ಗ್ಲಾಸಿನ ಲೋಟ
ಪುಟ್ಟ ಗ್ಲಾಸ್ ಲೋಟ ಹೆಚ್ಚಾಗಿ ನಿರಾಭರಣ ಸುಂದರಿ.ಯಾವುದನ್ನೂ ಮುಚ್ಚಿಡದ ಪಾರದರ್ಶಕ ಬದುಕು ಅದರದ್ದು.ಅದು ಹಾಗೆ ಇದ್ದರೆನೇ ಚಂದ.ಎಲೈಟ್ ಜನರ ವಿಶೇಷ ಕೇರಿನ ಪಿಂಗಾಣಿ ಕಪ್ ನಂತೆ ಹೊಳೆಯುವ ಭಾಗ್ಯ ಅದಕ್ಕಿಲ್ಲ.ಆದರೂ ಒಂದಿಷ್ಟು ಬಿಸಿ ಚಹಾ ಇದರಲ್ಲಿ ಸುರಿದುಕೊಂಡು ಹಿಡಿದಂತಹ ಕೈಗೆ ಇಷ್ಟಿಷ್ಟೇ ಶಾಖ ಸೋಕಿಸಿಕೊಂಡು ನಿಧಾನಕ್ಕೆ ಚಹಾ ಹೀರುವ ಆ ಸುಖ ದುಬಾರಿ ರೇಟಿನ ಕಪ್ ಗಳಲ್ಲಿ ನನಗಂತು ಸಿಗುವುದಿಲ್ಲ.
ಈಗಲೂ ಹಳ್ಳಿ ಹೋಟೆಲ್,ಗೂಡಂಗಡಿಗಳಲ್ಲಿ ಇದು ಇನ್ನೂ ಇದೆ.ಗೂಡಂಗಡಿಗಳಲ್ಲಿ ಈ ಗ್ಲಾಸ್ ಗಳು ಕಣ್ಣಿಗೆ ಬಿದ್ದು ಬಿಟ್ಟರೆ ಸಾಕು ಮನೆಯಲ್ಲಿ ಒಮ್ಮೆ ಚಹಾ ಕುಡಿದು ಬಂದಿದ್ದರೂ ಸಹ ನನಗೆ ಮತ್ತೊಮ್ಮೆ ಚಹಾ ಕುಡಿಯಬೇಕು ಎಂಬ ಆಸೆ ಮತ್ತೊಮ್ಮೆ ಹುಟ್ಟಿ ಬಿಡುತ್ತದೆ.ಒಂದಲ್ಲ,ಒಂದರ ನಂತರ ಇನ್ನೊಂದು ಗ್ಲಾಸ್ ಬಿಸಿ ಬಿಸಿ ಚಹಾ ಬೇಕು.
ಮಳೆಗೆ ಗೂಡಂಗಡಿಯಲ್ಲಿ ಒಂದು ಕಡೆ ನಿಂತುಕೊಂಡು ಹೊರಗಿನ ಮಳೆ ನೋಡಿಕೊಂಡು ಒಂಚೂರ್ಚೂರೇ ಹಬೆಯೇಳುವ ಬಿಸಿ ಚಹಾ ಗ್ಲಾಸಿನ ಲೋಟದಲ್ಲಿ ಹೀರುತ್ತಿದ್ದರೆ ಆ ಕ್ಷಣಕ್ಕೆ ಅದೇ ಸ್ವರ್ಗ.
ಸಿಗರೇಟು ಪ್ರೀಯರ ಕಥೆಗಳಲ್ಲಿ ಇದಕ್ಕೊಂದು ಮಹತ್ತರವಾದ ಸ್ಥಾನ ಎಂದಿನಂತೆ ಇದೆ.ಅವರಲ್ಲಿ ಅದಕ್ಕೊಂದು ಸಪರೇಟ್ ಆದ ಸ್ವ್ಯಾಗ್ ಕೂಡ ಇದೆ.ಒಂದು ಕೈಯಲ್ಲಿ ಗ್ಲಾಸಿನ ಈ ಲೋಟದಲ್ಲಿ ಬಿಸಿ ಚಹಾ,ಮತ್ತೊಂದು ಕೈಯಲ್ಲಿ ಸುಡುವ ಸಿಗರೇಟು.ಹರೆಯದ ಹುಡುಗರ ಇನಿಷಿಯಲ್ ವಾಂಛೆಗಳಲ್ಲಿ ಇದೂ ಕೂಡ ಒಂದು.ಸಿಗರೇಟಿನ ಬಗ್ಗೆ ಜಾಸ್ತಿ ಮಾತಾಡುವುದು ಬೇಡ, ಶಾಸನ ವಿಧಿಸಿದ ಎಚ್ಚರಿಕೆ ಮೀರದಿದ್ದರೆ ಯಾವತ್ತಿಗೂ ಆರೋಗ್ಯಕ್ಕೆ ಒಳ್ಳೆಯದು.
ಕೆಲವರಿಗೆ ಇದರಲ್ಲಿಯೇ ಹಾಲು ಹಾಕದೇ ಮಾಡುವ ಈ ಕಣ್ಣ ಚಾ ಕುಡಿಯಲು ಬಹಳಷ್ಟು ಇಷ್ಟ. ಕಣ್ಣ ಅಂದ್ರೆ ಅದೇ ಬ್ಲ್ಯಾಕ್ ಟೀ ಇಲ್ಲವೇ ಕಟ್ಟಂ(ಕಟ್ಟನ್) ಚಾಯ್.ಮನೆಯಲ್ಲಿ ಹೆಚ್ಚಾಗಿ ಇಂತಹ ಗ್ಲಾಸ್ ಲೋಟಗಳ ಬಳಕೆ ಕಡಿಮೆ.ಆದರೂ ಇಷ್ಟ ಪಟ್ಟು ಎರಡು ಲೋಟ ಮನೆಗೆ ಕೊಂಡು ತಂದೆ. ಅಮ್ಮನದ್ದು ಮೊದಲನೇ ದಿನವೇ ಮಂಗಳಾರತಿ.ಇದು ನಿನ್ನ ಅಬತರಕ್ಕೆ ಈ ಮನೆಯಲ್ಲಿ ಎರಡೇ ದಿನದಲ್ಲಿ ಒಡೆದು ಹೋಗುತ್ತದೆ ನೋಡು ಎಂದು.ಪುಣ್ಯಕ್ಕೆ ಇನ್ನೂ ಒಡೆದು ಹೋಗಿಲ್ಲ.
ದೊಡ್ಡ ಸ್ಟೀಲ್ ಗ್ಲಾಸ್ ನಲ್ಲಿ ಹಿಡಿಯುವಷ್ಟು ಚಹಾ ಇದರಲ್ಲಿ ಹಿಡಿಯುವುದಿಲ್ಲ.ಆದರೂ ಚಹಾ ಕುಡಿಯುವಾಗ ಮನಸ್ಸಿಗೊಂದಿಷ್ಟು ತೃಪ್ತಿ ಸಂತೃಪ್ತಿ ಎರಡೂ ಇದೆ.ಸ್ವಲ್ಪ ಕುಡಿದರೂ ಸುಖವಾಗಿ ಕುಡಿಯಬೇಕು.ಅದು ಚಹಾ ಆಗಲಿ ಅಥವಾ...
#ಚಾ
ಪಚ್ಚುಪಟ
ab

Comments
Post a Comment