WTC_S02E01 2021-23
ಇಂದಿನಿಂದ WTC ಯ ಎರಡನೆಯ ಸೀಸನ್ ಆರಂಭ.ಮೊದಲ ಸೀಸನ್ ಭಾರತದ ಪಾಲಿಗಂತು ಮೊದಲಿನಿಂದಲೇ ಸಿಕ್ಕಾಪಟ್ಟೆ ರೋಚಕ,ನಡುವಲ್ಲಿ ಅತೀ ಸುಂದರ ಹಾಗೂ ಕೊನೆಯಲ್ಲಿ ನಿಡುಸುಯ್ಯುವ ಬೇಸರ.
ಟೀಮ್ ಇಂಡಿಯಾ ಎಡವಿದ್ದು ಚೊಚ್ಚಲ ಫಿನಾಲೆಯಲ್ಲಿ ಒಂದೊಳ್ಳೆಯ ಕ್ಲೈಮ್ಯಾಕ್ಸ್ ಬರೆದು WTC ಯ ಆ ಹೊಳೆಯುವ ಮೇಝ್ ಅನ್ನು ತವರಿಗೆತ್ತಿಕೊಂಡು ಬರುವಲ್ಲಿ ಅಷ್ಟೇ.ಉಳಿದಂತೆ ಭಾರತದ್ದು ಹೋದ ಕಡೆಗಳಲ್ಲಿ ಕೇವಲ ವಿಜಯ ಯಾತ್ರೆಯ ವೀರಗಾಥೆ.ಕಬ್ಬಿಣದ ಕಡಲೆ ಆಗಿದ್ದು ನ್ಯೂಜಿಲೆಂಡ್ ಒಂದೇ.
ಕಿವಿಗಳು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಕೊನೆಯಲ್ಲಿ ಬಹಳ ಸೊಗಸಾದ ವಿಜಯವನ್ನು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಕೊಂಡು ಇಂದಿಗೂ ನ್ಯೂಜಿಲ್ಯಾಂಡ್ ಬೀದಿ ಬೀದಿಗಳಲ್ಲಿ ಜಗಮಗಿಸುವ ಡಬ್ಲ್ಯು.ಟಿ.ಸಿ ಯ ಟ್ರೋಪಿಯನ್ನು ಉತ್ಸವ ಮೂರ್ತಿಯಂತೆ ಭಕ್ತಿಯಿಂದ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದಾರೆ,ಖುಷಿಯಿಂದ ಹೆಮ್ಮೆಯಿಂದ ಬೀಗುತ್ತಿದ್ದಾರೆ.ಅವರ ಹಿಂದೆ ನಡೆದು ಹೋಗುವ ಅಲ್ಲಿನ ಅಭಿಮಾನಿಗಳ ಉಲ್ಲಾಸ ಉತ್ಸಾಹ ಆ ಜೋಶ್ ಇನ್ನೂ ನಿಂತೇ ಇಲ್ಲ.
ಅವರಿಗೆ ಇದೊಂತರಹದ ಸಂಭ್ರಮದ ಜಾತ್ರೆ ಇದ್ದಂತೆ. ಅವರ ಜೀವನದಲ್ಲಿ ಇದಕ್ಕಿಂತ ಮೊದಲು ಇಂತಹ ದೊಡ್ಡದೊಂದು ಅಧ್ಭುತ ಕ್ರಿಕೆಟ್ ನಲ್ಲಿ ಘಟಿಸಿಯೇ ಇಲ್ಲ.ನಮ್ಮ ತಂಡ ಸೋತಿದ್ದರೂ ಅವರ ಖುಷಿ ನೋಡುವಾಗ ನಮಗೂ ಎಳ್ಳಷ್ಟೂ ಬೇಜಾರು ಆಗುವುದಿಲ್ಲ. ಬಹುಶಃ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಬಿಟ್ಟರೆ ಬೇರೆ ಯಾವುದಾದರೊಂದು ತಂಡ ಅಪ್ರತಿಮ ಸಾಧನೆ ಮಾಡಿದರೆ ಭಾರತೀಯರಿಗೆ ಒಂದು ಚೂರೂ ಮತ್ಸರ ಆಗದೇ ಹೋದರೆ ಆ ಗೆದ್ದ ತಂಡ ಖಂಡಿತವಾಗಿಯೂ ಎಂದೆಂದಿಗೂ ನ್ಯೂಜಿಲೆಂಡ್ ತಂಡವೇ ಆಗಿರುತ್ತದೆ.
ಅವರ ನಾಯಕ ಕೇನ್ ವಿಲಿಯಮ್ಸನ್ ಅಂತು ವಿಸ್ಕಿಯಲ್ಲಿ ತೇಲಾಡುವ ಮಂಜುಗಡ್ಡೆಯಂತೆ ಕೂಲ್. ಸೋತು ಸೋತು ಕೊನೆಯಲ್ಲಿ ಭಾರತೀಯ ಹೃದಯವನ್ನು ಕೂಡ ಗೆದ್ದುಕೊಂಡವ ಅವ.ಐಸ್ ಆಂಡ್ ಫೈರ್ ಖ್ಯಾತಿಯ ಆ ಸೌತ್ಯಾಂಪ್ಟನ್ ಫೈನಲ್ ನಲ್ಲಿ ಬೆಂಕಿ ಕ್ಷಣ ಕಾಲ ನಂದಿ ತಂಪನೆಯ ಮಂಜು ಹೊಸ ಇತಿಹಾಸ ತಣ್ಣಗೆ ರಚಿಸಿ ಬಿಟ್ಟಿತು.ಮುಂದಿನ ದಿನಗಳಲ್ಲಿ ಇತಿಹಾಸ ಪುಸ್ತಕದ ಬೆಚ್ಚನೆಯ ಪುಟಗಳಲ್ಲಿ ಆ ಕಥೆ ಎಂದೆಂದಿಗೂ ಭದ್ರವಾಗಿಯೇ ಇರುತ್ತದೆ.. ನ್ಯೂಜಿಲೆಂಡ್ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಮೊತ್ತ ಮೊದಲ ಚಾಂಪಿಯನ್ ಎಂದು.
ಇರಲಿ,ಅದೆಲ್ಲವೂ ಈಗ ಮುಗಿದ ಕಾದಂಬರಿ.ಫೈರ್ ಕ್ಷಣ ಕಾಲ ಆ ಸೌತ್ಯಾಂಪ್ಟನ್ ಅಂಗಣದಲ್ಲಿ ಆ ದಿನ ಅಷ್ಟೇ ನಂದಿದ್ದು.ಇಂದಿನಿಂದ ನಾಟಿಂಗ್ಹ್ಯಾಮ್ ನಲ್ಲಿ ಕೊಂಡು ಕೊಂಡ ಹೊಸ ಪುಸ್ತಕದ ಮೊದಲ ಪೇಜಿನಲ್ಲಿ ಹೊಸ ಕಥೆ ಅದೇ ಹಳೆಯ ಕಿಡಿಯೊಂದಿಗೆ ಶುರು.ಇದನ್ನು ಕೂಡ ಬಹಳಷ್ಟು ಚಂದವಾಗಿ ರೋಚಕವಾಗಿ ಬರೆಯಬೇಕಿದೆ ನಮ್ಮವರು.
ಹೌದು ಕದನಗಳು ಮುಂದೆ ಬಹಳಷ್ಟು ಇದೆ.ಒಂದಕ್ಕಿಂತ ಒಂದು ಕಠಿಣ. ಟೆಸ್ಟ್ ಮ್ಯಾಚ್ ಎನ್ನುವುದೇ ಕಠಿಣ,ಕಠೋರ,ನಾಟ್ ಸೋ ಈಝಿ ಯ ಪ್ರತೀಕ.
2021 - 23 ರ ಫಿನಾಲೆಯ ಆ ಒಂದು ಅಲ್ಟಿಮೇಟ್ ಟೆಸ್ಟ್ ಆಡಬೇಕಿಂದಿದ್ದರೆ ಮುಂದಿನ ಎರಡು ವರ್ಷಗಳ ಹೆಚ್ಚಿನ ಎಲ್ಲಾ ಟೆಸ್ಟ್ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಒಂದನ್ನು ನಾವು ದಕ್ಕಿಸಿಕೊಳ್ಳಬೇಕು.ಅದಕ್ಕಾಗಿ ಒಂದರ ನಂತರ ಒಂದು ಪಂದ್ಯವನ್ನು ಗೆಲ್ಲುತ್ತಾ ಹೋಗಬೇಕು.ಡೇ ಬೈ ಡೇ, ಸೆಷನ್ ಬೈ ಸೆಷನ್, ಬಾಲ್ ಟು ಬಾಲ್ ಪಂದ್ಯದ ಮೇಲೆ ನಿಗಾ ಇಡಬೇಕು.ಸೋಲುವ ಸ್ಥಿತಿಯಲ್ಲಿ ಇದ್ದರೂ ಇನ್ನಿಲ್ಲದಂತೆ ಎದ್ದು ಬಿದ್ದು ಆಡಿ ಹೋರಾಡಿ ಎದುರಾಳಿಯನ್ನು ಬೆಚ್ಚಿ ಬೀಳಿಸಬೇಕು.ಕೊನೆಯಲ್ಲಿ ಹ್ಯಾಂಡ್ ಶೇಕ್ ಮಾಡುವಾಗ ಎದುರಾಳಿಗೆ ಕೈ ಚಾಚುವ ಆ ಒಂದು ವಿಜಯದ ಹಸ್ತ ಮಾತ್ರ ಎಂದೆಂದಿಗೂ ನಮ್ಮದೇ ಆಗಿರಬೇಕು.
ಕೊಹ್ಲಿಯ ನಾಯಕತ್ವದ ಬಗ್ಗೆ ಗೌರವವಿದೆ.WTC ಯ ಪೈನಲ್ ಸೋತ ಮಾತ್ರಕ್ಕೆ ಆತನ ನಾಯಕತ್ವ ಕಳಪೆ ಎಂದು ಆಗುವುದಿಲ್ಲ.ಅವನ ಆಟ ಕಳೆದೊಂದು ವರ್ಷದಲ್ಲಿ ಹೊಳಪು ಕಳೆದುಕೊಂಡಿರಬಹುದು ನಿಜ.ಹಾಗಾಗಿ ಟೀಕೆ ಟಿಪ್ಪಣಿಗಳು ಕೂಡ ಸಹಜ ಮತ್ತು ಅಷ್ಟೇ ಸ್ವಾಭಾವಿಕ.ನಮ್ಮವರಿಗೆ ಗೆದ್ದವರನ್ನು ಅಂಬಾರಿಯಲ್ಲಿ ಹೊತ್ತು ಮೆರೆಸಿಯೇ ಅಭ್ಯಾಸ.ಸಾಧನೆಯ ಹಾದಿಯಲ್ಲಿ ಹಿಂದಿರುಗಿ ನೋಡಿ ಬಹಳಷ್ಟು ಸಾಧಿಸಿದ್ದನ್ನು ಅಪ್ರಿಷೇಟ್ ಮಾಡಲು ನಾವು ಯಾವತ್ತೂ ಮನಸ್ಸು ಮಾಡುವುದಿಲ್ಲ. ಏಕೆಂದರೆ ಸೋತಾಗ ಮನಸ್ಸು ಅನಾಲಿಸಿಸ್ ಗೆ ಜಾರುವುದಿಲ್ಲ,ಕಲ್ಲೆಸೆಯಲು ಸುಲಭವಾಗಿ ಗೋಚರಿಸುವುದು ಹೆಚ್ಚಾಗಿ ಕಪ್ತಾನ ಒಬ್ಬನ ತಲೆಯೇ.ಹಾಗಾಗಿ ಕೊಹ್ಲಿಯಲ್ಲಿ ಮೇಲೆ ನಮ್ಮವರಿಗೆ ಹೆಚ್ಚಿನ ಬೇಸರ.ಡೆಲ್ಲಿಯ ಹುಡುಗ ಸದ್ಯಕ್ಕೆ ಮಣ್ಣಿನದಡಿ ಬಿದ್ದಿರುವ ಕೊಹಿನೂರು ಅಷ್ಟೇ.ಹೊಳೆಯುವುದು ವಜ್ರಕ್ಕೆ ಬಹಳ ಚೆನ್ನಾಗಿ ಗೊತ್ತು.ಏಕೆಂದರೆ ಹೊಳೆಯುವುದೇ ಅದರ ಮೂಲ ಗುಣ,ನಾವುಗಳು ಸಪರೇಟ್ ಆಗಿ ಕಲಿಸಬೇಕಾಗಿಲ್ಲ.ಖಂಡಿತವಾಗಿಯೂ ಅದು ಮುಂದೆಯೂ ಪ್ರಕಾಶಮಾನವಾಗಿ ಮಿನುಗುವುದು.ಅದರ ಬಗ್ಗೆ ಯಾವುದೇ ಡೌಟು ಬೇಡ.
ವಿದೇಶದಲ್ಲಿ ರೋಹಿತ್ ಶರ್ಮನ ಬ್ಯಾಟು ಸ್ವಿಂಗ್ ಬೌಲಿಂಗ್ ನ ಎದುರು ಟೆಂಪ್ಟ್ ಆಗದೇ ಹೋದರೆ,ಸ್ಪಿನ್ ಬೌಲಿಂಗ್ ನ ಎದುರು ಆತನ ಪ್ಯಾಡುಗಳು ಗಲಿಬಿಲಿಯಾಗದೇ ಉಳಿದರೆ,ಮೊದಲ ಎರಡು ಗಂಟೆ ಸುಲಭವಾಗಿ ವಿಕೆಟ್ ಒಪ್ಪಿಸದೇ ನೆಲಕಚ್ಚಿ ಆಡುವತ್ತ ಹೆಚ್ಚಿನ ಮನಸ್ಸು ಮಾಡಿದರೆ ಟೆಸ್ಟ್ ಕ್ರಿಕೆಟ್ ಕೂಡ ಹಿಟ್ ಮ್ಯಾನ್ ನ ಕೈ ಹಿಡಿಯಬಹುದು.ಇಲ್ಲದಿದ್ದರೆ ಸ್ವತಃ ಹಿರಿಯ ಆಟಗಾರ ಆಗಿದ್ದರೂ ಸಹ ಎಂದಿನಂತೆ ಮಾಜಿ ಆಟಗಾರರ ಟೀಕೆ ತಪ್ಪಿದ್ದಲ್ಲ.ಆತನ ಆಟ ನಯನ ಮನೋಹರ,ಟ್ರೀಟ್ ಫಾರ್ ಐಯ್ಸ್,ಫುಲ್ ಶಾಟ್ ಹೊಡೆತಗಳ ಬಾದ್ ಶಾ ಅವನು..ಇವುಗಳೆಲ್ಲವೂ ನಿಜವೇ,ಅವುಗಳಲ್ಲಿ ಎರಡು ಮಾತಿಲ್ಲ.ಆದರೆ ಆತ ಮುಂದಕ್ಕೆ ಟೆಸ್ಟ್ ಆಡಬೇಕೋ ಬಿಡಬೇಕೋ ಎನ್ನುವುದು ಆತನ ಆಟದ ಮೇಲೆಯೇ ನಿಂತಿದೆ. ಏಕೆಂದರೆ ಪ್ರತಿಭೆಗಳ ದಂಡು ಅದಾಗಲೇ ಸಾಲುಗಟ್ಟಿ ಅವನ ಹಿಂದೆಯೂ ನಿಂತಿದೆ.
ರೋಹಿತ್ ನೊಂದಿಗೆ ಆರಂಭಿಕರಾಗಿ ಮೈದಾನಕ್ಕಿಳಿಯಲು ಪೈಪೋಟಿ ಈ ಬಾರಿ ಬಹಳ ಜೋರಿದೆ.ಹಲವು ಹೆಸರಿದೆ, ಬಂದವರೆಲ್ಲರೂ ಗಾಯಳುಗಳಾಗಿ ಪದೇ ಪದೇ ಹೊರಗುಳಿಯುವವರ ಲಿಸ್ಟು ಸೇರುತ್ತಿದ್ದಾರೆ.ಯಾರೇ ಆಗಲಿ ಸಿಕ್ಕಿದ ಅವಕಾಶ ಸರಿಯಾಗಿ ಬಳಸಿಕೊಂಡರೆ ಟೀಮ್ ಇಂಡಿಯಾದ ಟೆಸ್ಟ್ ಒಪನರ್ ಆಗಿ ಬಹುಕಾಲ ಸಾಮ್ರಾಜ್ಯವಾಳಬಹುದು.
ನನಗಂತು ನೈಸ್ ಕೆನ್ನೆಯ ಹುಡುಗ ಶುಭ್ಮನ್ ಗಿಲ್ ಆಟ ನೋಡಲು ಬಹಳ ಇಷ್ಟ.ಆ ಬ್ಯಾಕ್ ಫುಟ್ ಪಂಚ್, ಕ್ಲಾಸಿ ಕವರ್ ಡ್ರೈವ್, ಸ್ಟ್ರೈಟ್ ಡ್ರೈವ್ ಗಳು ಇಷ್ಟ.ಅಷ್ಟಾಗಿ ನಗಲು ಬಾರದ ಪ್ರಥ್ವಿ ಎನ್ನುವ ದಪ್ಪ ಮೀಸೆಯ ಹುಡುಗ ಫೋರೆಂದ್ರ ಸೆಹ್ವಾಗ್ ನಂತೆ ಮಿಂಚಬಹುದು ಎನ್ನುವ ಹೋಪ್ ಕೂಡ ತಕ್ಕ ಮಟ್ಟಿಗೆ ಇದೆ.ಏಕೆಂದರೆ ಅವನಲ್ಲಿ ಕ್ಲಾಸ್ ಇದೆ ಅಷ್ಟೇ ಮಾಸ್ ಕೂಡ ಅವನು.ಅವನ ಹೆಚ್ಚಿನ ಎಲ್ಲಾ ಹೊಡೆತಗಳು ಕ್ರಿಕೆಟ್ ನ ಕಾಪಿ ಬುಕ್ ನಿಂದ ನೇರವಾಗಿ ಕಾಪಿ ಮಾಡಿದಂತಿರುತ್ತವೆ.ಕಣ್ಣಗಲಿಸಿಯೇ ಆಡುವ ನಮ್ಮ ಕುಡ್ಲದ ಜವನ ಕೆ. ಎಲ್ ರಾಹುಲ್ ಯಾರಿಗಿಂತಲೂ ಹಿಂದೆ ಉಳಿದಿಲ್ಲ.ನೆನಪಿನಲ್ಲಿ ಉಳಿಯುವಂತಹ ಆಟ ಒಂದನ್ನು ಆತ ತುರ್ತಾಗಿ ಪ್ರದರ್ಶಿಸಬೇಕಾಗಿದೆ.ಮೊದಲು ಒಂದು..ಆ ನಂತರ ಹಲವಾರು ಅಂತಹದ್ದೇ ಪ್ರದರ್ಶನ ಬರುತ್ತಲೇ ಇರಬೇಕು. ಹಾಗಾದರೆ ಮಾತ್ರ ರಾಹುಲ್ ತನ್ನದೊಂದು ಝಂಡಾ ವನ್ನು ಭದ್ರವಾಗಿ ಟೀಮ್ ಇಂಡಿಯಾದ ಟೆಸ್ಟ್ ಫಾರ್ಮೆಟ್ ನಲ್ಲಿಯೂ ಊರಬಹುದು.
ಚೇತೆಶ್ವರ್ ಪೂಜಾರಗೆ ಮಾಡರ್ನ್ ಗೋಡೆ ಎಂಬ ಹೆಸರಿನಿಂದ ಮಾಧ್ಯಮಗಳು ಕರೆಯುತ್ತಾರಾದರೂ ವಿದೇಶದಲ್ಲಿ ಈ ಗೋಡೆ ಕಳೆದ ಸೀಸನ್ ನಲ್ಲಿ ಬಹಳಷ್ಟು ಬಿರುಕು ಬಿಟ್ಟದ್ದು ಸಿಕ್ಕಾಪಟ್ಟೆ ಬೇಜಾರು ಮೂಡಿಸಿದೆ.ರಾಹುಲ್ ದ್ರಾವಿಡ್ ಗೆ ಹೋಲಿಸಿಕೊಳ್ಳಬೇಕಾದರೆ ಆ ಗ್ರೇಟ್ ವಾಲ್ ನ ಸ್ವಲ್ಪ ಆಟ ಆದರೂ ಪೂಜಾರ ಸಮರ್ಥವಾಗಿ ಆಡಲೇಬೇಕು.ಎದುರಾಳಿ ತಂಡದ ಫೀಲ್ಡರ್ಸ್ ಪೂಜಾರ ಆಡುವಷ್ಟು ಹೊತ್ತು ಗ್ರೌಂಡಿನಲ್ಲಿ ಚಾಪೆ ಹಾಕಿಕೊಂಡು ನಿದ್ದೆಗೆ ಜಾರಿ ಬಿಡುವುದೇ ಬೆಟರ್ರು ಎಂಬಂತಹ ಫೀಲ್ ಗೆ ಹೆಚ್ಚಾಗಿ ಜಾರುತ್ತಾರೆ. ಪೂಜಾರ ತಂಡದಲ್ಲಿ ಇರುವುದೇ ಅದಕ್ಕಾಗಿಯೇ.ಸಾಲಿಡ್ ಡಿಫೆನ್ಸ್ ಆಟಕ್ಕಾಗಿ.ಅದನ್ನಷ್ಟೇ ಮಾಡಿದರೂ ಸಾಕು ಆತ, ಇಲ್ಲದಿದ್ದರೆ ಆತನ ಸ್ಥಾನವೂ ಕೂಡ ವಿಶ್ವ ಸಂಸ್ಥೆಯಲ್ಲಿ ಇರುವಂತೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಸ್ಥಾನವಂತು ಅಲ್ಲವೇ ಅಲ್ಲ. ಎದುರಾಳಿಯನ್ನು ಮತ್ತಷ್ಟು ಗಾಢ ನಿದ್ದೆಗೆ ಜಾರಿಸುವ ಆಟಗಾರರು ಅದಾಗಲೇ ಡೊಮಿಸ್ಟಿಕ್ ಕ್ರಿಕೆಟ್ ನಲ್ಲಿ ಬೇಕಾದಷ್ಟು ಇದ್ದಾರೆ. ಇದು ಪೂಜಾರಾಗೆ ಅರಿವಾದರೆ ಪೂಜಾರಗೂ ಒಳ್ಳೆಯದು,ಪೂಜಾರ ಎಂದಿನಂತೆ ಆಡಿದರೆ ಆ ಮೂಲಕ ಟೀಮ್ ಇಂಡಿಯಾಗೂ ಬಹಳಷ್ಟು ಲಾಭವಿದೆ.
ಇನ್ನು ರಹಾನೆ ಬಗ್ಗೆ ಎರಡು ಮಾತು ಹೇಳಬೇಕು. ಸದ್ಯಕ್ಕೆ ಪೂಜಾರ, ಇಶಾಂತ್ ಶರ್ಮ ರಂತೆ ಟೆಸ್ಟ್ ಫಾರ್ಮೆಟ್ ಒಂದನ್ನೇ ಆಡುವ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ಒಬ್ಬ ಈ ಅಜಿಂಕ್ಯ ರಹಾನೆ. ಜಿಂಕ್ಸ್ ಎಷ್ಟು ಸುಂದರ ಹೊಡೆತಗಳ ಆಟಗಾರ ಎಂದರೆ ಈಗಲೂ ಆತನ ಕವರ್ ಡ್ರೈವ್ ಹೊಡೆತಗಳು ಕ್ರಿಕೆಟ್ ದೇವರ ಕವರ್ ಡ್ರೈವ್ ಅನ್ನೇ ಬಹಳಷ್ಟು ನೆನಪು ಮಾಡಿಕೊಡುತ್ತದೆ. ರಹಾನೆಗೆ ಪೂಜಾರನಂತಹ ತಾಳ್ಮೆ ಇಲ್ಲ. ಪೂಜಾರನಂತೆ ಯಾರಿಗೂ ಇರಲೂ ಸಾಧ್ಯವೇ ಇಲ್ಲ ಬಿಡಿ. ಆದರೆ ದಿನದಿಂದ ದಿನಕ್ಕೆ ಕೇವಲ ಟೆಸ್ಟ್ ಸ್ಪೆಷಲಿಸ್ಟ್ ಮಾತ್ರವೇ ಆಗುತ್ತಾ ಹೋಗುತ್ತಿರುವ ಅಂಜಿಕ್ಯಾ ತನ್ನ ಸ್ಥಾನಕ್ಕೂ ಕುತ್ತು ಬರದಂತೆ ಆಡುತ್ತಾ ಹೋದರೆ ಟೆಸ್ಟ್‌ನಲ್ಲಿ ಆತನ ಭವಿಷ್ಯವೂ ಕೂಡ ಭವ್ಯವಾಗಿಯೂ,ಭದ್ರವಾಗಿಯೂ ಇರಲಿದೆ. ಏಕೆಂದರೆ ತಂಡದ ಉಪಕಪ್ತಾನ ಕೂಡ ಆತನೇ ಆಗಿರುವನು.ಕಳೆದ ಸೀಸನ್ ನಲ್ಲಿ ಆಸ್ಟ್ರೇಲಿಯಾ ದಲ್ಲಿ ಟೀಮ್ ಇಂಡಿಯಾ ಗಳಿಸಿದ ಅಭೂತಪೂರ್ವ ಸರಣಿ ವಿಜಯ ಹಾಗೂ ಗಾಬ ದ ಗಮಂಡ್ ಅನ್ನು ನೆಲಕ್ಕಿಳಿಸಿದ ರಹಾನೆ ಬಹಳಷ್ಟು ಕಾಲ ನಮಗೆಲ್ಲರಿಗೂ ಆ ಪಂದ್ಯದಂತೆಯೇ ನೆನಪಿನಲ್ಲಿ ಉಳಿಯುತ್ತಾನೆ.
ಮುಂದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್. ಹಾಗೇ ಆಡಬೇಕು,ಹೀಗೆ ಆಡಬೇಕು ಎಂದು ಅವನಿಗೆ ಹೇಳಬೇಕಾಗಿಯೂ ಇಲ್ಲ,ಹೇಳಲೂ ಬಾರದು. ಹೊಳೆಯಿಂದ ಜಿಗಿದು ಕಡಲಿಗೆ ಹಾರಿದ ಮೀನು ನಮ್ಮ ಈ ಪುಟ್ಟ ರಿಷಭ್ ಪಂತು.ಸಿಹಿ ನೀರಿನಿಂದ ಉಪ್ಪು ನೀರಿಗೆ ಎಲ್ಲಾ ಮೀನುಗಳು ಸುಲಭವಾಗಿ ಅಡ್ಜಸ್ಟ್ ಆಗಲಾರದು,ಕಾಣೆ ಯಂತಹ ಕೆಲವೊಂದು ರುಚಿಕರ ಮೀನುಗಳು ಮಾತ್ರ ಕಡಲು ಹಾಗೂ ನದಿ ಎರಡೂ ಕಡೆ ಸುಲಭವಾಗಿ ಈಜಾಡಬಲ್ಲದು.ಅವನ ಲಹರಿಯಲ್ಲಿ ಅವನು ಮನಸ್ಸೋಯಿಚ್ಛೆ ಆಡಲಿ. ಟೆಸ್ಟ್ ಕ್ರಿಕೆಟ್ ಹೀಗೆಯೇ ನಿಧಾನಕ್ಕೆ ತಾಳ್ಮೆಯಿಂದ ಆಡಬೇಕು ಎನ್ನುವ ಡೈನಾಮಿಕ್ಸ್ ಎಲ್ಲಾ ಕ್ರಿಕೆಟಿಗರಿಗೂ ಅಪ್ಲೈ ಆಗುವುದಿಲ್ಲ.ಸೆಹ್ವಾಗ್ ನಂತಹ ಆಟಗಾರರು ಪ್ರತೀ ಸಲ ಹುಟ್ಟಿಕೊಳ್ಳುವುದು ಕೂಡ ಇಲ್ಲ.ಪಂತ್ Constructive & Destructive ಎರಡನ್ನೂ ಮಾಡುತ್ತಾ ನನ್ನ ದಾರಿ ನನ್ನದು ಎನ್ನುವಂತೆ ಈಗೀನಂತೆಯೇ ಹೊಳೆಯಲ್ಲೂ, ಕಡಲಲ್ಲೂ ಜೋರಾಗಿ ಹುಟ್ಟು ಹಾಕುವಂತೆ ಬ್ಯಾಟು ಬೀಸಲಿ.ಇಂತಹ ಒಬ್ಬನಾದರೂ ಹೊಡೆಬಡಿಯ ದಾಂಡಿಗ ತಂಡದಲ್ಲಿ ಇರಲೇಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಮುಂದೆ ಆಲ್ ರೌಂಡರ್ ಕೋಟ. ಇಲ್ಲಿ ಸ್ಪಿನ್ ಬೌಲರ್ ಆಲ್ ರೌಂಡರ್ ಇರಬೇಕೇ ಅಥವಾ ಮೀಡಿಯಾ ಫಾಸ್ಟ್ ಬೌಲರ್ ಒಬ್ಬ ಆಲ್ ರೌಂಡರ್ ಆಗಿ ತಂಡದಲ್ಲಿ ಇರಬೇಕೇ ಎನ್ನುವುದು ಪಂದ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸ್ಪಿನ್ ಆಲ್ ರೌಂಡರ್ ಸ್ಥಾನಕ್ಕೆ ನಮ್ಮಲ್ಲಿ ಜಡೇಜಾ, ಅಶ್ವಿನ್ ಬಹಳಷ್ಟು ಸಮರ್ಥರಿದ್ದಾರೆ.ಆದರೆ ವಿದೇಶಕ್ಕೆ ಹೋದಾಗ ನಮಗೆ ಮೀಡಿಯಂ ಫಾಸ್ಟ್ ಬೌಲರ್ ಆಲ್ ರೌಂಡರ್ ನ ಅನುಪಸ್ಥಿತಿ ಬಹಳಷ್ಟು ಕಾಡಿದೆ. ಸದ್ಯಕ್ಕೆ ಆ ಸ್ಥಾನ ಖಾಲಿ ಇದೆ.ಬಹಳಷ್ಟು ಹೆಸರುಗಳು ಕೂಡ ಕೇಳಿ ಬರುತ್ತಿದೆ. ಕೊನೆಯಲ್ಲಿ ಯಾರೂ ಸಿಗದೇ ಒಬ್ಬ ಬ್ಯಾಟ್ಸ್‌ಮನ್ ಅನ್ನೇ ಆ ಸ್ಥಾನದಲ್ಲಿ ತಂಡ ಆಡಿಸಿ ಬಿಟ್ಟರೆ ಅದು ಆಲ್ ರೌಂಡರ್ ಎಂಬ ವಿಶಿಷ್ಟ ಸ್ಥಾನಕ್ಕೆ ಮಾಡುವ ಅಪಚಾರ ಹೊರತು ಬೇರೇನೂ ಅಲ್ಲ. ಕಪಿಲ್ ದೇವ್ ನಂತೆ, ಇರ್ಫಾನ್ ಪಠಾನ್ ನಂತೆ ವೇಗದ ಬೌಲರ್ ಗಳು ನಮ್ಮಲ್ಲಿ ಆಲ್ ರೌಂಡರ್ ಆಗಿದ್ದು ಬಹಳ ಕಡಿಮೆ.ಹಾರ್ದಿಕ್ ಪಾಂಡ್ಯ ನ ಬೌಲಿಂಗ್ ನಲ್ಲಿ ಮೊನಚಿಲ್ಲ, ಶಾರ್ದೂಲ್ ಠಾಕೂರ್ ಬೌಲಿಂಗ್ ಕೂಡ ಅಷ್ಟೊಂದು ಇಂಪ್ರೆಸಿವ್ವ್ ಎನಿಸಿಲ್ಲ. ಹಾಗಾಗಿ ಇದೊಂದು ಸ್ಥಾನದತ್ತ ಟೀಮ್ ಇಂಡಿಯಾ ಇನ್ನು ಮುಂದಾದರೂ ಹೆಚ್ಚಿನ ಆಸಕ್ತಿ ಹಾಗೂ ಆಸ್ಥೆ ವಹಿಸಲೇಬೇಕಾಗಿದೆ. ಅದರಲ್ಲೂ ನನಗೆ ಬೆನ್ ಸ್ಟೋಕ್ಸ್ ನನ್ನು ಪ್ರತೀ ಬಾರಿ ನೋಡುವಾಗ ಈ ಒಂದು ಆಸೆ ಇನ್ನಿಲ್ಲದಂತೆ ಹಾಗೇ ಗರಿಗೆದರಿಬಿಡುತ್ತದೆ. ಏನೇ ಹೇಳಿ ವೇಗದ ಬೌಲರ್ ಒಬ್ಬ ಬಹಳ ಶಿಸ್ತಿನಿಂದ ನಿರ್ಭೀತಿಯಿಂದ ಎದುರಾಳಿ ವೇಗದ ಬೌಲರ್ ಗಳನ್ನು ಇನ್ನಿಲ್ಲದಂತೆ ಗೋಳು ಹೊಯ್ಯುವುದನ್ನು ನೋಡುವ ಮಜಾ.. ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಗಳು ಬ್ಯಾಟ್ ಬೀಸಿದಾಗಲೂ ಸಿಗುವುದಿಲ್ಲ.
ಇನ್ನು ಸ್ಪಿನ್ ಬೌಲಿಂಗ್.. ಸದ್ಯಕ್ಕೆ ಹೆಚ್ಚಾಗಿ ಅದು ಜಡೇಜಾ ಅಶ್ವಿನ್ ಜೋಡಿಯೇ ಬಿಡಿ. ಅವರಿಬ್ಬರ ಬಗ್ಗೆ ವಿಶೇಷ ಮೆಚ್ಚುಗೆ ಇದೆ. ಏಕೆಂದರೆ ಸ್ಪಿನ್ ಪಿಚ್ ಆದರೆ ಅವರಿಬ್ಬರೂ ಸೇರಿ ಭಯಂಕರ ಕಣ್ ಕಟ್ಟ್ ಜಾದೂವನ್ನೇ ಮಾಡಿಬಿಡುತ್ತಾರೆ,ಅವರ ಬೌಲಿಂಗ್ ಬಗ್ಗೆ ಎರಡು ಮಾತಿಲ್ಲ. ಅಷ್ಟು ಮಾತ್ರವಲ್ಲ ಬ್ಯಾಟ್ಸ್‌ಮನ್ ಗಳು ಬ್ಯಾಟ್ ಬೀಸಲು ಮರೆತು ಬಿಟ್ಟಾಗ ಸಾಕಷ್ಟು ರನ್ ಗಳಿಸಿ ತಂಡಕ್ಕೆ ಇವರಿಬ್ಬರು ತಮ್ಮ ಬ್ಯಾಟಿಂಗ್ ಮೂಲಕವೂ ಬಹಳಷ್ಟು ಕೊಡುಗೆ ಕೊಡುತ್ತಾರೆ. ಹಾಗಾಗಿ ಇವರಿಬ್ಬರೂ ಸ್ಪಿನ್ ಆಲ್ ರೌಂಡರ್ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ.ಜಡೇಜಾನ ಫೀಲ್ಡಿಂಗ್ ಜೊತೆ ಜೊತೆಗೆ ಕತ್ತಿ ವರಸೆ ನೋಡಲು ಕಣ್ಣಿಗೆ ಬಹಳ ಮುದ. ಅದು ಮತ್ತಷ್ಟು ಬೇಕು.ಪ್ರತೀ ಟೆಸ್ಟ್ ನಲ್ಲೂ ಬೇಕು.
ಇನ್ನು ಉಳಿದದ್ದು ಬ್ಯಾಟಿಂಗ್ ಕ್ರಮಾಂಕದಲ್ಲಿ ಟೇಲ್ ಎಂಡರ್ ಎಂಬ ಲೇಬಲ್‌ನಲ್ಲಿ ಬ್ಯಾಟ್ ಬೀಸಲು ಇಳಿಯುವ ನಮ್ಮ ವೇಗದ ಬೌಲರ್‌ಗಳ ದಂಡು. ಬೌಲಿಂಗ್ ಗೆ ಸಂಬಂಧಿಸಿದಂತೆ ಹೇಳುವುದಾದರೆ ಹೋದ ಸೀಸನ್ ನಲ್ಲಿ ನಮ್ಮ ವೇಗದ ಬೌಲರ್ ಗಳ ಸಾಧನೆ ನಿಜವಾಗಿಯೂ ಪ್ರಶಂಸಾರ್ಹವಾಗಿತ್ತು.ಅದಕ್ಕಾಗಿ ಅವರುಗಳನ್ನು ಅಭಿನಂದಿಸಲೇಬೇಕು. ಇಶಾಂತ್ ಶರ್ಮ, ಶಮಿ,ಬುಮ್ರಾ ಬಹಳ ಚೆನ್ನಾಗಿಯೇ ತಮ್ಮ ತಮ್ಮ ಕೆಲಸ ನಿಭಾಯಿಸಿದ್ದಾರೆ. ಒಂದೇ ಒಂದು ಬೇಜಾರು ಎಂದರೆ ನಮ್ಮ ವೇಗದ ಬೌಲರ್‌ಗಳಿಗೆ ಬ್ಯಾಟ್ ಹಿಡಿಯಲು ಬರುವುದೇ ಇಲ್ಲ. ಅದರಲ್ಲೂ ಬುಮ್ರಾ ಕೇವಲ ವಿಕೆಟ್ ಒಪ್ಪಿಸಲು ಕ್ರೀಸಿಗೆ ಬಂದಂತೆ ಆಡುತ್ತಾನೆ. ಗೊತ್ತು ಬೌಲರ್ ಗಳಿಂದ ಬ್ಯಾಟ್ಸ್‌ಮನ್ ಗಳ ಆಟವನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಆದರೆ ಟೇಲ್ ಎಂಡರ್ಸ್ ಗಳು ರನ್ ಗಳಿಸದೇ ಇದ್ದರೂ ಎದುರಾಳಿಗಳಿಗೆ ಸಾಕಷ್ಟು ರೆಸಿಸ್ಟೆನ್ಸಿ ತೋರುವ ಮೂಲಕ ಸೋಲುವ ಮ್ಯಾಚ್ ಅನ್ನು ಎದುರಾಳಿ ಗೆಲ್ಲದಂತೆ ಮಾಡಿಬಿಡಬಹುದು. ಪಂದ್ಯದ ಹಿತ ದೃಷ್ಟಿಯಿಂದ ನೋಡಿದರೆ ಇದು ಕೂಡ ಬಹು ದೊಡ್ಡ ಕೊಡುಗೆಯೇ.
ಇನ್ನು ನಮ್ಮ ಕೋಚ್ ರವಿ ಶಾಸ್ತ್ರಿ. ರವಿ ಶಾಸ್ತ್ರಿ ಎಂತಹ ಕೋಚ್ ಎಂದರೆ ಅವರ ಮಾತುಗಳಲ್ಲಿ... ಪ್ರತೀ ಪಂದ್ಯ ನಾವೇ ಗೆಲ್ಲುತ್ತೇವೆ ಮತ್ತು ಕೊನೆಯಲ್ಲಿ ಬಿಗ್ ಪಾರ್ಟಿ ಮಾಡುತ್ತೇವೆ, ನಡು ನಡುವಲ್ಲಿ ವಿಜಯದ ಶಾಂಪೇನ್ ಅನ್ನು ಬೇಜಾನ್ ಚಿಮ್ಮುಸುತ್ತೇವೆ.. ಎಂದೇ ಇರುತ್ತದೆ ಹೊರತು ಬೇರೆನೂ ಇಲ್ಲ.ತಂಡಕ್ಕೆ ಆತ್ಮ ವಿಶ್ವಾಸ ತುಂಬಿಸಲು ಅಷ್ಟು ಸಾಕು. ಅದರಲ್ಲೂ ವಿರಾಟ್ ಕೊಹ್ಲಿ ಗೆ ಅಂತಹ ಕೋಚ್ ಬಹಳಷ್ಟು ಸೂಟ್ ಆಗುತ್ತಾರೆ. ರವಿ ಶಾಸ್ತ್ರಿ ಯಾವ ರೀತಿ ಕೋಚಿಂಗ್ ಮಾಡುತ್ತಾರೆ ಎಂದು ದೇವಾರಣೆ ನನಗೂ ಗೊತ್ತಿಲ್ಲ,ಆದರೆ ಆತನ ಕೋಚಿಂಗ್ ನಲ್ಲಿ ನಾವು ಬಹಳಷ್ಟು ಕಡಿಮೆ ಸೋತಿದ್ದೇವೆ ಎನ್ನುವುದು ಕೂಡ ಒಪ್ಪಲೇ ಬೇಕಾದ ಮಾತು.ಜಗತ್ತು ಎಷ್ಟೇ ಟ್ರೋಲ್ ಮಾಡಿದರೂ ನಮ್ಮ ರವಿ ಭಾಯ್ ಬಿಂದಾಸ್ ಜನ.ಅವರು ಹಾಗೆಯೇ ಇರಲಿ.. ಕಣ್ಣಿಗೊಂದು ತಂಪು ಕನ್ನಡಕ, ಹಾಗೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗದ ಮಾತು.
ಮುಂದೆ ಏನಾದರೂ ಕೋಚ್ ಚೇಂಜ್ ಆದರೆ ಆವಾಗ ನಾನಂತು ಆ ಜಾಗದಲ್ಲಿ ನಮ್ಮ ವೀರು ಭಾಯ್ ಅನ್ನು ನೋಡಲು ಇಷ್ಟ ಪಡುತ್ತೇನೆ. ಸೆಹ್ವಾಗ್ ಅಂತು ನಿಜವಾಗಿಯೂ ಇಂಟ್ರೆಸ್ಟಿಂಗ್ ಮನುಷ್ಯ.ಟೆಕ್ನಿಕ್ಕು ಗಳ ಬಗ್ಗೆ ರಣತಂತ್ರಗಳ ಬಗ್ಗೆ ಹೆಚ್ಚಿನ ತಲೆಕೆಡಸಿಕೊಳ್ಳದ ಆತನ ಕೋಚಿಂಗ್ ನೋಡಲು ನಿಜಕ್ಕೂ ಮಜವಾಗಿರುತ್ತದೆ ಅಂತ ನನ್ನ ಭಾವನೆ.ಬೇಜಾರು ಮಾಡಬೇಡಿ.. ನಾನು ಏತಕ್ಕಾಗಿ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಹೆಸರು ಹೇಳಲಿಲ್ಲ ಎಂದರೆ ಅವರು ಯುವ ಆಟಗಾರರನ್ನು ತಯಾರು ಮಾಡುವಲ್ಲಿ ಅದಾಗಲೇ ಬಹಳಷ್ಟು ಯಶಸ್ಸು ಕಂಡಿದ್ದಾರೆ ಹಾಗೂ ಅವರಂತೆ ಸದ್ಯಕ್ಕೆ ನಮ್ಮಲ್ಲಿ ಯಾರೂ ಇಲ್ಲದೇ ಇರುವುದರಿಂದ ಮತ್ತು ಭಾರತಕ್ಕೆ ಭವಿಷ್ಯದ ಆಟಗಾರರನ್ನು ತಯಾರು ಮಾಡುವ ದೃಷ್ಟಿಯಿಂದ ಅವರು ತಂಡದ ಮುಖ್ಯ ಕೋಚ್ ಆಗುವುದಕ್ಕಿಂತಲೂ ಈಗ ಮಾಡುತ್ತಿರುವ ಕೋಚಿಂಗ್ ಗೆ ಹೆಚ್ಚಿನ ಮಹತ್ವ ಇದೆ. ಮಹತ್ವದ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಂದಿನಂತೆ ಬಿಸಿಸಿಐ ಯಲ್ಲಿ ಬಂಗಾಳ ರಾಜ, ನಮ್ಮೆಲ್ಲರ ದಾದ ಗಂಗೂಲಿ ಮಹರಾಜ್ ಇದ್ದಾರೆ. ಹಿ ಇಸ್ ಅಲ್ವೇಸ್ ಬಿ ಇಂಟ್ರೆಸ್ಟಿಂಗ್ ಫೇಲೋ.
ಒಟ್ಟಿನಲ್ಲಿ ಇಂಗ್ಲೆಂಡ್ ನ ಟ್ರೆಂಟ್ಬ್ರಿಡ್ಜ್ ನಾಟಿಂಗ್ಹ್ಯಾಮ್ ನಲ್ಲಿ ಆಂಗ್ಲರ ಎದುರು ಇಂದಿನಿಂದ ಡಬ್ಲ್ಯು. ಟಿ.ಸಿ ಸೀಸನ್ ಎರಡರ ಮೊದಲ ಎಪಿಸೋಡ್ ಆರಂಭವಾಗಲಿದೆ.ಶುದ್ಧ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನೆರಡು ವರ್ಷ ಪೂರ್ತಿ ಹಬ್ಬವೇ.
ಏನೇ ಹೇಳಿ ಕ್ರಿಕೆಟ್ ಅಭಿಮಾನಿ ಎಂದಾದರೆ ಆತ ಇಲ್ಲವೇ ಆಕೆ ಟೆಸ್ಟ್ ಕ್ರಿಕೆಟ್ ಅಭಿಮಾನಿಯಾಗದೇ ಉಳಿದರೆ ನನಗಂತು ಅವರುಗಳು ನಿಜವಾದ ಕ್ರಿಕೆಟ್ ಅಭಿಮಾನಿ ಅಲ್ಲ ಎಂದೇ ಅನಿಸುತ್ತದೆ.ಟೆಸ್ಟ್ ಕ್ರಿಕೆಟ್ ಈಸ್ ಟೂ ಮಚ್ ಬೋರಿಂಗ್ ಎಂದು ಹೇಳಿ ಬಿಟ್ಟರೆ ನನಗೆ ಅವರು ಕ್ರೀಮ್ ಬನ್ನಿನ ಮೇಲಿನ ಬನ್ನು ಅಷ್ಟೇ ತಿಂದವರು,ಅದರೊಳಗಿನ ಕ್ರೀಮನ್ನು ಎಂದಿಗೂ ತಿಂದೇ ಇಲ್ಲ ಅಂತ ಅನ್ನಿಸಿ ಬಿಡುತ್ತದೆ. ಕಾರಣ ಅಸಲಿ ಕ್ರಿಕೆಟ್ ಎಂದರೆ ಅದು ಯಾವತ್ತಿಗೂ ಟೆಸ್ಟ್ ಕ್ರಿಕೆಟ್ ಮಾತ್ರವೇ ಆಗಿದೆ ಹೊರತು ಬೇರೆ ಯಾವುದೇ ಫಾರ್ಮೆಟ್ ಅಲ್ಲ.ಬೇಕಿದ್ದರೆ ಆಟವಾಡುವ ಪ್ರೋಪೆಷನ್ ಆಟಗಾರರನ್ನೇ ಕೇಳಿ ನೋಡಿ.ಕೇವಲ ಒಂದೇ ಒಂದು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡಿ ನಿವೃತ್ತರಾದರೂ ತಮ್ಮ ಕ್ರಿಕೆಟ್ ಜೀವನ ಧನ್ಯವಾಗಿದೆ ಪಾವನವಾಗಿದೆ ಎಂದು ಹೇಳುವವರು ಹಲವಾರು ಆಟಗಾರರು ಸಿಗುತ್ತಾರೆ. ಅದೇ ಇನ್ನೂ ಅವಕಾಶ ಸಿಗದೇ ಇದ್ದವರು ಒಂದೇ ಒಂದು ಟೆಸ್ಟ್ ಕ್ರಿಕೆಟ್ ಅವಕಾಶಕ್ಕಾಗಿ ಇನ್ನಿಲ್ಲದಂತೆ ಯಾವಾಗಲೂ ಹಂಬಲಿಸುತ್ತಲೇ ಇರುತ್ತಾರೆ.
ಹೇಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರತಿ ಬಾಲ್ ಕೂಡ ಅತಿಯಾದ ಎಚ್ಚರಿಕೆ ಹಾಗೂ ಕನ್ಸಿಸ್ಟೆನ್ಸಿಯಾದ ಫೋಕಸ್ ಅನ್ನು ಬೇಡುತ್ತದೆಯೋ ಅದೇ ರೀತಿ ಟೆಸ್ಟ್ ಕ್ರಿಕೆಟ್ ನ ಅಪ್ಪಟ ಅಭಿಮಾನಿ ಆಗಲು ಕೂಡ ನೋಡುಗನಲ್ಲಿ ಅಂತಹದ್ದೇ ತಾಳ್ಮೆ, ಸಹನೆ, ಶ್ರದ್ಧೆ ಬೇಕೇ ಬೇಕು.ಬೋರ್ ಆಗುವವರಿಗೆ ಎಂದಿನಂತೆ ಮ್ಯಾಗಿಯಂತಹ ಇನ್ಸ್ ಸ್ಟೆಂಟ್ ಕ್ರಿಕೆಟ್ ಫಾರ್ಮೆಟ್ ಗಳು,ಪ್ಯಾಂಟಸಿ ಲೀಗ್ ಗಳು ಬೇಕಾದಷ್ಟು ಇದೆ.ರುಚಿಕರ ಪತ್ರೋಡೆ ತಿನ್ನಬೇಕಾದರೆ ವ್ಯವಧಾನವಂತು ಖಂಡಿತವಾಗಿಯೂ ಬೇಕು. ಆದರೆ ಎಲೆ ಕೊಯ್ದ ನಂತರ ಮೈಗೆ ಹಚ್ಚಿದ ಮಸಾಲೆಯ ಜೊತೆ ಹಬೆಯಲ್ಲಿ ಹದವಾಗಿ ನಿಧಾನವಾಗಿ ಬೆಂದು ಘಮ್ಮೆನಿಸುವ ಕ್ರಿಕೆಟ್ ಪತ್ರೋಡೆಯಾಗಲು ಟೆಸ್ಟ್ ಕ್ರಿಕೆಟ್ ಗೆ ಮಾತ್ರ ಗರಿಷ್ಠ ಐದು ದಿನಗಳು ಬೇಕೇ ಬೇಕು. ಅಷ್ಟು ದಿನ ನೀವು ಈ ಕ್ರಿಕೆಟ್ ಗಾಗಿ ಎತ್ತಿಟ್ಟರೆ ಹೇಗೆ ತಿನ್ನಬಹುದಾದ ರುಚಿಕರ ಪತ್ರೋಡೆ ಎಂದಿಗೂ ನಿರಾಸೆ ಮೂಡಿಸುವುದಿಲ್ಲವೋ ಹಾಗೆಯೇ ಟೆಸ್ಟ್ ಕ್ರಿಕೆಟ್ ಕೂಡ ಬೋರ್ ಹೊಡೆಸುವುದಿಲ್ಲ.
ಈಗ ಮುಂದಿರುವ ಈ ಇಂಗ್ಲೆಂಡ್ ಸರಣಿ ಐದು ಪಂದ್ಯಗಳ ಗೊಂಚಲು. ಒಂದೊಂದೇ ಹಣ್ಣು ಕೀಳುತ್ತಾ ನಮ್ಮವರು ಗೊಂಚಲನ್ನೇ ನಮ್ಮದಾಗಿಸಿಕೊಳ್ಳಬೇಕು. ಆ ನಂತರ ಮತ್ತೊಂದು ನೆಲದಲ್ಲಿ ಮತ್ತೊಂದು ವಿಭಿನ್ನ ರುಚಿಯ ಹಣ್ಣಿನ ಗೊಂಚಲಿನತ್ತ ಮನಸ್ಸು ಕೇಂದ್ರೀಕರಿಸಬೇಕು.
ಪಿಚ್ ನಲ್ಲಿ ಧೂಳೇಳಲಿ,ಭೂಕಂಪನದಂತಹ ಬಿರುಕು ಮೂಡಲಿ ಅಥವಾ ದನ ಮೇಯುವಷ್ಟು ಹುಲ್ಲು ಇಬ್ಬನಿಯೊಂದಿಗೆ ಹಸಿರಸಿರಾಗಿ ನಳನಳಿಸಲಿ... ಬ್ಯಾಟ್ಸ್‌ಮನ್ ಗಳ ಬ್ಯಾಟ್ ಮೇಲಿನ ಗ್ರಿಪ್ ಸಡಿಲವಾಗದಿರಲಿ, ಬೌನ್ಸರ್ ಗೆ ತಲೆ ಬಾಗಿದರೂ ಪಂದ್ಯದ ಕೊನೆಯಲ್ಲಿ ಗೆದ್ದು ತಲೆ ಎತ್ತುವಂತಿರಲಿ,ಸ್ಪಿನ್ ಬೌಲಿಂಗ್ ಗೆ ಕೇವಲ ಸ್ವೀಪ್ ಶಾಟ್ ಅದು ನಮ್ಮ ಆಟವಲ್ಲ, ನಮ್ಮ ಪಿರ್ಕಿ ಗೇಂದ್ಬಾಜ್ ಗಳು ಎದುರಾಳಿ ದಾಂಡಿಗರನ್ನು ವಂಚಿಸಿ ಬೇಲ್ಸ್ ಹಾರಿಸುವುದು ನೋಡಲು ಚಂದ, ವೇಗದ ಬೌಲಿಂಗ್ ಪಡೆ ಕೂಡ ಎದುರಾಳಿ ಬ್ಯಾಟ್ಸ್‌ಮನ್ ಗಳನ್ನು ಸಾಕಷ್ಟು ತಬ್ಬಿಬ್ಬು ಗೊಳಿಸಲಿ.. ಕೊಹ್ಲಿ ಅಗ್ರೇಷನ್ ಆಟ ನನಗಂತು ಬೇಕು.ಆತ ಮತ್ತಷ್ಟು ಶತಕದ ಮೇಲೆ ಶತಕ ಹೊಡೆಯಲಿ. ಪೂಜಾರ ಎಂದಿನಂತೆ ನಿದ್ರೆ ಬರಿಸಲಿ, ಕಮಾನ್ ಇಂಡಿಯಾ...ಎಂದು ಚೀರಲು ಎಂದಿನಂತೆ ನಾವು ನೀವುಗಳು ಇದ್ದೇ ಇದ್ದೇವೆ.
ಯಾವಾಗಲೂ ಭಾರತದ ವಿರುದ್ಧವೇ ಮಾತಾಡುವ ಇಂಗ್ಲೆಂಡ್ ನ ಮೈಕಲ್ ವಾನ್ ಈ ಬಾರಿ ಇಂಗ್ಲೆಂಡ್ ತಂಡದಲ್ಲಿ ಬೆನ್ ಸ್ಟೋಕ್ಸ್ ಇಲ್ಲ, ಜೊಪ್ರಾ ಅರ್ಚರ್ ಇಲ್ಲ, ಅವರಿಲ್ಲ,ಇವರಿಲ್ಲ ಹಾಗಾಗಿ ಭಾರತ ಸುಲಭವಾಗಿ 3-1 ರಿಂದ ಸರಣಿ ಗೆಲ್ಲಲಿದೆ ಎಂದು ಉಲ್ಟಾ ನುಡಿದಿದ್ದಾನೆ.ಅವನದ್ದು ಅಜ್ಜಿಬೆಡಿ,ಅವನದ್ದು ಯಾವಾಗಲೂ ಏನಾದರೊಂದು ಕೊಂಕು ಇದ್ದದ್ದೇ,ಅವನನ್ನು ನಿಭಾಯಿಸಲು ಎಂದಿನಂತೆ ವಸೀಂ ಜಾಫರ್ ಭಾಯ್ ಯ ಟಾಂಗು ಕೂಡ ರಸವತ್ತಾಗಿಯೇ ಇರುತ್ತದೆ ಬಿಡಿ.
ಸದಾ ಇಷ್ಟವಾಗುವ ನಮ್ಮ ಬ್ಲೀಡ್ ಬ್ಲೂ,ವೈಟ್ ಜೆರ್ಸಿಯಲ್ಲಿ ಮತ್ತೊಮ್ಮೆ ಮಿಂಚಲಿ.
ಶುಭವಾಗಲಿ ಟೀಮ್ ಇಂಡಿಯಾ.. 🤍🤍🏆🇮🇳
#Cricket
Ab Pacchu
(https://phalgunikadeyavanu.blogspot.com)



Comments
Post a Comment