ಅಕ್ಕಿ ಪಾಯಸ




ನಿನ್ನೆ ದಿನಸಿ ಅಂಗಡಿಗೆ ಹೋಗಿದ್ದೆ.ಅಂಗಡಿಗೆ ಬಂದವರಲ್ಲಿ ಎರಡು ಮೂರು ಜನ ತೆಗೆದುಕೊಂಡು ಹೋದ ಸಾಮಾಗ್ರಿ ಗಳಲ್ಲಿ ಇದೆರಡು ಇತ್ತು.ಗಂಧಸಾಲೆ ಅಕ್ಕಿ ಮತ್ತು ಲವಂಗ.ಅವರುಗಳು  ಹೇಳದಿದ್ದರೂ ಏತಕ್ಕಾಗಿ ಎಂದು ನನಗೆ ಅದಾಗಲೇ ಅರ್ಥವಾಗಿತ್ತು ಬಿಟ್ಟಿತು.ಆದರೂ ಕುತೂಹಲ ತಡೆಯಲಾರದೇ ಅಂಗಡಿಯವರಲ್ಲಿಯೇ ಕೇಳಿದೆ.. ಇತ್ತೀಚೆಗೆ ಗಂಧಸಾಲೆ ಅಕ್ಕಿಯೇ ಜಾಸ್ತಿ ಹೋಗ್ತ ಇರ್ಬೇಕಲ್ಲಾ ಎಂದು.ಅವರು ಕೂಡ ನಗುತ್ತಾ.. ಹೌದು ಜೊತೆಗೆ ಲವಂಗ ಸಹ  ಅಂದು ಬಿಟ್ಟರು.


ಎಲ್ಲವೂ ನಮ್ಮೆಲ್ಲರ ನೆಚ್ಚಿನ "ಭಟ್ ಎಂಡ್ ಭಟ್" ಚಾನಲ್ ನ ಮಹಿಮೆ.ಈ ಎರಡು ಸಾಮಾಗ್ರಿಗಳ ಬಗ್ಗೆ ಹೇಳಿ ಆ ಸಿಹಿಯ ಬಗ್ಗೆ ಹೇಳದಿದ್ದರೆ ತಪ್ಪಾದೀತು.ಆ ರುಚಿಕರ ಪರಮಾನ್ನದ ಹೆಸರೇ ಅಕ್ಕಿ ಪಾಯಸ.ನಿಮಗೆ ರೆಸಿಪಿ ಬೇಕಿದ್ದರೆ ನೇರವಾಗಿ ಅವರ ಚಾನೆಲ್ ಗೆನೇ ಲಗ್ಗೆ ಇಟ್ಟರೆ ಆಯಿತು.ಹೆಚ್ಚಿನವರಿಗೆ ಅದಾಗಲೇ ಗೊತ್ತೇ ಇದೆ ಬಿಡಿ.ಅವರು ಅಡುಗೆ ಮಾಡುವ ಆ ಸಾಂಪ್ರದಾಯಿಕ ಕ್ರಮ ಮತ್ತು ಆ ಮಂಗಳೂರು ಕನ್ನಡದ ಸೊಬಗು ನಿಜಕ್ಕೂ ಬಹಳಷ್ಟು ಚಂದ.ನಾನೂ ಕೂಡ ಅವರ ಅಡುಗೆಗಳ ಅಭಿಮಾನಿಯೇ.ಈ ಸಿಹಿಯ ಬಗ್ಗೆಯೇ ಹೇಳಬೇಕೆಂದರೆ ಕಾಯಿಹಾಲು ಮತ್ತು ಬೆಲ್ಲದೊಂದಿಗೆ ಬೇಯುವ ಈ  ಘಮ್ಮೆನಿಸುವ ಗಂಧಸಾಲೆ ಅಕ್ಕಿಯ ಪಾಯಸದ ಮೇಲೆ ಕೊನೆಯಲ್ಲಿ ಒಂದಿಷ್ಟು ತುಪ್ಪದಲ್ಲಿ ಹುರಿದ ಲವಂಗ ಹಾಗೂ ಗೋಡಂಬಿ ಹಾಕಿ ಬಿಟ್ಟರೆ ದೇವಸ್ಥಾನದ ಆ ದಿವ್ಯ ಭಕ್ಷ್ಯವೊಂದು ನಿಮ್ಮ ಮನೆಯಲ್ಲಿಯೂ ಹಾಗೇ ಸಿದ್ಧವಾಗಿ ಬಿಡುವುದು. 


ಏನೇನೋ ತರಲು ಹೋದವನು ಈ ಪರಿಮಳದ ಅಕ್ಕಿಗೆ ಮರುಳಾಗಿ,ಮನಸ್ಸು ಬದಲಾಯಿಸಿ ಚೀಟಿಯಲ್ಲಿದ್ದ ಇನ್ನೊಂದು ಐಟಂ ಅನ್ನು ಹೊಡೆದು ಕ್ಯಾನ್ಸಲ್ ಮಾಡಿಸಿ.. ನನಗೂ ಒಂದು ಕೆಜಿ ಗಂಧಸಾಲೆ ಅಕ್ಕಿಯೇ ಇರಲಿ ಎಂದು ನಾನೂ ಸ ಇದನ್ನೇ ಕಟ್ಟಿಸಿಕೊಂಡು ಬಂದೆ.ಒಳ್ಳೆ ಕ್ವಾಲಿಟಿಯ ಒಂದು ಕೆ.ಜಿ ಅಕ್ಕಿಗೆ ಹೆಚ್ಚು ಕಡಿಮೆ ಭಾಸ್ಮತಿಯ ಬೆಲೆ ಉಂಟು.ಮನೆಯಲ್ಲಿ ಕೊಟ್ಟು ಕಳುಹಿಸಿದ ಚೀಟಿಯಲ್ಲಿ "ಶ್ಯಾವಿಗೆ - ಎರಡು ಪ್ಯಾಕೇಟು"ಎಂದು ಸ್ಪಷ್ಟವಾಗಿ ಬರೆದಿತ್ತು,ಹಾಗಾಗಿ ಮನೆಗೆ ಮರಳಿದಾಗ ಎಂದಿನಂತೆ ಶಂಖನಾದದೊಂದಿಗೆ ಮಂಗಳರಾತಿ ಜೋರಾಗಿಯೇ ಇತ್ತು... 


#ಅಕ್ಕಿ_ಪಾಯಸ 

ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ