The Spy




ಜೀವನದಲ್ಲಿ ಯಾರದ್ದು ಬೇಕಾದರೂ ಪತ್ನಿಯಾಗಿ ಸಂಸಾರ ಸಾಗಿಸಬಹುದು,ಯಾರಿಗೆ ಬೇಕಾದರೂ ಮಕ್ಕಳಾಗಿ ಹುಟ್ಟಿ ಹಾಗೇ  ಉದ್ದುದ್ದಕ್ಕೆ ಬೆಳೆಯುತ್ತಲೇ ಹೋಗಬಹುದು.


ಆದರೆ ಒಬ್ಬ ಗೂಢಚಾರನೊಬ್ಬನ ಪತ್ನಿಯಾಗಿ,ಅವನ  ಮಗನಾಗಿ,ಅವನ ಮುದ್ದಿನ ಮಗಳಾಗಿ ಬದುಕು ಸವೆಸುವುದು ಇದೆಯಲ್ಲಾ... ಬಹುಶಃ ಅದಕ್ಕಿಂತ ಕಷ್ಟ ಈ ಜಗತ್ತಿನಲ್ಲಿ ಇನ್ನೊಂದು ಇರಲಿಕ್ಕಿಲ್ಲ ಅಂತಲೇ ಪ್ರತೀ ಸಲ ಅನ್ನಿಸುತ್ತದೆ! 


ಅದೇ ಸ್ವತಃ ಗೂಢಚಾರನಾಗುವುದು ...?


ಅದು ಮಾತ್ರ ಕೇವಲ ನಾಲ್ಕೈದು ಜನರಿಗಷ್ಟೇ ಗುಟ್ಟಾಗಿ ಗೊತ್ತಿರುವ,ಎಂದೆಂದಿಗೂ ಜಗ್ಗಜಾಹಿರಾಗಲು ಅವಕಾಶವೇ ಇಲ್ಲದಂತಹ ಉತ್ಕಟ ದೇಶಪ್ರೇಮದ ಕಥೆ ಒಂದು ಕಡೆಯಾದರೆ,ಜೊತೆಯಲ್ಲಿಯೇ ಸಾವು-ನರಕಗಳೆರಡನ್ನು ಕ್ಷಣ ಕ್ಷಣಕ್ಕೂ ಜೇಬಿನಲ್ಲಿ ಸಿಗರೇಟಿನಂತೆಯೇ ಇಟ್ಟುಕೊಂಡು ತನ್ನದಲ್ಲದ ದೇಶದಲ್ಲಿ ಬೀದಿ ಹೆಣವಾಗಲು ಇನ್ನಿಲ್ಲದಂತೆ ಹವಣಿಸುವ ಒಂದು ವಿಚಿತ್ರ ಬಗೆ!


ಸಾವು ಪಕ್ಕದಲ್ಲಿಯೇ ಇರುತ್ತದೆ.ಗೊತ್ತಿದ್ದು ಗೊತ್ತಿದ್ದು ಅದಕ್ಕೆ ಜಸ್ಟ್ ಮತ್ತಷ್ಟು ಮತ್ತಷ್ಟು ಹತ್ತಿರವಾಗುತ್ತಾ ಹೋಗುವುದು ಗೂಢಚಾರನೊಬ್ಬನ ಪ್ರತಿನಿತ್ಯದ ದಿನಚರಿ!


ಮಾಹಿತಿ ಒಂದು ಸಿಕ್ಕಾಗ,ಅದು ತನ್ನ ದೇಶಕ್ಕೆ ಯಶಸ್ವಿಯಾಗಿ ತಲುಪಿದಾಗ,ಗೂಢಚಾರನೊಬ್ಬನ ಮುಗಿಲು ಮುಟ್ಟುವ ಸಂಭ್ರಮ ಕೇವಲ ಅದು ಅವನ ಮನಸ್ಸಿನ ಪರಿಧಿಗಷ್ಟೇ ಸೀಮಿತ.ಆತ ಖುಷಿಯ ಒಂದಷ್ಟು ಪುಗ್ಗೆಗಳನ್ನು ಮನಸ್ಸಿನಲ್ಲಿಯೇ ಒಬ್ಬನೇ ನಿಂತು ಹಾರಿಸಬೇಕು,ವಿಜಯದ ಶಾಂಪೇನ್ ಅನ್ನು ಮನಸ್ಸಿನಲ್ಲಿಯೇ ಜೋರಾಗಿ ಕುಲುಕುತ್ತಾ ಗಗನದತ್ತ ಚಿಮ್ಮಿಸಬೇಕು... ಮುಕ್ತವಾಗಿ ಖುಷಿಯನ್ನು ವ್ಯಕ್ತ ಪಡಿಸುವುದು ಎಂದರೆ ಸಾವಿಗೆ ಒಂದು ಹೆಜ್ಜೆ ಮತ್ತಷ್ಟು ಹತ್ತಿರವಾಗುವುದು,ನರಕವನ್ನು ಓಡಿ ಹೋಗಿ ಬರಸೆಳೆದು ಅಪ್ಪಿಕೊಳ್ಳುವುದು! 


ಸಿಕ್ಕಿಬಿದ್ದ ಕೂಡಲೇ ಸತ್ತು ಹೋಗಿ ಬಿಡಬೇಕು ಎಂದು ಪ್ರತೀ ಗೂಢಚಾರನಿಗೆ ಅನ್ನಿಸಿಬಿಡುತ್ತದೆ,ಆದರೆ ಯಾವುದೇ ವೈರಿ ರಾಷ್ಟ್ರವು ಪಕ್ಕನೇ ಗೂಢಚಾರನಿಗೆ ದಯಪಾಲಿಸದೇ ಇರುವುದು ಅದೊಂದನ್ನೇ..


ಅದೇ ಸಾವು! 


ಘೋರ ಚಿತ್ರಹಿಂಸೆ ಗೂಢಚಾರರಿಗೆ ಕಟ್ಟಿಟ್ಟ ಬುತ್ತಿ!


ದಿನಾಲೂ ಇಷ್ಟಿಷ್ಟೇ ಅನುಭವಿಸಬೇಕು..!! 


ಗಡಿ ಕಾಯುವ ಸೈನಿಕನಿಗೆ ಆದರೂ ಹುತಾತ್ಮನಾದರೆ ದೇಶದ ಹೆಚ್ಚಿನ ಗೌರವ ಸಿಗುತ್ತದೆ,ದೇಶ ಅವನು ನಮ್ಮವನೆಂದು ಹೇಳಲು ಸಿಕ್ಕಾಪಟ್ಟೆ ಹೆಮ್ಮೆ ಪಟ್ಟುಕೊಳ್ಳುತ್ತದೆ.ಆದರೆ ಅಂತಹ ಭಾಗ್ಯ ಒಬ್ಬ ಗೂಢಚಾರ ಆದವನಿಗೆ ಎಂದೆಂದಿಗೂ ಜೀವನದಲ್ಲಿ ಸಿಗುವುದೇ  ಇಲ್ಲ.ಜೀವದಲ್ಲಿ ಇರುವಾಗಲೂ ಸಿಗುವುದಿಲ್ಲ,ಜೀವ ಕಳೆದುಕೊಂಡ ಮೇಲೂ ಸಿಗುವುದಿಲ್ಲ! 


ಮೂಲತಃ ಅವನೂ ಕೂಡ ಒಬ್ಬ ಟ್ರೈನ್ಡ್ ಸೈನಿಕನೇ.ಆದರೆ ವಿಪರ್ಯಾಸವೆಂದರೆ ಗೂಢಚಾರನ ಜೀವನದಲ್ಲಿ ಅದನ್ನು ಹೇಳಿಕೊಳ್ಳುವ ಅವಕಾಶ ಅವನಿಗೂ ಇರುವುದಿಲ್ಲ..ಅವನ ದೇಶಕ್ಕೂ ಇರುವುದಿಲ್ಲ!


ನರಕದ ಜೀವನ ಅವನದ್ದು ಮಾತ್ರವಲ್ಲ.ಅವನ ಪರಿವಾರದ್ದು ಕೂಡ...ಅವನು ಸತ್ತು ಎಷ್ಟೋ ವರ್ಷ ಆದ ಮೇಲೂ ಅವನ ಪರಿವಾರವೊಂದು ಅದನ್ನು ಅನುಭವಿಸುತ್ತಲೇ ಇರಬೇಕು ! ಕೆಲವೊಮ್ಮೆ ಮೃತನ ಶವ ನೋಡುವ ಭಾಗ್ಯ ಕೂಡ ಅವನ ಪ್ರೀತಿ ಪಾತ್ರರಿಗೆ ಇರುವುದಿಲ್ಲ..!


ಯಾರಿಗಾಗಿ....?


ನಮಗಾಗಿ... ನಮ್ಮ ದೇಶದ ಹಿತಕ್ಕಾಗಿ! 


ಪರದೇಶದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ತನ್ನದೊಂದು ದೇಶಕ್ಕಾಗಿ ಬೆವರು ಹರಿಸುವ ಯಾವುದೇ ಒಬ್ಬ ಗೂಢಚಾರ,ದೇಶಪ್ರೇಮ ಹಾಗೂ ತ್ಯಾಗದ ವಿಷಯ ಬಂದಾಗ ಯಾವುದೇ ಗಡಿ ಕಾಯುವ ಸೈನಿಕನಿಗಿಂತ ಕಡಿಮೆ ಏನಲ್ಲ ಬಿಡಿ.ಅವನ ಸಮರ್ಪಣೆಗೆ,ದೇಶಪ್ರೇಮಕ್ಕೆ ಎಂದೆಂದಿಗೂ ಬೆಲೆ ಕಟ್ಟಲು ಯಾವುದೇ ದೇಶಕ್ಕೂ ಕೂಡ ಸಾಧ್ಯ ಆಗುವುದೇ ಇಲ್ಲ. 


ನಮ್ಮ ದೇಶದ ಗೂಢಚಾರರ ಕಥೆಯೂ ಕೂಡ ಬಲು ರೋಚಕವಾದದ್ದೇ.


ಇದು ಕೂಡ  ಅಂತಹದ್ದೇ ಒಬ್ಬ ಗೂಢಚಾರನ ಕಥೆ.


ಆದರೆ  ನಮ್ಮ ದೇಶದ ಗೂಢಚಾರನ ಕಥೆಯಲ್ಲ ಇದು. 


ಸಿರಿಯಾದಂತ ವಿಚಿತ್ರ ದೇಶದಲ್ಲಿ ಇಸ್ರೇಲಿನ ಗೂಢಚಾರನೊಬ್ಬನ ಅಪ್ರತಿಮ ಸಾಹಸವೇ ಇದರ ಕಥೆ.


ಅಲ್ಲಿ ಇಂಚಿಂಚಿಗೂ ಇರುವುದು ಬರೀ ಬಾಂಬುಗಳ ಜಡಿಮಳೆ, ಗುಂಡುಗಳ ಚೀರಾಟ,ಮೃತ್ಯುವಿನ ದರ್ಶನ,ಒಂದರ ನಂತರ ಒಂದರಂತೆ ಹೆಣಗಳ ನರ್ತನ! 


ಇದು ನಿಜ ಘಟನೆ ಆಧಾರಿತ ಇಸ್ರೇಲಿನ ಕಥೆ. 


ಇದರ ಕಥೆಗೆ ಬರುವುದಾದರೆ ಇದು ಮೊದಲ ಪ್ರೇಮಿನಿಂದಲೇ  ಬಹಳಷ್ಟು ಸ್ಲೋ.ಒಂಥರಾ ಆಮೆಗತಿಯ ನಡಿಗೆ ಇದರದ್ದು. ಮೊಲದ ಓಟ ಒಮ್ಮೆಯೂ ಇಲ್ಲಿ ಕಂಡು ಬರುವುದೇ ಇಲ್ಲ,ಹೌದು ಕೊನೆಯವರೆಗೂ.ಆದರೂ ಇದನ್ನು ನೀವು ನೋಡಬಹುದು. 


ಮೊದಲಿನರೆಡು ಎಪಿಸೋಡ್ ಮುಗಿಸುವ ಹೊತ್ತಿಗೆ ಇದರೊಳಗೆ ಏನು ಇರಲಿಕ್ಕಿಲ್ಲ ಇದು ತೀರಾ ಸಪ್ಪೆ ಬನ್ನು ಅಂತಲೇ  ಅನ್ನಿಸಿಬಿಡುವುದಿದೆ.ಆದರೆ ಮೂರನೆಯ ಎಪಿಸೋಡ್ ನಿಂದ  ನಿಧಾನವಾಗಿ ಸ್ವಲ್ಪ ಸ್ವಲ್ಪವೇ ರುಚಿ ಹತ್ತಿಸಿಕೊಂಡು,ಇನ್ನಿಲ್ಲದಂತೆ ರುಚಿ ಹೆಚ್ಚಿಸಿಕೊಂಡು ಆ ಸಪ್ಪೆ ಬನ್ನೇ,ಕ್ರೀಮ್ ಬನ್ ನಂತೆ ಬದಲಾಗಿ ಬಿಡುತ್ತದೆ ಇಲ್ಲಿ.ಅದರಲ್ಲೂ ಕೊನೆಯ ಎಪಿಸೋಡ್ ಅಂತು.... ಹೇಳಲಾರೆ ಅದಕ್ಕಾಗಿ ಸಿರೀಸ್ ಅನ್ನೇ ನೋಡಿ. 


ಇದೊಂದು 6 ಎಪಿಸೋಡ್ ಗಳ ಪುಟ್ಟ ಸೀರಿಸ್.Gideon Raff ಇದನ್ನು ನಿರ್ದೇಶಿಸಿದ್ದಾರೆ.Sacha Baron Cohen ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.Aladeen ಆಗಿ The Dictator ಅಲ್ಲಿ ಎಲ್ಲರನ್ನೂ ನಕ್ಕು ನಗಿಸಿ ಹೊಟ್ಟೆ ಹುಣ್ಣಾಗಿಸಿದ Sacha Baron Cohen ನದ್ದು ಇಲ್ಲಿ ಪ್ರೌಢ ಹಾಗೂ ಗಂಭೀರ ಪಾತ್ರ.ಆದರೂ ಅವನು ಇಷ್ಟವಾಗುತ್ತಾನೆ.ಕೆಲವೊಂದು ದೃಶ್ಯಗಳಲ್ಲಿ ಅವನು ಪಕ್ಕಾ ನಮ್ಮ ಕ್ರಿಕೆಟರ್ ಆಶೀಸ್ ನೆಹ್ರಾನಂತೆಯೇ  ಕಾಣುತ್ತಾನೆ,ರಣವೀರ್ ಸಿಂಗ್ ನಂತೆ ಅಲ್ಲಲ್ಲಿ ನಗುತ್ತಾನೆ.ಬರೀ ನೋಡಲು ಅಷ್ಟೇ.ಆದರೆ ಅವನು ಅದು ಎರಡೂ ಅಲ್ಲ. 


ಮೊದಲೇ ಹೇಳಿದಂತೆ ಇದು ಎಲ್ಲರಿಗೂ ಇಷ್ಟವಾಗಬೇಕಿಲ್ಲ. ತುಂಬಾ ನಿಧಾನಕ್ಕೆ ಸಾಗುವ ಕಥೆ.ಏಕೆಂದರೆ ಕಥೆ ಇರುವುದೇ ಆ ರೀತಿ.ಸ್ಲೋ ಇದ್ದರೆ, ಬೋರಿಂಗ್ ಇದ್ದರೆ ನಮಗೆ ಬಹಳ ಬೇಗ  ನಿದ್ದೆ ಬರುತ್ತದೆ ಎನ್ನುವವರು ನೀವಾಗಿದ್ದರೆ ಖಂಡಿತವಾಗಿಯೂ ಇದನ್ನು ನೀವು ನೋಡಲೇಬೇಡಿ.ಕಥೆಯ ವೇಗಕ್ಕೆ ನಿಮ್ಮನ್ನು ನೀವು ಸಿಂಕ್ರೊನೈಸ್ ಮಾಡಿಕೊಂಡು ಅದರ ಫ್ರಿಕ್ವೆನ್ಸಿಗೆ ನಿಮ್ಮ ಫ್ರೀಕ್ವೆನ್ಸಿಯನ್ನು ಮ್ಯಾಚ್ ಮಾಡಿಕೊಳ್ಳುವ ಆ ಒಂದು ವ್ಯವಧಾನ ಹಾಗೂ ದಿವ್ಯ ತಾಳ್ಮೆ ನಿಮ್ಮಲ್ಲಿ ಇದ್ದರೆ.. ಆವಾಗ ಮಾತ್ರ ಖಂಡಿತವಾಗಿಯೂ ಇದೊಂದು ಬಹಳ ಸುಂದರವಾದ ಸೀರಿಸ್.


ಈಗಲೂ ಎಷ್ಟೋ ದೇಶಗಳು ನೆಮ್ಮದಿಯಾಗಿ ನಿದ್ರಿಸುವುದು.. ಶತ್ರುದೇಶದಲ್ಲಿ ನಿದ್ರೆ ಕಳೆದುಕೊಳ್ಳುವ ತೆರೆಮರೆಯ ಗೂಢಚಾರರಿಂದಲೇ! 


#The_Spy | Netflix 

English  Mini Series 

Espionage thriller

Release - 2019


#Series 

Ab Pacchu

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!