ಅತ್ತಿಗೆಯ ಮೂಡೆ ಬ್ಯುಸಿನೆಸ್
ಇದು ಯಾವುದೇ ಕ್ರಾಪ್ಟ್ ಮಾಡಲು ಬಳಸುವ ಚುಚ್ಚು ಕಡ್ಡಿ ಅಲ್ಲ.ಇದು ಈಗ ಮಾರುಕಟ್ಟೆಗಳಲ್ಲಿ ಸಿಗುವ ಗುಂಡ/ಮೂಡೆ ಗಳನ್ನು ಎಟ್ಟಲು(ಕಟ್ಟಲು)ಬಳಸುವ ಕಡ್ಡಿ.
ಹಿಂದೆ ಎಲ್ಲಾ ಗುಡ್ಡೆಯಲ್ಲಿ ಬೇಕಾದಷ್ಟು ಸಿಗುತ್ತಿದ್ದ ಈ ಕರ್ಕಟೆ ಮುಳ್ಳುಗಳು ಇದಕ್ಕಾಗಿಯೇ ಬಳಸಲ್ಪಡುತ್ತಿತ್ತು.ಈಗಲೂ ಅದು ಹಳ್ಳಿಗಳಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಇದ್ದು,ಬಹುಶಃ ಮುಳ್ಳಿನ ಗಿಡವಾದ ಕಾರಣ ಸದ್ದಿಲ್ಲದೆ ಅಳಿವಿನಂಚಿಗೆ ಸರಿಯುತ್ತಿದೆ.ಕರ್ಕಟೆ ಮುಳ್ಳು ಬಿಟ್ಟರೆ ಬಿದಿರಿನ ಕಡ್ಡಿ ಹಾಗೂ ಈ ಮೈಪುಸೂಡಿಯ(ಹಿಡಿಸೂಡಿ ಕಡ್ಡಿ/ಪೊರಕೆ)ಕಡ್ಡಿಯನ್ನು ಸರಿಯಾಗಿ ಕಟ್ ಮಾಡಿ ಚೆನ್ನಾಗಿ ಕ್ಲೀನ್ ಮಾಡಿ ಕೂಡ ಬಳಸಬಹುದು.
ಈ ಅಷ್ಟಮಿ ಹಬ್ಬ ಬಂದಾಗ ತುಳುನಾಡಿನಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ತಿಂಡಿಗಳು ಎರಡೇ ಒಂದು ಗುಂಡ ಮತ್ತೊಂದು ಮೂಡೆ.ಗೊತ್ತಿಲ್ಲದವರಿಗೆ ಸರಳವಾಗಿ ಹೇಳಬೇಕೆಂದರೆ ಮೂಡೆ ಎಂದರೆ ಮೂಡೆಯ ಒಲಿ(ಕೇದಗೆಯ ಎಲೆ)ಯನ್ನು ಕಡ್ಡಿಯಿಂದ ಚುಚ್ಚಿ ಕೊಟ್ಟೆ(ಮೌಲ್ಡ್)ಮಾಡಿ ಅದಕ್ಕೆ ನಮ್ಮ ಇಡ್ಲಿ ಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸುವುದು,ಗುಂಡ ಎಂದರೆ ಹಲಸಿನ ನಾಲ್ಕು ಎಲೆಗಳನ್ನು ಬಳಸಿಕೊಂಡು ಅದನ್ನು ಕಡ್ಡಿ ಚುಚ್ಚಿ ಅದರಿಂದೊಂದು ಮೌಲ್ಡ್ ತಯಾರಿಸಿ ಅದಕ್ಕೂ ಇಡ್ಲಿ ಹಿಟ್ಟು ಸುರಿದು ಅದನ್ನು ಹಬೆಯಲ್ಲಿ ಬೇಯಿಸಿದರೆ ಆಗ ಅದು ಗುಂಡ. ಇದೇ ರೀತಿ ಬಾಳೆಎಲೆಯನ್ನೂ ಕೂಡ ಬಾಡಿಸಿ ಕಟ್ಟಿಕೊಂಡು ಕೊಟ್ಟಿಗೆ ಎಲ್ಲಾ ಮಾಡ್ತಾರೆ.ಆದರೆ ಅದರಲ್ಲಿ ಕಡ್ಡಿ ಬಳಕೆ ಕಡಿಮೆ,ಇಡ್ಲಿ ಹಿಟ್ಟು ಹಾಕಿದ ಬಾಳೆಎಲೆಯ ಮೌಲ್ಡ್ ಅನ್ನು ಬಾಳೆಗಿಡದ ನಾರಿನಿಂದ ಕಟ್ಟಿಕೊಂಡು ಹಬೆಯಲ್ಲಿ ಬೇಯಿಸಿದರೆ ಎಲ್ಲಕ್ಕಿಂತ ಸರಳವಾದ ಕೊಟ್ಟಿಗೆ ಸಿದ್ಧವಾಗಿ ಬಿಡುವುದು.ಕೆಲವೊಂದು ಕಡೆಗಳಲ್ಲಿ ಎಲ್ಲದಕ್ಕೂ ಕೊಟ್ಟಿಗೆ ಎಂದೇ ಹೇಳುತ್ತಾರೆ.ಆದರೆ ನಿಜಕ್ಕೂ ವ್ಯತ್ಯಾಸ ಇದೆ.
ವಿಶೇಷ ಏನೆಂದರೆ ಈ ಕೃಷ್ಣನ ಒಂದು ಅಷ್ಟಮಿಗೂ ನಮ್ಮ ಮೂಡೆ ಎಂಬ ತಿಂಡಿಗೂ ಅವಿನಾಭಾವ ಸಂಬಂಧ ಬಹಳ ಕಾಲದಿಂದಲೂ ಹಾಗೇ ಬೆಳೆದು ಬಂದು ಬಿಟ್ಟಿದೆ.ಅದರಲ್ಲೂ ಅಷ್ಟಮಿ ಬಂತೆಂದರೆ ಸಾಕು ತುಳುನಾಡಿನಲ್ಲಿ ಈ ಮೂಡೆಗೆ ಕಂಡಾಬಟ್ಟೆ ಡಿಮ್ಯಾಂಡು. " ಅಷ್ಟಮಿದ ಮೂಡೆ" "ಮಾರ್ನೆಮಿದ ಪಿಲಿ" ಎಂಬುದೆಲ್ಲ ನಮ್ಮಲ್ಲಿ ಬಹಳ ಜನಜನಿತವಾದ ಹಾಗೂ ಅಷ್ಟೇ ಹೆಸುರುವಾಸಿಯಾದ ಸಾಲುಗಳು.ಮಾರ್ನೆಮಿ ಅಂದರೆ ನವರಾತ್ರಿ.ನಮ್ಮಲ್ಲಿ ನವರಾತ್ರಿಯೊಂದು ಪ್ರಸಿದ್ಧವಾದ ಪಿಲಿ ವೇಷ ಅಂದರೆ ಹುಲಿ ವೇಷ ಹಾಗೂ ಅದರದ್ದೊಂದು ಕುಣಿತದೊಂದಿಗೆ ವಿಶೇಷವಾಗಿ ಗುರುತಿಸಲ್ಪಡುತ್ತದೆ.
ಈ ಮೂಡೆಯ ವಿಷಯಕ್ಕೆ ಬಂದರೆ ಎಲ್ಲರಿಗೂ ಮೂಡೆ ಮಾಡಲು ಬರುವುದಿಲ್ಲ ಮತ್ತು ಎಲ್ಲರ ಮನೆಯಲ್ಲಿ ಸಹ ಅದನ್ನು ಮಾಡುವುದಿಲ್ಲ. ನಿಜವಾಗಿಯೂ ಅದೊಂದು ಕಲೆ.ಅದೇ ರೀತಿ ಅದರದ್ದೊಂದು ತಯಾರಿಕೆಗೆ ಸಿಕ್ಕಾಪಟ್ಟೆ ಶ್ರಮ ಹಾಗೂ ಬಹಳಷ್ಟು ಪೂರ್ವ ಸಿದ್ಧತೆ ಕೂಡ ಬೇಕು.ಅದನ್ನು ನೋಡಿದರೆ ಇದನ್ನು ಮಾಡುವ ಉಸಾಬರಿಯೇ ಬೇಡ ಮಾರ್ರೆ ಎಂದು ಯಾರಿಗೇ ಆಗಲಿ ಅನ್ನಿಸದೇ ಇರದು.ಆದರೆ ಇಡ್ಲಿಯ ಅಟ್ಟಿಯಲ್ಲಿ ಆ ಒಂದು ಹಬೆಯಲ್ಲಿ ಈ ಮೂಡೆಯೊಂದು ಬೇಯುತ್ತಿದ್ದರೆ ಇದರ ಪರಿಮಳಕ್ಕೆ ಬಹುಶಃ ಅರಶಿನದೆಲೆಯ ಗಟ್ಟಿ(ಕಡುಬು) ಬಿಟ್ಟರೆ ಬಹುಶಃ ಬೇರೆ ಯಾವುದೇ ಎಲೆಕಡುಬುಗಳು ತೀವ್ರವಾದ ಪೈಪೋಟಿ ಕೊಡಲು ಸಾಧ್ಯವೇ ಇಲ್ಲ ಬಿಡಿ. ಅಷ್ಟೊಂದು ಸುವಾಸಿತ ಪರಿಮಳ ಇದರ ಎಲೆಯದ್ದು.
ಕೆಲವೊಂದು ಮನೆಯಲ್ಲಿ ಅಷ್ಟಮಿಗೆ ಮೂಡೆ ಬೇಯಿಸಲು ಶುರು ಮಾಡಿದರೆ ಒಲೆಯಿಂದ ಇಡ್ಲಿ ಪಾತ್ರೆ ಇಳಿಸಲು ಚೌತಿ ಹಬ್ಬವೇ ಮುಗಿಯಬೇಕು.ನವರಾತ್ರಿವರಗೆ ಮುಂದುವರಿದರೂ ಅದು ಅಚ್ಚರಿಯೇನಲ್ಲ.ಅಲ್ಲಿಯವರೆಗೂ ನಮ್ಮಲ್ಲಿ ಬರೀ ಮೂಡೆಯೇ. ಮೂಡೆಗೆ ಒದಗಿ ಬರುವ ಸಂಕ್ರಮಣ ಕಾಲ ಅಂದರೆ ಈ ಹಬ್ಬಗಳೇ.ಕೃಪ್ಣನಿಗೆ ಹೇಗೆ ಕೊಳಲು ಪ್ರೀಯವೋ, ತುಳುವರಿಗೆ ಅಷ್ಟಮಿ ಅಂದರೆ ಅದು ಕೃಷ್ಣನ ಜೊತೆ ಜೊತೆಗೆ ಒಂದೆರಡು ವಾರಗಳ ಅಷ್ಟಮಿಯ ಮೂಡೆ ಎಂದರೆ ಖಂಡಿತವಾಗಿಯೂ ತಪ್ಪಾಗಲಿಕ್ಕಿಲ್ಲ.ಏಕೆಂದರೆ ದೇವರಿಗಿಂತಲೂ ಹೆಚ್ಚಾಗಿ ನಮ್ಮವರಿಗೆ ಅಷ್ಟಮಿ ಬರುವುದೆಂದರೆ ಮೂಡೆಯೇ ಮೊದಲೂ ನೆನಪಾಗುತ್ತದೆ.ತಪ್ಪೇ ಇಲ್ಲ ಬಿಡಿ,ಏಕೆಂದರೆ ದೇವರು ಎಲ್ಲಾ ಕಡೆಯೂ ಇದ್ದಾನೆ.ಅಣು ರೇಣು ತೃಣ ಕಾಷ್ಟ ದಲ್ಲಿ ಇರುವಂತೆ ಅವನು ಮೂಡೆಯಲ್ಲೂ ಒಂದಷ್ಟು ಇದ್ದಾನೆ.
ಇನ್ನು ಕಡ್ಡಿಯ ವಿಷಯಕ್ಕೆ ಬರೋಣ. ಮನೆಗೆ ಒಂದಷ್ಟು ಮೂಡೆ ಮಾಡುವುದಾದರೆ ಹೇಗೋ ಹಿಡಿಸೂಡಿ ಕಡ್ಡಿ ಇಲ್ಲವೇ ಗುಡ್ಡೆಯಲ್ಲಿರುವ ಒಂದಷ್ಟು ಕರ್ಕಟೆ ಮುಳ್ಳುಗಳಿಂದ ಅಡ್ಜಸ್ಟ್ ಮಾಡಿಕೊಂಡು ಮೂಡೆ ಮಾಡಬಹುದು...
ಆದರೆ ಅಷ್ಟಮಿ ನಮ್ಮಲ್ಲಿ ಬರೀ ಅಷ್ಟಕ್ಕೆ ನಿಂತಿಲ್ಲ.ಉತ್ಸಾಹಿಗಳಿಗೆ ಅದು ಹಣ ಮಾಡುವ ದಾರಿಯನ್ನು ಕೂಡ ಪ್ರತೀ ವರ್ಷದ ಹಬ್ಬಕ್ಕೂ ಕಲ್ಪಿಸಿಕೊಡುತ್ತದೆ.200, 300 ಮೂಡೆಗಳನ್ನು ಮಾಡಿ ಆ ನಂತರ ಅದನ್ನು ಮಾರಿ ಖಂಡಿತವಾಗಿಯೂ ಒಂದಿಷ್ಟು ಜೇಬು ಬಿಸಿ ಮಾಡಿಕೊಳ್ಳಬಹುದು.ನಾನು ಸಹ ಇಂತಹದ್ದೇ ಕೆಟಗರಿಯ ಜನ. ಕೃಷ್ಣನ ಹೆಸರಲ್ಲಿ ಮೂಡೆಯ ಘಮದಲ್ಲಿ ನನ್ನ ಕೈಗಳೂ ಒಂದಷ್ಟು ಬಿಸಿ ಬಿಸಿ ನೋಟುಗಳನ್ನು ಎಣಿಸಿದೆ.ಅದನ್ನೆಲ್ಲ ಮರೆಯಲು ಸಾಧ್ಯವೇ ಆಗದು.ಅದರ ಸುಖವೇ ಬೇರೆ. ಮೊದಲ ಬಾರಿಯ ಐವತ್ತು, ನೂರು ರೂಪಾಯಿಗಳ ನಮ್ಮದೇ ಒಂದು ಸಂಪಾದನೆ ಇದೆಯಲ್ಲಾ,ಅದರ ಬೆಲೆ ಯಾವತ್ತಿಗೂ ಬಹಳಷ್ಟು ಕೋಟಿಗಿಂತಲೂ ಮಿಗಿಲು.
ಈಗಲೂ ಅಷ್ಟಮಿ ಬಂತೆಂದರೆ ಮೊದಲೇ ಒಂದಷ್ಟು ಎಲೆ ಕೊಯ್ದು ತಂದು, ಅದನ್ನು ಬಾಡಿಸಿ ಮನೆಗೆ ಬೇಕಾದಷ್ಟು ಮೂಡೆಯನ್ನು ಶ್ರದ್ಧೆಯಿಂದ,ಪ್ರೀತಿಯಿಂದ ಕಟ್ಟುತ್ತೇನೆ.ಕಟ್ಟಿ ಹೆಚ್ಚಾದರೆ ಸುತ್ತ ಮುತ್ತಲಿನವರಿಗೆ ಮಾರಿದರಷ್ಟೇ ನನ್ನ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾಪ್ತಿಯಾಗುವುದು.ಹಣ ಒಂದೇ ಉದ್ದೇಶವಲ್ಲ,ನನಗದು ಅಷ್ಟಮಿಯ ಖಾಯಂ ಭಾಗವಾಗುವುದು ನನಗೆ ಇಷ್ಟ. ಮತ್ತು ಅದು ನನಗೆ ಸದಾ ಬೇಕು. ಜೊತೆಗೆ ಬಹಳಷ್ಟು ಬಾಲ್ಯದ ನೆನಪು ಇದರೊಂದಿಗೆಯೇ ಮೂಡೆಯ ಚಂದ್ರಿಕೆಯಂತೆ ಸುರುಳಿ ಸುತ್ತಿಕೊಂಡಿದೆ. ಹಾಗಾಗಿ ಅಷ್ಟಮಿಗೆ ಕನಿಷ್ಠ ಪಕ್ಷ ಐದಾರು ಮೂಡೆ ಕಟ್ಟಿದರಷ್ಟೇ ನನ್ನ ಮನಸ್ಸಿಗೆ ಸಮಾಧಾನ.ಈ ರೀತಿಯಾಗಿಯೇ ನನ್ನದೊಂದು ಅಷ್ಟಮಿ ಹಬ್ಬವನ್ನು ಮೂಡೆಯೊಂದಿಗೆ ಆರಂಭಿಸಿ ಮೂಡೆಯೊಂದಿಗೆ ಸಂಪನ್ನಗೊಳಿಸುತ್ತಲೇ ಬಂದಿದ್ದೇನೆ.
ಅಷ್ಟಮಿಯ ದಿನ ಎಷ್ಟು ರೇಟು ಇದ್ದರೂ ನಮ್ಮ ಜನ ಮುಗಿ ಬಿದ್ದು ಮೂಡೆ ತೆಗೆದುಕೊಳ್ಳುತ್ತಾರೆ.ಕೆಲವೊಮ್ಮೆ ಒಂದು ಮೂಡೆ ಗೆ 15,20 ಮಾತ್ರವಲ್ಲ 30 ರೂಪಾಯಿ ಆದದ್ದೂ ಇದೆ.ಹಾಗಾಗಿ ಅಷ್ಟಮಿಯ ದಿನಗಳಲ್ಲಿ ಎಷ್ಟು ಮೂಡೆ ಇದ್ದರೂ ಬೇಕು.ನಾನು ಈಗೀಗ ಜಾಸ್ತಿ ಮೂಡೆ ಮಾಡುವುದಿಲ್ಲ,ಮನೆಗೆ ಎಂದಿನಂತೆ ಮಾಡುವುದನ್ನು ಬಿಟ್ಟರೆ ಕೇಳಿದವರಿಗೆ ಅಷ್ಟೇ ಮಾಡಿಕೊಡುತ್ತೇನೆ. ಮನೆಗೆ ಬಂದೇ ತೆಗೆದುಕೊಂಡು ಹೋಗುವವರು ಸಹ ಇದ್ದಾರೆ. ಬೇಡ ಎಂದರೂ ಒಂದಷ್ಟು ನೋಟು ಪ್ರೀತಿಯಿಂದ ಜೇಬಿಗೆ ತುರುಕಿ ಮೂಡೆಯನ್ನು ಜೋಪಾನವಾಗಿ ಎದೆಗೊತ್ತಿಕೊಂಡು ಮನೆಗೆ ಒಯ್ಯುವರು ಬಹಳಷ್ಟು ಜನ ಇದ್ದಾರೆ.ನಿಜವಾಗಿಯೂ ಮೂಡೆ ನಮ್ಮನ್ನೆಲ್ಲಾ ಬಹಳಷ್ಟು ಬೆಸೆದಿದೆ.ಅವರೆಲ್ಲರ ಪಾಲಿಗೆ ನಾವು ಅಷ್ಟಮಿಯ ಸಮಯ ಮೂಡೆ ಬ್ಯುಸಿನೆಸ್ ಮ್ಯಾನ್ ಗಳಾಗಿ ಬಿಡುವ ಆ ಪರಿಯೇ ಬಲು ಸೊಬಗು.
ಆದರೆ ಕೆಲವರು ಹಾಗಲ್ಲ,10, 20 ಮೂಡೆ ಮಾಡಿ ಮಾರುವುದಕ್ಕೆ ಅವರ ಮನಸ್ಸು ಎಂದಿಗೂ ಕೇಳುವುದಿಲ್ಲ.ಪ್ರತೀ ಅಷ್ಟಮಿಗೆ 400,500 ಮೂಡೆಗಳನ್ನು ಮಾಡಿ ಮಾರ್ಕೆಟ್ ನಲ್ಲಿ ಮೂಡೆ ಮಾರುವವರಿಗೆ ಅವುಗಳನ್ನು ತಲುಪಿಸಿ ಇಂತಿಷ್ಟು ಅಂತ ಹಣ ಪಡೆದು ಬರುತ್ತಾರೆ.ಈ ರೀತಿ ದೊಡ್ಡ ಪ್ರಮಾಣದಲ್ಲಿ ಮೂಡೆ ಮಾಡುವಾಗ ಈ ಕರ್ಕಟೆ ಮುಳ್ಳು ಬಿಡಿಸಿ ತರುವುದು ಇಲ್ಲವೇ ಬಿದಿರಿನ ಕಡ್ಡಿ ರೆಡಿ ಮಾಡುವುದು ಕೂಡ ಸಮಯ ವ್ಯರ್ಥದ ಕೆಲಸ ಎಂದೇ ಅನ್ನಿಸಿ ಬಿಡುತ್ತದೆ.ಮಾತ್ರವಲ್ಲ ಈ ರೀತಿ ತುಂಬಾ ಮೂಡೆ ಮಾಡುವಾಗ ಕಡ್ಡಿಗಳು ಕೂಡ ತುಂಬಾನೇ ಬೇಕಾಗುತ್ತದೆ.
ನೋಡಿ ಅದಕ್ಕಾಗಿಯೇ ಮಾರ್ಕೆಟ್ ನಲ್ಲಿ ಈ ರೀತಿಯ ಕಡ್ಡಿಗಳು ಕೂಡ ಬಂದಿರುವುದು. ಗುಂಡದ ಕಡ್ಡಿ ಇಲ್ಲವೇ ಮೂಡೆಯ ಕಡ್ಡಿ ಕೊಡಿ ಎಂದು ಕೇಳಿದರೆ ಕೊಡುತ್ತಾರೆ. ಒಂದು ಕಟ್ಟಿಗೆ 15 ರಿಂದ 20 ರೂಪಾಯಿ ವರೆಗೆ ಇದೆ. ಬಹಳ ಚಂದವಾಗಿ ಕಡ್ಡಿಯನ್ನೇ ಕ್ರಾಪ್ಟ್ ಮಾಡಿ ಇಟ್ಟಿದ್ದಾರೆ.ಸದ್ಯಕಂತು ಕರ್ಕಟೆ ಮುಳ್ಳು ಸಿಗದವರಿಗೆ ಮತ್ತು ಕಡ್ಡಿ ಮಾಡಲು ಸಮಯವಿಲ್ಲದವರಿಗೆ ಇದು ಬಹಳಷ್ಟು ಸಹಕಾರಿ.ಖಂಡಿತವಾಗಿಯೂ ಕರ್ಕಟೆ ಮುಳ್ಳೇ ಎಲ್ಲದಕ್ಕಿಂತ ಉತ್ತಮ,ಆದರೆ ಅದು ಸಿಗದವರಿಗೆ ಅಷ್ಟಮಿಗೆ ಇದು ಸಹ ತಕ್ಕ ಮಟ್ಟಿಗೆ ಕೈ ಹಿಡಿದು ಮುನ್ನಡೆಸುತ್ತದೆ.
ಅಷ್ಟಮಿ ಬಂದಾಗ ನನ್ನದು ಇದು ನೂರು,ಇನ್ನೂರು ರೂಪಾಯಿಗಳಷ್ಟೇ ಬ್ಯುಸಿನೆಸ್ ಆದರೂ(ಹಿಂದೆ ಎಲ್ಲಾ ತುಂಬಾ ಮಾಡಿದ್ದೆ)ನನ್ನ ಅತ್ತಿಗೆಯದ್ದು ಇದು ಬಹು ದೊಡ್ಡ ಬ್ಯುಸಿನೆಸ್. ಪ್ರತೀ ಅಷ್ಟಮಿ ಬಂದಾಗ ಅವರಿಗೆ ರಾಶಿ ರಾಶಿ ಮೂಡೆ ಕಟ್ಟಿ ಮಾರಿದರೆನೇ ಸಮಾಧಾನ. ಅವರಿಗೆ ಕಡ್ಡಿಯ ನೆನಪಾದಗಲೆಲ್ಲ ನನ್ನ ನೆನಪು ಆಗಿಯೇ ಆಗುತ್ತದೆ. ನನಗೆ ಮೊದಲೇ ಕಾಲ್ ಮಾಡಿ ಹೇಳುತ್ತಾರೆ ನೋಡು ನನಗೆ ಈ ಬಾರಿ ಇಷ್ಟು ಕಡ್ಡಿ ಬೇಕು ಎಂದು.ಹಾಗಾಗಿ ಅಷ್ಟಮಿ, ಚೌತಿ ಬಂದಾಗಲೆಲ್ಲ ಅವರಿಗೆ ಕಡ್ಡಿ ತಲುಪಿಸುವ ಜವಾಬ್ದಾರಿ ಎಂದಿನಂತೆ ನನ್ನದು.
ನನಗೆ ಇಂತಹ ಕೆಲಸಗಳೇ ಇಷ್ಟ.ಇದಕ್ಕೆಲ್ಲ ನೋ ಎಂದಿಗೂ ನಾನು ಹೇಳಲಾರೆ.ಈ ಬಾರಿಯೂ ಅತ್ತಿಗೆ ಕಡ್ಡಿ ಬೇಕು ಎಂದರು. ಹಾಗಾಗಿ ಇಷ್ಟೊಂದು ಕಡ್ಡಿ ಖರೀದಿಸಿ ಅವರಿಗೆ ತಲುಪಿಸಿ ಬಿಟ್ಟೆ. ಅಂಗಡಿಯವನು ಪ್ರತೀ ಬಾರಿಯೂ ನನ್ನನ್ನೊಮ್ಮೆ ಮೇಲಿಂದ ಕೆಳಗೆ ನೋಡಿ.. ಇಷ್ಟು ಕಡ್ಡಿ ಯಾರಿಗೆ ಮರ್ರೆ..ಎಂದು ವಿಚಿತ್ರವಾಗಿ ನೋಡುತ್ತಾನೆ.ಬಹುಶಃ ನನ್ನಷ್ಟು ಕಡ್ಡಿ ಅವನಂಗಡಿಯಿಂದ ಯಾರೂ ತಗೊಂಡು ಹೋಗುವುದಿಲ್ಲವೋ ಅಥವಾ ಅಲ್ಲಿನ ಕಡ್ಡಿಗಳನ್ನು ನಾನೊಬ್ಬನೇ ತೆಗೆದುಕೊಂಡು ಹೋಗುವುದು ಎಂದು ಕಾಣುತ್ತದೆ. ಆದರೆ ಪಾಪ ಅವನಿಗೇನು ಗೊತ್ತು ನಮ್ಮ ಅತ್ತಿಗೆಯವರ ಮೂಡೆ ಬ್ಯುಸಿನೆಸ್ಸು.. ಅವರು ಈಗಲೂ ಮನೆಯ ಎಲ್ಲಾ ಕೆಲಸ ರಪ ರಪ ಮಾಡಿ ಶ್ರದ್ಧೆಯಿಂದ ಮೂಡೆ ಕಟ್ಟುತ್ತಾರೆ, ಎಂದಿನಂತೆ ಕಡ್ಡಿ ತಲುಪಿಸುವ ಜವಾಬ್ದಾರಿ ನನ್ನದು.ಈ ಕೆಲಸಗಳು ಚಿಕ್ಕದೇ ಆದರೆ ಇದು ಕೊಡುವ ಸುಖ ಬಹಳಷ್ಟು ದೊಡ್ಡದಿದೆ. ಕಡ್ಡಿಗೆ ದುಡ್ಡು ಬೇಡ ಅತ್ತಿಗೆ.. ಅಂದರೂ ಅವರು ಕೇಳುವುದಿಲ್ಲ.ಬಹಳಷ್ಟು ಚಿಕ್ಕ ಮೊತ್ತವೇ ಆದರೂ ಒಂದು ರೂಪಾಯಿಯನ್ನೂ ಅವರು ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿಲ್ಲ.ಏಕೆಂದರೆ ಅವರದ್ದು ಪಕ್ಕಾ ಮೂಡೆ ಬ್ಯುಸಿನೆಸ್.ಅವರಿಗೂ ಲಾಸ್ ಆಗಬಾರದು, ನನಗೂ ಆಗಬಾರದು ಎಂಬುವುದು ಅವರ ನೇರ ದಿಟ್ಟ ನಿರಂತರವಾದ ಪ್ರತೀ ಸಲದ ಉತ್ತರ.
ಅಷ್ಟಮಿಯ ಹೆಸರಿನಲ್ಲಿ ಕೃಷ್ಣ ಪರಮಾತ್ಮ ತುಳುವರ ಮನ ಹಾಗೂ ಮನೆಯನ್ನೂ ನಿರಂತರವಾಗಿ ಪೂರೆಯುತ್ತಲೇ ಇದ್ದಾನೆ.ಮೂಡೆ ತಿನ್ನುವವರಿಗೆ ತಿಂಡಿಯ ರೂಪದಲ್ಲಿ ಅವನು ಇದ್ದಾನೆ, ಮೂಡೆ ಕಟ್ಟುವ ನಾನು ಹಾಗೂ ನನ್ನ ಅತ್ತಿಗೆಯಂತಹ ಎಷ್ಟೋ ಜನರಿಗೆ ಅವನು ಒಂದಷ್ಟು ಧನದ ರೂಪದಲ್ಲಿಯೂ ಪ್ರತೀ ವರ್ಷ ಹರಸುತ್ತಲೇ ಇದ್ದಾನೆ.
ಯಾರೂ ಹೇಳಿದ್ದು ದೇವರಿಲ್ಲ ಎಂದು.
ಪ್ರಹ್ಲಾದ ಹೇಳಿದಂತೆ ಅವನು ಎಲ್ಲಾ ಕಡೆಯೂ ಇದ್ದಾನೆ.
ನಾವು ನಮ್ಮ ಕೃಷ್ಣನನ್ನು ಮೂಡೆಯೊಳಗೆ ಅದು ಯಾವಾಗಲೋ ಕಂಡು ಕೊಂಡಿದ್ದೇವೆ.ಅವರವರ ಭಾವಕ್ಕೆ, ಅವರವರ ಭಕುತಿಗೆ ಅವನು ಕೈ ಹಿಡಿದು ನಡೆಸುತ್ತಲೇ ಇದ್ದಾನೆ...
.....................................................................................
#ಏನೋ_ಒಂದು.
ab pacchu
Comments
Post a Comment