ಕಿರು ಪರೀಕ್ಷೆ
ಇನ್ನೂ ಎರಡು ದಿನ ಬಾಕಿ ಇರುವುದರಿಂದ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಿರಲಿದೆ ಎನ್ನುವುದು ನಿಜವೇ ಆದರೂ...
ಅವೆಲ್ಲಕ್ಕೂ ಪೂರ್ವಭಾವಿ ಎಂಬಂತೆ ನಡೆದ ಈ ದಿನದ ಪರೀಕ್ಷೆಯಲ್ಲಿ ಪೂರ್ಣಾಂಕದೊಂದಿಗೆ ಉತ್ತೀರ್ಣರಾದ ನಮ್ಮವರಿಗೆ ನಾವು ಹೃದಯದಿಂದ ಒಂದಷ್ಟು ಅಭಿನಂದಿಸಲೇಬೇಕು.
ಜಗತ್ತು ಕಾದು ಕುಳಿತ್ತಿದ್ದದ್ದು...ಇಂದಿನ ಆಟ ಹೀಗೆ ಶುರುವಾಗಿ ಹಾಗೇ ಇವತ್ತೇ ಮುಗಿದು ಹೋಗುತ್ತದೆ ಎಂದು.
ಖಂಡಿತವಾಗಿಯೂ ಅಂತಹ ಪರಿಸ್ಥಿತಿಯಲ್ಲಿಯೇ ಟೀಮ್ ಇಂಡಿಯಾ ಕೂಡ ಇದ್ದುದರಿಂದ ಯಾರೇ ಆಗಲಿ ಆ ರೀತಿ ಯೋಚಿಸಿದ್ದರೆ ಅದರಲ್ಲಿ ತಪ್ಪು ಕೂಡ ಇಲ್ಲ.
ಆದರೆ ಆ ರೀತಿಯ ಎಲ್ಲಾ ಜಗತ್ತಿನ ಯೋಚನೆಗಳನ್ನು,ಆಂಗ್ಲರ ಬಹಳಷ್ಟು ಯೋಜನೆಗಳನ್ನು ಧೂಳೀಪಟ ಮಾಡಿ ಟೀಮ್ ಇಂಡಿಯಾದ ಅಭಿಮಾನಿಗಳಲ್ಲಿ ಇನ್ನಿಲ್ಲದಂತೆ ಹರುಷ ಉಕ್ಕಿಸಿದ್ದು ನಮ್ಮ ಬ್ಯಾಟ್ಸ್‌ಮನ್ ಗಳು.ಅದರಲ್ಲೂ ಮುಖ್ಯವಾಗಿ ಪೂಜಾರ ಮತ್ತು ರೋಹಿತ್.
ಈ ದಿನ 432 ರನ್ನುಗಳಿಗೆ ತನ್ನದೊಂದು ಉದ್ದವಾದ ಮೊದಲ ಇನ್ನಿಂಗ್ಸ್ ಬಲು ಬೇಗ ಕೊನೆ ಗೊಳಿಸಿದ ಆಂಗ್ಲರು ಸುಮಾರು 354 ರನ್ನುಗಳಷ್ಟು ಬೃಹತ್ ಮುನ್ನಡೆಯನ್ನು ಗಳಿಸಿಕೊಂಡಿದ್ದರು.
ಟೀಮ್ ಇಂಡಿಯಾದ ಎರಡನೇ ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ರಾಹುಲ್ ನದ್ದೊಂದು ಢಿಫೆನ್ಸ್ ಬಹಳಷ್ಟು ಸ್ಟ್ರಾಂಗ್ ಹಾಗೂ ಅಷ್ಟೇ ಸಾಲಿಡ್ ಕೂಡ ಆಗಿತ್ತು.
ಟೆಸ್ಟ್ ನಲ್ಲಿ ಬ್ಯಾಟ್ಸ್‌ಮನ್ ಒಬ್ಬ ಬೌಂಡರಿ ಮೇಲೆ ಬೌಂಡರಿ ಬಾರಿಸುವುದಕ್ಕಿಂತಲೂ ಸರಾಗವಾಗಿ ಬಾಲ್ ಮೇಲೆ ಬಾಲ್ ಯಾವುದೇ ಅಳುಕಿಲ್ಲದೇ ನಿರಂತರವಾಗಿ ಬಿಟ್ಟು ಬಿಡುತ್ತಿದ್ದರೆ,ಅವನಲ್ಲೊಂದು ಹಾಗೇ ಉತ್ಪನ್ನವಾಗುವ ಆತ್ಮವಿಶ್ವಾಸ ಎದುರಾಳಿಯ ಒಂದಷ್ಟು ಆತ್ಮವಿಶ್ವಾಸವನ್ನು ಖಂಡಿತವಾಗಿಯೂ ಕಸಿದುಕೊಳ್ಳಬಲ್ಲದು.
ಇವತ್ತು ಮೊದಲ ಸೆಷನ್ ನಲ್ಲಿ ರೋಹಿತ್ ಮತ್ತು ರಾಹುಲ್ ಬ್ಯಾಟಿಂಗ್ ಬೀಸಿದ್ದು ಕೂಡ ಹಾಗೆಯೇ.
ಎಲ್ಲವೂ ಸರಿ ಇತ್ತು.ಕೊನೆಯ ಸೆಕೆಂಡ್ ನಲ್ಲಿ ರೋಹಿತ್ ಸಲಹೆಯ ಮೇರೆಗೆ ರಿವ್ಯೂ ತೆಗೆದುಕೊಂಡು ರಾಹುಲ್ ಔಟ್ ಆಗುವುದರಿಂದ ಬಚಾವ್ ಕೂಡ ಆಗಿ ಬಿಟ್ಟಿದ್ದ.ಆದರೆ ಭೋಜನಕ್ಕೆ ಹೋಗುವುದಕ್ಕೂ ಮೊದಲು ಕ್ರೇಗ್ ಓವರ್ಟನ್ ನ ಎಸೆತದಲ್ಲಿ ತಬ್ಬಿಬ್ಬಾದ ರಾಹುಲ್, ಸ್ಲಿಪ್ ನಲ್ಲಿ ಜಾನಿ ಬೆರ್ಸ್ಟೋ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾಗಿ ತನ್ನ ಎರಡನೇ ಇನಿಂಗ್ಸ್ ಅನ್ನು ಇಂದು ಬರೀ 8 ರನ್ನಿಗೆ ಸಮಾಪ್ತಿಗೊಳಿಸಬೇಕಾಯಿತು.
ಲಂಚ್ ಬ್ರೇಕ್ ನಂತರ ಪೂಜಾರ ಮತ್ತು ರೋಹಿತ್ ಹೊಸ ಹುರುಪಿನೊಂದಿಗೆ ಮತ್ತೆ ಆಟ ಮುಂದುವರಿಸಿದರು.
ಇಂದು ರೋಹಿತ್ ಗಿಂತಲೂ ಹೆಚ್ಚು ವೇಗವಾಗಿ ರನ್ ಗಳಿಸಲು ಆರಂಭಿಸಿದ ಪೂಜಾರ ನೋಡು ನೋಡುತ್ತಿದ್ದಂತೆ ಒಂದರ ನಂತರ ಒಂದು ಬೌಂಡರಿ ಬಾರಿಸಲು ಶುರು ಮಾಡಿ ಬಿಟ್ಟ.
ಅದರಲ್ಲೂ ಪೂಜಾರ ಸ್ಕ್ವೇರ್ ಲೆಗ್, ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಅಲ್ಲಿ ಬಾರಿಸಿದ ಲೆಗ್ ಗ್ಲಾನ್ ಗಳು ಬೆಣ್ಣೆಯಿಂದ ಕೂದಲು ತಗೆಯುವಷ್ಟು ಸುಲಲಿತವಾಗಿತ್ತು.
ರೋಹಿತ್ ಕೂಡ ಹಿಂದೆ ಬೀಳಲಿಲ್ಲ.ಅವನು ಈ ದಿನ ಬಾರಿಸಿದ ಆ ಕವರ್ ಡ್ರೈವ್, ಸ್ಟ್ರೈಟ್ ಡ್ರೈವ್, ಸ್ಕ್ವೇರ್ ಡ್ರೈವ್ ಎಲ್ಲವೂ ಟ್ರೀಟ್ ಫಾರ್ ಐಯ್ಸ್ ಎಂಬಷ್ಟು ಸುಂದರ.ಅವನು ಲಹರಿಯಲ್ಲಿ ಆಡಿದರೆ ಅವನ ಎಲ್ಲಾ ಹೊಡೆತವೂ ಎಂದಿಗೂ ಕ್ಲಾಸೇ ಅದರಲ್ಲಿ ಸಂಶಯವೇ ಇಲ್ಲ.
ಚಹಾ ವಿರಾಮಕ್ಕೆ ಹೋಗುವಾಗ ಆ ಸೆಷನ್ ನಲ್ಲಿ ನಮ್ಮ ತಂಡ ಒಂದೂ ವಿಕೆಟ್ ಕಳೆದುಕೊಳ್ಳಲಿಲ್ಲ.ರೋಹಿತ್ ತನ್ನದೊಂದು ಅರ್ಧಶತಕ ಕೂಡ ಪೂರ್ತಿಗೊಳಿಸಿ ಬಿಟ್ಟ.ಆ ಸೆಷನ್ ಗೆದ್ದಿದ್ದು ನಾವೇ. ಜೋ ರೂಟ್ ರಿವ್ಯೂ ತೆಗೆದುಕೊಳ್ಳಲು ತಡವರಿಸಿದ ಕಾರಣ ಸಮಯ ಮೀರಿದ್ದಕ್ಕಾಗಿ ಅಂಪೈರ್ Richard Kettelborough ಇಂಗ್ಲೆಂಡ್ ಗೆ ರಿವ್ಯೂ ಅನ್ನು ನಿರಾಕರಿಸಿ ಬಿಟ್ಟಿದ್ದರು.ಆದರೆ ಇಂಗ್ಲೆಂಡ್ ಏನಾದರೂ ನಿಗದಿತ ಸಮಯದೊಳಗೆ ಆ ರಿವ್ಯೂ ಅನ್ನು ತೆಗೆದುಕೊಂಡಿದ್ದರೆ ರೋಹಿತ್ ಖಂಡಿತವಾಗಿಯೂ ಎಲ್. ಬಿ.ಡಬ್ಲ್ಯು ಔಟ್ ಆಗಿಯೇ ಬಿಡುತ್ತಿದ್ದ.ಆದರೆ ಹಾಗಾಲಿಲ್ಲ.
ಟೀ ವಿರಾಮದ ನಂತರ ಟೀಮ್ ಇಂಡಿಯಾ ಪುನಃ ಆಟ ಮುಂದುವರಿಸಿತ್ತು.
ರಾಬಿನ್ಸನ್ ಎಸೆತವೊಂದು ಈ ಬಾರಿ ಮತ್ತೆ ಬಂದು ಬಡಿದದ್ದು ರೋಹಿತ್ ಪ್ಯಾಡನ್ನೇ.
ಮತ್ತೊಮ್ಮೆ ಆಂಗ್ಲರ ಮುಗಿಲು ಮುಟ್ಟುವ ಮನವಿ.
ಅಂಪೈರ್ Richard Kettelborough ಈ ಬಾರಿ ಹಿಂದೆ ಮುಂದೆ ನೋಡದೆ ಔಟ್ ತೀರ್ಪು ನೀಡಿಯೇ ಬಿಟ್ಟ.
ನೋಡಲು ಬಾಲ್ ಲೆಗ್ ಸ್ಟಂಪ್ ನಿಂದ ಮಿಸ್ ಆಗಿ ಹೊರಗೆ ಹೋಗುವಂತೆ ಕಂಡಿತ್ತು.ರೋಹಿತ್ ರಿವ್ಯೂ ಕೂಡ ತೆಗೆದುಕೊಂಡ. ಆದರೆ ರೋಹಿತ್ ತೆಗೆದ ಆ ರಿವ್ಯೂ ನಲ್ಲಿ ಬಾಲ್ ಸ್ವಲ್ಪವೇ ಸ್ವಲ್ಪ ಲೆಗ್ ಸ್ಟಂಪ್ ಗೆ ಹೂಮುತ್ತಿನಂತೆ ಮುತ್ತಿಕ್ಕಿ ಹೊರ ಹೋಗಿತ್ತು. 'ಅಂಪೈರ್ ಕಾಲ್ ' ಇಲ್ಲಿ ಮಹತ್ವವಾದ ಕಾರಣ ರೋಹಿತ್ ಗೆ ಮತ್ತೊಮ್ಮೆ 'ವಿದೇಶಿ ನೆಲದಲ್ಲಿ' ತನ್ನ ಮೊದಲ ಟೆಸ್ಟ್ ಶತಕ ಬಾರಿಸಲು ಇಲ್ಲಿಯೂ ಆಗಲಿಲ್ಲ.ನಿಜವಾಗಿಯೂ ರೋಹಿತ್ ಗೆಷ್ಟು ನಿರಾಸೆ ಆಗಿತ್ತೋ ಅಷ್ಟೇ ನಿರಾಸೆ ಇವತ್ತು ಎಲ್ಲರಿಗೂ ಆಗಿತ್ತು.ಏಕೆಂದರೆ ಅವನು ಅಷ್ಟು ಸೊಗಸಾಗಿ ಸುಲಲಿತವಾಗಿ ಇಂದು ಆಡುತ್ತಿದ್ದ.
ರೋಹಿತ್ ಔಟಾದ ನಂತರ ಬಂದ ಕೊಹ್ಲಿ ಅದಾಗಲೇ ಆಡುತ್ತಿದ್ದ ಪೂಜಾರ ಜೊತೆಗೆ ಕೂಡಿಕೊಂಡು ಮತ್ತೊಂದು ಉತ್ತಮ ಜೊತೆಯಾಟ ಶುರು ಮಾಡುವುದಕ್ಕಾಗಿ ಈ ಬಾರಿ ಗಮನವಿಟ್ಟು ಆಡಲು ಶುರುಮಾಡಿದ.ಏಕೆಂದರೆ ಕೊಹ್ಲಿಗೂ ಟೀಕೆ ಟಿಪ್ಪಣಿಗಳು ಬೆಟ್ಟದಷ್ಟು ಇತ್ತು!
ಇದರ ನಡುವೆ ಮೊದಲಿನಿಂದಲೂ ಎಲ್ಲರ ಟೀಕೆಗೆ ಅಪಾರವಾಗಿ ಗುರಿಯಾಗಿದ್ದ ಪೂಜಾರ ಕೊನೆಗೂ ಒಂದು ಮಚ್ ನೀಡೆಡ್ ಸೊಗಸಾದ ಅರ್ಧಶತಕ ಬಾರಿಸಿ ಹಾಗೇ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟ.
ಸಂಘರ್ಷದ ಆಟ ಮತ್ತೆ ಮುಂದುವರಿದಿತ್ತು ಹೆಡಿಂಗ್ಲಿಯಲ್ಲಿ.
ಕೊಹ್ಲಿಯ ಡ್ರೈವ್ ಗಳು ಎಂದಿನಂತೆ ಸೊಗಸಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅದರಲ್ಲಿ ಬಹಳಷ್ಟು ಆತ್ಮವಿಶ್ವಾಸ ಇತ್ತು.
ಬ್ಯಾಡ್ ಲೈಟಿನಿಂದ ದಿನದಾಟ ಮುಗಿಯುವಾಗ ಟೀಮ್ ಇಂಡಿಯಾ 215 ರನ್ನುಗಳನ್ನು ಗಳಿಸಿ ಸದ್ಯಕ್ಕೆ ಆಂಗ್ಲರಿಗಿಂತ 139 ರನ್ನುಗಳಷ್ಟು ಹಿಂದೆ ಉಳಿದಿದೆ. ನೆನಪಿರಲಿ ಆಟ ಶುರು ಮಾಡುವಾಗ ನಾವು 354 ರನ್ನುಗಳಷ್ಟು ಹಿಂದೆ ಇದ್ದೆವು.
ಮೂರನೇ ದಿನದ ಆಟ ಮುಗಿದಾಗ ಪುಜಾರ 91* ರನ್ ಹಾಗೂ ಕೊಹ್ಲಿ 45* ರನ್ ಗಳಿಸಿ ನಾಳೆಯ ದಿನದಾಟಕ್ಕೆ ತಮ್ಮದೊಂದು ಆಟವನ್ನು ಕಾಯ್ದಿರಿಸಿಕೊಂಡಿದ್ದಾರೆ..
ಇಡೀ ದಿನ ಮೂರೂ ಇನ್ನಿಂಗ್ಸ್ ಆಡಿ ಟೀಮ್ ಇಂಡಿಯಾ ಇಂದು ಕಳೆದು ಕೊಂಡಿದ್ದು ಕೇವಲ 2 ವಿಕೆಟ್ ಗಳನ್ನು ಅಷ್ಟೇ.ಅದೂ ಕೂಡ ಅತ್ಯಂತ ಹೆಚ್ಚಿನ ಒತ್ತಡದ ಇಂತಹ ಪರಿಸ್ಥಿತಿಯಲ್ಲಿ. ಏನೇ ಹೇಳಿ ಒಂದು ಅಭಿನಂದನೆ ನಾವು ನೀವು ಮನಸಾರೆ ನಮ್ಮವರಿಗೆ ಹೇಳಲೇಬೇಕು.
ಯಾವುದೇ ಒಬ್ಬ ಆಟಗಾರ ಆಡದೇ ಇದ್ದಾಗ ನಾವು ಹಿಂದೆ ಮುಂದೆ ನೋಡದೆ ಎಲ್ಲರೂ ಇನ್ನಿಲ್ಲದಂತೆ ಟೀಕೆ ಮಾಡಲು ಮುಂದಾಗುತ್ತೇವೆ.ಅವನು ಹಾಗೇ ಆಡಬಹುದಿತ್ತು, ಹೀಗೆ ಆಡಬಹುದಿತ್ತು ಎಂದು ಅವರುಗಳಿಗೆ ಕ್ರಿಕೆಟ್ ಕಲಿಸಲು ಕೂಡ ಮುಂದಾಗುತ್ತೇವೆ.ಆದರೆ ಅದೇ ರೀತಿ ಅಂತಹ ಆಟಗಾರರು ಚೆನ್ನಾಗಿಯೇ ಆಡಿದಾಗ ನಾವು ಕೆಲವೊಮ್ಮೆ ನಮ್ಮ ಸಂಕುಚಿತ ಮನೋಭಾವಗಳಿಂದಾಗಿ ಅಥವಾ ನಮಗೆ ಒಬ್ಬ ಆಟಗಾರನ ಬಗ್ಗೆ ಮೊದಲಿನಿಂದಲೇ ಇರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದಾಗಿ ನಾವು ಅವನನ್ನು ಅಭಿನಂದಿಸಿಲು ಮುಂದಾಗುವುದೇ ಇಲ್ಲ.
ನಾವು ನಮಗೆ ಬೇರೆ ಯಾರೋ ಒಬ್ಬ ಆಟಗಾರ ತುಂಬಾ ಇಷ್ಟ ಎಂದು ಇನ್ನೊಬ್ಬ ಆಟಗಾರನನ್ನು ಆತ ಆಡಲಿ,ಆಡದೇ ಇರಲಿ ಇನ್ನಿಲ್ಲದಂತೆ ಆತ ಏನೇ ಮಾಡಿದರೂ ದ್ವೇಷಿಸಿಲು ಹೊರಡುತ್ತೇವೆ ಎಂದಾದರೆ ನಮಗೆ ಕ್ರಿಕೆಟನ್ನಾಗಲಿ ಅಥವಾ ಯಾವುದೇ ಕ್ರೀಡೆಯನ್ನಾಗಲಿ ಎಂದಿಗೂ ಪ್ರೀತಿಸಲು ಸಾಧ್ಯವಾಗುವುದೇ ಇಲ್ಲ.
ಆಟಗಾರರರು ಬರುತ್ತಾರೆ ಹೋಗುತ್ತಾರೆ.ಇಂದಿನ ಈ ಆಟಗಾರರು ಕೂಡ ಮುಂದೊಂದು ದಿನ ತೆರೆ ಮರೆಗೆ ಸರಿಯಬಹುದು. ಆದರೆ ಆಟ ಹಾಗೇ ಇರುತ್ತದೆ. ನಮ್ಮಲ್ಲಿ ರಾಗ ದ್ವೇಷ ಒಂದು ಮನೆ ಮಾಡಿಕೊಂಡರೆ ನಮಗೆ ಎಂದಿಗೂ ಯಾವುದೇ ಕ್ರೀಡೆಯನ್ನು ಎಂಜಾಯ್ ಮಾಡಲು ಸಾಧ್ಯವೇ ಇಲ್ಲ. ಬದುಕು ಕೂಡ ಹೆಚ್ಚು ಕಡಿಮೆ ಹಾಗೆಯೇ..ಬೇರೆಯವರ ಖುಷಿಯಲ್ಲಿ, ಅವರದ್ದೊಂದು ಸೆಲೆಬ್ರೇಶನ್ ನಲ್ಲಿ ನಮ್ಮದೊಂದು ಸಂತೋಷ ಕಂಡುಕೊಳ್ಳುವುದರಲ್ಲಿ ನಿಜವಾಗಿಯೂ ಬಹಳಷ್ಟು ಸುಖವಿದೆ.
ಹೆಚ್ಚಿನ ಜನರ ಟೀಕೆ ಗೆ ಒಳಗಾಗಿದ್ದ ಪುಜಾರ ಇಂದು ನಿಜವಾಗಿಯೂ ಹೃದಯ ಗೆದ್ದು ಬಿಟ್ಟ.ಅವನದ್ದೊಂದು ಆಟವಿಲ್ಲದಿದ್ದರೆ ತಂಡದ ಸ್ಥಿತಿಯನ್ನೊಮ್ಮೆ ಯೋಚಿಸಿ ನೋಡಿ.
ಅಭಿನಂದನೆಗಳು ಪೂಜಾರ..
ಕೊಹ್ಲಿ ಕೂಡ ಭರವಸೆ ಮೂಡಿಸಿದ್ದಾನೆ.ಅವನೂ ಕೂಡ ಟೀಕೆಗಳಿಗೆ ತನ್ನದೊಂದು ಉತ್ತರವನ್ನು ಬ್ಯಾಟ್ ಮೂಲಕ ಕೊಟ್ಟಾಗ ಅವನನ್ನು ಸಹ ಅಭಿನಂದಿಸಿಲು ಹಿಂದೆ ಮುಂದೆ ನೋಡಬೇಡಿ.
ಅಂದ ಹಾಗೆ ಖಂಡಿತವಾಗಿಯೂ ಅಪಾಯ ಇನ್ನೂ ನಮ್ಮ ಮೇಲೆ ಇದೆ.ಸಂಪೂರ್ಣವಾಗಿ ನಾವು ಪಾರಾಗಿದ್ದೇವೆ ಎಂದು ಹೇಳಲಾಗದು.
ಆದರೆ ಇವತ್ತಿನದ್ದೊಂದು ನಮ್ಮವರ ಆಟ ಆಂಗ್ಲರಿಗೆ ಸಾಕಷ್ಟು ಮಂಡೆ ಬಿಸಿ ಉಂಟು ಮಾಡಿದೆ ಎನ್ನುವುದರಲ್ಲಿ ಕೂಡ ಯಾವುದೇ ಸಂಶಯವೇ ಇಲ್ಲ.ಹಾಗಾಗಿ ಈ ದಿನದ ಸಂಪೂರ್ಣ ಆಟ ಗೆದ್ದದ್ದು ನಮ್ಮವರೇ.
ಇನ್ನೂ ಎರಡೂ ದಿನಗಳ ಆಟವಿದೆ.
ಇಂದಿನಂತೆ ನಾಳೆಯೂ ನಮ್ಮದೊಂದು ಆಟ ಹೀಗೆಯೇ ಮುಂದುವರಿಯಬೇಕು.
ಆಂಗ್ಲರು ಗಳಿಸಿಕೊಂಡಿರುವ ಮುನ್ನಡೆ ಕಡಿಮೆ ಆಗುತ್ತಾ ಹೋದಂತೆ ಮುಂದೆ ಮತ್ತಷ್ಟು ಬಿಟ್ಟು ಬಿಡದೇ ತಲೆ ಕೆರೆದುಕೊಳ್ಳುವ ಸರದಿ ಮತ್ತೆ ಆಂಗ್ಲರದ್ದೇ ಆಗಲಿದೆ.
ಹಾಗೆ ಆದರೆನೇ ಈ ಟೆಸ್ಟ್ ನ ಮಜಾ ಹೆಚ್ಚಾಗುವುದು,ಅದೇ ರೀತಿ ಮತ್ತೊಂದು ಅಸಲಿ ಟೆಸ್ಟ್ ಕ್ರಿಕೆಟ್ ನ ಸುಖಕ್ಕೆ ನಾವು ನೀವು ಸಾಕ್ಷಿಯಾಗಬಹುದು.
ಹಾಗೇ ಆಗಲಿ.. ನಮ್ಮವರ ಆಟ ಇನ್ನಷ್ಟು ಖಡಕ್ ಆಗಿ ಆಂಗ್ಲರಿಗೆ ಕಿರಿಕಿರಿ ಆಗುವಂತೆ ಮುಂದುವರಿಯಲಿ.
ನಾಳೆ ಖಂಡಿತವಾಗಿಯೂ ಆಟ ಇನ್ನಷ್ಟು ರೋಚಕವಾಗಿರಲಿದೆ.ನಾಳೆಯ ನಾಲ್ಕನೇ ದಿನದಾಟದ ನಂತರ ಮತ್ತೆ ಸಿಗೋಣ.ಎಂದಿನಂತೆ ಮತ್ತೆ ಒಂದಷ್ಟು ಕ್ರಿಕೆಟ್ ಮಾತು ನಾಳೆಯೂ ಆಡೋಣ.
ಹೋಫ್ ಇರಲಿ... 😊👍
#Day_3 : Stumps
India 1st Innings - 78/10
England 1st Innings - 432/10
India 2nd Innings - 215/2
Ind Vs England
3rd Test - Headingley - Leeds.
#WTC_S02E01_03_2021_23
Ab pacchu
Comments
Post a Comment