ಪತನ..!
ಅಂತು ಇಂತು ಕೊನೆಗೂ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬಿಟ್ಟ ಎಂಬ ಮೊದಲ ಸಾಲಿನೊಂದಿಗೆ ಈ ಪಂದ್ಯದ ಕಥೆಯೊಂದು ಹಾಗೇ ಹೆಡಿಂಗ್ಲಿಯಲ್ಲಿ ನಿಧಾನಕ್ಕೆ ಬಿಚ್ಚಿಕೊಳ್ಳಲು ಶರುವಾಯಿತು.
ಲಾರ್ಡ್ಸ್ ವಿಜಯದ ಗುಂಗಿನಲ್ಲೇ ಇದ್ದ ನೋಡುಗನಿಗೆ ಈ ಸ್ಟೋರಿ ಹೇಗಿರಬಹುದು,ಇದರಲ್ಲಿ ಇಷ್ಟೊಂದು ಟರ್ನ್ & ಟ್ವಿಸ್ಟ್ ಇರಬಹುದೇ.. ಎಂಬುದಂತು ಖಂಡಿತವಾಗಿಯೂ ಗೊತ್ತೇ ಇರಲಿಲ್ಲ ಬಿಡಿ.
ಇದು ಬರೀ ಪತನದ ಕಥೆಯಲ್ಲ.
ಭಾರತದ ಬ್ಯಾಟಿಂಗ್ ಗೆ ಸಂಬಂಧಿಸಿದಂತೆ ಮಹಾಪತನವೇ ಇದು!
ಟಾಸ್ ಗೆದ್ದ ಕ್ಯಾಪ್ಟನ್ ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದು ಬ್ಯಾಟಿಂಗ್ ಅನ್ನೇ.
ಟಾಸ್ ಸೋತು ಫೀಲ್ಡಿಂಗ್ ಗೆ ಇಳಿದರೂ ಖುಷಿ ಪಟ್ಟದ್ದು ಮಾತ್ರ ಜೋ ರೂಟ್.ಮುಂದಿನ ದಿನಗಳಲ್ಲಿ ಪಿಚ್ ಯಾವ ರೀತಿ ಬ್ಯಾಟಿಂಗ್ ಗೆ ನೆರವಾಗಬಲ್ಲದು ಎನ್ನುವುದು ಅವನಿಗಿಂತ ಚೆನ್ನಾಗಿ ಬಹುಶಃ ಬೇರೆ ಯಾರಿಗೆ ಗೊತ್ತಿರಲು ಸಾಧ್ಯವಿಲ್ಲ,ಏಕೆಂದರೆ ಹೆಡಿಂಗ್ಲಿ ನಿಜವಾಗಿಯೂ ಅವನದ್ದೊಂದು ಬ್ಯಾಕ್ ಯಾರ್ಡ್. ಆ ಗ್ರೌಂಡಿನ ಮನಸ್ಥಿತಿ ಅವನು ಬಹಳ ಸುಲಭವಾಗಿಯೇ ಅರಿಯಬಲ್ಲ.
ವಿನ್ನಿಂಗ್ ಕಾಂಬಿನೇಶನ್ ಅನ್ನೇ ಮುಂದುವರಿಸಲು ಮನಸ್ಸು ಮಾಡಿದ ಟೀಮ್ ಇಂಡಿಯಾ,ತನ್ನ ಆಡುವ ಹನ್ನೊಂದರ ಬಳಗದಲ್ಲಿ ಅಂತಹ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಲಾರ್ಡ್ಸ್ ಟೆಸ್ಟ್ ನಲ್ಲಿ ಆಡಿದಂತಹ ತಂಡವನ್ನೇ ಇಂದು ಕೂಡ ಆಯ್ಕೆ ಮಾಡಿಕೊಂಡಿತ್ತು.ಹಾಗಾಗಿ ಆರ್. ಅಶ್ವಿನ್ ಈ ಪಂದ್ಯಕ್ಕೂ ಕೂಡ ಹೊರಗುಳಿಯಬೇಕಾಯಿತು.
ಅವನನ್ನು ಈ ಪಂದ್ಯದಲ್ಲಾದರೂ ಟೀಮ್ ಇಂಡಿಯಾ ಆಡಿಸಬಹುದಿತ್ತು, ಏಕೆಂದರೆ ಬೌಲಿಂಗ್ ಅಂತು ಅವನು ಜಡೇಜಾಗಿಂತಲೂ ಬಹಳ ಚೆನ್ನಾಗಿ ಮಾಡಬಲ್ಲ,ಮಾತ್ರವಲ್ಲ ಅಶ್ವಿನ್ ಬೌಲಿಂಗ್ ನಲ್ಲಿ ಜಡೇಜಾ ನ ಸ್ಪಿನ್ ಬೌಲಿಂಗ್ ಗಿಂತಲೂ ಅಧಿಕ ವೈವಿಧ್ಯತೆ ಇದೆ.ಆತ ಪಿಚ್ ನೆರವು ಇಲ್ಲದೆಯೂ ತನ್ನ ಚಾಣಕ್ಯತೆಯಿಂದಲೇ ಒಂದಷ್ಟು ವಿಕೆಟ್ ಕಬಳಿಸಬಲ್ಲ. ಆದರೆ ಆ ಜಾದು ಜಡೇಜಾ ಬೌಲಿಂಗ್ ನಿಂದ ಸಾಧ್ಯವಿಲ್ಲ.ಜಡೇಜಾಗೆ ವಿಕೆಟ್ ಉದುರಿಸಲು ಪಿಚ್ ಸಾಕಷ್ಟು ನೆರವು ನೀಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಜಡೇಜಾ ಏನಿದ್ದರೂ ರಪ ರಪ ಬೌಲಿಂಗ್ ಮಾಡಿ ಬೇಗ ಬೇಗ ಓವರ್ ಗಳನ್ನು ಪೂರ್ಣಗೊಳಿಸಲು ಅಷ್ಟೇ ಸಹಕಾರಿ.
ಆದರೆ ಆಂಗ್ಲರು ನಿರೀಕ್ಷಿಸಿದಂತೆಯೇ ಎರಡು ಬದಲಾವಣೆ ಮಾಡಿಕೊಂಡಿದ್ದರು.ಅವರಿಗೆ ಅದು ಅನಿವಾರ್ಯ ಕೂಡ ಆಗಿತ್ತು. ಆಟಗಾರರ ಕಳಪೆ ಫಾರ್ಮ್ ಮತ್ತು ಗಾಯದ ಸಮಸ್ಯೆ ಅವರನ್ನು ಸಿಕ್ಕಾಪಟ್ಟೆ ಕಾಡಿತ್ತು.ಸಿಬ್ಲಿ ಬದಲಿಗೆ ಡೇವಿಡ್ ಮಲನ್ ಹಾಗೂ ಮಾರ್ಕ್ ವುಡ್ ಬದಲಿಗೆ ಕ್ರೇಗ್ ಓವರ್ಟನ್ ಇಂದು ಇಂಗ್ಲೆಡ್ ತಂಡದಲ್ಲಿ ಆಡಿದ್ದರು.
ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಬೀಸಲು ಕ್ರೀಸಿಗಿಳಿದ ಟೀಮ್ ಇಂಡಿಯಾವನ್ನು ಇಲ್ಲಿ ಮತ್ತೊಮ್ಮೆ ಬೆಚ್ಚಿ ಬೀಳಿಸಿದ್ದು ಜಿಮ್ಮಿಯೇ!
ಮೊದಲ ಓವರಿನ 5 ನೇ ಎಸೆತದಲ್ಲಿಯೇ ಲಾರ್ಡ್ಸ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಕೆ.ಎಲ್ ರಾಹುಲ್ ನನ್ನು ಜಿಮ್ಮಿ ಆಂಡರ್ಸನ್ ಪೆವಿಲಿಯನ್ ಗೆ ವಾಪಸು ಕಳುಹಿಸಿ ಬಿಟ್ಟಿದ್ದ. ಡ್ರೈವ್ ಮಾಡಲು ಹೋಗಿ ಕೈ ಸುಟ್ಟು ಕೊಂಡ ರಾಹುಲ್,ವಿಕೆಟ್ ಕೀಪರ್ ಬಟ್ಲರ್ ಗೆ ಕ್ಯಾಚಿತ್ತು ನಿರ್ಗಮಿಸಿದ್ದ.ರಾಹುಲ್ ನದ್ದು ಇಲ್ಲಿ ಶೂನ್ಯ ಸಂಪಾದನೆ.
ನಿರಂತರವಾಗಿ ರಾಹುಲ್ ಗೆ ಆಡದೇ ಬಿಟ್ಟು ಬಿಡಬಹುದಾದ ಸುಲಭ ಇನ್ ಸ್ವಿಂಗರ್ ಗಳನ್ನೇ ಹಾಕುತ್ತ ಹೋದ ಆಂಡರ್ಸನ್ ಕೊನೆಯಲ್ಲೊಂದು ಆಡಲೇ ಬೇಕಾಗುವ ಎಸೆತವನ್ನು ರಾಹುಲ್ ಎದುರುಗಡೆ ಇಟ್ಟು ಬಿಟ್ಟ.ಅದೇನೂ ಅಂತಹ ಔಟ್ ಸ್ವಿಂಗರ್ ಕೂಡ ಆಗಿರಲಿಲ್ಲ.ಆದರೆ ಆಡಲೇಬೇಕಾಗಿತ್ತು, ಹಾಗಾಗಿ ಆಂಡರ್ಸನ್ ರಚಿಸಿದ ಬಲೆಯೊಳಗೆ ಬಿದ್ದು ಬ್ಯಾಟ್ ಬೀಸಲು ಹೋದ ರಾಹುಲ್ ಔಟ್ ಆಗಿ ಹೊರ ನಡೆಯಬೇಕಾಯಿತು.
ಆ ನಂತರ ಬಂದ ಮಾಡರ್ನ್ ಗೋಡೆ ಖ್ಯಾತಿಯ ಚೇತೆಶ್ವರ್ ಪೂಜಾರನನ್ನು ಸಹ ಜಿಮ್ಮಿ ಜಾಸ್ತಿ ಹೊತ್ತು ಮೈದಾನದಲ್ಲಿರಲು ಬಿಡಲಿಲ್ಲ. 5 ನೇ ಓವರನ್ ನ ಮೊದಲ ಎಸೆತದಲ್ಲಿಯೇ ಪೂಜಾರನ ಬ್ಯಾಟ್ ಅನ್ನು ವಂಚಿಸಿದ ಆಂಡರ್ಸನ್ ಎಸೆತದ ಚೆಂಡು ಮತ್ತೊಮ್ಮೆ ಸೇಫಾಗಿ ಹೋಗಿ ಸೇರಿದ್ದು ವಿಕೆಟ್ ಕೀಪರ್ ಬಟ್ಲರನ ಗ್ಲೌವ್ಸ್ ಅನ್ನೇ. ಪೂಜಾರ ಇಲ್ಲಿ ಗಳಿಸಿದ್ದು 1 ರನ್ನು.
ಆ ನಂತರ ಬಂದದ್ದು ತಂಡದ ಕಪ್ತಾನ ವಿರಾಟ್.
ಎಂದಿನಂತೆ ಜಿಮ್ಮಿ ಮತ್ತು ಕೊಹ್ಲಿಯ ನಡುವಿನದ್ದೊಂದು ಬ್ಯಾಟ್ ಬಾಲ್ ಗಳ ಘರ್ಷಣೆ ನೋಡುಗನಿಗೆ ಇವತ್ತೂ ಕೂಡ ಸಿಕ್ಕಾಪಟ್ಟೆ ಬೇಕಿತ್ತು.ಈ ಸಿರೀಸ್ ನಲ್ಲಿ ಇಲ್ಲಿಯವರೆಗೆ ಜಿಮ್ಮಿಯದ್ದೇ ಹೆಚ್ಚಿನ ಮೇಲುಗೈಯಾಗಿತ್ತು.ಇವತ್ತು ಕೂಡ ಆಗಿದ್ದು ಅದೇ!
ತನ್ನದೊಂದು ಟ್ರೆಡ್ ಮಾರ್ಕ್ ಕವರ್ ಡ್ರೈವ್ ಶಾಟ್ ಅನ್ನು ಆಂಡರ್ಸನ್ ಬಾಲಿನಲ್ಲಿ ಬಾರಿಸಲು ಹೋದ ವಿರಾಟ್ ಕೇವಲ 7 ರನ್ ಗಳಿಸಿ ಔಟಾಗಿ ಬಿಟ್ಟ.ಕೊಹ್ಲಿ ವಿಕೆಟ್ ಉರುಳಿಸಲು ಆಂಡರ್ಸನ್ ಗೆ ಮತ್ತೆ ನೆರವಾದದ್ದು ಮತ್ತೊಮ್ಮೆ ವಿಕೆಟ್ ಕೀಪರ್ ಬಟ್ಲರೇ.
ಇಲ್ಲಿಯೂ ಚತುರ ಆಂಡರ್ಸನ್ ಕೊಹ್ಲಿಗೂ ಒಂದು ವ್ಯೂಹ ಹೆಣೆದಿದ್ದ. ಆದರೆ ಅದು ರಾಹುಲ್ ಗೆ ರಚಿಸಿದ್ದಕ್ಕಿಂತ ವಿಭಿನ್ನವಾಗಿತ್ತು.ನಿರಂತರವಾಗಿ ಆಡದೆ ಉಳಿಯಬಹುದಾದ ಹೊರ ಹೋಗುವ ಔಟ್ ಸ್ವಿಂಗರ್ ಗಳನ್ನೇ ಎಸೆದು ಎಸೆದು ಕೊನೆಯಲ್ಲೊಂದು ಆಡಲೇ ಬೇಕಾಗುವ ಎಸೆತ ಒಂದನ್ನು ಎಸೆದು ಬಿಟ್ಟ ಆಂಡರ್ಸನ್. ಅದೂ ಕೂಡ ಅಂತಹ ಭಯಂಕರ ಇನ್ ಸ್ವಿಂಗರ್ ಏನು ಆಗಿರಲಿಲ್ಲ.ಹಾಫ್ ವಾಲಿಗೆ ಆಸೆ ಪಟ್ಟ ಕೊಹ್ಲಿ ಆ ಎಸೆತಕ್ಕೊಂದು ಡ್ರೈವ್ ಬಾರಿಸಲು ಹೋಗಿ ಜಿಮ್ಮಿಯ ರಣತಂತ್ರಕ್ಕೆ ಔಟಾಗಿ ಬಿಟ್ಟ.
11 ಓವರ್ ನ ಮುಕ್ತಾಯಕ್ಕೆ ತಂಡ ತನ್ನ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡು ಬಿಟ್ಟಿತ್ತು.
ರಹಾನೆ ಇವತ್ತು ತಾನು ಒಂದಷ್ಟು ರನ್ ಗಳಿಸುತ್ತೇನೆ ಎಂಬ ಭರವಸೆ ನೀಡಿದ್ದರೂ ಲಂಚ್ ಗೆ ಹೋಗುವ ಸಂದರ್ಭದಲ್ಲಿ ಅವನ ತಾಳ್ಮೆಯ ಕಟ್ಟೆಯೂ ಒಡೆದು ಹೋಗಿತ್ತು.ರಹಾನೆ ವಿಕೆಟ್ ಕಿತ್ತದ್ದು ಈ ಬಾರಿ ರಾಬಿನ್ಸನ್.ಕ್ಯಾಚ್ ಹಿಡಿದದ್ದು ಮತ್ತೆ ಎಂದಿನಂತೆ ವಿಕೆಟ್ ಕೀಪರ್ ಬಟ್ಲರ್.
ಲಂಚ್ ಬ್ರೇಕಿನ ವೇಳೆಗೆ ತಂಡ 56 ರನ್ನುಗಳಿಗೆ ಮೊದಲ ಅಮೂಲ್ಯ 4 ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಭೋಜನದ ನಂತರ ತಂಡ ಮತ್ತೆ ತನ್ನ ಇನ್ನಿಂಗ್ಸ್ ಕಟ್ಟುವತ್ತ ಗಮನ ಹರಿಸಿತ್ತು.
ಪಂತ್ ಗೆ ಎಂದಿನಂತೆ ಬಾಲ್ ಗಳನ್ನು ಕೆಣಕಿ ಕೆಣಕಿ ಆಡಿಯೇ ಅಭ್ಯಾಸ. ಅವನಿಗೆ ತಂಡ ಮನಸ್ಸಿಗೆ ಬಂದಂತೆ ಆಡುವ ಅಂತಹ ಲೈಸೆನ್ಸ್ ಕೂಡ ಕೊಟ್ಟಿತ್ತು ಬಿಡಿ.
ಹಾಗಾಗಿ ರಾಬಿನ್ಸನ್ ನ ಹೊರ ಹೋಗುವ ಚೆಂಡಿನ ಉಸಾಬರಿಗೆ ಕೈ ಹಾಕಿ ಅವನೂ ಕೂಡ ಕ್ಯಾಚ್ ಔಟ್ ಆಗಿ ಬಿಟ್ಟ.
ಮತ್ತೊಮ್ಮೆ ಕ್ಯಾಚ್ ಹಿಡಿದದ್ದು ವಿಕೆಟ್ ಹಿಂದುಗಡೆ ವಿಕೆಟ್ ಕೀಪರ್ ಬಟ್ಲರ್.
ಇಷ್ಟೆಲ್ಲಾ ವಿಕೆಟ್ ಗಳು ಒಂದೇ ಸಮನೆ ಬೀಳುತ್ತಿದ್ದರೂ ಒಂದು ಕಡೆ ಬಂಡೆಯಂತೆ ನಿಂತಿದ್ದವನು ರೋಹಿತ್ ಶರ್ಮ.
100 ಎಸೆತಗಳಿಗೆ ಅವನು ಕೇವಲ 18 ರನ್ನುಗಳನ್ನಷ್ಟೇ ಗಳಿಸಿದ್ದ. ಬೇರೆ ಆಟಗಾರರಂತೆ ಅವನೇನು ಅಷ್ಟೊಂದು ವಿಚಲಿತನಾಗಿರಲಿಲ್ಲ.ಹಾಗಾಗಿ ಖಂಡಿತವಾಗಿಯೂ ಅವನದ್ದೊಂದು ಈ ಇನ್ನಿಂಗ್ಸ್ ಮುಂದೆ ಉದ್ದಕ್ಕೆ ಬೆಳೆಯುತ್ತದೆ ಎಂಬ ನಿರೀಕ್ಷೆಯೇ ಎಲ್ಲರಲ್ಲಿ ಇದ್ದದ್ದು.
ಆದರೆ ಅದನ್ನು ಹುಸಿಯಾಗಿಸಿದ್ದು ಕ್ರೇಗ್ ಓವರ್ಟನ್. ಅವನದ್ದೊಂದು ಬೌನ್ಸರ್ ಗೆ ತಡಕಾಡಿದ ರೋಹಿತ್ ಶಾರ್ಟ್ ಮಿಡ್ ಆನ್ ನಲ್ಲಿದ್ದ ರಾಬಿನ್ಸನ್ ಗೆ ಅತೀ ಸರಳ ಕ್ಯಾಚಿತ್ತು ಹೊರ ನಡೆದು ಸಿಕ್ಕಾಪಟ್ಟೆ ನಿರಾಸೆ ಮೂಡಿಸಿ ಬಿಟ್ಟ.ಬೌನ್ಸರ್, ಶಾರ್ಟ್ ಪಿಚ್ ಬಾಲ್ ಗಳಲ್ಲಿಯೇ ರನ್ ಗಳಿಸುವ ಆಟಗಾರನೊಬ್ಬ ಈ ರೀತಿ ಅಂತಹ ಬಾಲ್ ನಲ್ಲಿಯೇ ಔಟ್ ಆಗಿ ಹೋಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದೇ ರೀತಿ ಡ್ರೈವ್ ಬಾರಿಸಲು ಹೋಗಿ ಪದೇ ಪದೇ ಔಟಾಗುತ್ತಿರುವ ಕವರ್ ಡ್ರೈವ್ ಸ್ಪೆಷಲಿಷ್ಟ್ ವಿರಾಟ್ ಕೊಹ್ಲಿಯದ್ದೂ ಕೂಡ ಸದ್ಯಕ್ಕೆ ಇದೇ ವ್ಯಥೆಯ ಕಥೆಯಾಗಿ ಬಿಟ್ಟಿದೆ.
ಟೀಮ್ ಇಂಡಿಯಾದ ಪತನ ಇನ್ನಷ್ಟು ತೀವ್ರವಾಗಿದ್ದು ಅದು ರೋಹಿತ್ ವಿಕೆಟ್ ಬಿದ್ದ ನಂತರೇ.ಆ ನಂತರದ್ದು ಬರೀ ಹೈಲೈಟ್ಸ್ ಪಂದ್ಯ ವೀಕ್ಷಣೆಯಂತಿತ್ತು ಅಷ್ಟೇ.
ರೋಹಿತ್ ಶರ್ಮ ಔಟ್ ಆದ ನಂತರ ಬಂದ ಕಳೆದ ಪಂದ್ಯದ ಬ್ಯಾಟಿಂಗ್ ಹೀರೋ ಮೊಹಮ್ಮದ್ ಶಮಿ ಗಲ್ಲಿಯಲ್ಲಿ ಬರ್ನ್ಸ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ ಔಟ್ ಆಗಿ,ಕ್ರೇಗ್ ಓವರ್ಟನ್ ಗೆ ಹ್ಯಾಟ್ರಿಕ್ ಸಾಧನೆಯನ್ನು ತೆರೆದಿಟ್ಟ. ಆದರೆ ಆ ನಂತರ ಬಂದ ಇಶಾಂತ್ ಶರ್ಮ ಓವರ್ಟನ್ ಗೆ ಹ್ಯಾಟ್ರಿಕ್ ವಿಕೆಟ್ ಸಿಗದಂತೆ ಮಾಡುವಲ್ಲಿ ಸಫಲನಾದ.
ಆ ನಂತರ ಮುಂದಿನ ಓವರಿನಲ್ಲಿಯೇ ಸ್ಯಾಮ್ ಕರನ್ ನ ಬಾಲ್ ಜಡೇಜಾನ ಪ್ಯಾಡ್ ಗೆ ಬಡಿದಾಗ ಆಂಗ್ಲರದ್ದೊಂದು ಮುಗಿಲು ಮುಟ್ಟುವ ಅಪೀಲು ಇತ್ತು. ಫೀಲ್ಡ್ ಅಂಪೈರ್ Alex Wharf ಆಂಗ್ಲರ ಮನವಿ ಪುರಸ್ಕರಿಸಿ ಔಟ್ ಕೂಡ ಕೊಟ್ಟರು. ಜಡೇಜಾ ರಿವ್ಯೂ ಮೊರೆ ಹೋದರೂ ಥರ್ಡ್ ಅಂಪೈರ್ Richard Illingworth ಫೀಲ್ಡ್ ಅಂಪೈರ್ ತೀರ್ಪನ್ನು ಮತ್ತೆ ಎತ್ತಿ ಹಿಡಿದ ಪರಿಣಾಮ ಎಲ್.ಬಿ.ಡಬ್ಲ್ಯು ಔಟ್ ಆಗಿ ಜಡೇಜಾ.ಈ ರೀತಿಯಾಗಿ ತಂಡದ 8 ನೇ ವಿಕೆಟ್ ಬಿತ್ತು.
ನಂತರ ಬಂದ ಬುಮ್ರಾ ಪ್ಯಾಡಿಗೂ ಕೂಡ ಮತ್ತೊಮ್ಮೆ ಸ್ಯಾಮ್ ಕರನ್ ನ ಬಾಲ್ ಬಲವಾಗಿ ಬಡಿಯಿತು. ಆಂಗ್ಲರದ್ದು ಮತ್ತೊಮ್ಮೆ ಔಟಿಗಾಗಿ ಬಲವಾದ ಮನವಿ. ಈ ಬಾರಿಯೂ Alex Wharf ಹಿಂದೆ ಮುಂದೆ ನೋಡದೆ ಅದನ್ನೂ ಕೂಡ ಪುರಸ್ಕರಿಸಿ ಔಟ್ ನೀಡಿ ಬಿಟ್ಟ. ಬುಮ್ರಾ ಕೂಡ ರಿವ್ಯೂ ಗೆ ಅಪೀಲು ಮಾಡಿದ.ಆದರೆ ಥರ್ಡ್ ಅಂಪೈರ್ Richard Illingworth ಈ ಬಾರಿಯೂ ಫೀಲ್ಡ್ ಅಂಪೈರ್ ತೀರ್ಪು ಸರಿ ಎಂದು ಹೇಳುವ ಮೂಲಕ ಬೂಮ್ರ ಗೆ ಎಲ್. ಬಿ.ಡಬ್ಲ್ಯು ಔಟ್ ನೀಡಿದ. ಈ ರೀತಿ ಗೋಲ್ಡನ್ ಡಕ್ ಗೆ ಔಟ್ ಆಗುವ ಮೂಲಕ ಸ್ಯಾಮ್ ಕರನ್ ಗೆ ಕೂಡ ಹ್ಯಾಟ್ರಿಕ್ ಅವಕಾಶವೊಂದನ್ನು ಕಲ್ಪಿಸಿ ಬಿಟ್ಟ ಬೂಮ್ರ .ಆದರೆ ನಂತರ ಬಂದ ಮಹಮ್ಮದ್ ಸಿರಾಜ್ ಸ್ಯಾಮ್ ಕರನ್ ಗೆ ಹ್ಯಾಟ್ರಿಕ್ ನಿರಾಕರಿಸಿ ಬಿಟ್ಟ.
9 ವಿಕೆಟ್ ಗಳು ನೋಡು ನೋಡುತ್ತಿದ್ದಂತೆ ಹಾಗೇ ಹೈಲೈಟ್ಸ್ ರೀತಿಯಲ್ಲಿ ಉದುರಿ ಹೋದಾಗ ತಂಡ ಪೇರಿಸಿದ ಮೊತ್ತ ಕೇವಲ 67!
ಕೊನೆಯ ವಿಕೆಟ್ ಗೆ ಜೊತೆಯಾದವರು ಇಶಾಂತ್ ಶರ್ಮ ಮತ್ತು ಮಹಮ್ಮದ್ ಸಿರಾಜ್.
ಕೊನೆಯಲ್ಲಿ ಅಷ್ಟೇನೂ ಹೊತ್ತು ವ್ಯಯವಾಗದೇ ಟೀಮ್ ಇಂಡಿಯಾದ 10ನೇ ವಿಕೆಟ್ ಕೂಡ ಸಿರಾಜ್ ರೂಪದಲ್ಲಿ ಬಿದ್ದು ಬಿಟ್ಟಿತು!
ಕ್ರೇಗ್ ಓವರ್ಟನ್ ಬೌಲಿಂಗ್ ನಲ್ಲಿ ಸಿರಾಜ್ ಸ್ಲಿಪ್ ನಲ್ಲಿದ್ದ ಜೋ ರೂಟ್ ಗೆ ಕ್ಯಾಚು ನೀಡುವ ಮೂಲಕ ಟೀಮ್ ಇಂಡಿಯಾ ಕೊನೆಗೂ ಆಲ್ ಔಟ್ ಆಗಿಯೇ ಬಿಟ್ಟಿತು.
ತಂಡದ ಮೊತ್ತ 40.4 ಓವರಿನಲ್ಲಿ 78 ರನ್ನುಗಳು.
ಅಷ್ಟೇ!!
ಆಂಡರ್ಸನ್, ಓವರ್ಟನ್ ಮೂರು ಮೂರು ವಿಕೆಟ್ ಪಡೆದರೆ, ಸ್ಯಾಮ್ ಕರನ್ ಹಾಗೂ ರಾಬಿನ್ಸನ್ ಎರಡೆರಡು ವಿಕೆಟ್ ಪಡೆದು ಮಿಂಚಿದರು ಎನ್ನುವ ಕಥೆಯಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಆಂಗ್ಲ ವೇಗದ ಬೌಲರ್ ಗಳು ಇಂದು ಧೂಳೀಪಟ ಮಾಡಿದ್ದರು ಎನ್ನುವುದೇ ಈ ದಿನದ ಪ್ರಮುಖ ಹೈಲೈಟ್ ಆಗಿತ್ತು.
ಇದ್ದುದನ್ನು ಇದ್ದ ಹಾಗೆಯೇ ಹೇಳುವುದು ರಾಜಧರ್ಮ,ಕ್ರೀಡಾಧರ್ಮ ಎಲ್ಲಾ ಆಗಿರುವುದರಿಂದ ಇದು ನಿಜವಾಗಿಯೂ ಬಹಳಷ್ಟು ಕಳಪೆ,ಹೀನಾಯ, ಸೋಚನಿಯ ಪ್ರದರ್ಶನ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.
ಏಕೆಂದರೆ ಈ ಪ್ರಸಕ್ತ ತಂಡದಲ್ಲಿ ಓಪನರ್ ಇಲ್ಲವೇ ಟೇಲ್ ಎಂಡರ್ಸ್ ಗಳು ಆಡದೇ ಹೋದರೆ ಯಾವ ರೀತಿಯ ಪರಿಸ್ಥಿತಿ ತಂಡಕ್ಕೆ ಬರಬಹುದು ಎನ್ನುವುದಕ್ಕೆ ಉದಾಹರಣೆಯೇ ಈ ಪಂದ್ಯ.
ಎಷ್ಟು ಕಳಪೆ ಎಂದರೆ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ "ಮೊದಲ ಇನ್ನಿಂಗ್ಸ್" ನಲ್ಲಿ ಯಾವುದೇ ಒಬ್ಬ ಆಟಗಾರ "20" ರನ್ನುಗಳನ್ನು ಸಹ ಹೊಡೆಯದೇ ಇರುವ ಮೊದಲ ನಿದರ್ಶನ ಇದಂತೆ.ತಂಡದ ಅತ್ಯಧಿಕ ರನ್ ಗಳಿಕೆ ರೋಹಿತ್ ಶರ್ಮ ನದ್ದು. ಅದುವೇ 19 ರನ್!
1952 ರ ನಂತರ ಟೀಮ್ ಇಂಡಿಯಾ ಆಂಗ್ಲರ ನೆಲದಲ್ಲಿ ಇವತ್ತೇ ಇಷ್ಟು ಕಡಿಮೆ ರನ್ ಕಲೆ ಹಾಕಿದ್ದು ಅಂತೆ!
ನಿಜವಾಗಿಯೂ ನೋಡಲು ಹೋದರೆ ಮೊದಲ ಎರಡೂ ಪಂದ್ಯಗಳಲ್ಲಿ ಸಂಪೂರ್ಣವಾಗಿ ಆಂಗ್ಲರ ಮೇಲೆ ಪಾರುಪತ್ಯ ಮೆರೆದದ್ದು ನಮ್ಮ ಬ್ಯಾಟ್ಸ್‌ಮನ್ ಗಳಿಗಿಂತ ಅಧಿಕವಾಗಿ ಅದು ನಮ್ಮ ಬೌಲರ್ ಗಳು ಮಾತ್ರ.
ತಂಡದಲ್ಲಿ ಇರುವಂತ ಹೆಸರುಗಳು ಬಹಳಷ್ಟು ದೊಡ್ಡ ದೊಡ್ಡದೇ..
ಆದರೆ ತಂಡಕ್ಕೆ ಉಪಯೋಗ ಆಗುತ್ತಿಲ್ಲ ಎಂದಾದರೆ ಖಂಡಿತವಾಗಿಯೂ ಒಂದು ಬಾರಿ ಯೋಚಿಸಬೇಕಾಗುತ್ತದೆ, ಏಕೆಂದರೆ ನಮ್ಮಲ್ಲಿ ಪ್ರತಿಭೆಗಳ ದಂಡೇ ಲೈನಿನಲ್ಲಿ ನಿಂತುಕೊಂಡು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ.ಈ ವಿಷವನ್ನು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಗಳು ಅದರಲ್ಲೂ ನಿರಂತರವಾಗಿ ವಿಫಲವಾಗುತ್ತಿರುವ ಮಿಡಲ್ ಆರ್ಡರ್ ಆದಷ್ಟು ಬೇಗ ಅರಿತುಕೊಂಡರೆ ತಂಡಕ್ಕೂ ಒಳ್ಳೆಯದು ಅದೇ ರೀತಿ ಅವರಿಗೂ ಕೂಡ ಬಹಳಷ್ಟು ಒಳ್ಳೆಯದು..!
ನಮ್ಮವರ ಮೊದಲ ಇನ್ನಿಂಗ್ಸ್ ಮುಗಿದ ನಂತರ ಬ್ಯಾಟಿಂಗ್ ಮಾಡಿದ ಆಂಗ್ಲರು ಟೀ ಬ್ರೇಕ್ ವರೆಗೆ ಒಂದೂ ವಿಕೆಟ್ ಕಳೆದುಕೊಳ್ಳದೇ 7 ಓವರ್ ಗಳಲ್ಲಿ 21 ರನ್ ಮಾಡಿದ್ದರು.
ಒಂದೊಳ್ಳೆಯ ಟೀ ಕುಡಿದು ಬಂದ ಆಂಗ್ಲರು,ಭಾರತ ಕಡಿಮೆ ಮೊತ್ತ ಕಲೆ ಹಾಕಿದ ಕಾರಣದಿಂದಾಗಿಯೇ ಬಹಳಷ್ಟು ಸರಾಗವಾಗಿ, ಸುಲಲಿತವಾಗಿ ಯಾವ ಒಂದು ಅಳುಕೂ ಇಲ್ಲದೇ ಬ್ಯಾಟ್ ಬೀಸುತ್ತಾ ಹೋದರು. ಎಲ್ಲಿಯವರೆಗೆ ಅಂದರೆ ನಮ್ಮ ಮೊದಲ ಇನ್ನಿಂಗ್ಸ್ ನ ಅನ್ನು ಪಾರು ಮಾಡುವವರೆಗೂ ಸಹ ಅವರ ಒಂದೂ ವಿಕೆಟ್ ಬೀಳಲಿಲ್ಲ. ಹಸೀಬ್ ಹಮೀದ್ ಅಂತು ಆಫ್ ಸೈಡಿನಲ್ಲಿ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಲು ಶುರು ಮಾಡಿ ಬಿಟ್ಟ.
ಇದಕ್ಕೆ ನಮ್ಮ ಬೌಲರ್ ಗಳನ್ನು ದೂರಿ ಯಾವುದೇ ಪ್ರಯೋಜನವೇ ಇಲ್ಲ. ಏಕೆಂದರೆ ಆಂಗ್ಲರ ಬ್ಯಾಟ್ಸ್‌ಮನ್ ಗಳು ಹೆಚ್ಚಿನ ಒತ್ತಡವಿಲ್ಲದೇ ಬ್ಯಾಟ್ ಬೀಸಲು ಅನುವು ಮಾಡಿ ಕೊಟ್ಟದ್ದೇ ನಮ್ಮ ತಂಡದ ಬ್ಯಾಟ್ಸ್‌ಮನ್ ಗಳು.
ಟೆಸ್ಟ್ ಕ್ರಿಕೆಟ್ ನ ಬ್ಯೂಟಿ ಅಂದರೆ ಇದೇ.ಇಲ್ಲಿ ಪ್ರತೀ ಪಂದ್ಯದಲ್ಲಿ ಇದೇ ರೀತಿ ಗೇಮ್ ಸಾಗಬಲ್ಲದು ಎಂದು ಅಂದಾಜಿಸಲು,ಮೈ ಮರೆತು ಆಡಲು ಅವಕಾಶವೇ ಇಲ್ಲ.ಮೈಯೆಲ್ಲ ಕಣ್ಣಾಗಿ ತಾಳ್ಮೆಯಿಂದ ಆಡಿದರಷ್ಟೇ ಟೆಸ್ಟ್ ನ ಪರೀಕ್ಷೆ ಪಾಸಾಗಬಹುದು.
ಹಾಗಂತ ಟೀಮ್ ಇಂಡಿಯಾಕ್ಕೆ ಈ ಟೆಸ್ಟ್ ನಲ್ಲಿ ಕಮ್ ಬ್ಯಾಕ್ ಮಾಡಲು ಅವಕಾಶವೇ ಇಲ್ಲವೆಂದಲ್ಲ.ಟೆಸ್ಟ್ ನಲ್ಲಿ ಐದು ದಿನಗಳ ಸುದೀರ್ಘ ಸಮಯ ಅದರಲ್ಲೂ ಎರಡು ಪಾಳಿಯಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗುವುದರಿಂದ ಈ ಪಂದ್ಯದಲ್ಲಿ ಮುಂದೆಯೂ ಟೀಮ್ ಇಂಡಿಯಾ ಆಂಗ್ಲರಿಗೆ ಪ್ರತೀರೋಧ ಖಂಡಿತವಾಗಿಯೂ ತೋರಬಹುದು. ಆದರೆ ಅದೆಲ್ಲ ಆಗಬೇಕಾದರೆ ಟೀಮ್ ಇಂಡಿಯಾದ ತನ್ನ ಎರಡನೇ ಇನಿಂಗ್ಸ್ ನಲ್ಲಿ ಬಹಳಷ್ಟು ದೊಡ್ಡ ಮೊತ್ತದ ರನ್ ಅನ್ನು ಗುಡ್ಡೆ ಹಾಕಬೇಕಾಗಿದೆ.ಎಲ್ಲದಕ್ಕಿಂತ ಮೊದಲು ಆಂಗ್ಲರ ಮುನ್ನಡೆಗೊಂದು ತುರ್ತಾದ ಕಡಿವಾಣ ಅಗತ್ಯವಾಗಿ ಬೇಕಾಗಿದೆ.
ಮೊದಲ ದಿನದಾಟದ ಮುಗಿದಾಗ ಆಂಗ್ಲರು ಯಾವುದೇ ವಿಕೆಟ್ ಕಳೆದು ಕೊಳ್ಳದೇ 120 ರನ್ ಗಳಿಸಿ 42 ರನ್ನುಗಳ ಮುನ್ನಡೆಯನ್ನು ಕೂಡ ಗಳಿಸಿಕೊಂಡಿದ್ದಾರೆ.ಆರಂಭಿಕರಾದ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಅರ್ಧಶತಕ ಬಾರಿಸಿ ಇನ್ನೂ ನೆಲಕಚ್ಚಿ ಆಡುತ್ತಿದ್ದಾರೆ.
ನಾಳೆಯ ದಿನ ಏನು ಆಗುತ್ತದೆಯೋ ಗೊತ್ತಿಲ್ಲ.
ಏನಾದರೂ ಒಂದು ಆಗಿಯೇ ಆಗುತ್ತದೆ ಬಿಡಿ.ಅದರ ಬಗ್ಗೆ ಮಾತಾಡಲು ಎರಡನೆಯ ದಿನದಾಟದ ಬಳಿಕ ಅಂದರೆ ನಾಳೆ ರಾತ್ರಿ ಮತ್ತೆ ಎಂದಿನಂತೆ ಸಿಗೋಣ..
Day_1 : Stumps
India 1st Innings - 78/10
England 1st Innings - 120/0
Ind Vs England
3rd Test - Headingley - Leeds.
#WTC_S02E01_03_2021_23
Ab pacchu
Comments
Post a Comment