜರಾಗಿ ಮೆರೆದು ಬಿಟ್ಟರು.ದೊಡ್ಡ ದೊಡ್ಡ ಅಳಿಸಲು ಆಗದಂತಹ ದಾಖಲೆಗಳನ್ನು ಬರೆಯುತ್ತಾ ಸಾಗಿದರು, ಈಗಲೂ ಅದನ್ನೇ ಶ್ರದ್ಧೆಯಿಂದ ಮಾಡುತ್ತಿದ್ದಾರೆ.ರೋಹಿತ್ ಹಿಟ್ ಮ್ಯಾನ್ ಆಗಿ ಬಿಟ್ಟರೆ ಕೊಹ್ಲಿಯಂತು ಕಿಂಗ್ ಕೊಹ್ಲಿ,ರನ್ ಮೆಷಿನ್ ಎಂದೇ ಕರೆಸಿಕೊಂಡ.
ಕೊಹ್ಲಿಯ ವಿಷಯ ಪ್ರಸ್ತಾಪ ಮಾಡಬೇಕಾದ ಸಂಧರ್ಭದಲ್ಲಿ ರೋಹಿತ್ ವಿಷಯವನ್ನು,ರೋಹಿತ್ ವಿಷಯ ಪ್ರಸ್ತಾಪ ಮಾಡಬೇಕಾದ ಸಂದರ್ಭದಲ್ಲಿ ಕೊಹ್ಲಿಯ ವಿಷಯವನ್ನು ನಾನು ಬೇಕೆಂದೇ ಏಕೆ ತರುತ್ತೇನೆ ಎಂದರೆ ನನಗೆ ಸೇಬನ್ನು ವಿಶ್ಲೇಷಣೆ ಮಾಡುವಾಗ ಅದರ ಜೊತೆಗೆ ಕಿತ್ತಳೆಯ ಬದಲಿಗೆ ಇನ್ನೊಂದು ಸೇಬು ಇದ್ದರೆನೇ ವಿಷಯ ಹೆಚ್ಚು ರುಚಿಸುವುದು.ನಾವು ಕೆಂಪನೆಯ ಸೇಬು ಬಗ್ಗೆ ಮಾತನಾಡುವಾಗ ಹೋಲಿಕೆಗೆ ಅದರ ಪಕ್ಕ ಕನಿಷ್ಟ ಪಕ್ಷ ಗ್ರೀನ್ ಸೇಬು ಆದರೂ ಇದ್ದರೆನೇ ಚಂದ ಅಲ್ವಾ ಎಂಬುದು ನನ್ನ ಅನಿಸಿಕೆ ಅಷ್ಟೇ.
ಅದರಲ್ಲೂ ಕ್ರಿಕೆಟ್ ದುನಿಯಾದಲ್ಲಿ ಅವರಿಬ್ಬರು ಒಟ್ಟೊಟ್ಟಿಗೆ ಸಾಗಿದ ಬಗೆಯನ್ನು ಅನಾಲಿಸಿಸ್ ಮಾಡುವುದರಲ್ಲಿಯೇ ಹೆಚ್ಚಿನ ಸುಖವಿದೆ.ಸಚಿನ್ ಬಗ್ಗೆ ಹೇಳುವಾಗ ನಾವು ದಾದನನ್ನು ಮರೆಯಬಾರದು.ವೀರು ಬಗ್ಗೆ ಮಾತಾಡುವಾಗ ಗಂಭೀರ್ ನೆನಪಾಗಬೇಕು,ಕುಂಬ್ಳೆ ಬೌಲಿಂಗ್ ನಲ್ಲಿ ದ್ರಾವಿಡ್ ಹಿಡಿಯುವ ಕ್ಯಾಚ್ ಕಣ್ಣ ಮುಂದೆ ಬರಬೇಕು.ಅದೇ ರೀತಿ ಎಲ್ಲಿ ಒಂದಷ್ಟು ಕೊಹ್ಲಿಯ ಬಗ್ಗೆ ಮಾತಾಡುತ್ತೆವೆಯೋ ಅಲ್ಲಿ ಹಿಟ್ ಮ್ಯಾನ್ ಕೂಡ ಆವಾಗವಾಗ ಬಂದು ಹೋಗುತ್ತಿದ್ದರೆ,ಅದೇ ರೀತಿ ರೋಹಿತ್ ಬಗ್ಗೆ ಮಾತಾಡುವಾಗ ಕೊಹ್ಲಿ ಬಂದು ಪಕ್ಕದಲ್ಲಿ ನಿಂತಿದ್ದರೆ ಅದು ಚಂದ.ಗೊತ್ತು ಸಾಧನೆಯ ವಿಷಯ ಬಂದಾಗ ಕೊಹ್ಲಿ ರೋಹಿತ್ ಗಿಂತಲೂ ಎಷ್ಟೋ ದೊಡ್ಡ ಆಟಗಾರ,ಆದರೆ ಸಮಕಾಲೀನನಾದ ರೋಹಿತ್ ನನ್ನು ಪಕ್ಕಕ್ಕೇ ಕೂರಿಸಿಕೊಂಡೇ ಮಾತಾಡಿದಾಗ ಕೊಹ್ಲಿ ಇನ್ನಷ್ಟು ಇಷ್ಟವಾಗುತ್ತಾನೆ ಎಂದೇ ನನ್ನ ಭಾವನೆ.
ನಮ್ಮಲ್ಲಿ ಹೆಚ್ಚಾಗಿ ಒಂದು ರೂಮರ್,ಹಲವಾರು ಗುಸು ಗುಸು,ಬಹಳಷ್ಟು ಪಿಸು ಪಿಸು ಇದೆ.ಅದೇನೆಂದರೆ ವಿರಾಟ್ ಕೊಹ್ಲಿ ಗೆ ರೋಹಿತ್ ನನ್ನು ಕಂಡರೆ ಅಷ್ಟಾಗಿ ಆಗುವುದಿಲ್ಲ.. ಇಬ್ಬರ ನಡುವೆ ಏನೋ ಒಂದು ಇದೆ..ಖಂಡಿತವಾಗಿಯೂ ಇದ್ದೇ ಇದೆ.. ಇತ್ಯಾದಿ.. ಇತ್ಯಾದಿ. ಬಹುಶಃ ಮಾಧ್ಯಮಗಳು ಕೂಡ ಕೆಲವೊಂದು ಘಟನೆಗಳಿಗೆ ನೀರೆರೆದು ಪೋಷಿಸಿದ ಪರಿಣಾಮ, ಇಲ್ಲವೇ ತಂಡದಲ್ಲಿ ಅವರಿಬ್ಬರು ಸಹಜವಾಗಿ ಒಟ್ಟಿಗೆ ಇದ್ದರೂ ಅವರಿಬ್ಬರು ಒಟ್ಟಿಗೆ ಇರುವುದನ್ನು ಬಲು ವಿಶೇಷವಾಗಿ,ಅಂದರೆ ಇದು ಇದಕ್ಕಿಂತ ಮೊದಲು ಘಟಿಸಿಯೇ ಇಲ್ಲ ಎಂಬಂತೆ ತೋರಿಸಿದಾಗ ಅಂತಹ ಅನುಮಾನಗಳು ಮೂಡುವುದು ಕೂಡ ಸಹಜವೇ ಬಿಡಿ.
ತಂಡ ಅಂತ ಬಂದಾಗ ಒಂದೆರಡು ಭಿನ್ನಾಭಿಪ್ರಾಯಗಳು, ಅಸಮಾಧಾನಗಳು ಸಹಜ.ಅದು ಎಲ್ಲಾ ತಂಡಗಳಲ್ಲಿ ಇದ್ದದ್ದೇ ಬಿಡಿ.ಆದರೆ ನೆನಪಿರಲಿ ಕೊಹ್ಲಿಯಂತಹ ಅಗ್ರೆಸ್ಸಿವ್ ಆಟಗಾರ, ಅತ್ಯದ್ಭುತ ಬ್ಯಾಟ್ಸ್‌ಮನ್ ಕೂಡ ಯಾವತ್ತಿಗೂ ತನಗಿಂತ ಒಳ್ಳೆಯ ಆಟಗಾರ ಎಂದು ಒಪ್ಪಿಕೊಂಡದ್ದು,ಅದನ್ನು ಮನಸ್ಸು ಬಿಚ್ಚಿ ಮುಕ್ತವಾಗಿ ಹೇಳಿ ಇನ್ನಿಲ್ಲದಂತೆ ಹೊಗಳಿದ್ದು ಮಾತ್ರವಲ್ಲ ಅಂತಹ ಅವಕಾಶಗಳು ಬಂದಾಗ ಮುಂದೆ ನಿಂತು ಚಪ್ಪಾಳೆ ಹೊಡೆದಿದ್ದು... ಅದು ಎಂದಿಗೂ ಹೆಚ್ಚಾಗಿ ರೋಹಿತ್ ಶರ್ಮ ಎಂಬ ಮುಂಬೈಕರ್ ಗಾಗಿಯೇ ಇತ್ತು.
ರೋಹಿತ್ ನ ಈ ಪರಿಯ ಬೆಳವಣಿಗೆಗೆ ಕಾರಣ ಅದು ಎಂದಿಗೂ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ದೋನಿ ಎನ್ನುವುದರಲ್ಲಿ ಎರಡು ಮಾತಿಲ್ಲ.ಸೆಹ್ವಾಗ್ ನಂತಹ ಹಿರಿಯ ಆಟಗಾರರಿಗಿಂತಲೂ ಹೆಚ್ಚಿನ ಅವಕಾಶ ರೋಹಿತ್ ಗೆ ಕೊಟ್ಟು ಅವನನ್ನು ಓಪನರ್ ಮಾಡಿಸಿದ್ದು ಕೂಡ ದೋನಿಯೇ.ಆದರೆ ಆ ನಂತರ ಕೊಹ್ಲಿ ತನ್ನ ನಾಯಕತ್ವದಲ್ಲಿ ರೋಹಿತ್ ಕಳಪೆ ಆಡಿದಾಗ, ಅದರಲ್ಲೂ ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗಿ ಇನ್ನಿಲ್ಲದಂತೆ ಹಿರಿಯರ ಆಟಗಾರರ ಟೀಕೆಗೆ ಒಳಗಾದಾಗ ರೋಹಿತ್ ನನ್ನು ಕೊಹ್ಲಿ ಯಾವತ್ತೂ ಬಿಟ್ಟು ಕೊಡಲೇ ಇಲ್ಲ,ಬದಲಿಗೆ ರೋಹಿತ್ ಎಂತಹ ಅದ್ಭುತ ಆಟಗಾರ ಎಂದು ಸಮರ್ಥನೆಗೆ ನಿಂತು ಬಿಟ್ಟ ಅವನು.ನನಗೆ ಕೊಹ್ಲಿ ಇಷ್ಟಾಗುವುದು ಇಂತಹ ಕಾರಣಗಳಿಗಾಗಿಯೇ.
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ ಅವನ ರೆಕಾರ್ಡ್ ಗಳನ್ನು ಯಾರಾದರೂ ಮುರಿಯಬಹುದಾ ಎಂದು ಕೇಳಿದ್ದಕ್ಕೆ ಸಚಿನ್ ಹೇಳಿದ ಹೆಸರು ಕೂಡ ಎರಡೇ ಒಂದು ರೋಹಿತ್ ಮತ್ತೊಂದು ವಿರಾಟ್. ಬಹುಶಃ ಅದನ್ನು ಅಕ್ಷರಶಃ ನಿಜವಾಗಿಸಲು ಹೊರಟಿದ್ದು ನಮ್ಮ ಕೊಹ್ಲಿಯೇ.ಆತನ ದೈಹಿಕ ಸಾಮರ್ಥ್ಯ ಹಾಗೂ ಆ ಹುಮ್ಮಸ್ಸು,ಆ ಛಲ ನೋಡುತ್ತಿದ್ದರೆ ಯಾರಿಗೇ ಆಗಲಿ ಈತ ಇನ್ನಷ್ಟು ಆಡುತ್ತಾನೆ ಹಾಗೂ ಇನ್ನಷ್ಟು ಸಚಿನ್ ದಾಖಲೆಗಳು ಧೂಳಿಪಟವಾಗುತ್ತದೆ ಎಂದು ಅನ್ನಿಸದೇ ಇರದು. ಹಾಗೆಯೇ ಆಗಲಿ.ಯಾರೇ ಆಗಲಿ ಭಾರತೀಯರ ಹೆಸರಲ್ಲಿರುವ ದಾಖಲೆಗಳನ್ನು ಭಾರತೀಯರೇ ಆಳಿಸಿ ಹಾಕಿ ಅದನ್ನು ಮತ್ತಷ್ಟು ಉತ್ತಮಕ್ಕೆ ಬೇರೆ ಯಾರೂ ಮುರಿಯಲಾರದಷ್ಟು ಎತ್ತರಕ್ಕೆ ಕೊಂಡು ಹೋಗುತ್ತಿದ್ದರೆ ಅದಕ್ಕಿಂತ ಸಂತೋಷ ಬೇರೆನಿದೆ.
ಈ 13 ವರ್ಷಗಳಲ್ಲಿ ಕೊಹ್ಲಿ ಮಾಡಿದ ರೆಕಾರ್ಡ್ ಗಳ ಬಗ್ಗೆಯೇ ಹೇಳುತ್ತಾ ಹೋದರೆ ಅದು ತುಂಬಾ ಉದ್ದಕ್ಕೆ ಹೋಗಿ ಬಿಡುತ್ತದೆ.ಮಾತ್ರವಲ್ಲ ಅದೆಲ್ಲವೂ ಎಲ್ಲರಿಗೂ ಗೊತ್ತಿರುವಂತಹ ವಿಷಯಗಳೇ ಆಗಿವೆ.ಹಾಗಾಗಿ ನಾವು ಅದನ್ನು ಬಿಟ್ಟು ಕೊಹ್ಲಿಯ ಬಗ್ಗೆ ಬೇರೆ ಒಂದಷ್ಟು ಮಾತಾಡೋಣ.
ನಿಜ ಹೇಳಬೇಕೆಂದರೆ ಕೊಹ್ಲಿ ಇಷ್ಟೊಳ್ಳೆಯ ಆಟಗಾರ ಆಗಿಲ್ಲದೇ ಹೋಗಿದ್ದರೆ ಕೇವಲ ಅವನ ಅಗ್ರೆಸ್ಸಿವ್ ವರ್ತನೆಗಾಗಿಯೇ ಅವನು ಇಷ್ಟೊತ್ತಿಗೆ ತಂಡದಿಂದ ಎಂದಿಗೋ ಹೊರ ದಬ್ಬಲ್ಪುಡುತ್ತಿದ್ದ.ಆದರೆ ಹಾಗಾಗಲಿಲ್ಲ.ಕೊಹ್ಲಿ ನಿರಂತರವಾಗಿ ಬ್ಯಾಟ್ ಮೂಲಕವೇ ತನ್ನ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುತ್ತಲೇ ಬಂದು ಬಿಟ್ಟ.ನಮ್ಮ ಹಿರಿಯ ಆಟಗಾರರಿಗೆ ಅವನು ಯಾವತ್ತೂ ಬಿಸಿ ತುಪ್ಪವೇ ಆಗಿದ್ದ.ರೋಹಿತ್ ನನ್ನು ಮನಸಾರೆ ಹೊಗಳುವಂತೆ ಹಿರಿಯ ಮುಂಬೈಕರ್ ಗಳಿಗೆ ಕೊಹ್ಲಿಯನ್ನು ಇನಿಷಿಯಲ್ ದಿನಗಳಲ್ಲಿ ಅಷ್ಟೊಂದು ಹೊಗಳಲು ಮನಸ್ಸಾಗದಿದ್ದರೂ ಆ ನಂತರದ ದಿನಗಳಲ್ಲಿ ಅವರಿಗೆ ಅದು ಅನಿವಾರ್ಯವಾಗಿ ಬಿಟ್ಟಿತು.ಏಕೆಂದರೆ ಕೊಹ್ಲಿಯಂತಹ ಆಟಗಾರ ವಿಶ್ವ ಕ್ರಿಕೆಟ್ ನಲ್ಲಿಯೇ ಇಲ್ಲ ಎನ್ನುವುದು ವಿಶ್ವ ಒಪ್ಪಿಕೊಂಡು ಅದಾಗಲೇ ಬಹಳ ಸಮಯವಾಗಿ ಬಿಟ್ಟಿತ್ತು. ಕೊಹ್ಲಿ ಮೈದಾನದಲ್ಲಿ ಸ್ವಲ್ಪ ಸಂಯಮದಿಂದ ವರ್ತಿಸಬೇಕು ಎಂದು ಬುದ್ಧಿವಾದ ಹೇಳಿದ ಹಿರಿಯರು ಆಮೇಲೆ ಕೊಹ್ಲಿಯ ಆಟದ ಹೊರತಾಗಿ ಅವನ ವರ್ತನೆಯ ಬಗ್ಗೆ ಮಾತಾಡಲು ಹೋಗಲೇ ಇಲ್ಲ. ಈಗ ಅಂತು ಅಂತಹ ಮಾತುಗಳು ಕೇಳಿ ಬರುವುದೇ ಇಲ್ಲ.
ವಿದೇಶಿ ತಂಡಗಳಿಗೆ ಟೀಮ್ ಇಂಡಿಯಾದ ಪ್ರತಿಭಾನ್ವಿತ ಆಟಗಾರರ ಚಿಂತೆ ಒಂದು ಕಡೆ ಆದರೆ... ವಿರಾಟ್ ಕೊಹ್ಲಿ ಎಂಬ ಆಟಗಾರನದ್ದೇ ಒಂದು ಪ್ರತ್ಯೇಕ ಚಿಂತೆ. ಏಕೆಂದರೆ ವಿರಾಟ್ ಕೊಹ್ಲಿ ಅವರನ್ನು ಅಷ್ಟೊಂದು ಪೀಡಿಸಿ ಬಿಡುತ್ತಾನೆ ಎಂದರೆ ಅವನು ಆಟವಾಡಿದರೂ ಅವರಿಗೆ ಕಷ್ಟವೇ,ಆಟವಾಡದೇ ಕಾಲು ಕೆದರಿಕೊಂಡು ಜಗಳಕ್ಕೆ ಇಳಿದರೂ ಕಷ್ಟವೇ.ಕೊಹ್ಲಿಯ ಮೇಲೆ ಒಂದು ವಿಶೇಷ ಕಣ್ಣು ಎದುರಾಳಿ ಆಟಗಾರರಿಗೆ ಮಾತ್ರವಲ್ಲ ಅವರ ಕೋಚ್ ಗಳಿಗೆ, ಅವರ ಹಿರಿಯ ಆಟಗಾರರಿಗೆ, ಕಾಮೆಂಟೇಟರ್ ಗಳಿಗೆ,ಗ್ರೌಂಡಿನಲ್ಲಿ ಅಂಪೈರ್ ಗಳಿಗೆ,ಪಂದ್ಯದ ರೆಫ್ರಿಗೆ ಮತ್ತು ವಿದೇಶಿ ಮಾಧ್ಯಮಗಳಿಗೆ ಯಾವತ್ತೂ ಇದ್ದೇ ಇರುತ್ತದೆ. ಕೊಹ್ಲಿ ಅಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಕಿರಿಕಿರಿ.
ಜಂಟಲ್ ಮನ್ ಗೇಮ್ ಅನ್ನು ಇಷ್ಟ ಪಡುವ ವಿದೇಶಿ ಹಿರಿಯ ಆಟಗಾರರಿಗೆ, ಹಾಗೂ ಅಲ್ಲಿಯ ಕಾಮೆಂಟೆಟರ್ಸ್ ಗಳಿಗೆ ಕೊಹ್ಲಿಯ ಆನ್ ಫೀಲ್ಡ್ ವರ್ತನೆ ಯಾವತ್ತೂ ಇಷ್ಟವಾಗಿದ್ದೇ ಇಲ್ಲ. ಹಾಗಂತ ಕೊಹ್ಲಿ ತನ್ನ ತನವನ್ನು ಬದಲಾಯಿಸಿಕೊಳ್ಳುವ ಜಾಯಮಾನದವನೂ ಕೂಡ ಅಲ್ಲ. ತಾನಿರುವುದೇ ಹೀಗೆ, ಆಗುವುದಾದರೆ ಸಹಿಸಿಕೊಳ್ಳಿ,ನಿಮ್ಮ ಆಟಗಾರರು ಹದ್ದು ಮೀರುವಾಗ ನೀವು ಎಲ್ಲಿದ್ದೀರಿ ಎಂದು ಹೇಳಿಯೇ ಅವರೆಲ್ಲರ ಬಾಯಿ ನಿರಂತರವಾಗಿ ಮುಚ್ಚಿಸಿ ಬಿಟ್ಟಿದ್ದಾನೆ ಅವನು.
ಅದರಲ್ಲೂ ಮೊನ್ನೆ ಮೊನ್ನೆ ಮುಗಿದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪರಮೋಚ್ಛ ಬೌಲರ್ ಜಿಮ್ಮಿ ಗೆ ಅವರ ಪವಿತ್ರ ಮೈದಾನ ಲಾರ್ಡ್ಸ್ ನಲ್ಲಿ ತಾನೂ ಸ್ವತಃ ಫಾರ್ಮ್ ನಲ್ಲಿ ಇರದಿದ್ದರೂ ಹೇಳಿದ ಈ ಮಾತುಗಳೇ ಸಾಕ್ಷಿ.. "ನನ್ನ ಬಳಿ ಜಾಸ್ತಿ ಬಾಲ ಬಿಚ್ಚಬೀಡ,ಲಾರ್ಡ್ಸ್ ಅಂಗಣವೆನೋ ನಿನ್ನ ಮನೆಯ ಹಿತ್ತಿಲು ಅಲ್ಲ..". ಬಹುಶಃ ಇಂತಹ ಧೈರ್ಯ, ಇಷ್ಟೊಂದು ಉಡಾಫೆಯಾಗಿ ಎದುರಾಳಿಯನ್ನು ತಿವಿಯುವ ಮನಸ್ಥಿತಿ ನಮ್ಮ ದಾದನಿಗೆ ಬಿಟ್ಟರೆ ಬೇರೆ ಯಾರಲ್ಲೂ ಇರಲೇ ಇಲ್ಲ.
ಮೇಲ್ನೋಟಕ್ಕೆ ಕೊಹ್ಲಿ ಹುಟ್ಟು ಜಗಳಗಂಟ ಅಂತಲೇ ಅನ್ನಿಸಿ ಬಿಡುತ್ತದೆ. ಆದರೆ ಕೊಹ್ಲಿಯ ಒಂದೇ ಒಂದು ಪ್ರಾಬ್ಲಂ ಏನೆಂದರೆ ಆತ ಎಲ್ಲಿ ಕ್ಯಾಮೆರಾದ ದೃಷ್ಟಿ ತನ್ನತ್ತ ಇದೆ, ಎಲ್ಲಿ ಸ್ಟಂಪ್ ಮೈಕ್ ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ ಎಂಬುದರ ಲೆಕ್ಕಾಚಾರ ಹಾಕದೇ ಎದುರಾಳಿಯೊಂದಿಗೆ ನೇರಾ ನೇರ ಜಗಳಕ್ಕೆ ನಿಂತು ಬಿಡುತ್ತಾನೆ. ಹಾಗಾಗಿ ಈ ರೀತಿಯಾಗಿ ಸಿಕ್ಕಿ ಬೀಳುತ್ತಾನೆ.ಆದರೆ ಅದಕ್ಕಿಂತಲೂ ಮೊದಲು ಎದುರಾಳಿ ಆಟಗಾರರು ಅವನನ್ನು ಕೆಣಕಿದ್ದು ನಮಗೇ ಕಾಣಿಸುವುದೇ ಇಲ್ಲ, ಕಾರಣ ಅವರು ಬುದ್ಧಿವಂತರು ಯಾವುದರ ಕಣ್ಣಿಗೂ ಬೀಳದೆಯೇ ಸರಿಯಾದ ಜಾಗದಲ್ಲಿ ಸ್ಲೆಡ್ಜಿಂಗ್ ಮಾಡಿ ಜಾರಿ ಹೋಗುತ್ತಾರೆ. ಇವುಗಳ ಬಗ್ಗೆ ಸೆಹ್ವಾಗ್ ಸುಂದರವಾಗಿ ಹೇಳುತ್ತಾನೆ ಹೇಗೆ ಆಸ್ಟ್ರೇಲಿಯಾದವರು ಯಾರಿಗೂ ಗೊತ್ತಾಗದಂತೆ ಇತರರಿಗೆ ಚಳ್ಳೆಹಣ್ಣು ತಿನ್ನಿಸಿ ಮೆಲ್ಲನೆ ಸ್ಲೆಡ್ಜಿಂಗ್ ಮಾಡಿ ದೂರ ಸರಿಯುತ್ತಾರೆ ಎಂದು.
ತನ್ನೊಂದಿಗೆ ಯಾರೂ ಬರದಿದ್ದರೂ ಸಹ ಒಬ್ಬನೇ ಹೋಗಿ ಕೆಣಕಿದ ಎದುರಾಳಿಯೊಂದಿಗೆ ವರ್ಬಲ್ ವಾರ್ ಮಾಡುವ ಕೊಹ್ಲಿ,ಒಂದು ವೇಳೆ ತನ್ನ ತಂಡದ ಆಟಗಾರರ ಜೊತೆ ಯಾರಾದರೂ ಅಧಿಕಪ್ರಸಂಗ ಮಾಡಿದರೆ ಆವಾಗಲೇ ಅವರುಗಳ ನೆತ್ತಿಗೇರಿದ ಪಿತ್ತವನ್ನು ಕ್ಷಣಾರ್ಧದಲ್ಲಿ ಇಳಿಸಿ ಬಿಡುತ್ತಾನೆ.." ಆವಾಗ ನಮ್ಮ ಆಟಗಾರನೊಂದಿಗೆ ಬಾರೀ ಮಾತಾಡಿದೆಯಲ್ಲ,ಈಗ ನನ್ನೊಂದಿಗೆ ಮಾತಾಡು ಬಾ.." ಎಂದು ಮುಖಕ್ಕೆ ಮುಖ ಕೊಟ್ಟು ನಿಲ್ಲುತ್ತಾನೆ ಕೊಹ್ಲಿ.ಎದುರಾಳಿ ಬೇಕಿದ್ದರೆ ಎಷ್ಟೇ ಹಿರಿಯ ಆಟಗಾರ ಆಗಿರಲಿ, ಇಲ್ಲವೇ ಎಂತಹ ದೊಡ್ಡ ಆಟಗಾರ ಆಗಿರಲಿ ಕೊಹ್ಲಿಯ ತಂಟೆಗೆ ಬಂದರೆ ಕೊಹ್ಲಿಯದ್ದು ಎಂದಿಗೂ ಒಂದೇ ಮಂತ್ರ "ಅಲ್ಲೇ ಡ್ರಾ.. ಅಲ್ಲೇ ಬಹುಮಾನ"
ಅದಕ್ಕಾಗಿಯೇ ನಮ್ಮ ತಂಡದ ಜೊತೆ ಸ್ಲೆಡ್ಜಿಂಗ್ ಶೂರರೆನಿಸಿದ ಆಸ್ಟ್ರೇಲಿಯನ್ನರು ಈಗೀಗ ಕಾಲು ಕೆರೆದು ಜಗಳಕ್ಕೆ ಬರುವುದೇ ಇಲ್ಲ.ವಿಶೇಷ ಏನೆಂದರೆ ವಿಶ್ವ ಕ್ರಿಕೆಟ್ ನಲ್ಲಿ ಈಗ ಅಗ್ರೆಸ್ಸಿವ್ ತಂಡ ಏನಾದರೂ ಇದ್ದರೆ ಅದು ಟೀಮ್ ಇಂಡಿಯಾ ಮಾತ್ರವೇ. ಆದರೆ ಇಡೀ ಟೀಮ್ ಇಂಡಿಯಾದಲ್ಲಿ ಭೂತಗನ್ನಡಿ ಹಿಡಿದು ನೋಡಿದರೂ ಕೊಹ್ಲಿ ಬಿಟ್ಟರೆ ಬೇರೆ ಯಾರೂ ಅಂತಹ ಅಗ್ರೆಸ್ಸಿವ್ ವರ್ತನೆಯ ಆಟಗಾರರೇ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಹಿಂದೆ ದಾದನ ಜೊತೆಗೆ ಬೆನ್ನಿಗೆ ಹರ್ಭಜನ್, ಯುವರಾಜ್ ಆದರೂ ಇದ್ದರು.ಆದರೆ ಈಗ ಕೊಹ್ಲಿ ತಂಡದಲ್ಲಿರುವ ರೋಹಿತ್ ಗೆ ಇಂತಹ ವಿಷಯಗಳಲ್ಲಿ ಆಸಕ್ತಿಯೇ ಇಲ್ಲ.ಅವನೊಂತರಹ ಉದಾಸೀನದ ಮಾರಿ.ತಾನಾಯಿತು ತನ್ನ ಆಟವಾಯಿತು ಅಷ್ಟೇ.
ಹಾಗಾಗಿ ಇಶಾಂತ್, ಸಿರಾಜ್ ಹಾಗೂ ಬುಮ್ರಾ ನಂತವರು ಈ ವಿಷಯದಲ್ಲಿ ಕೊಹ್ಲಿಗೆ ಬಹಳಷ್ಟು ಇಷ್ಟವಾಗುತ್ತಾರೆ.
ಖಂಡಿತವಾಗಿಯೂ ದೋನಿಯಂತೆ ಕೊಹ್ಲಿ ಪ್ರಮುಖ ಕಪ್ ಗಳನ್ನು ಗೆಲ್ಲಲಿಲ್ಲ ನಿಜ.ಆದರೆ ಕಪ್ ಗೆಲ್ಲಲಿಲ್ಲ ಎಂದ ಮಾತ್ರಕ್ಕೆ ಆತ ಈ ತಂಡವನ್ನು ಹೀನಾಯವಾಗಿ ಸೋಲಲು ಕೂಡ ಬಿಡಲಿಲ್ಲ. ಬದಲಿಗೆ ಈ ತಂಡವನ್ನು ನೆಕ್ಸ್ಟ್ ಲೆವೆಲ್ ತಂಡವನ್ನಾಗಿ ಮಾಡಿ ಬಿಟ್ಟಿದ್ದಾನೆ ಅವನು. ಬಹುಶಃ ಟೆಸ್ಟ್ ಕ್ರಿಕೆಟ್ ನಲ್ಲಿ ಅಂತು ನಮ್ಮ ಈ ತಂಡಕ್ಕೆ ಸರಿಸಾಟಿಯಾದ ತಂಡವೇ ಈಗ ಇಲ್ಲ.ಎಲ್ಲರಿಗೂ ಈಗ ನಮ್ಮ ಮಾಡೆಲ್ ಕ್ರಿಕೆಟೇ ಬೇಕು.ನಮ್ಮಲ್ಲಿರುವ ಬೆಂಚ್ ಸ್ಟ್ರೆಂತ್ ಅಂತು ಎಲ್ಲರಿಗೂ ಬೆರಗು ಮೂಡಿಸುತ್ತಿದೆ.
ತಂಡದ ಆಟಗಾರರಲ್ಲಿ ಆ ಕಿಡಿ ಹಚ್ಚಿದ್ದು ಬಹುಶಃ ಕೊಹ್ಲಿಯೇ. ಎಲ್ಲಿಯವರೆಗೆ ಎಂದರೆ ಸ್ವತಃ ಕೊಹ್ಲಿಯೇ ಇರದಿದ್ದರೂ.. ಅವನ ತಂಡ ಪಂದ್ಯ ಗೆಲ್ಲಬಲ್ಲದು.ಅಷ್ಟೇಕೆ ಆಸ್ಟ್ರೇಲಿಯಾದಂತಹ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಮಾತ್ರವಲ್ಲ ಟೆಸ್ಟ್ ಸರಣಿಯನ್ನೇ ಗೆಲ್ಲಬಲ್ಲರು ಎಂದರೆ ಅದು ಎಂದಿಗೂ ಸಾಮಾನ್ಯದ ಮಾತಲ್ಲ. ಅದೆಲ್ಲದರ ಹಿಂದೆ ಇದ್ದದ್ದು ಕೊಹ್ಲಿ ಬಿತ್ತಿದ ಫಿಯರ್ ಲೆಸ್ ಕ್ರಿಕೆಟ್. ಆತ ಸೋಲುವ ಕ್ಷಣದಲ್ಲಿಯೂ ಎದುರಾಳಿಯನ್ನು ಬೆದರಿಸಿ ಅವರಿಂದ ಗೆಲುವನ್ನು ಕಸಿದುಕೊಳ್ಳಲು ಬಯಸುವವನು. ಅದನ್ನೇ ಸದ್ಯದ ತಂಡದ ಮೂಲ ಮಂತ್ರವನ್ನಾಗಿಸಿದ್ದಾನೆ ಕೊಹ್ಲಿ.ಸೋಲಿನ ಬಗ್ಗೆ ಕೊಹ್ಲಿ ಕ್ರಿಕೆಟ್ ನ ಯಾವ ಹಂತದಲ್ಲಿಯೂ ಎಂದಿಗೂ ಯೋಚಿಸುವುದೇ ಇಲ್ಲ.
ಕೊಹ್ಲಿಯ ಹವಾ ಎಲ್ಲಿಯವರೆಗೆ ಬಂದು ನಿಂತಿದೆ ಎಂದರೆ ಬಾಬರ್ ಅಜಂ ನನ್ನು ಒಬ್ಬನನ್ನೇ ಮುಂದಿಟ್ಟು ಕೊಹ್ಲಿಗಿಂತ ಬಾಬರೇ ಶ್ರೇಷ್ಠ ಆಟಗಾರ,ಬಾಬರ್ ನ ಟೆಕ್ನಿಕ್ ಚೆನ್ನಾಗಿದೆ, ಬಾಬರ್ ನಷ್ಟು ಸುಂದರವಾಗಿ ಕವರ್ ಡ್ರೈವ್ ಹೊಡೆಯುವವರು ವಿಶ್ವದಲ್ಲೇ ಇಲ್ಲ ಎಂದು ಹೇಳುತ್ತಿದ್ದ ಪಾಕಿಸ್ತಾನದ ಹಿರಿಯ ಆಟಗಾರರು ಇಂದು ಬಾಬರ್ ಎಂದಿಗೂ ಕೊಹ್ಲಿ ಪಾದದ ಧೂಳಿಗೂ ಸಮವಿಲ್ಲ ಎಂದು ಕೊಹ್ಲಿಯ ಗುಣಗಾನಕ್ಕೆ ನಿಂತಿದ್ದಾರೆ. ಡ್ಯಾನಿಶ್ ಕನೇರಿಯಾ, ಶೋಯಿಬ್ ಅಖ್ತರ್, ರಮೀಝ್ ರಾಜ, ಇನ್ಝಮಾಮುಲ್ ಹಕ್ ಮೊದಲಾದವರು ಟೀಮ್ ಇಂಡಿಯಾ ವನ್ನು ಹೊಗಳಿ ಅಟ್ಟಕ್ಕೇರಿಸಿ,ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ ಎಂದು ಪಾಕಿಸ್ತಾನದ ಸದ್ಯದ ಟೀಮ್ ಅನ್ನು ಹಿಗ್ಗಾ ಮುಗ್ಗಾ ಬೈದು,ಯು ಟ್ಯೂಬ್ ಚಾನೆಲ್ ಗಳಲ್ಲಿ ಅವರು ದುಡ್ಡು ಗಳಿಸುತ್ತಿರುವುದನ್ನು ನೋಡುವುದೇ ಒಂಥರಾ ಮಜಾ ಬಿಡಿ.ಅವರವರ ಹೊಟ್ಟೆ ಪಾಡು.ಒಟ್ಟಿನಲ್ಲಿ ಎಲ್ಲರಿಗೂ ಈಗ ಟೀಮ್ ಇಂಡಿಯಾದಂತೆ ಅವರ ಟೀಮು ಆಗಬೇಕು.
ಕೊಹ್ಲಿ ಬಗ್ಗೆ ಹೇಳುತ್ತಾ ಹೋದರೆ ಇನ್ನಷ್ಟು ಹೇಳಬಹುದು. ಸದ್ಯಕ್ಕೆ ರೋಹಿತ್ ಶರ್ಮ ಜೊತೆಗೆ ಕೊಹ್ಲಿ ಪ್ಲೇಯಿಂಗ್ ಲೆಜೆಂಡ್,ಲೀವಿಂಗ್ ಲೆಜೆಂಡ್ ಎಲ್ಲಾ ಕೂಡ ಹೌದು. ನೀವು ಐಪಿಎಲ್ ಕಾರಣಕ್ಕಾಗಿಯೋ,ಅಥವಾ ಹಿರಿಯ ಆಟಗಾರರಿಗೆ ಆತ ಗೇಟ್ ಪಾಸ್ ನೀಡಿದ ಎಂಬ ಕಾರಣಕ್ಕಾಗಿಯೋ,ಅನಿಲ್ ಕುಂಬ್ಳೆಯಂತ ಕೋಚ್ ನೊಂದಿಗೆ ಸರಿಯಾಗಿ ವರ್ತಿಸಿಲ್ಲ ಎಂಬ ಕಾರಣಕ್ಕಾಗಿಯೋ,ಟೂ ಮಚ್ Attitude, ಟೂ ಮಚ್ Aggressive ಎಂಬ ಇತ್ಯಾದಿ ಇತ್ಯಾದಿ ಕಾರಣಗಳಿಗಾಗಿಯೋ ಅವನನ್ನು ನೀವು ಅಷ್ಟೊಂದು ಇಷ್ಟ ಪಡದೇ ಇರಬಹುದು. ಆದರೆ ಟೀಮ್ ಇಂಡಿಯಾ ಎಂಬ ರಾಷ್ಟ್ರೀಯ ತಂಡದ ವಿಷಯ ಬಂದಾಗ ನೀವು ಅವನನ್ನು ಖಂಡಿತವಾಗಿಯೂ ಹೇಟ್ ಮಾಡಲಾರಿರಿ. ಏಕೆಂದರೆ ನೀವು ಒಪ್ಪುತ್ತಿರೋ ಬಿಡುತ್ತಿರೋ ಈ ಕ್ರಿಕೆಟ್ ಜಗತ್ತು ಅವನನ್ನು ಅದಾಗಲೇ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಒಪ್ಪಿಕೊಂಡಾಗಿದೆ.
ಹಿಟ್ ಮ್ಯಾನ್ ರೋಹಿತ್ ಶರ್ಮ ನನ್ನ ನೆಚ್ಚಿನ ಆಟಗಾರನಾಗಿದ್ದರೂ ಸಹ ನನಗೆ ಕೊಹ್ಲಿಯೂ ಅಷ್ಟೇ ಇಷ್ಟ.ಕೊಹ್ಲಿ ಬಗ್ಗೆ ಮಾತಾಡುವ ಅವಕಾಶ ಸಿಕ್ಕಾದಾಗ, ಹೊಗಳುವ ಸುಸಂದರ್ಭ ಬಂದಾಗ ಖಂಡಿತವಾಗಿಯೂ ಅದನ್ನು ನಾನೂ ಕೂಡ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಕೊಹ್ಲಿಯಂತಹ ಶ್ರೇಷ್ಠ ಆಟಗಾರನ ಆಟವನ್ನು ಸವಿಯುವ ಭಾಗ್ಯ, ಹಾಗೂ ನಮ್ಮೆಲ್ಲರ ಕಾಲದಲ್ಲಿಯೇ ಆತ ಆಡಿದ್ದ ಎಂದು ಹೇಳಿಕೊಳ್ಳುವುದು ನಮಗೊಂದು ಯಾವಾಗಲೂ ಹೆಮ್ಮೆ. ಹಿಂದಿನ ಹಿರಿಯರು ನಾವು ಸುನಿಲ್ ಗಾವಸ್ಕರ್ ಆಟ ನೋಡಿದ್ದೆವು,ಕಪಿಲ್ ದೇವ್ ಆಟ ನೋಡಿದ್ದೆವು ಗುಂಡಪ್ಪ ವಿಶ್ವನಾಥ್ ಆಟ ನೋಡಿದ್ದೆವು ಎಂದು ಖುಷಿ ಖುಷಿಯಾಗಿ ಹೇಳುತ್ತಾರೆ ಅಲ್ವಾ ಅದೇ ರೀತಿ ಈ ಪೀಳಿಗೆಗೆ ಕ್ರಿಕೆಟ್ ನ ಸವಿ ಸವಿ ನೆನಪುಗಳನ್ನು ಕಟ್ಟಿ ಕೊಡುತ್ತಿರುವವರಲ್ಲಿ ಒಬ್ಬ ಈ ವಿರಾಟ್.
ಕೊಹ್ಲಿ ಇನ್ನೂ ಆಡಲಿ.ಟೀಕೆ ಇದ್ದದ್ದೇ.ಅದನ್ನವನು ಕೇರ್ ಕೂಡ ಮಾಡುವುದಿಲ್ಲ.ನೀನು ಹೀಗೆ ಶಿಸ್ತಿನಿಂದ ಇರಬೇಕು ಎಂದವನಿಗೆ ಹೇಳಿಕೊಡಲು ಇನ್ನು ಅಂತು ಯಾರಿಂದಲೂ ಸಾಧ್ಯವಿಲ್ಲ.ಸದ್ಯದ ಪರಿಸ್ಥಿತಿಯಲ್ಲಿ ಗ್ರೌಂಡಿನ ನಡುವೆ ಕಾವೇರುವ ಯಾವುದೇ ವಾತಾವರಣದಲ್ಲಿ ಕೊಹ್ಲಿಯ ತುಪ್ಪ ಇದ್ದರಷ್ಟೇ ಬೆಂಕಿ ಅಲ್ಲಿ ಹೊತ್ತಿಕೊಂಡು ಧಗಧಗ ಎಂದು ಉರಿಯಲು ಸಾಧ್ಯ. ಏನೂ ಮಾಡಲೂ ಸಾಧ್ಯವಿಲ್ಲ, ಹೇಗೆ ರೋಹಿತ್ ಗೆ ಶಾರ್ಟ್ ಪಿಚ್ ಇಲ್ಲವೇ ಬೌನ್ಸರ್ ಎಸೆದಾಗ ಸಹಜವಾಗಿ ಫುಲ್ ಇಲ್ಲವೇ ಹುಕ್ ಬಾರಿಸಲು ಅವನು ಟೆಂಪ್ಟ್ ಆಗುತ್ತಾನೋ, ಅದೇ ರೀತಿ ಕೊಹ್ಲಿ ಎದುರು ಯಾರೇ ಒಂದೇ ಶಬ್ಧ ತುಟಿ ಬಿಚ್ಚಿದರೂ ಸಾಕು ಕೊಹ್ಲಿಗೂ ತಡೆದುಕೊಳ್ಳಲು ಎಂದಿಗೂ ಸಾಧ್ಯವಾಗದು.ಬಹುಶಃ ಈ ವಿಷಯದಲ್ಲಿ ಎದುರಾಳಿಗಳೇ ಸಂಯಮದಲ್ಲಿ ಇರುವುದು ಒಳ್ಳೆಯದು ಎಂದು ವಿಶ್ವ ಕ್ರಿಕೆಟ್ ಗೆ ಅರಿವಾಗಿ ಬಹಳ ಸಮಯಾಗಿದೆ.
ಕೊಹ್ಲಿ ಎಷ್ಟು ಗ್ರೇಟ್ ಬ್ಯಾಟ್ಸ್‌ಮ್ಯನೋ.. ಗ್ರೌಂಡಿನಲ್ಲಿ ಅಷ್ಟೇ ಬ್ಯಾಡ್ ಬಾಯ್ ಕೂಡ ಹೌದು.ಆದರೆ ಈ ಬ್ಯಾಡ್ ಬಾಯ್ ಇಷ್ಟವಾಗುತ್ತಾನೆಯೇ ಹೊರತು ಕಷ್ಟವಾಗುವುದಿಲ್ಲ.ಕಷ್ಟವಾಗುವುದು ಏನಿದ್ದರೂ ಎದುರಾಳಿ ತಂಡಗಳಿಗೆ ಅಷ್ಟೇ.
ಕಪಿಲ್ ದೇವ್ ಕಾಲ ನಾವು ನೋಡಿಲ್ಲ, ದಾದನ ಯುಗದ ಬಗ್ಗೆ ಗೊತ್ತು,ದೋನಿ ಎಂಬ ತಂಪು ಮನಸ್ಸಿನ ನಾಯಕ ವಿಶ್ವ ಕ್ರಿಕೆಟ್ ಆಳಿದ ಬಗೆ ಕೂಡ ಸದಾ ನೆನಪಿನಲ್ಲಿ ಉಳಿಯುತ್ತದೆ.ಆದರೆ ಅವರೆಲ್ಲರ ಸಾಲಿನಲ್ಲಿ ಈ ಕೊಹ್ಲಿ ನಿಲ್ಲದೇ ಭಿನ್ನವಾಗಿ ಗೋಚರಿಸುತ್ತಾನೆ. ಏಕೆಂದರೆ ಅವರಂತೆ ಇವನಿಲ್ಲ.ತಾನೇ ಬೇರೆ ತನ್ನ ಆಟವೇ ಬೇರೆ ಎಂದು ಮುನ್ನುಗುತ್ತಿರುವ ನಾಯಕ ಕೊಹ್ಲಿಯ ವಿರಾಟ ಪರ್ವದಲ್ಲಿ ಟೀಮ್ ಇಂಡಿಯಾ ಮಾಡಿದ ಸಾಧನೆಗಳ ಪಟ್ಟಿಯೇ ಬಹಳಷ್ಟು ದೊಡ್ಡದಿದೆ.ಅದು ಮತ್ತಷ್ಟು ಹಿಗುತ್ತಾ ಹೋಗಲಿ.
ನಿನಗೆ ಲಕ್ ಇಲ್ಲ ಎಂದು ಹೇಳುತ್ತಾರೆ ಕೊಹ್ಲಿ...ಅದು ಮುಂದೆ ಆದರೂ ಸುಳ್ಳಾಗಲಿ,ನಿನ್ನ ಹೆಸರಲ್ಲೂ ಒಂದಷ್ಟು ದೊಡ್ಡ ಹೆಸರಿನ ಕಪ್ ಗಳು ಬಿಸಿಸಿಐನ ಕಪಾಟಿನಲ್ಲಿ ಬೆಚ್ಚಗೆ ಬಂದು ಕುಳಿತುಕೊಂಡು ಬಿಡಲಿ...
.....................................................................................
#Cricket
Ab Pacchu
(https://phalgunikadeyavanu.blogspot.com)





Comments
Post a Comment