#4T_D1 ಸಮಬಲದ ನಂತರ...
ಕೊನೆಗೂ ಆಂಗ್ಲರು ಸಮಬಲದ ಹೋರಾಟ ನೀಡುವಲ್ಲಿ ಸಫಲರಾಗಿದ್ದಾರೆ ಎಂಬ ಸಣ್ಣ ಕಥೆಯ ನಂತರ,ಸಂಕಲನದ ಮುಂದಿನ ಕಥೆಗಳು ಹೇಗಿರಬಹುದು ಎಂಬ ದೊಡ್ಡ ಕುತೂಹಲ ಒಂದು ಕಡೆಗಿದ್ದರೆ,ರೋಚಕವಂತು ಖಂಡಿತವಾಗಿಯೂ ಇದ್ದೇ ಇರಲಿದೆ ಎಂಬ ನಿರೀಕ್ಷೆ ನಮ್ಮೆಲ್ಲರದ್ದೂ ಆಗಿದೆ.
ನಾವು ಎಲ್ಲಿ ಸೋತಿದ್ದೇವೆ ಎಂಬ ಚರ್ಚೆಯೇ ಇಲ್ಲಿ ಅಪ್ರಸ್ತುತ. ಏಕೆಂದರೆ ಕಣ್ಣಿಗೆ ಕುಕ್ಕುವಂತೆ ಇರುವುದು ಸದ್ಯಕ್ಕೆ ನಮ್ಮ ಕಳಪೆ ಬ್ಯಾಟಿಂಗ್ ಒಂದೇ.
ಬೌಲಿಂಗ್ ನಲ್ಲಿ ನಮ್ಮ ತಂಡ ಅಷ್ಟೊಂದು ಮಿಂಚುವಾಗ ತಂಡದ ಆಧಾರಸ್ತಂಭ ಮಾತ್ರವಲ್ಲ ವಿಶ್ವದೆಲ್ಲೆಡೆ ತನ್ನ ಪ್ರಬಲ ಬ್ಯಾಟಿಂಗ್ ನಿಂದಾಗಿಯೇ ಗುರುತಿಸಿಕೊಳ್ಳುವ ಟೀಮ್ ಇಂಡಿಯಾ, ಖಂಡಿತವಾಗಿಯೂ ನಮಗೆ ಮಾತ್ರವಲ್ಲ ವಿಶ್ವ ಕ್ರಿಕೆಟ್ ಗೂ ಬಹಳಷ್ಟು ನಿರಾಸೆ ಮೂಡಿಸಿದೆ.
ಕೊಹ್ಲಿ ನಮ್ಮ ಕಪ್ತಾನ.ಆತ ಅದೆಂತಹ ಸರ್ವ ಶ್ರೇಷ್ಠ ಆಟಗಾರ ಎಂದರೆ ಫ್ಯಾಭ್ ಫೋರ್ ನಲ್ಲಿಯೂ ಆತ ಮೊದಲ ಸ್ಥಾನದಲ್ಲಿಯೇ ಎಷ್ಟೋ ವರ್ಷ ಈ ಕ್ರಿಕೆಟ್ ದುನಿಯಾವನ್ನು ಇನ್ನಿಲ್ಲದಂತೆ ಆಳಿ ಬಿಟ್ಟಿದ್ದಾನೆ.ಕೊಹ್ಲಿಯ ಬಗ್ಗೆ ವೈಯಕ್ತಿಕವಾಗಿ ಸಿಟ್ಟಿದ್ದರೆ ಆಕ್ರೋಶ ವ್ಯಕ್ತಪಡಿಸಬಹುದೇ ಹೊರತು ಯಾವ ದೇಶವೂ ಸಹ ಕೊಹ್ಲಿಯಂತಹ ಆಟಗಾರನನ್ನು ಅಲುಗಾಡಿಸಲು ಹೋಗುವುದೂ ಇಲ್ಲ,ಮಾತ್ರವಲ್ಲ ಅದರ ಬಗ್ಗೆ ಆಲೋಚಿಸುವುದು ಕೂಡ ಇಲ್ಲ.ಅದಕ್ಕಿಂತ ಕೆಟ್ಟ ಯೋಚನೆಯೇ ಬಹುಶಃ ಕ್ರಿಕೆಟ್ ನಲ್ಲಿ ಬೇರೊಂದು ಇಲ್ಲ.ಕೊಹ್ಲಿಯ ಬಗ್ಗೆ ನನ್ನದೂ ಅದೇ ಅಭಿಪ್ರಾಯ.ಹೊಳೆಯುವುದೇ ವಜ್ರದ ಗುಣ.ಹೊಳೆಯುತ್ತದೆ ಎಂಬ ವಿಶ್ವಾಸ ಎಂದಿಗೂ ಇದೆ. ಇದು ಅಂಧವಿಶ್ವಾಸವಲ್ಲ.ಕೊಹ್ಲಿ ಎಂಬ ಟಫ್ ಕ್ಯಾರೆಕ್ಟರ್ ಬಗ್ಗೆ ಗೊತ್ತಿರುವ ಎಲ್ಲರೂ ಅರಿತಿರುವ ಸತ್ಯ.
ತಕ್ಕ ಮಟ್ಟಿಗೆ ಕಮ್ ಬ್ಯಾಕ್ ಮಾಡಿದ ಪೂಜಾರನನ್ನು ಈಗ ದೂರುವಂತೆಯೇ ಇಲ್ಲ. ಆತ ನಿಜವಾಗಿಯೂ ಅವನಂತೆಯೇ ಆಡಬೇಕು. ಒಂದಷ್ಟು ಹೋಪ್ ಮೂಡಿಸುವಲ್ಲಿ ಪೂಜಾರ ಯಶಸ್ವಿಯಾಗಿದ್ದಾನೆ. ಆದರೆ ಪುನಃ ವಿಫಲವಾದರೆ ಮಾತ್ರ ಅಭಿಮಾನಿಗಳ ಸಿಟ್ಟು ಖಂಡಿತವಾಗಿಯೂ ತೀಕ್ಷ್ಣವಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ
ಸದ್ಯಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು ಅದು ನಮ್ಮ ಅಜಿಂಕ್ಯ ರಹಾನೆ.ಆದರೆ ಆತ ತಂಡದ ಉಪ ಕಪ್ತಾನ ಬೇರೆ. ತಂಡದ ಮ್ಯಾನೇಜ್ಮೆಂಟ್ ರಹಾನೆಯನ್ನು ಯಾವ ರೀತಿ ಹ್ಯಾಂಡಲ್ ಮಾಡುತ್ತದೋ ಅದು ರವಿ ಭಾಯ್ ಹಾಗೂ ಕೊಹ್ಲಿಗೆ ಅಷ್ಟೇ ಗೊತ್ತು. ಆತನಲ್ಲಿ ಎಲ್ಲವೂ ಇದೆ. ವಿದೇಶಿ ನೆಲದಲ್ಲಿಯೂ ಆತ ಬಹಳ ಚೆನ್ನಾಗಿ ಆಡಬಲ್ಲ. ಆದರೆ ಸದ್ಯಕ್ಕೆ ಆಡುತ್ತಿಲ್ಲ. ಬೆಂಚು ಬಿಸಿ ಮಾಡುತ್ತಿರುವ ಸೂರ್ಯ ಕುಮಾರ್ ಯಾದವ್ ಎಲ್ಲರಿಗೆ ಆಸೆ ಹುಟ್ಟಿಸುತ್ತಿದ್ದಾನೆ.ಹಿರಿಯ ಮಾಜಿ ಆಟಗಾರರ ಅಭಿಪ್ರಾಯವೂ ಕೂಡ ಅದೇ,ಆತನನ್ನು ಆಡಿಸಬೇಕು ಎಂದು.ತಂಡ ಏನು ಮಾಡುತ್ತದೋ ಗೊತ್ತಿಲ್ಲ. ಕಾದು ನೋಡಬೇಕಾಗಿದೆ.
ಪಂತ್ ಕ್ರಿಕೆಟ್ ಜೀವನದಲ್ಲಿ ತಾಳ್ಮೆ, ಶಿಸ್ತು,ಸಹನೆ, ಸಂಯಮ ಎಲ್ಲಾ ಬಹಳಷ್ಟು ಕಲಿಯಬೇಕು ಎಂದು ಅನಿಸುತ್ತದೆ. ಆದರೆ ಅದು ಅವನಿಗೆ ಹೇಳಿ ಪ್ರಯೋಜನವಿಲ್ಲ!
ಕೊಹ್ಲಿ ಹಾಗೂ ರವಿ ಶಾಸ್ತ್ರಿ ಮೇಲೆ ಇರುವ ಒಂದೇ ಒಂದು ಬೇಜಾರು ಅಂದರೆ ಅವರಿನ್ನೂ ಅಶ್ವಿನ್ ಅನ್ನು ತಂಡದಲ್ಲಿ ಆಡಿಸದೇ ಇರುವುದು. ಅಶ್ವಿನ್ ಏಕೆ ಆಡಬೇಕು ಎಂದರೆ ಅವನು ಈ ಸರಣಿಗೂ ಮೊದಲು,ಕೌಂಟಿ ಕ್ರಿಕೆಟ್ ನಲ್ಲಿ ಆಡಿ ಅಲ್ಲಿಯ ಸರ್ರೆ ತಂಡಕ್ಕಾಗಿ ಒಂದಷ್ಟು ವಿಕೆಟ್ ಕಬಳಿಸಿದ್ದಾನೆ.ಅವನಿಗೆ ಅನುಭವವೂ ಇದೆ.ಮಾತ್ರವಲ್ಲ ಜಡೇಜಾಗೆ ಹೋಲಿಸಿದರೆ ಆತ ವಿಶ್ವ ಶ್ರೇಷ್ಠ ಸ್ಪಿನ್ನರ್ ಕೂಡ ಹೌದು.ಅವನ ಬ್ಯಾಟಿಂಗ್ ಬಗ್ಗೆಯೂ ಹೇಳ ಬೇಕಾಗಿಲ್ಲ.ಇದರ ಬಗ್ಗೆಯೂ ಟೀಮ್ ಮ್ಯಾನೇಜ್ಮೆಂಟೇ ಮನಸ್ಸು ಮಾಡಬೇಕೇ ಹೊರತು ಬೇರಾರು ಅಲ್ಲ. ಅವನು ಆಡದಿದ್ದರೆ ಮತ್ತೆ ನಿರಾಸೆ ಆಗುತ್ತದೆ. ಹೇಗೋ ಜಡೇಜಾ 3 ಟೆಸ್ಟ್ ಆಡಿ ಆಗಿದೆ. ಬೆಂಚ್ ಕಾಯಿಸುತ್ತಿರುವ ಅಶ್ವಿನ್ ಕೂಡ ಒಂದಷ್ಟು ಕ್ರಿಕೆಟ್ ಆಡಿ ಬಿಡಲಿ.
ಅಂದ ಹಾಗೆ ಸದ್ಯದ ಟೆಸ್ಟ್ ಬೌಲಿಂಗ್ ರೇಟಿಂಗ್ ನಲ್ಲಿ ಆರ್.ಅಶ್ವಿನ್ 2 ನೇ ಸ್ಥಾನದಲ್ಲಿದ್ದಾನೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿಂಗ್ಸ್ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ನ ಜಿಮ್ಮಿ ಆಂಡರ್ಸನ್ 5 ನೇ ಹಾಗೂ ಭಾರತದ ಜಸ್ಪ್ರೀತ್ ಬೂಮ್ರ10 ನೇ ಸ್ಥಾನದಲ್ಲಿದ್ದಾನೆ.
ವೇಗದ ಬೌಲಿಂಗ್ ಬಗ್ಗೆ ಎಂದಿನಂತೆ ಅಪಾರ ಮೆಚ್ಚುಗೆ ಇದೆ.
ಓಪನರ್ಸ್ ಗಳಲ್ಲಿ ರೋಹಿತ್ ಶರ್ಮ ಬಗ್ಗೆ ವಿಶೇಷ ಮೆಚ್ಚುಗೆಯ ಜೊತೆಗೆ ತುಸು ಕೋಪವೂ ಇದೆ.
ಒಂದೇ ಒಂದು ವಿದೇಶಿ ನೆಲದ ಶತಕ.... ರೋಹಿತ್ ಗೂ ಬೇಕು, ತಂಡಕ್ಕೂ ಬೇಕು,ನನ್ನಂತಹ ಹಿಟ್ ಮ್ಯಾನ್ ಅಭಿಮಾನಿಗಳಿಗಂತು ಅದು ತುರ್ತಾಗಿ ಬೇಕೆ ಬೇಕು ಮತ್ತು ಅದರದ್ದೊಂದು ಜರೂರತ್ತು ಬಹಳಷ್ಟು ಇದೆ.
ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡು ಕುಳಿತಿದ್ದ ಇಂಗ್ಲೆಂಡ್ ನ ಮಾಜಿ ಆಟಗಾರ ಮೈಕಲ್ ವಾನ್, ಇಂಗ್ಲೆಂಡ್ ಒಂದು ಪಂದ್ಯ ಗೆದ್ದ ಕೂಡಲೇ ಎಂದಿನಂತೆ ಮತ್ತದೇ ಹುರುಪಿನೊಂದಿಗೆ ತನ್ನ ಬಾಲ ಬಿಚ್ಚಿದ್ದಾನೆ. ಅದರಲ್ಲೂ ಆತ ವಿಶೇಷವಾಗಿ ರೋಹಿತ್ ಶರ್ಮನ ಬಗ್ಗೆಯೇ ಒಂದಷ್ಟು ಹೇಳಿದ್ದಾನೆ. ವಾನ್ ಪ್ರಕಾರ ರೋಹಿತ್ ಶರ್ಮ ಸ್ವಾರ್ಥಿ ಅಂತೆ, ಆತ ಕೇವಲ ಆತನಿಗೋಸ್ಕರ ಆಡುತ್ತಾನಂತೆ, ತನ್ನ ಎಂದಿನ ಲಯದಲ್ಲಿ ಆತ ಬ್ಯಾಟ್ ಬೀಸುತ್ತಿಲ್ಲವಂತೆ..ಎಂದು ಹೇಳುತ್ತಾನೆ ಈ ವಾನ್. ಇದು ಹೇಗೆ ಅಂದರೆ.. ಎಲ್ಲರೂ ಬೇಗ ಬೇಗ ಔಟಾಗಿ ಹೋಗುತ್ತಿದ್ದಾರೆ, ನೀನು ಯಾಕೆ ಮಾರ್ರೆ ಯಾವಾಗಲೂ ಮೊದಲು ಔಟಾಗುತ್ತಿದ್ದವನು ಇಲ್ಲೇಕೆ ಇನ್ನೂ ಔಟಾಗುತ್ತಿಲ್ಲ ಎಂಬಂತಿದೆ ವಾನ್ ನ ಮಾತು ಮತ್ತು ಅವನದ್ದೊಂದು ಮನಸ್ಥಿತಿ.
ಅಂದ ಹಾಗೆ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್ ರೇಟಿಂಗ್ ನಲ್ಲಿ ಇದೇ ಮೊದಲ ಬಾರಿಗೆ 5 ನೇ ಸ್ಥಾನಕ್ಕೆ ಏರಿದ್ದು,ಇದು ರೋಹಿತ್ ಶರ್ಮ ಜೀವನದ ಸರ್ವ ಶ್ರೇಷ್ಠ ಟೆಸ್ಟ್ ರೇಟಿಂಗ್ ಆಗಿದೆ. ಈ ಲಿಸ್ಟ್ ನಲ್ಲಿ ಇಂಗ್ಲೆಂಡ್ ನ ಜೋ ರೂಟ್ ಎಲ್ಲರಿಗಿಂತ ಮೇಲೆ ಅಂದರೆ ಮೊದಲ ಸ್ಥಾನದಲ್ಲಿ ಇದ್ದಾನೆ.ಕೊಹ್ಲಿ 6 ನೇ ಸ್ಥಾನದಲ್ಲಿದ್ದರೆ,ರೋಹಿತ್ ಸದ್ಯಕ್ಕೆ ಒಂದು ಸ್ಥಾನ ಮೇಲಕ್ಕೆ ಜಿಗಿದಿದ್ದಾನೆ.ನಿಜಕ್ಕೂ ಇದು ಭಾರತೀಯ ಆರಂಭಿಕ ಆಟಗಾರನೊರ್ವನ ಅತ್ಯುತ್ತಮ ಸಾಧನೆಯೇ ಸರಿ. ಅಭಿನಂದನೆಗಳು ರೋಹಿತ್ ಶರ್ಮ.
ನಮ್ಮ ಹಿರಿಯರು ಆಟಗಾರರು ಕೊಹ್ಲಿಗೂ ಒಂದಷ್ಟು ಕಿವಿಮಾತು ಹೇಳಿದ್ದು,ಪದೇ ಪದೇ ಆಫ್ ಸೈಡಿನ ಆಸೆ ಹುಟ್ಟಿಸುವ ಹಾಫ್ ವಾಲಿಗಳಿಗೆ ಡ್ರೈವ್ ಮಾಡಲು ಹೋಗಿ ಕೊಹ್ಲಿ ಔಟಾಗುತ್ತಿರುವುದಕ್ಕೆ,2004 ರಲ್ಲಿ ಆಸ್ಟ್ರೇಲಿಯದ ವಿರುದ್ಧ ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಒಂದೇ ಒಂದು ಆಫ್ ಸೈಡಿನಲ್ಲಿ ಡ್ರೈವ್ ಮಾಡದೇ ಗಳಿಸಿದ 241 ರನ್ನು ಗಳಿಸಿದ್ದನ್ನು ಕೊಹ್ಲಿಯ ಗಮನಕ್ಕೂ ಅವರೆಲ್ಲರೂ ತಂದಿದ್ದಾರೆ.
ಕೊಹ್ಲಿಗೂ ಇದು ಗೊತ್ತಿಲ್ಲ ಎಂದು ಅಲ್ಲ.ಆದರೆ ಒಬ್ಬ ಆಟಗಾರನಿಗೆ ಆತನ ಅತ್ಯಂತ ಇಷ್ಟದ ಶಾಟ್ ಆಡದಂತೆ ಅವನಿಗೆ ಅವನು ಸ್ವತಃ ನಿರ್ಬಂಧ ಹಾಕಿಕೊಳ್ಳುವುದು ನಿಜಕ್ಕೂ ಬಹಳಷ್ಟು ಕಷ್ಟವೇ. ಬಹುಶಃ ಅದಕ್ಕಾಗಿಯೇ ಸಚಿನ್ ಅಷ್ಟೊಂದು ಗ್ರೇಟ್ ಅನಿಸುವುದು.ನಿಮಗೂ ಗೊತ್ತಿರಲಿ ಸಚಿನ್ ಡ್ರೈವ್ ಗಳು ಕೂಡ ಕ್ರಿಕೆಟ್ ಜಗತ್ತಿನಲ್ಲಿ ಬಹಳಷ್ಟು ಸುಂದರವಾದದ್ದು. ಅದರಲ್ಲೂ ಆತನದ್ದೊಂದು ಸ್ಟ್ರೈಟ್ ಡ್ರೈವ್ ಗಳು ಪ್ರತೀ ಬಾರಿಯೂ ನೋಡುಗನಿಗೊಂದು ಆಹಾ ಮೂಮೆಂಟ್.
ಸಚಿನ್ ಬಿಡಿ ಆತ ಸಿಂಗಲ್ ರನ್ ತೆಗೆದರೂ ಚಂದ, ಢಿಫೆನ್ಸ್ ಮಾಡಿದರೂ ಚಂದ, ಬಾಲ್ ಆಡದೇ ಬಿಟ್ಟರೂ ಚಂದ.. ಅಷ್ಟು ಮಾತ್ರವಲ್ಲ ಆತ ಬೌಲ್ಡ್ ಆದರೂ ಅದು ಚಂದವೇ.ಅದಕ್ಕೆ ಕಾರಣವೂ ಇತ್ತು.ಇಂದಿಗೂ ವಿಶ್ವದ ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಗಳ ಸ್ಟ್ಯಾನ್ಸ್ ಗಳಲ್ಲಿ ಅಂದರೆ ಬ್ಯಾಟ್ ಹಿಡಿದು ನಿಲ್ಲುವ ಆ ಒಂದು ಭಂಗಿಯಲ್ಲಿ ಸಚಿನ್ ತೆಂಡುಲ್ಕರ್ ನದ್ದೇ ಶೈಲಿ ಹೆಚ್ಚು ಸಮರ್ಪಕವಾದದ್ದು ಮಾತ್ರವಲ್ಲ ಅತೀ ಸುಂದರವಾದದ್ದು ಕೂಡ ಹೌದಂತೆ.
ವಿಶ್ವದ ಕ್ರಿಕೆಟ್ ಆಟಗಾರರೆಲ್ಲರೂ ಸಚಿನ್ ಬ್ಯಾಟಿಂಗ್ ಅನ್ನು ಒಂದಲ್ಲ ಒಂದು ಬಾರಿ ಆದರೂ ಡಿಕೋಡ್ ಮಾಡಿದವರೇ ಬಿಡಿ. ಕ್ರಿಕೆಟ್ ಕೋಚ್ ಗಳು ಪ್ರತೀ ಬಾರಿಯೂ ಬ್ಯಾಟ್ ಹಿಡಿದು ಉದಾಹರಣೆ ಗಳನ್ನು ಕೊಡಲು ನಿಂತಾಗ ಅವರಿಗೆ ನೆನಪಾಗುವ ಬ್ಯಾಟ್ಸ್‌ಮನ್ ಗಳ ಹೆಸರಿನಲ್ಲಿ ಹೆಚ್ಚಾಗಿ ಸಚಿನ್ ತೆಂಡುಲ್ಕರ್ ಇದ್ದೇ ಇರುತ್ತಾನೆ.ಅದರಲ್ಲೂ ನಮ್ಮ ಸೆಹ್ವಾಗ್ ಈಗೀನ ಕೊಹ್ಲಿ, ರೋಹಿತ್ ಗೂ ಕೂಡ ಸಚಿನ್ ಬ್ಯಾಟಿಂಗೇ ಎಂದಿಗೂ ಆದರ್ಶವಾಗಿ ಇದ್ದದ್ದು.
ಅಂದ ಹಾಗೆ ಈ ಎಲ್ಲದರ ನಡುವೆ ಸೌತ್ ಆಫ್ರಿಕಾದ ವೇಗದ ಬೌಲರ್ 38 ರ ಹರೆಯದ ಡೇಲ್ ಸ್ಟೈನ್ನ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.ಆಲನ್ ಡೊನಾಲ್ಡ್, ಶಾನ್ ಪೋಲಕ್ ನಂತರ ಹರಿಣಗಳು ವಿಶ್ವ ಕ್ರಿಕೆಟ್ ಗೆ ಕೊಟ್ಟ ಒಬ್ಬ ಶ್ರೇಷ್ಠ ವೇಗದ ಬೌಲರ್ ಅಂದರೆ ಅದು ಖಂಡಿತವಾಗಿಯೂ ಈ ಡೇಲ್ ಸ್ಟೈನ್. ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಹೊಂದಿರುವ ಡೇಲ್ ಸ್ಟೈನ್ 2013 ರಲ್ಲಿ ವಿಸ್ಡನ್ ಕ್ರಿಕೇಟರ್ ಆಫ್ ದಿ ಇಯರ್ ಪ್ರಶಸ್ತಿಗೂ ಭಾಜನರಾಗಿದ್ದರು.
ಡೇಲ್ ಸ್ಟೈನ್ ಐಸಿಸಿಯ ಟೆಸ್ಟ್ ಬೌಲಿಂಗ್ ರೇಟಿಂಗ್ ನಲ್ಲಿ ಅತೀ ಹೆಚ್ಚು ಕಾಲ ಅಂದರೆ 263 ವಾರಗಳ ಕಾಲ(2008- 2014) ಮೊದಲ ಸ್ಥಾನದಲ್ಲಿಯೇ ನಿರಂತರವಾಗಿದ್ದುಕೊಂಡು ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ವಿಶಿಷ್ಟ ಸಾಧನೆಯಲ್ಲಿ ಮುತ್ತಯ್ಯ ಮುರಳೀಧರ್ ಡೆಲ್ ಸ್ಟೈನ್ ಗಿಂತ ಹಿಂದೆ ಇದ್ದು ಅಂದರೆ 214 ವಾರಗಳ ಕಾಲ ಮೊದಲ ಸ್ಥಾನದಲ್ಲಿದ್ದರು.ಸೌತ್ ಆಫ್ರಿಕಾದ ಪರವಾಗಿ ಅತೀ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಕೂಡ ಸ್ಟೈನ್ ಹೆಸರಲ್ಲಿ ಇದೆ. 93 ಟೆಸ್ಟ್ ಗಳಿಂದ ಸ್ಟೈನ್ ಇಲ್ಲಿಯವರೆಗೆ 439 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ವಿಶ್ವ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ "ವೇಗದ ಬೌಲರ್" ಗಳ ಲಿಸ್ಟ್ ನಲ್ಲಿ ವೆಸ್ಟ್ ಇಂಡೀಸ್ ನ ಕೊಟ್ನಿ ವಾಲ್ಶ್ ನಂತರದ ಸ್ಥಾನದಲ್ಲಿ ಅಂದರೆ 5 ನೇ ಸ್ಥಾನದಲ್ಲಿ ಈ ಡೇಲ್ ಸ್ಟೈನ್ ಇದ್ದಾರೆ. ಸ್ಪಿನ್ನರ್ ಒಬ್ಬ ಕ್ರಿಕೆಟ್ ಜಗತ್ತನ್ನು ಗಿರಕಿ ಹೊಡೆಸುವುದಕ್ಕೂ ವೇಗದ ಬೌಲರ್ ಒಬ್ಬ ಆ ಜಗತ್ತಿನಲ್ಲಿ ದಾಂಧಲೆ ಎಬ್ಬಿಸಿ ಇಷ್ಟೊಂದು ಸಾಧನೆ ಮಾಡಿ ಜೋಳಿಗೆಯಲ್ಲಿ ವಿಕೆಟ್ ತುಂಬಿಸಿಕೊಂಡು ಹೊರ ನಡೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೇಗದ ಬೌಲಿಂಗ್ ಅತಿಯಾದ ಪರಿಶ್ರಮ ಹಾಗೂ ಫಿಟ್ ನೆಸ್ ಬೇಡುತ್ತದೆ. ಅಂದ ಹಾಗೆ ಈ ವೇಗದ ಬೌಲರ್ ಗಳ ಅತೀ ಹೆಚ್ಚಿನ ವಿಕೆಟ್ ಬೇಟೆಯ ಲಿಸ್ಟ್ ನಲ್ಲಿ 630 ವಿಕೆಟ್ ಗಳೊಂದಿಗೆ ಜಿಮ್ಮಿ ಆಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ.ಎಲ್ಲಾ ಮಾದರಿಯ ಬೌಲಿಂಗ್ ನಲ್ಲಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರ್ 800 ವಿಕೆಟ್ ಗಳೊಂದಿಗೆ ಬಹಳ ಎತ್ತರದ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ಹಾಗೂ ರೋಯಲ್ ಚ್ಯಾಲೆಂಜರ್ಸ್ ಬೆಂಗಳೂರು ಪರವಾಗಿ ಸ್ಟೈನ್ ಆಟವಾಡಿದ್ದರು.ನಮ್ಮ ಕ್ರಿಕೆಟ್ ನೆನಪುಗಳಲ್ಲಿ ಅವರು ಯಾವತ್ತೂ ಇರುತ್ತಾರೆ. ನಮ್ಮೆಲ್ಲರನ್ನು ಸುಮಾರು 16 ವರ್ಷಗಳ ಕಾಲ ನಿರಂತರವಾಗಿ ತಮ್ಮ ಬೆಂಕಿ ಉಂಡೆಗಳಂತಹ ಬೌಲಿಂಗ್ ನಿಂದ, ವೇಗದ ಬೌಲಿಂಗ್ ನ ಆ ರನ್ ಅಫ್ ನಿಂದ, ಹಾಗೂ ಕೆಲವೊಮ್ಮೆ ತಮ್ಮ ವಿಶಿಷ್ಟವಾದ ನಗುವಿನಿಂದ ಗಮನ ಸೆಳೆದು ಎಲ್ಲರನ್ನೂ ಮನರಂಜಿಸಿದ್ದಕ್ಕಾಗಿ ವಿಶೇಷವಾದ ಅಭಿನಂದನೆಗಳು ನಿಮಗೆ ಡೇಲ್ ವಿಲ್ಲೆಂ ಸ್ಟೈನ್.
ಇದೇ ರೀತಿ ಭಾರತದ ಸ್ಟುವರ್ಟ್ ಬಿನ್ನಿ ಅವರು ಕೂಡ ಎಲ್ಲಾ ಮಾದರಿ ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಪಂದ್ಯವೊಂದರಲ್ಲಿ ಭಾರತದ ಪರವಾದ ಅತ್ಯುತ್ತಮ ಬೌಲಿಂಗ್ ಸಾಧನೆ ಈ ಕರ್ನಾಟಕದ ಆಟಗಾರನ ಹೆಸರಿನಲ್ಲಿದ್ದು, 2014 ರಲ್ಲಿ ಬಾಂಗ್ಲಾದೇಶ ವಿರುದ್ಧ 4 ರನ್ನುಗಳನ್ನು ನೀಡಿ 6 ವಿಕೆಟ್ ಗಳನ್ನು ಅಂದು ಬಿನ್ನಿ ಕಬಳಿಸಿದ್ದರು. ವಿಶ್ವ ಕ್ರಿಕೆಟ್ ನಲ್ಲಿ ಈ ದಾಖಲೆ ಶ್ರೀಲಂಕಾದ 'ವರ್ಣಕುಲಸುರಿಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂಡ ವಾಸ್ ' ಅವರ ಹೆಸರಲ್ಲಿದ್ದು,ಜಿಂಬಾಬ್ವೆ ವಿರುದ್ಧ 2001 ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಚಾಮಿಂಡ ವಾಸ್ ಅವರು 19 ರನ್ನುಗಳಿಗೆ "8" ವಿಕೆಟ್ ಗಳನ್ನು ಕಬಳಿಸಿದ್ದಾರೆ.ಅದು ಇಲ್ಲಿಯವರೆಗೂ ಏಕದಿನ ಪಂದ್ಯದಲ್ಲಿ ದಾಖಲೆಯಾಗಿಯೇ ಉಳಿದಿದೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ಪರವಾಗಿ ಬಿನ್ನಿ ಆಡಿದ್ದರು.2014 ರಿಂದ 2016 ರವರೆಗೆ 2 ವರ್ಷಗಳ ಕಾಲ ಭಾರತದ ರಾಷ್ಟ್ರೀಯ ತಂಡದ ಪರವಾಗಿ ಆಡಿ ಒಂದಷ್ಟು ರಂಜಿಸಿದ್ದಕ್ಕಾಗಿ ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ ನಿಮಗೂ ಕೂಡ ಅಭಿನಂದನೆಗಳು.
ಅಂದ ಹಾಗೆ ಮೊನ್ನೆ ಮೂರನೇ ಟೆಸ್ಟ್ ಪಂದ್ಯದ "ಕಿರು ಪರೀಕ್ಷೆ " ಬರಹದಲ್ಲಿ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದ್ದರು..
"ಒಂದು ಇನ್ನಿಂಗ್ಸ್ ನಲ್ಲಿ ಒಂದು ತಂಡ ಸಾಧಾರಣ ಎಷ್ಟು ಓವರ್ ಗಳನ್ನು ಆಡಬಹುದು ?? ಅದಕ್ಕೆ ಮಿತಿ ಏನಾದರೂ ಇದೆಯಾ ??? "
ನೋಡಿ ಇದು ಬಹಳ ಸರಳ ಪ್ರಶ್ನೆಯಂತೆ ಕಂಡರೂ,ಇದರ ಹಿಂದೆ ಹೋದಾಗ ಕೆಲವೊಂದಷ್ಟು ಆಸಕ್ತಿಕರ ವಿಷಯ ಸಿಗುತ್ತಾ ಹೋಗುತ್ತವೆ.ಇವುಗಳೆಲ್ಲಾ ಗೊತ್ತಿದ್ದರೆ ಚಂದ.ಇದು ಅಂತ ಅಲ್ಲ. ಯಾವುದೇ ಆಟವಾಗಲಿ ಆ ಆಟದ ಬಗ್ಗೆ ಅದರ ನಿಯಮಗಳ ಬಗ್ಗೆ ಒಂದಷ್ಟು ತಿಳಿದುಕೊಂಡರಷ್ಟೇ ಆ ಆಟ ನಮ್ಮದಾಗುವುದು. ನಮಗೆ ಫುಟ್ಬಾಲ್ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಹೋದರೆ ಬಲು ಸುಂದರ ಆಟ ಫುಟ್ಬಾಲ್ ನಮಗೆ ಎಂದಿಗೂ ರುಚಿಸಲು ಸಾಧ್ಯವೇ ಇಲ್ಲ.ಅದೇ ರೀತಿ ಟೆನ್ನಿಸ್, ಗಾಲ್ಫ್, ಹಾಕಿಯಂತಹ ಆಟಗಳು ಕೂಡ ಹಾಗೆಯೇ.
ಪ್ರಶ್ನೆಗಳು,ಕುತೂಹಲಗಳು,ಜಿಜ್ಞಾಸೆಗಳು ಬೇಕು.. ಆಗ ಮಾತ್ರ ಏನೂ ತಿಳಿದುಕೊಳ್ಳದೇ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಏನಾದರೊಂದು ತಕ್ಕ ಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯ.
ಈಗ ಮತ್ತೆ ಗೆಳೆಯರು ಕೇಳಿದ ಪ್ರಶ್ನೆಗೆ ಬರುವ.ಒಂದು ಇನ್ನಿಂಗ್ಸ್ ನಲ್ಲಿ ಇಷ್ಟೇ ಓವರ್ ಆಡಬೇಕು ಎಂಬುದಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಖಂಡಿತವಾಗಿಯೂ ಯಾವುದೇ ಮಿತಿ ಇಲ್ಲ.ಅದು ಕೇವಲ ಏಕದಿನ(50 overs per Innings) ಹಾಗೂ ಟಿ-ಟ್ವೆಂಟಿ(20 overs per Innings)ಯಲ್ಲಿ ಮಾತ್ರ ಇರುವುದು.
ಆದರೆ ಐದು ದಿನಗಳ ಟೆಸ್ಟ್ ಕ್ರಿಕೆಟ್ ನಲ್ಲಿ ದಿನಕ್ಕೆ 90 ಓವರ್ ಗಳನ್ನು ಕಡ್ಡಾಯವಾಗಿ ಆಡಲೇ ಬೇಕು ಎಂಬ ನಿಯಮವಿದೆ.ಕೆಲವೊಮ್ಮೆ ಮಳೆ, ಬ್ಯಾಡ್ ಲೈಟ್, ತಂಡಗಳ ಸ್ಲೋ ಓವರ್ ರೇಟ್ ಬೌಲಿಂಗ್ ಕಾರಣಗಳಿಂದ ಅದು ಸಾಧ್ಯ ಆಗುವುದಿಲ್ಲ.ಆದರೆ ದಿನಕ್ಕೆ 90 ಓವರ್ ಆಡಬೇಕು ಎಂಬ ನಿಯಮ ಅಂತು ಖಂಡಿತವಾಗಿಯೂ ಇದೆ.
ಪ್ರತೀ ತಂಡಕ್ಕೆ ಎರಡು ಇನ್ನಿಂಗ್ಸ್ ಆಡಲು ಇರುವುದರಿಂದ ಹಾಗೂ ಪಂದ್ಯದ ಫಲಿತಾಂಶ ಹಿತದೃಷ್ಟಿಯಿಂದ ಪ್ರತೀ ತಂಡಗಳು ಅವರುಗಳಿಗೆ ಅನುಕೂಲ ಆಗುವಷ್ಟು ಓವರ್ ಗಳನ್ನು ಅವರ ಇನ್ನಿಂಗ್ಸ್ ನಲ್ಲಿ ಆಡಿ ರನ್ ಗಳಿಸುತ್ತಾರೆ.ಹಾಗಾಗಿ ತಂಡಗಳಿಗೆ ಪ್ರತೀ ಇನ್ನಿಂಗ್ಸ್ ನಲ್ಲಿ ಇಷ್ಟೇ ಓವರ್ ಆಡಬೇಕು ಎಂಬ ನಿಯಮ ಟೆಸ್ಟ್ ನಲ್ಲಿ ಇಲ್ಲ.
ಈ ಪ್ರಶ್ನೆಯನ್ನೇ ವಿಸ್ತರಿಸಿಕೊಂಡು ಇನ್ನೊಂದಷ್ಟು ಆಸಕ್ತಿಕರ ವಿಷಯಗಳ ಬಗ್ಗೆಯೂ ತಿಳಿಯೋಣ.ಅವರ ಪ್ರಶ್ನೆ ನಮ್ಮಲ್ಲಿ ಬೇರೆ ಪ್ರಶ್ನೆಗಳ ಹುಟ್ಟಿಗೂ ಕಾರಣವಾಗುವುದರ ಜೊತೆಗೆ ನಮಗೆ ಇನ್ನೊಂದಿಷ್ಟು ಕ್ರಿಕೆಟ್ ಹರಟೆ ಹೊಡೆಯಲು ನೆಪ ಆಗುವುದಾದರೆ ನನಗಂತು ಸಂತೋಷವೇ.
ಹಾಗಾದರೆ ಬೌಲರ್ ಒಬ್ಬ ಟೆಸ್ಟ್ ಪಂದ್ಯದಲ್ಲಿ ಇಷ್ಟೇ ಓವರ್ ಗಳನ್ನು ಎಸೆಯಬೇಕು ಎಂಬ ಮಿತಿ ಏನಾದರೂ ಇದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ಅದಕ್ಕೆ ಉತ್ತರ ಈ ಕೆಳಗಿನಂತೆ ಕೊಡಬಹುದು.
ನೋಡಿ ಏಕದಿನ ಹಾಗೂ ಟಿ-ಟ್ವೆಂಟಿ ಯಲ್ಲಿ ಯಾವುದೇ ಒಬ್ಬ ಬೌಲರ್ ಪಂದ್ಯದ ಒಟ್ಟು ಓವರುಗಳ 20% ಗಿಂತ ಹೆಚ್ಚಿನ ಓವರ್ ಬೌಲಿಂಗ್ ಮಾಡುವಂತಿಲ್ಲ. ಹಾಗಾಗಿ ಏಕದಿನದಲ್ಲಿ ಒಬ್ಬ ಬೌಲರ್ ಗರಿಷ್ಠ 10 ಓವರ್ ಹಾಗೂ ಟಿ-ಟ್ವೆಂಟಿಯಲ್ಲಿ ಗರಿಷ್ಟ 4 ಓವರ್ ಗಳನ್ನು ಮಾತ್ರ ಎಸೆಯಬಹುದು.
ಇನ್ನು ಟೆಸ್ಟ್ ಪಂದ್ಯದ ಬೌಲಿಂಗ್ ಗೆ ಬರುವ.
ಖಂಡಿತವಾಗಿಯೂ ಟೆಸ್ಟ್ ಪಂದ್ಯದಲ್ಲಿ ಯಾವುದೇ ಒಬ್ಬ ಬೌಲರ್ ಎಷ್ಟು ಬೇಕಾದರೂ ಓವರ್ ಗಳನ್ನು ಎಸೆಯಬಹುದು ಅಂತಹ ಯಾವುದೇ ನಿರ್ಬಂಧ ಟೆಸ್ಟ್ ನಲ್ಲಿ ಇಲ್ಲ.
ಆದರೂ ಸುಮ್ಮನೆ ಒಂದು ಲೆಕ್ಕಾಚಾರ ಮಾಡುವುದಾದರೆ ಒಬ್ಬ ಬೌಲರ್ ಟೆಸ್ಟ್ ಪಂದ್ಯದ ಒಂದು ದಿನ ಗರಿಷ್ಠ 45 ಓವರ್ ಗಳನ್ನು ಎಸೆಯಬಹುದು. ಟೆಸ್ಟ್ ನಲ್ಲಿ ದಿನವೊಂದಕ್ಕೆ 90 ಓವರ್ ಇರುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಒಬ್ಬ ಬೌಲರ್ ಗೆ 90 ಓವರ್ ಎಸೆಯಲು ಕ್ರಿಕೆಟ್ ನಿಯಮದ ಪ್ರಕಾರ ಅವಕಾಶವಿಲ್ಲ. ಅಂದರೆ ಯಾವುದೇ ಬೌಲರ್ ಒಂದರ ನಂತರ ಒಂದು ಸತತ ಓವರ್ ಗಳನ್ನು (Consecutive Overs) ಎಸೆಯಲು ಯಾವುದೇ ಮಾದರಿಯ ಕ್ರಿಕೆಟ್ ನಲ್ಲಿ ಅವಕಾಶವಿಲ್ಲ.ಇದು ಕೂಡ ಎಲ್ಲರಿಗೂ ಗೊತ್ತಿರುವಂತಹದ್ದೇ.
ಈ ರೀತಿಯಾಗಿ ಸತತ ಓವರ್ ಗಳನ್ನೂ ಎಸೆಯದೇ ನಿರಂತರವಾಗಿ ಒಂದು ಓವರ್ ಬಿಟ್ಟು ಒಂದು ಓವರ್ ಬೌಲಿಂಗ್ ಮಾಡಿದರೆ 90 ಓವರ್ ಗಳ ಒಂದು ದಿನದ ಆಟದಲ್ಲಿ ಬೌಲರ್ ಒಬ್ಬ 45 ಮ್ಯಾಕ್ಸಿಮಮ್ ಓವರ್ ಗಳನ್ನು ಎಸೆಯಬಹುದು.ಇನ್ನೂ ಮುಂದಕ್ಕೆ ಲೆಕ್ಕ ಹಾಕಿದರೆ 5 ದಿನಗಳ ಪಂದ್ಯದಲ್ಲಿ ದಿನಕ್ಕೆ 45 ಓವರ್ ಗಳಂತೆ 225 ಓವರ್ ಗಳನ್ನು ಕೇವಲ ಒಬ್ಬ ಬೌಲರೇ ಹಾಗೇ ಎಸೆದು ಬಿಡಬಹುದು!
ಎಸೆದು ಬಿಡಬಹುದು ಎಂದು ಅಷ್ಟೇ ಹೇಳಿದ್ದು ಆದರೆ ಎಸೆಯಲು ಸಾಧ್ಯವೂ ಇಲ್ಲ ಅಂತಹ ಅವಕಾಶವೂ ಇಲ್ಲ. ಏಕೆಂದರೆ ಈ ರೀತಿ 225 ಓವರ್ ಗಳನ್ನು ಒಬ್ಬ ಬೌಲರ್ ಎಸೆಯಬೇಕಾದರೆ ಎದುರಾಳಿ ತಂಡ ಟೆಸ್ಟ್ ಪಂದ್ಯದ 5 ದಿನವೂ ಬ್ಯಾಟಿಂಗ್ ಮಾಡಬೇಕು..ಮತ್ತು ಬೌಲಿಂಗ್ ತಂಡ ಐದೂ ದಿನವೂ ನೀರು ಕುಡಿದು ಎದ್ದು ಬಿದ್ದು ಹುಚ್ಚು ಹಿಡಿದಂತೆ ಬೌಲಿಂಗ್ ಮಾಡುತ್ತಲೇ ಇರಬೇಕು.. !!
225 ಓವರ್ ಗಳ ಕಲ್ಪನೆ ಇದೆಲ್ಲಾ ಜಸ್ಟ್ ಲೆಕ್ಕಾಚಾರಕ್ಕೆ ಅಷ್ಟೇ ಸೀಮಿತ.ಎಂದಿಗೂ ಸಾಧ್ಯವಾಗದು ಮಾತು.ಅದೇ ರೀತಿ ಒಂದೇ ದಿನ 45 ಓವರ್ ಎಸೆಯುವುದು ಕೂಡ ಸಾಮಾನ್ಯ ಮನುಷ್ಯರಿಗಂತು ಸಾಧ್ಯವಾಗ ಮಾತು.ಅದಕ್ಕಂತು ಸಿಕ್ಕಾಪಟ್ಟೆ ಎನರ್ಜಿಯೂ ಬೇಕು ಮತ್ತು ಆ ಬೌಲರ್ ಕೂಡ ಅಷ್ಟೇ ಅಸಾಮಾನ್ಯನೇ ಆಗಿರಬೇಕು.
ಆದರೆ ಇಲ್ಲೊಂದು ವಿಷಯ ಇದೆ. ವೇಗದ ಬೌಲರ್ ಗೆ ಇದು ನಿಜಕ್ಕೂ ಆಗದೇ ಇರಬಹುದು.ಆದರೆ ಸ್ಪಿನ್ ಬೌಲರ್ ಮನಸ್ಸು ಮಾಡಿದರೆ ತಕ್ಕ ಮಟ್ಟಿಗೆ ಎಲ್ಲರಿಗಿಂತ ಹೆಚ್ಚು ನಿರಂತರವಾಗಿ ಬೌಲಿಂಗ್ ಮಾಡಬಹುದು.
ಅದೇ ರೀತಿ ಯಾವುದೇ ತಂಡದ ನಾಯಕ,ಒಬ್ಬನೇ ಬೌಲರ್ ಗೆ ನಿರಂತರವಾಗಿ ಬೌಲಿಂಗ್ ಮಾಡಲು ಕೊಡುವುದೂ ಸಹ ಇಲ್ಲ.
ಆದರೂ....ಈಗ ನಿಮಗೆ ಮೂಡಬೇಕಾದ ಪ್ರಶ್ನೆ,ಯಾರಾದರೂ ಈ ರೀತಿ ನಿರಂತರವಾಗಿ ಅತೀ ಹೆಚ್ಚು ಓವರ್ ಗಳನ್ನು ಎಸೆದವರು ಇದ್ದಾರಾ ? ಎಂದು.
ಹೌದು ಒಬ್ಬರು ಇದ್ದಾರೆ.ವಿಶೇಷ ಎಂದರೆ ಅವರು ಭಾರತೀಯರೇ ಆಗಿದ್ದಾರೆ. ನರೇಂದ್ರ ಹಿರ್ವಾನಿ ಎಂಬುವವರು 1990 ರಲ್ಲಿ ಆಂಗ್ಲರ ವಿರುದ್ಧ ಓವಲ್ ಮೈದಾನದಲ್ಲಿ ಈ ರೀತಿಯಾಗಿ 59 ಓವರ್ ನಿರಂತರವಾಗಿ (59 overs unchanged without a break) ಬೌಲಿಂಗ್ ಮಾಡಿ ಇಂದಿಗೂ ವಿಶ್ವ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಇರಿಸಿಕೊಂಡಿದ್ದಾರೆ.ಅವರು ಆ ಪಂದ್ಯದ ಕೊನೆಯ ದಿನವಂತು ಹೆಚ್ಚು ಕಡಿಮೆ 40 ಓವರ್ ಗಳನ್ನು ಒಬ್ಬರೇ ಹಾಕಿದ್ದರಂತೆ!
ಇನ್ನೊಂದು ಪ್ರಶ್ನೆಯೂ ಮೂಡಿದರೆ ಚಂದ.ಹಾಗಾದರೆ ಒಂದು ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ಓವರ್ ಬೌಲಿಂಗ್ ಮಾಡಿದ ಬೌಲರ್ ಯಾರು?
ಇತ್ತೀಚಿಗೆ ಅಪ್ಘಾನಿಸ್ತಾನ ದ ರಶೀದ್ ಖಾನ್ ಜಿಂಬಾಬ್ವೆಯ ವಿರುದ್ಧದ ಪಂದ್ಯದಲ್ಲಿ ಸುಮಾರು 99.2 ಓವರ್ ಗಳನ್ನು ಎಸೆದು ಈ ಶತಮಾನದ ದಾಖಲೆಯನ್ನು ಅವನ ಹೆಸರಿಗೆ ಬರೆಸಿಕೊಂಡಿದ್ದಾನೆ.ಎಲ್ಲರಿಗಿಂತ ಹೆಚ್ಚು ಶ್ರೀಲಂಕಾದ ಮುತ್ತಯ್ಯ ಮುರಳೀಧರ್ 1998 ರಲ್ಲಿ ಇಂಗ್ಲೆಂಡ್ ವಿರುದ್ಧ 113.5 ಓವರ್ ಗಳನ್ನು ಪಂದ್ಯವೊಂದರಲ್ಲಿ ಒಬ್ಬರೇ ಎಸೆದಿದ್ದಾರೆ!
ಕೊನೆಯದ್ದೊಂದು ಪ್ರಶ್ನೆ... ಹಾಗಾದರೆ ಇಲ್ಲಿಯವರೆಗೆ ಟೆಸ್ಟ್ ಇತಿಹಾಸದಲ್ಲಿಯೇ(ಎಲ್ಲಾ ಪಂದ್ಯ ಸೇರಿಸಿ)ಅತೀ ಹೆಚ್ಚು ಓವರ್ ಗಳನ್ನು ಎಸೆದವರು ಯಾರು? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರ್ ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್ ನಲ್ಲಿ ಒಟ್ಟು 7,339. 5 ಓವರ್, ಭಾರತದ ಅನಿಲ್ ಕುಂಬ್ಳೆ 6,808.2 ಓವರ್,ಆಸ್ಟ್ರೇಲಿಯಾದ ಶೇನ್ ವಾರ್ನ್ 6,784. 1 ಓವರ್ ಹಾಗೂ ಸದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿರುವ ಜಿಮ್ಮಿ ಆಂಡರ್ಸನ್ 5908 + ಓವರ್ ಗಳನ್ನು ಬೌಲಿಂಗ್ ಮಾಡಿದ್ದಾರೆ.ಜಿಮ್ಮಿಯ ಓವರ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಬಿಡಿ.
ಇನ್ನೂ ಹುಡುಕುತ್ತಾ ಹೋದರೆ ರಾಶಿ ರಾಶಿ ಆಸಕ್ತಿಕರ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಅದಕ್ಕೊಂದು ಸಮರ್ಪಕವಾದ ಉತ್ತರವನ್ನು ಸಹ ನಾವು ಕಂಡುಹುಡುಕುತ್ತಾ ಹೋಗಬಹುದು.ನಿಜವಾಗಿಯೂ ಇದೆಲ್ಲ ಭಯಂಕರ ಇಂಟ್ರೆಸ್ಟಿಂಗ್ ವಿಷಯ.ಅಂದ ಹಾಗೆ ಸದ್ಯಕ್ಕೆ ಇಷ್ಟು ಸಾಕು ಅಂತ ಅಂದುಕೊಳ್ಳುತ್ತಾನೆ.
ಅಂದ ಹಾಗೆ ಇವತ್ತು 4 ನೇ ಟೆಸ್ಟ್ ಪಂದ್ಯ.
ಹೌದು 5 ಪಂದ್ಯಗಳ ಭಾರತ ಮತ್ತು ಇಂಗ್ಲೆಂಡ್ ಸರಣಿಯ 4 ನೇ ಟೆಸ್ಟ್ ಪಂದ್ಯ ಇಂದು ನಡೆಯಲಿದೆ.ಸದ್ಯಕ್ಕೆ ಸರಣಿ 1-1 ರಿಂದ ಸಮಬಲದಲ್ಲಿದೆ.
ಇವತ್ತಿನ ಈ ಪಂದ್ಯ ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ. ಇದು ಲಂಡನ್ ನ ಎರಡನೆಯ ಮೈದಾನ.ಲಂಡನ್ ನ ಮತ್ತೊಂದು ಮೈದಾನ ಎಂದರೆ ಅದು ಹೋಮ್ ಆಫ್ ಕ್ರಿಕೆಟ್ ಎಂದೇ ಗುರುತಿಸಿಕೊಂಡಿರುವ ಲಾರ್ಡ್ಸ್ ಮೈದಾನ.
ಓವಲ್ ಬಗ್ಗೆ ಹೇಳುವಾಗ ಇನ್ನೊಂದು ಓವಲ್ ಮೈದಾನವೂ ರಪ್ಪ ನೆನಪಾಗಿ ಬಿಡುವುದು.ಅದು ವೆಸ್ಟ್ ಇಂಡೀಸ್‌ನ ಕೆನ್ಸಿಂಗ್ಟನ್ ಓವಲ್. ಆದರೆ ಇಂಗ್ಲೆಂಡ್ ನಲ್ಲಿರುವುದು ಕೆನ್ನಿಂಗ್ಟನ್ ಒವಲ್. ಕಿನ್ನಾರ ಓವಲ್ ಅಂತ ಮಲೇಷ್ಯಾದ ಕೌಲಾಲಂಪುರ್ ನಲ್ಲೂ ಒಂದು ಮೈದಾನವಿದೆ.ಅಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿದೆ.
ಈ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ ಮೈದಾನ ಸರ್ರೆ ಕ್ರಿಕೆಟ್ ಕೌಂಟಿಯ ಹಿತ್ತಿಲು ಆಗಿದೆ. ಸದ್ಯದ ಆಂಗ್ಲರ ತಂಡದಲ್ಲಿರುವ ಸ್ಯಾಮ್ ಕರನ್ ಹಾಗೂ ರೋರಿ ಬರ್ನ್ಸ್ ಅವರಿಗೆ ಈ ಮೈದಾನ ಅವರದ್ದೊಂದು ಹೋಮ್ ಗ್ರೌಂಡ್.ಹಾಗಾಗಿ ಅವರಿಗೆ ಒಂದಿಷ್ಟು ಹೆಚ್ಚಿನ ಆತ್ಮವಿಶ್ವಾಸ ಎಂದಿನಂತೆ ಇಲ್ಲಿ ಆಡುವಾಗ ದೊರೆಯಲಿದೆ.ಹಿಂದಿನ ಪಂದ್ಯದಲ್ಲಿ ಯಾರ್ಕ್ ಶೈರ್ ನ ಲೀಡ್ಸ್ ಮೈದಾನದಲ್ಲಿ,ಜೋ ರೂಟ್ ಅವನದ್ದೊಂದು ಆ ತವರು ಮೈದಾನದಲ್ಲಿ ಯಾವ ರೀತಿ ಆಡಿದ್ದ ಎಂದು ಎಲ್ಲರಿಗೂ ಗೊತ್ತೇ ಇದೆ.ಆತ ಬಿಡಿ ಯಾವ ಮೈದಾನದಲ್ಲಿಯೂ ಹಾಗೆಯೇ ಆಡಬಲ್ಲ.
ಅದೇ ರೀತಿ ಇನ್ನೊಂದು ಕೂಡ ನಮಗೆ ನೆನಪಿರಬೇಕು.ಈ ಸರಣಿಗೂ ಮೊದಲು ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಆಡಿದ್ದ ಆರ್. ಅಶ್ವಿನ್ ಸರ್ರೆ ಕೌಂಟಿಯ ಪರವಾಗಿಯೇ ಆಡಿ, ಅದರಲ್ಲೂ ಇದೇ ಓವಲ್ ಮೈದಾನದಲ್ಲಿಯೇ ಆಡಿ 27 ರನ್ನುಗಳಿಗೆ 6 ವಿಕೆಟ್ ಗಳಿಸಿ ಬಿಟ್ಟಿದ್ದಾನೆ.
ಆಂಗ್ಲರ ತಂಡದಲ್ಲಿ ಇಂದು ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ವಿಕೆಟ್ ಕೀಪರ್ ಬಟ್ಲರ್ ತಮ್ಮ ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುವುದರಿಂದ ಅವರು ಈ ಟೆಸ್ಟ್ ನಲ್ಲಿ ಆಡುತ್ತಿಲ್ಲ. ಹಾಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಜಾನಿ ಬೆರ್ಸ್ಟೋ ಹೊರಲಿದ್ದಾರೆ.ಬಟ್ಲರ್ ಜಾಗದಲ್ಲಿ ಡಾನ್ ಲಾರೆನ್ಸ್ ಇಲ್ಲವೇ ಓಲಿ ಪೋಪ್ ಆಡಲಿದ್ದಾರೆ. ಇದರಲ್ಲಿ ಓಲಿ ಪೋಪ್ ಸರ್ರೆಯ ಕೌಂಟಿಯ ಆಟಗಾರ ಆಗಿದ್ದು ಆತನಿಗೂ ಸಹ ಓವಲ್ ಮೈದಾನ ಅವನದ್ದೊಂದು ಬ್ಯಾಕ್ ಯ್ಯಾರ್ಡ್ ಆಗಿದೆ. ಆದರೆ ಅವರಿಬ್ಬರಲ್ಲಿ ಯಾರೂ ಆಡುತ್ತಾರೆ ಎಂಬುದು ಇಂಗ್ಲೆಂಡ್ ಗೆ ಬಿಟ್ಟ ವಿಷಯವಾಗಿದೆ.
ಇಂಗ್ಲೆಡ್ ಆಂಡರ್ಸನ್ ಗೆ ವಿಶ್ರಾಂತಿ ನೀಡಿದರೂ ನೀಡಬಹುದು. ಇಲ್ಲದಿದ್ದರೆ ಈ ಪಂದ್ಯದಲ್ಲಿ ಆಡಿಸಿ ಕೊನೆಯ ಪಂದ್ಯಕ್ಕೆ ವಿಶ್ರಾಂತಿ ನೀಡುವ ಮನಸ್ಸು ಆಂಗ್ಲರು ಮಾಡಬಹುದು. ಆದರೂ ಅವರ ಬೌಲಿಂಗ್ ನಲ್ಲಿ ಒಂದಿಷ್ಟು ಬದಲಾವಣೆ ಖಂಡಿತವಾಗಿಯೂ ಆಗಲಿದೆ. ವಾರ್ವಿಕ್ ಶೈರ್ ನ ಕ್ರಿಸ್ ವೋಕ್ಸ್ ಮತ್ತು ಗಾಯಗೊಂಡು ಮೂರನೇ ಪಂದ್ಯ ಆಡದೇ ಉಳಿದ ಮಾರ್ಕ್ ವುಡ್ ಆಡುವ ಸಾಧ್ಯತೆಗಳಿವೆ. ಹಾಗೆ ಆದರೆ ಸ್ಯಾಮ್ ಕರನ್ ಮತ್ತು ಕ್ರೇಗ್ ಓವರ್ಟನ್ ಹೊರಗುಳಿಯಲಿದ್ದಾರೆ. ಅವರ ಅಗ್ರ ಕ್ರಮಾಂಕದ ಆಟಗಾರರು ಸದ್ಯಕ್ಕೆ ಲಯ ಕಂಡು ಕೊಂಡಿರುವುದರಿಂದ ಸದ್ಯಕ್ಕೆ ಅಂತಹ ಯಾವುದೇ ಬದಲಾವಣೆ ಆ ಜಾಗದಲ್ಲಿ ನಿರೀಕ್ಷಿಸುವಂತಿಲ್ಲ.
ಟೀಮ್ ಇಂಡಿಯಾದ ಒಂದಿಷ್ಟು ಬದಲಾವಣೆ ಬಗ್ಗೆ ಹೇಳುವುದಾದರೆ ನಾಲ್ಕು ಮತ್ತು ಐದನೇ ದಿನ ತಕ್ಕ ಮಟ್ಟಿಗೆ ಸ್ಪಿನ್ ಗೆ ಕೂಡ ನೆರವು ನೀಡುವುದರಿಂದ ಎರಡು ಸ್ಪಿನ್ನರ್ ಗಳೊಂದಿಗೆ ಆಡುವ ಮನಸ್ಸು ಭಾರತ ಮಾಡಿದರೆ ಆವಾಗ ಮತ್ತೆ ಜಡೇಜಾ ಮತ್ತು ಅಶ್ವಿನ್ ಜೋಡಿ ಕಾಣಿಸಿಕೊಳ್ಳಬಹುದು. ಈ ರೀತಿ ಆದರೆ ಇಶಾಂತ್ ಶರ್ಮ ಹೊರಗುಳಿಯಬಹುದು. ಇಲ್ಲ ಇನ್ನೊಬ್ಬ ವೇಗದ ಬೌಲರ್+ ಆಲ್ ರೌಂಡರ್ ಬೇಕಿದ್ದರೆ ಆವಾಗ ಸಂಪೂರ್ಣ ಫಿಟ್ ಆಗಿರುವ ಶಾರ್ದೂಲ್ ಠಾಕೂರ್ ಕಾಣಿಸಿಕೊಳ್ಳಬಹುದು.
ಹವಾಮಾನ ವರದಿ ಬಗ್ಗೆ ಹೇಳಬೇಕಾದರೆ ಒಳ್ಳೆಯ ಪಂದ್ಯ ಸಾಗಲಿದೆ. ಆದರೂ ಐದನೇ ದಿನ ಸ್ವಲ್ಪ ಮಳೆಯನ್ನು ನಿರೀಕ್ಷಿಸಬಹುದಂತೆ. ಇದೇ ರೀತಿಯ ಹವಾಮಾನ ವರದಿ ಲೀಡ್ಸ್ ಟೆಸ್ಟ್ ನಲ್ಲೂ ಇತ್ತು. ಆದರೆ ಅಲ್ಲಿ ಐದನೇ ದಿನ ಆಟವೇ ನಡೆಯಲಿಲ್ಲ.ಇಲ್ಲಿ ಹಾಗೆ ಆಗದಿರಲಿ. ಯಾವುದೇ ತಂಡವಾಗಲಿ ಮೂರ್ನಾಲ್ಕು ದಿನದಲ್ಲಿ ಆಟ ಗೆಲ್ಲುವುದಕ್ಕಿಂತಲೂ ಕೊನೆಯ ದಿನ ಕೊನೆಯ ಸೆಷನ್ ನಲ್ಲಿ ಪಂದ್ಯ ಗೆಲ್ಲುವುದರಲ್ಲಿಯೇ ನಿಜವಾದ ಟೆಸ್ಟ್ ಕ್ರಿಕೆಟ್ ಮಜಾ ಇರುವುದು.
ಸದ್ಯಕ್ಕೆ ಆಂಗ್ಲರ ಟೀಮ್ ನಲ್ಲಿ ಒಂದಷ್ಟು ಹೊಸ ಚೈತನ್ಯ ಮೂಡಿದೆ ಎನ್ನುವುದು ಖಂಡಿತವಾಗಿಯೂ ಸುಳ್ಳಲ್ಲ. ಜಯ ಹಾಗೇಯೇ.ಎಲ್ಲವನ್ನೂ ಮರೆಸಿ ಹೊಸ ಆತ್ಮವಿಶ್ವಾಸ ತುಂಬಿ ಬಿಡಬಲ್ಲದು.
ನಾವು ಸೋತಿದ್ದೇವೆ ನಿಜ. ಆದರೆ ಸರಣಿಯನ್ನಲ್ಲ,ಅದರಲ್ಲೂ ನಂಬಿಕೆ, ಆಟದ ಮೇಲಿನ ವಿಶ್ವಾಸವನ್ನು ಖಂಡಿತವಾಗಿಯೂ ಅಲ್ಲವೇ ಅಲ್ಲ. ಕಮ್ ಬ್ಯಾಕ್ ಮಾಡುವುದು ನಮಗೆ ಬಹಳ ಚೆನ್ನಾಗಿ ಗೊತ್ತು. ನೆಲ ನಮ್ಮದ್ದೇ ಆಗಿರಲಿ, ವಿದೇಶದ್ದೇ ಆಗಿರಲಿ.
ಟೀಮ್ ಇಂಡಿಯಾ ಮತ್ತೆ ಲಯಕ್ಕೆ ಮರಳಿದರೆ,ಜಿದ್ದಿನ ಆಟದಲ್ಲಿ ಹಿಡಿತ ಸಡಿಲಿಸದೇ ಪಟ್ಟು ಹಿಡಿದು ಮುನ್ನುಗಿದರೆ,ಈ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯ ಮತ್ತಷ್ಟು ಕಾವೇರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಹಾಗೇ ಆಗಲಿ.. ಎಂಬ ಆಶಯ ನಮ್ಮದು ಕೂಡ.
ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿದೆ. ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಐದು ದಿನಗಳ ಕಾಲ ಹಬ್ಬ.
ಸದ್ಯಕ್ಕೆ ಇಷ್ಟೇ,ದಿನದಾಟ ಮುಗಿದ ನಂತರ ಮತ್ತೆ ಸಿಗೋಣ ಒಂದಷ್ಟು ಕ್ರಿಕೆಟ್ ಮಾತಾಡೋಣ.
Ind Vs England
4th Test - Kennington - London
#Day_1 :
#WTC_S02E01_4TD1_2021_23
Ab pacchu





Comments
Post a Comment