#4T_D1 ದಾಂಧಲೆ!
ಇವತ್ತಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ಮತ್ತೆ ಮೊದಲ ದಿನವೇ ಬ್ಯಾಟಿಂಗ್ ಮಾಡಲು ಇಳಿದಿತ್ತು ಟೀಮ್ ಇಂಡಿಯಾ.
ಈ ದಿನ ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿತ್ತು.
ಆದರೆ ಮತ್ತೆ ಅಶ್ವಿನ್ ಕಂಡು ಬರಲಿಲ್ಲ.
ಇಶಾಂತ್ ಶರ್ಮ ಹಾಗೂ ಮಹ್ಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್ ಇಂದು ಆಡಿದ್ದರು.
ಆಂಗ್ಲರು ಕೂಡ ಎರಡು ಬದಲಾವಣೆಯೊಂದಿಗೆ ಮೈದಾನಕ್ಕೆ ಇಳಿದಿದ್ದರು. ಬಟ್ಲರ್ ಬದಲಿಗೆ ಓಲಿ ಪೋಪ್ ಆಡಿದರೆ, ಸ್ಯಾಮ್ ಕರನ್ ಬದಲಿಗೆ ಇಂದು ಈ ಸರಣಿಯಲ್ಲಿ ಮೊದಲ ಬಾರಿಗೆ ಆಡಿದ್ದು ಕ್ರಿಸ್ ವೋಕ್ಸ್.
ಈ ದಿನದ ಟೀಮ್ ಇಂಡಿಯಾದ ಬ್ಯಾಟಿಂಗ್ ಹೆಚ್ಚು ಕಡಿಮೆ ಹಿಂದಿನ ಟೆಸ್ಟ್ ಪಂದ್ಯದಂತೆಯೇ ಇದ್ದುದರಿಂದ ವಿಕೆಟ್ ಟು ವಿಕೆಟ್ ಕಥೆಗಳನ್ನು ಹೇಳುತ್ತಾ ಹೋಗುವುದು ನಿಜಕ್ಕೂ ಅದು ಬೋರ್ ಹಾಗೂ ಸಿಕ್ಕಾಪಟ್ಟೆ ಬೇಜಾರಿನ ಸಂಗತಿ.ಆದರೂ ಇಬ್ಬರು ಆಟಗಾರರ ಬಗ್ಗೆ ಈ ದಿನ ಹೇಳಲೇಬೇಕು.
ಈ ದಿನ ನಮ್ಮ ಆರಂಭಿಕರು ಇಬ್ಬರೂ ಬಹಳ ಬೇಗನೆ ತಮ್ಮ ತಮ್ಮ ಆಟ ಮುಗಿಸುವ ಮೂಲಕ ಈ ದಿನದ ಪೆವಿಲಿಯನ್ ಪರೇಡ್ ಗೊಂದು ಶುಭಾರಂಭ ಮಾಡಿದರು.
ಕೊಹ್ಲಿ ಅರ್ಧಶತಕ ಗಳಿಸಿ ಭರವಸೆ ಮೂಡಿಸಿದ್ದು ಖುಷಿಯಾಯಿತು. ಆದರೆ ಅದು ದೊಡ್ಡ ಶತಕವಾಗಲಿಲ್ಲ ಎಂದು ಮತ್ತೆ ಬೇಜಾರು ಮುಂದುವರಿಯಿತು.
ರಹಾನೆ, ಪೂಜಾರ,ಜಡೇಜಾ ಮತ್ತೆ ಅವನೊಬ್ಬ ಪಂತ್ ಅವರು ಇಂದು ಏನು ಆಡಿದರೋ ಬಹುಶಃ ಅದು ಅವರಿಗೂ ಪ್ರೀಯವಾಗಿರಲಿಕ್ಕಿಲ್ಲ.ನಿಜಕ್ಕೂ ತುಂಬಾನೇ ಕಳಪೆ ಆಟ ಅವರದ್ದಾಗಿತ್ತು. ಎಲ್ಲದಕ್ಕೂ ಪಿಚ್ ಅನ್ನು ದೂರಲು ಸಾಧ್ಯವಿಲ್ಲ. ಆತ್ಮವಿಶ್ವಾಸದ ಕೊರತೆಯೂ ಅಷ್ಟೇ ಎದ್ದು ಕಾಣುತ್ತಿತ್ತು. ಎಂದಿನಂತೆ ಉಡಾಫೆಯಾಗಿ ಆಡಿದ್ದು ಅವನೊಬ್ಬ ಪಂತ್.
ಆದರೆ ಇವತ್ತು ನಿಜಕ್ಕೂ ಎಲ್ಲರ ಹೃದಯ ಗೆದ್ದಿದ್ದು ಮಾತ್ರ ಶಾರ್ದೂಲ್ ಠಾಕೂರ್.
ಆಹಾ.. ಆ ಸ್ಟ್ರೈಟ್ ಡ್ರೈವ್ ಸಚಿನ್ ತೆಂಡೂಲ್ಕರ್ ನನ್ನು ಮತ್ತೊಮ್ಮೆ ನೆನಪಿಸಿದರೆ.. ಶಾರ್ದೂಲ್ ಹೊಡೆದ ಫುಲ್ ಶಾಟ್ ಸಿಕ್ಸ್ ಯಾವ ಹಿಟ್ ಮ್ಯಾನ್ ರೋಹಿತ್ ಶರ್ಮನ ಫುಲ್ ಶಾಟಿಗಿಂತಲೂ ಕಡಿಮೆ ಏನಾಗಿರಲಿಲ್ಲ.
ಇನ್ನಿಲ್ಲದಂತೆ ಓವಲ್ ಮೈದಾನದಲ್ಲಿ ಸಿಕ್ಸರ್ ಬೌಂಡರಿಗಳ ಮೂಲಕವೇ ದಾಂಧಲೆ ಎಬ್ಬಿಸಿದ ಶಾರ್ದೂಲ್ ಕೊನೆಗೂ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 158.33 ಸ್ಟ್ರೈಕ್ ರೇಟಿನಲ್ಲಿ ಅರ್ಧ ಶತಕ ಕೂಡ ದಾಖಲಿಸಿ ಬಿಟ್ಟ.
ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಶಾರ್ದೂಲ್ ಭಾರತದ ಪರ ಅತೀ ವೇಗದ ಅರ್ಧ ಶತಕ ಬಾರಿಸಿದವರಲ್ಲಿ 2 ನೇ ಸ್ಥಾನದಲ್ಲಿ ನಿಲ್ಲುತ್ತಾನೆ. 30 ಎಸೆತದಲ್ಲಿ ಅರ್ಧಶತಕ ಗಳಿಸಿದ ಕಪಿಲ್ ದೇವ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ.
ನಿಜಕ್ಕೂ ಬ್ಯಾಟ್ಸ್‌ಮನ್ ಗಳನ್ನು ನಾಚಿಸುವಂತೆ ಸುಲಲಿತವಾಗಿ ಅಷ್ಟೇ ಸರಾಗವಾಗಿ ಆಡಿದ ಶಾರ್ದೂಲ್ ಆಂಗ್ಲರಿಗೆ ಒಂದು ಹೊತ್ತಿನಲ್ಲಿ ಸಿಕ್ಕಾಪಟ್ಟೆ ತಲೆ ನೋವಾಗಿಯೇ ಬಿಟ್ಟಿದ್ದ.
ಆದರೆ ಯಾವಾಗ ಶಾರ್ದೂಲ್ ಔಟ್ ಆಗಿ ಬಿಟ್ಟನೋ ಆಮೇಲೆ ರಪ ರಪ ಅಂತ ಉಳಿದ ವಿಕೆಟ್ ಗಳು ಕೂಡ ಬಿದ್ದು ಬಿಟ್ಟವು. ಕೊನೆಗೆ ಟೀಮ್ ಇಂಡಿಯಾ 191 ರನ್ ಗಳಿಗೆ ಆಲ್ ಔಟ್ ಆಗಿ ತನ್ನ ಮೊದಲ ಇನಿಂಗ್ಸ್ ಮುಗಿಸಿ ಬಿಟ್ಟಿತು.
ಭಾರತದ ಪರ ಶಾರ್ದೂಲ್ ಠಾಕೂರ್ ಗಳಿಸಿದ 57 ರನ್ನುಗಳೇ ಈ ಇನ್ನಿಂಗ್ಸ್ ನ ಸರ್ವಾಧಿಕ ರನ್ ಆಗಿತ್ತು.
ಆಂಗ್ಲರ ಪರ ಈ ಪಂದ್ಯದಲ್ಲಿ ಆಡಳಿಲಿದ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರೆ, ರಾಬಿನ್ಸನ್ 3,ಆಂಡರ್ಸನ್ 1 ಹಾಗೂ ಕ್ರೇಗ್ ಓವರ್ಟನ್ 1 ವಿಕೆಟ್ ಪಡೆದರು.ಒಂದು ವಿಕೆಟ್ ಬೂಮ್ರ ನ ರೂಪದಲ್ಲಿ ರನ್ ಔಟ್ ಆಗಿತ್ತು.
ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರದ್ದು ಕೂಡ ಸುಖವಾದ ಕಥೆ ಏನಲ್ಲ.
6 ರನ್ನುಗಳಿಗೆಯೇ ಅದು ತನ್ನ ಮೊದಲ 2 ವಿಕೆಟ್ ಗಳನ್ನು ಕಳೆದುಕೊಂಡು ಬಿಟ್ಟಿತು.ಆಂಗ್ಲರ ಆ ಎರಡೂ ಆರಂಭಿಕರನ್ನು ಬಲಿ ತೆಗೆದುಕೊಂಡಿದ್ದು ಜಸ್ಪಿತ್ ಬೂಮ್ರ.ರಾರಿ ಬರ್ನ್ಸ್ ಬೂಮ್ರ ಬೌಲಿಂಗ್ ನಲ್ಲಿ ಬಾಲ್ ಅನ್ನು ತನ್ನ ವಿಕೆಟ್ಗೆ ಎಳೆದುಕೊಂಡು ಬೌಲ್ಡ್ ಆದರೆ,ಹಸೀಬ್ ಹಮೀದ್ ಕೀಪರ್ ಪಂತ್ ಗೆ ಕ್ಯಾಚಿತ್ತು ಹೊರ ನಡೆದು ಬಿಟ್ಟ.
ಆ ನಂತರ ಜೊತೆ ಆದದ್ದು ಯಾರ್ಕ್ ಶೈರ್ ಬ್ಯಾಟ್ಸ್‌ಮನ್ ಗಳಾದ ಕ್ಯಾಪ್ಟನ್ ಜೋ ರೂಟ್ ಮತ್ತು ಡೇವಿಡ್ ಮಲನ್.
ಜೋ ರೂಟ್ ಮತ್ತೊಮ್ಮೆ ತನ್ನ ಬೇರುಗಳನ್ನು ಭದ್ರವಾಗಿ ಊರುವುದರಲ್ಲಿದ್ದ... ಆದರೆ ಅವನನ್ನು ಕ್ಲೀನ್ ಬೌಲ್ಡ್ ಮಾಡಿ ದಿನದ ಅಂತ್ಯದಲ್ಲಿ ಪೆವಿಲಿಯನ್ ಗೆ ಅಟ್ಟಿದ್ದು ಈ ಸರಣಿಯಲ್ಲಿ ಮೊದಲ ಬಾರಿಗೆ ಆಡಳಿಲಿದ ಉಮೇಶ್ ಯಾದವ್.ಇಲ್ಲಿಯವರೆಗೆ ಅವನದ್ದೊಂದು ವಿಕೆಟ್ ಟೀಮ್ ಇಂಡಿಯಾಕ್ಕೆ ಬಹಳ ದೊಡ್ಡ ತಲೆನೋವಾಗಿತ್ತು. ಆದರೆ ಬಲು ಬೇಗನೇ ಅವನಾಟಕ್ಕೆ ಉಮೇಶ್ ಯಾದವ್ ಅಂತ್ಯ ಹಾಡಿ ಭಾರತೀಯರಿಗೆ ಒಂದಷ್ಟು ನೆಮ್ಮದಿ ತಂದಿದ್ದಾನೆ.
ಕೊನೆಯಲ್ಲಿ ಮೊದಲ ದಿನದಾಟ ಮುಗಿದಾಗ ಇಂಗ್ಲೆಂಡ್ 3 ವಿಕೆಟ್ ಗಳಿಗೆ 53 ರನ್ನುಗಳನ್ನು ಗಳಿಸಿದ್ದು ಸದ್ಯಕ್ಕೆ 138 ರನ್ನುಗಳಿಂದ ಭಾರತಕ್ಕಿಂತ ಹಿಂದೆ ಇದೆ.ಕ್ರೀಸ್ ನಲ್ಲಿ ಡೇವಿಡ್ ಮಲನ್ ಹಾಗೂ ಕ್ರೇಗ್ ಓವರ್ಟನ್ ಇದ್ದಾರೆ.
ಏನೇ ಹೇಳಿ ಬ್ಯಾಟಿಂಗ್ ನಲ್ಲಿ ಆದ ನಿರಾಸೆಯನ್ನು ನಮ್ಮ ವೇಗದ ಬೌಲರ್ ಗಳು ಇಂದು ಖಂಡಿತವಾಗಿಯೂ ಒಂದಷ್ಟು ಮರೆಸಿಬಿಟ್ಪರು.
ಬೌಲಿಂಗ್ ನಲ್ಲಿ ನಾಳೆಯೂ ನಮ್ಮ ಬೌಲರ್ ಗಳು ಇನ್ನೂ ಅದ್ಭುತ ಪ್ರದರ್ಶನ ತೋರಿಸಿದರೆ ನಮ್ಮ ತಂಡಕ್ಕೂ ಕೂಡ ಈ ಪಂದ್ಯದಲ್ಲಿ ಒಂದಷ್ಟು ಆಸೆಗಳು ಇನ್ನೂ ಜೀವಂತವಾಗಿಯೇ ಇದೆ. ಎಲ್ಲದಕ್ಕೂ ಮೊದಲು ಅವರದ್ದೊಂದು ಮೊದಲ ಇನ್ನಿಂಗ್ಸ್ ಗೆ ಬಹಳ ಬೇಗ ಇತಿಶ್ರೀ ಇಡಬೇಕಾಗಿದೆ.
ಏನೇ ಆದರೂ ಟೀಮ್ ಇಂಡಿಯಾ ಈ ಪಂದ್ಯ ಸೋಲಬಾರದು.ಕಾರಣ ಇಷ್ಟೇ ಟೀಮ್ ಇಂಡಿಯಾ ಇನ್ನಷ್ಟು ಉತ್ತಮ ಪ್ರದರ್ಶನ ತೋರಿಸಿದರೆ,ಈ ಆಂಗ್ಲರ ನೆಲದ ಸರಣಿ ಗೆಲ್ಲುವುದು ಖಂಡಿತವಾಗಿಯೂ ಅಷ್ಟೊಂದು ಕಷ್ಟವಲ್ಲ.
ಒಂದು ವೇಳೆ ಸೋತರೆ ಮುಂದಿನ ಪಂದ್ಯವನ್ನು ಸಮಬಲ ಮಾಡಿಕೊಳ್ಳುವುದಕ್ಕಾಗಿಯೇ ಆಡಬೇಕಾಗುತ್ತದೆ. ಹಾಗಾಗದಿರಲಿ. ಡ್ರಾ ಆದರೂ ಪರವಾಗಿಲ್ಲ. ಸೋಲುವತ್ತ ನಮ್ಮ ತಂಡ ವಾಲದಿರಲಿ.ಆದರೆ ಇನ್ನೊಂದು ವಿಪರ್ಯಾಸ ಅಂದರೆ ಇಲ್ಲಿ ಹೆಚ್ಚು ಕಡಿಮೆ ಯಾವುದಾದರೊಂದು ತಂಡ ಗೆಲ್ಲುತ್ತದೆಯೇ ಹೊರತು.. ಡ್ರಾ ಫಲಿತಾಂಶ ಬಹಳಷ್ಟು ಕಡಿಮೆ.
ಟೀಮ್ ಇಂಡಿಯಾವೇ ಗೆಲ್ಲಲಿ.
ಈ ದಿನಕ್ಕೆ ಇಷ್ಟೇ..
ಮತ್ತೆ ನಾಳೆ ಎರಡನೆಯ ದಿನದಾಟದ ನಂತರ ಎಂದಿನಂತೆ ಒಂದಷ್ಟು ಕ್ರಿಕೆಟ್ ಮಾತಾಡೋಣ.
Ind Vs England
4th Test - Kennington - London
#Day_1 : STUMPS
India 1st Innings - 191/10
England 1st Innings - 53/3
#WTC_S02E01_4TD1_2021_23
Ab pacchu




Comments
Post a Comment