#4T_D3 ಹಿಟ್ ಮ್ಯಾನ್ ಶೋ

 #4T_D3 ಹಿಟ್ ಮ್ಯಾನ್ ಶೋ..





ಓವಲ್ ಮೈದಾನದಲ್ಲಿ ಇಂದು ಮೂರನೇ ದಿನದ ಆಟ.


ಭಾರತದ ಆರಂಭಿಕರು ತಂಡದ ವಿತ್ ಔಟ್ ಲಾಸ್ 43 ರನ್ನುಗಳನ್ನು ಜತೆಗೆ ಕಟ್ಟಿಕೊಂಡು ಮತ್ತೆ ಗ್ರೌಂಡಿಗೆ ಪ್ಯಾಡ್ ಏರಿಸಿಕೊಂಡು ಇಳಿದಿದ್ದರು. 


ನಿನ್ನೆಯ ಸಂಜೆಯಂತೆ ಇಂದು ಬೆಳಿಗ್ಗಿನ ಅವರಿಬ್ಬರ ಆಟವೂ ಕೂಡ ಅಷ್ಟೇ ಸ್ಟ್ರಾಂಗ್ ಅಷ್ಟೇ ಸಾಲಿಡ್ಡ್.


ರೋಹಿತ್ ಮತ್ತು ರಾಹುಲ್ ಅದೆಷ್ಟು ಸುಂದರವಾಗಿ ಆಡುತ್ತಿದ್ದರು ಎಂದರೆ ಭಾರತದ ಇನ್ನಿಂಗ್ಸ್ ಒಂದು ಹಾಗೇ ತನ್ನ  ಹಿನ್ನಡೆಯನ್ನು ಹಿಂದಕ್ಕೆ ತಳ್ಳುತ್ತಾ ತಳ್ಳುತ್ತಾ ಸ್ಪಷ್ಟವಾಗಿ ಮುನ್ನಡೆಯತ್ತ ದಾಪುಗಾಲು ಹಾಕತೊಡಗಿತ್ತು.


ರಾಹುಲ್ ಹೊಡೆದ ಕವರ್ ಡ್ರೈವ್ ಗಳು ಎಂದಿನಂತೆ ಬಹಳಷ್ಟು ಸುಂದರ.ಆತ ರೋಹಿತ್ ಗಿಂತಲೂ ಒಂದಷ್ಟು ರನ್ ಮುಂದೆಯೇ ಇದ್ದ.ಆದರೆ ಭೋಜನಕ್ಕೂ ಹೋಗುವ ಮೊದಲು ರಾಹುಲ್, ಆಂಡರ್ಸನ್ ನ ಶಾರ್ಟ್ ಆಫ್ ಲೆಂತ್ ಎಸೆತದಲ್ಲಿ ತಡವರಿಸಿ ಔಟ್ ಸೈಡ್ ಎಡ್ಜ್ ಮಾಡಿಕೊಂಡು ವಿಕೆಟ್ ಕೀಪರ್ ಜಾನಿ ಬೆರ್ಸ್ಟೋ ಗೆ ಸುಲಭ ಕ್ಯಾಚಿತ್ತು ಅರ್ಧಶತಕದಿಂದ ವಂಚಿತನಾಗಿ ಬಿಟ್ಟ.ಔಟಾಗುವ ಮೊದಲು ರಾಹುಲ್ ಒಟ್ಟು 46 ರನ್ ಗಳಿಸಿದ್ದ. ಬಾರಿಸಿದ್ದು 4 ಬೌಂಡರಿ ಮತ್ತೊಂದು ಸಿಕ್ಸ್.


ನಂತರ ಜೊತೆಯಾಟ ಮುಂದುವರಿಸಿದ್ದು ರೋಹಿತ್ ಮತ್ತು ಪೂಜಾರ.


ಪೂಜಾರ ಹಿಂದಿನ ಪಂದ್ಯದ ಲಹರಿಯಲ್ಲಿಯೇ ವೇಗವಾಗಿ ರನ್ ಗಳಿಸಲು ಶುರು ಮಾಡಿದ್ದ.ಸ್ವಲ್ಪವೇ ಸ್ವಲ್ಪ ರೂಮ್ ಸಿಕ್ಕರೂ ಆಫ್ ಸೈಡಿನ ಬಾಲ್ ಗಳಿಗೆ ಬ್ಯಾಕ್ ಫುಟ್ ಗೆ ಬಂದು ಚುರುಕಾಗಿ  ಸ್ಕ್ವೇರ್ ಕಟ್ ಮಾಡಿ ಒಂದಿಷ್ಟು ಬೌಂಡರಿ ಗಳಿಸಲು ಆತ ಹಿಂಜರಿಯಲಿಲ್ಲ.ಆತನ ಒಂದು ಫುಲ್ ಶಾಟ್ ಮತ್ತು ಸ್ಲಿಪ್ ಮೇಲಿಂದ ಬಾರಿಸಿದ ರ‍್ಯಾಂಪ್ ಶಾಟ್ ಅವನ ಈ ದಿನದ ಆಟದ  ವಿಶೇಷವಾಗಿತ್ತು.


ಮತ್ತೊಂದು ತುದಿಯಲ್ಲಿದ್ದ ರೋಹಿತ್ ನಿಧಾನಕ್ಕೆ ಬಹಳ ಸಮಾಧಾನದಿಂದ ತನ್ನ ಇನ್ನಿಂಗ್ಸ್ ಅನ್ನು ವಿಸ್ತರಿಸುತ್ತಾ ಹೋಗುತ್ತಿದ್ದ.ಆಂಡರ್ಸನ್ ನ ಸ್ವಿಂಗ್ ಬಾಲ್ ಅವನನ್ನು ಹೆಚ್ಚು ತಬ್ಬಿಬ್ಬು ಮಾಡಲಿಲ್ಲ.ಎಂದಿನಂತೆ ಬೇಕಾದ ಕಡೆಗಳಲ್ಲಿ ಅವನದ್ದೊಂದು ಸ್ಟ್ರಾಂಗ್ ಫಾರ್ವರ್ಡ್ ಹಾಗೂ ಬ್ಯಾಕ್ವರ್ಡ್  ಢಿಫೆನ್ಸ್ ಮುಂದುವರಿದಿತ್ತು. 



ಪೂಜಾರ ರೋಹಿತ್ ನಂತೆ ಆಡುತ್ತಿದ್ದರೆ, ರೋಹಿತ್ ಹೆಚ್ಚು ಕಡಿಮೆ ಇಂದು ಪೂಜಾರ ನಂತೆಯೇ ಆಡುತ್ತಿದ್ದ.


ಇದರ ನಡುವೆ ಮತ್ತೊಂದು ಅರ್ಧಶತಕ ರೋಹಿತ್ ಬತ್ತಳಿಕೆಗೆ ಸೇರಿಕೊಂಡು ಬಿಟ್ಟಿತು.145 ಬಾಲ್ ಗಳನ್ನು ಎದುರಿಸಿ ಈ ಅರ್ಧಶತಕ ಬಾರಿಸಿದ್ದ ರೋಹಿತ್.


ರೋಹಿತ್ ಇನಿಂಗ್ಸ್ ಮತ್ತಷ್ಟು ಮುಂದುವರಿಯಿತು.


ಆಹಾ.. ಎಂದು ಹೇಳಬಹುದಾದ ಸ್ಟ್ರೇಟ್ ಡ್ರೈವ್, ಕವರ್ ಡ್ರೈವ್, ಎಕ್ಸ್ಟ್ರಾ ಕವರ್ ಡ್ರೈವ್ ಹೀಗೆ ಕ್ರಿಕೆಟ್ ನ ಎಲ್ಲಾ ಆಕರ್ಷಕ ಹೊಡೆತಗಳನ್ನು ಇಂದು ಕೂಡ ಬಾರಿಸಿದ್ದ ರೋಹಿತ್.


ಲಂಚ್ ಬ್ರೇಕ್ ನ ನಂತರವೂ ಅದೇ ಲಹರಿಯಲ್ಲಿ ಆಟ ಮುಂದುವರಿಯಿತು.ಪೂಜಾರ ಪುನಃ ರನ್ ಗಳಿಕೆಯನ್ನು ಎಕ್ಸಲರೇಟ್ ಮಾಡಿಕೊಂಡ.ರೋಹಿತ್ ಕೂಡ ಹಿಂದೆ ಉಳಿಯಲಿಲ್ಲ.


ಕೊನೆಗೂ ರೋಹಿತ್ 83 ರನ್ನುಗಳ ಗಡಿಯನ್ನು ದಾಟಿಯೇ ಬಿಟ್ಟ. ಇದು ರೋಹಿತ್ ನದ್ದು ವಿದೇಶಿ ನೆಲದಲ್ಲಿ ಇಲ್ಲಿಯವರೆಗಿನ  ಸರ್ವಾಧಿಕ ರನ್ ಆಗಿತ್ತು.


ಒಂದು ಶತಕ ಅವನ ಈ ತಾಳ್ಮೆಯ ಆಟ,ಹಾಗೂ ತಪಸ್ಸಿನಂತಹ ಶ್ರದ್ಧೆಗೆ ಇಂದು ಬಲು ಅವಶ್ಯವಾಗಿತ್ತು.ಜೊತೆಗೆ ತಂಡಕ್ಕೂ ಕೂಡ. 


ಆಮೇಲೆ ಒಂದರ ನಂತರ ಒಂದು ಬೌಂಡರಿ ಗಳಿಸಿದ ರೋಹಿತ್  ನೇರವಾಗಿ 94 ರ ಗಡಿಗೆ ಬಂದು ನಿಂತೇ ಬಿಟ್ಟ.



ಕಾಮೆಂಟರಿ ಮಾಡುತ್ತಿದ್ದ ವಿರೇಂದ್ರ ಸೆಹ್ವಾಗ್ ಹೇಳುತ್ತಿದ್ದ.. ನನಗೆ ಅನಿಸುತ್ತದೆ ರೋಹಿತ್ ಈಗ ಸಿಕ್ಸ್ ಹೊಡೆದೇ ಸೆಂಚೂರಿ ಬಾರಿಸುತ್ತಾನೆ ಎಂದು,ನಾನಾಗಿದ್ದರೆ ಹಾಗೇ ಮಾಡುತ್ತಿದ್ದೆ ಎಂದು ತನ್ನ ಎಂದಿನ ಬಿಂದಾಸ್ ಲಹರಿಯಲ್ಲಿಯೇ ನಗು ನಗುತ್ತಾ ಹೇಳಿದ್ದ ವೀರು ಭಾಯ್. 


ಬಹುಶಃ ಸೆಹ್ವಾಗ್ ಹೇಳಿದ್ದು ರೋಹಿತ್ ಕೇಳಿಸಿಕೊಂಡನೋ ಏನೋ ಗೊತ್ತಿಲ್ಲ.ಆದರೆ ಮುಂದಿನ ಎಸೆತದಲ್ಲಿಯೇ ಟ್ರು ಹಿಟ್ ಮ್ಯಾನ್ ಶರ್ಮ ನಿಜಕ್ಕೂ ಹೊರಬಂದಿದ್ದ.


ಮೋಯಿನ್ ಆಲಿ ಎಸೆತದಲ್ಲಿ ಸ್ಟೆಪ್ ಔಟ್ ಆಗಿ ಲಾಂಗ್ ಆನ್ ಮೇಲೊಂದು ಸಿಕ್ಸರ್ ಬಾರಿಸಿಯೇ ಬಿಟ್ಟಿದ್ದ ರೋಹಿತ್.ಶುಭ ನುಡಿದ ಸೆಹ್ವಾಗ್ ಬಾಯಿಗೊಂದಿಷ್ಟು ಹಿಡಿ ಸಕ್ಕರೆ. 


ಅಂತು ಇಂತು ವಿದೇಶಿ ನೆಲದಲ್ಲಿ ರೋಹಿತ್ ಶರ್ಮನ ತನ್ನ ಮೊತ್ತ ಮೊದಲ ಸೆಂಚುರಿಯೊಂದು ಈ ರೀತಿಯಾಗಿ ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ದಾಖಲಿಸಿಯೇ  ಬಿಟ್ಟ. 


ಈ ರೀತಿಯಾಗಿ ರೋಹಿತ್ ಟೆಸ್ಟ್ ಕ್ರಿಕೆಟ್ ನಲ್ಲಿ ಬಹಳ ವರ್ಷಗಳ ನಂತರ ಒಂದು  ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ.



ತಂಡದ  ಸಹ ಆಟಗಾರರು,ಕೊಹ್ಲಿ,ರವಿ ಭಾಯ್, ಸೇರಿದಂತೆ ಹೆಚ್ಚಿನ ಪ್ರೇಕ್ಷಕರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.ಏಕೆಂದರೆ ಈ ಒಂದು ಶತಕಕ್ಕಾಗಿ ರೋಹಿತ್ ಅಷ್ಟೊಂದು ಬೆವರು ಹರಿಸಿದ್ದ. ತನ್ನ ಮಾಮೂಲಿ ರಂಗಿನಲ್ಲಿ ಆಡದೆಯೂ ಹಿಟ್ ಮ್ಯಾನ್ ಕೊನೆಗೂ ತನ್ನದೊಂದು ಶೋ ಇಂದು ಸುಂದರವಾಗಿಯೇ ತೋರಿಸಿ ಬಿಟ್ಟಿದ್ದ.


ರೋಹಿತ್ ನ ಈ ತಾಳ್ಮೆಯ ಶತಕ 204 ಎಸೆತದಲ್ಲಿ ಬಂದಿತ್ತು.ಅದರಲ್ಲಿ ಸೊಗಸಾದ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಇತ್ತು.


ಇದು ರೋಹಿತ್ ನ ಒಟ್ಟಾರೆ 41 ನೇ ಅಂತಾರಾಷ್ಟ್ರೀಯ ಸೆಂಚೂರಿ ಆಗಿದ್ದರೆ,ಆಂಗ್ಲರ ನೆಲದಲ್ಲಿ ಇದು 9 ನೇಯದ್ದು,ಟೆಸ್ಟ್ ನಲ್ಲಿ ಇದು 8 ನೇಯದ್ದು ಹಾಗೂ 2021 ನೇ ಕ್ಯಾಲೆಂಡರ್ ಇಯರ್ ನಲ್ಲಿ ಇದು ರೋಹಿತ್ ಗೆ ಎರಡನೆಯ ಶತಕ.ಇದರ  ಜೊತೆಗೆ ಟೆಸ್ಟ್ ನಲ್ಲಿ 3000 ರನ್ ಗಳನ್ನು ಕೂಡ ರೋಹಿತ್ ಪೂರ್ತಿಗೊಳಿಸಿ ಬಿಟ್ಟ. ಈ ಸೀರಿಸ್ ನಲ್ಲಿ ಜೋ ರೂಟ್ ಮತ್ತು ರಾಹುಲ್ ನಂತರ ಶತಕ ಗಳಿಸಿದ ಮೂರನೇ ಆಟಗಾರ ಎಂದರೆ ಅದು ರೋಹಿತ್.


ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಹೊಡೆದವರಲ್ಲಿ ರೋಹಿತ್ ಶರ್ಮ 440 ಸಿಕ್ಸರ್ ಹೊಡೆದು ಸದ್ಯಕ್ಕೆ 3 ನೇ ಸ್ಥಾನದಲ್ಲಿ ಇದ್ದಾರೆ. 550 ಸಿಕ್ಸ್ ನೊಂದಿಗೆ ಕ್ರಿಸ್ ಗೇಲ್ ಮೊದಲ ಹಾಗೂ 476 ಸಿಕ್ಸ್ ನೊಂದಿಗೆ ಶಹೀದ್ ಆಫ್ರಿದಿ ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿ ಇದ್ದಾರೆ.



ರೋಹಿತ್ ಶರ್ಮ ಆಂಗ್ಲರ ನೆಲದಲ್ಲಿ ಮೂರು ಫಾರ್ಮೆಟ್ ಗಳಲ್ಲಿ ಅಂದರೆ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಯಲ್ಲಿ ಶತಕ ಭಾರಿಸಿದ ಮೊದಲ ಆರಂಭಿಕ ಆಟಗಾರನಾಗಿದ್ದಾನೆ.


ಅಭಿನಂದನೆಗಳು ರೋಹಿತ್ ಶರ್ಮ. 

ಈ ಶತಕದ ನಂತರ ಇಂಗ್ಲೆಂಡ್ ನ ಅತ್ಯಂತ ಹಳೆಯ ಮೈದಾನವಾದ ಓವಲ್ ಗ್ರೌಂಡಿನ ಹಾನರ್ಸ್ ಬೋರ್ಡ್ ನಲ್ಲಿ,ರೋಹಿತ್ ಶರ್ಮನದ್ದೊಂದು ಹೆಸರನ್ನು ಸಹ ಬರೆಯಲಾಯಿತು.

ಕೇವಲ ಹೋಮ್ ಕಂಡಿಷನ್ ನಲ್ಲಿ ಮಾತ್ರ ಆಡುತ್ತಾನೆ ಎಂಬ ಅವನ ಮೇಲಿನ ಟೀಕೆಗಳಿಗೊಂದು ಉತ್ತರ ಇಂದು ರೋಹಿತ್ ಶರ್ಮ ಬ್ಯಾಟ್ ಮೂಲಕವೇ ಖಡಕ್ಕಾಗಿ ನೀಡಿ ಬಿಟ್ಟ. 


ಮೈಕಲ್ ವಾನ್ ಕೂಡ ರೋಹಿತ್ ಆಟದ ಬಗ್ಗೆ ಲೀಡ್ಸ್ ಪಂದ್ಯದ ನಂತರ ಟೀಕೆ ಮಾಡಿದ್ದ. ರೋಹಿತ್ ತಂಡಕ್ಕಾಗಿ ಆಡುತ್ತಿಲ್ಲ ಎಂದು.ಆದರೆ ರೋಹಿತ್ ಆಟ ಇಂದು ತಂಡವನ್ನು ಅದೆಷ್ಟು ಮಜಬೂತು ಮಾಡಿದೆ ಎಂದರೆ ಸರಿಯಾಗಿಯೇ ವಾನ್ ನ ಕೆಟ್ಟ ಬಾಯಿಯನ್ನು ಸಹ ಮುಚ್ಚಿಸಿ ಬಿಟ್ಟಿದ್ದಾನೆ ರೋಹಿತ್.ಈ ವಾನ್ ಒಬ್ಬ ದೊಡ್ಡ ಅಧಿಕಪ್ರಸಂಗಿ. ಇಂಗ್ಲೆಂಡ್ ಸೋಲುವಾಗ ಅವನು ಸುಮ್ಮನಿರುತ್ತಾನೆ. ಆದರೆ ಗೆದ್ದು ಬಿಟ್ಟರೆ ಅವನದ್ದೊಂದು ಹರಕಲು ಬಾಯಿ ಹರಿಯಬಿಡುತ್ತಾನೆ.ಅದರಲ್ಲೂ ಅವನಿಗೆ ಕೆಣಕುವುದು ಅಂದರೆ ಬಾರೀ ಇಷ್ಟ.ಕೆಲವೊಮ್ಮೆ ಇವನಿಗೂ ಈ ಪಾಕಿಸ್ತಾನ  ಹಾಗೂ ಬಾಂಗ್ಲಾದೇಶದ ಅಂಧ ಕ್ರಿಕೆಟ್ ಅಭಿಮಾನಿಗಳಿಗೂ ಅಂತಹ ಜಾಸ್ತಿ ವ್ಯತ್ಯಾಸ ಏನೂ ಇಲ್ಲ!


ಕೊನೆಯಲ್ಲಿ ಚಹಾ ವಿರಾಮಕ್ಕೆ ಹೋಗುವಾಗ ಭಾರತ ಸರಿಯಾಗಿ 100 ರನ್ ಗಳ ಮುನ್ನಡೆಯನ್ನು ಗಳಿಸಿಕೊಂಡಿತ್ತು.ಆ ಸೆಷನ್ ನಲ್ಲಿ ಯಾವುದೇ ವಿಕೆಟ್ ಭಾರತ ಕಳೆದುಕೊಳ್ಳಲಿಲ್ಲ.ಪೂಜಾರ  48 ರನ್ನುಗಳನ್ನು ಗಳಿಸಿದ್ದ. 



ಟೀ ಬ್ರೇಕ್ ನಂತರ ಮತ್ತೆ ಭಾರತದ್ದೊಂದು ಆಟ ಮುಂದುವರಿದಿತ್ತು. 


ಪೂಜಾರ 103 ಎಸೆತಗಳನ್ನು ಎದುರಿಸಿ ಮತ್ತೊಂದು ಅರ್ಧಶತಕ  ಬಾರಿಸಿ ಬಿಟ್ಟ.ಇದರ ನಡುವೆ ರೋಹಿತ್ ಮತ್ತು ಪೂಜಾರ ನಡುವೆ 150 ರನ್ನುಗಳ ಜೊತೆಯಾಟವೂ ನಡೆಯಿತು.


ಕೊನೆಗೂ ಆಂಗ್ಲರ ಕೈ ಸೇರಿತ್ತು ಹೊಸ ಬಾಲ್. 


ಆ ಹೊಸ ಬಾಲ್ ನಲ್ಲಿ ರಾಬಿನ್ಸನ್ ಎಸೆತದಲ್ಲಿ ಫುಲ್ ಶಾಟ್ ಬಾರಿಸಲು ಹೋದ ರೋಹಿತ್ ಶರ್ಮ ಡೀಪ್ ಸ್ಕ್ವೇರ್ ಲೆಗ್ ನಲ್ಲಿದ್ದ ಕ್ರಿಸ್ ವೋಕ್ಸ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ,ತನ್ನದೊಂದು ಸುಂದರ ಇನ್ನಿಂಗ್ಸ್ ಗೆ ಅವನೇ ಕೈಯಾರೆ ಇತಿಶ್ರೀ ಹಾಡಿಬಿಟ್ಟ.ಅವನ ಮೇಲೆ ನಿಜಕ್ಕೂ ಇನ್ನೂ ಹೆಚ್ಚಿನ ನಿರೀಕ್ಷೆಗಳು ಇದ್ದವು.ಔಟಾಗಿ ಹೋಗುವಾಗ ರೋಹಿತ್ 256 ಎಸೆತಗಳಲ್ಲಿ 127 ರನ್ ಬಾರಿಸಿದ್ದ.


ರೋಹಿತ್ ಔಟಾದ ಬೆನ್ನಿನಲ್ಲಿಯೇ ರಾಬಿನ್ಸನ್ ನ ಆ ಓವರಿನ ಕೊನೆಯ ಎಸೆತದಲ್ಲಿ ಪೂಜಾರ ಕೂಡ  ಥರ್ಡ್ ಸ್ಲಿಪ್ ನಲ್ಲಿದ್ದ ಮೋಯಿನ್ ಆಲಿಗೆ ಕ್ಯಾಚಿತ್ತು ಔಟಾಗಿ ಬಿಟ್ಟ.ಪೂಜಾರ ಗಳಿಸಿದ್ದು 61 ರನ್. 


ಈ ರೀತಿಯಾಗಿ ಭಾರತ ಒಟ್ಟು 3 ವಿಕೆಟ್ ಕಳೆದುಕೊಂಡು ಬಿಟ್ಟಿತ್ತು. 


ನಂತರ ಜೊತೆಯಾಟ ಮುಂದುವರಿಸಿದ್ದು ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ.ಮೊದಲ ಇನ್ನಿಂಗ್ಸ್ ನಂತೆ ಇಂದು ಕೂಡ ರಹಾನೆ ತನ್ನ ಎಂದಿನ ಸ್ಲಾಟ್ ನಲ್ಲಿ ಬ್ಯಾಟ್ ಬೀಸಲು ಬರಲಿಲ್ಲ. 


ಆಟ ಮುಂದುವರಿದಿತ್ತು.


ಕೊಹ್ಲಿ ಒಂದೆರಡು ಸೊಗಸಾದ ಕವರ್ ಡ್ರೈವ್ ಬಾರಿಸಿ ಗಮನ ಸೆಳೆದ. 



ಕೊನೆಗೆ ಬ್ಯಾಡ್ ಲೈಟಿನ ಕಾರಣದಿಂದಾಗಿ ಈ ದಿನದ ಆಟಕ್ಕೆ ತೆರೆ ಎಳೆಯಲಾಯಿತು. 


ಈ ರೀತಿಯಾಗಿ ಮೂರನೇ ದಿನದ ಆಟ ಮುಗಿದಾಗ ಟೀಮ್ ಇಂಡಿಯಾ 3 ವಿಕೆಟ್ ಗಳಿಗೆ 270 ರನ್ನುಗಳನ್ನು ಗಳಿಸಿ ಬಿಟ್ಟಿದೆ.ಸದ್ಯಕ್ಕೆ ತಂಡದ ಒಟ್ಟು 171 ರನ್ನುಗಳ ಮುನ್ನಡೆಯನ್ನು ಗಳಿಸಿಕೊಂಡಿದೆ.ಕೊಹ್ಲಿ 22 ಹಾಗೂ ಜಡೇಜಾ 9 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 


ಆಟದಲ್ಲಿ ಇನ್ನೂ ಎರಡು ದಿನ ಬಾಕಿ ಇದೆ.


ಭಾರತದ ಸ್ಥಿತಿ ಸದ್ಯಕ್ಕೆ ಉತ್ತಮವಾಗಿಯೇ ಇದ್ದರೂ ಅಪಾಯ ಇನ್ನೂ ಇದೆ.ಅದರಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು.ಒಂದೊಳ್ಳೆಯ ಮುನ್ನಡೆ ಆಂಗ್ಲರನ್ನು ಬ್ಯಾಕ್ ಸೀಟಿಗೆ ತಳ್ಳುವುದು ಮಾತ್ರವಲ್ಲ ಸೋಲಿಗೆ ದವಡೆಗೂ ನೂಕಿ ಬಿಡಿಬಲ್ಲದು.


ಹಾಗೆಯೇ ಆಗಲಿ..


ಇನ್ನೆರಡು ದಿನಗಳ ಆಟ ನಿಜಕ್ಕೂ ಸಿಕ್ಕಾಪಟ್ಟೆ ರೋಚಕವಾಗಿರಲಿದೆ.


ಆಟದಲ್ಲಿ ಸಮಯ ಇರುವುದರಿಂದ ಎರಡೂ ತಂಡಕ್ಕೂ ಇನ್ನೂ ಸಮಾನ ಅವಕಾಶವಂತು ಆದೆ. ಆದರೆ ಕೊನೆಯಲ್ಲಿ ಆಂಗ್ಲರು ಬ್ಯಾಟಿಂಗ್ ಮಾಡಲು ಇರುವುದರಿಂದ ಒಳ್ಳೆಯ ಮುನ್ನಡೆ ಇದ್ದರೆ ಪಂದ್ಯ ಗೆಲ್ಲುವ ಹೆಚ್ಚಿನ ಅವಕಾಶ ಭಾರತಕ್ಕೆಯೇ ಇದೆ. 


ಏನಾಗುತ್ತದೆ ಎಂದು ಕಾದು ನೋಡೋಣ.


ಸದ್ಯಕ್ಕೆ ಇಷ್ಟೇ..


ನಾಳೆ ನಾಲ್ಕನೇ ದಿನದಾಟ ಮುಗಿದ ನಂತರ ಸಿಗೋಣ, ಎಂದಿನಂತೆ ಮತ್ತೆ ಒಂದಷ್ಟು ಕ್ರಿಕೆಟ್ ಮಾತಾಡೋಣ. 


Ind Vs England

4th Test - Kennington - London 


#Day_3 : STUMPS 

India 1st Innings - 191/10

England 1st Innings - 290/10

India 2nd Innings - 270/3


#WTC_S02E01_4TD3_2021_23 

Ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ