ಮೋಡ ಕವಿದ ವಾತಾವರಣ




ಆಂಗ್ಲರ ಅಂಗಣದಲ್ಲಿ ಕಾಣಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಸದ್ಯಕ್ಕೆ ಒಂದಷ್ಟು ಆತಂಕದ ಮೋಡಗಳು ಆಂಗ್ಲರ ಮನದಂಗಣದಲ್ಲಿಯೇ ಹಾಗೇ ಸಂತೆ ಸೇರಿ ಬಿಟ್ಟಿವೆ.


ಒಂದು, ಎರಡು ಮುಗಿದು ಇದು ಮೂರನೆಯದ್ದು.


ಅದೃಷ್ಟ ಕೈ ಹಿಡಿದಿದ್ದರೆ,ವರುಣ ಮತ್ತು ಸೂರ್ಯನಾರಾಯಣ ದೇವರ ಕೃಪೆಯೂ ಅಷ್ಟೇ ಇದ್ದಿದ್ದರೆ ಮೊದಲ ಪಂದ್ಯದ ಮೇಲೂ ಅದು ನಮ್ಮದೇ ಎನ್ನುವ ಒಂದು ಶಾಶ್ವತ ರುಜು ಇರುತ್ತಿತ್ತು.


ಹಂಚಿಕೊಂಡ ರೊಟ್ಟಿ ರುಚಿ ಹೌದು,ಅದು ಹಸಿವು ನೀಗಿಸುವ  ಸುಖವೂ ಹೌದು.ಆದರೆ ಪಂದ್ಯದ ಅಂಕ ಒಂದು ಹರಿದು ಹಂಚಿ ಹೋಗುವುದರಲ್ಲಿ ಗೆಲ್ಲಬಹುದಾದ ತಂಡಕ್ಕೆ ಎಲ್ಲಿಯ ಸುಖ. ಒಂದಿಷ್ಟು ಸಿಕ್ಕಾಪಟ್ಟೆ ಬೇಜಾರುಗಳಿಗೆ ಮುಂದೆ ಗೆಲುವು ದಕ್ಕಿದರಷ್ಟೇ ಮನಸ್ಸಿಗೊಂದಿಷ್ಟು ಹಾಯೆನಿಸುವ ಹಿತ.


ಕ್ರಿಕೆಟ್ ಕಾಶಿ ಬರೀ ನಗುವಿನ ಹೂ ಅರಳಿಸಲಿಲ್ಲ, ಪೂರ್ಣಾಂಕದೊಂದಿಗೆ ದಯಪಾಲಿಸಿತ್ತು ಉಲ್ಲಾಸ,ಉತ್ಸಾಹದ ಮತ್ತದೇ ಗಾಬಾ ದ್ದೊಂದು  ಜೋಶು.


ಐದರಲ್ಲಿ ಎರಡು ಕಳೆದು ಇವತ್ತಿಗೆ ಇದು ಮೂರನೆಯದ್ದು. 


ಹೌದು,ಲೀಡ್ಸ್ ನ ಹೆಡಿಂಗ್ಲಿ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಈ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವೊಂದು ಎಂದಿನಂತೆ ಐದು ದಿನಗಳ ಕಾಲ ಇಂದಿನಿಂದ ನಡೆಯಲಿದೆ.ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಿಸ್ತು,ಸಂಯಮದ ಹಬ್ಬ. 


ಇಂದು ಈ ಮೂರನೇ ಪಂದ್ಯದ ಮೊದಲ ದಿನ.ಅದಾಗಲೇ ಸರಣಿಯ ಎರಡೂ ಪಂದ್ಯಗಳಲ್ಲಿ ಸ್ಪಷ್ಟ ಮೇಲುಗೈಯನ್ನು ಸಾಧಿಸಿದ್ದು ಮಾತ್ರವಲ್ಲದೇ ಒಂದು ಪಂದ್ಯವನ್ನು ಭರ್ಜರಿಯಾಗಿಯೇ ಗೆದ್ದಿರುವ ಟೀಮ್ ಇಂಡಿಯಾಕ್ಕೆ ಒಂದಷ್ಟು ನಿರಾಳ ಭಾವ ಸಾಥ್ ನೀಡಿದರೆ ಆಂಗ್ಲರಿಗೆ ಮುಗಿಯದ ಚಿಂತೆಗಳೇ ಹತ್ತು ಹಲವಾರು ಇವೆ.


ಹೋಮ್ ಆಫ್ ಕ್ರಿಕೆಟ್ ಎಂದೇ ಖ್ಯಾತವಾಗಿರುವ ಲಾರ್ಡ್ಸ್ ನಲ್ಲಿ ನಮ್ಮವರದ್ದೊಂದು  ಗೆಲುವು ನಿಜಕ್ಕೂ ಬಹಳಷ್ಟು ಶ್ಲಾಘನೀಯವಾದದ್ದು.ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದ ಗಾಬಾದ ಟೆಸ್ಟ್ ಗೆಲುವಿನ ನಂತರ,ಮತ್ತೆ ಮತ್ತೆ ನೋಡಬೇಕೆನಿಸುವ ಟೆಸ್ಟ್ ಪಂದ್ಯವೊಂದರ ಹೈಲೈಟ್ ಅಂತ  ಇದ್ದರೆ ಅದು ನಿಸ್ಸಂಶಯವಾಗಿ ಲಾರ್ಡ್ಸ್ ನದ್ದೇ ಆಗಿರುತ್ತದೆ.


ವಿಷಯ ಏನೆಂದರೆ ಬಲ್ಲ ಮೂಲಗಳ ಪ್ರಕಾರ ಅದು ನಿಜ ಕೂಡ ಹೌದು,ಹೆಚ್ಚಿನವರು ಈ ಎರಡು ಪಂದ್ಯಗಳ ಹೈಲೈಟ್ ಗಳನ್ನು ಇತ್ತೀಚಿನ ದಿನಗಳಲ್ಲಿ ಬಾರಿ ಬಾರಿ ನೋಡಿದ್ದಾರೆ ಅಂತೆ ಸುದ್ದಿ ಕೂಡ ಮೇಲಿಂದ ಮೇಲೆ ಬಂದಿವೆ. 


ನಿಜವಾಗಿಯೂ ಭಾರತೀಯ ಟೆಸ್ಟ್ ಅಭಿಮಾನಿಗಳು ಹೇಗೆ ಈ ಎರಡು ಪಂದ್ಯಗಳನ್ನು ಮತ್ತೆ ಮತ್ತೆ ನೋಡಿ ಪುಳಕಗೊಳ್ಳದೇ ಇರಲು ಸಾಧ್ಯ ಹೇಳಿ.ಒಂದು ಪಂದ್ಯದಲ್ಲಿ ಐದನೇ ದಿನ ಅಸಾಧ್ಯವಾದ ರನ್ ಅನ್ನು ಅನುಭವವಿಲ್ಲದ ನಮ್ಮ ಹುಡುಗರು ಎದ್ದು ಬಿದ್ದು ಚೇಸ್ ಮಾಡಿ ಗೆದ್ದಿದ್ದರೆ,ಇನ್ನೊಂದರಲ್ಲಿ ಬರೀ  ಐವತ್ತು ಪ್ಲಸ್ ಓವರ್ ಗಳಲ್ಲಿ ಎದುರಾಳಿಯ ಹತ್ತು ವಿಕೆಟ್‌ಗಳನ್ನು ಚಿಂದಿ ಉಡಾಯಿಸಿ ನಮ್ಮವರು ಮುಗಿಲು ಮುಟ್ಟುವ ಗೆಲುವಿನ ಕೇಕೆ ಹಾಕಿದ್ದರು.


ಅದೂ ಕೂಡ ವಿದೇಶಿ ನೆಲದಲ್ಲಿ ಮತ್ತು ಅವರುಗಳ ಐತಿಹಾಸಿಕ ಮೈದಾನದಲ್ಲಿಯೇ ನಮ್ಮವರು ಗೆದ್ದು ಬೀಗಿದ್ದು ಈಗ ಜಸ್ಟ್ ಇತಿಹಾಸ.ಖಂಡಿತವಾಗಿಯೂ ಇದೆರಡು ಪಂದ್ಯಗಳು ದೀರ್ಘ ಕಾಲ ಹೆಚ್ಚಿನವರ ನೆನಪಿನಲ್ಲಿ ಹಾಗೇ ಭದ್ರವಾಗಿರುತ್ತದೆ. 


ಲಾರ್ಡ್ಸ್ ಪಂದ್ಯ ನಡೆಯುವಾಗಲೂ ಬೇಕಾದಷ್ಟು ವರ್ಬಲ್ ವಾರ್ ಗ್ರೌಂಡಿನಲ್ಲಿ ಆಟಗಾರರ ನಡುವೆ ಹಾಗೂ ಎಂದಿನಂತೆ ಗ್ರೌಂಡಿನ ಹೊರಗೆ ಎರಡೂ ತಂಡಗಳ ಮಾಜಿ ಆಟಗಾರರ ನಡುವೆ ಬೇಕಾದಷ್ಟು ನಡೆದಿತ್ತು.ಪಂದ್ಯ ಮುಗಿದ ನಂತರವೂ ಆ ಕೆಸರೆರಚಾಟ ಮುಗಿಯಲಿಲ್ಲ. 


ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹೇಳುವಲ್ಲಿ ನಾ ಮುಂದು ತಾ ಮುಂದು ಎಂಬ ಜಿದ್ದಿನ ರೇಸಿನಲ್ಲಿ ಓಡುವವರಂತೆ  ಕಂಡು ಬಂದರು.


ಕೆಲವು ಆಂಗ್ಲರ ಮಾಜಿ ಆಟಗಾರರು ಮುಕ್ತಕಂಠದಿಂದ ಭಾರತೀಯರನ್ನು ಕೊಂಡಾಡಲು ಸ್ವಲ್ಪವೂ ಹಿಂದೇಟು ಹಾಕಲೇ ಇಲ್ಲ,ಹಾಗೇ ಪ್ರಶಂಸಿಸಿ ಬಿಟ್ಟರು ಅವರೆಲ್ಲರೂ.ಅದೇ ರೀತಿ ಇನ್ನು ಕೆಲವರು ಟೀಮ್ ಇಂಡಿಯಾ ಆಟಗಾರರನ್ನು ಇನ್ನಷ್ಟು ಕೆಣಕಲು ಕೂಡ ಎಂದಿನಂತೆ ಮರೆಯಲಿಲ್ಲ.


ಮಾಜಿ ಆಟಗಾರ ಹಾಗೂ ಕ್ರಿಕೆಟ್ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಮಾತ್ರ ಬಹಳ ಸುಂದರವಾಗಿ ಹೇಳಿದ್ದ.ಪೀಟರ್ಸನ್ ಹೇಳಿದ್ದು ಇಷ್ಟು "ಕೊಹ್ಲಿಗೆ ಎಷ್ಟೋ ಬೇಕೋ ಗೊತ್ತಿಲ್ಲ, ಆದರೆ ಪ್ರಸಕ್ತ ಟೆಸ್ಟ್ ಕ್ರಿಕೆಟ್ ಗೆ ಮಾತ್ರ ಕೊಹ್ಲಿ ಇನ್ನಷ್ಟು ಬೇಕು.ಟೆಸ್ಟ್ ಆಟದ ಮೇಲಿರುವ ಅವನ ಉತ್ಸಾಹ,ಅದರ ತೀವ್ರತೆ ಟೆಸ್ಟ್ ಕ್ರಿಕೆಟ್ ಅನ್ನು ಬೇರೆಯೇ ಲೆವೆಲ್ಲಿಗೆ ಕೊಂಡೊಯ್ಯುತ್ತಿದೆ.. " 


ಆಸ್ಟ್ರೇಲಿಯಾದ ಇಯಾನ್ ಚಾಪೆಲ್ ಕೂಡ ಹೆಚ್ಚು ಕಡಿಮೆ ಇದೇ ರೀತಿ ಹೇಳಿದ್ದಾರೆ.." ಟೆಸ್ಟ್ ಕ್ರಿಕೆಟ್ ಗೆ ಯಾರಾನ್ನಾದರೂ ಅಧಿಕೃತ ವಕ್ತಾರ ಇಲ್ಲವೇ ರಾಯಭಾರಿಯನ್ನಾಗಿ ಹೆಸರಿಸಬೇಕಿದ್ದರೆ ಸದ್ಯಕ್ಕಂತು ಅದು ವಿರಾಟ್ ಕೊಹ್ಲಿಯೇ ಆಗಿರುತ್ತಾನೆ "ಎಂದು ಚಾಪೆಲ್ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. 


ಪಾಕಿಸ್ತಾನದ ರಮೀಝ್ ರಾಜ,ದಾನೀಶ್ ಕನೇರಿಯಾ ಸದ್ಯದ ಭಾರತದ ವೇಗದ ದಾಳಿ ವಿಶ್ವದ ಘಾತಕ ವೇಗದ ದಾಳಿ ಎಂದು ಹೇಳುವ ಮೂಲಕ ಎಂದಿನಂತೆ ನಮ್ಮವರನ್ನು ಹೊಗಳುವುದರಲ್ಲಿ ಅವರೂ ಕೂಡ ಹಿಂದೆ ಉಳಿಯಲಿಲ್ಲ.ರಮೀಝ್ ರಾಜ ಅಂತು ಈ ಪಂದ್ಯ ಡ್ರಾ ಆಗಿದ್ದರೂ ಸಹ ಒಂದರ್ಥದಲ್ಲಿ ಅದು ಟೀಮ್ ಇಂಡಿಯಾವೇ ಗೆದ್ದಂತೆ ಆಗಿರುತ್ತಿತ್ತು ಎಂದು ಷರಾ ಬರೆದೇ ಬಿಟ್ಟಿದ್ದ. 


ಮಾಜಿ ಇಂಗ್ಲಿಷ್ ಆಟಗಾರ ಜೆಫ್ರಿ ಬಾಯ್ಕಟ್ ವಿಶೇಷವಾಗಿ ಸಿರಾಜ್ ಬೌಲಿಂಗ್ ಅನ್ನು ಕೊಂಡಾಡಿದ್ದು "ಸಿರಾಜ್ ಆಕ್ರಮಣಕಾರಿ ಆಟಕ್ಕೆ ಟೀಮ್ ಇಂಡಿಯಾ ನಿಯಂತ್ರಣ ಹಾಕದೇ,ಈಗ ಇರುವಂತೆಯೇ ಅವನನ್ನು ಆಟವಾಡಲು ಬಿಟ್ಟು ಬಿಡಬೇಕು" ಎಂದು ಹೇಳಿದ್ದಾರೆ.ಆಂಗ್ಲರ ಮತ್ತೊಬ್ಬ ಮಾಜಿ ಆಟಗಾರ ರಾಬರ್ಟ್ ಕೀ" ಇಂಗ್ಲೆಂಡ್ ಗೆ ಇಲ್ಲಿಯವರೆಗೆ ಪ್ರವಾಸ ಮಾಡಿದ ಭಾರತದ ತಂಡದಲ್ಲಿ ಈ ತಂಡವೇ ಅತ್ಯುತ್ತಮವಾದದ್ದು" ಎಂದು ಹಾಡಿ ಹೊಗಳಿದ್ದಾನೆ.


ನಾಸೀರ್ ಹುಸೇನ್ ನದ್ದು ಕೂಡ ಇಂತಹದ್ದೇ ಅಭಿಪ್ರಾಯಗಳು.ಮತ್ತೊಬ್ಬ ಅವರ ಮಾಜಿ ಆಟಗಾರ ಮೈಕಲ್ ಅಥರ್ಟನ್ ಒಂದು ವೇಳೆ ಮೊದಲ ಟ್ರೆಂಟ್ ಬ್ರಿಡ್ಜ್ ಪಂದ್ಯಕ್ಕೆ ಮಳೆ ಬರದೇ ಹೋಗಿದ್ದರೆ ಟೀಮ್ ಇಂಡಿಯಾವೇ ಗೆದ್ದು  2-0 ಯಿಂದ ಈ ಎರಡು ಪಂದ್ಯಗಳಲ್ಲಿ ಮುಂದೆ ಇರುತ್ತಿತ್ತು ಎಂದು ಭಾರತೀಯರ ಮನಸ್ಸಿನ  ಮಾತುಗಳನ್ನೇ ಹೇಳಿದ್ದ.


ಯಾವಾಗಲೂ ಟೀಮ್ ಇಂಡಿಯಾದ ಕಾಲು ಎಳೆಯುತ್ತಿದ್ದ ಮೈಕಲ್ ವಾನ್ ಈ ಬಾರಿ ಮುಂದೆ ನಿಂತು ಟೀಮ್ ಇಂಡಿಯಾವನ್ನು ಅಭಿನಂದಿಸಿ ಬಿಟ್ಟ.ಅದು ಬಿಟ್ಟರೆ ಪಾಪ ಇನ್ನಾವುದೇ ಅನ್ಯ ಮಾರ್ಗವೂ ಕೂಡ ಆತನಿಗಿರಲಿಲ್ಲ. 


ಟೀಮ್ ಇಂಡಿಯಾದ ಹೆಚ್ಚಿನ ಎಲ್ಲಾ ಹಿರಿಯ ಆಟಗಾರರು ಬಹಳಷ್ಟು ಖುಷಿ ಪಟ್ಟಿದ್ದರು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಗಂಗೂಲಿ, ದಿನೇಶ್ ಕಾರ್ತಿಕ್,ಆರ್ ಅಶ್ವಿನ್, ವಸೀಂ ಜಾಫರ್, ಸಂಜಯ್ ಮಾಂಜ್ರೇಕರ್, ಸೆಹ್ವಾಗ್ ಇತ್ಯಾದಿ ಇತ್ಯಾದಿ.. ಹೀಗೆ ಹೆಚ್ಚಿನವರು ತಮ್ಮ ತಮ್ಮ ಶೈಲಿಯಲ್ಲಿ ತಂಡವನ್ನು ಹಾಡಿ ಹೊಗಳಿ ಅಭಿನಂದಿಸಿದ್ದರು. 


ಅದರಲ್ಲೂ ಸೌತ್ ಆಫ್ರಿಕಾ ತಂಡದ ಮಾಜಿ ವೇಗದ ಬೌಲರ್ ಆಲನ್ ಡೋನಲ್ಡ್ " 2015 ರಲ್ಲಿಯೇ ವಿರಾಟ್ ಕೊಹ್ಲಿ ಮುಂದೆ ಒಂದು ದಿನ ಟೀಮ್ ಇಂಡಿಯಾವೇ ಟೆಸ್ಟ್ ಕ್ರಿಕೆಟ್ ನ ದೈತ್ಯ ತಂಡ ಹಾಗೂ ನಂಬರ್ ವನ್ ತಂಡ ಆಗುವುದು ಎಂದು ಬಹಳಷ್ಟು ಆತ್ಮವಿಶ್ವಾಸದಿಂದ ಹೇಳಿದ್ದ, ಖಂಡಿತವಾಗಿಯೂ ವಿರಾಟ್ ಆ ದಿನ ರಾಂಗ್ ಆಗಿರಲಿಲ್ಲ" ಎಂದು ಸ್ಪೆಷಲ್ ನೆನಪುಗಳನ್ನು ಮೆಲುಕು ಹಾಕಿಕೊಂಡರು ಒಂದು ಕಾಲದ ಹರಿಣಗಳ ದೈತ್ಯ ವೇಗಿ ಡೊನಾಲ್ಡು. 


ಆದರೆ ಮಾಜಿ ಇಂಗ್ಲಿಷ್ ಆಟಗಾರ ನಿಕ್ಕ್ ಕಾಂಪ್ಟನ್ ಹಾಡಿದ  ರಾಗ ಮಾತ್ರ ಬೇರೆಯೇ ದಾಟಿಯಲ್ಲಿ ಇತ್ತು. ನಿಕ್ಕ್ ಕಾಂಪ್ಟನ್ ಹೇಳಿದ್ದು ಇಷ್ಟು " ಕೊಹ್ಲಿಯ ಸ್ಲೆಡ್ಜಿಂಗ್ ಅದು ಸರಿಯಾದ ಕ್ರಮವಲ್ಲ.ಅದು ನಿಂದನೆಗೆ ಮತ್ತಷ್ಟು ದಾರಿ ಮಾಡಿಕೊಡುತ್ತದೆ. ಸಾಮಾನ್ಯ ಸ್ಲೆಡ್ಜಿಂಗ್ ಗೂ ಕೊಹ್ಲಿಯ ವರ್ಬಲ್ ವಾರ್ ಗೂ ಬಹಳಷ್ಟು ವ್ಯತ್ಯಾಸವಿದೆ.ಆತ ತನ್ನ ಮಾತಿನ ಮೇಲೆ ಹಿಡಿತ ಹಾಗೂ ನಿಯಂತ್ರಣವನ್ನು ಇಟ್ಟುಕೊಂಡರೆ ಆತನ ಆಟಕ್ಕೂ ಅದು ಒಂದು  ಶೋಭೆ" ಎಂದು ಕೊಹ್ಲಿ ಇಂತಹದ್ದನ್ನೆಲ್ಲ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಗೊತ್ತಿದ್ದರೂ ಸಹ ಕಿವಿಮಾತೊಂದನ್ನು ಹೇಳಿ ಬಿಟ್ಟಿದ್ದಾನೆ ನಿಕ್ಕ್ ಕಾಂಪ್ಟನ್. 


ಇಷ್ಟೊಂದು ಕಠೋರವಾಗಿ ಹೇಳದಿದ್ದರೂ ಭಾರತದ ಫಾರೂಕ್ ಇಂಜಿನಯರ್ ಕೂಡ ಇಂತಹದ್ದೇ ಮಾತುಗಳನ್ನು ಮಧುರವಾಗಿ ಹೇಳಿ ಎದುರಾಳಿಗಳೊಂದಿಗೆ ಮಾತಿನ ಚಕಮಕಿಗೆ ಇಳಿಯುವಾಗ ವಿರಾಟ್ ಎಚ್ಚರಿಕೆಯಿಂದಿರುವುದು ಯಾವತ್ತೂ ಉತ್ತಮ ಎಂದು ಸಲಹೆ ನೀಡಿದ್ದಾರೆ.


ವಿರಾಟ್ ಕೊಹ್ಲಿಯ ಬಗ್ಗೆಯೇ ಸುನೀಲ್ ಗಾವಸ್ಕರ್ ಕೂಡ ಮಾತಾಡಿದ್ದು ಕೊಹ್ಲಿಯ ಬ್ಯಾಟ್ ಎಲ್ಲೋ ಒಂದು ಕಡೆ ಇದ್ದರೆ ಕಾಲುಗಳ ಚಲನೆ ಇನ್ನೆಲ್ಲೋ ಇದ್ದು,ಇದೆರಡನ್ನು ಸರಿಯಾಗಿ ಬ್ಯಾಲೆನ್ಸ್ ಮಾಡದೇ ಇದ್ದುದೇ ಕೊಹ್ಲಿಯ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ಎಂದು ಗಾವಸ್ಕರ್  ಅಭಿಪ್ರಾಯಪಟ್ಟಿದ್ದಾರೆ. 


ಸ್ವತಃ ಜೋ ರೂಟ್ ಕೂಡ ಟೀಮ್ ಇಂಡಿಯಾದ ಆಟವನ್ನು ಮುಕ್ತವಾಗಿ ಹೊಗಳಿದ್ದು ನಾವು ಕೂಡ ಟೀಮ್ ಇಂಡಿಯಾದದಂತೆಯೇ ಸಮರ್ಥವಾಗಿ ಆಡಬೇಕಾಗಿದೆ ಎಂದು ಹೇಳಿದ್ದು ಮಾತ್ರವಲ್ಲ ಟೀಮ್ ಇಂಡಿಯಾ ಹೇಗೆ ಆಡುತ್ತಿತ್ತು ಎಂದರೆ ನಮಗೆ ಅದು ಡ್ರಾ ಮಾಡುವ ಅವಕಾಶವನ್ನು ಸಹ ಒಂಚೂರು ಕೊಡಲೇ ಇಲ್ಲ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡು ಬಿಟ್ಟಿದ್ದ.ಆತ ಒಳ್ಳೆಯ ಹುಡುಗ,ಪಿಟ್ಲಾಂಫ್ ನಂತೆ ಕಾಲು ಕೆದರಿಕೊಂಡು ಬರುವವನು ಅವನಲ್ಲ. ಫ್ಯಾಬ್ ಫೋರ್ ನಲ್ಲಿ ಇವನು ಮತ್ತು ಆ ಕೇನ್ ವಿಲಿಯಮ್ಸನ್ ಬಹಳಷ್ಟು ಸಾತ್ವಿಕರಂತೆ ಕಂಡು ಬರುತ್ತಾರೆ. ಜಂಟಲ್ಮನ್ ಗೇಮ್ ನ ಸಾಕ್ಷಾತ್ ಜಂಟಲ್ಮನ್ ಗಳು ಅವರಿಬ್ಬರು.ಅವರಿಬ್ಬರಿಗೆ  ನಂಜು ಕಾರುವವರು ಕ್ರಿಕೆಟ್ ಜಗತ್ತಿನಲ್ಲಿ ಸ್ವಲ್ಪ ಕಡಿಮೆಯೇ. 


ಕಾಮೆಂಟರಿ ಮಾಡುವಾಗ ಮಹಮ್ಮದ್ ಕೈಫ್  ಭಾರತದ ಎರಡನೆಯ ಇನ್ನಿಂಗ್ಸ್ ನ ಡಿಕ್ಲೇರ್  ಮತ್ತು ಆಂಗ್ಲರ ನಾಯಕತ್ವದ ಬಗ್ಗೆ ಈ ರೀತಿಯಾಗಿ ಹೇಳಿದ್ದ, " ಬೂಮ್ರ ಹಾಗೂ ಶಮಿ ಇಷ್ಟೊಳ್ಳೆಯ ಬ್ಯಾಟಿಂಗ್ ಮಾಡುತ್ತಿರುವಾಗ ಟೀಮ್ ಇಂಡಿಯಾ ಈಗ ಡಿಕ್ಲೇರ್ ಮಾಡಿಕೊಳ್ಳಬಹುದು, ಮುಂದಿನ ಓವರಿನಲ್ಲಿ ಡಿಕ್ಲೇರ್ ಮಾಡಬಹುದು ಎಂದು ಜೋ ರೂಟ್ ಏನಾದರೂ  ಆಲೋಚಿಸಿದ್ದರೆ ಖಂಡಿತವಾಗಿಯೂ ಜೋ ರೂಟ್ ಈ ಕ್ಷಣವೇ ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿಯಲು ಅರ್ಹರಾಗಿ ಬಿಡುತ್ತಾರೆ.." ಎಂದು ಕಳಪೆ ನಾಯಕತ್ವದ ಬಗ್ಗೆ ಖಡಕ್ ಆಗಿ ಹೇಳಿದ್ದ ಭಾರತದ ಕೈಪು.


ಗಮ್ಮತ್ತಿನ ವಿಷಯ ಏನೆಂದರೆ ಆಂಗ್ಲರ ಮುಖ್ಯ ಕೋಚ್ ಸಿಲ್ವರ್ ವುಡ್ ಮಾತ್ರ ಬೇರೆಯೇ ರೀತಿಯ ಸ್ಟೇಟ್ಮೆಂಟ್ ಕೊಟ್ಟು ಗಮನ ಸೆಳೆದಿದ್ದಾರೆ,ಸಿಲ್ವರ್ ವುಡ್ ಹೇಳಿದ್ದು ಇಷ್ಟು "ನಮಗೆ ಈ ಭಾರತೀಯ ತಂಡ ಅಂದರೆ ಅಂತಹ ಹೆದರಿಕೆ ಏನೂ ಇಲ್ಲ, ಅವರು ನಮ್ಮನ್ನು ಆಟದಲ್ಲಿ ತಳ್ಳಲು ಬಂದರೆ, ನಾವೂ ಸಹ  ಅವರನ್ನು ತಳ್ಳಲು ಬಹಳಷ್ಟು ಸಮರ್ಥರಾಗಿದ್ದೇವೆ" ಎಂದು ಹೇಳಿದ್ದಾರೆ ಸಿಲ್ವರ್ವುಡ್.


ಈ ರೀತಿ ಮಾಡಲು ಹೋಗಿಯೇ ನೀವು ಲಾರ್ಡ್ಸ್ ಟೆಸ್ಟ್ ನಲ್ಲಿ ಸೋತಿದ್ದು ಎಂದು  ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದು ಸಹ  ಮಾಜಿ ಇಂಗ್ಲಿಷ್ ಆಟಗಾರನೇ. ಅದು ಮಾಂಟಿ ಪೆನೆಸರ್. ನಾರ್ತ್ಹ್ಯಾಂಪ್ಟನ್ ಶೈರ್ ನ ಈ ಲೆಫ್ಟ್ ಆರ್ಮ್ ಸ್ಪಿನ್ನರ್ ಇಂಗ್ಲಿಷ್ ತಂಡಕ್ಕೆ ಒಟ್ಟಾರೆಯಾಗಿ ಹೇಳಿದ್ದು ಇಷ್ಟು" ನಿಮಗೆ ನಿಜವಾಗಿಯೂ ಕೊಹ್ಲಿ ಎಂಬ ನಾಯಕನ ಬಗ್ಗೆ ಸರಿಯಾಗಿ ಗೊತ್ತೇ ಇಲ್ಲ,ನೀವು ಅವನನ್ನು,ಅವನ ತಂಡದ ಆಟಗಾರನನ್ನು ಸ್ವಲ್ಪವೇ ಸ್ವಲ್ಪ ಕೆಣಕಿದರೂ ಸಾಕು,ಅವರ ತಂಡ ಅಲ್ಲಿಂದಲೇ ಪಂದ್ಯದ ಅತ್ಯುತ್ತಮ ಪ್ರದರ್ಶನ ನೀಡಲು ನಿಂತು ಬಿಡುತ್ತದೆ ಮತ್ತು ಆ ಹೋರಾಟದ ಮುಂದೆ ಸದಾ ಕೊಹ್ಲಿಯೇ ಇರುತ್ತಾನೆ.." ಎಂದು ಪನೆಸರ್ ಹೇಳಿದ್ದ.


ಇಂಗ್ಲೆಂಡ್ ತಂಡದ ಐದನೇ ದಿನದ ಕಾರ್ಯತಂತ್ರ ದ ಬಗ್ಗೆಯೂ ಪೆನೆಸರ್ ಆಂಗ್ಲರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಬಿಟ್ಟಿದ್ದಾನೆ. " ನಾಲ್ಕನೇ ದಿನ ಆಟದಲ್ಲಿ ಆಂಡರ್ಸನ್ ಗೆ ಬಿಟ್ಟು ಬಿಡದೇ ಬೌನ್ಸರ್ ಎಸೆದು ಸಿಕ್ಕಾಪಟ್ಟೆ ಕಾಡಿದ ಬ್ರೂಮನನ್ನೇ ಟಾರ್ಗೆಟ್ ಮಾಡಿ ಬೌಲಿಂಗ್ ಮಾಡುವುದೊಂದೇ ಆಂಗ್ಲರ ಐದನೇ ದಿನದ ಏಕೈಕ ಯೋಜನೆಯಂತೆ ಕಂಡಿತೇ ಹೊರತು, ಟೀಮ್ ಇಂಡಿಯಾದ ಎರಡನೆಯ ಇನ್ನಿಂಗ್ಸ್ ಅನ್ನು ಆದಷ್ಟು ಬೇಗ ಮೊಟಕುಗೊಳಿಸಬೇಕು ಎಂಬತ್ತ ಇಂಗ್ಲಿಷ್ ಬೌಲರ್ಸ್ ಗಮನ ಹರಿಸಲೇ ಇಲ್ಲ.ಇದೊಂದು ಕೆಟ್ಟ ರಣತಂತ್ರ.. ಹಾಗಾಗಿಯೇ ಇಂಗ್ಲೆಂಡ್ ಸೋತಿದ್ದು " ಎಂದು ಪನೆಸರ್ ಹೇಳಿದ್ದಾನೆ.


ನಿಜವಾಗಿಯೂ ಆಂಗ್ಲರ ಮನಸ್ಥಿತಿಯೂ ಕೂಡ ಅದೇ ರೀತಿ ಇತ್ತು.ಎರಡನೆ ಪಂದ್ಯದಲ್ಲಿ ಆಡದೇ ಇದ್ದ ಸ್ಟುವರ್ಟ್ ಬ್ರಾಡ್ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಬೂಮ್ರ ಆಂಡರ್ಸನ್ ಗೆ ಬೌನ್ಸರ್ ಬೌಲಿಂಗ್ ಮಾಡಿ ಸಿಕ್ಕಾಪಟ್ಟೆ ಪೀಡಿಸಿದ್ದನ್ನು ನೋಡಿ ತನ್ನ ಮನೆಯಲ್ಲಿ ಕುಳಿತುಕೊಂಡು ನನಗೆ ಮುಂದೆ ನಮ್ಮ ಇಂಗ್ಲೆಂಡ್ ತಂಡದ ಬೌಲಿಂಗ್ ಕೂಡ ಹೇಗಿರಬಹುದೆಂಬ ಅಂದಾಜಿದೆ ಎನ್ನುವ ದಾಟಿಯಲ್ಲಿ ಹೇಳಿದ್ದು ಸಹ ಪಂದ್ಯದ ಬಗ್ಗೆ ಅವರಿಗಿದ್ದ ಕಡಿಮೆ ಮಟ್ಟದ ಗಂಭೀರತೆಯನ್ನು ತೋರಿಸುತ್ತದೆಯೇ ಹೊರತು ಬೇರೆನನ್ನೂ ಅಲ್ಲ.


ಏಕೆಂದರೆ ಒಂದು ವೇಳೆ ಬಹಳಷ್ಟು ಬೇಗನೆ ಟೀಮ್ ಇಂಡಿಯಾವನ್ನು ಆಂಗ್ಲರು ಎರಡನೇ ಇನಿಂಗ್ಸ್ ನಲ್ಲಿ ಆಲ್ ಔಟ್ ಮಾಡಿದ್ದರೆ ಖಂಡಿತವಾಗಿಯೂ ಆಂಗ್ಲರಿಗೂ ಲಾರ್ಡ್ಸ್ ಪಂದ್ಯ ಗೆಲ್ಲುವ ಅವಕಾಶ ಇತ್ತು.ಆದರೆ ಟೀಮ್ ಇಂಡಿಯಾ ಗೆದ್ದಾಗ ಸ್ಟುವರ್ಟ್ ಬ್ರಾಡ್ ಕೂಡ ಭಾರತ ತಂಡವನ್ನು ಅಭಿನಂದಿಸಲು ಮಾತ್ರ ಮರೆಯಲಿಲ್ಲ " ಲಾರ್ಡ್ಸ್ ಗೆಲುವು ಯಾವತ್ತಿಗೂ ತುಂಬಾ ಸ್ಪೆಷಲ್ ಆಗಿರುತ್ತದೆ, ಅಭಿನಂದನೆಗಳು ಟೀಮ್ ಇಂಡಿಯಾ ಎಂದು ಹೇಳಿ ಬಿಟ್ಟಿದ್ದ ನಾಟಿಂಗ್ಹ್ಯಾಮ್ ನ ಈ ವೇಗದ ಬೌಲರ್. 


ಸ್ಲೆಡ್ಜಿಂಗ್ ಬಗ್ಗೆ ಕೆ.ಎಲ್.ರಾಹುಲ್ ಅಂತು "ನೀವೇನಾದರೂ ನಮ್ಮ ತಂಡದ ಒಬ್ಬ ಆಟಗಾರರನ್ನು ಕೆಣಕಿದರೂ ಸಹ ನಾವು 11 ಜನರೂ ಕೂಡ ಒಟ್ಟಿಗೆ ತಿರುಗಿ ಬೀಳಲಿದ್ದೇವೆ" ಎಂದು ತಮ್ಮ ತಂಡದ ಈಗೀನ ಮನಸ್ಥಿತಿ ಈ ರೀತಿಯೇ ಆಗಿರುತ್ತದೆ ಎಂದು ಹೇಳಿ ಆಂಗ್ಲರಿಗೊಂದು  ಸ್ಪಷ್ಟ ಸಂದೇಶ ರವಾನಿಸಿದ್ದಾನೆ.


ಕೊಹ್ಲಿ ಅಂತು ಟೆಸ್ಟ್ ಕ್ರಿಕೆಟ್ ಬಗ್ಗೆ ಹೇಳಿದ್ದು ಬಹಳಷ್ಟು ಸುಂದರವಾಗಿತ್ತು. "ಅದು ಬೇಕಿದ್ದರೆ ದಿನದ 88 ನೇ ಓವರೇ  ಆಗಿರಲಿ,ನನ್ನಲ್ಲಿರುವ ಆಟದ ತೀವ್ರತೆ ಒಂದು ಚೂರು ಕಡಿಮೆ ಆಗದು,ದಿನದ ಮೊದಲ ಬಾಲಿನಿಂದ ಹಿಡಿದು ದಿನದ ಕೊನೆಯ ಬಾಲಿನವರೆಗೂ ನನ್ನನ್ನು ನಾನು ತೊಡಗಿಸಿಕೊಳ್ಳುವ ರೀತಿ ಎಂದಿಗೂ ಒಂದೇ ಇರುತ್ತದೆ,ಮತ್ತು ಅದು ಮುಂದೆಯೂ ಹಾಗೇ ಇರುವುದು" 


ಆಹಾ.. ತುಂಬಾ ಬೋರಿಂಗ್ ಎಂದು ಅನಿಸುವ ಟೆಸ್ಟ್ ಕ್ರಿಕೆಟ್ ನಲ್ಲಿ,ಅದರಲ್ಲೂ ಸಮಯದ ಅಭಾವವಿರುವ ಎಲ್ಲರಿಗೂ ಶಾರ್ಟ್ ಆಂಡ್ ಕ್ರಿಸ್ಪ್ ಆಗಿ ಇಷ್ಟವಾಗುವ ಫ್ಯಾಂಟಸಿ ಕ್ರಿಕೆಟ್ ಲೀಗ್ ಗಳ ಈ ಕಾಲದಲ್ಲಿ,ಒಬ್ಬ ವಿರಾಟ್ ತನ್ನ ಟೆಸ್ಟ್ ಕ್ರಿಕೆಟ್ ಮೇಲಿನ ಅಪಾರ ಪ್ರೀತಿಯನ್ನು ಈ ರೀತಿ ಹೇಳಿಕೊಳ್ಳುತ್ತಾನೆ.. ಅದೇ ರೀತಿ ಗ್ರೌಂಡಿನಲ್ಲಿ ಕೂಡ ನಡೆದುಕೊಳ್ಳುತ್ತಾನೆ ಎಂಬುದಕ್ಕಾಗಿಯೇ ಕೆವಿನ್ ಪೀಟರ್ಸನ್,ಇಯನ್ ಚಾಪಲ್,ಆಲನ್ ಡೋನಾಲ್ಡ್  ನಂತಹ  ಮಾಜಿ ಆಟಗಾರರು ಕೂಡ ಟೆಸ್ಟ್ ಕ್ರಿಕೆಟ್ ಗೆ ಸಂಬಂಧಿಸಿದಂತೆ ಕೊಹ್ಲಿಯನ್ನು ಈ ರೀತಿ ಮೆಚ್ಚಿಕೊಂಡು ಹಾಡಿ ಹೊಗಳುತ್ತಿರುವುದು.


ಏಕೆಂದರೆ ಅವರೆಲ್ಲರ ಆಸೆ ಕೂಡ ಅದೇ.ಎಷ್ಟೇ ಫಾರ್ಮೆಟ್ ಗಳ ಕ್ರಿಕೆಟ್ ಬಂದರೂ ಟೆಸ್ಟ್ ಕ್ರಿಕೆಟ್ ನ ಆ ಹಳೆಯ ಚಾರ್ಮ್ ಕಳೆದು ಹೋಗಬಾರದು ಎಂಬುದೇ ಆಗಿದೆ. ಬಹುಶಃ ಪೀಟರ್ಸನ್ ಹೇಳಿದ "ಸ್ವತಃ ಟೆಸ್ಟ್ ಕ್ರಿಕೆಟ್ ಕೊಹ್ಲಿಯನ್ನು ಬಯಸುತ್ತದೆ" ಎಂಬ ಮಾತು ನಿಜಕ್ಕೂ ಬಹಳಷ್ಟು ದೊಡ್ಡ ಮಾತೇ ಆದರೂ ಅದರಲ್ಲೂ ಒಪ್ಪಲೇಬೇಕಾದ ಒಂದಷ್ಟು ಸತ್ಯ ಖಂಡಿತವಾಗಿಯೂ ಇದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಗೆ ಕೊಹ್ಲಿಯ ಕೊಡುಗೆ ಕೂಡ ಸಾಕಷ್ಟು ಇದೆ. ಇಂದಿನ ಪೀಳಿಗೆ ಕೂಡ ಅವನಿಗಾಗಿಯೇ ಒಂದಷ್ಟು ಟೆಸ್ಟ್ ಕ್ರಿಕೆಟ್ ನೋಡುತ್ತದೆ ಅನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. 


ಅಂದ ಹಾಗೆ ಕೆಲವರಿಗೆ ಈ ಎರಡು ಟೆಸ್ಟ್ ಪಂದ್ಯಗಳು ಮುಗಿದ ನಂತರ ಡಬ್ಲ್ಯು.ಟಿ.ಸಿ ಯ ಪಾಯಿಂಟ್ ಟೇಬಲ್ಲಿನಲ್ಲಿ ಟೀಮ್ ಇಂಡಿಯಾದ  ಅಂಕ 16 ಆಗಿರಬೇಕಿತ್ತು ಆದರೆ ಏತಕ್ಕೆ ಅದು 14 ಆಯಿತು ಎಂಬುದರ ಬಗ್ಗೆ ಸ್ವಲ್ಪ ಆದರೂ ಗೊಂದಲ ಇರಬಹುದು, ಹಾಗಾಗಿ ಅದರ ಬಗ್ಗೆಯೂ ಸವಿವರವಾಗಿ ತಿಳಿಯುವ ಪ್ರಯತ್ನ ನಾವು ಮಾಡೋಣ.


ಅದಕ್ಕೂ ಮೊದಲು ನಾವು ಈ ಡಬ್ಲ್ಯು.ಟಿ.ಸಿಯ ಫಾರ್ಮೆಟ್ ಬಗ್ಗೆಯೂ ಒಂದಷ್ಟು ಅರಿಯಬೇಕಾಗುತ್ತದೆ. 


ಎಲ್ಲರಿಗೂ ಗೊತ್ತಿರುವಂತೆ ಐಸಿಸಿ ಟೆಸ್ಟ್ ಕ್ರಿಕೆಟ್ ಮಾನ್ಯತೆ ಹೊಂದಿರುವ 12 ದೇಶಗಳ ಪೈಕಿ ಕೇವಲ 9 ದೇಶಗಳಷ್ಟೇ ಈ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಆಡುತ್ತಿವೆ.ಅಂದರೆ ಜಿಂಬಾವ್ವೆ,ಅಫ್ಘಾನಿಸ್ತಾನ, ಐರ್ಲೆಂಡ್ ಈ ಮೂರು ತಂಡಗಳನ್ನು ಹೊರತುಪಡಿಸಿ ಇಂಡಿಯಾ,ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡ ಈ ಚಾಂಪಿಯನ್ಶಿಪ್ ನ ಭಾಗವಾಗಿವೆ ಮತ್ತು ಈ  ಆವೃತ್ತಿಯಲ್ಲಿ ಎಲ್ಲಾ ಸೇರಿ ಒಟ್ಟು 27 ಸಿರೀಸ್ ಗಳು ನಡೆಯಲಿವೆ.


ಎಲ್ಲರಿಗೂ ಗೊತ್ತಿರುವಂತೆ ಎರಡು ವರ್ಷ ಉದ್ದಕ್ಕೆ ಎಲ್ಲಾ ತಂಡಗಳು ತಮ್ಮ ತಮ್ಮ ಸರಣಿಗಳನ್ನು ಆಡಿ ಮುಗಿಸಿದ ಮೇಲೆ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಅಲಂಕರಿಸುವ ತಂಡಗಳು ಈ ಆವೃತ್ತಿಯ ಫೈನಲ್ ನಲ್ಲಿ ಅಂದರೆ 2023 ರಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ. ಆದರೆ ಸದ್ಯಕ್ಕೆ ಈ ಆವೃತ್ತಿಯ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ನಿಗದಿಯಾಗಿಲ್ಲ.2019-21 ರ ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಇಂಗ್ಲೆಂಡ್ ನ ಸೌತ್ಯಾಂಪ್ಟನ್ ನಲ್ಲಿ ಸೋಲಿಸಿ ಟೆಸ್ಟ್ ಚಾಂಪಿಯನ್ ಆಗಿ ಮೆರೆದಿರುವುದು ಈಗ ಇತಿಹಾಸ. 


ಈ 2021-23 ರ ಆವೃತ್ತಿಗೆ ಬಂದರೆ ಇಲ್ಲಿ ಪ್ರತೀ ತಂಡವೂ 3 ಸರಣಿಯನ್ನು ತವರಿನಲ್ಲಿ ಹಾಗೂ 3 ಸರಣಿಯನ್ನು ವಿದೇಶದಲ್ಲಿ  ಆಡಬೇಕಾಗಿದೆ.ಈ ರೀತಿ ಒಂದು ತಂಡಕ್ಕೆ ಒಟ್ಟಾರೆ 6 ಸರಣಿ ಆಡಲು ಸಿಗುತ್ತದೆ. ಆದರೆ ಇಲ್ಲಿ ಪ್ರತೀ ತಂಡಕ್ಕೆ ಡಬ್ಲ್ಯು.ಟಿ.ಸಿ ಯ  ಎಲ್ಲಾ ಎಂಟು ತಂಡಗಳ ವಿರುದ್ಧ ಆಡಲು ಅವಕಾಶ ಇರುವುದಿಲ್ಲ.6 ಸರಣಿ ಮಾತ್ರ ಇರುವುದರಿಂದ ಒಂದು ಡಬ್ಲ್ಯು.ಟಿ.ಸಿ ಆವೃತ್ತಿಯಲ್ಲಿ ಪ್ರತೀ ತಂಡವೂ ಯಾವುದಾದರೂ 2 ತಂಡಗಳೊಂದಿಗೆ ಆಡುವುದಿಲ್ಲ.


ಭಾರತ ಈ ಬಾರಿ ಬಾಂಗ್ಲಾದೇಶ,ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ "Away" ಅಂದರೆ ವಿದೇಶಿ ನೆಲದಲ್ಲಿ ಪಂದ್ಯಗಳನ್ನು ಆಡಿದರೆ, ಶ್ರೀಲಂಕಾ, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ "Home" ಅಂದರೆ ತವರಿನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ.


ಇಲ್ಲಿ ಭಾರತ ಈ ಬಾರಿಯ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದೊಂದಿಗೆ ಯಾವುದೇ ಟೆಸ್ಟ್ ಪಂದ್ಯ ಆಡುತ್ತಿಲ್ಲ. ಅದರಲ್ಲೂ ಪಾಕಿಸ್ತಾನದೊಂದಿಗೆ ಮುಂದಿನ ಹಲವು ಆವೃತ್ತಿಗಳಲ್ಲಿಯೂ ಭಾರತ ಆಡುವುದು ಕಷ್ಟ ಎಂದೇ ತೋರುತ್ತಿದೆ. ಏಕೆಂದರೆ ಭಾರತ ಐ.ಸಿ.ಸಿ ಯ ಟೂರ್ನಿಗಳನ್ನು ಅಂದರೆ ವಿಶ್ವಕಪ್, ಚಾಂಪಿಯನ್ ಟ್ರೋಫಿ, ಏಷ್ಯಾ ಕಪ್ ನಂತಹ ಪಂದ್ಯಗಳಲ್ಲಿ ಬಿಟ್ಟರೆ ಪಾಕಿಸ್ತಾನದ ಜೊತೆಗೆ ಯಾವುದೇ ದ್ವಿಪಕ್ಷೀಯ ಸರಣಿ ಆಡುವುದಿಲ್ಲ. ಈ ಡಬ್ಲ್ಯು.ಟಿ.ಸಿ ಯ ಪ್ರತೀ ಸರಣಿಯೂ ದ್ವಿಪಕ್ಷೀಯವೇ ಆಗಿರುವುದರಿಂದ ಭಾರತ ಪಾಕಿಸ್ತಾನ ಎದುರು ಎಂದಿನಂತೆ ಆಡುತ್ತಿಲ್ಲ.ಕಳೆದ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಹಾಗೂ ಪಾಕಿಸ್ತಾನದೊಂದಿಗೆ ಪಂದ್ಯಗಳನ್ನು ಆಡಿಲ್ಲ. 


ಐ.ಸಿ.ಸಿ ಮುಂದಿನ ಹತ್ತು ವರ್ಷಗಳಲ್ಲಿ ವರ್ಷಕ್ಕೆರಡರಂತೆ 2021-23,2023-25,2025-27,2027-29,2029-31 ರ ಆವೃತ್ತಿಯ ಯೋಜನೆಗಳನ್ನು ಸಹ ಅದಾಗಲೇ ಹಾಕಿಕೊಂಡಿದ್ದು ಬಹುಶಃ ಈ ಹತ್ತು ವರ್ಷಗಳಲ್ಲಿ ಭಾರತ ಪಾಕಿಸ್ತಾನದ ರಾಜತಾಂತ್ರಿಕ ವಿಷಯಗಳು ಸುಧಾರಣೆಯಾಗದೇ ಹೋದರೆ ಭಾರತ ಮತ್ತು ಪಾಕಿಸ್ತಾನ ಡಬ್ಲ್ಯು.ಟಿ.ಸಿ ಯಲ್ಲಿ ಟೆಸ್ಟ್ ಮ್ಯಾಚ್ ಆಡುವುದು ಡೌಟೇ ಬಿಡಿ.ಸದ್ಯದ ಭಾರತ ಪಾಕಿಸ್ತಾನ ಸಂಬಂಧಗಳನ್ನು ನೋಡಿದರೆ ಭಾರತವಂತು ಪಾಕಿಸ್ತಾನದೊಂದಿಗೆ ಆಟವಾಡುವ ಯಾವುದೇ ಉಮೇದು ಹೊಂದಿಲ್ಲ ಎಂದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿರುವಂತಹದ್ದೇ.


ಇನ್ನು ನೇರವಾಗಿ ಡಬ್ಲ್ಯು.ಟಿ.ಸಿ ಯ ಪಾಯಿಂಟ್ ಟೇಬಲ್ ನಲ್ಲಿರುವ ಅಂಕಗಳ ಲೆಕ್ಕಾಚಾರಗಳ ಬಗ್ಗೆಯೇ ಮಾತಾಡೋಣ. 


ನೋಡಿ ಈ ಹಿಂದಿನ 2019-2021 ರ ಆವೃತ್ತಿಯಲ್ಲಿ ಒಂದು ಸರಣಿಗೆ 120 ಅಂಕಗಳನ್ನು ಕೊಡುತ್ತಿದ್ದರು. ಅಂದರೆ 2 ಪಂದ್ಯಗಳ ಸಿರೀಸ್ ಆದರೆ ಪ್ರತೀ ಪಂದ್ಯಕ್ಕೂ 60 ಅಂಕ,3 ಪಂದ್ಯಗಳ ಸಿರೀಸ್ ಆದರೆ ಪ್ರತೀ ಪಂದ್ಯಕ್ಕೂ 40 ಅಂಕ,4 ಪಂದ್ಯಗಳ ಸಿರೀಸ್ ಆದರೆ ಪ್ರತೀ ಪಂದ್ಯಕ್ಕೂ 30 ಅಂಕ, 5 ಪಂದ್ಯಗಳ ಸಿರೀಸ್ ಆದರೆ ಪ್ರತೀ ಪಂದ್ಯಕ್ಕೂ 24 ಅಂಕಗಳನ್ನು ಕೊಡಲಾಗುತ್ತಿತ್ತು.


ಅಂದರೆ ಎಷ್ಟೇ ಪಂದ್ಯಗಳ ಸರಣಿ ಆಡಿದರೂ 120 ಅಂಕಗಳಲ್ಲಿಯೇ ಪ್ರತೀ ಪಂದ್ಯಕ್ಕೂ ಸಮವಾಗಿ ಅಂಕಗಳನ್ನು ಹಂಚಲಾಗುತ್ತಿತ್ತು.ಆವೃತಿಯ ಎಲ್ಲಾ ಸಿರೀಸ್ ಮುಗಿದ ಮೇಲೆ ಅತೀ ಹೆಚ್ಚು ಅಂಕಗಳನ್ನು ಸಂಪಾದಿಸುವ ಎರಡು ತಂಡಗಳು ಫೈನಲ್ ನಲ್ಲಿ ಆಡಬೇಕಾಗಿತ್ತು.ಇದು ಮೊದಲ ಆವೃತ್ತಿಯ ಅಂಕ ಪಟ್ಟಿಯ ನಿಯಮ.ಆದರೆ ಕೋವಿಡ್ ಕಾರಣದಿಂದಾಗಿ ಕೆಲವು ಪಂದ್ಯಗಳು ನಡೆಯದ ಕಾರಣ ಐ.ಸಿ.ಸಿ ಕೊನೆಯಲ್ಲಿ ಆವೃತ್ತಿಯನ್ನು ಪೂರ್ತಿಗೊಳಿಸುವುದಕ್ಕಾಗಿ ಈ PCT(Percentage of Points) ನಿಯಮವನ್ನು ಜಾರಿಗೆ ತಂದಿತು ಮತ್ತು ಹಾಗೋ ಹೀಗೋ ಆ ಆವೃತ್ತಿಯನ್ನು ಪೂರ್ಣಗೊಳಿಸಿ ಬಿಟ್ಟಿತು ಕೂಡ. 


ಮುಂದೆ ಈ ರೀತಿಯಾಗಿ ಸರಣಿಗಳು ನಡುವಿನಲ್ಲಿ ನಿಂತು ಹೋಗಿ ಅಂಕಪಟ್ಟಿಯಲ್ಲಿ ಯಾರಿಗೂ ಸಮಸ್ಯೆ ಆಗಬಾರದು ಎಂಬುದಕ್ಕಾಗಿ ಈ PCT ನಿಯಮವನ್ನು ಐಸಿಸಿ ಎರಡನೇ ಆವೃತ್ತಿಯಲ್ಲಿ ಶುರುವಿನಿಂದಲೇ ಪ್ರತಿಯೊಂದು ಪಂದ್ಯಕ್ಕೂ ಕಡ್ಡಾಯವಾಗಿ ಅದಾಗಲೇ ಅಳವಡಿಸಿ ಬಿಟ್ಟಿದೆ.ಆದರೆ ಇಲ್ಲಿ ಒಂದಷ್ಟು ಬದಲಾವಣೆಗಳನ್ನು ಕೂಡ ಐ.ಸಿ.ಸಿ ಮಾಡಿಕೊಂಡಿದೆ. 


ಈ 2021-23 ರ ಆವೃತ್ತಿಯಲ್ಲೂ ಪ್ರತೀ ಪಂದ್ಯಕ್ಕೂ ಸಪರೇಟ್ ಆದ ಅಂಕಗಳಿರುತ್ತದೆ.ಆದರೆ ಅದರ ಫಾರ್ಮೆಟ್ ಸ್ವಲ್ಪ ಬೇರೆ. 


ಈ ಆವೃತ್ತಿಯಲ್ಲಿ ಪ್ರತೀ ಪಂದ್ಯಕ್ಕೂ ಒಟ್ಟು 12 ಅಂಕಗಳಿರುತ್ತದೆ. ಪಂದ್ಯ ಡ್ರಾ ಆದರೆ ಆಗ 4 ಅಂಕಗಳು ಹಾಗೂ ಒಂದು ವೇಳೆ ಪಂದ್ಯ ಏನಾದರೂ ಬಲು ಅಪರೂಪದ ವಿದ್ಯಮಾನವಾದ ಟೈ ಫಲಿತಾಂಶ ಕಂಡರೆ ಆಗ 6 ಅಂಕಗಳನ್ನು ಎರಡೂ ತಂಡಕ್ಕೂ ಹಂಚಲಾಗುತ್ತದೆ.ಪಂದ್ಯ ಸೋತರೆ ಎಂದಿನಂತೆ 0 ಅಂಕ ಎಂಬ ಶೂನ್ಯ ಸಂಪಾದನೆ. 



ಈ ರೀತಿಯಲ್ಲಿ ಸರಣಿ ಒಂದರಲ್ಲಿ 5 ಪಂದ್ಯಗಳಿದ್ದರೆ ಆವಾಗ ಸರಣಿಯ ಒಟ್ಟು ಪಾಯಿಂಟ್ 60 ಆಗುತ್ತದೆ. ಅದೇ ರೀತಿ ಕೇವಲ 2 ಮ್ಯಾಚ್ ಗಳ ಸರಣಿ ಆದರೆ ಆವಾಗ 24 ಅಂಕಗಳು ಒಟ್ಟು ಸರಣಿಗೆ ಇರುತ್ತದೆ.ಅಂದರೆ ಪಂದ್ಯವೊಂದಕ್ಕೆ 12 ಅಂಕಗಳು ಇಲ್ಲಿ.ನೆನಪಿಡಿ ಹಿಂದೆ ಇದು ಉಲ್ಟಾಪಲ್ಟ ಆಗಿತ್ತು. ಒಟ್ಟು 120 ಅಂಕಗಳನ್ನು ಒಂದು ಸರಣಿಗೆ ಮೊದಲೇ ಫಿಕ್ಸ್ ಮಾಡಿ  ಸರಣಿಯಲ್ಲಿರುವ ಒಟ್ಟು ಪಂದ್ಯಗಳಿಗೆ ಸಮನಾಗಿ ಹಂಚಲಾಗುತ್ತಿತ್ತು.


ಈಗ ಹಾಗಿಲ್ಲ ಆಡುವ ಪ್ರತಿ ಪಂದ್ಯಕ್ಕೂ 12 ಅಂಕಗಳು ಅಷ್ಟೇ. ಆದರೆ ಇಲ್ಲಿ ಮತ್ತೊಂದು ವಿಷಯ ಗಮನಿಸಬೇಕು ಹೆಚ್ಚು ಪಂದ್ಯಗಳ ಸರಣಿ ಆಡಿದರೂ, ಇಲ್ಲವೇ ಕಡಿಮೆ ಪಂದ್ಯಗಳ ಸರಣಿ ಆಡಿದರೂ ತಂಡವನ್ನು ಟೇಬಲ್ ಟಾಪರ್ ಮಾಡುವುದು ತಂಡಗಳು ಗಳಿಸುವ  PCT ಅಂಕಗಳನ್ನು ಆಧಾರಿಸಿಯೇ.ಅದನ್ನಷ್ಟೇ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಕಳೆದ ಆವೃತ್ತಿಯಲ್ಲೂ ಸಹ ಕೊನೆಗೆ  PCT ಯ ಆಧಾರದ ಮೇಲೆಯೇ ಟೇಬಲ್ ಟಾಪರ್ ಗಳನ್ನು ನಿರ್ಧರಿಸಲಾಗಿತ್ತು ಆದರೆ ಆರಂಭದಲ್ಲಿ ಅಲ್ಲ. 


ಈ PCT ಯ ಲೆಕ್ಕಾಚಾರದ ಸರಳ ಸುಂದರ ಸೂತ್ರ ಇದೇ..

PCT  = (Points won by a team / Total Points contested) * 100


ಉದಾಹರಣೆಗೆ ಈಗೀನ 5 ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ ಏನಾದರೂ 5-0 ಯಿಂದ ಸರಣಿ ಗೆದ್ದರೆ ಅಂದರೆ ಸರಣಿಯ ಒಟ್ಟು 60 ಅಂಕಗಳನ್ನೂ(5*12) ಕೂಡ ಸಂಪಾದಿಸಿಕೊಂಡರೆ,ಆಗ ತಂಡದ PCT  100% ಆಗುವುದು. 


PCT =(60/60)*100 = 100%. 


ಒಂದು ವೇಳೆ ಈ 5 ಪಂದ್ಯಗಳ ಸರಣಿಯಲ್ಲಿ ಭಾರತ 4-1 ರಿಂದ ಇಲ್ಲವೇ 4-0 ಯಿಂದ ಗೆದ್ದರೆ ಆಗ ತಂಡದ ಒಟ್ಟು ಪಾಯಿಂಟ್ 48 ಆಗುವುದು(12*4).ಆವಾಗ  ತಂಡದ PCT 80% ಆಗುತ್ತದೆ. 


PCT =(48/60)*100 = 80%.


ಇದೇ ರೀತಿ ಗೆದ್ದ ಪಂದ್ಯಕ್ಕೆ 12 ಅಂಕಗಳಂತೆ  ಸರಣಿಯ ಒಟ್ಟು ಅಂಕದೊಂದಿಗೆ ಭಾಗಾಕಾರ, ಗುಣಾಕಾರ ಮಾಡಿ ಶೇಕಡಾವಾರು ಎಂಬ PCT ತೆಗೆಯುತ್ತಾ ಹೋಗಲಾಗುತ್ತದೆ. 


ಈಗ ಮೊದಲಿನ ಪ್ರಶ್ನೆಗೆ ಬರುವ. ಅಂದರೆ ಈ ಆವೃತ್ತಿಯ ಅಂಕಪಟ್ಟಿಯಲ್ಲಿ ಭಾರತದ ಇಲ್ಲಿಯವರೆಗಿನ ಅಂಕಗಳ ಬಗ್ಗೆ. 


ಸದ್ಯಕ್ಕೆ ಟೀಮ್ ಇಂಡಿಯಾ ಈ 5 ಪಂದ್ಯಗಳ ಸರಣಿಯಲ್ಲಿ 2 ಪಂದ್ಯ ಆಡಿದ್ದು ಅದರಲ್ಲಿ ಒಂದರಲ್ಲಿ ಜಯಗಳಿಸಿದ್ದು ಮತ್ತೊಂದರಲ್ಲಿ ಡ್ರಾ ಫಲಿತಾಂಶವನ್ನು ಹೊಂದಿದೆ. ಅಂದರೆ ಜಯಕ್ಕೆ 12 ಅಂಕ ಹಾಗೂ ಡ್ರಾ ಕ್ಕೆ 4 ಅಂಕ, ಒಟ್ಟು 16 ಅಂಕ ಭಾರತಕ್ಕೆ ಸಿಗಬೇಕಾಗಿತ್ತು. ಆದರೆ ಇಲ್ಲಿ ಭಾರತಕ್ಕೆ 14 ಅಂಕಗಳನ್ನಷ್ಟೇ ಕೊಡಲಾಗಿದೆ.ಇದು ಏಕೆ ಹೀಗಾಯಿತು ಎನ್ನುವುದೇ ಸ್ವಲ್ಪ ಜನರಿಗೆ ಇರುವ ದೊಡ್ಡ ಗೊಂದಲ.


ಇದಕ್ಕೆ ಕಾರಣ ಪೆನಾಲ್ಟಿ. 


ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಮೊದಲ ಟ್ರೆಂಟ್ ಬ್ರಿಡ್ಜ್ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ನಲ್ಲಿ ಬೌಲಿಂಗ್ ಮಾಡಿದ ಕಾರಣದಿಂದಾಗಿ ಎರಡೂ ತಂಡಕ್ಕೂ ಮ್ಯಾಚ್ ಫೀ  ನಲ್ಲಿ 40% ದಂಡವನ್ನೂ ಹಾಗೂ ಇದರ ಜೊತೆಗೆ ಪಂದ್ಯದಲ್ಲಿ ತಂಡಗಳು ಗಳಿಸಿದ ಅಂಕದಿಂದ 2 ಅಂಕವನ್ನು ಪೆನಾಲ್ಟಿ ರೂಪದಲ್ಲಿ ಕಸಿದು ಕೊಳ್ಳಲಾಗಿದೆ.


ಇದು ಈ ಆವೃತ್ತಿಯಲ್ಲಿ ಎಲ್ಲಾ ತಂಡಗಳ ಎಲ್ಲಾ ಪಂದ್ಯಗಳಿಗೂ ಅಪ್ಲೈ ಆಗುತ್ತದೆ. ಹಾಗಾಗಿ ಮೊದಲ ಪಂದ್ಯ ಡ್ರಾ ಆಗಿದ್ದರೂ  ಡ್ರಾ ಗಾಗಿ ಕೊಡುವ 4 ಅಂಕವನ್ನು ಪಡೆಯದೇ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಲಾ 2 ಅಂಕಗಳನ್ನಷ್ಟೇ ಪಡೆದುಕೊಂಡಿದೆ.


ಇದು ಖಂಡಿತವಾಗಿಯೂ  ಸಣ್ಣ ಸಂಗತಿ ಅಲ್ಲವೇ ಅಲ್ಲ, ಕಳೆದ ಆವೃತ್ತಿಯ ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ MCG ಯಲ್ಲಿ ಇದೇ ರೀತಿಯ ಸ್ಲೋ ಓವರ್ ರೇಟ್ ನಲ್ಲಿ ಮಾಡಿದ್ದಕ್ಕೆ  ಮ್ಯಾಚ್ ಫೀ ಯ 40 ರಷ್ಟು ದಂಡ ಮತ್ತು ಆವಾಗ ಬರೋಬ್ಬರಿ 4 ಪಾಯಿಂಟ್ ಗಳನ್ನೇ ಪೆನಾಲ್ಟಿ ರೂಪದಲ್ಲಿ ಆಸ್ಟ್ರೇಲಿಯಾಕ್ಕೆ ಕಡಿತಗೊಳಿಸಲಾಗಿತ್ತು.


ಇದು ಮುಂದೆ ಆಸ್ಟ್ರೇಲಿಯಾಕ್ಕೆ ಪಾಯಿಂಟ್ ಟೇಬಲ್ ನಲ್ಲಿ ಮೊದಲೆರಡು ಸ್ಥಾನಗಳ ಟೇಬಲ್ ಟಾಪರ್ ಆಗಿ ಡಬ್ಲ್ಯು.ಟಿ.ಸಿ ಯ ಫೈನಲ್ ಗೆ ತಲುಪುವುದಕ್ಕೆ ಬಹಳಷ್ಟು ಹೊಡೆತ ಕೊಟ್ಟಿತ್ತು.ಆ ಆವೃತ್ತಿಯಲ್ಲಿ ನ್ಯೂಜಿಲೆಂಡ್ 70.0 PCT ಯೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ತಂಡವಾಗಿ ಫೈನಲ್ ಗೆ ಲಗ್ಗೆ ಹಾಕಿದ್ದರೆ ಆಸ್ಟ್ರೇಲಿಯಾ 69.2 PCT ಯ ಕಾರಣದಿಂದಾಗಿ ಅಂಕಪಟ್ಟಿಯಲ್ಲಿ ಮೂರನೇ ತಂಡವಾಗಿ ಫೈನಲ್ ಪ್ರವೇಶದಿಂದ ವಂಚಿತವಾಯಿತು.ಎರಡೂ ತಂಡಗಳ PCT ಡಿಫರೆನ್ಸ್ ನೋಡಿ.ಕೇವಲ 0.8 ಅಷ್ಟೇ! 


ಐಸಿಸಿ ಯ "Article 2.22" ಪಂದ್ಯ ಒಂದರ ದಂಡದ ಬಗ್ಗೆ ನಿರ್ಧರಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ತಂಡವೊಂದು ನಿಗದಿತ ಪಡಿಸಲಾದ ಓವರಿಗಿಂತ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿದರೆ ಆವಾಗ ಮ್ಯಾಚ್ ಫೀ ಯ 20% ದಂಡ ವಿಧಿಸಲಾಗುತ್ತದೆ. ಅದೇ ರೀತಿ ನಿರ್ದಿಷ್ಟ ಸಮಯದಲ್ಲಿ ತಂಡವೊಂದು ನಿಗದಿತ ಪಡಿಸಲಾದ ಓವರಿಗಿಂತ ಎರಡು ಓವರ್  ಕಡಿಮೆ ಬೌಲಿಂಗ್ ಮಾಡಿದರೆ ಆವಾಗ ಮ್ಯಾಚ್ ಫೀ ಯ 40% ದಂಡ ವಿಧಿಸಲಾಗುತ್ತದೆ. ಇದೇ ರೀತಿ ಕಡಿಮೆ ಬೌಲಿಂಗ್ ಮಾಡಿದ ಓವರ್ ಗಳ ಸಂಖ್ಯೆ ಹೆಚ್ಚಾದಂತೆ ದಂಡದ % ಕೂಡ ಹೆಚ್ಚಾಗುತ್ತಾ ಹೋಗುತ್ತದೆ.


ಎಷ್ಟು ಓವರ್ ನಷ್ಟವಾಗಿದೆ ಹಾಗೂ ಎಷ್ಟು ದಂಡ ಹಾಕಬೇಕು ಎಂಬುದನ್ನು  ಹೆಚ್ಚಾಗಿ ಫೀಲ್ಡ್ ಅಂಪೈರ್, ಥರ್ಡ್ ಅಂಪೈರ್, ಪೊರ್ತ್ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಗಳ ಪ್ಯಾನೆಲ್ ನಿರ್ಧರಿಸುತ್ತದೆ.ಇದು ಏತಕ್ಕಾಗಿ ಮಾಡುತ್ತಾರೆ ಎಂದರೆ ಈ ರೀತಿಯ ಸ್ಲೋ ಓವರ್ ರೇಟ್ ನಿಂದಾಗಿ ಸಮಯದ ಅಭಾವವಾಗಿ ಅದು ಪಂದ್ಯದ  ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಕಾರಣಕ್ಕಾಗಿ.


ಪೋರ್ತ್ ಅಂಪೈರ್ ಎಂಬುವವನು ಕೇವಲ ಗ್ರೌಂಡಿಗೆ ಬಾಲ್ ಗಳನ್ನು ತಂದು ಕೊಡಲು ಇರುವುದಲ್ಲ.ಗ್ರೌಂಡಿನಲ್ಲಿ ಯಾರಾದರೂ ಆಟಗಾರರ ಅಶಿಸ್ತಿನ ವರ್ತನೆ ತೋರಿದರೆ,ಸ್ಲೋ ಓವರ್ ರೇಟ್ ನಂತಹ ಘಟನೆಗಳು ನಡೆದರೆ, ಒಟ್ಟಿನಲ್ಲಿ ಆಟಕ್ಕೆ ಸಂಬಂಧಿಸಿದಂತೆ ಗ್ರೌಂಡಿನಲ್ಲಿ ನಡೆಯುವ ಯಾವುದೇ ವಿದ್ಯಮಾನಗಳ ಬಗ್ಗೆ ಪರಿಶೀಲನೆ ಮಾಡಿ ದಂಡನೆ ಇಲ್ಲವೇ  ಮಹತ್ವದ ತೀರ್ಪುಗಳನ್ನು ನೀಡುವವ ಪ್ಯಾನಲ್ ನಲ್ಲಿ ಅವನೂ ಕೂಡ ಒಬ್ಬ ಸದಸ್ಯನಾಗಿ ಇರುತ್ತಾನೆ ಮತ್ತು ಅವನ ಅಭಿಪ್ರಾಯಕ್ಕೂ ಮನ್ನಣೆ ಇರುತ್ತದೆ.

ಟೆಸ್ಟ್ ಮ್ಯಾಚ್ ನಲ್ಲಿ ದಿನಕ್ಕೆ ಕಡ್ಡಾಯ 90 ಓವರ್ ಎಸೆಯಬೇಕು ಎಂಬ ನಿಯಮ ಇದ್ದರೂ ಮಳೆ, ಬ್ಯಾಡ್ ಲೈಟ್ ಕಾರಣದಿಂದಾಗಿ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಅದರ ಜೊತೆಗೆ ಈ ಸ್ಲೋ ಓವರ್ ರೇಟ್ ಕೂಡ ಸೇರಿಕೊಂಡು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಬಾರದು ಎಂಬುದೇ ಈ ದಂಡದ ಹಿಂದಿರುವ ಉದ್ದೇಶ. 


ಈ ರೀತಿ ಸ್ಲೋ ಓವರ್ ರೇಟ್ ನಲ್ಲಿ ಯಾವುದೇ ತಂಡಕ್ಕೆ ದಂಡ ವಿಧಿಸುವುದು ಹಿಂದಿನಿಂದಲೂ ಇದ್ದದ್ದೇ. ಡಬ್ಲ್ಯು.ಟಿ.ಸಿ ಫೈನಲ್ ಗೂ ಮೊದಲು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲೂ ಇಂಗ್ಲೆಂಡ್ ಸ್ಲೋ ಓವರ್ ರೇಟ್ ನಲ್ಲಿ ಬೌಲಿಂಗ್ ಮಾಡಿತ್ತು ಹಾಗಾಗಿ ಆವಾಗಲೂ ಇಂಗ್ಲೆಂಡ್ ಗೆ ಮ್ಯಾಚ್ ಫೀ ಯ 40% ದಂಡ ವಿಧಿಸಲಾಗಿತ್ತು. 


"Article 16.11.2 " ಎನ್ನುವುದು WTC ಯ ನಿಯಮವಾಗಿದ್ದು ಇದು WTC ಯ ಪಾಯಿಂಟ್ ಟೇಬಲ್ ನಲ್ಲಿ ತಂಡಗಳು ಸ್ಲೋ ಓವರುಗಳಲ್ಲಿ ಬೌಲಿಂಗ್ ಮಾಡಿದಾಗ ನೇರವಾಗಿ ಪಾಯಿಂಟ್ ಅನ್ನೇ ಕಡಿತಗೊಳಿಸಿ ಬಿಡುತ್ತದೆ. ಮ್ಯಾಚ್ ಫೀ ಯ ದಂಡಕ್ಕಿಂತಲೂ ಇದೇ ಜಾಸ್ತಿ ಡೇಂಜರು. ಏಕೆಂದರೆ ಡಬ್ಲ್ಯು.ಟಿ.ಸಿ ಯ ಪಾಯಿಂಟ್ ಟೇಬಲ್ ನಲ್ಲಿ ಒಂದೊಂದು ಅಂಕಕ್ಕೂ ತಂಡಗಳು ಸಿಕ್ಕಾಪಟ್ಟೆ ಬೆವರು ಹರಿಸಬೇಕಾಗುತ್ತದೆ.


ಅಂಕಗಳ ಸಂಕಲನಕ್ಕೆ ಹೊರಡುವಾಗ ಈ ರೀತಿ ಸೋಲದೆಯೂ 2,4 ಅಂಕಗಳು ಅಂಕ ಪಟ್ಟಿಯಿಂದ ಹಾಗೇ ವ್ಯವಕಲನವಾಗಿ ವಿನಾಕಾರಣ ಪೋಲಾಗಿ ಹೋದರೆ ಖಂಡಿತವಾಗಿಯೂ ಯಾರಿಗೆ ಆಗಲಿ  ಹೊಟ್ಟೆ ಉರಿಯದೇ ಇರದು.ಟೀಮ್ ಇಂಡಿಯಾ ಇದರ ಬಗ್ಗೆಯೂ ಎಚ್ಚರದಿಂದ ಇರಲೇಬೇಕು.ಏಕೆಂದರೆ ಕೊನೆಯಲ್ಲಿ ಟೇಬಲ್ ಟಾಪರ್ ಗಳನ್ನು ನಿರ್ಧರಿಸುವಾಗ ಒಂದೊಂದು ಅಂಕವು ಸಹ PCT ಗೆ ಅತೀ ಮುಖ್ಯ.ಇದಕ್ಕೆ ಕಳೆದ ಆವೃತ್ತಿಯ ಆಸ್ಟ್ರೇಲಿಯಾದ ಸ್ಪಷ್ಟ ಉದಾಹರಣೆಯೇ ಎಲ್ಲರ ಮುಂದಿದೆ. 


ಹಾಗಾಗಿ ಈ ರೀತಿಯ ಪೆನಾಲ್ಟಿಯ ಕಾರಣದಿಂದಾಗಿ ಈಗೀನ ಭಾರತ ಮತ್ತು ಇಂಗ್ಲೆಂಡ್ ನ ಎರಡು ಟೆಸ್ಟ್ ಪಂದ್ಯಗಳು ಮುಗಿದ ನಂತರ ಭಾರತದ ಒಟ್ಟು ಅಂಕ ನಿಯಮದಂತೆ 16 ಆಗದೆ,2+12 =14 ಆಗಿ,ತಂಡದ  PCT = 58.33 ಆಗಿ ಬಿಟ್ಟಿದೆ. 


 PCT =(14/24)*100 =58.33. 


ಒಂದು ವೇಳೆ ಪೆನಾಲ್ಟಿ ಇಲ್ಲದೇ ಹೋಗಿದ್ದರೆ ಈ ಎರಡು ಪಂದ್ಯಗಳ ನಂತರ ಟೀಮ್ ಇಂಡಿಯಾಕ್ಕೆ ಒಟ್ಟು 16 ಅಂಕಗಳು (ಒಂದು ಡ್ರಾ+ಒಂದು ಜಯ) ಸಿಕ್ಕಿ ಟೀಮ್ ಇಂಡಿಯಾದ PCT 66.66 ಆಗಿರುತ್ತಿತ್ತು.ಈಗ ನಿಮಗೆ ಖಂಡಿತವಾಗಿಯೂ PCT ಯ ಮಹತ್ವ ಹಾಗೂ ಅದರ ಲೆಕ್ಕಾಚಾರಗಳ ಬಗ್ಗೆ ಚೆನ್ನಾಗಿಯೇ ಗೊತ್ತಾಗಿರುತ್ತದೆ ಎಂದು ಅಂದುಕೊಳ್ಳುತ್ತೇನೆ.


ಮತ್ತೊಂದು ವಿಷಯ ತಂಡವೊಂದು ಎಷ್ಟು ಪಂದ್ಯಗಳ ಸರಣಿ ಆಡುತ್ತದೆ ಎಂಬುದಕ್ಕಿಂತಲೂ ಅದು ಸರಣಿಯಲ್ಲಿರುವ ಒಟ್ಟು ಪಂದ್ಯದಲ್ಲಿ ಎಷ್ಟು ಪ್ರತಿಶತ ಪಂದ್ಯಗಳನ್ನು ಗೆದ್ದುಕೊಂಡಿದೆ ಅನ್ನುವುದೇ ಇಲ್ಲಿ ಲೆಕ್ಕಕ್ಕೆ ಬರುವುದು.ಹಾಗಾಗಿ ಒಂದು ರೀತಿಯಲ್ಲಿ ನೋಡಿದರೆ ಇದು ಒಳ್ಳೆಯದೇ ಆಗಿದೆ.ಮತ್ತೊಂದು ವಿಷಯ ಏನೆಂದರೆ ಒಂದು ಸರಣಿಯಲ್ಲಿ ಎಷ್ಟು ಪಂದ್ಯ ಆಡಬೇಕು ಎನ್ನುವುದು  ಸಹ ಆಯಾಯ ತಂಡಗಳಿಗೆ ಬಿಟ್ಟಿರುವ ವಿಷಯವಾಗಿದೆ.ಕೆಲವೊಮ್ಮೆ ನಿಗದಿಯಾಗಿರುವ ಪಂದ್ಯಕ್ಕಿಂತ ಕಡಿಮೆ ಪಂದ್ಯಗಳನ್ನು ಸಹ ಆಡುವುದಿದೆ ಅದೇ ರೀತಿ ಹೆಚ್ಚು ಪಂದ್ಯಗಳನ್ನು ಸಹ ಆಡುವ ಅವಕಾಶ ಇದೆ. 


ಅಂದ ಹಾಗೆ ನಿನ್ನೆಯವರೆಗೆ ಡಬ್ಲ್ಯು.ಟಿ.ಸಿ ಯ ಅಂಕ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಮೊದಲ ಸ್ಥಾನದಲ್ಲಿ ಮತ್ತು ಟೀಮ್ ಇಂಡಿಯಾ ಎರಡನೇ ಸ್ಥಾನದಲ್ಲಿ ಇತ್ತು.ಜಮೈಕಾದಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪಾಕಿಸ್ತಾನದ ವಿರುದ್ಧ ಕೊನೆಯ ದಿನ ಕೊನೆಯ ಒಂದು ವಿಕೆಟ್ ನಿಂದ ರೋಚಕವಾಗಿಯೇ ಜಯ ಗಳಿಸಿತ್ತು.ಹಾಗಾಗಿ ಆ ಒಂದು ಪಂದ್ಯ ಗೆದ್ದದಕ್ಕಾಗಿ ಸಂಪೂರ್ಣ 100 PCT ಗಳನ್ನು ಅದು  ತನ್ನದಾಗಿಸಿಕೊಂಡಿತ್ತು.


ಆದರೆ ನಿನ್ನೆ ತಡರಾತ್ರಿ ಮುಗಿದ(ಭಾರತೀಯ ಕಾಲಮಾನದ ಪ್ರಕಾರ )ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ಎರಡನೆಯ ಟೆಸ್ಟ್‌ನಲ್ಲಿ ಪಾಕಿಸ್ತಾನ ಜಯಗಳಿಸಿದ ಕಾರಣ ಪಾಕಿಸ್ತಾನ ತನ್ನ PCT ಯನ್ನು ಎರಡು ಪಂದ್ಯಗಳ ಸರಣಿಯಲ್ಲಿ 0 ಯಿಂದ 50 ಕ್ಕೆ ಏರಿಸಿಕೊಂಡರೆ, ಸೋತ ವೆಸ್ಟ್ ಇಂಡೀಸ್ ನ PCT 100 ರಿಂದ 50 ಕ್ಕೆ ಇಳಿದಿದೆ.ಹಾಗಾಗಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ಒಂದು ಗೆಲುವು ಹಾಗೂ ಒಂದು ಸೋಲಿನಿಂದಾಗಿ ತಲಾ 50 PCT ಗಳೊಂದಿಗೆ ಡಬ್ಲ್ಯು.ಟಿ.ಸಿ ಪಾಯಿಂಟ್ ಟೇಬಲ್ ನಲ್ಲಿ 2 ಮತ್ತು 3 ನೇ ಸ್ಥಾನವನ್ನು ಅಲಂಕರಿಸಿದರೆ,ಒಂದು  ಡ್ರಾ(ದಂಡ ಇರುವ ಕಾರಣ 2 ಅಂಕ) ಹಾಗೂ ಒಂದು ಗೆಲುವು ಹೊಂದಿರುವ ಟೀಮ್ ಇಂಡಿಯಾ 58.33 PCT ಗಳೊಂದಿಗೆ ಸದ್ಯಕ್ಕೆ ಟೇಬಲ್ ನ ತುತ್ತತುದಿಯಲ್ಲಿ ಅಂದರೆ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ.ಅದಕ್ಕಾಗಿ ಟೀಮ್ ಇಂಡಿಯಾಗೆ ವಿಶೇಷ ಅಭಿನಂದನೆಗಳು.


ಇದು ಮುಂದಕ್ಕೆ ಪಂದ್ಯಗಳು ಸಾಗಿದಂತೆ ಮೇಲೆ ಕೆಳಗೆ ಆಗುತ್ತಲೇ ಇರುತ್ತವೆ. ಅದೇ ಈ ಡಬ್ಲ್ಯು.ಟಿ.ಸಿ ಫಾರ್ಮೆಟ್ ನ ನಿಜವಾದ ಮಜಾ.ತಮ್ಮ ತಂಡ ಆಡದೇ ಇದ್ದರೂ ಸಹ ಯಾವುದೇ ತಂಡಗಳ ಮ್ಯಾಚ್ ಮುಗಿದ ಕೂಡಲೇ ಪ್ರತಿಯೊಬ್ಬರೂ ಡಬ್ಲ್ಯು.ಟಿ.ಸಿ ಯ ಪಾಯಿಂಟ್ ಟೇಬಲ್ ಕಡೆಗೆ ಕುತೂಹಲದಿಂದ ಕಣ್ಣು ಹೊರಳಿಸಿ ತಮ್ಮ ತಂಡ ಈಗ ಯಾವ ಪೊಜಿಷನ್ನಿನಲ್ಲಿ ಇದೆ ಎಂದು ನೋಡುವುದೇ ಒಂದು ಆಸಕ್ತಿಕರ ವಿಷಯ.


ನಾಲ್ಕು ವರ್ಷಕ್ಕೊಮ್ಮೆ ಬರುವ ಏಕದಿನ ವರ್ಲ್ಡ್ ಕಪ್ ನಲ್ಲಿ ಪಂದ್ಯ ನಡೆವಾಗ ತಮ್ಮ ತಮ್ಮ ತಂಡಗಳ ಸ್ಥಾನಮಾನವನ್ನು ಎಲ್ಲರೂ ಆಸಕ್ತಿಯಿಂದ ಗಮನಿಸುವಂತೆ ಪಕ್ಕಾ ಟೆಸ್ಟ್ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಎರಡು ವರ್ಷ ಸಂಪೂರ್ಣ ಈ ಡಬ್ಲ್ಯು.ಟಿ.ಸಿ ಯ ಅಂಕ ಪಟ್ಟಿಯದ್ದೇ  ಒಂದು ದಿವ್ಯ ಧ್ಯಾನ ಮತ್ತು ಮನಸ್ಸಿನಲ್ಲಿಯೇ ನಿಲ್ಲದ ಒಂದಷ್ಟು ಅಂಕಗಳ ಅಂಕೆಯಿಲ್ಲದ ಲೆಕ್ಕಾಚಾರ. ಅಂದ ಹಾಗೆ ಡಬ್ಲ್ಯು.ಟಿ.ಸಿ ಕೂಡ ಒಂದು ಅರ್ಥದಲ್ಲಿ ಟೆಸ್ಟ್ ಪಂದ್ಯಗಳ ವಿಶ್ವಕಪ್ ಇದ್ದಂತೆಯೇ.


ಕೊನೆಯಲ್ಲಿ ಯಾರು ಮೊದಲೆರಡು ಸ್ಥಾನವನ್ನು ಅಧಿಕಾರಯುತವಾಗಿ ಬಾಚಿಕೊಳ್ಳುತ್ತಾರೋ ಅವರಿಗೆ ಈ ಎರಡನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಟಿಕೆಟ್ ಪಕ್ಕಾ ಆಗಿ ಬಿಡುವುದು.ನಮ್ಮ ಆಸೆಗಳು ಎಂದಿನಂತೆ ಅದೇ,ಭಾರತವೇ ಎಲ್ಲರಿಗಿಂತ ಮೇಲಿರಲಿ ಜೊತೆಗೆ ಈ ಬಾರಿ ಆದರೂ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಟೈಟಲ್ ನಮ್ಮದಾಗಿ ಬಿಡಲಿ. 


ಮೇಲೆ ಟೈ ಪಂದ್ಯಕ್ಕೆ 6 ಅಂಕಗಳು ಇದೆ ಎಂದು ಹೇಳುವಾಗ, ಟೈ ಪಂದ್ಯ ಟೆಸ್ಟ್ ಕ್ರಿಕೆಟ್ ನ ಅಪರೂಪದ ವಿದ್ಯಮಾನ ಎಂದು ಕೂಡ  ಹೇಳಿ ಬಿಟ್ಟಿದ್ದೆ.ಹಾಗಾಗಿ ಅದು ಏತಕ್ಕಾಗಿ ಅಷ್ಟೊಂದು ಅಪರೂಪದ ಬಗೆ ಎಂದು ಸ್ವಲ್ಪ ಹಳೆಯದನ್ನು ಕೆದಕಿ ಇಂದು ಕ್ರಿಕೆಟ್ ಇತಿಹಾಸದ ಬಗ್ಗೆ ಹಾಗೂ ಅದರ ಅಂಕಿ ಅಂಶಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆಯೋಣ.ಅಂಕಿ ಅಂಶಗಳು ಯಾವುದೇ ಕ್ರೀಡೆಗೆ ಬೇಕು,ಅದೊಂತರಹ ಶ್ಯಾವಿಗೆ ಪಾಯಸದಲ್ಲಿ ಅಲ್ಲಲ್ಲಿ ಸಿಗುವ ಹುರಿದ ಗೋಡಂಬಿಯ ಹಾಗೆ ಬರಹವನ್ನು ಸವಿಯುವಾಗ ಒಂದಷ್ಟು ಸಿಗುತ್ತಲೇ ಇರಬೇಕು. 


ಹೌದು ಟೆಸ್ಟ್ ಕ್ರಿಕೆಟ್ ನಲ್ಲಿ ಟೈ ಫಲಿತಾಂಶ ಎನ್ನುವುದು ಅತೀ ಅಪರೂಪದ ವಿದ್ಯಮಾನ ಏಕೆಂದರೆ 1877 ರಿಂದ ಆರಂಭವಾಗಿ ಹೆಚ್ಚು ಕಡಿಮೆ 2000 ಕ್ಕಿಂತಲೂ ಅಧಿಕ ಟೆಸ್ಟ್ ಪಂದ್ಯಾಟಗಳು  ನಡೆದಿದ್ದರೂ ಇಲ್ಲಿಯವರೆಗೆ ಎರಡೇ ಎರಡು ಪಂದ್ಯಗಳು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ  ಟೈ ಫಲಿತಾಂಶವನ್ನು ಕಂಡಿದೆ! 


ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದು ಟೈ ಆಗಿದ್ದು ಟೆಸ್ಟ್ ಕ್ರಿಕೆಟ್ ಆಟವಾಡಲು ಶುರು ಮಾಡಿದ 84 ವರ್ಷಗಳ ನಂತರ ಅಂದರೆ ಡಿಸೆಂಬರ್ 9-1960 ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾದ ನಡುವೆ ನಡೆದಂತಹ ಬ್ರಿಸ್ಬೇನ್ ನ ಪಂದ್ಯದಲ್ಲಿ. ಆಸ್ಟ್ರೇಲಿಯಾಕ್ಕೆ ಆ ಪಂದ್ಯದ ಆರನೆಯ ದಿನ(ಆವಾಗ ಟೆಸ್ಟ್ ಮ್ಯಾಚ್ ಆರು ದಿನ ನಡೆಯುತ್ತಿತ್ತು) ಕೊನೆಯ ಓವರಿನ 8 ಬಾಲಿನಲ್ಲಿ (ಓವರ್ ಒಂದಕ್ಕೆ 8 ಎಸೆತಗಳು ಕೂಡ ಆವಾಗದ ನಿಯಮ) ಗೆಲುವಿಗೆ 6 ರನ್ನುಗಳ ಅವಶ್ಯಕತೆ ಇತ್ತು. ಆಸ್ಟ್ರೇಲಿಯಾದ ಕೈಯಲ್ಲಿ 3 ವಿಕೆಟ್ ಕೂಡ ಇತ್ತು. ಆದರೆ ಕೇವಲ 5 ರನ್ನುಗಳನ್ನಷ್ಟೇ ಗಳಿಸಲು ಶಕ್ತವಾದ ಆಸ್ಟ್ರೇಲಿಯಾ ಒಂದೊಂದೇ ವಿಕೆಟ್ ಕಳೆದುಕೊಂಡು ಹೋಗಿ ಆ ಓವರಿನ 7 ನೇ ಎಸೆತದಲ್ಲಿ ಆಲ್ ಔಟ್ ಆಗಿ ಬಿಡುವ ಮೂಲಕ ಟೆಸ್ಟ್ ಇತಿಹಾಸದ ಮೊದಲ ಟೈ ಪಂದ್ಯಕ್ಕೆ ಸಾಕ್ಷಿಯಾಗಿ ಬಿಟ್ಟಿತು. 


ಇನ್ನು ಎರಡನೆಯ ಟೈ ಫಲಿತಾಂಶ ಟೆಸ್ಟ್ ನಲ್ಲಿ ಬಂದದ್ದು 22 ಸೆಪ್ಟೆಂಬರ್ 1986 ಚೆನ್ನೈ ನ ಚಿದಂಬರಂ ಸ್ಟೇಡಿಯಮ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಪಂದ್ಯದಲ್ಲಿ.ಐದನೇ ದಿನದ ಕೊನೆಯಲ್ಲಿ ಎರಡನೆಯ ಇನ್ನಿಂಗ್ಸ್ ನ ಆ ಅಂತಿಮ ಓವರಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತಕ್ಕೆ 6 ಎಸೆತಗಳ ಮುಂದೆ ಗೆಲುವಿಗೆ 4 ರನ್ ಗಳ ಅವಶ್ಯಕತೆ ಇತ್ತು.ಕೈಯಲ್ಲಿ ಇದ್ದ ವಿಕೆಟ್ ಒಂದೇ. ಕ್ರೀಸಿನಲ್ಲಿ ಇದ್ದದ್ದು ರವಿ ಶಾಸ್ತ್ರಿ ಮತ್ತು ಮನಿಂದರ್ ಸಿಂಗ್. ಆದರೆ 3 ರನ್ ಗಳಿಸಲು ಅಷ್ಟೇ ಸಫಲವಾದ ಭಾರತ ಆ ಓವರಿನ 5 ನೇ ಎಸೆತದಲ್ಲಿ ಆಲ್ ಔಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದ ಎರಡನೇ ಟೈ ಪಂದ್ಯಕ್ಕೆ ಸಾಕ್ಷಿಯಾಯಿತು.


ಆ ನಂತರ ಟೈ ಪಂದ್ಯಗಳೇ ಟೆಸ್ಟ್  ಕ್ರಿಕೆಟ್ ನಲ್ಲಿ  ಸಂಭವಿಸಿಲ್ಲ.ನಿಜಕ್ಕೂ ಅದು ಬಲು ಅಪರೂಪದ ಹಾಗೂ ಅಷ್ಟೇ ಸುಂದರವಾದ ವಿದ್ಯಮಾನ.ಇಲ್ಲಿಯವರೆಗೆ ಎರಡೂ ಐತಿಹಾಸಿಕ ಟೈ ಟೆಸ್ಟ್ ಗಳಿಗೆ ಸಾಕ್ಷಿಯಾದ ಏಕೈಕ ತಂಡ ಎಂದರೆ ಅದು ಆಸ್ಟ್ರೇಲಿಯಾ ಒಂದೇ. 


ಇಲ್ಲಿ ಇನ್ನೊಂದು ಸಂಗತಿಯನ್ನು ನಾವು ಗಮನಿಸಬೇಕು.ಒಂದು ವೇಳೆ ಕೊನೆಯಲ್ಲಿ ಟಾರ್ಗೆಟ್ ಅನ್ನು ಬೆನ್ನು ಹತ್ತುವಾಗ ತಂಡದ ಮೊತ್ತವು ಸಮಬಲವಾಗಿ ಪಂದ್ಯದ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ತಂಡದ ಇನ್ನೂ ವಿಕೆಟ್ ಗಳು ಉಳಿದಿದ್ದರೆ ಅಂದರೆ ಆ ತಂಡ ಸಂಪೂರ್ಣವಾಗಿ ಆಲ್ ಔಟ್ ಆಗದೇ ಹೋದರೆ ಆಗ ತಂಡವೊಂದು ಬೆನ್ನತ್ತಿದ ಟಾರ್ಗೆಟ್ ಟೈ ಆಗಿದ್ದರೂ ಸಹ ಅದು ಟೈ ಪಂದ್ಯ ಎಂದು ಕರೆಸಿಕೊಳ್ಳುವುದಿಲ್ಲ,ಬದಲಿಗೆ ಅದು ಡ್ರಾ ಎಂದೇ ಕರೆಸಿಕೊಳ್ಳುತ್ತದೆ.


ಈ ರೀತಿಯಾಗಿ ಡ್ರಾ ಆದ ಪಂದ್ಯಗಳು ಕೂಡ ಎರಡೇ ಇರುವುದು ಕ್ರಿಕೆಟ್ ಇತಿಹಾಸದಲ್ಲಿ. 18 ಡಿಸೆಂಬರ್ 1996 ರಲ್ಲಿ ಜಿಂಬಾಬ್ವೆಯ ಬುಲವಾಯೋ ದಲ್ಲಿ ನಡೆದ ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ತಂಡದ ನಡುವೆ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಗೆಲ್ಲಲು  ಕೊನೆಯ ಇನ್ನಿಂಗ್ಸ್ ನಲ್ಲಿ 205 ರನ್ನುಗಳ ಅವಶ್ಯಕತೆ ಇತ್ತು.ಕೊನೆಯ ಓವರ್ ನ ಕೊನೆಯ ಬಾಲ್ ನಲ್ಲಿ ಇಂಗ್ಲೆಂಡ್ ಗೆ 3 ರನ್ನುಗಳ ಅವಶ್ಯಕತೆ ಇತ್ತು.2 ರನ್ನುಗಳನ್ನು ಓಡಿ ಪೂರ್ತಿಗೊಳಿಸಿದ ಇಂಗ್ಲೆಂಡ್ ನ ನಿಕ್ಕ್ ನೈಟ್ ಮೂರನೇ ರನ್ ಗಾಗಿ ಓಡುವಾಗ ರನ್ ಔಟ್ ಆಗಿ ಬಿಟ್ಟಿದ್ದ.ಅಲ್ಲಿಗೆ ದಿನದಾಟದ ಕೊನೆಯಲ್ಲಿ ಇಂಗ್ಲೆಂಡ್ ಗಳಿಸಿದ್ದು 204 /6.ಗಳಿಸಬೇಕಾದ ಮೊತ್ತ ಟೈ ಆಗಿದ್ದರೂ ಸಹ ಇನ್ನೂ 4 ವಿಕೆಟ್ ಕೈಯಲ್ಲಿ ಇದ್ದ ಕಾರಣ ಆ  ಪಂದ್ಯ  ಟೈ ಎಂದು ಅನ್ನಿಸಿಕೊಳ್ಳದೇ ಡ್ರಾ ಎಂಬುದಾಗಿಯೇ ಪರಿಗಣಿಸಲ್ಪಟ್ಟಿತ್ತು.


ಇದೇ ರೀತಿ ಸ್ಕೋರ್ ಲೆವೆಲ್ ಆಗಿ ಡ್ರಾ ಆದ ಇನ್ನೊಂದು ಪಂದ್ಯ ಎಂದರೆ ಅದು ನಮಗೆಲ್ಲರಿಗೂ ಬಹಳ ಚೆನ್ನಾಗಿ ನೆನಪಿರುವ 22 ನವೆಂಬರ್ 2011 ರಲ್ಲಿ ಮುಂಬೈನ ವಾಂಖೇಡೆ ಸ್ಟೇಡಿಯಮ್ ನಲ್ಲಿ ನಡೆದಂತಹ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಮತ್ತು ಡ್ಯಾರನ್ ಸಮಿ ನಾಯಕತ್ವದ ವೆಸ್ಟ್ ಇಂಡೀಸ್‌ನ ನಡುವೆ ನಡೆದ ಪಂದ್ಯ.ಇಲ್ಲಿ ಪಂದ್ಯದ 4 ನೇ ಇನ್ನಿಂಗ್ಸ್ ಆಡಿದ್ದು ಭಾರತ.ಐದನೇ ದಿನದಾಟದ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಗೆಲ್ಲಲು ಎರಡು ರನ್ ಬೇಕಿದ್ದಾಗ ಆರ್. ಅಶ್ವಿನ್ ಒಂದು ರನ್ ಪೂರ್ಣ ಗೊಳಿಸಿ ಎರಡನೇ ರನ್ ಗೆ ಓಡುವಾಗ ರನ್ ಔಟ್ ಆಗಿ ಬಿಟ್ಟಿದ್ದ. ವೆಸ್ಟ್ ಇಂಡೀಸ್ ನೀಡಿದ್ದು 243 ರನ್ನುಗಳ ಟಾರ್ಗೆಟ್. ಆದರೆ ಅಶ್ವಿನ್ ಔಟಾಗುವಾಗ ಭಾರತ ಗಳಿಸಿದ್ದು 242/9. ಟೋಟಲ್ ರನ್ನುಗಳು ಸಮವಾಗಿದ್ದರೂ ಭಾರತ ಇನ್ನೂ ಒಂದು ವಿಕೆಟ್ ಉಳಿಸಿಕೊಂಡಿತ್ತು. ವರುನ್ ಅರೋನ್ ಕ್ರೀಸಿನಲ್ಲೇ ಇದ್ದರೆ,ಪ್ರಗ್ಯಾನ್ ಓಜಾ ಇನ್ನೂ ಬ್ಯಾಟಿಂಗ್ ಗೆ ಬರಬೇಕಾಗಿತ್ತು. ಹಾಗಾಗಿ ಆ ಪಂದ್ಯ ಕೂಡ ಟೆಸ್ಟ್ ಇತಿಹಾಸದ 3 ನೇ ಟೈ ಆಗುವ ಅವಕಾಶದಿಂದ ವಂಚಿತವಾಯಿತು. ಆದರೂ ಸ್ಕೋರ್ ಲೆವೆಲ್ ಆಗಿ ಡ್ರಾ ಆದ ಎರಡೇ ಎರಡು ವಿದ್ಯಮಾನಗಳಲ್ಲಿ ಇದೂ ಕೂಡ ಒಂದು ಎಂದು ಸದಾ ನೆನಪಿನಲ್ಲಿ ಉಳಿಯುತ್ತದೆ.


ಈಗ ನಿಮಗೆ ಖಂಡಿತವಾಗಿಯೂ ಗೊತ್ತಾಗಿರುತ್ತದೆ. ಹೇಗೆ ಉಳಿದ ಕ್ರಿಕೆಟ್ ಫಾರ್ಮೆಟ್ ಗಿಂತ ಅಂದರೆ ಏಕದಿನ ಮತ್ತು ಟಿ ಟ್ವೆಂಟಿ ಗಿಂತ ಟೆಸ್ಟ್ ಕ್ರಿಕೆಟ್ ನಲ್ಲಿ ಪಂದ್ಯ ಒಂದು ಟೈ ಆಗುವುದು ಎಷ್ಟು ವಿಭಿನ್ನ ಎಷ್ಟು ವಿಶಿಷ್ಟ ಎಂಬುದಾಗಿ. ಅದಕ್ಕಾಗಿಯೇ ಹೇಳಿದ್ದು ಟೈ ಎಂಬುದು ಟೆಸ್ಟ್ ಕ್ರಿಕೆಟ್ ನ ಅತೀ ಸುಂದರ ವಿದ್ಯಮಾನಗಳಲ್ಲಿ ಒಂದು ಎಂದು.ವಿಶೇಷ ಏನೆಂದರೆ ಭಾರತೀಯ ತಂಡ ಈ ಎರಡೂ ವಿದ್ಯಮಾನಗಳಲ್ಲಿ ಅಂದರೆ ಟೈ ಪಂದ್ಯ ಒಂದು ಫರ್ಫೆಕ್ಟ್ ಆಗಿ ನಿಯಮಾನುಸಾರ ಟೈ ಆಗುವುದು ಮತ್ತು ಸ್ಟೋರ್ ಲೆವೆಲ್ ಆಗಿ ಡ್ರಾ ಆಗುವ ಈ ಎರಡು ಅತೀ ವಿಶಿಷ್ಟ ವಿದ್ಯಮಾನಗಳಲ್ಲಿ ಭಾಗಿಯಾಗಿವೆ. ಇನ್ನೊಂದು ತಂಡ ಅಂದರೆ ಅದು ವೆಸ್ಟ್ ಇಂಡೀಸ್.ಎರಡೂ ಟೈ ಪಂದ್ಯಗಳಲ್ಲಿ ಗುರುತಿಸಿಕೊಂಡ ಆಸ್ಟ್ರೇಲಿಯಾ ಈ ಎರಡನೆಯ ವಿದ್ಯಮಾನ ಅಂದರೆ ಸ್ಕೋರ್ ಲೆವೆಲ್ ಆಗಿ ಡ್ರಾ ಆಗುವುದರಲ್ಲಿ ಇಲ್ಲಿಯವರೆಗೆ ಗುರುತಿಸಿಕೊಂಡಿಲ್ಲ.


ಇನ್ನೊಂದು ಗಮ್ಮತ್ತಿನ ವಿಷಯ ಏನೆಂದರೆ ಅಷ್ಟು ದಿನ ಆಡುವ ಟೆಸ್ಟ್ ಪಂದ್ಯವೊಂದು ಟೈ ಆಗಿ ಹೋಗುವುದು ಎರಡೂ ತಂಡಗಳಿಗೂ ಎಂದಿಗೂ ನುಂಗಲಾರದ ಬಿಸಿ ತುಪ್ಪವೇ.ಏಕೆಂದರೆ ಟೈ ಫಲಿತಾಂಶ ಯಾರಿಗೂ ಬೇಡ. ಗೆಲುವೇ ಎಲ್ಲರಿಗೂ ಬೇಕಿರುವುದು,ಆದರೆ ಇಂತಹ ಘಟನೆಗಳು ಜರುಗಿದಾಗ ಕ್ರಿಕೆಟ್ ಜಗತ್ತು ಅದರಲ್ಲೂ ಟೆಸ್ಟ್ ಕ್ರಿಕೆಟ್ ಜಗತ್ತು ಒಮ್ಮೆ ಹಾಗೇ ಪುಳಕಿತವಾಗಿ ಬಿಡುತ್ತದೆ.ನಾನಂತು ಟೆಸ್ಟ್ ಪಂದ್ಯ ನೋಡುವಾಗ ಟೈ ಆಗಲಿ ಎಂದೇ ಅತೀ ಆಸೆಯಿಂದ ಕಾಯುತ್ತಿರುತ್ತೇನೆ. ಆದರೆ ಅದನ್ನು ಟಿವಿ ಪರದೆಯಲ್ಲಿ ಕಣ್ಣಾರೆ ಸವಿಯುವ ಭಾಗ್ಯ ನನಗಂತು ಇಲ್ಲಿಯವರೆಗೆ ಸಿಕ್ಕಿಲ್ಲ. 


ಓಕೆ.. ಇನ್ನು ನಾವು ವರ್ತಮಾನಕ್ಕೆ ಬರೋಣ,ಅಂದರೆ ಇಂದಿನ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಹೆಡಿಂಗ್ಲಿ ಕಡೆಗೆಯೇ ನಮ್ಮ ದೃಷ್ಟಿ ಹರಿಸೋಣ.ಇಂದು ಲೀಡ್ಸ್ ನ ಹೆಡಿಂಗ್ಲಿ ಕ್ರಿಕೆಟ್ ಗ್ರೌಂಡಿನಲ್ಲಿ  ಪಂದ್ಯ ನಡೆಯಲಿದೆ.ಇದು ಯಾರ್ಕ್ ಶೈರ್ ಕೌಂಟಿಯ ಹಿತ್ತಿಲು.ಯಾರ್ಕ್ ಶೈರ್ ಪರ ಆಡುವ ಆಂಗ್ಲರ ನಾಯಕ ಜೋ ರೂಟ್ ಹಾಗೂ ಜಾನಿ ಬೆರ್ಸ್ಟೋ ನ ಹೋಮ್ ಗ್ರೌಂಡ್ ಕೂಡ ಹೌದು. ಹಾಗಾಗಿ ಸಹಜವಾಗಿ ಅವರಿಬ್ಬರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮಾತ್ರವಲ್ಲ ಇಲ್ಲಿಯವರೆಗೆ ಆಂಗ್ಲರ ಬ್ಯಾಟಿಂಗ್ ನಲ್ಲಿ ಹೆಚ್ಚಿನ ಪ್ರತಿರೋಧ ತೋರಿದವರಲ್ಲಿ ಮೊದಲ ಸ್ಥಾನದಲ್ಲಿ ಜೋ ರೂಟ್ ಇದ್ದರೆ,ಆ ನಂತರ ತಕ್ಕ ಮಟ್ಟಿಗೆ  ಬ್ಯಾಟ್ ಬೀಸಿದ್ದು ಈ ಜಾನಿ ಬೆರ್ಸ್ಟೋ.


ಹಾಗಾಗಿ ಹೋಮ್ ಗ್ರೌಂಡ್  ಕಂಡಿಷನ್ ತಕ್ಕ ಮಟ್ಟಿಗೆ  ಅವರಿಬ್ಬರಿಗೆ ಅನುಕೂಲ ಆಗಬಹುದಾದರೂ ನೆಲಕಚ್ಚಿ ಆಡಿದರಷ್ಟೇ ರನ್ ಹರಿದು ಬರಲು ಸಾಧ್ಯ ಅನ್ನುವುದೂ ಕೂಡ ಅಷ್ಟೇ ಸತ್ಯ. ಸಿಬ್ಲಿಯ ಬದಲು ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಮೂರನೇ ಟೆಸ್ಟ್ ಮ್ಯಾಚ್ ಗೆ ಆಂಗ್ಲರ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿಶೇಷ ಏನೆಂದರೆ ಅವನು ಕೂಡ ಯಾರ್ಕ್ ಶೈರ್ ಪರವಾಗಿ ಆಡುವವನು ಹಾಗಾಗಿ ಹೆಡಿಂಗ್ಲಿ ಕೂಡ ಸದ್ಯಕ್ಕೆ ಅವನದ್ದೊಂದು ಬ್ಯಾಕ್ ಯಾರ್ಡ್. 


ಟೀಮ್ ಇಂಡಿಯಾದಲ್ಲಿ ಅಂತಹ ಹೆಚ್ಚಿನ ಬದಲಾವಣೆ ಇರದಿದ್ದರೂ ಇಶಾಂತ್ ಶರ್ಮ ಜಾಗಕ್ಕೆ ಬ್ಯಾಟಿಂಗ್ ಕೂಡ ಮಾಡಬಲ್ಲ ಶಾರ್ದೂಲ್ ಠಾಕೂರ್ ಮತ್ತು ಜಡೇಜಾ ಜಾಗಕ್ಕೆ ಆರ್. ಅಶ್ವಿನ್ ಬರುವ ಸಾಧ್ಯತೆಗಳನ್ನು ನಿರೀಕ್ಷಿಸಿಬಹುದು. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಜಡೇಜಾ ಸ್ಪಿನ್ ಬೌಲಿಂಗ್ ನಲ್ಲಿ ಅಂತಹ ಪ್ರದರ್ಶನ ನೀಡದೇ ಇದ್ದದ್ದು ಅಶ್ವಿನ್ ಗೆ ಮೂರನೇ ಟೆಸ್ಟ್ ಮ್ಯಾಚ್ ಆಡಲು ತಕ್ಕಮಟ್ಟಿಗೆ ವರವಾಗಬಲ್ಲದು.ಮಾತ್ರವಲ್ಲ ಅಶ್ವಿನ್ ಬ್ಯಾಟಿಂಗ್ ಕೂಡ ಮಾಡುತ್ತಾನೆ ಆದುದರಿಂದ ಜಡೇಜಾ ಸ್ಥಾನಕ್ಕೆ ರಿಪ್ಲೇಸ್ ಮಾಡಿದರೆ ಅಂತಹ ಸಮಸ್ಯೆ ಏನಿಲ್ಲ.


ಬೇರೆ ಯಾವುದೇ ಸ್ಥಾನದಲ್ಲಿ ಬದಲಾವಣೆ ಸದ್ಯಕ್ಕೆ ಕಾಣುತ್ತಿಲ್ಲ. ಭಾರತೀಯ ಒಂದಷ್ಟು ಹಿರಿಯ ಆಟಗಾರರಿಗೆ ಸೂರ್ಯ ಕುಮಾರ್ ಗೆ ತಂಡದಲ್ಲಿ ಒಂದು ಸ್ಲಾಟ್ ಸಿಗಬೇಕು ಎಂದು ಆಸೆ ಇದ್ದರೂ ಸದ್ಯದ ತಂಡದಲ್ಲಿ ಆ ಜಾಗದಲ್ಲಿ ರಹಾನೆ ಆಡುತ್ತಿದ್ದು ಲಾರ್ಡ್ಸ್ ಪಂದ್ಯದಲ್ಲಿ ಒಂದಷ್ಟು ರನ್ ಕಲೆ ಹಾಕಿ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದರಿಂದ ಮಾತ್ರವಲ್ಲ ತಂಡದ ಉಪ ಕಪ್ತಾನ ಕೂಡ ಆಗಿರುವುದರಿಂದ ರಹಾನೆಯನ್ನು ಹೊರಗಿಡುವ ಸಾಹಸಕ್ಕೆ ಟೀಮ್ ಇಂಡಿಯಾ ಹೋಗದು ಎಂದೇ ನನಗನಿಸುತ್ತದೆ.


ಪೂಜಾರ ಬಗ್ಗೆ ಸಂದೇಹ ಇದ್ದರೂ ಕೊಹ್ಲಿ ಮತ್ತು ರವಿ ಭಾಯ್ ಅವನನ್ನು ಕೂಡ ಚೇಂಜ್ ಮಾಡಲಾರರು. ಆದರೆ ಮೂರನೆಯ ಟೆಸ್ಟ್ ನಲ್ಲಿಯೂ ವಿಫಲವಾದರೆ ಆವಾಗ ಅವರಿಬ್ಬರ ಸ್ಥಾನಕ್ಕೆ ಖಂಡಿತವಾಗಿಯೂ ಒಂದಷ್ಟು ಕುತ್ತು ಬರಲಿದೆ. ಹಾಗೆ ಆಗದಿರಲಿ.ಏಕೆಂದರೆ ಇಬ್ಬರೂ ಸಾಕಷ್ಟು ಅನುಭವಿಗಳು ಮತ್ತು  ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ಟೆಸ್ಟ್ ಸ್ಪೆಷಲಿಸ್ಟ್ ಗಳು ಹಾಗಾಗಿ ಅವರಿಬ್ಬರು ಈ ಫಾರ್ಮೆಟ್ ನಲ್ಲಿ ಆದರೂ ಅವರಾಟ ಚೆನ್ನಾಗಿಯೇ ಆಡಿ ಅವರುಗಳ ಸ್ಥಾನ ಭದ್ರಪಡಿಸಿಕೊಳ್ಳಲಿ ಎಂದಷ್ಟೇ ಆಶಯ. ವಿನ್ನಿಂಗ್ ಕಾಂಬಿನೇಶನ್ ಅನ್ನೇ ಮುಂದುವರಿಸುವ ಇರಾದೆ ಇದ್ದರಂತು ಖಂಡಿತವಾಗಿಯೂ ಯಾವುದೇ ಅಂತಹ ಬದಲಾವಣೆಗೆ ಟೀಮ್ ಇಂಡಿಯಾ ಮುಂದಾಗುವುದಿಲ್ಲ.


ಇನ್ನು ಮತ್ತೆ ಆಂಗ್ಲರ ಬಗ್ಗೆಯೇ ಹೇಳುವುದಾದರೆ ಅವರ ಓಪನಿಂಗ್ ಅಂತು ಬಹಳಷ್ಟು ದುರ್ಬಲವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ರೂಟ್ ಬಿಟ್ಟರೆ ಬೇರೆ ಯಾರು ಗಟ್ಟಿಯಾಗಿ ಪಿಚ್ ನಲ್ಲಿ ರೂಟು ಬಿಟ್ಟಕೊಂಡು ಭದ್ರವಾಗಿ,ಸದೃಢವಾಗಿ ನಿಲ್ಲುತ್ತಿಲ್ಲ. ಬೌಲಿಂಗ್ ನಲ್ಲಿ ಬೆನ್ ಸ್ಟೋಕ್ಸ್, ಜೊಪ್ರಾ ಅರ್ಚರ್,ಕ್ರಿಸ್ ವೋಕ್ಸ್ ಮೊದಲೇ ಈ ತಂಡದಿಂದ ಗಾಯದ ಸಮಸ್ಯೆ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಹೊರಗುಳಿದಿದ್ದರು. ಸ್ಟುವರ್ಟ್ ಬ್ರಾಡ್ ಮೊದಲ ಟೆಸ್ಟ್ ಆಡಿ ಆ ನಂತರ ಗಾಯಗೊಂಡು ಸಿರೀಸ್ ನಿಂದಲೇ ಹಿಂದೆ ಸರಿದಿದ್ದರೆ, ಈಗ ಅದೇ ರೀತಿಯಾಗಿ ಮಾರ್ಕ್ ವುಡ್ ಕೂಡ ಗಾಯಗೊಂಡು ಹೊರ ನಡೆದಿದ್ದಾರೆ.


ಲ್ಯಾಂಕೆಶೈರ್ ಕೌಂಟಿಯ ಸಕೀಬ್ ಮಹಮೂದ್ ಇಲ್ಲವೇ ಸಮರ್‌ಸೆಟ್‌ ನ ಬಲಗೈ ವೇಗಿ ಕ್ರೇಗ್ ಓವರ್ಟನ್ ಆ ಸ್ಥಾನದಲ್ಲಿ ಆಡಬಹುದು.ರೋಟೆಷನ್ ಅನ್ನು ಆಂಗ್ಲರು ಈಗಲೂ ಸೀರಿಯಸ್ ಆಗಿ ತಗೊಂಡು ಆಂಡರ್ಸನ್ ನಂತಹ ಬೌಲರ್ ಗೆ ವಿಶ್ರಾಂತಿ ಕೊಟ್ಟರೆ ಆಗ ಅದಕ್ಕೆ ಏನು ಹೇಳಬೇಕೆಂದು ಅದು ಇ.ಸಿ.ಬಿ ಗೆ ಅಷ್ಟೇ ಗೊತ್ತು.ಆದರೆ ಹಾಗೇ ಅವರು ಮಾಡಲಾರರು ಎಂದೇ ನನ್ನ ಅನಿಸಿಕೆ.ಹೆಡಿಂಗ್ಲಿಯ ಹವಾಮಾನ ವರದಿ ಹೇಗೆ ಇದ್ದರೂ, ಅವರ ಕೋಚ್ ಸಿಲ್ವರ್ವುಡ್ ಒಪ್ಪಿದರೂ ಒಪ್ಪದೇ ಇದ್ದರೂ ,ಸದ್ಯಕ್ಕೆ ಅಂತು ಇಂಗ್ಲಿಷ್ ತಂಡದ ಮೇಲೆ ಒಂದಷ್ಟು ಮೋಡ ಕವಿದ ವಾತಾವರಣ ಖಂಡಿತವಾಗಿಯೂ ಇದೆ. 


ಇನ್ನು ಹೆಡಿಂಗ್ಲಿಯ ಹವಾಮಾನದ ಬಗ್ಗೆಯೇ ಹೇಳಬೇಕಾದರೆ ಮೊದಲಿನರೆಡು ದಿನ ಅಂತಹ ಮಳೆಯ ಸಾಧ್ಯತೆ ಇರದಿದ್ದರೂ ಮೂರನೆಯ ಹಾಗೂ ನಾಲ್ಕನೆಯ ದಿನ ಒಂದಷ್ಟು ಗುಡುಗು ಸಹಿತ ಮೋಡ ಕವಿದ ವಾತಾವರಣದ ನಿರೀಕ್ಷೆ ಅಲ್ಲಿಯ ಹವಾಮಾನ ವರದಿಯ ಪ್ರಕಾರ ಇದೆಯಂತೆ. ಐದನೆಯ ದಿನವೂ ತಕ್ಕ ಮಟ್ಟಿನ ಮೋಡ ಇರಲಿದ್ದು,ವರುಣ ದೇವನಿಗೆ ಸ್ವಲ್ಪ ಪುರ್ಸೋತು ಆದರೆ ಲೀಡ್ಸ್ ನ ಮೈದಾನಕ್ಕೊಂದು ಅವನೂ ಕೂಡ ಭೇಟಿ ಕೊಟ್ಟರೂ ಕೊಡಬಹುದು.ಆದರೆ ಹಾಗಾಗದಿರಲಿ,  ಸೂರ್ಯದೇವರೊಬ್ಬರೇ ಅರುಣನೊಂದಿಗೆ ಹೆಡಿಂಗ್ಲಿಯ ಸುತ್ತಮುತ್ತ ಮುಂದಿನ ಐದು ದಿನ ವಿಹರಿಸಲಿ ಎಂದೇ ಎಂದಿನಂತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ.


ಲಾರ್ಡ್ ಟೆಸ್ಟ್ ನಲ್ಲಿ ಮೊದಲ ಬಾಲ್ ಹಾಕುವ ಮೊದಲೇ ಕಾಣಸಿಕೊಂಡಿದ್ದ ವರುಣ ದೇವ ಆ ಮೇಲೆ ಪಂದ್ಯಕ್ಕೆ ಎಲ್ಲೂತಡೆ ಒಡ್ಡದೆ ಎಲ್ಲರನ್ನೂ ಖುಷಿ ಪಡಿಸಿ ಬಿಟ್ಟಿದ್ದ.ಹಾಗಾಗಿ ಪಂದ್ಯ ಗೆಲ್ಲಲು ಭಾರತಕ್ಕೆ ಅದು ಸಹಕಾರಿಯಾಯಿತು.ಅದೇ ರೀತಿ ಟ್ರೆಂಟ್ಬ್ರಿಡ್ಜ್  ನಲ್ಲಿ ಸಹ ವರುಣ ದೇವರು,ಸೂರ್ಯ ದೇವರು ಮನಸ್ಸು ಮಾಡಿದ್ದರೆ ಮೊದಲ ಟೆಸ್ಟ್ ಕೂಡ ನಾವೇ ಗೆಲ್ಲಬಹುದಿತ್ತು ಎಂಬ ಬೇಜಾರಂತು ಖಂಡಿತವಾಗಿಯೂ ಇದೆ.


ಎಲ್ಲಕ್ಕಿಂತ ದೊಡ್ಡ ಬೇಜಾರು ಸೌತ್ಯಾಂಪ್ಟನ್ ನಲ್ಲಿ ನಡೆದ  ಡಬ್ಲ್ಯು.ಟಿ.ಸಿ ಯ ಫೈನಲ್ ಪಂದ್ಯ. ಆಂಗ್ಲರ ನೆಲದಲ್ಲಿ ಮೆರೆಯುತ್ತಿರುವ ಈ ತಂಡವನ್ನು ನೋಡಿದರೆ ಯಾರಿಗೆ ಆಗಲಿ  ಒಂದಷ್ಟು ಅಭ್ಯಾಸ ಪಂದ್ಯಗಳನ್ನು ಪೂರ್ವಭಾವಿಯಾಗಿ ಟೀಮ್ ಇಂಡಿಯಾಕ್ಕೂ ಆಯೋಜಿಸಿದ್ದರೆ ಇಷ್ಟು ಹೊತ್ತಿಗೆ ಚೊಚ್ಚಲ ಡಬ್ಲ್ಯು.ಟಿ.ಸಿ ಯ ಹೊಳೆಯುವ ಮೇಝ್ ಭಾರತದ ತೆಕ್ಕೆಯಲ್ಲಿರುತ್ತಿತ್ತು ಎಂದು ಯಾರಿಗೇ ಆಗಲಿ ಅನ್ನಿಸದೇ ಇರುವುದಿಲ್ಲ.


ಹಳೆಯ ಕಥೆ ಮತ್ತೆ ಮಾತಾಡುತ್ತ ಕುಳಿತರೆ ಅದು ಇನ್ನೂ ಉದ್ದಕ್ಕೆ  ಹೋಗಿ ಬಿಡುತ್ತದೆ. ಸದ್ಯಕ್ಕೆ ಎಲ್ಲರ ಗಮನ ಹೆಡಿಂಗ್ಲಿಯ ಮೈದಾನ ಮೇಲಿದೆ ಮತ್ತು ಇನ್ನೈದು ದಿನ ಅದು ಅಲ್ಲಿಯೇ ಇರಲಿ.ತಂಡದೊಳಗೆ ಎಷ್ಟೇ ಆತ್ಮವಿಶ್ವಾಸ ಇದ್ದರೂ ಖಂಡಿತವಾಗಿಯೂ ಆಂಗ್ಲರ ತಂಡವನ್ನು ನಮ್ಮವರು  ನಿರ್ಲಕ್ಷಿಸುವಂತಿಲ್ಲ.


ಎಷ್ಟಾದರೂ ಹೋಮ್ ಕಂಡಿಷನ್ ನ ಲಾಭಗಳು ಪ್ರತಿಯೊಂದು ತಂಡಕ್ಕೂ ಇದ್ದೇ ಇರುತ್ತವೆ.ಭಾರತವೂ ತವರಿನಲ್ಲಿ ಮೊದಲು ಸೋತು ಆಮೇಲೆ ಸರಣಿಯನ್ನೇ  ಗೆದ್ದ ಇತಿಹಾಸ ಬೇಕಾದಷ್ಟು ಇದೆ. ಹಾಗಾಗಿ ಹಗುರವಾಗಿ ಪರಿಗಣಿಸುವಂತಿಲ್ಲ,ಆಂಗ್ಲರು ಕೂಡ ಬೌನ್ಸ್ ಬ್ಯಾಕ್ ಆಗಬಹುದು. ಆದರೂ ತೊಂದರೆ ಇಲ್ಲ. ಹಾಗೆ ಆದಾಗಲೇ ಕ್ರಿಕೆಟ್ ನ ರೋಚಕತೆ ಮತ್ತಷ್ಟು ಹೆಚ್ಚಾಗಿ ಬಿಡುವುದು ಮತ್ತು ಅಸಲಿ ಟೆಸ್ಟ್ ಕ್ರಿಕೆಟ್ ಇನ್ನಿಲ್ಲದಂತೆ ಗರಿಗೆದರುವುದು. 


ಕೊನೆಯದಾಗಿ ಹೇಳುವುದಾದರೆ ಎಲ್ಲರ ಆಸೆಯಂತೆ ಕೊಹ್ಲಿಯ ಬ್ಯಾಟ್ ಒಂದಷ್ಟು ಮಾತಾಡಬೇಕು. ಅವನು ಕಾಲರ್ ಕೆಳಗೆ ಮಾಡಿಕೊಂಡು ಔಟ್ ಆಗಿ ತಲೆತಗ್ಗಿಸಿಕೊಂಡು ಪೆವಿಲಿಯನ್ ಕಡೆಗೆ ನಡೆಯುವುದು ಅವನ ಸ್ಟ್ಯಾಂಡರ್ಡ್ ಗೆ ಖಂಡಿತವಾಗಿಯೂ ಶೋಭೆ ತರುವಂತಹದ್ದಲ್ಲ.ರೋಹಿತ್ ಫಾರ್ಮ್ ನಲ್ಲಿ ಇದ್ದಾನೆ ನಿಜ ಆದರೆ ಒಂದು ಪುಷ್ಕಳವಾದ ಶತಕ  ಅವನಿಗೂ ತುರ್ತಾಗಿ ಬೇಕು.ಹಿಟ್ ಮ್ಯಾನ್  ಕೊನೆಯ ಶತಕ ಬಾರಿಸಿ 10 ಇನ್ನಿಂಗ್ಸ್ ಗಳು ಆಗಿ ಹೋಗಿವೆ,ಕೊಹ್ಲಿಯ ಬ್ಯಾಟ್ ನಿಂದಲೂ ಸೆಂಚುರಿ ಬರದೇ 17 ಇನ್ನಿಂಗ್ಸ್ ಗಳೇ ಕಳೆದು ಬಿಟ್ಟಿವೆ. 


ಬೌಲಿಂಗ್ ನಲ್ಲಿ ನಮ್ಮವರು ನೋ ಬಾಲ್ ಎಸೆಯದೇ ಕಂಜೂಸ್ ತನ ತೋರಿದರೆ ಮಾತ್ರ ನೋಡುವವರಿಗೆ ಆಗುವ ಒಂದಷ್ಟು ಹರ್ಟ್ ಇಲ್ಲಿ ತಪ್ಪಿದಂತಾಗುತ್ತದೆ.ಎಕ್ಸಟ್ರಾಕ್ಕೆ ಕಡಿವಾಣ ಅದರಲ್ಲೂ ನೋಬಾಲ್ ಮೇಲೆ ನಿಯಂತ್ರಣ ಖಂಡಿತವಾಗಿಯೂ  ಜರೂರಾಗಿ ಬೇಕಾಗಿದೆ. 


ಟೀಮ್ ಇಂಡಿಯಾವೇ ಗೆಲ್ಲಲಿ.ಬಾಲಿನಿಂದ ಬಾಲಿಗೆ, ಸೆಷನ್ ನಿಂದ ಸೆಷನ್ ಗೆ,ದಿನದಿಂದ ದಿನಕ್ಕೆ,ಇನ್ನಿಂಗ್ಸ್ ನಿಂದ ಇನ್ನಿಂಗ್ಸ್ ಗೆ... ಪ್ರತಿಯೊಂದನ್ನು ಒಂದರ ನಂತರ ಗೆಲ್ಲುತ್ತಾ ಸಾಗುತ್ತ ಕೊನೆಯಲ್ಲಿ ಪಂದ್ಯ ಕೂಡ ಟೀಮ್ ಇಂಡಿಯಾದ ತೆಕ್ಕೆಗೇ ಬೀಳಲಿ ಅದೇ ರೀತಿ ಪೆನಾಲ್ಟಿ ರಹಿತ ಸಂಪೂರ್ಣ 12 ಅಂಕ ನಮ್ಮದಾಗಿ  ಡಬ್ಲ್ಯು.ಟಿ.ಸಿ ಪಾಯಿಂಟ್ ಟೇಬಲ್ ನಲ್ಲಿ 72.22 PCT ಯೊಂದಿಗೆ ನಮ್ಮ ತೇರು ಮುಂದೆ ಸಾಗಲಿ. 


ಸದ್ಯಕ್ಕೆ ಇಷ್ಟೇ.. 


ಎಂದಿನಂತೆ ಮನಸ್ಸಿನಿಂದ ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ 🤍🤍🇮🇳



ಪಂದ್ಯ ಮುಗಿದಾದ ನಂತರ ಮತ್ತೊಮ್ಮೆ ಸಿಗೋಣ,ದಿನದಾಟ ಅಂತ್ಯದಲ್ಲಿ ತಡ ರಾತ್ರಿಯ ನಿದ್ದೆಗೆ ನಾವುಗಳು ಮೆಲ್ಲಗೆ ಸರಿವಾಗ,ಮೆತ್ತನೆಯ ದಿಂಬು ಸರಿ ಮಾಡಿಕೊಂಡು ಮೊಬೈಲ್ ನಲ್ಲಿ ಕೊನೆಗೊಮ್ಮೆ ಸ್ಕ್ರಾಲ್ ಮಾಡುವಾಗ,ಎಂದಿನಂತೆ ಒಂದಷ್ಟು ಕ್ರಿಕೆಟ್ ಹರಟೆಯ ಮಾತು ಒಂದಷ್ಟು ಇದ್ದರೆ ಚಂದ ಅಲ..


ಆಗಲಿ,ಮತ್ತೆ ಸಿಗೋಣ.. 


#Day_1

Ind Vs England

3rd  Test - Headingley - Leeds. 


#WTC_S02E01_03_2021_23 

Ab pacchu


(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..