Chola




"ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ..." ಎಂದು ನಮ್ಮಜ್ಜಿ ನಿಮ್ಮಜ್ಜಿ ಹೇಳುವ ಅಜ್ಜಿ ಕಥೆಗಳಂತೆಯೇ ಇದರ ಕಥೆಯೂ ನಿಧಾನಕ್ಕೆ ಆರಂಭವಾಗಿ ಬಿಡುತ್ತದೆ.


ಆದರೆ ಕಥೆಯಲ್ಲಿ ರಾಜನೂ ಇಲ್ಲ.. ಅರಮನೆಯೂ ಇಲ್ಲ.. ಸೈನಿಕರು ಅಂತು ಮೊದಲೇ ಇಲ್ಲ


ಆದರೆ ಮೂವರು ಇದ್ದಾರೆ.


ಹೌದು ಇಡೀ ಕಥೆಯ ತುಂಬಾ ಬರೀ ಮೂವರು. 


ಮೊದಲಿನಿಂದಲೂ ಏನೋ ಒಂದು ಆಗುತ್ತೆ.. ಅದು ಈಗ ಆಗುತ್ತೆ.. ಆಗ ಆಗುತ್ತೆ.. ಖಂಡಿತವಾಗಿಯೂ ಕೆಟ್ಟದೇ ಆಗುತ್ತೆ.. ಎಂದು ನೋಡುಗನನ್ನು ಕ್ಷಣ ಕ್ಷಣವೂ ಇನ್ನಿಲ್ಲದಂತೆ ಕೆಣಕುತ್ತಲೇ ದಿಗಿಲು ಹುಟ್ಟಿಸುತ್ತಾ ಸಾಗುತ್ತದೆ ಮೂವಿಯ ಕಥೆ. 


ಆದರೂ ನೀವು ಎಣಿಸಿದಂತೆ ಒಂದಷ್ಟು ಹೊತ್ತು ಆ ರೀತಿ ಎಲ್ಲಾ  ಏನೂ ಆಗುವುದಿಲ್ಲ ಇಲ್ಲಿ. 


ಏನೂ ಆಗುವುದಿಲ್ಲ ಎಂದು ಕೊಂಡಾಗಲೇ...ಏನೋ ಒಂದು ಆಗಿ ಬಿಡುತ್ತದೆ! 


ನೀವು ಏನು ಆಗಬಾರದ್ದು ಎಂದು ಮೊದಲಿನಿಂದಲೂ ಅಂದುಕೊಂಡಿರುತ್ತದೋ ಅದೇ ಆಗಿ ಬಿಡುತ್ತದೆ!! 


ಆದರೂ ಮನಸ್ಸು ಒಪ್ಪುವುದಿಲ್ಲ.... 


ಏಕೆ ಹೀಗಾಯಿತು? ಅದು ಕೂಡ..... ಇಲ್ಲ.. ಇಲ್ಲ.. ಹೀಗಾಗಲು ಸಾಧ್ಯವಿಲ್ಲ ಎಂದು ನೋಡುಗ ಸಿಕ್ಕಾಪಟ್ಟೆ ಹಠಕ್ಕೆ ಇಳಿದು ಬಿಡುತ್ತಾನೆ!


ನೋಡುಗನ ಆ ಹಠವನ್ನು ಕೊನೆಯವರೆಗೂ ಮತ್ತಷ್ಟು ಹೆಚ್ಚಿಸುತ್ತಾ.. ಉತ್ತರಗಳಿಗಾಗಿ ಅವನಲ್ಲೊಂದು ಹುಚ್ಚು ಇನ್ನಿಲ್ಲದಂತೆ ಸೃಷ್ಟಿಸುತ್ತಾ,ಥ್ರಿಲ್ಲ್ ಅನ್ನು ಸ್ವಲ್ಪವೂ ಕಡಿಮೆಗೊಳಿಸದೇ ಸಾಗುವುದೇ ಇದರ ಅಸಲಿ ಕಥೆ. 


ಆಗಬಾರದ್ದು ಆದ ನಂತರವೂ ಇಲ್ಲಿ ಕಥೆ ನಿಲ್ಲುವುದಿಲ್ಲ..


ಮುಂದುವರಿಯುತ್ತದೆ...! 


ತಲೆಯಲ್ಲೊಂದು ಅದೇ ಗುಂಗು... ಏತಕ್ಕಾಗಿ ಹೀಗೆ? ಇನ್ನೇನಿದೆ ಇದರಲ್ಲಿ..? 


ನಿಜವಾಗಿಯೂ ಮುಂದೆ ಆಗುವುದಾದರೂ ಏನು?


ನಿಧಾನಕ್ಕೆ ಕಾಡು ಸುಲಭಕ್ಕೆ ಅರ್ಥವಾಗದ ವಿಲಕ್ಷಣ ಕಥೆಗಳನ್ನು ಹೇಳಲು ಶುರು ಮಾಡುತ್ತದೆ!


ಅವೆಲ್ಲವನ್ನು ಮೂವಿಯಲ್ಲೇ ನೋಡಿ ಒಂದಷ್ಟು ಗೊಂದಲಕ್ಕೆ ನೀವೂ ಕೂಡ ಒಳಗಾಗಿ. 


ಹಳ್ಳಿ ಹೂವೊಂದು ಅಕ್ಷರಶಃ ಕಾಡು ಹೂವಾಗಿ ಕಠಿಣ ಪರಿಸ್ಥಿತಿಯಲ್ಲಿ ನರಳುವ ಕಥೆಯಲ್ಲಿ ಸುಖ ಸ್ವಲ್ಪ ಕಡಿಮೆಯೇ. 


ಆಂಗ್ಲ ಭಾಷೆಯಲ್ಲಿ ಇದರ ಟೈಟಲ್ "Shadows Of Water". ಕಥೆಯೂ ಹಾಗೇ ಇದೆ.ಅವರವರ ಭಾವಕ್ಕೆ ಈ ಕಥೆ.. ಅರ್ಥ ಆಗದೇ ಕೂಡ ಹೋಗಬಹುದು. 


ಖಂಡಿತವಾಗಿಯೂ ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ.. ತುಂಬಾ ಅಸಂಬದ್ಧ ಅಂತ ಕೂಡ ಅನ್ನಿಸಬಹುದು.ಆದರೆ  ನಿರ್ದೇಶಕ ಹೇಳ ಹೊರಟಿರುವ ಒಂದೆರಡು ಸಂಗತಿಗಳು ಬೆರಗು ಅಂತು ಖಂಡಿತವಾಗಿಯೂ ಮೂಡಿಸುತ್ತದೆ. 


ತಾನು ನಿಜವಾಗಿಯೂ ಇನ್ನು ಮುಂದೆ ಯಾರಿಗೆ ಸೇರಬೇಕಾದದ್ದು ಎನ್ನುವ ಪ್ರಶ್ನೆಗೆ ಇಲ್ಲಿ ಪಾತ್ರವೊಂದು ಉತ್ತರಿಸುವ ಪರಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ,ಅದೇ ರೀತಿ ಅಪಘಾತದಿಂದ ಇನ್ನಿಲ್ಲದಂತೆ ದುರ್ಬಲಗೊಂಡ ಮನಸ್ಸೊಂದು ಸಮಾಜದಲ್ಲಿ ಈ ರೀತಿ ಕೂಡ ವರ್ತಿಸಬಲ್ಲದೇ..? ಎಂಬ ಹೊಸ ಪ್ರಶ್ನೆಯೊಂದು ನಮ್ಮಲ್ಲಿಯೇ ಉಳಿದು ಹೋಗುತ್ತದೆ!



ಎಲ್ಲವೂ ಮನಸ್ಸಿಗೆ,ಆಯಾಯ ಸಂದರ್ಭದ ಮನಸ್ಥಿತಿಗೆ ಸಂಬಂಧಿಸಿದ್ದು. 




ಭಯ,ಹೆದರಿಕೆ,ಅಸಹಾಯಕತೆಯ ಮನಸ್ಥಿತಿ ಕೂಡ ಕೆಲವೊಮ್ಮೆ ಸುತ್ತ ಮುತ್ತ ಯಾರೂ ಇಲ್ಲದೇ ಹೋದಾಗ,ತನ್ನ ಮುಂದೆ ಅದೆಂತಹ ಕಠಿಣ ಪರಿಸ್ಥಿತಿ ಇದ್ದರೂ ಕೂಡ.. ಉಳಿವಿಗಾಗಿ ಕ್ರಿಯೆಟಿವಿಟಿ ಮೋಡ್ ಗೆ ಜಾರಿ ಸೃಜನಶೀಲವಾಗುವುದು ಸಮಾಜದಲ್ಲಿ ಹೇಗೆ ಬೆರಗು ಹುಟ್ಟಿಸುತ್ತದೆಯೋ ಅದೇ ರೀತಿ ಈ ಕಥೆಯಲ್ಲಿ ಅದು ಬೆರಗಿನ  ಜೊತೆಯಲ್ಲಿ ಬೆಚ್ಚಿ ಬೀಳಿಸುತ್ತದೆ.ಕಲ್ಲೂ ಕೂಡ ಒಂದಷ್ಟು ಕಥೆ ಹೇಳಲು ಒಂದರ ಮೇಲೊಂದು ನಿಲ್ಲುತ್ತದೆ! 


ಹಸಿರು,ಮಂಜು,ಜೀಪು,ಹೊಳೆ,ಕಾಡು,ಕೂಗು,ನೋವು,ಕಥೆ ಪೂರ್ತಿ ಇರುವ ಮುಗಿಲು ಮುಟ್ಟುವ ಆರ್ತನಾದ,ಕಥೆ ಮುಗಿದರೂ ಕೊನೆಗೊಂದಿಷ್ಟು ಕಾಡುವ ಉತ್ತರವಿಲ್ಲದ ಪ್ರಶ್ನೆ.. ಈ ಮೂವಿಯಲ್ಲಿ ಇದೆ. 



Sanal Kumar Sasidharan ಇದನ್ನು ನಿರ್ದೇಶಿಸಿದ್ದಾರೆ.ಜಾಸ್ತಿ ಯಾರೂ ಇಲ್ಲ,ಮೂವರೇ ಇರುವುದು.Joju George, Nimisha Sajayan ಮತ್ತು Akhil Viswanath. 


#Chola

Malayalam Movie 

Psychological Drama 

Release - 2019 


#Movies 

Ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!