ತಿಂದು ನೋಡಿದರೆ ರುಚಿ ಬಹಳ




ಇದೆರಡರ ಆಕಾರ,ಡಯಾಮೀಟರು ಹೆಚ್ಚು ಕಡಿಮೆ ಒಂದೇ.ಆದರೆ ಬಣ್ಣ ಹಾಗೂ ರುಚಿ ಮಾತ್ರ ಬೇರೆ ಬೇರೆ.ಹೆಸರು ಕೂಡ ಬೇರೆಯೇ.ಒಂದರ ಹೆಸರು "ಸಂಜೀರಾ" ಮತ್ತೊಂದರ ಹೆಸರು "ಬಿಸ್ಕುಟ್ಟ್ ರೊಟ್ಟಿ".


ಅದು ಜಾಸ್ತಿ ಎಲ್ಲೋ ಕಲರ್ ಇದೆ ನೋಡಿ ಅದರ ಸ್ವೀಟ್ ನೇಮ್   ಸಂಜೀರಾ,ಮತ್ತೊಂದು ಸ್ವಲ್ಪ ಬ್ರೌನು ಕಲರಿನಲ್ಲಿ ಉಂಟಲ್ಲಾ ಅದರ ಪೇರು ಬಿಸ್ಕುಟ್ಟ್ ರೊಟ್ಟಿ.


ಸಂಜೀರಾ ಹೆಚ್ಚಾಗಿ ಸಿಹಿ ಇರುತ್ತದೆ.ಬಿಸ್ಕುಟ್ಟ್ ರೊಟ್ಟಿಯಲ್ಲಿ ಬೇರೆಯೇ ತರಹದ ಮಸಾಲೆ ಇದ್ದರೂ ಅದು ಅಷ್ಟೊಂದು ಸಿಹಿಯಲ್ಲ, ಹಾಗಂದ ಮಾತ್ರಕ್ಕೆ ಅದು ಅಷ್ಟೊಂದು ಖಾರ ಕೂಡ ಅಲ್ಲ.


ಸಂಜೀರಾಕ್ಕೆ ಕೆಲವರು ಸ್ವೀಟ್ ಪೂರಿ,ಸಿಹಿ ಪೂರಿ ಎಂದೆಲ್ಲ ಹೇಳುವುದಿದೆ.ಆದರೆ ಎಲ್ಲಿಯ ಪೂರಿ,ಎಲ್ಲಿಯ ಸಂಜೀರಾ? ಪೂರಿಯ ತರಹ ಲಟ್ಟಿಸುತ್ತಾರೆ,ಬಿಸಿ ಎಣ್ಣೆಯಲ್ಲಿ ಕರಿದು ಅದರ ಹೊಟ್ಟೆಯುಬ್ಬಿಸಿ ತೆಗೆಯುತ್ತಾರೆ ಎಂಬುದು ಬಿಟ್ಟರೆ ಅಂತಹ ಯಾವುದೇ ಸಾಮ್ಯತೆ ಈ ಎರಡೂ ತಿಂಡಿಗೂ ಇಲ್ಲ.


ಸಂಜೀರಾ ಹಾಗೂ ಬಿಸ್ಕುಟ್ಟ್ ರೊಟ್ಟಿ ಎರಡೂ ಸಿಕ್ಕಾಪಟ್ಟೆ ಕ್ರಿಸ್ಪಿ. "Fragile, Handle with Care" ತರಹದ ತಿಂಡಿಗಳು ಇವು. ಮೆಲ್ಲಗೆ ಉಬ್ಬಿದ ಹೊಟ್ಟೆಗೆ ಪಟ್ಟನೆ ಎರಡೆಟು ಕೊಟ್ಟರೆ ಹಾಗೇ ಪುಡಿ ಪುಡಿಯಾಗಿ ಬಿಡುವುದು.



ತುಪ್ಪದಲ್ಲಿ ಹುರಿದ ಕಾಯಿತುರಿ,ಸಕ್ಕರೆ,ರವೆ ಸಂಜೀರಾದ ಒಳಗೊಡೆಯಲ್ಲಿ ಹರಡಿಕೊಂಡು ಹಾಗೇ ಕಚ್ಚಿಕೊಂಡು ತಿನ್ನುವಾಗ ಬಹಳಷ್ಟು ಸಿಹಿ ರುಚಿ ಕೊಡುತ್ತದೆ.ಸಂಜೀರಾದಲ್ಲಿ ಕನಿಷ್ಟ ಪಕ್ಷ "ಜೀರಾ" ಆದರೂ ಇದೆಯಾ ಕೇಳಿದರೆ ಖಂಡಿತವಾಗಿಯೂ ಜೀರಿಗೆ ಇದರಲ್ಲಿ ಇಲ್ಲ. 



ಸಂಜೀರಾಕ್ಕೆ "ಸಂಜೀರಾ" ಎಂಬ ಹೆಸರು ಹೇಗೆ ಬಂತು ಎಂಬ ನನ್ನ ಬಾಲ್ಯದ ಜಿಜ್ಞಾಸೆಯ ಪ್ರಶ್ನೆಗೆ ಚಿಕ್ಕಂದಿನಲ್ಲಿ ಒಬ್ಬ ಅಣ್ಣ ನನಗೆ ಈ ಕಥೆ ಹೇಳಿದ್ದ.. " ಈ ಸಂಜೀರಾ ವನ್ನು ಸಂಜೀವಣ್ಣ ಅಂತ ಒಬ್ಬರು ಮೊದಲಿಗೆ ಮಾಡಿದ್ದಂತೆ, ಹಾಗೆ ಅವರ ಗೌರವಾರ್ಥವಾಗಿ ಅವರ  ಹೆಸರನ್ನು ಅರ್ಧ ತುಂಡರಿಸಿ ಇದಕ್ಕೆ ಇಡಲಾಯಿತಂತೆ.." ಹಾಗಾದರೆ" ರಾ" ಎಲ್ಲಿಂದ ಬಂದದ್ದು ಅಣ್ಣ ಎಂದು ಕುತೂಹಲದಿಂದ ಕೇಳಿದ್ದಕ್ಕೆ "ಅದು...ಅದು..ರವೆಯಲ್ಲಿ ಇರುವ' ರ'ವನ್ನು Add ಮಾಡಿ ಎಲ್ಲಾ..ಮುಂದೆ ಯುಗಗಳು ಉರುಳಿದಂತೆ.. . ರ ಎನ್ನುವುದು ಹೋಗಿ 'ರಾ' ಆಗಿ.. " ಎಂದೆಲ್ಲ ಕಥೆ ಕಟ್ಟಿದ್ದ ಅವನು.ಇದು ಒಂದು ರೀತಿಯಲ್ಲಿ ಕಬಾಬು ವಿನಲ್ಲಿರುವ ಅನಾಮಿಕ ಬಾಬುವಿನ ಕಥೆ.ನಮ್ಮ ಕಡೆಯ ಪುಟ್ಟ ಪುಟ್ಟ ಮುಗ್ಧ ಮಕ್ಕಳಿಗೆ ನಾನು ಈ ಕಥೆ ಹೇಳಿ "ಮೊದಲಿಗೆ ಕಬಾಬ್ ಅನ್ನು ಬಾಬು ಎಂಬುವವರು ಮಾಡಿದ್ದು,ಹಾಗಾಗಿ ಅವರ ಸ್ಮರಣಾರ್ಥ.... "ಎಂದೆಲ್ಲ ಹೇಳಿ ಅವರಿಗೆ ಚಕಿತಗೊಳಿಸುತ್ತೇನೆ.

ಇದಕ್ಕೆಲ್ಲ ಸ್ಪೂರ್ತಿ ನನಗೂ ಇಂತಹದ್ದೇ ಕಥೆಗಳನ್ನು ಹೇಳಿ ನನ್ನನ್ನು ಇನ್ನಿಲ್ಲದಂತೆ ನಂಬಿಸಿದ ಅಣ್ಣಂದಿರೇ ಎಂದಿಗೂ ಆಗಿದ್ದಾರೆ.


ಆದರೆ ನಿಜವಾಗಿಯೂ ಹಲವಾರು ತಿಂಡಿಗಳಿಗೆ ಅದರದ್ದೇ ಆದ ಒಂದು ರುಚಿಕರ ಕಥೆ,ಅದು ಆಕಸ್ಮಿಕವಾಗಿ ಹುಟ್ಟಿಕೊಂಡ ಬಗೆ ಹಾಗೇ ಕೆಲವೊಂದಷ್ಟು ಕಟ್ಟು ಕಥೆಗಳು ಕೂಡ ಖಂಡಿತವಾಗಿಯೂ ಇದೆ. ಕೆಲವೊಂದಷ್ಟನ್ನು ನಾವು ಕೆದಕುತ್ತಾ ಹೋದಂತೆ ಅದರಲ್ಲೂ ಮೆಲುಕು ಹಾಕಿಕೊಳ್ಳಲು ಒಂದಷ್ಟು ಸ್ವಾರಸ್ಯಕರ ಸಂಗತಿಗಳಿವೆ. 




ಇನ್ನು ಬಿಸ್ಕುಟ್ಟ್ ರೊಟ್ಟಿಯಲ್ಲಿರುವ ಬಿಸ್ಕುಟ್ಟ್ ಆಂಗ್ಲರ ಆ  ಬಿಸ್ಕೇಟ್ ಅಲ್ಲವಾ ಎಂದು ಕೇಳಿದರೆ ಖಂಡಿತವಾಗಿಯೂ ಇದು ಅದೇ.. ಆದರೆ ನಾವು ಹಾಗೆ ಎಲ್ಲ ಹೇಳುವುದಿಲ್ಲ,ಬಿಸ್ಕೇಟ್" ಬಿಸ್ಕುಟ್ಟ್" ಆಗುವುದು ಆ್ಯಪಲ್ ಒಂದು "ಎಪ್ಪುಲು" ಆಗುವ ಬಗೆಯಲ್ಲಿ,ಈ ರೀತಿಯ ಹೆಸರುಗಳಲ್ಲಿ ನಮ್ಮೂರಿನ ಪ್ಲೇವರ್ ಕೂಡ ಸಾಕಷ್ಟು ಇದೆ.ಅಪಭ್ರಂಶ ಎಂದು ಗೊತ್ತಿದ್ದರೂ ನಾನಂತು ಹಿಂದೆ ಮುಂದೆ ಯೋಚಿಸದೇ ಹೀಗೇ ಹೇಳುವುದು,ಆಗಷ್ಟೇ ಅದು ತೀರಾ ನಮ್ಮದು ಎಂದು ಅನಿಸುವುದು.ಏನೇ ಹೇಳಿ ತಿಳಿದು ತಿಳಿದು ಸರಿಯಾಗಿ ಹೇಳುವುದಕ್ಕಿಂತಲೂ ನಮ್ಮವರೊಂದಿಗೆ ನಮ್ಮದೇ ಆದ ಸ್ಲ್ಯಾಂಗ್ ನಲ್ಲಿ ಮಾತಾನಾಡುವುದರಲ್ಲಿಯೇ ಹೆಚ್ಚಿನ ಮಜಾ ಇರುವುದು. ಅದಕ್ಕಾಗಿ ನೀವು ಮನೆಯ- ಊರಿನ ಹಿರಿಯರೊಂದಿಗೆ, ಹೋಟೆಲ್ ನಲ್ಲಿ ಕೆಲಸ ಮಾಡುವವರೊಂದಿಗೆ,ಮೀನು ಮಾರುವ ತಾಯಂದಿರೊಂದಿಗೆ, ಬಸ್ಸು ಕ್ಲೀನರ್, ಕಂಡಕ್ಟರ್, ಡ್ರೈವರ್ ಗಳೊಂದಿಗೆ ಒಂದಷ್ಟು ಕುಶಾಲಿನ ಮಾತಿಗಿಳಿಯಬೇಕು. 


ಹೀಗೆ ಆಂಗ್ಲರ ಬಹಳಷ್ಟು ಪದಗಳನ್ನು ನಾವು ಅದಾಗಲೇ ಞಂಕ್ಕೆ(ನಜ್ಜುಗುಜ್ಜು)ಮಾಡಿ ನಮಗೆ ಸ್ವಾತಂತ್ರ್ಯ ಕೊಡಲು ಕಂಡಾಬಟ್ಟೆ ಲೇಟ್ ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸಿದ್ದೇವೆ ಅನ್ನತಕ್ಕಂತಹ ಮಾತನ್ನು ಈ ಸಂದರ್ಭದಲ್ಲಿ ನಾನು ಹೇಳಲು ಇಚ್ಛಿಸುತ್ತೇನೆ ಬಂಧುಗಳೇ.. ಹೇಳಲು ಇಚ್ಛಿಸುತ್ತೇನೆ. 


ಬಿಸ್ಕುಟ್ಟ್ ನಿಂದಲೇ ಗುರುತಿಸಿಕೊಂಡಿರುವ ಇನ್ನೊಂದು ತಿಂಡಿಯೂ ಕೂಡ ನಮ್ಮಲ್ಲಿ ಉಂಟು.ಅದು ಬಿಸ್ಕುಟ್ಟಂಬಡೆ. ಅಂದರೆ ಬಿಸ್ಕುಟ್ಟ್ + ಅಂಬಡೆ. ಬಟಾಟೆ ಅಂಬಡೆಯ ಮೆಗ್ಗೆ, ಕನ್ನಡದ ಬೊಂಡದ ಸಹೋದರ. ಬಿಸ್ಕುಟ್ಟಂಬಡೆಯ  ಹೊಟ್ಟೆಯೊಳಗೆ ಏನೂ ಇರುವುದಿಲ್ಲ.ಅದೇ ಉದ್ದಿನ ವಡೆಯದ್ದೇ ಇಂಗ್ರಿಡಿಯೆಂಟ್ಸ್.ಸಣ್ಣ ಬಾಲಿನಂತೆ ರೌಂಡ್ ಮಾಡಿ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆದರೆ ಅದು ಬಿಸ್ಕುಟ್ಟಂಬಡೆ, ಅದನ್ನೇ ಚಟ್ಟೆ ಮಾಡಿ ನಡುವಿನಲ್ಲಿ ಒಂದು ಒಟ್ಟೆ ಮಾಡಿ ಎಣ್ಣೆಯಲ್ಲಿ ಕರಿದು ತೆಗೆದರೆ ಆಗ ಅದು ಇಡ್ಲಿಯ ಆಲ್ ಟೈಮ್ ಫೇವರೆಟ್ ಸಂಗಾತಿ ಉದ್ದಿನ ವಡೆ A.k.a ಮೆದು ವಡೆಯಾಗುವುದು.


ನನಗೆ ಮೊದ ಮೊದಲು ಈ ಉದ್ದಿನ ವಡೆಗೆ ಆ ತೂತು ಹೇಗೆ ಬರಿಸುತ್ತಾರೆ ಎನ್ನುವುದೇ ಬಹಳ ದೊಡ್ಡ ಕೌತುಕದ ಪ್ರಶ್ನೆಯಾಗಿತ್ತು.ಹಿಂದೆ ತುಳುನಾಡಿನ ಮನೆಗಳಲ್ಲಿ ಹೆಚ್ಚಾಗಿ ಉದ್ದಿನ ವಡೆ ಎಲ್ಲಾ ಮಾಡುವುದು ಬಹಳಷ್ಟು ಅಪರೂಪವೇ,ಅವೆಲ್ಲವೂ ಹೋಟೆಲ್ ತಿಂಡಿಗಳು.ಹಾಗಾಗಿ ಅದೊಂದು ಬಹಳ ವರ್ಷಗಳವರೆಗೆ ನನಗೆ ರಹಸ್ಯವಾಗಿಯೇ ಉಳಿದಿತ್ತು..ಅದು ಹೇಗೆ ಮಾಡುತ್ತಾರೆ.. ಅದು ಹೇಗೆ ಮಾಡುತ್ತಾರೆ.. ಎಂದೆಲ್ಲ ಬಹಳಷ್ಟು ಕಾಡಿತ್ತು.ಹಾಗಾಗಿ ಹೋಟೆಲ್ಗೆ ಎಲ್ಲಾ ಹೋದರೆ ಅಲ್ಲಿ ಉದ್ದಿನವಡೆ ಮಾಡುತ್ತಿದ್ದರೆ ನನ್ನ ಕಣ್ಣು ರಪ್ಪನೇ ಒಂದೆರಡು ಮಿಂಟ್ ಅಲ್ಲೇ ಕೇಂದ್ರಿಕೃತವಾಗಿರುತ್ತಿತ್ತು..ಈ ಅಣ್ಣನವರು ಹೇಗೆ ಇದಕ್ಕೆ ಆ ಶೇಪು ಕೊಡುತ್ತಾರೆ ಎಂದು. ಹೈಸ್ಕೂಲ್ ದಾಟಿದ ನಂತರವೇ ನನಗೆ ಅದರ ಅಸಲಿ ಕೈಚಳಕ ಗೊತ್ತಾಗಿದ್ದು.ಅಂದ ಹಾಗೆ 'ಮಿಂಟ್' ಎಂದರೆ  ಪುದೀನಾ ಅಲ್ಲ ಆಯ್ತಾ. ಆಂಗ್ಲರ ಮಿನಿಟ್ ನಮ್ಮಲ್ಲಿ "ಒಂಜಿ ಮಿಂಟ್" ಆಗಿ ಒಂದು ನಿಮಿಷದ ಮಟ್ಟಿಗೆ  ಯಾವುದಾದರೂ ಕಾರ್ಯ ಮಾಡಲು ಇಲ್ಲವೇ ಯೋಚಿಸಲು ನಮ್ಮ ಎದುರಿರುವವರಿಂದ ಕಾಲಾವಕಾಶವನ್ನು ಪಡೆದುಕೊಳ್ಳುವ ಒಂದು ವಿಶಿಷ್ಟ ಹಾಗೂ ಅನನ್ಯ ಬಗೆ.


ಸ್ವಲ್ಪ ಮೆಣಸಿನ ಹುಡಿ,ರವೆ, ಬೇವುರೆ, ಕಾಯಿತುರಿ ಈ ಬಿಸ್ಕುಟ್ಟ್ ರೊಟ್ಟಿಯ ಒಳಗೋಡೆಗೆ ಸದಾ ಕಚ್ಚಿಕೊಂಡು ಇರುತ್ತದೆ .ಅಂತಹ ಖಾರ ಏನೂ ಇರುವುದಿಲ್ಲ.ಚಾ ಕಾಫಿಯ ಬಾಯಿಗೆ ಕರುಕುರು ಇಲ್ಲವೇ ಕುರುಕುರು ಮಾಡಿಕೊಂಡು ತಿನ್ನಬಹುದು. ಈ ಎರಡೂ ತಿಂಡಿಗಳು ಕೂಡ ಸಾಂಬಾರ್ ಗಾಗಲಿ ಚಟ್ನಿಗಾಗಿ ಒಂದು ಚೂರೂ ಅಂಗಲಾಚುವುದಿಲ್ಲ.ಹಾಗೇ ಮುರಿದುಕೊಂಡು ತಿನ್ನಬಹುದು. 



ಹಿಂದೆ ಕೇವಲ ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಇರುತ್ತಿದ್ದ ಇದು ಈಗ ಬೇಕರಿಗೂ ಬಂದಿದೆ.ಅದರಲ್ಲೂ ದೊಡ್ಡ ಬೇಕರಿಗಿಂತಲೂ  ಹೆಚ್ಚಾಗಿ ಹಳ್ಳಿಯ ಸಣ್ಣಪುಟ್ಟ ಬೇಕರಿ, ಗೂಡಂಗಡಿಗಳ ಕಪಾಟಿನಲ್ಲಿ ಇದು ತನ್ನದೊಂದು ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ.


ನನಗೆ ದೊಡ್ಡ ಬೇಕರಿಗಳ ಮೊಟ್ಟೆ ಪಪ್ಸು,ಸಮೋಸ, ಕ್ಯಾಪ್ಸಿಕಂ ಬರ್ಗರ್, ಸ್ಯಾಂಡ್ವಿಚ್,ಈ ಕ್ರೀಮ್ ಬನ್ನಿಗಿಂತಲೂ ನಮ್ಮ ಕಡೆಯ ಗೂಡಂಗಡಿಗಳಲ್ಲಿ ಸಿಗುವ ನೈ ಅಪ್ಪ, ಕಲ್ತಪ್ಪ, ಸಜ್ಜಿಗೆರೊಟ್ಟಿ,ಚಟ್ಟಂಬಡೆ,ಬಿಸ್ಕುಟ್ಟಂಬಡೆ,ಜಾಂಬು,ಬನ್ಸ್,ಸಂಜೀರಾ, ಬಿಸ್ಕುಟ್ಟ್ ರೊಟ್ಟಿಗಳೇ ಹೆಚ್ಚು ಇಷ್ಟ.ಕಚ್ಚಿಕೊಂಡು ತಿನ್ನುವಾಗ ಕುಡಿಯಲು ಸ್ಥಳೀಯ ತಂಪು ಪಾನೀಯಗಳಾದ ಪುನರ್ಪುಳಿ,ಎಳ್ಳು, ಚಿಪ್ಪಡ್, ಬೊಂಡ ಶರಬತ್ತು,ಇಸುಬುಕೋಲ್ ಇತ್ಯಾದಿ ಇತ್ಯಾದಿ ಇದ್ದರೆ ಅದು ಚಂದ .


ಇವೆಲ್ಲ ದೊಡ್ಡ ಬೇಕರಿಗಳಲ್ಲಿ ಸಿಗುವುದಿಲ್ಲ.ಹುಡುಕುತ್ತಾ ಹೋದರೆ ಗೂಡಂಗಡಿಗಳಲ್ಲಿ ಸಿಗುತ್ತದೆ.ಹಿಂದೆ ಎಲ್ಲಾ ಸಂಜೆ ವೇಳೆಗೆ ಆಮ್ಲೇಟು, ಬ್ರೆಡ್ ಆಮ್ಲೇಟು,ಹಾಫ್ ಬಾಯಿಲ್ಡು, ಬೇಯಿಸಿದ ಮೊಟ್ಟೆ, ಬಿಸಿ ಬಿಸಿ ಟೀ.. ಇವುಗಳಿಗೆ ಅಷ್ಟಕ್ಕೆ ಸೀಮಿತವಾಗಿದ್ದ ಗೂಡಂಗಡಿಗಳು ಈಗ ತುಳುನಾಡಿನ ಅಪರೂಪದ ತಿಂಡಿಗಳನ್ನು ಕೂಡ ತಮ್ಮದೊಂದು ಕಪಾಟಿನಲ್ಲಿ ಇರಿಸಲು ಹಾಗೇ ಮೆರೆಸಲು ಕೂಡ ಮನಸ್ಸು ಮಾಡಿವೆ.


ರುಚಿ ಹಾಗೂ ಪರಿಶುದ್ಧತೆಯಲ್ಲೂ ಕೂಡ ಅಂತಹ ರಾಜಿ ಏನಿಲ್ಲ. ಬಹಳಷ್ಟು ಚೆನ್ನಾಗಿದೆ.ಹೆಚ್ಚಾಗಿ ಮನೆಯಿಂದಲೇ ಮಾಡಿ ತರುವುದು ಇಲ್ಲವೇ ಇದನ್ನೇ ಸಣ್ಣ ಉದ್ದಿಮೆ ಮಾಡಿಕೊಂಡಿರುವವರು ಇಂತಹ ಗೂಡಂಗಡಿಗಳಿಗೆ,ನಗರದ ಸಣ್ಣ ಪುಟ್ಟ ಬೇಕರಿಗಳಿಗೆ ಈ ತಿಂಡಿಗಳನ್ನು ತಮ್ಮ ತಮ್ಮ ಮನೆಯಲ್ಲಿಯೇ ಮಾಡಿ ಸಪ್ಲೈ ಮಾಡುತ್ತಾರೆ.ಈ ನೀರ್ದೋಸೆ, ಆಪಂ,ಒತ್ತು ಶ್ಯಾವಿಗೆಯನ್ನು ಬೇಕಾದವರಿಗೆ  ಪೂರೈಸುವಂತೆ ಇದೂ ಕೂಡ ನಮ್ಮಲ್ಲಿ ಸಣ್ಣ ಮಟ್ಟದ ಒಂದು ಬ್ಯುಸಿನೆಸ್ ಆಗಿದೆ ಈಗ.ನೋಡಿ ನಮ್ಮೂರ ತಿಂಡಿಗಳು ಕೂಡ ಇಂದಿನ ದಿನಗಳಲ್ಲಿ ಹೇಗೆ ಬದುಕಿ ಕಟ್ಟಿ ಕೊಡಬಲ್ಲವು ಅಲ್ಲವೇ.ಹಾಗಾಗಿ ಇವುಗಳಿಗೂ ಧನ್ಯವಾದ ಹೇಳಲೇ ಬೇಕಲ್ಲ ನಾವು. ಧನ್ಯವಾದ ಹೇಳದಿದ್ದರೂ ಪರವಾಗಿಲ್ಲ,ಇಂತಹದ್ದು ಕಂಡಾಗ ಸವಿಯುವ ಮನಸ್ಸು ಮಾಡಬೇಕು ನಾವುಗಳು ಅಷ್ಟೇ.ಇದರ ಹಿಂದಿರುವ ಒಂದಷ್ಟು ಕೈಗಳು ಬಿಸಿಯಾದರೆ ಅವರ ಮನೆಯೂ ಒಂದಷ್ಟು ಬೆಚ್ಚಗೆ ಖಂಡಿತವಾಗಿಯೂ ಇರಬಹುದು.


ಸಿಟಿಯಲ್ಲೂ ಕೆಲವೊಂದು ಅಂಗಡಿಗಳಲ್ಲಿ ತುಳುನಾಡಿನ ತಿಂಡಿಗಳು ಇತ್ತೀಚಿನ ದಿನಗಳಲ್ಲಿ ರಾರಾಜಿಸಿವೆ. ಅದು ಪೆಲಕಾಯಿ ಗಟ್ಟಿ, ಮಂಜಲ್ದ ಇರೆತ ಗಟ್ಟಿ,ಪತ್ರೋಡೆ,ಅರೆಪು ಪುಂಡಿ, ಮೂಡೆ, ಗುಂಡ, ಕೊಟ್ಟೆ ಇತ್ಯಾದಿ ಇತ್ಯಾದಿ. ಅಲ್ಲೇ ಪ್ಲೇಟಿನಲ್ಲಿ ಹಾಕಿ ತಿನ್ನಲು ಕೂಡ ಕೊಡುತ್ತಾರೆ.ಅದೇ ರೀತಿ ಪಾರ್ಸೆಲ್ ಬೇಕಿದ್ದರೆ ಕಟ್ಟಿ ಕೂಡ ಕೊಡುತ್ತಾರೆ. ಒಂದೇ ಬೇಜಾರು ಎಂದರೆ ಗೂಡಂಗಡಿಗಳಿಗಿಂತ ದುಪ್ಪಟ್ಟು ಬೆಲೆ ಇವುಗಳಿಗೆ ಅಲ್ಲಿ.


ಮೊನ್ನೆ ಒಂದು ಕಡೆ  ನಮ್ಮ ಮಂಗಳೂರು ಅಲ್ಲಿಯೇ ಇವುಗಳನ್ನು ನೋಡಿ, ಒಂದು ಪತ್ರೋಡೆಗೆ ಎಷ್ಟು ಎಂದು ಕೇಳಿದೆ."ಇಪ್ಪತ್ತು ರೂಪಾಯಿ " ಎಂದು ಹೇಳಿದರು,ಜಸ್ಟ್ ಒಂದು ಪತ್ರೋಡೆಗೆ. ಆಮೇಲೆ ಮೂಡೆಗೆ ಎಷ್ಟು ರೇಟು  ಎಂದು ಕೇಳುವ ಸಾಹಸವೇ ಮಾಡಲಿಲ್ಲ ನಾನು, ಖಂಡಿತವಾಗಿಯೂ ಅದಕ್ಕಿಂತ ಜಾಸ್ತಿಯೇ ಇರುತ್ತದೆ ಬಿಡಿ. ನಾನೇದರೂ ಆಸೆಯಿಂದ ಆ ಪತ್ರೋಡೆ ಮನೆಗೆ ತಗೊಂಡು ಹೋಗಿದ್ದರೆ " ಮುಲ್ಪನೇ ರಾಸಿ ಸೇವುದ ಇರೆತ ಕುರಿಯೊಂದು ಉಂಡು... ಎರ್ನ ತಿಗಲೆಗ್ ದೀಯರೆ ಆವ್ವು,ಆಂಡತಾ.. ದರ್ಮೋಗು ಇರ್ವ ರೂಪಾಯಿ ಆ ಅಂಗಡಿದಾಯನ ಕಾಣಿಕೆ ಡಬ್ಬಿಗ್ ಪಾರ್ದ್ ಬತ್ತ ಅತ( ಪುತ್ರ.. ಕೇಳಿದರೆ ಎಷ್ಟು ಬೇಕೋ ಅಷ್ಟು ಪತ್ರೋಡೆ ಗಳನ್ನು  ನಾನೇ ಮಾಡಿ ನಿನ್ನ ಮುಂದೆ ಹಾಗೇ ಗುಡ್ಡೆ ಹಾಕುತ್ತಿದ್ದೇನು ಅಲ್ಲವೇ..)" ಎಂಬ ಸಿಹಿಯಾದ ಸವಿಯಾದ ಜೇನಿನಂತಹ ಹಿತವಚಗಳನ್ನು ಹೇಳುತ್ತಿದ್ದರು ಎನ್ನುವುದರಲ್ಲಿ ನನಗಂತು ಯಾವುದೇ ಸಂಶಯವಿಲ್ಲ ಬಂಧುಗಳೇ... ಯಾವುದೇ ಸಂಶಯವಿಲ್ಲ. 


ಆದರೂ ಸಿಟಿಯ ಜನ ದೊಡ್ಡ ಅಂಗಡಿಗಳಲ್ಲಿ ಈ ತಿಂಡಿಗಳಿಗೆ ಎಷ್ಟೇ ಹಣವಿದ್ದರೂ ಇಷ್ಟ ಪಟ್ಟು ಅವುಗಳನ್ನು ಅಲ್ಲೇ ತಿಂದೋ ಇಲ್ಲವೇ ಪಾರ್ಸೇಲ್ ಕಟ್ಟಿಕೊಂಡು ಹೋಗುತ್ತಾರೆ.ಎಲ್ಲವೂ ಅವರವರ ರುಚಿ, ಅಭಿರುಚಿ ಹಾಗೂ ಸಾಮರ್ಥ್ಯ. ಆದರೆ ದೊಡ್ಡ ಹೋಟೆಲ್, ದೊಡ್ಡ ಬೇಕರಿಗಳಲ್ಲಿ ಅಷ್ಟೇ ರುಚಿಯಾಗಿರುವುದು ಸಿಗುವುದು ಎನ್ನುವುದು ಒಂದು ದೊಡ್ಡ ತಪ್ಪು ಕಲ್ಪನೆ. ಎಲ್ಲಕ್ಕಿಂತ ಹೆಚ್ಚಾಗಿ ಅಳಿವಿನಂಚಿಗೆ (ಕೆಲವು ಮನೆಗಳಲ್ಲಿ ಅಷ್ಟೇ ಮಾಡುವುದು ಹಾಗಾಗಿ) ಸರಿದಿರುವ ಕೆಲವು ಅಪರೂಪದ ತಿಂಡಿಗಳಿಗೆ ನೀವು ಸಣ್ಣಪುಟ್ಟ ಹೋಟೆಲ್ ಇಲ್ಲವೇ ಗೂಡಂಗಡಿಗಳಿಗೆನೇ ಎಡತಾಕಬೇಕಾಗುತ್ತದೆ.ಒಮ್ಮೆಯಾದರೂ ತಿನ್ನಬೇಕು, ತಿಂದು ನೋಡಿದರೆ ಖಂಡಿತವಾಗಿಯೂ ರುಚಿ ಬಹಳ. 



ಕೋಕ್, ಪೆಪ್ಸಿ,ಆನಿಯನ್ ಸಮೋಸಾ, ಮೊಟ್ಟೆ ಪಪ್ಸು, ಬರ್ಗರ್, ಸ್ಯಾಂಡ್ವಿಚ್ ಯಾವಾಗಲೂ ಇದ್ದದ್ದೇ ಬಿಡಿ.ನಮ್ಮ ಘಮದ್ದೇ ತಿನ್ನುವುದರಲ್ಲಿ ರುಚಿಯ ಜೊತೆಗೆ ಸುಖವಿದೆ..ಅದರ ಜೊತೆಗೆ ಒಂದಷ್ಟು ಅಗೋಚರ ಜನರ ಬಾಳಿನ ಸುಖವೂ ಇದೆ. 


.....................................................................................


#ಏನೋ_ಒಂದು 

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..