#4T_D2 ಪ್ರತಿರೋಧ..!
#4T_D2 ಪ್ರತಿರೋಧ..!
ಏನೇ ಹೇಳಿ ಓವಲ್ ನಲ್ಲಿ ಈ ದಿನದ ನಮ್ಮದೊಂದು ಆರಂಭದ ಆಟ ಮಾತ್ರ ಬಹಳನೇ ಸೊಗಸಾಗಿತ್ತು.
ನಿನ್ನೆ 3 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಂಗ್ಲರು ಇಂದು ಬಹು ಬೇಗ ಮತ್ತೆರಡು ವಿಕೆಟ್‌ಗಳನ್ನು ಹಾಗೇ ಕಳೆದುಕೊಂಡು ಬಿಟ್ಟರು.
ಉಮೇಶ್ ಯಾದವ್ ಮೊದಲಿಗೆ ನಿನ್ನೆಯ ರಾತ್ರಿ ಪಾಳೆಯದ ಕಾವಲುಗಾರ ಕ್ರೇಗ್ ಓವರ್ಟನ್ ನನ್ನು,ಫಸ್ಟ್ ಸ್ಲಿಪ್ ನಲ್ಲಿ ವಿರಾಟ್ ಕೊಹ್ಲಿ ಕೈಗೆ ಕ್ಯಾಚ್ ಕೊಡಿಸುವಲ್ಲಿ ಸಫಲನಾದ. ಔಟ್ ಸ್ವಿಂಗರ್ ಬಾಲ್ ಅನ್ನು ಕೆಣಕಲು ಹೋದ ಓವರ್ಟನ್ ಬಲು ಬೇಗ ಪೆವಿಲಿಯನ್ ದಾರಿ ಹಿಡಿಯಬೇಕಾಯಿತು.
ಆ ನಂತರ ಬರ್ತಡೆ ಭಾಯ್ ಡೇವಿಡ್ ಮಲನ್,ಉಮೇಶ್ ಯಾದವ್ ಎಸೆದ ಗುಡ್ ಲೆಂತ್ ಬಾಲ್ ನಲ್ಲಿ,ಸೆಕಂಡ್ ಸ್ಲಿಪ್ ನಲ್ಲಿ ರೋಹಿತ್ ಶರ್ಮ ಡೈವ್ ಮಾಡಿ ಹಿಡಿದ ಸುಂದರ ಕ್ಯಾಚಿಗೆ ಬಲಿಯಾಗಬೇಕಾಯಿತು.
ಮುಂದೆ ಜೊತೆಯಾದದ್ದು ಓಲಿ ಪೋಪ್ ಮತ್ತು ಜಾನಿ ಬೆರ್ಸ್ಟೋ.ಆಂಗ್ಲರ ಈ ದಿನದ ನಿಜವಾದ ಪ್ರತಿರೋಧ ಒಂದು ಶುರುವಾಗಿದ್ದು ಇಲ್ಲಿಂದಲೇ.ಇವರಿಬ್ಬರು ಬಹಳಷ್ಟು ಹೊತ್ತು ಭಾರತೀಯ ಬೌಲರ್ ಗಳನ್ನು ಕಾಡಿದರು.ಹಾಗಾಗಿ ಆ ನಂತರ ಭೋಜನ ವಿರಾಮದವರೆಗೂ ಆಂಗ್ಲರ ಒಂದೂ ವಿಕೆಟ್ ಬೀಳಲಿಲ್ಲ.
ಲಂಚ್ ನ ನಂತರ ಭಾರತಕ್ಕೆ ಮತ್ತೆ ಬ್ರೇಕ್ ದೊರಕಿಸಿದ್ದು ಮಹಮ್ಮದ್ ಸಿರಾಜ್. 37 ರನ್ನ್ ಗಳಿಸಿ ಮುನ್ನುಗುತ್ತಿದ್ದ ಬೆರ್ಸ್ಟೋ ನನ್ನು ಸಿರಾಜ್ ಎಲ್.ಬಿ.ಡಬ್ಲ್ಯು ಬಲೆಗೆ ಹೇಗೋ ಕೊನೆಗೂ ಕೆಡವಿ ಬಿಟ್ಟ.
ನಂತರ ಬಂದ ಮೋಯಿನ್ ಆಲಿ ಯದ್ದು ಬಹಳ ಸರಾಗ, ಸುಲಭ ಹಾಗೂ ಎದುರಾಳಿಯ ತಲೆ ತಿನ್ನುವ ಬ್ಯಾಟಿಂಗ್. ಅವನೊಬ್ಬ ಭಾರತದ ವಿರುದ್ಧ ಪ್ರತೀ ಬಾರಿಯೂ ರನ್ ಗಳಿಸುತ್ತಲೇ ಇರುತ್ತಾನೆ.
ಇದರ ನಡುವೆ ಹೋಮ್ ಗ್ರೌಂಡ್ ಬಾಯ್ ಓಲಿ ಪೋಪ್ ಜವಾಬ್ದಾರಿಯುತ ಅರ್ಧಶತಕವೊಂದನ್ನು ಬಾರಿಸಿ ಹಾಗೇ ತವರಿನ ಪ್ರೇಕ್ಷಕರ ಎದುರು ಮಿಂಚಿ ಬಿಟ್ಟ.
ಆದರೆ ಅಲ್ಲಿಯವರೆಗೆ ಚೆನ್ನಾಗಿಯೇ ಆಡುತ್ತಿದ್ದ ಮೋಯಿನ್ ಆಲಿ,ಜಡೇಜಾನ ಆಫ್ ಸೈಡಿನಲ್ಲಿ ಬಿದ್ದಿದ ಪ್ಲೈಟೆಡ್ ಡೆಲಿವರಿಗೆ ಆನ್ ಸೈಡಿನ ಮೇಲೊಂದು ದೊಡ್ಡ ಸ್ವೀಪ್ ಶಾಟ್ ಬಾರಿಸಲು ಹೋಗಿ ಕವರ್ ನಲ್ಲಿದ್ದ ರೋಹಿತ್ ಶರ್ಮಗೆ ಬಹಳ ಸುಲಭ ಕ್ಯಾಚ್ ಕೊಡುವ ಮೂಲಕ ಔಟಾಗಿ ಬಿಟ್ಟ.
ಈ ರೀತಿಯಾಗಿ ಚಹಾ ಕುಡಿಯಲು ಹೋಗುವಾಗ ಇಂಗ್ಲೆಂಡ್ ತನ್ನ ಒಟ್ಟು 7 ವಿಕೆಟ್‌ಗಳನ್ನು ಕಳೆದುಕೊಂಡು ಬಿಟ್ಟಿತ್ತು.ಆದರೂ ಅದು ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆಯೊಂದನ್ನು ಗಳಿಸಿಕೊಳ್ಳುವಲ್ಲಿ ಸಫಲವಾಗಿತ್ತು.
ಟೀ ಬ್ರೇಕ್ ನಂತರ ಭಾರತಕ್ಕೆ ಮಹತ್ವದ ಬ್ರೇಕ್ ದೊರಕಿಸಿದ್ದು ಶಾರ್ದೂಲ್ ಠಾಕೂರ್. 81 ರನ್ ಗಳಿಸಿ ಆಡುತ್ತಿದ್ದ ಹೋಮ್ ಬಾಯ್ ಓಲಿ ಪೋಪ್, ಶಾರ್ದೂಲ್ ಎಸೆತದಲ್ಲಿ ಬಾಲ್ ಅನ್ನು ತನ್ನ ವಿಕೆಟ್ ಗೆ ಎಳೆದುಕೊಂಡು ಬೌಲ್ಡ್ ಆಗಿ ಬಿಟ್ಟ.
ಆ ನಂತರ ಓಲಿ ರಾಬಿನ್ಸನ್,ಜಡೇಜಾ ಬೌಲಿಂಗ್ ನಲ್ಲಿ ಸ್ಲಾಗ್ ಸ್ವೀಪ್ ಒಂದನ್ನು ಬಾರಿಸಲು ಕುಳಿತುಕೊಂಡಾಗ ಅವನ ಬ್ಯಾಟು, ಪ್ಯಾಡುಗಳನ್ನು ವಂಚಿಸಿದ ಬಾಲ್ ಟಿಂಬರ್ ಅನ್ನು ಅಲುಗಾಡಿಸಿ ಬೇಲ್ಸ್ ಉದುರಿಸುವಲ್ಲಿ ಸಫಲವಾಯಿತು.
ಕೊನೆಯ ವಿಕೆಟ್ ಗೆ ಜೊತೆಯಾದ ಆಂಡರ್ಸನ್ ಹಾಗೂ ಈ ಕ್ರಿಸ್ ವೋಕ್ಸ್ ನಿಜಕ್ಕೂ ಅತೀ ದೊಡ್ಡ ತಲೆನೋವಾಗಿಬಿಟ್ಟರು ಇಂದು.ವೋಕ್ಸ್ ಬೌಂಡರಿ ಮೇಲೆ ಬೌಂಡರಿ ಬಾರಿಸಿ ಆಂಗ್ಲರ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದ.ಅಷ್ಟು ಮಾತ್ರವಲ್ಲ 58 ಎಸೆತದಲ್ಲಿ 11 ಬೌಂಡರಿಗಳ ಮೂಲಕ ತನ್ನದೊಂದು ಅರ್ಧಶತಕವನ್ನು ಕೂಡ ವೋಕ್ಸ್ ಗಳಿಸಿ ಬಿಟ್ಟ.
ಈ ಕೊನೆಯ ವಿಕೆಟ್ ಒಂದು ಬೇಗ ಬೀಳದಿದ್ದರೆ ಎದುರಾಳಿ ತಂಡಕ್ಕೆ ಆಗುವ ಕಿರಿಕಿರಿ ಅದು ಅಷ್ಟಿಷ್ಟಲ್ಲ. ಅದನ್ನು ಇಂದು ಟೀಮ ಇಂಡಿಯಾದ ಬೌಲರ್ ಗಳು ಹಾಗೂ ಎಲ್ಲಾ ಆಟಗಾರರು ಸಾಕಷ್ಟು ಅನುಭವಿಸಿ ಬಿಟ್ಟರು. ತಂಡದ ಅಭಿಮಾನಿಗಳ ಅವಸ್ಥೆ ಕೂಡ ಅದೇ ಬಿಡಿ.
ಕೊನೆಗೂ ವೋಕ್ಸ್ ಹೇಗೋ ಬೂಮ್ರನಿಂದಾಗಿ ರನ್ ಔಟ್ ಆಗಿ ಬಿಟ್ಟ. ಆದರೆ ತಂಡಕ್ಕೆ ಒಳ್ಳೆಯ ಮುನ್ನಡೆ ದೊರಕಿಸುವಲ್ಲಿ ಆತ ನಿಜಕ್ಕೂ ನಮ್ಮ ಶಾರ್ದೂಲ್ ಠಾಕೂರ್ ನಂತೆ ಬಹಳಷ್ಟು ಸಫಲನಾಗಿದ್ದ ಇವತ್ತು.
ನಿಜಕ್ಕೂ ಭಾರತದ ಬೌಲಿಂಗ್ ಖಂಡಿತವಾಗಿಯೂ ಅಷ್ಟೊಂದು ಕೆಟ್ಟದಾಗಿ ಏನು ಇರಲಿಲ್ಲ ಇವತ್ತು.ಆದರೆ ಅವರದ್ದೊಂದು ಸಣ್ಣ ಸಣ್ಣ ಜೊತೆಯಾಟ, ನಡು ನಡುವಿನ ಆ ಒಂದು ಪ್ರತಿರೋಧ ಸದ್ಯಕ್ಕೆ ಆಟದಲ್ಲಿ ಅವರನ್ನು ನಮ್ಮಿಂದ ಒಂದಷ್ಟು ಮುಂದೆ ಖಂಡಿತವಾಗಿಯೂ ಒಯ್ದು ಬಿಟ್ಟಿದೆ.
ಈ ರೀತಿಯಾಗಿ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ಅನ್ನು 290 ರನ್ನುಗಳಿಗೆ ಕೊನೆಗೊಳಿಸುವ ಮೂಲಕ 99 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಪಡೆದುಕೊಂಡಿದೆ.ನಿಜಕ್ಕೂ ಒಳ್ಳೆಯ ಮುನ್ನಡೆಯೇ ಇದು. 100 ಮಾತ್ರವಲ್ಲ 10 ರನ್ ಗಳ ಮುನ್ನಡೆಯೂ ತಂಡವೊಂದಕ್ಕೆ ಬಹಳಷ್ಟು ಆತ್ಮವಿಶ್ವಾಸ ತುಂಬಬಲ್ಲದು.
ಇಂಗ್ಲೆಂಡ್ ನ ಬ್ಯಾಟಿಂಗ್ ನಲ್ಲಿ ಓಲಿ ಪೋಪ್ ಗಳಿಸಿದ 81 ಅವರ ಪಾಳಿಯ ಸರ್ವಾಧಿಕ ರನ್ ಆಗಿದ್ದರೆ,ಆ ನಂತರ ಕೊನೆಯಲ್ಲಿ ವೋಕ್ಸ್ ಗಳಿಸಿದ 50 ರನ್ನುಗಳು ಅವರ ಎರಡನೆಯ ಅಧಿಕ ರನ್ ಆಗಿತ್ತು.
ಭಾರತದ ಪರವಾಗಿ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಬೂಮ್ರ ಮತ್ತು ಜಡೇಜಾ ತಲಾ 2 ವಿಕೆಟ್ ಹಾಗೂ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಒಂದೊಂದು ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 150 ವಿಕೆಟ್ ಗಳನ್ನು ಇಲ್ಲಿಯವರೆಗೆ ಕಬಳಿಸಿದಂತಾಯಿತು.ಟೆಸ್ಟ್ ನಲ್ಲಿ 150 ವಿಕೆಟ್ ಕಡಿಮೆ ಸಾಧನೆ ಏನಲ್ಲ.ಅದಕ್ಕೂ ಸಿಕ್ಕಾಪಟ್ಟೆ ಬೆವರು ದಿನವಿಡೀ ಹರಿಸಬೇಕು.ಅಭಿನಂದನೆಗಳು ಉಮೇಶ್ ಯಾದವ್.
ಉಮೇಶ್ ಯಾದವ್ ನ ಈ ದಾಖಲೆ ಬಗ್ಗೆ ಹೇಳುವಾಗ ಇನ್ನೊಂದಿಷ್ಟು ದಾಖಲೆಯ ಬಗ್ಗೆಯೂ ತಿಳಿದುಕೊಳ್ಳೋಣ ಅಂತ ಅನಿಸಿತು ಹಾಗಾಗಿ ಇನ್ನೂ ಕೆಲವೊಂದು ದಾಖಲೆಗಳ ಬಗ್ಗೆಯೂ ಸ್ವಲ್ಪ ಗಮನ ಹರಿಸೋಣ. ಶಾರ್ದೂಲ್ ಠಾಕೂರ್ 31 ಎಸೆತಗಳಲ್ಲಿ ಭಾರತದ ಪರ ಎರಡನೆಯ ಅತೀ ವೇಗದ ಅರ್ಧಶತಕದ ಬಾರಿಸಿದ್ದು ನಮಗೆಲ್ಲಾ ಗೊತ್ತೇ ಇದೆ.ಅದೇ ರೀತಿ ಈ ಭಾರತೀಯ ಪಟ್ಟಿಯಲ್ಲಿ ಕಪಿಲ್ ದೇವ್ 30 ಎಸೆತದಲ್ಲಿ ಅರ್ಧಶತಕ ಬಾರಿಸಿ ಮೊದಲ ಸ್ಥಾನದಲ್ಲಿರುವುದು ಸಹ ನಮಗೆ ನಿನ್ನೆ ಮತ್ತೊಮ್ಮೆ ನೆನಪಾಗಿ ಬಿಟ್ಟಿತು.
ಇದೇ ರೀತಿಯಲ್ಲಿ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ದಾಖಲಾದ ಇಂತಹದ್ದೇ ಹಲವಾರು ದಾಖಲೆಗಳ ಬಗ್ಗೆ ತಿಳಿಯೋಣ.
ಮೊದಲಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಅರ್ಧ ಶತಕ ಗಳಿಸಿದ್ದು ಯಾರು ಎಂದು ನೋಡಬೇಕು ನಾವು.ಈ ದಾಖಲೆ ಪಾಕಿಸ್ತಾನದ ಮಿಸ್ಬಾ ಹುಲ್ ಹಕ್ ಹೆಸರಲ್ಲಿದೆ.ಮಿಸ್ಬಾ 2014 ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅಬುದಾಬಿಯಲ್ಲಿ ನಡೆದ ಪಂದ್ಯದಲ್ಲಿ 21 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದು ದಾಖಲೆಯಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವಾರ್ನರ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಎರಡನೇ ಸ್ಥಾನದಲ್ಲಿದ್ದರೆ,ಸೌತ್ ಆಫ್ರಿಕಾದ ಜಾಕ್ ಕ್ಯಾಲಿಸ್ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.30 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವ ಭಾರತದ ಕಪಿಲ್ ದೇವ್ ಈ ಪಟ್ಟಿಯಲ್ಲಿ ಶ್ರೀಲಂಕಾದ ದಿಲ್ಶನ್ ಹಾಗೂ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ ಜೊತೆಗೆ 9 ನೇ ಸ್ಥಾನದಲ್ಲಿದ್ದಾರೆ.31 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವ ಶಾರ್ದೂಲ್ ಠಾಕೂರ್ ಶ್ರೀಲಂಕಾದ ರಣತುಂಗ ಹಾಗೂ ಸೌತ್ ಆಫ್ರಿಕಾದ ಹ್ಯಾನ್ಸಿ ಕ್ರೋನಿ ಜೊತೆಗೆ 10 ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಶತಕ ಗಳಿಸಿದ್ದು ಯಾರು ಎಂದು ನೋಡುವುದಾದರೆ,ಟೆಸ್ಟ್ ನಲ್ಲಿ ಅತೀ ವೇಗದ ಶತಕವನ್ನು ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ ಕ್ರೈಸ್ಟ್ ಚರ್ಚ್ ನಲ್ಲಿ 2015 ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬಾರಿಸಿದ್ದಾರೆ.ಈ ಶತಕಕ್ಕಾಗಿ ಮೆಕಲಂ ಎದುರಿಸಿದ್ದು ಕೇವಲ 54 ಎಸೆತ.2 ನೇ ಸ್ಥಾನದಲ್ಲಿ ಜಂಟಿಯಾಗಿ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಹಾಗೂ ಮಿಸ್ಬಾ ಹುಲ್ ಹಕ್ ಇದ್ದಾರೆ.ಇವರಿಬ್ಬರು ತಮ್ಮ ಶತಕ್ಕಾಗಿ 56 ಎಸೆತಗಳನ್ನು ಎದುರಿಸಿದ್ದರು.ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ಇದ್ದು, ಗಿಲ್ ಕ್ರಿಸ್ಟ್ ಇದಕ್ಕಾಗಿ 57 ಎಸೆತಗಳನ್ನು ತೆಗೆದುಕೊಂಡಿದ್ದಾರೆ.ಈ ಪಟ್ಟಿಯಲ್ಲಿ ವೇಗದ ಶತಕ ಬಾರಿಸಿದ ಟೀಮ್ ಇಂಡಿಯಾದ ಆಟಗಾರರು ಎಂದರೆ ಅದು ಕಪಿಲ್ ದೇವ್ ಮತ್ತು ಮಹಮ್ಮದ್ ಅಜರುದ್ದೀನ್.ಇವರಿಬ್ಬರೂ 74 ಎಸೆತಗಳಲ್ಲಿ ತಮ್ಮ ತಮ್ಮ ಶತಕವನ್ನು ಪೂರ್ತಿಗೊಳಿಸಿದ್ದರು.
ವೇಗವಾಗಿ ದ್ವಿಶತಕ ಗಳಿಸಿದ ಆಟಗಾರರು ಯಾರು ಎಂದು ನೋಡುವುದಾದರೆ ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ನಥೆನ್ ಆಸ್ಟೆಲ್ ಇದ್ದು, ಆಸ್ಟೆಲ್ ಇಂಗ್ಲೆಂಡ್ ವಿರುದ್ಧ 2002 ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ 153 ಬಾಲ್ ನಲ್ಲಿ ದ್ವಿಶತಕ ಬಾರಿಸಿದ್ದರು. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಇದ್ದು, ಸ್ಟೋಕ್ಸ್ 163 ಎಸೆತದಲ್ಲಿ ತನ್ನ ಡಬಲ್ ಹಂಡ್ರೆಡ್ ಬಾರಿಸಿದ್ದರು.ಮೂರನೇ ಸ್ಥಾನದಲ್ಲಿ ಭಾರತದ ವಿರೇಂದ್ರ ಸೆಹ್ವಾಗ್ ಇದ್ದು 168 ಎಸೆತಗಳಲ್ಲಿ ಸೆಹ್ವಾಗ್ ತಮ್ಮ ದ್ವಿಶತಕ ಬಾರಿಸಿದ್ದಾರೆ.ನಾಲ್ಕನೇ ಸ್ಥಾನದಲ್ಲಿ ಕೂಡ ಸೆಹ್ವಾಗೇ ಇದ್ದು 182 ಎಸೆತವನ್ನು ಇದಕ್ಕಾಗಿ ಅವರು ತೆಗೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕೆಳಗೆ ಹೋದಂತೆ ಭಾರತದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತಾರೆ. ಟೆಸ್ಟ್ ಪಂದ್ಯವನ್ನು ಏಕದಿನದಂತೆ ಸೆಹ್ವಾಗ್ ಆಡಿದ್ದೇ ಇದಕ್ಕೆ ಕಾರಣ. ನಿಜಕ್ಕೂ ಟೆಸ್ಟ್ ನಲ್ಲಿ ಸೆಹ್ವಾಗ್ ನಂತಹ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಬೇರೆ ಯಾರೂ ಇಲ್ಲ ಬಿಡಿ. ಅದಕ್ಕೆ ಈ ದಾಖಲೆಗಳೇ ಸಾಕ್ಷಿ ಹೇಳುತ್ತವೆ.
ಈಗ ಕೊನೆಯದಾಗಿ ವೇಗವಾಗಿ ತ್ರಿಶತಕ ಗಳಿಸಿದವರು ಯಾರು ಎಂದು ನೋಡೋಣ. ವೇಗವಾಗಿ ತ್ರಿಶತಕವನ್ನು ಭಾರತದ ವಿರೇಂದ್ರ ಸೆಹ್ವಾಗ್ ಗಳಿಸಿದ್ದು, 2007 ರಲ್ಲಿ ಸೌತ್ ಆಫ್ರಿಕಾದ ವಿರುದ್ಧ ಚೆನ್ನೈ ನಲ್ಲಿ 278 ಎಸೆತಗಳಲ್ಲಿ ಅವರು ತಮ್ಮ ಟ್ರಿಪಲ್ ಹಂಡ್ರೆಡ್ ಬಾರಿಸಿದ್ದರೆ. ಎರಡನೆಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮ್ಯಾಥು ಹೇಡನ್ 362 ಬಾಲ್ ನಲ್ಲಿ ತ್ರಿಶತಕ ಬಾರಿಸಿದ್ದಾರೆ.ಮೂರನೇ ಸ್ಥಾನದಲ್ಲಿ ಮತ್ತೆ ವಿರೇಂದ್ರ ಸೆಹ್ವಾಗ್ ಇದ್ದು, ಇದನ್ನು ಸೆಹ್ವಾಗ್ 364 ಎಸೆತಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನ ಏಕೈಕ 400 ರನ್ನುಗಳನ್ನು ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರ ಬಾರಿಸಿದ್ದಾರೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧ ಸೈಂಟ್ ಜಾನ್ಸ್ ನಲ್ಲಿ ಲಾರ 582 ಎಸೆತಗಳಲ್ಲಿ ಅಜೇಯ 400* ರನ್ ಬಾರಿಸಿದ್ದರು.ಇದು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ನ ಪಂದ್ಯವೊಂದರಲ್ಲಿ ಆಟಗಾರನೊಬ್ಬನ ವೈಯಕ್ತಿಕ ಅತೀ ಹೆಚ್ಚಿನ ರನ್ ಗಳಿಕೆ ಆಗಿದೆ.ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಮ್ಯಾಥು ಹೇಡನ್ 380 ರನ್ ಗಳಸಿದ್ದಾರೆ.ಭಾರತದ ಪರವಾಗಿ ಅತೀ ಹೆಚ್ಚಿನ ರನ್ ವಿರೇಂದ್ರ ಸೆಹ್ವಾಗ್ ಬಾರಿಸಿದ್ದು, ಸೆಹ್ವಾಗ್ 319 ರನ್ ಟೆಸ್ಟ್ ಪಂದ್ಯವೊಂದರಲ್ಲಿ ಗಳಿಸಿದ್ದಾರೆ.
ಈಗ ಈ ದಾಖಲೆಗಳ ಪಟ್ಟಿಯಿಂದ ಮತ್ತೆ ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನಕ್ಕೆ ಬರೋಣ.
ಆಂಗ್ಲರ ಮೊದಲ ಇನ್ನಿಂಗ್ಸ್ ನ ಮುಕ್ತಾಯದ ನಂತರ 99 ರನ್ನುಗಳ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ತನ್ನ ಎರಡನೇ ಇನಿಂಗ್ಸ್ ಆರಂಭಿಸಿಲು ಮತ್ತೆ ಗ್ರೌಂಡಿಗೆ ಇಳಿದು ಬಿಟ್ಟಿತು.
ನಮ್ಮವರ ಮೆತ್ತನೆಯ ಆಟ ಆರಂಭವಾಗಿ ಹಾಗೇ ನಡು ನಡುವಲ್ಲಿ ಒಂದಷ್ಟು ಬೌಂಡರಿಗಳೊಂದಿಗೆ ಮುಂದುವರಿದಿತ್ತು.
ಕೊನೆಯಲ್ಲಿ ಎರಡನೇ ದಿನದಾಟದ ಮುಗಿದ ಟೀಮ್ ಇಂಡಿಯಾ ತನ್ನ ಎರಡನೇ ಇನಿಂಗ್ಸ್ ನಲ್ಲಿ 43 ರನ್ನುಗಳನ್ನು ಗಳಿಸಿ ಯಾವುದೇ ವಿಕೆಟ್ ಅನ್ನು ಕಳೆದುಕೊಂಡಿಲ್ಲ,ಆಂಗ್ಲರಿಗಿಂತ ಸದ್ಯಕ್ಕೆ ಟೀಮ್ ಇಂಡಿಯಾ 56 ರನ್ ಗಳಿಂದ ಹಿಂದೆ ಉಳಿದಿದೆ.
ರೋಹಿತ್ 20 ರನ್ ಹಾಗೂ ಕೆ.ಎಲ್ ರಾಹುಲ್ 22 ರನ್ ಗಳಿಸಿ ಕ್ರೀಸಿನಲ್ಲಿ ಉಳಿದ್ದಾರೆ.
ಅಂದ ಹಾಗೆ ರೋಹಿತ್ ಶರ್ಮಾ ಇಂದು "ಅಂತರಾಷ್ಟ್ರೀಯ ಕ್ರಿಕೆಟ್ "ನಲ್ಲಿ ಒಟ್ಟು 15,000 ರನ್ ಗಳಿಸಿದ್ದಾನೆ. ಅಭಿನಂದನೆಗಳು ಹಿಟ್ ಮ್ಯಾನ್.
ಇವತ್ತಿನದ್ದು ಎರಡನೆಯ ದಿನ.ಆಟದಲ್ಲಿ ಇನ್ನೂ 3 ದಿನ ಇರುವುದರಿಂದ ಖಂಡಿತವಾಗಿಯೂ ನಾವು ಇಲ್ಲಿಯೂ ಸ್ಪಷ್ಟ ಫಲಿತಾಂಶವನ್ನೇ ನಿರೀಕ್ಷಿಸಿಬಹುದು.
ಅಪಾಯ ಭಾರತಕ್ಕೂ ಇದೆ. ಹಾಗಂತ ಭಾರತಕ್ಕೆ ಅವಕಾಶಗಳಿಲ್ಲ ಅಂತ ಅಲ್ಲ.ಖಂಡಿತವಾಗಿಯೂ ಎರಡೂ ತಂಡಗಳಿಗೂ ಗೆಲ್ಲಲು ಸಮನಾದ ಅವಕಾಶವಿದೆ.ಅದರಲ್ಲೂ ಭಾರತ ತನ್ನ ಎರಡನೆಯ ಇನ್ನಿಂಗ್ಸ್ ನಲ್ಲಿ ಸಾಕಷ್ಟು ಮುನ್ನಡೆ ಗಳಿಸಿದರೆ ಆ ಅಪಾಯದ ಸೀಟಿನಲ್ಲಿ ನಾವು ಆಂಗ್ಲರನ್ನೇ ಮತ್ತೆ ಕೂರಿಸಿ ಬಿಡಬಹುದು. ಏಕೆಂದರೆ ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಬೇಕಾಗಿರುವುದು ಇಲ್ಲಿ ಇಂಗ್ಲೆಂಡ್ ತಂಡವೇ ಹೊರತು ನಾವಲ್ಲ. ಆದರೆ ಅದಕ್ಕಾಗಿ ಟೀಮ್ ಇಂಡಿಯಾ ಈಗ ದೊಡ್ಡ ಮೊತ್ತ ಕಲೆ ಹಾಕಬೇಕಾಗಿದೆ.
ಖಂಡಿತವಾಗಿಯೂ ಭಾರತದ ಬ್ಯಾಟ್ಸ್‌ಮನ್ ಗಳು ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಮಾಡುವುದಿಲ್ಲ, ಅದರಲ್ಲೂ ರಹಾನೆ ಮತ್ತು ಪಂತ್ ಹೆಚ್ಚಿನ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಹಾಗೇ ಆಗಲಿ.ಟಿಮ್ ಇಂಡಿಯಾದ ಮುನ್ನಡೆ ಪಂದ್ಯ ಗೆಲ್ಲುವಷ್ಟು ಉದ್ದಕ್ಕೆ ಬೆಳೆಯಲಿ.
ಸದ್ಯಕ್ಕೆ ಇಷ್ಟೇ..
ಮತ್ತೆ ನಾಳೆ ಮೂರನೇ ದಿನದಾಟದ ನಂತರ ಸಿಗೋಣ,ಎಂದಿನಂತೆ ಒಂದಷ್ಟು ಕ್ರಿಕೆಟ್ ಮಾತಾಡೋಣ.
Ind Vs England
4th Test - Kennington - London
#Day_2 : STUMPS
India 1st Innings - 191/10
England 1st Innings - 290/10
India 2nd Innings - 43/0
#WTC_S02E01_4TD2_2021_23
Ab pacchu





Comments
Post a Comment